ಸದಭಿರುಚಿಯ ಚಲನಚಿತ್ರ ಮಾರುಕಟ್ಟೆ – ಗುಲ್ಬರ್ಗಾ ಫಿಲ್ಮ್ ಕ್ಲಬ್ನ ಪ್ರಯತ್ನ

ಚಲನಚಿತ್ರಕ್ಕೆ ನೂರಾಹತ್ತುವರ್ಷಗಳ ಇತಿಹಾಸವಿದೆ. ಆದರೆ ಸದಭಿರುಚಿಯ ಚಿಂತನೆಗೆ ಇರುವುದು ಸಾವಿರಾರು ವರುಷಗಳ ಇತಿಹಾಸ. ಮನುಷ್ಯನಿಗೆ ನಾಗರೀಕತೆ ಎಂಬುದನ್ನು ಒದಗಿಸಿಕೊಟ್ಟದ್ದೆ ಸಾಮಾಜಿಕ ಎಚ್ಚರವುಳ್ಳ ಸದಭಿರುಚಿಯ ಚಿಂತಕರು. ಹೀಗಾಗಿ ಸದಭಿರುಚಿ ಎಂಬುದು ಮಾನವ ಇತಿಹಾಸದ ಜೊತೆಗೇ ತಳುಕು ಹಾಕಿಕೊಂಡಂತಹ ಸುದೀರ್ಘ ಸತ್ಯ. ಕಾಲದಿಂದ ಕಾಲಕ್ಕೆ ಈ ಸದಭಿರುಚಿಯ ಚಿಂತನೆಯಲ್ಲಿ ಪಲ್ಲಟಗಳಾಗಿವೆ. ಅದು ಅತ್ಯಂತ ಸಹಜ. ಏಕೆಂದರೆ, ಯಾವುದನ್ನು ಬುದ್ಧಿವಂತರು ಒಂದು ಸೂತ್ರವಾಗಿ ಸೂಚಿಸುತ್ತಾರೋ ಅದು ಕಾಲಾನುಕ್ರಮದಲ್ಲಿ ವ್ಯಾಪಾರಿಗಳ ಕೈಗೆ ಸಿಕ್ಕು ಜನಪ್ರಿಯತೆಯ ಹಣೆಪಟ್ಟಿಯನ್ನು ಪಡೆದುಕೊಂಡು ಬಿಡುತ್ತದೆ. ಇದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಒಂದೊಮ್ಮೆ ಹೊಸಅಲೆಯ ಚಿತ್ರ ತಯಾರಕರು ಮಾಡಿದ ವಾಸ್ತವವಾದಿ ಪ್ರಯೋಗಗಳು (ನಿಹಲಾನಿ ಅವರ `ಅರ್ಧಸತ್ಯ’, `ಆಕ್ರೋಶ್’ ಶ್ಯಾಮ್ ಬೆನಗಲ್ ಅವರ `ಅಂಕುರ್’, `ಮಂಥನ್’) ನಂತರದ ದಿನಗಳಲ್ಲಿ ಪ್ರಧಾನವಾಹಿನಿಯ ಚಿತ್ರರಂಗದ ಪ್ರಧಾನ ಅಸ್ತ್ರವಾದುದನ್ನು (ರಾಮಗೋಪಲ್ ವರ್ಮ ಅವರ ಎಲ್ಲಾ ಚಿತ್ರಗಳು) ನಾವೆಲ್ಲರೂ ನೋಡಿದ್ದೇವೆ. (ಇದು ಕನ್ನಡದ ಸಂದರ್ಭದಲ್ಲಿಯೂ ಆಗಿದೆ. ಸದಭಿರುಚಿಯ ಸಿನೆಮಾಗಳ ಪ್ರಭಾವದಿಂದಲೇ ಸುನೀಲ್ಕುಮಾರ್ ದೇಸಾಯ್ ಮತ್ತು ಕಾಶೀನಾಥ್ರಂತಹ ಚಿತ್ರನಿರ್ದೇಶಕರು ಪ್ರಧಾನ ವಾಹಿನಿಯಲ್ಲಿ ಗುರುತಿಸಿಕೊಂಡದ್ದನ್ನ ಗಮನಿಸಬಹುದು.) ಹಾಗೇ ನೋಡಿದರೆ ನಮ್ಮ ಪ್ರಧಾನವಾಹಿನಿ ಚಿತ್ರರಂಗದಲ್ಲಿ ಇದ್ದಂತಹ ಅತಿರೇಕಿತ ವಾಸ್ತವವಾದಿ ನಿರೂಪಣೆಯನ್ನ (ಇದನ್ನು ಡ್ರಾಮ್ಯಾಟಿಕ್ ಎನ್ನಬಹುದು. ಏಕೆಂದರೆ ಆರಂಭಕಾಲದ ಟಾಕಿ ಚಿತ್ರಗಳು ಬಳಸಿಕೊಂಡದ್ದು ಆಗ ಪ್ರಚಲಿತವು, ಪ್ರಖ್ಯಾತವು ಆಗಿದ್ದ ಕಂಪೆನಿ ಥಿಯೇಟರ್ಗಳ ನಿರೂಪಣಾ ಕ್ರಮವನ್ನ. ವಿವರಗಳಿಗೆ ಇದೇ ಲೇಖಕರ `ಬೆಳ್ಳಿಅಂಕ’ ದ ಸಂಕಲನ ಕಲೆ ಲೇಖನವನ್ನು ಗಮನಿಸಬಹುದು.) ಇದನ್ನು ಸಹಜ ವಾಸ್ತವದ ಕಡೆಗೆ ತಿರುಗುವಂತೆ ಮಾಡಿದ್ದು ಸದಭಿರುಚಿಯ ಚಿತ್ರ ಚಿಂತಕರು. (ಎನ್.ಲಕ್ಷ್ಮೀನಾರಾಯಣ್ ಅವರ `ಉಯ್ಯಾಲೆ’, `ನಾಂದಿ’ ಮತ್ತು ಎಂ.ಆರ್.ವಿಠಲ್ ಅವರ `ಮಿಸ್.ಲೀಲಾವತಿ’ಯಂತಹ ಚಿತ್ರಗಳ ಪ್ರಭಾವ ನೇರವಾಗಿ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಮೇಲೆ ಆಗಿರುವುದನ್ನ ಚಿತ್ರದ ನಿರೂಪಣಾ ಶೈಲಿಯ ದೃಷ್ಟಿಯಿಂದ `ಬೆಳ್ಳಿಮೋಡ’, `ಗೆಜ್ಜೆಪೂಜೆ’ಯಲ್ಲಿ ಗಮನಿಸಬಹುದು.) ಈ ದೃಷ್ಟಿಕೋನದಿಂದ ಗಮನಿಸುವುದಾದರೆ ಸದಭಿರುಚಿ ಎಂಬುದು ಕಾಲದಿಂದ ಕಾಲಕ್ಕೆ ತನ್ನ ಆಕಾರ-ಸ್ವರೂಪ-ವಿನ್ಯಾಸವನ್ನ ಬದಲಿಸಿಕೊಳ್ಳುತ್ತ ಮತ್ತು ತನ್ನದನ್ನ ಇತರರಿಗೆ ಹಂಚುತ್ತಾ ಸಾಗಿ ಬಂದಿದೆ. ಇದನ್ನ ನಾನು `ಅಂಗಿ ಬದಲಿಸುವ ಪ್ರಕ್ರಿಯೆ’ ಎನ್ನುತ್ತೇನೆ. ಇದು ಜನಪ್ರಿಯ ಮೌಲ್ಯಗಳ ವಿರುದ್ಧ ಸದಾ ಈಸುವಂತಹ-ಜೀವಿಸುವಂತಹ ಎಚ್ಚರದ ಗಂಟೆ! ಇದರಿಂದಾಗಿಯೇ ಸದಭಿರುಚಿ ಎಂಬುದು ಎಲ್ಲಾ ಕಾಲದಲ್ಲೂ ಪ್ರಧಾನವಾಹಿನಿಯಿಂದ `ಹೊರಗೆ’ ನಿಂತು ಹೊಸದನ್ನು ಹುಡುಕುವ ಯತ್ನ ಮಾಡುತ್ತಿರುತ್ತದೆ. (ಈ ನನ್ನ ಲೇಖನದ ಉದ್ದಕ್ಕೂ ನಾನು ಈ `ಅಂಗಿ ಬದಲಿಸುವ’ ಮತ್ತು `ಹೊರಗೆ’ ಉಳಿಯುವ ವಿವರಗಳನ್ನು ಆಗಾಗ ಹೇಳುತ್ತೇನೆ.)

ಸದಭಿರುಚಿಯ ಚಿತ್ರ ಚಳವಳಿ ಮತ್ತು ಮಾರುಕಟ್ಟೆ ಕುರಿತ ಸ್ಥೂಲ ಚರಿತ್ರೆ
ಭಾರತದಲ್ಲಿ ಪ್ರಧಾನ ವಾಹಿನಿಯ ಚಿತ್ರ ಚಳವಳಿಗೆ ಪರ್ಯಾಯವಾಗಿ ಪ್ರಪ್ರಥಮ ಚಿತ್ರವನ್ನು ತಯಾರಿಸಿದವರು ಸತ್ಯಜಿತ್ ರಾಯ್ ಅವರು. ಅವರ `ಪಥೇರ್ ಪಾಂಚಾಲಿ’ ಚಿತ್ರವು ಈ ಹಿನ್ನೆಲೆಯಲ್ಲಿ `ಹೊರಗೆ’ ಉಳಿದು ಸಿದ್ಧವಾದ ಪ್ರಥಮ ಚಿತ್ರ. ಸರಿಸುಮಾರು ೧೯೪೦ರ ದಶಕದ ಅಂತ್ಯದಲ್ಲಿ ಇಟಲಿಯಲ್ಲಿ ಆದ ನವವಾಸ್ತವವಾದಿ ಸಿನಿಮಾ ಚಳವಳಿಯ ಪ್ರಭಾವದಿಂದ ಸತ್ಯಜಿತ್ರಾಯ್ ಅವರ ಮೊದಲ ಚಿತ್ರ ತಯಾರಾಯಿತು. ವಿಶೇಷವಾಗಿ ವಿಟ್ಟೋರಿಯಾ ಡಿ’ಸಿಕಾ ನಿರ್ದೇಶನದ `ಬೈಸಿಕಲ್ ಥೀವ್ಸ್’ ಚಿತ್ರದ ಪ್ರಭಾವ ಸತ್ಯಜಿತ್ ರಾಯ್ ಅವರ ಚಿತ್ರಗಳ ಮೇಲಾಯಿತು. ಇದನ್ನು ಇವೆರಡೂ ಚಿತ್ರಗಳ ಕಟ್ಟಡಕ್ರಮದಲ್ಲಿಯೂ ಮತ್ತು ದೃಶ್ಯ ಸಂಯೋಜನೆಯ ಶೈಲಿಯಲ್ಲಿಯೂ ಗಮನಿಸಬಹುದು. (ವಿವರಗಳಿಗೆ ಸತ್ಯಜಿತ್ರಾಯ್ ಅವರ ಚಿತ್ರಗಳನ್ನು ಕುರಿತ ಚಿದಾನಂದ್ ದಾಸ್ಗುಪ್ತಾ ಅವರ ಪುಸ್ತಕವನ್ನ ಗಮನಿಸಬಹುದು.) ಈ ಚಿತ್ರ ತಯಾರಿಕೆಯ ಹಾದಿಯಲ್ಲಿ ಅವರು, ಆಗಿನ ಜನಪ್ರಿಯ ಚಿತ್ರ ತಯಾರಕರ ಪದ್ಧತಿಯಿಂದ ಹೊರಗೆ ಉಳಿದು ಸಂಪೂರ್ಣವಾಗಿ ಹವ್ಯಾಸೀ ಆಸಕ್ತರ ಪಡೆಯೊಂದನ್ನು ಸಿದ್ಧಪಡಿಸಿಕೊಂಡು ಚಿತ್ರ ತಯಾರಿಸಿದ್ದರು. ನಂತರದ ದಿನಗಳಲ್ಲಿ ಅವರು ಮಾಡಿದ ಪ್ರಯತ್ನ – ಪ್ರಯೋಗಗಳ ಹಿನ್ನೆಲೆಯಲ್ಲಿ ರಾಯ್ ಅವರನ್ನು `ಭಾರತದ ಹೊಸಅಲೆ ಚಿತ್ರ ಚಳುವಳಿಯ ಆದ್ಯಪ್ರವರ್ತಕರು’ ಎಂದೇ ಗುರುತಿಸಲಾಗುತ್ತಿದೆ. ಹೀಗೆ ಭಾರತದಲ್ಲಿ ಆರಂಭವಾದ ಸದಭಿರುಚಿಯ ಚಿತ್ರ ಚಳವಳಿ ನಂತರದ ದಿನಗಳಲ್ಲಿ, ಬೆಂಗಾಲ್ನಲ್ಲಿಯೇ ಮೃಣಾಲ್ ಸೇನ್, ಋತ್ವಿಕ್ ಘಟಕ್ರಿಂದ ಆರಂಭಿಸಿ ಈಚೆಗೆ ಅತ್ಯುತ್ತಮ ಚಿತ್ರ ತಯಾರಕರೆಂದು ಗುರುತಿಸಲಾಗುವ ಗೌತಮ್ ಘೋಷ್, ಅಪರ್ಣಾ ಸೇನ್ ಮುಂತಾದವರನ್ನ ನೀಡಿದೆ. ಇದೇ ಹಾದಿಯಲ್ಲಿ ಈ ದೇಶದ ಪ್ರತಿ ರಾಜ್ಯವೂ ತನ್ನದೇ ಆದ ಸದಭಿರುಚಿಯ ನೇತಾರರನ್ನು ನೀಡಿದೆ. ಓರಿಸ್ಸಾದಲ್ಲಿ ನಿಮಾಯ್ ಘೋಷ್, ಅಸ್ಸಾಮಿನ ಜಾನೂ ಬರುವಾ, ಹಿಂದಿಯಲ್ಲಿ ಕೇತನ್ ಮೆಹ್ತಾ, ಸಾಯ್ ಪರಾಂಜಪೆ, ಶ್ಯಾಮ್ ಬೆನಗಲ್ ಮುಂತಾದವರು, ಕೇರಳದಲ್ಲಿ ಅಡೂರ್ ಗೋಪಾಲಕೃಷ್ಣನ್, ಶಾಜಿ ಕರುಣ್ ಮುಂತಾದವರು, ತೆಲುಗಿನಲ್ಲಿ ಟಿ.ವಿ.ಕೆ. ಶಾಸ್ತ್ರಿ ಮುಂತಾದವರು ಇದ್ದಾರೆ.

ಕನ್ನಡದ ಸಂದರ್ಭ
ಕನ್ನಡದ ಸಂದರ್ಭದಲ್ಲಿ ಈ ಸದಭಿರುಚಿಯ ಚಿತ್ರ ಚಳುವಳಿಯು ಆರಂಭವಾದದ್ದು ೧೯೬೦ರ ದಶಕದ ಆದಿಯಲ್ಲಿಯೇ. ಎನ್ನೆಲ್, ಎಂ.ಆರ್.ವಿಠಲ್, ಚದುರಂಗ, ಎಂ.ವಿ.ಕೃಷ್ಣಸ್ವಾಮಿ ಅವರ ಪ್ರಯೋಗಗಳು ಆ ಕಾಲದ ಸಾಹಸಗಳೇ ಆಗಿದ್ದವು. ಅವರ ಪ್ರಭಾವದಿಂದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಗೀತಪ್ರಿಯ, ಕೆ.ಎಸ್.ಎಲ್. ಸ್ವಾಮಿ ಅವರಂತಹ ನಿರ್ದೇಶಕರುಗಳ ದಂಡೇ ಹುಟ್ಟಿತು. ಇವರಲ್ಲಿ ಮೊದಲಿನ ಇಬ್ಬರು ತಮ್ಮ ಪ್ರಯೋಗಗಳನ್ನ ಜನಪ್ರಿಯ ಸಿನಿಮಾಗಳ ಮೌಲ್ಯಕ್ಕೆ ತಕ್ಕಂತೆ ರೂಢಿಸಿಕೊಂಡದ್ದನ್ನು ಸಹ ನಾವು ಕಾಣಬಹುದು. (ಉದಾ: ಪುಟ್ಟಣ್ಣ ಅವರ `ಎಡಕಲ್ಲು ಗುಡ್ಡದ ಮೇಲೆ’ ಮತ್ತು `ಶರಪಂಜರ’, ಸಿದ್ದಲಿಂಗಯ್ಯನವರ `ಬಂಗಾರದ ಮನುಷ್ಯ’ ಮತ್ತು `ಬೂತಯ್ಯನ ಮಗ ಅಯ್ಯು’, ಗೀತಪ್ರಿಯ ಅವರ `ಮಣ್ಣಿನಮಗ’ ಮತ್ತು `ಹೊಂಬಿಸಿಲು’. ಈ ಚಿತ್ರಗಳ ನಿರೂಪಣಾ ಶೈಲಿಯಲ್ಲಿ ಅತಿರೇಕಿತ ವಾಸ್ತವತೆ ಮತ್ತು ವೈಭವೀಕರಣಗಳ ನಿರೂಪಣಾ ವಿಧಾನ ಇಲ್ಲ. ಹಾಗೆಂದು ಇವು ಸದಭಿರುಚಿಯ ಚಿತ್ರ ಚಳವಳಿಯಂತೆ ಪರ್ಯಾಯವಾಗಿ ರೂಪಿತವಾದದ್ದೂ ಅಲ್ಲ.)

ಈ ಅವಧಿಯಲ್ಲಿಯೇ ಕನ್ನಡ ಚಿತ್ರರಂಗವನ್ನು ಯೂನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿದ್ದ ಬುದ್ಧಿಜೀವಿಗಳು ಪ್ರವೇಶಿಸಿದ್ದು. ಈ ಪ್ರವೇಶದಿಂದಾಗಿ ಪಟ್ಟಾಭಿರಾಮರೆಡ್ಡಿಯವರ ನಿರ್ದೇಶನದ `ಸಂಸ್ಕಾರ’ ಕನ್ನಡದಲ್ಲಿ ತಯಾರಾಯಿತು. ಈ ಸಿನಿಮಾ ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿತ್ತು. ಗಿರೀಶ್ ಕಾರ್ನಾಡ್, ಲಂಕೇಶ್ ಮುಂತಾದವರು ಪಾತ್ರವಹಿಸಿದ್ದರು. ಈ ಪ್ರಯತ್ನದ ಫಲಶೃತಿ ಎಂಬಂತೆ ಕನ್ನಡ ಚಲನಚಿತ್ರರಂಗದಲ್ಲಿ `ವಂಶವೃಕ್ಷ’, `ಚೋಮನದುಡಿ’, `ತಬ್ಬಲಿಯೂ ನೀನಾದೆ ಮಗನೇ’ ಯಂತಹ ಚಿತ್ರಗಳು ತಯಾರಾದವು. ಈ ಪ್ರಯೋಗದ ಫಲವಾಗಿ ಜಿ.ವಿ.ಅಯ್ಯರ್, ಗಿರೀಶ್ ಕಾಸರವಳ್ಳಿ, ಟಿ.ಎಸ್.ರಂಗಾ, ಶಂಕರಪ್ಪ, ಟಿ.ಎಸ್.ನಾಗಾಭರಣರಂತಹ ನಿರ್ದೇಶಕರುಗಳ ಆಗಮನವಾಯಿತು. ಇವರಲ್ಲಿ ನಾಗಾಭರಣ ಅವರು ಸದಭಿರುಚಿಯ ಚಿತ್ರ ಚಳವಳಿಯ ಪ್ರಯೋಗಗಳನ್ನಅತ್ಯಂತ ಯಶಸ್ವಿಯಾಗಿ ಜನಪ್ರಿಯ ಅಥವಾ ಪ್ರಧಾನವಾಹಿನಿಯ ಚಿತ್ರಗಳಲ್ಲಿಯೂ (ನಿರೂಪಣಾ ವಿಧಾನದಲ್ಲಿ ಮಾತ್ರ ಈ ಬಳಕೆಯನ್ನು ನಾಗಾಭರಣ ಅವರು ಮಾಡುತ್ತಾರೆ. ಆದರೆ ಕಥಾವಸ್ತು ಮತ್ತು ಪಾತ್ರ ಪೋಷಣೆಯ ದೃಷ್ಟಿಯಿಂದ ಅವರು ಜನಪ್ರಿಯ ಮಾದರಿಗಳಿಗೆ ಶರಣಾಗುತ್ತಾರೆ. ಆ ಮೂಲಕ ಅವರ ಚಿತ್ರಗಳಲ್ಲಿ ನಾಯಕ ಅಥವಾ ನಾಯಕಿಯ ಪಾತ್ರದ ವೈಭವೀಕರಣ ನುಸುಳುವುದನ್ನ ನಾವು ಕಾಣಬಹುದು.) ಬಳಸಿರುವುದನ್ನು (ಜನುಮದಜೋಡಿ, ಮೈಸೂರು ಮಲ್ಲಿಗೆ, ಶಿಶುನಾಳ ಷರೀಫ, ನಾಗಮಂಡಲ) ನಾವು ಕಂಡಿದ್ದೇವೆ. ಈ ಪ್ರಯೋಗಗಳನ್ನು ಸ್ವತಃ ನಾಗಾಭರಣ ಅವರು ಬ್ರಿಡ್ಜ್ ಸಿನೆಮಾ ಎಂದು ಗುರುತಿಸುತ್ತಾರೆ.
ಜಿ.ವಿ.ಅಯ್ಯರ್ ಅವರು `ಹಂಸಗೀತೆ’ಯಂತಹ ಸಂಪೂರ್ಣ ಹೊಸ ರೀತಿಯ ನಿರೂಪಣಾ ತಂತ್ರವನ್ನುಳ್ಳ ಸಿನೆಮಾ ತಯಾರಿಸಿ ನಂತರ ವೇದಾಂತದ ಕಡೆಗೆ ಹೊರಳಿ, `ಆದಿಶಂಕರ’, `ಮಧ್ವಾಚಾರ್ಯ’, `ರಾಮಾನುಜ’, `ಭಗವದ್ಗೀತ’, `ಸ್ವಾಮಿ ವಿವೇಕಾನಂದ’ದಂತಹ ಚಿತ್ರಗಳನ್ನ ಒಂದು ವರ್ಗದ ಜನರನ್ನು ಮಾತ್ರ ಗುರಿಯಲ್ಲಿಟ್ಟುಕೊಂಡು ತಯಾರಿಸಲು ಆರಂಭಿಸಿದರು. ಈ ಪ್ರಯೋಗಗಳಲ್ಲಿ ಸಾಂಕೇತಿಕ ವಿವರಗಳು ಎಷ್ಟಿದ್ದವು ಎಂದರೆ, ಪ್ರತಿ ಚಿತ್ರವನ್ನು ಯಾವುದಾದರೂ ಸಿಮಿಯಾಲಜಿಸ್ಟರ ಕೈಯಲ್ಲಿ ವಿಶ್ಲೇಷಿಸುವ ಹಂತ ತಲುಪಿದ್ದವು ಎಂದರೆ ಉತ್ಪ್ರೇಕ್ಷೆಯಾಗಲಾರದು. `ಆದಿಶಂಕರ’ದಲ್ಲಿ ಸಾವು ಮತ್ತು eನಗಳು ಶಂಕರರ ಜೊತೆಗೆ ಸದಾ ಸ್ನೇಹಿತರಂತೆ ಇರುತ್ತವೆ ಎಂದು ತೋರಿಸುವಾಗಲೇ ಅವರ ಸಂಕೇತ ಮತ್ತು ಪ್ರತಿಮಾತ್ಮಕ ನಿರೂಪಣೆಯ ಆರಂಭವಾಗಿತ್ತು. `ಭಗವದ್ಗೀತೆ’ ಈ ಪ್ರಯತ್ನದ (ಪ್ರಯೋಗದ ಎಂದು ಓದಿಕೊಳ್ಳಬಹುದು) ಪರಾಕಾಷ್ಟೆಯಾಗಿತ್ತು. ಇವು ಪ್ರಯತ್ನದ ನೆಲೆಯಲ್ಲಿ ಮಾತ್ರ ಉಳಿದು ಪ್ರಯೋಗದ ಫಲಶೃತಿ ಹೊಸಅಲೆಯಿಂದ ಜನಪ್ರಿಯ ಚಿತ್ರಗಳಿಗೆ ಪೂರ್ಣ ಪ್ರಮಾಣದಲ್ಲಿ ಹರಿದು ಬರಲಿಲ್ಲ. `ಹಂಸಗೀತೆ’ಯು ತೆಲುಗಿನಲ್ಲಿ ಭಾರೀ ಯಶಪಡೆದ `ಶಂಕರಾಭರಣಂ’ ಚಿತ್ರಕ್ಕೆ ಸ್ಪ್ಫೂರ್ತಿಯಾಯಿತೆಂದು ಸ್ವತಃ ತೆಲುಗು ಚಿತ್ರದ ನಿರ್ದೇಶಕರಾದ ಕೆ.ವಿಶ್ವನಾಥ್ ಅವರು ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದರು. ಅಂತೆಯೇ ಅದೇ `ಹಂಸಗೀತೆ’ಯಲ್ಲಿ ಬಳಸಿದ್ದ ಹಿನ್ನೆಲೆ ಸಂಗೀತದ ಕೆಲವು ಪ್ರಯೋಗಗಳು (ದುರಹಂಕಾರಿಯಾದ ವೆಂಕಟಸುಬ್ಬಯ್ಯ ಚಿತ್ರದುರ್ಗದ ಕೋಟೆಯ ಮೆಟ್ಟಿಲುಗಳನ್ನ ಇಳಿಯುವಾಗ ಪ್ರತಿ ಹೆಜ್ಜೆಗೆ ಒಂದರಂತೆ ಸ್ವರವನ್ನ ಹಿನ್ನೆಲೆಯಲ್ಲಿ ಸಂಯೋಜಿಸಿದ್ದರು.) ಜನಪ್ರಿಯ ಸಿನಿಮಾದ ಫೈಟಿಂಗ್ ದೃಶ್ಯದಲ್ಲಿ ಬಳಕೆಯಾದುದನ್ನ ನಾವು ಕಂಡಿದ್ದೇವೆ. ಅಂದರೆ `ಹೊರಗೆ’ ಎಂದು ಗುರುತಿಸಲ್ಪಟ್ಟ ಪ್ರಯೋಗದ ತುಣುಕುಗಳು ಇಲ್ಲಿ `ಒಳಗೆ’ ಎಂದು ಸ್ವೀಕೃತವಾಗುವ ಗುಣ ಕಾಣುತ್ತಿದೆ ಎಂದಾಯಿತು.

ಇನ್ನು ಟಿ.ಎಸ್.ರಂಗಾ ಅವರ `ಗೀಜಗನ ಗೂಡು’, `ಸಾವಿತ್ರಿ’, `ಗಿದ್’ನಂತಹ ಪ್ರಯೋಗಗಳು ಪ್ರೇಕ್ಷಕ ವರ್ಗವನ್ನು ತಲುಪಲು ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಆದರೆ ಅವರ ಚಿತ್ರಗಳಲ್ಲಿ ಮೊದಲಬಾರಿಗೆ ತೆರೆಯಲ್ಲಿ ಕಾಣಿಸಿಕೊಂಡಿದ್ದ ಅನೇಕ ಹವ್ಯಾಸೀ ನಟರು ನಂತರ ಜನಪ್ರಿಯ ಸಿನಿಮಾಗಳ ಖಾಯಂ ನಟರಾದರು. (ಉದಾ: ಅಶೋಕ್ ಬಾದರದಿನ್ನಿ, ಶೋಭಾ ಜೋಷಿ, ಕರಿಸುಬ್ಬು, ಎಚ್.ಜಿ.ಸೋಮಶೇಖರ್, ಇತ್ಯಾದಿ) ಆದರೆ ಕಥಾ ನಿರೂಪಣಾ ವಿಧಾನದ ದೃಷ್ಟಿಯಿಂದ ರಂಗಾ ಅವರ ಪ್ರಯೋಗಗಳು ಜನಪ್ರಿಯ ಚಿತ್ರದ ಕಾರ್ಖಾನೆಯಿಂದ `ಹೊರಗೇ’ ಉಳಿದುಬಿಟ್ಟವು.

ಹೀಗೆ ಅನೇಕ ಪ್ರಯೋಗಗಳು ಕನ್ನಡದ ಹೊಸಅಲೆಯ ಸಂದರ್ಭದಲ್ಲಿ ಆಗಿವೆ. ಅವುಗಳಲ್ಲಿ ಕೆ.ಎಂ.ಶಂಕರಪ್ಪ ನಿರ್ದೇಶನದ `ಮಾಡಿಮಡಿದವರು’ ಚಿತ್ರದ ಫಲವಾಗಿ ಕೇವಲ ಕನ್ನಡ ಚಿತ್ರಗಳಲ್ಲಿ ಅಲ್ಲ ಭಾರತೀಯ ಚಿತ್ರರಂಗದಾದ್ಯಂತ ಚಲಿಸುವ ರೈಲಿನ ಚಿತ್ರೀಕರಣ ಕ್ರಮವೊಂದು ಹುಟ್ಟಿಕೊಂಡಿತು. ತಿರುವುಗಳಲ್ಲಿ ಹೊಗೆಯುಗುಳುತ್ತಾ ಸಾಗುವ ರೈಲಿನ ಚಿತ್ರಗಳು ನೆನಪಾದವೇ?. ಚಲಿಸುವ ರೈಲಿನ ಯಾವೊದೋ ಬೋಗಿಯ ಬಾಗಿಲಲ್ಲಿರುವ ಕ್ಯಾಮೆರಾದ ಕಣ್ಣಿಗೆ ಇಂತಹ ತಿರಗುತ್ತಿರುವ ರೈಲು ಕಾಣುವ ಬಗೆ ಇಂದು ಎಲ್ಲಾ ಜನಪ್ರಿಯ ಸಿನಿಮಾಗಳ ರೈಲು ಚಿತ್ರೀಕರಣದಲ್ಲಿ ಬಳಸಲಾಗುತ್ತಿರುವ ಇಮೇಜ್ ಆಗಿದೆ. ಅದೇ ರೀತಿಯಲ್ಲಿ `ಮಾಡಿಮಡಿದವರು’ ಚಿತ್ರಕ್ಕಾಗಿ ಬಳಸಲಾದ ನಾಗ್ರಾ ಎಂಬ ಚಿತ್ರೀಕರಣ ಸ್ಥಳದಲ್ಲಿಯೇ ಧ್ವನಿಗ್ರಹಣ ಮಾಡುವ (ವೇಗನಿಯಂತ್ರಣಕ್ಕಾಗಿ ಕ್ರಿಸ್ಟಲ್ ಎಂಬ ವಿಶೇಷ ಟೂಲ್ ಇರುವ ಈ ರೆಕಾರ್ಡರ್ ಜರ್ಮನ್ ದೇಶದ್ದು.) ಕ್ರಮ ಅಂದು ಅನೇಕ ಜನಪ್ರಿಯ ಸಿನಿಮಾ ತಯಾರಕರಿಂದ ನಗೆಪಾಟಲಾಗಿತ್ತು. ಆದರೆ ಇಂದು ಅದು ಎಲ್ಲಾ ಜನಪ್ರಿಯ ಚಿತ್ರತಯಾರಿಕೆಯಲ್ಲೂ ಬಳಸುತ್ತಿರುವ ಯಂತ್ರವಾಗಿದೆ. ಹೀಗೆ ಜನಪ್ರಿಯ ಚೌಕಟ್ಟಿನ `ಹೊರಗೆ’ ನಿಂತು ಮಾಡಿದ ಪ್ರಯೋಗಗಳು ಅದೇ ಜನಪ್ರಿಯ ಚಿತ್ರತಯಾರಿಕಾ ಉದ್ಯಮದಲ್ಲಿ `ಒಳಗಿನದೆಂದು’ ಆಗಿ ಹೋಗಿದೆ. 

ಗಿರೀಶ್ ಕಾಸರವಳ್ಳಿಯವರು ಈ ಗುಂಪಿನ ತೀರಾ ವಿಭಿನ್ನ ಮತ್ತು ಕನ್ಸಿಸ್ಟೆಂಟ್ ನಿರ್ದೇಶಕರು ಎಂದೆನ್ನಬಹುದು. ಇವರು ತಮ್ಮ ಚಿತ್ರ ಜೀವನದ ಆರಂಭದಲ್ಲಿ ತಯಾರಿಸಿದ `ಘಟಶ್ರಾದ್ಧ’, `ಮೂರು ದಾರಿಗಳು’, `ಆಕ್ರಮಣ’ ಸ್ಪಷ್ಟವಾಗಿ ಪ್ರೇಕ್ಷಕರ ಬುದ್ಧಿಪ್ರಯೋಗವನ್ನು ಬೇಡುವ ಬಗೆಯ ಚಿತ್ರಗಳಾಗಿದ್ದವು. ಅಂದರೆ ಚಿತ್ರವೊಂದರ ಪ್ರತಿ ಚಿತ್ರಿಕೆಯೂ ಧ್ವನಿಪೂರ್ಣವಾಗುವ ಯತ್ನ ಇಲ್ಲಿತ್ತು. ನಂತರ ಗಿರೀಶ್ ನಿರ್ದೇಶನದ `ತಬರನಕಥೆ’, `ಬಣ್ಣದವೇಷ’, `ಮನೆ’ ಮತ್ತೊಂದು ಬಗೆಯ ಚಿತ್ರಗಳು. ಇಲ್ಲಿ ಗಿರೀಶರು ಭಾವನೆಗಳನ್ನ ತೆರೆಯ ಮೇಲೆ ತರಲು ಬಣ್ಣಗಳನ್ನು ಬಳಸುವ ಪ್ರಯತ್ನ ಮಾಡಿದ್ದರು. `ತಬರನ ಕಥೆ’ ಯಲ್ಲಿದ್ದ ಹಳದಿ ಮತ್ತು ಕಂದು ಬಣ್ಣದ ಬಳಕೆ, `ಮನೆ’ ಚಿತ್ರದಲ್ಲಿ ಅರಿಶಿನವನ್ನೇ ಅನುಮಾನವನ್ನು ಸೂಚಿಸಲು ಬಳಸಿದ್ದು ಕಾಣಬಹುದು. ಅದಾದ ನಂತರ ಗಿರೀಶ್ ಪ್ರಯೋಗದ `ಕ್ರೌರ್ಯ’, `ತಾಯಿಸಾಹೇಬ’, `ದ್ವೀಪ’, `ಹಸೀನಾ’ ಗಳಲ್ಲಿ ಕೇವಲ ಸಂಕೇತ ಅಥವಾ ಬಣ್ಣಗಳಲ್ಲದೇ ಹೃದ್ಯವೆನಿಸುವ ಆರ್ದ್ರ ಸನ್ನಿವೇಶಗಳನ್ನೂ ಕಟ್ಟುವ ಪ್ರಯತ್ನ ಮಾಡಿರುವುದನ್ನು ಕಾಣಬಹುದು. ಗಿರೀಶರಲ್ಲಾದ ಈ ಪಲ್ಲಟಕ್ಕೆ ಪ್ರತಿಮಾತ್ಮಕ ನಿರೂಪಣಾ ಶೈಲಿಯಿಂದ ಭಾವಗೀತಾತ್ಮಕ ಶೈಲಿಗೆ ಪಯಣ ಎಂದು ಗುರುತಿಸಬಹುದು. ಇದು ಸಹ, ಈ ಲೇಖಕನ ಅನಿಸಿಕೆಯಂತೆ, ಜನಪ್ರಿಯ ಸಿನಿಮಾಗಳಲ್ಲಿದ್ದ ರೂಕ್ಷ ಮಾದರಿಗಳ ನವಿರುಗೊಂಡ ಬಳಕೆಯ ಕ್ರಮ. ಆದ್ದರಿಂದಲೇ `ದ್ವೀಪ’ ಮತ್ತು `ಹಸೀನಾ’ ಚಿತ್ರಗಳು ಗಿರೀಶರ ಇನ್ನಿತರ ಚಿತ್ರಗಳಿಗಿಂತ ಹೆಚ್ಚಿನ ಪ್ರೇಕ್ಷಕಾನುಭೂತಿಯನ್ನ ಪಡೆದವು ಎಂದೆನಿಸುತ್ತದೆ. ಈ ಪಲ್ಲಟದ ಮೂಲಕ ಸ್ವತಃ ಜನಪ್ರಿಯ ಮಾದರಿಗಳಿಂದ `ಹೊರಗೆ’ ಉಳಿದಿದ್ದವರು, ಅದರೊಳಗಿನ ಹೂರಣವನ್ನ ತಮ್ಮೊಳಗು ಮಾಡಿಕೊಳ್ಳುವುದನ್ನ ನಾವು ಗುರುತಿಸಬಹುದು. ಇದು ಈ ಮೊದಲು ನಾನು ಮಾತಾಡಿದ ಕ್ರಮಕ್ಕೆ ವೈರುಧ್ಯ ಅಥವಾ ಕಾಂಟ್ರಾಸ್ಟ್ ಎಂಬಂತೆ ಇದೆ. ಇಂತಹ ವಿವರಗಳನ್ನು ಹೊರತುಪಡಿಸಿದರೆ ಗಿರೀಶ್ ಕಾಸರವಳ್ಳಿಯವರ ಚಿತ್ರಗಳಲ್ಲಿ ಆದ ಪ್ರಯೋಗಗಳು ನಮ್ಮ ಜನಪ್ರಿಯ ಚಿತ್ರೋದ್ಯಮದಲ್ಲಿ ಪ್ರಭಾವ ಬೀರಿರುವುದು ಕಡಿಮೆ ಎನ್ನಬಹುದು.
ಒಟ್ಟಾರೆಯಾಗಿ ಈ ಎಲ್ಲಾ ನಿರ್ದೇಶಕರ ಪ್ರಯೋಗಗಳೂ ಆಗ ಇದ್ದ ಪ್ರಧಾನ ವಾಹಿನಿಯ ಚಿತ್ರಗಳಿಗೆ ಪರ್ಯಾಯ ಎಂಬಂತೆ ಒಂದರ್ಥಕ್ಕೆ `ಅಂಗಿ ಬದಲಿಸುವ ಪ್ರಕ್ರಿಯೆ’ಯಾಗಿ ಬಂದಂತಹವು. 
ಇವರೆಲ್ಲರ ಪ್ರಯೋಗದ ಫಲವಾಗಿ ಕನ್ನಡದಲ್ಲಿ ಇನ್ನೂ ಹಲವು ಹತ್ತು ನಿರ್ದೇಶಕರು ಬಂದಿದ್ದಾರೆ. ಅವರೆಲ್ಲರ ಹೆಸರು ಮತ್ತು ಕಾರ್ಯದ ಪಟ್ಟಿಕೆಯನ್ನು ಮಾಡುವುದು ಈ ಲೇಖನದ ಉದ್ದಿಶ್ಯವಲ್ಲವಾದ್ದರಿಂದ ಇಂದು ಈ ಚಳವಳಿಯಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಪಿ.ಶೇಷಾದ್ರಿ, ಕವಿತಾ ಲಂಕೇಶ್, ರಾಮದಾಸ್ ನಾಯ್ಡು, ಬಿ.ಸುರೇಶ ಮುಂತಾದವರನ್ನು ಮಾತ್ರ ಹೆಸರಿಸುತ್ತೇನೆ. ಈ ನಾಲ್ಕನೆಯ ತಲೆಮಾರಿನ ನಿರ್ದೇಶಕರ ಆಗಮನದ ಜೊತೆಗೆ ಮತ್ತೊಂದು `ಅಂಗಿ ಬದಲಿಸುವ ಪ್ರಕ್ರಿಯೆ’ ಆಗುತ್ತಿದೆ. ಅದು ಈ ಹೊಸ ನಿರ್ದೇಶಕರಿಗೆ ಇರುವ ಸಾಮಾಜಿಕ ಕಳಕಳಿ. `ಮುನ್ನುಡಿ’ಯಲ್ಲಿ ಮುಸ್ಲಿಮ್ ಭಾಂದವರ ಬದುಕಿನಲ್ಲಿ ಇರುವ ಅನೇಕ ಅಮಾನುಷ ಪದ್ಧತಿಗಳನ್ನ ಕುರಿತ ಮಾನವೀಯ ದೃಷ್ಟಿಕೋನದ ಚರ್ಚೆಯಿದ್ದರೆ, `ದೇವೀರಿ’ಯಲ್ಲಿ ಕೊಳೆಗೇರಿಯಲ್ಲಿ ಬದುಕುವ ಹುಡುಗನೊಬ್ಬನ ಅನುಭವ ಬಿಚ್ಚಿಕೊಳ್ಳುತ್ತದೆ. `ಅರ್ಥ’ದಲ್ಲಿ ಸಾಮಾಜಿಕ ಹಿಂಸೆಗೆ ಕೌಟುಂಬಿಕ ಹಿಂಸೆಯೇ ಕಾರಣ ಎಂಬ ಒಳನೋಟ ಇದ್ದರೆ, `ಪ್ರವಾಹ’ದಲ್ಲಿ ಜಾಗತೀಕರಣದ ಪ್ರಭಾವದಲ್ಲಿ ಕುಂಬಾರರು ಅನುಭವಿಸುವ ಕಷ್ಟ ಕುರಿತ ಮಾತಿದೆ. ಅಂದರೆ `ಅಂಗಿ ಬದಲಿಸುವ ಪ್ರಕ್ರಿಯೆ’ಯು ಸಾಂಕೇತಿಕ ನಿರೂಪಣಾ ಸ್ಥಿತಿಯಿಂದ ಭಾವಜನ್ಯ ವಿವರಗಳಿಗೆ ಸಾಗಿ ಬಂದಿದೆ. ಅಲ್ಲದೆ ಈ ಚಿತ್ರಗಳು ಪ್ರತಿಮಾತ್ಮಕ (ಇಮೇಜ್ ಓರಿಯೆಂಟೆಡ್) ಆಗುವ ಬದಲು ನೈಜವಾಸ್ತವ ಅಥವಾ ಫೋಟೋರಿಯಲಿಜಂ ರೀತಿಯ ನಿರೂಪಣಾ ತಂತ್ರವನ್ನ ಬಳಸಿರುವುದನ್ನ ನಾವು ಕಾಣಬಹುದು. (ಇದಕ್ಕೆ ಟೆಲಿವಿಷನ್ನಿನ ಪ್ರಭಾವ ಸಹ ಕಾರಣವಾಗಿರಬಹುದು ಎಂಬ ಒಂದು ಅನುಮಾನ ಇದೆ.) ಆದ್ದರಿಂದಲೇ ಈ ಹೊಸ ತಲೆಮಾರಿನ ನಿರ್ದೇಶಕರ ಚಿತ್ರಗಳಲ್ಲಿ ಚಿತ್ರಿಕೆಯ ಕಲಾತ್ಮಕ ಸಂಯೋಜನೆಗಿಂತ ಕಥನದ ಓಘ ಮತ್ತು ಭಾವದ ಒತ್ತು ಎಲ್ಲಿರಬೇಕು ಎಂಬುದನ್ನ ಕುರಿತು ಈ ನಿರ್ದೇಶಕರು ಕಾಳಜಿ ವಹಿಸುವುದನ್ನ ನಾವು ಕಾಣಬಹುದು. (ಇದಕ್ಕಾಗಿ `ದೇವೀರಿ’ ಚಿತ್ರದ ಕೊಳೆಗೇರಿಯ ವಿವರಗಳು ತೆರೆಯ ಮೇಲೆ ಬಿಚ್ಚಿಕೊಳ್ಳುವ ಬಗೆಯನ್ನ, ಕುಂಬಾರನ ಮನೆಯ ಬಡತನದ ವಿವರ ನೀಡುವ `ಪ್ರವಾಹ’ ಚಿತ್ರದ ದೃಶ್ಯಗಳನ್ನ ಗಮನಿಸಬಹುದು.)

ಹೊಸಅಲೆಯ ಮಾರುಕಟ್ಟೆ ಪುರಾಣ
ಒಟ್ಟಾರೆಯಾಗಿ ಈ `ಅಂಗಿ ಬದಲಿಸುವ’ ಮತ್ತು ಹೊಸ ಸಮಾಜಕ್ಕೆ ಬೇಕಾದ ಸದಭಿರುಚಿಯ ಚಿತ್ರ ತಯಾರಿಸುವ ಯತ್ನ ನಿರಂತರವಾಗಿ ನಡೆಯುತ್ತಿದೆ. ಆದರೆ ಇಂತಹ ಪ್ರಯೋಗಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾತ್ರ ಕಾಲದಿಂದ ಕಾಲಕ್ಕೆ ಹಿಂದಡಿಯಿಡುತ್ತಾ ಬಂದಿದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ೧೯೭೦ರ ದಶಕದ ಹೊಸ ಅಲೆಯ ಚಿತ್ರ ಚಳವಳಿಯ ಉಚ್ಛ್ರಾಯದ ಕಾಲದಲ್ಲಿ ಪ್ರಧಾನ ವಾಹಿನಿಯ ಚಿತ್ರಗಳು ಮತ್ತು ಸದಭಿರುಚಿಯ ಚಿತ್ರ ಚಳವಳಿಕಾರರ ನಡುವೆ ಹುಟ್ಟಿದ ಕಂದಕ. ಇದು ಅದಾವ ಅಗಾಧತೆಯನ್ನು ಪಡೆಯಿತೆಂದರೆ ಪ್ರಯೋಗಶೀಲ ಚಿತ್ರಗಳ ಪ್ರದರ್ಶನವೇ ಕಷ್ಟ ಎಂಬಂತಾಗಿತ್ತು. `ಸಂಸ್ಕಾರ’ದಂತಹ ಚಿತ್ರ ನೂರು ದಿನ ನಡೆದರೆ ಈಗ ಇಂತಹ ಚಿತ್ರಗಳನ್ನ ಬಿಡುಗಡೆ ಮಾಡುವ ವಿತರಕರೇ ಇಲ್ಲ. ಹೀಗಾಗಿ ಸದಭಿರುಚಿಯ ಚಿತ್ರ ಎಂಬುದು ಕೇವಲ ಪ್ರಶಸ್ತಿಯ ಪಟ್ಟಿಯಲ್ಲಿ ಮಾತ್ರ ಕಾಣಿಸಿಕೊಳ್ಳುವಂತಹದು ಎಂಬಂತಾಗಿದೆ. ಕೆಲವರು ಚಿತ್ರ ಸಮಾಜಗಳ ಮೂಲಕ ಸದಭಿರುಚಿಯ ಚಿತ್ರಗಳನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದರಾದರೂ ಆ ಪ್ರದರ್ಶನಗಳು ಪುಕ್ಕಟೆ ಪ್ರದರ್ಶನಗಳಾಗಿರುತ್ತಿದ್ದವು. ಇದರಿಂದಾಗಿ ತಯಾರಕನಿಗೆ ತಾನು ತೊಡಗಿಸಿದ ಹಣ ಹೆಗಲಿನ ಮೇಲೆ ಹೆಣಭಾರದಂತೆ ಉಳಿಯ ತೊಡಗಿತು. ಸದಭಿರುಚಿಯ ಚಿತ್ರ ಚಳವಳಿ ಹಣ ಹೂಡುವವರಿಲ್ಲದೆ ಸೊರಗತೊಡಗಿತು. ವರ್ಷಕ್ಕೊಂದು ಒಳ್ಳೆಯ ಚಿತ್ರ ತಯಾರಾಗುವುದು ಸಹ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಹಲವು ಗೆಳೆಯರು ತಾವು ತಯಾರಿಸಿದ ಚಿತ್ರಗಳನ್ನ ಬಹಳ ಕಷ್ಟಪಟ್ಟು ಚಿತ್ರಮಂದಿರ ಹೊಂದಿಸಿ ಬಿಡುಗಡೆ ಮಾಡುವ ಪ್ರಯತ್ನವನ್ನು ಮಾಡಿದರಾದರೂ ಅವು ಜನಪ್ರಿಯ ಚಿತ್ರಗಳ ಅಬ್ಬರದ ಪ್ರಚಾರದ ಎದುರು ಸೋಲನುಭವಿಸಬೇಕಾಯಿತು. ಈ ನಿಟ್ಟಿನಲ್ಲಿ ಪಿ.ಶೇಷಾದ್ರಿ ಅವರು ತಮ್ಮ ಚಿತ್ರವನ್ನು (ಮುನ್ನುಡಿ) ಮಂಗಳೂರಿನಲ್ಲಿ ಬಿಡುಗಡೆ ಮಾಡುವ ಯತ್ನ ಮಾಡಿದರು. ಮಂಗಳೂರಿನ ಜನತೆ ಆ ಚಿತ್ರವನ್ನು ಅಪರೂಪ ಎಂಬಂತೆ ಬೆಂಬಲಿಸಿದರಾದರೂ ಅಲ್ಲಿನ ಪ್ರದರ್ಶನ ಮಂದಿರದವರು ಚಿತ್ರವನ್ನ ಪ್ರೋತ್ಸಾಹಿಸುವ ಯತ್ನ ಮಾಡಲಿಲ್ಲ. ಈ ನಿಟ್ಟಿನಲ್ಲಿಯೇ ಮುಂಚೆ ಕನ್ನಡ ಚಿತ್ರ ಪ್ರದರ್ಶನಗಳಿಗೆ ಇದ್ದಂತಹ ಶೇಕಡಾವಾರು ಪದ್ಧತಿ ಸಹಾಯಕ್ಕೆ ಬರಬೇಕಿತ್ತು. ಅದು ಹೋಗಿ ಪ್ರದರ್ಶನ ಮಂದಿರಗಳಿಗೆ ವಾರದ ಬಾಡಿಗೆಯ ಪಧ್ಧತಿ ಜಾರಿಗೆ ಬಂದಿತು. ಇದು ಸದಭಿರುಚಿಯ ಚಿತ್ರ ಪ್ರದರ್ಶಕರಿಗೆ ಮಾತ್ರವಲ್ಲ. ಪ್ರಧಾನವಾಹಿನಿಯ ಚಿತ್ರ ತಯಾರಕರಿಗೂ ಮುಳುವಾಯಿತು. ಅತಿ ಹೆಚ್ಚು ಜನರನ್ನ ಆಕರ್ಷಿಸುವ ಚಿತ್ರಗಳು ಮಾತ್ರ ಬದುಕಿ, ಜನರನ್ನು ವಿವೇಚನೆಗೆ ಹಚ್ಚುವ ಸಿನೆಮಾಗಳು ಗರ್ಭಪಾತಕ್ಕೊಳಗಾಗತೊಡಗಿದವು. ಹೀಗಾಗಿಯೇ ಕರುನಾಡಿನಲ್ಲಿ ಬ್ರಿಡ್ಜ್ ಸಿನೆಮಾ ತಯಾರಕರೂ ಸಹ ಚಿತ್ರ ನಿರ್ಮಿಸುವುದು ಕಷ್ಟ ಎಂಬ ಪರಿಸ್ಥಿತಿ ಬಂದಿತು. ಸಿದ್ದಲಿಂಗಯ್ಯ ಮುಂತಾದ ಚಿತ್ರ ನಿರ್ದೇಶಕರು ಬಹುಬೇಗ ಹಿನ್ನೆಲೆಗೆ ಸರಿದುದಕ್ಕೆ ಇರಬಹುದಾದ ಕಾರಣವನ್ನು ಸಹ ನಾವಿಲ್ಲಿ ಕಾಣಬಹುದು.

ಈ ಪರಿಸ್ಥಿತಿಯಿಂದಾಗಿ ಸಾಮಾನ್ಯ ಜನ – ವಿಶೇಷವಾಗಿ ನಾಡಿನ ವಿದ್ಯಾವಂತ ಸಮುದಾಯ ಎಂಬುದು ಚಿತ್ರಮಂದಿರಗಳತ್ತ ಹೋಗುವುದನ್ನು ಸಹ ನಿಲ್ಲಿಸಿದರು. ಹೀಗಾದಾಗ ಸಿನಿಮಾ ನೋಡಲು ಬರುತ್ತಿದ್ದವರು ಕೇವಲ ಮನರಂಜನೆಯನ್ನಷ್ಟೆ ಬಯಸುತ್ತಿದ್ದ ಜನ. ಆ ಜನರ ಅಗತ್ಯಕ್ಕೆ ಎಂಬಂತೆ ನಮ್ಮ ಪ್ರಧಾನ ವಾಹಿನಿಯ ಚಿತ್ರರಂಗ `ಹೊಡಿ-ಬಡಿ-ಕಡಿ’ ಚಿತ್ರಗಳಿಂದ ಈಗ `ಮಚ್ಚು-ಕೊಚ್ಚು-ಬಿಚ್ಚು’ ಎಂಬರ್ಥದ ಸಿನಿಮಾ ತಯಾರಿಕೆಯವರೆಗೆ ಬಂದಿರುವುದನ್ನು ನಾವು ನೋಡಬಹುದು. ಇಂತಹ ಅಸಾಂಸ್ಕೃತಿಕ ವಾತಾವರಣದಲ್ಲಿ, ಪ್ರಧಾನವಾಹಿನಿಯಿಂದ `ಹೊರಗೆ’ ಇದ್ದವರ ಗತಿಯೇನು ಎಂದು ನೀವೇ ಊಹಿಸಬಹುದು.
ಗುಲ್ಬರ್ಗಾ ಪ್ರಯತ್ನ ನೆಸೆಸಿಟಿ ಈಸ್ ದ ಮದರ್ ಆಫ್ ಇನವೆನ್ಷನ್ ಎಂಬ ನಾಣ್ನುಡಿಯಿದೆ. ಯಾವ `ವ್ಯಾಪಾರಿ’ ಬಂಧಗಳಲ್ಲಿ ಸಿಕ್ಕಿಬಿದ್ದಾಗಲೂ ಮನುಷ್ಯ ಹೊಸತನ್ನ ಆಲೋಚಿಸುತ್ತಾನೆ. ಹಾಗೆ ಆದ ಆಲೋಚನೆಯ ಫಲಶೃತಿಯೇ ಗುಲ್ಬರ್ಗಾ ಫಿಲಂ ಕ್ಲಬ್. ಸದಭಿರುಚಿಯನ್ನು ಜನ ಬಯಸುವುದೇ ನಿಜವಾದರೆ ಜನರೇ ತಮಗೆ ಬೇಕಾದಂತಹ ಸಿನೆಮಾಗಳನ್ನು ನೋಡುವ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಗುಲ್ಬರ್ಗಾ ಫಿಲ್ಮ್ ಕ್ಲಬ್ ಒಂದು ಸಣ್ಣ ಪ್ರಯತ್ನ. ಇಲ್ಲಿ ಜನ ತಮಗೆ ಬೇಕಾದ ಸಿನೆಮಾವನ್ನು ತಾವೇ ಆರಿಸುತ್ತಾರೆ. ತಮ್ಮದೇ ಚಿತ್ರ ಮಂದಿರದಲ್ಲಿ ಅದನ್ನು ನೋಡುತ್ತಾರೆ. ಇದು ಸಾಮುದಾಯಿಕ ಎಚ್ಚರದಿಂದ ಆಗಿರುವಂತಹ ಬದಲೀ ವ್ಯವಸ್ಥೆ. ಅದಾಗಲೇ ನಾನು ತಿಳಿಸಿದ `ಅಂಗಿ ಬದಲಿಸುವ’ ಪ್ರಕ್ರಿಯೆ ಈಗ ತಯಾರಕರಿಂದ ಪ್ರೇಕ್ಷಕರ ಅಂಗಳಕ್ಕೆ ಜಿಗಿದಿದೆ. ಪ್ರೇಕ್ಷಕ ತನ್ನ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ತಾನೇ ಮಾಡುತ್ತಿದ್ದಾನೆ.

ಇದು ಕೇವಲ ಗುಲ್ಬರ್ಗಾದಲ್ಲಿ ಅಲ್ಲ, ಈ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕ ಕೇಂದ್ರಗಳಲ್ಲಿ ಆಗಬೇಕು. ಜನ ತಮ್ಮ ಮಕ್ಕಳನ್ನು ಸಾಂಸ್ಕೃತಿಕವಾಗಿ ರೂಪಿಸಬೇಕಾದ ಹಿನ್ನೆಲೆಯಿಂದ ಎಲ್ಲಾ ಚಚ್ಚರಗಳೊಂದಿಗೆ ಒಳ್ಳೆಯ ಸಿನೆಮಾ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬೇಡಿದ್ದು ದೊರೆಯುತ್ತದೆ ಎಂಬಂತೆ ನಮ್ಮ ಬಯಕೆಗಳನ್ನು ಈಡೇರಿಸುವಂತಹ ಸಿನೆಮಾಗಳು ತಯಾರಾಗುತ್ತವೆ. ಅವು ನಮ್ಮೆದುರಿಗೆ ಬಂದೂ ತೀರುತ್ತವೆ. ಆ ನಿಟ್ಟಿನಲ್ಲಿ ಸಾಗೋಣ. ಈ ಸಮಾಜಕ್ಕೆ ನಮ್ಮಿಂದಾಗುವಷ್ಟು ಒಳಿತನ್ನು ಮಾಡೋಣ.

Advertisements

0 Responses to “ಸದಭಿರುಚಿಯ ಚಲನಚಿತ್ರ ಮಾರುಕಟ್ಟೆ – ಗುಲ್ಬರ್ಗಾ ಫಿಲ್ಮ್ ಕ್ಲಬ್ನ ಪ್ರಯತ್ನ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: