ಇಂದಿನ ಆತಂಕಗಳು – ನಾಳಿನ ಕನಸುಗಳು

(ಟಿ.ವಿ.ಠೀವಿ ಪತ್ರಿಕೆಯ ಡಿಸೆಂಬರ್ ‘೦೮ ತಿಂಗಳ ಸಂಚಿಕೆಯ `ಸಂಘಸುಖ’ ಅಂಕಣಕ್ಕಾಗಿ ಬರೆದ ಲೇಖನ)

ಇಂದು ನಮ್ಮ ಮಾಧ್ಯಮಗಳು ಮುಂಬಯಿಯಲ್ಲಿ ಆದ ಭಯೋತ್ಪಾದನೆಯ ಸುತ್ತ ಗಿರಕಿ ಹೊಡೆಯುತ್ತಾ, ಭಾರತಕ್ಕೂ ಪಾಕಿಸ್ಥಾನಕ್ಕೂ ಆಗಬಹುದಾದ ಯುದ್ಧವನ್ನು ಕುರಿತು ಮಾತಾಡುತ್ತಾ, ಎಲ್ಲರ ನೆತ್ತಿಯ ಮೇಲೆ ಕತ್ತಿ ತೂಗುತ್ತಿದೆ ಎನ್ನುತ್ತಾ ಇರುವಾಗಲೇ ಜಗತ್ತಿನಾದ್ಯಂತ ಸದ್ದಿಲ್ಲದೆ ಮತ್ತೊಂದು ಭಯವು (ರೋಗವು) ಆವರಿಸಿಕೊಳ್ಳುತ್ತಾ ಇದೆ. ಅದು ಜಗತ್ತಿನ ಆರ್ಥಿಕ ಮಾರುಕಟ್ಟೆ ಕುಸಿತ. ಖಜಾನೆಗಳಲ್ಲಿ ದುಡ್ಡಿಲ್ಲ. ಬ್ಯಾಂಕುಗಳು  ಬಾಗಿಲು ಹಾಕುತ್ತಿವೆ. ಹಣದ ಮಾರುಕಟ್ಟೆಯಂತೂ ಬಹುತೇಕ ಕುಸಿದು ಬಿದ್ದಿದೆ. ಈ ವಿಷಯವು ಈಗ ಪತ್ರಿಕೆಗಳ ಮುಖಪುಟಗಳಲ್ಲಿ ಇಲ್ಲ. ಜನಪ್ರಿಯ ಮಾಧ್ಯಮಗಳಲ್ಲಿ (ಆರ್ಥಿಕ ಕಾರಣಕ್ಕಾಗಿ ಇರುವ ಪತ್ರಿಕೆಗಳು ಮತ್ತು ವಾಹಿನಿಗಳನ್ನು ಹೊರತುಪಡಿಸಿ) ಚರ್ಚಿತವಲ್ಲ. ಇದು ನಮ್ಮೆಲ್ಲರ ಬದುಕನ್ನು ಹೇಗೆ ತಲ್ಲಣಕ್ಕೆ ತಳ್ಳುತ್ತಿದೆ ಎಂದರೆ ಬಹುತೇಕರಿಗೆ ಸತ್ಯ ಗೊತ್ತಾಗುವುದಕ್ಕೆ ಮುನ್ನ ಆಘಾತಗಳಾಗುತ್ತಿವೆ. ಪ್ರಾಯಶಃ ಜಗತ್ತಿನಾದ್ಯಂತ ಇಂದು ಆಗುತ್ತಾ ಇರುವಷ್ಟು ಆತ್ಮಹತ್ಯೆಗಳು ಹಿಂದೆಂದೂ ಆಗಿರಲಿಲ್ಲ. ಅಷ್ಟೊಂದು ಜನ ಈ ಆರ್ಥಿಕ ಕುಸಿತದ ಭಾರದಿಂದ ನಲುಗುತ್ತಿದ್ದಾರೆ. ಗಂಡಂದಿರೇ ಹೆಂಡತಿಯನ್ನ ಕೊಂದು ತಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರುವುದು, ಸಾಲ ಭಾದೆಯನ್ನ ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರುವವರು. ಕೆಲಸ ಕಳೆದುಕೊಂಡು ದಿಕ್ಕುಗಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರುವವರು, ಕೆಲಸ ಕಳೆದುಕೊಂಡ ಅವಮಾನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚುತ್ತಿದೆ. ಇವೆಲ್ಲಕ್ಕೂ ಕಾರಣವೆಂಬಂತೆ ದೊಡ್ಡ ದೊಡ್ಡ ಕಂಪೆನಿಗಳು ಅನೇಕರನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ನೋಕಿಯಾದಂತಹ ಜಾಗತಿಕ ಲೀಡರ್‌ಗಳು ತಮ್ಮ ಕಂಪೆನಿಯಿಂದ ಲಕ್ಷಾಂತರ ಜನರನ್ನು ಮನೆಗೆ ಕಳಿಸಿವೆ. ನೆನ್ನೆಯವರೆಗೂ ಕೆಲಸವಿದ್ದವನು ಇವತ್ತು ಕೆಲಸವಿಲ್ಲದ ಸ್ಥಿತಿಗೆ ಬಂದಿರುವುದನ್ನು ಕಂಡಿದ್ದೇವೆ. ಇನ್ನು ಕಷ್ಟವಿಲ್ಲ ನನ್ನ ಜೀವನ ಸೆಟಲ್ಡ್ ಎಂದುಕೊಂಡಿದ್ದವರು ಅರ್ಧ ಸಂಬಳ ಪಡೆದು ಕಂಗಾಲಾಗಿದ್ದಾರೆ.

ಇವುಗಳಿಗೂ ನಮ್ಮ ಟೆಲಿವಿಷನ್ ಉದ್ಯಮಕ್ಕೂ ಏನು ಸಂಬಂಧ? ಇದನ್ನೆಲ್ಲಾ ನಮಗೇಕೆ ಹೇಳುತ್ತಿದ್ದಾನೆ ಇವನು? ಎಂದು ನಿಮಗನ್ನಿಸಬಹುದು. ನಮ್ಮ ಉದ್ಯಮಕ್ಕೂ ಈ ಆರ್ಥಿಕ ಕುಸಿತದ ಹೊಡೆತ ತಾಗುತ್ತಿದೆ. ಇಲ್ಲಿಯೂ ಜಾಗತಿಕವಾಗಿ ಆಗುತ್ತಾ ಇರುವುದೆಲ್ಲವೂ ಆಗಬಹುದಾದ ಸಾಧ್ಯತೆ ಇದೆ. ಅದಾಗಲೇ ದೊಡ್ಡ ಮೊತ್ತದ ಜಾಹೀರಾತುಗಳನ್ನು ನೀಡುತ್ತಿದ್ದ ಕಂಪೆನಿಗಳು ತಮ್ಮ ಜಾಹೀರಾತು ಬಜೆಟ್ ಇಳಿಸಿವೆ. ಇನ್ನೂ ಕೆಲವು ಕಂಪೆನಿಗಳು ಅದಾಗಲೇ ಪ್ರಸಾರವಾಗಿರುವ ಅವರ ಜಾಹೀರಾತುಗಳಿಗೆ ಸಾರಾಸಗಟಾಗಿ ಹಣ ನೀಡುವುದಿಲ್ಲ ಎಂದು ಹೇಳಿರುವ ಉದಾಹರಣೆಗಳಿವೆ. ಹೀಗಾಗಿ ನಮ್ಮ ಉದ್ಯಮಕ್ಕೆ ಬರುತ್ತಿದ್ದ ಆದಾಯ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಅದರ ಪರಿಣಾಮವಾಗಿ ಅನೇಕ ವಾಹಿನಿಗಳಿಗೆ ರಾಯಧನ ಪಡೆವ ಕಾರ್ಯಕ್ರಮವನ್ನು ಮಾಡುತ್ತಾ ಇರುವ ನಿರ್ಮಾಪಕರುಗಳಿಗೆ (ಇವರನ್ನು ನಿರ್ಮಾಪಕರು ಎನ್ನಲಾಗದು. ಇವರೆಲ್ಲರೂ ಕಾಂಟ್ರಾಕ್ಟ್ ಹೋಲ್ಡರ್‍ಸ್. ವಾಹಿನಿಗೆ ಕಾರ್ಯಕ್ರಮವನ್ನು ಒದಗಿಸುವವರು ಮಾತ್ರ ಇವರು. ಅದಕ್ಕಾಗಿ ಇವರೂ ಕೂಲಿಯನ್ನೇ ಪಡೆಯುವುದು. ಆದರೆ ನಮ್ಮಲ್ಲಿ ಬಹುತೇಕರು ಇಂತಹವರಾದ್ದರಿಂದ ಮತ್ತು ಇಂತಹವರು ತಮ್ಮ ಹೆಸರುಗಳನ್ನ ನಿರ್ಮಾಪಕರು ಎಂದೇ ದಾಖಲಿಸುವುದರಿಂದ ಇಲ್ಲಿಯೂ ಹಾಗೇ ಕರೆದಿದ್ದೇನೆ.) ವಾಹಿನಿಯವರು ಕೊಡಬೇಕಾದ ಹಣ ಕೊಡಲಾಗುವುದಿಲ್ಲ ಎಂದು ಹೇಳಬಹುದು. ನೀವು ಕೆಲಸ ಮಾಡುತ್ತಿದ್ದ ಕಾರ್ಯಕ್ರಮಗಳು ದಿಢೀರನೆ ನಿಂತು ಹೋಗಬಹುದು. ಇವೆಲ್ಲಕ್ಕೂ ಇಡೀ ತಂಡ ಸಿದ್ಧವಾಗಬೇಕಾದ ಅನಿವಾರ್ಯ ನಮ್ಮೆದುರಿಗಿದೆ. ಇನ್ನು ಪ್ರಾಯೋಜಿತ ಕಾರ್ಯಕ್ರಮವನ್ನು ಮಾಡುತ್ತಿರುವ ನಿರ್ಮಾಪಕರ ಸಂಕಷ್ಟ ಬೇರೆಯದು. ಅವರಿಗೆ ಜಾಹೀರಾತುದಾರರಿಂದ ಕೆಲವು ತಿಂಗಳುಗಳ ಹಿಂದೆ ಇದ್ದಂತೆ ಈಗ ಬೆಂಬಲ ಸಿಗುತ್ತಿಲ್ಲ. ಜಾಹೀರಾತುಗಳಿಗೆ ಈ ಹಿಂದೆ ಸಿಗುತ್ತಿದ್ದಂತಹ ಬೆಲೆಯೂ ಸಿಗುತ್ತಿಲ್ಲ. ಕೆಲವೇ ತಿಂಗಳ ಹಿಂದೆ ಕ್ರಿಕೆಟ್ಟಾಟದ ನಡುವಿನ ಹತ್ತು ಸಎಕೆಂಡುಗಳ ಜಾಹೀರಾತಿಗೆ ೧.೮ ಲಕ್ಷದಷ್ಟು ಹಣ ನೀಡುತ್ತಾ ಇದ್ದವರು ಈಗ ಕೇವಲ ಎಪ್ಪತ್ತೈದು ಸಾವಿರ ನೀಡುತ್ತಾ ಇದ್ದಾರೆ. ಇನ್ನೂ ಧಾರಾವಾಹಿಗಳ ನಿರ್ಮಾಪಕರು ಅನುಭವಿಸುತ್ತಿರುವ ಹೊಡೆತ ಎಂತಹದು ಎಂದು ಬೇರೆಯೇ ಹೇಳಬೇಕಾಗಿಲ್ಲ. ಅತೀ ಹೆಚ್ಚು ಜಾಹೀರಾತು ಹಣ ಪಡೆಯುವ ಉದಯ ವಾಹಿನಿಯಲ್ಲಿಯೇ ಪ್ರೈಮ್ ಟೈಮಿನಲ್ಲಿ ಈ ಹಿಂದೆ ಹತ್ತು ಸೆಕೆಂಡಿನ ಜಾಹೀರಾತಿಗೆ ಹದಿನೈದು ಸಾವಿರ ಪಡೆಯುತ್ತಾ ಇದ್ದವರು ಈಗ ಏಳೆಂಟು ಸಾವಿರಕ್ಕೆ ತೃಪ್ತಿ ಪಡಬೇಕಾದ ಪರಿಸ್ಥಿತಿ ಬಂದಿದೆ. ಇನ್ನೂ ಮಧ್ಯಾಹ್ನಗಳಲ್ಲಿ ಪ್ರಾಯೋಜಿತ ಕಾರ್ಯಕ್ರಮ ಮಾಡುತ್ತಿರುವವರ ಪಾಡು ಎಂತಹದಾಗಿರುತ್ತದೆ ಎಂಬುದನ್ನ ನೀವು ಊಹಿಸಬಲ್ಲಿರಿ.

ಈ ಎಲ್ಲಾ ಕಾರಣಗಳಿಂದಾಗಿ ಇಂದು ಎರಡು ವರ್ಗದ ಜನ ಕೂಡಲೇ ಎಚ್ಚರವಾಗಬೇಕಿದೆ. ಮೊದಲ ವರ್ಗ ಹಣ ಹೂಡುವವರದ್ದು. ಅವರುಗಳು ತಾವು ಹೂಡುವ ಹಣ ಮತ್ತು ಹಿಂದಕ್ಕೆ ಬರುಬಹುದಾದದ್ದು ಎಷ್ಟು ಎಂಬ ಸ್ಪಷ್ಟ ಮರುಅಂದಾಜು ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಎರಡನೆಯ ವರ್ಗದವರು ದಿನಗೂಲಿಯವರು. ಇವರಲ್ಲಿ ಅನೇಕ ಕಲಾವಿದರು, ಬರಹಗಾರರು, ನಿರ್ದೇಶಕರು ಮತ್ತು ದಿನ ಭತ್ತೆಗೆ ಕೆಲಸ ಮಾಡುವವರು ಬರುತ್ತಾರೆ. ಇವರಲ್ಲಿ ದಿನ ಭತ್ತೆಗೆ ಕೆಲಸ ಮಾಡುವವರಿಗಾಗಿ ಕಾರ್ಮಿಕ ಸಂಘಟನೆಗಳ ಕಾನೂನುಗಳು ಸಹಾಯಕ್ಕೆ ಬರುತ್ತವಾದ್ದರಿಂದ ಅವರಿಗೆ ದೊಡ್ಡ ಹೊಡೆತ ಬೀಳಲಾರದು. ಆದರೆ ಗೌರವಧನ ಪಡೆದು ಕೆಲಸ ಮಾಡುತ್ತಾ ಇರುವ ಕಲಾವಿದರು, ತಂತ್ರಜ್ಞರುಗಳು ಸಂಕಟಕ್ಕೆ ಸಿಲುಕಲಿದ್ದಾರೆ. ಪ್ರಾಯಶಃ ರಾಯಧನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನಿಮ್ಮ ಎದುರಿಗೆ `ಕಾಣಿಸುವ’ ನಿರ್ಮಾಪಕರುಗಳು ನಿಮ್ಮ ಸಂಬಳವನ್ನ ಕಡಿಮೆ ಮಾಡಿಕೊಳ್ಳಿ ಎಂದು ಕೇಳಬಹುದು. ಈ `ಕಾಣಿಸುವ’ ನಿರ್ಮಾಪಕರುಗಳ ನೆತ್ತಿಯ ಮೇಲಿರುವ ನಿಜವಾದ ನಿರ್ಮಾಪಕರು ಈ ಜನರಿಗೆ ನೀಡುವ ಹಣವನ್ನ ಕಡಿತಗೊಳಿಸಿದ್ದು ಕಾರಣವಾಗಬಹುದು. ಇನ್ನು ಪ್ರಾಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನೇರ ನಿರ್ಮಾಪಕರೇ ಸಂಬಳ ಕಡಿತಗೊಳಿಸುವ ಮಾತಾಡಬಹುದು. ಇದಕ್ಕೆ ಎಲ್ಲರೂ ಸಿದ್ಧವಾಗಬೇಕಾದ್ದು ಇಂದಿನ ಅನಿವಾರ್ಯ.

ಈ ಹೊಡೆತಗಳು ನಮ್ಮ ಉದ್ಯಮಕ್ಕೆ ಬಹುಬೇಗ ಬರಲಿದೆ. ಪ್ರಾಯಶಃ ಹೊಸ ಆರ್ಥಿಕ ವರ್ಷದ ಆರಂಭಕ್ಕೆ ಮುನ್ನ ಹೊಸ ಒಪ್ಪಂದಗಳು ಜಾರಿಗೆ ಬರುತ್ತವೆ. ಈ ಹಿಂದಿನ ಒಪ್ಪಂದಗಳನ್ನು ಉಲ್ಲಂಘಿಸಿ ಹೊಸದೊಂದನ್ನ ನಿಮ್ಮ ಮೇಲೆ (ನಿರ್ಮಾಪಕರು ಮತ್ತು ಕಾಂಟ್ರಾಕ್ಟ್ ಹೋಲ್ಡರ್‍ಸ್) ಹೇರಲೂಬಹುದು. ಆಗ ಆಗಬಹುದಾದ ತಲ್ಲಣಗಳಿಗೆ ಇಂದೇ ಸಿದ್ಧರಾಗುವುದು ಅಗತ್ಯ. ಆ ದೃಷ್ಟಿಯಿಂದ ಜಾಗೃತರಾಗಬೇಕಾದ್ದು ಇಂದಿನ ಅನಿವಾರ್ಯ. ಮತ್ತು ಸಂಘಟನೆಯೊಂದಿಗೆ ಇರಬೇಕಾದ್ದು ಇಂದಿನ ಅಗತ್ಯ. ಯಾರು ಸಂಘಟಿತರಾಗಿದ್ದಾರೋ ಅವರು ಮಾತ್ರ ಇಂತಹ ಕಾಣದ ಕೈಯ ಹೊಡೆತಗಳಿಂದ ತಪ್ಪಿಸಿಕೊಳ್ಳಬಲ್ಲರು. ಹೊರಗುಳಿದವರು ಕರ್ಪೂರದಂತೆ ನಾಪತ್ತೆಯಾಗಬಹುದು.

ಈ ಹಿನ್ನೆಲೆಯಲ್ಲಿ ಪ್ರತಿ ಕಲಾವಿದ ತಂತ್ರಜ್ಞರು, ಕಲಾವಿದರು ಮತ್ತು ನಿರ್ಮಾಪಕರ ನಡುವೆ ಸ್ಪಷ್ಟ ಒಪ್ಪಂದ ಮಾಡಿಕೊಳ್ಳಿ. ಇಲ್ಲಿ ನೀವು ಕೊಂಚ ಎಚ್ಚರ ತಪ್ಪಿದರೂ ನಾನು ಈ ಲೇಖನದ ಆರಂಭದಲ್ಲಿ ತಿಳಿಸಿದ ಅತ್ಮಹತ್ಯೆಯ ಪಟ್ಟಿಯಲ್ಲಿ ನಿಮ್ಮ ಹೆಸರುಗಳೇ ಇರಬಹುದು ಎಂಬ ಭಯವಿದೆ. ನಿಮ್ಮ ಸಂಘಟನೆಯಲ್ಲಿಯೇ ದೊರೆಯುವ ತ್ರಿಪಕ್ಷೀಯ ಒಪ್ಪಂದದ ಮಾದರಿಯನ್ನು ಪಡೆದುಕೊಂಡು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಿ. ಸಂಘಟನೆಯೊಂದು ನಿಮ್ಮ ಬೆನ್ನಿಗೆ ಇದೆ ಎಂದಾಗ ಹಣ ಹೂಡುವವನು ನಿಮ್ಮನ್ನು ಶೋಷಿಸಲು ಹಿಂಜರಿಯುತ್ತಾನೆ ಎಂಬುದು ನೆನಪಲ್ಲಿರಲಿ. (ಈ ಮಾತು ವಾಹಿನಿಗಳಲ್ಲಿ ತಿಂಗಳ ಸಂಬಳಕ್ಕೆ ದುಡಿಯುತ್ತಾ ಇರುವವರಿಗೂ ಸಲ್ಲುವಂತಹದು. ಅವರೂ ಸಹ ಕೆಲಸ ಕಳೆದುಕೊಳ್ಳುವ ಅಥವಾ ಕಡಿಮೆ ಸಂಬಳಕ್ಕೆ ಅದೇ ಕೆಲಸ ಮಾಡಬೇಕಾದ ಅನಿವಾರ್ಯಕ್ಕೆ ಬರಬಹುದು.) ಸಂಘಟನೆಯೊಂದಿಗೆ ಸೇರಿಕೊಂಡವರಿಗೆ ಈ ಸಂಕಷ್ಟವನ್ನ ದಾಟಿಕೊಳ್ಳುವುದು ಸುಲಭವಾಗುತ್ತದೆ. ಇಲ್ಲವಾದಲ್ಲಿ, ಬೀದಿಯಲ್ಲಿ ಬಿದ್ದ ಹೆಣವನ್ನ ದಾಟಿಕೊಂಡು ಓಡಾಡುವವರು ಮಾತ್ರ ಇರುತ್ತಾರೆ. ಎತ್ತಿಕೊಂಡೊಯ್ಯುವವರು ವಿರಳ ಆದರ್ಶವಾದಿಗಳು. ಅಂತಹ ಆದರ್ಶವಾದಿಗಳ ಸಂಖ್ಯೆ ಈಗ ಅತೀ ಕಡಿಮೆ ಎಂಬುದು ತಮಗೂ ಗೊತ್ತಿರಬಹುದಾದ್ದು.

ಈ ಎಚ್ಚರಿಕೆಯ ನುಡಿಗಳನ್ನ ಅತೀ ಎಚ್ಚರಿಕೆಯಿಂದ ಓದಿಕೊಳ್ಳಿ. ಬರಬಹುದಾದ ಹೊಸ ರೋಗವೂ ಭಯೋತ್ಪಾದಕರ ಬಾಂಬುಗಳಿಗಿಂತ ಭಯಾನಕವಾದ್ದು ಎಂಬುದು ನೆನಪಲ್ಲಿರಲಿ. ಎಲ್ಲರಿಗೂ ಒಳಿತಾಗಲಿ.

Advertisements

2 Responses to “ಇಂದಿನ ಆತಂಕಗಳು – ನಾಳಿನ ಕನಸುಗಳು”


  1. 1 Sharanu hullura January 10, 2009 at 6:07 am

    ನಿಮ್ಮ ಲೇಖನ ಗಾಬರಿ ಹುಟ್ಟಿಸುತ್ತದೆ. ನಿಜವಾಗಲೂ ಸಂಕಟಗಳು ಅಷ್ಟೊಂದು ಇದೆಯೇ? ಹಾಗಾದರೆ ಜನ ಸೋಪು-ಶಾಂಪೂ ಕೊಳ್ಳುವುದನ್ನ ಬಿಟ್ಟು ಬಿಡುತ್ತಾರೆಯೇ? ಅವರಿರುವ ವರೆಗೆ ಟೆಲಿವಿಷನ್ ಉದ್ಯಮಕ್ಕೆ ಬರುವ ಹಣ ಕಡಿಮೆ ಆಗುವುದಿಲ್ಲ ಅಲ್ಲವೇ?

  2. 2 sathya January 10, 2009 at 6:17 am

    ನಾನು ಈ ಮೊದಲು ಬರೆದ reply ಇನ್ನೊಂದು ಲೇಖನಕ್ಕೆ ಹೋಗಿ ಅಂಟ್‌ಕೋತು… ಅದಕ್ಕೆ ಇನ್ನೊಮ್ಮೆ ಇಲ್ಲಿ ಬರೀತಾ ಇದೀನಿ.
    ಜಾಗತಿಕವಾಗಿ ಆರ್‍ಥಿಕ ಕುಸಿತ ಭಯಂಕರವಾಗಿಯೇ ಆವರಿಸುತ್ತಿದೆ. ಇದರ ಪರಿಣಾಮ ಟೆಲಿವಿಷನ್‌ಗೂ ಆಗುವುದು ಸಹಜ. ಆದರೆ nobody acn get prepared for an accident ಅಲ್ವಾ? Accidents happen! ಅಷ್ಟೆ ಅಲ್ವಾ?


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: