ಟಿ.ವಿ. ಎಂಬ ಆಧುನಿಕ ಪುರಾಣವು – ಬಡ ಮಧ್ಯಮವರ್ಗವು!

ದೃಶ್ಯ ೧
ಹಗಲು. ಕಛೇರಿಗೆ ಹೋಗಲೆಂದು ಬಸ್ಸು ಕಾಯುತ್ತಾ ನಿಂತಿರುವ ಹೆಂಗೆಳೆಯರು ಮಾತಾಡುತ್ತಿದ್ದಾರೆ.
ಹೆಂಗಸು ೧ : ರೀ, ನೆನ್ನೆ ಆ ಧಾರಾವಾಹಿ ನೋಡ್ದ್ರಾ?
ಹೆಂಗಸು ೨ : ಹ್ಞೂಂ ಕಣ್ರಿ!
ಹೆಂಗಸು ೧ : ಅವಳು ಹಾಕ್ಕೊಂಡಿದ್ದ ಸೀರೆ ಎಷ್ಟು ಚೆನ್ನಾಗಿತ್ತು ಅಲ್ವಾ?
ಹೆಂಗಸು ೨ : ಅವಳ ಬಿಂದಿ ಅಂತೂ ನನಗ್ ತುಂಬಾ ಇಷ್ಟ ಆಯ್ತು.
ಹೆಂಗಸು ೧ : ನಮ್ಮ ಏರಿಯಾದಲ್ಲಿರೋ ಬ್ಯಾಂಗಲ್ ಸ್ಟೋರ್ಸ್ನಲ್ಲಿ ವಿಚಾರ್ಸೋಣ. ಆ ಥರಾ ಬಿಂದಿ ಬಂದಿದ್ದರೆ ತಗೋಳೋಣ
ಎಂದೆನ್ನುತ್ತಾ ಅವರು ಬಸ್ಸನ್ನೇರುತ್ತಾರೆ. ಬಸ್ಸಿನಲ್ಲಿಯೂ ಪ್ರಾಯಶಃ ಇದೇ ಮಾತು ಮುಂದುವರೆಯುತ್ತದೆ.

ದೃಶ್ಯ ೨
ಮಧ್ಯಾನ್ಹ. ದೇವಸ್ಥಾನದಲ್ಲಿ ಸೇರಿರುವ ಹೆಂಗಸರು. (ಕೆಲವೊಮ್ಮೆ ಗಂಡಸರು ಸಹ ಇರಬಹುದು). ಅಲ್ಲಿ ಆರಾಧನೆ ನಡೆಯುತ್ತಿದೆ. ಹೆಂಗಸರು ತಮ್ಮದೇ ಮಾತಿನಲ್ಲಿ ತೊಡಗಿದ್ದಾರೆ.
ಹೆಂಗಸು ೧ : ರೀ, ಬೇಗ ಪೂಜೆ ಮುಗ್ಸ್ಕೊಂಡ್ ಹೋಗ್ಬೇಕು ಕಣ್ರೀ!
ಹೆಂಗಸು ೨ : ಏನ್ರೀ ಅರ್ಜೆಂಟು?
ಹೆಂಗಸು ೧ : ಆ ಸೀರಿಯಲ್ ಶುರು ಆಗೋಷ್ಟರಲ್ಲಿ ಮನೇಲ್ಲಿರ್ಬೇಕು ಕಣ್ರೀ!
ಹೆಂಗಸು ೨ : ಹೌದು ಕಣ್ರೀ, ನೆನ್ನೆ ಅವಳ ಗಂಡಾನೇ ಇನ್ನೊಬ್ಬ ಹುಡುಗೀನ ಕರ್ಕೊಂಡ್ ಬಂದಿದಾನಲ್ರೀ. ಈಗವಳು ಏನ್ ಮಾಡ್ತಾಳೋ ನೋಡಬೇಕು.


ಹೆಂಗಸು ೧ : ಹ್ಞೂಂ. ಇದೊಂದು ಆರತಿ ಮುಗಿದ ತಕ್ಷಣ ಹೊರಟ್ ಬಿಡೋಣ.
ಹೆಂಗಸು ೨ : ಲೇಟಾದ್ರೆ ಆಟೋ ಮಾಡೋಣ ಕಣ್ರೀ. ಇಬ್ಬರೂ ಷೇರ್ ಮಾಡ್ಕೊಂಡ್ರಾಯ್ತು.
ಹೀಗೇ ಆ ಹೆಂಗಸರು ತಮ್ಮ ಮೆಚ್ಚಿನ ಧಾರಾವಾಹಿಯನ್ನು ನೋಡಲು ಧಾವಿಸುತ್ತಾರೆ. ಮಾರನೆಯ ದಿನವೂ ದೇವಸ್ಥಾನದಲ್ಲಿ ಇದೇ ಪುನಾರವರ್ತನೆಯಾಗುತ್ತದೆ. ಯಾಕೆಂದರೆ ಅವರ `ಆ’ ಧಾರವಾಹಿ ಅಂದು ಮತ್ತೊಂದು ತಿರುವು ತೆಗೆದುಕೊಂಡಿರುತ್ತದೆ.

ದೃಶ್ಯ ೩
ರಾತ್ರಿ. ಲಾಯರರ ಮನೆಯಲ್ಲಿ ಗೆಳೆಯರು ಕೂತು ಲೋಕಾಭಿರಾಮ ಮಾತಿನಲ್ಲಿ ತೊಡಗಿದ್ದಾರೆ. ಅದು ದೇಶದ ರಾಜಕೀಯದ ಚರ್ಚೆ. ಅವರೆದುರಿಗೆ ೨೪/೭ ಎಂಬ ಛಾನೆಲ್ಲಿನ ನ್ಯೂಸ್ ಓಡುತ್ತಿದೆ. ಅವರು ನ್ಯೂಸ್ ಓದುವವನ/ಳ ಡ್ರೆಸ್ ಸೆನ್ಸ್ ಬಗ್ಗೆ ಮಾತಾಡುತ್ತಿದ್ದಾರೆ. ದಿಢೀರನೆ ಅವರಲ್ಲೊಬ್ಬ ಎದ್ದು ಒಳಗೆ ಸಾಗುತ್ತಾನೆ. ಆತನೇ ಆ ಎಲ್ಲರನ್ನೂ ಕರೆದಿರುವ ಲಾಯರ್ ಮಹಾಶಯ. ಉಳಿದವರು ಕೆಲನಿಮಿಷ ನೋಡಿ ನಂತರ ಹಾಗೇ ಹೋದವನ ಕುರಿತು ಮಾತಾಡುತ್ತಾರೆ. ಎಲ್ಲಿಗೆ ಹೋದ ಇವನು ಎಂದು ಚಿಂತಿಸುತ್ತಾರೆ. ಆತನ ಮೊಬೈಲ್ಫೋನ್ ಸಂಪರ್ಕಿಸುತ್ತಾರೆ. ಆತ ಉತ್ತರಿಸುವುದಿಲ್ಲ. ಮನೆಯೊಳಗೆ ಇರಬಹುದೇ ಎಂದು ನೋಡುತ್ತಾರೆ.
ಆತ ಮನೆಯೊಳಗೆ ಇರುವ ಮತ್ತೊಂದು ಟಿವಿಯಲ್ಲಿ ಒಬ್ಬ ಪ್ರಖ್ಯಾತ ನಿರ್ದೇಶಕನ ಧಾರಾವಾಹಿಯನ್ನ ನೋಡುತ್ತಾ ಕುಳಿತಿದ್ದಾನೆ. ಅವನೊಂದಿಗೆ ಅವನ ಮನೆಯವರು ಸಹ. (ಮಕ್ಕಳು ಅಲ್ಲಿ ಇಲ್ಲ ಎಂಬುದನ್ನ ಗಮನಿಸಬೇಕು). ಗೆಳೆಯರು ಕರೆಯುತ್ತಾರೆ. `ಷ್!’ ಎನ್ನುವ ಆತನ ದನಿಯಲ್ಲಿ `ಢೋಂಟ್ ಡಿಸ್ಟರ್ಬ್’ ಎಂಬ ಗುಣವಿದೆ. ಕೊನೆಗೊಮ್ಮೆ ಆ ಧಾರಾವಾಹಿ ಮುಗಿಯುತ್ತದೆ. ಆಗ ಆತ ಗೆಳೆಯರನ್ನು ಸೇರುತ್ತಾನೆ. ಗೆಳೆಯರು `ಏನಯ್ಯಾ?’ ಎನ್ನುತ್ತಾರೆ.
ಆತ : ಇವತ್ತು ಮಹಾ ಬೋರಾಯ್ತು ಕಣಯ್ಯ.
ಗೆಳೆಯ ೧ : ಮತ್ತೆ, ನಮ್ಮ ಜೊತೆ ಮಾತಾಡೋದನ್ನೂ ಬಿಟ್ಟು ಅದನ್ನ್ ಯಾಕ್ ನೋಡ್ತಿದ್ದೆ?
ಆತ : ಅವನು (ಆ ನಿರ್ದೇಶಕ) ಭಾಳ ಬ್ರಿಲಿಯಂಟು! ಇವತ್ತಲ್ಲ ನಾಳೆ ಏನಾದರೂ ಒಂದು ಮ್ಯಾಜಿಕ್ ಮಾಡ್ತಾನೆ. ಅದಕ್ಕೆ ಕಾಯ್ತಾ ಇದೀನಿ.
ಗೆಳೆಯ ೨ : ಅಲ್ಲಯ್ಯ, ಈ ಮಾತನ್ನ ಒಂದು ತಿಂಗಳಿಂದ ಹೇಳ್ತಾನೆ ಇದ್ಯಾ, ಆದ್ರೂ ನಿನಗ್ ಬೇಕಾದ ಮ್ಯಾಜಿಕ್ ಆಗೇ ಇಲ್ವಾ?
ಆತ : ಆಗತ್ತೆ. ಯಾಕೇಂದ್ರೆ ಅವನು ( ಆ ನಿರ್ದೇಶಕ) ಮಹಾ ಬುದ್ಧಿವಂತ. ಹೋದ್ಸಲ ಕೂಡ ಐದುನೂರ್ನೇ ಎಪಿಸೋಡ್ನಲ್ಲಿ ಟರ್ನ್ ಕೊಟ್ಟ. ಎಂಥಾ ಟರ್ನ್ ಗೊತ್ತಾ?
ಗೆಳೆಯ ೩ ; ಲೋ! ಒಂದು ಟರ್ನ್ಗೊಸ್ಕರ ಐದುನೂರು ಎಪಿಸೋಡ್ವರ್ಗೂ ಕಾಯ್ತಿಯಲ್ಲಾ, ನೀನೇ ಕಣೋ ಆಧುನಿಕ ತಪಸ್ವಿ!
ಉಳಿದವರು ನಗುತ್ತಾರೆ. ಲಾಯರ್ ಮಹಾಶಯನ ಕಾಯುವಿಕೆ ಮಾತ್ರ ಸಾಗುತ್ತಲೇ ಇರುತ್ತದೆ. ಇತ್ತಲಿನವರ ನ್ಯೂಸ್ ವರದಿಗಾರ್ತಿಯ ಮೇಕಪ್ ಮತ್ತು ಡ್ರಸ್ಸಿನ ಬಗೆಗಿನ ಮಾತು ಮುಂದುವರೆಯುತ್ತದೆ.

ದೃಶ್ಯ ೪
ಅದೇ ಲಾಯರ್ ಮನೆಯಿರಬಹುದು. ಅಥವಾ ಮೇಲ್ಮಧ್ಯಮವರ್ಗದ ಯಾವುದೇ ಮನೆಯಿರಬಹುದು. ಶಾಲೆಯ ಮಕ್ಕಳು ಕೋಣೆಯಲ್ಲಿರುವ ಪ್ರತ್ಯೇಕ ಟಿವಿ ಎದುರು ಕೂತಿದ್ದಾರೆ. ಅವರು ಪ್ರಖ್ಯಾತ (ಮಕ್ಕಳ ವಲಯದಲ್ಲಿ) ಕಾರ್ಟೂನ್ ಛಾನೆಲ್ ನೋಡುತ್ತಿದ್ದಾರೆ. ಅವರಿಗೆ ಮನೆಗೆ ಬಂದಿರುವ ಅತಿಥಿಗಳು, ಆ ಮಾತು ಯಾವುದೂ ಬೇಕಿಲ್ಲ. ಹೋಮ್ವರ್ಕಿನ ರಾಶಿಯನ್ನು ಎದುರಿಗೆ ಇರಿಸಿಕೊಂಡು ಅವರ ಟಿವಿ ನೋಡುವ ಅಭ್ಯಾಸ ಮುಂದುವರೆದಿದೆ.

ದೃಶ್ಯ ೫
ಕಾಲೇಜು. ಯುವಕ ಯುವತಿಯರು ಕಾಫಿ ಷಾಪಿನ ಎದುರಿಗೆ ನಿಂತಿದ್ದಾರೆ. ಕೆಲವರ ಕೈಯಲ್ಲಿ ಹುಡುಗ, ಹುಡುಗಿ ಎಂಬ ವ್ಯತ್ಯಾಸವಿಲ್ಲದೆ ಸಿಗರೇಟಿದೆ. ಅವರ ಡ್ರೆಸ್ ಕೋಡ್ ಸಂಪೂರ್ಣ ಅಭಾರತೀಯ. ಅವರ ಮಾತು ಕೂಡ ಸಂಪೂರ್ಣ ಆಂಗ್ಲ. ಅವರು ಯಾವುದೋ ಫಾರಿನ್ ಛಾನೆಲ್ಲಿನಲ್ಲಿ ಬರುವ `ಫ್ರೆಂಡ್ಸ್’ ಎಂಬ ಧಾರಾವಾಹಿಯನ್ನು ಕುರಿತು ಮಾತಾಡುತ್ತಿದ್ದಾರೆ. (ಅಥವಾ `ಆಲಿ ಮ್ಯಾಕ್ಬಿಲ್’) ಅವರೆಲ್ಲರ ಮಾತಲ್ಲಿ ಆ ಧಾರಾವಾಹಿಯ ಹೂರಣಕ್ಕಿಂತ ಅಲ್ಲಿನ ಜೀವನ ರೀತಿಯ ಕುರಿತ ಮಾತಿದೆ. ಅವರ ಅಮೇರಿಕನೈಸೇಷನ್ ಆಗುತ್ತಿದೆ.

ದೃಶ್ಯ ೬
ನವಯುವಕರ ಗುಂಪು ತಮ್ಮ ಬೈಕುಗಳ ಮೇಲೆ ಕೂತಿದೆ. ಯಾರೂ ಮಾತಾಡುತ್ತಿಲ್ಲ. ಎಲ್ಲರ ಕೈಯಲ್ಲೂ ಮೋಬೈಲ್ ಎಂಬ ಉಪಕರಣವಿದೆ. ಅವರು ಎಸ್.ಎಂ.ಎಸ್. ಮಾಡುತ್ತಿದ್ದಾರೆ. ಅದು ತುಂಡು ಇಂಗ್ಲೀಷಿನ ಜಗತ್ತು. ಅವರ ಕೈ ಬೆರಳುಗಳು ಅದೆಷ್ಟು ವೇಗವಾಗಿ ಓಡುತ್ತಿದೆ ಎಂದರೆ, ಪ್ರಾಯಃ ಯಾವುದೇ ಟೈಪಿಸ್ಟನೂ (ಬೆರಳಚ್ಚಿನವನೂ) ಆ ವೇಗದಲ್ಲಿ ಟೈಪ್ ಮಾಡಲಾರ. ಅಲ್ಲಿ ಮಾತು ಎಂಬುದು ಇಲ್ಲ. ಎಲ್ಲವೂ ಸಂದೇಶಗಳು.

ದೃಶ್ಯ ೧೦
ಅದು ವಿಡಿಯೋ ಗೇಮ್ ಪಾರ್ಲರ್. ಅಲ್ಲಿರುವವರೆಲ್ಲರ ಮುಖದಲ್ಲೂ ಕಾತರವಿದೆ. ಏನೋ ದೊಡ್ಡದನ್ನ ಸಾಧಿಸುವ ಅವಸರವಿದೆ. ಅವರು ಯಾವುದೋ ಗೇಮಿನ ಏಳನೆಯ ಲೆವಲ್ಲಿನಲ್ಲಿ ಯಾವುದೋ `ಡೆಮನ್’ ಜೊತೆಗೆ ಹೋರಾಡುತ್ತಿದ್ದಾರೆ. ಸುತ್ತಲ ಲೋಕದ ವ್ಯಾಪಾರ ಅವರಿಗೆ ಬೇಕಿಲ್ಲ. ಅವರು ಹತ್ತನೆಯ ಲೆವಲ್ ಮುಟ್ಟಬೇಕು. ಅಲ್ಲಿ ಯಾವುದೋ ರಾಜಕುಮಾರಿಯನ್ನ ಸೆರೆಯಿಂದ ಬಿಡಿಸಬೇಕು. ಅದಾಗುವವರೆಗೆ ಅವರಿಗೆ ಸಮಯದ ಕಾಳಜಿ ಇಲ್ಲ. ಯಾವುದೋ ಹೊತ್ತಿನಲ್ಲಿ ಸೈಬರ್ ಗೇಮ್ ಅಂಗಡಿಯ ಮಾಲೀಕ ಬಾಗಿಲು ಮುಚ್ಚುವಾಗ ಹೊರಗೆ ಬರುವ ಅವರ ಕಣ್ಣುಗಳಲ್ಲಿ ರಕ್ತವಿದೆ. ವಾಸ್ತವ ಲೋಕದ ಯಾವ ಎಚ್ಚರಗಳೂ ಅವರಿಗೆ ಇಲ್ಲ. ಕೈ ಬೆರಳುಗಳು ಮಾತ್ರ ಇನ್ನೂ ಗೇಮ್ ಆಡುತ್ತಲೇ ಇವೆ. ಎದುರಿಗೆ ಸಿಕ್ಕವರಿಗೆ ಅವರು ಹೇಳುವುದಿಷ್ಟೆ. `ಟುಮಾರೋ. ಐ ವಿಲ್ ಕ್ರಾಸ್ ಏಯ್ಟ್ತ ಲೆವೆಲ್!’     

ದೃಶ್ಯ ೧೧
ಪಾರ್ಕಿನಲ್ಲಿ ಕುಳಿತಿರುವ  ಹಿರಿಯರ ಮಾತು
`ಆಗ, ಅಂದರೆ ಸುಮಾರು ೧೯೮೨ರ ಆಸುಪಾಸಿನಲ್ಲಿ ಸಂಜೆಯಾಗುತ್ತಿದ್ದಂತೆ ನಮ್ಮ ಬೀದಿಯಲ್ಲಿದ್ದ ಒಂದು ಮನೆಗೆ ಅನೇಕರು ಹೋಗುತ್ತಿದ್ದರು. ಆ ಮನೆಯಲ್ಲಿ ಮಾತ್ರ ಒಂದು ಕಪ್ಪು ಬಿಳುಪು ಟೆಲಿವಿಷನ್ ಇತ್ತು. ಯಾವುದೋ ತಮಿಳು ಕಾರ್ಯಕ್ರಮಗಳ ನಡುವೆ ಬರುತ್ತಿದ್ದ ಎರಡು ಗಂಟೆಯ ಕನ್ನಡ ಕಾರ್ಯಕ್ರಮವನ್ನ ನೋಡಲು ಬೀದಿಯವರೆಲ್ಲಾ ಸೇರುತ್ತಿದ್ದರು. ಆನಂತರ ಬೆಂಗಳೂರಿನಲ್ಲಿಯೇ ಒಂದು ದೂರದರ್ಶನ ಕೇಂದ್ರವೂ ಆಯಿತು. ದಿನಕ್ಕೆ ನಾಲ್ಕು-ಐದು ಗಂಟೆಗಳ ಕಾಲ ಕನ್ನಡ ಕಾರ್ಯಕ್ರಮಗಳ ಪ್ರಸಾರ ಆರಂಭವಾಯಿತು. ಕ್ರಿಕೆಟ್ ನೇರ ಪ್ರಸಾರ ಆರಂಭವಾಯಿತು. ಟಿ.ವಿ. ರಾಮಾಯಣ ಶುರುವಾಯಿತು. ಅಲ್ಲಿಯವರೆಗೆ ಎಲ್ಲಾ ಚೆನ್ನಾಗಿಯೇ ಇತ್ತು. ಆಮೇಲೆ ಈ ಕೇಬಲ್ ಬಂತು. ಆಗ ಶುರುವಾಯಿತು ನೋಡಿ ನಮ್ಮ ಮನೆಯಲ್ಲೂ ಟಿ.ವಿ. ಕೊಳ್ಳುವ ಗಲಾಟೆ.  ಹೇಗೋ ಹೊಂದಿಸಿ, ಕಂತು ಕಟ್ಟಿ ಒಂದು ಟಿ.ವಿ. ಬಂತು. ಹಾಗೇ ನಮ್ಮ ಬೀದಿಯ ಎಲ್ಲಾ ಮನೆಯಲ್ಲೂ ಒಂದು ಟಿ.ವಿ. ಬಂತು! ಈಗ ಎಲ್ಲಾ ಬದಲಾಗಿದೆ. ಮಧ್ಯಾನ್ಹ ಆರಂಭವಾದರೆ ರಾತ್ರಿಯ ಹತ್ತರವರೆಗೂ ತರಹೇವಾರಿ ಕಥೆಗಳು, ತರಹೇವಾರಿ ಬಣ್ಣಗಳು. ಎಲ್ಲರಿಗೂ ದೈನಿಕ ಪುರಾಣವನ್ನ ಪ್ರತಿದಿನ ನೋಡುವ ತಲುಬು ಹತ್ತಿಕೊಂಡಿದೆ. ಇನ್ನು ಸಂಸಾರ ಮಾಡುವುದಕ್ಕೆ, ಮಕ್ಕಳೊಡನೆ ಹರಟುವುದಕ್ಕೆ ಸಮಯವೆಲ್ಲಿಯದು?’ 
ಈ ಕೆಲವು ದೃಶ್ಯಗಳು ಟಿವಿ ಎಂಬ ಮಾಯಕ ನಮ್ಮೆದುರಿಗೆ ತಂದಿಡುತ್ತಿರುವ ಆಧುನಿಕ ಪುರಾಣದ ಹಲವು ಮಗ್ಗುಲುಗಳನ್ನ ಹೇಳುತ್ತದೆ. ಈ ಕುರಿತು ಕಾಫ್ಮನ್ ಎಂಬ ಅಮೇರಿಕನ್ ಸಾಹಿತಿ ಬರೆದಿರುವ ಪದ್ಯವೊಂದಿದೆ.
I can’t get away
I flip through the channels
every night and day
overdose of movies
sit-com’s and soaps
I feel my life is tied up in ropes.
The T.V. is a nemesis
I believe it so.
I can’t think for myself
have no get up and go.
I’m wasted on commercials
and ads
conned by the the latest fads
buy this buy that
and all that crap.
I’m caged….
…. I’m locked in
the life sucking T.V.
(from the web site : www.turnoffyourtv.com)

ಈ ಪದ್ಯದ ವಿವರಗಳಲ್ಲಿ ಸತ್ಯವಿದೆ.
ಅಮೇರಿಕಾ ಅಥವಾ ಇನ್ನಿತರ ದೇಶ-ಭಾಷೆಗಳ ವಿವರ ಒತ್ತಟ್ಟಿಗಿರಿಸಿ ಕೇವಲ ನಮ್ಮ ಸ್ಥಳೀಯ ವಿವರ ಗಮನಿಸಿ. ಕಳೆದ ಸರಿಸುಮಾರು ಹದಿನೈದು ವರ್ಷಗಳಿಂದ ಟೆಲಿವಿಷನ್ ಎಂಬುದು ನಮ್ಮ ಮಧ್ಯಮವರ್ಗದ ಮನೆಗಳಲ್ಲಿ ಕೇಂದ್ರ ಸ್ಥಾನ ಪಡೆದುಕೊಂಡಿದೆ. ಮಲಗಲು ನೆಟ್ಟಗೆ ಒಂದು ಹಾಸಿಗೆ ಇಲ್ಲದವರ ಮನೆಯಲ್ಲೂ ಒಂದು ಟಿ.ವಿ. ಹಗಲಿರುಳೂ ತನ್ನ ಇರವನ್ನ ಸ್ಪಷ್ಟಪಡಿಸುತ್ತಾ ಕೂತಿರುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಕೇರ್ ಮಾಡದೆ, ಮನೆ-ಮಂದಿಯೆಲ್ಲಾ ಟಿ.ವಿ. ಎಂಬ ಮಾಯಕದ ಎದುರಿಗೆ ಎಲ್ಲಾ ಇಂದ್ರಿಯಗಳನ್ನೂ ಬಂದ್ ಮಾಡಿಕೊಂಡು ಕೂತಿರುವುದನ್ನ ನಾವು ಕಾಣುತ್ತೇವೆ. ಇದನ್ನೇ ರಾನ್ ಕಾಫ್ಮನ್ `ಬ್ಯೂಟಿಫುಲ್ ಪೀಪಲ್ ಸಿಂಡ್ರೋಮ್’ ಎಂದು ಗುರುತಿಸುತ್ತಾನೆ. ಇದು ನಿರಂತರವಾಗಿ ಟಿ.ವಿ. ನೋಡುತ್ತಾ ಇರುವವರಿಗೆ ಆಗುವ ಸಮಸ್ಯೆ. ಹಾಗೇ ದಿನವೊಂದಕ್ಕೆ ಟಿ.ವಿ. ನೋಡುವವರನ್ನು ಕುರಿತ ಅಂಕಿ-ಅಂಶವೊಂದರಲ್ಲಿ, ಕೇವಲ ಅಮೇರಿಕಾ ಸಂಯುಕ್ತ ಸಂಸ್ಥಾನವೊಂದರಲ್ಲೇ ಸರಾಸರಿ ದಿನಕ್ಕೆ ೭.೩೦ಘಂಟೆಗಳ ಅವಧಿಯಷ್ಟು ಟಿ.ವಿ.ಯನ್ನು ನೋಡುತ್ತಾರೆ. ಭಾರತದಲ್ಲಿ ದಿನವೊಂದಕ್ಕೆ ಸರಿಸುಮಾರು ಹತ್ತುಗಂಟೆಗಳ ಕಾಲ ಟಿ,ವಿ. ವೀಕ್ಷಣೆ ಹೆಂಗಸರದ್ದು, ಸರಿಸುಮಾರು ಎಂಟುಗಂಟೆಗಳ ಟಿ.ವಿ. ವೀಕ್ಷಣೆ ಗಂಡಸರದ್ದು. ಅಂದರೆ ವಾರವೊಂದರಲ್ಲಿ ನಮ್ಮ ಹೆಂಗೆಳೆಯರು ಎಪ್ಪತ್ತುಗಂಟೆಗಳ ಕಾಲ ಟಿ.ವಿ ಎದುರು ಇರುತ್ತಾರೆ. ವರ್ಷದಲ್ಲಿ ೩೬೪೦ ಘಂಟೆಗಳ ಟಿ.ವಿ.ವೀಕ್ಷಣೆ. ಹೀಗಾದಾಗ ತೆರೆಯ ಮೇಲೆ ಬರುತ್ತಾ ಇರುವುದೆಲ್ಲಾ ಸತ್ಯ ಎಂಬ ಭ್ರಮೆ ಉಂಟಾಗುತ್ತದೆ ಅಥವಾ ಟಿ.ವಿ.ಯಲ್ಲಿ ಬರುವ ಎಲ್ಲವನ್ನು ಮುಂದೆ ಹೀಗಾಗಬಹುದು ಎಂದು ಊಹಿಸುವ ಅಥವಾ ಅಲ್ಲಿನಂತೆಯೇ ಬದುಕುವ ಪ್ರಯತ್ನಗಳು ಆಗತೊಡಗುತ್ತದೆ. ಅಂದರೆ ಟಿ.ವಿ.ಯೂ ಬದುಕಿಗೆ ಕನ್ನಡಿಯೋ ಅಥವಾ ನೋಡುಗರೇ ಆ ಟಿ.ವಿ.ಯ ಬದುಕಿನ ಪ್ರತಿರೂಪಗಳೋ ಎಂಬಂತಹ ಸ್ಥಿತಿ ಬರುತ್ತದೆ. (ಮುಂಚೆ ನಾನು ತಿಳಿಸಿದ ಉದಾಹರಣೆಗಳಲ್ಲಿ ಇರುವ ಮಾತುಗಳನ್ನ ಗಮನಿಸಿ. ಅದು ಯಾವುದೇ ಒಂದು ಭಾಷೆ ಅಥವಾ ನುಡಿಗಟ್ಟಲ್ಲ. ಅದು ಸಂಪೂರ್ಣ ಟಿ.ವಿ. ಧಾರಾವಾಹಿಗಳು ಕಲಿಸಿರುವ ಭಾಷೆ.) ಇದಲ್ಲದೆ, ಟಿ.ವಿ.ಯಲ್ಲಿ ಬಿಂಬಿತವಾಗುವ ರೂಪಗಳು (ಇಮೇಜಸ್ ಎಂಬರ್ಥದಲ್ಲಿ) ಸದಾ ಸುಂದರವಾದುದನ್ನೇ ತೋರಿಸುತ್ತವೆ. ಅಲ್ಲಿ ಬರುವವರು ಸೌಂದರ್ಯೋದ್ಯಮೆ ಪ್ರಣೀತ ಆಕಾರದವರಾಗಿರುತ್ತಾರೆ. (ಇದನ್ನ ಹೆಚ್ಚಾಗಿ ಹಿಂದಿ ಭಾಷಿಕ ಛಾನೆಲ್ಲುಗಳಲ್ಲಿ ಕಾಣಬಹುದು.) ಅವರೆಲ್ಲರೂ ಬುದ್ಧಿವಂತರಂತೆ, ಭಾರೀ ಸೃಜನಶೀಲರಂತೆ, ನೋಡುಗರನ್ನ ಆಕರ್ಷಿಸುವಂತೆ ಕಾಣುತ್ತಾರೆ ಅಥವಾ ಹಾಗೇ ವರ್ತಿಸುತ್ತಾರೆ. ಕಡುಬಡತನವನ್ನು ಕುರಿತ ಕಥೆಯಲ್ಲೂ ಪ್ರಮುಖ ನಟಿಯ ಮುಖದ ತುಂಬಾ ಲಿಪ್ಸ್ಟಿಕ್ ಇರುತ್ತದೆ. (ನೋಡಿ: `ಮಾಂಗಲ್ಯ’ ಅಥವಾ `ರಂಗೋಲಿ’) ಇನ್ನು ಅವರ ಮಾತುಗಳಲ್ಲಿ ಇರುವ ಬುದ್ಧಿವಂತಿಕೆಯನ್ನ ಗಮನಿಸಿ. ಅಲ್ಲಿರುವವರೆಲ್ಲರೂ ಇಡೀ ಜಗತ್ತನ್ನು ಬಲ್ಲವರು. ಆದರೆ ನೋಡುಗನಿಗೆ ತಲ್ಲಣ ಉಂಟುಮಾಡುವ ತಪ್ಪುಗಳನ್ನ ಮಾಡುತ್ತಿರುತ್ತಾರೆ. (ಈ ತಪ್ಪುಗಳನ್ನ ಗುರುತಿಸಿ ಬರೆಯುವ ಪ್ರೇಕ್ಷಕರು ಕೆಲವರಾದರೂ ಇದ್ದಾರೆ. ಅದಕ್ಕಾಗಿ ವಾರಪತ್ರಿಕೆಯೊಂದು ವೇದಿಕೆಯನ್ನೂ ಮಾಡಿಕೊಟ್ಟಿದೆ. ಅದು ಕನ್ನಡದಲ್ಲಿ ಮಾತ್ರ ದೊರೆಯುವಂತಹ ಸಲ್ಲಕ್ಷಣ. ಇನ್ನುಳಿದ ಕಡೆಗಳಲ್ಲಿ ಅದೂ ಇಲ್ಲ. ಜೊತೆಗೆ ಹೀಗೆ ಗುಣಗ್ರಾಹಿಗಳಾದ ಪ್ರೇಕ್ಷಕರು ಬಹುಸಂಖ್ಯಾತರ ಯಾದಿಯಲ್ಲಿ ಬರುವವರಲ್ಲ. ಮತ್ತು ಆ ಬಹುಸಂಖ್ಯಾತರು ನೋಡುವ ಕಾರ್ಯಕ್ರಮ ಕುರಿತ ತಪ್ಪು-ಒಪ್ಪುಗಳ ವಿಮರ್ಶೆ ಆಗುವುದೇ ಇಲ್ಲ.) ‘ಂmusiಟಿg ouಡಿseಟves ಣo ಜeಚಿಣh’ ಎಂಬ ಪುಸ್ತಕದಲ್ಲಿ ನ್ಯೂಯಾರ್ಕ್ ಯೂನಿವರ್ಸಿಟಿಯ ಮಾಧ್ಯಮ ವಿಭಾಗದವರಾದ ಪ್ರೊ. ನೀಲ್ ಆರ್ಮ್ಸ್ಟ್ರಾಂಗ್ ಹೀಗೆನ್ನುತ್ತಾರೆ, ಟಿ.ವಿ.ಕುರಿತು :
“It is impossible to imagine that anyone like our 27th president, the multi chinned, three hundred pound William Howard Taft, could be put forward as a presidential candidate in today’s world. The shape of a man’s body is largely irrelevent to the shape of his ideas ahen he is addressing a public in writing or in radio… but it is quite relevent in television. The grossness of a threehundred pound image, even a talking one, would easily overwhelm any logical or spiritual subtleties conveyed by the speech.” (as quoted in www.turnoffyourtv.com)
ಈ ಸತ್ಯವನ್ನ ನೀವು ಪ್ರತಿದಿನ ಟಿ.ವಿ.ಯಲ್ಲಿ ನೋಡಬಹುದು. ಒಂದು ಕಾರ್ಯಕ್ರಮದ ನಿರೂಪಕಿಗೆ ಭಾಷೆ ಬಾರದಿರಬಹುದು. ಆದರೆ ಅವಳು ನೋಡಲು `ಸುಂದರ’ವಾಗಿದ್ದರೆ ಸಾಕು. (ಉದಾಹರಣೆಗೆ ಕ್ರಿಕೆಟ್ಟನ್ನು ಕುರಿತ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾರಂಭಿಸಿದ ಹೆಂಗೆಳೆಯರನ್ನು ನೆನಪಿಸಿಕೊಳ್ಳಬಹುದು. ಇದೇ ರೀತಿಯ ಒಂದು ಜಾಹೀರಾತನ್ನ ನೀವು ನೋಡಬಹುದು. ಆ ಜಾಹೀರಾತಿನಲ್ಲಿರುವ ಒಬ್ಬ ಕೃಷ್ಣಸುಂದರಿಗೆ ಮಾತು ಬರುತ್ತದೆ.ಅದಕ್ಕಾಗಿ ಅವಳು ತಾಲೀಮು ಕೂಡ ನಡೆಸುತ್ತಾಳೆ. ಆದರೆ ಅವಳಿಗೆ `ಸೌಂದರ್ಯ’ದ್ದೇ ಚಿಂತೆ ಅದಕ್ಕಾಗಿ ಅವಳಿಗೆ ಯಾವುದೋ ವಿದೇಶಿ ಕಂಪೆನಿಯ ವಿಶೇಷ ಕ್ರೀಮ್ ಕೊಡಲಾಗುತ್ತದೆ. ಅವಳನ್ನು ಟಿ.ವಿ. ಸೌಂದರ್ಯದ ಮಾನದಂಡಕ್ಕಾಗಿ ರೂಪಿಸಲಾಗುತ್ತದೆ. ಇಂತಹದೇ ವಿವರಗಳಿರುವ ಇನ್ನೂ ಅನೇಕ ಜಾಹೀರಾತುಗಳನ್ನ ಗಮನಿಸಬಹುದು.) ಇದರಿಂದಾಗಿ ನಮ್ಮ ಟಿ.ವಿ. ವೀಕ್ಷಕರ ಭಾಷಾಪ್ರಜ್ಞೆಯೂ ನಾಶವಾಗುತ್ತಿದೆ. (ಈಚೆಗೆ ಇದೇ ಭಾಷೆಯ ಝಲಕ್ಕುಗಳು ಎಫ್.ಎಂ.ರೇಡಿಯೋದಲ್ಲಿಯೂ ಬರುತ್ತಿದೆ. ಅಲ್ಲಿ ಕನ್ನಡ ಬರುವವರೂ ಸಹ `ಕಾನ್ವೆಂಟ್’ ಕನ್ನಡಿಗರಂತೆ ಮಾತಾಡುವುದನ್ನು ಕೇಳಬಹುದು.)

ಒಟ್ಟಾರೆಯಾಗಿ ಗಂಟಾನುಗಟ್ಟಲೆ, ಪುಂಖಾನುಪುಂಕವಾಗಿ ಟಿ.ವಿ. ವೀಕ್ಷಿಸಿದ ನಂತರ ಅದೇ `ಸೌಂದರ್ಯ’ ಪ್ರಜ್ಞೆ ವೀಕ್ಷಕರ ಮನದಾಳಕ್ಕೆ ಇಳಿಯುತ್ತದೆ. ಹೀಗಾಗಿಯೇ ಯಾವುದೋ ಧಾರಾವಾಹಿಯಲ್ಲಿ ಮಾಡುವ ನಟ,ನಟಿಯರು ನಾಡಿನ ನಿಜವಾದ ಶ್ರೇಷ್ಟರಿಗಿಂತ ಹೆಚ್ಚು ಜನಕ್ಕೆ ಪರಿಚಿತರಾಗಿರುತ್ತಾರೆ ಮತ್ತು ಜನಪ್ರಿಯರಾಗಿರುತ್ತಾರೆ. ಇದು ನಿಧಾನವಾಗಿ ನಮ್ಮ ವೀಕ್ಷಕರ ಮನಸ್ಸಿನಲ್ಲಿ `ಹೊಸ ಪುರಾಣ’ವನ್ನು ಸೃಷ್ಟಿಸತೊಡಗುತ್ತದೆ. ಅದನ್ನ `ಆಧುನಿಕ ಸೌಂದರ್ಯ ಪುರಾಣ’ ಎನ್ನಬಹುದು. ಇದರಿಂದಾಗಿ ನಮ್ಮ ನಗರಗಳು ಮಾತ್ರವಲ್ಲ ಹಳ್ಳಿಗಳು ಕೂಡ ಅದೆಷ್ಟು ಬೇಗ ಅಮೇರಿಕೀಕರಣಕ್ಕೆ ಒಳಗಾಗುತ್ತಿದೆ ಎಂದರೆ ಅಭಿವೃದ್ಧಿ ಎಂಬುದರ ಯಾವುದೇ ಸೂಚನೆ ಇಲ್ಲದ ಹಳ್ಳಿಯಲ್ಲೂ ನಿಮಗೆ ಟಿ.ವಿ.ಯ ಜಾಹೀರಾತುಗಳಲ್ಲಿ ಬರುವ ಎಲ್ಲಾ ಸೌಂದರ್ಯವರ್ಧಕಗಳು ಮತ್ತು ಪಾನೀಯಗಳೂ ದೊರೆಯುತ್ತವೆ. ಆ ಹಳ್ಳಿ ತಲುಪಲು ಸರಿಯಾದ ರಸ್ತೆಯಿಲ್ಲ ಎಂದು ಜನ ಗೊಣಗುತ್ತಿರುವಾಗಲೇ ಟಿ.ವಿ. ಎಂಬ ಮಾಯಾಯಂತ್ರದ ಮಾರುಕಟ್ಟೆಯು ನಾಡಿನ ಕಟ್ಟಕಡೆಯ ವ್ಯಕ್ತಿಯ ಎದುರು ಪ್ರದರ್ಶನಗೊಳ್ಳುತ್ತಾ ಇರುತ್ತದೆ. ಆ ಪ್ರದರ್ಶನಕ್ಕಾಗಿಯೇ `ಐಕಾನ್’ ಗಳ ಸೃಷ್ಟಿಯನ್ನೂ ಸಹ ಟಿ.ವಿ.ಯೇ ಮಾಡುತ್ತಾ ಇರುತ್ತದೆ. ಅಮಿತಾಬ್ ಬಚ್ಚನ್, ಸಚಿನ್, ಷಾರುಕ್ ಮುಂತಾದವರುಗಳು ಜನರನ್ನು ಕೊಳ್ಳಲು ಪ್ರಚೋದಿಸುವ `ಅಫೀಮು’ಗಳಾಗಿಬಿಡುತ್ತಾರೆ. (ಒಂದು ಮಾದಕಪೇಯದ ಕಂಪೆನಿಯಂತೂ ಆಯಾ ನಾಡಿನ/ ಭಾಷೆಯ ಜನಗಳಿಗೆ ತಕ್ಕಂತೆ ಅಲ್ಲಿನ ಸಿನಿಮಾ ನಾಯಕರುಗಳನ್ನೇ ಬಳಸಿಕೊಳ್ಳುತ್ತಿದೆ. ಆಂಧ್ರದಲ್ಲಿ ಚಿರಂಜೀವಿಯಾದರೆ, ತಮಿಳುನಾಡಿನಲ್ಲಿ ಸೂರ್ಯ ಎಂಬ ನಟ. ಕರ್ನಾಟಕದಲ್ಲಿ ಮಾತ್ರ ಅದಿಲ. ಈ ಮಾತು ತೆಗೆದಾಗ ಆ ಮಾದಕಪೇಯದ ಸ್ಥಳೀಯ ಮಾರುಕಟ್ಟೆಯ ಮುಖ್ಯಸ್ಥ ಹೀಗೆ ಹೇಳಿದರು:  `ಇಲ್ಲಿನ ಜನಕ್ಕೆ ಹಿಂದಿಯ ಅಥವಾ ತಮಿಳಿನ `ಐಕಾನ್’ ಆದರೂ ಸಾಕು. ಯಾಕೆಂದರೆ ಇವರು ಇಲ್ಲಿನ ಭಾಷೆಯ ಸಿನಿಮಾಗಳಿಗಿಂತ ಇತರ ಭಾಷೆಯದನ್ನೇ ನೋಡುವುದು. ಹಾಗಾಗಿ ನೋ ಕನ್ನಡ ಐಕಾನ್!’ ಈ ಮಾತಿನ ಹಿಂದಿರುವ ವಿವರಗಳು ಈ ಲೇಕನದ ಪರಿಧಿಯೊಳಗೆ ಬರುವುದಲ್ಲ. ಆದರೂ ಗಮನವಿರಲಿ ಎಂದಷ್ಟೇ ತಿಳಿಸುತ್ತಿದ್ದೇನೆ.)
ಹೀಗೆ ಹುಟ್ಟಿರುವ `ಆಧುನಿಕ ಪುರಾಣ’ದಲ್ಲಿ  ಟಿ.ವಿ. ಎಂಬುದು ಮನೆಯ ಅನಿವಾರ್ಯ ಅಗತ್ಯಗಳಲ್ಲಿ ಒಂದು ಎಂಬಂತಹ ಸ್ಥಿತಿ ಬಂದಿದೆ. ಅದರೊಂದಿಗೆ ಟಿ.ವಿ. ನಮ್ಮ ಜನಗಳ ಕೊಳ್ಳುಬಾಕ ಸಂಸ್ಕೃತಿಯನ್ನೂ ದಿನೇದಿನೇ ಹೆಚ್ಚಿಸುತ್ತಿದೆ. ಇದರಿಂದಾಗಿ ನಮ್ಮ ಬಡಮಧ್ಯಮವರ್ಗದ ಬದುಕಿನಲ್ಲಿ ಆಗಿರುವ ಪಲ್ಲಟಗಳು ಅನೇಕ.  ಐರಿಸ್ ಡೆನಿಸ್ ಮಿಲಿಕೆನ್  ಬರೆದಿರುವ ಈ ಪದ್ಯ ಇಂದಿನ ಸಂಸಾರಗಳ ಆಳದೊಳಗೆ ಇರಬಹುದಾದ ಭಾವದ ಸೂಚಕ:
One Night of Too Many
Honey,
Please turn off the TV
I want to talk
I want to be free
I need to hear my own voice
I need to make a different choice
Stop ‘watching’ life
Get out there and LIVE IT!
ಇದು ಪ್ರಾಯಶಃ ಎಲ್ಲಾ ಟಿವಿ ವೀಕ್ಷಕರ ಒಳಗಿನ ಕೂಗಾಗಿರಬಹುದು, ಅವರು ಆಲೋಚಿಸುವವರಾದರೆ. ಆದರೆ ಸಧ್ಯಕ್ಕೆ ನಮ್ಮ ನಾಡಲ್ಲಿ ಆ ಪರಿಸ್ಥಿತಿ ಬಂದಿಲ್ಲ. ಇಲ್ಲಿನ ಜನರ ಮಿದುಳನ್ನ ಒಂದು ದಿನದೊಳಗೆ ೩೫ ದೈನಿಕ ಧಾರಾವಾಹಿಗಳು ಹಿಡಿದಿವೆ. ಜೊತೆಗೇ ಸಿನಿಮಾಗಳು, ಸಿನಿಮಾ ಹಾಡುಗಳು, ಸಿನಿಮಾ ನಟರ ಸಂದರ್ಶನಗಳು. ಜನ ಅವೆಲ್ಲವನ್ನೂ ಎವೆಯಿಕ್ಕದೆ ನೋಡುತ್ತಿದ್ದಾರೆ. ಅದಾಗಲೇ ಟೆಲಿಮಾರ್ಕೆಟಿಂಗ್ನ ವಿಚಿತ್ರ ರೂಪಗಳು ಆರಂಭವಾಗಿದೆ. ಅವು ಜನರನ್ನ ಮನೆಯಿಂದಲೇ ಕದಲದಂತೆ ಮಾಡಿದರೂ ಆಶ್ಚರ್ಯವಿಲ್ಲ.
ಈ ವಿವರಗಳು ಒಂದೆಡೆಗಾದರೆ ಇದರೊಂದಿಗೆ ಕರ್ನಾಟಕದ ಟೆಲಿವಿಷನ್ ಉದ್ಯಮದಲ್ಲಿ ಆಗಿರುವ ಬದಲಾವಣೆಗಳು ಅನೇಕ. ಅವುಗಳನ್ನ ಗಮನಿಸೋಣ.
 
ಸ್ಥಳೀಯ `ಪುರಾಣಿ’ಕರ ಸ್ಥೂಲ ಚರಿತ್ರೆ 
ಟೆಲಿವಿಷನ್ ಕಾರ್ಯಕ್ರಮಗಳ ತಯಾರಿಕೆ ಒಂದು ಕಾಲಕ್ಕೆ ಕಲಾತ್ಮಕ ಸಿನಿಮಾ ಮಾಡುವ ಶಕ್ತಿ ಇಲ್ಲದ, ಆದರೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ತವಕ ಇದ್ದ ಕೆಲವರಿಂದಾಗಿ ನಡೆಯುತ್ತಿತ್ತು. ಹವ್ಯಾಸೀ ರಂಗಭೂಮಿಯ ಅನೇಕರು ಟೆಲಿವಿಷನ್ ಕಾರ್ಯಕ್ರಮಗಳ ತಯಾರಕರಾಗಿದ್ದರು. ನಾಡಿನ ಶ್ರೇಷ್ಠ ಕಥೆಗಳು, ಉತ್ತಮ ಕಿರುಚಿತ್ರಗಳಾಗಿ ಹೊರಬರುತ್ತಿದ್ದವು. ಸ್ಯಾಟಿಲೈಟ್ನಿಂದ ಬಿತ್ತರಗೊಳ್ಳುವ ವಾಹಿನಿಗಳು ಹೆಚ್ಚಿದಂತೆ ದೃಶ್ಯ ಬದಲಾಗತೊಡಗಿತು. ಟೆಲಿವಿಷನ್ ಉದ್ಯಮದಲ್ಲಿ ದುಡಿಯುವವರು ವೃತ್ತಿಪರರಾಗಿರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹೀಗಾಗಿ ಟೆಲಿವಿಷನ್ ಉದ್ಯಮ ಅಂದಿನಿಂದ ಇಂದಿಗೆ ಬೃಹತ್ತಾಗಿದೆ. ಇಂದು ಈ ಉದ್ಯಮದಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವವರ ಸಂಖ್ಯೆಯು (ಕೇವಲ ಕರ್ನಾಟಕದಲ್ಲಿ) ಸರಿಸುಮಾರು ನಾಲ್ಕೂವರೆ ಸಾವಿರ ಜನ. ಅಂದರೆ ಅದೇ ಸಂಖ್ಯೆಯ ಕುಟುಂಬಗಳು ಈ ಉದ್ಯಮವನ್ನ ಆಧರಿಸಿ ಬದುಕುತ್ತಿವೆ. (ಈ ಅಂದಾಜಿನಲ್ಲಿ ಕೇಬಲ್ ಆಪರೇಟರ್ಗಳು ಮತ್ತು ಎಂ.ಎಸ್.ಒ.ಗಳನ್ನು ಸೇರಿಸಿಲ್ಲ.)

ಕರ್ನಾಟಕದಲ್ಲಿರುವ ನಾಲ್ಕು ಛಾನೆಲ್ಲುಗಳಿಂದ ಆಗುತ್ತಿರುವ ವಾರ್ಷಿಕ ವಹಿವಾಟು ಅಂದಾಜು ಆರುನೂರು ಕೋಟಿರೂಪಾಯಿಗಳು. ಇದರಿಂದಾಗಿ ಸಿನಿಮಾ ಎಂಬ ತಾರಾಸಮೂಹದ (ಸ್ಟಾರ್ಗಳ ನಾಡು ಎಂಬ ಅರ್ಥದಲ್ಲಿ) ಸಂತೆಯಲ್ಲಿ ಬದುಕಲು ಆಗದೆ, ಆ ತಾರೆಯರ ಮನೆ ಬಾಗಿಲಲ್ಲಿ ನಿಲ್ಲುತ್ತಿದ್ದ ಅನೇಕ ಕಲಾವಿದರೂ ಇಂದು ನೆಮ್ಮದಿಯಾಗಿದ್ದಾರೆ ಮತ್ತು ಅವರ ಕುಟುಂಬಗಳಲ್ಲಿ ತೀರಾ ಐಷಾರಾಮ ಎನ್ನಲಾಗದಿದ್ದರೂ ನಾಳೆ ಹೇಗೆ ಎಂಬ ಚಿಂತೆಯಿಲ್ಲದೆ ಬದುಕು ಸಾಗುತ್ತಿದೆ. ಕನ್ನಡಭಾಷೆಯಲ್ಲಿ ಇನ್ನೂ ಎರಡು ಟೆಲಿವಿಷನ್ ವಾಹಿನಿಗಳು ಬರುವ ಸಾಧ್ಯತೆಯಿದೆ. ಈ ವಾಹಿನಿಗಳನ್ನು ಆರಂಭಿಸುತ್ತಿರುವವರ ರಾಜಕೀಯ ಉದ್ದೇಶಗಳೇನೇ ಇರಲಿ ಇವು ಟೆಲಿವಿಷನ್ ಉದ್ಯಮದಲ್ಲಿನ ಕಲಾವಿದರ, ತಂತ್ರಜ್ಞರ, ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವುದಂತೂ ಸತ್ಯ. ಪ್ರಾಯಶಃ ಇನ್ನೆರಡು ವರ್ಷಗಳಲ್ಲಿ ಟೆಲಿವಿಷನ್ ಉದ್ಯಮದಲ್ಲಿ ತೊಡಗಿಕೊಂಡವರ ಸಂಖ್ಯೆ ದುಪ್ಪಟ್ಟಾಗಬಹುದು. ಇದರ ಪರಿಣಾಮವಾಗಿ ಬೆಂಗಳೂರು ನಗರವೊಂದರಲ್ಲೇ ಈಗ ತಾಂತ್ರಿಕ ತರಬೇತಿ ನೀಡುವ ಆರು ಅರೆಕಾಲಿಕ ಶಾಲೆಗಳಾಗಿವೆ. ಇದು ಜಿಲ್ಲಾಕೇಂದ್ರಗಳಲ್ಲೂ ಆರಂಭವಾಗುವ ದಿನ ದೂರವಿಲ್ಲ. ಹಾಗಾದಾಗ ಈ ಉದ್ಯಮ ಒದಗಿಸುವ ಉದ್ಯೋಗ ಅವಕಾಶ ಎಷ್ಟು ಎಂದು ಊಹಿಸಬಹುದು. ಒಟ್ಟಾರೆಯಾಗಿ ಮನರಂಜನಾ ಉದ್ಯಮವಂತೂ ಸರಕು ಸಂಸ್ಕೃತಿಯ ಎಲ್ಲಾ ಅವಘಡಗಳನ್ನೂ ಮೈದುಂಬಿಸಿಕೊಂಡು ಸುಪುಷ್ಟವಾಗುತ್ತಿದೆ.

ಈ ಪರಿಸ್ಥಿತಿಯಲ್ಲಿ ಕಾರ್ಯಕ್ರಮ ತಯಾರಕರ ಧೋರಣೆಗಳೇನು?
ಈ ಉದ್ಯಮದಲ್ಲಿ ಆದರ್ಶಗಳಿಗೆ ಅವಕಾಶವಿಲ್ಲ. ಇದು ಸರಕು ಮಾರುವ ಉದ್ದೇಶದಿಂದಲೇ ಆದದ್ದು. ಇಲ್ಲಿ ತಯಾರಕ ಮತ್ತು ಅವನ ಆಲೋಚನೆಗಳು ಗೌಣ. ಅವನು ಹೆಣೆಯುವ ಕಥೆಗಳು ಮಕ್ಕಳು ಅಥವಾ ಹೆಂಗೆಳೆಯರ ಮನಸೆಳೆಯುವಂತಿರಬೇಕು. ಅದಕ್ಕೆ ಕಾರಣ ಹೆಚ್ಚು ಹೆಂಗಸರೇ ಟಿ.ವಿ. ನೋಡುತ್ತಾರೆ ಎಂಬ ಜನಪ್ರಿಯ ನಂಬುಗೆಯಲ್ಲ. ಒಂದು ಮನೆಯಲ್ಲಿ ಏನನ್ನಾದರೂ ಕೊಳ್ಳುವ ನಿರ್ಧಾರ ಮಾಡುವ ಶಕ್ತಿ ಇರುವವರು ಮಕ್ಕಳು ಮತ್ತು ಹೆಂಗಸರು ಮಾತ್ರ.

ಮಕ್ಕಳು ತಾವು ನೋಡಿದ ಜಾಹೀರಾತಿನಲ್ಲಿರುವುದೆಲ್ಲಾ ಬೇಕು ಎನ್ನುತ್ತಾರೆ. ಅದ್ಯಾವುದೋ ಸೋಪು ಕೊಂಡರೆ `ಭಯ ಇನ್ನೆಲ್ಲಿ?’ ಎಂಬ ಜಾಹೀರಾತಿನ ವಾಕ್ಯವೇ ಆ ಮಕ್ಕಳನ್ನು ಅದೇ ಸೋಪು ಕೊಳ್ಳುವಂತೆ ಮಾಡುತ್ತದೆ. ಆ ಭಯಕ್ಕೆ ಕಾರಣವೂ ಟಿ.ವಿ.ಯೇ. ಯಾವುದೇ ಮಕ್ಕಳನ್ನುದ್ದೇಶಿಸಿದ ಕಾರ್ಟೂನ್ ಚಿತ್ರ ಗಮನಿಸಿ. ಅಲ್ಲಿರುವುದು ಒಬ್ಬ ಒಳ್ಳೆಯವನ ಸುತ್ತ ಸಹಸ್ರಾರು ದುಷ್ಟರು. ಇನ್ನು ಅದನ್ನು ಆನಂದದಿಂದ ನೋಡುತ್ತಾ, ಹೊರಜಗತ್ತನ್ನ ಕಾಣದ ಮಕ್ಕಳಿಗೆ ಆಗುವುದೇನು? `ಹೊರಗಿನದು’ ಎಂದರೆ ಭಯ. ಮನೆಗೆ ಬಂದವರೊಡನೆ ಮಾತಾಡುವುದಕ್ಕೂ ಅವರಿಗೆ ಹಿಂಜರಿಕೆ. ಅವರು ಮುಕ್ತರಾಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಜಾಹೀರಾತಿನ ಒಂದು ಸಾಲು ಅವರ ಕೊಳ್ಳುವಿಕೆಗೆ ಕಾರಣವಾಗಿರುತ್ತದೆ.

ಇನ್ನು ಹೆಂಗಸರು. ಯಾವುದೇ ಮನೆಯ ದಿನಸಿ ಮತ್ತು ದಿನಬಳಕೆಯ ವಸ್ತುವನ್ನು ತರುವವರು ಹೆಂಗಸರೇ ಆಗಿರುತ್ತಾರೆ, ಸಾಮಾನ್ಯವಾಗಿ. ಹೀಗಾಗಿ ಕೊಳ್ಳುವವರನ್ನ  ಓಲೈಸುವ ಕಥೆಗಳ ನಡುವೆ ತನ್ನ ಸರಕು ಮಾರುಕಟ್ಟೆಯಾಗಲಿ ಎಂದು ಜಾಹೀರಾತುದಾರ ಬಯಸುತ್ತಾನೆ. ಅಂತೆಯೇ, ಧಾರಾವಾಹಿಯ ನಡುವಣ ಜಾಹೀರಾತು ಸಮಯ ತುಂಬುವವನನ್ನ ಆಧರಿಸಿ ಕಥೆಗಳು ರೂಪುಗೊಳ್ಳುತ್ತವೆ. ಹೀಗಿರುವಾಗ ನಾಡಿನ ರೈತರ ಸಮಸ್ಯೆ ಕುರಿತ ಅಥವಾ ದಲಿತರ ಸಮಸ್ಯೆ ಕುರಿತ ಕಥೆಗಳನ್ನು ಅಥವಾ ಕೋಮುಸೌಹಾರ್ದ ಕುರಿತ ಕಥೆಗಳನ್ನು ಈ ಮಾಧ್ಯಮದ ಮೂಲಕ ಮಾಡುವುದು ದುಸ್ಸಾಧ್ಯವಾಗಿಬಿಡುತ್ತದೆ. (ಈ ಒತ್ತಡಗಳ ನಡುವೆಯೂ ಕೆಲವರು ಹಟಕ್ಕೆ ಬಿದ್ದವರಂತೆ `ಸಮಾಜಮುಖಿ’ ಕಥೆಗಳನ್ನು ಧಾರಾವಾಹಿಯಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಂತಹವರು ಎಂದಿಗೂ, ಎಂದೆಂದಿಗೂ ಅಲ್ಪಸಂಖ್ಯಾತರು) ಇದರಿಂದಾಗಿ ಎಲ್ಲಾ ಧಾರಾವಾಹಿಗಳಲ್ಲೂ ಕಾಣಸಿಗುವುದು ಸಾಧ್ವಿ ಶಿರೋಮಣಿಯ ಗಂಡನ ಎರಡನೆಯ ಸಂಬಂಧದ ಕಥೆ(ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ನನ್ನವಳು, ತಕಧಿಮಿತಾ), ಅಥವಾ ಅತ್ತೆ-ಸೊಸೆಯರ ಜಗಳ(ಕನ್ಯಾದಾನ, ಕುಂಕುಮಭಾಗ್ಯ, ಜಗಳಗಂಟಿಯರು) ಅಥವಾ ಹಾಸ್ಯದ ಹೆಸರಲ್ಲಿ ಬರುವ ನಂಬಲಸಾಧ್ಯವೆಂಬಂತೆ ವರ್ತಿಸುವ ಪಾತ್ರಗಳನ್ನುಳ್ಳ ಕಥೆಗಳು (ಸಿಲ್ಲಿಲಲ್ಲಿ, ಕುಬೇರಪ್ಪ ಅಂಡ್ ಸನ್ಸ್, ಇದು ಎಂಥಾ ಲೋಕವಯ್ಯ), ಅಥವಾ ದೆವ್ವ-ಭೂತ, ಮಾಟ-ಮಂತ್ರದ ಕಥೆಗಳು (ಯಾವ ಜನ್ಮದ ಮೈತ್ರಿ, ಮಹಾಮಾಯಿ, ಅಮ್ಮಾ ನಾಗಮ್ಮ, ಇತ್ಯಾದಿ) ಅಥವಾ ಒಡೆದಕುಟುಂಬಗಳ ಕಥೆ (ಪರಂಪರೆ, ಗುಪ್ತಗಾಮಿನಿ, ಕುಟುಂಬ, ಸೂರ್ಯವಂಶ, ಅಪ್ಪ, ಇತ್ಯಾದಿ) ಹೀಗೇ ಕೆಲವು ಸಿದ್ಧ ಸೂತ್ರಗಳ ಜೊತೆ ಜಾಹೀರಾತುದಾರನ ಮನಒಲಿಸುವಷ್ಟಕ್ಕೆ `ಆಧುನಿಕ ಪುರಾಣಿಕ’ರು ಕಥೆ ಹೊಸೆಯುತ್ತಿದ್ದಾರೆ. ಇದು ಆ ಉದ್ಯಮದಾರರ ಅನಿವಾರ್ಯ. ಆದರೆ ವೀಕ್ಷಕರು ತಿಳಿದಿರಬೇಕಾದ ಸತ್ಯ ಒಂದಿದೆ.

ಭಾರತೀಯ ವೀಕ್ಷಕನನ್ನು ಈ ಪರಿಯಲ್ಲಿ ಆವರಿಸಿರುವ ಟಿ.ವಿ. ಕ್ರಾಂತಿಯನ್ನೆಂದೂ ತೋರುವುದಿಲ್ಲ. ಏಕೆಂದರೆ ಅದು ಮಾರಾಟದ ಸರಕಲ್ಲ. ಮುಷ್ಕರದ ಹೆಸರಲ್ಲಿ ಆಕಸ್ಮಿಕವಾಗಿ ಹಿಂಸೆಯನ್ನ, ಕೋಮುದಳ್ಳುರಿಯಲ್ಲಿ ಬೆಂದ, ಬೇಯುತ್ತಿರುವ ಮನೆಗಳನ್ನ ಸುದ್ದಿ ವಾಹಿನಿಗಳು ತೋರಿಸುತ್ತವೆ. ಆದರೆ ಅಲ್ಲಿ ಆ ಹಿಂಸೆಯ ಹಿಂದಿನ ಕಾರಣಗಳ ವಿಶ್ಲೇಷಣೆ ಮೇಲ್ಸ್ತರದ್ದಾಗಿರುತ್ತದೆ. ಟಿ.ವಿ. ಸುದ್ದಿ ವಾಹಿನಿಗಳಿಗೆ ರೋಮಾಂಚಕಾರಿ ವಿಷಯಗಳು ಬೇಕು. ಅದಕ್ಕಾಗಿ ಅವರು ಸದಾ ಹುಡುಕುತ್ತಾ ಇರುತ್ತಾರೆ. ೯/೧೧ ತರಹದ ಪ್ರಕರಣಗಳು, ಇರಾಕಿ ಯುದ್ಧ, ಗುಜರಾತ್ ಗಲಭೆ, ಕಾವೇರಿ ನದಿ ನೀರಿನ ಹಂಚಿಕೆ ಕುರಿತ ಬೀದಿಯ ಗಲಾಟೆಗಳನ್ನ ಟಿ.ವಿ. ಸುದ್ದಿಗಳು ತೋರಿಸುತ್ತವೆ. ಆದರೆ ಇಂತಹ ಪ್ರಕರಣಗಳ ಹಿಂದಿರುವ ಎಲ್ಲಾ ಕಾರಣಗಳನ್ನು ಹಾಗೂ ವಿವರಗಳನ್ನೂ ಅವು ರೋಮಾಂಚನಕಾರಿಯಲ್ಲ ಎಂಬ ಕಾರಣಕ್ಕೆ ಬಿಟ್ಟುಬಿಡುತ್ತವೆ. (ಆ ವಿಶ್ಲೇಷಣೆಗಳನ್ನ ಸಧ್ಯಕ್ಕೆ ಮುದ್ರಣ ಮಾಧ್ಯಮಗಳು ಮಾತ್ರ ಒಂದಿಷ್ಟು ಮಾಡುತ್ತಿವೆ. ಅಲ್ಲಿಯೂ ಉದ್ಯಮಪತಿಗಳ ನಿಯಂತ್ರಣ ಬರಲಾರಂಭಿಸಿದರೆ, ಆ ಸಣ್ಣ ಪ್ರಮಾಣದ ಕೆಲಸವೂ ಸಹ ನಿಂತು ಹೋಗಬಹುದು.) ಟಿ.ವಿ. ಸುದ್ದಿ ವಾಹಿನಿಗಳ ಆಹಾರ ಸಂಗ್ರಹಣೆಯ ಕ್ರಮದಿಂದಲೇ ಆಪರೇಷನ್ ದುರ್ಯೋಧನ ಮತ್ತು ತೆಹೆಲ್ಕಾ.ಕಾಂ ಪ್ರಕರಣಗಳು ಆದದ್ದು ಎಂಬುದನ್ನ ನಾವು ಮರೆಯಬಾರದು. ಇವೇ ಕಾರಣಗಳಿಗೆ ಕನ್ನಡದ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ಎರಡು ಕ್ರೈಂ ಕುರಿತ ಸುದ್ದಿಚಿತ್ರಗಳು ಜನಪ್ರಿಯವಾಗಿವೆ. ಆದರೆ ಇವುಗಳಾವುದೂ ಸಮಾಜಮುಖಿಯಲ್ಲ. (`ಮುಂದೊಮ್ಮೆ ಈ ಕಾರ್ಯಕ್ರಮ ತಯಾರಕರಿಗೆ ಯಾವ ರೋಮಾಂಚನಕಾರಿ ಸುದ್ದಿಯೂ ಸಿಗದೆ ಹೋದಾಗ ಅವರುಗಳೆ ಒಂದು `ಸೆನ್ಸೇಷನಲ್’ ಕ್ರೈಂ ಮಾಡುವ ಸಾಧ್ಯತೆ ಇದೆ’ ಎಂದು ಪತ್ರಕರ್ತ ಮಿತ್ರರೊಬ್ಬರು ತಮಾಷೆಗಾಗಿ ಹೇಳಿದ ಮಾತು ಸತ್ಯವಾಗಬಹುದೇನೋ ಎಂಬ ಆತಂಕವೂ ಇದೆ.)
ಈ ಸಂದರ್ಭದಲ್ಲಿ ಗಿಲ್ ಸ್ಕಾಟ್-ಹೆರಾನ್ ಅವರ ಪದ್ಯವೊಂದರ ಸಾಲುಗಳನ್ನ ಗಮನಿಸಿ:
The Revolution will not be televised
You will not be able to stay home, brother,
You will not be able to plug in, turn on and drop out.
You will not be able to lose yourself on skag and skip,
Skip out for beer during commercials,
Because the revolution will not be televised

Revolution will not be brought to you by xerox
In 4 parts without commercial interruption.
The revolution will not show you pictures of Nixon
Blowing a bugle and leading a charge by John
Mitchell, General Abrams and Spiro Agnew to eat
Hog maws confiscated from a harlem sanctuary……

…The revolution will not give your mouth sex appeal.
The revolution will not get rid of the nubs.
The revolution will not make you look 5 pounds thinner…
So Revolution WILL NOT BE TELEVISED.
The revolution will have no re-run brothers;
The revolution will be LIVE,
In front of your eyes
And not through a tube.
(as in: www.turnoffyourtv.com)
ಈ ಮಾತುಗಳು ನಮ್ಮೆದುರಿಗೆ ಇಡುತ್ತಿರುವ ಸತ್ಯವನ್ನ ಕಂಡುಕೊಂಡರೆ ಆಗ ನಮ್ಮ ಆಧುನಿಕ ಸಮಾಜ ತಾನೇ ಸೃಷ್ಟಿಸಿಕೊಳ್ಳುತ್ತಿರುವ ಟಿವಿ ಲೋಕದ ಆದುನಿಕ ಪುರಾಣದ ವೃತ್ತಗಳಿಂದ ದೂರ ಸರಿಯಬಹುದು. ಇಲ್ಲವಾದಲ್ಲಿ ನಮ್ಮೆದುರು ದೃಶ್ಯ ೧೨ ಉಳಿಯುತ್ತದೆ.

ಅದು ಹೀಗಿದೆ:
ದುಡಿವ ಗಂಡ ಮನೆಗೆ ಬರುತ್ತಾನೆ. ಅದು ಮಧ್ಯರಾತ್ರಿಯ ಸಮಯ. ಮಡದಿ ಮಾತಾಡದೆ ಬಾಗಿಲು ತೆರೆಯುತ್ತಾಳೆ. ಮತ್ತೆ ಹೋಗಿ ಮಕ್ಕಳೊಂದಿಗೆ ಮಲಗುತ್ತಾಳೆ. ಗಂಡ ತಂಗಳು ಪೆಟ್ಟಿಗೆಯಿಂದ ತಿನ್ನಲು ಬೇಕಾದ್ದನ್ನ ತೆಗೆದುಕೊಂಡು ಎಲೆಕ್ಟ್ರಿಕ್ ಓವನ್ದಲ್ಲಿ ಬಿಸಿ ಮಾಡಿಕೊಂಡು, ತಟ್ಟೆ ತುಂಬಿಸಿಕೊಂಡು ಟಿ.ವಿ ಎದುರು ಕೂರುತ್ತಾನೆ. ಧ್ವನಿಯನ್ನ `ಮ್ಯೂಟ್’ ಮಾಡುತ್ತಾನೆ. ಟಿ.ವಿ. ನಿರಂತರವಾಗಿ ಅವನಿಗೆ ಇಮೇಜಸ್ಗಳನ್ನು ತೋರುತ್ತದೆ. ಆದರೆ ಆ ಇಮೇಜ್ನ ಹಿಂದಿರುವ ಧ್ವನಿಗಳು ಅದಾಗಲೇ ಮ್ಯೂಟ್ ಆಗಿರುವುದರಿಂದ ನೋಡುತ್ತಿರುವ ಬಳಲಿದ ಮನಸ್ಸಿಗೆ ತಲುಪುವುದೇ ಇಲ್ಲ. ಕಿವಿ ನಿದ್ರಿಸಿ, ಮಿದುಳು ಮಲಗಿರುವ ಸ್ಥಿತಿಯಲ್ಲಿ ಕಣ್ಣು ಮಾತ್ರ ಎಲ್ಲವನ್ನೂ ಸ್ವೀಕರಿಸುತ್ತಾ ಉಳಿದು ಬಿಡುತ್ತದೆ.
ಹೀಗಾಗುವುದು ಬೇಡ! ನಾವು ಎಚ್ಚರವಾಗಿರೋಣ!

Advertisements

2 Responses to “ಟಿ.ವಿ. ಎಂಬ ಆಧುನಿಕ ಪುರಾಣವು – ಬಡ ಮಧ್ಯಮವರ್ಗವು!”


 1. 1 Pramod December 18, 2008 at 1:01 pm

  ಟಿ.ವಿ. ಯ ಬೆನ್ನ ಹಿ೦ದೆಯೇ ಇನ್ನೂ ಒ೦ದು ಅಡಿಕ್ಷನ್ ಇದೆ, ಅದು ಇ೦ಟರ್ನೆಟ್.!! ಕೆಲವೇ ವರ್ಷಗಳಲ್ಲಿ ಅದೂ ಬೇರೆ ರೀತಿಯಲ್ಲಿ ನಮ್ಮ ಜೀವನವನ್ನು ಆಕ್ರಮಿಸುತ್ತದೆ ಎ೦ಬುದು ನನ್ನ ಅಭಿಪ್ರಾಯ.

 2. 2 b.suresha December 23, 2008 at 11:54 am

  ಪ್ರಮೋದ್ ಅವರ ಪ್ರತಿಕ್ರಿಯೆಗೆ ನನ್ನ ಪ್ರತಿಕ್ರಿಯೆ :
  ಹೌದು ಎನ್ನಲೇ? ನಿಮ್ಮ ಪ್ರತಿಕ್ರಿಯೆಗೆ?
  ಸ್ವಲ್ಪ ಕಷ್ಟ.
  ಟೆಲಿವಿಷನ್ ಆವರಿಸಿಕೊಳ್ಳುತ್ತಾ ಇರುವುದು ಒಂದು ವರ್ಗವನ್ನ. ಇಂಟರ್ನೆಟ್ ಆಕ್ರಮಿಸಲು ಪ್ರಯತ್ನಿಸುತ್ತಾ ಇರುವುದು ಬೇರೆಯ ವರ್ಗವನ್ನ. ಇವೆರಡೂ ತೀರಾ ಭಿನ್ನ.
  ಒಂದು ವರ್ಗವನ್ನ ಮತ್ತೊಂದರ ಜೊತೆಗೆ ಹೋಲಿಸುವುದು ಕಷ್ಟ.
  ಈ ಹೋಲಿಕೆಯಲ್ಲಿ ಅಡಿಕ್ಷನ್ ಎಂಬ ಒಂದು ಸಾಮ್ಯ ಮಾತ್ರ ದೊರೆಯುತ್ತದೆ. ಆದರೆ ಎರಡೂ ವಿಭಿನ್ನವಾದುದು.
  ಆದರೆ ನೀವು ತೆಗೆದಿರುವ ಪ್ರಶ್ನೆ ತುಂಬಾ ಮುಖ್ಯವಾದದ್ದು. ಆ ಕುರಿತು ಚಿಂತನೆಗಳಾಗಬೇಕು.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: