ಜಾಗತೀಕರಣ ಮತ್ತು ಸಮಕಾಲೀನ ದೃಶ್ಯ ಮಾಧ್ಯಮಗಳು

ಆತ ಮೆಗಾ ಧಾರಾವಾಹಿಗಳ ಬರಹಗಾರ. ಆತ ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುತ್ತಾನೆ. ಬರೆಯಲು ಕೂಡುತ್ತಾನೆ. ರಾತ್ರಿಯ ಹತ್ತರ ಒಳU, ಅದು ಹೇಗಾದರೂ ಸರಿ, ಇಪ್ಪತ್ತೈದು ನಿಮಿಷಗಳ ಅವಧಿಗೆ ಬರುವಷ್ಟು ಚಿತ್ರಕತೆ-ಸಂಭಾಷಣೆ ಬರೆಯುತ್ತಾನೆ. (ಬರೆಯುತ್ತಾನೆ ಎಂಬುದು ತೀರಾ ಸರಳ ಪದ. ನಿಜ ಹೇಳಬೇಕೆಂದರೆ ಆತ ಕಾರಿಕೊಳ್ಳುತ್ತಾನೆ. ಅದೇ ಉದ್ಯಮದವನಾಗಿ ನಾನು ವಿಶ್ವಾಸದಿಂದ ಈ ಮಾತನ್ನು ಹೇಳಬಹುದು.) ಅವನು ಬರೆದದ್ದು ತೆರೆಯ ಮೇಲೆ ಚಿತ್ರಿತವಾಗಿ ಮೂಡಿಬಂದ ಬಗೆಯೇನು ಎಂಬುದು ಅವನಿಗೆ ತಿಳಿಯದು. ಏಕೆಂದರೆ ಆತನಿಗೆ ತಾನೇ ಬರೆದುದು ಪ್ರಸಾರವಾಗುವ ಅವಧಿಯಲ್ಲಿ ಮತ್ತೊಂದು ಡೆಡ್‌ಲೈನ್ ಒಳಗೆ ಕೆಲಸ ಮುಗಿಸುವ ತರಾತುರಿ ಇರುತ್ತದೆ. ತಾನು ಬರೆದುದರ ಬಣ್ಣ ತೆರೆಯ ಮೇಲೆ ಹೇಗೆ ಬಂತು ಎಂದು ನೋಡುವುದಕ್ಕೆ ಅವನಿಗೆ ಪುರಸೊತ್ತಿಲ್ಲ. ಆತ `ಅಂತೂ ಒಂದು ದಿನದ ಕೆಲಸ ಮುಗಿಯಿತು!’ ಎಂದೆನ್ನುವಷ್ಟರಲ್ಲಿ ಮಾರನೆಯ ದಿನದ ಕೆಲಸದ ಒತ್ತಡ ಅವನೆದುರಿಗೆ ಇರುತ್ತದೆ. ಹೀಗೇ ತಿಂಗಳಲ್ಲಿ ಇಪ್ಪತ್ತು ದಿನ ದುಡಿದು, ಉಳಿದ ಹತ್ತು ದಿನಗಳಲ್ಲಿ ಅದೇ ಧಾರಾವಾಹಿಯ ಮುಂಬರುವ ಕಥೆಯನ್ನು ಕುರಿತು ಚರ್ಚಿಸಿ ಬರೆಯುವುದರಲ್ಲಿ ತೊಡಗಿಕೊಳ್ಳುವ ಆತನಿಗೆ ಅವನದು ಎಂಬ ಸಮಯವೇ ಇಲ್ಲ. ಅವನ ಮನೆ-ಮಂದಿಗೆ ಅವನು ತಿಂಗಳಿಗೊಮ್ಮೆ ತಂದು ಸುರಿಯುವ ಹಣದ ಮೊತ್ತವಷ್ಟೇ ಮುಖ್ಯ. ಅವನಿಂದ ಆದ ಕೆಲಸದ ಮೌಲ್ಯಮಾಪನ ಆಗುವುದೇ ಇಲ್ಲ. ಅವನಿಗೂ ಅದು ಬೇಕಿಲ್ಲ. `ತಾನು ಬರೆಯಬಲ್ಲೆ’ ಎಂಬ ಏಕೈಕ ಶಕ್ತಿಯ ಜೊತೆಗೆ ಆತ ಪೆನ್ನು ಹಿಡಿದು ಕೂರುತ್ತಾನೆ. ಜಗತ್ತಿನಲ್ಲಿ ಆಗುತ್ತಿರುವುದು ಅದೇನೇ ಆಗಿರಲಿ, ಅವನ ಪೆನ್ನಿನಲ್ಲಿ ಮೂಡುವ ಎಲ್ಲ ವಿವರಗಳೂ ಶ್ರೀಮಂತ ಜನಸಮುದಾಯಗಳ ಮನೆಯ ಮಲಗುವ ಕೋಣೆಯಲ್ಲಿ ಆಗುವಂತಹದು. ಅಲ್ಲಿನ ಗಂಡಸು ತನ್ನ ಮನೆಯವರ ಕಣ್ಣುತಪ್ಪಿಸಿ ಇನ್ನಾವುದೋ ಹೆಣ್ಣಿನ ಜೊತೆಗೆ ಇರುತ್ತಾನೆ. ತನಗೆ ಮನೆಯಲ್ಲಿ ನೆಮ್ಮದಿಯಿಲ್ಲ ಎನ್ನುತ್ತಲೇ ತಾನು ಮಾಡುವ ಅನೈತಿಕ ಸಂಬಂಧವನ್ನ ಆ ಗಂಡಸು ಸಾಧನೆ ಎಂಬಂತೆ ಹೇಳಿಕೊಳ್ಳುತ್ತಾನೆ. ಇಂತಹ ಪಾತ್ರ ಸೃಷ್ಟಿಸಿದಾತನಿಗೆ ತಾನು ಯಾರಿಗಾಗಿ ಕಥೆ ಹೇಳುತ್ತಿದ್ದೇನೆ ಎಂಬ ಕಿಂಚಿತ್ ಕಾಳಜಿಯೂ ಇರುವುದಿಲ್ಲ. ಅವನು ಓತಪ್ರೋತವಾಗಿ ಬರೆಯುತ್ತಲೇ ಇರುತ್ತಾನೆ. ಅವನ ಮುಖದಲ್ಲಿ ಅವನಿಗೇ ಅರಿವಿಲ್ಲದಂತೆ ಪ್ರೇತಕಳೆಯೊಂದು ಇಳಿಯತೊಡಗುತ್ತದೆ. ಹೀಗೇ ನಮ್ಮ ನಡುವಿನ ಸೃಜನಶೀಲ ಲೇಖಕನೊಬ್ಬ ಸಾಯುತ್ತಾನೆ. ಇದೇ ಮಾತನ್ನು ಇದೇ ಟೆಲಿವಿಷನ್ ಉದ್ಯಮದ ನಿರ್ದೇಶಕರಿಗೆ, ಸಹನಿರ್ದೇಶಕರಿಗೆ, ಕಲಾವಿದರಿಗೆ, ಹಣ ಹೂಡುವ ನಿರ್ಮಾಪಕರಿಗೆ ಎಂದು ಆ ಪಿರಮಿಡ್ಡಿನ ಎಲ್ಲಾ ಹಂತಗಳಲ್ಲಿ ಇರುವ ಎಲ್ಲರಿಗೂ ಹೇಳಬಹುದು. ಅಲ್ಲಿ ಯಾರಿಗೂ ತಮ್ಮ ನೋಡುಗರ ಕಾಳಜಿಯಿಲ್ಲ. ಅವರಿಗೆ ಇರುವುದು ಕೇವಲ ತಿಂಗಳ ಅಂತ್ಯದಲ್ಲಿ ತನಗೆ ದೊರೆತದ್ದು ಏನು ಎಂಬ ಚಿಂತೆ. 


ಇದು ಕೇವಲ ಟೆಲಿವಿಷನ ಉದ್ಯಮದ ಸ್ಥಿತಿಯಲ್ಲ. ಒಂದೊಮ್ಮೆ ಮಾಧ್ಯಮ ಎನಿಸಿಕೊಂಡು ಈಗ ಉದ್ಯಮ ಎಂಬ ಹಣೆಪಟ್ಟಿಯೊಡನೆ ಬದುಕುತ್ತಿರುವ ನಮ್ಮ ನಡುವಿನ ಎಲ್ಲಾ ಮಾಧ್ಯಮಗಳಲ್ಲಿ ದುಡಿಯುತ್ತಿರುವ ಪರಿಸ್ಥಿತಿಯೂ ಇದೇ ಆಗಿದೆ.. ಇಂದಿನ ಪ್ರಧಾನ ವಾಹಿನಿ ಸಿನಿಮಾಗಳಲ್ಲಿ ದುಡಿಯುತ್ತಿರುವ ಲೇಖಕ ಮತ್ತು ನಿರ್ದೇಶಕರೂ ಸಹ ಇದಕ್ಕೆ ಹೊರತಲ್ಲ. ತಮ್ಮದಲ್ಲದ ಕಥೆಯೊಂದನ್ನ, ತಮ್ಮದಲ್ಲದ ಭಾವ ವಲಯವೊಂದನ್ನ ನಿರಂತರವಾಗಿ ಸೃಷ್ಟಿಸುತ್ತಾ, ಸುಳ್ಳುಗಳನ್ನ ಹೆಣೆಯುವುದೇ ಇಂದು ಎಲ್ಲಾ ಪ್ರಧಾನ ವಾಹಿನಿಯ ಸಿನಿಮಾಗಳ ಕಸುಬಾಗಿ ಬಿಟ್ಟಿದೆ. (ಇಂತಹ ಹೆಣಿಗೆಗಳನ್ನು ಕುರಿತ ವಿವರವನ್ನು ಇದೇ ಲೇಖನದಲ್ಲಿ ಮಂದೆ ವಿಸ್ತೃತವಾಗಿ ಚರ್ಚಿಸೋಣ.)

ಇಲ್ಲಿ ದೃಶ್ಯ ಮಾಧ್ಯಮ ಎನ್ನುವಾಗ ಟೆಲಿವಿಷನ್ನಿನ ಸುದ್ದಿ ಮಾಧ್ಯಮದವರು ಸಹ ಹೊರತಲ್ಲ.. ಅಲ್ಲಿಯೂ ಕೇವಲ ನೋಡುಗನನ್ನ ಪ್ರತಿಕ್ಷಣ ಟಿ.ವಿ.ಗೆ ಹಿಡಿದು ಕೂರಿಸುವ ಗುಣವೊಂದೇ ಇರುತ್ತದೆ. ಅದಕ್ಕಾಗಿಯೇ `ಇದೀಗ ಬಂದ ಬೃಹತ್ ಸುದ್ದಿ’ ಎಂಬ ಉಪಶೀರ್ಷಿಕೆಗಳು ಇರುತ್ತವೆ. `ಇನ್ನೂ ಕೆಲವೇ ಕ್ಷಣಗಳಲ್ಲಿ ಇನ್ನೊಂದು ಅಪರೂಪದ ದೃಶ್ಯ ತೋರಿಸಲಿದ್ದೇವೆ’ ಎಂದೆನ್ನುತ್ತಾ ಸುದ್ದಿ ಓದುಗ, ನೋಡುಗನನ್ನ ಕಾತರದಲ್ಲಿ ಕೂರಿಸುತ್ತಾನೆ. ಆ ನಂತರ ಬರುವ ಸುದ್ದಿ ಅಷ್ಟು ವಿಶೇಷವಾಗಿಲ್ಲದಿದ್ದರೂ ಅದು ಬರುವ ವರೆಗೆ ನೋಡುಗ ಟಿ.ವಿ.ಯ ಎದುರು ಕೂರುವುದಷ್ಟೇ ಆ ಸುದ್ದಿಗಾರರಿಗೆ ಮುಖ್ಯವಾಗಿರುತ್ತದೆ.  

ಇದಕ್ಕೆ ಕಾರಣ ಸ್ಪರ್ಧಾತ್ಮಕ ಜಗತ್ತು. ಈ ಸ್ಪರ್ಧೆಯನ್ನ ಆರಂಭಿಸಿರುವುದು ಮತ್ತು ಈ ಜನ ಸದಾ ಇಂತಹ ಸ್ಥಿತಿಯಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಿರುವುದು ಖಾಸಗೀಕರಣ. ಈ ಖಾಸಗೀಕರಣದ ಹಿಂದಿರುವುದು ಜಾಗತೀಕರಣ ಎಂಬ ಪ್ರಕ್ರಿಯೆ.

ನಮ್ಮ ಮಾಧ್ಯಮಗಳ ಮೇಲೆ ಈ ಖಾಸಗೀಕರಣ ಮತ್ತು ಉದಾರೀಕರಣ ತನ್ನ ಛಾಪನ್ನ ಮೂಡಿಸಲಾರಂಭಿಸಿ ತುಂಬಾ ಕಾಲವೇನೂ ಆಗಿಲ್ಲ. ಈ ಬದಲಾವಣೆಗೆ ಇರುವುದು ಕೇವಲ ಐದಾರು ವರ್ಷದ ಇತಿಹಾಸ. ಕನ್ನಡದ ಸಂದರ್ಭದಲ್ಲಂತೂ ಅದೂ ತೀರಾ ಈಚಿನದು. ಸರಿಸುಮಾರು ೨೦೦೪ರ ಅಂತ್ಯದಲ್ಲಿ ಈ ಬದಲಾವಣೆಗಳು ಟೆಲಿವಿಷನ್ ಉದ್ಯಮದಲ್ಲಿ ಕಾಣತೊಡಗಿದವು. ಆದರೆ ಸಿನಿಮಾ ಮತ್ತು ಪತ್ರಿಕೋದ್ಯಮಗಳಲ್ಲಿ ಈ ಬದಲಾವಣೆ ಕಾಣಿಸಿಕೊಂಡು ಸರಿಸುಮಾರು ದಶಕಗಳಾಗಿವೆ. ಪತ್ರಿಕೋದ್ಯಮವಂತೂ ಜನರಿಗೆ ವಿಶ್ಲೇಷಣಾತ್ಮಕ ಸುದ್ದಿಯ ಬದಲಿಗೆ ರೋಚಕ ಮತ್ತು ಬಾಕ್ಸ್ ಕಟ್ಟಿದ ತುಣುಕು ಮಾಹಿತಿ ನೀಡುವ ಅಭ್ಯಾಸವನ್ನಾರಂಭಿಸಿ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುತ್ತಿರುವ ಆಂಗ್ಲ ದೈನಿಕಗಳಿಗೆ ಪೈಪೋಟಿ ನೀಡುವ ಹತಾಶ ಪ್ರಯತ್ನಗಳನ್ನು ಮಾಡುತ್ತಿವೆ. ಆ ವಿಷಯ ಕುರಿತ ಚರ್ಚೆ ಈ ಲೇಖನದ ವ್ಯಾಪ್ತಿಗೆ ಬಾರದಾದರೂ, ಹೇಗೆ ಈ ಜಾಗತೀಕರಣದ ಬಾಂಬು ನಮ್ಮ ಎಲ್ಲಾ ಮಾಧ್ಯಮಗಳನ್ನೂ ಆವರಿಸುತ್ತಿದೆ ಎಂದು ಸೂಚ್ಯವಾಗಿ ತಿಳಿಸಲಷ್ಟೇ ಇಲ್ಲಿ ಪ್ರಸ್ತಾಪಿಸಿದ್ದೇನೆ. ಸಿನಿಮಾ ಮಾಧ್ಯಮದ ಮೇಲೆ ಇದರಿಂದಾಗಿರುವ ಪರಿಣಾಮವನ್ನು ಚರ್ಚಿಸೋಣ.

ಲವ್ವು-ಕ್ರೈಮು-ಸೆಕ್ಸು
ಇದು ನಮ್ಮ ಇಂದಿನ ಸಿನಿಮಾಗಳ ಮುಖ್ಯವಸ್ತು. ಸಿನಿಮಾ ಯಾವುದೇ ಭಾಷೆಯದಾಗಿರಲಿ, ಯಾವುದೇ ನಾಡಿನದಾಗಿರಲಿ, ಯಾವುದೇ ನಿರ್ದೇಶಕರದ್ದಾಗಿರಲಿ (ಕಲಾತ್ಮಕ ಚಿತ್ರಗಳನ್ನು ಹೊರತುಪಡಿಸಿ) ಅವುಗಳ ಕಥಾವಸ್ತುವಿನ ಹರಿವಿಗೆ ಬೇಕಾದ ಜೀವದ್ರವ ಲವ್ವು, ಸೆಕ್ಸು, ಕ್ರೈಮು. ಕಥೆಯ ಹಿನ್ನೆಲೆ ಮತ್ತು ಪಾತ್ರಧಾರಿಗಳು ಅದಲು ಬದಲಾಗಿರುತ್ತಾರೆ. ಆದರೆ ಅವರೆಲ್ಲರಿಗೂ ಇರುವುದು ಒಂದೇ ಅಗತ್ಯ. ಅದು ಪ್ರೀತಿ. ಹಿಂದಿಯಲ್ಲಿ ತೆರೆಕಂಡ `ದಿಲ್‌ವಾಲೆ ದುಲ್ಹನಿಯಾ ಲೇಜಾಯೆಂಗೇ’ ಎಂಬ ಮಾರುದ್ದ ಹೆಸರಿನ ಸಿನಿಮಾದಲ್ಲಿ ಇದ್ದದ್ದು ಇದೇ ಪ್ರೀತಿಯ ಹುಡುಕಾಟ. ಆ ಚಿತ್ರವಾದರೂ ಅದರಲ್ಲಿದ್ದ ಕೆಲವಾದರೂ ಭಾರತೀಯ ಎಂಬ ಅಂಶಗಳಿಂದಾಗಿ ಮೆಚ್ಚಿಗೆಯಾಗಬಹುದು. ನಂತರದ ದಿನಗಳಲ್ಲಿ ಬಂದ, ಯಶಸ್ವಿಯಾದ ಚಿತ್ರಗಳನ್ನು ಗಮನಿಸಿ. `ಮರ್ಡರ್’ (ಅನೈತಿಕ ಸಂಬಂಧದ ಮತ್ತು ನಿರ್ಲಜ್ಜವೆನಿಸುವ ಲೈಂಗಿಕ ಪ್ರಚೋದನೆಯ ವಿವರಗಳು), `ಜ್ಯೂಲಿ’ (ಲೈಂಗಿಕ ಪ್ರಚೋದನೆಯ ದೃಶ್ಯಗಳು), `ಬಬ್ಲಿ ಔರ್ ಬಂಟ್ಲಿ’ (ಪ್ರೀತಿಯ ಹಿನ್ನೆಲೆಯಲ್ಲಿ ಕ್ರೈಮು) ಇವೆಲ್ಲಾ ಚಿತ್ರಗಳಲ್ಲಿಯೂ ಇರುವುದು ಭಾರತೀಯವಲ್ಲದ ಸರಕು. ಈ ವಿಷಯ ಕುರಿತು ಪ್ರಶ್ನಿಸಿದಾಗ ಆಯಾ ಚಿತ್ರಗಳ ನಿರ್ದೇಶಕರು ಮತ್ತು ನಿರ್ಮಾಪಕರು ನಮಗೆ ಭಾರತೀಯ ಮಾರುಕಟ್ಟೆಗಿಂತ ವಿದೇಶಿ ಭಾರತೀಯರ ಮಾರುಕಟ್ಟೆಯೇ ಮುಖ್ಯ ಎನ್ನುತ್ತಾರೆ. ಅದು ಕೇವಲ ಹಿಂದಿ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ಸಮಸ್ಯೆ ಅಲ್ಲ.. ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡುಗಳಲ್ಲಿ ತಯಾರಾಗುತ್ತಿರುವ ಚಿತ್ರಗಳದೂ ಇದೇ ಪರಿಸ್ಥಿತಿ.

ಹೀಗಿರುವಾಗ ಇವೇ ನೆರೆಯ ಭಾಷೆಗಳ ಜೊತೆ ಸ್ಪರ್ಧಿಸುತ್ತಿರುವ ಕನ್ನಡ ಚಿತ್ರೋದ್ಯಮ ಭಿನ್ನವಾಗಲು ಹೇಗೆ ಸಾಧ್ಯ. ಇಲ್ಲಿ ತಯಾರಾಗುತ್ತಿರುವ ಚಿತ್ರಗಳನ್ನು ಕನ್ನಡ ಚಿತ್ರಗಳು ಎಂದು ಕರೆಯುವುದೇ ತಪ್ಪು ಎಂಬಂತಾಗಿದೆ ಪರಿಸ್ಥಿತಿ. ಮೊನ್ನೆ ರಾಜ್ಯ ಸರ್ಕಾರದಿಂದ ಪ್ರಥಮ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದ `ಮೊನಾಲಿಸಾ’ ಎಂಬ ಚಿತ್ರವನ್ನೇ ತೆಗೆದುಕೊಳ್ಳಿ. ಅಲ್ಲಿ ಪಾತ್ರಧಾರಿಗಳು ಆಡುವ ಮಾತು ಕನ್ನಡ ಎಂಬುದನ್ನ ಹೊರತುಪಡಿಸಿದರೆ ಇನ್ನಾವ ವಿವರವೂ ಕನ್ನಡದ್ದಲ್ಲ. ಆ ಪಾತ್ರಗಳು ಬದುಕುವ ಮನೆ ಅತ್ಯಂತ ಶ್ರೀಮಂತರಾದ್ದು. ಈಗಷ್ಟೇ ಅಮೇರಿಕಾಗೆ ಹೋಗಿ, ಅಲ್ಲಿನ ಯಾವುದೋ ಮನೆಯ ನಕಲು ಚಿತ್ರ ಬರೆದು ನಂತರ ಮನೆ ಕಟ್ಟಿಸಿದರೆ ಆ ಮನೆ ಹೇಗಿರಬಹುದೋ, ಅಂತಹ ಕಟ್ಟಡಗಳು ಅಲ್ಲಿವೆ. ಆ ಚಿತ್ರದ ನಾಯಕ-ನಾಯಕಿ ಹಾಡಿ ಕುಣಿಯುವುದು ಸಹ ಯಾವುದೋ ಕನ್ನಡದ್ದಲ್ಲದ ತಾಣದಲ್ಲಿ. ಅವರ ಉಡುಗೆ-ತೊಡುಗೆಯಂತೂ ಬಿಡಿ, ಅವು ಈ ಜಗತ್ತಿನ ಶ್ರೀಮಂತ ದೇಶದವರು ತೊಡುವಂತಹ ದಿರಿಸುಗಳು. ಅವರಾಡುವ ಭಾಷೆಯಂತೂ ಕನ್ನಡ ಎಂದು ಹೇಳಬೇಕಷ್ಟೆ.. ಇನ್ನು ಆ ನಟ ನಟಿಯರ ಮುಖವರ್ಣಿಕೆ. ಅದು ಅವರು ಈಗಷ್ಟೇ ಬ್ಯೂಟಿಪಾರ್ಲರಿನಿಂದ ಬಂದವರಂತೆ, ಮುಖಕ್ಕೆ ಫೇಶಿಯಲ್ ಮಾಡಿಸಿಕೊಂಡಂತೆ, ಹುಬ್ಬನ್ನು ಈಗಷ್ಟೇ ಯಾರೋ ತೀಡಿ, ತಿದ್ದಿ, ಅನಗತ್ಯವಾದುದನ್ನ ಬೋಳಿಸಿರುವಂತೆ, ಹೆಂಗೆಳೆಯರ ಮುಖದ ಯಾವ ಮೂಲೆಯಲ್ಲೂ ರೋಮ ಕಾಣದಂತೆ ಬ್ಲೀಚಿಂಗ್ ಆಗಿರುತ್ತವೆ. ಒಟ್ಟಾರೆಯಾಗಿ ಪಾತ್ರ ಹತ್ತು ಮಕ್ಕಳ ತಾಯಿಯದ್ದೇ ಆಗಿರಬಹುದು, ಅಥವಾ ಯಾವುದೋ ತೀವ್ರ ಖಾಯಿಲೆಯಿಂದ ನರಳುತ್ತಿರಬಹದು, ಆದರೆ ಆ ಪಾತ್ರಧಾರಿ ಮಾತ್ರ `ಫ್ರೆಶ್’ ಎಂಬಂತೆ ಕಾಣಬೇಕು. ಅತ್ಯಂತ ಸುಪುಷ್ಟವಾಗಿ, ಸಧೃಡವಾಗಿ ಇರಬೇಕು. ಈಗಿನ ಚಿತ್ರಗಳಲ್ಲಿ ಗಾಂಧಾರಿಯಂತಹವಳ ಪಾತ್ರವೂ ಇದೇ ಮೌಲ್ಡಿನಲ್ಲಿ ಎರಕ ಹೊಯ್ದು ತೆಗೆದಂತಿರುತ್ತದೆ.

ಇದಕ್ಕಾಗಿ ನಾವು ಆ ಚಿತ್ರ ತಯಾರಕರನ್ನು ನೇರವಾಗಿ ದೂಷಿಸುವಂತೆಯೂ ಇಲ್ಲ. ಇಂದಿನ ಸಿನಿಮಾ ಮಾರುಕಟ್ಟೆಯಲ್ಲಿ ಇಂತಹುದೇ ಸಿನಿಮಾ ತಯಾರಿಸಬೇಕೆಂಬ ಅನಿವಾರ್ಯ ಹುಟ್ಟಿದೆ. ಮತ್ತು ಚಿತ್ರ ತಯಾರಿಸುವ ಪ್ರತಿಯೊಬ್ಬನಿಗೂ ತನ್ನ ಸಿನಿಮಾ ನೂರು ದಿನ ಓಡಲಿ, ಅತಿಹೆಚ್ಚು ಲಾಭಗಳಿಸಲಿ ಎಂಬ ಆಸೆ. ಅದಕ್ಕಾಗಿಯೇ ಅವರು ತಮ್ಮ ಚಿತ್ರಕ್ಕೆ ಮಾಡುವ ಪ್ರಚಾರದ ಭರಾಟೆಯೇ ಅತಿಹೆಚ್ಚು. ಎಷ್ಟೋ ಬಾರಿ ಒಂದು ಚಿತ್ರ ತಯಾರಿಸಲು ತಗಲುವ ವೆಚ್ಚಕ್ಕಿಂತ ಅದೇ ಚಿತ್ರದ ಪ್ರಚಾರಕ್ಕಾಗಿ ತಗಲುವ ಖರ್ಚು ಹೆಚ್ಚಿನದು (ಉದಾ: `ಜೋಗಿ’, `ಅಹಂ ಪ್ರೇಮಾಸ್ಮಿ’). ಹೀಗಾಗಿ ಚಿತ್ರವೊಂದು ನಮ್ಮಲ್ಲಿ ತಯಾರಾಗುವುದಕ್ಕೆ ಅದಕ್ಕೆ ಅಗತ್ಯವಾಗುವ ಹಣಕ್ಕಿಂತ ಹೆಚ್ಚು ಹಣ ತೊಡಗಿಸಬೇಕಾಗುತ್ತದೆ. ಆದರೆ ಇವುಗಳಲ್ಲಿ ಶೇಕಡ ಎರಡರಷ್ಟು ಮಾತ್ರ ಲಾಭಗಳಿಸುತ್ತವೆ. ಉಳಿದವುಗಳಲ್ಲಿ ಶೇಕಡ ಏಳರಷ್ಟು ಬಂಡವಾಳ ವಾಪಸು ತಂದುಕೊಡುತ್ತವೆ. ಉಳಿದದ್ದು ನಷ್ಟದ ಯಾದಿಯಲ್ಲಿ ಸೇರುತ್ತದೆ. ಇದು ಜಾಗತಿಕ ಸತ್ಯ. ಹಾಲಿವುಡ್ಡೆಂಬ ಹಾಲಿವುಡ್ಡಿನಲ್ಲಿಯೂ ಯಶಸ್ಸು ಎಂಬುದು ಶೇಕಡ ಐದರಷ್ಟು ಮಾತ್ರ. ಆದರೂ ನಮ್ಮವರು ಭಿನ್ನ ಚಿತ್ರ ತೆಗೆಯುತ್ತೇವೆ ಎಂಬ ಹೆಸರಲ್ಲಿ ಅದೇ ಪ್ರೋಟೋಟೈಪ್‌ಗಳನ್ನು ಸೃಷ್ಟಿಸಿ, ಅವುಗಳಿಗೆ ಲವ್ವು, ಸೆಕ್ಸು ಅಥವಾ ಕ್ರೈಮು ಎಂಬ ಹೂರಣವನ್ನು ತುಂಬುತ್ತಾರೆ.
ಈ ನಿರ್ಲಜ್ಜ ಲಾಭಬಡುಕತನಕ್ಕೆ ಕಾರಣವೇ ಜಾಗತೀಕರಣ ಮತ್ತು ಉದಾರೀಕರಣ ಮತ್ತು ಖಾಸಗೀಕರಣ. ಈ ಮೂರು ಕರಣಗಳೂ ಈ ಸಮಾಜದಲ್ಲಿ ಹೇಗಾದರೂ ಲಾಭ ಗಳಿಸಿ, ಒಂದು ಸ್ವಂತ ಮನೆ ಮಾಡಿ, ಸ್ವಂತ ಕಾರು ಕೊಂಡು ಸಂತೃಪ್ತನಾಗಬೇಕೆಂಬ ಸ್ಥಿತಿಗೆ ಆಧುನಿಕ ಮಾನವನನ್ನು ದೂಡಿವೆ. ಇಂತಹ ಗುಣವುಳ್ಳ ಗಂಡಸನ್ನ ಈಗ ನಮ್ಮ ಮಾಧ್ಯಮಗಳು `ಉಬರ್ ಸೆಕ್ಷುಯಲ್’ ಎಂದು ಕರೆಯುತ್ತಿವೆ. ಆತನ ಗಂಡಸುತನದ ವೈಭವೀಕರಣವಲ್ಲದೆ, ಅವನ ಬುದ್ಧಿವಂತಿಕೆಯನ್ನೂ ಗಮನಿಸಿ ಎನ್ನುವ ಮಾಧ್ಯಮಗಳು, ಆ ಬುದ್ಧಿವಂತಿಕೆಯನ್ನು ಗುರುತಿಸಲು ಹಾಕಿಕೊಂಡಿರುವ ಮಾನದಂಡ ಮಾತ್ರ `ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತಹದು.

ಈ ಪರಿಸ್ಥಿತಿಯಲ್ಲಿ ನಮ್ಮತನ ಎಂಬುದು ಉಳಿಯುವುದಾದರೂ ಹೇಗೆ ಸಾಧ್ಯ. ಹೀಗಿರುವಾಗ ನಮ್ಮ ನೋಡುಗರು ಯಾವ ಭಾಷೆಯ ಚಿತ್ರವನ್ನಾದರೂ ನೋಡುತ್ತಾರೆ. ಅವರಿಗೆ ನಮ್ಮ ಭಾಷೆಯದೇ ಚಿತ್ರ ನೋಡಬೇಕೆಂಬ `ಒಳಗಿನ’ ಒತ್ತಾಯಗಳಿಲ್ಲ. ಹೀಗಾಗಿ ಕನ್ನಡ ಚಿತ್ರಗಳ ಕುರಿತ ಅಭಿಮಾನ ಬೆಳೆಸಲು `ಅಭಿಯಾನ’ಗಳನ್ನು ನಡೆಸಬೇಕಾದ ಅನಿವಾರ್ಯ ಉಂಟಾಗಿದೆ. ಮೇಲೆ ವಿವರಿಸಿದ ಭೂತಗಳಲ್ಲದೆ ಮತ್ತೊಂದು ಕನ್ನಡದ್ದೇ ಆದ ಭೂತ ಕನ್ನಡ ಚಿತ್ರರಂಗವನ್ನು ಕೊರೆಯುತ್ತಿದೆ. ಅದು ರಿಮೇಕ್ ಅಥವಾ ನಕಲು.

ರಿಮೇಕ್ ಎಂಬ ರೋಗ
ಇದು ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಜಾಗತಿಕ ಚಿತ್ರರಂಗವನ್ನು ಕಾಡುತ್ತಿರುವ ರೋಗ. ಎಂದು ಲಾಭಬಡುಕ ಚಿತ್ರತಯಾರಿಕ ಕಂಪೆನಿಗಳು ವಿಫುಲವಾದವೋ ಆಗ ಚಿತ್ರ ತಯಾರಿಕೆ ಎಂಬುದು ಕಾರ್ಫೋರೇಷನ್ ನಿರ್ದೇಶಿತ ಯಂತ್ರವಾಯಿತು. ಆ ಯಂತ್ರಗಳು ನಡೆಯಲು ಸೃಜನಶೀಲ ಕಥೆಗಾರರು ನೀಡುವ ಸರಕು ಸಾಕಾಗದು. ಅವರು ಟರ್ನ್‌ಓವರ್ ವೀರರು. ಅವರಿಗೆ ತಮ್ಮ ಕಂಪೆನಿಯು ಆಯಾ ಲೆಕ್ಕವರ್ಷದಲ್ಲಿ ಮಾಡಿದ ವಹಿವಾಟಿನ ಮೊತ್ತ ಮುಖ್ಯ. ಅದನ್ನು ಹಿಡಿದುಕೊಂಡೇ ಅವರು ತಮ್ಮ ಕಂಪೆನಿಯ ಷೇರುಗಳನ್ನು ಮಾರುತ್ತಾರೆ. ಅದಕ್ಕಾಗಿ ಅವರಿಗೆ ತಯಾರಾಗುವ ಚಿತ್ರಗಳ ಗುಣಮಟ್ಟಕ್ಕಿಂತ ಸಂಖ್ಯೆ ಮುಖ್ಯವಾಗುತ್ತದೆ. ಈ ಸಂಖ್ಯೆ ಹೆಚ್ಚಿಸುವ ದಂಧೆಯಾಗಿ ಅವರು ಇತರ ಭಾಷೆಗಳಲ್ಲಿ ತಯಾರಾಗುವ ಚಿತ್ರಗಳ ಹಕ್ಕುಗಳನ್ನು ಖರೀದಿಸಿ ನಕಲು ಮಾಡಲು ಆರಂಭಿಸುತ್ತಾರೆ. ಹಾಲಿವುಡ್ಡಿನ ಚಲನಚಿತ್ರೋದ್ಯಮದಲ್ಲಿ ಈಗ ಶೇಕಡ ಅರವತ್ತರಷ್ಟು ನಕಲು ಅಥವಾ ರಿಮೇಕ್ ಚಿತ್ರಗಳು ತಯಾರಾಗುತ್ತಿವೆ. ಇದು ನಮ್ಮ ಕನ್ನಡ ಚಿತ್ರರಂಗದಲ್ಲೂ ಆಗುತ್ತಿದೆ ಕಳೆದ ವರ್ಷ ನಮ್ಮಲ್ಲಿ ತಯಾರಾದ ೧೦೭ ಚಿತ್ರಗಳಲ್ಲಿ ೪೦ ಚಿತ್ರಗಳು ನೇರ ನಕಲು, ೪೫ ಚಿತ್ರಗಳು ರಿಮಿಕ್ಸ್ (ಇದು ನಮ್ಮ ಚಿತ್ರರಂಗಕ್ಕೆ ಸೀಮಿತವಾದ ಮತ್ತೊಂದು ಖಾಯಿಲೆ. ಇಲ್ಲಿ ಸರ್ಕಾರದ ತೆರಿಗೆವಿನಾಯಿತಿ, ಸಬ್ಸಿಡಿ ಮುಂತಾದ ಸವಲತ್ತು ಪಡೆಯಲೆಂದು ಯಾವುದೇ ಒಂದು ಚಿತ್ರದ ರೂಪವಲ್ಲದ, ಹತ್ತಾರು ಚಿತ್ರಗಳಿಂದ ಕದ್ದು ರೂಪಿಸಿದ ಕಥೆಯನ್ನುಳ್ಳ ಚಿತ್ರಗಳು ತಯಾರಾಗುತ್ತವೆ. ಅದನ್ನು ರಿಮೀಕ್ಸ್ ಅಥವಾ ಚಿತ್ರಾನ್ನ ಎಂದು ಕರೆಯಬಹುದು.), ಉಳಿದವು ಸ್ವತಂತ್ರಕೃತಿಗಳು. (ಈ ಸಂಖ್ಯೆಗಳನ್ನು ಚಲನಚಿತ್ರ ಪತ್ರಕರ್ತರಾದ ಬಾ.ನ.ಸುಬ್ರಹ್ಮಣ್ಯ ಅವರಿಂದ ಪಡೆದಿದ್ದೇನೆ).

ಅಂದರೆ ನಮ್ಮಲ್ಲಿ ತಯಾರಾಗುವ ಚಿತ್ರಗಳಲ್ಲಿ ಸ್ವತಂತ್ರ ರಚನೆ ಎಂಬುದು ಮೈನಾರಿಟಿ ಆಗಿಬಿಟ್ಟಿದೆ. ಇದಕ್ಕೆ ಕಾರಣ. ಮೊದಲನೆಯದಾಗಿ ಸಾಹಸ ಪ್ರವೃತ್ತಿ ಮತ್ತು ಹೊಸದನ್ನು ಮಾಡುವ ತುಡಿತವಿಲ್ಲದ ನಿರ್ಮಾಪಕರು ಕಾರಣವಾದರೆ ಮತ್ತೊಂದು ಕಡೆಯಿಂದ ನಮ್ಮಲ್ಲಿರುವ ನಾಯಕರಿಗೆ (ಅವರನ್ನು ನಟರು ಎಂದು ಕರೆಯಲು ಮನಸ್ಸು ಹಿಂಜರಿಯುತ್ತದೆ. ಅದ್ದರಿಂದ ತಾರಾಮಣಿಗಳು ಎಂದು ಗುರುತಿಸಬಹುದು.) ಹೊಸ ಕಥೆಯೊಂದನ್ನ ಅರ್ಥೈಸಿಕೊಳ್ಳುವ, ಅದನ್ನ ತೆರೆಯಮೇಲೆ ರೂಪಿಸಬೇಕೆಂಬ ವ್ಯವಧಾನವೇ ಇಲ್ಲ. ಅವರು ಆದಷ್ಟೂ ಬೇಗ, ಅಂದರೆ ತಮ್ಮ ಮಾರುಕಟ್ಟೆ ನಡೆಯುತ್ತಿರುವ ಅವಧಿಯಲ್ಲಿ ಅನೇಕ ಚಿತ್ರಗಳನ್ನು ಮಾಡಬೇಕೆಂಬ ಧಾವಂತವುಳ್ಳವರು. ಹೀಗಾಗಿ ಯಾವುದೋ ಕಾದಂಬರಿಯನ್ನೋ ಅಥವಾ ಕಥೆಯನ್ನೋ ಆಧರಿಸಿದ ಚಿತ್ರಕಥೆ ರಚಿಸಿದವನಿಗೆ ಈ ತಾರಾಮಣಿಗಳು ಮಾತಿಗೂ ಅವಕಾಶ ಕೊಡುವುದಿಲ್ಲ. ಹೀಗಾಗಿ ಇವರ ಬಳಿ ಚಿತ್ರ ತಯಾರಿಸಲೆಂದು ಹೋದ ನಿರ್ಮಾಪಕನಿಗೆ ಈ ತಾರಾಮಣಿಗಳೇ ಯಾವಿದೋ ತಮಿಳು ಇಲ್ಲಾ ತೆಲುಗಿನ ಯಶಸ್ವಿ ಚಿತ್ರದ ಕ್ಯಾಸೆಟ್ಟು ನೀಡುತ್ತಾರೆ. ಆ ತಾರಾಮಣಿಯಿಂದಲೇ ತನ್ನ ವ್ಯಾಪಾರವೆಲ್ಲಾ ಆಗುವುದೆಂದು ಭಾವಿಸಿಕೊಂಡಿರುವ ನಿರ್ಮಾಪಕ ಅಂತೆಯೇ ಒಂದು ನಕಲು ತಯಾರಿಸಲು ತಂಡ ತಯಾರಿಸುತ್ತಾನೆ. ನಕಲು ಚಿತ್ರಗಳು ಓತಪ್ರೋತವಾಗಿ ಬರುತ್ತಲೇ ಇರುತ್ತವೆ. ಈಗ ಕರ್ನಾಟಕ ಸರ್ಕಾರ ಇಂತಹ ಚಿತ್ರಗಳಿಗೂ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲು ತೀರ್ಮಾನಿಸಿದೆ. ಇನ್ನು ಈ ನಕಲು ರೋಗದ ಹಾವಳಿ ನಿರಂತರ.

ಇದರಿಂದಾಗಿ ಕನ್ನಡದ ನೋಡುಗ, ವಿಶೇಷವಾಗಿ ಮಧ್ಯಮವರ್ಗದ ಜನ ಚಲನಚಿತ್ರಗಳನ್ನು ನೋಡುವುದನ್ನೇ ಬಿಟ್ಟಿದ್ದಾರೆ. ಆ ನಕಲಿಗಿಂತ ಟೆಲಿವಿಷನ್ನಿನಲ್ಲಿ ಬರುವ ದೈನಂದಿನ ಧಾರಾವಾಹಿಗಳೇ ವಾಸಿ ಎಂದು ಅವರ ಅಭಿಪ್ರಾಯ. ಹೀಗಾಗಿ ಕನ್ನಡ ಚಿತ್ರಗಳನ್ನು ನೋಡಲು ಹೋಗುವ ಜನ ತೀರಾ ಕೆಳವರ್ಗದವರಾಗಿರುತ್ತಾರೆ ಅಥವಾ ದಿನಗೂಲಿ ಕಾರ್ಮಿಕರಾಗಿರುತ್ತಾರೆ. ಇಂತಹ ಜನಮಾನಸಕ್ಕೆ ನಮ್ಮ ಚಿತ್ರಗಳು ಕೊಡುತ್ತಿರುವ ಸರಕು ಮಾತ್ರ ಅದಾಗಲೇ ಚರ್ಚಿಸಿದ ಲವ್ವು, ಸೆಕ್ಸು, ಕ್ರೈಮು ಅಥವಾ ನಕಲು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದಲ್ಲಿ ಕನ್ನಡತನ ಎಂಬುದೇ ಮೈನಾರಿಟಿ!
ಮೂರ್ಖರ ಪೆಟ್ಟಿಗೆಯ ಸಾಧನೆ – ವೇದನೆಈ ಲೇಖನದ ಆರಂಭದಲ್ಲಿಯೇ ಟೆಲಿವಿಷನ್ ಉದ್ಯಮದಲ್ಲಿ ಮೂಡುತ್ತಿರುವ ಏಕತಾನತೆಯನ್ನು ಕುರಿತು ಚರ್ಚಿಸಿದೆ. ಅದೇ ಮಾತಿನ ಮುಂದುವರಿಕೆ ಎಂಬಂತೆ ಕನ್ನಡದ ಟೆಲಿವಿಷನ್ ಉದ್ಯಮದ ಮೇಲೆ ಈ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಆಗಿರುವ ಪರಿಣಾಮಗಳನ್ನು ಗಮನಿಸೋಣ.

೧೯೮೫ರಲ್ಲಿ ಬೆಂಗಳೂರು ದೂರದರ್ಶನದಲ್ಲಿ ಮೊದಲ ಸಾಪ್ತಾಹಿಕ ಧಾರಾವಾಹಿ ಪ್ರಸಾರವಾಯಿತು. ಅಲ್ಲಿಂದಾಚೆಗೆ ಕನ್ನಡ ಹವ್ಯಾಸೀ ರಂಗಭೂಮಿಯ ಪ್ರಮುಖರೆಲ್ಲರೂ ಧಾರಾವಾಹಿ ನಿರ್ದೇಶನವು ತಮ್ಮ ಸಿನಿಮಾ ತಯಾರಿಕೆಯ ಆಸೆಯನ್ನು ಒಂದು ಮಟ್ಟಕ್ಕೆ ತುಂಬುತ್ತದೆ ಎಂಬ ಕಾರಣಕ್ಕೆ ಧಾರಾವಾಹಿ ತಯಾರಿಕಾ ಲೋಕಕ್ಕೆ ಬಂದರು. ಈ ಮಾತಿಗೆ ಪುಷ್ಟಿ ಎಂಬಂತೆ ಸಾಕಷ್ಟು ಉತ್ತಮ ಕಥೆಗಳು ಧಾರಾವಾಹಿಗಳಾಗಿ ಬಂದುದನ್ನು ನಾವು ನೋಡಬಹುದು. ನಿಧಾನವಾಗಿ ಕನ್ನಡದಲ್ಲಿ ಖಾಸಗೀ ಛಾನೆಲ್ಲುಗಳು ಆರಂಭವಾದವು. ಆರಂಭದ ದಿನಗಳಲ್ಲಿ ಅವುಗಳು ಹೆಚ್ಚು ಜನಪ್ರಿಯವಾಗಲಿಲ್ಲವಾದರೂ ಉದಯ ಟಿ.ವಿ.ಯಂತಹದು ಅದು ಆರಂಭವಾದ ಆರು ವರ್ಷಗಳಲ್ಲಿ ತನ್ನದೇ ಆದ ನೋಡುಗರನ್ನು ಗಳಿಸಕೊಂಡಿತ್ತು. ಇದಕ್ಕಾಗಿ ಆ ಛಾನೆಲ್ಲಿನ ಮಾಲೀಕರು ಸಿನಿಮಾ ಆಧಾರಿತ ಕಾರ್ಯಕ್ರಮಗಳನ್ನು ಹೆಚ್ಚು ಅವಲಂಬಿಸಿದರು. ಪ್ರತಿದಿನ ಛಾನೆಲ್ಲೊಂದರಲ್ಲಿ ಪುಕ್ಕಟೆಯಾಗಿ ಕನ್ನಡ ಸಿನಿಮಾ ನೋಡಬಹುದೆಂಬುದೇ ನೋಡುಗರಿಗೆ ಆನಂದ-ಆಕರ್ಷಣೆ ಉಂಟು ಮಾಡಿತ್ತು. ನಂತರ ಆ ಛಾನೆಲ್ಲಿನವರು ಧಾರಾವಾಹಿಗಳ ತಯಾರಿಕೆ ಆರಂಭಿಸಿದಾಗಲೂ ಸಿನಿಮಾದ ಜನರನ್ನೇ ಆಯ್ದುಕೊಂಡರು. ನಿರ್ದೇಶಕ ಜನಪ್ರಿಯ ಸಿನಿಮಾದವನು, ನಟವರ್ಗ ಸಹ ಅಲ್ಲಿನದೇ ಎಂಬ ನಿಯಮದೊಂದಿಗೆ ಆ ಖಾಸಗೀ ಛಾನೆಲ್ ದೂರದರ್ಶನ ಎಂಬ ಸರ್ಕಾರೀ ಛಾನೆಲ್ಲಿನ ಜೊತೆ ಸ್ಪರ್ಧೆಗೆ ಇಳಿಯಿತು. ಅಲ್ಲಿ ಜನರಿಗೆ ಭೌದ್ಧಿಕವಾದುದನ್ನ ಏನನ್ನಾದರೂ ಕೊಡಬೇಕೆಂಬುದಕ್ಕಿಂತ ಹೇಗಾದರೂ ಜನರನ್ನು ತಮ್ಮ ಟಿ.ವಿ. ನೋಡುವಂತೆ ಪ್ರೇರೇಪಿಸುವುದೇ ಪ್ರಧಾನವಾಗಿತ್ತು. ಹೀಗಾಗಿ ದೂರದರ್ಶನದಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳನ್ನು ನೋಡುವ ಒಂದು ನೋಡುವರ್ಗ, ಖಾಸಗಿ ಛಾನೆಲ್ಲಿನ ಕಾರ್ಯಕ್ರಮ ನೋಡುವ ಇನ್ನೊಂದು ವರ್ಗ ಎಂದು ಇಬ್ಬಗೆಯ ನೋಡುಗವರ್ಗವೇ ಬೆಳೆದುಬಂದಿತು. ನಂತರದ ದಿನಗಳಲ್ಲಿ ಈ ಟಿ.ವಿ. ಕನ್ನಡ, ಕಾವೇರಿ, ಸುಪ್ರಭಾತ ಎಂಬ ಅನೇಕ ಕನ್ನಡ ಖಾಸಗಿ ಛಾನೆಲ್ಲುಗಳು ಆರಂಭವಾದವು. ಇವುಗಳಲ್ಲಿ ಈ ಉದ್ಯಮಕ್ಕೆ ತೊಡಗಿಸಬೇಕಾದ ಹಣದ ಪರಿಕಲ್ಪನೆಯಿದ್ದು ಉಳಿದುಕೊಂಡವು ಈ ಟ.ವಿ. ಮತ್ತು ಉದಯ ಮಾತ್ರ. ಉಳಿದ ಛಾನೆಲ್ಲುಗಳು ನಷ್ಟ ಭರಿಸಲಾಗದೆ ಬಾಗಿಲೆಳೆದುಕೊಂಡವು. ಅಲ್ಲಿಂದಾಚೆಗೆ ಆರಂಭವಾದದ್ದು ಖಾಸಗಿ ಒಡೆತನದ ಕಂಪೆನಿಗಳ ನಡುವಿನ ಸ್ಪರ್ಧೆ. ಅಲ್ಲಿ ಜನಪ್ರಿಯತೆಯ ಮಾನದಂಡವನ್ನಾಧರಿಸಿ ಜಾಹೀರಾತು ನೀಡುವ ಕಂಪೆನಿಗಳನ್ನು ಒಲೈಸುವ ಗುಣವಷ್ಟೇ ಉಳಿಯಿತು. ಗುಣಮಟ್ಟ ಗೌಣವಾಯಿತು. ಟಿ.ಆರ್.ಪಿ. ಎಂಬ ಸರಾಸರಿ ಲೆಕ್ಕವನ್ನು ನೋಡಿ ಜನಪ್ರಿಯತೆಯನ್ನು ಅಳೆಯುವ ಅಭ್ಯಾಸವೊಂದಿದೆ. ಅದೇ ಮುಖ್ಯವಾಯಿತು. ಯಾವ ಕಾರ್ಯಕ್ರಮ ಈ ರೇಟಿಂಗ್ ಪಟ್ಟಿಯಲ್ಲಿ ಬರುತ್ತದೊ ಅದು ಮಾತ್ರ ಉಳಿದು ರೇಟಿಂಗ್‌ನಲ್ಲಿ ಕಾಣಿಸಿಕೊಳ್ಳದ ಕಾರ್ಯಕ್ರಮಗಳು ಗರ್ಭಪಾತಕ್ಕೆ ಒಳಗಾದವು. ಈ ಹಾದಿಯಲ್ಲಿ ದೂರದರ್ಶನಕ್ಕೆಂದು ಗಂಭೀರ ಕಥೆ ಹುಡುಕಿ ಕಾರ್ಯಕ್ರಮ ತಯಾರಿಸುತ್ತಿದ್ದವರ ಗುಂಪು ಒಡೆದು ಒಂದಷ್ಟು ಜನ `ಉದಯ’ದ ಹಿಂದೆ ಮತ್ತೊಂದಿಷ್ಟು ಜನ `ಈ ಟಿ.ವಿ.’ಯ ಹಿಂದೆ ಉಳಿದರು. ಯಾರು ಎಲ್ಲಿದ್ದರೂ ಅವರ ಗುರಿ ಮಾತ್ರ ನೋಡುಗನಿಗೆ ಗುಣಮಟ್ಟದ ಕಾರ್ಯಕ್ರಮ ನೀಡಿ, ಮನ್ನಣೆ ಪಡೆಯುವುದಕ್ಕಿಂತ ಟಿ.ಆರ್.ಪಿ.ಯಲ್ಲಿ ಕಾಣಿಸಿಕೊಳ್ಳುವುದೇ ಆಗಿತ್ತು. ಹೀಗಾದಾಗ ಉತ್ತಮ ಧಾರಾವಾಹಿ ಎಂಬ ಕಲ್ಪನೆಯೇ ಬದಲಾಗತೊಡಗಿತು. ಅದು ಅನಿವಾರ್ಯ ಎಂಬಂತೆ ಬಾಲಾಜಿ ಟೆಲಿಪಿಲ್ಮ್ ಕಂಪೆನಿ ತಯಾರಿಸುವ (ಅದಾಗಲೇ ಚರ್ಚಿತ ಪ್ರೋಟೋಟೈಪ್‌ಗಳು) ಧಾರಾವಾಹಿಗಳ ಸ್ವರೂಪದ್ದೇ ಧಾರಾವಾಹಿಗಳು ಕನ್ನಡದಲ್ಲಿಯೂ ಕಾಣಿಸಿಕೊಳ್ಳಲಾರಂಭಿಸಿದವು. ಆಕಸ್ಮಿಕವಾಗಿ ಈ ಸ್ವರೂಪ ಬಿಟ್ಟು, ಹೊಸದು ಮತ್ತು `ಒಳ್ಳೆಯದು’ ಎಂಬುದು ತಯಾರಾದರೂ ಅಂತಹ ಧಾರಾವಾಹಿ ಬಹುಕಾಲ ಉಳಿಯಲಿಲ್ಲ (ಪ್ರಕಾಶ್ ಬೆಳವಾಡಿ ನಿರ್ದೇಶನದ `ಗರ್ವ’ ಅದಕ್ಕೆ ಉತ್ತಮ ಉದಾಹರಣೆ). ಇದೇ ಸಂದರ್ಭದಲ್ಲಿ ಕನ್ನಡದ ಖಾಸಗಿ ಟೆಲಿವಿಷನ್ ಛಾನೆಲ್ಲುಗಳಿಗೆ ಬಂಡವಾಳ ಹೂಡಿ ಧಾರಾವಾಹಿ ತಯಾರಿಸುವುದಕ್ಕೆ ಬೇಕಾದ ಹಣ ಹೆಚ್ಚಾಗುತ್ತಾ ಬಂದಿತು. ಇದಕ್ಕೆ ಛಾನೆಲ್ಲಿಗೆ ಕಟ್ಟಬೇಕಾದ ಟೆಲಿಕಾಸ್ಟ್ ಶುಲ್ಕ ಮತ್ತು ತಯಾರಿಕಾ ವೆಚ್ಚದಲ್ಲಿನ ಹೆಚ್ಚಳ ಕಾರಣವಾಗಿತ್ತು. ಇದರಿಂದಾಗಿ ಆ ವರೆಗೆ ನಮ್ಮಲ್ಲಿದ್ದ ಸಣ್ಣ ಹೂಡಿಕೆದಾರರು ಹಿಂದೆ ಸರಿದರು. ನೆರೆರಾಜ್ಯದ ಛಾನೆಲ್ಲುಗಳಿಗೆ ಕಾರ್ಯಕ್ರಮ ತಯಾರಿಸುತ್ತಿದ್ದ ಕಾರ್ಪೋರೇಟ್ ಕಂಪೆನಿಗಳು ಕನ್ನಡ ಧಾರಾವಾಹಿ ನಿರ್ಮಾಣಕ್ಕೆ ಇಳಿದವು. ಹೀಗೆ ಬಂದವುಗಳಲ್ಲಿ ಈಗ ಬಾಲಾಜಿ, ನಿಂಬಸ್, ಮಣಿಪಾಲ್ ಎಂಟರ್‌ಟೈನರ್ಸ್, ಆರ್.ಪಿ.ಜಿ. ಮತ್ತು ಸರೆಗಮ ಎಂಬ ಕಂಪೆನಿಗಳು ಉಳಿದುಕೊಂಡಿವೆ. ಮತ್ತೊಂದಷ್ಟು ಕಂಪೆನಿಗಳು ತಳೂಊರುವ ಪ್ರಯತ್ನ ಮಾಡುತ್ತಿವೆ. ಕನ್ನಡದ ಬಡನಿರ್ಮಾಪಕ ಪ್ರಾಯೋಜಿತ ಧಾರಾವಾಹಿ ತಯಾರಿಕೆಯಿಂದ ಸಂಪೂರ್ಣ ಹಿಂದೆ ಸರಿದಿದ್ದಾನೆ. ಇನ್ನೂ ಛಾನೆಲ್ಲಿನವರು ಸ್ವತಃ ನಿರ್ಮಿಸುತ್ತಿರುವ ರಾಯಧನ (ರಾಯಲ್ಟಿ) ಕಾರ್ಯಕ್ರಮಗಳಲ್ಲಿಯೂ ಕಾರ್ಪೋರೇಟ್ ಕಂಪೆನಿಗಳು ಕಾಲಿಡುತ್ತಿರುವುದರಿಂದ ನಮ್ಮಲ್ಲಿದ್ದ ಕೆಲ ಸಣ್ಣ ನಿರ್ಮಾಪಕರು ಸಹ ತಮ್ಮ ಸಂಸ್ಥೆಗಳನ್ನು ಕಾರ್ಪೋರೇಟ್ ಕಂಪೆನಿಗಳಂತೆಯೇ ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವುಗಳ ಫಲಶ್ರುತಿಯಾಗಿ ಕನ್ನಡ ಧಾರಾವಾಹಿಗಳಲ್ಲಿ ಉತ್ತಮ ವಸ್ತುವನ್ನ ಅಥವಾ ಕಥೆಯನ್ನ ನೋಡುವುದಕ್ಕಿಂತ ನೋಡುಗನ ಎದುರಿಗೆ ಬರುತ್ತಿರುವುದು ಕೇವಲ ರೋಚಕ, ಪ್ರಚೋದಕ, ವೈಭವೀಕೃತ, ಅತಿರಂಜನೆಯ ಗುಣವುಳ್ಳ ದೃಶ್ಯಗಳು.
ಇವುಗಳ ನಡುವೆ ಧಾರಾವಾಹಿಯ ಲೋಕಕ್ಕೂ ರಿಮೇಕ್ ರೋಗ ಬಂದಿದೆ. ಈಗ ಕನ್ನಡದಲ್ಲಿ ಬಿತ್ತರವಾಗುತ್ತಿರುವ ದೈನಿಕ ಧಾರಾವಾಹಿಗಳು ೩೫. ಇವುಗಳಲ್ಲಿ ೧೩ ಧಾರಾವಾಹಿಗಳು ನಕಲು ಅಥವಾ ರಿಮೇಕ್. ಕನ್ನಡ ಸಿನಿಮಾದಲ್ಲಿರುವ ರಿಮೇಕ್ ರೋಗ ಕುರಿತು ಚರ್ಚಿಸುತ್ತಾ ಯಾವ ವಿವರಗಳನ್ನು ತಿಳಿಸಿದ್ದೇನೋ ಅವೇ ಸಂಕಷ್ಟಗಳು ಧಾರಾವಾಹಿಯ ಲೋಕಕ್ಕೂ ಬಂದಿಳಿಯುತ್ತಿದೆ. ಇಲ್ಲಿ ಹೊಸತನ ಎಂಬುದು ನಿಧಾನವಾಗಿ ನಾಪತ್ತೆಯಾಗುತ್ತಿದೆ. ಇದರಿಂದ ಕನ್ನಡ ಕಾರ್ಯಕ್ರಮಗಳ ನೋಡುಗ ಯಾವ ಕಾರಣಕ್ಕಾಗಿ ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದನೋ ಅದೇ ಕಾರಣಕ್ಕಾಗಿ ಟೆಲಿವಿಷನ್ನಿನಿಂದಲೂ ಹಿಂದೆ ಸರಿಯುತ್ತಿದ್ದಾನೆ. ಇದರಿಂದಾಗಿ ಖಾಸಗೀಕರಣ ಮತ್ತು ಜಾಗತೀಕರಣದಿಂದ ಆಗುತ್ತಿರುವ ಸಮಸ್ಯೆಗಳ ಮತ್ತೊಂದು ಮುಖ ಕಣ್ಣೆದುರು ಬಿಚ್ಚಿಕೊಳ್ಳುತ್ತಿದೆ. ಈಗ ಇದೇ ಕಾರಣವಾಗಿ ಟೆಲಿವಿಷನ್ನಿನಲ್ಲಿ ಮೂಡಿಬರುತ್ತಿರುವ ಮತ್ತೊಂದು ಬಗೆಯ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸೋಣ.

ಟೆಲಿವಿಷನ್ನಿನಲ್ಲಿ ಕ್ರೈಂ ಕಾರ್ಯಕ್ರಮಗಳು
ಅದಾಗಲೇ ಖಾಸಗೀ ಛಾನೆಲ್ಲುಗಳ ಲಾಭಬಡುಕನ ಕುರಿತು ಮಾತಾಡಿದ್ದೇವೆ. ಈ ಲಾಭ ಹುಡುಕುವ ಹುನ್ನಾರದಲ್ಲಿ ಹುಟ್ಟಿದ್ದೇ ಸುದ್ದಿಯನ್ನ ರೋಚಕವಾಗಿಸುವ ಗುಣ. ಅದೇ ಗುಣದ ಮುಂದುವರಿಕೆಯಂತೆ ಪತ್ರಿಕೋದ್ಯಮದಲ್ಲಿ ಕ್ರೈಂ ಕುರಿತಂತೆ ಅನೇಕ ಪತ್ರಿಕೆಗಳು ಆರಂಭವಾದವು. ಅವುಗಳ ಹಣಗಳಿಕೆಯನ್ನು ಕಂಡ ಧಾರಾವಾಹಿ ಲೋಕದವರು ಮೊದಲಿಗೆ ಪೋಲೀಸರ ಸಾಹಸಗಳನ್ನು ತೋರುವ ಸಣ್ಣ ಮಟ್ಟದ ಪ್ರಯತ್ನವನ್ನು ದೂರದರ್ಶನದಲ್ಲಿ (ಸರ್ಕಾರೀ ಛಾನೆಲ್ಲಿನಲ್ಲಿ) ಆರಂಭಿಸಿದರು. ಅದು ಸಮಾಜಘಾತುಕರನ್ನು ಪೋಲೀಸರು ಬಂಧಿಸಿದ ಮತ್ತು ಆ ಘಾತುಕರನ್ನ ಕ್ಯಾಮೆರಾದೆದುರು ತೋರುವ ತೀರಾ ತೆಳು ಪ್ರಯತ್ನವಾಗಿತ್ತು. ಅಲ್ಲಿ ಪಾತಕವೊಂದರ ಒಳಗಿಳಿದು ಆ ಪಾತಕದ ಹಿಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ ಕಾರಣಗಳನ್ನು ವಿಶ್ಲೇಶಿಸುವ ಗುಣ ಇರಲಿಲ್ಲ. ಇದೇ ಸಂದರ್ಭದಲ್ಲಿ ಉದಯ ಟಿ.ವಿ.ಯಲ್ಲಿ ಇಂತಹ ವಿವರಗಳನ್ನುಳ್ಳ ಸಾಪ್ತಾಹಿಕ ಕಾರ್ಯಕ್ರಮವೊಂದು ಆರಂಭವಾಯಿತು. ಅದನ್ನು ರೂಪಿಸಿದ್ದವರು ಈಗ ಎಂ.ಪಿ. ಆಗಿರುವ ತೇಜಸ್ವಿನಿಯವರು. ಆ ಕಾರ್ಯಕ್ರಮದಲ್ಲಿ ಬಳಕೆಯಾಗುತ್ತಿದ್ದ ಕನ್ನಡ ಭಾಷೆಯೇ ಆ ಕಾಲಕ್ಕೆ ತೀರಾ ಗಾಬರಿ ಹುಟ್ಟಿಸುವಂತಹುದಾಗಿತ್ತು. ಮೊದಲ ಬಾರಿಗೆ ವಾರ್ತೆಗಳಲ್ಲಿ ಬಳಸುವ ಸೌಜನ್ಯಯುತ ಕನ್ನಡವನ್ನ ಬಿಟ್ಟುಕೊಟ್ಟು ಬೀದಿಯ ಜನರು ಆಡುವ ಭಾಷೆ ಆ ಕಾರ್ಯಕ್ರಮದಲ್ಲಿ ಬಳಕೆಯಾಗಿತ್ತು. ಅದರಿಂದಾಗಿ ಆ ಕಾರ್ಯಕ್ರಮವನ್ನು ಅಚ್ಚರಿ ಮತ್ತು ಬೆರಗುಗಳಿಂದ ಕನ್ನಡಿಗರು ನೋಡಿದರು. ಈ ಯಶಸ್ಸಿನ ಬೆನ್ನಲ್ಲೇ ಹಳೆಯ ಕ್ರೈಂಗಳನ್ನ ಮತ್ತೆ ನಾಟಕೀಕರಿಸಿ ಧಾರಾವಾಹಿಯಾಗಿ ತೋರಿಸುವ ಸಣ್ಣ ಪ್ರಯತ್ನಗಳು ಆದವು. ಈ ಕಾರ್ಯಕ್ರಮಗಳಲ್ಲಿ ಇದ್ದ ಸಿನಿಮೀಯ ಗುಣದಿಂದಾಗಿ ಇವು ಭಾರೀ ಜನಪ್ರಿಯತೆ ಪಡೆಯದಿದ್ದರೂ ರೇಟಿಂಗ್‌ನಲ್ಲಿ ಕಾಣಿಸಿಕೊಂಡವು. ಅವುಗಳ ಯಶಸ್ಸಿನ ಬೆನ್ನಲ್ಲೇ ಕನ್ನಡದ ಎರಡೂ ಖಾಸಗೀ ಛಾನೆಲ್ಲುಗಳು ಪೂರ್ಣಪ್ರಮಾಣದ ಕ್ರೈಂ ಆಧಾರಿತ ಸುದ್ದಿಚಿತ್ರಗಳನ್ನು ಅತೀ ರೋಚಕ ಹಿನ್ನೆಲೆ ಧ್ವನಿಯೊಡನೆ ತೋರಿಸಲಾರಂಭಿಸಿದವು. ಇಂತಹ ಕಾರ್ಯಕ್ರಮ ತಯಾರಿಸುತ್ತಿರುವವರು ಯಾವುದೇ ರೀತಿಯ ಸಮಜಾಯಿಷಿಗಳನ್ನು ನೀಡಿದರೂ ಇವು ಹುಟ್ಟಿದ್ದು ಮಾತ್ರ ಅದೇ ಖಾಸಗೀಕರಣ ತಂದಿಟ್ಟ ಸ್ಪರ್ಧಾತ್ಮಕ ಜಗತ್ತಿನಿಂದ. ಇದರಿಂದಾಗಿ ಸಾಮಾನ್ಯ ಜನರ ಮೇಲೆ ಆಗಿರುವ ಪರಿಣಾಮಗಳನ್ನು ಕುರಿತು ಪ್ರತ್ಯೇಕ ಚರ್ಚೆಯೇ ಆಗಬೇಕು. ಆದರೆ ಈ ಕಾರ್ಯಕ್ರಮಗಳು ತಮ್ಮ ಒಡಲಿನಲ್ಲಿ ಇರಿಸಿಕೊಂಡಿರುವ ಬೆಂಕಿಯಿಂದಾಗಿಯೇ ಒಂದು ನೋಡುಗ ವರ್ಗವನ್ನ ಸೃಷ್ಟಿಸಿಕೊಂಡಿದೆ. ಆ ನೋಡುಗ ವರ್ಗದ್ದು ಹತಾಶ ಮನಸ್ಥಿತಿ. ಅವರಲ್ಲಿ ಕೆಳಮಧ್ಯಮವರ್ಗದವರೇ ಹೆಚ್ಚು ಸಂಖ್ಯೆಯವರು. ಅವರಿಗೆ ತಮ್ಮ ದುಡಿಮೆಯಿಂದ ಒದಗಿ ಬರುತ್ತಿರುವ ಹಣ ಬದುಕಲು ಸಾಲದು ಎಂಬ ರೊಚ್ಚು ಒಂದೆಡೆಗಿದ್ದರೆ, ತಾನೂ ಹೇಗಾದರೂ ಹಣಗಳಿಸಬೇಕೆಂಬ ತುಡಿತ ಮತ್ತೊಂದೆಡೆ. ಅವರ ಇಚ್ಛೆಗೆ ನೀರೆರೆಯುವ ಗುಣ ಈ ಕ್ರೈಂ ಕಾರ್ಯಕ್ರಮಗಳಿಗಿದೆ. ಅವು ಆ ನೋಡುಗನಿಗೆ ಅಪರಾಧ ಜಗತ್ತನ್ನ ಪರಿಚಯಿಸುವುದಲ್ಲದೆ ಅಪರಾಧ ಹೇಗಾಗುತ್ತದೆ ಎಂಬ ಪರಿಚಯವನ್ನೂ ಮಾಡುತ್ತಿವೆ. ಇದರಿಂದಾಗಿ ಅದಾಗಲೇ ಹತಾಶನಾಗಿರುವ ನೋಡುಗ ತನ್ನ ಸಂಕಟ ಪರಿಹರಿಸಿಕೊಳ್ಳಲು ಈ ಕ್ರೈಂ ಧಾರಾವಾಹಿ ತಯಾರಕರನ್ನು ದೇವರು ಎಂಬಂತೆ ಪರಿಭಾವಿಸುತ್ತಾನೆ. ಜೊತೆಗೇ ತನ್ನೊಳಗೇ ತಾನು ಕೂಡ ಹಣ ಮಾಡಲು ಕಾನೂನಿನ ಕೈಗೆ ಸಿಗದಂತೆ ಯಾವ ರೀತಿಯ ಅಪರಾಧ ಮಾಡಲಿ ಎಂದು ಆಲೋಚಿಸತೊಡಗುತ್ತಾನೆ.  ಅಲ್ಲಿಗೆ ಪಾತಕಲೋಕಕ್ಕೆ ಖಾಸಗೀಕರಣದ ನೆರಳು ಇಳಿಯತೊಡಗುತ್ತದೆ.

ಉಪಸಂಹಾರ
ಒಟ್ಟಾರೆಯಾಗಿ, ಇಂದು ನಮ್ಮ ನಾಡಿನಲ್ಲಿರುವ ಸಮೂಹ ಮಾಧ್ಯಮಗಳು ತಮ್ಮ ಮಾಧ್ಯಮದ ರೂಪದಿಂದ ಉದ್ಯಮದ ರೂಪಕ್ಕೆ ತಿರುಗುತ್ತಾ, ತಮ್ಮ ಮೂಲಭೂತ ಸ್ವರೂಪವನ್ನೇ ಮರೆತಿವೆ ಎಂಬುದಂತೂ ಸತ್ಯ. ಅಲ್ಲಿ ಜನರನ್ನ ಸೆಳೆಯುವ ಗುಣವೊಂದೇ ಪ್ರಧಾನವಾಗಿ ಸೃಜನಾತ್ಮಕ ಚಟುವಟಿಕೆ ಎಂಬುದು ಅಲ್ಪಸಂಖ್ಯಾತರ ಜೊತೆಗೆ ಉಳಿದಿದೆ. ಈ ಅಲ್ಪಸಂಖ್ಯಾತರ ಕೂಗು ಲಾಭ ಗಳಿಸುವ ಓಟದಲ್ಲಿ ಇರುವವರಿಗೆ ಕಾಲು ಮುರಿಯುವವರೆಗೆ ಕೇಳಿಸುತ್ತದೆ ಎಂಬ ನೆಚ್ಚಿಕೆ ಇಲ್ಲ. ಹೀಗಾದಾಗ ಸಾಮಾಜಿಕ ಸ್ವಾಸ್ಥ್ಯ ಕುರಿತು ಚಿಂತಿಸುವವರಿಗೆ ಇರುವುದು ಒಂದೇ ಮಾರ್ಗ. ಅವರು ನೋಡುಗರಿಗೆ ಈ ಎಲ್ಲಾ ವಿವರಗಳನ್ನೂ ಮನೆಮನೆಗೆ ಹೋಗಿ ತಲುಪಿಸಬೇಕು. ನೋಡುಗನಿಗೆ `ಒಳ್ಳೆಯದು’ ಎಂದು ನಾವು ಗುರುತಿಸುತ್ತಿರುವ ಕೃತಿಗಳನ್ನು ತೋರಿಸುವ, ಆ ಮೂಲಕ ಮತ್ತೆ `ನಮ್ಮತನ’ ಎಂಬುದನ್ನ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು. ನಾವು ಈ ಕೆಲಸವನ್ನ ಆಂದೋಲನದ ರೀತಿಯಲ್ಲಿ ಆರಂಭಿಸದೆ ಹೋದರೆ ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಬರಗೂರು ಮುಂತಾದ ನಮ್ಮ ನಡುವಿನ ಗಂಭೀರ ದೃಶ್ಯ ಮಾಧ್ಯಮ ಸಾಧಕರ ಕೆಲಸಗಳು ಕೇವಲ ಕೆಲವೇ ಜನ ಬುದ್ಧಿಜೀವಿಗಳು ನೋಡುವ, ಚರ್ಚಿಸುವ, ದುಃಖಿಸುವ ಹಪಾಪಿ ಸ್ಥಿತಿಗೆ ಇಳಿಯುವ ಅಪಾಯವಿದೆ.

ಹೀಗೆನ್ನುವಾಗ ಮೇಲೆ ತಿಳಿಸಿದ ಕೆಲವರು ಮಾಡುತ್ತಿರುವ ಚಿತ್ರಗಳು, ಕಾರ್ಯಕ್ರಮಗಳೆಲ್ಲಾ ಶ್ರೇಷ್ಟ ಎಂದಲ್ಲ. ಅವುಗಳನ್ನು ಕುರಿತ ವಿಮರ್ಶೆಯೇ ಪ್ರತ್ಯೇಕವಾಗಿ ಆಗಬೇಕಿದೆ. ಆದರೆ ಅವು ಕನಿಷ್ಟ ರಿಮೇಕಲ್ಲ ಮತ್ತು ನಾವು ಗುರುತಿಸುತ್ತಿರುವ `ಒಳ್ಳೆಯದು’ ಮತ್ತು `ನಮ್ಮದು’ ಎಂಬ ಪರಿಧಿಯೊಳಗೆ ಬರುವಂತಹವು. ಆ ಕಾರಣಕ್ಕಾಗಿಯೇ ಅವು ಪ್ರಧಾನವಾಹಿನಿಯಿಂದ ಭಿನ್ನವಾಗಿ ಉಳಿದಿರುವುದು.
ಸ್ವಗತದ ಅಂತ್ಯದಲಿ ಇಷ್ಟೆಲ್ಲಾ ಹೇಳುತ್ತಿರುವ ನಾನೂ ಸಹ ಈ ಉದ್ಯಮದಲ್ಲಿ ಬದುಕುತ್ತಿದ್ದೇನೆ. ಮತ್ತು ಮೇಲೆ ನಾನು ಚರ್ಚಿಸಿದ ಎಲ್ಲಾ `ರೋಗ’ಗಳೂ ನನ್ನಲ್ಲೂ ಕಾಣಿಸಿಕೊಳ್ಳುವ, ಕಾಣಿಸಿಕೊಂಡಿರಬಹುದಾದ ಸಾಧ್ಯತೆಗಳಿದೆ. ಆದ್ದರಿಂದಲೇ ಈ ಆತ್ಮವಿಮರ್ಶೆಯ ಮೂಲಕ ನಾನು ನನ್ನನ್ನೇ ಭೂತಗನ್ನಡಿ ಹಿಡಿದು ನೋಡಿಕೊಳ್ಳಲು ಸಾಧ್ಯವಾಗುತ್ತದೆ, ಹಾಗೂ ಎಡವುಗಳ ಸಂಖ್ಯೆಯನ್ನ ಕಡಿತಗೊಳಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದೇನೆ. ಆ ಮೂಲಕ ನಾನು/ನಾವು ಬದುಕುತ್ತಿರುವ ಲೋಕದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾನು/ ನಾವೆಲ್ಲರೂ ನಿರಂತರ ಪಾಲ್ಗೊಳ್ಳಬೇಕಿದೆ.

Advertisements

1 Response to “ಜಾಗತೀಕರಣ ಮತ್ತು ಸಮಕಾಲೀನ ದೃಶ್ಯ ಮಾಧ್ಯಮಗಳು”


  1. 1 sharanu hullura November 30, 2008 at 7:25 am

    odhidhe! sakaththagidhe! e vishaya innu sikkapatte charache agbeku.
    Baredhu charche shuru madiddakke vandanegalu.
    Sharanu hullura adnura


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: