ಜನಪ್ರಿಯತೆಯ ಬೆನ್ನನೇರಿ `ಸಾವಿ’ರದ ಕನಸುಗಳ ದಾರಿ

(`ಪಾ.ಪ.ಪಾಂಡು’ ಧಾರಾವಾಹಿಯು ಸಾವಿರ ಪ್ರಕರಣದ ಸಂದರ್ಭದಲ್ಲಿ ಹೊರತಂದ ಸ್ಮರಣಿಕೆಗೆ ಬರೆದ ಲೇಖನ)

ನಮ್ಮ ಉದ್ಯಮವೇ ಹಾಗೆ. ಇಲ್ಲಿ ತರ್ಕಕ್ಕೆ ಸಿಗದೆ ಇರುವುದು ಒಂದೇ. ಅದು ಜನಪ್ರಿಯತೆ. ಅದು ಯಾವ ಸಿನಿಮಾನೋ, ಧಾರಾವಾಹಿಯೋ? ಅದು ಯಾಕೆ ಜನಪ್ರಿಯವಾಯಿತು ಎನ್ನುವುದು ತಿಳಿಯುವುದಿಲ್ಲ. ಯಶಸ್ಸಿನ ಮೆಟ್ಟಿಲಿಗೆ ಹತ್ತು ಸೂತ್ರಗಳು ಎಂದು ಡೇಲ್ ಕಾರ್ನಗಿಯ ಹಾಗೆ ಪುಸ್ತಕ ಬರೆಯುವಂತೆ, ನಮ್ಮ ತಯಾರಿಕೆಗಳೆಲ್ಲಾ ಯಶಸ್ವಿಯಾಗುವುದಕ್ಕೆ ಕಾರ್ಯಕಾರಣ ಸಂಬಂಧ ದೊರೆಯುವುದಿಲ್ಲ. ಅದಕ್ಕೆಂದೇ ಹಲವಾರು ಈ ಉದ್ಯಮದೊಳಗಿನ ಬದುಕನ್ನು ದೊಡ್ಡ ಜೂಜು ಎನ್ನುತ್ತಾರೆ, ಮತ್ತೆ ಕೆಲವರು ದೊಡ್ಡ ಹಳವಂಡ ಅನ್ನುತ್ತಾರೆ. ಒಟ್ಟಾರೆ ಇದೊಂದು ಓಟ! ಓಡಿದವನಿಗೆ ಅನುಭವವೇ ಲಾಭ! 

ಸಿನಿಮಾದ ಮಾತು ಬಿಡಿ. ಅದು ಕನಸು ಮಾರುವವರ ಸಂತೆ. ಆದರೆ ಕಿರುತೆರೆ ಇದೆಯಲ್ಲಾ, ಇದು ನಿಜಕ್ಕೂ ಸೋಲು-ಗೆಲುವುಗಳ ಉಭಯವನರಿಯದ ಸ್ಥಿತಿ. ಯಾಕೆಂದರೆ, ಇಲ್ಲಿರುವ ಜನಪ್ರಿಯತೆಯ ಮಾನದಂಡ ಟಿ.ಆರ್.ಪಿ. ಅಥವಾ ಟಿವಿ ರೇಟಿಂಗ್ಸ್ ಎಂದು ಕರೆಸಿಕೊಳ್ಳುವ ಒಂದು ಸಂಪೂರ್ಣ ಅವೈಜ್ಞಾನಿಕ ಪದ್ಧತಿ. ಈ ಪದ್ಧತಿಯನ್ನ ಸ್ಟಾಟಿಸ್ಟಿಕ್ಸ್ ಪಂಡಿತರು ಸ್ಯಾಂಪಲ್ ರೇಟಿಂಗ್ ಎಂದು ಗುರುತಿಸುತ್ತಾರೆ. ಆದರೆ ಆ ಸ್ಯಾಂಪಲ್ ತೆಗೆದುಕೊಳ್ಳುವುದಕ್ಕೆ ಶೇಕಡ ಇಂತಿಷ್ಟು ಎಂಬ ನಿಗದಿಯಿಲ್ಲ. ಅದೊಂದು ಬಗೆಯ ಚುನಾವಣಾ ಫಲಿತಾಂಶಕ್ಕೆ ಮುನ್ನ ಪತ್ರಿಕೆಗಳವರು ನಡೆಸುವ ಸರ್ವೇ ಹಾಗೆ. ನೂರು ಜನರ ಅಭಿಪ್ರಾಯ ಆಧರಿಸಿ ಕೋಟ್ಯಾಂತರ ಜನರ ಮನಸ್ಥಿತಿಯನ್ನು ಕುರಿತು ಮಾತಾಡುವಂತಹದು. ಇಂತಹ ಎಕ್ಸಿಟ್ ಪೋಲ್‌ನ ಫಲಿತಾಂಶಗಳು ನಿಯತಕಾಲಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ಅದರ ಪರಿಣಾಮವಾಗಿ ರಾಜಕೀಯ ವಲಯದಲ್ಲಿ ಕುದುರೆ ವ್ಯಾಪಾರದ ಸಿದ್ಧತೆಗಳೂ ಆಗಿಬಿಡುತ್ತವೆ. ಆದರೆ ಫಲಿತಾಂಶ ಸಂಪೂರ್ಣ ಉಲ್ಟಾ ಆಗಿರಬಹುದು. ಅಲ್ಲಿ ಎಕ್ಸಿಟ್ ಪೋಲ್‌ನ ಪರಿಣಾಮ ವಾಸ್ತವದ ಮೇಲೆ ಆಗದು. ಆದರೆ ನಮ್ಮ ಟೆಲಿವಿಷನ್ ಉದ್ಯಮದಲ್ಲಿ ಹಾಗಲ್ಲ. ಎಕ್ಸಿಟ್ ಪೋಲ್ ರೀತಿಯ ಸ್ಯಾಂಪಲ್ ರೇಟಿಂಗೇ ಅಂತಿಮ. ಆ ರೇಟಿಂಗ್‌ನಲ್ಲಿ ನಾವು ನೇಯ್ದ ಕನಸು ಕಾಣಿಸಿಕೊಳ್ಳದಿದ್ದರೆ ನೇಯ್ಗೆಗೆ ಪೂರ್ಣವಿರಾಮ.

ಗುರುವಾರ ಬಂತಮ್ಮಾ! ಗುಮ್ಮನ ತಂತಮ್ಮಾ!
ಹೌದು, ಗುರುವಾರ ಎಂಬುದು ನಮ್ಮ ಉದ್ಯಮದವರಿಗೆ ಬಲು ದೊಡ್ಡ ಗುಮ್ಮಾ. ಯಾಕೆಂದರೆ ಅದೇ ದಿನ ನಮ್ಮ ಛಾನೆಲ್ಲುಗಳಿಗೆ ಬಂದು ಬೀಳುತ್ತದೆ ಸ್ಯಾಂಪಲ್ ರೇಟಿಂಗಿನ ಸರಕು. ಅಲ್ಲಿ ನಿಮ್ಮ ಕಾರ್ಯಕ್ರಮ ಮೊದಲ ಅರವತ್ತರಲ್ಲಿ ಇತ್ತೋ ಬಚಾವ್! ಇಲ್ಲವಾದಲ್ಲಿ ಸೂರ್ಯನ ತಾಪಮಾನ ಎಷ್ಟೆ ಇದ್ದರೂ ಬೆವರಿಳಿಯ ತೊಡಗುತ್ತದೆ. ನಿಮ್ಮಿಂದ ಕಾರ್ಯಕ್ರಮ ಮಾಡಿಸುತ್ತಿರುವ ಅಥವಾ ಕೊಳ್ಳುತ್ತಿರುವ ಛಾನೆಲ್ಲಿನ ಮಂದಿ ನಿಮಗೆ ಶುಭಾಶಯ ಹೇಳಬಹುದು. ಅದೃಷ್ಟ ಚೆನ್ನಾಗಿದ್ದರೆ ಇನ್ನೊಂದೊ ಎರಡೋ ವಾರ ಉಸಿರಾಡುವ ಅವಕಾಶ ಸಿಗಬಹುದು. ಅಥವಾ ಸಾಕು ಎಂದು ಚರಮಗೀತೆ ಬರೆಯಲಿ ದಿನಾಂಕ ನಿಗದಿಯಾಗಬಹುದು. ನಮ್ಮ ವರ್ಷದ ಕೆಲಸಕ್ಕೆ ಗುರುವಾರದ ಗುಮ್ಮ ಏನು ಮಾಡುತ್ತಾನೋ ಎಂಬ ಗಾಬರಿ ಬೆನ್ನಿಗಂಟಿಕೊಂಡೆ ಇರುತ್ತದೆ. ಆದ್ದರಿಂದಲೇ ನಮ್ಮಲ್ಲಿನ ಬರಹಗಾರರ ಬಾಯಲ್ಲಿ, `ಸಾರ್! ಇದು ಟ್ಯಾಮ್ ಸೀನು’, `ನಾನು ಟಿ.ಆರ್.ಪಿ. ಕಿಂಗು’ ಎನ್ನುವ ಮಾತುಗಳು ಸುಳಿಯುತ್ತವೆ. ದುಡ್ಡು ಹಾಕುವವನಲ್ಲಿ ಧೈರ್ಯ ಮೂಡಿಸುವುದಕ್ಕೆ ಇವೆಲ್ಲಾ ಎನರ್ಜಿ ಬೂಸ್ಟರ್ಸ್ ಇದ್ದಂತೆ. ಸಿನಿಮಾ ತಯಾರಿಕೆಯ ಅನುಭವ ಇರುವವರಿಗೆ `ಇದು ಮಾಸ್ ಸೀನು, ಸಾರ್!’ ಎಂಬ ಮಾತಿನ ಪರಿಚಯವಿರಬಹುದು. ಕಿರುತೆರೆಯ ಉದ್ಯಮದಲ್ಲೂ ಅದೇ ಮಾತು ಕೊಂಚ ಬದಲಾಗಿ ಬರುತ್ತಿದೆ ಅಷ್ಟೇ. ಆದ್ದರಿಂದಲೇ ಅಣ್ಣಾವ್ರ ಧ್ವನಿಯಲ್ಲಿ ಮೂಡಿಬಂದ ಜನಪ್ರಿಯ ಗೀತೆ, ಇಲ್ಲಿ ಅಪಭ್ರಂಶವಾಗಿದೆ. ಹೀಗಾಗಿಯೇ ಇಲ್ಲಿ ಗೆದ್ದವನು ಆತ್ಮರತಿಯಲ್ಲೂ, ಸೋತವನು ಪರನಿಂದೆಯಲ್ಲೂ ಉಳಿದುಹೋಗುತ್ತಾನೆ.

ಇವೆಲ್ಲವುಗಳ ಪರಿಣಾಮ ನಮ್ಮಲ್ಲಿ ತಯಾರಾಗುವ ಕಾರ್ಯಕ್ರಮಗಳ ಮೇಲೆ ನೇರವಾಗಿ ಆಗುತ್ತಿದೆ. ನಮ್ಮ ಕಥನ ಕ್ರಮದಲ್ಲಿ ಅನಗತ್ಯವಾದರೂ, ಜನಪ್ರಿಯತೆಗೆ ಅನಿವಾರ್ಯ ಎಂಬಂತಹ ನಿರೂಪಣಾ ಕ್ರಮಗಳು ಬಳಕೆಗೆ ಬರುತ್ತಿವೆ. ಅತಿರಂಜಕತೆಯ ಹೆಸರಲ್ಲಿ ಪಾತ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಬಣ್ಣ ಬಳಿದು, `ಎಲ್ಲಾ ಹೆಣ್ಣು ಪಾತ್ರಗಳೂ ಹುಟ್ಟಿದ್ದೇ ಬ್ಯೂಟಿಪಾರ್ಲರಿನಲ್ಲಿಯೇ?’ ಎನ್ನುವಷ್ಟು ಅಸಹಜತೆ ಮೂಡಿಬರುತ್ತಿದೆ. ಹೊಸಪ್ರಯೋಗ ಎನ್ನುವುದು ಕಿರುತೆರೆಯ ಮಟ್ಟಿಗಂತೂ ಅಪರೂಪವೇ ಅಗಿಬಿಟ್ಟಿದೆ. ಇನ್ನು ನಮ್ಮ ಛಾನೆಲ್ಲುಗಳಲ್ಲಿರುವ ನಿರ್ಧಾರ ತೆಗೆದುಕೊಳ್ಳುವ ಜನ ಕೂಡ ಸಿದ್ಧ ಸೂತ್ರಕ್ಕೆ ಮಾರು ಹೋಗುತ್ತಿದ್ದಾರೆ. ಇನ್ನಾವುದೋ ಭಾಷೆಯಲ್ಲಿ ಜನಪ್ರಿಯವಾದುದನ್ನ ಇಲ್ಲಿಗೂ ಉಣಬಡಿಸಿ, ದುಡ್ಡು ಜೋಪಾನ ಮಾಡೋಣ ಎಂಬ ಗುಣ ಕಾಣಿಸಿಕೊಳ್ಳುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆ. ನಮ್ಮಲ್ಲಿರುವ ಸೃಜನಶೀಲ ಶಕ್ತಿಯನ್ನು ಸಂಪೂರ್ಣ ನಾಶಪಡಿಸುವಂತಹದು. ಸಿನಿಮಾದವರು ರಿಮೇಕಿನ ಅಭ್ಯಾಸಕ್ಕೆ ಇಳಿದ ನಂತರ ನಮ್ಮಲ್ಲಿ ಕಥೆಗಾರರಿಲ್ಲ ಎಂದು ಗೋಳಾಡುತ್ತಿರುವಂತೆಯೇ ಕಿರುತೆರೆಯಲ್ಲಿಯೂ ಯಶಸ್ಸು ಪಡೆಯವಂತಹ ಕತೆಗಳಿಲ್ಲ ಎಂದು ಇತರ ಭಾಷೆಗಳಲ್ಲಿ ಜನಪ್ರಿಯವಾದುದನ್ನೇ ಇಲ್ಲಿಗೂ ಉಣಬಡಿಸುವ ಜಾಯಮಾನ ಬರುವ ದಿನ ದೂರವಿಲ್ಲ ಎಂದು ಈ ಬರಹಗಾರನಿಗಂತೂ ಅನಿಸುತ್ತಿದೆ.

ಅದಾವ ಮಾಯಕಿನ್ನರಿ ಇವಳು?
ಇಷ್ಟೆಲ್ಲಾ ಅವಘಡಗಳನ್ನು ಸೃಷ್ಟಿಸುತ್ತಿರುವ ಈ ಸ್ಯಾಂಪಲ್ ರೇಟಿಂಗ್ ಅಥವಾ ಟಿ.ಆರ್.ಪಿ. ಅಂದರೆ ಏನು ಎಂಬುದನ್ನು ಕುರಿತು ಕುತೂಹಲ ಮೂಡುವುದು ಸಹಜ. ಸ್ಥೂಲವಾಗಿ ಅದನ್ನ ವಿವರಿಸುವ ಪ್ರಯತ್ನ ಮಾಡುತ್ತೇನೆ. ಕರುನಾಡಿನಂತಹ ರಾಜ್ಯದಲ್ಲಿರುವ ಸರಿಸುಮಾರು ಆರುಕೋಟಿ ಜನಸಂಖ್ಯೆಯಲ್ಲಿ ಟಿ.ವಿ. ನೋಡುವವರ ಸಂಖ್ಯೆ ಎಷ್ಟು ಎಂದು ಯಾವುದೋ ತಾತರಾಯನ ಕಾಲದ ಜನಗಣತಿಯನ್ನಾಧರಿಸಿ ನಿರ್ಧರಿಸಲಾಗುತ್ತದೆ. (ಸಧ್ಯಕ್ಕೆ ಬಳಕೆಯಲ್ಲಿರುವುದು ೨೦೦೧ರ ಜನಗಣತಿ ಎಂದರೆ ಅದಾಗಿ ಐದು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಿರಬಹುದು ಎಂದು ತಾವು ಊಹಿಸಬಹುದು.) ನಂತರ ಪ್ರತಿ ಊರಲ್ಲೂ ಸ್ಯಾಂಪಲ್ ರೇಟಿಂಗ್ ಪಡೆಯಲು ಖಾಸಗಿ ಸಂಸ್ಥೆಯೊಂದು ಟಿ.ವಿ.ಸೆಟ್ಟುಗಳಿಗೆ ಒಂದು ಮೀಟರನ್ನು ಲಗತ್ತಿಸುತ್ತದೆ. (ಒಂದು ಲಕ್ಷ ಜನಸಂಖ್ಯೆಯಿರುವ ಊರಿಗೆ ಹತ್ತು ಮೀಟರ್ ಎಂಬ ಅಂದಾಜು ಇಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತಾರೆ. ಸ್ಪಷ್ಟ ವಿವರಗಳಿಲ್ಲ.) ಆ ಮೀಟರ್ರುಗಳು ಆ ಮನೆಯವರು ನೋಡಿದ ಎಲ್ಲಾ ಕಾರ್ಯಕ್ರಮಗಳ ವಿವರಗಳನ್ನೂ ದಾಖಲಿಸುತ್ತವೆ. ಹಾಗೆ ದಾಖಲಿಸುವಾಗ ಆ ಮನೆಯಲ್ಲಿ ನೋಡಿದವರ ವಯೋಮಾನವೇನು? ಅವರಲ್ಲಿ ಕೊಳ್ಳುವ ಶಕ್ತಿ ಇರುವವರು ಯಾರು? ಎಂಬ ವಿವರಗಳು ಸಹ ದಾಖಲಾಗುತ್ತವೆ. ಹೀಗೆ ಸಂಗ್ರಹಿತವಾದ ಅಂಕಿ ಅಂಶಗಳೇ ಜನಪ್ರಿಯತೆಯ ಮಾನದಂಡವಾಗಿರುವುದು. ಅಂದರೆ ೨೦೦೧ರ ಜನಗಣತಿಯ ಪ್ರಕಾರ ಕರುನಾಡಿನಲ್ಲಿ ಟಿವಿ ನೋಡುವವರ ಸಂಖ್ಯೆ ೬೫ಲಕ್ಷ ಜನ ಎಂದಿದ್ದರೆ ೬೫೦ ಮೀಟರ್‌ಗಳ ಸ್ಯಾಂಪಲ್ ರೇಟಿಂಗ್ ಎಂದಾಯಿತು. ಇಷ್ಟು ಜನ ಟಿವಿ ನೋಡುವವರು ಇಂದು ನಮ್ಮ ರಾಜಧಾನಿಯಲ್ಲಿಯೇ ಇದ್ದಾರೆ ಎಂದು ಸರಳವಾಗಿಯೇ ಊಹಿಸಬಹುದು. ಈ ಬೆಂಗಳೂರು ಎಂಬ ಮಹಾನಗರಿಯಲ್ಲಿ ಟಿ.ವಿ. ಇಲ್ಲದ iನೆಯುಂಟೇ? ನೀವೇ ಹೇಳಿ! ಹೀಗಿರುವಾಗ ಆ ಖಾಸಗಿ ಸಂಸ್ಥೆಯವರು ಅಂಕಿ ಅಂಶ ಸಂಗ್ರಹಿಸಲು ಯಾವುದೋ ಪರಭಾಷಿಗನ ಮನೆಯಲ್ಲಿ ಮೀಟರ್ ಇಟ್ಟಿದ್ದರೆ?… ಅಲ್ಲಿಗೇ ಕನ್ನಡ ಕಾರ್ಯಕ್ರಮ ತಯಾರಿಸುತ್ತಿರುವವನ ಕಥೆ ಗೋವಿಂದ! ಅದೆಂಥಾ ಅಪ್ಪನಂತಹ ಕಾರ್ಯಕ್ರಮವಾದರೂ ಗರ್ಭಪಾತವೇ ಕಾಯ್ದಿಟ್ಟ ಬುತ್ತಿ.
ಇದು ಹೀಗೇಕೇ ಎಂಬ ಪ್ರಶ್ನೆ ಏಳುತ್ತದೆ. ಈ ಸ್ಯಾಂಪಲ್ ರೇಟಿಂಗ್ ಎನ್ನುವುದು ಜನಪ್ರಿಯತೆಯ ಮಾನದಂಡವಾಗಿದ್ದೇ ಶುದ್ಧಾಂಗ ತಪ್ಪು. ಅದು ಮೂಲತಃ ಜಾಹೀರಾತು ನೀಡುವವನಿಗೆ ಯಾವ ವರ್ಗದ ಜನ ಯಾವ ಕಾರ್ಯಕ್ರಮ ನೋಡುತ್ತಿದ್ದಾರೆ ಎಂದು ತಿಳಿಸುವ ಅಂಕಿ ಅಂಶ ಮಾತ್ರ. ಅದನ್ನು ಆಧರಿಸಿ ಆತ ಜಾಹೀರಾತು ನೀಡುತ್ತಾನೆ. ಆದರೆ ನಮ್ಮ ಛಾನೆಲ್ಲುಗಳ ಮುಖ್ಯಸ್ಥರಿಗೆ ಅದೇ ಅಂಕಿ ಅಂಶವೇ ಅವರೆಲ್ಲಾ ನಿರ್ಧಾರಗಳಿಗೂ ವೇದೋಕ್ತಿಯಾಗಿಬಿಟ್ಟಿದೆ. ಅವರಿಗೀಗ ಜಾಹೀರಾತಿನಿಂದ ಬರುವ ಆದಾಯವಷ್ಟೇ ಮುಖ್ಯ. ಉಳಿದೆಲ್ಲಾ ವಿವರಗಳೂ ಗೌಣ. ಹೀಗಾಗಿಯೇ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಧಾರಾವಾಹಿಗಳಿಗಿಂತ ಜಾಹೀರಾತುದಾರರನ್ನು ಮೆಚ್ಚಿಸುವ ಧಾರಾವಾಹಿಗಳ ತಯಾರಿಕೆಯೇ ಹೆಚ್ಚಾಗುತ್ತಿದೆ. ಅಂತೆಯೇ ಒಂದು ಧಾರಾವಾಹಿ ಜನಪ್ರಿಯವಾಯಿತು ಎಂದರೆ, ಆ ಧಾರಾವಾಹಿಯ ಕಥಾಶಕ್ತಿಯನ್ನು ಮೀರಿ, ಜಾಹಿರಾತು ಬರುತ್ತಿರುವವರೆಗೆ ಧಾರಾವಾಹಿ ಬರುತ್ತಿರಲಿ ಎಂಬಂತಹ ವಾದ ಹುಟ್ಟಿಕೊಂಡಿದೆ. ಇದರಿಂದ ಅದಾಗಲೇ ಪುರಾಣ ಕಥೆಗಳನ್ನು ರಾತ್ರಿಯಿಡೀ, ವಾರವಿಡೀ ಹೇಳಿ ಅಭ್ಯಾಸ ಇರುವವರಿಗೆ ಉಪಕಥೆಗಳನ್ನು ಹಿಡಿದುಕೊಂಡೆ ಸೀಮೋಲಂಘನ ಸಾಧ್ಯವಾಗಿದೆಯಾದರೂ, ಇನ್ನು ಕೆಲವು ಕಥೆಗಳು ಬಿಕ್ಕುತ್ತ, ತೆವಳುತ್ತಾ ಸಾಗುವುದನ್ನ ನಾವು ನೋಡುತ್ತಿದ್ದೇವೆ. ಇದು ಜಾಹೀರಾತು ಉದ್ಯಮದಿಂದ ನಿರ್ದೇಶಿತವಾದ ಕಥನಕ್ರಮದ ಫಲ ಎನ್ನಬಹುದು. ಒಂದರ್ಥಕ್ಕೆ ಇದು ಜಾಗತೀಕರಣ ತಂದಿಟ್ಟ ಅವಘಡಗಳಲ್ಲಿ ಒಂದು ಎಂತಲೂ ಹೇಳಬಹುದು. ಜನರನ್ನು ನಾಡು-ಭಾಷೆ ಕುರಿತು ಎಚ್ಚರದಲ್ಲಿ ಇಡುವುದಕ್ಕಿಂತ ಕೊಳ್ಳುವುದಕ್ಕೆ ಪ್ರೇರೇಪಿಸುತ್ತಾ, ಒಂದು ರೀತಿಯ ಅಸಹನೆಯನ್ನ, ಕಾತರವನ್ನ ಸಾಮಾನ್ಯಜನರಲ್ಲಿ ಸದಾ ಇರಿಸುವ ಗುಣವನ್ನ ಇದು ನಮ್ಮ ಉದ್ಯಮದ ಕಥನಕ್ರಮದ ಮೇಲೂ ಆರೋಪಿಸಿಬಿಟ್ಟಿದೆ. ಇದರಿಂದ ಮುಂದೆ ಒದಗಲಿರುವ ಅಪಾಯಗಳು ಅನೇಕ.

ಅಪಾಯಗಳು
ಈ ಸ್ಥಿತಿಯಿಂದಾಗಿ ನಮ್ಮಲ್ಲಿ ಧಾರಾವಾಹಿ ತಯಾರಿಕೆ ಎಂಬುದು ಸಣ್ಣ ನಿರ್ಮಾಪಕರುಗಳ ಹಿಡಿತದಿಂದ ತಪ್ಪಿಸಿಕೊಂಡು ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ಪಾಲಾಗಬಹುದು. ಅಲ್ಲಿ ಎಲ್ಲಾ ಎಂ.ಎನ್.ಸಿ.ಗಳು ನಡೆಸುವ ಕಂಪೆನಿಗಳಲ್ಲಿ ಈಗ ನಾವು ನೋಡುತ್ತಿರುವಂತೆ ಹೃದಯಹೀನ ಕೃತ್ರಿಮತೆ ಬರಬಹುದು. ಆಗ ಅಲ್ಲಿ ತಯಾರಾಗುವ ಕಾರ್ಯಕ್ರಮಗಳು ಎಲ್ಲೋ ಕೂತ, ಕಣ್ಣಿಗೆ ಕಾಣದ ಯಜಮಾನನ ಆಣತಿಯಂತೆ ಆಗಬಹುದು. ಆಗ ಎಲ್ಲಾ ತಯಾರಕರೂ ತಿಂಗಳ ಸಂಬಳದ ಬೊಂಬೆಗಳಷ್ಟೇ ಆಗಿಬಿಡಬಹುದು. (ಈ ಬದಲಾವಣೆ ಅದಾಗಲೇ ನಮ್ಮಲ್ಲಿರುವ ಅನೇಕ ಧಾರಾವಾಹಿ ತಯಾರಿಕಾ ಘಟಕಗಳಲ್ಲಿ ಬಂದಿರುವುದನ್ನು ಸಹ ನಾವು ಕಂಡಿದ್ದೇವೆ.)

ಇನ್ನೂ ಕಥೆ ಬರೆಯುವ ಕೆಲಸವಂತೂ ಒಬ್ಬ ಬರಹಗಾರನ ಕೈತಪ್ಪಿ, ಹತ್ತಾರು ಜನರ ಗುಂಪು ನಿರಂತರವಾಗಿ ಬರೆದ ಕೊಂಡಿಗಳೇ ಇಲ್ಲದ ಕ್ರಿಯೆ ಆಗಿಬಿಡಬಹುದು. ಹಾಗಾದಾಗಲೂ ನಮ್ಮ ಕಾರ್ಯಕ್ರಮಗಳಲ್ಲಿ ಹೃದ್ಯವಾದದ್ದು ನಾಪತ್ತೆಯಾಗುತ್ತದೆ. ಅಲ್ಲಿ ಕಥೆಗಿಂತ ತಿರುವುಗಳು ಮತ್ತು ಅತಿರಂಜಕತೆ ಪ್ರಧಾನವಾಗಿಬಿಡುತ್ತದೆ. (ಈ ಪರಿಸ್ಥಿತಿಯೂ ಸಹ ನಮ್ಮ ಅನೇಕ ಕಾರ್ಯಕ್ರಮಗಳಲ್ಲಿ ಅದಾಗಲೇ ನುಸುಳಿದೆ.) ಇದರಿಂದಾಗಿ ಒಂದೊಮ್ಮೆ ಏಕಾಂತದಲ್ಲಿ ಒಬ್ಬ ಕನಸಿದ್ದನ್ನೂ ಓದಿ, `ಆಹಾ ಭಾಷೆ! ಆಹಾ ಕಥನ ಕೌಶಲ!’ ಎಂದು ಸಂತಸಪಡುತ್ತಿದ್ದ ದಿನಗಳು ಸಂಪೂರ್ಣ ನಾಪತ್ತೆಯಾಗಬಹುದು.
ಇಲ್ಲಿಂದಾಚೆಗೆ ನಮ್ಮ ನಟವರ್ಗವಂತೂ ಮಾನಸಿಕ ಬೆಳವಣಿಗೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ದಿನಕ್ಕೆ ಹನ್ನೆರಡು ಗಂಟೆ ದುಡಿಯುವ ಯಂತ್ರಗಳಾಗಬಹುದು. ಹಾಗಾದಾಗ ಭಾಷೆಯನ್ನ ಕುರಿತ ಕಾಳಜಿಯಾಗಲಿ, ಒಂದು ಪಾತ್ರವನ್ನು ಅನುಭವಿಸಿ ಅಭಿನಯಿಸುವ ಸೊಗಸಾಗಲಿ ಉಳಿಯುವುದಿಲ್ಲ. ಅಂತಿಮವಾಗಿ ಆ ದಿನ ದುಡಿದದ್ದಕ್ಕೆ ನನಗೆ ಸಿಕ್ಕದ್ದೆಷ್ಟು? ನಾನು ಮನೆಗೆ ಯಾವ ಹೊಸ ಸಾಮಗ್ರಿ ಕೊಂಡೊಯ್ಯುತ್ತೇನೆ ಎಂಬುದಷ್ಟೆ ಮುಖ್ಯವಾಗಿ ಬಿಡುತ್ತದೆ. ಅಲ್ಲಿಗೆ ನಮ್ಮಲ್ಲಿರುವ ಕಲಾವಿದ ನಿಧಾನವಾಗಿ ಕೊನೆಯುಸಿರೆಳೆಯುತ್ತಾನೆ. ಅಂತಿಮವಾಗಿ ಫಾರ್ಮುಲಾ ಪ್ರೇರಿತ ಭಾವ-ಭಂಗಿಗಳು, ಮತ್ತು ಅತಿ ನೀರಸವೆನಿಸುವ ಭಾಷಾಬಳಕೆ ಮಾತ್ರ ಉಳಿದುಕೊಳ್ಳುತ್ತದೆ. ಅಲ್ಲಿಗೆ… `ಉದಯವಾಯಿತು ನಮ್ಮಽಽಽ’ ಎಂದು ಕಾಳಿಂಗರಾಯರಂತೆ ದನಿ ಎತ್ತಿ ಹಾಡುವುದಷ್ಟೇ ಉಳಿಯುತ್ತದೆ.

ಇಷ್ಟಾದರೂ…
ನಮ್ಮ ನಡುವಿನ ಗೆಳೆಯ, ನಮ್ಮೆಲ್ಲರನ್ನೂ ಸದಾ ನಗಿಸುತ್ತಾ, ರಮಿಸುತ್ತಾ ಇರಿಸುವ ಅಪರೂಪದ ಆತ್ಮೀಯ ಚಂದ್ರು ಅಲಿಯಾಸ್ ಚಂದ್ರಶೇಖರ ಅಲಿಯಾಸ್ ಸಿಹಿಕಹಿ ಚಂದ್ರು ತನ್ನ ಧಾರಾವಾಹಿಯನ್ನು ಅಪರೂಪದ ಮೈಲಿಗಲ್ಲನ್ನು ಮುಟ್ಟಿಸಿದ್ದಾನೆ. ಯಾವುದೇ ಧಾರಾವಾಹಿಯಾದರೂ ಸರಿ, ಸಾವಿರದ ಗಡಿ ತಲುಪುವುದು ಸುಲಭವಲ್ಲ. ಅಷ್ಟೂ ದಿನ ಅದಾಗಲೇ ನಾನು ತಿಳಿಸಿದ ವಿಷವೃತ್ತದ ಒಳಗೆ ಜೀವಂತವಾಗಿ ಉಳಿಯುವುದು ಮಹತ್ ಸಾಧನೆಯೇ ಸರಿ. ಅದನ್ನೂ ಸ್ವಚ್ಛ ಕನ್ನಡ ತಂಡದೊಡನೆ, ಎಲ್ಲಾ ಏಳುಬೀಳುಗಳನ್ನೂ ಸಹಿಸಿಕೊಂಡು ಗುರಿ ಮುಟ್ಟಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಇದು ಆಗಲೂ ಕಾರಣವಾದ `ಪಾ.ಪ.ಪಾಂಡು’ ತಂಡದ ಎಲ್ಲರಿಗೂ ನನ್ನ ಹೃದಯ ತುಂಬಿದ ಶುಭಾಶಯಗಳನ್ನು ತಿಳಿಸುತ್ತೇನೆ.
ತಂಡ ಕಟ್ಟುವುದು ಕಷ್ಟವಲ್ಲ, ಅದನ್ನು ಬಹುದೂರ ಕೈ ಹಿಡಿದು ಕರೆದೊಯ್ಯುವುದು ಕಷ್ಟ! ಅಂತಹ ಅಪರೂಪವನ್ನು ಸಾಧಿಸಿರುವ ನನ್ನ ಎಲ್ಲಾ ಮಿತ್ರರಿಗೂ ನನ್ನ ಕಿವಿ ಮಾತಿಷ್ಟೆ. ಇನ್ನಷ್ಟು ದಿನ ಒಟ್ಟಾಗಿರಿ! ಈ ನದಿಗೆ ಸಮುದ್ರವನ್ನು ಇಂತಲ್ಲಿಯೇ ಮುಟ್ಟಬೇಕೆಂಬ ಧಾವಂತವಿಲ್ಲ… ಸೆಳೆತವಿದ್ದಷ್ಟೂ ದಿನ ಸಾಗಲಿ, `ಸಾವಿ’ರದ ಯಾನ! ಕನಸುಗಳ ನಿದಾನ!

Advertisements

0 Responses to “ಜನಪ್ರಿಯತೆಯ ಬೆನ್ನನೇರಿ `ಸಾವಿ’ರದ ಕನಸುಗಳ ದಾರಿ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: