ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ನೆರಳು ಕೊಟ್ಟವರನ್ನು ಮರೆತದ್ದು…

(ಮಾರ್‍ಚಿ ತಿಂಗಳ `ಟಿವಿಠೀವಿ’ ಪತ್ರಿಕೆಗಾಗಿ ಬರೆದ ಲೇಖನ)

ಈಚೆಗೆ ಸಿನಿಮಾಗೆ ಎಪ್ಪತ್ತೈದು ಎಂಬ ಸಂಭ್ರಮವನ್ನು ಆಚರಿಸಲಾಯಿತು. ಇದು ಸಂತಸದ ವಿಷಯ. ಉದ್ಯಮವೊಂದು ತನ್ನ ಎಪ್ಪತ್ತೈದನೇ ವಸಂತವನ್ನ ಜನಸಾಗರದ ಎದುರಿಗೆ ಪ್ರದರ್ಶಿಸುವುದರಿಂದ ಎರಡು ರೀತಿಯ ಲಾಭವಿದೆ. ಒಂದು – ಸಿನಿಮಾ ಮಂದಿರಕ್ಕೆ ಹೋಗುವುದನ್ನೇ ಕಡಿಮೆ ಮಾಡಿರುವ ಜನರು ಮರಳಿ ಸಿನಿಮಾದ ಕಡೆಗೆ ಗಮನ ಹರಿಸಬಹುದು. ಎರಡು – ಕಳೆದ ಎಪ್ಪತ್ತೈದು ವರ್ಷಗಳ ಇತಿಹಾಸವನ್ನು ನೆನೆಯುತ್ತಾ, ಆತ್ಮವಲೋಕನ ಮಾಡಿಕೊಳ್ಳುವುದು. ಆ ಮೂಲಕ ಉದ್ಯಮದ ಭವಿಷ್ಯವನ್ನು ಕುರಿತು ಚಿಂತಿಸುವುದು.

ಕನ್ನಡ ಚಲನಚಿತ್ರರಂಗದ ಎಲ್ಲಾ ವಲಯಗಳ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಆಯೋಜಿಸಿದ್ದ ಈ `ಅಮೃತೋತ್ಸವ’ದಲ್ಲಿ ಇಂತಹ ಕೆಲಸ ಆಗಲಿಲ್ಲ. ಮನರಂಜನಾ ಕಾರ್‍ಯಕ್ರಮವೇ ಪ್ರಧಾನ ಎಂದು ಪ್ರಚಾರ ಮಾಡಿ ಲಕ್ಷಾಂತರ ಜನ ಸೇರಿಸಲು ಸಾಧ್ಯವಾಯಿತಾದರೂ, ಅಲ್ಲಿ ಆದ ಮನರಂಜನೆಯೂ ಸಹ ನೋಡುವಂತಹುದಾಗಿರಲಿಲ್ಲ. ಇಡೀ ಕಾರ್‍ಯಕ್ರಮದಲ್ಲಿ ಕಾಣುತ್ತಾ ಇದ್ದದ್ದು ಅರಾಜಕತೆ. ಬಿಡಿ. ಅನೇಕ ನಾಯಕರು ಇರುವಲ್ಲಿ ಇಂತಹ ಸಮಸ್ಯೆಗಳಾಗುವುದು ಸಾಮಾನ್ಯ. ಆದರೆ ಮಾರನೆಯ ದಿನ ನಡೆದ ಸನ್ಮಾನದ ಕಾರ್‍ಯಕ್ರಮವಾಗಲಿ, ಮೂರನೆಯ ದಿನ ನಡೆದ ವಿಚಾರ ಸಂಕಿರಣವಾಗಲಿ ಪ್ರಬುದ್ಧವಾಗಿರಲಿಲ್ಲ ಎಂಬುದನ್ನು ಮಾಧ್ಯಮಗಳು ಸಹ ಗುರುತಿಸಿವೆ. ಇಂತಹದೊಂದು ಕಾರ್‍ಯಕ್ರಮವನ್ನು ವಿಮರ್ಶಿಸುವುದು ನನ್ನ ಉದ್ದಿಶ್ಯವಲ್ಲ. ಆದರೆ ಇಂತಹ ಕಾರ್‍ಯಕ್ರಮವೊಂದನ್ನು ಮಾಡುವ ಸಂಸ್ಥೆಯು ಚಲನಚಿತ್ರ ಉದ್ದಿಮೆಯನ್ನು ಪೋಷಿಸುತ್ತಿರುವ ಟೆಲಿವಿಷನ್ ಉದ್ಯಮವನ್ನ ಸಂಪೂರ್ಣವಾಗಿ ಮರೆತದ್ದನ್ನ ಕುರಿತು ನಾವು ಗಮನಿಸಬೇಕಾಗಿದೆ.

ಟೆಲಿವಿಷನ್ ಉದ್ಯಮಕ್ಕೆ ಇಪ್ಪತ್ತೈದು ವರ್ಷವಾಯಿತೆಂದು ನಾವು ಕಳೆದ ವರ್ಷದಿಂದ ಈ ವರ್ಷದ ವರೆಗೆ ಅನೇಕ ಕಾರ್‍ಯಕ್ರಮಗಳನ್ನು ನಮ್ಮ ಸಂಘಟನೆಯಿಂದಲೇ ಮಾಡುತ್ತಾ ಬಂದಿದ್ದೇವೆ. ಬಾಗಲಕೋಟೆ ಮತ್ತು ಬಳ್ಳಾರಿಯಲ್ಲಿ ಆದ ಕಾರ್‍ಯಕ್ರಮಗಳಂತೂ ಅಭೂತಪೂರ್‍ವ ಎಂಬಂತಿತ್ತು. ಇವೆಲ್ಲಾ ವಿವರಗಳೂ ಮಾಧ್ಯಮಗಳಲ್ಲಿ ಬಂದಿದೆ. ಅಲ್ಲದೆ ಈ ಟೆಲಿವಿಷನ್ ಉದ್ಯಮವು ತನ್ನ ಆರಂಭದ ದಿನಗಳಿಂದ ಇಂದಿನವರೆಗೆ ಚಲನಚಿತ್ರೋದ್ಯಮಕ್ಕೆ ಆಮ್ಲಜನಕ ಎಂಬಂತೆ ಕೆಲಸ ಮಾಡುತ್ತಾ ಬಂದಿದೆ. ತಯಾರಾದ ಚಲನಚಿತ್ರ ಕುರಿತು ಸುದ್ದಿ ನೀಡುವುದೇ ಇರಲಿ, ಸಿದ್ಧ ಚಲನಚಿತ್ರ ಕುರಿತ ಜಾಹೀರಾತು ಪ್ರದರ್ಶನವಿರಲಿ, ಅವುಗಳ ಹಾಡುಗಳನ್ನ ಪ್ರಸಾರ ಮಾಡುವ ಮೂಲಕ ಹೊಸ ಚಿತ್ರಗಳನ್ನು ಜನ ನೋಡಲು ಟೆಲಿವಿಷನ್ ಪ್ರೇರೇಪಿಸಿದೆ. ಅಲ್ಲದೆ, ಅನೇಕ ಹಳೆಯ ಚಿತ್ರಗಳನ್ನು ಪ್ರಸಾರ ಮಾಡುತ್ತಾ ನಮ್ಮಲ್ಲಿ ಆಗಿಹೋದ ಅನೇಕ ಕಲಾವಿದರು, ತಂತ್ರಜ್ಞರನ್ನು ಟೆಲಿವಿಷನ್ ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿದೆ. ಅಲ್ಲದೆ ಚಲನಚಿತ್ರ ಉದ್ದಿಮೆಯವರು ನಡೆಸಿದ ಕಾರ್‍ಯಕ್ರಮಕ್ಕೆ ಪ್ರಧಾನ ಆರ್ಥಿಕ ಬೆಂಬಲವನ್ನ ಪ್ರಾಯೋಜಕರಾಗೊ ಒದಗಿಸಿದವರು ಸಹ ಟೆಲಿವಿಷನ್ನಿನವರೇ. ಆದರೂ ಮೂರು ದಿನ ನಡೆದ ಅಮೃತೋತ್ಸವದಲ್ಲಿ ಯಾರೊಬ್ಬರ ಬಾಯಲ್ಲೂ ಅಪ್ಪಿತಪ್ಪಿಯೂ ಟೆಲಿವಿಷನ್ ಉದ್ದಿಮೆಯಿಂದ ಚಲನಚಿತ್ರ ರಂಗಕ್ಕೆ ಆದ ಲಾಭ, ಅನುಕೂಲಗಳು ಪ್ರಸ್ತಾಪವಾಗಲಿಲ್ಲ.

ಇದೇ `ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ನೆರಳಿತ್ತವರನ್ನ ಮರೆತದ್ದು’ ಎನ್ನುವುದು. ಈಚೆಗಿನ ಚಲನಚಿತ್ರ ಜಗತ್ತಿನ ವಹಿವಾಟಿನಲ್ಲಿ ಪ್ರಧಾನವಾದುದೇ ಸ್ಯಾಟಿಲೈಟಿಗೆ ಚಲನಚಿತ್ರವೊಂದು ಮಾರಾಟವಾದಾಗ ದೊರೆಯುವ ಹಣ. ಕೆಲವು ಚಿತ್ರ ನಿರ್ಮಾಪಕರು ಆ ಹಣದಿಂದಲೇ ಬದುಕುತ್ತಾ ಇದ್ದಾರೆ. ಇನ್ನು ಕೆಲವರು ಚಿತ್ರಮಂದಿರದಲ್ಲಿ ಕಳೆದುಕೊಂಡ ಹಣವನ್ನು ಟಿವಿಗೆ ಮಾರಿ ಪಡೆಯುವ ಯತ್ನ ಮಾಡುತ್ತಾರೆ. ಇಂತಹ ಅನೇಕರನ್ನು ತನ್ನ ಕೈಲಾದ ಮಟ್ಟಿಗೆ ಬದುಕಿಸಲು ಟೆಲಿವಿಷನ್ ಉದ್ದಿಮೆ ಸಹ ಸಹಾಯ ಮಾಡುತ್ತಲೇ ಇದೆ. ಆದರೆ ಇಂತಹ ಸಹಾಯ ಪಡೆದು ಉಸಿರಾಡುತ್ತಿರುವ ಜನರಿಗೆ ಅದೇಕೋ ಟೆಲಿವಿಷನ್ ಎಂದರೆ ಅಸಡ್ಡೆ. ಒಬ್ಬ ಪರಿಚಿತ ಗೆಳೆಯರೊಂದಿಗೆ ಮಾತಾಡುವಾಗಂತೂ ಅವರಿಗೆ ಟೆಲಿವಿಷನ್ ಎಂತಹ ನಿಕೃಷ್ಟವಾದುದು ಅನಿಸಿತ್ತೆಂದರೆ, ಅವರು, `ಸಿನಿಮಾದವರಿಲ್ಲದೆ ಟೆಲಿವಿಷನ್ ಇರುವುದಿಲ್ಲ’ ಎಂಬ ಮಾತನ್ನಾಡಿದ್ದರು. ಯಾರಿಲ್ಲದೆ ಯಾರು ಇರುವುದಿಲ್ಲ ಎನ್ನುವುದನ್ನ ಕಾಲ ನಿರ್ಧರಿಸುತ್ತದೆ. ಹಗಲು ಮೂಡುವುದೇ ತನ್ನ ಕೋಳಿಯ ಕೂಗಿನಿಂದ ಎಂದುಕೊಂಡ ಅಜ್ಜಿಯ ಕತೆ ಬಲ್ಲವರಿಗೆ ಕಾಲ ಎಂತಹ ಉತ್ತರ ನೀಡಬಲ್ಲದು ಎಂಬ ಪರಿಚಯವೂ ಇರುತ್ತದೆ. ಈ ಸತ್ಯ ನೆನಪಿನ ಬುತ್ತಿತನ್ನ ಬಿಚ್ಚಿ ಕೂತವರಿಗೆ ತಿಳಿಯಬೇಕಷ್ಟೆ.

ಇದೇ ಸಂದರ್ಭದಲ್ಲಿ ನಾವು ಹಂಚಿಕೊಳ್ಳಬೇಕಾದ ಇನ್ನೂ ಕೆಲವು ಸತ್ಯಗಳಿವೆ.

ಕಳೆದ ಬಾರಿ ಇದೇ ಅಂಕಣಕ್ಕೆ ಬರೆಯುತ್ತಾ `ಜಾಗತಿಕ ಆರ್ಥಿಕ ಕುಸಿತ ಮತ್ತು ಅದು ತಂದೊಡ್ಡಲಿರುವ ಅಪಾಯ’ ಕುರಿತು ಕೆಲವು ಮಾತುಗಳನ್ನ ಆಡಲಾಗಿತ್ತು. ಆ ಮಾತು ಈಗ ವಾಸ್ತವವಾಗಿ ನಮ್ಮ ಕಣ್ಣೆದುರಿಗೆ ಇದೆ. ಜಾಗತಿಕವಾಗಿ ಹಣದ ಮಾರುಕಟ್ಟೆ ಅದೆಷ್ಟು ಕುಸಿದಿದೆ ಎಂದರೆ ಈ ವರೆಗೆ ಒಂದು ರೂಪಾಯಿ ನೀಡಿ ತಮ್ಮ ಜಾಹೀರಾತನ್ನು ಪ್ರಸಾರ ಮಾಡುತ್ತಿದ್ದ ಕಂಪೆನಿಗಳು ಈಗ ಅದೇ ಅವಧಿಯ ಜಾಹೀರಾತಿ ಕೇವಲ ಐವತ್ತು ಪೈಸೆ ಕೊಡುವ ಮಾತಾಡುತ್ತಿವೆ. ಒಂದೇ ಬಾರಿಗೆ ಶೇಕಡ ಐವತ್ತರಷ್ಟು ಇಳಿತ. ಇದರ ಪರಿಣಾಮವನ್ನು ಎಲ್ಲಾ ಪ್ರಾಯೋಜಿತ ಕಾರ್‍ಯಕ್ರಮಗಳ ತಯಾರಕರೂ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಹೆಚ್ಚಿರುವ ವಾಹಿನಿಗಳ ಸಂಖ್ಯೆ ಸಹ ಪ್ರಬಲ ಪೈಪೋಟಿಯನ್ನು ಒಡ್ಡುತ್ತಿದೆ. ಇರುವ ಪುಡಿಗಂಟನ್ನು ಆದಷ್ಟೂ ತಾವೇ ಪಡೆಯಬೇಕೆಂದು ಅನೇಕ ವಾಹಿನಿಗಳವರು ಅತೀ ಕಡಿಮೆ ಬೆಲೆಗೆ ಜಾಹೀರಾತು ಸಮಯವನ್ನ ಮಾರುತ್ತಾ ಇದ್ದಾರೆ. ಇದರಿಂದಾಗಿ ಜನಪ್ರಿಯತೆಯ ಪಟ್ಟಿಯಲ್ಲಿ ಇದ್ದರೂ ಕಾರ್‍ಯಕ್ರಮ ನಿರ್ವಹಣೆಗೆ ಬೇಕಾದ ಹಣ ಹುಟ್ಟುತ್ತಿಲ್ಲ. ಟೆಲಿವಿಷನ್ ಮಾರುಕಟ್ಟೆ ನಿಯಂತ್ರಕರು ಅಗತ್ಯ ಪೂರೈಸಲು ಆಗದೆ ಕಂಗಾಲಾಗಿದ್ದಾರೆ. ಈ ಹಂತದಲ್ಲಿ ಕೆಲವು ಧಾರಾವಾಹಿಗಳು ಹಠಾತ್ ಆಗಿ ನಿಲ್ಲಲೂ ಬಹುದು. ಇನ್ನು ಕೆಲವೆಡೆ ಸಂಬಳದಲ್ಲಿ ಕಡಿತವಾಗಬಹುದು. ಎರಡಕ್ಕೂ ಟೆಲಿವಿಷನ್ ಉದ್ಯಮದಲ್ಲಿ ಇರುವವರು ಸಿದ್ಧವಾಗಬೇಕಾದ್ದು ಅಗತ್ಯವಾಗಿದೆ. ಸಮೃದ್ಧತೆಯಿದ್ದಾಗ ಆನಂದ ಅನುಭವಿಸಿದ ನಾವು ಈಗ ಮೂಡಿರುವ `ಕೃತಕ ಬರಗಾಲ’ದಲ್ಲಿ ಸೋಲದೆ, ಬಂದುದರಲ್ಲಿ ಹಂಚಿಕೊಂಡು ಬದುಕುವುದನ್ನ ಕಲಿಯಬೇಕಾಗಿದೆ.

ಮತ್ತೊಂದು ಪ್ರಮುಖ ಪ್ರಶ್ನೆಯಿದೆ.

ಒಂದೆಡೆಗೆ ಆರ್ಥಿಕ ಕುಸಿತದ ಭಾರದಿಂದ ಉದ್ದಿಮೆ ನರಳುತ್ತಾ ಇರುವಾಗಲೇ ನಮ್ ಸಂಘಟನೆಯು ಕಾರ್ಮಿಕರ ಕನಿಷ್ಟ ವೇತನಕ್ಕಾಗಿ ಮಾಡಿಕೊಂಡಿರುವ ಒಪ್ಪಂದವೂ ಬರಲಿರುವ ಮಾರ್‍ಚಿ ೩೧ಕ್ಕೆ ಕೊನೆಗೊಳ್ಳುತ್ತದೆ. ಹೊಸ ಲೆಕ್ಕ ವರ್ಷದಿಂದ ಕಾರ್ಮಿಕರ ಕನಿಷ್ಟ ವೇತನವನ್ನು ಹೆಚ್ಚಿಸಬೇಕಾದ ಅನಿವಾರ್ಯವೂ ಇದೆ. ಸಮಕಾಲೀನ ಸ್ಥಿತಿಯಲ್ಲಿ ಈ ದೇಶದ ಯಾವುದೇ ರಾಜ್ಯದ ಕಾರ್ಮಿಕರು ಪಡೆಯುತ್ತಾ ಇರುವ ಕನಿಷ್ಟ ವೇತನಕ್ಕೆ ಹೋಲಿಸಿದರೆ ನಮ್ಮ ಕಾರ್ಮಿಕರು ತೆಗೆದುಕೊಳ್ಳುತ್ತಾ ಇರುವುದು ಅತೀ ಕಡಿಮೆ ವೇತನ. ಕಾರ್ಮಿಕನಿಗೂ ಕುಟುಂಬವಿದೆ. ಮಕ್ಕಳು, ಸಂಸಾರ ಎಂಬ ನೊಗ ಎಳೆಯಬೇಕಾದ ಅನಿವಾರ್ಯವಿದೆ. ಈಗ ಆತನಿಗೆ ಕೊಡಮಾಡುತ್ತಿರುವ ವೇತನದಿಂದ ಕಾರ್ಮಿಕ ಬದುಕುವುದು ಕಷ್ಟ ಎಂಬುದನ್ನ ಎಲ್ಲರೂ ಬಲ್ಲರು. ಈ ಹಿನ್ನೆಲೆಯಲ್ಲಿ ಕನಿಷ್ಟ ಮಟ್ಟದ ಹೆಚ್ಚಳವಿಲ್ಲದೆ ಕಾರ್‍ಮಿಕರು ಸಹ ನೆಮ್ಮದಿಯಾಗಿ ಕೆಲಸ ಮಾಡಲಾಗದು. ಈ ನಿಟ್ಟಿನಲ್ಲಿ ಎಲ್ಲಾ ಟೆಲಿವಿಷನ್ ನಿರ್ಮಾಪಕರು ಮತ್ತು ಕಾರ್‍ಮಿಕರು ಸೇರಿ ಮಾತಾಡಬೇಕು. ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೆ ಈ ಉದ್ಯಮದ ಎಲ್ಲರ ಬದುಕಲ್ಲಿ ನೆಮ್ಮದಿ ಮೂಡಲು ಪ್ರಯತ್ನಿಸಬೇಕು. ಸಂಘಟನೆಯಲ್ಲಿರುವ ಎಲ್ಲರೂ ಸುಖವಾಗಿದ್ದಾಗ ಮಾತ್ರ ಸಂಘಕ್ಕೆ ಬೆಲೆ! ಸಂಘಕ್ಕೆ ಬೆಲೆ ಇದ್ದಾಗ ಮಾತ್ರ ನಮ್ಮೆಲ್ಲರ ಕ್ಷೇಮಾಭಿವೃದ್ಧಿಗೆ ಸಂಘಟಿತ ಪ್ರಯತ್ನಗಳಾಗುವುದು ಸಾಧ್ಯ!
ಜೊತೆಯಾಗಿದ್ದು, ಜೊತೆಯಲ್ಲಿರುವವರ ನೆಮ್ಮದಿಗೆ ಪ್ರಯತ್ನಿಸೋಣ! ಬನ್ನಿ…

Advertisements

0 Responses to “ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ನೆರಳು ಕೊಟ್ಟವರನ್ನು ಮರೆತದ್ದು…”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: