ಮುವತ್ತಾದರೂ ಮುಪ್ಪಾಗದ ರಂಗಪ್ರಯೋಗಗಳು

(ಇದೊಂದು ಭಾಷಣಕ್ಕೆಂದು ಸಿದ್ಧವಾದ ಟಿಪ್ಪಣಿ. ಆದ್ದರಿಂದ ಇಲ್ಲಿ ಲೇಖನಕ್ಕೆ ಇರಬೇಕಾದಂತಹ ಭಾಷಾಬಳಕೆಯಿಲ್ಲ. ಮಾತುಗಳೇ ಅಕ್ಷರವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಓದಬೇಕಾಗಿ ವಿನಂತಿ – ಲೇಖಕ)

ಕೆಲವು ನಾಟಕಗಳೇ ಹಾಗೆ ಅವು ಚಿರಯೌವನಿಗರಂತೆ ಎಲ್ಲಾ ಕಾಲಕ್ಕೂ ಬದುಕುಳಿಯುತ್ತವೆ. ಇಂತಹ ನಾಟಕಗಳ ಪಟ್ಟಿಯಲ್ಲಿ ಕಾಳಿದಾಸನಿಂದ ಷೇಕ್ಸ್‌ಪಿಯರ್‌ನವರೆಗೆ ಅನೇಕ ನಾಟಕಕಾರರು ಇದ್ದಾರೆ. ಇದು ನಾಟಕಕೃತಿಯ ವಿಚಾರ. ಆದರೆ ರಂಗಕೃತಿ ಎಲ್ಲಾ ಕಾಲಮಾನಗಳನ್ನು ತಡೆದುಕೊಂಡು ಬಹುಕಾಲ ಬದುಕುವುದು ಅಪರೂಪ. ಒಂದು ತಲೆಮಾರಿನ ಪ್ರೇಕ್ಷಕರಿಗೆ ಇಷ್ಟವಾದದ್ದು ಮತ್ತೊಂದು ತಲೆಮಾರಿಗೆ “ಹಳೆಯದು’ ಎಂಬ ಹಣೆಪಟ್ಟಿಯೊಡನೆ ನೆನಪಿನ ಭಂಡಾರ ಸೇರಿಬಿಡುವುದು ಸಾಮಾನ್ಯ.  ಹೀಗಿರುವಾಗ ಲಂಡನ್ನಿನಲ್ಲಿ ಅಗಾಥಾಕ್ರಿಸ್ಟಿಯ ಕಾದಂಬರಿಯನ್ನು ಆಧರಿಸಿ ತಯಾರಾದ “ಮೌಸ್‌ಟ್ರಾಪ್’ನಂತಹ ನಾಟಕ ಕಳೆದ ಐವತ್ತು ವರ್ಷದಿಂದ ಅದೇ ರಂಗಮಂದಿರದಲ್ಲಿ ನಡೆಯುತ್ತಿದೆ ಎಂಬ ಸುದ್ದಿ ಓದಿದವರಿಗೆ ಅಚ್ಚರಿಯಾಗುವುದು ಸಹಜ. ಒಂದು ಪ್ರದರ್ಶನ ತನ್ನಲ್ಲಿನ ಪ್ರಯೋಗಾತ್ಮಕ ಗುಣಗಳನ್ನೆಲ್ಲಾ ಕಳೆದುಕೊಂಡು, ಏಕತಾನೀಯವಾಗಿ ಬಿಡುವ ಎಲ್ಲಾ ಸಾಧ್ಯತೆ ಇರುವಾಗ ನಾಟಕ ಪ್ರದರ್ಶನವೊಂದು ಇಷ್ಟುಕಾಲ ಬದುಕಿರುವುದು ಮತ್ತು ಈಗಲೂ ಪ್ರೇಕ್ಷಕರು ಆ ನಾಟಕವನ್ನು ತಿಂಗಳ ಮುಂಚೆಯೇ ತಿಕೀಟು ಕಾದಿರಿಸಿ ನೋಡುತ್ತಿರುವುದು ಅಚ್ಚರಿಯ ಸಂಗತಿ. ಯೂರೋಪಿನ ವೃತ್ತಿಪರ ನಾಟಕಗಳಿಂದ ನಮ್ಮ ಭಾರತೀಯ ರಂಗಭೂಮಿಗೆ ಬಂದಾಗ ಇಂತಹದು ಆಗಿದೆಯೇ ಎಂದು ಗಮನಿಸಿದರೆ, ಭಾರತದ ಪ್ರತಿ ಪ್ರಾಂತೀಯ ರಂಗಭೂಮಿಯಲ್ಲೂ ಕಾಲನ ಹೊಡೆತ ತಾಳಿಕೊಂಡ ಕೆಲವಾದರೂ ಪ್ರಯೋಗಗಳು ಇರುವುದನ್ನು ಗಮನಿಸಬಹುದು. ಕನ್ನಡದ ಸಂದರ್ಭದಲ್ಲಿ ಇಂದಿಗೂ ಗುಬ್ಬಿ ಕಂಪೆನಿಯ ಪ್ರದರ್ಶನಗಳಾದ “ದಶಾವತಾರ’ “ಕೃಷ್ಣಲೀಲೆ’ ಮುಂತಾದ ನಾಟಕಗಳನ್ನು ನೆನೆಸುವವರು ಇದ್ದಾರೆ. ಆದರೆ ಆ ನಾಟಕಗಳು ಎಪ್ಪತ್ತರ ದಶಕದವರಿಗೆ ನೋಡಲು ದೊರೆಯಲಿಲ್ಲ. ಹೀಗಾಗಿ ಇವುಗಳು ಕಾಳಣ ಹೊಡೆತ ತಾಳಿಕೊಂಡು ಬದುಕಿದ ರಂಗ ಪ್ರದರ್ಶನಗಳು ಎನ್ನಲಾಗದು. ಅದಲ್ಲದೇ, ನಂತರದ ದಿನಗಳಲ್ಲಿ ಈ ನಾಡಿನ ವೃತ್ತಿ ರಂಗಭೂಮಿಯು ಸಿನಿಮಾದ ಕೃತಕ ನಕಲುಗಳನ್ನು ಸೃಷ್ಟಿಸತೊಡಗಿತು. ಅಲ್ಲಿ ನಾಟಕಕ್ಕಿಂತ ಸಿನಿಮೀಯ ವಿವರಗಳು ಹೆಚ್ಚಾಗತೊಡಗಿತು. ಅದರೊಟ್ಟಿಗೆ ಸಿನಿಮಾ ಸಂಗೀತವನ್ನೇ ಬಳಸುವ ಅಭ್ಯಾಸ, ಅದೇ ರೀತಿಯ ಪೋಷಾಕು ಮತ್ತು ದೃಶ್ಯ ಸಂವಿಧಾನ ಉಪಯೋಗಿಸುವ ಅಭ್ಯಾಸ ವೃತ್ತಿರಂಗಭೂಮಿಯಲ್ಲಿ ಚಾಲ್ತಿಗೆ ಬಂದಿತು. ಇವುಗಳಿಂದಾಗಿ ಇಂದಿಗೂ ವೃತ್ತಿ ರಂಗಭೂಮಿಯು ಅನಾರೋಗ್ಯದೊಡನೆಯೇ ಉಸಿರಾಡುತ್ತಿದೆ ಎನ್ನಬಹುದು. ಈಗಲೂ ಉತ್ತರ ಕರ್ನಾಟಕದ ಕೆಲವೆಡೆ ಜೀವಂತವಾಗಿರುವ ವೃತ್ತಿ ರಂಗಭೂಮಿಯನ್ನು ನೋಡಿದಾಗ, ಅಲ್ಲಿರುವ ಅಶ್ಲೀಲ ಮತ್ತು ರೂಕ್ಷತೆಯನ್ನು ಗಮನಿಸಿದಾಗ ಇಂತಹವು ಉಳಿಯದಿರುವುದು ಕನ್ನಡ ಸಂಸ್ಕೃತಿಯ ದೃಷ್ಟಿಯಿಂದ ಕ್ಷೇಮ ಎನಿಸುತ್ತದೆ.

ವೃತ್ತಿ ರಂಗಭೂಮಿಯಿಂದ ಹೊರಗುಳಿದ ಕನ್ನಡದ ಹವ್ಯಾಸೀ ರಂಗಭೂಮಿಯಲ್ಲಿ ಇಂತಹ ಅವಘಡಗಳು ಆಗಲಿಲ್ಲ. ಇದಕ್ಕೆ ಈ ರಂಗಭೂಮಿಯ ಪ್ರಯೋಗಪ್ರಿಯತೆಯಿಂದ ಹಿಡಿದು ಈ ರಂಗಭೂಮಿಯ ಮುಂಚೂಣಿಯಲ್ಲಿದ್ದ ಹಲವರ ಚಿಂತನೆಗಳು ಕಾಲನ ಹೊಡೆತಕ್ಕೆ ಸಿಕ್ಕು ಏಕತಾನೀಯವಾಗದೆ ಹೋದದ್ದು ಮತ್ತು ಪ್ರಯೋಗಗಳು ಆಧುನಿಕ ಮತ್ತು ನವ್ಯೋತ್ತರ ಕಾಲದ ವಿವರಗಳನ್ನು ತನ್ನೊಳಗೆ ಮೈಗೂಡಿಸಿಕೊಂಡದ್ದು ಕಾರಣವಾಗಿರಬಹುದು. ಇದರಿಂದಾಗಿಯೇ ಕನ್ನಡ ಹವ್ಯಾಸೀ ರಂಗಭೂಮಿ ಇಂದಿಗೂ ಬದುಕುಳಿದಿದೆ.
ಹವ್ಯಾಸೀ ರಂಗಭೂಮಿ ಎಂಬ ಚಿರಯೌವನೆ
ಅಜೈಂಟೈನಾದ ಪ್ರಖ್ಯಾತ ಚಿಂತಕ ಬೋರೆಸ್ ಸಂಸ್ಕೃತಿಗಳನ್ನು ಕುರಿತು ಮಾತಾಡುತ್ತಾ ಹೀಗನ್ನುತ್ತಾನೆ; “ಯಾವ ಸಂಸ್ಕೃತಿಗೆ ಬದಲಾಗುವ ಶಕ್ತಿ ಇರುವುದಿಲ್ಲವೋ ಅದಕ್ಕೆ ಬದುಕುವ ಶಕ್ತಿಯೂ ಇರುವುದಿಲ್ಲ. ಯಾವ ಸಂಸ್ಕೃತಿಗೆ ಹೊಸದನ್ನ ತನ್ನೊಳಗೆ ಅಡಗಿಸಿಕೊಳ್ಳುವ ಶಕ್ತಿ ಇರುವುದಿಲ್ಲವೋ ಅಂತಹ ಸಂಸ್ಕೃತಿಗೆ ಹೊಸ ತಲೆಮಾರಿನೊಂದಿಗೆ ಸಂವಾದ ಸಾಧ್ಯವಾಗುವುದಿಲ್ಲ’ ( “ಕಲೆಕ್ಷನ್ ಆಫ್ ಆರ್‍ಟಿಕಲ್’, ಜೋರೆ ಲೂಯಿಸ್ ಬೋರೆಸ್, ೧೯೯೬,) ಈ ಮಾತಿಗೆ ತಕ್ಕಂತೆ ನಮ್ಮ ಕನ್ನಡ ಹವ್ಯಾಸೀ ರಂಗಭೂಮಿ ಬೆಳೆದಿದೆ, ಉಳಿದಿದೆ ಎಂದೆನಿಸುತ್ತದೆ. ಕನ್ನಡ ಹವ್ಯಾಸೀ ರಂಗಭೂಮಿಯ ಇತಿಹಾಸ ದೊಡ್ಡದಲ್ಲ. ಲೆಕ್ಕ ಹಿಡಿದರೆ ಒಂದೂವರೆ ಶತಮಾನದ ಹಾದಿಯ ಗುರುತು ಸಿಗಬಹುದು. ಈ ಹಾದಿಯಲ್ಲಿ ತಮ್ಮ ಕಾಲ-ದೇಶಕ್ಕೆ ಅನುಗುಣವಾಗಿ ಕೇವಲ ನಾಟಕ ಕೃತಿ ಸೃಷ್ಟಿಯಲ್ಲದೆ ರಂಗಕೃತಿ ಸೃಷ್ಟಿಯಲ್ಲಿಯೂ ತೊಡಗಿದ್ದವರು/ತೊಡಗಿಕೊಂಡಿರುವವರು ಇದ್ದಾರೆ. ಇಂತಹವರಿಂದಾಗಿ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ನಿರಂತರ ಪ್ರಯೋಗಗಳು ಆಗುತ್ತಿವೆ ಮತ್ತು ಅಂತಹ ಅನೇಕ ಪ್ರಯೋಗಗಳು ಪ್ರದರ್ಶನ ಮೌಲ್ಯಕ್ಕೆ ಒಗ್ಗಿಕೊಂಡು ಮೂರು ದಶಕಗಳಿಗೂ ಹೆಚ್ಚು ಕಾಲ ಬದುಕುಳಿದಿವೆ. ಅವುಗಳನ್ನು ನಾನು ಚಿರಂಜೀವಗಳು ಎಂದು ಗುರುತಿಸಲು ಇಷ್ಟಪಡುತ್ತೇನೆ. ಅಂತಹ ಚೀರಂಜಿವಗಳು ಇಷ್ಟೂ ಕಾಲ ಉಳಿದು ಬಂದುದರ ಹಿಂದೆ ಇರಬಹುದಾದ ಕಾರಣಗಳನ್ನು ನೋಡುವ ಪ್ರಯತ್ನ ಇಲ್ಲಿದೆ.
ಚಿರಂಜೀವಗಳು ಮತ್ತು ಕನ್ನಡ ಪ್ರೇಕ್ಷಕ


ಎಪ್ಪತ್ತರ ದಶಕದ ಆರಂಭ ಕಾಲದಲ್ಲಿ ಹುಟ್ಟಿದ ಬಿ.ವಿ.ಕಾರಂತರ “ಜೋಕುಮಾರಸ್ವಾಮಿ’, ಬಿ.ಜಯಶ್ರೀ ಅವರ “ಕರಿಮಾಯಿ’, ಸಿಂಹ ಅವರ “ತುಘಲಕ್’, ಬಿ.ವಿ.ಕಾರಂತರ “ಹಯವದನ’, ಕಂಬಾರರ “ಸಂಗ್ಯಾಬಾಳ್ಯಾ’, ಸಿ.ಜಿ.ಕೃಷ್ಣಸ್ವಾಮಿ ಅವರ “ಒಡಲಾಳ’, ಬಿ.ವಿ.ರಾಜಾರಾಂ ಅವರ “ಮುಖ್ಯಮಂತ್ರಿ’ ಹೀಗೆ ಹಲವು ನಾಟಕಗಳು ಪ್ರಥಮ ಪ್ರದರ್ಶನವಾಗಿ ಮೂರುದಶಕಗಳಾಗಿದ್ದರೂ ಇಂದಿಗೂ ಚಿರಂಜೀವಿಯಾಗಿ ಉಳಿದಿವೆ. ಇದು ನಿಜಕ್ಕೂ ಅಚ್ಚರಿ ಮತ್ತು ಕೌತುಕ ಹುಟ್ಟಿಸುವ ಸಂಗತಿ.

ಭಾರತೀಯ ಹವ್ಯಾಸೀ ರಂಗಭೂಮಿಯ ಹರಹು ದೊಡ್ಡದು. ಅದರಲ್ಲಿ ಕನ್ನಡ ಹವ್ಯಾಸೀ ರಂಗಭೂಮಿಯು ವಿಶಿಷ್ಟವಾದುದು. ಏಕೆಂದರೆ ನೆರೆಯ ಮಹಾರಾಷ್ಟ್ರದಲ್ಲಿನ ಹವ್ಯಾಸೀ ರಂಗಭೂಮಿಯಲ್ಲಿ ಇಂದಿಗೂ ಅರವತ್ತರ ದಶಕದ ಮೌಲ್ಯಗಳನ್ನುಳ್ಳ ಸಾಂಸಾರಿಕ ಸಂಬಂಧಗಳ ನಾಟಕಗಳು (ವಾಸಾಂಸಿ ಜೀರ್ಣಾನಿ, ಮಾನುಷ್, ಚಿರೇಬಂದೀವಾಡೆ) ಜನಪ್ರಿಯವಾಗುತ್ತಿದ್ದರೆ. ಕನ್ನಡದ ಪ್ರಯೋಗ ಮತ್ತು ಪ್ರೇಕ್ಷಕರು ಇಂತಹ ಮೇಲ್‌ಸ್ತರದ ವಿವರಗಳನ್ನು ಬಿಟ್ಟು ಬದುಕಿನ ಒಳವಿವರಗಳನ್ನ ಅತ್ಯಂತ ಸೂಕ್ಷ್ಮವಾಗಿ ನೋಡುವಂತಹ (ಹಯವದನ, ತುಘಲಕ್, ಒಡಲಾಳ, ತಾಯಿ, ಮುಂತಾದ ನಾಟಕಗಳು) ಪ್ರದರ್ಶನಗಳನ್ನು ರೂಪಿಸುತ್ತಿವೆ. ಇದು “ಕನ್ನಡ ವಿಶಿಷ್ಟ’ ಎಂದು ಕರೆಯಬಹುದಾದ ಪ್ರಕ್ರಿಯೆ. ಈ ಮೂಲಕ ಕನ್ನಡದ ಹವ್ಯಾಸೀ ರಂಗಭೂಮಿಯ ಪ್ರೇಕ್ಷಕನನ್ನು ಸಂಕೀರ್ಣ ಎಂತಲೂ ಕರೆಯಬಹುದು. ಈ ವಿಶಿಷ್ಟ ಮತ್ತು ಸಂಕೀರ್ಣ ವ್ಯಕ್ತಿಯ ಮನಃತೃಪ್ತಿ ಸುಲಭವಲ್ಲ. ಸರಳವಾದುದನ್ನು ಆತ ಒಪ್ಪಲಾರ. ಹೀಗಾಗಿಯೇ ಕನ್ನಡ ರಂಗಭೂಮಿಯಲ್ಲಿರುವ ತಂತ್ರಜ್ಞರು ಮತ್ತು ಕಲಾವಿದರಲ್ಲೂ ವೈವಿಧ್ಯ ಹೆಚ್ಚು.
ತುಘಲಕ್
ಕಾರ್ನಾಡರು ಬರೆದ ಶ್ರೇಷ್ಟ ಕೃತಿಗಳಲ್ಲಿ “ತುಘಲಕ್’ ಸಹ ಒಂದು. ಈ ನಾಟಕವು ಭಾರತದ ಇತರ ಭಾಷೆಗಳಿಗೂ ಅನುವಾದವಾಯಿತು. ಅಮರೀಶ್‌ಪುರಿ, ಕಬೀರ್ ಬೇಡಿಯಂತಹ ಕಲಾವಿದರು ಇದೇ ನಾಟಕದ ಹಿಂದಿ ಅವತರಣಿಕೆಯಿಂದ ಹೆಸರು ಮಾಡಿದ್ದನ್ನು ನೋಡಿದ್ದೇವೆ. ಕನ್ನಡ ರಂಗಭೂಮಿಯಲ್ಲೂ ಅನೇಕರು “ತುಘಲಕ್’ ನಾಟಕವನ್ನು ಪ್ರದರ್ಶಿಸಿದ್ದಾರೆ. ಆದರೆ ಸುಮಾರು ೧೯೬೯ರಲ್ಲಿ ಪ್ರಥಮ ಪ್ರದರ್ಶನ ಕಂಡ ಸಿ.ಆರ್.ಸಿಂಹ ಪ್ರಧಾನ ಪಾತ್ರದಲ್ಲಿದ್ದ “ತುಘಲಕ್’ (ನಿ:ಬಿ.ಸಿ.) ನಂತರದ ದಿನಗಳಲ್ಲಿ ಸಣ್ಣಪುಟ್ಟ ಮಾರ್ಪಾಟುಗಳ ಜೊತೆಗೆ, ಸ್ವರೂಪ ಬದಲಿಸಿಕೊಳ್ಳುತ್ತಾ ಇಂದಿನವರೆಗೂ ಬದುಕಿ ಬಂದಿದೆ. ಕೆಲವೇ ತಿಂಗಳುಗಳ ಹಿಂದೆ ಈ ನಾಟಕದ ಪುನರ್ ಪ್ರದರ್ಶನ ಆದಾಗ ಸಭಾಂಗಣದ ಮುಂದೆ ಕಿಕ್ಕಿರಿದಿದ್ದ ಪ್ರೇಕ್ಷಕರು, ಇಂದಿಗೂ ಅದೇ ಪ್ರೀತಿಯನ್ನ ಈ ನಾಟಕದ ಬಗ್ಗೆ ತೋರುತ್ತಾರೆ. ದಶಕಗಳಾದರೂ ಉಳಿದಿರುವ ಈ ರಂಗಪ್ರದರ್ಶನ ಪ್ರೀತಿಗೆ ಕಾರಣವಾಗಿರುವುದು ಕೇವಲ ನಾಟಕ ಕೃತಿಯಲ್ಲ. ಅದು ರಂಗಕೃತಿ.
ಕಾರ್ನಾಡರ ನಾಟಕಗಳು ಪಾಶ್ಚಿಮಾತ್ಯ ರಂಗಸಂವಿಧಾನದ ಜೊತೆಗೆ ರಚನೆಯಾದಂತಹವು. ಅಲ್ಲಿ ಪ್ರತಿ ದೃಶ್ಯವೂ ಮ್ಯಾಥಮ್ಯಾಟಿಕಲ್ ಆದಂತಹ ಎಚ್ಚರಿಕೆಯೊಡನೆ ಹೆಣೆಯಲ್ಪಟ್ಟಿರುತ್ತದೆ. ಇದನ್ನು ಆಂಗ್ಲರು ಪ್ಯಾರಡೈಮ್ ಕನ್‌ಸ್ಟ್ರಕ್ಷನ್ ಎಂದು ಗುರುತಿಸುತ್ತಾರೆ. ಇಲ್ಲಿ ಪ್ರತಿ ಮಾತು ಮುಂದೆ ಆಗುವ ಇನ್ನಾವುದಕ್ಕೋ ಮೆಟ್ಟಿಲಾಗುತ್ತಾ ಇರುತ್ತದೆ. “ತುಘಲಕ್’ನಲ್ಲಿ ಇಂತಹ ಅನೇಕ ವಿವರಗಳನ್ನು ನೋಡಬಹುದು. ಆದರೆ ರಂಗಕೃತಿಯಲ್ಲಿ ಈ ದೃಶ್ಯಸಂವಿಧಾನ ಎಲ್ಲಾ ಕಾಲಕ್ಕೂ ಉಳಿಯುವುದಿಲ್ಲ. ಅದಕ್ಕೆ ರಂಗಕೃತಿಗೆ ಇರುವ “ಜಂಗಮತೆ’ಯೇ ಕಾರಣ. ರಂಗಕೃತಿ ಪ್ರತಿದಿನ ಹೊಸಜೀವ ಪಡೆಯುವಂತಹದು. ಅದಕ್ಕೆ ಲಿಪಿಯಂತೆ ನಿರ್ದಿಷ್ಟವಾಗುವ ಮತ್ತು ನಿಖರವಾಗುವ ಗುಣವಿಲ್ಲ. ಅದಕ್ಕಾಗಿಯೇ ಎರಿಕ್‌ಬೆಂಟ್ಲಿ “ನಾಟಕಕೃತಿಯು ಪರಿಪೂರ್ಣವಾಗುವುದು ಪ್ರದರ್ಶನದಿಂದ ಮಾತ್ರ’ ಎನ್ನುತ್ತಾನೆ. (ಥಿಯರಿ ಆಫ್ ಮಾಡರ್ನ್ ಥಿಯೇಟರ್, ಎರಿಕ್‌ಬೆಂಟ್ಲಿ, ೧೯೮೦ರ ಆವೃತ್ತಿ) ಆ ದೃಷ್ಟಿಯಿಂದ ಸಿ.ಆರ್.ಸಿಂಹ ಅವರ ರಂಗಪ್ರದರ್ಶನ ಅದಾಗಲೇ ನಾನು ಹೇಳಿದ “ಜಂಗಮತೆ’ಯ ಸಾಧನೆಯಲ್ಲಿ ಸಾಕಷ್ಟು ಯಶಸ್ವಿಯಾಗಿದೆ ಎನ್ನಬಹುದು. ಹೀಗಾಗಿಯೇ ಹಾಡು-ಕುಣಿತಗಳಿಲ್ಲದೆ ಕೇವಲ ಮಾತಿನಿಂದ ಕಟ್ಟಿದ ನಾಟಕವೊಂದರ ಪ್ರತಿ ಪ್ರದರ್ಶನದಲ್ಲಿ ಸಿಂಹ ಅವರು ಪ್ರೇಕ್ಷಕರ ಜೊತೆಗೆ ಸಂವಾದ ಸಾಧಿಸುತ್ತಾ ಇದ್ದಾರೆ. ಪ್ರೇಕ್ಷಕರ “ಮಾನಸಿಕ ದೂರ’ಕ್ಕೆ ಸೇತುವೆ ನಿರ್ಮಿಸಿದ್ದಾರೆ. ಈ ಸಂವಾದದ ಮೂಲಕ “ತುಘಲಕ್’ ಕೇವಲ ಐತಿಹಾಸಿಕ ನಾಟಕವಾಗಿ ಉಳಿಯದೆ, ಆಧುನಿಕ ಮನಸ್ಸುಗಳ ಒಳಗಿನ ತಲ್ಲಣಗಳನ್ನು ಐತಿಹಾಸಿಕ ಪೋಷಾಕಿನ ಮೂಲಕ ಹೇಳುವುದು ಸಾಧ್ಯವಾಗುತ್ತಿದೆ. ಪ್ರತಿಯೊಬ್ಬನ ಒಳಗಿರುವ “ತುಘಲಕ್’ತನವನ್ನು ಬಡಿದೆಬ್ಬಿಸುವಲ್ಲಿ ಸಿಂಹ ಅವರ ಮಾತುಗಾರಿಕೆ ಮತ್ತು ದೇಹದ ಬಳಕೆ ಯಶಸ್ವಿಯಾಗಿದೆ ಎನ್ನಬಹುದು. ಇದರಿಂದಾಗಿಯೇ ಇಂದಿಗೂ, ಅಂದರೆ ಪ್ರಥಮ ಪ್ರದರ್ಶನವಾಗಿ ಸರಿಸುಮಾರು ಮೂರು ದಶಕಗಳನ್ನು ಮೀರಿದಷ್ಟು ಸಮಯವಾಗಿದ್ದರೂ ಈ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ಉಳಿಸಿಕೊಂಡಿದೆ.
ಸತ್ತವರನೆರಳು
ಜಿ.ಬಿ.ಜೋಷಿಯವರ ನಾಟಕ “ಸತ್ತವರನೆರಳು’ ಬಿ.ವಿ.ಕಾರಂತರ ನಿರ್ದೇಶನದಲ್ಲಿ ಸಿದ್ಧವಾಗಿದ್ದು ಎಪ್ಪತ್ತರ ದಶಕದ ಆರಂಭದ ದಿನಗಳಲ್ಲಿ(೧೯೭೪). ಆ ನಾಟಕ ಅಂದಿನಿಂದ ಇಂದಿನವರೆಗೆ ಉಳಿದುಬಂದಿದೆ. ಪ್ರಥಮ ಪ್ರದರ್ಶನದಲ್ಲಿ ಅಭಿನಯಿಸುತ್ತಿದ್ದ ಅನೇಕ ನಟರು ಈಗ ಇಲ್ಲ. ಕಲಾವಿದರು ಬದಲಾಗಿದ್ದಾರೆ. ಪ್ರಾಯರ್ಶ ನಾಟಕದ ಲಯ-ಗತಿಗಳು ಸಹ ಕಾಲಾಂತರದಲ್ಲಿ ಪಲ್ಲಟವಾಗಿದೆ. ಆದರೂ ಇಂದಿಗೂ ಈ ನಾಟಕ ಪ್ರದರ್ಶನ ಆಗುತ್ತಲೇ ಇದೆ. ಈ ಯಶಸ್ಸಿಗೆ ಕಾರಣವು ನಾಟಕ ವಿಶಿಷ್ಟ ಶಕ್ತಿಯಲ್ಲ, ನಟ ವಿಶಿಷ್ಟ ಅನುಭಾವವೂಅಲ್ಲ. ಅದು ನಿರ್ದೇಶಕ ವಿಶಿಷ್ಟ “ಜಂಗಮತೆ’.
ಜೋಷಿಯವರ ನಾಟಕದಲ್ಲಿ ಕರ್ಮಠ ಬ್ರಾಹ್ಮಣ ಮಠಗಳ ಒಳಗಿನ ರಾಜಕೀಯವನ್ನು ಬಿಚ್ಚಿಡುವ ಪ್ರಯತ್ನ ಇದೆ. ಈ ನಾಟಕಕ್ಕೆ ಪಾಶ್ಚಾತ್ಯ ನಾಟಕಗಳ ಪ್ಯಾರಾಡೈಮ್ ಬಂಧ ಇಲ್ಲ. ನಾಟಕಕೃತಿಯಾಗಿ ಇದು ತೀರಾ ಸಡಿಲವೆನಿಸುವ ಬಂಧ ಇರುವಂತಹದು. ಆದರೆ ಈ ನಾಟಕ ರಂಗಪ್ರದರ್ಶನಕ್ಕೆ ಸಿದ್ಧಗೊಳಿಸುವಾಗ ಬಿ.ವಿ.ಕಾರಂತರು ನಾಟಕವನ್ನು ಪುಷ್ಟಿಗೊಳಿಸಲು ಸಂಗೀತದ ಆಹಾರ ಒದಗಿಸಿದ್ದಾರೆ. ಈ ನಾಟಕದಲ್ಲಿ ನಮ್ಮ ದಾಸ ಶ್ರೇಷ್ಟರುಗಳೆಲ್ಲರ ಹಾಡುಗಳು ಬಳಕೆಯಾಗಿವೆ. ಈ ಹಾಡುಗಳೇ ಈ ನಾಟಕಕ್ಕೇ ಪ್ರೇಕ್ಷಕರನ್ನು ಉಳಿಸಿದೆ ಎಂದರೆ ಅದು ತಪ್ಪಾಗಲಾರದು. ಅಂತೆಯೇ “ಸತ್ತವರನೆರಳು’ ನಾಟಕವನ್ನು ನಾವು ಹಾಡುಗಳ ನಾಟಕ ಎಂತಲೂ ಕರೆಯಬಹುದು.
“ರಂಗಪ್ರದರ್ಶನವೆಂದರೆ ಪ್ರೇಕ್ಷಕರನ್ನು ಬೆರಗಿನಲೋಕದೊಳಗೆ ಇಳಿಸಿ, ಉಳಿಸಿ ಸಾಗುವ ಮಾಯೆ’ ಎನ್ನುತ್ತಾರೆ ಬಿ.ವಿ.ಕಾರಂತರು ಹಂಪೆ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಚರ್ಚೆಯೊಂದರಲ್ಲಿ. ಆ ಮಾತನ್ನು ಮುಂದುವರೆಸುತ್ತಾ ಅವರು “ರಂಗನಿರ್ದೆಶಕ ಕೇವಲ ದೃಶ್ಯ ಸಂಯೋಜನೆಯನ್ನ ಆಲೋಚಿಸಿದರೆ ಸಾಲದು ಶ್ರವ್ಯ ಸಂಯೋಜನೆಯೂ ನಾಟಕದ ಮುಖ್ಯ ಅಂಗ’ ಎನ್ನುತ್ತಾರೆ. ಈ ಮಾತಿಗೆ ಸೋದಾಹರಣ ಎಂಬಂತೆ ನಮ್ಮೆದುರಿಗೆ “ಸತ್ತವರನೆರಳು’ ನಾಟಕವಿದೆ. ಈ ನಾಟಕದ ಉದ್ದಕ್ಕೂ ದೃಶ್ಯ ಸಂವಿಧಾನದಲ್ಲಿರುವ ಸಡಿಲುಗಳಿಗೆ ಕೀಲಗಳನ್ನು ಹಾಕುವುದು ಸಂಗೀತ. ದಾಸಸಾಹಿತ್ಯಕ್ಕೆ ಕನ್ನಡ ರಂಗ ಸಂಗೀತದ ಜೋಡಣೆಯು ಅದೆಷ್ಟು ಪ್ರಭಾವೀ ಎಂದರೆ ಪ್ರೇಕ್ಷಕ ನಾಟಕದ ಹೂರಣಕ್ಕಿಂತ ಮೇಲೋಗರವಾದ ಸಂಗೀತವನ್ನೇ ಅನುಭವಿಸುತ್ತಾ ಇಷ್ಟೂ ಕಾಲ ಈ ನಾಟಕವನ್ನು ನೋಡುತ್ತಾ ಬಂದಿದ್ದಾನೆ. ಆದ್ದರಿಂದಲೇ ಪಾತ್ರಧಾರಿಗಳು ಬದಲಾದರೂ, ರಂಗವಿನ್ಯಾಸ ಅಥವಾ ನಟನೆಯ ಶ್ರೇಷ್ಟತೆಯ ಹೊರತಾಗಿಯೂ ಈ ನಾಟಕ ಇಂದಿಗೂ ತನ್ನ ಪ್ರೇಕ್ಷಕರನ್ನು ಉಳಿಸಿಕೊಂಡಿದೆ. “ಸತ್ತವರನೆರಳು’ ಕನ್ನಡ ಹವ್ಯಾಸೀ ರಂಗಭೂಮಿಯ ಚಿರಯೌವನಿಗರಲ್ಲಿ ಒಂದು.
ಕರಿಮಾಯಿ ಮತ್ತು ಲಕ್ಷಾಪತಿ ರಾಜನ ಕಥೆ ಮತ್ತು ಜೋಕುಮಾರ ಸ್ವಾಮಿ ಮತ್ತು ಸಂಗ್ಯಾ-ಬಾಳ್ಯ
“ಕರಿಮಾಯಿ’ ಚಂದ್ರಶೇಖರ ಕಂಬಾರರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ನಾಟಕ. “ಲಕ್ಷಾಪತಿ’ ಮುದೇನೂರು ಸಂಗಣ್ಣ ಅವರು ಸಂಗ್ರಹಿಸಿದ ಜಾನಪದ ಕಥನ ಕಲೆಯೊಂದರ ಸ್ಪೂರ್ತಿಯಿಂದ ಎಂ.ಎಸ್.ನಾಗರಾಜ್ ರಂಗರೂಪಕ್ಕೆ ತಂದಂತಹ ಕೃತಿ, “ಜೋಕುಮಾರಸ್ವಾಮಿ’ ಚಂದ್ರಶೇಖರ ಕಂಬಾರರೇ ಬರೆದ ಜಾನಪದೀಯ ಅಂಶಗಳನ್ನುಳ್ಳ ನಾಟಕ. ಇವುಗಳಲ್ಲಿ ಮೊದಲೆರಡು ನಾಟಕಗಳು ಬಿ,ಜಯಶ್ರೀ ಅವರ ನಿರ್ದೇಶನದಲ್ಲಿ ಕನ್ನಡ ರಂಗಭೂಮಿಗೆ ಬಂದರೆ, ಕೊನೆಯದು ಬಿ.ವಿ,ಕಾರಂತರ ನಿರ್ದೇಶನದಲ್ಲಿ ಬಂದಿತು. ಈ ಮೂರು ನಾಟಕಗಳು ಎಪ್ಪತ್ತರ ದಶಕದ ಎರಡನೆಯ ಅರ್ಧದಲ್ಲಿ ಸಿದ್ಧಗೊಂಡವು. ಇವುಗಳಲ್ಲಿ ತೀರಾ ಎಳೆಯ ಎಂದರೆ “ಲಕ್ಷಾಪತಿ ರಾಜನ ಕಥೆ’. ಆ ನಾಟಕ ಎಂಬತ್ತರ ದಶಕದ ಆದಿ ಭಾಗದಲ್ಲಿ ಸಿದ್ಧವಾಯಿತು. “ಸಂಗ್ಯಾ-ಬಾಳ್ಯ’ ಪತ್ತಾರ ಮಾಸ್ತರ ಬರೆದ ದೊಡ್ಡಾಟದ ಕೃತಿಯಾಗಿದ್ದದ್ದು, ೭೦ರ ದಶಕದ ಆದಿಭಾಗದಲ್ಲಿ ಹವ್ಯಾಸೀ ರಂಗಪ್ರಯೋಗವಾಗಿ ಬಂದಿತು.
ಈ ನಾಲ್ಕೂ ನಾಟಕಗಳಲ್ಲಿ ಕನ್ನಡ ಜನಪದದ ದೃಶ್ಯಸಂವಿಧಾನವಿದೆ. ಇದು ಮೊದಲ ಪ್ರದರ್ಶನದಲ್ಲಿಯೇ ಪ್ರೇಕ್ಷಕನನ್ನು ತನ್ನೊಳಗೆ ತೊಡಗಿಸಿಕೊಳ್ಳುವ ಶಕ್ತಿಯನ್ನುಳ್ಳದ್ದು. ಇದಕ್ಕೆ ಜಾಗತಿಕ ನಗರವಾಸಿಗಳೆಲ್ಲರೂ ಮೂಲತಃ ಗ್ರಾಮೀಣ ಸ್ಥಳಗಳಿಂದ ವಲಸೆ ಬಂದವರು ಎಂಬುದು ಒಂದು ಕಾರಣ. ಹೀಗೆ ಬಂದವರಿಗೆ ತಾವು ಬಿಟ್ಟು ಬಂದುದರ ನೆನಪು ಸದಾ ಕಾಡುತ್ತಾ ಇರುತ್ತದೆ. ಈ ನೆನಪನ್ನು ಕಾಡುವ ಹಾಗೆ ಮಾಡುವುದು ಜಾನಪದದ ಪುನಾರಾವೃತ ಶಕ್ತಿ. ಈ ಪುನಾರಾವೃತ ಶಕ್ತಿಯು ಇಂತಹ ನಾಟಕಗಳ ಹಾಡುಗಳಲ್ಲಿ ಇರುತ್ತದೆ. ಅವುಗಳಲ್ಲಿ ಬರುವ ಸಾಲುಗಳ ಪುನರಾವರ್ತನೆಯು ಗ್ರಾಮೀಣ ಜಗತ್ತಿನಿಂದ ನಗರಿಗರಾದವರಿಗೆ ನೆಮ್ಮದಿಯನ್ನ ಒದಗಿಸುತ್ತದೆ. ಇದಲ್ಲದೆ ಆಧುನಿಕ ತಲೆಮಾರಿನ ಹುಡುಗರಿಗೆ, ಅಂದರೆ ಗ್ರಾಮೀಣ ಬದುಕಿನ ನೆನಪು ಇಲ್ಲದ ಜನರಿಗೆ ಈ ಹಾಡುಗಳಲ್ಲಿರುವ ಲಯವು ಉತ್ಸಾಹವನ್ನು ಒದಗಿಸುತ್ತದೆ. ಆ ಮಾತಿಗೆ ಉದಾಹರಣೆಯಾಗಿ ಈ ಮೂರೂ ನಾಟಕಗಳ ಹಾಡುಗಳ ಜನಪ್ರಿಯತೆಯನ್ನ ತಾವು ಗಮನಿಸಬಹುದು. “ಕರಿಮಾಯಿ’ ನಾಟಕದ “ತಾಯೇ! ಸಾವಿರದ ಶರಣವ್ವ…’ ಎಂಬ ಹಾಡಂತೂ ಕನ್ನಡ ಹವ್ಯಾಸೀ ರಂಗಭೂಮಿಯ “ನಾಡಗೀತೆ’ಯಂತಾಗಿ ಬಿಟ್ಟಿದೆ. ಇದನ್ನೇ ರೋಲ್ಯಾಂಡ್ ಬಾರ್ತ್ “ಅರ್ಬನ್ ಮೆಮೊರಿ’ (ನಗರೀನೆನಪು) ಎಂದೆನ್ನುತ್ತಾನೆ. ಈ ನಗರೀ ನೆನಪು ನಮ್ಮ ಬೇರುಗಳಿಗೆ ಸಂಬಂಧಿಸಿದ್ದು. ಅದು ಕಾಲಾಂತರದಿಂದ ನಮ್ಮೊಳಗೆ ಇರುವಂತಹದು. ಅಜ್ಜಿ ಹೇಳಿದ ಕಥೆಗಳಿಂದ ಮೌಖಿಕವಾಗಿ ಉಳಿದಿರುವ ಈ ಜಗತ್ತು, ಹಿರಿಯರಾಗುವ ಹಾದಿಯಲ್ಲಿ ನಮ್ಮ ಕಣೆದುರು ತೆರೆದುಕೊಂಡಾಗೆಲ್ಲ ಮನಸ್ಸು ಪ್ರಫುಲ್ಲವಾಗುತ್ತದೆ. ಅಂತೆಯೇ ಇಲ್ಲಿ ನಾಟಕದ ದೃಶ್ಯಬಂಧ ಮುಖ್ಯವಾಗುವುದೇ ಇಲ್ಲ. ಇಲ್ಲಿ ಲಯವೇ ಪ್ರಧಾನ. ಅಂತೆಯೇ ಮೇಲೆ ನಾನು ತಿಳಿಸಿದ ಎಲ್ಲಾ ನಾಟಕಗಳು ತನ್ನೊಳಗಿನ ಲಯದ ಗುಣದಿಂದಾಗಿಯೇ ಉಳಿದು ಬಂದಿದೆ. ಇಲ್ಲಿ ನಟ-ನಟಿ ಮುಖ್ಯವಾಗುವುದಿಲ್ಲ, ನಾಟಕದ ಕಥಾಹಂದರ ಮುಖ್ಯವಾಗುವುದಿಲ್ಲ. ನಿರ್ದೇಶಕ ಸಹ ಮುಖ್ಯವಾಗುವುದಿಲ್ಲ. ಅದು ಉತ್ಸವ. ನಮ್ಮೂರಿನ ಸಂತೆಗೆ ನಿರ್ದೇಶಕ ಅಥವಾ ಕಥೆಯ ಗೊಡವೆ ಇದೆಯೇ ಹೇಳಿ? ಹಾಗೆಯೇ ಇವು. ಇಲ್ಲಿ ಒಳಿತು ಎಂಬುದು ಕೆಡುಕಿನ ಮೇಲೆ ಸಾಧಿಸುವ ಗೆಲುವು ಮತ್ತು ನಾಟಕ ಪ್ರದರ್ಶನದಲ್ಲಿರುವ ಸಂಭ್ರಮ ಮಾತ್ರ ಮುಖ್ಯ. ಒಂದರ್ಥಕ್ಕೆ ನಮ್ಮೊಳಗೆ ಇರುವ ಜಮೀನ್ದಾರಿ ಪದ್ಧತಿಯ ವಿರುದ್ಧದ ನಿಲುವು ನಮ್ಮನ್ನು “ಜೋಕುಮಾರಸ್ವಾಮಿ’ ಮತ್ತು “ಕರಿಮಾಯಿ’ ನೋಡಲು ಪ್ರೇರೇಪಿಸಿದರೆ, ನಮ್ಮೊಳಗಿನ ಚಂದಮಾಮ ಕಥೆಗಳು “ಲಕ್ಷಾಪತಿ’ಯನ್ನ ನೋಡಲು ಸಹಕರಿಸುತ್ತವೆ. ಆದ್ದರಿಂದಲೇ ಈ ನಾಟಕಗಳು ತಂತ್ರಗಾರಿಕೆಯನ್ನ ಬಿಟ್ಟುಕೊಟ್ಟರೂ ಸಹ ಬದುಕುಳಿಯುತ್ತವೆ. ನಮ್ಮೊಳಗಿನ ನೆನಪು ಕಥನದ ಸುಖವನ್ನ ಬಿಟ್ಟು ಉತ್ಸವದ ಸುಖವನ್ನ ಬೇಡುತ್ತದೆ. ಹೀಗಾಗಿಯೇ ಈ “ನಗರೀನೆನಪು’ ಕನ್ನಡ ರಂಗಭೂಮಿಯಲ್ಲಿ ಅನೇಕ ಉತ್ಸವದ ನಾಟಕಗಳಿಗೆ ಕಾರಣವಾಗಿದೆ. ಆ ಎಲ್ಲಾ ನಾಟಕಗಳು ಇಂದಿಗೂ ಚಿರಯೌವನಿಗರ ಸಾಲಿನಲ್ಲಿವೆ.
ಇಂತಹ ನಾಟಕಗಳಲ್ಲಿ “ಸಂಗ್ಯಾಬಾಳ್ಯಾ’ ಸಹ ಒಂದು. ಈ ನಾಟಕದ ಪ್ರಥಮ ಪ್ರದರ್ಶನವನ್ನು ಚಂದ್ರಶೇಖರ ಕಂಬಾರರೇ ನಿರ್ದೇಶಿಸಿದ್ದರು. ನಂತರ ಅದೇ ನಾಟಕಕ್ಕೆ ಅನೇಕ ನಿರ್ದೇಶಕರು, ನಟರು ಬಂದು ಹೋಗಿದ್ದಾರೆ. ಆದರೆ ನಾಟಕದ ಮಟ್ಟುಗಳು, ಹಾಡುಗಳ ಲಯ ಬದಲಾಗಿಲ್ಲ. ಅದು ಹಾಗೆಯೇ ಮುಂದುವರೆದಿದೆ. ಅದನ್ನು ಬದಲಿಸಿ ಆಧುನಿಕ ಮಟ್ಟುಗಳನ್ನ ಬಳಸುವ ಇಕ್ಬಾಲ್ ಅಹ್ಮದ್‌ರ “ಆಧುನಿಕ ಸಂಗ್ಯಾ-ಬಾಳ್ಯ’ ಪ್ರಯೋಗವಾಗಿ ಮೆಚ್ಚುಗೆಗಳಿಸಿದರೂ ಬಹುಕಾಲ ನಿಲ್ಲುವ ಶಕ್ತಿಯನ್ನ “ನಗರೀನೆನಪಿನ’ ಆಕೃತಿಗಳನ್ನ ಬಿಟ್ಟುಕೊಟ್ಟದ್ದರ ಮೂಲಕ ಕಳೆದುಕೊಂಡಿತ್ತು ಎಂಬುದನ್ನು ಸಹ ನಾವಿಲ್ಲಿ ನೆನೆಯಬಹುದು. (ಇದೇ ಸಂದರ್ಭದಲ್ಲಿ ಹೊಸದೊಂದು ಸಂಗ್ಯಾ-ಬಾಳ್ಯ ಕೃತಿಯನ್ನು ಎಂ.ಎಂ.ಕಲಬುರ್ಗಿ ಅವರು ರಚಿಸಿದ್ದಾರೆ. ಆ ಕೃತಿಯ ರಂಗಪ್ರದರ್ಶನವನ್ನು ನಾನು ನೋಡಿಲ್ಲವಾದ ಕಾರಣ ಆ ಕುರಿತು ಇಲ್ಲಿ ಪ್ರಸ್ತಾಪ ಮಾಡಿಲ್ಲ.)
ಒಟ್ಟಾರೆಯಾಗಿ ಈ ಜಾನಪದೀಯ ಅಂಶಗಳನ್ನ ತನ್ನ ಮೂಲಸ್ವರೂಪದ ಗುರುತುಗಳನ್ನ ಉಳಿಸಿಕೊಂಡು ಬಂದಿರುವ ನಾಟಕಗಳಲ್ಲೆವೂ ಇಂದಿಗೂ ಬದುಕಿ ಉಳಿದಿವೆ ಎಂಬುದು “ನಗರೀನೆನಪು’ ಒದಗಿಸುವ ಸತ್ಯ.
ಒಡಲಾಳ ಮತ್ತು ಮುಖ್ಯಮಂತ್ರಿ
ಮೇಲೆ ನಾನು ಚರ್ಚಿಸಿದ ಎಲ್ಲಾ ನಾಟಕಗಳೂ ಒಂದು ಬಗೆಯದಾದರೆ ಸಮಕಾಲೀನ ವಾಸ್ತವದ ಜೊತೆಗೆ ಕಟ್ಟಿದ “ಒಡಲಾಳ’ ಮತ್ತು “ಮುಖ್ಯಮಂತ್ರಿ’ ನಾಟಕಗಳು ಮೂರುದಶಕಗಳಿಗೂ ಹೆಚ್ಚುಕಾಲ ಬದುಕಿರುವುದು ಈಗಾಗಲೇ ಚರ್ಚಿಸಿದ ಕಾರಣಗಳಿಗಿಂತ ವಿಭಿನ್ನ ಕಾರಣಗಳಿಗೆ.
ದ್ಯಾವನೂರು ಮಹಾದೇವ ಅವರ ದಲಿತ ಸಂವೇದನೆಯ ಕಥೆಗಳಲ್ಲಿ ಬಹು ಮುಖ್ಯವಾದದ್ದು “ಒಡಲಾಳ’. ಅಲ್ಲಿರುವ ದಲಿತ ಲೋಕದ ವಿವರಗಳನ್ನು ಎಂತಹವರನ್ನು ತಲ್ಲಣಕ್ಕೆ ಒಡ್ಡುತ್ತವೆ ಮತ್ತು ಕಾಡುತ್ತವೆ. ಇದೇ ಕಥೆಯನ್ನ ಆಧರಿಸಿ ಸಿ.ಜಿ.ಕೆ. ರಂಗರೂಪ/ ನಿರ್ದೇಶನ ಮಾಡಿದ ನಾಟಕ “ಒಡಲಾಳ’ದ ಪ್ರಥಮ ಪ್ರದರ್ಶನ ಆದದ್ದು ಎಂಬತ್ತರ ದಶಕದ ಆದಿಭಾಗದಲ್ಲಿ. ನಾಟಕವು ಮೂಲಕಥೆಯಲ್ಲಿರುವ ದಲಿತ ಜಗತ್ತನ್ನು ಸಾಕವ್ವ ಎಂಬ ಪಾತ್ರದ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡುತ್ತದೆ. ಆ ಪಾತ್ರದಲ್ಲಿ ಅಭಿನಯಿಸಿದ ಉಮಾಶ್ರೀ ಅವರೇ ಹೇಳುವಂತೆ, “ಅದು ಜೀವಮಾನ ಶ್ರೇಷ್ಟ ಪಾತ್ರ ಮತ್ತು ಯಾವುದೇ ಕಲಾವಿದೆಗೆ ಎದುರಾಗುವ ದೊಡ್ಡ ಸವಾಲು’. ಅಂತೆಯೇ ಆಕೆ ಮುವ್ವತ್ತರ ಹರೆಯದಲ್ಲಿ ಎಂಬತ್ತರ ಹರೆಯದ ದಲಿತ ಹೆಣ್ಣುಮಗಳೊಬ್ಬಳ ಪಾತ್ರವನ್ನ ಅಭಿನಯಿಸಿದ್ದರು. ಭಾರತದ ಮಟ್ಟಿಗೆ ಈ ದಲಿತ ಸಂವೇದನೆಯಿಂದ ಹುಟ್ಟಿದ ಕಥೆಗಳು ನಮ್ಮ ರಂಗ ಪ್ರೇಕ್ಷಕರಲ್ಲಿ ಮೂಡಿಸುವ ತಲ್ಲಣಗಳು ವಿಭಿನ್ನವಾದುದು. ಇದು ಪ್ರತಿಯೊಬ್ಬನ ಒಳಗಿರುವ “ನೋವಿನ ನೆನಪು’. ನಾವು ಕಂಡಿದ್ದ ಒಂದು ಜಗತ್ತಿನ ಒಳಗಿನ ತಲ್ಲಣಗಳು ಇಲ್ಲಿ ದಾಖಲಾಗುತ್ತವೆ. ಅಲ್ಲಿನ ಭಾಷೆಗೆ ಇರುವ ರೂಕ್ಷತೆಯೆ ನಮ್ಮ ಚರ್ಮದೊಳಗಿಳಿದು ನಾವು ನಗರವಾಸಿಗಳಾಗಿದ್ದೇಕೆ ಎಂಬುದನ್ನು ನೆನಪಿಸುತ್ತದೆ. ಅಂಬೇಡ್ಕರ್ ಅವರು ದಲಿತರಿಗೆ ನಗರಿಗರಾಗಿ ಎಂದು ಕರೆ ನೀಡಿದ್ದರ ಹಿಂದೆ ಇದ್ದದ್ದು ವರ್ಗ/ವರ್ಣ ದ್ವೇಷವನ್ನು ತೊಡೆಯಲು ವಲಸೆಯೇ ಪ್ರಧಾನ ಅಸ್ತ್ರ ಎಂಬುದಾಗಿತ್ತು. ಹೀಗಾಗಿಯೇ ಮಹಾತ್ಮ ಗಾಂಧೀಜಿ ಅವರ ಗ್ರಾಮಸ್ವರಾಜ್ಯಕ್ಕೆ ವಿರುದ್ಧ ದಿಕ್ಕಲ್ಲಿ ದಲಿತ ಚಳುವಳಿ ಬೆಳೆದು ಬಂದದ್ದು. ಅದೆಲ್ಲಾ ವಿವರಗಳನ್ನೂ ಮೈಗೂಡಿಸಿಕೊಂಡ ನಾಟಕ ಸಿ.ಜಿ.ಕೆ. ಅವರ “ಒಡಲಾಳ’. ನಾಟಕದಲ್ಲಿ ಭಾರತದ ಬಾವುಟವನ್ನೇ ಹೊದ್ದು ಮಲಗಿದ ಕತ್ತಲ ಎಂಬ ಪಾತ್ರವೇ ಇದೆ. ಈ ಪಾತ್ರ ನಮ್ಮೊಳಗೆ ಮೂಡಿಸುವ ತಲ್ಲಣಗಳು ಕಥನಕ್ಕೆ ಮೀರಿದ್ದು. ಅದನ್ನೇ ನಾನು ಈ ಹಿಂದೆ “ನೋವಿನ ನೆನಪು’ ಎಂದದ್ದು. ಇದಲ್ಲದೆ ಸಾಕವ್ವನ ಕಿರುಚಾಟಗಳು ಮತ್ತು ಅಲ್ಲಿರುವ ಎಲ್ಲಾ ಗಂಡು ಪಾತ್ರಗಳಿಗಿಂತ ಗಟ್ಟಿ ನಿಲುವನ್ನುಳ್ಳ ಅವಳ ಮನಸ್ಸು – ನಮ್ಮನ್ನು ತಾಗುತ್ತದೆ. ಹೀಗಾಗಿಯೇ “ಒಡಲಾಳ’ ನಮ್ಮ ರಂಗಭೂಮಿಯ ಚಿರಯೌವನಿಗ ಪ್ರದರ್ಶನಗಳಲ್ಲಿ ಒಂದಾಗಿದೆ. ಹಾಗೇ ನೋಡಿದರೆ ಆರಂಭದ ದಿನಗಳ ಪ್ರದರ್ಶನಕ್ಕಿಂತ ಈಗಿನ ಪ್ರದರ್ಶನಗಳು ಪೇಲವವಾಗಿದೆ. ಆದರೂ ಈ ನಾಟಕ ತಂತ್ರ, ರಂಗವಿಶೇಷತೆ ಇವೆಲ್ಲವುಗಳನ್ನು ದಾಟಿ ಅದರೊಳಗೆ ಸುಪ್ತವಾಗಿರುವ ದಲಿತರ ನೋವಿನ ಕೂಗಿನಿಂದಾಗಿಯೇ ಮತ್ತು ಆ ಕುರಿತು ಪ್ರೇಕ್ಷಕರಲ್ಲಿರುವ ನೆನಪಿನಿಂದಾಗಿ ಮತ್ತೆಮತ್ತೆ ಸೆಳೆಯುತ್ತದೆ.
“ಮುಖ್ಯಮಂತ್ರಿ’ ಸಮಕಾಲೀನ ರಾಜಕೀಯ ವಿವರಗಳನ್ನುಳ್ಳ ನಾಟಕ. ಈ ನಾಟಕದ ಮೂಲ ಹಿಂದಿ. ಕನ್ನಡಿಸಿದವರು ಲೋಹಿತಾಶ್ವ. ನಿರ್ದೇಶನ ಬಿ.ವಿ.ರಾಜಾರಾಂ. ಈ ನಾಟಕದ ಪ್ರಥಮ ಪ್ರದರ್ಶನ ಆದದ್ದು ಎಂಬತ್ತರ ದಶಕದ ಆದಿಭಾಗದಲ್ಲಿಯೇ. ಈ ನಾಟಕದ ಪ್ರಧಾನ ಪಾತ್ರಧಾರಿ ಚಂದ್ರಶೇಖರ್ ಅವರನ್ನು ಇಂದಿಗೂ ಜನ “ಮುಖ್ಯಮಂತ್ರಿ’ ಚಂದ್ರು ಎಂತಲೇ ಗುರುತಿಸುತ್ತಾರೆ. ನಾಟಕದ ತಿರುಳು ಸಮಕಾಲೀನ ರಾಜಕಾರಣ. ಅದು ಭಾರತಾದಾದ್ಯಂತ ಒಂದೇ ರೂಪದಲ್ಲಿದೆ. ಹಾಗಾಗಿಯೇ ಇಲ್ಲಿ ಭಾಷೆಯೂ ಮುಖ್ಯವಾಗುವುದಿಲ್ಲ. ರಾಜಕಾರಣಿಗಳ ಚಾಲಾಕಿತನ, ಮುತ್ಸದ್ದಿತನ ಇವುಗಳೇ ಈ ನಾಟಕದೊಳಗೆ ಪ್ರೇಕ್ಷಕ ಇಳಿಯುವಂತೆ ಮಾಡುತ್ತವೆ. ಭಾರತದ ಅರ್ಥಜಗತ್ತು, ಎಂಬತ್ತರ ದಶಕದ ಆದಿಭಾಗದಲ್ಲಿ ಜಾಗತೀಕರಣ ಮತ್ತು ಉದಾರೀಕರಣವನ್ನು ಒಪ್ಪಿಕೊಂಡದ್ದರ ಪರಿಣಾಮ ಎಂಬಂತೆ ಅಂದಿನಿಂದ ಇಂದಿನವರೆಗೆ ಭಾರತದಲ್ಲಿ ಬಹುಮತದ ಜೊತೆಗೆ ಗೆದ್ದು ಅಧಿಕಾರ ಹಿಡಿದ ಪಕ್ಷಗಳಿಲ್ಲ. ಎಲ್ಲಾ ರಾಜ್ಯಗಳಲ್ಲಿಯೂ, ಬಹುಪಾಲು ಸಮ್ಮಿಶ್ರ ಸರ್ಕಾರವೇ ಇದೆ. ಹೀಗಾಗಿ ರಾಜಕೀಯ ಸ್ಥಿತ್ಯಂತರಗಳು ನಮ್ಮ ನಾಡಿನ ಪ್ರತಿದಿನ ಆಗುಹೋಗುಗಳಾಗಿವೆ. ಮತ್ತು ಅವು ನಮ್ಮ ದಿನಪತ್ರಿಕೆಗಳ ಪ್ರತಿದಿನದ ಆಹಾರವಾಗಿವೆ. ಇದು ನಮ್ಮ ಜನಮಾನಸದ ಮೇಲೆ ಸದಾ ಕುಣಿಯುತ್ತಿರುವ ಕತ್ತಿಯೂ ಹೌದು. ಅದರಲ್ಲಿಯೂ ಆಧುನಿಕ ಅಧಿಕಾರ ರಾಜಕಾರಣ ನಮ್ಮ ದೇಶವನ್ನು ಕಾಡುತ್ತಿರುವ ರೋಗ. ಈ ರೋಗವನ್ನು ಕುರಿತು ಮಾತು ತುಂಬಿದ, ಬೈಗುಳವೇ ಪ್ರಧಾನವಾದ ನಾಟಕಗಳನ್ನು ಮಾಡಿ ವೃತ್ತಿರಂಗಭೂಮಿಯಲ್ಲಿ ಮಾ.ಹಿರಣ್ಣಯ್ಯ ಅವರು ಗೆದ್ದಿರುವುದನ್ನು ನಾವು ನೋಡಿದ್ದೇವೆ. ಅಂತಹ ಗೆಲುವಿನ ಬೆನ್ನಲ್ಲೇ ತಯಾರಾದ ನಾಟಕ “ಮುಖ್ಯಮಂತ್ರಿ’. ಇಲ್ಲಿ ಹಿರಣ್ಣಯ್ಯನವರ ನಾಟಕಗಳಂತೆ ಶ್ರೀಸಾಮಾನ್ಯನೊಬ್ಬ ರಾಜಕೀಯ ಕುರಿತ ಕೋಪವನ್ನು ಕಾರಿಕೊಳ್ಳುವ ಬದಲು ಮುಖ್ಯಮಂತ್ರಿಯಾದವನೊಬ್ಬನ ಸುತ್ತಲೂ ನಡೆಯುವ ರಾಜಕೀಯ ವಿವರಗಳನ್ನೇ ಇರಿಸಲಾಗಿದೆ. ಇದು ನಮ್ಮ ಜನ ಸದಾ ಇಣುಕಿಯಾದರೂ ನೋಡಲು ಬಯಸುವ ಜಗತ್ತು. ಹಾಗಾಗಿಯೇ ಮೊದಲ ಪ್ರದರ್ಶನದಲ್ಲೇ ಜನಪ್ರೀತಿಯನ್ನು “ಮುಖ್ಯಮಂತ್ರಿ’ ನಾಟಕ ಗಳಿಸಿತು. ದಿನಗಳೆದಂತೆ ಈ ನಾಟಕದಲ್ಲಿದ್ದ ತಾಂತ್ರಿಕ ಅಂಶಗಳು ನಾಪತ್ತೆಯಾಗಿವೆ. ಮಾತೇ ಪ್ರಧಾನವಾಗಿದೆ. ಮತ್ತು ಮಾಗಿದ ನಟವೃಂದ ಪ್ರತಿಪ್ರದರ್ಶನದಲ್ಲಿಯೂ ಮಾಡುತ್ತಿರುವ ಸ್ಪೂರ್ತವಿಸ್ತರಣೆ ಕೆಲಸ ಮಾಡುತ್ತಿದೆ. ಜೊತೆಗೆ ಭಾರತದ ರಾಜಕೀಯ ಜಗತ್ತು ಬಹುಪಾಲು ಕಳೆದ ಮೂರುದಶಕಗಳಿಂದ ಅದೇ ಸಂಖ್ಯಾಬಲದ ಕುದುರೆ ವ್ಯಾಪಾರ ಮಾಡುತ್ತಲೇ ಇರುವುದರಿಂದ “ಮುಖ್ಯಮಂತ್ರಿ’ ನಾಟಕ ಚಿರಯೌವನಿಗನಾಗಿ ಉಳಿದಿದೆ.
ಉಪಸಂಹಾರ
ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ಕನ್ನಡ ರಂಗಭೂಮಿಯ ಪ್ರೇಕ್ಷಕ ವಿಶಿಷ್ಟವಾದವನು ಮತ್ತು ಸಂಕೀರ್ಣವಾದವನು. ಆತ ತನ್ನೊಂದಿಗೆ ತನ್ನ ನೆನಪನ್ನು ಸದಾ ಕಾಯ್ದುಕೊಂಡೇ ಸಾಗುವ ಪ್ರವೃತ್ತಿಯವನು. ಅವನ ನೆನಪಿನ ಉಗ್ರಾಣಕ್ಕೆ ತಾಗಿದ ರಂಗಕೃತಿಗಳೆಲ್ಲವೂ ಕಳೆದ ಮೂರು ದಶಕಗಳಿಂದ ಉಳಿದುಬಂದಿದೆ. ಇಲ್ಲಿ ನಾಟಕ ಎಂಬ ಕಲೆಯು ಪ್ರಧಾನವಾಗಿ ಉಳಿದುಬಂದ ಪ್ರಯೋಗಗಳು ಕಡಿಮೆ. ಅಂತಹ ಪ್ರಯೋಗದ ಸಾಲಿನಲ್ಲಿ ಸಿಗುವುದು “ತುಘಲಕ್’, “ಒಡಲಾಳ’ ಮಾತ್ರ. ಇನ್ನುಳಿದ ನಾಟಕಗಳು ಇಷ್ಟೂಕಾಲ ಬದುಕಿರುವುದಕ್ಕೆ ವಿಭಿನ್ನ ಕಾರಣಗಳಿವೆ. ಅವುಗಳನ್ನು ಅಲ್ಲಲ್ಲಿಯೇ ಚರ್ಚಿಸಿದ್ದೇನೆ. ಆದರೆ ಒಂದಂತೂ ಸತ್ಯ ಇದು ಯಾವುದೇ ಸಂಶೋಧನ ವಿದ್ಯಾರ್ಥಿಗೆ ಅತ್ಯುತ್ತಮ ಸರಕು. ಪ್ರಾಯಶಃ ಆ ಕುರಿತು ನಮ್ಮ ಕನ್ನಡ ರಂಗಭೂಮಿಯ ಜನ ಯಾರನ್ನಾದರೂ ಪ್ರೇರೇಪಿಸಬೇಕು.
ಇಷ್ಟು ಹೇಳುವಾಗ ಈ ನಾಟಕಗಳ ಉಳಿವಿಗೆ ಕಾರಣವಾದ ಮತ್ತೊಂದು ಪ್ರಧಾನ ಅಂಶವನ್ನು ಹೇಳಬೇಕು. ಅದು ರಂಗತಂಡಗಳು. ಎಲ್ಲಾ ರಂಗತಂಡಗಳೂ ತಾವು ಮಾಡಿದ ಪ್ರದರ್ಶನಗಳನ್ನಿರಲಿ ತಂಡಗಳನ್ನೇ ಇಷ್ಟುಕಾಲ ಉಳಿಸಿಕೊಂಡಿದ್ದಿಲ್ಲ. ಆ ದೃಷ್ಟಿಯಿಂದ ಬೆನಕ, ಕಲಾಗಂಗೋತ್ರಿ, ಸ್ಪಂದನ, ವೇದಿಕೆ, ನಟರಂಗ, ರಂಗಸಂಪದ, ರಂಗನಿರಂತರ ಮುಂತಾದ ರಂಗತಂಡಗಳು ಮೇಲೆ ತಿಳಿಸಿದ ಅಷ್ಟೂ ನಾಟಕಗಳನ್ನು ಉಳಿಸಲು ಹರಸಾಹಸ ಮಾಡುತ್ತಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ರಂಗಭೂಮಿಗೆ ನಟರು ದೊರೆಯುವುದು ಕಷ್ಟ. ಹಳೆಯ ಪಾತ್ರಧಾರಿಗಳನ್ನು ಬಹುಕಾಲ ಉಳಿಸಿಕೊಳ್ಳುವುದೂ ಕಷ್ಟ. ಆದ್ದರಿಂದ ಈ ರಂಗತಂಡಗಳ ಪ್ರಯತ್ನವಿಲ್ಲದೆ ಈ ನಾಟಕಗಳು ಇಷ್ಟು ಕಾಲ ಬದುಕುತ್ತಾ ಇರಲಿಲ್ಲ ಎಂಬುದೂ ಸತ್ಯ.
ನಾಟಕ ಬದುಕಿದರೆ ಸಾಕಾಗದು. ಅದನ್ನು ನೋಡುವ ಪ್ರೇಕ್ಷಕರು ಇರಬೇಕು. ಆ ಪ್ರೇಕ್ಷಕರು ಈ ನಾಟಕಕ್ಕೇ ಇನ್ನೂ ಉಳಿದಿದ್ದಾರೆ. ಅವರು ನಾಟಕವನ್ನು ಪ್ರೋತ್ಸಾಹಿಸುತ್ತಾ ಇರುವುದಕ್ಕೆ ಅದಾಗಲೇ ನಾನು ಚರ್ಚಿಸಿದ ಕಾರಣವಲ್ಲದೆ ಇರುವ ಮತ್ತೊಂದು ಕಾರಣ ಭಾಷಾಪ್ರೀತಿ. ಭಾಷೆಯೆಂಬುದು ಭಾವನಾತ್ಮಕ ಬಂಧ. ಅದು ಎಲ್ಲಾ ಕಾಲಕ್ಕೂ ನಮ್ಮನ್ನು ಹಿಡಿದಿಡಬಲ್ಲದ್ದು. ನಮ್ಮೊಳಗಿನ ಕನ್ನಡತನ ಉಳಿದಿರುವವರೆಗೆ ಇಂತಹ ಎಲ್ಲಾ ನಾಟಕಗಳು ಉಳಿದಿರುತ್ತವೆ. ಆ ಕನ್ನಡತನ ಈ ನಡುವೆ ಕಡಿಮೆಯಾಗುತ್ತಿದೆ. ಅದನ್ನು ಉಳಿಸುವ ಪ್ರಯತ್ನಗಳನ್ನು ನಾವೆಲ್ಲರೂ ಕೂಡಿ ಮಾಡಬೇಕಿದೆ.

Advertisements

1 Response to “ಮುವತ್ತಾದರೂ ಮುಪ್ಪಾಗದ ರಂಗಪ್ರಯೋಗಗಳು”


  1. 1 ಚಂದಿನ December 26, 2008 at 4:56 am

    ರಂಗಭೂಮಿ ಹಾಗು ಅತ್ಯುತ್ತಮ ರಂಗಪ್ರಯೋಗಗಳ ಪರಿಚಯದೊಂದಿಗೆ, ಉತ್ತಮ ಮಾಹಿತಿ ಮತ್ತು ಅಭಿವ್ಯಕ್ತಿ ತುಂಬಾ ಇಷ್ಟವಾಯಿತು.

    – ಚಂದಿನ


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: