ಜಾಗತೀಕರಣದ ನೆರಳು ಮತ್ತು ತಳಮಟ್ಟದ ಚಳುವಳಿಗಳ ನರಳು (ಸಾವು)

(ಡಿ.ಎಸ್. ಚೌಗಲೆ ಅವರ “ದಿಶಾಂತರ” ನಾಟಕ ಕುರಿತು ಮಾತಿಗಾಗಿ ಮಾಡಿಕೊಂಡ ಟಿಪ್ಪಣಿಯ ಲೇಖನ ಸ್ವರೂಪ)

ಮೊನ್ನೆ ನಂದಗುಡಿ ಎಂಬ ಗ್ರಾಮದಲ್ಲಿ ಭುಗಿಲೆದ್ದ ಹಿಂಸಾಚಾರ! ನೆನ್ನೆ ಲಕ್ನೋದಲ್ಲಿ ಬಿದ್ದ ಬಾಂಬು! ಕಳೆದ ತಿಂಗಳು ಹೈದರಾಬಾದ್‌ನ ದರ್ಗಾದಲ್ಲಿ, ಮತ್ತಾವುದೋ ಪ್ರದರ್ಶನ ಸ್ಥಳದಲ್ಲಿ ಸತ್ತ ಅಮಾಯಕರು!… ಹೀಗೆ ನಿತ್ಯ ಸಾವಿನ ವರ್ಣನೆ ಒಂದು ಕಡೆಗೆ. ಇವುಗಳಿಗೆ ವೈರುಧ್ಯ ಎಂಬಂತೆ ಸಮ್ಮಿಶ್ರ ಸರ್ಕಾರಗಳ ಸಮ್ಮೋಹಿನಿ ರಾಜಕಾರಣ! ಯಾರನ್ನು ಯಾರು ಕೊಂಡರು? ಯಾರು ಕುರ್ಚಿ ಹಿಡಿದರು ಎಂಬ ಅರಾಜಕತೆಯ ಪರಾಕಾಷ್ಟೆ! ನ್ಯೂಕ್ಲಿಯರ್ ಡೀಲ್ಗೆ ಸಹಿ ಹಾಕುವ ಮತ್ತು ಹಾಕದಿರುವ ಹೆಸರಲ್ಲಿ ನಡೆವ ಆಟ ಮತ್ತು ಅಸಹ್ಯವೆನಿಸುವ ಆಧುನಿಕ ಸರ್ಕಸ್ಸುಗಳು ಮತ್ತೊಂದು ಕಡೆಗೆ! ಇವೆಲ್ಲವುಗಳ ನಡುವೆ ನಾವು ಗಮನಿಸದ ಮತ್ತು ಮಾತಿಗೂ ತಂದುಕೊಳ್ಳದ ಅಮಾಯಕರಿದ್ದಾರೆ. ಅವರು ನಮ್ಮ ದಿನಗೂಲಿ ಕಾರ್ಮಿಕರು, ನಮ್ಮ ರಸ್ತೆಗಳಲ್ಲಿ ಆಟೋ-ಟೆಂಪೋ ಓಡಿಸುವವರು, ನಮ್ಮಲ್ಲಿನ ಅನೇಕರ ಬಾಯಿಗೆ ತಂಬಾಕು ತುಂಬಿದ ಜರ್ದಾ ಒದಗಿಸುವ ಶ್ರಮಿಕರು. ನಿತ್ಯ ನೇಣು ಹಾಕಿಕೊಳ್ಳುವ ಅಥವಾ ಗಿಡಕ್ಕೆ ಹೊಡೆವ ಔಷಧಿಯನ್ನ ತಾನೇ ಕುಡಿವ ರೈತಾಪಿ ವರ್ಗ. ಇವರ ಬದುಕನ್ನು ಕುರಿತು ನಮ್ಮ ಮಾಧ್ಯಮಗಳು ಪ್ರಧಾನ ವಿಷಯವಾಗಿ ಮಾತಾಡುವುದನ್ನ ಬಿಟ್ಟು, ಅದಾಗಲೇ ಮೂರು ದಶಕಗಳಾಗುತ್ತಿವೆ. ಭಾರತದ ಜನಸಂಖ್ಯೆಯಲ್ಲಿ ಶೇಕಡಾ ಎಪ್ಪತ್ತು ಜನರನ್ನ ಕುರಿತು ನಾವು ನಮ್ಮ ಮಾಧ್ಯಮಗಳ ಮೂಲಕ ಚರ್ಚಿಸುವುದನ್ನು ಸಂಪೂರ್ಣ ಬಿಟ್ಟಿದ್ದೇವೆ. ಇಂದು `ಆಧುನಿಕ’ ಎಂಬ ಹಣೆಪಟ್ಟಿಯನ್ನುಳ್ಳ ಯಾವುದೋ ಮಾಡೆಲ್ ಭಿಕ್ಷುಕಿಯಾದದ್ದು ಸುದ್ದಿಯಾಗುತ್ತದೆ, ಅಥವಾ ಯಾವುದೋ `ಮಾಡೆಲ್’ ಹುಡುಗಿ ತನಗೆ ಸಿಗಲಿಲ್ಲವೆಂದು, ಅವರಪ್ಪ ಅಮ್ಮನನ್ನು ಕೊಂದವನು ಸುದ್ದಿಯಾಗುತ್ತಾನೆ, ಅಥವಾ ಮುಂಬಯಿ ಷಹರಿನ ನಡುವೆ ಶ್ರೀಮಂತ ಅಣ್ಣನಿಗೆ ತಮ್ಮನೇ ಗುಂಡಿಕ್ಕಿದ ಸುದ್ದಿ ನಮ್ಮ ಪತ್ರಿಕೆಗಳ ಮುಖಪುಟವನ್ನ ಅಲಂಕರಿಸುತ್ತಿದೆ.

ನಮಗೆ ಸಂಬಂಧವಿಲ್ಲದ ಇಂತಹ ಸುದ್ದಿಗಳ ಜೊತೆಗೆ ಮಧ್ಯಮವರ್ಗದವರಾದ ನಾವು ಬ್ರಿಟಿಷರು ಭಾರತಕ್ಕೆ ಕೊಟ್ಟು ಹೋದ ಅಪದ್ಧಗಳಲ್ಲಿ ಒಂದಾದ ಕ್ರಿಕೆಟ್‌ನಂತಹದರಲ್ಲಿ ಮುಳುಗಿಹೋಗುತ್ತೇವೆ. ನಮ್ಮ ವಿದ್ಯುನ್ಮಾನ ಮಾಧ್ಯಮಗಳು ಸಹ ಶ್ರೀಮಂತರ ಮನೆಯ ಮಲಗುವ ಕೋಣೆಯಲ್ಲಿ ಆಗುವ ಅನೈತಿಕ ಸಂಬಂಧಗಳನ್ನು ಕುರಿತು ಮಾತಾಡುತ್ತಿವೆ. ಅಥವಾ ಕಾಮಿಡಿಯ ಹೆಸರಲ್ಲಿ ಅಪಸವ್ಯಗಳನ್ನ ಉಣಬಡಿಸುತ್ತಿವೆ. ಈಚಿನ ದಿನಗಳಲ್ಲಿ ನಾಲ್ಕುಜನ (ಬಾಯಿಹರುಕರು) ಹೇಳುವ ಹಳಸಲು ಜೋಕುಗಳನ್ನು ಕೇಳಲು ಜನ ಸಂತೆಗೆ ಸೇರಿದಂತೆ ನೆರೆಯುತ್ತಾರೆ.
ಇದು ಇಂದಿನ ಸ್ಥಿತಿ. ಆಧುನಿಕ ಸಮಾಜ ಎಂಬುದು ಯಾವುದೋ ಭ್ರಮಾಧೀನ ಸ್ಥಿತಿಯಲ್ಲಿ, ದಿಕ್ಕುಗಾಣದಂತೆ, ಆಕ್ರೋಶ ವ್ಯಕ್ತಪಡಿಸಲು ಸಹ ಮರೆತಂತೆ ಬದುಕುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ರಂಗಭೂಮಿ ಮತ್ತು ನಾಟಕಲೋಕ ಏನು ಮಾಡುತ್ತಿದೆ ಎಂದು ನೋಡುವುದು ಇಂದಿನ ಅಗತ್ಯವಾಗಿದೆ.

***

ತಳಮಟ್ಟದ ಚಳುವಳಿಗಳಿಗೆ ಮತ್ತು ಭಾರತದ ಶ್ರಮಿಕವರ್ಗಕ್ಕೆ ನೇರ ಪ್ರತಿಕ್ರಿಯೆಯನ್ನು ನಮ್ಮ ರಂಗಭೂಮಿ ಒದಗಿಸುತ್ತಲೇ ಬಂದಿದೆ. ಶೂದ್ರಕನ `ಮಣ್ಣಿನಬಂಡಿ’ಯಿಂದ ಆರಂಭಿಸಿ ಬಾದಲ್ ಸರ್ಕಾರ್ ಅವರ ತೃತೀಯ ರಂಗಭೂಮಿಯವರೆಗೆ, ನಂತರ ಅವುಗಳ ಮುಂದುವರಿಕೆಯಾಗಿ ನಮ್ಮ ನಾಡಿನಲ್ಲಿಯೂ ಹುಟ್ಟಿಕೊಂಡ ಬೀದಿನಾಟಕ ಚಳುವಳಿಗಳವರೆಗೆ, ಅನೇಕಾನೇಕ ನಾಟಕಗಳು ಈ ನಾಡಿನ ಕೆಳವರ್ಗವನ್ನು ಕುರಿತು ಮಾತಾಡಿವೆ. ಆ ವರ್ಗದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿವೆ.

ಕನ್ನಡದ ಸಂದರ್ಭದಲ್ಲಿ ಇಂತಹ ಪ್ರಯತ್ನಗಳ ಮೊದಲ ಹೆಜ್ಜೆಗಳು ಕಾಣುವುದು ವೃತ್ತಿರಂಗಭೂಮಿಯ ಉಚ್ಚ್ರಾಯದ ಕಾಲದಲ್ಲಿ. `ರೈತನ ಮಕ್ಕಳು’ ಮುಂತಾದ ನಾಟಕಗಳು, ಭಾರತದ ಸ್ವಾತಂತ್ರ ಚಳುವಳಿಯ ಜೊತೆ ಜೊತೆಗೆ ಪ್ರೇಕ್ಷಕನಿಗೆ ರಾಷ್ಟ್ರಭಕ್ತಿಯನ್ನು ಉಣಬಡಿಸುವ ಕೆಲಸಗಳನ್ನು ಸಹ ಈ ನಾಟಕಗಳ ಮೂಲಕ ಮಾಡಿದುದನ್ನು ನಾವು ಗಮನಿಸಬಹುದು. ಸ್ವಾತಂತ್ರ್ಯಾನಂತರದ ನಮ್ಮ ಕನ್ನಡ ರಂಗಭೂಮಿಯು ಗೆರೆ ಕೊರೆದಂತೆ ಹವ್ಯಾಸಿ ಮತ್ತು ವೃತ್ತಿ ಎಂದು ಒಡೆದುಹೋಯಿತು. (ಈ ಒಡೆಯುವಿಕೆ ಕೈಲಾಸಂ ಮತ್ತು ಶ್ರೀರಂಗರು ನಾಟಕಗಳನ್ನು ಬರೆಯಲಾರಂಭಿಸಿದ ಕಾಲದಲ್ಲಿಯೇ ಆರಂಭವಾಯಿತು ಎಂದರೂ ತಪ್ಪಾಗಲಾರದು. ಆ ವಿಷಯ ಕುರಿತು ಮತ್ತೊಂದು ಲೇಖನದಲ್ಲಿ ವಿಸ್ತೃತವಾಗಿ ಚರ್ಚಿಸಿರುವುದರಿಂದ ಇಲ್ಲಿ ಆ ವಿವರವನ್ನ ಮಾತಾಡುತ್ತಿಲ್ಲ.) ಈ ಹಂತದಲ್ಲಿ ವೃತ್ತಿ ರಂಗಭೂಮಿಯು ಹಣಗಳಿಕೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿದ ಪ್ರಯೋಗಗಳೇ ಹೆಚ್ಚಾದರೂ ಕೆಲವು ಆಸಕ್ತರು `ನೇಗಿಲಯೋಗಿ’ `ಸಂಪತ್ತಿಗೆ ಸವಾಲ್’ ಮುಂತಾದ ನಾಟಕದ ಮೂಲಕ ಶ್ರಮಿಕ ವರ್ಗವನ್ನು ಧ್ವನಿಸುವ ಪ್ರಯತ್ನ ಮಾಡಿದ್ದಾರೆ. ಅ,ನ.ಸುಬ್ಬರಾವ್ ಅಂತಹವರು ಬರೆದ `ಕೂಲಿ’, `ನೇಕಾರ’ ಮುಂತಾದ ನಾಟಕಗಳು ಸಹ ಇದೇ ಹಿನ್ನೆಲೆಯಿಂದ ಬಂದಂತಹ ನಾಟಕಗಳು. ಇಲ್ಲಿ ಶ್ರಮಿಕ ವರ್ಗದ ಸಂಕಷ್ಟವನ್ನು ಹೇಳುವ ಪ್ರಯತ್ನವಿದೆ. ಆದರೆ ಆ ಸಮಸ್ಯೆಗಳನ್ನ ಆದರ್ಶಿಕೃತ ಪಾತ್ರಗಳ ಮೂಲಕ ಸರಿಪಡಿಸುವ ಹಾದಿಯನ್ನ (ನವೋದಯ ಸಾಹಿತ್ಯ ಪ್ರೇರಿತ ಮಾರ್ಗ) ತೋರುವ ಪ್ರಯತ್ನವಿದೆ. ಹೀಗಾಗಿ ಶ್ರಮಿಕವರ್ಗದ ಸಮಸ್ಯೆಯ ಎಲ್ಲಾ ಮಗ್ಗುಲುಗಳು ಈ ನಾಟಕಗಳಲ್ಲಿ ಚರ್ಚೆಯಾಗಿಲ್ಲ. ಕೇವಲ ಧ್ವನಿತವಾಗಿವೆ. ಹೀಗೆ ಸಮಸ್ಯೆಗಳನ್ನ ಆದರ್ಶ ನಾಯಕನಿಂದ ತಿದ್ದುವ ಪ್ರಯತ್ನಗಳು ಒಂದು ಕಾಲಘಟ್ಟದಲ್ಲಿನ ಈ ದೇಶದ ರಾಜಕೀಯ ಸ್ಥಿತಿಯಲ್ಲಿ ಅಗತ್ಯವಾಗಿತ್ತು. ಆದರೆ ಅದು ನಂತರವೂ ಮುಂದುವರೆದುದರಿಂದ ಇಂತಹ ಒಬ್ಬ ನಾಯಕನ ಮೂಲಕ ಎಲ್ಲವನ್ನೂ ತಿದ್ದುವ ಪ್ರಯತ್ನ ಮಾಡಿದಾಗೆಲ್ಲಾ ಸಮಸ್ಯೆಗಳ ಎಲ್ಲಾ ಮಗ್ಗುಲುಗಳ ಚರ್ಚೆಯಾಗದೆ ಕೇವಲ ಸ್ವಚ್ಚೀಕರಣದ ಮಾತುಗಳ ಮಾತ್ರ ಮೇಲ್‌ಸ್ತರದಲ್ಲಿ ಚರ್ಚಿತವಾಗುತ್ತವೆ. ಇದು ಒಂದರ್ಥಕ್ಕೆ `ಶ್ರೀರಾಮನೇ ಆದರ್ಶ ಪುರುಷ’ ಎಂದಂತೆ. ಅದು ಅಪಾಯಕಾರಿ ನಿಲುವು. ಪಾತ್ರವೊಂದರ ಒಳಗಡೆಯೇ ಇರಬಹುದಾದ ಕಂದು ವಿವರಗಳನ್ನ ಮರೆತು ಕೇವಲ ಶ್ವೇತ ವರ್ಣ ಬಳಿದಂತೆ. ಹೀಗಾಗಿಯೇ ಇಂತಹ ಆದರ್ಶ ನಾಯಕ ಸಮಾಜವನ್ನ ಗುಡಿಸುವ ಕಥೆಯನ್ನುಳ್ಳ ಕೃತಿಗಳು ಬಹುಕಾಲ ಉಳಿಯದೆ ಹೋದವು.

ಸರಿಸುಮಾರು ಅರವತ್ತರ ದಶಕದ ಅಂತ್ಯದವರೆಗೆ ಹೀಗೇ ಸಾಗಿಬಂದ ನಮ್ಮ ರಂಗಭೂಮಿಯಲ್ಲಿ ಎಪ್ಪತ್ತರ ದಶಕದಲ್ಲಿ ಎದ್ದ ರಾಜಕೀಯ ಜಾಗೃತಿಯ ಪರಿಣಾಮದಿಂದಾಗಿ `ತಾಯಿ’ಯಂತಹ ನಾಟಕಗಳು ಬಂದವು. ಜೊತೆಯಲ್ಲಿಯೇ ಮೂರ್ತಿಯವರ `ಕಟ್ಟು’, ವಿಜಯಾ ಅವರ `ಉಳ್ಳವರನೆರಳು’ನಂತಹ ನಾಟಕಗಳು ನೇರವಾಗಿ ನಗರ ಕೇಂದ್ರಿತ ಕೂಲಿಕಾರ್ಮಿಕರ ಜಗತ್ತನ್ನು ಕುರಿತು ಮಾತಾಡಿದ್ದವು. ಜೊತೆಗೆ ಇತರ ಭಾಷೆಗಳಿಂದ ಕನ್ನಡಕ್ಕೆ ಬಂದಂತಹ `ಲೋಯರ್ ಡೆಪ್ತ್’, `ತ್ರಿಪೆನ್ನಿ ಅಪೇರಾ’, `ಬೆಂಕಿಯ ಬಸಿರಲ್ಲಿ ಲೇನಾ’, `ವೆಯ್ಟಿಂಗ್ ಫಾರ್ ಲೆಫ್ಟಿ’, `ವ್ಯೂ ಫ್ರಂ ದ ಬ್ರಿಡ್ಜ್’ ಮುಂತಾದ ನಾಟಕಗಳಲ್ಲಿಯೂ ಶ್ರಮಿಕ ವರ್ಗದ ಸಂಕಷ್ಟವನ್ನ ತಿಳಿಸುವ ಪ್ರಯತ್ನಗಳಿತ್ತು. `ಬೀದಿನಾಟಕ ಚಳುವಳಿಯಂತೂ `ಬೆಲ್ಚಿ’, `ಪತ್ರೆಸಂಗಪ್ಪ’, `ಬಂದರೋಬಂದರು’, `ಮೆರವಣಿಗೆ’ ಮುಂತಾದ ಅನೇಕ ನಾಟಕಗಳ ಮೂಲಕ ಶ್ರಮಿಕ ವರ್ಗದ ಧ್ವನಿಯಾಗಿದ್ದನ್ನು ನಾವು ಗಮನಿಸಿದ್ದೇವೆ.

ಆದರೆ, ಸರಿಸುಮಾರು ಎಂಬತ್ತರ ದಶಕದ ಆರಂಭ ಕಾಲದಲ್ಲಿ ಭಾರತ ಸರ್ಕಾರ ದೊಡ್ಡ ಸಾಲ ಪಡೆಯಲು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ನಮ್ಮ ರಂಗಭೂಮಿಯಲ್ಲಿ ಶ್ರಮಿಕವರ್ಗದ ಪ್ರಾತಿನಿಧ್ಯ ನಿಧಾನವಾಗಿ ಕರಗತೊಡಗಿತು. ಅಲ್ಲೊಂದು ಇಲ್ಲೊಂದು ಎಂಬಂತೆ ಸಣ್ಣ ಮಟ್ಟದ ಪ್ರಯತ್ನಗಳಾಗುತ್ತಿದ್ದವು. ಸಮುದಾಯದಂತಹ ಶ್ರಮಿಕವರ್ಗದ ಪ್ರತಿನಿಧಿ ಎಂದು ಕರೆಸಿಕೊಂಡಿದ್ದ ತಂಡದೊಳಗಿದ್ದವರು ಸಹ ಮೌನವಾಗತೊಡಗಿದರು. ಜೊತೆಗೆ ರಷ್ಯಾದಲ್ಲಿನ ಕಮ್ಯೂನಿಸ್ಟ್ ಸರ್ಕಾರದ ಪತನ, ಮಾವೋ ಚೀನಾದಲ್ಲಿ ಮಾಡಿದ್ದ ಭಾನಗಡಿಗಳ ತಿಳುವಳಿಕೆ ಸಹ ಚಿಂತಕರನ್ನು ಮೌನಕ್ಕೆ ತಳ್ಳಿತ್ತು. ಹೀಗಾಗಿ ಸಾರ್ವಜನಿಕ ಉದ್ದಿಮೆಗಳಲ್ಲಿ ದುಡಿಯುತ್ತಿದ್ದ ಬೃಹತ್ ಸಂಖ್ಯೆಯ ಕಾರ್ಮಿಕರನ್ನು ಕುರಿತ ಚಿಂತನೆಯು ಹೊರಳಿ, ನಿರುದ್ಯೋಗ ಇತ್ಯಾದಿಗಳನ್ನು ಗಮನಿಸುವ ವಸ್ತ್ತುಗಳನ್ನುಳ್ಳು ಕೆಲವು ನಾಟಕಗಳು ಕಾಣಿಸಿಕೊಂಡವು. ಆದರೂ ಪೂರ್ಣಪ್ರಮಾಣದ ಪ್ರಯತ್ನಗಳು ಆಗಲಿಲ್ಲ ಎಂದೇ ಹೇಳಬಹುದು. (ಈ ಕುರಿತು ಮಾತಿಗಿಳಿದಾಗ ಆ ಕಾಲದ ರಂಗದಿಗ್ಗಜರು ರಂಗಭೂಮಿ ಇರುವುದು ಕೇವಲ ಶ್ರಮಿಕವರ್ಗವನ್ನು ಕುರಿತು ಮಾತಾಡುವುದಕ್ಕಲ್ಲ ಎಂದು ಹೇಳಿದುದನ್ನು ಮತ್ತು ರಂಗಭೂಮಿಯೂ ಸಹ ಮನರಂಜನೆಯನ್ನ ಪ್ರಮುಖವಾಗಿಸಿಕೊಳ್ಳಬೇಕು ಎಂದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.) ಇದೇ ಕಾಲದಲ್ಲಿ ರಾಷ್ಟ್ರೀಯ ರಂಗಭೂಮಿ ಎಂಬ `ಅಪ್ರಬುದ್ಧ’ (ಹೀಗೆ ಅಪ್ರಬುದ್ಧ ಎಂದು ಕರೆಯುವುದಕ್ಕೆ ದೊಡ್ಡ ಕಾರಣವಿದೆ. ಅದು ಈ ಲೇಖನದ ವ್ಯಾಪ್ತಿಗೆ ಬಾರದು. ಆದ್ದರಿಂದ ಕೇವಲ ಚರ್ಚೆಗೆ ಎಳೆಯಲು ಕೊಂಚ ಒರಟು ಪದವನ್ನ ಬಳಸಿದ್ದೇನೆ) ಕಲ್ಪನೆಯೊಂದು ನಮ್ಮ ರಂಗಭೂಮಿಗೆ ಅಡರಿಕೊಂಡಿತು. ಇದರ ಪರಿಣಾಮವಾಗಿ ಜಾನಪದೀಯ ಅಂದಗಳನ್ನುಳ್ಳ ನಾಟಕಗಳ ರಚನೆ ಮತ್ತು ಸಂಗೀತ, ನೃತ್ಯಗಳಿಗೆ ಪ್ರಾಧಾನ್ಯವುಳ್ಳ ರಂಗಪ್ರದರ್ಶನಗಳು ಎಂಬತ್ತರ ದಶಕದ ಮಧ್ಯಭಾಗದಿಂದಾಗಿ ಆಗತೊಡಗಿದವು. ಅಂತೆಯೇ ನಮ್ಮಲ್ಲಿ `ಲಕ್ಷಾಪತಿ ರಾಜನ ಕಥೆ’, `ಮಂಟೇಸ್ವಾಮಿ ಕಥಾಪ್ರಸಂಗ’, `ಮಾದಾರಿ ಮಾದಯ್ಯ’, ಮುಂತಾದ ಅನೇಕ ನಾಟಕಗಳು ಬಂದವು. ಇವು ರಂಗಭೂಮಿಯನ್ನ ಜೀವಂತವಾಗಿ ಇರಿಸಲು ಸಹಾಯ ಮಾಡಿದವಾದರೂ ಇಲ್ಲಿಂದಾಚೆಗೆ ನಮ್ಮ ರಂಗಭೂಮಿ ಮತ್ತು ನಾಟಕಕಾರರ ಆಲೋಚನಾ ಕ್ರಮಗಳು ಸಂಪೂರ್ಣ ಪಲ್ಲಟಗೊಂಡಿದ್ದವು.
ತೊಂಬತ್ತರ ದಶಕದ ಆದಿಭಾಗದಲ್ಲಿ ಭಾರತ ಸರ್ಕಾರವು ತನ್ನ ರಣನೀತಿಯನ್ನ ಬದಲಿಸಿ ಉದಾರೀಕರಣವನ್ನು ಮತ್ತು ಖಾಸಗೀಕರಣವನ್ನು ಜಾರಿಗೆ ತಂದ ಮೇಲೆ ಒಟ್ಟು ಸಾಮಜಿಕ ಸ್ಥಿತಿಯು ಈ ಲೇಖನದ ಆರಂಭದಲ್ಲಿ ನಾನು ತಿಳಿಸಿದ ಸಮಾಜಿಕ ಸ್ಥಿತಿಗೆ ಬಂದು ತಲುಪಿತು. ಆ ಸ್ಥಿತಿಯನ್ನ ತುಂಬಾ ಸರಳವಾಗಿ ಹೇಳುವುದಾದರೆ ಹೆಣ ಮತ್ತು ಹಣದ ಎಣಿಕೆಯ ಸ್ಥಿತಿ ಎಂದೆನ್ನಬಹುದು. ಅಂದರೆ ಒಂದೆಡೆ ಹೆಣಗಳ ರಾಶಿಯನ್ನು ಸುರಿವ ಕ್ರೌರ್ಯಗಳ ಮುಖ ಮತ್ತೊಂದು ಕಡೆ ಸೆನ್ಸೆಕ್ಸ್‌ನ ಲೆಕ್ಕ ಹೇಳುತ್ತಾ `ಭಾರತ ಬೆಳೆಯುತ್ತಿದೆ’ ಎನ್ನುವ ಮತ್ತೊಂದು ಮುಖ. ರೈತರ ಸಾವು, ಬಡವರ ದುಃಖಗಳಿಗೆ ನಮ್ಮ ಪತ್ರಿಕೆಗಳಲ್ಲಿ ಈಗ ಜಾಗವಿಲ್ಲ. ಅವು ಕ್ರೈಂಪುಟದಲ್ಲಿ ಸಣ್ಣ ಬಾಕ್ಸ್‌ಕಾಲಂ ಸುದ್ದಿ ಮಾತ್ರ. ಆ ಸುದ್ದಿಗೂ ರಾಜಕೀಯ ಪ್ರೇರಣೆಯಿದ್ದರೆ ಅದು ಒಂದೆರಡು ದಿನ ಮುಖಪುಟದಲ್ಲಿಯೂ ಕಾಣಿಸಬಹುದು. ರೈತರ ಮೇಲಾದ ಗೋಲಿಬಾರ್ ಮುಂತಾದವುಗಳನ್ನ ಈ ಹಿನ್ನೆಲೆಯಲ್ಲಿ ಗಮನಿಸಬಹುದು.

ಒಟ್ಟಾರೆಯಾಗಿ, ನಮ್ಮ ಸಮಕಾಲೀನ ರಂಗಭೂಮಿಯಲ್ಲಿ ಶ್ರಮಿಕವರ್ಗವನ್ನ ತರುವ ಪ್ರಯತ್ನ ಬಹುತೇಕ ಸತ್ತೇ ಹೋಗಿದೆ ಎನ್ನಬಹುದು. ಬೀದಿನಾಟಕ ಎಂಬ ಚಳುವಳಿಗಳ ಸ್ಫೂರ್ತಿ ಶಕ್ತಿಯನ್ನ ಸರ್ಕಾರಿ ಇಲಾಖೆಗಳು ತಮ್ಮ ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸಲು ಆರಂಭಿಸಿದ ಮೇಲೆ ಪ್ರತಿಭಟನಾ ರಂಗಭೂಮಿ ನಾಶವಾಯಿತು. ಅಲ್ಲಿಂದಾಚೆಗೆ ವಿದೇಶಿ ಹಣ ಪಡೆದ ಸ್ವಯಂಸೇವಾ ಸಂಸ್ಥೆಗಳು ಸಹ ಈ ಬೀದಿನಾಟಕವನ್ನು ಲಾಭಕ್ಕಾಗಿ ಬಳಸಲಾರಂಭಿಸಿದಾಗ ಎಪ್ಪತ್ತರ ದಶಕದಲ್ಲಿ ಆರಂಭವಾದ ಶ್ರಮಿಕರ ಧ್ವನಿಯಾಗಿದ್ದ ಬೀದಿನಾಟಕ ಪ್ರಾಕಾರ `ಸಮಾಧಿ’ ಸ್ಥಿತಿ ತಲುಪಿತು. ಜೊತೆಗೆ ಪ್ರಯೋಗಪ್ರಿಯ ಹವ್ಯಾಸೀ ರಂಗಭೂಮಿಗೆ ಕಲಾವಿದರ ಕೊರತೆ ಕಾಡತೊಡಗಿದಾಗ ಅದು ಏಕವ್ಯಕ್ತಿ ಪ್ರದರ್ಶನಗಳಿಗೆ ವಾಲತೊಡಗಿತು. ಹೀಗಾಗಿ ನಮ್ಮ ಹವ್ಯಾಸೀ ರಂಗಭೂಮಿ ಎಂಬುದು `ಮಣ್ಣಿನಬಂಡಿ’ ಯಿಂದ `ಹೆಣ್ಣಲ್ಲವೇ!’ ವರೆಗೆ ಬಂದಾಗ ಸಮಾಜದರ್ಶನಕ್ಕೆ ಬದಲಾಗಿ ಏಕವ್ಯಕ್ತಿ ಪ್ರದರ್ಶನವೆಂಬ ವಿಮರ್ಶೆಗೂ ಸಿಗದ ಅಭಿನಯವೊಂದನ್ನ ಚಾಲ್ತಿಗೆ ತಂದುಬಿಟ್ಟಿತು ಎನ್ನಬಹುದು. ಸಮೂಹ ಪ್ರಕ್ರಿಯೆಯೊಂದು ಏಕಾಂತದ ಏಕಾಂಗಿ ಸಾಧನೆ ಆಗತೊಡಗಿದೊಡನೆ ರಂಗಭೂಮಿಯೂ ತನ್ನೊಳಗಿದ್ದ ಸಮೂಹ ಎಂಬ ಶಕ್ತಿಯನ್ನೇ ಸಂಪೂರ್ಣವಾಗಿ ಕಳೆದುಕೊಂಡಂತಾಗಿತ್ತು.

ಹೀಗಿರುವಾಗಲೂ ಹೊಸ ನಾಟಕಗಳನ್ನ ಈ ಹೊಸ ದಶಕದಲ್ಲಿ ಹಲವರು ಬರೆಯುತ್ತಿದ್ದಾರೆ. ಅಂತಹ ಪ್ರಯತ್ನದಲ್ಲಿ ಒಂದು ಡಿ.ಎಸ್.ಚೌಗಲೆ ಅವರ `ದಿಶಾಂತರ’. (ಇಂತಹದೊಂದು ನಾಟಕದ ಬಗ್ಗೆ ಮಾತಾಡುವ ಮುನ್ನ ಇಷ್ಟು ಪೀಠಿಕೆಯನ್ನ ಹೇಳಲೇಬೇಕೆನಿಸಿ ಹೇಳುತ್ತಾ ಇದ್ದೇನೆ. ಪ್ರಾಯಃ ಈ ಮೂಲಕ ಆಧುನಿಕ ರಂಗವಿಮರ್ಶೆಯಲ್ಲಿ ಕಾಣೆಯಾಗುತ್ತಿರುವ ಚರಿತ್ರೆ ಮತ್ತು ಚಾರಿತ್ರ್ಯದ ಸಂಬಂಧ ಕುರಿತ ಮಾತುಗಳನ್ನ ನೆನಪಿಸುವುದು ಸಹ ನನ್ನ ಉದ್ದಿಶ್ಯವಾಗಿದೆ.)

***

ಡಿ.ಎಸ್.ಚೌಗಲೆ ತಮ್ಮನ್ನು ತಾವು ಬೆಳಗಾವಿಯ ರಂಗಕರ್ಮಿ ಮತ್ತು ನಾಟಕಕಾರ ಎಂದು ಗುರುತಿಸಿಕೊಳ್ಳುತ್ತಾರೆ. ನನ್ನ ಪ್ರಕಾರ ನಾಟಕಕಾರನಿಗೆ ಗಡಿಗಳ ಹಂಗಿಲ್ಲ. ಅದು ಸರ್ಕಾರ ನಡೆಸುವವರಿಗೆ ಬೇಕಾದ ಗುರುತು. ಆಳುವವನಿಗೆ ತಾನೇ, ಎಲ್ಲಿಯವರೆಗೆ ತನ್ನ ಬೇಲಿ ಇರಬೇಕೆಂಬ ಚಿಂತೆ. ನಾಟಕಕಾರ ಆಳುವವನೂ ಅಲ್ಲ, ಆಳಿಸಿಕೊಳ್ಳುವವನೂ ಅಲ್ಲ. ಹೀಗಾಗಿ ನಾಟಕಕಾರನಿಗೆ ಗಡಿಗಳನ್ನೆಳೆಯುವುದು ಬೇಡ. (ಇದು ನನ್ನ ಸ್ನೇಹಿತ ಚೌಗಲೆಯವರಿಗೆ ಮತ್ತು ಈ ಭಾಗದ ನನ್ನ ಎಲ್ಲಾ ನುಡಿಬಂಧುಗಳಿಗೆ ಕಿವಿಮಾತು)

`ದಿಶಾಂತರ’ ೨೦೦೬ರಲ್ಲಿ ಚೌಗಲೆ ಅವರು ಬರೆದ ಪ್ರಥಮ ಸ್ವತಂತ್ರ ರಂಗಕೃತಿ. ಚೌಗಲೆಯವರು ಮರಾಠಿಯಿಂದ ಕನ್ನಡಕ್ಕೆ ಅನೇಕ ನಾಟಕವನ್ನು ತಂದು ಪರಿಚಿತರಾದವರು. ಅವರು ಅನುವಾಧಿಸಿದ `ಗಾಂಧಿ ವರ್ಸಸ್ ಗಾಂಧಿ’ಯಂತೂ (ನಿ : ಬಸವಲಿಂಗಯ್ಯ) ನಾಡಿನಾದ್ಯಂತ ಪ್ರದರ್ಶನ ಕಂಡಿದೆ. ಈಗ `ಗಾಂಧಿ – ಅಂಬೇಡ್ಕರ್’ ಎಂಬ ಅವರ ಹೊಸ ಅನುವಾದಿತ ಕೃತಿಯೂ ಪ್ರದರ್ಶನಗಳನ್ನು ಕಾಣುತ್ತಿದೆ.
ಇಂತಹ ಚೌಗಲೆಯವರು ತಮ್ಮ ಪ್ರಥಮ ಸ್ವತಂತ್ರ ರಂಗಕೃತಿಯಲ್ಲಿ ಶ್ರಮಿಕವರ್ಗವನ್ನು ಕುರಿತು ಮಾತಾಡಿದ್ದಾರೆ ಎಂಬುದೇ ಅದಾಗಲೇ ನಾನು ತಿಳಿಸಿದ ವಿವರಗಳ ಹಿನ್ನೆಲೆಯಲ್ಲಿ ಬಹುಮುಖ್ಯವಾಗುತ್ತದೆ.
`ದಿಶಾಂತರ’ದಲ್ಲಿ ಚರ್ಚಿತವಾಗುವ ವಿವರಗಳು ನಾಲ್ಕು ಹಂತದ ಶೋಷಣೆಯನ್ನು ಕುರಿತು ಮಾತಾಡುತ್ತವೆ. ಮೊದಲನೆಯದು ತಂಬಾಕಿನ ವಖಾರಿಗಳಲ್ಲಿ ದುಡಿವ ಶ್ರಮಿಕವರ್ಗ. ಅವರಿಗೆ ಬರುವ ಆದಾಯ ಸಾಲದು. ಆದರೆ ತಮ್ಮ ಹಕ್ಕುಗಳನ್ನ ಧ್ವನಿಯೆತ್ತಿ ಕೇಳುವ ಶಕ್ತಿಯೂ ಇಲ್ಲ. ಈ ವರ್ಗದ ಪ್ರತಿನಿಧಿಗಳಾಗಿ ನಾಟಕದಲ್ಲಿ ಧೋಂಡುಬಾ ಬರುತ್ತಾನೆ. ಅವನು ತನ್ನ ಕಷ್ಷಗಳಿಗೆ ಸಂಘಟನೆಯೊಂದೇ ಪರಿಹಾರ ಎಂದರಿತು ಅದಕ್ಕಾಗಿ ತನ್ನ ಜನರನ್ನು ಸೇರಿಸುವ ಹಂತದಲ್ಲಿಯೇ ಕೊಲೆಯಾಗುತ್ತಾನೆ. ಆದರೆ ಅದು ಲೋಕದ ಕಣ್ಣಿಗೆ ಕೊಲೆಯಲ್ಲ. ರಸ್ತೆ ಅಪಘಾತ. ಅದು ಕೊಲೆಯೆಂದು ತಿಳಿದಿದ್ದರೂ ಪ್ರತಿಕ್ರಿಯಿಸಲಾಗದ ಸ್ಥಿತಿ ಆತನ ಹೆಂಡತಿ ಚಂದ್ರಿಯದು. ಚಂದ್ರಿಗೀಗ ಬೇರೆ ದಾರಿ ಇಲ್ಲ. ಅವಳು ತನ್ನ ಗೌಡನ ಮನೆಯಲ್ಲಿ ಎಲ್ಲಾ ರೀತಿಯ ಸೇವೆಗೂ ಒಗ್ಗಿಕೊಳ್ಳಲೇಬೇಕು.

ಎರಡನೆಯ ಶೋಷಿತ ವರ್ಗ : ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳಾದ ಸಾಹುಕಾರರು. ಒಂದು ಕಾಲದಲ್ಲಿ ಶೋಷಕರಾಗಿದ್ದ ಈ ವರ್ಗದವರೂ ಸಹ ಇಂದು ಶೋಷಿತರೇ. ಏಕೆಂದರೆ ಈ ಸಾಹುಕಾರರು ಈಗ ಇರುವುದು ತಮ್ಮ ಬೆಳೆಯನ್ನು ಕೊಳ್ಳುವವರ ಮರ್ಜಿಯಲ್ಲಿ. ಈ ಊಳಿಗಮಾನ್ಯ ವರ್ಗದ ಪ್ರತಿನಿಧಿಗಳಾಗಿ ಬರುವ ಪಾರೀಸ ಪಾಟೀಲ ಮತ್ತು ಜಿನಗೌಡ ಪಾಟೀಲರು ತಮ್ಮ ಸಾಹುಕಾರಿಕೆಯ ಗತ್ತನ್ನ ತಮ್ಮಲ್ಲಿ ದುಡಿವವರ ಮೇಲೆ ತೋರುವ ಯತ್ನ ಮಾಡುತ್ತಾರೆ. ಆದರೆ ಅವರು ಫೂಲಚಂದ, ಮಲಸೆಟ್ಟಿ ಮುಂತಾದ ಕೊಳ್ಳುವವರ ಮರ್ಜಿಯಲ್ಲಿ ಇದ್ದಾರೆ. ಈ ಗೌಡರ ವರ್ಗದ ಅವನತಿಯ ಸಂಕೇತವಾಗಿಯೇ ನಾಟಕದಲ್ಲಿ ಬಾಹುಬಲಿ ಎಂಬ ಪಾತ್ರವೊಂದು ಬರುತ್ತದೆ. ಆ ಬಾಹುಬಲಿಯು ಗೌಡನ ಮಗನಾದರೂ ನಿಷ್ಕ್ರಿಯವಾಗಿರುವ ಊಳಿಗಮಾನ್ಯ ಪದ್ಧತಿಗೆ ಸೂಚಕವಾಗಿ ದೇಹಬೆಳೆದಿದ್ದರೂ ಬುದ್ಧಿ ಬೆಳೆದಿಲ್ಲ ಎಂಬುದರ ಸೂಚನೆ ಎಂಬಂತೆ ಹಾಸಿಗೆಯಲ್ಲಿಯೇ ಮಲಗಿರುವವನು. ಅವನಿಗೆ ಪುನರ್‌ಸೃಷ್ಟಿಯ ಶಕ್ತಿಯೂ ಇಲ್ಲ.

ಇನ್ನೂ ಮೂರನೆಯ ಶೋಷಿತ ವರ್ಗ : ಕೊಳ್ಳುವವರದ್ದು. ಆ ವರ್ಗ ಕೂಡ ಸ್ವತಂತ್ರವಲ್ಲ. ಅದನ್ನು ನಿಯಂತ್ರಿಸುವ ಕಾರ್ಪೋರೇಟ್ ಜಗತ್ತೊಂದಿದೆ. ಆ ವಿಷಯ ನಾಟಕದಲ್ಲಿ ನೇರವಾಗಿ ಚರ್ಚೆಯಾಗುವುದಿಲ್ಲವಾದರೂ ಅವರೂ ಸಹ ಒಂದರ್ಥಕ್ಕೆ ಶೋಷಿತರೇ.

ನಾಲ್ಕನೆಯ ಶೋಷಿತ ವರ್ಗ : ಸಮಕಾಲೀನ ಸಂದರ್ಭದ ಕಾರ್ಮಿಕ ಚಳವಳಿಗಳ ನೇತಾರರದ್ದು. ಅವರಿಗೆ ಆದರ್ಶಗಳಿವೆ. ಆದರೆ ತಮ್ಮ ಆದರ್ಶಗಳನ್ನು ರೂಢಿಸಿಕೊಂಡು ಬೆಳೆಸಬಲ್ಲ ಅವಕಾಶಗಳಿಲ್ಲ. ಈ ಚಳವಳಿಗಳನ್ನು ನಡೆಸುವವರ ಪ್ರತಿನಿಧಿಯಾಗಿ ಭೀಮಣ್ಣ ಬರುತ್ತಾನೆ. ಅವನಿಗೆ ಆದರ್ಶಗಳನ್ನು ಒದಗಿಸುವ ಸಾಧುಬಾಬಾ ಬರುತ್ತಾರೆ. ಎರಡೂ ಪಾತ್ರಗಳನ್ನು ಕೊಳ್ಳುವ ಮತ್ತೊಂದು ವರ್ಗದ ಪ್ರಯತ್ನಕ್ಕೆ ಬಾಗದೆ ಉಳಿವ ಇವರೂ ಸಹ ಕೊಲೆಯಾಗುತ್ತಾರೆ. ಅದೂ ಸಹ ಲೋಕದ ಕಣ್ಣಿಗೆ ಕೊಲೆಯಲ್ಲ. ಆಕಸ್ಮಿಕ.

ಮಹತ್ವಾಕಾಂಕ್ಷಿ ವಸ್ತು ಮತ್ತು ಕಟ್ಟಡ ವಿನ್ಯಾಸ

ಹೀಗೆ ನಾಲ್ಕು ಹಂತದ ಶೋಷಿತವರ್ಗವನ್ನ `ದಿಶಾಂತರ’ ನಾಟಕದ ಕಟ್ಟಡದಲ್ಲಿ ಹೆಣೆಯುವ ಮಹತ್ವಾಕಾಂಕ್ಷಿ ಪ್ರಯತ್ನ ಚೌಗಲೆಯವರದ್ದು. ಹೀಗೆ ನಾಟಕ ಕಟ್ಟುವಾಗ ಅವರು ನಾಟಕದ ಪಾತ್ರಗಳನ್ನು ಸಹ ಕೆಳಸ್ತರದಿಂದ ಮೇಲ್‌ಸ್ತರ ಎಂಬಂತೆ ಪರಿಚಯಿಸುತ್ತಾ ಹೋಗುತ್ತಾರೆ. ಮೊದಲಿಗೆ ಶ್ರಮಿಕ ದಿನಗೂಲಿ ವರ್ಗದ ಕಾರ್ಮಿಕರು ಮತ್ತು ವಖಾರಿಯಲ್ಲಿ ಕೆಲಸ ಮಾಡುವವರು. ಅವರಿಗೂ ಮತ್ತು ಅವರನ್ನು ಶೋಷಿಸುವ ವರ್ಗಕ್ಕೂ ನೆಂಟನೆಂಬಂತೆ ಕುಂಟ ಕುಲಕರ್ಣಿ ಕಾಣುತ್ತಾರೆ. ನಂತರ ಎರಡನೆಯ ಹಂತದ ಗೌಡರ ಜಗತ್ತು. ಅಲ್ಲಿಂದಾಚೆಗೆ ಕಾರ್ಮಿಕ ಸಂಘನೆಯನ್ನು ಮಾಡುವವರ ಜಗತ್ತಿನ ಪರಿಚಯ. ಸ್ಥೂಲವಾಗಿ ಆದರೆ ಸ್ಪಷ್ಟವಾಗಿ ಗೌಡರಿಂದ ತಂಬಾಕು ಕೊಳ್ಳುವ ಏಜೆಂಟರ ಜಗತ್ತಿನ ಪರಿಚಯ ಆಗುತ್ತದೆ.

ಇಂತಹ ಕಟ್ಟಡದ ಅಪಾಯವೆಂದರೆ ಪರಿಚಯಿಸಬೇಕಾದ ಜಗತ್ತು ದೊಡ್ಡದಾಗಿ, ಹೇಳಬೇಕಾದ ವಿಷಯವೂ ದೊಡ್ಡದಾಗಿ ಮೊದಲು ಹೇಳಿದ ಆತಂಕ ಮತ್ತೊಂದು ಆತಂಕದ ಎದುರು ನಿಂತಾಗ ಪೇಲವವಾಗಿ ಬಿಡುವುದು. ಇದು ಈ ನಾಟಕದ ಮಿತಿಯೂ ಹೌದು, ಶಕ್ತಿಯೂ ಹೌದು. ನಮ್ಮ ಎದುರಿಗಿನ ಎಲ್ಲಾ ಸಮಸ್ಯೆಗಳು ನಮಗೆ ಪೇಲವ ಎನಿಸುವಂತೆ ನಮ್ಮ ಮಾಧ್ಯಮಗಳು ಮತ್ತಾವುದೋ ದೊಡ್ಡದನ್ನ ನಮ್ಮೆದುರು ಪ್ರತಿನಿತ್ಯ ಇಡುತ್ತಾ ಇಲ್ಲವೇ ಹಾಗೆಯೇ ಇದು. ಈ ಮೂಲಕ ಶೋಷಣೆಯ ಹೈರಾರ್‍ಕಿಯೊಂದನ್ನ ಇಡುತ್ತಾ ನಮ್ಮ ಚಳುವಳಿಗಳೆಲ್ಲವೂ ಈ ಜಾಗತೀಕರಣದ ನೆರಳಲ್ಲಿ ನರಳುತ್ತಾ ಇರುವುದನ್ನ ಚೌಗಲೆ ಸೂಚಿಸುತ್ತಾರೆ. ರಂಗಪ್ರದರ್ಶನ ಕಟ್ಟುವ ನಿರ್ದೇಶಕ ಜಾಣನಾಗಿದ್ದರೆ ಮಿತಿಯಾಗುವ ಬದಲು ಈ ವಿವರಗಳೇ ಅಪರೂಪದ ಕೊಲಾಜ್ ಆಗಬಹುದು. ನಿರ್ದೇಶಕನೇನಾದರೂ  ಪಾತ್ರಗಳ ಒಳತೋಟಿಗಿಳಿದು ಯೂರೋಪಿಯನ್ ಮಾಡೆಲ್ ಆಧರಿಸಿ (ವಿಶೇಷವಾಗಿ ಸ್ಟಾನಿಸ್‌ಲಾವ್‌ಸ್ಕಿ ಮಾದರಿ) ರಂಗದೃಶ್ಯ ಕಟ್ಟುವವನಾದರೆ ಕಥಾವಿವರ ಪ್ರೇಕ್ಷಕನಿಗೆ ಗೊಂದಲವಾಗಿ ಉಳಿಯಬಹುದು. ಈ ವಿಷಯವನ್ನ ಕೊಂಚ ವಿಸ್ತಾರವಾಗಿ ಹೇಳುತ್ತೇನೆ.

ನಮ್ಮಲ್ಲಿ ಪಾಶ್ಚ್ಚಾತ್ಯ ಮಾದರಿಯ ರಂಗಕೃತಿ ರಚನೆಯು ವಿಮರ್ಶಕರಿಗು ಮತ್ತು ನೋಡುಗರಿಗೂ ಅಭ್ಯಾಸವಾಗಿ ಹೋಗಿದೆ. ಹಾಗಾಗಿ ಪರಿಚಯ, ಸಂಘರ್ಷ, ಉತ್ಕರ್ಷ, ಉಪಸಂಹಾರ ಎಂಬ ನಾಲ್ಕು ಘಟ್ಟಗಳನ್ನುಳ್ಳು ಪಾಶ್ಚಾತ್ಯ ಮಾಡೆಲ್‌ನ ರಂಗಕೃತಿ ಸರಳವಾಗಿ ಅವರ ಅರ್ಥ ಗ್ರಹಿಕೆಗೆ ದಕ್ಕುತ್ತದೆ. ಮೂಲ ಭಾರತೀಯ ಮಾದರಿಯಾದ (ಪುರಾಣಗಳಿಂದ ದೊರೆತ ಮಾದರಿ) ಕಥೆಗೊಂದು ಉಪಕಥೆ, ಉಪಕಥೆಗೊಂದು ಉಪಕಥೆ ಎಂಬ ಕೊಂಡಿ-ಸರಪಳಿಯ ಮಾದರಿಯಲ್ಲಿ ಪಾತ್ರಗಳ ಭವ್ಯತೆಗಿಂತ ಬದುಕಿನ ಶುಷ್ಕತೆಯನ್ನ ಕಾಣಿಸುವ ಗುಣ ಇದೆಯಲ್ಲಾ, ಆ ಮಾದರಿಯ ರಂಗಕೃತಿ ನಿರ್ಮಿತಿ ನಮ್ಮಲ್ಲಿ ಕಳೆದುಹೋಗಿದೆ. ಹೀಗಾಗಿಯೇ ನಾವೆಲ್ಲರೂ ಸದಾ ಕಾಲಾ ಸಿದ್ಧ ಮಾದರಿಗಳನ್ನು ಅರಸುತ್ತೇವೆ. ಹಾಗಿಲ್ಲದೆ ಹೋದಾಗ `ಏನೋ ಸರಿಯಿಲ್ಲ’ ಎಂದು ದೂರ ಉಳಿದುಬಿಡುತ್ತೇವೆ. (ಇದೊಂದು ರೀತಿಯಲ್ಲಿ ಭಾರತೀಯ ಪಾಯಿಖಾನೆಯಲ್ಲಿ ಟಿಷ್ಯೂ ಪೇಪರ್ ಇಲ್ಲ ಎಂಬುದನ್ನ ಕಂಡು ಗಾಬರಿಯಾಗುವ ವಿದೇಶಿಯನ ಸ್ಥಿತಿ.) ಚೌಗಲೆಯವರ ನಾಟಕ ಈ ದೃಷ್ಟಿಯಿಂದ ನನಗೆ ಮುಖ್ಯವಾಗುತ್ತದೆ. ಅದು ಸಿದ್ಧ ಮಾದರಿಯನ್ನ ಎಡತಾಕುವ ಬದಲು, ತನ್ನದೇ ಕ್ರಮವೊಂದನ್ನ ಆಧರಿಸಿ ಬೆಳೆಯುತ್ತದೆ.

***

`ದಿಶಾಂತರ’ದಲ್ಲಿ ಇರುವುದು ಒಟ್ಟು ಹದಿಮೂರು ದೃಶ್ಯಗಳು. ಈ ಹಾದಿಯಲ್ಲಿ ಪರಿಚಿತವಾಗುವ ಎಲ್ಲಾ ಪಾತ್ರಗಳೂ ಸ್ಪಷ್ಟವಾಗಿ ತಮ್ಮದೇ ಲೋಕವನ್ನ ಪರಿಚಯಿಸುವಂತಹವು. ಆರಂಭದ ದೃಶ್ಯದಲ್ಲಿಯೇ ಕಾಣುವ ಬೃಹತ್ ವಖಾರಿಯಲ್ಲಿನ ಹೆಂಗಸರು ತಮ್ಮ ಸಂಕಷ್ಟಗಳ ನಡುವೆಯೇ ದೊಡ್ಡವರ ಮನೆಯ ಕುರಿತು ಗಾಳಿಸುದ್ದಿಯನ್ನ ಮಾತಾಡುತ್ತಾರೆ. ಆ ಹರಟೆಯ ನಡುವೆಯೇ ಅವರ ಲೋಕದ ಮೇಲೆ ಇರುವ ಸಂಕಷ್ಟದ ನೆರಳಿನ ಪರಿಚಯವಾಗುತ್ತದೆ. ಅವರೆಲ್ಲರೂ ತಮ್ಮ ದುಡಿಮೆಯಿಂದ ಬರುವ ಆದಾಯ ಹಾಗೂ ಖರ್ಚು ಸರಿದೂಗಿಸಲು ಗೌಡನ ಮನೆಯಲ್ಲಿ ಇತರೆ ಸೇವೆಗಳನ್ನು ಮಾಡಿರುವ ವಿವರಗಳು ಬರುತ್ತವೆ. ಅದು ಶ್ರಮಿಕ ವರ್ಗದ ಜಗತ್ತು.

ಇದರ ನಡುವೆಯೇ ತಂಬಾಕು ಬೆಳೆವ ರೈತರುಗಳು ತಮಗೆ ತಂಬಾಕು ಕೊಂಡ ವಖಾರಿಯ ಗೌಡನಿಂದ ಹಣ ಬಂದಿಲ್ಲವೆಂದು ಕೊರಗುವ ಮತ್ತು ಅವರನ್ನು ಕುಲಕರ್ಣಿ ದಬಾಯಿಸುವ ವಿವರಗಳು ಸಿಗುತ್ತವೆ. ಬೆಳೆ ತೆಗೆದವನಿಗೆ ಬೆವರಿಗೆ ತಕ್ಕ ಬೆಲೆ ಸಿಗುತ್ತಿಲ್ಲ. ಆ ಬೆಳೆಯನ್ನು ಮಾರುವ ಸಾಮಗ್ರಿ ಮಾಡಿದವರಿಗೂ ಬೆವರಿಗೆ ತಕ್ಕ ಬೆಲೆ ಸಿಗುತ್ತಿಲ್ಲ. ಇವುಗಳ ನಡುವೆ ಕುಲಕರ್ಣಿಯಂತಹ ಮಧ್ಯವರ್ತಿಗಳು ಕುಂಟುತ್ತಲೇ ಬದುಕುತ್ತಾರೆ ಎಂಬುದರ ಮೂಲಕ ನಾಟಕದ ಮೊದಲ ದೃಶ್ಯವೇ ಎರಡು ಕೂಲಿಕಾರ ಜಗತ್ತಿನ ತಲ್ಲಣವನ್ನ ತಿಳಿಸುತ್ತದೆ.

ಎರಡನೆಯ ದೃಶ್ಯದಲ್ಲಿ ಪಾರೀಸ ಪಾಟೀಲ ಎಂಬ ಸಾಹುಕಾರನ ಮನೆಯ ಒಳಗಣ ಶಿಥಿಲತೆಯನ್ನು ಸಾರುವಂತೆ ಬಾಹುಬಲಿ ಎಂಬ ಹೆಸರಿದ್ದೂ ಸದಾ ಮಲಗಿರುವ ಪಾಟೀಲನ ಮಗನ ವಿವರ ಮತ್ತು ಪಾಟೀಲನ ಮಡದಿಯ ನರಸತ್ತ ಸ್ಥಿತಿ ಬರುತ್ತದೆ. ಇವುಗಳನ್ನು ಅಲ್ಲಿ ಕೆಲಸಕ್ಕಿರುವ ಲಗುಮನ ಬಾಯಿಂದಲೇ ಸ್ಪಷ್ಟಪಡಿಸುವ ನಾಟಕಕಾರರು, ಊರನ್ನ ಆಳುವ ದೊರೆಯ ಮಗನದು ಕುಂಡಿ ಹೊಸೆವ ಸ್ಥಿತಿ ಎಂದು ಹೇಳುತ್ತಾ ಊಳಿಗಮಾನ್ಯ ಪದ್ಧತಿಯ ಅವಶೇಷಗಳು ಹೇಗಿವೆ ಎಂದು ಸೂಚಿಸುತ್ತಾರೆ. ನಂತರ ಕಾಣಸಿಗುವ ವಿವರಗಳಲ್ಲಿ ಮೇಲುನೋಟಕ್ಕೆ ಎಲ್ಲವನ್ನು ಆಳಬಲ್ಲವನಂತೆ ಕಾಣುವ ಪಾರೀಸ ಪಾಟೀಲನೂ ಸಹ ಒಳಗೆ ಟೊಳ್ಳಾಗುತ್ತಾ ಇದ್ದಾನೆ ಎಂಬ ವಿವರ ದೊರೆಯುತ್ತದೆ. ಇವು ಅದಾಗಲೇ ನಮ್ಮ ರಂಗಭೂಮಿಯಲ್ಲಿ ಕಂಡಿರುವ ಜಗತ್ತು. ಊರಗೌಡ ಮತ್ತು ಅವನ ಆಟಾಟೋಪಗಳನ್ನ ಐವತ್ತು ಅರವತ್ತರ ದಶಕದಿಂದ ಈಚೆಗಿನವರೆಗೆ ಕಪ್ಪು-ಬಿಳುಪು ಎಂಬ ಎರಡು ಭಾಗವಾಗಿ ನೋಡುವ ಅಭ್ಯಾಸವನ್ನು ರಂಗಭೂಮಿಯಷ್ಟೇ ಅಲ್ಲದೇ ನಮ್ಮ ನಾಯಕ ಪ್ರದಾನ ಚಿತ್ರಗಳು ನೀಡುತ್ತಾ ಬಂದಿವೆ. ಆದರೆ `ದಿಶಾಂತರ’ದಲ್ಲಿ ಕಪ್ಪು ಎಂಬುದು ಕೇವಲ ಕಪ್ಪಾಗಿ ಇಲ್ಲ. ಅದು ಗ್ರೇ ಆಗಿದೆ. ನಮ್ಮಲ್ಲಿನ ಕಪ್ಪುತನಕ್ಕೆ ತುಕ್ಕು ಹಿಡಿಯುತ್ತಿದೆ ಎಂಬುದನ್ನ ಈ ನಾಟಕ ಸೂಚಿಸುತ್ತಿದೆ.

ಮೂರನೆಯ ದೃಶ್ಯದಲ್ಲಿ ಕಾರ್ಮಿಕರನ್ನ ಒಗ್ಗೂಡಿಸುವ ರೈತರಿಗೆ ತಕ್ಕ ಬೆಲೆ ದೊರೆಯುವಂತೆ ಮಾಡುವ ಭೀಮಣ್ಣನ ಪಾತ್ರ ಬರುತ್ತದೆ. ಅವನು ಆದರ್ಶದಲ್ಲಿ ಬದುಕುವವನು. ಇದು ಸಹ ನವೋದಯದಿಂದಲೇ ದೊರಕಿದ ಸಿದ್ಧ ಮಾದರಿ. ಆದರೆ ಆ ಸಿದ್ಧ ಮಾದರಿಯವ ಆಗ ನಾಯಕನಾಗಿದ್ದ. ಈಗ ಅಲ್ಲ. ಅವನೀಗ ಇನ್ಯಾರಿಗೋ ಸರಕಾಗಬಲ್ಲವನು ಮಾತ್ರ. ಇವತ್ತಿನ ಎಲ್ಲಾ ಕಾರ್ಮಿಕ ನಾಯಕರಂತೆ ಅವನನ್ನೂ ಕೊಳ್ಳುವುದು ಸುಲಭ. `ಈ ವಿವರದ ಹಿನ್ನೆಲೆಯನ್ನು `ಗ್ಲೋಬಲೈಸೇಷನ್ ಅಂಡ್ ಲೇಬರ್’ ಎಂಬ ಹೊತ್ತಿಗೆಯಲ್ಲಿ ಸವಿವರವಾಗಿ ಗಮನಿಸಬಹುದು.) ಅದಕ್ಕಾಗಿಯೇ ಒಂದು ಎನ್‌ಜಿಒ ಸಂಸ್ಥೆ ಬೀಮಣ್ಣನ ಮೂಲಕ ತಂಬಾಕು ಹಾಕುವವರನ್ನ ತಡೆಯುವ ಪ್ರಚಾರಕ್ಕೆ ಬೆಳೆಸಲು ಪ್ರಯತ್ನಿಸುತ್ತದೆ. ಆ ಎನ್‌ಜಿಒ ಸಹ ಅದೇ ಸರಕಿನಿಂದ ಲಾಭ ಅನುಭವಿಸುತ್ತಿರುವ ಶ್ರೀಮಂತ ವಿದೇಶಿಯರಿಂದ ಹಣ ಪಡೆದದ್ದು. ಅದೊಂದು ರೀತಿಯಲ್ಲಿ ಬಾಂಬ್ ತಯಾರಿಸಿ ದುಡ್ಡು ಮಾಡಿದ ನೋಬೆಲ್ಲನೇ ವಿಶ್ವಶಾಂತಿಯ ಪ್ರಶಸ್ತಿಯನ್ನು ನೀಡುವಂತಹ ವೈರುಧ್ಯ. ಆದರೆ ಆ ಎನ್‌ಜಿಓಗೆ ತನ್ನ ಒಳಗಿನ ವಿವರ ತಿಳಿದಿಲ್ಲ. ಅವರು ಕೇವಲ ತಮ್ಮ ಹಣ ಗಳಿಕೆಗೆ ಭೀಮಣ್ಣನ್ನ ಕೊಳ್ಳುವ ಯತ್ನದಲ್ಲಿ ಇದ್ದಾರೆ. ಈ ಹಾದಿಯಲ್ಲಿ, `ಅದೇ ಉದ್ಯಮದಿಂದ ಬದುಕುತ್ತಿರುವವರ ಮೇಲೆ ತಾನು ಕಲ್ಲೆಸೆಯಬೇಕೆ?’ ಎಂಬ ಗೊಂದಲ ಭೀಮಣ್ಣನದು.

ಇಲ್ಲಿ ತಟ್ಟನೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡುವ ಅನ್ಬುಮಣಿ ರಾಮದಾಸ್ ಅವರಂತೆ ಆ ಎನ್‌ಜಿಒ ಸಹ ಕಾಣುತ್ತದೆ. ಕಾನೂನು ಮಾಡಿ ಏನನ್ನಾದರೂ ತಡೆಯಬಹುದು ಎಂಬ ಭ್ರಮೆಯಲ್ಲಿ ಇರುವವರಿಗೆ ಇಂತಹ ವ್ಯಸನಗಳ ನೆರಳಲ್ಲಿ ಬದುಕುತ್ತಾ ಇರುವ ಲಕ್ಷಾಂತರ ಕುಟುಂಬಗಳು ಕಾಣುವುದೇ ಇಲ್ಲ. ತಟ್ಟನೆ ಪಿ.ಚಂದ್ರಿಕಾ ಅವರ ಕಿರುಗತೆಯೊಂದು ನೆನಪಾಗುತ್ತಿದೆ. ಆ ಕಥೆ ಹೀಗಿದೆ:
ಬೌದ್ಧರಿಂದ ಪ್ರಭಾವಿತನಾಗಿ ಸಾಮ್ರಾಟ ಅಶೋಕ ತನ್ನ ದೇಶದಾದ್ಯಂತ ಪ್ರಾಣಿ ಹಿಂಸೆ ಸಲ್ಲದು, ಮಾಂಸಕ್ಕಾಗಿ ಯಾರೂ ಪ್ರಾಣಿ ವಧೆ ಮಾಡಬಾರದು ಎಂದು ಕಾನೂನು ಮಾಡುತ್ತಾನೆ. ಅದೇ ರಾಜಧಾನಿಯ ಒಂದು ಮೂಲೆಯಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದ ಒಬ್ಬಾತ `ಈ ರಾಜನಿರುವವರಿಗೆ ನನಗೆ ನೆಮ್ಮದಿಯ ನಿದ್ದೆಯೂ ಇಲ್ಲ, ಎರಡು ಹೊತ್ತಿನ ಅನ್ನವೂ ಇಲ್ಲ’ ಎಂದು ಗೊಣಗುತ್ತಾನೆ.
ಈ ಕಥೆಯಲ್ಲಿನ ಕೊನೆಯ ಸಾಲು ಪ್ರಾಯಶ: ಅನ್ಬುಮಣಿ ರಾಮದಾಸ್ ಅವರಿಗೆ ಕೇಳಿಸದು. ಅವರಿಗೆ ತಂಬಾಕಿನ ಉಪಯೋಗದಿಂದ ಅನಾರೋಗ್ಯದಲ್ಲಿರುವವರ ಸಂಖ್ಯೆ ಮಾತ್ರ ಕಾಣುತ್ತದೆ. ಹೀಗಾಗಿ ಕಾನೂನು ಮಾಡುತ್ತಾರೆ. ಇದು ಬದುಕಿನ ವಿಪರ್ಯಾಸ.

ಮರಳಿ ದಿಶಂತರಕ್ಕೆ ಬಂದರೆ; ಇದೇ ಹಂತದಲ್ಲಿ ಭೀಮಣ್ಣನು, ತನ್ನ ಮೆಂಟರ್ ಅಥವಾ ತನ್ನನ್ನು ರೂಪಿಸಿದ ಸಾಧುಬಾಬಾರನ್ನ ಸಂಪರ್ಕಿಸುತ್ತಾನೆ. ಸಾಧುಬಾಬಾ ಆದರ್ಶದ ಮತ್ತೊಂದು ಸಂಕೇತ. ಒಳ್ಳೆಯ ಮಠಾಧೀಶರು ವಿರಳವಾಗಿರುವ ಕಾಲದಲ್ಲಿ ಒಳ್ಳೆಯದರ ಸೂಚನೆಯಾಗಿ ಸಾಧುಬಾಬಾ ಇದ್ದಾರೆ. ಆತನೂ ಸಹ ಶಿಥಿಲವಾಗುತ್ತಿರುವ ಆದರ್ಶದ ಸಂಕೇತವಾಗಿಯೇ ಈ ನಾಟಕದಲ್ಲಿ ಬಳಕೆಯಾಗುತ್ತಾನೆ. ಆತನಿಂದ ಭೀಮಣ್ಣನಿಗೆ ಹೊಸ ಉತ್ಸಾಹ ದೊರೆಯುತ್ತದೆ. ಆದರೆ ಅದು ದುರಂತದ ಎಡೆಗಿನ ಪಯಣ ಎಂಬುದು ಪ್ರೇಕ್ಷಕನಿಗೆ ಖಾತ್ರಿಯಾಗಿಸಿಯೇ ನಾಟಕಕಾರರು ಮುಂದುವರೆಯುತ್ತಾರೆ.
ಇಲ್ಲಿಂದಾಚೆಗೆ ರೈತರಿಂದ ಕೊಂಡು, ತಮ್ಮ ಮನೆಯ ಹತ್ತಿರವೇ ಸೃಷ್ಟಿಸಿಕೊಂಡ ಕೊಳೆಗೇರಿಯ ಕಾರ್ಮಿಕರನ್ನ ದುಡಿಸಿಕೊಳ್ಳುತ್ತಾ ಇರುವ ಜಿನಗೌಡ ಮತ್ತು ಪಾರೀಸಪಾಟೀಲರ ಭೇಟಿಯ ಮೂಲಕ ನಮ್ಮ ಕಣ್ಣೆದುರಿಗೆ ಇರುವ ಆಳುವ ವರ್ಗದ ಕೋಟೆಯ ಗೋಡೆಗಳು ಬಿರುಕು ಬಿಡುತ್ತಿರುವ ಸೂಚನೆಯನ್ನ ನಾಟಕಕಕಾರರು ನೀಡುತ್ತಾರೆ. ಆ ಊಲಿಗಮನ್ಯ ಪದ್ಧತಿಯ ಪಳೆಯುಳಿಕೆಗಳು ತಮ್ಮ ಎದುರಿಗೆ ಏಳುತ್ತಾ ಇರುವ ವಿರೋಧಗಳನ್ನ ತಡೆಯುವ ಯತ್ನ ಮಾಡುತ್ತಾ ಇದ್ದಾರೆ. ಆದರೆ ಅವರ ಮಾತಿನ ಒಳಗಡೆ ತಮ್ಮ ಆದಾಯವನ್ನು ಮತ್ತಾರೋ ನಿಯಂತ್ರಿಸುತ್ತಾ ಇದ್ದಾರೆ ಎಂಬ ಕೊರಗೂ ದೊರೆಯುತ್ತದೆ.
ಇಲ್ಲಿಂದಾಚೆಗೆ `ದಿಶಾಂತರ’ ನಾಟಕ ವೇಗ ಪಡೆದುಕೊಂಡು, ಕಾಂತ್ರಿಯನ್ನ-ಹೋರಾಟವನ್ನ ಮಾಡುವವರೊಟ್ಟಿಗೆ ಸಾಗುತ್ತಾ, ಅವರನ್ನು ತುಳಿಯುವವರ ಸಂಚು-ಪ್ರತಿಸಂಚುಗಳ ಸೂಚನೆ ನೀಡುತ್ತಾ. ಕಾರ್ಮಿಕರು ಹೋರಾಡಲು ಸಿದ್ಧರಾಗಿದ್ದಾರೆ ಎಂಬ ಸೂಚನೆ ಒದಗಿಸುತ್ತದೆ. ಇದಕ್ಕಾಗಿ ನಾಟಕದ ಆರು, ಏಳು ಮತ್ತು ಎಂಟನೆಯ ದೃಶ್ಯಗಳು ಬಳಕೆಯಾಗಿವೆ. ಒಂಬತ್ತನೆಯ ದೃಶ್ಯದಲ್ಲಿ ಆಳುವ ವರ್ಗವನ್ನು ಆಳುವ ಮತ್ತೊಂದು ಶ್ರೀಮಂತ ವರ್ಗದ ಪರಿಚಯವಾಗುತ್ತದೆ. ಜಿನಗೌಡ ಮತ್ತು ಪಾರೀಸ ಪಾಟೀಲರೂ ಸಹ ಜೀ ಹುಜೂರ್ ಎಂದು ನಿಲ್ಲಬೇಕಾದ ಪರಿಸ್ಥಿತಿಯ ಪರಿಚಯವಾಗುತ್ತದೆ. ಅಲ್ಲಿ ಬರುವ ಪಾರಸ್‌ಮಲ್, ಚಂದನ್‌ಮಲ್‌ಗಳು ಮತ್ತೊಂದು ಮಧ್ಯವರ್ತಿ ಜಗತ್ತಿನ ಪ್ರತಿನಿಧಿಗಳಾಗುತ್ತಾರೆ. ಅವರೆಲ್ಲರೂ ಸೇರಿ ಕ್ರಾಂತಿಯನ್ನ ಹತ್ತಿಕ್ಕುವ ಪ್ರಯತ್ನ ಕುರಿತು ಮಾತಾಡುತ್ತಾರೆ. ಎಲ್ಲರ ಧ್ವನಿಯಲ್ಲೂ ಶಕ್ತಿಯಿದೆ. ಆದರೆ ಅವರ ಒಳಗಿನ ಬದುಕು ಸಹ ಪೊಳ್ಳು. ಅವರೂ ಸಹ ಇನ್ನಾರದೋ ಮರ್ಜಿಯಲ್ಲಿರುವವರೇ.

ಇಲ್ಲಿಂದಾಚೆಗೆ ನಾಟಕ ಪರಾಕಾಷ್ಟೆಯ ಕಡೆಗೆ ಸಾಗುತ್ತದೆ. ಮೊದಲಿಗೆ ಶಶಾಂಕ ಎಂಬ ಹೆಸರಿನ ಈ ವರೆಗೆ ಬಂದ ಯಾವ ಸಿದ್ಧ ಮಾದರಿಗೂ ಒದಗದ ಪಾತ್ರದ ಪ್ರವೇಶ ಆಗುತ್ತದೆ. ಅವನು ಭೀಮಣ್ಣನಿಗೆ ಅವನ ಹೋರಾಟದ ಫ್ಯೂಟಿಲಿಟಿ ಕುರಿತು ತಿಳಿಸುತ್ತಲೇ ಬ್ರೇನ್‌ವಾಷ್ ಮಾಡುವ ಪ್ರಯತ್ನ ಮಾಡುತ್ತಾನೆ. ಅದು ಮತ್ತೊಂದು ರೀತಿಯ ಎನ್‌ಜಿಓ ಜಗತ್ತು. ಭೀಮಣ್ಣ ಬಾಗುವುದಿಲ್ಲ. ಹೋರಾಡುತ್ತೇನೆ ಎನ್ನುತ್ತಾನೆ. ಅದರ ಪರಿಣಾಮ ಎಂಬಂತೆ ಮೊದಲಿಗೆ ದೃಶ್ಯ ೧೧ರಲ್ಲಿ ಧೋಂಡುಬಾನ ಸಾವಿನ ಸುದ್ದಿ ಚಂದ್ರಿಗೆ ದೊರೆಯುತ್ತದೆ. ಇದು ನಾಟಕದ ಆರನೆಯ ದೃಶ್ಯದಲ್ಲಿ ಅದೇ ಧೋಂಡುಬಾ ಮತ್ತು ಚಂದ್ರಿಯರ ನಡುವೆ ಆದ ಮಾತಿಗೆ ಪ್ರತಿಕ್ರಿಯೆಯಾಗಿ ಮತ್ತು ಮೊದಲ ದೃಶ್ಯದಲ್ಲಿಯೇ ಗೌಡನ ಮನೆ ಸೇವೆಗೆ ಹೋಗಲು ನಿರಾಕರಿಸಿದ ಚಂದ್ರಿಗೆ ಈಗ ಒದಗಿರುವ ಸ್ಥಿತಿಗೆ ಸೂಚಿಯಾಗಿ ಬರುತ್ತವೆ. ಅಂದರೆ ಈ ವರೆಗೆ ನೀಲಿ, ಹಸಿರು, ಕಂದುಗಳ ಜಗತ್ತನ್ನ ಬಿಚ್ಚಿದ ನಾಟಕ ಈಗ ಕೆಂಪು ಜಗತ್ತನ್ನ ಕಣ್ಣೆದುರು ಇಡುತ್ತಿದೆ. ಕೊನೆಯ ಮತ್ತು ಪರಾಕಾಷ್ಟೆಯ ದೃಶ್ಯದಲ್ಲಿ ಎಲ್ಲಾ ಚಳುವಳಿಗಳ ಸಾವು ಎಂಬಂತೆ ಭೀಮಣ್ಣನ ಹೆಣ ಕಾಣುತ್ತದೆ. ಇದು ಕಳೆದ ಮುವ್ವತ್ತು ವರ್ಷಗಳಲ್ಲಿ ನಾವು ಕಂಡ ಆದರ್ಶ ಜಗತ್ತಿನ ಅವಸಾನದ ಸೂಚಿ. ನಮ್ಮ ಎಲ್ಲಾ ಬಂಡಾಯಗಳು ಹೇಗೆ ಕೊಳ್ಳಲ್ಪಡುತ್ತವೆ ಅಥವಾ ಕೊಲ್ಲಲ್ಪಡುತ್ತವೆ ಎಂಬುದರ ಸಂಕೇತ. ಇಲ್ಲಿ ಅದೇ ವಿಚಿತ್ರವಾದ ಕಣ್ಣಿಗೆ ಕಾಣದ ಜಗತ್ತಿನ ಪ್ರತಿನಿಧಿಯಾಗಿ ಶಶಾಂಕ ಬರುತ್ತಾನೆ. ಅವನು ಜೂಲಿಯಸ್ ಸೀಸರ್ ನಾಟಕದಲ್ಲಿ ಆಂಟನಿ ಮಾಡಿದಂತಹುದೇ ಭಾಷಣವನ್ನು ಮಾಡುತ್ತಾನೆ. ಆ ಮೂಲಕ ನಾವೆಲ್ಲರೂ ಇರುವ, ಈಗಿನ ಇಂದಿನ ಸ್ಥಿತಿಯಲ್ಲಿ ಚಳುವಳಿಗಳು ಸಹ ಅರ್ಥಹೀನವಾಗುತ್ತಿರುವ ಮತ್ತು ಕೆಲವು ಬಾಯಿಬಡುಕರ ಭಾಷಣಕ್ಕೆ ಆಹಾರವಾಗಿಯೇ ನಮ್ಮ ಸಮಾಜ ಉಳಿದಿರುವ ವಿವರ ಬರುತ್ತದೆ.

ಈ ಮೂಲಕ ಚೌಗಲೆಯವರ `ದಿಶಾಂತರ’ ಜಾಗತೀಕರಣ ಎಂಬ ಭೂತ ಕೇವಲ ನಮ್ಮ ದುಡಿವವರ್ಗ ಮತ್ತು ಮಧ್ಯಮವರ್ಗವನ್ನಲ್ಲ ನಮ್ಮ ಚಳವಳಿಗಳನ್ನೂ ಸಹ ಹೇಗೆ ಕೊಂಡುಕೊಂಡಿದೆ ಎಂಬುದರ ಸೂಚನೆ ಒದಗಿಸುತ್ತದೆ.

***

`ದಿಶಾಂತರ’ದ ಭಾಷೆ ಮತ್ತು ರಂಗಭೂಮಿ

ಕನ್ನಡದ ನಾಟಕಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವ ಅಭ್ಯಾಸ ಬಹುಕಾಲದಿಂದ ಇದೆ. ಇಲ್ಲಿ ಚಂದ್ರಶೇಖರ ಕಂಬಾರರ ಪ್ರಯೋಗದಿಂದ ಹಿಡಿದು ಈಚೆಗಿನ ನಾರಾಯಣಸ್ವಾಮಿಯವರ ಪ್ರಯೋಗದವರೆಗೆ ಅನೇಕ ನುಡಿಗಟ್ಟುಗಳನ್ನ ರಂಗಭೂಮಿಯಲ್ಲಿ ಬಳಸಿರುವುದನ್ನ ಕಾಣುತ್ತೇವೆ. ಡಿ.ಎಸ್.ಚೌಗಲೆ ಅವರ `ದಿಶಾಂತರ’ದಲ್ಲಿಯೂ ಮಾತಿನ ಭಾಷೆ ಕುರಿತಂತೆ ವಿಶಿಷ್ಟವೆನಿಸುವ ಪ್ರಯತ್ನ ಆಗಿದೆ. ಇದಕ್ಕೆ ನಾಟಕದ ಕಥಾಹಂದರದಲ್ಲಿಯೇ ಉರುವ ವರ್ಗೀಕೃತ ಸಮಾಜದ ಬಹುಮುಖಿ ಗುಣ ತಂದುಕೊಟ್ಟಿರುವ ವ್ಯತ್ಯಯಗಳು ಒಂದು ಕಾರಣವಾದರೆ ಚೌಗಲೆ ಅವರು ಬಳಸಿರುವ ಮರಾಠರ ಗಡಿಯಲ್ಲಿ ಬದುಕುವ ಕನ್ನಡಿಗರು ತಮ್ಮ ನುಡುಗಟ್ಟಲ್ಲಿ ತಂದುಕೊಂಡಿರುವ ಹೊಸ ಪದಗಳು ಮತ್ತೊಂದು ರೀತಿಯಲ್ಲಿ ಸಹಾಯ ಮಾಡುತ್ತವೆ.

ಆರಂಭದ ದೃಶ್ಯದಲ್ಲಿ ತಂಬಾಕಿನ ವಖಾರಿಯಲ್ಲಿ ದುಡಿವ ಹೆಂಗಸರು `ನಾವ ಮೋಠ ಲಕ್ಷ್ಮಣ ಖೋಠಾ’ ಎಂಬ ಗಾದೆ ಮಾತನ್ನಾಡುವಾಗಲೇ ಅವರ ನುಡಿಗಟ್ಟಿನ ಒಳಗೆ ನುಸುಳಿರುವ ಮರಾಠಿಯ ದಟ್ಟ ಛಾಯೆ ಕಾಣುತ್ತದೆ. ಈ ಹೆಂಗಸರ ಬಾಯಲ್ಲೊ `ಥೋಡೆ’ (ಸ್ವಲ್ಪ), `ಗೇಮ್’ (ಆಟ) `ಹೂಬೇ ಹೂಬ’ (ಎದುರಾ-ಬದುರಾ), `ಆಠಾಣೆ’ (ಎಂಟಾಣೆ), `ಓಪನ್ ನಂಬ್ರ’, `ಕ್ಲೋಸಿಂಗ್ ನಂಬ್ರ’ ಎಂಬ ಮಾತುಗಳು ಅವರ ನುಡಿಗಟ್ಟಲ್ಲಿ ಇಳಿದಿರುವ ಅನೇಕ ಭಾಷೆಯ ಪ್ರಭಾವವನ್ನ ಸೂಚಿಸುತ್ತವೆ. ಈ ಪದಗಳ ಬಳಕೆಯಿಂದಾಗಿ ದುಡಿವ ವರ್ಗದ ಹೆಂಗಸರು ಮತ್ತು ಗಂಡಸರು ಆಡುವ ಮಾತು ವರ್ಣರಂಜಿತವಾಗುತ್ತದೆ ಮತ್ತು ಇಡೀ ದೃಶ್ಯಕ್ಕೆ ಮಾತಿನಿಂದಲೇ ದೊರಕುವಂತಹ ಅಪರೂಪದ ಲಯ ದಕ್ಕುತ್ತದೆ.

ನಂತರ ಬರುವ ಶ್ರೀಮಂತ ಆದರೆ ಶ್ರೀಮಂತಿಕೆ ಕಳಕೊಳ್ಳುತ್ತಿರುವ ಗೌಡ, ಪಾಟೀಲರುಗಳ ಮಾತಲ್ಲಿ ಉರ್ದು ಪ್ರಭಾವ ಕಾಣುತ್ತದೆ. `ಫರಕ್’, `ವಜನ್’, `ಬಾನಗಡಿ’, `ಸಾಡೇಸಾತ್’ ಮುಂತಾದ ಪದಗಳಲ್ಲದೆ `ಲೋಡ್’, `ಟ್ರ್ಯಾಕ್ಟರ್’ ಮುಂತಾದ ಪದಗಳು ಸಹ ಅವರ ಮಾತಿನಲ್ಲಿ ನುಸುಳಿವೆ. ಈ ಜನ ತಮ್ಮ ಹಳೆಯ ಅಧಿಕಾರದ (ಅಂದರೆ ಸ್ವಾತಂತ್ರ್ಯಪೂರ್ವ ಕಾಲದ ನಿಜಾಮಾರ ಮತ್ತು ಬಹಮನಿಗಳ ಆಳ್ವಿಕೆಯಲ್ಲಿದ್ದ ಪ್ರದೇಶದ ಜನರು ತಮ್ಮ ರಾಜರುಗಳನ್ನ ಮೆಚ್ಚಿಸಲು ರೂಢಿಸಿಕೊಂಡ ಭಾಷೆ. ತಮ್ಮ ಗೌಡಿಕೆಗೆ ಒಪ್ಪಿಗೆ ನೀಡಿರುವ ರಾಜನಿಗೆ ವಿನಯ ತೋರುತ್ತಾ, ರಾಜ ಬಾಷೆಯನ್ನು ಅಲ್ಲಲ್ಲಿ ಬಳಸಿ, ದೊಡ್ಡಸ್ತಿಕೆ ಮೆರೆಯುವ ಪ್ರಯತ್ನವದು) ಪಳೆಯುಳಿಕೆಗಳನ್ನ ಉಳಿಸಿಕೊಂಡು ಶಿಷ್ಟರಂತೆ ಮಾತಾಡಲು ಪ್ರಯತ್ನಿಸುತ್ತಾರೆ. ಅದಲ್ಲದೆ ಆ ಮಾತಿನ ಒಳಗೆ ಇರುವ ಶೀತಲ ಕ್ರೌರ್ಯ ತಟ್ಟನೆ ಗುರುತಿಸಲು ಸಹ ಈ ನುಡಿಗಟ್ಟು ಸಹಾಯ ಮಾಡುತ್ತದೆ.

ಇನ್ನೂ ಧೋಂಡುಬಾನ ಭಾಷೆ ಅವನ ಡ್ರೈವರ್ ಕೆಲಸದ ವಿವರವನ್ನು ತನ್ನ ನುಡಿಗಟ್ಟೊಳೊಗೆ ಸೇರಿಸಿಕೊಳ್ಳುವುದು, ಕಾರ್ಮಿಕ ನಾಯಕ ಭೀಮಣ್ಣನ ಭಾಷೆಯಲ್ಲಿ ಕಾಣುವ ಶಿಷ್ಟವಾಗ ಹೊರಟ ಕೆಳವರ್ಗದವನ ಪ್ರಯತ್ನ, ಸಾಧುಬಾಬಾನ ಮಾತಲ್ಲಿ ಬರುವ ಸಂಸ್ಕೃತ ಮಿಶ್ರಿತ ಸ್ಥಳೀಯ ನುಡಿಗಟ್ಟು ಇವೆಲ್ಲವೂ ಚೌಗಲೆಯವರು ಸ್ವತಃ ನಟರೂ ಆಗಿದ್ದರೋ? ಹಾಗಾಗಿಯೇ ಇಂತಹದೊಂದು ವಿವರವನ್ನು ಕಟ್ಟುವುದು ಸಾಧ್ಯವಾಯಿತೋ ಎಂಬ ಭಾವ ಮೂಡಿಸುತ್ತದೆ.

ಈ ನುಡಿಗಟ್ಟುಗಳಿಗೆ ಕೌಂಟರ್ ಪಾಯಿಂಟ್ ಎಂಬಂತೆ ಎನ್.ಜಿ.ಒ. ಸಂಸ್ಥೆಯವರ ಮಾತುಗಳು ಮತ್ತು ಖಳನಾಗಿದ್ದರೂ ತಾನು ಖಳನಲ್ಲ ಎಂಬಂತೆ ಮಾತಿನ ಚಾತುರ್ಯದೊಂದಿಗೆ ಅಂತಿಮ ದೃಶ್ಯದಲ್ಲಿ ಶಶಾಂಕ ಆಡುವ ಮಾತುಗಳು ಬರುತ್ತವೆ. ಹೀಗೆ ಇವತ್ತಿನ ನಮ್ಮ ಸುತ್ತಲ ಸಮಾಜದೊಳಗಿರುವ ಎಲ್ಲಾ ಶ್ರೇಣಿಗಳನ್ನು ಮಾತಿನ ಮೂಲಕವೇ ಹಿಡಿಯುವ ಪ್ರಯತ್ನವನ್ನು  ಚೌಗಲೆ ಮಾಡುತ್ತಾರೆ.
ನಮ್ಮ ಬಹುತೇಕ ನಾಟಕಕಾರರು ಕಟ್ಟುವ ಮಾತುಗಳು ನಟರ ನಾಲಿಗೆಯ ಮೇಲೆ ನಿಲ್ಲುವುದಕ್ಕೆ ಸರ್ಕಸ್ ಮಾಡಬೇಕಾಗುತ್ತದೆ. ಏಕೆಂದರೆ ಸಾಹಿತ್ಯ ವಿಮರ್ಶೆಯ ಹಿನ್ನೆಲೆಯಿಂದ ಬಂದವರು ಕಟ್ಟಿದ ನಾಟಕದಲ್ಲಿ ಸಾಹಿತ್ಯಕ್ಕೆ ಪ್ರಾಧಾನ್ಯ ಸಿಕ್ಕು ಆಡು ಮಾತಿನ ಸಲೀಸಿನಿಂದ ಹುಟ್ಟುವ ನಾಟಕೀಯ ಲಕ್ಷಣಗಳು ಬಿಟ್ಟುಹೋಗಿರುತ್ತವೆ. ಹೀಗಾಗಿ ಅಂತಹ ನಾಟಕಗಳನ್ನು ಅಭಿನಯಿಸುವಾಗ ಕಲಾವಿದ ಪಾತ್ರದೊಳಗೆ ಇಳಿಯಲೋ ಮಾತು ಹೇಳುತ್ತಾ ನಡೆಯಲೋ ಎಂಬ ದ್ವಂದ್ವಕ್ಕೆ ಸಿಕ್ಕು ಪರದಾಡುತ್ತಾನೆ. ಆದರೆ ಚೌಗಲೆ ಅವರ `ದಿಶಾಂತರ’ದಲ್ಲಿ ನಟನಿಗೆ ಆ ತ್ರಾಸಿಲ್ಲ. ಆತ ಮಾತುಗಳ ಮೂಲಕವೇ ತನ್ನ ಪಾತ್ರದೊಳಗೆ ಸಲೀಸಾಗಿ ಇಳಿಯುವುದು ಸಾಧ್ಯವಾಗುತ್ತದೆ. ಹೀಗಾಗಿ ನಟ ರಂಗದ ಮೇಲೆ ಜೀವಂತನಾಗುವುದು ಸಾಧ್ಯ ಎಂದು ನನ್ನ ಅನಿಸಿಕೆ (ಈ ನಾಟಕದ ಪ್ರದರ್ಶನವನ್ನು ನಾನು ನೋಡಿಲ್ಲ. ನನ್ನ ಓದಿನ ಆಧಾರದಲ್ಲಿ ಈ ಮಾತನ್ನ ಹೇಳುತ್ತಾ ಇದ್ದೇನೆ ಎಂಬುದನ್ನ ನೆನಪಿಸುತ್ತಾ ಮುಂದುವರೆಯುತ್ತೇನೆ.)

***

ಭಾಷಂತರ ಮತ್ತು ದಿಶಾಂತರ

ಇಷ್ಟೆಲ್ಲಾ ಹೇಳಿದ ಮೇಲೆ ಒಂದಂತೂ ಸ್ಪಷ್ಟ. ಈಚೆಗೆ ನಮ್ಮಲ್ಲಿ ಕಾಣದ ಹೋರಾಟಗಾರರ ಇಂದಿನ ಬದುಕು, ಮತ್ತು ಸಾಯುತ್ತಾ ಇರುವ ಆಧುನಿಕ ಹೋರಾಟಗಳನ್ನು `ದಿಶಾಂತರ’ದ ಮೂಲಕ ಚೌಗಲೆ ಕಟ್ಟಿದ್ದಾರೆ. ಅತಿ ಹೆಚ್ಚು ಭಾಷಾಂತರ ನಾಟಕಗಳನ್ನು ಕನ್ನಡಕ್ಕೆ ಕೊಟ್ಟವರೊಬ್ಬರ ಸ್ವತಂತ್ರ ಕೃತಿ ಇದು. ಹೀಗೆ ಮತ್ತೆ ಮತ್ತೆ ಒತ್ತಿ ಹೇಳಲು ಕಾರಣವಿದೆ. ನಮ್ಮಲ್ಲಿ ಭಾಷಾಂತರಕ್ಕೆ ಸೀಮಿತವಾದ ಅನೇಕ ಲೇಖಕರಿದ್ದಾರೆ. ಅವರು ಅಪರೂಪದ ಪರಭಾಷೀಯ ನಾಟಕವನ್ನ ಕನ್ನಡಕ್ಕೆ ಕೊಟ್ಟಿದ್ದಾರೆ. ಆದರೆ ಇಂತಹ ಭಾಷಾಂತರ ನಾಟಕಕಾರರು ಸ್ವತಂತ್ರ ಕೃತಿಗಳನ್ನ ಬಹುತೇಕ ಬರೆಯಲೇ ಇಲ್ಲ. ಹೀಗಾಗಿ, ಈ ಲೇಖಕರಿಗೆ ಭಾಷಾಂತರದ ಮೂಲಕ ದೊರೆತಿದ್ದ ಸಂಸ್ಕೃತೀಯ ವಿವರಗಳು ಅವರದ್ದೇ ಸ್ವಂತ ಕೃತಿಯಾಗಿ ದೊರಕದೆ ಹೋಯಿತು ಎಂದು ನನ್ನ ಅನಿಸಿಕೆ. ಹೀಗೆಂದಾಗ `ಆ ಸಂಸ್ಕೃತಿಯ ವಿವರವನ್ನ ನಮ್ಮ ಸಂಸ್ಕೃತಿಯ ಮೇಲೆ ಹೇರಬೇಕೆ?’ ಎಂಬ ಸರಳ ಪ್ರಶ್ನೆಯೊಮದು ಏಳುತ್ತದೆ. ಚೌಗಲೆ ಅವರ ಈ ನಾಟಕದಲ್ಲಿ ಅಂತಹ ಹೇರುವಿಕೆಯಿಲ್ಲ. ಆದರೆ ದೃಶ್ಯ ಕಟ್ಟುವ ಕ್ರಮದಲ್ಲಿ ಸಮಕಾಲೀನ ಮರಾಠಿ ರಂಗಭೂಮಿಯ ತಂತ್ರಗಳು ಕಾಣಸಿಗುತ್ತವೆ. ಇದು ಕನ್ನಡಕ್ಕೆ ಉಪಯುಕ್ತವಾಗಬಲ್ಲದು ಎಂದು ನನ್ನ ಭಾವನೆ. ವಿಶೇಷವಾಗಿ ವರ್ಗೀಕೃತ ಸಮಾಜವೊಂದರ ನಡುವಿನ ಕ್ಲಿಷ್ಟ ವಿವರಗಳನ್ನು ನೀಡುವಾಗ ಇಂತಹ ತಂತ್ರಗಳು ಉಪಯುಕ್ತವಾಗುತ್ತವೆ.

ಆರಂಭದಿಂದ ಅಂತ್ಯದ ವರೆಗಿನ `ದಿಶಾಂತರ’ದ ಪಯಣದಲ್ಲಿ ಎಲ್ಲಾ ಶ್ರೇಣಿಗಳ ಪರಿಚಯ ಮತ್ತು ಅವುಗಳ ಸಂಕಟ ಸುರಳೀತವಾಗಿ ಬಿಚ್ಚಿಕೊಳ್ಳುತ್ತದೆ. ಇದಕ್ಕೆ ಸಮಾಜದ ಹೊರಮೈಯಿಂದ ಒಳಮೈನ ಕಡೆಗೆ ಹರಿವ ಮತ್ತು ಅವುಗಳ ನಡುವಿನ ಕೊಂಡಿಗಳನ್ನು ಮಾತಿನಿಂದಲೇ ತಿಳಿಸುವ ತಂತ್ರವನ್ನ ಚೌಗಲೇ ಬಳಸುತ್ತಾರೆ. ಇಂತಹ ತಂತ್ರವನ್ನ ಮರಾಠಿಯ ವೃತ್ತಿ ರಂಗಭೂಮಿಯಲ್ಲಿ ಬಳಸಿರುವುದನ್ನ ನಾನು ಕಂಡಿದ್ದೇನೆ. ತೆಂಡೂಲ್ಕರರ `ಘಾಶೀರಾಂ’ ನಂತಹ ನಾಟಕದ ಪ್ರಯೋಗದಲ್ಲಿ ಕೃತಿಯನ್ನು ಮೀರಿದ ಸಲೀಸಿನೊಂದಿಗೆ ಈ ಸೇತುಬಂಧವನ್ನ ರಂಗ ಕೃತಿ ಸಾಧಿಸಿರುವುದನ್ನ ನಮ್ಮಲ್ಲಿನ ಅನೇಕರು ಬಲ್ಲರು. ಅಂತಹುದೇ ಪ್ರಯೋಗವನ್ನ ಚೌಗಲೆ `ದಿಶಾಂತರ’ದಲ್ಲಿ ಸಾಧಿಸುತ್ತಾರೆ. ಇದು ರಂಗಕರ್ಮಿಯಾಗಿ ನಾನು ಮೆಚ್ಚುವಂತಹ ವಿಷಯ.

***

ಕಡೆಗೆ ಇಷ್ಟೆಲ್ಲಾ ಹೇಳಿದ ಮೇಲೆ ತಟ್ಟನೆ `ದಿಶಾಂತರ’ ಈ ದಶಕದ ಅಥವಾ ಶತಮಾನದ ಶ್ರೇಷ್ಟ ಕೃತಿ ಎಂದು ನಾನು ಹೇಳಲಾರೆ. ಕಾರಣವಿಷ್ಟೆ. ಇದೊಂದು ಮಹತ್ವಾಕಾಂಕ್ಷಿ ನಾಟಕ. ಲೇಖಕ ತನ್ನ ಸುತ್ತಲೂ ತಾನು ಕಂಡಿದ್ದನ್ನೆಲ್ಲಾ ಒಟ್ಟಿಗೆ ಉಣಬಡಿಸುವ ತವಕದಲ್ಲಿರುವುದು ಇಲ್ಲಿ ಕಾಣುತ್ತದೆ. ಇಂತಹ ಮಹತ್ವಕಾಂಕ್ಷೆಯ ಕಷ್ಟವೆಂದರೆ, ಹೇಳುವ ವಿವರಗಳು ಅಗಾಧವಾದಂತೆ ನಾಟಕದ ಅವಧಿ ಮಿತಿಯಾಗಿ ಕಾಡುತ್ತದೆ. ಇದರಿಂದಾಗಿ ಎಲ್ಲವನ್ನು ಮುಟ್ಟಿಬಂದ ಸಂತಸ ಮಾತ್ರ ಉಳಿಯುತ್ತದೆ. ಆದರೆ ಹಾಗೆ ಮುಟ್ಟಿದ ವಿವರಗಳು ವಿಸ್ತಾರ ಪಡೆದ ಸತ್ಯಗಳಾಗಿ ಅನಾವರಣಗೊಳ್ಳುವುದಿಲ್ಲ. ದೋಂಡುಬಾ ನಂತಹ ಡ್ರೈವರ್‌ನ ಸಾವು ನಮ್ಮನ್ನ ಕಾಡುವುದಿಲ್ಲ. ಭೀಮಣ್ಣನ ಸಾವಾಗುತ್ತದೆ ಎಂಬುದು ಆತನ ಹೋರಾಟ ಆರಂಭದ ಹೆಜ್ಜೆಗಳಲ್ಲಿಯೇ ತಿಳದುಹೋಗುವುದರಿಂದ ಅಂತಿಮವಾಗಿ ಆತನ ಸಾವು ನಮಗೆ ವಿಶಿಷ್ಟ ಅನುಭವ ನೀಡುವ ಬದಲು, ಗೊತ್ತಿದ್ದ ವಿವರವೇ ಘಟಿಸಿತು ಎಂಬ ಭಾವ ಹುಟ್ಟಿಸುತ್ತದೆ. ಹೀಗಾಗಿ ರಂಗಭೂಮಿ ಕಟ್ಟಿಕೊಡುವ ವೈಭವದ ಮೂಲಕ ಸಾಧಿತವಾಗಬೇಕಾದ ಮಾಂತ್ರಿಕತೆ ಸಾಧಿತವಾಗದೆ ಹೋಗಬಹುದು ಎಂದು ನನಗನ್ನಿಸುತ್ತದೆ. ಇದನ್ನ `ನಿಲ್ಲದ ಭಾವಗಳ ಓಟ’ ಎಂದು ಸಿನಿಮಾ ನಿರ್ದೇಶಕ ಐಸೆನ್‌ಸ್ಟೈನ್ ಗುರುತಿಸುತ್ತಾನೆ. ಅದಕ್ಕಾಗಿ ಆತ ಸ್ಟ್ರೈಕ್ ಒಂದನ್ನ ಚಿತ್ರಿಸುವ ನಿರ್ದೇಶಕನಿಗಿರುವ ಕಷ್ಟಗಳನ್ನು ಕುರಿತು ಮಾತಾಡುತ್ತಾ, ಇಂತಲ್ಲಿ ಸ್ಟ್ರೈಕ್ನ ಉದ್ದಿಶ್ಯ ಮತ್ತು ಅದು ಆಳುವ ವರ್ಗದ ಮೇಲೆ ಮಾಡುವ ಪರಿಣಾಮ ಮಾತ್ರ ಪ್ರಮುಖವಾಗಿ ಸ್ಟ್ರೈಕ್‌ನಲ್ಲಿ ಭಾಗವಹಿಸಿದವರ ಅಳಲುಗಳ ಎಲ್ಲಾ ಮಗ್ಗುಲುಗಳನ್ನ ದಾಖಲಿಸಲು ಆಗದ ಬಗ್ಗೆ ಆತ ಮಾತಾಡುತ್ತಾನೆ. ಇಂತಹುದೇ ವಿವರವನ್ನ ಚೀನಾದ ಬಡವರನ್ನು ಕುರಿತು ಸಾಕ್ಷ್ಯಚಿತ್ರ ತಯಾರಿಸಿದ ಜೋರಿಸ್ ಇವಾನ್ಸ್ ಕೂಡ ಹೇಳುತ್ತಾನೆ. `ದಿಶಾಂತರ’ದ ಚೌಗಲೆಯವರದ್ದೂ ಸಹ ಅಂತಹುದೇ ಸಂಕಟ. ಹೀಗಾಗಿಯೇ ಗೌಡನನ್ನ ಧಿಕ್ಕರಿಸಿ ನಿಂತ ಹೆಣ್ಣಿನ ದುರಂತದ ವಿವರ ಬಂದರೂ ಅದು ನಮ್ಮನ್ನ ತಾಗದೇ ಸಾಗುತ್ತದೆ. ಇದೇ ಸಮಯದಲ್ಲಿ ಗೌಡನಿಗೆ ಎಲ್ಲವನ್ನೂ ಒಪ್ಪಿಸಿಕೊಂಡ ಪಾತ್ರಗಳು ಕೇವಲ ಜೊತೆಗಾರರಾಗಿ ಕಾಣಿಸುತ್ತವೆಯೇ ಹೊರತು, ಅವರ ಒಳಗಿರುವ ರಾಜಿಯ ನೋವುಗಳು ಮಾತಾಗಿಯೂ ತಲುಪುವುದಿಲ್ಲ.

ಪ್ರಾಯಶಃ ಚೌಗಲೆಯವರು ತಮ್ಮ ಮುಂದಿನ ಸ್ವತಂತ್ರ ನಾಟಕಗಳಲ್ಲಿ ಈ ಮಿತಿಗಳನ್ನ ದಾಟಿಕೊಳ್ಳಬಲ್ಲರು ಎಂದು ನನ್ನ ನಂಬಿಕೆ. ಅದಕ್ಕಾಗಿ ಕಾಯುತ್ತಾ ಚೌಗಲೆಯವರು ಭಾಷಾಂತರ ಕೃತಿಗಳನ್ನು ನೀಡುತ್ತಲೇ ಅನೇಕ ಸ್ವತಂತ್ರ ಕೃತಿಗಳನ್ನು ನಮಗೆ ನೀಡಲಿ ಎಂದು ಹಾರೈಸುತ್ತೇನೆ.

Advertisements

0 Responses to “ಜಾಗತೀಕರಣದ ನೆರಳು ಮತ್ತು ತಳಮಟ್ಟದ ಚಳುವಳಿಗಳ ನರಳು (ಸಾವು)”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: