ಟೆಲಿವಿಷನ್ ಎಂಬ ದೈತ್ಯನು ಮತ್ತು ರಂಗಭೂಮಿ ಎಂಬ ಚಿರಂಜೀವನು

(ಶಶಿಕಲಾವಿದರು ಸಂಸ್ಥೆಯ ಸುವರ್ಣ ಸಂಭ್ರಮದಲ್ಲಿ ಹೊರತಂದ ಸ್ಮರಣ ಸಂಚಿಕೆಗೆ ಬರೆದ ಲೇಖನ)

ಹೀಗೊಂದು ಮಾತಿದೆ ಮತ್ತು ನಾವದನ್ನು ಆಗಾಗ ಕೇಳುತ್ತಲೇ ಇದ್ದೇವೆ. `ಟೆಲಿವಿಷನ್ನಿನಿಂದ ಹವ್ಯಾಸೀ ರಂಗಭೂಮಿ ಸಾಯುತ್ತಿದೆ’ ಎಂಬುದು ಆ ಮಾತು. ಅದು ನಮ್ಮ ಹಿರಿಯ ರಂಗಕರ್ಮಿಗಳ/ ರಂಗವಿಮರ್ಶಕರ ಬಾಯಲ್ಲಿ ಕ್ಲೀಷೆ ಎಂದೆನಿಸುವಷ್ಟು ಬಾರಿ ಸುಳಿಯುತ್ತಿರುತ್ತದೆ. ಆದರೆ ಈ ಮಾತು ಹಸೀಸುಳ್ಳು. ಯಾವುದೋ ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮ ಸಾಯುವುದು ಅಸಾಧ್ಯ. ಅದರಲ್ಲಿಯೂ ರಂಗಭೂಮಿಯಂತಹ ಮಾಧ್ಯಮವು ಎಂದಿಗೂ ಸಾಯಲಾರದು. ಅದು ಚಿರಂಜೀವ.

ಹಾಗಾದರೆ ಇಷ್ಟೊಂದು ಜನ ಅದೇಮಾತನ್ನ ಪದೇಪದೆ ಹೇಳುವುದರ ಹಿಂದಿರುವ ತಥ್ಯವಾದರೂ ಏನು ಎಂದು ಪರಿಶೀಲಿಸುವ ಪ್ರಯತ್ನ ಈ ಲೇಖನದ್ದು. ಮೊದಲಿಗೆ ನಮ್ಮ ಹವ್ಯಾಸೀ ರಂಗಭೂಮಿಯ, ವಿಶೇಷವಾಗಿ ಬೆಂಗಳೂರಿನ ಹವ್ಯಾಸೀ ರಂಗಚಳುವಳಿಯ ರೂಪವನ್ನು ಗಮನಿಸೋಣ. “ನಮ್ಮ ಹವ್ಯಾಸಿ ಕಲಾವಿದರು ಯಾವುದೋ ವೃತ್ತಿ ಮಾಡುತ್ತಾ ಬಿಡುವಿನ ವೇಳೆಯಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಾ ಇದ್ದವರು. ಅವರಿಗೆ ರಂಗಭೂಮಿಯನ್ನು ಕುರಿತು ಪ್ರೀತಿ ಇದೆಯಾದರೂ ಅದು `ಬಿಡುವಿನ ವೇಳೆಯಲ್ಲಿ ರಂಗಭೂಮಿ’ ಎಂಬ ದೃಷ್ಟಿಕೋನ. ಹೀಗಾಗಿ ನಮ್ಮ ರಂಗಪ್ರಯೋಗಗಳಲ್ಲಿ ವೃತ್ತಿಪರತೆ ಎಂಬುದು ಬಹುಮಟ್ಟಿಗೆ ಇಲ್ಲ. ಆ ಕೊರತೆಯಿಂದಾಗಿ ನಮ್ಮಲ್ಲಿ ಅತ್ಯುತ್ತಮ ಪ್ರಯೋಗಗಳಾದರೂ ಅವು `ಪ್ರದರ್ಶನ’ದ ಲಾಭ ಅಥವಾ ಸಾತತ್ಯವನ್ನು ಪಡೆಯುವುದಿಲ್ಲ” ಎಂಬುದು ರಾಷ್ಟ್ರೀಯನಾಟಕಶಾಲೆಯ ಪದವಿ ಪಡೆದ ರಂಗನಿರ್ದೇಶಕರೊಬ್ಬರ ಅಭಿಪ್ರಾಯ. ಅದು ಬಹುಮಟ್ಟಿಗೆ ಸತ್ಯವೂ ಹೌದು. ಇದರಿಂದಾಗಿ ನಾಟಕಶಾಲೆಗಳ ಪದವಿ ಪಡೆದು ರಂಗಭೂಮಿಗೆ ಬಂದ ಹಲವು ವೃತ್ತಿಪರ ಧೋರಣೆಯ ನಿರ್ದೇಶಕರಿಗೆ ತಾವು ಸಿದ್ಧಪಡಿಸಿದ ಪ್ರಯೋಗ ಕುರಿತಂತೆ `ಪೂರ್ಣ ತೃಪ್ತಿ’ ಸಿಗುತ್ತಿರಲಿಲ್ಲ. ಈಗಲೂ ಅದು ಸಿಗುತ್ತಿಲ್ಲ ಎಂದು ಅನೇಕ ನಿರ್ದೇಶಕ ಮಿತ್ರರು ಹೇಳುತ್ತಾರೆ. ಇಲ್ಲಿ `ಪೂರ್ಣತೃಪ್ತಿ’ ಎಂದರೆ ಏನೆಂಬ ಪ್ರಶ್ನೆ ಉದ್ಭವಿಸುತ್ತದೆ. ಅದು ದಿ.ಬಿ.ವಿ.ಕಾರಂತರು ಹೇಳುತ್ತಿದ್ದ `ಆನಂದ’ದ ಸ್ಥಿತಿ. ಅಂದರೆ ಒಂದು ಪೂರ್ಣಾನುಭವವನ್ನು ಪ್ರೇಕ್ಷಕನಿಗೂ ಅನುಭವ ವೇದ್ಯವಾಗಿಸುವ ಸ್ಥಿತಿ. ಇದು ನಮ್ಮ ಧ್ಯಾನದಲ್ಲಿ ಹೇಳುವ ಸಹಸ್ರಾರ ತಲುಪಿದ ಸ್ಥಿತಿ ಎಂದರೆ ತಪ್ಪಾಗಲಾರದು. ಅಂತಹದೊಂದು ಸ್ಥಿತಿ ತಲುಪುವುದಕ್ಕೆ ಬೇಕಾದ್ದು ಕೇವಲ ವೃತ್ತಿಪರತೆಯಲ್ಲ, ತಾದಾತ್ಮ್ಯ! ಅದು ನಮ್ಮ ಆಧುನಿಕ ನಗರ ಜೀವನದಲ್ಲಿ ಕಷ್ಟಸಾಧ್ಯವಾದ್ದು. ಹೀಗಿರುವಾಗ ನಮ್ಮ ರಂಗಪ್ರದರ್ಶನಗಳಿಂದ ಅಂತಹದೊಂದು `ಆನಂದ’ವನ್ನ ನಿರ್ದೇಶಕರು ಹುಡುಕುವುದೇ ತಪ್ಪು ಎಂದು ನನ್ನ ಭಾವನೆ. ಅದು ಪ್ರತ್ಯೇಕ ವಿಸ್ತೃತಚರ್ಚೆಯನ್ನು ಬೇಡುವ ವಿಷಯ. ಈ ಲೇಖನದಲ್ಲಿ ಆ ಚರ್ಚೆ ಬೇಡ. ಆದರೆ ಇದರಿಂದ ನಮ್ಮ ಹವ್ಯಾಸೀ ರಂಗಭೂಮಿಗೆ ಆದುದೇನು ಮತ್ತು ಅದರಿಂದಾಗಿ ನಮ್ಮ ಹವ್ಯಾಸೀ ರಂಗಭೂಮಿ ಸಾಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಆಗಿರುವ ವಿವರಗಳನ್ನು ಗಮನಿಸಿದರೆ ಕಾಣಿಸುವುದಿಷ್ಟು.

ರಂಗಭೂಮಿ ಸ್ವತಃ ಅನ್ನ ಕಾಣಿಸುವಷ್ಟು ಶಕ್ತವಲ್ಲ ಎಂದೇ ನಮ್ಮಲ್ಲಿನ ಅನೇಕರು ಇತರ ವೃತ್ತಿಗಳಿಗೆ ಹೋಗಿದ್ದಾರೆ. ರಂಗಭೂಮಿ ಅವರಿಗೆ ಇತರ ಮಾಧ್ಯಮಗಳ ಗ್ರಹಿಕೆಗೆ ವೇದಿಕೆಯೂ ಆಗಿದೆ. ಈ ನೆಲೆಯಲ್ಲಿಯೇ ೧೯೮೦ರ ದಶಕದ ಅಂತ್ಯ ಭಾಗದಲ್ಲಿ ಆರಂಭವಾದ ಟೆಲಿವಿಷನ್ ನಮ್ಮ ಹವ್ಯಾಸೀ ರಂಗಗೆಳೆಯರಿಗೆ ಪರಿಚಿತವಾದುದು. ಟೆಲಿವಿಷನ್ ಅವರಿಗೆ ಬೇಕಾದ ಸಂತೋಷವನ್ನು ಕೊಡಬಲ್ಲ ಮತ್ತೊಂದು ಮಾಧ್ಯಮವಾಗಿತ್ತು. ಆಗ ಸಹಜವಾಗಿಯೇ ನಮ್ಮ ಹವ್ಯಾಸೀ ರಂಗಭೂಮಿಯ ಅನೇಕರು ಟೆಲಿವಿಷನ್ನಿಗೂ ಬಂದರು. ಅಭಿನಯ ಮತ್ತು ಇತರ ತಾಂತ್ರಿಕ ವಿಭಾಗಗಳಲ್ಲಿ ತೊಡಗಿಕೊಂಡರು. ವಿಶೇಷವಾಗಿ ದೂರದರ್ಶನದ ಉಪಗ್ರಹವಾಹಿನಿ ಚಂದನ ಆರಂಭವಾದಾಗ, ಅದಕ್ಕಾಗಿ ಎರಡು ಪ್ರಕರಣಗಳ ಕಥೆಗಳನ್ನು ತಯಾರಿಸುವುದು ಆರಂಭವಾಯಿತು. ಅದು ನಮ್ಮಲ್ಲಿನ ಅನೇಕ ಕನಸುಗಾರರಿಗೆ ವರವಾಗಿ ಪರಿಣಮಿಸಿತು. ಅನೇಕ ಯುವಕರು ಲೇಖಕರಾದರು, ನಿರ್ದೇಶಕರಾದರು, ಅಭಿನಯದ ಅವಕಾಶ ಅನೇಕರಿಗೆ ದೊರೆಯಿತು. ಇದರಿಂದಾಗಿ ಟೆಲಿವಿಷನ್ ಮಾಧ್ಯಮದಲ್ಲಿ ದುಡಿಯುವುದು ಹೇಗೆಂಬ ಪರಿಚಯ ಇವರೆಲ್ಲರಿಗೂ ಆಯಿತು. ಇದು ಒಂದು ಅನೇಕರಿಗೆ ವರದಾನವಾಗಿ ಪರಿಣಮಿಸಿತು ಎನ್ನಬಹುದು. ಆದಾಯದ ಹೊಸಮೂಲಗಳು ಇವರೆಲ್ಲರಿಗೂ ದೊರೆಯಿತು. ಹೀಗೆ ಟೆಲಿವಿಷನ್ ಮಾಧ್ಯಮಕ್ಕೆ ಬಂದ ಹೊಸಬರು ಈಗ ಹಳಬರಾಗಿದ್ದಾರೆ. ಅವರೆಲ್ಲರಿಗೂ ಆರ್ಥಿಕ ಸುಭದ್ರತೆ ದೊರೆತಿದೆ. ಅವರಲ್ಲಿ ಅನೇಕರು ಪೂರ್ಣಾವಧಿಯಾಗಿ ಇಂದು ಟೆಲಿವಿಷನ್ನಿನಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ ಅನೇಕರು ರಂಗಭೂಮಿಯಲ್ಲೂ ತೊಡಗಿಕೊಂಡು ಟೆಲಿವಿಷನ್ನಿಗೂ ದುಡಿಯುತ್ತಿದ್ದಾರೆ.

ಇವೆಲ್ಲವೂ ನಮ್ಮ ಹವ್ಯಾಸೀ ರಂಗಭೂಮಿಯ ನೇಪಥ್ಯದ ವಿವರಗಳು. ಇವುಗಳಿಂದ ರಂಗಭೂಮಿಯಂತಹ ಅತ್ಯಂತ ಪ್ರಾಚೀನ ಕಥನ ಮಾಧ್ಯಮಕ್ಕೆ ಸಾವು ಬರುವುದು ಅಸಾಧ್ಯ. ರಂಗಭೂಮಿಗೆ ಸಾವು ಬರಬೇಕೆಂದರೆ ಅದನ್ನು ನೋಡುವವರು ಮತ್ತು ಮಾಡುವವರು ಇಬ್ಬರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಅದು ಇನ್ನೂ ಅನೇಕ ಸಹಸ್ರಮಾನಗಳವರೆಗೆ ಅಸಾಧ್ಯ. ಏಕೆಂದರೆ ಪೀಟರ್ ಬ್ರೂಕ್ ಹೇಳುವಂತೆ ನೋಡುಗನೊಬ್ಬನ ಎದುರಿಗೆ ಅಭಿನಯಿಸುವವನು ಇದ್ದರೆ ಮುಗಿಯಿತು. ಅಲ್ಲಿ ರಂಗಭೂಮಿಯು ಹುಟ್ಟುತ್ತದೆ. ಈ ನಿಟ್ಟಿನಲ್ಲಿ ರಂಗಭೂಮಿಯು ಸದಾ ಚಿರಂಜೀವನಾಗಿಯೇ ಉಳಿಯುತ್ತದೆ ಎಂಬುದು ನಿರ್ವಿವಾದಿತ ಸತ್ಯ.

ಆದರೆ ಈ ಲೇಖನದ ಆರಂಭದಲ್ಲಿ ಸೂಚಿತವಾದ ಪ್ರಶ್ನೆಗಳನ್ನು ಕೇಳುವವರು ರಂಗಭೂಮಿಯಿಂದ ವಲಸೆ ಹೋದವರಿಂದ ರಂಗಭೂಮಿ ಬಡಕಲಾಯಿತು ಎಂತಲೂ ಹೇಳುತ್ತಿದ್ದಾರೆ. ಇದು ಸಹ ಸತ್ಯವಲ್ಲ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಲೇಜ್ ರಂಗಭೂಮಿಯ ಕಾರ್ಯಕ್ರಮಗಳನ್ನು ನೋಡಿದವರಿಗೆ ತಟ್ಟನೆ ತಿಳಿಯುತ್ತದೆ. ರಂಗಭೂಮಿಗೆ ನಿರಂತರವಾಗಿ ಹೊಸಬರು ಬರುತ್ತಿದ್ದಾರೆ. ಎಲ್ಲಿ ಹೊಸನೀರಿನ ಆಗಮನ ನಿರಂತರವೋ ಅಲ್ಲಿ ಬತ್ತುವ ಮಾತು ನಿಷಿದ್ಧ. ಹೀಗಾಗಿ ನಮ್ಮ ರಂಗಭೂಮಿ ಇಂದಿಗೂ ಎಂದಿಗೂ ಚಿರಂಜೀವ.

ಟೆಲಿವಿಷನ್ ಎಂಬ ದೈತ್ಯ
ಹೌದು. ಈ ಹೊಸಮಾಧ್ಯಮ ದೈತ್ಯನೇ. ಇದು ತನ್ನಲ್ಲಿಗೆ ಬರುವ ಎಲ್ಲಾ ಹೊಸಬರನ್ನು ತನ್ನೊಳಗೆ ತೆಗೆದುಕೊಳ್ಳುತ್ತದೆ. ಈ ಉದ್ಯಮ ನಮ್ಮನಾಡಿನಲ್ಲಿ ನೆಲೆಯೂರಿ ಸುಮಾರು ಇಪ್ಪತ್ತೈದು ವರ್ಷಗಳಾಗಿವೆ. ಒಂದು ಕಾಲಕ್ಕೆ ದಿನವೊಂದಕ್ಕೆ ಎರಡು ಗಂಟೆಗಳ ಕಾಲ ಬಿತ್ತರವಾಗುತ್ತಿದ್ದ ಕನ್ನಡ ಕಾರ್ಯಕ್ರಮಗಳು ಇಂದು ಏಳು ಉಪಗ್ರಹವಾಹಿನಿಗಳಿಂದ ದಿನವೆಲ್ಲಾ ಕನ್ನಡ ಕಾರ್ಯಕ್ರಮಗಳ ಪ್ರಸಾರ ಆಗುತ್ತಿದೆ. ಅದಲ್ಲದೆ, ಇಂದು ಎಲ್ಲಾ ಜಿಲ್ಲಾಕೇಂದ್ರಗಳಲ್ಲಿಯೂ ಕೇಬಲ್ ಛಾನೆಲ್‌ಗಳಿವೆ. ಅಲ್ಲಿಯೂ ಕನಿಷ್ಟ ದಿನವೊಂದಕ್ಕೆ ಒಂದು ಗಂಟೆಯ ಕನ್ನಡ ಕಾರ್ಯಕ್ರಮಗಳು ತಯಾರಾಗುತ್ತಿವೆ. ಈ ಉದ್ಯಮವು ಇಂದು ವಾರ್ಷಿಕ ೬೨೫ಕೋಟಿ ರೂ.ಗಳ ವಹಿವಾಟು ಮಾಡುತ್ತಿದೆ. ಈ ಉದ್ಯಮದಿಂದಾಗಿ ನಮ್ಮಲ್ಲಿನ ಅನೇಕ ಕಲಾವಿದರು ಮತ್ತಾವುದೋ ವೃತ್ತಿ ಮಾಡುತ್ತಾ ಬಿಡುವಿನಲ್ಲಿ ನಟಿಸುವ ಬದಲು ಪೂರ್ಣಾವಧಿಗೆ ನಟರು/ತಂತ್ರಜ್ಞರು ಆಗಿ ಬದುಕುತ್ತಿದ್ದಾರೆ. ಪ್ರಾಯಶಃ ಅವರೆಲ್ಲರೂ ರಂಗಭೂಮಿಯನ್ನ ಆತುಕೊಂಡಿದ್ದರೆ ಅವರಿಗೆ ದೊರೆಯಬಹುದಾಗಿದ್ದುದಕ್ಕಿಂತ ಉತ್ತಮ ಬದುಕು ಈಗ ಅವರಿಗೆ ಸಿಕ್ಕಿದೆ. ಇವರಷ್ಟೇ ಅಲ್ಲದೆ, ಇನ್ನಷ್ಟು ಹೊಸಬರು ಬಂದರೂ ಈ ಟೆಲಿವಿಷನ್ ಉದ್ಯಮ ಎಲ್ಲವನ್ನೂ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳಲು ಸಿದ್ಧವಿದೆ. ನಮ್ಮಲ್ಲಿ ಈಗ ಪ್ರತಿದಿನವೂ ೪೨ ಕನ್ನಡ ದೈನಿಕ ಧಾರಾವಾಹಿಗಳು ಬೆಳಗಿನ ಹನ್ನೆರಡರಿಂದ ರಾತ್ರಿಯ ಹನ್ನೊಂದರವರೆಗೆ ಪ್ರಸಾರವಾಗುತ್ತಿದೆ. ನಮ್ಮ ನೋಡುಗರಿಗೆ ಅವೆಲ್ಲವನ್ನೂ ನೋಡುತ್ತಾ ತಮ್ಮದೇ ಆದ ಪುರಾಣ ಕಟ್ಟುವ ತವಕವೂ ಇರುವುದರಿಂದ ಎಲ್ಲಾ ಧಾರಾವಾಹಿಗಳು/ಛಾನೆಲ್ಲ್‌ಗಳು ತಮ್ಮದೇ ಆದ ಜನಪ್ರಿಯತೆಯ ಜೊತೆಗೆ ಸಾಗುತ್ತಿವೆ. ಈಗಿರುವ ವಾಹಿನಿಗಳಿಗೆ ಇನ್ನೆರಡು ವಾಹಿನಿಗಳೂ ಸೇರಿದರೆ ಆಗ ತಯಾರಾಗುವ ದೈನಿಕ ಧಾರಾವಾಹಿಗಳೆಷ್ಟು ಮತ್ತು ಅವುಗಳಲ್ಲಿ ತೊಡಗಿಕೊಳ್ಳುವ ಕಲಾವಿದರು ತಂತ್ರಜ್ಞರು ಎಷ್ಟು ಜನ ಎಂದು ತಾವೇ ಊಹಿಸಬಹುದು. ಈಗ ಈ ಉದ್ಯಮದಲ್ಲಿ ದುಡಿಯುತ್ತಿರುವವರ ಸಂಖ್ಯೆ ಒಂದು ಅಂದಾಜಿನ ಪ್ರಕಾರ ನೇರವಾಗಿ ದುಡಿಯುತ್ತಿರುವವರು (ಕರ್ನಾಟಕದಲ್ಲಿ) ಆರುಸಾವಿರ ಜನ, ಪರೋಕ್ಷವಾಗಿ  (ಕೇಬಲ್ ಆಪರೇಟರ್‌ಗಳೊಂದಿಗೆ ದುಡಿಯುವವರೂ ಸೇರಿದಂತೆ) ಟೆಲಿವಿಷನ್ನ್ ಉದ್ಯಮದಿಂದ ಜೀವನ ಸಾಗಿಸುತ್ತಿರುವವರ ಸಂಖ್ಯೆ ಕರ್ನಾಟಕದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಸಿನಿಮಾಗಳನ್ನು ಸಹ ಸ್ಯಾಟಿಲೈಟ್ ಕಂಟ್ರೋಲ್‌ಗೆ ತರುತ್ತಿರುವ ಹಿನ್ನೆಲೆಯಲ್ಲಿ ಬರುವ ಎರಡು ವರ್ಷಗಳಲ್ಲಿ ಈ ಸಂಖ್ಯೆಯು ಮುಪ್ಪಟ್ಟಾಗುವ ಸಾಧ್ಯತೆಯಿದೆ. ಉದ್ಯೋಗ ಸೃಷ್ಟಿಯ ನೆಲೆಯಲ್ಲಿಯೂ ಟೆಲಿವಿಷನ್ ಉದ್ಯಮ ದೈತ್ಯನಾಗಿದೆ.

ಟೆಲಿವಿಷನ್ನ್ ಯಾವರೀತಿಯಲ್ಲಿ ನಮ್ಮ ನಾಡಿನ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರಚೋದಿಸುತ್ತಿದೆ ಎಂಬ ವಾದವನ್ನು ಒತ್ತಟ್ಟಿಗಿಟ್ಟು, ಇಂದಿನ ಸಂವಹನಯುಗದಲ್ಲಿ ಟೆಲಿವಿಷನ್ ನೀಡುತ್ತಿರುವ ಮಾಹಿತಿಯಂತೂ ನಾಡಿನ ಜನರನ್ನು ಸದಾ ಎಚ್ಚರದಲ್ಲಿಟ್ಟಿದೆ. ಕಳೆದ ತಿಂಗಳು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ನೇರಪ್ರಸಾರ ನೋಡಿರುವವರಿಗೆ ಇದು ಗೊತ್ತಾಗಿರುತ್ತಿದೆ. ನಮ್ಮ ನಾಡಿನ ವಿದ್ಯಾವಂತರು ಚುನಾವಣೆಗಳೆಂದರೆ ನಿರ್ಲಕ್ಷ್ಯ ತೋರುವುದನ್ನು ಈ ನೇರಪ್ರಸಾರದಿಂದಾಗಿ ಬಿಡುವ ಸಾಧ್ಯತೆಯಿದೆ. ಅದರ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರಗಳು ಬಾರದಂತೆ ಆಗಬಹುದು. ಇದು ಟೆಲಿವಿಷನ್ ಎಂಬ ದೈತ್ಯನಿಂದಲೇ ಆಗಬಹುದಾದ್ದು. ಟೆಲಿವಿಷನ್ನಿನ ಪರಿಣಾಮಗಳನ್ನು ಕುರಿತು ಮಾತಾಡುತ್ತಾ ಆ ಮಾಧ್ಯಮವು ಉಚ್ಚ್ರಾಯಕ್ಕೆ ಬಂದ ನಂತರ ನಮ್ಮ ಭಾಷೆಯಲ್ಲಿ ಆಗಿರುವ ಬದಲಾವಣೆಯನ್ನು ಸಹ ಹೇಳಬೇಕು. ಇಂದು ಕರ್ನಾಟಕದ ಉದ್ದಗಲಕ್ಕೂ ಬಳಕೆಯಲ್ಲಿರುವ ಕನ್ನಡವನ್ನು ಆಯಾಪ್ರದೇಶದ ಕನ್ನಡ ಮತ್ತು ಟೆಲಿವಿಷನ್ ಕನ್ನಡ ಎಂದು ಪ್ರತ್ಯೇಕಿಸಿ ಗುರುತಿಸಬಹುದು. ನಮ್ಮ ಆಡುಭಾಷೆಗೆ ಒಂದು ಯೂನಿಫಾರ್ಮಿಟಿಯನ್ನ ತಂದುಕೊಟ್ಟಿರುವುದು ಟೆಲಿವಿಷನ್. (ಇದು ಸರಿಯಲ್ಲ ಎಂಬ ಭಾಷಾಪಂಡಿತರ ಆಗ್ರಹವನ್ನು ನಾನು ವೈಯಕ್ತಿಕವಾಗಿ ಒಪ್ಪುತ್ತೇನೆ. ಆದರೆ ಈ ಯೂನಿಫಾರ್ಮಿಟಿಯಿಂದ ಸಂಪರ್ಕಮಾಧ್ಯಮಗಳಲ್ಲಿ ಆಗಬಹುದಾದ ಹೊಸ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳುವುದು ಅನಿವಾರ್ಯ ಎನಿಸುತ್ತದೆ.)
ಇವೆಲ್ಲಾ ಕಾರಣಗಳಿಂದ ಇಂದು ಟೆಲಿವಿಷನ್ ನಮ್ಮ ನಡುವೆ ಬೃಹತ್ತಾಗಿ ಬೆಳೆದಿದೆ. ಮತ್ತು ಅದು ನಮ್ಮ ಯಾವುದೇ ವರ್ಗದ ಮನೆಯ ಅನಿವಾರ್ಯ ಪರಿಕರವಾಗಿದೆ. ಈ ಹೊಸ ಮಾಧ್ಯಮ ಸೃಷ್ಟಿಸಿರುವ ಅನೇಕ ಅವಕಾಶಗಳ ಹಿನ್ನೆಲೆಯಲ್ಲಿ ಇದನ್ನು ನಾವು ಒಪ್ಪಲೂಬೇಕಾಗುತ್ತದೆ ಅಪ್ಪಲೂ ಬೇಕಾಗುತ್ತದೆ.

ಟೆಲಿವಿಷನ್ನಿನ ಭವಿಷ್ಯ
ಇಷ್ಟು ಸಣ್ಣ ಅವಧಿಯಲ್ಲಿ ಈ ಎತ್ತರವನ್ನು ತಲುಪಿರುವ ಟೆಲಿವಿಷನ್‌ಗೆ ಇರುವ ಭವಿಷ್ಯ ಈಗಿರುವ ದೈನಿಕ ಧಾರಾವಾಹಿಗಳಲ್ಲಿ ಅಲ್ಲ. ಅದು ಕೇವಲ ಮಾಹಿತಿ ಮತ್ತು ಮನರಂಜನಾ ಮಾಧ್ಯಮವಾಗಿ ಉಳಿದುಕೊಳ್ಳುತ್ತದೆ. ನಮ್ಮ ಸೆಲ್‌ಫೋನ್‌ಗಳಲ್ಲಿ ಸಂದೇಶಗಳ ಮೂಲಕ ಬರುತ್ತಿರುವ ಸುದ್ದಿಗಳು ದೃಶ್ಯವಾಗಿ ಹರಿದುಬರಲಾರಂಭಿಸುತ್ತದೆ. ಪ್ರತಿನಿಮಿಷ ಒಂದು ಬ್ರೇಕಿಂಗ್ ನ್ಯೂಸ್ ಹುಡುಕುವುದಕ್ಕಾಗಿ ಈ ಮಾಧ್ಯಮದ ಸುದ್ದಿ ವಿಭಾಗದವರು ಸರ್ಕಸ್ ಮಾಡತೊಡಗುತ್ತಾರೆ. ಅದರೊಂದಿಗೆ ಈಗ ಕಥನ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಮತ್ತು ದಿನವೊಂದಕ್ಕೆ ೪೨ ದೈನಿಕ ಧಾರಾವಾಹಿಗಳು ಬಿತ್ತರಗೊಳ್ಳುವುದಕ್ಕೆ ಕಡಿವಾಣ ಬೀಳುತ್ತದೆ. ಏಕೆಂದರೆ ಸೆಲ್‌ಫೋನ್‌ನಲ್ಲಿ ಅರ್ಧಗಂಟೆಯ ಕಾಲ ಸ್ಟ್ರೀಮಿಂಗ್ ವಿಡಿಯೋದ ಮೂಲಕ ಕಥೆಯನ್ನ ನೋಡುವ ಹೊಸ ಮಿಥ್‌ಗಳನ್ನು ಊಹಿಸುತ್ತಾ ಕೂರುವ ಮನಸ್ಥಿತಿ ಯಾರಿಗೂ ಇರುವುದಿಲ್ಲ. ಆಗ ಟೆಲಿವಿಷನ್ ನಮ್ಮ ಮನೆಗಳ ಡ್ರಾಯಿಂಗ್ ರೂಮಿನ ಬದಲಿಗೆ ನಮ್ಮ ಜೇಬಲ್ಲಿರುವ ಸೆಲ್‌ಫೋನಿನ ಪಾಲಾಗಿ ಬಿಟ್ಟಿರುತ್ತದೆ.
ಈಚೆಗೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಸಾಮಾನ್ಯಜನರ ಮನರಂಜನೆಗಾಗಿ ಇನ್ನೂ ಅನೇಕ ಪ್ರಯೋಗಗಳು ಆಗುತ್ತಿವೆ. ಅವುಗಳಲ್ಲಿ ನಿಸ್ತಂತು ಟೆಲಿವಿಷನ್, ಏಕರೂಪದ ಜಾಗತಿಕ ಭಾಷೆ, ಇತ್ಯಾದಿ ಅನೇಕ ಪ್ರಯತ್ನಗಳು ಆಗುತ್ತಿವೆ. ಅವುಗಳು ಬಳಕೆಗೆ ಬಂದಾಗ ಟೆಲಿವಿಷನ್ನಿನ ಸ್ವರೂಪವೇ ಬದಲಾಗುತ್ತದೆ ಎಂಬುದಂತೂ ಸತ್ಯ.

ರಂಗಭೂಮಿ ಎಂಬ…
ಈ ಎಲ್ಲಾ ಹಿನ್ನೆಲೆಯ ಜೊತೆಗೆ ಮರಳಿ ರಂಗಭೂಮಿಯತ್ತ ಕಣ್ಣು ಹೊರಳಿಸಿ. ನಮ್ಮ ಸಮಕಾಲೀನ ರಂಗಭೂಮಿ ಸಾಮಾಜಿಕ ಬದಲಾವಣೆಗಳಿಗೆ ತಕ್ಕಂತೆ ಕೇವಲ ಮನರಂಜನೆಯಷ್ಟೇ ಅಲ್ಲದೆ ಉತ್ಸವಗಳನ್ನು ಏರ್ಪಡಿಸುವ ಯತ್ನದಲ್ಲಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಮ್ಮ ರಾಜಧಾನಿಯಲ್ಲಿ ಆಗಿರುವ ರಂಗೋತ್ಸವಗಳನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ನಮ್ಮ ಇಂದಿನ ರಂಗಭೂಮಿ ಜನಾಕರ್ಷಣೆಗೆಂದೇ ಈ ಉತ್ಸವಗಳನ್ನು ಆಲೋಚಿಸಿರಬಹುದು. ಇದರಿಂದಾಗಿ ರಂಗಪ್ರಯೋಗಗಳ ಸಂಖ್ಯೆಯೂ ಹೆಚ್ಚಾಗಿರಬಹುದು. ಆದರೆ ತಯಾರಾಗುತ್ತಿರುವ ನಾಟಕಗಳು ಮಾತ್ರ (ಕೆಲವು ಪ್ರಯೋಗಗಳನ್ನು ಹೊರತುಪಡಿಸಿ) ಹಾಡು-ಕುಣಿತ ಮತ್ತು ಮಲ್ಟಿಮೀಡಿಯಾ ಪ್ರೆಸೆಂಟೇಷನ್ನಿನ ಹಾಗೆ ಆಗಿವೆ. ಇದರಿಂದಾಗಿ ಇಂದಿನ ರಂಗಪ್ರದರ್ಶನಗಳಲ್ಲಿ ನಾಟಕದ ವಸ್ತುವಿಗಿಂತ ತಂತ್ರ ಮತ್ತು ಚಮತ್ಕಾರಗಳಿಗೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತಿದೆ. ಅದರೊಡನೆಯೇ ನಮ್ಮ ನಾಟಕೋತ್ಸವಗಳಿಗೂ ಪ್ರಾಯೋಜಕರ ಆಗಮನವಾಗಿದೆ. ನಾಟಕದೊಂದಿಗೆ ಉಚಿತ ಊಟ-ತಿಂಡಿಯ ವ್ಯವಸ್ಥೆಯಾಗುತ್ತಿದೆ. ಇಲ್ಲಿ ನಾಟಕ ನೋಡಲು ಬರುವ ಪ್ರೇಕ್ಷಕ ರಂಗಪ್ರಯೋಗಾಸಕ್ತನೋ ಅಥವಾ ಪ್ರಾಯೋಜಕರಿ ನೀಡುವ ಉಚಿತ ಸೇವೆಗಳತ್ತ ಆಕರ್ಷಿತನೋ ಎಂಬುದನ್ನ ರಂಗಚರಿತ್ರೆಯು ಬಹುಬೇಗ ತಿಳಿಸುತ್ತದೆ. ಆದರೆ ಒಂದಂತೂ ಸತ್ಯ. ನಮ್ಮ ರಂಗಭೂಮಿ ಈಗ ಹಿಂದೆಂದಿಗಿಂತಲೂ ಉತ್ಸಾಹದಿಂದ ಪುಟಿಯುತ್ತಿದೆ ಮತ್ತು ಅದು ಚಿರಂಜೀವ ಎಂಬುದನ್ನು ಸಾಬೀತುಪಡಿಸುತ್ತಿದೆ.

ಹಾಗಾದರೆ…!
ಹಾಗಾದರೆ ಲೇಖನದ ಆರಂಭದಲ್ಲಿ ಸೂಚಿಸಿದ ಪ್ರಶ್ನೆಗಳ ಮತ್ತು ಪ್ರಶ್ನೆ ಕೇಳುತ್ತಿರುವವರಿಗೆ ಉತ್ತರವೇನು? ಅದು ಸರಳ. ನೋಡುಗ ಮತ್ತು ನೀಡುಗ (ಅಭಿನಯ ಎನ್ನುವುದು ನೀ ಧಾತುವಿನಿಂದ ಹುಟ್ಟಿರುವ ಹಿನ್ನೆಲೆಯಲ್ಲಿ ನಟ ಎಂದರೆ ನೀಡುವವನು ಎಂದು ಅರ್ಥೈಸಿ ನೀಡುಗ ಎಂದಿದ್ದೇನೆ.) ಎಂದೂ ಸಾಯುವುದಿಲ್ಲ. ಸಧ್ಯಕ್ಕೆ ಸತ್ತಿರುವುದು ವಿಮರ್ಶೆ. ನಮ್ಮ ಮುದ್ರಣ ಮಾಧ್ಯಮಗಳು ಜಾಹೀರಾತು ಪ್ರಣೀತ ಪತ್ರಿಕೋದ್ಯಮವನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ವಿಸ್ತೃತ ವಿಮರ್ಶೆ ರಾಜಕೀಯ ಮತ್ತು ವ್ಯಾಪಾರಕ್ಕೆ ಹೊರತುಪಡಿಸಿ ಮತ್ತಾವುದೇ ಅಂಗಕ್ಕೂ ದೊರೆಯುತ್ತಿಲ್ಲ. ಹೀಗಾಗಿ ನಮ್ಮಲ್ಲಿ ಎರಡು ದಶಕಗಳ ಹಿಂದೆ ಇದ್ದಂತಹ ಗಂಭೀರ ವಿಮರ್ಶೆ ಮತ್ತು ವಿಮರ್ಶಕ ಇಬ್ಬರೂ ಈಗ ನಾಪತ್ತೆಯಾಗಿದ್ದಾರೆ. ಕೆಲವು ರಂಗಪತ್ರಿಕೆಗಳು ಈ ಕೆಲಸವನ್ನು ಸಣ್ಣ ಮಟ್ಟದಲ್ಲಿ ಮಾಡುತ್ತಿವೆಯಾದರೂ ಒಟ್ಟಾರೆಯಾಗಿ ಈಗ ಸಾವಿನಂಚಿಗೆ ಬಂದಿರುವುದು ನಮ್ಮ ರಂಗಭೂಮಿಯಲ್ಲ, ರಂಗವಿಮರ್ಶೆ ಎಂದೆನ್ನಬಹುದು.

ಇದು ಇಲ್ಲಿಗೆ ಮುಗಿಯುವ ಚರ್ಚೆಯಲ್ಲ. ಇನ್ನೂ ಅವಕಾಶವಿದೆ. ಈ ವೇದಿಕೆಯಲ್ಲಿ ಇಷ್ಟು ಅನಿಸಿಕೆ ಹಂಚಿಕೊಂಡಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ತಿಳಿದುಕೊಂಡ ನಂತರ ಮಾತು ಮುಂದುವರೆಸೋಣ. ನಮ್ಮ ಮಾತಿಗೂ ನಿರಂತರತೆ ಬರಲಿ. ರಂಗಚರ್ಚೆಯೊಂದಿಗೆ ನಮ್ಮ ಪ್ರೀತಿಯ ರಂಗಭೂಮಿಯನ್ನ ಜೀವಂತವಾಗಿಸಿಕೊಳ್ಳೋಣ.

Advertisements

0 Responses to “ಟೆಲಿವಿಷನ್ ಎಂಬ ದೈತ್ಯನು ಮತ್ತು ರಂಗಭೂಮಿ ಎಂಬ ಚಿರಂಜೀವನು”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: