ಕಿರುತೆರೆ ಎಂಬ ಮಹಾತೆರೆಯು ಮತ್ತು…!

(ಡಿಸೆಂಬರ್ ೨೩ರಂದು ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ `ಸಿನಿಮಾ ಮತ್ತು ಕಿರುತೆರೆ’ ಎಂಬ ವಿಚಾರ ಸಂಕಿರಣಕ್ಕಾಗಿ ಮಾಡಿಕೊಂಡ ಟಿಪ್ಪಣಿಯಿಂದ ಸಿದ್ಧಪಡಿಸಿದ ಲೇಖನ. ಇದನ್ನು ಸುಧಾ ಯುಗಾದಿ ವಿಶೇಷಾಂಕಕ್ಕೂ ಕಳಿಸಲಾಗಿದೆ.)

ಇಂದು ವಹಿವಾಟಿನ ಲೆಕ್ಕ ಹಿಡಿದು ಮಾತಾಡುವುದಾದರೆ ಕಿರುತೆರೆಯದು ಮಹಾಮಾರುಕಟ್ಟೆ. ಕನ್ನಡ ಚಲನಚಿತ್ರರಂಗದ ವಾರ್ಷಿಕ ವಹಿವಾಟು ನೂರೈವತ್ತು ಕೋಟಿ ದಾಟದಿರುವಾಗ ಕನ್ನಡ ಕಿರುತೆರೆಯ ಉದ್ಯಮಕ್ಕೆ ಜಾಹೀರಾತುದಾರರು ಹೂಡುತ್ತಿರುವ ಬಂಡವಾಳವೇ ವಾರ್ಷಿಕ ಸಾವಿರ ಕೋಟಿಗಳನ್ನು ದಾಟುತ್ತದೆ. ಇನ್ನು ಸಾಕ್ಷ್ಯಚಿತ್ರಗಳು, ಟಾಕ್‌ಷೋಗಳು ಮುಂತಾದ ಜಾಹೀರಾತನ್ನು ನೆಚ್ಚಿಕೊಳ್ಳದ ಕಾರ್ಯಕ್ರಮಗಳನ್ನು ಹಿಡಿದು ಲೆಕ್ಕಿಸಿದರೆ ಕಿರುತೆರೆಯ ಆಮದನಿ ಎಷ್ಟಿರಬಹುದು ಎಂಬ ಅಂದಾಜು ಮಾಡಬಹುದು. ಹಿರಿತೆರೆಗಾಗಿ ನೇರವಾಗಿ ಮತ್ತು ಅಪ್ರತ್ಯಕ್ಷವಾಗಿ ದುಡಿಯುವ ಜನರು ಸರಿಸುಮಾರು (ಪ್ರದರ್ಶನ ಮಂದಿರಗಳಲ್ಲಿ ದುಡಿವವರನ್ನೂ ಸೇರಿಸಿ) ಎರಡು ಲಕ್ಷವಾದರೆ, ಕಿರುತೆರೆಗಾಗಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ದುಡಿಯುವ ಜನ (ಕೇಬಲ್ ಆಪರೇಟರ್‌ಗಳನ್ನು ಸೇರಿಸಿ) ಹದಿನೈದು ಲಕ್ಷ ಮೀರುತ್ತಾರೆ. ಈ ಎಲ್ಲಾ ದೃಷ್ಟಿಯಿಂದ ಕಿರುತೆರೆಯನ್ನು `ಮಹಾತೆರೆ’ ಎಂದು ಹೆಸರಿಸುವುದು ಸೂಕ್ತ. ಕಳೆದ ಹತ್ತುವರ್ಷಗಳಲ್ಲಿ ಕರ್ನಾಟಕದಲ್ಲಿ ಕಿರುತೆರೆ ಬೆಳೆದಿರುವ ಪರಿಯನ್ನು ಗಮನಿಸಿದರೆ ಅದು ನಮ್ಮ ನಡುವಿನ ಅನೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಆರ್ಥಿಕ ಸ್ವಾವಲಂಬನೆಯ ಅವಕಾಶ ಕೊಟ್ಟಿರುವುದನ್ನು ಸಹ ನಾವು ಗಮನಿಸಬಹುದು. ಆ ದೃಷ್ಟಿಯಿಂದ ಕಿರುತೆರೆಯು ಅವಕಾಶವಂಚಿತ ಪ್ರತಿಭೆಗಳ ಪ್ರಕಾಶಕ್ಕೆ ದೊರೆತ ಹೆದ್ದಾರಿ (ಹೆದ್ದೆರೆ) ಎಂತಲೂ ಎನ್ನಬಹುದು.

ಮಹಾತೆರೆಯೊಳಗಿನ ಹೂರಣವೂ….

ಇದು ಹೊಸದಲ್ಲ. ಹಾಗೆಂದು ತೀರಾ ಹಳೆಯದೂ ಅಲ್ಲ. ಸರಿಸುಮಾರು ಐವತ್ತರ ದಶಕದಲ್ಲಿ ಅಮೇರಿಕೆಗೆ ಬಂದಿಳಿದ ಈ ಮನೆಮನೆಯ ಸುದ್ದಿಮಿತ್ರ ಅರವತ್ತರ ದಶಕದಲ್ಲಿ ಭಾರತಕ್ಕೂ ಎಂಬತ್ತರ ದಶಕದಲ್ಲಿ ಕರುನಾಡಿಗೂ ಕಾಲಿಟ್ಟು, ಇಂದು ತ್ರಿವಿಕ್ರಮನಂತೆ ಬೆಳೆದು ನಿಂತಿದೆ. ಇಂದು ಟಿವಿಯೊಂದಿಲ್ಲದ ಮನೆ ಸಿಗುವುದು ಅಪರೂಪ. ನಾಡಿನ ಕಟ್ಟಕಡೆಯ ವ್ಯಕ್ತಿಯೂ ಸಹ ಮನೆಯಲ್ಲೊಂದು ಟಿವಿ ಇರಬೇಕು ಎಂದು ಬಯಸುವುದನ್ನು ನಾವು ನೋಡುತ್ತಿದ್ದೇವೆ. ಈಚೆಗೆ ಖಾಸಗಿ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಕೇಬಲ್ ಸಂಪರ್ಕವುಳ್ಳ ಟಿವಿ ಮನೆಗಳಿವೆ. ಅಂದರೆ ಕರ್ನಾಟಕದ ಒಟ್ಟು ಜನಸಂಖ್ಯೆಯನ್ನು ನಾವು ಆರುಕೋಟಿ ಎಂದು ಅಂದಾಜಿಸುತ್ತಿದ್ದೇವಲ್ಲಾ ಅದೇ ತಪ್ಪು ಎನಿಸುತ್ತದೆ. ಪ್ರಾಯಶಃ ಈಗ ಕರುನಾಡಿಗರು ಎಂಟುಕೋಟಿಯ ಸಂಖ್ಯೆಗೆ ಏರಿರಬಹುದೇನೋ?.

ಮನೆಯಲ್ಲೇ ಎಲ್ಲಾ ಸುದ್ದಿ ನೀಡುವ, ರೇಡಿಯೋದ ಮುಂದುವರಿಕೆಯಂತೆ ಸುದ್ದಿಚಿತ್ರಗಳನ್ನು ನೀಡಲು ಆರಂಭವಾದ ಕಿರುತೆರೆಯು ಭಾರತದ ಮಟ್ಟಿಗೆ ನಿತ್ಯ ಮಹಾಗಾಥಾಗಳನ್ನು ಹೇಳುವ ಕೈಂಕರ್ಯದಲ್ಲಿಯೂ ತೊಡಗಿದೆ. ಇದು `ಭಾರತ ವಿಶಿಷ್ಟ’ ಎನ್ನಬಹುದಾದ ಸ್ಥಿತಿ. ಕರ್ನಾಟಕ ಒಂದರಲ್ಲಿಯೇ (ಜನವರಿ ೨೦೦೭ರಲ್ಲಿ) ಪ್ರತಿನಿತ್ಯ ೪೯ ಮೆಗಾ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಬರುವ ಯುಗಾದಿಯ ಹೊತ್ತಿಗೆ ಆರಂಭ ಆಗಲಿರುವ ಇನ್ನೆರಡು ವಾಹಿನಿಗಳು ತಯಾರಿಸುವ ಹೊಸ ಮೆಗಾ ಧಾರಾವಾಹಿಗಳನ್ನು ಲೆಕ್ಕಕ್ಕೆ ಹಿಡಿಯುವುದಾದರೆ ಈ ವರ್ಷಾಂತ್ಯದಲ್ಲಿಯೆ ಮೆಗಾ ಧಾರಾವಾಹಿಗಳ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯಿದೆ. ಸಂಖ್ಯೆಯ ದೃಷ್ಟಿಯಿಂದ ಇದು ವಿಫುಲ. ಇದಕ್ಕೆ ಮೂಲ ಕಾರಣ ಅದಾಗಲೇ ನಾನು ತಿಳಿಸಿದ `ಭಾರತೀಯತೆ’ ಅಥವಾ `ಪುರಾಣ ಶ್ರಾವಣ ಪ್ರಿಯತೆ’

ಈ ಪ್ರಕ್ರಿಯೆಯು ನಮ್ಮ ಜನರಲ್ಲಿ ನಿತ್ಯ ಪುರಾಣವನ್ನು ಕೇಳುವ ಅಭ್ಯಾಸವನ್ನು ಹುಟ್ಟಿಸಿದೆ. ಅದೆಷ್ಟು ಬಾರಿಯಾದರೂ ಮಹಾಭಾರತವನ್ನೋ ರಾಮಾಯಣವನ್ನೋ ಅಥವಾ ಭಗವತ್‌ಪುರಾಣವನ್ನೋ ಭಾರತೀಯರು ಕೇಳಬಲ್ಲರು. ಅಂತೆಯೇ ಈ ಪುರಾಣಗಳು ನಮ್ಮ ಎಲ್ಲಾ ಕಲಾಪ್ರಕಾರಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾ ಇರುತ್ತದೆ. ಈ ಅಭ್ಯಾಸವನ್ನ ಪುರಾಣ ಕೇಳುತ್ತಾ ಕನಸಲ್ಲಿ ವಿಹರಿಸುವ ಪ್ರಕ್ರಿಯೆ ಎನ್ನಬಹುದೇನೋ! ಇದೇ ಪುರಾಣಶ್ರಾವಣದ ಮುಂದುವರಿಕೆಯಾಗಿ ನಮ್ಮಲ್ಲಿ ಮಹಾಭಾರತ, ರಾಮಾಯಣಗಳ ಸ್ಫೂರ್ತಿಯಿಂದ ಅರಳಿದ ಸಮಕಾಲೀನ ಕಥಾವಿವರಗಳನ್ನುಳ್ಳ ಅನೇಕ ಧಾರಾವಾಹಿಗಳು ಪ್ರಸಾರಗೊಳ್ಳುತ್ತಿವೆ. ಮಹಾಭಾರತದಲ್ಲಿ ಅದೆಷ್ಟು ಹಾದರದ ವಿವರಗಳಿವೆಯೋ ಅವೆಲ್ಲವೂ ಸಹ ನಮ್ಮ ಆಧುನಿಕ ಸಮಾಜದ ಘಟನೆಗಳ ಜೊತೆಗೆ ಸಮೀಕರಣಗೊಳ್ಳವಂತಹ ವಿವರಗಳೇ. ಆದ್ದರಿಂದ ದಾಯಾದಿ ಕದನ, ಅವನ ಹೆಂಡತಿಯ ಮೇಲೆ ಇವನ ಕಣ್ಣು ಮುಂತಾದ ಕಥನಗಳ ಮಹಾಪೂರ ವಿಭಿನ್ನ ಹೆಸರುಗಳಲ್ಲಿ ಬರುತ್ತಲೇ ಇರುತ್ತದೆ. ಇಂತಹ ದೈನಂದಿನ ಧಾರಾವಾಹಿಯ ಕಥೆಗಳನ್ನ ಸ್ಥೂಲವಾಗಿ ಮೂರು ಬಗೆಯದು ಎಂದು ಗುರುತಿಸಬಹುದು. ಮೊದಲನೆಯದು ಪಕ್ಕದ ಮನೆಯ ಕಿಟಕಿಯೊಳಗೆ ಹಣಿಕುವ ಕುತೂಹಲ ಕೆರಳಿಸುವಂತಹ ಮೇಲ್ವರ್ಗದ ಕಥೆಗಳು, ಎರಡನೆಯದು ಗ್ರಾಮೀಣ ಸೊಗಡಿನ ಹೆಸರಲ್ಲಿ ಬರುವ ಕಥೆಗಳು, ಮೂರನೆಯದು ದೇಶಪ್ರೇಮ ಅಥವಾ ಭಾಷಾಪ್ರೇಮದ ಹಿನ್ನೆಲೆಯನ್ನುಳ್ಳ ಕಥೆಗಳು. (ಈ ಸಮೀಕರಣವನ್ನು ಬೇಕಾದರೆ ನಮ್ಮ ಸಿನಿಮಾಗಳಿಗೂ ಹಚ್ಚಬಹುದು.)

ಅವರ ಮನೆಯೊಳಗೆ ಹಣಿಕಿಕ್ಕುವ ಕೌತುಕವು…

ನಮ್ಮ ದೈನಂದಿನ ಧಾರಾವಾಹಿಗಳ ಇಂತಹ ಕಥನಗಳ ಆಯ್ಕೆಗೆ ಮತ್ತೊಂದು ಕಾರಣವಿದೆ. ಅದನ್ನು ಖ್ಯಾತ ಅರ್ಥಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರು ಗುರುತಿಸುವ ನಗರೀಕರಣ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಗಮನಿಸಬಹುದು. ನಮ್ಮ ಎಲ್ಲಾ ದೈನಿಕಗಳ ಕಥೆಗಳು ಒಂದೋ ನಗರದ ಮೇಲ್‌ವರ್ಗದ ಜನತೆಯ ಸುತ್ತಾ ಗಿರಕಿ ಹೊಡೆಯುತ್ತವೆ ಅಥವಾ ಗ್ರಾಮೀಣ ಬದುಕಿನ ವಿವರಗಳನ್ನು ಹಿಡಿಯುತ್ತವೆ. ಅಲ್ಲಲ್ಲಿ ಅಪವಾದ ಎಂಬಂತೆ ನಗರದ ಮಧ್ಯಮವರ್ಗದ ಕಥನಗಳು ಬಂದರೂ ಅಂತಹವು ಭಾರೀ ಜನಪ್ರಿಯತೆ ಗಳಿಸುವುದಿಲ್ಲ. ಅದೇಕೆ ಎಂಬುದನ್ನು ಗಮನಿಸಿದರೆ `ನಗರೀಕರಣ ಪ್ರಕ್ರಿಯೆ’ಯ ವಿವರ ತಿಳಿಯುತ್ತದೆ. ನಮ್ಮ ಜನರಿಗೆ ಸದಾ ಕಾಲ ತಾವಿರುವ ತಾವಿಂದ ಮತ್ತೊಂದು ಎತ್ತರಕ್ಕೆ ಜಿಗಿಯುವ ತವಕ ಸುಪ್ತವಾಗಿರುತ್ತದೆ. ಹೀಗಾಗಿ ಅವರು ದೊಡ್ಡವರ (ಶ್ರೀಮಂತರ) ಮನೆಯ ಮಲಗುವ ಮನೆಯಲ್ಲಿ ಆಗುವ ಸಲ್ಲಾಪಗಳನ್ನು ಕುರಿತು ಕುತೂಹಲಿಗಳಾಗಿರುತ್ತಾರೆ. ಅವರ ಕುತೂಹಲ ತಣಿಸುವ ಕಾಯಕವಾಗಿ ನಮ್ಮ ದೈನಿಕಗಳಲ್ಲಿ ಅತೀ ಶ್ರೀಮಂತ ವರ್ಗದ ಮನೆಗಳಲ್ಲಿ ನಡೆಯುವ ಹಾದರದ ಕಥೆಗಳನ್ನು ಹೇಳುವ ಪ್ರಯತ್ನ ಆಗುತ್ತಿರುತ್ತದೆ. ಅವುಗಳನ್ನು ನಮ್ಮ ಜನ ಚಪ್ಪರಿಸಿಕೊಂಡು ನೋಡುತ್ತಾ ಇರುತ್ತಾರೆ.

ದೇಸಿ ಎಂಬ ನಾಟಕವು…

ಎರಡನೆಯದು ಗ್ರಾಮೀಣ ಬದುಕಿನ ಹಿನ್ನೆಲೆಯುಳ್ಳ ಕಥೆಗಳು. ಇಂದು ನಮ್ಮ ನಗರವಾಸಿಗಳಲ್ಲಿ ಬಹುಪಾಲು ಜನ ಗ್ರಾಮಗಳಿಂದ ವಲಸೆ ಬಂದವರು. ಅವರನ್ನು ಓಲೈಸಲೆಂದೇ ನಗರದೊಳಗೆ ಹಳ್ಳಿತಿಂಡಿ, ಹಳ್ಳಿಮನೆ ಮುಂತಾದ ಗ್ರಾಮಜೀವನ ನೆನಪಿಸುವ ಊಟದ `ಕಾರ್ಖಾನೆ’ಗಳಿವೆ. ಅಂತಲ್ಲಿ ತಾವು ಬಿಟ್ಟುಬಂದುದನ್ನ ನೆನಪಿಸಿಕೊಳ್ಳುತ್ತಾ (ನಾಸ್ಟಾಲ್ಜಿಕ್ ಸಿಂಡ್ರೋಮ್) ಜಿಹ್ವಾ ಚಪಲ ತೀರಿಸಿಕೊಳ್ಳುವ ಅದೇ ಜನ, ಗ್ರಾಮೀಣ ಭಾಷೆಯನ್ನ ಮತ್ತು ಅಲ್ಲಿನ ಜನಜೀವನ ಕುರಿತ ಕಥೆಗಳನ್ನ ಕೂಡ ತಮ್ಮ ಹಳತಿನ ನೆನಪಿಗಾಗಿ ನೋಡುತ್ತಾರೆ. ದೇಸಿ ಇಂದಿನ ಫ್ಯಾಷನ್. ದೇಸಿ-ಸ್ವದೇಶಿ ಎಂಬ ಹೆಸರಲ್ಲಿ ನಮ್ಮ ಅನೇಕ ಬುದ್ಧಿಜೀವಿಗಳು ಜನರಿಗೆ ನೀಡುತ್ತಾ ಇರುವುದು ಕೂಡ ಇದನ್ನೇ. ಈ ಹಿನ್ನೆಲೆಯಲ್ಲಿ ಈಗ ಅತ್ಯಂತ ಜನಪ್ರಿಯವಾಗಿರುವ `ಜನಪದ ಜಾತ್ರೆ’ ಮತ್ತು `ಚಿತ್ರಸಂತೆ’ ಇತ್ಯಾದಿಗಳನ್ನು ಗಮನಿಸಬಹುದು. ಈ ಕಾರ್ಯಕ್ರಮಗಳು ಹೇಗೆ ಜನ ಸೆಳೆಯುವ ಪ್ರಯತ್ನ ಮಾಡುತ್ತಿವೆಯೋ ಹಾಗೆಯೇ ಟೆಲಿವಿಷನ್ನಿನವರೂ ಅಂತಹ ಕಥೆಗಳ ಮೂಲಕ ಜನಪ್ರಿಯತೆಗಾಗಿ ಪ್ರಯತ್ನಿಸುತ್ತಾ ಇದ್ದಾರೆ. ಅದರಲ್ಲಿ ಅನೇಕರು ಯಶಸ್ವಿಯೂ ಆಗಿದ್ದಾರೆ.

ದೇಶಪ್ರೇಮ ಎಂಬ ಭ್ರಮೆಯು ಮತ್ತು ರಾಷ್ಟ್ರಪ್ರೇಮ ಎಂಬ ಹಿಂಸೆಯು…

ಇದು ನಮ್ಮ ಮಾಧ್ಯಮದೊಳಗೆ ನಾವು ಕಾಣುವ ಮತ್ತೊಂದು ವಿವರ. ಟೆಲಿವಿಷನ್ನಿನಲ್ಲಿ ದೇಶಪ್ರೇಮ, ಭಾಷಾಪ್ರೇಮ ಮತ್ತು ಗಡಿಪ್ರೇಮ ಕುರಿತಂತೆ ಪ್ರತಿದಿನವೂ ಕಾರ್ಯಕ್ರಮಗಳು ಬರುತ್ತವೆ. ಇದು ಟೆಲಿವಿಷನ್ನಿಗಷ್ಟೇ ಸೀಮಿತವಲ್ಲ. ಎಲ್ಲಾ ಮಾಧ್ಯಮಗಳಲ್ಲಿಯೂ ಈ ಪ್ರಯತ್ನವಾಗುತ್ತಿದೆ. ಇಲ್ಲಿ `ದೇಶವನ್ನು ಪ್ರವಾಸಿಗರಿಗೆ ಪರಿಚಯಿಸುವ’ ಉದ್ದಿಶ್ಯವಷ್ಟೇ ಇಲ್ಲ ಎಂಬುದನ್ನು ನಾವು ಗಮನಿಬೇಕು. ಇವೆಲ್ಲವೂ ಸಾಮ್ರಾಜ್ಯಶಾಹಿಯು ತನ್ನನು ತಾನು ಪ್ರಕಟಪಡಿಸುವ ಮಾರ್ಗ.  ಈ ಮೂಲಕ ಪ್ರತಿಯೊಬ್ಬ ಯಜಮಾನನೂ (ನಮ್ಮ ಸಂದರ್ಭದಲ್ಲಿ ರಾಜಕೀಯ ನಾಯಕನು ಎನ್ನಬಹುದು) ತನ್ನ ಎಲ್ಲೆಕಟ್ಟುಗಳನ್ನು ಕುರಿತು ಸೂಚಿಸುತ್ತಾ ಇರುತ್ತಾನೆ. ಅದನ್ನು ದಾಟಿದವನಿಗೆ ಗುಂಡೇಟು ಎನ್ನುವುದನ್ನ ನೇರವಾಗಿ ಹೇಳದೆ ಒಳಗಿರುವ ಜನರಿಗೆ ಗಡಿಚೌಕಟ್ಟು ಮತ್ತು ಭಾಷಾ ಚೌಕಟ್ಟನ್ನು ಕುರಿತು ತಿಳಿಸುವ ಇವರು, ಆ ಮೂಲಕ ಮನಸ್ಸಿನೊಳಗೆ ಪ್ರೇಮದ ಹೆಸರಲ್ಲಿಯೇ ದ್ವೇಷವನ್ನೂ ಬಿತ್ತುತ್ತಾ ಇರುತ್ತಾರೆ. ಅದಕ್ಕಾಗಿಯೇ ದೇಶಕ್ಕೆ ಇಂತಿಷ್ಟು ವರ್ಷವಾಯಿತು ಎನ್ನುತ್ತಲೋ, ಭಾಷೆಗೆ ಆ-ಈ ಸ್ಥಾನ ಬೇಕು ಎನ್ನುತ್ತಲೋ ಮಾತಾಡುತ್ತಾ ಇರುತ್ತಾರೆ. ಈ ಎಲ್ಲಾ ಮಾತುಗಳ ಕೆಳಗೆ ತಣ್ಣಗೆ ಹಿಂಸೆಯು ಮಲಗಿರುತ್ತದೆ. ಅದು ಆಗಾಗ ಪ್ರಕಟವಾಗುತ್ತಾ ಸುದ್ದಿಮನೆಯವರಿಗೂ ಕೆಲಸ ನೀಡುತ್ತಾ ಇರುತ್ತದೆ.

ಸುದ್ದಿಯಂಗಳದಲ್ಲಿ ಸದಾ ತಲ್ಲಣ…

ಇದು ಟೆಲಿವಿಷನ್ ಮಾಧ್ಯಮದ ಅತಿಹೆಚ್ಚು ಅವಧಿಯನ್ನು ಆಕ್ರಮಿಸುವ ಕಾರ್ಯಕ್ರಮ.  ಪ್ರತಿಕ್ಷಣ ಟೆಲಿವಿಷನ್ ತೆರೆಯ ಮೇಲೆ `ಸ್ಫೋಟಸುದ್ದಿ’ ಎಂದು ತೋರಿಸುತ್ತಾ ಏನನ್ನಾದರೂ ಹೇಳುತ್ತಲೇ ಇರುವುದನ್ನು ನಾವು ನೊಡುತ್ತೇವೆ. ವೀಕ್ಷಕರು ಸದಾಕಾಲ ತಮ್ಮ ಛಾನೆಲ್ಲನ್ನೇ ನೋಡುವಂತೆ ಮಾಡುವ ಈ ಪ್ರಯತ್ನದಲ್ಲಿ ಏನು ಬೇಕಾದರೂ ಆಗುತ್ತದೆ, ಹಲವು ಒಳ್ಳೆಯದರ ಜೊತೆಗೆ ಕೆಲವು ಕೆಡುಕುಗಳು ಸಹ. ಸಧ್ಯಕ್ಕೆ ವಿದ್ಯುನ್ಮಾನ ಮಾಧ್ಯಮಗಳಿಂದ ಒಳ್ಳೆಯದೇ ಹೆಚ್ಚಾಗುತ್ತಿದೆ. ಆದರೆ ಬರಲಿರುವ ನಾಳೆಗಳಲ್ಲಿ ವಾಹಿನಿಗಳು ಹೆಚ್ಚಾದಂತೆ `ವೀಕ್ಷಕರು ತಮ್ಮ ವಾಹಿನಿಯನ್ನೇ ನೋಡಲಿ’ ಎಂಬ ಸ್ಫರ್ಧೆಗಾಗಿ ಈ ಸುದ್ದಿಕೇಂದ್ರಗಳು ಅದೇನೇನು ಬಿತ್ತರಿಸಲು ಆರಂಭಿಸುತ್ತವೆಯೋ ಎಂಬ ಆತಂಕ ಇದ್ದೇ ಇದೆ.

ಒಟ್ಟಾರೆಯಾಗಿ ಇಂದು ಎಲ್ಲಾ ಭಾಷೆಗಳಲ್ಲಿಯೂ ದಿನದ ಇಪ್ಪತ್ತ್‌ನಾಲ್ಕು ಗಂಟೆಯೂ ಸುದ್ದಿಗಳನ್ನೇ ತಿಳಿಸುವ ವಾಹಿನಿಗಳಿವೆ. ಕನ್ನಡದಲ್ಲಿ ಸಧ್ಯಕ್ಕೆ ಎರಡು. ಮುಂದೆ ಇನ್ನೆಷ್ಟೋ? ಇವುಗಳಿಂದ ವಿದ್ಯುನ್ಮಾನ ಪತ್ರಿಕೋದ್ಯಮ ಎಂಬ ಹೊಸ ವಲಯ ಸೃಷ್ಟಿಯಾಗಿದೆ. ಈ ಮಾಧ್ಯಮದವರಿಗಾಗಿ ಕೆಲವು ಹೊಸ ನಿಯಮಾವಳಿ ಮತ್ತು ನಡಾವಳಿಯನ್ನು ಸಹ ರಚಿಸಬೇಕಿದೆ. ಯಾವುದು ಬಿತ್ತರವಾಗಬಲ್ಲ ಸುದ್ದಿ ಮತ್ತು ಅಂತಹ ಸುದ್ದಿ ಪ್ರಸಾರದಿಂದ ಸಾಮಜಿಕರಲ್ಲಿ ಆಗಬಹುದಾದ ಗೊಂದಲಗಳನ್ನು ಕುರಿತು ಚರ್ಚೆಯಾಗಬೇಕಿದೆ. ನಮ್ಮ ಸಮಾಜದ ನೆಮ್ಮದಿಗಾಗಿ ನಾವುಗಳೇ ಕೂತು ಹೊಸದೊಂದು ಸೂತ್ರ ಹೆಣೆದುಕೊಳ್ಳುವ ಅನಿವಾರ್ಯಕ್ಕೆ ನಾವು ಧಾವಂತದಿಂದ ಧಾವಿಸುತ್ತಾ ಇರುವುದಂತೂ ಸತ್ಯ.

ದೈನಿಕಗಳು ನಿರ್ದೇಶಕರದ್ದೋ – ಲೇಖಕರದ್ದೋ ಎಂಬ ಪ್ರಶ್ನೆಯು…

ಅನುಮಾನವೇ ಇಲ್ಲ. ಯಾವುದೇ ಟೆಲಿವಿಷನ್ನಿನ ನಿತ್ಯಕಥೆಗಳ ನಾಯಕ ಕಲಾವಿದನಲ್ಲ, ನಿರ್ದೇಶಕನಲ್ಲ. ಅದು ಲೇಖಕ. ಇದು ಲೇಖಕನದ್ದೇ ಮಾಧ್ಯಮ. ಏಕೆಂದರೆ ಅದಾಗಲೇ ನಾನು ಸ್ಪಷ್ಟಪಡಿಸಿದಂತೆ ಟೆಲಿವಿಷನ್ ಎಂಬುದು ರೇಡಿಯೋದ ವಿಸ್ತರಣೆಯಾಗಿಯೇ ಬಳಕೆಗೆ ಬಂದದ್ದು. ಹೀಗಾಗಿ ಇಲ್ಲಿ ದೃಶ್ಯವಿವರಗಳಿಗಿಂತ ಶ್ರವ್ಯವಿವರಗಳಿಗೆ ಮಹತ್ವ. ಧಾರಾವಾಹಿಗಳಲ್ಲಿಯೂ ಕೂಡ ನೋಡುಗರಿಗಿಂತ ಕೇಳುಗರೇ ಹೆಚ್ಚು. ತಮ್ಮ ದೈನಂದಿನ ಕಾರ್ಯಕ್ರಮಗಳ ನಡುವೆಯೇ ಟಿವಿ ಹಚ್ಚಿಟ್ಟು ಧಾರಾವಾಹಿಗಳ ಸಂಭಾಷಣೆಯನ್ನಷ್ಟೇ ಕೇಳುವವರ ಸಂಖ್ಯೆ ಅಧಿಕ. ಹೀಗಾಗಿ ನಮ್ಮಲ್ಲಿ ತಯಾರಾಗುವ ಬಹುತೇಕ ಧಾರಾವಾಹಿಗಳು ರೇಡಿಯೋ ನಾಟಕದಂತೆ ಇರುತ್ತದೆ. ಅಂದರೆ ಮಾತು ಬಹುಮುಖ್ಯವಾದ ಮಾಧ್ಯಮವಾಗಿಯೇ ಟೆಲಿಚಿಷನ್‌ನಲ್ಲಿ ಬಳಕೆಯಾಗುತ್ತಿದೆ. ಆದ್ದರಿಂದ ಸಿನಿಮಾದ ಹಾಗೆ ಟೆಲಿವಿಷನ್ನಿನಲ್ಲಿ ಮಹಾತಾರೆಯರಿಲ್ಲ. ಇದ್ದರೆ ಅವರು ಮಹಾಮಾತುಗಾರರು. ಇಲ್ಲಿ ವಾಚಿಕವೇ ಸರ್ವ ವಾಙ್ಮಯ! ಅಂತೆಯೇ ಈ ಮಾಧ್ಯಮದಲ್ಲಿ ಲೇಖಕ/ನಿರ್ದೇಶಕ ಎರಡೂ ಆದವರು ಜನಪ್ರಿಯರಾದಂತೆ ಕೇವಲ ನಿರ್ದೇಶಕರಾದವರು ಜನಪ್ರಿಯವಾಗುವುದಿಲ್ಲ. ಅದಕ್ಕಾಗಿ ಉದಾಹರಣೆಯನ್ನು ಸಹ ನೀಡಬೇಕಾಗಿಲ್ಲ ಎಂಬಷ್ಟು ವಿವರವನ್ನು ಈಗಿನ ಪ್ರೇಕ್ಷಕ ಪ್ರತಿಕ್ರಿಯೆಯಿಂದಲೇ ಪಡೆಯಬಹುದು.

ಇದಕ್ಕೆ ಮತ್ತೊಂದು ಬಹುಮುಖ್ಯ ಕಾರಣ ದೈನಿಕ ಧಾರಾವಾಹಿಗಳ ಕಥನಕ್ರಮ ಅಥವಾ ಕಟ್ಟಡ (ಸ್ಟ್ರಕ್ಚರ್)! ಈ ಕಥೆಗಳಲ್ಲಿ ಕಾವ್ಯಮೀಮಾಂಸೆಯು ಸೂಚಿಸುವ ಆರಂಭ, ಮಧ್ಯ ಮತ್ತು ಅಂತ್ಯಗಳಿಲ್ಲ. ಈ ಕಥೆಗೆ ಕೆಲವು ಪಾತ್ರಗಳು ಮತ್ತು ಆರಂಭ ಮಾತ್ರ ಬೇಕು. ಆನಂತರ ಅದು ಘಟನಾತ್ಮಕವಾಗಿ ನದಿಯಂತೆ ಹರಿಯುತ್ತಲೇ ಇರುತ್ತದೆ. ಈ ನದಿಗೆ ಮರಳಿ ತನ್ನ ಉಗಮ ಸ್ಥಾನಕ್ಕೆ ಬರಬೇಕೆಂಬ ಅಗತ್ಯವಿಲ್ಲ. ಆ ದಿನ/ ಪ್ರಕರಣ ಮತ್ತು ಅದರ ಅಂತ್ಯವನ್ನು ರೋಚಕಗಿಳಿಸುವುದಷ್ಟೇ ಇಲ್ಲಿ ಮುಖ್ಯ. ಹೀಗಾಗಿ ಅತ್ಯುತ್ತಮವಾಗಿ ಸಿನಿಮಾ ಅಥವಾ ಟೆಲಿಫಿಲ್ಮ್‌ಗೆ ಬರೆಯಬಲ್ಲವನು ಈ ದೈನಿಕದ ಜಗತ್ತಿಗೆ ಬಂದಾಗ ದಿಕ್ಕುಗಾಣದಂತೆ ಒದ್ದಾಡುತ್ತಾನೆ. ಅಂತೆಯೇ ದೈನಿಕಗಳಿಗೆ ಬರೆದು ಗೆದ್ದವನು ಸಿನಿಮಾ ಅಥವಾ ಟೆಲಿಫಿಲ್ಮ್‌ಗೆಂದು ಬರೆಯುವಾಗ ಮಹಾವಾಚಾಳಿ ಎನಿಸಿಕೊಳ್ಳುತ್ತಾನೆ. ಇದು ಈ ಮಾಧ್ಯಮಗಳೇ ಸೃಷ್ಟಿಸಿರುವ ಪರಿಸ್ಥಿತಿ. ಇಂದಿನ ಹುಡುಗರ ಭಾಷೆಯಲ್ಲಿ ಹೇಳುವುದಾದರೆ ದೈನಿಕ ಕಥನ ಎಂಬುದು ಒನ್‌ಡೇ ಕ್ರಿಕೆಟ್‌ಮ್ಯಾಚು. ಅಲ್ಲಿ ಹೊಡೆದುದೆಲ್ಲಾ ಸಿಕ್ಸರ್ ಅಥವಾ ಬೌಂಡರಿಯಾಗಬೇಕು. ಸಿನಿಮಾ ಅಥವಾ ಟೆಲಿಫಿಲ್ಮ್ ಎಂಬುದು ಟೆಸ್ಟ್ ಕಿಕೆಟ್ ಮ್ಯಾಚು. ಒಂದೆಡೆ ರಂಜನೆಯೇ ಪ್ರಧಾನ ಮತ್ತೊಂದೆಡೆ ಕಾವ್ಯತ್ಮಕ ಸತ್ವ ರೂಢಿಸುವುದೇ ಮುಖ್ಯ. (ಹಾಗೆಂದು ನಮ್ಮಲ್ಲಿ ಬರುತ್ತಿರುವ ಎಲ್ಲಾ ಸಿನಿಮಾಗಳೂ ಕಾವ್ಯಾತ್ಮಕ ಎಂದುಕೊಳ್ಳಬೇಡಿ, ಪ್ಲೀಸ್!)

ಅಭಿನಯ ಎಂಬ ಅರಗಿಳಿಗಳ ಸರ್ಕಸ್ಸು ಮತ್ತು…

ಇಂದು ನಮ್ಮ ಟೆಲಿವಿಷನ್ನಿನಲ್ಲಿ ಪೂರ್ಣ ಪ್ರಮಾಣದ ಕಲಾವಿದರು ಎಂದು ಕರೆಸಿಕೊಳ್ಳಬಹುದಾದವರ ಸಂಖ್ಯೆ ಬೆರಳೆಣಿಕೆಯದು. ಇಲ್ಲಿರುವವರು ಅರಗಿಳಿಗಳು. ಅಂದರೆ ಕೊಟ್ಟ ಮಾತನ್ನು ಒಪ್ಪಿಸುವವರು (ಅಪವಾದಗಳನ್ನು ಹೊರತುಪಡಿಸಿ ಹೇಳುತ್ತಿದ್ದೇನೆ. ಸತ್ವವುಳ್ಳ ಕಲಾವಿದರು ಬೇಸರಿಸಿಕೊಳ್ಳದಿರಿ). ಇಂದು ಒಂದು ದೈನಿಕದ ಯಾವುದೋ ಪಾತ್ರದಲ್ಲಿ ಅಭಿನಯಿಸಿ ನಾಳೆ ಇನ್ನಾವುದೋ ದೈನಿಕದ ಇನಾವುದೋ ಪಾತ್ರಕ್ಕೆ ಬದಲಾಗುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಅಭಿನಯ ಎಂದರೆ ಏನೆಂದು ಬಲ್ಲವರು ಬೇಕಾಗುತ್ತದೆ. ಅಂತಹ ತಿಳುವಳಿಕೆಯುಳ್ಳವರ ಸಂಖ್ಯೆ ಟೆಲಿವಿಷನ್ನಿನಲ್ಲಿ ಮಾತ್ರವಲ್ಲ ನಮ್ಮ ಹಿರಿತೆರೆಯಲ್ಲಿಯೂ ಕಡಿಮೆಯೇ. ಆದ್ದರಿಂದಲೇ ನಮ್ಮಲ್ಲಿರುವ ಎಲ್ಲಾ `ಕಲಾವಿದರೂ” ತಮ್ಮದೇ ಒಂದು ಫಾರ್‍ಮುಲಾ ರೂಢಿಸಿಕೊಳ್ಳುತ್ತಾರೆ. ಕೋಪಕ್ಕೆ ಒಂದು ಗೆಸ್ಚರ್, ಅಳುವಿಗೆ ಒಂದು ಗೆಸ್ಚರ್ ಎಂಬಂತೆ ಕಾಣಿಸಿಕೊಳ್ಳುವ ಇಂತಹ `ಅಭಿನಯಕೋರ’ರಿಂದ ಅಭಿನಯಕಲೆಗೆ ಲಾಭವಾಗದಿದ್ದರೂ ಅಣಕು ಕಲಾವಿದರಿಗೆ ಹೊಟ್ಟೆಪಾಡಾಗುತ್ತಿದೆ ಎನ್ನುವುದು ಸತ್ಯ.

ಇಂತಹವರಲ್ಲಿ ಅನೇಕರು ತಾವು ಆಡುವ ಮಾತಿಗೂ ಒಂದು ಅಸಹಜ ಲಯವನ್ನು ಬಳಸುತ್ತಾ ಇರುತ್ತಾರೆ. ದೈನಿಕ ಧಾರಾವಾಹಿಗಳನ್ನು ನೋಡುವವರಿಗೆ ಇದು ತಿಳಿದಿರುತ್ತದೆ. ಇದರಿಂದಾಗಿ ಭಾಷೆಯ ಬೆಳವಣಿಗೆಗೂ ಧಕ್ಕೆ ಎಂದು ನನಗನಿಸುತ್ತದೆ. ಏಕೆಂದರೆ ಅಂತಹ ಮಾತುಗಳನ್ನು ಕೇಳಿದ ಎಳೆಯರು ತಮಗರಿವಿಲ್ಲದಂತೆ ಅದೇರೀತಿ ನಿಜಜೀವನದಲ್ಲಿಯೂ ಮಾತಾಡಲು ಆರಂಭಿಸುತ್ತಾರೆ. ಈ ರೀತಿಯಾಗಿ ಭಾಷೆಯನ್ನು ಕೊಲ್ಲುವುದಕ್ಕೆ ಏನಾದರೂ ರ್‍ಯಾಂಕ್ ಕೊಡುವ ಕ್ರಮ ಇದ್ದರೆ ಅನೇಕ ಟಾಕ್‌ಷೋಗಳನ್ನು ನಡೆಸುವ ನಿರೂಪಕರುಗಳಿಗೆ (ಎಫ್.ಎಂ.ರೇಡಿಯೋ ಸೇರಿದಂತೆ) ಪ್ರಥಮ ಸ್ಥಾನ ನೀಡಬೇಕು. ಇದು ಪ್ರತ್ಯೇಕವಾಗಿಯೇ ಚರ್ಚೆಯಾಗಬೇಕಾದ ವಿಷಯವಾದ್ದರಿಂದ ಇಲ್ಲಿ ಬೆಳೆಸುತ್ತಿಲ್ಲ.

ನಮ್ಮ ತರಬೇತಿ ಕೇಂದ್ರಗಳು ಮತ್ತು…

ನಮ್ಮ ಉದ್ಯಮವು ಬೆಳೆದಂತೆ ಇಲ್ಲಿಗೆ ಬರುತ್ತಿರುವ ಹೊಸಬರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರತಿದಿನ ಪಾತ್ರ ಕೇಳುವವರಿದ್ದಂತೆ, ನಿರ್ದೇಶನ ಮತ್ತು ಇನ್ನಿತರ ವಿಭಾಗಗಳಲ್ಲಿ ಕೆಲಸ ಹುಡುಕಿ ಬರುತ್ತಿರುವವರ ಸಂಖ್ಯೆಯೂ ದಿನೇದಿನೇ ಹೆಚ್ಚಾಗುತ್ತಿದೆ. ಈ ಉದ್ಯಮ ಬರುವ ಹೊಸಬರನ್ನೆಲ್ಲ ತನ್ನೊಳಗೆ ತುಂಬಿಕೊಳ್ಳುವ ಶಕ್ತಿಯುಳ್ಳದ್ದು. ಆ ಬಗ್ಗೆ ಅನುಮಾನವಿಲ್ಲ. ಇದರಿಂದಾಗಿ ಇಂತಹ ಹೊಸಬರಿಗೆ ತರಬೇತಿ ಕೊಡುವ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿವೆ. ನಮ್ಮ ರಾಜಧಾನಿಯಲ್ಲಂತೂ ರಸ್ತೆಗೆ ಒಂದರಂತೆ ಅಭಿನಯ ತರಬೇತಿ ಶಾಲೆಗಳಿವೆ, ವಿಸ್ತರಣೆಗೆ ಒಂದರಂತೆ ತಾಂತ್ರಿಕ ಶಿಕ್ಷಣ ಕೊಡುತ್ತೇವೆ ಎನ್ನುವ ಸಂಸ್ಥೆಗಳಿವೆ. ಸಂಖ್ಯೆಯ ದೃಷ್ಟಿಯಿಂದ ಇವು ಅನೇಕ. ಆದರೆ ಈ ಸಂಸ್ಥೆಗಳ ಪರವಾನಗಿ ಪತ್ರ ಹಿಡಿದು ಬರುವ ಬಹುತೇಕರಿಗೆ ಅಭಿನಯದ ಗಂಧವೂ ಇರುವುದಿಲ್ಲ. ತಂತ್ರಜ್ಞರಾಗಲು ಪರವಾನಗಿ ಪಡೆದವರಂತೂ ಈ ಉದ್ಯಮದ ಮೂಲಭೂತ ವಿವರಗಳನ್ನೂ ಕಲಿತಿರುವುದಿಲ್ಲ. ಇದರಿಂದಾಗಿ ಉದ್ಯಮಕ್ಕೆ ಅನುಕೂಲಕ್ಕಿಂತ ಹಾನಿಯೇ ಹೆಚ್ಚಾಗುತ್ತಿದೆ. ಈ ದೃಷ್ಟಿಯಿಂದ ನಮ್ಮ ಉದ್ಯಮಿಗಳೆಲ್ಲರೂ ಈ ತರಬೇತಿ ಕೇಂದ್ರಗಳ ಜೊತೆಗೆ ಕುಳಿತು ಅಲ್ಲಿನ ಪಠ್ಯಕ್ರಮ, ಪಾಠ ಕಲಿಸುವವರ ತಿಳುವಳಿಕೆಯನ್ನು ಪರಿಶೀಲಿಸಿ, ಅಗತ್ಯವಾದ ಮಾರ್ಪಾಟುಗಳನ್ನು ತರುವುದು ಇಂದಿನ ಅಗತ್ಯವಾಗಿದೆ. ಇಲ್ಲದೆ ಹೋದರೆ ಈ ಸಂಸ್ಥೆಗಳಿಂದ ಹೊರಬರುವವರ ಸಂಖ್ಯೆ ಮಾತ್ರ ಹೆಚ್ಚಾಗಿ ಅವರಿಂದ ಉದ್ಯಮಕ್ಕೆ ಸಕಾರಾತ್ಮಾಕ ಲಾಭ ದೊರೆಯದಂತೆ ಆಗಬಹುದು.

ಈ ನಿಟ್ಟಿನಲ್ಲಿ ಮಾತಾಡಬೇಕಾದ್ದು ಇನ್ನೂ ಬಹಳಷ್ಟಿದೆ. ಈ ವಿಷಯ ಈ ಲೇಖನದ ವ್ಯಾಪ್ತಿಯಿಂದ ಹೊರಗುಳಿಯುತ್ತದೆಯಾದ್ದರಿಂದ ಮಾತು ಮೊಟಕುಗೊಳಿಸುತ್ತಿದ್ದೇನೆ.
ಜನಪ್ರಿಯತೆಯ ಬೆನ್ನು ಹತ್ತಿದವರ ನಿತ್ಯ ಮ್ಯಾರಾಥಾನ್…

ಈ ನಮ್ಮ ಟೆಲಿವಿಷನ್ ಎಂಬುದು ಎಲ್ಲಾ ಅರ್ಥದಲ್ಲಿಯೂ ಉದ್ಯಮ. ಇಲ್ಲಿ ಸಂವೇದನೆಗಿಂತ ಸಂಪಾದನೆಯೇ ಮುಖ್ಯ. ದಿನದ ಅಂತ್ಯದಲ್ಲಿ ಲಾಭ ಗಳಿಸಿದವನು ಅಥವಾ ಲಾಭ ತಂದವನಿಗೆ ಮಾತ್ರ ಈ ಕ್ಷೇತ್ರದಲ್ಲಿ ಬದುಕುವ ಅವಕಾಶ. ಹಾಗಲ್ಲದೇ ಹೋದವನ ಧಾರಾವಾಹಿ ಅದ್ಭುತ ಎಂದು ವಿಮರ್ಶಕರ ಮೆಚ್ಚುಗೆ ಗಳಿಸಿದ್ದರೂ ಉಪಯೋಗವಿಲ್ಲ. ಅದಕ್ಕೆ ಜನಮನ್ನಣೆಯಿದೆಯೇ, ಅದಕ್ಕೆ ಜಾಹೀರಾತು ದೊರಕುತ್ತಿದೆಯೇ ಎಂಬುದಷ್ಟೇ ಇಲ್ಲಿ ಪ್ರಧಾನವಾಗುವುದು. ಇಂತಲ್ಲಿ ಕಲಾತ್ಮಕತೆ, ಮಾನವೀಯತೆ, ಆದರ್ಶಗಳೆಲ್ಲವೂ ಬುದ್ಧಿಜೀವಿಗಳ/ಸೆಮಿನಾರುಗಳ ಸರಕಾಗಿ ಬಿಡುತ್ತದೆ. ಇಲ್ಲಿ ಓಡಿದವನು ಗೆದ್ದ, ನಿಂತವನು ಸೋತ ಎಂಬುದೇ ತತ್ವ. ಆದ್ದರಿಂದಲೇ ಎಲ್ಲಾ ದೈನಿಕಗಳಲ್ಲಿಯೂ ಕಿಡ್ನ್ಯಾಪ್, ರೇಪ್ ಅಲ್ಲದೆ ಸಾವುಗಳು ಸಂಭವಿಸುತ್ತಲೇ ಇರುತ್ತದೆ. ಪ್ರತಿದಿನದ ಅಂತ್ಯಕ್ಕೆ ನಾಳೆಯೂ ವೀಕ್ಷಕ ನೋಡಲೇಬೇಕಾದ ತಿರುವು ಹುಡುಕುವುದೇ ಕೆಲಸ. ಇನ್ನು ನವಿರು ಕಥನ, ಕಾವ್ಯಾತ್ಮಕತೆ ಇವೆಲ್ಲಾ ಇಲ್ಲಿರುವುದು ದುಸ್ಸಾಧ್ಯ.

ಹೀಗೆ ನಮ್ಮ ಉದ್ಯಮದೊಳಗಿನ ಮಿತಿಗಳನ್ನು ಹೇಳುತ್ತಲೇ ಹೋಗಬಹುದು. ಆದರೂ ಒಂದಂತೂ ಸತ್ಯ. ಈ ಎಲ್ಲಾ ಮಿತಿಗಳ ನಡುವೆಯೂ ಈ ಉದ್ಯಮ ನಮಗೆ ನೆಮ್ಮದಿ ಕೊಟ್ಟಿದೆ. ಉಸಿರಾಡುವ ಅವಕಾಶ ಕೊಟ್ಟಿದೆ. ತೆಗೆದುಕೊಂಡ ಸಾಲದ ಕಂತನ್ನು ಕಟ್ಟಲು ಚಿಂತೆಯಿಲ್ಲದ ದಾರಿ ಒದಗಿಸಿದೆ. ಅಂದರೆ ನಾವು ಹೊರಗಿನಿಂದ ನೋಡುವುದಾದರೆ ಮಹಾಸುಖಿಗಳು. ಆದರೆ ಒಳಗಡೆ…?
ಹಾಗೆಂದು ಇಲ್ಲಿ ನಾನು ಹೇಳಿರುವುದೆಲ್ಲವೂ ಬದಲಾಗದ ಸ್ಥಿತಿ ಎಂದೇನಲ್ಲ. ಕಾಳಾಂತರದಲ್ಲಿ ಈ ಎಲ್ಲಾ ಮಿತಿಗಳನ್ನ ದಾಟಿಕೊಳ್ಳುವ ವಾತಾವರಣ ಸೃಷ್ಟಿಯಾಗಬಹುದು. ಆ ದಿನಕ್ಕೆ ಕಾಯುತ್ತಾ ನಾಳೆ ಪ್ರಸಾರವಾಗಲಿರುವ ನನ್ನ ಧಾರಾವಾಹಿಗಾಗಿ ಹೊಸ ತಿರುವು ಹುಡುಕಲು ಹೊರಡುತ್ತಾನೆ.

ಮಾತಾಡಬೇಕಾದ್ದು ಇನ್ನೂ ಬೇಕಾದಷ್ಟಿದೆ. ನನ್ನ ನಿಮ್ಮ ನಡುವಿನ ಈ ಸಂವಾದ ನಿರಂತರವಾಗಿರಲಿ.

Advertisements

0 Responses to “ಕಿರುತೆರೆ ಎಂಬ ಮಹಾತೆರೆಯು ಮತ್ತು…!”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: