ಸದಭಿರುಚಿ- ಸಾಮಾಜಿಕ ಬದ್ಧತೆ ಮತ್ತು ಚಲನಚಿತ್ರ ತಯಾರಿಕೆ

ಹೀಗೊಂದು ಚಿಂತನೆಯ ಹುಳು ನನ್ನ ತಲೆ ಹೊಕ್ಕಿದ್ದಕ್ಕೆ ಕಾರಣಗಳಿದೆ. ಕೆಲದಿನಗಳ ಹಿಂದೆ ಸದಭಿರುಚಿಯ ಚಲನಚಿತ್ರಗಳ ತಯಾರಿಕೆಯನ್ನು ಕುರಿತು ಮಾತು ನಡೆಯುತ್ತಿತ್ತು, ಗೆಳೆಯರ ನಡುವೆ. ಆ ಗುಂಪಲ್ಲಿ ಒಂದಿಬ್ಬರು ಜನಪ್ರಿಯ ಚಿತ್ರ ತಯಾರಕರೂ ಇದ್ದರು. ಗುಂಪಿನ ನಡುವೆ ಹೀಗೆ ಬಹುಮುಖಿ ಚಿಂತಕರು ಇರುವುದೇ ನವ್ಯೋತ್ತರ ಸಮಾಜ ರಚನೆಯ ವೈಶಿಷ್ಟ್ಯ ಅಲ್ಲವೇ? ಇಲ್ಲಿ ಭರತನಾಟ್ಯ ಕಲಾವಿದರೊಬ್ಬರು ಓರಿಯೆಂಟಲ್ ದೇಶದ ಮೂಲದವರಾಗಿದ್ದು, ಹಾವ-ಭಾವಗಳು ಮಾತ್ರ ಸಾಂಪ್ರದಾಯಿಕ ಭರತನಾಟ್ಯದವಾಗಿದ್ದು, ಅವರ ಉಳಿದೆಲ್ಲಾ ವಿವರಗಳು ಜಗತ್ತಿನ ನಾನಾ ಮೂಲೆಗಳಿಂದ ಸಂಚಯಿತವಾದ ಪರಿಕರ-ಸಾಧನಗಳ ರಾಶಿಯಾಗಿರುತ್ತದೆಯಲ್ಲಾ! ಹಾಗೇ ಈ ನವ್ಯೋತ್ತರ ಸಮಾಜದ ಸಂರಚನೆಯಲ್ಲಿ, ಒಂದೇ ವೇದಿಕೆಯಲ್ಲಿ ತರಹೇವಾರಿ ಇಸಮ್ಮುಗಳು ಇರಬಹುದು. ಹಾಗಾಗಿಯೇ ಈ ಸಮಾಜದ ಕನವರಿಕೆಗಳು ಮತ್ತು ಕಳವಳಗಳು ಹಾಗೂ ಹೇವರಿಕೆಗಳು ವೈವಿಧ್ಯಮಯವಾಗಿರುತ್ತದೆ. ಅಂದಿನ ಆ ಸಭೆಯಲ್ಲಿಯೂ ಮಾತು ಹಲವು ಹತ್ತು ದಿಕ್ಕುಗಳಲ್ಲಿ ಹರಿದು, ಕಡೆಗೆ ಬಂದು ತಲುಪಿದ್ದು ಸದಭಿರುಚಿಯ ಚಿತ್ರಗಳನ್ನು ತಯಾರಿಸುವ ವಿವರಕ್ಕೆ.

ಈ ಸದಭಿರುಚಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವಂತಹದು. ಹೀಗಾಗಿಯೇ `ಲೋಕೋ ಭಿನ್ನರುಚಿಃ’ ಎಂಬ ಗಾದೆ ಕಾಲಾಂತರಗಳಿಂದ ಜೀವಂತವಾಗಿದೆ. ಅದು ಚಲನಚಿತ್ರ ರಂಗದಲ್ಲಿಯಂತೂ ಬಹಳ ಚೆನ್ನಾಗಿ ಬಳಕೆಯಲ್ಲಿದೆ. ಇಲ್ಲಿ ಎಲ್ಲವೂ ಕೇವಲ ಬಹುಮುಖಿಯಲ್ಲ. ಮೊದಲಿಗೆ ದ್ವಿಮುಖಿ. ನಂತರ ಹಲಮುಖಿ. ಇಟಲಿಯ ವಿಟ್ಟೋರಿಯಾ ಡಿ’ಸಿಕಾನ `ಬೈಸಿಕಲ್‌ಥೀವ್ಸ್’ನಿಂದ ಚಲನಚಿತ್ರ ತಯಾರಿಕೆಯಲ್ಲಿ ಹುಟ್ಟಿದ ನಿಯೋರಿಯಲಿಸಂ ಮತ್ತು ಪ್ರಾನ್ಸಿನಲ್ಲಿ ಐವತ್ತರ ದಶಕದಿಂದ ಆರಂಭವಾದ ಜೀನ್ ಲಕ್ ಗೋಡಾರ್ಡ್ ಮುಂತಾದವರಿಂದ ಆದ ಪ್ರಯೋಗಾತ್ಮಕ ಚಿತ್ರಗಳು ಜಾಗತಿಕ ಚಲಚ್ಚಿತ್ರ ತಯಾರಿಕೆಯನ್ನೇ ಎರಡು ಬಣವಾಗಿಸಿದವು. ಇದು ಸತ್ಯಜಿತ್‌ರಾಯ್ ಮತ್ತು ಋತ್ವಿಕ್ ಘಟಕ್ ಅವರ ಪ್ರಯೋಗಗಳಿಂದ ಭಾರತಕ್ಕೂ ಬಂದಿಳಿಯಿತು. ಭಾರತದಲ್ಲಿಯೂ ಜನಪ್ರಿಯ ಮತ್ತು ಪ್ರಯೋಗಾತ್ಮಕ ಎಂಬ ಎರಡು ಬಣಗಳನ್ನುಳ್ಳ ಚಿತ್ರ ತಯಾರಿಕೆ ಆರಂಭವಾಯಿತು. ಕನ್ನಡದಲ್ಲಿಯಂತೂ ಈ ವಿಭಾಗೀಕರಣ ಗೆರೆ ಕೊರೆದಂತೆ ಎಪ್ಪತ್ತರ ದಶಕದಿಂದಾಚೆಗೆ ಚಾಲ್ತಿಗೆ ಬಂತು. ಈ ಎಲ್ಲಾ ವಿವರಗಳನ್ನೂ ಸಿನಿಮಾಸಕ್ತರಾದ ತಾವೂ ಬಲ್ಲಿರಿ.

ಆದರೆ ಈ ಎಲ್ಲಾ ಪಲ್ಲಟಗಳ ಪರಿಣಾಮವಾಗಿ, ಇಂದು – ಯಾರು, ಯಾವ ಬಣದ ಚಿತ್ರತಯಾರಿಕೆಯ ಜೊತೆಗೆ ಗುರುತಿಸಿಕೊಂಡಿದ್ದಾರೋ ಅವರನ್ನು ಕಂಡಾಗ, ಮತ್ತೊಂದು ಬಣ ಹೀಗಳೆಯುವುದು ಅಥವಾ ಕಾಲೆಳೆಯುವುದು ನಡದೇ ಇರುತ್ತದೆ. ಇಬ್ಬರೂ ಚಿತ್ರ ತಯಾರಿಸುವುದು ಜನರಿಗೇ ಎಂಬುದೂ ತಿಳಿದಿದ್ದೂ ಇಬ್ಬರ ಮಡುವೆ ಮೂದಲಿಕೆಗಳು- ಕುಟುಕು-ಕಟಕಿಗಳ ವಾಗ್ಯುದ್ಧ ನಡೆದಿರುತ್ತದೆ. ಅಂತಹುದೇ ಮಾತು ನಾನು ಅದಾಗಲೇ ತಿಳಿಸದ `ಇಳಿಸಂಜೆ’ಯ ಸಭೆಯಲ್ಲಿಯೂ ಆರಂಭವಾಯಿತು. ಮಾತಿಗೆ ಮಾತು ಬೆಳೆದು ಯಾವ ಬಣದ ಚಿತ್ರ ಆರೋಗ್ಯಕರ? ಯಾರಿಂದ ಸಮಾಜಮುಖಿ ಕೆಲಸವಾಗುತ್ತಿದೆ ಎಂಬ ಹಂತಕ್ಕೆ ಬಂದು ತಲುಪಿದೆವು. ಉತ್ತರಗಳು ಗೊಂದಲವೇ ಆಗಿದ್ದವು.

ಆಗ ತಾನೇ ಬಿಡುಗಡೆಯಾಗಿದ್ದ ಅತೀ `ಜನಪ್ರಿಯ’ ಎಂದು ಕರೆಸಿಕೊಂಡಿದ್ದ ಸಿನಿಮಾ ಒಂದರಿಂದ ಆ ಚಿತ್ರ ತಯಾರಕ ಗಳಿಸಿದ ಲಾಭ ಇತ್ಯಾದಿಗಳನ್ನು ಹಿಡಿದು ಮಾತಾಡಿದ ಒಂದು ಬಣ; ಹೀಗೆ ಲಾಭ ಬಂದುದರಿಂದ ಎಷ್ಟು ಮನೆಗಳಲ್ಲಿ ದೀಪ ಉರಿದವು. ಎಷ್ಟು ಜನರ ಮಾರುಕಟ್ಟೆ ಹಿಗ್ಗಿತು, ಎಷ್ಟು ಸಿನಿಮಾ ಮಂದಿರಗಳ ಮಾಲೀಕರು ನೆಮ್ಮದಿ ಪಡೆದರು ಎಂಬ ವಾದ ಮುಂದಿಟ್ಟಿತು. ಮತ್ತೊಂದು ಬಣ ಮಾತಾಡುತ್ತಾ ಅಂತಹ ಸಿನಿಮಾ ಒಂದನ್ನು ನೋಡಿದ ಪ್ರೇಕ್ಷಕನಿಗೆ ದಕ್ಕಿದ್ದೇನು? ಅವನು ಕೊಟ್ಟ ದುಡ್ಡಿಗೆ ತಕ್ಕ ಮನರಂಜನೆಯಷ್ಟೇ ಮುಖ್ಯವೆಂದು ಬಿಟ್ಟರೆ ಪ್ರೇಕ್ಷಕನ ತಲೆಯಲ್ಲಿ ಉಳಿದುಕೊಂಡದ್ದು ಏನು? ಎಂಬ ಪ್ರಶ್ನೆ ಇರಿಸಿತು.  ಅಂತಿಮವಾಗಿ ಲಾಭ ಎಂದರೇನು ಎಂಬ ಚರ್ಚೆ ಶುರುವಾದಾಗ ಅಲ್ಲಿ ನಡೆದದ್ದು ಚರ್ಚೆಯಲ್ಲ. ಅದೇನಾಗಿರಬಹುದು ಎಂಬುದನ್ನ ತಾವು ಊಹಿಸಬಲ್ಲಿರಿ. ಆದರೆ ಅಲ್ಲಿ ಕೂತು ಎರಡು ಬಣಗಳ ಮಾತು ಕೇಳುತ್ತಿದ್ದ ನನ್ನನ್ನ ಹಲವು ಪ್ರಶ್ನೆಗಳು ಕಾಡತೊಡಗಿದವು. ಆ ಪ್ರಶ್ನೆಗಳನ್ನ ನಿಮ್ಮ ಎದುರಿಗೆ ಇರಿಸಿ, ನನ್ನ ತಲೆಯಲ್ಲಿರುವ ಕಾಯಿಕೊರಕ ಹುಳುವನ್ನ ತಮಗೂ ತಲುಪಿಸುತ್ತಿದ್ದೇನೆ. ಸ್ವೀಕರಿಸಿ. ಸಾಧ್ಯವಾದರೆ ವಿಸ್ತರಿಸಿ. ಚರ್ಚಿಸಿ.

ಲಾಭ ಎಂದರೇನು?
ಇದು ಕಾಲಾಂತರದಿಂದ ಮನುಷ್ಯನನ್ನ ಕಾಡುತ್ತಾ ಇರುವ ಪ್ರಶ್ನೆ. ಹೂಡಿದ ಬಂಡವಾಳಕ್ಕಿಂತ ಬಂದ ಆದಾಯವು ಹೆಚ್ಚಿದ್ದರೆ, ಬಂದ ಹಣದಲ್ಲಿ ಹೂಡಿಕೆಯನ್ನು ಕಳೆದು ಲಾಭ ಎನ್ನುತ್ತಾರೆ ಎಂದು ಪ್ರಾಥಮಿಕ ಹಂತದ ವಾಣಿಜ್ಯ ಪಠ್ಯಗಳು ಹೇಳುತ್ತವೆ. ಹಾಗೇ ಲಾಭದ ಲೆಕ್ಕ ಹಿಡಿದು ಬೆಳೆದಿರುವ ನಮ್ಮ ಅರ್ಥಶಾಸ್ತ್ರ ಇಂದು ಅನೇಕ ವಿಸ್ತಾರಗಳನ್ನು ಪಡೆದುಕೊಂಡಿದೆ. ಆದರೆ ಈ ಲಾಭಗಳಿಕೆಯ ಹುನ್ನಾರವೂ ಆಡಂಸ್ಮಿತ್‌ನ ಮೂಲಭೂತ ಅರ್ಥಶಾಸ್ತ್ರದ ಹಂತವನ್ನು ದಾಟಿ ಇಂದು ತಲುಪಿರುವುದನ್ನ ಗಮನಿಸಿದರೆ, ಲಾಭ ಮತ್ತು ನೆಮ್ಮದಿಗಳು ಜೊತೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾದಾಗ ಲಾಭ ಮಾಡಲೆಂದು ಹಣ ಹೂಡಿದವನು ಅಂತಿಮವಾಗಿ ಪಡೆಯುವುದು ಪೂರ್ಣ ಲಾಭವಾಗಿ ಉಳಿದಿರುವುದಿಲ್ಲ. (ಈ ಕುರಿತ ಹೆಚ್ಚಿನ ಓದಿಗೆ ಅಕ್ಷರ ಪ್ರಕಾಶನದ `ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು’ ಪುಸ್ತಕದಲ್ಲಿನ `ಅರ್ಥಶಾಸ್ತ್ರ’ ಕುರಿತ ಲೇಖನವನ್ನು ಓದಬಹುದು) ಹೀಗಾದಾಗ ಲಾಭ ಹುಡುಕುತ್ತಾ ನೆಮ್ಮದಿ ಕಳೆದುಕೊಳ್ಳುವುದಷ್ಟೆ ಇಂದು `ಲಾಭ’ ಎಂದಾಗಿದೆ.

ಈ ಪರಿಸ್ಥಿತಿಯಲ್ಲಿ ನಮ್ಮ ಜನಪ್ರಿಯ ಸಿನಿಮಾಗಳು ಲಾಭಗಳಿಸುವ ಪ್ರಯತ್ನದಲ್ಲಿ ತಯಾರಿಸುವುದು `ಜೋಗಿ’, `ದುನಿಯಾ’ಗಳನ್ನ. ಇಂತಹ ಸಿನಿಮಾಗಳಿಂದ ಆದ ಆಗಾಧ ಲಾಭವನ್ನ ಕುರಿತು ಮಾತಾಡಹೊರಟರೆ, ಹಣ ಹೂಡಿದವನಿಗೆ ನಿವ್ವಳ ಲಾಭ ಎಂಬುದು ಯಾವ ಮಟ್ಟದ್ದು, ಎಲ್ಲಾ ತೆರಿಗೆಗಳನ್ನ (ನ್ಯಾಯಯುತವಾಗಿ) ಕಟ್ಟಿದ ನಂತರ ಉಳಿಯುವುದು ಶೇಕಡ ಹತ್ತರಷ್ಟು ಇರುವುದಿಲ್ಲ. ಅದೇ ಸಮಯದಲ್ಲಿ ಇಂತಹ ಸಿನಿಮಾಗಳನ್ನ ನೋಡಿದ ಪ್ರೇಕ್ಷಕರೆಲ್ಲರೂ ಹಳ್ಲಿಯಿಂದ ನಗರಕ್ಕೆ ವಲಸೆ ಬಂದವರೆಲ್ಲರೂ ರೌಡಿಗಲಾಗುತ್ತಾರೆ, ಕಡೆಯಲ್ಲಿ ಭರ್ಬರವಾಗಿ ಸಾಯುತ್ತಾರೆ ಎಂಬುದಷ್ಟನ್ನೇ ತಲೆಯಲ್ಲಿ ಉಳಿಸಿಕೊಂಡು ಬಿಡುತ್ತಾರೆ. ಇದು ನಾವು ಹುಡುಕುತ್ತಾ ಇರುವ ಲಾಭವೂ ಅಲ್ಲ, ನೆಮ್ಮದಿಯೂ ಅಲ್ಲ. ಈ ಹಂತದಲ್ಲಿ ಬರುವ ಪ್ರಶ್ನೆಯೇ ಕಲೆ ಮತ್ತು ಸಮಾಜದ ನಡುವಿನ ಸಂಬಂಧ ಎಂತಹುದು ಎನ್ನುವುದು.

ಕಲೆ ಮತ್ತು ಸಮಾಜ
ಕಲೆ ಎಂಬುದು ಎಲ್ಲಾ ಕಾಲಕ್ಕೂ ಸಮಾಜದ ಬೈ ಪ್ರಾಡಕ್ಟು. ನಮ್ಮ ಸುತ್ತಲ ಸಮಾಜ ನಮ್ಮೊಳಗೆ ಇಟ್ಟಿದ್ದನ್ನೆ ಎಲ್ಲಾ ಕಲಾಪ್ರಾಕಾರಗಳು ತಮ್ಮ ದೃಷ್ಟಿಕೋನದ ಮೂಲಕ ಪ್ರೇಕ್ಷಕರ ಮುಂದೆ ಇರಿಸುತ್ತವೆ. ಇದನ್ನು ನಾವು ರಂಗಭೂಮಿ, ಸಿನಿಮಾ ಮತು ಟೆಲಿವಿಷನ್ ಮಾಧ್ಯಮದಲ್ಲಿಯೂ ಕಾಣಬಹುದು. ಆದರೆ ಕಳೆದ ಎರಡು ದಶಕಗಳಿಂದ ನಮ್ಮ ದೇಶವನ್ನು ಕಾಡುತ್ತಿರುವ ಕೊಳ್ಳುಬಾಕ ಸಂಸ್ಕೃತಿ ಎಂಬುದು ನಮ್ಮ ಟೆಲಿವಿಷನ್ ಮಾಧ್ಯಮದಲ್ಲಿ ಮೊದಲು, ನಂತರ ಜನಪ್ರಿಯ ಸಿನಿಮಾದಲ್ಲಿ ಕಥನ ಸೃಷ್ಟಿಯ ದಿಕ್ಕನ್ನೇ ಬದಲಿಸಿಬಿಟ್ಟಿವೆ. ಇವೆರಡೂ ಮಾಧ್ಯಮಗಳಲ್ಲಿ ಸಿನಿಮಾ ನೋಡುಗನಿಗೆ ನಾಯಕನ ಯಾ ನಾಯಕಿಯ ಮೂಲಕ ಫ್ಯಾಷನ್ ಮತ್ತು ಕನಸುಗಳನ್ನ ಮಾರಿದರೆ, ಟೆಲಿವಿಷನ್ ಇಡಿಯಾಗಿ ಸೋಪು, ಷಾಂಪುಗಳಂತಹ ಸಾಮಗ್ರಿಗಳನ್ನು ಮಾರುತ್ತಾ ಇದೆ. ಇದರಿಂದಾಗಿ ಟೆಲಿವಿಷನ್ ಮಾಧ್ಯಮದಲ್ಲಿ ದುಡಿಯುವವರೆಲ್ಲಾ ಬಹುತೇಕ ದಿನಸಿ ಅಂಗಡಿಯ ಮಾಲೀಕರಂತೆಯೇ ಕಾಣುತ್ತಾ ಇದ್ದಾರೆ. ಹೀಗಾದಾಗ ಇಂತಹ ಮಾಧ್ಯಮಗಳು ಸಮಾಜಕ್ಕೆ ಏನನ್ನು ಕನ್ನಡಿಯಾಗಿ ಇರಿಸುತ್ತವೆ ಎಂಬುದೇ ಪ್ರಶ್ನೆಯಾಗುತ್ತದೆ. ಇಂತಹ ಮಾರಾಟದ ಸರಕಿನಿಂದ ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನಾವು ಮನರಂಜನೆಯ ಹೆಸರಲ್ಲಿ ನೀಡುತ್ತಾ ಇರುವುದು ತನ್ನ ಬಳಿ ಇಂತಹ ಕಾರಿಲ್ಲ, ದಿರಿಸಿಲ್ಲ, ಮನೆಯಿಲ್ಲ, ಸುಂದರ ಹೆಂಡತಿಯಿಲ್ಲವೆಂಬ ಹತಾಷೆ ಮತ್ತು ಅದನ್ನೆಲ್ಲಾ ಪಡೆಯಲು ಏನಾದರೂ ಮಾಡಲೇಬೇಕು ಎಂಬ `ಕ್ರೌರ್ಯ’ದ ಕನಸು. (ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿರುವ ಕ್ರೌರ್ಯ ಕುರಿತಂತೆ ಪ್ರತ್ಯೇಕವಾಗಿ ಅನೇಕ ಚರ್ಚೆಗಳಾಗಿದ್ದಾವೆ. ಅವುಗಳನ್ನ ವಿವರಗಳಿಗೆ ಗಮನಿಸಿ). ಪರಿಸ್ಥಿತಿ ಹೀಗಿರುವಾಗ ಕಲಾವಿದನಿಗೆ ಇರಬೇಕಾದ ಸಾಮಾಜಿಕ ಬದ್ಧತೆಯು ಎಂತಹುದು ಎಂಬ ಪ್ರಶ್ನೆ ಎದುರಾಗುತ್ತದೆ.

ನಾನು ಚಿತ್ರ ತಯಾರಿಕೆಯನ್ನು ಕಲಿತಿದ್ದೇನೆ ಮತ್ತು ಜನ ಮೆಚ್ಚುವ ಸಿನಿಮಾ ಮಾಡುತ್ತೇನೆ ಎಂದು ಹೊರಟವನು ಹಿಂದೆ ತಿಳಿಸಿದಂತಹ ಜನಪ್ರಿಯ ಚಿತ್ರಗಳ (ಮೇಲೆ ನಾನು ಸೂಚಿಸಿದ ಸಿನಿಮಾಗಳಲ್ಲದೆ ಇನ್ನೂ ಹಲವು ಮಾದರಿಗಳಿವೆ. ಅವುಗಳನ್ನು ಕನ್ನಡ ಚಿತ್ರನಗರಿಯ ಮಾರುಕಟ್ಟೆಯಾದ ಗಾಂಧಿನಗರದ ಭಾಷೆಯಲ್ಲಿ ಹೇಳುವುದಾದರೆ ಅಕ್ಕ-ತಂಗಿ ಸೆಂಟಿಮೆಂಟ್, ತಾಯಿ-ಮಗ ಸೆಂಟಿಮೆಂಟ್, ಗಂಡ-ಹೆಂಡತಿ ಸೆಂಟಿಮೆಂಟ್, ಇತ್ಯಾದಿ ಸಂಬಂಧಧಾರಿತ ಕಣ್ಣೀರಿನ ಧಾರೆಗಳಿವೆ.) ಮಾದರಿಯನ್ನು ಅನುಸರಿಸಿದಲ್ಲಿ ಅದರಿಂದ ಈ ಸಮಾಜಕ್ಕೆ ಕೊಡುಗೆಯಾಗುವುದರ ಬದಲು ಅಪಾಯ ಆಗಿಬಿಡುವ ಸಾಧ್ಯತೆಯೇ ಹೆಚ್ಚು. ಹಾಗಾದರೆ ಸಾಮಾಜಿಕ ಬದ್ಧತೆ ಎಂದರೇನು?

ಪ್ರತಿ ಸಂಸ್ಕೃತಿಯಲ್ಲಿಯೂ ನಂಬಿಕೆಗಳು ಬದಲಾಗಬಹುದು. ಆದರೆ ಎಲ್ಲಾ ಸಂಸ್ಕೃತಿಗಳು ಸೃಷ್ಟಿಸಿದ ಸಮಾಜಗಳು ಹುಡುಕುವುದು ಮನುಷ್ಯನ ಮಾನಸಿಕ ಸ್ವಾಸ್ಥ್ಯವನ್ನ. ನಮ್ಮ ಎಲ್ಲಾ ಕೆಲಸ ಕಾರ್ಯಗಳು, ನಾವು ಸೃಷ್ಟಿಸುವ ಕಲಾಭಿವ್ಯಕ್ತಿಗಳು ಈ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನೇ ಮಾಡಬೇಕು. ಈ ನಿಟ್ಟಿನಲ್ಲಿ ಮನುಷ್ಯನ ಮನಸ್ಸಿಗೆ ಕೇವಲ ಆಹ್ಲಾದವಲ್ಲದೆ, ಅವನು ಬದುಕುವ ಪರಿಸರ, ಅವನ ಸುತ್ತಲ ಸಾಮಾಜಿಕ, ಆರ್ಥಿಕ, ರಾಜಕೀಯ ಜಗತ್ತಿನಲ್ಲಿ ಆಗುತ್ತಾ ಇರುವ ವಿವರಗಳನ್ನ ಮನುಷ್ಯನ ಎದುರಿಗೆ ಯಥಾವತ್ತಾಗಿ ಇರಿಸಿ, ಅವನು ಬದಲಾಗಲು ಅಥವಾ ತನ್ನ ಭವಿಷ್ಯವನ್ನ ರೂಪಿಸಿಕೊಳ್ಳಲು ಅಥವಾ ತನ್ನ ಜೀವನ ಕ್ರಮದಲ್ಲಿ ಇರಬಹುದಾದ ತಪ್ಪುಗಳನ್ನ ಬಿಟ್ಟುಕೊಡುವಂತೆ ಪ್ರೇರೇಪಿಸುವುದು ಪ್ರತಿಯೊಬ್ಬ ಆಯಾ ಸಮಾಜದ ಕಾರ್ಯಕರ್ತನ ಮೂಲ ಉದ್ದಿಶ್ಯ. ಇಂತಹ ಕೆಲಸ ಮಾಡುವುದನ್ನ ಸಾಮಾಜಿಕ ಬದ್ಧತೆಯ ಕೆಲಸ ಅನ್ನಬಹುದು. ಹಾಗಾದರೆ ಜನಪ್ರಿಯ ಸಿನಿಮಾದಲ್ಲಿ ಇವು ಇಲ್ಲವೇ? ಇದೆ. ಆದರೆ ಅಲ್ಲಿ ಒಬ್ಬ ವ್ಯಕ್ತಿ ರಕ್ತಪಾತಕ್ಕೆ ಇಳಿಯಬಾರದು ಎಂದು ಹೇಳುವುದಕ್ಕಾಗಿ ರಕ್ತಪಾತದ ವೈಭವೀಕರಣವಾಗುತ್ತದೆ. ಅನೈತಿಕ ಸಂಬಂಧದಿಂದ ಮಾರಣಾಂತಿಕ ಖಾಯಿಲೆ ಬರುತ್ತದೆ ಎಂದು ಹೇಳುವುದಕ್ಕೆ ಅನೈತಿಕ ಸಂಬಂಧದ ವಿವರಗಳ ವೈಭವೀಕರಣವಾಗುತ್ತದೆ. ಯಾವುದೋ ದೇವರು-ನಂಬಿಕೆಯನ್ನು ಕುರಿತು ಮಾತಾಡುವುದಕ್ಕೆ ಪವಾಡಗಳ ವೈಭವೀಕರಣವಾಗುತ್ತದೆ. ಇಂತಹ ಚಿತ್ರ ನೋಡುವವನ ಮನಸ್ಸಲ್ಲಿ ವೈಭವೀಕೃತ ವಿವರಗಳು ಅದೆಷ್ಟು ಢಾಳಾಗಿ ಉಳಿಯುತ್ತವೆ ಎಂದರೆ ಚಿತ್ರವೊಂದರ ಅಂತ್ಯದಲ್ಲಿ ಬರುವ ಸಂದೇಶ ತಲುಪಬೇಕಾದ ಗಮ್ಯವನ್ನು ತಲುಪುವುದೇ ಇಲ್ಲ. ಆದ್ದರಿಂದ ಜನಪ್ರಿಯ ಸಿನಿಮಾಗಳನ್ನ ಸಾಮಾಜಿಕ ಬದ್ಧತೆಯುಳ್ಳ ಸಿನಿಮಾಗಳು ಎಂದು ಹೇಳಲಾಗದು. ಹಾಗೆಂದ ಕೂಡಲೇ ನಮ್ಮ ಚಲನಚಿತ್ರರಂಗದ ಮತ್ತೊಂದು ಬಣವಾದ ಕಲಾತ್ಮಕ ಚಿತ್ರಗಳೆಲ್ಲಾ ಸಾಮಾಜಿಕ ಬದ್ಧತೆಯನ್ನುಳ್ಳ ಚಿತ್ರಗಳೇ ಎಂಬ ಪ್ರಶ್ನೆ ಎದುರಾಗುತ್ತದೆ.

ಕಲಾತ್ಮಕ ಚಿತ್ರಗಳು ಮತ್ತು ಸಾಮಾಜಿಕ ಬದ್ಧತೆ
ಇದು ಸ್ವಲ್ಪ ಕಷ್ಟದ ಪ್ರಶ್ನೆ. `ನಮ್ಮಲ್ಲಿರುವ ಕಲಾತ್ಮಕ ಚಿತ್ರತಯಾರಕರೆಲ್ಲಾರೂ ಸಾಮಾಜಿಕ ಬದ್ಧತೆಯನ್ನುಳ್ಳವರೇ?’ ಎಂದಾಗ ಸಮಸ್ಯೆ ಶುರುವಾಗುತ್ತದೆ. ಪ್ರತಿಯೊಬ್ಬ ಇಂತಹ ಕಲಾತ್ಮಕ ಎಂಬ ಹಣೆಪಟ್ಟಿಯ ಚಿತ್ರ ತಯಾರಿಸುವವನಿಗೂ ಅವನದ್ದೇ ಆದ ಶ್ರದ್ಧೆಗಳು ಮತ್ತು ನಂಬಿಕೆಗಳು ಇರುತ್ತವೆ. ಭಾರತದಂತಹ ಬಹುಮುಖಿ ಸಮಾಜದಲ್ಲಿಯಂತೂ ಒಂದು ನಂಬಿಕೆ ಮತ್ತೊಂದಕ್ಕೆ ವೈರುಧ್ಯವಾಗಿಯೇ ಕೆಲಸ ಮಾಡುವಂತಹದು. ಯಾವುದನ್ನೂ ಯಾವುದರ ಎದುರಿಗೆ ಇಟ್ಟರೂ ಚರ್ಚೆಗಳು, ಗೊಂದಲಗಳು ಏಳುತ್ತವೆ. ಈ ಹಿನ್ನೆಲೆಯಲ್ಲಿ ಮಾನವೀಯ ಮೌಲ್ಯ ಎನ್ನುತ್ತಲೇ ರಾಮಮಂದಿರ ಕಟ್ಟುವೆವು ಎನ್ನುವುದು ಎಷ್ಟು ಅಪಾಯಕಾರಿಯೋ? ಅಷ್ಟೇ ಅಪಾಯಕಾರಿಯಾದ್ದು ವಿಶೇಷ ಆರ್ಥಿಕ ವಲಯದ ಹೆಸರಲ್ಲಿ ಜನರನ್ನ ನಿರ್ಗತಿಕರನ್ನಾಗಿಸುವುದು. ಹೀಗಾಗಿಯೇ ಬದ್ಧತೆ ಎನ್ನುವುದು ಸಹ ಇಂದು ಅನುಮಾನದ ಪ್ರಶ್ನೆ ಮತ್ತು ಯಾವುದಕ್ಕೆ ಬದ್ಧತೆ ಎಂಬ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

ಸಧ್ಯಕ್ಕೆ ಮಾನವೀಯ ನೆಲೆಯಲ್ಲಿ ಈ ಸಮಾಜದ ಸ್ವಾಸ್ಥ್ಯ ಕಾಯುವ ಕೆಲಸ ಎಲ್ಲಾ ವಲಯಗಳಿಂದ ಆಗಬೇಕಿದೆ. ಮೊದಲಿಗೆ ಜನಪ್ರಿಯ, ಕಲಾತ್ಮಕ ಎಂಬ ಗುಂಪುಗಾರಿಕೆಗಳನ್ನು ತೊಡೆವ ಕೆಲಸ ಆಗಬೇಕು. ಒಂದು ಇನ್ನೊಂದಕ್ಕೆ ಪೂರಕವಾಗಿ ಮತ್ತು ಸಂವಾದಿಯಾಗಿ ಬೆಳೆಯುವಂತಾಗಬೇಕು. ಆಗ ಆರೋಗ್ಯವಂತ ಮನಸ್ಸುಗಳು ಸಿನಿಮಾ ತಯಾರಿಕೆಯಲ್ಲಿ ತೊಡಗುತ್ತವೆ. ಮನಸ್ಸಿನ ಆರೋಗ್ಯ ಅವರವರು ತಯಾರಿಸುವ ಕೃತಿಯ ಮೇಲೂ ಆರೋಗ್ಯದ ನೆರಳನ್ನು ಮೂಡಿಸುತ್ತದೆ. ಆ ಮೂಲಕ ಸಮಾಜದ ಆರೋಗ್ಯವೂ ಉಳಿಯುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಚಿತ್ರತಯಾರಿಕೆ ಎಂಬುದು ಕೇವಲ ಲಾಭಗಳಿಕೆಯ ಉದ್ದೇಶಕ್ಕಲ್ಲ. ಸಿನಿಮಾ ಒಂದರಿಂದ ಈ ಸಮಾಜಕ್ಕೆ ಆಗಬೇಕಾದ್ದು ಬೇಕಾದಷ್ಟಿದೆ. ಇಲ್ಲಿ ಕಲೆಗಾಗಿ ಕಲೆ ಅಲ್ಲ. ಸಮಾಜಕ್ಕಾಗಿ ಕಲೆ ಎಂದಾಗಬೇಕು. ಇಲ್ಲವಾದಲ್ಲಿ ಈ ಸಮಾಜದ ಬೈ ಪ್ರಾಡಕ್ಟ್ ಆದ ಸಿನಿಮಾ ಎಂಬ ಕಲಾಮಾಧ್ಯಮವೂ ಸಹ ಕೇವಲ ಮನರಂಜನಾ ಉದ್ದಿಮೆಯಾಗುತ್ತದೆ ಮತ್ತು ಸರ್ಕಸ್ ಅಥವಾ ವೃತ್ತಿ ರಂಗಭೂಮಿಯಂತೆ ಬಹುಬೇಗ ಅವನತಿಯ ಹಾದಿ ಹಿಡಿಯುತ್ತದೆ.

ಇವಿಷ್ಟು ಮಾತುಗಳು ನಿಮ್ಮಲ್ಲಿ ಒಂದಷ್ಟು ಪ್ರಶ್ನೆಗಳನ್ನ ಹುಟ್ಟಿಸಿದ್ದರೆ ಮತ್ತು ಆ ಪ್ರಶ್ನೆಗಳಿಂದ ಹೊಸ ಚರ್ಚೆ ಆಗುವುದಾದರೆ ನನ್ನ ಶ್ರಮ ಸಾರ್ಥಕ ಎಂದು ಭಾವಿಸುತ್ತೇನೆ. 

(ಶಿವಮೊಗ್ಗೆಯಲ್ಲಿ ನಡೆದ ಸಿನಿಮಾ ಕುರಿತ ವಿಚಾರಸಂಕಿರಣ ಒಂದರಲ್ಲಿ ಆಡಿದ ಮಾತುಗಳ ಲೇಖನ ರೂಪ)

Advertisements

0 Responses to “ಸದಭಿರುಚಿ- ಸಾಮಾಜಿಕ ಬದ್ಧತೆ ಮತ್ತು ಚಲನಚಿತ್ರ ತಯಾರಿಕೆ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: