ಮಲ್ಟಿಪ್ಲೆಕ್ಸ್ ಸಿನೆಮಾ ಮತ್ತು ಜನಮಾನಸ

ಸಿನಿಮಾ ಜಗತ್ತಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡ ನನ್ನ ಗೆಳೆಯನೊಬ್ಬ ಈಚೆಗೆ ನನ್ನ ಬಳಿ ಬಂದು ಹೇಳಿದ. `ಗುರುವೇ, ನಾನೊಂದು ಕಮ್ಮಿ ಬಜೆಟ್ಟಿನ ಚಿತ್ರವನ್ನ ರಾಷ್ಟ್ರಭಾಷೆಯಲ್ಲಿ ತಯಾರಿಸಲು ಹೊರಟಿದ್ದೇನೆ. ಈ ಚಿತ್ರದಲ್ಲಿ ಇರುವುದು ಕಥೆಯಲ್ಲ. ಜಸ್ಟ್ ಮಜ! ಸಿನೆಮಾ ಒಂದೆರಡು ವಾರ ಓಡಿದರೂ ಸಾಕು. ಛಾನೆಲ್‌ಗಳಿಗೆ ಸಿನೆಮಾ ಮಾರಿ, ಬಂಡವಾಳ ಮಾತ್ರ ಅಲ್ಲ, ಲಾಭವನ್ನು ತೆಗೆಯುತ್ತೇನೆ’ ಎಂದ. ನಾನು ಬೆರಗಾಗಿ ಆ ನನ್ನ ಗೆಳೆಯನನ್ನ ನೋಡುತ್ತಿದೆ. ಯಾವುದೇ ಉದ್ದಿಶ್ಯವಿಲ್ಲದೆ ಸಿನೆಮಾದ ಕಥೆ ಹೆಣೆಯಬಹುದೇ ಎಂಬುದು ನನಗೆ ಅಚ್ಚರಿಯನ್ನು ತಂದಿತ್ತು. ನಿಧಾನವಗಿ ಯೋಚಿಸಿದಾಗ ಹೊಳೆದ ಕೆಲವು ಸತ್ಯಗಳಿವು.

ಈಚೆಗೆ ಆ ನನ್ನ ಸಹೋದ್ಯೋಗಿ ತಿಳಿಸಿದಂತಹ ಕಥೆ ಇಲ್ಲದ ಕಥನಗಳು ಸೃಷ್ಟಿಯಾಗುತ್ತಿವೆ. ಇವುಗಳನ್ನ ಉದ್ಯಮದವರು `ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಯ ಸಿನಿಮಾ ಎನ್ನುತ್ತಾರೆ. ಇದೊಂದು ವಿಶಿಷ್ಟ ಬೆಳವಣಿಗೆ. ಈ ಹಣೆಪಟ್ಟಿಯ ಕೆಳಗೆ ಬರುವ ಸಿನೆಮಾಗಳಲ್ಲಿ ಕಥನ ಮತ್ತು ನಿರೂಪಣಾ ವಿಧಾನವೇ ಪ್ರಧಾನ. ಇಲ್ಲಿ ಕಥಾಹೂರಣ ಎಂಬುದು ತೆಳು ವಿವರವಾಗಿರುತ್ತದೆ. ಇಂತಹ ಸಿನೆಮಾಗೆ ಉದಾಹರಣೆಯಾಗಿ ನೀವು, `ಜಬ್ ವಿ ಮೆಟ್’, `ಗರಂಮಸಾಲ’, `ಹಾಯ್‌ಬೇಬಿ’ ಇತ್ಯಾದಿ ಹಲವು ಚಿತ್ರಗಳನ್ನು ಹೆಸರಿಸಬಹುದು. ಇವು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನವಾಗಲೆಂದೇ ತಯಾರಾದ ಚಿತ್ರಗಳು. ಇವುಗಳನ್ನ ನೋಡುವ ನಗರಿಗರ ಸಂಖ್ಯೆಯು ಈಚೆಗೆ ಹೆಚ್ಚಾಗುತ್ತಿದೆ. ಈ ಗುಣ ಕನ್ನಡದ ಸಿನೆಮಾಗಳಿಗೂ ನಿಧಾನವಾಗಿ ಇಳಿಯುತ್ತಿದೆ. ತೆಳು ಕಥಾಹಂದರದೊಡನೆ ಮನರಂಜನೆ ಮತ್ತು ಪ್ರೇಕ್ಷಕನನ್ನು ಸದಾಕಾಲ `ತಿಳಿ’ಯಾದ ಸ್ಥಿತಿಯಲ್ಲಿ ಇರಿಸಲೆಂದೇ ಈ ಸಿನೆಮಾಗಳು ತಯಾರಾಗುತ್ತವೆ. ಅದಕ್ಕೆ ಉದಾಹರಣೆಯಾಗಿ `ಮುಂಗಾರುಮಳೆ’ `ಗಾಳಿಪಟ’, `ರಾಮ ಶಾಮ ಭಾಮ’ ದಂತಹ ಸಿನೆಮಾಗಳನ್ನು ಹೆಸರಿಸಬಹುದು.

ಈ ರೀತಿಯ ಚಿತ್ರಗಳು ಜಾಗತೀಕರಣದ ಫಲಶೃತಿ. ಜಗತ್ತನ್ನ ಗ್ರಾಮವಾಗಿಸುವ ನವವಸಾಹತುಶಾಹಿಯ ಯೋಜನೆಯಲ್ಲಿ ದುಬಾರಿ ಐಷಾರಾಮದ ಆಸೆ ಹುಟ್ಟಿಸುವುದೂ ಒಂದು ತಂತ್ರ. `ದುಡ್ಡಿದೆಯೇ! ಹಾಗಾದರೆ ನಿನಗೆ ಎಲ್ಲವೂ ಸಿಗುತ್ತದೆ!’ ಎಂಬ ಗುಣವದು. ಹೀಗಾಗಿಯೇ ನಗರಗಳಲ್ಲಿ ಮಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು ಆರಂಭವಾಗುತ್ತಿವೆ. ಇಂತಹ ವ್ಯಾಪಾರೀ ಮಳಿಗೆಗಳಲ್ಲಿ ಎಲ್ಲವೂ ಕಡಿಮೆ ದುಡ್ಡಿನಲ್ಲಿ ಸಿಗುತ್ತದೆ ಎಂದು ಘೋಷಿತವಾದರೂ ಅದು ದುಬಾರಿಯೇ. ಆದರೂ ಜನ ಅವುಗಳಲ್ಲಿ ಇರುವ ವೈಭವೀಕರಣಕ್ಕಾಗಿ ಮುಗಿಬೀಳುತ್ತಾರೆ. ವಾರಕ್ಕೊಮ್ಮೆಯಾದರೂ ಇಂತಹ ಮಾಲ್‌ಗೆ ಹೋಗಿ ಬರುವ ಗುಣ ನಮ್ಮ ನಗರಿಗರಿಗೆ ಅಭ್ಯಾಸವಾಗುತ್ತಾ ಇದೆ. ಇಲ್ಲಿ ಕೊಳ್ಳುವುದರ ಹೂರಣಕ್ಕಿಂತ ಅವುಗಳ ಥಳಕು ಮುಖ್ಯವಾಗುತ್ತದೆ. ಕೊಳ್ಳಲಾಗದವನು ಎಲ್ಲಾ ಅಂಗಡಿಗಳ ಷೋಕೇಸನ್ನು ನೋಡಿ ಸುಖಿಸುತ್ತಾನೆ. ಅದನ್ನ `ವಿಂಡೋ ಷಾಪಿಂಗ್’ ಎನ್ನುತ್ತಾರೆ. ಹಾಗೆ ಅಂಗಡಿ ಸುತ್ತಿ ಸುಮ್ಮನೆ ಬರಲಾಗುತ್ತದೆಯೇ? ಅಂಗಡಿಯಲ್ಲಿರುವ ಸೇಲ್ಸ್‌ಗರ್ಲ್‌ಗಳನ್ನ ಮಾತಾಡಿಸಬೇಕಲ್ಲ? ಅದಕ್ಕಾಗಿಯೇ ತಾವು ಕಂಡ ಭಾರೀ ಗಾತ್ರದ ಸಾಮಗ್ರಿಗಳ ಬೆಲೆ ವಿಚಾರಣೆಯಾಗುತ್ತದೆ. ಇವರು ಕೊಳ್ಳಯವವರಲ್ಲ ಎಂದು ಗೊತ್ತಿರುವ ಅಂಗಡಿಯವರು ಭಾರೀ ಬೆಲೆಯನ್ನೇ ಹೇಳುತ್ತಾರೆ. ತನಗೆ ಅದನ್ನು ಕೊಂಡು ತಂದು ಮನೆಯಲ್ಲಿಡಲಾಗಲಿಲ್ಲವೇ ಎಂಬ ಕೊರಗಿನೊಂದಿಗೆ ಅಂಗಡಿಗೆ ಹೋದವರು ಅಲ್ಲಿಯೇ ಇರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಹೋಗುತ್ತಾರೆ. ಹೀಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ನೋಡುವವರಿಗೆ ದೊಡ್ಡ ಆದರ್ಶದ ಚಿಂತೆ ಇಲ್ಲ, ಸಿನೆಮಾ ಅವರಿಗೆ ನೀಡಬೇಕಾದ್ದು ಎರಡು ಗಂಟೆಗಳ ಮನರಂಜನೆ ಮಾತ್ರ. ಸಿನೆಮಾ ಒಂದು ಕಲಾಮಾಧ್ಯಮ ಎಂದೆಲ್ಲಾ ಹೇಳುವವರು ತಯಾರಿಸುವ ಚಿತ್ರಗಳು ಈ ಮಾಲ್‌ಗಳ ಪ್ರೇಕ್ಷಕರಿಗೆ ಬೇಕಾಗಿಲ್ಲ. ಅವರು ಕೈಯಲ್ಲಿ ಗುಂಡಿನ ಬಾಟಲಿ, ಪಾಪ್‌ಕಾರನ್ ಹಿಡಿದು ಪಕ್ಕದಲ್ಲಿರುವ ಗೆಳೆಯ-ಗೆಳತಿಯ ಜೊತೆ ಊರು ತಿರುಗಲು ಬಂದವರಷ್ಟೆ. ಅವರಿಗೆ ಆದರ್ಶವಾದಿ ಅಥವಾ ವಾಸ್ತವವಾದಿ ಸಿನೆಮಾಗಳು ಬೇಕಾಗಿಲ್ಲ. ಅವರಿಗೆ, `ಚಿತ್ರ ಏನು ನೀಡಿತು?’ ಎನ್ನುವುದಕ್ಕಿಂತ, ಮಾರನೆಯ ದಿನ ಮಲ್ಟಿಪ್ಲೆಕ್ಸ್‌ನ ಟಿಕೇಟನ್ನು ಎಲ್ಲರ ಎದುರು ಪ್ರದರ್ಶಿಸಿ, ಅಥವಾ ತಾನು ಆ ಮಾಲ್‌ಗೆ ಹೋಗಿದ್ದೆ ಎಂದು ಹೇಳಿಕೊಳ್ಳುತ್ತಾ ತಾನೂ ಈ ಸಮಾಜದ ಗಣ್ಯಾತಿಗಣ್ಯ, ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವುದು ಮಾತ್ರ ಮುಖ್ಯವಾಗಿರುತ್ತದೆ. ಹೀಗಾಗಿ ಗಂಭೀರ ಸಿನೆಮಾ ಎಂಬುದು ಈ ಮಲ್ಟಿಪ್ಲೆಕ್ಸ್ ಸಂಸ್ಕೃತಿಯಲ್ಲಿ ಕೆಲಸಕ್ಕೆ ಬಾರದ್ದು.

ಆದರೆ ಈ ಮಲ್ಟಿಪ್ಲೆಕ್ಸ್‌ಗಳಿಗಾಗಿ ಸಿನೆಮಾ ತಯಾರಿಸುವವರು ತಮ್ಮ ಸಿನೆಮಾಗಳಲ್ಲಿ ಅತ್ಯಂತ ಗಂಭೀರ ಕಥೆ ಇದೆ ಎಂದು ಹೇಳಿಕೊಳ್ಳುತ್ತಾರೆ. ಅದೂ ಸಹ ಒಂದು ಪ್ರಚಾರಕ್ರಮವಾಗಿ ಇಂದು ಬಳಕೆಯಾಗುತ್ತಿದೆ. ಹೇಳಿಕೊಳ್ಳಲೆಂದೆ ಪ್ರಚಾರದಲ್ಲಿ ವಿಶಿಷ್ಟ ಕೀಲೈನ್‌ಗಳನ್ನು ಬಳಸಲಾಗುತ್ತದೆ. ಅದು `ವಿಧವಾ ವಿವಾಹ’ ಎಂತಲೋ ಅಥವಾ `ಆಧುನಿಕ ಬದುಕಿನ ವಿಶಿಷ್ಟ ಸಂಕಷ್ಟಗಳು’ ಎಂತಲೋ ಇರಬಹುದು. ಈ ಕೀಲೈನ್‌ಗಳು ಸಿನೆಮಾದಲ್ಲಿ ತೀರಾ ತೆಳುವಾದ ಸಕ್ಕರೆಯ ಲೇಪನದಂತೆ ಇರುತ್ತವೆ. ಹೀಗಾಗಿ ಈ ಸಿನೆಮಾಗಳಲ್ಲಿ ತೋರಿಸುವ ವಿವರಗಳೆಲ್ಲವೂ ಅತ್ಯಂತ ಸುಂದರವಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ತೇಪೆ ಹಾಕಿದ ಬಟ್ಟೆಯನ್ನು ತೊಟ್ಟವನು. ಹಸಿದು ಸಾಯುತ್ತಿರುವವನು ಕೂಡ ಸಹ ಅತ್ಯಂತ ಸುಂದರವಾಗಿ ಕಾಣುತ್ತಾನೆಯೇ ಹೊರತು, ಅಲ್ಲಿ ವಾಸ್ತವವನ್ನು ಯಥಾವತ್ತಾಗಿ ತೋರಿಸುವುದೇ ಇಲ್ಲ. ಹೀಗಾಗಿ ಸಿನಿಮಾದ ಪ್ರಚಾರದಲ್ಲಿ ಬಳಕೆಯಾದ ಕೀಲೈನ್‌ಗಳು ಬಹುತೇಕ ಸಿನೆಮಾದ ಪೋಸ್ಟರ್‌ನಲ್ಲಿ ಮಾತ್ರ ಉಳಿದಿರುತ್ತವೆ.

ಈ ನಿಟ್ಟಿನಲ್ಲಿ ಈಚೆಗೆ ಅನೇಕರು ಹೇಳುತ್ತಿರುವ `ಜನಪ್ರಿಯ ಸಿನೆಮಾ ಸಮಾಜಮುಖಿ’ ಆಗುತ್ತಿದೆ ಎಂಬ ಮಾತು ಹಸೀಸುಳ್ಳು. ಅದು `ಹ್ಯಾರಿಪಾಟರ್ ಕಾದಂಬರಿಯೇ ಮಹಾವಾಸ್ತವ’ ಎಂದಂತೆ! ನೋಡುಗನನ್ನ, ಓದುಗನನ್ನ ಭ್ರಮೆ ಮತ್ತು ಸುಳ್ಳುಗಳಲ್ಲಿ ಇರಿಸಿದರೆ ಮಾತ್ರ ಉದರಂಭರಣ ಆಗುತ್ತದೆ ಎಂಬುದನ್ನು ಬಲ್ಲ ಜನಪ್ರಿಯ/ಮಲ್ಟಿಪ್ಲೆಕ್ಸ್ ಚಿತ್ರ ತಯಾರಕರು ಘೋಷಾವಾಕ್ಯವಾಗಿ ಸಮಾಜದ ಬಗೆಗಿನ ಕಾಳಜಿಯನ್ನು ತೋರುತ್ತಾರೆ, ಅಷ್ಟೆ. ಈ ದೃಷ್ಟಿಯಿಂದ ಈಚೆಗೆ ಜನಪ್ರಿಯವಾದ ಎಲ್ಲಾ ಸಿನಿಮಾಗಳನ್ನೂ ನೀವು ಗಮನಿಸಬಹುದು. `ತಾರೆ ಜಮೀನ್ ಪರ್’ನಂತಹ ಸಿನಿಮಾ ಕೂಡ ನಿಮಗೆ ನಗರ ಜೀವನದ ಒಂದು ಮುಖವನ್ನ ಸ್ಥೂಲವಾಗಿ ಪ್ರದರ್ಶಿಸಿ, ನೋಡುಗರ ಕಣ್ಣಲ್ಲಿ ಒಂದೆರಡು ಹನಿ ನೀರು ತುಂಬುವಂತೆ ಮಾಡಬಲ್ಲದಷ್ಟೆ. ಅದು ಪ್ರೇಕ್ಷಕರನ್ನು ಆಲೋಚನೆಗೆ ಹಚ್ಚುವುದಿಲ್ಲ. ಸಿನಿಮಾ ಮಂದಿರದ ಆಚೆಗೆ ಬಂದವರು ಯಾವುದೋ ಬಾಲನಟನ ಅದ್ಭುತ ಪ್ರತಿಭೆಯ ಬಗ್ಗೆ ಮಾತಾಡುವುದಕ್ಕೂ, ನಮ್ಮ ಇಡೀ ಸಮಾಜದ ಬಗ್ಗೆ ಮಾತಾಡುವುದಕ್ಕೂ ದೊಡ್ಡ ವ್ಯತ್ಯಾಸ ಇದೆಯಲ್ಲವೇ? ಅದು `ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಯ ಚಿತ್ರಗಳಲ್ಲಿ ಆಗುವುದಿಲ್ಲ. ಅಲ್ಲಿ ಜನಾಕರ್ಷಣೆಗೆ ಬೇಕಾದ ಸರಕಿದೆ. ಜನರ ಬುದ್ಧಿಮತ್ತೆಗೆ ತಾಗುವ ಸತ್ಯಗಳಿಲ್ಲ.

ಇದು ಅಪಾಯಕಾರಿ. ಈ ಅಪಾಯದಿಂದ ಆಗಬಹುದಾದ ಅನಾಹುತಗಳಲ್ಲಿ ಪ್ರಧಾನವಾದುದು ಇಂತಹ `ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಯು ಜನಮಾನಸದ ಮನಸ್ಸನ್ನ ಆವರಿಸಿಕೊಳ್ಳುವುದು ಒಂದೆಡೆಯಾದರೆ, ಸಮಕಾಲೀನ ಭಾರತದ ಬಹುಸಂಖ್ಯಾತರು ಯಾವ ಕಷ್ಟದಲ್ಲಿದ್ದಾರೆ ಎಂಬುದನ್ನ ಮರೆಮಾಚಿಬಿಡುವುದು ಮತ್ತೊಂದು ದುರಂತ. ಯಾವುದೋ ಹುಡುಗ ಇನ್ನಾವುದೋ ಹುಡುಗನ ಹಿಂದೆ ಪ್ರೀತಿ, ಪ್ರೀತಿ ಎನ್ನುತ್ತಾ ಸುತ್ತಿದರೆ, ಈ ನಾಡಿನ ಕಡುಬಡವ, ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರುವ ರೈತನ ವಿವರ ನೋಡುಗನಿಗೆ ತಲುಪುವುದೇ ಇಲ್ಲ. ಇದನ್ನ ತಪ್ಪಿಸಲು ಸಮಾನಂತರ ಸಿನೆಮಾ ಚಳುವಳಿಗಳು ನಿರಂತರವಾಗಿ ಚಾಲ್ತಿಯಲ್ಲಿದ್ದು, ಅವುಗಳನ್ನ ಇದೇ ಮಲ್ಟಿಪ್ಲೆಕ್ಸ್‌ನಲ್ಲಿ ತೋರಿಸುವಂತಾಗಬೇಕು. ಆ ಮೂಲಕ ಮಾತ್ರ ನಾವು ಈ ಕಲಾಮಾಧ್ಯಮವನ್ನು ಸಮಾಜಮುಖಿಯಾಗಿ ಬಳಸಿಕೊಳ್ಳುವುದು ಸಾಧ್ಯ. ಮತ್ತು ನಮ್ಮ ನೋಡುಗನನ್ನು ಸ್ವಸ್ಥ ಸ್ಥಿತಿಯಲ್ಲಿ ಇಡುವುದು ಸಾಧ್ಯ ಎಂದು ನನಗನಿಸುತ್ತದೆ.

Advertisements

2 Responses to “ಮಲ್ಟಿಪ್ಲೆಕ್ಸ್ ಸಿನೆಮಾ ಮತ್ತು ಜನಮಾನಸ”


 1. 1 D.V.Sridhara November 29, 2009 at 4:57 pm

  ಇಂದು ಯಾವುದಾದರು ಒಂದು ಸಿನಿಮಾ,ನಾಟಕ ನೋಡಿ ವ್ಯವಸ್ತೆ (ಜನ ಸಮುದಾಯ) ಬದಲಾಗುತ್ತದೆ ಎನ್ನುವ ಆಶಯವೇ ಒಮ್ಮೆ ಮೈ ನಡುಗುವಂತೆ ಮಾಡುತ್ತದೆ.ಕಾಸರವಳ್ಳಿ ಜನ ನೋಡುವಂತ ಚಿತ್ರ ಮಾಡಿದರೆ
  ನಾನು ಬಿಟ್ಟಿ ನತಿಸುತ್ತೇನೆ ಎನ್ನುವ ಮಹಾನ್ ನಟರಿರುವಾಗ ಸಾಮಾಜಿಕ ಬದ್ದತೆ ಇರುವ ಚಿತ್ರ ತೆಗೆಯುವುದು
  ಒಂದು ಸವಾಲು ಎನಿಸುತ್ತದೆ. ನಮ್ಮ ಸಮಾಜದ ಸಂಕಷ್ಟಗಳು ಚಲನ ಚಿತ್ರಗಳಾಗಿ ಪರಿಣಾಮ ಬೀರುವುದಕ್ಕಿಂತ ನಾಟಕಗಳಾಗಿ ಹೆಚ್ಹು ಪರಿಣಾಮ ಬೀರ ಬಹುದು.ಕೊನೆಯ ಪಕ್ಷ ನಾಟಕ ನೋಡುವವರು ಸಮಯ ಕಳೆಯಲು ಬರುವವರಲ್ಲ ಎಂದು ನನ್ನ ನಂಬಿಕೆ.ನಿಮ್ಮ ಯೋಚನೆಯಂತೆ ಮಲ್ಟಿ ಪ್ಲೆಕ್ಸ್ ಬರುವವರುಗ್
  ಹಗ್ಗಳಕೆ,ಮತ್ತು ಕಾಲ ಕಳೆಯಲೆ ಬರುವವರು ಮನಸ್ಸಿಗೆ ಹಿತವಿಲ್ಲದಿದ್ದರೆ ಚಿತ್ರ ಪೂರ ನೋಡುತ್ತಾರೆ ಎನ್ನುವ ನಂಬಿಕೆ ಏನು? ಕಲಾತ್ಮಕ ಚಿತ್ರಗಳಿಗೆ ಸಿನಿಮಾ ಮಂದಿರಗಳ ಕೊರತೆ ಇರುವ ಯೋಚನೆಯಲ್ಲಿ ಮಲ್ಟಿಪ್ಲೆಕ್ಸ್-ಸಾಮಾಜಿಕ ಬದ್ದತೆಯ ಯೋಚನೆಯು ವ್ಯಾಪಾರಕ್ಕೆ ಸ್ವಲ್ಪ ಉತ್ಸಾಹ ತುಂಬ ಬಹುದೆ? ಪ್ರಾಮಾಣಿಕತೆ ಪ್ರತೀ ಮನುಷ್ಯನ ಒಳಗುದಿಯಿಂದ ತನಗೆ ತಾನೆ ಬರಬೇಕೆ ಹೊರತು,ಪೂರ್ಣಪ್ರಮಾಣದಲ್ಲಿ ಸಿನಿಮಾ,ಇತರಮಾದ್ಯಮಗಳು ಸಹಕಾರ್ರಿಯಾಗಲಾರವು,ಶಿಕ್ಷಣ ಹೋರತುಪಡಿಸಿ.

 2. 2 ಬಿ.ಸುರೇಶ December 8, 2009 at 1:41 pm

  ದೃಶ್ಯಮಾಧ್ಯಮವೂ ಸಹ ಶಿಕ್ಷಣವೇ ಅಲ್ಲವೇ?
  ಸಿನಿಮಾ ನೋಡಿ ಏನೇನೋ ಪ್ರಯತ್ನಿಸುವ ಜನರಿರುವಾಗ ಸಿನಿಮಾದಿಂದ ಒಬ್ಬ ವ್ಯಕ್ತಿಯ ಒಳಗನ್ನು ತಾಗುವುದು ಸಹ ಸಾಧ್ಯವಾಗಬಹುದು.
  ಅದಕ್ಕೆ ನಾನೇ ನಿರ‍್ದೇಶಿಸಿದ ಸಾಧನೆ ಧಾರಾವಾಹಿಯನ್ನು ನೋಡಿ ಬದಲಾದ ಅನೇಕರ ಪಟ್ಟಿಯನ್ನೇ ನಿಮಗೆ ನೀಡಬಹುದು.
  ಪ್ರಾಬಬಲಿಟೀಸ್ ಅನ್ನುವುದು ಇನ್‌ಫೈನೆಟ್ ಅಲ್ಲವೇ, ಗೆಳೆಯರೇ…


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: