ಕನ್ನಡ ರಂಗಭೂಮಿ ಮತ್ತು ಕನ್ನಡ ಪತ್ರಿಕೋದ್ಯಮ

(ನಮ್ಮ ರಂಗಚಟುವಟಿಕೆಗೂ ಪತ್ರಿಕೋದ್ಯಮಕ್ಕೂ ಇರುವ ಅವಿನಾಭಾವ ಸಂಬಂಧ ಕುರಿತಂತೆ ಒಂದು ಲೇಖನ)

ಕನ್ನಡ ರಂಗಭೂಮಿಯ ಇತಿಹಾಸ `ಇಗ್ಗುತ್ತಪ್ಪ ಹೆಗ್ಗಡೆಯ ಪ್ರಹಸನ’ದಿಂದ ಆರಂಭವಾಗಿ ಇಂದಿನವರೆಗೆ ತಲುಪಿರುವ ಹಾದಿಯನ್ನು ಗಮನಿಸಿದಾಗ ಅದು ಸರಿಸುಮಾರು ಎರಡು ಶತಮಾನಗಳದ್ದು ಎಂದೆನಿಸುತ್ತದೆ. ಅದಕ್ಕೂ ಮುಂಚೆ ನಮ್ಮಲ್ಲಿ ರಂಗಭೂಮಿ ಇರಲಿಲ್ಲ ಎಂದಲ್ಲ. ಆ ರಂಗಭೂಮಿ ಇಂದು ಜನಪದ ಪ್ರಾಕಾರಗಳ ಒಳಗೆ ಲೀನವಾಗಿ ಹೋಗಿರುವುದರಿಂದ ಆಧುನಿಕ ರಂಗಭೂಮಿ ಎಂದು ನಾವು ಗುರುತಿಸುವ ಅಭ್ಯಾಸ ಮಾಡಿಕೊಂಡಿರುವ ಚಟುವಟಿಕೆಯು ವಸಾಹತುಶಾಹಿ ಕಾಲದಿಂದ ಈಗಿನ ನವವಸಾಹತುಶಾಹಿ ಕಾಲದವರೆಗೆ ಮಾತ್ರ ಎಂದೆನ್ನಬಹುದು. ಇಂತಹ ಗುರುತಿಸುವಿಕೆಯನ್ನ ರಂಗಚರಿತ್ರಕಾರರು ಒಪ್ಪಲಾರರು. ಆದರೆ ಈ ಲೇಖನದ ಸಂದರ್ಭದಲ್ಲಿ ಅದಕ್ಕಿಂತ ಹಿಂದಿನ ರಂಗಭೂಮಿಯನ್ನು ಕುರಿತು ಮಾತಾಡುವುದು ಅಪ್ರಸ್ತುತವಾದ್ದರಿಂದ ಇದಿಷ್ಟೇ ವಿವರವನ್ನು ಇಟ್ಟುಕೊಂಡು ಆಧುನಿಕ ರಂಗಭೂಮಿಗೂ ಮುದ್ರಣ ಮಾಧ್ಯಮಕ್ಕೂ ಆದ ಕೊಡು-ಕೊಳೆಗಳನ್ನು ಕುರಿತು ಮಾತಾಡುವ ಪ್ರಯತ್ನ ಇಲ್ಲಿದೆ.

ಆಧುನಿಕ ಕನ್ನಡ ರಂಗಭೂಮಿ ಎಂದು ನಾವು ಗುರುತಿಸುವ ರಂಗಭೂಮಿಗೆ ಎರಡು ಕವಲುಗಳಿವೆ. ಒಂದನ್ನು ವೃತ್ತಿ ರಂಗಭೂಮಿ ಎಂದು ಮತ್ತೊಂದನ್ನು ಹವ್ಯಾಸೀ ರಂಗಭೂಮಿ ಎಂದು ಗುರುತಿಸಲಾಗುತ್ತಿದೆ. ಈ ಕವಲು ಮೂಡುವ ಮುನ್ನಾದಿನಗಳಲ್ಲಿ ವೃತ್ತಪತ್ರಿಕೆಗಳು ಹಲವಿದ್ದರೂ ರಂಗಭೂಮಿಯನ್ನು ಕುರಿತು ಹೆಚ್ಚಿನ ವಿವರಗಳು ಬರುತ್ತಿರಲಿಲ್ಲ. ಕನ್ನಡ ನುಡಿಯಾಡುವ ಪ್ರದೇಶಕ್ಕೆ ಪಾರ್ಸಿ ರಂಗಭೂಮಿ ಎಂಬ ನೇರವಾಗಿ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡಿದ್ದ ಮನರಂಜನಾ ನಾಟಕ ಪ್ರವೇಶಿಸಿದ ಕೂಡಲೇ ನಮ್ಮಲ್ಲಿದ್ದ ರಂಗಭೂಮಿಯು ಅದೇ ಪಾರ್ಸಿ ರಂಗಭೂಮಿಯ ಗುಣಗಳನ್ನು ತನ್ನೊಳಗೆ ಆವಾಹಿಸಿಕೊಂಡು ಜನರಂಜನೆಯೇ ಪ್ರಧಾನ ಉದ್ದಿಶ್ಯವಾದ ನಾಟಕಗಳನ್ನು ಅಭಿನಯಿಸಲಾರಂಭಿಸಿತು. ಅದರೊಂದಿಗೆ ಮುದ್ರಣ ಮಾಧ್ಯಮಕ್ಕೆ ಜಾಹೀರಾತು ಎಂಬ ಪೋಷಕ ದ್ರವ್ಯವೊಂದು ದೊರೆಯತೊಡಗಿತು. ಇದರಿಂದಾಗಿ ಜಾಹೀರಾತು ನೀಡುವ ಕಲಾಮಾಧ್ಯಮದವರನ್ನು ಮೆಚ್ಚಿಸುವಂತೆ ಕಲಾವಿದರ ಪರಿಚಯಗಳು ಮತ್ತು ನಾಟಕದ ಪರಿಚಯಗಳು ಮುದ್ರಣ ಮಾಧ್ಯಮದಲ್ಲಿ ಕಾಣಿಸತೊಡಗಿತು. (ಇದು ನಮ್ಮ ದೇಶಕ್ಕೆ ಮಾತ್ರವಲ್ಲ ಜಗತ್ತಿನಾದ್ಯಂತ ರಂಗಭೂಮಿಯ ಸಂದರ್ಭದಲ್ಲಿ ಹೇಳಬಹುದಾದ ಮಾತು. ಹೆಚ್ಚು ಜಾಹೀರಾತು ನೀಡುವವನಿಗೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬುದಂತೂ ಇಂದು ನಿಚ್ಚಳವಾಗಿ ಗೋಚರವಾಗುತ್ತಿದೆ.) ಮುದ್ರಣ ಮಾಧ್ಯಮಕ್ಕೆ ಹಣ ಒದಗಿಸಿದವರ ಪರಿಚಯ ಮಾತ್ರವಲ್ಲದೆ ಆ ರಂಗಪ್ರಯತ್ನದ ವಿಮರ್ಶೆಯೂ ಆಗಬೇಕೆಂಬ ಆಲೋಚನೆ ಕಾಣಿಸಿಕೊಂಡು ವೃತ್ತಪತ್ರಿಕೆಗಳಲ್ಲಿ ಹೊಸ ನಾಟಕದ ವಿಮರ್ಶೆಯು ಕಾಣಿಸಿಕೊಳ್ಳತೊಡಗಿತು. ಇದೂ ಕೂಡ ನಮಗೆ ವಸಾಹತುಶಾಹಿಯೇ ನೀಡಿದ ಕೊಡುಗೆ. ರಂಗವಿಮರ್ಶೆ ಎಂಬುದರ ಸಿದ್ಧ ಸೂತ್ರಗಳನ್ನು ನಮ್ಮ ದೇಶದ ಆಂಗ್ಲ ಪತ್ರಿಕೆಗಳು ಇಂಗ್ಲೆಂಡಿನಿಂದ ಹೊರಡುತ್ತಿದ್ದ ಪತ್ರಿಕೆಗಳಿಂದ ತೆಗೆದುಕೊಂಡವು. ಆಂಗ್ಲ ಪತ್ರಿಕೆಗಳಿಂದ ಅದು ಕನ್ನಡಕ್ಕೂ ಹರಿದು ಬಂದಿತು. ಬಾರತೀಯ ಕಾವ್ಯಮೀಮಾಂಸೆಯ ಮಾನದಂಡಗಳಿಲ್ಲದ ಈ ರಂಗವಿಮರ್ಶೆಯ ಅಭ್ಯಾಸದಿಂದಾಗಿ ಸಂಪೂರ್ಣ ಬಾರತೀಯವಾಗಿದ್ದ ಅನೇಕ ಕಲಾಪ್ರಾಕಾರಗಳು ಹೊಡೆತ ತಿಂದವು.

ಆರಂಭಿಕ ದಿನಗಳು

ರಂಗವಿಮರ್ಶೆಯ ಆರಂಭಿಕ ಕಾಲದಲ್ಲಿನ ವಿಮರ್ಶೆಗಳು ಬಹುತೇಕ ನಾಟಕ ಪ್ರದರ್ಶನವನ್ನು ವೈಭವಿಸುವಂತಹುದೇ ಆಗಿದ್ದವು. ಅಲ್ಲಿ ನಾಟಕದ ಗುಣಮಟ್ಟವನ್ನು ಅಳೆಯುವ ಪ್ರಜ್ಞೆಗಿಂತ ಆ ನಾಟಕಕ್ಕೆ ಓದುಗ ವರ್ಗವನ್ನೂ ಪ್ರೇಕ್ಷಕರಾಗಿ ಸೆಳೆಯುವ ಜಾಹೀರಾತಿನ ವಿಸ್ತರಣೆಯಂತೆಯೇ ವಿಮರ್ಶೆ ಕೆಲಸ ಮಾಡತೊಡಗಿತ್ತು. (ಇದಕ್ಕಾಗಿ ಗುಬ್ಬಿ ವೀರಣ್ಣ ಅವರ ಜೀವನ ಚರಿತ್ರೆಂiiಲ್ಲಿ ಬರುವ ಪತ್ರಿಕಾ ಪ್ರಕಟಣೆ ಕುರಿತ ವಿವರಗಳನ್ನು ಆಸಕ್ತರು ಗಮನಿಸಬಹುದು.) ಮುಂಬೈ, ದೆಹಲಿಯಂತಹ ಮಹಾನಗರದ ಪತ್ರಿಕೆಗಳಲ್ಲಿ ಬರಲಾರಂಭಿಸಿದ ವಿಮರ್ಶೆಗಳ ಜೊತೆಗೆ ಅವು ತಾರೆಗಳನ್ನು (ಸ್ಟಾರ್‌ಗಳನ್ನು) ನೀಡಲಾರಂಭಿಸಿದ್ದನ್ನ ಗಮನಿಸಬಹುದು. ಅದೇ ಪ್ರವೃತ್ತಿ ನಮ್ಮ ಪತ್ರಿಕೋದ್ಯಮಕ್ಕೂ ಬಂದಿತು. ಇದರಿಂದ ಮನರಂಜನಾ ಮಾಧ್ಯಮಕ್ಕೆ ಬಹಳಷ್ಟು ಸಹಾಯವೂ ಆಯಿತು. ಹೆಚ್ಚು ತಾರೆಗಳನ್ನು ಪಡೆದದ್ದು ಅತ್ಯುತ್ತಮೆ ಎಂಬ ಪರಿಕಲ್ಪನೆಯ ಜೊತೆಗೆ ಅಂತಹ ನಾಟಕಗಳಿಗೆ ಹೆಚ್ಚು ಜನ ಬರಲಾರಂಭಿಸಿದರು. ಈ ಅಭ್ಯಾಸವೂ ಸಹ ಮುಂಬಯಿ ನಗರದಿಂದ ಕನ್ನಡಕ್ಕೆ ಆಮದಾಯಿತಾದರೂ ಈ ತಾರೆಗಳನ್ನು ನೀಡುವ ಅಭ್ಯಾಸವನ್ನು ನಮ್ಮ ಪ್ರೇಕ್ಷಕರು ತೀರಾ ಗಂಭೀರವಾಗಿ ಸ್ವೀಕರಿಸಲಿಲ್ಲ. ಹೀಗಾಗಿ ನಮ್ಮ ವೃತ್ತ ಪತ್ರಿಕೆಗಳಲ್ಲಿನ ನಾಟಕ ಕುರಿತ ಪ್ರಕಟಣೆಗಳು ಆಯಾ ನಾಟಕದಲ್ಲಿದ್ದ ನಟ ನಟಿಯರನ್ನ ಅವರು ಇಂತಲ್ಲಿಂದ ಬಂದವರು, ಹೀಗೆ ಹಾಡಬಲ್ಲವರು, ಹೀಗೆ ಕುಣಿಯ ಬಲ್ಲವರು ಎಂಬ ಗುಣವಿಶೇಷಣದ ಜೊತೆಗೆ ಗುರುತಿಸಿವ ಪರಿಪಾಠ ಬೆಲೆಯಿತು. (ಹ.ವೆಂ.ಸೀತಾರಾಮಯ್ಯನವರು ಇಪ್ಪತ್ತನೇ ಶತಮಾನದ ಎಂಭತ್ತರ ದಶಕದಲ್ಲಿಯೂ ವೃತ್ತಿ ರಂಗಭೂಮಿ ಕಲಾವಿದರನ್ನು ಕುರಿತಂತೆ ಅದೇ ಗುಣವಿಶೇಷಣಗಳನ್ನು ಬಳಸಿ ಬರೆದುದನ್ನು ನಾವು `ನಮ್ಮ ವೃತ್ತಿ ರಂಗ ಕಲಾವಿದರು’ ಮುಂತಾದ ಪುಸ್ತಕಗಳಲ್ಲಿ ಕಾಣಬಹುದು.)

ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ರಂಗಭೂಮಿಯು ಅದಾಗಲೇ ತಿಳಿಸಿದಂತೆ ಎರಡು ಭಾಗವಾಗಿ ಕವಲೊಡೆಯಲು ಆರಂಭಿಸಿದ ಕೂಡಲೇ ಪತ್ರಿಕೋದ್ಯಮವು ರಂಗಭೂಮಿಯನ್ನ ನೋಡುವ ಕ್ರಮದಲ್ಲಿ ವಿಶಿಷ್ಟ ಬದಲಾವಣೆಗಾಳಾದವು. ವೃತ್ತಪತ್ರಿಕೆಗಳು ಹವ್ಯಾಸೀ (ಈ ರಂಗಭೂಮಿಯನ್ನ ವಿಲಾಸೀ ಎಂದೂ ಗುರುತಿಸುತ್ತಾರೆ) ರಂಗಭೂಮಿಯನ್ನ ಪ್ರೋತ್ಸಾಹದಾಯಕವಾಗಿ ನೋಡುತ್ತಾ, ವೃತ್ತಿ ರಂಗಭೂಮಿಯನ್ನು ಅತ್ಯಂತ ಚಿಕಿತ್ಸಕವಾಗಿ ನೋಡಲಾರಂಭಿಸಿದವು. ಇದೊಂದು ಆರೋಗ್ಯಕಾರೀ ಬೆಳವಣಿಗೆಯೇ ಆಗಿತ್ತು. ಆದರೆ ಇದೇ ಶತಮಾನದ ಮೂರು ನಾಲ್ಕನೇ ದಶಕದಲ್ಲಿ ಸಣ್ಣಗೆ ಆರಂಭವಾದ ಚಿತ್ರೋದ್ಯಮವೆಂಬುದು ವೃತ್ತಿ ರಂಗಭೂಮಿಯ ಪ್ರೇಕ್ಷಕರನ್ನೆಲ್ಲಾ ತನ್ನತ್ತ ಸೆಳೆದುಕೊಂಡಿತು. ಅದಲ್ಲದೆ ಚಿತ್ರೋದ್ಯಮವು ಜಾಹೀರಾತಿಗಾಗಿ ಅತೀಹೆಚ್ಚು ಹಣ ತೊಡಗಿಸುವ ಶಕ್ತಿಯನ್ನೂ ಉಳ್ಳದ್ದಾಗಿತ್ತು. ಹೀಗಾಗಿ ವಿಮರ್ಶೆಯೊಡನೆ ತಾರೆಗಳನ್ನು ನೀಡುವ ಸಂಸ್ಕೃತಿಯು ಸಿನಿಮಾ ವಿಮರ್ಶೆಗಳ ಪಾಲಾಗಿ ಹೋಯಿತು. ಹವ್ಯಾಸೀ ರಂಗಭೂಮಿಯ ಪ್ರಯೋಗ ಪ್ರ್ರಿಯತೆಯನ್ನು ಕುರಿತು ಬರೆಯುತ್ತ ವೃತ್ತಿ ರಂಗಭೂಮಿಯ ಪ್ರದರ್ಶನ ಪ್ರಿಯತೆಯನ್ನು ಹೀಗಳೆಯುವ ಅಭ್ಯಾಸ ಹೆಚ್ಚಾಯಿತು. ಇದಕ್ಕೆ ಆ ಕಾಲದ ಶ್ರೇಷ್ಟ ನಾಟಕಕಾರರಾಗಿದ್ದ ಕೈಲಾಸಂ ಮತ್ತು ಶ್ರೀರಂಗರು ವೃತ್ತಿರಂಗಭೂಮಿಯನ್ನು ಕುರಿತು ಗೌರವ ಇರಿಸಿಕೊಳ್ಳದೆ ಇದ್ದದ್ದು, ಮತ್ತು ಆ ವಿಷಯ ಕುರಿತು ತಾವು ಬರೆದ ನಾಟಕಗಳಲ್ಲಿಯೂ ಅವರು ಲೇವಡಿ ಮಾಡಿದ್ದು ಸಹ ಪರೋಕ್ಷವಾಗಿ ಕಾರಣವಾಗಿರಬಹುದು. ಹೀಗಾಗಿಯೇ ಇಪ್ಪತ್ತರ ದಶಕದ ಆದಿಭಾಗದಲ್ಲಿ ರಂಗಭೂಮಿಗೆ ವೃತ್ತ ಪತ್ರಿಕೆಗಳು ನೀಡುತ್ತಿದ್ದ ಪ್ರಾಶಸ್ತ್ಯ ನಲ್ವತ್ತರ ದಶಕದಿಂದ ಅರವತ್ತರ ದಶಕದವರೆಗೆ ಕುಂಟುತ್ತಾ ಸಾಗಿ ಕಡೆಗೊಮ್ಮೆ ಇಲ್ಲವೇ ಇಲ್ಲ ಎಂಬ ಮಟ್ಟ ತಲುಪಿತ್ತು.

ಹೊಸ ರಂಗಭೂಮಿ ಮತ್ತು ಹೊಸ ಪತ್ರಕರ್ತರ ಉದಯ

ಅರವತ್ತರ ದಶಕದ ಆದಿಭಾಗದಲ್ಲಿ ಕನ್ನಡ ರಂಗಭೂಮಿಗೆ ಹೊಸ ಚಿಂತಕರು ಮತ್ತು ಹೊಸ ತಂತ್ರಜ್ಞರು ಬರತೊಡಗಿದರು. ಬಹುತೇಕ ಅದೇ ಕಾಲದಲ್ಲಿ ಪತ್ರಿಕೋದ್ಯಮಕ್ಕೂ ಅನೇಕ ಹೊಸಬರ ಆಗಮನವಾಗತೊಡಗಿತ್ತು. ಎರಡು ಹೊಸತುಗಳಿಂದಾಗಿ ರಂಗಭೂಮಿ ಮತ್ತು ಪತ್ರಿಕೋದ್ಯಮದ ನಡುವೆ, ವಿಶೇಷವಾಗಿ ಹವ್ಯಾಸೀ ರಂಗಭೂಮಿಯ ಜೊತೆಗೆ ಒಂದು ಹೊಸ ಸಂಬಂಧ ಆರಂಭವಾಯಿತು. ಇದೇ ಕಾಲದಲ್ಲಿ ( ವಿಶೇಷವಾಗಿ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಮುಂತಾದ ಪತ್ರಿಕೆಗಳು) ಹೊಸ ತಲೆಮಾರಿನ ಪತ್ರಕರ್ತರಿಂದ ಹವ್ಯಾಸೀ ರಂಗಭೂಮಿಯನ್ನು ಕುರಿತು ಪ್ರತ್ಯೇಕ ಲೇಖನಗಳನ್ನು ಹಾಗೂ ವಿಶಿಷ್ಟ ವಿಮರ್ಶೆಗಳನ್ನೂ ಪತ್ರಿಕೆಗಳು ಬರೆಸಲು ಆರಂಭಿಸಿತು. (ಹೀಗೆ ಕೆಲಸ ಮಾಡಿದ ಪತ್ರಕರ್ತರಲ್ಲಿ ಎಂ.ಬಿ.ಸಿಂಗ್, ವೈಕುಂಠರಾಜು, ರಂಗನಾಥರಾವ್, ಜಿ.ಎಸ್.ಸದಾಶಿವ, ಮುಂತಾದವರನ್ನು ನೆನೆಯಬೇಕು)
ಈ ಹೊಸ ಬದಲಾವಣೆಯ ಜೊತೆಗೆ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿಯೂ ಅನೇಕ ಹೊಸತನಗಳು ಕಾಣಿಸಿಕೊಳ್ಳತೊಡಗಿದವು. ಸರಿಸುಮಾರು ಇದೇ ಅವಧಿಯಲ್ಲಿ ಗಿರೀಶ್ ಕಾರ್ನಾಡರು ನಾಟಕಗಳನ್ನು ಬರೆಯತೊಡಗಿದ್ದರು. ಅವರೊಂದಿಗೆ ಇನ್ನೂ ಅನೇಕ ಹೊಸ ಚಿಂತಕರು ನಾಟಕಕಾರರಾಗಿ ಮತ್ತು ರಂಗನಿರ್ದೇಶಕರಾಗಿ ಕಾಣಿಸಿಕೊಳ್ಳತೊಡಗಿದರು. ಇದರಿಂದಾಗಿ ಹವ್ಯಾಸೀ ರಂಗಭೂಮಿಯಲ್ಲಿ ಅನೇಕ ಹೊಸ ಪ್ರಯೋಗಗಳು ಆಗತೊಡಗಿದವು. ವಿದೇಶಕ್ಕೆ ಹೋಗಿ ಬಂದ `ಹೊಸಬರು’ ಅಲ್ಲಿನ ಪ್ರಯೋಗಗಳನ್ನು ಕಂಡು, ಇಲ್ಲಿಯೂ ಅಂತಹ ವೃತ್ತಿಪರತೆಯನ್ನು ತರುವ ಯತ್ನ ಮಾಡತೊಡಗಿದರು. ಹೀಗೆ ಹುಟ್ಟಿದ ಹೊಸ ಬೆಳೆಯನ್ನ ಹೊಸ ಪತ್ರಕರ್ತರು ವಿಮರ್ಶಾತ್ಮಕವಾಗಿ ನೋಡತೊಡಗಿದರು. ಸಿನಿಮಾ ವಿಮರ್ಶೆಯಲ್ಲಿ ಈ ಹಿಂದೆ ತಿಳಿಸದ ವೃತ್ತಿ ರಂಗಭೂಮಿಯ ರೀತಿಯ ವಿಮರ್ಶೆಯೇ ಮುಂದುವರೆದಿತ್ತು. ಆದರೆ ರಂಗವಿಮರ್ಶೆ ಹೊಸತಳಿಯ ಪತ್ರಕರ್ತರಿಂದಾಗಿ ವಿಶಿಷ್ಟ ಲಂಘನಗಳನ್ನು ಸಾಧಿಸಿತ್ತು.

ಇದೇ ಸಮಯಕ್ಕೆ ದೆಹಲಿಯಲ್ಲಿ ಆರಂಭವಾದ ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್.ಡಿ.)ಯೂ ಸಹ ಈ ಹೊಸತನಕ್ಕೆ ಅನೇಕ ಹೊಸದಿಕ್ಕುಗಳನ್ನು ತಂದಿತು. ಆ ಶಾಲೆಯಲ್ಲಿ ರಂಗಭೂಮಿ ಕಲಿತು ಬಂದ ಅನೇಕರು ಕನ್ನಡ ರಂಗಭೂಮಿಗೆ ಹೊಸ ಶಕ್ತಿಯನ್ನು ದಾರೆ ಎರೆದರು. ಅವರಲ್ಲಿ ವಿ.ರಾಮಮೂರ್ತಿ ಮತ್ತು ಬಿ.ವಿ.ಕಾರಂತರನ್ನು ವಿಶಿಷ್ಟವಾಗಿ ನೆನೆಯಬೇಕು. ವಿ. ರಾಮಮೂರ್ತಿ ಅವರು ಕನ್ನಡ ನಾಟಕಗಳಿಗೆ ಬೆಳಕು ವಿನ್ಯಾಸಕರಾಗಿ ವಿಶೇಷ ಪ್ರಯೋಗಗಳನ್ನು ಮಾಡಿದರೆ, ಬಿ.ವಿ.ಕಾರಂತರು ತಮ್ಮ ವೃತ್ತಿ ರಂಗಭೂಮಿಯ ಹಿನ್ನೆಲೆ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಹೊಸ ಪಾಠಗಳನ್ನೆರಡನ್ನೂ ಒಂದು ಪಾಕಕ್ಕೇ ಸುರಿದು `ಉತ್ಸವ ರಂಗಭೂಮಿ’ಯನ್ನು ಪ್ರಸ್ತುತ ಪಡಿಸಿದರು.

ಈ ಉತ್ಸವದ ಉಚ್ಛ್ರಾಯವಾದದ್ದು ಎಪ್ಪತ್ತರ ದಶಕದ ಆದಿಭಾಗದಲ್ಲಿ. ಆಗ ಬಿ.ವಿ.ಕಾರಂತರ ನಿರ್ದೇಶನದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಬದಿಯಲ್ಲಿ ಆದ ಮೂರು ಬಯಲು ನಾಟಕಗಳ ಪ್ರಯೋಗದಿಂದಾಗಿ ನಾಡಿನ ಬುದ್ಧಿಜೀವಿ ವರ್ಗ ಮತ್ತು ರಂಗಭೂಮಿಗೆ ಕೆಲಸ ಮಾಡುತ್ತಿದ್ದ ಹೊಸ ಪೀಳಿಗೆಗಳ ಸಂಯೋಗವಾಯಿತು. ಇದರ ಫಲಶೃತಿಯಾಗಿ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ಹೊಸ ಚೇತನವೊಂದು ಹುಟ್ಟಿತು. ಪೈಪೋಟಿಯ ಮೇಲೆ ಹೊಸ ನಾಟಕಗಳ ಪ್ರದರ್ಶನಗಳಾಗತೊಡಗಿದವು. ಆ ಪ್ರದರ್ಶನಗಳನ್ನ ವಸ್ತುನಿಷ್ಟವಾಗಿ ವಿಮರ್ಶೆ ಮಾಡುವ ಪ್ರಯತ್ನವೂ ಪತ್ರಿಕೋದ್ಯಮದಿಂದ ಆಯಿತು. ಇಲ್ಲಿ ವಸ್ತುನಿಷ್ಟೆ ಎಂದೆನ್ನುವಾಗಲೇ ಹೆಚ್ಚಿದ ಹವ್ಯಾಸೀ ರಂಗ ಚಟುವಟಿಕೆಗಳು ಅನೇಕ ಬಣಗಳನ್ನು ಮಾಡಿದ್ದವು ಎಂಬುದನ್ನು ಹೇಳಬೇಕು. ಹೀಗಾಗಿ ಯಾವ ಪತ್ರಕರ್ತ ಯಾವ ಬಣಕ್ಕೆ ಸೇರಿದವನು ಎಂಬುದನ್ನ ಆಧರಿಸಿಯೇ ಆತನ ರಂಗವಿಮರ್ಶೆಯೂ ಬದಲಾಗತೊಡಗಿತು. ಈ ಪ್ರಕ್ರಿಯೆ ಎಂಬತ್ತರ ದಶಕದ ಆರಂಭದವರೆಗೆ ಚಾಲ್ತಿಯಲ್ಲಿತ್ತು. ಹೀಗಾಗಿಯೇ ಇಂದಿಗೂ ಈ ಅವಧಿಯನ್ನು ಕನ್ನಡ ಹವ್ಯಾಸೀ ರಂಗಭೂಮಿಯ `ಸುವರ್ಣಯುಗ’ ಎಂದು ಗುರುತಿಸಬಹುದು. ಇದು ಬರೆ ಹವ್ಯಾಸೀ ರಂಗಭೂಮಿಗೆ ಮಾತ್ರ ಸೀಮಿತವಾಗಿರಲಿಲ್ಲ, ಕನ್ನಡದ ಹೊಸ ಅಲೆಯ ಚಿತ್ರ ಚಳುವಳಿಗೂ ಸುವರ್ಣಯುಗವಾಗಿತ್ತು. ಕನ್ನಡದ ಎಲ್ಲಾ ಕಲಾಪ್ರಾಕರಗಳಲ್ಲಿ ಹೊಸ ಗಾಳಿ ಬೀಸುತ್ತಿದ್ದ ಕಾಲವದು. ಇದಕ್ಕೆ ಪ್ರತಿಯಾಗಿ ವ್ಯಾಪಾರೀ ಚಿತ್ರಗಳ ಭರಪೂರ ಮಾರುಕಟ್ಟೆಯ ಎದುರು ವೃತ್ತಿ ರಂಗಭೂಮಿ ಸ್ಪರ್ಧೆಯನ್ನೆದುರಿಸಲಾಗದೆ ಕ್ಷೀಣಗೊಂಡಿತ್ತು ಮತ್ತು ಜೀವ ಉಳಿಸಿಕೊಳ್ಳುವ ಪ್ರಯತ್ನವಾಗಿ ಸಿನಿಮಾದಂತೆಯೇ ಕಥೆಗಳನ್ನುಳ್ಳ ನಾಟಕಗಳನ್ನು ಹೆಣೆದು ಪ್ರದರ್ಶಿಸಲಾರಂಭಿಸಿತ್ತು. ಹೀಗಾಗಿ ವೃತ್ತಿ ರಂಗಭೂಮಿಯು ಉತ್ತರ ಕರ್ನಾಟಕದ ಕೆಲವು ಭಾಗಗಳನ್ನು ಹೊರತು ಪಡಿಸಿ, ಉಳಿದ ಕಡೆಗಳಲ್ಲಿ `ಎಕ್ಸ್‌ಟಿಂಕ್ಟ್’ ಆಗುತ್ತಿತ್ತು. ಈ ಹೊತ್ತಲ್ಲಿ `ಜೀವ ಉಳಿಸಿ ಕೊಳ್ಳುವ ಕ್ರಮ’ದ ನಾಟಕ ರಚನೆಯಿಂದ ಹುಟ್ಟಿದ ಕೆಲವು ಪ್ರಯೋಗಗಳು ಅದರಲ್ಲಿನ ಸಿನಿಮೀಯ ಗುಣಗಳಿಂದಾಗಿಯೇ ಚಲನಚಿತ್ರಗಳು ಸಹ ಆದವು. ಇವೆರಡನ್ನೂ (ವೃತ್ತಿ ರಂಗಭೂಮಿ ಹಾಗೂ ವ್ಯಾಪಾರೀ ಸಿನಿಮಾ) ಪತ್ರಿಕೋದ್ಯಮ ವಿಮರ್ಶಾತ್ಮಕವಾಗಿ ನೋಡುವುದನ್ನ (ಬಹುತೇಕ) ಬಿಟ್ಟುಕೊಟ್ಟಿತ್ತು.

ಜಾಗತೀಕರಣದ ಧಾವಂತ ಮತ್ತು ಬದಲಾದ ಆಲೋಚನಾ ಕ್ರಮಗಳು

ಇದು ಕನ್ನಡ ರಂಗಭೂಮಿಯ ಮತ್ತೊಂದು ಮಗ್ಗುಲು. ಈ ಅವಧಿಯಲ್ಲಿ ಇಡಿಯ ದೇಶದಲ್ಲಿ ಎಲ್ಲಾ ವಿವರಗಳನ್ನೂ ಸಾಮಗ್ರಿ ಎಂದು ನೊಡುವ ಹೊಸಕ್ರಮವು ಜಾರಿಗೆ ಬರತೊಡಗಿತು. `ಯಾವುದು ಮಾರಲು ಯೋಗ್ಯವೋ ಅದು ಮಾತ್ರ ಯಶಸ್ವಿಯಾಗಬಲ್ಲದು!’ ಎಂಬ ಸರಕು ಸಂಸ್ಕೃತಿಯ ಮೂಲಮಂತ್ರದ ಪರಿಣಾಮವಾಗಿ ಕನ್ನಡ ರಂಗಭೂಮಿಯಲ್ಲಿಯೂ `ರಾಷ್ಟ್ರೀಯ ರಂಗಭೂಮಿ ಎಂಬ ಹೆಸರಿನಲ್ಲಿ ಕೇವಲ ಹಾಡು ಕುಣಿತಗಳನ್ನುಳ್ಳ, ಭೌದ್ಧಿಕ ಬಲ ಇಲ್ಲದ, ಜಾನಪದೀಯ ಫ್ಯಾಷನ್ ಎಂದು ಕರೆಯ ಬಹುದಾದ ಪ್ರಯೋಗಗಳಾಗತೊಡಗಿದವು. ಇವುಗಳನ್ನು ವಿಮರ್ಶೆಗೆ ಒಳಪಡಿಸಲು ಬೇಕಿದ್ದ ಶಕ್ತ ಪತ್ರಕರ್ತರ ತಂಡ ಬೇರೆ ಬೇರೆ ಲೋಕಗಳಿಗೆ ತೆರೆದುಕೊಂಡು ಬಿಟ್ಟಿತ್ತು. ಹೀಗಾಗಿ ಈ ಪ್ರಯೋಗಗಳನ್ನು ಕುರಿತು ಬರತೊಡಗಿದ ವಿಮರ್ಶೆಯು ಸಹ, ಸಿನಿಮಾ ವಿಮರ್ಶೆಯಂತೆಯೇ, ಮೇಲ್‌ಸ್ತರದ ನೋಟವಾಗಿ ಬಿಟ್ಟಿತ್ತು. ಈ ಪರಿಸ್ಥಿತಿಯನ್ನು ದಾಟಿಕೊಳ್ಳಲು ಕೆಲವು ಪತ್ರಿಕೆಗಳು ಬುದ್ಧಿಜೀವಿಗಳಿಂದ ರಂಗವಿಮರ್ಶೆ ಬರೆಸುವ ಪರಿಪಾಠವನ್ನು (ಎಲ್.ಎಸ್.ಶೇಷಗಿರಿರಾವ್, ಲಕ್ಷ್ಮಿ ಚಂದ್ರಶೇಖರ್, ಸಿದ್ಧಲಿಂಗ ಪಟ್ಟಣಶೆಟ್ಟರು, ಗಿರಡ್ಡಿ, ಕೀರ್ತಿನಾಥ ಕುರ್ತುಕೋಟಿ, ಇತ್ಯಾದಿ) ಆರಂಭಿಸಿತಾದರೂ, ಅಂತಹ ವಿಮರ್ಶೆಯನ್ನು ಓದಿ, ರಂಗಭೂಮಿಗೆ ಬರುವ ಜನ ಒತ್ತಟ್ಟಿಗಿರಲಿ, ಪತ್ರಿಕೆಯ ಅಂತಹ ಓದುಗರ ಸಂಖ್ಯೆಯೇ ಸರಕು ಸಂಸ್ಕೃತಿಯಿಂದಾಗಿ ಕ್ಷೀಣವಾಗತೊಡಗಿತು. ಇದರಿಂದಾಗಿ ಜಾಗತೀಕರಣದ ಮೊದಲ ಹೊಡೆತ ರಂಗಪ್ರದರ್ಶನಗಳ ಜೊತೆಗೇ ರಂಗವಿಮರ್ಶೆಯ ಮೇಲೂ ಆಯಿತು.

ಈ ಪರಿಸ್ಥಿತಿಯ ಮುಂದುವರೆದ ಭಾಗ ಎಂಬಂತೆ ಸರಕು ಸಂಸ್ಕೃತಿಯು ತಯಾರಿಸಿದ ಹೊಸ ಸಾಧನ `ಟೆಲಿವಿಷನ್’ ಎಂಬುದು ನಮ್ಮ ನಾಡಿನ ಬಹುತೇಕ ಎಲ್ಲರ ಮನೆಯ ಅಂಗಳವನ್ನು ಅಲಂಕರಿಸತೊಡಗಿತು. ಈ ಟೆಲಿವಿಷನ್ ಎಂಬುದು ಸರ್ಕಾರೀ ಸ್ವಾಮ್ಯದಲ್ಲಿರುವವರೆಗೆ (ಕನ್ನಡದ ಮಟ್ಟಿಗೆ) ಹವ್ಯಾಸೀ ರಂಗಭೂಮಿಯ ವಿಸ್ತರಣೆಯಾಗಿ ಕೆಲಸ ಮಾಡುತ್ತಿತ್ತು. ಇದರಿಂದಾಗಿ ಕನ್ನಡ ರಂಗಭೂಮಿಯಲ್ಲಿ ಬಂದ ಹೊಸ ಬದಲಾವಣೆಗೆ ಹೊಂದಿಕೊಳ್ಳಲಾಗದ ಅನೇಕರು ಟೆಲಿವಿಷನ್ ಮಾಧ್ಯಮಕ್ಕೆ ವಲಸೆ ಹೋದರು. (ಕೆಲವರು ಮಾತ್ರ ಸಾರ್ವತ್ರೀಕರಣಕ್ಕೆ ದಕ್ಕದ ಅಪವಾದ ಎಂಬಂತೆ ಎರಡೂ ಮಾಧ್ಯಮಗಳಲ್ಲಿ ಇಂದಿಗೂ ದುಡಿಯುತ್ತಾ ಇದ್ದಾರೆ.) ಆದರೆ ಟೆಲಿವಿಷನ್ ಪ್ರಸಾರದಲ್ಲಿ ಖಾಸಗಿ ವಲಯ ಪ್ರವೇಶಿಸಿದ ಕೂಡಲೇ ಪ್ರಯೋಗಪ್ರಿಯರಿಗೆ ಅವಕಾಶಗಳು ಕಡಿಮೆಯಾಗಿ ಅಲ್ಲಿಯೂ ಸರಕಾಗಬಲ್ಲದ್ದು ಮಾತ್ರ ಉಳಿಯತೊಡಗಿತು.

ಚುಟುಕು ಸುದ್ದಿ ಜಗತ್ತಿನ ಪರಿಣಾಮ

ಈ ಎಲ್ಲಾ ಸಂಕಷ್ಟಗಳನ್ನು ರಂಗಭೂಮಿ ಎದುರಿಸುತ್ತಾ ಇರುವಾಗಲೇ ಪತ್ರಿಕೋದ್ಯಮಕ್ಕೂ ಜಾಗತೀಕರಣದ ಭಾರೀ ಹೊಡೆತಗಳು ಬೀಳತೊಡಗಿದವು. ಅಲ್ಲಿ ವಿಸ್ತೃತ ಲೇಖನವನ್ನ ಆಹ್ವಾನಿತ ಲೇಖಕರು ಮಾತ್ರ ಬರೆಯುವಂತಹ ವಾತಾವರಣ ಉಂಟಾಗತೊಡಗಿತ್ತು. ವಿಮರ್ಶೆಗಿಂತ ಚುಟುಕು ಸುದ್ದಿಗಳು ಮತ್ತು ಜಾಹೀರಾತಿಗೆ ನೀಡಬೇಕಾದ ಅವಕಾಶ ಇವೆಲ್ಲವೂ ಹೆಚ್ಚಾಗಿ ಕಲೆಯನ್ನು ಕುರಿತ ಆಸಕ್ತಿಯಿದ್ದರೂ ಪತ್ರಕರ್ತರು ಏನನ್ನೂ ಮಾಡಲಾಗದ ಸ್ಥಿತಿ ತಲುಪಿದ್ದರು. ಹೀಗಾಗಿ ಯಾವುದೇ ರಂಗಭೂಮಿಯನ್ನು ಕುರಿತ ವಿವರವು ಸಣ್ಣ ಸುದ್ದಿಯಾಗಿ ಮಾತ್ರ ವೃತ್ತ ಪತ್ರಿಕೆಗಳಲ್ಲಿ ಕಾಣಿಸತೊಡಗಿತು.
ಈ ಹಂತದಲ್ಲಿ ರಂಗಭೂಮಿಯಲ್ಲಿ ಇನ್ನೂ ತೊಡಗಿಕೊಂಡಿದ್ದವರು ರಂಗಭೂಮಿಯೇ ಪ್ರಧಾನವಾದ ವಿಷಯವಾಗಿದ್ದ ಅನೇಕ ಹೊಸ ಪತ್ರಿಕೆಗಳನ್ನು ತರತೊಡಗಿದರು. ಇಂದು ನಮ್ಮ ನಾಡಿನಲ್ಲಿ ಇಂತಹ ಐದಾದರೂ ಪತ್ರಿಕೆಗಳು ಇರಬಹುದು. ಆದರೆ ಅವುಗಳು ಸಹ ಮಾರುಕಟ್ಟೆಯ ಸ್ಪರ್ಧೆಯ ಎದುರಿಗೆ ಈಜಲಾಗದೆ ಈಜುವ ಪ್ರಯತ್ನಗಳಾಗಿವೆ. ಸರ್ಕಾರವೇ ಆರಂಭಿಸಿದ ರಂಗಾಯಣದಂತಹ ವೃತ್ತಿಪರ ನಾಟಕ ರೆಪರ್ಟರಿಗಳು ತಮ್ಮ ಉಳಿವಿಗೆ ಬೇಕಾದಷ್ಟು ಹಣ ಸಂಗ್ರಹ ಮಾಡುವುದಕ್ಕಾಗದೆ ಕಷ್ಟ ಪಡುತ್ತಾ ಇವೆ. ಇನ್ನೂ ಹವ್ಯಾಸೀ ರಂಗ ಚೇತನಗಳ ಪಾಡನ್ನು ಹೇಳುವುದೇನು?
ಈ ಪರಿಸ್ಥಿತಿಯ ವಿಸ್ತೀರ್ಣ ಎಂಬಂತೆ ಬಡಾವಣೆ ರಂಗಭೂಮಿ ಹುಟ್ಟಿಕೊಂಡಿದೆ. ಜೊತೆಗೆ ಸಣ್ಣ ಸಭಾಭವನದಲ್ಲಿ ರಂಗಪ್ರದರ್ಶನಗಳಾಗುವುದು ಹೆಚ್ಚಾಗಿದೆ. ಇದಕ್ಕೆ, ದೊಡ್ಡ ಪ್ರೇಕ್ಷಾಗೃಹಕ್ಕೆ ಸೇರಬೇಕಾದಷ್ಟು ಜನ ಇಂದು ರಂಗಭೂಮಿಗೆ ಬರುತ್ತಿಲ್ಲ ಎಂಬುದು ಒಂದು ಕಾರಣವಾದರೆ, ಅದಾಗಲೇ ತಿಳಿಸಿದ ಜಾಗತೀಕರಣವೂ ಹೆಚ್ಚಿಸಿರುವ `ದೂರತ್ವ’ ಮತ್ತೊಂದು ಕಾರಣ. ಹೀಗಾಗಿಯೇ ನಾಡಿನಾದ್ಯಂತ ರಂಗಚಳವಳಿಯು ಹೊಸದೊಂದು ಬದಲಾವಣೆಗೆ ಕಾಯುತ್ತಾ ಜೀವಂತವಾಗಿ ಇರುವ ಪ್ರಯತ್ನವನ್ನು ಕೆಲವು ಉತ್ಸಾಹಿಗಳಿಂದಾಗಿ ಸಾಧ್ಯವಾಗಿಸಿಕೊಂಡಿದೆ.
ಹೀಗಾಗಿ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ಹೊಸದೊಂದು ಪ್ರಾಕಾರದ ಉದಯವಾಗಿದೆ.

ಏಕವ್ಯಕ್ತಿ ಪ್ರದರ್ಶನಗಳು

ಆದಾಯ ಕಡಿಮೆಯಾದೊಡನೆ ಹೊಸದನ್ನು ಹುಡುಕುವ ಮತ್ತು ಹೇಗಾದರೂ ತಮ್ಮ ಇಚ್ಛೆ ಪೂರೈಸಿಕೊಳ್ಳುವ ಧಾವಂತಕ್ಕೆ ಬೀಳುವ ಮನಸ್ಸುಗಳು ಇಂದು ಅತೀ ಚಿಕ್ಕ ತಂಡವನ್ನುಳ್ಳ ನಾಟಕಗಳನ್ನ ಅಥವಾ ಏಕವ್ಯಕ್ತಿ ಪ್ರದರ್ಶನವನ್ನ ಆರಿಸಿಕೊಂಡಿವೆ. ಇದೂ ಸಹ ಕನ್ನಡ ರಂಗಭೂಮಿಯಲ್ಲಿ ಮೊದಲಿಗೆ ಕಾಣಿಸಿಕೊಂಡದ್ದು ಎಂಬತ್ತರ ದಶಕದ ಮಧ್ಯಭಾಗದಲ್ಲಿಯೇ. ಆದರೆ ಹೊಸ ಶತಮಾನದ ಆದಿಯಲ್ಲಿ ಏಕವ್ಯಕ್ತಿ ಅಥವಾ ಸಣ್ಣ ತಂಡಗಳ ಪ್ರದರ್ಶನ ಹೆಚ್ಚಾಗಿದೆ. ಇವುಗಳಲ್ಲಿ ಹೇಗಾದರೂ ರಂಗ ಪ್ರದರ್ಶನ ಆಗಬೇಕೆಂಬ ಉತ್ಸಾಹ ಮಾತ್ರ ಇರುತ್ತದೆ. ಅಪರೂಪಕ್ಕೊಮ್ಮೆ ಉತ್ತಮ ಕಲಾವಿದರೂ ಪ್ರಸ್ತುತ ಪಡಿಸುತ್ತಾರಾದ್ದರಿಂದ ನೋಡುಗನಿಗೆ ರಸಾನುಭವಕ್ಕೆ ಕೊರತೆಯಾಗುವುದಿಲ್ಲವಾದರೂ ಇಂತಹ ಏಕವ್ಯಕ್ತಿ ಪ್ರಸ್ತುತಿಗಳು ಪೂರ್ಣಾನುಭವ ನೀಡುವಲ್ಲಿ ಹಿಂದೆ ಬೀಳುತ್ತವೆ ಎಂಬುದನ್ನ ಉತ್ಸವ ರಂಗಭೂಮಿಯ ಕಾಲದ ರಂಗಾನುಭವ ಉಳ್ಳವರು ಬಲ್ಲರು. ಹೀಗಾಗಿ ಇಂದು ಏಕವ್ಯಕ್ತಿ ಪ್ರಸ್ತುತಿಗಳು ಕೇವಲ ಪ್ರಯೋಗಗಳಾಗಿಯೇ ಉಳಿದಿವೆ.

ಅದರೊಂದಿಗೆ ಎಂಬತ್ತರ ದಶಕದ ಆದಿಭಾಗದಲ್ಲಿ ಹುಟ್ಟಿದ ರಾಷ್ಟ್ರೀಯ ರಂಗಭೂಮಿಯ ವಿಸ್ತರಣೆಯಂತೆ ಇಂದಿಗೂ ಕೆಲವು ಸಂಗೀತ, ನೃತ್ಯ ಮತ್ತು ಜಾನಪದವನ್ನು ಬಳಸಿಕೊಂಡ ರಂಗಪ್ರಯೋಗಗಳಾಗುತ್ತಿವೆ. ಇವುಗಳಲ್ಲಿ ಕೆಲವು ಅಪರಿಮಿತ ಜನಪ್ರಿಯತೆಯನ್ನೂ ಪಡೆದುಕೊಂಡಿವೆ. ಹಾಗಾಗಿ ಈಗಲೂ ಸಂಗೀತಮಯ ನಾಟಕಗಳ ಪ್ರಯೋಗಗಳು ಆಗುತ್ತಿವೆ. ಇದು ಪ್ರಯೋಗದ ದೃಷ್ಟಿಯಿಂದ ಒಳ್ಳೆಯದೇ ಆಗಿದ್ದರೂ ಇಂತಹ ಪ್ರದರ್ಶನ ಕುರಿತು ಬರೆಯುವವರು ವೃತ್ತಪತ್ರಿಕೆಗಳಲ್ಲಿ ವಿರಳವಾಗುತ್ತಾ ಇದ್ದಾರೆ.

ಒಟ್ಟಾರೆಯಾಗಿ, ಆಧುನಿಕ ರಂಗಭೂಮಿಯು ಹುಟ್ಟಿದ ಅವಧಿಯಲ್ಲಿಯೇ ಉಚ್ಛ್ರಾಯಕ್ಕೆ ಬಂದ ಪತ್ರಿಕೋದ್ಯಮವು ತನ್ನ ಸೋದರನಂತೆ ರಂಗಭೂಮಿಯನ್ನು ಪೋಷಿಸುವ ಪ್ರಯತ್ನ ಮಾಡಿದ್ದು ಹೌದಾದರೂ, ಇಂದು ಪತ್ರಿಕೋದ್ಯಮವೇ (ಮುದ್ರಣ ಮಾಧ್ಯಮ) ಸ್ವತಃ ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಾ ಇರುವುದರ ಹಿನ್ನೆಲೆಯಲ್ಲಿ ರಂಗಭೂಮಿ ಎದುರಿಸುತ್ತಾ ಇರುವುದಕ್ಕಿಂತ ದೊಡ್ಡ ಸಂಕಷ್ಟಗಳಿಗೆ ಸ್ವತಃ ಪತ್ರಿಕೋದ್ಯಮ ಸಿದ್ಧವಾಗಬೇಕಾದ ಅಗತ್ಯವಿದೆ. ಎಲ್ಲಾ ಹೊಸ ಸ್ಪರ್ಧೆಗಳ ನಡುವೆ ಈ ಎರಡೂ ಮಾಧ್ಯಮಗಳು ಕನ್ನಡಿಗರ ಬದುಕನ್ನು ವರ್ಣರಂಜಿತಗೊಳಿಸುವ ಪ್ರಯತ್ನವನ್ನಂತೂ ಸದಾ ಚಾಲ್ತಿಯಲ್ಲಿಟ್ಟಿವೆ.

Advertisements

5 Responses to “ಕನ್ನಡ ರಂಗಭೂಮಿ ಮತ್ತು ಕನ್ನಡ ಪತ್ರಿಕೋದ್ಯಮ”


 1. 1 Sathyaudupi January 13, 2009 at 4:42 am

  ಸಣ್ಣ ಪ್ರಾಯದಲ್ಲಿ ಅಂದರೆ ಐದ್ನೇಕ್ಲಾಸ್ನಲ್ಲಿ ಒಂದೆರಡು ನಾಟಕಗಳಲ್ಲಿ ಮಾಡಿದ್ದು ಬಿಟ್ಟರೆ ಮತ್ತೆ ನಾನು ನಾಟಕಕ್ಕೆ ಹಿಂತಿರುಗುವಾಗ 25ಗಿತ್ತು. ಅಂದಿನಿಂದ ಇಂದಿನವರೆಗೆ ನಾಟಕ ಅನ್ನೋದು…………..ಎಲ್ಲರೂ ಹೇಳುವ ಸುಳ್ಳಿನ ಹಾಗೆ ನಂಗೆ ಉಸಿರಾಗಿಲ್ಲ. ಜೀವವಾಗಿಲ್ಲ. ಆದರೆ ನಾಟಕ ಅನ್ನೋದು ನಂಗೆ ಟಾನಿಕ್ ಇದ್ದ ಹಾಗೆ. ಬವಳಿದಾಗ ಎತ್ತುತ್ತಾ, ಬೇಸರಿಸಿದಾಗ ಸಮಾದಾನ ಮಾಡುತ್ತಾ, ಖುಷಿಯಾಗಿದ್ದಾಗ ಇನ್ನಷ್ಟು ಹುರಿದುಂಬಿಸುತ್ತಾ ದಿನವೂ ಬೆಳಿಗ್ಗೆ ಏಳಲು ಇಂಜಕ್ಷನ್ ಕೊಡುವ ಟಾನಿಕ್.

 2. 2 ravindra mavakhanda November 22, 2009 at 1:01 pm

  nimma lekhana sogasaagide.

 3. 3 ಬಿ.ಸುರೇಶ November 22, 2009 at 2:06 pm

  ವಂದನೆಗಳು ರವೀಂದ್ರ ಅವರೇ…

 4. 4 Siddarood Chigari October 23, 2014 at 9:51 am

  sir super.. suoer sir


 1. 1 ಕನ್ನಡ ರಂಗಭೂಮಿ ಮತ್ತು ಪತ್ರಿಕೋದ್ಯಮ « ಸೈಡ್ ವಿಂಗ್ / Sidewing Trackback on January 17, 2009 at 4:39 am

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: