ಭಾರತ ಎಂಬ ಅಭಿವೃದ್ಧಿಶೀಲ ರಾಷ್ಟ್ರದ ಪ್ರಜೆಯ ಸ್ವಗತಗಳು

೮ನೇ ಬೆಂಗಳೂರು ಜಿಲ್ಲಾ ಯುವಜನ ಸಮ್ಮೇಳನ
ಡಿವೈಎಫ್‌ಐ ನಿಂದ ಸಂಘಟಿತವಾದ್ದು – ತಾರೀಖು ೨೩ ಏಪ್ರಿಲ್ ೨೦೦೬ರಂದು ಉದ್ಘಾಟನೆ
ಈ ಸಮಾರಂಭಕ್ಕಾಗಿ ಬಿ.ಸುರೇಶ ಸಿದ್ಧಪಡಿಸಿಕೊಂಡ ಭಾಷಣದ ಟಿಪ್ಪಣಿ

ಈ ದೇಶವನ್ನು ತೃತೀಯ ದೇಶ ಎಂದು ಕರೆಯುತ್ತಾರೆ. ಹಾಗೆಂದು ಕರೆಯುವುದರ ಬಗ್ಗೆಯೇ ನನಗೆ ಮೂಲಭೂತ ಅನುಮಾನಗಳಿದೆ. ಯಾರು – ಯಾವುದರ ಜೊತೆಗೆ ನಮ್ಮನ್ನು ಅಳತೆಗೋಲಾಗಿ ಇರಿಸಿದರು? ಎಂಬುದು ಸುಲಭವಾಗಿ ದಕ್ಕದ ಸತ್ಯವಾಗಿ ಉಳಿದಿದೆ. ಜೇಬು ತುಂಬಿಕೊಂಡವರೆಲ್ಲರೂ ಅಭಿವೃದ್ಧರೇ? ಹಾಗಾದರೆ ತಲೆ ತುಂಬಿಕೊಂಡವರನ್ನು ಏನನ್ನಬೇಕು? ಎಂಬ ಪ್ರಶ್ನೆ ಕಾಡುತ್ತದೆ. ನಾನು ಮತ್ತು ನನ್ನ ಸುತ್ತಲ ಜನಮಾನಸಕ್ಕೆ ಅಂತಹ ಅದ್ಯಾವ ಗ್ರಹಗತಿಯ ತೊಂದರೆ ಎಂದು ನಮ್ಮನ್ನು ಈ `ಅಭಿವೃದ್ಧರು’ ಸಾಲದ ಕೂಪಕ್ಕೆ ತಳ್ಳುತ್ತಾರೆ ಎಂಬುದು ತಿಳಿಯುವುದಿಲ್ಲ.
ನಮಗೆ ಗೊತ್ತಿದೆ. ಭಾರೀ ಅಣೆಕಟ್ಟುಗಳನ್ನು ಕಟ್ಟುವುದಕ್ಕಿಂತ ಸಣ್ಣ ಅಡ್ಡಗಟ್ಟೆಯಲ್ಲಿ ಹೆಚ್ಚು ಉತ್ತಮವಾದ ವಿದ್ಯುತ್ ಉತ್ಪಾದಿಸಲು ಸಾಧ್ಯ. ಅದು ತೀರಾ ಸ್ಪಷ್ಟವಾಗಿ ತಿಳಿವಿಗೆ ಬಂದಿದೆ. ಆದರೂ ಈ ದೇಶದಲ್ಲಿ ನರ್ಮದಾ ಸರೋವರ್ ರೀತಿಯ ಯೋಜನೆಗಳು ಆಗುತ್ತಿರುತ್ತವೆ. ಅದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವವರನ್ನು, `ಆತ್ಮಹತ್ಯೆ ಪ್ರಯತ್ನ’ ಎಂಬ ಕಾನೂನಿನ ಆರೋಪ ಹೊರಿಸಿ ಬಂಧಿಸುವ ಕೆಲಸವನ್ನು ಕಾನೂನು ಸುವ್ಯವಸ್ಥೆಯ ಹೆಸರಲ್ಲಿ ಮಾಡುತ್ತಾ ಇರುತ್ತಾರೆ.

ನಮಗೆ ಗೊತ್ತಿದೆ. ನೀರು ಈ ದೇಶದಲ್ಲಿ ಯಥೇಚ್ಚವಾಗಿ ಸಿಗುತ್ತದೆ ಎಂಬುದು ತಿಳಿದಿದೆ. ಅದನ್ನು ಬಳಸುವವರಿಗೆ ಸರಿಯಾಗಿ ಕೊಡುವ ವ್ಯವಸ್ಥೆ ಸಿದ್ಧಪಡಿಸುವ ಬದಲಿಗೆ `ನೀರಿನ ಖಾಸಗೀಕರಣ’ ಮಾಡುವವರ ಕೊರಳಿಗೆ ನಮ್ಮ ಕುತ್ತಿಗೆ ಕೊಡುತ್ತೇವೆ. ಕೇವಲ ಎರಡು ವರ್ಷಗಳ ಕೆಳಗೆ ೨೫ಸಾವಿರ ಲೀಟರ್ ನೀರಿಗೆ ೪೫ರೂ. ಕೊಡುತ್ತಿದ್ದವರು, ಈಗ ೮ಸಾವಿರ ಲೀಟರ್‌ಗೆ ೧೩೦ರೂ ಕೊಡಲು ಮೌನವಾಗಿ ಸಮ್ಮತಿಸುತ್ತೇವೆ. ಎಲ್ಲರ ಮನೆಗೆ ಮೀಟರ್ ಎಳೆಯುವ ಹೆಸರಲ್ಲಿ ಎಂಎನ್‌ಸಿಗಳಿಂದ ಹಣ ಪಡೆದ ಎನ್‌ಜಿಓಗಳು ನಡೆಸುವ ಹುನ್ನಾರವನ್ನು ಗಮನಿಸುತ್ತಲೇ ಸುಮ್ಮನೆ ಇದ್ದುಬಿಡುತ್ತೇವೆ. ನಮ್ಮೂರಿನ ಕೆರೆಯ ನೀರು ಪಡೆಯಲು ನಾನು ದುಡ್ಡು ಕೊಡಬೇಕು ಎಂದಾದಾಗ ಮಕ್ಕಳ ಕಥೆಯಲ್ಲಿ ನದಿಯ ಮತ್ತೊಂದು ದಡದಲ್ಲಿ ನಿಂತ ತೋಳವು, `ನನ್ನ ಎಂಜಲು ಮುಟ್ಟದಿರು’ ಎಂದು ಕುರಿಗೆ ಹೇಳಿದಂತೆ ಯಾವುದೋ ಖಾಸಗಿ ಕಂಪೆನಿ ಹೇಳಿದರೆ ಕೇಳಿಕೊಂಡು ಇದ್ದುಬಿಡುವ ಸ್ಥಿತಿಗೆ ಬರುತ್ತೇವೆ.
ನಮಗೆ ಗೊತ್ತಿದೆ. ಬೃಹತ್ ರಸ್ತೆಗಳು ಸರಕನ್ನು ಮಾತ್ರ ಸಾಗಿಸುತ್ತವೆ. ಜೊತೆಯಲ್ಲಿ ನಮ್ಮ ಸಂಸ್ಕೃತಿಯನ್ನ ಹೈಬ್ರಿಡ್ ಮಾಡಿಬಿಡುತ್ತವೆ ಎಂಬುದು ಗೊತ್ತಿದೆ. ಆದರೂ ಸರಕು ಸಂಸ್ಕೃತಿಯಲ್ಲಿ ಲೋಲುಪರಾಗಿ ಹೊಚ್ಚಹೊಸದನ್ನು ಕೊಂಡು ಭಾರೀ ವೇಗವಾಗಿ ಗಮ್ಯ ತಲುಪಲು ಈ ರಸ್ತೆಯೇ ಸಾಧನ ಎಂದುಕೊಂಡು ಆರಾಮಾವಾಗಿ ಇದ್ದುಬಿಡುತ್ತೇವೆ. ಜಾಹೀರಾತು ಸಂಸ್ಕೃತಿಯು ತಾನು ತೋರಿಸಿದ್ದನ್ನೆಲ್ಲಾ ಅಷ್ಟೇ ವೇಗವಾಗಿ ನಾಡಿನ ಮೂಲೆಮೂಲೆಗೂ ಸಾಗಿಸುತ್ತದೆ ಎಂಬುದನ್ನ ಹೊರತುಪಡಿಸಿ ಈ ರಸ್ತೆಗಳು ನಮ್ಮನ್ನು ಅಭಿವೃದ್ಧಿಗೊಳಿಸುವುದಿಲ್ಲ ಎಂಬುದು ತಿಳಿದಿದ್ದರೂ ನಮ್ಮ ನ್ಯಾಯಾಲಯಗಳು ರಸ್ತೆ ಮಾಡಿಸಿ ಎಂದು ಸರ್ಕಾರಕ್ಕೆ ತಾಕೀತು ಮಾಡುವುದನ್ನ ನೋಡುತ್ತಾ ನಾವು ಸುಮ್ಮನಿರುತ್ತೇವೆ.
ನಮಗೆ ಗೊತ್ತಿದೆ. ಈ ದೇಶದಲ್ಲಿನ ನಿರುದ್ಯೋಗಿಗಳ ಸಂಖ್ಯೆ ಶೇಕಡ ೫೦ರ ಅಂಕವನ್ನು ಎಂದೋ ದಾಟಿದೆ. ಆದರೆ ನಮ್ಮೆದುರಿನ ಬಣ್ಣದಬಣ್ಣದ ನಗರ ಸಂಸ್ಕೃತಿಯನ್ನ ಗಮನಿಸುವ ಅವಸರದಲ್ಲಿ ನಾವು ನಮ್ಮ ಪಕ್ಕದಲ್ಲಿರುವ ಉದ್ಯೋಗ ರಹಿತನಿಗೆ ಒಂದು ಉದ್ಯೋಗ ಒದಗಿಸಲಿ ಏನು ಮಾಡುವುದೆಂದು ಚಿಂತಿಸುವುದಿಲ್ಲ. ಬದಲಿಗೆ ನಮ್ಮದೇ ಲೋಕದಲ್ಲಿ ಉಳಿದು ಹೋಗುತ್ತೇವೆ.
ನಮಗೆ ಗೊತ್ತಿದೆ. ಈ ನಾಡಿನ ಬಹುಸಂಖ್ಯಾತರು ರೈತರು. ಮಣ್ಣಿನ ಜೊತೆಯಲ್ಲಿ ಬದುಕುವ ಅವರಿಗೆ ದೊರೆಯದ ಲಾಭಗಳು ಬೃಹತ್ ಕಂಪೆನಿಗಳಿಗೆ ದೊರೆಯುತ್ತಿದೆ ಎಂಬುದನ್ನು ನಾವು ಕಾಣುತ್ತಿದ್ದೇವೆ. ಅದರಿಂದಾಗಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿದೆ ಎಂಬುದು ನಮಗೆ ತಿಳಿದಿದೆ. ಆದರೆ ನಾವು ಇದೆಲ್ಲಾ ಅಭಿವೃದ್ಧಿ ಎಂದುಕೊಂಡು ಐದು ವರ್ಷಕ್ಕೊಮ್ಮೆ ಓಟು ಹಾಕುವ ಸರದಿ ಕಾಯುತ್ತಾ ಕೂತು ಬಿಟ್ಟಿದ್ದೇವೆ.
(ನಮಗೆ ಗೊತ್ತಿದೆ. ತೀರಿಕೊಂಡವನು ನಮಗೆ ಬಿಟ್ಟುಹೋದದ್ದು ಭಾರೀ ಬೃಹತ್ ತಿಳುವಳಿಕೆಯನ್ನಲ್ಲ. ಆದರೂ ನಾವು ಆತನ ಅಂತ್ಯಕ್ರಿಯೆ ಸರಿಯಾಗಿ ಆಗದಂತೆ ಮುಕುರಿಕೊಂಡು ಬೀಳುತ್ತೇವೆ. ವಾರಗಟ್ಟಲೇ ಆತನ ಹೆಸರಲ್ಲಿ ಶ್ರದ್ಧಾಂಜಲಿ ಎಂಬ ನಾಟಕ ಮಾಡುತ್ತೇವೆ. ಆತ ಮಾಡದೆ ಇರುವುದನ್ನೆಲ್ಲಾ ಆತನಿಗೆ ಆರೋಪಿಸಿ ತೃಪ್ತರಾಗುತ್ತೇವೆ. ಆದರೆ ಸತ್ಯ ಎಂಬುದು ಕಣ್ಣೆದುರಿಗೆ ಇರುತ್ತದೆ. ಹತ್ತು ಜನರ ಕೂಲರನ್ನ ಒಬ್ಬ ಬಡಿದೋಡಿಸುವ ಅದೇ ಭ್ರಮಾತ್ಮಕ ಕೃತಿಗಳನ್ನು ರಚಿಸಿದವನು ನಮ್ಮ ಸಂಸ್ಕೃತಿಯ ವಕ್ತಾರನಾಗಲು ಸಾಧ್ಯವಿಲ್ಲ. ಆದರೂ ನಾವು ಭ್ರಮಾಲೋಕದ ಆವರಣದಲ್ಲಿ ಉಳಿಯಲು ನಿರಂತರವಾಗಿ ಪ್ರಯತ್ನಿಸುತ್ತೇವೆ.)
ಹೀಗೇ… ನಮಗೆ ಗೊತ್ತಿರುವ ಹಾಗೂ ನಾವು ಗಮನಿಸದಿರುವ ಅಸಂಖ್ಯ ವಿವರಗಳನ್ನು ಎದುರಿಗೆ ಇರಿಸಬಹುದು. ಇವೆಲ್ಲವೂ ಈ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಆಗುತ್ತಿರುವ ಅಪದ್ಧಗಳು. ಇವುಗಳನ್ನು ನಾವೆಲ್ಲರೂ, ವಿಶೇಷವಾಗಿ ಈ ದೇಶದ ಯುವಜನತೆಯು ಗಮನಿಸುತ್ತಿಲ್ಲ. ಇದನ್ನೊಂದು `ಸಾಮೂಹಿಕ ವಿಸ್ಮೃತಿ’ ಎಂದು ಕರೆಯಬಹುದು.

ಸಾಮೂಹಿಕ ವಿಸ್ಮೃತಿಯ ಕೊಡುಗೆ
ಈ ವಿಸ್ಮೃತಿಯನ್ನು ನಮಗೆ ದಯಪಾಲಿಸಿದವರು ನಮ್ಮೆದುರಿಗೆ ಕೊಳ್ಳುವುದಕ್ಕೆ ಅನೇಕ ಆಯ್ಕೆಗಳನ್ನು ಇರಿಸಿರುತ್ತಾರೆ. ಆದರೆ ಸಂಪಾದಿಸುವುದಕ್ಕೆ ಅಷ್ಟೇ ಆಯ್ಕೆಗಳು ಇರುವುದಿಲ್ಲ. ಅದರಿಂದಾಗಿ ಈ `ವಿಸ್ಮೃತಿ’ಯು ನಮ್ಮನ್ನು `ಭಾವನಾಶಕೋಶ’ ಎಂದು ಕರೆಯಬಹುದಾದ ವಿಚಿತ್ರ ಸ್ಥಿತಿಯಲ್ಲಿ ಇರಿಸುತ್ತದೆ. ಇದು ಅಭಿವೃದ್ಧಿಯಲ್ಲ. ಬುದ್ಧಿಹೀನತೆಯ ಕಡೆಗೆ ನಮ್ಮನ್ನು ಕರೆದೊಯ್ಯುವ ಜಾಣತನ. ಆ ಕುರಿತು ನಾವು ಎಚ್ಚರವಹಿಸಬೇಕಿದೆ.
ಇದಕ್ಕೆ ಕಾರಣಗಳು ಸರಳ. ಈ ದೇಶದಲ್ಲಿರುವ ವ್ಯವಸ್ಥೆಯನ್ನು ಸಮಾಜೋ-ಉದಾರೀ- ಪ್ರಜಾಪ್ರಭುತ್ವವಾದಿ ಎಂದು ಕರೆಯುತ್ತಾರೆ. ಇಲ್ಲಿ ಪ್ರಜೆ ಎಂಬುವವನದು ಆಧಾರಿತ ಬದುಕು (ಡಿಪೆಂಡೆಂಟ್ ಎಂಬರ್ಥದಲ್ಲಿ). ಇಲ್ಲಿ ಎಲ್ಲಾ ನಿರ್ಧಾರಗಳೂ ಯಾವುದೋ ಕಲ್ಲುಕಟ್ಟಡದಲ್ಲಿ ಕುಳಿತಿರುವ ಕೆಲವು ನೇತಾರರಿಂದ ಆಗುತ್ತಾ ಇರುತ್ತವೆ. ಆ ನೇತಾರರಿಗೆ ಆರ್ಥಿಕ ಬೆನ್ನೆಲುಬುಗಳು ಎನಿಸಿರುವ ಶ್ರೀಮಂತವರ್ಗ ಮತ್ತು ಬೃಹತ್ ಬಂಡವಾಳಿಗರು ಆ ನಿರ್ಧಾರಗಳಿಗೆ ಕಾರಣರಾಗಿರುತ್ತಾರೆ. ಹೀಗೆ ಆದ ನಿರ್ಧಾರಗಳನ್ನು ಕುರಿತು ನಾವು ಮಾತಾಡುವ ಹಕ್ಕಿದೆ. ಅಂತೆಯೇ ಹರತಾಳ, ಮುಷ್ಕರ, ಪ್ರತಿಭಟನೆಗಳು ಆಗುತ್ತವೆ. ಆದರೆ ನರ್ಮದಾ ಬಚಾವೋ ಆಂದೋಲನಕ್ಕೆಂದು ಮೇಧಾ ಪಾಟ್ಕರ್ ಉಪವಾಸ ಮಾಡಿದರೆ ಅದಕ್ಕೆ ಪ್ರತಿಯಾಗಿ ತಾವೂ ಉಪವಾಸ ಕೂರುವ ನೇತಾರರು ಇದ್ದಾರೆ. ಇವರಿಗೆ ನಿಂಬೆರಸ ಕೊಡಲು ನಾಡಿನ ಕಟ್ಟಕಡೆಯ ವ್ಯಕ್ತಿ ಬಂದರೆ ಅವರಿಗೆ ಶರಬತ್ತು ನೀಡಲು ನಾಡಿನ ನೆತ್ತಿಯ ಮೇಲೆ ಕುಳಿತ ಮಠಾಧೀಶರು ಬರುತ್ತಾರೆ. ಈ ವೈರುಧ್ಯಗಳ ನಡುವೆ ನಾವು ನಮ್ಮದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದುಕೊಳ್ಳುತ್ತಾ ಉಳಿದುಬಿಡುತ್ತೇವೆ. ಇದು ಈ ವಿಸ್ಮೃತಿಯ ಕೊಡುಗೆಯೇ.

ಆಗಬೇಕಿರುವುದೇನು?
ಈ ನಾಡಿನ `ಯುವ’ ಜನತೆ ಎದ್ದುನಿಲ್ಲಬೇಕಿದೆ. ನಾವು ಗೊತ್ತಿದ್ದೂ ಸುಮ್ಮನಿರುವ ಎಲ್ಲದರ ವಿರುದ್ಧ ದನಿ ಎತ್ತಬೇಕಿದೆ. ಈ ನಾಡಿನಲ್ಲಿರುವ `ಡಿಪೆಂಡೆಂಟ್ ಡೆಮಾಕ್ರಸಿ’ಯ ಬದಲಿಗೆ `ಎಮಾನ್ಸಿಪೇಟೆಡ್ ಡೆಮಾಕ್ರಸಿ’ಯನ್ನು ರೂಪಿಸಲು ಪ್ರಯತ್ನಿಸಬೇಕಿದೆ. ಈ ಎರಡನೆಯ ಬಗೆಯ ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸಂಘಟಿತ ಬದುಕು, ಸಾಮಾಜಿಕ ಚಲನೆ, ತೊಡಗಿಸಿಕೊಳ್ಳುವ ಸಮಾಜ, ಬಡತನ ಮತ್ತು ಲಿಂಗಬೇಧ ನಿರ್ಮೂಲನೆಯ ಅವಕಾಶಗಳು ಹೆಚ್ಚಾಗಿದೆ. (ನೋಡಿ: ದ ಪಾವರ್ಟಿ ಆಫ್ ರೈಟ್ಸ್, ಪ್ರಕಾಶಕರು: ಇಂಟರ್‌ನ್ಯಾಷನಲ್ ಸ್ಟದೀಸ್ ಇನ್ ಪಾವರ್ಟಿ ರಿಸರ್ಚ್, ೨೦೦೧, ಎಡುರಾಡೊ ಎಸ್. ಬುಸ್ಟಲ್ಲೊ ಅವರ ಲೇಖನ `ಎಕ್ಸ್‌ಪ್ಯಾನ್ಷನ್ ಆಫ್ ಸಿಟಿಜ಼ನ್ಷಿಪ್ ಅಂಡ್ ಡೆಮಾಕ್ರಟಿಕ್ ಕನ್‌ಸ್ಟ್ರಕ್ಷನ್’ ಪುಟ ೭) ಇದನ್ನೇ `ದ ಲಾಜಿಕ್ ಆಫ್ ಕಲೆಕ್ಟಿವ್ ಯಾಕ್ಷನ್ ಎಂದು ಆಲ್ಸನ್ ೧೯೬೫ರಲ್ಲಿ ಗುರುತಿಸಿದ್ದಾನೆ. ಇಂತಹ ಒಂದು ವ್ಯವಸ್ಥೆಯಿಂದ ಈಗಿರುವ `ನಾನು’ ಮುಖ್ಯವಾದ ಸಮಾಜ ನಿರ್ಮಾನಕ್ಕೆ ಬದಲಾಗಿ `ನಾವು’ ಮುಖ್ಯವಾಗುವ ಸಮಾಜ ನಿರ್ಮಾಣದ ಸಾಧ್ಯತೆಯಿದೆ. ಹೀಗೆ `ನಾನು’ ಕೇಂದ್ರಿತ ಸಮಾಜದಲ್ಲಿನ ದುಷ್ಪರಿಣಾಮಗಳು ಅನೇಕ. ಇಲ್ಲಿ ನೆರೆಯು ಹೊರೆಯಾಗುತ್ತದೆ. ನಾನು, ನನ್ನಾಸ್ತಿ, ನನ್ನ ಮನೆ, ನನ್ನ ಸಾಮಗ್ರಿ ಸುಖ ಎಂಬುದು ಪ್ರಧಾನವಾಗಿ ನಮ್ಮ ಸುತ್ತಲೂ ನಮಗಿಂತ ಹೆಚ್ಚಿನದನ್ನು ಪಡೆದಿರುವ ಕೆಲವರು ಮತ್ತು ನಮ್ಮಷ್ಟು ಎತ್ತರ ಮುಟ್ಟದ ಬಹುಸಂಖ್ಯಾತರನ್ನು ಸೃಜಿಸುತ್ತಾ ಇರುತ್ತೇವೆ. ಇದರಿಂದಾಗಿ ಉಳ್ಳವರ ಮತ್ತು ಇಲ್ಲದವರ ನಡುವಣ ದೂರ ಹೆಚ್ಚಾಗುತ್ತಲೇ ಸಾಗುತ್ತದೆ. ಇದು ಅಸುಖಿ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ.
ಈ ನಿಟ್ಟಿನಲ್ಲಿ ನೇಪಾಳದಲ್ಲಿ ಆಗುತ್ತಿರುವ ಮತ್ತು ಆಗುತ್ತಿರುವ ಹೋರಾಟವನ್ನು ಗಮನಿಸಬಹುದು. ಅಲ್ಲಿನ ಯುವಕರು ಬೇಸತ್ತು ಎದ್ದು ನಿಂತಾಗ ಅವರ ಹಿಂದೆ ಬಾವುಟಗಳಿರಲಿಲ್ಲ. ಬದಲಿಗೆ ಉದ್ದಿಶ್ಯಗಳು ಪ್ರಧಾನವಾಗಿತ್ತು. ಅವರು ಬೇಸತ್ತಿದ್ದರು ಮತ್ತು ಎಚ್ಚೆತ್ತುಕೊಂಡಿದ್ದರು. ಹೀಗಾಗಿ ಸಧ್ಯಕ್ಕೆ ಸಣ್ಣ ಪ್ರಮಾಣದ ಜಯವೊಂದು ಅಲ್ಲಿನ ಯುವಜನತೆಗೆ ದೊರಕಿದೆ. ಇದು ನಮ್ಮಲ್ಲಿ ಸಧ್ಯಕ್ಕೆ ಆಗುವುದು ಸಾಧ್ಯವೇ ಇಲ್ಲವೇನೋ ಎಂಬಂತೆ ಇಂದಿನ `ಯುವ’ಜನಾಂಗ ಬದುಕುತ್ತಿದೆ. ಈಚೆಗಿನ `ರಂಗ್ ದೇ ಬಸಂತಿ’ಯಂತಹ ಚಿತ್ರಗಳು ನಮ್ಮ ಯುವಕರಿಗೆ ರೋಲ್‌ಮಾಡೆಲ್‌ಗಳಾಗುತ್ತಿವೆ. ಅಲ್ಲಿ ಭ್ರಷ್ಟರನ್ನು ಬದಲಿಸಲು ವ್ಯವಸ್ಥೆಯನ್ನು ಬದಲಿಸುವ ಮಾದರಿಯಿಲ್ಲ. ಆ ಯುವಕರು ಸ್ವಾತಂತ್ರ್ಯ ಸಂಗ್ರಾಮದ ಕನಸಲ್ಲಿ ಆಧುನಿಕ ಭ್ರಷ್ಟರಿಗೆ ಗುಂಡಿಡಲು ಆರಂಭಿಸುತ್ತಾರೆ. ಇದು ಅಪಾಯಕಾರಿ. ಗುಂಡಿಡುವುದರಿಂದ ಯಾವುದೇ ಸಮಾಜ ಬದಲಾಗದು. ಬದಲಾಗಬೇಕಿರುವುದು ಆಮೂಲಾಗ್ರ ವ್ಯವಸ್ಥೆ.
ಈ ದೃಷ್ಟಿಯಿಂದ ನಾವು ಅಭಿವೃದ್ಧಿ ಶೀಲತೆಯ ಹೆಸರಲ್ಲಿ ಈ ದೇಶದ ಮೇಲೆ ಹೇರಲಾದ ವ್ಯವಸ್ಥೆಗಳು ಮತ್ತು ಅವುಗಳ ಪರಿಣಾಮವನ್ನು ಗಮನಿಸಬೇಕಿದೆ. ನನ್ನ ದೇಶದ `ಯುವ’ಜನತೆಗಾಗಿ ಇವುಗಳನ್ನು ಇಲ್ಲಿ ಜೋಡಿಸಿಡುತ್ತೇನೆ.
೧. ಮುಕ್ತ ಮಾರುಕಟ್ಟೆ ವ್ಯವಸ್ಥೆ ಮತ್ತು ಆ ವ್ಯವಸ್ಥೆಯ ಜೊತೆಗೆ ಆಗಿರುವ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು ಈ ನಾಡಿನ ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಟುವಟಿಕೆಯಲ್ಲಿ ಬಹುದೊಡ್ಡ ಗುಂಪೊಂದನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸಾಮಜಿಕ ಅಸಮತೋಲನ ಹೆಚ್ಚುತ್ತಾ ಇರುವುದಲ್ಲದೇ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಯೋಜನೆಗಳು ಆಗುತ್ತಿಲ್ಲ. ಆದ್ದರಿಂದ ನಾವು ಬಡತನ ನಿರ್ಮೂಲನಕ್ಕಾಗಿ ವ್ಯವಸ್ಥೆಯ ಮರುರೂಪಗಳನ್ನು ಕಟ್ಟಬೇಕಿದೆ.
೨. ಸಮಾಜವನ್ನು ರಕ್ಷಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ವಿದ್ಯೆ, ಆರೋಗ್ಯವನ್ನು ಕುರಿತಂತಹ ಕಾಳಜಿಗಳು ಈ ಹೊಸ ವ್ಯವಸ್ಥೆಯಲ್ಲಿ ಬಹುಮಟ್ಟಿಗೆ ನಾಪತ್ತೆಯಾಗತೊಡಗಿದೆ. ಒಂದು ಕಾಲಕ್ಕೆ ವರ್ಷಕ್ಕೆ ಐದುಸಾವಿರದಲ್ಲಿ ಆಗುತ್ತಿದ್ದ ಇಂಜಿನಿಯರಿಂಗ್‌ನಂತಹ ವಿಶೇಷ ವರ್ಗದ ಓದಿಗೆ ಇಮದು ತಗಲುವ ಖರ್ಚು ಎಷ್ಟು ಎಂದು ಗಮನಿಸಿದರೆ ತಮಗೆ ಸತ್ಯ ತಿಳಿಯುತ್ತದೆ. ಇದಲ್ಲದೆ ಸರ್ಕಾರ ಕುಷ್ಟರೋಗವನ್ನು ಓಡಿಸಿದ್ದೇವೆ ಎಂದು ಯಾರದೋ ಮನಸ್ಸಂತೋಷಕ್ಕಾಗಿ ಹೇಳುತ್ತಾ ಇರುವಾಗಲೇ ನಮ್ಮ ನಾಡಿನ ಅಂಚಿನಲ್ಲಿರುವ ಹಳ್ಳಿಗಳಲ್ಲಿಯೇ ಆ ಖಾಯಿಲೆಗೆ ಅನೇಕರು ಸಿಕ್ಕಿ ನರಳುತ್ತಾ ಇರುವುದನ್ನು ನಾವು ನೋಡುತ್ತಿದ್ದೇವೆ. ಈ ದೃಷ್ಟಿಯಿಂದ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಆರೋಗ್ಯ ಕುರಿತ ಹೊಸ ನೀತಿ ರೂಪಿಸಲು ನಮ್ಮ `ಯುವ’ಜನತೆಯು ನೇರವಾಗಿ ಭಾಗವಹಿಸಲು ಸಿದ್ಧವಾಗಬೇಕಿದೆ.
(ಈಚೆಗೆ ಸಿಇಟಿ ಎಂಬುದನ್ನು ಕುರಿತಂತೆ ಆದ ವಾದ-ವಿವಾದದ ಹಿನ್ನೆಲೆಯಲ್ಲಿ ಮತ್ತು ಆ ಕುರಿತು ನಮ್ಮ ನ್ಯಾಯಾಲಯಗಳು ತೆಗೆದುಕೊಂಡ ನಿಲುವಿನ ಹಿನ್ನೆಲೆಯಲ್ಲಿ ಇಂದು ಬಡವರು ಅಂತಹ ಓದನ್ನು ಓದುವುದೇ ಸಾಧ್ಯವಿಲ್ಲ ಎಂಬಂತಾಗಿದೆ. ನಮ್ಮ `ಯುವ’ ಜನತೆ ಈ ಕುರಿತು ಈ ಕೂಡಲೇ ಎಚ್ಚರ ವಹಿಸದೇ ಹೋದಲ್ಲಿ ನಮ್ಮ ಮುಂದಿನ ತಲೆಮಾರು ಯಾವ ಸಂಕಷ್ಟಗಳನ್ನು ಎದುರಿಸಬೇಕಾಗುವುದು ಎಂಬುದನ್ನು ಊಹಿಸಿ.)
೩. ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ `ಕ್ರಾಂತಿ’ಯಲ್ಲಿ ತೊಡಗಿರುವ ಉದಾರನೀತಿವಾದಿಗಳಿಂದಾಗಿ ಗ್ರಾಹಕರು ಒಂದು ವಸ್ತುವಿನ ನಿಜವಾದ ಬೆಲೆಯನ್ನು ತಿಳಿಯುವುದಕ್ಕೆ ಮತ್ತು ತಯಾರಕ ತನ್ನ ಬೆಲೆಯನ್ನು ನಿಗಧಿ ಪಡಿಸಿದ ಕ್ರಮವನ್ನು ತಿಳಿಯುವುದು ಬಹುತೇಕ ದುಸಾಧ್ಯವಾಗಿದೆ. (ಉದಾ: ಸಿಮೆಂಟ್, ನೀರು, ವಿದ್ಯುತ್). ಗ್ರಾಹಕರ ವೇದಿಕೆಗಳೆಂಬ ಸಂಸ್ಥೆಗಳು ಇವೆಯಾದರೂ ಇವು ಗ್ರಾಹಕನಿಗೆ ನೀತಿ ಪಾಠ ಹೇಳುವುದಕ್ಕಿಂತ ಖಾಸಗೀಕರಣದಲ್ಲಿ ಉತ್ತಮ ಸೇವೆ ದೊರೆಯುತ್ತದೆ. ಸಾರ್ವಜನಿಕ ಉದ್ದಿಮೆಗಳೆಲ್ಲವೂ ಭ್ರಷ್ಟ ಎಂಬ ಭಾವನೆಯೊಂದು ನಾಡಿನಾದ್ಯಂತ ಬೆಳೆಯಲು ಸಹಕರಿಸುತ್ತಿವೆ. (ಇಲ್ಲಿ ಖಾಸಗೀಕರಣವನ್ನು ಸಂಪೂರ್ಣವಾಗಿ ತೆಗೆದು ಎಲ್ಲವೂ ಸಾರ್ವಜನಿಕ ಉದ್ದಿಮೆಗಳಾಗಬೇಕೆಂಬುದು ಈ ಲೇಖಕನ ನಿಲುವೂ ಅಲ್ಲ. ಆದರೆ ಗ್ರಾಹಕನಿಗೂ ಬೆಲೆ ನಿಗದಿ ಪಡಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕಿರಬೇಕು ಎಂಬುದಾಗಿದೆ.)
೪. ಮುಕ್ತ ಮಾರುಕಟ್ಟೆಯಿಂದ ಕಪ್ಪುಹಣ, ಖಾಸಗಿ ಲೇವಾದೇವಿ, ಅನೈತಿಕ ಮಾರ್ಗದ ಸಂಪಾದನೆಗಳು ತಪ್ಪುತ್ತವೆ ಎಂಬ ಭ್ರಮೆಯ ಜೊತೆಗೆ ಹೊಸ ನೀತಿಯನ್ನು ಜಾರಿಗೊಳಿಸಲಾಗಿದೆ. ಆದರೆ ತದ್ವಿರುದ್ಧವಾಗಿ ಹುಟ್ಟಿರುವ ಗ್ರಾಹಕ ಸಂಸ್ಕೃತಿಯು ಖಾಸಗೀ ವಲಯದಲ್ಲಿಯೂ ಭ್ರಷ್ಟತೆಯನ್ನು ತಂದಿದೆ. ಪ್ರತಿ ಭ್ರಷ್ಟ ರಾಜಕಾರಣಿಯ ಹಿಂದೆ ಭ್ರಷ್ಟ ಕಂಪೆನಿ ಮಾಲೀಕನೊಬ್ಬ ಇರುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದಾಗಿ ಭ್ರಷ್ಟತೆಯನ್ನ ಇಡೀ ಸಮಾಜವೇ ಒಪ್ಪಿಕೊಂಡು ಪ್ರತಿಯೊಂದಕ್ಕೆ ಇಂತಿಷ್ಟು ಎಂದು ರೇಟ್ ನಿಗದಿಪಡಿಸಿದ್ದರೆ ಉತ್ತಮವಾಗುತ್ತಿತ್ತು ಎಂದು ಮಾತಾಡಿಕೊಳ್ಳುವ ಮಟ್ಟಕ್ಕೆ ಈ ಸಮಾಜ ಒಗ್ಗಿಕೊಂಡಿದೆ. (`ಆ ಸರ್ಕಾರವೇ ಪರವಾಗಿಲ್ಲಪ್ಪ ದುಡ್ಡು ಕೊಟ್ಟರೆ ಕೆಲಸ ಆಗುತ್ತಿತ್ತು. ಈ ಸರ್ಕಾರದವರು ದುಡ್ಡು ತಗೊಂಡರೂ ಕೆಲಸ ಮಾಡಲ್ಲ” ಎಂದು ಸಾಮಾನ್ಯ ಜನ ಗೊಣಗಿಕೊಳ್ಳುವುನ್ನ ನಾವೆಲ್ಲರೂ ಕೇಳಿದ್ದೇವೆ. ಕೆಲವೊಮ್ಮೆ ನಾವೂ ಸಹ ಅಂತಹ ಮಾತಾಡಿರಲೂಬಹುದು.)
ಇದರಿಂದಾಗಿ ಸಾರ್ವಜನಿಕ ಉದ್ದಿಮೆಗಳನ್ನು ಮಾತ್ರವಲ್ಲ ಸೇವಾವಲಯದ ಖಾಸಗಿ ಕಂಪೆನಿಗಳ ಮೇಲೂ ಗಮನ ಇರಿಸಲು ಪ್ರಜೆಗಳ ಭಾಗವಹಿಕೆ ಇರುವಂತಹ ವ್ಯವಸ್ಥೆಯೊಂದನ್ನು ರೂಪಿಸುವುದು ಅನಿವಾರ್ಯವಾಗಿದೆ.
ಇದೇ ಪರಿಸ್ಥಿತಿಯ ಮುಂದುವರಿಕೆಯಾಗಿ ಲಿಂಗಭೇಧ ಮತ್ತು ಜಾತಿಬೇಧಗಳು ನಮ್ಮನ್ನು ಕಾಡುತ್ತಿವೆ. ಮೊದಲನೆಯದರಿಂದಾಗಿ ವರದಕ್ಷಿಣೆ ಎಂಬ ಪಿಡುಗು ಮದುವೆಯ ಕಾಲವೊಂದಕ್ಕೆ ಬದಲಾಗಿ ಹುಡುಗಿಯ ಬಾಣಂತನ, ಹಬ್ಬ ಹರಿದಿನ ಹೀಗೇ ಎಲ್ಲಾ ಕಾಲಕ್ಕೂ ಹಂಚಿಕೊಂಡಿದೆ. ಒಮ್ಮೆ ಮುಗಿಯದ ವ್ಯಾಪಾರ ಹುಡುಗಿಯ ಜೀವನದುದ್ದಕ್ಕೂ ಹರಡಿಕೊಂಡು ಹೆಣ್ಣುಮಕ್ಕಳನ್ನು ಕೊಲ್ಲುತ್ತಿದೆ. ಇದರಿಂದಾಗಿ ಹೆಣ್ಣು ಭ್ರೂಣ ಹತ್ಯೆಯೂ ಹೆಚ್ಚುತ್ತಿದೆ.
ಇದಲ್ಲದೆ ಮೀಸಲಾತಿಯಂತಹುದನ್ನು ಅಭಿವೃದ್ಧಿಯ ಹೆಸರಲ್ಲಿ ಸೃಷ್ಟಿಸಿದ ಸರ್ಕಾರಗಳು ಅದನ್ನು ಕೇವಲ ಮತ ಪಡೆಯುವ ತಂತ್ರವಾಗಿ ಬಳಸಲು ಸಾಧ್ಯವಾಗಿದೆಯೇ ಹೊರತು ನಿಜವಾದ ಅರ್ಥದಲ್ಲಿ ಮೀಸಲಾತಿ ಎಂಬುದು ನಾಡಿನ ಕಟ್ಟಕಡೆಯ ವ್ಯಕ್ತಿಗೆ ತಲುಪಿಯೇ ಇಲ್ಲ. ಇದರಿಂದಾಗಿ ಜಾತಿ ಎಂಬುದು ಇಂದು ಕೇವಲ ಅಧಿಕಾರ ರಾಜಕಾರಣದ ಅಸ್ತ್ರವಾಗಿ ಹೋಗಿದೆ. ಆದ್ದರಿಂದ ಇಂದಿನ `ಯುವ’ಜನತೆಯು ಜಾತಿ ವರ್ಗೀಕಾರಣ ಮತ್ತು ಮೀಸಲಾತಿಗೆ ಬದಲಾಗಿ ಆರ್ಥಿಕ ವರ್ಗೀಕರಣವನ್ನು ಮಾತ್ರ ಒಪ್ಪಿಕೊಂಡು ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಎಂಬಂತಹ ನೀತಿ ರೂಪಿಸಲು ಒತ್ತಾಯಿಸಬೇಕಿದೆ.
೫. ಈಚಿನ ದಿನಗಳಲ್ಲಿ ಖಾಸಗೀಕರಣದಿಂದ ಹುಟ್ಟಿರುವ `ಹೊಸ’ ಆದಾಯವು ಸರ್ಕಾರವನ್ನು ಮತ್ತು ಈ ವ್ಯವಸ್ಥೆಯನ್ನು ಕುರಿತಂತೆ ಒಂದು ಅಸಡ್ಡೆಯನ್ನು ಅಲ್ಲಿನ ದುಡಿವ ವರ್ಗದಲ್ಲಿ ಮೂಡಿಸಿರುವುದನ್ನು ನಾವು ಗಮನಿಸಬಹುದು. ಇದರಿಂದಾಗಿ ಕೆಲವು ಬೃಹತ್ ಲಾಭಕೋರ ಸಂಸ್ಥೆಗಳು ಪ್ರಜಾಸರ್ಕಾರವೊಂದನ್ನು ಬೊಂಬೆಯಂತೆ ಆಡಿಸುವುದನ್ನೂ ಸಹ ನಾವು ನೋಡುತ್ತಿದ್ದೇವೆ. ಇದು ಅಪಾಯಕಾರಿ
ಇಂತಹ ಖಾಸಗಿ ಕಂಪೆನಿಗಳು ಹೆಚ್ಚು ಗ್ರಾಹಕರನ್ನು ಹುಟ್ಟಿಸುವ ಭರದಲ್ಲಿ ಎಲ್ಲರಿಗೂ ಅಗತ್ಯವಲ್ಲದ್ದನ್ನು / ಬಳಸದೆ ಇರುವುದನ್ನೇ ಅತಿಹೆಚ್ಚು ತಯಾರಿಸಿ ಅದನ್ನು ಕೊಳ್ಳುವುದೇ ಜೀವನದ ಸರ್ವಶ್ರೇಷ್ಟ ಕೆಲಸ ಎಂಬಂತಹ ಮಿಥ್ಯೆ ಒಂದನ್ನು ಸೃಷ್ಟಿಸುವ ಆ ಮೂಲಕ ಎಲ್ಲರೂ ಅನಗತ್ಯವನ್ನೇ ಕೊಳ್ಳಲು ಉಪಕ್ರಮಿಸುವುದನ್ನು ಸಹ ನಾವು ಕಾಣಬಹುದು. (ಉದಾ: ಮೊಬೈಲು ಫೋನ್‌ಗಳು).
ಈ ವಿವರಗಳ ಹಿನ್ನೆಲೆಯಲ್ಲಿ ಎಲ್ಲಾ ಖಾಸಗೀಕರಣಗಳೂ ಜನಗಳೆದುರು ಪಾರದರ್ಶಕವಾಗಿ ಆಗಬೇಕಾದ್ದು ಎಂದು `ಯವ’ಜನತೆ ತಾಕೀತು ಮಾಡಬೇಕಾದ ಸಂದರ್ಭ ಒದಗಿ ಬಂದಿದೆ.
೬. ಎಲ್ಲಿಯವರೆಗೆ ಆಮದು ಕೇಂದ್ರಿತ ನೀತಿಗಳನ್ನು ಜಾರಿಗೊಳಿಸುತ್ತೇವೋ ಅಲ್ಲಿಯವರೆಗೆ ಈ ಸಮಾಜದಲ್ಲಿ ಬೆಳೆದ ಹುಲ್ಲಿಗೂ ಗಿರಾಕಿ ದೊರೆಯುವುದು ಕಷ್ಟವಾಗುತ್ತದೆ ಎಂಬುದನ್ನ ನಾವು ಲ್ಯಾಟಿನ್ ಅಮೇರಿಕಾ ಮತ್ತು ಪೌರ್ವಾತ್ಯ ದೇಶಗಳಲ್ಲಿ ಉದಾರೀಕರಣದಿಂದ ಪರಿಣಾಮ ಕಂಡು ಬಲ್ಲೆವು. ಈ ದೃಷ್ಟಿಯಿಂದ ರಫ್ತು ಕೇಂದ್ರಿತ ಆರ್ಥಿಕ ವ್ಯವಸ್ಥೆಯನ್ನ ರೂಪಿಸಲು ಇಂದಿನ `ಯುವ’ ಜನತೆ ಒತ್ತಾಯಿಸಬೇಕಿದೆ.
೭. ವ್ಯಾಪಾರ ಕೇಂದ್ರಿತ ಉದಾರೀಕರಣದ ಹಿನ್ನೆಲೆಯಲ್ಲಿ ನಮ್ಮ ಎಲ್ಲಾ ಮಾಧ್ಯಮಗಳೂ ತಮ್ಮ ಸಾಮಾಜಿಕ ಎಚ್ಚರಗಳನ್ನು ಮರೆತು ಗ್ಲಾಮರ್‌ಅನ್ನು ಮಾತ್ರ ನೀಡುವ ಯತ್ನ ಮಾಡುತ್ತಿದೆ. ಇದರಿಂದಾಗಿ ನಮ್ಮ ಸಮಾಜದ ಒಳಗೂ ಸಹ ತಿರುಳಿಗೆ ಪ್ರಾಧಾನ್ಯ ನೀಡುವ ಬದಲು ಥಳುಕಿಗೆ ಗೌರವ ಕೊಡುವ ಅಭ್ಯಾಸ ಇಣುಕಿ ಹಾಕುತ್ತಿದೆ. ಇದೂ ಸಹ ಅತ್ಯಂತ ಅಪಾಯಕಾರಿಯಾದ್ದು. ಈ ನಿಟ್ಟಿನಿಂದ ನಮ್ಮ ಎಲ್ಲಾ ಸಮೂಹ ಮಾಧ್ಯಮಗಳಿಗೂ ಸ್ಪಷ್ಟ ಸಾಂಸ್ಕೃತಿಕ ನೀತಿಯೊಂದನ್ನು ರೂಪಿಸುವ ಜವಾಬ್ದಾರಿಯೂ ಇಂದಿನ `ಯುವ’ದ ಮೇಲೆಯೆ ಇದೆ. (ಹಾಗಲ್ಲದೇ ಹೋದರೆ ನಮ್ಮ ನಾಡಿನಲ್ಲಿ ಹೆಚ್ಚುತ್ತಿರುವ ರಿಮೇಕ್ ಮತ್ತು ರಿಮಿಕ್ಸ್ ಸಿನಿಮಾ ಸಂಸ್ಕೃತಿಗಳು, ಅದರಿಂದಾಗಿ ಸಾಯುತ್ತಿರುವ ಸೃಜನಶೀಲತೆ, ಇತ್ಯಾದಿಗಳು ರೋಗವಾಗಿ ಕಾಡುತ್ತಾ ಅದಾಗಲೇ ಹೇಳಿದ `ವಿಸ್ಮೃತಿ’ಗೆ ಮತ್ತಷ್ಟು ಕೊಡುಗೆ ನೀಡುವ ಸಾಧ್ಯತೆಯಿದೆ. ಅದರೊಂದಿಗೆ ನಮ್ಮ ಮುದ್ರಣ ಮಾಧ್ಯಮವೂ ಸಹ ಎಚ್ಚರ ಕಾಯುವ ಕೆಲಸಕ್ಕೆ ಬದಲಾಗಿ ಸೆನ್ಸೇಷನ್ ಸೃಷ್ಟಿಸುವ ಆ ಮೂಲಕ ಲಾಭ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಇರುವುದನ್ನು ಕಾಣುತ್ತಿದ್ದೇವೆ. ಇದನ್ನೂ ಸಹ  ಮರುರೂಪಿಸಬೇಕಾದ್ದು `ಯುವ’ದ ಜವಾಬ್ದಾರಿಯೇ ಆಗಿದೆ.)

ಬಡತನ ಮತ್ತು ಮಾನವ ಹಕ್ಕುಗಳು
ಈ ಮಾನವ ಹಕ್ಕುಗಳು ಎಂಬ ಆಲೋಚನೆ ಹೊಸದು. ಇದರ ಆರಂಭವನ್ನು ಫ್ರೆಂಚ್ ಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಗುರುತಿಸಬಹುದು. ೧೯೪೮ರಲ್ಲಿ ಮಾನವಹಕ್ಕುಗಳನ್ನ ಕುರಿತ ಉದ್ಘೋಷ ಸಿದ್ಧವಾಯಿತು. ಆದರೆ ಇದು ಉಪಸಂಸ್ಕೃತಿಗಳಲ್ಲಿ ಆಗುವ ಅನೇಕ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಗುರುತಿಸುವುದಿಲ್ಲ. ಈ ವಿಶ್ವಸಂಸ್ಥೆಯ ಉದ್ಘೋಷವು ಬಂಡವಾಳಿಗರ ಆರ್ಥಿಕ ಮತ್ತು ರಾಜಕೀಯ ಅಪೇಕ್ಷೆಗಳನ್ನು ಮಾತ್ರ ಪೂರೈಸುತ್ತದೆ. ಈ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮೇಲಾಗುವ ದೌರ್ಜನ್ಯವನ್ನು ಗುರುತಿಸುವುದೂ ಇಲ್ಲ. ವಿಶ್ವಸಂಸ್ಥೆಯ ಉದ್ಘೋಷ ಹೀಗೆನ್ನುತ್ತದೆ:
“Recognition of the inherent dignity and of the equal and in alienable rights of all the members of the human family is the foundation of freedom, justice and peace of the world.”

ಇದೆ ಮಾತುಗಳನ್ನ ಆಧರಿಸಿ ಅಂತಾರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆ (ಕೋವನೆಂಟ್) ಹೀಗೆ ಬರೆಯುತ್ತದೆ:

“In accordance with the Declaration of human rights, the ideal of free human beings enjoying freedom from fear and want can only be acheived if conditions are created whereby everyone may enjoy economic, social,and cultural rights, as well as civil and political rights”
ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎನಿಸುತ್ತದೆ ಇವು. ಆದರೆ ಇವುಗಳಿಂದ ಹುಟ್ಟಿರುವ ಸಂಬಂಧ ಎಂತಹದು ಎಂದು ಗಮನಿಸಿ. ಅದು ಮಾರುವವ/ಕೊಳ್ಳುವವ, ಕೆಲಸ ಕೊಟ್ಟವನು/ ಕೆಲಸಗಾರ, ಸಾಮಾಗ್ರಿ ಒದಗಿಸುವವನು/ಗ್ರಾಹಕ…. ಹೀಗೆ. ಇಲ್ಲಿ ಗುರುತಿಸಲಾಗದ ಹೊಸ ಮತ್ತು ಹಳೆಯ ವರ್ಗೀಕರಣಗಳಾದ ಜಾತಿ, ವರ್ಣ, ದೇಶ, ಭಾಷೆ, ಬುಡಕಟ್ಟು ಮತ್ತು ಆರ್ಥಿಕವಾಗಿ ಹಿಂದುಳಿದವರು ಮೇಲೆ ತಿಳಿಸಿದ ಮಾನವ ಹಕ್ಕುಗಳ ಪಟ್ಟಿಯಲ್ಲಿ ಬರುವುದೇ ಇಲ್ಲ. ಹೀಗಾಗಿಯೇ ಕಂಬಾಲಪಲ್ಲಿಗಳು, ಬೆಲ್ಚಿಗಳು ಆಗುತ್ತಲೇ ಇರುತ್ತವೆ. ಅಂದರೆ ಈ ವಿಶ್ವಸಂಸ್ಥೆಯ ಉದ್ಘೋಷವೂ ಸಹ ಬಂಡವಾಳಿಗರ ಅಂದರೆ ಮುಕ್ತ ಮಾರುಕಟ್ಟೆಯ ಹಣ ಹೂಡಿಕೆದಾರರ ಆಸಕ್ತಿಯನ್ನು ಮಾತ್ರ ಗಮನಿಸುತ್ತವೆ.
ಇದರಿಂದಾಗಿ ಜಗತ್ತಿನಾದ್ಯಂತ ಭಾಷೆಯ ಹೆಸರಲ್ಲಿ, ರಾಷ್ಟ್ರದ ಹೆಸರಲ್ಲಿ, ಗಡಿಗಳ ಹೆಸರಲ್ಲಿ ಕಿತ್ತಾಟಗಳು ಆಗುತ್ತಿರುತ್ತವೆ. ನಾವು ಈ ದೇಶ-ಭಾಷೆ-ನಾಡು-ಗಡಿಯ ಹೆಸರಲ್ಲಿ ಮಾತಾಡುವುದನ್ನ ಮೊದಲು ನಿಲ್ಲಿಸಬೇಕಿದೆ. ಹಾಗಲ್ಲದೆ ಹೋದರೆ ಉದ್ರೇಕಕಾರಿ ಭಾಷಣ ಮಾಡುವವರ ಜೊತೆಯಲ್ಲಿ ಸಾಗುವ ಸಮಾಜವು ಅದಾಗಲೇ ಹೇಳಿದ ವಿಸ್ಮೃತಿಯ ಹಿನ್ನೆಲೆಯಲ್ಲಿ ಮತ್ತಷ್ಟು ಅವಘಡಗಳಿಗೆ ಕಾರಣವಾಗುತ್ತದೆ.
ಇದಕ್ಕಾಗಿ
ದೇಶವೊಂದರ ಸ್ಪರ್ಧಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಆ ಮೂಲಕ ಸೂಪ್ರ ಎಕಾನಮಿಕ್ ಮಾಡಲ್ ರಚಿಸಿ ಎಲ್ಲಾ ಸಾಮ್ರಾಜ್ಯಶಾಹಿಗಳನ್ನು ಬಗ್ಗುಬಡಿಯಬೇಕು.
ಅನುಪಯೋಗಿ ಕೆಲಸಗಳಿಗೆ ಸರ್ಕಾರ ಬಜೆಟಿನಲ್ಲಿ ಹಣ ಎತ್ತಿರಿಸುವುದನ್ನು (ಆಯುಧ ತಯಾರಿಕೆ ಮತ್ತು ಸ್ಪೇಸ್‌ನಂತಹದು) ತಪ್ಪಿಸಬೇಕು
ಯಾವುದನ್ನು ಈ ಉಪಭೋಗ ಸಂಸ್ಕೃತಿ ಕಡೆಗಣಿಸುತ್ತದೋ ಅಂತಹ ವರ್ಗಗಳಿಗಾಗಿ ವಿಶೇಷ ಸಂರಚನೆಗಳನ್ನು ರಾಜಕೀಯವಾಗಿ ರೂಪಿಸಿ ಅವಗಳನ್ನು ವೃದ್ಧಿಸುವುದು.
ಇನ್‌ಫ್ರಾಸ್ಟ್ರಕ್ಚರ್‌ನ ಅಭಿವೃದ್ಧಿಗಾಗಿ ಪ್ರಯತ್ನಿಸುವುದು.(ಸಾರಿಗೆ, ಆರೋಗ್ಯ, ವಿದ್ಯಾಭ್ಯಾಸ, ಕುಶಲಕಲೆ, ಉದ್ಯೋಗವಾಕಾಶ ಒದಗಸುವ ತರಬೇತಿಗಳು, ಗೃಹನಿರ್ಮಾಣ, ಸಾಮೂಹಿಕ ಕೃಷಿ ಮುಂತಾದವು ಇವುಗಳಲ್ಲಿ ಬರಬೇಕಾಗುತ್ತದೆ.)
ಸಮಾಜಕ್ಕೆ ಪರೋಕ್ಷ ಸಂಬಂಧವಿರುವ ಆದರೆ ಶಾಶ್ವತ ಅಭಿವೃದ್ಧಿಯನ್ನು ನೀಡಬಹುದಾದ ಸಂಶೋಧನೆಗಳಿಗೆ ಅವಕಾಶ.
ಉತ್ಪಾದನೆಯನ್ನು ಹೆಚ್ಚಿಸುವಂತೆ ಪ್ರತಿ ಮಾನವನಿಗೂ (ಸಂಪನ್ಮೂಲ ಎಂಬರ್ಥದಲ್ಲಿ) ಮರುತರಬೇತಿ, ಮಾಹಿತಿ ಒದಗಿಸುವಿಕೆ, ಇತ್ಯಾದಿಗಳನ್ನು ನೀಡಬೇಕು
ಯಾವ ಅಭಿವೃದ್ಧಿ ಚಟುವಟಿಕೆಯಿಂದ ಸಂಕಷ್ಟಗಳು ಒದಗುತ್ತವೋ ಮತ್ತು ಯಾವುದನ್ನು ಅವರು ಕಾಸ್ಟ್ ಆಫ್ ಡೆವಲಪ್‌ಮೆಂಟ್ ಎಂದು ಹೇಳುತ್ತಾರೋ ಅಂತಹವುಗಳಿಗೆ ಬೆಂಬಲ ಒದಗಿಸಿ ನಾಡಿನ ಸಂರಚನೆಯನ್ನು ಕಾಪಾಡುವುದು.
(ಇವುಗಳು ಕೆಲವು ಸೂಚನೆಗಳು ಮಾತ್ರ ಈ ಕುರಿತು ಆರ್ಥಿಕ ತಜ್ಞರು ಮತ್ತಷ್ಟು ಆಲೋಚಿಸಬೇಕು ಎಂಬುದು ಈ ಲೇಖಕನ ಭಾವನೆ)
ಇವು ಕೆಲವು ಸ್ಥೂಲ ನೋಟಗಳು. (ಅಥವಾ ಒಬ್ಬ ಸಾಮಾನ್ಯ ಪ್ರಜೆಯ ಸ್ವಗತಗಳು).
ಇವುಗಳ ಆಧಾರದಲ್ಲಿ ಹೇಳಿ. ನಮ್ಮದು ಅಭಿವೃದ್ಧಿಶೀಲ ದೇಶವೇ ಅಥವಾ ನಾವು ಅಭಿವೃದ್ಧಿಯನ್ನು ಸ್ವತಃ ಕೊಂದುಕೊಂಡ ದೇಶದವರೇ? ಈ ಗೊಂದಲದ ಸ್ಥಿತಿಯ ಹಿನ್ನೆಲೆಯಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಾವು ಎಚ್ಚರಗೊಳ್ಳದಿದ್ದರೆ ಅದು ಅಧೋಗತಿಯ ಆರಂಭವಾಗುತ್ತದೆ.

`ಯುವ’ ಸಂಗಾತಿಗಳೇ,
ನಿಮ್ಮೆದುರು ಆಡಬಹುದಾದ ಮತ್ತು ಬಿಚ್ಚಿಡಬಹುದಾದ ಇನ್ನೂ ಅನೇಕ ಸತ್ಯಗಳಿವೆ. ಅವೆಲ್ಲವೂ ಇದೇ ಸಮಾಜದ್ದು. ಕಣ್ಣುಬಿಟ್ಟಿರುವವರೆಲ್ಲರಿಗೂ ಕಾಣುವಂತಾದ್ದು. ಆದ್ದರಿಂದ ಅವುಗಳನ್ನು ಗುರುತಿಸುವ ಮತ್ತು ಬದಲಿಸಲು/ತಿದ್ದಲು ಆಗಬೇಕಾದ್ದನ್ನು ಕುರಿತು ತಾವೇ ಚಿಂತಿಸ ಬೇಕಾಗಿದೆ. ಅಲ್ಲದೇ, ಇಂದು ನಾವು ಬದುಕುತ್ತಿರುವ ಸಮಾಜದಲ್ಲಿ ನಿತ್ಯ ಹೊಸ ಸವಾಲುಗಳು ಉದ್ಭವಿಸುತ್ತಾ ಇವೆ. ಅವುಗಳಿಗೆ ಇಂದಿನ `ಯುವ’ ಜನತೆ ಪ್ರತಿಸ್ಪಂದಿಸಲೇ ಬೇಕಾದ ಪರಿಸ್ಥಿತಿ ಇಂದು ಬಂದಿದೆ. ಎದುರಿಗಿರುವ ಈ `ಯುವ’ಶಕ್ತಿಯೇ ಹೊಸ ನೀತಿಯನ್ನು ಮತ್ತು ಆ ಮೂಲಕ ಹೊಸ ಬದಲಾದ ಸಮಾಜವನ್ನೂ ರೂಪಿಸುವಂತಾಗಲಿ ಎಂಬುದು ಆಶಯ.
ನಾವು ಡಿಪೆಂಡೆಂಟ್ ಆಗುವ ಬದಲು ಎಮಾನ್ಸಿಪೇಟೇಡ್ ಆದಾಗ ಮಾತ್ರ ನಮ್ಮ ಸುತ್ತಲ ಅನೇಕ ಹುಳುಕುಗಳನ್ನ ಮುಚ್ಚುವುದು ಸಾಧ್ಯ ಎಂದು ಮತ್ತೊಮ್ಮೆ ತಿಳಿಸುತ್ತಾ ವಿರಮಿಸುತ್ತೇನೆ.

ಈ ಅವಕಾಶ ನೀಡಿದ ಸಂಗಾತಿಗಳಿಗೆ ಮತ್ತು ಇವಿಷ್ಟನ್ನೂ ಕೇಳಿದ ತಮಗೆ ಕೃತಜ್ಞತೆಗಳು.

Advertisements

0 Responses to “ಭಾರತ ಎಂಬ ಅಭಿವೃದ್ಧಿಶೀಲ ರಾಷ್ಟ್ರದ ಪ್ರಜೆಯ ಸ್ವಗತಗಳು”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: