ಬಡಮಧ್ಯಮ ವರ್ಗವು ಮತ್ತು ಸಹಕಾರದ ಅಗತ್ಯವು…

(ಸಹಕಾರಿ ಬ್ಯಾಂಕ್ ಒಂದರ ದಶಮಾನೋತ್ಸವಕ್ಕಾಗಿ ಬರೆದ ಲೇಖನ)

ನಮ್ಮ ದೇಶವನ್ನು ಅಭಿವೃದ್ಧಿ ಶೀಲ ದೇಶ ಎಂದು ಕರೆಯುತ್ತಾರೆ. ಅಂತಹದೊಂದು ಹೆಸರನ್ನು ನಮ್ಮ ದೇಶಕ್ಕೆ ದಯಪಾಲಿಸಿದವರು ಜಾಗತಿಕವಾಗಿ ಶ್ರೀಮಂತರು ಎನಿಸಿಕೊಂಡ ದೇಶದವರು. ಈ ಶ್ರೀಮಂತಿಕೆಯನ್ನು ಗುರುತಿಸುವುದಕ್ಕೇ ಇಂತಹ ‘ಹಿರಿ’ ದೇಶಗಳು ತಮ್ಮದೇ ಮಾನದಂಡಗಳನ್ನು ಮಾಡಿಕೊಂಡಿವೆ. ಅದರಲ್ಲಿ ಜಿ.ಡಿ.ಪಿ., ಸರಾಸರಿಯಾಗಿ ದಿನವೊಂದಕ್ಕೆ ಒಬ್ಬ ವ್ಯಕ್ತಿಯ ಬದುಕಿಗೆ ಬೇಕಾಗುವ ಹಣ, ಸರಾಸರಿ ಆದಾಯ, ಹೀಗೇ ಏನೇನೋ ಮಾಪನಗಳಿವೆ. ಅದೆಲ್ಲ ಮಾಪನಗಳಲ್ಲಿ ಸರಿದೊರೆಗಳೆನಿಸಿಕೊಳ್ಳಲು ಈ ನಾಡಿಗೆ ಬರುವ ಪ್ರತೀ ಸರ್ಕಾರವೂ ಸರ್ಕಸ್ ಮಾಡುತ್ತವೆ. ಈ ಸರ್ಕಸ್ಸುಗಳ ಪರಿಣಾಮವಂತೂ ನಮ್ಮ ಬಡಮಧ್ಯಮ ವರ್ಗದ ಮೇಲೆ ಆಗುತ್ತಲೇ ಇರುತ್ತದೆ. ಉದಾಹರಣೆಗೆ ನೋಡಿ, ಅದ್ಯಾವುದೋ ವಿಶ್ವ ಬ್ಯಾಂಕಿನ ಅಗತ್ಯದಂತೆ ಬಡತನದ ರೇಖೆಯಿಂದ ಕೆಳಗಿರುವವರ ಸಂಖ್ಯೆಯನ್ನು ಕಡಿಮೆ ತೋರಿಸಲೆಂದು ತಿಂಗಳ ಆದಾಯ ಸಾವಿರದ ಐದುನೂರಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಪಡಿತರ ವ್ಯವಸ್ಥೆ ಅಂದುಬಿಟ್ಟಿತು ನಮ್ಮ ಮನಮೋಹನ ಸಿಂಗರ ಸರ್ಕಾರ. ಪರಿಣಾಮ : ನಗರಗಳಲ್ಲಿ ವಾಸಿಸುತ್ತಾ ಇರುವ, ವಿಶೇಷವಾಗಿ ಕೊಳೆಗೇರಿಗಳಲ್ಲಿ ವಾಸಿಸುತ್ತಾ ಇರುವ ಅನೇಕರು ಪಡಿತರವನ್ನು ಕಳೆದುಕೊಂಡರು. ಮಾರುಕಟ್ಟೆ ಬೆಲೆಯಲ್ಲಿ ಅಕ್ಕಿ, ಗೋಧಿ ಕೊಳ್ಳುವ ಸ್ಥಿತಿಗೆ ಬಂದರು. ಅವರಿಗೆ ಬರುತ್ತಿದ್ದ ಆದಾಯದಲ್ಲಿ ದೊಡ್ಡ ಬದಲಾವಣೆ ಆಗಿರಲಿಲ್ಲ. ಆದರೆ ಅವರಿಗೆ ಸಿಗುತ್ತಿದ್ದ ಪಡಿತರ ಎಂಬ ಸೌಲಭ್ಯ ಮಾತ್ರ ಖೋತಾ ಆಯಿತು. ಆದಾಯ ಮತ್ತು ಖರ್ಚು ಸರಿದೂಗಿಸಲಾಗದೆ ಬಡ ಮಧ್ಯಮವರ್ಗ ಕೊರಗತೊಡಗಿತು. ನೀವೇ ಹೇಳಿ, ಈ ಕಾಲದಲ್ಲಿ ತಿಂಗಳಿಗೆ ಸಾವಿರದ ಐದುನೂರು ಸಂಪಾದಿಸಿದವರು ಬೆಂಗಳೂರಿನಂತಹ ಬೆಂಗಳೂರು ಇರಲಿ, ನಗರದ ಪಕ್ಕದಲ್ಲಿಯೇ ಇರುವ ಹಳ್ಳಿಯಲ್ಲಾದರೂ ಬದುಕಲು ಸಾಧ್ಯವೇ? ಸರ್ಕಾರವೊಂದು ಪಡಿತರ ವ್ಯವಸ್ಥೆಯನ್ನು ‘ತಿಂಗಳಿಗೆ ಸಾವಿರದ ಐದುನೂರಕ್ಕಿಂತ ಕಡಿಮೆ ಆದಾಯಯವರಿಗೆ ಮಾತ್ರ’ ಎಂದರೆ ಅಂತಹವರು ಬದುಕುವುದಾದರೂ ಹೇಗೆ ಸಾಧ್ಯ? ಇದು ಚಿತ್ರ ಒಂದು.

ಎರಡನೆಯ ಚಿತ್ರ ಗಮನಿಸಿ. ನಮ್ಮ ದೇಶದಲ್ಲಿ ಜಾಗತೀಕರಣದ ಬಿಸಿ, ಉದಾರೀಕರಣದ ಬಿಸಿ ಏರತೊಡಗಿದ ಕೂಡಲೇ ಸಣ್ಣ ವ್ಯಾಪಾರೀಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಬೇಕಾಗಿ ಬಂದಿದೆ. ಕೈ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದವನಿಗೂ ಈಗ ಮಲ್ಟಿನ್ಯಾಷನಲ್ ಕಂಪೆನಿಯು ಸ್ಪರ್ಧೆಗೆ ನಿಂತಿದೆ. ನಿಮ್ಮ ರಸ್ತೆಯಲ್ಲಿಯೇ ಹಲವಾರು ವರ್ಷಗಳಿಂದ ದಿನಸಿ ಅಂಗಡಿ ಇಟ್ಟುಕೊಂಡಿದ್ದ ನಿಮ್ಮ ಪರಿಚಿತರ ಅಂಗಡಿಯ ಎದುರಿಗೇ ನೀವು ಹೋದರೂ, ಆ ಅಂಗಡಿಯಲ್ಲಿ ನೀವು ಕೊಳ್ಳುವುದನ್ನ ಬಿಟ್ಟಿರುತ್ತೀರಿ. ನೀವೀಗ ತಿಂಗಳಿಗೊಮ್ಮೆ ಮಲ್ಟಿನ್ಯಾಷನಲ್‌ಗಳು ನಡೆಸುವ ಯಾವುದೋ ಮಾಲ್‌ನಲ್ಲಿ ತಿಂಗಳ ದಿನಸಿಯನ್ನೆಲ್ಲಾ ಒಟ್ಟಿಗೆ ಖರೀದಿಸುತ್ತೀರಿ. ಏಕೆಂದರೆ, ಆ ಮಾಲ್‌ನವರು ನೀವು ಇಂತಿಷ್ಟು ಖರೀದಿ ಮಾಡಿದರೆ ಇಂತಿಷ್ಟು ಉಳಿತಾಯ ಎಂದು ಸುಳ್ಳು ಸುಳ್ಳೇ ಪ್ರಚಾರ ಮಾಡಿರುತ್ತಾರೆ. ಜೊತೆಗೆ ಪ್ರತೀ ಗಿರಾಕಿಗೂ ಯಾವುದೋ ಫಾರಿನ್ ಕಾರು ಲಕ್ಕಿ ಡ್ರಾದಲ್ಲಿ ದೊರೆಯುತ್ತದೆ ಎಂದು ಸ್ಪರ್ಧೆ ಘೋಷಿಸಿರುತ್ತಾನೆ. ನಿಮ್ಮ ಕೊಳ್ಳುವ ಶಕ್ತಿಗೆ ಸಿಕ್ಕ ರಿಯಾಯತಿ ಕಡಿಮೆಯಾದರೂ ಆ ಮಾಲ್‌ನ ಎದುರಿಗೆ ನಿಂತಿರುವ ಫಾರಿನ್ ಕಾರು ನಿಮ್ಮನ್ನ ಆಕರ್ಷಿಸುತ್ತಾ ಇರುತ್ತದೆ. ನೀವು ನಿಮ್ಮ ಮನೆ ಇರುವ ರಸ್ತೆಯಲ್ಲಿಯೇ ಇರುವ ಪುಟ್ಟ ದಿನಸಿ ಅಂಗಡಿಯವನಿಗೆ ಲಾಭಗಳಿಸುವ ಅವಕಾಶ ಇರಲಿ, ಬದುಕುವ ಅವಕಾಶವನ್ನು ಸಹ ಕಿತ್ತುಕೊಂಡಿರುತ್ತೀರಿ. ಆ ದಿನಸಿ ಅಂಗಡಿಯವನು ನಿಮ್ಮ ಕಣ್ಣೆದುರಿಗೆ ವೃದ್ಧನಾಗುವುದನ್ನ ನೋಡಿ ಕೇವಲ ಅಯ್ಯೋ ಪಾಪಾ ಎಂದು ಸುಮ್ಮನಾಗುತ್ತೀರಿ. ಇದು ನಮ್ಮ ಮಧ್ಯಮವರ್ಗದ ಸ್ಥಿತಿ ಸೂಚಕ ಚಿತ್ರ ಎರಡು.
ಮೂರನೆಯ ವಾಸ್ತವವೊಂದನ್ನು ಗಮನಿಸಿ. ಈ ದೇಶದಲ್ಲಿ ಪಂಚವಾರ್ಷಿಕ ಯೋಜನೆ ಎಂಬ ಬೃಹತ್ ಆಲೋಚನೆಯೊಂದ ಸ್ವಾತಂತ್ರ್ಯ ಬಂದ ಹೊಸದರಲ್ಲಿಯೇ ಬಂದಿತ್ತು. ಅದರ ಫಲವಾಗಿ ದೇಶದಾದ್ಯಂತ ಅನೇಕ ಸಾರ್ವಜನಿಕ ಉದ್ದಿಮೆಗಳು ಆರಂಭವಾದವು. ಆ ಉದ್ದಿಮೆಗಳಲ್ಲಿ ಅದೆಷ್ಟೋ ಲಕ್ಷ ಜನಕ್ಕೆ ಕೆಲಸ ಸಿಕ್ಕಿತ್ತು. ಭಾರತದಲ್ಲಿ ಆವರೆಗೆ ಇಲ್ಲವಾಗಿದ್ದ ಬೃಹತ್ ದುಡಿಯುವ ವರ್ಗವೊಂದು ಅರವತ್ತರ ದಶಕದಲ್ಲಿ ಹುಟ್ಟಿತು. ಬೆಂಗಳೂರಿನಂತಹ ನಗರದಲ್ಲಿಯೇ ಸರಿಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಾ ಇದ್ದರು. ಎಂಬತ್ತರ ದಶಕದ ಆರಂಭದಲ್ಲಿ ಹೊಸ ಆರ್ಥಿಕ ನೀತಿ ಬಂದೊಡನೆ ಖಾಸಗೀಕರಣ ಎಂಬುದ ಆದ್ಯಾವ ಪರಿಯಲ್ಲಿ ನಮ್ಮನ್ನ ಮುತ್ತಿಕೊಂಡಿತು ಅಂದರೆ ಸಾರ್ವಜನಿಕ ಉದ್ದಿಮೆಗಳು ಎಂದರೆ ಬಿಳಿ ಆನೆಗಳು, ಅಲ್ಲಿ ದುಡಿಯುವವರೆಲ್ಲಾ ಸೋಮಾರಿಗಳು ಎಂಬ ಭ್ರಮೆಯೊಂದನ್ನು ಹುಟ್ಟುಹಾಕಲಾಯಿತು. ಕೇವಲ ಹದಿನೈದು ವರ್ಷದ ಅಂತರದಲ್ಲಿ ಎನ್.ಜಿ.ಇ.ಎಫ್., ಎಚ್.ಎಂ.ಟಿ., ಮೈಸೂರು ಲ್ಯಾಂಪ್ಸ್ ಮುಂತಾದ ಉದ್ದಿಮೆಗಳು ಬಾಗಿಲು ಜಡಿದುಕೊಂಡವು. ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದವು. ಐ.ಟಿ.ಐ. ನಂತಹ ಲಾಭ ಮಾಡುತ್ತಾ ಇದ್ದ ಉದ್ದಿಮೆಯೂ ಸಹ ನಷ್ಟದ ಪಟ್ಟಿಯಲ್ಲಿ ಸೇರಿಕೊಂಡು ಇನ್ನೊಂದಷ್ಟು ವರ್ಷ ಇದೇ ಕ್ರಮದಲ್ಲಿ ನಡೆದರೆ ಬೀಗ ಮುದ್ರೆಯ ಅಲಂಕಾರಕ್ಕೆ ಒಳಗಾಗುವ ಸ್ಥಿತಿಗೆ ಬಂದಿರುವುದು ಸಹ ನಮಗೆಲ್ಲರಿಗೂ ತಿಳಿದಿದೆ. ಒಂದು ಸುಳ್ಳನ್ನ ಲಕ್ಷಾಂತರ ಬಾರಿ ಹೇಳಿ ನಿಜ ಮಾಡುವ ನಮ್ಮ ಸರ್ಕಾರಗಳ ಹುನ್ನಾರಗಳು ಸಾರ್ವಜನಿಕ ಉದ್ದಿಮೆಗಳ ವಿಷಯದಲ್ಲಿ ಸಾಧಿತವಾಗಿದೆ. ಹಾಗಾದರೆ ಇವೆಲ್ಲವೂ ಲಾಭದಾಯಕವಾಗಿದ್ದವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಪ್ರಾಯಃ ಇಲ್ಲ. ಸಾರ್ವಜನಿಕ ಉದ್ದಿಮೆಯ ಜವಾಬ್ದಾರಿ ಲಾಭ ಮಾಡುವುದಷ್ಟೇ ಆಗಿರಲಿಲ್ಲ. ಇವು ಈ ದೇಶದ ಅನೇಕರಿಗೆ ಉದ್ಯೋಗ ಕೊಡುವ ಯೋಜನೆಗಳು ಸಹ ಆಗಿದ್ದವು. ಒಂದು ರೂಪಾಯಿಯಲ್ಲಿ ತಯಾರಾಗುವ ಒಂದು ಉಪಕರಣವನ್ನು ಸರ್ಕಾರವೇ ತಯಾರಿಸಿ ಐವತ್ತು ಪೈಸೆಗೆ ಮಾರುವುದು ಉದ್ದಿಶ್ಯವಾಗಿತ್ತು. ಹಾಗಾದಾಗ ಲಾಭ ಅಸಾಧ್ಯ. ಅದು ಹಂಚುವ, ಸಹಕಾರೀ ಗುಣದಿಂದ ಹುಟ್ಟಿದ್ದು. ಸಹಕಾರಿಯಲ್ಲಿ ಲಾಭಕ್ಕಿಂತ ಎಲ್ಲರ ನೆಮ್ಮದಿ ಮುಖ್ಯ. ಆದರೆ ಉದಾರೀಕರಣದ ಹೆಸರಲ್ಲಿ ಲಾಭಬಡುಕತನವೊಂದು ಸರ್ಕಾರಕ್ಕೆ ಬಂದುಬಿಟ್ಟಾಗ ಬಡಮಧ್ಯಮವರ್ಗ ಏನು ಮಾಡಲು ಸಾಧ್ಯ. ಬಾಗಿಲು ಹಾಕಿದ, ಹಾಕುತ್ತಾ ಇರುವ ಉದ್ದಿಮೆಗಳನ್ನ ನೋಡಿ ಅಯ್ಯೋ ಪಾಪಾ ಎನ್ನಬೇಕಷ್ಟೆ. ಹೀಗಾಗಿ ಒಂದೊಮ್ಮೆ ಸರ್ಕಾರೀ ಕೆಲಸದಲ್ಲಿ ಇದ್ದೀನಿ. ನನಗೆ ನಿವೃತ್ತಿಯ ವಯಸ್ಸಾಗುವವರೆಗೆ ಚಿಂತೆ ಇಲ್ಲ ಎಂದು ಬದುಕುತ್ತಾ ಇದ್ದ ಅನೇಕ ಜನ ಇಂದು ತೊಂದರೆಗೆ ಸಿಲುಕಿದ್ದಾರೆ. ಇದು ಚಿತ್ರ ಮೂರರ ವಿವರ.

ಈ ಮೂರು ಚಿತ್ರಗಳು ನಗರ ಕೇಂದ್ರಿತವಾದದ್ದು. ಸ್ವಲ್ಪ ಹೊರಗೆ ಹಳ್ಳಿಗಳತ್ತ ನೋಡಿ. ಕಳೆದ ಒಂದು ವರ್ಷದಲ್ಲಿ (೨೦೦೮) ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಭಾರತದಲ್ಲಿ ಎರಡು ಸಾವಿರದ ಸಂಖ್ಯೆಯನ್ನು ದಾಟುತ್ತದೆ. ಇನ್ನೂ ಈ ರಾಜ್ಯದಲ್ಲಿ ‘ಕಮಲಮುಖಿ’ ಸರ್ಕಾರ ಬಂದ ಮೇಲೆ ಗೊಬ್ಬರಕ್ಕಾಗಿಯೂ ಗುಂಡು ಹಾರಿಸಿದ್ದನ್ನು ನೋಡಿದ್ದೇವೆ. ಬಳ್ಲಾರಿಯಂತಹ ನಗರದಲ್ಲಿ ಕೃಷಿಭೂಮಿಯನ್ನು ಏರ್‌ಪೋರ್ಟ್ ಮಾಡಲು ಸಜ್ಜಾಗಿರುವುದನ್ನು ನೋಡುತ್ತಾ ಇದ್ದೇವೆ. ಸಮಕಾಲೀನ ಗ್ರಾಮೀಣ ಜನರ ಬದುಕಂತೂ ಹೊಲ ಗದ್ದೆಗಳಲ್ಲಿ ದುಡಿಯುವ ಜನರೂ ಇಲ್ಲದೆ ಅತೀವ ಕಷ್ಟವಾಗುತ್ತಾ ಇದೆ.

ಇನ್ನೂ ವಿದ್ಯಾಭ್ಯಾಸವನ್ನು ನೋಡಿ. ಒಂದೊಮ್ಮೆ ವಿದ್ಯೆ ನೀಡುವುದು ಸಮಾಜ ಸೇವೆಯಾಗಿತ್ತು. ಈಗ ಅದು ಉದ್ಯಮ ಆಗಿದೆ. ಹೀಗಾದಾಗ ಬಡಮಧ್ಯಮವರ್ಗವು ತನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸುವುದೂ ಸಹ ಕಷ್ಟವಾಗುತ್ತದೆ. ಇನ್ನು ಮಕ್ಕಳ ದಿರಿಸು, ಪುಸ್ತಕಗಳ ಇತ್ಯಾದಿಗಳ ಮೇಲಿರುವ ಖರ್ಚಂತೂ, ಎರಡು ಹೊತ್ತಿನ ಊಟ ಹೊಂದಿಸುವುದಕ್ಕೇ ಪರದಾಡುತ್ತಾ ಇರುವವನ ಕೈಗೆ ನಿಲುಕದಂತಹದು. ಹೀಗಾಗಿ ನಮ್ಮ ಮುಂದಿನ ತಲೆಮಾರಿಗೆ ನಾವು ಸರಿಯಾದ ಶಿಕ್ಷಣವನ್ನು ಕೊಡುವುದು ಸಹ ಕಷ್ಟವಾಗುತ್ತಿದೆ.

ಇಷ್ಟೆಲ್ಲಾ ಕಷ್ಟಗಳನ್ನು ಈಗ ಹೇಳುತ್ತಾ ಇರುವುದರ ಕಾರಣವಿಷ್ಟೆ. ಹಿಂದೆಂದಿಗಿಂತಲೂ ಸಹಕಾರ ಎಂಬುದು ಈಗ ಮುಖ್ಯ. ಕಷ್ಟದಲ್ಲಿರುವ ನಮ್ಮ ನೆರೆಹೊರೆಗೆ ನಾವು ಕೇವಲ ಅಯ್ಯೋ ಪಾಪ ಎಂದು ದೂರವಿದ್ದರೆ ಸಾಲದು. ಹಂಚಿಕೊಂಡು ಬದುಕುವುದನ್ನ ನಾವು ಕಲಿಯಬೇಕಾಗಿದೆ. ನಮಗೆ ಬರುವ ಆದಾಯ ಕಡಿಮೆಯೋ ಹೆಚ್ಚೊ ಎಂಬುದು ಮುಖ್ಯವಲ್ಲ. ನಮ್ಮೆಲ್ಲರ ಆದಾಯಗಳನ್ನು ಒಂದೆಡೆ ಕ್ರೋಢೀಕರಿಸಿ ಕಡಿಮೆ ಬಡ್ಡಿಯ ಸಾಲಗಳನ್ನು ನೀಡುವ ಮೂಲಕ, ಸ್ವಸಹಾಯ ಗುಂಪುಗಳ ರಚನೆಯ ಮೂಲಕ ನಮ್ಮ ಸುತ್ತ ಇರುವವರ ಬದುಕನ್ನು ಹಸನುಗೊಳಿಸಬೇಕಾದ್ದು ನಮ್ಮ ಜವಾಬ್ದಾರಿಯಾಗಿದೆ. ಇಂತಹ ವ್ಯವಸ್ಥೆ ನಮ್ಮ ಬಡಮಧ್ಯಮ ವರ್ಗಕ್ಕೆ ಹೆಚ್ಚು ಅಗತ್ಯವಾಗಿದೆ. ಏಕೆಂದರೆ ನಮ್ಮ ಸರ್ಕಾರಗಳ ಪಾಲಿಗೆ ಬಡವರು ಮತ್ತು ಬಡ ಮಧ್ಯಮವರ್ಗದವರು ಕಾಣುತ್ತಲೇ ಇಲ್ಲ. ಅವರು ಚುನಾವಣೆಯಲ್ಲಿ ಮಾತ್ರ ಎರಡು ರೂಪಾಯಿಗೆ ಅಕ್ಕಿ ಎನ್ನುತ್ತಾರೆ. ಎಲ್ಲರಿಗೂ ಮೊಬೈಲ್ ಫೋನ್ ಕೊಡುತ್ತೇವೆ ಎನ್ನುತ್ತಾರೆ. ಆದರೆ ಸರ್ಕಾರದ ಸಿಂಹಾಸನ ಮೇಲೆ ಕೂತೊಡನೆ ಅವರು ಮತ್ತೆ ಬೆಂಗಳೂರನ್ನು ಸಿಂಗಪುರ ಮಾಡುವ, ಮುಂಬೈಯನ್ನು ಷಾಂಗೈ ಮಾಡುವ ಮಾತಾಡುತ್ತಾರೆ. ಸಾಮಾನ್ಯ ಜನರ ಬದುಕನ್ನು ಅರಳಿಸುವ ಮಾತುಗಳನ್ನು ಆಡುವುದಿಲ್ಲ. ಹೀಗಾದಾಗ ಜನ ಸ್ವತಃ ಒಂದುಗೂಡಬೇಕು. ಸಹಕಾರೀ ತತ್ವದ ಮೇಲೆ, ಗ್ರಾಮ ಸ್ವರಾಜ್ಯಗಳನ್ನು ರಚಿಸುವತ್ತ ಪ್ರಯತ್ನಶೀಲರಾಗಬೇಕು.

ಸಹಕಾರ ಎಂಬುದು ನಮ್ಮ ಧರ್ಮವಾಗಬೇಕು. ಇಂತಹ ಸಂದರ್ಭದಲ್ಲಿ ಈ ದೇಶದಲ್ಲಿನ ಕೆಲವು ಪಕ್ಷಗಳು ಧರ್ಮದ ಹೆಸರಿನಲ್ಲಿಯೇ ಅಧಿಕಾರಕ್ಕೆ ಬರಲು ಹವಣಿಸುತ್ತಿವೆ. ಅಂತಹ ಧರ್ಮಗಳ ಬೋರ್ಡ್ ಹಿಡಿದ ರಾಜಕಾರಣಿಗಳನ್ನ ಬಹಿಷ್ಕರಿಸಿ, ಮಾನವ ಧರ್ಮ ಮತ್ತು ಸಹಕಾರೀ ಧರ್ಮವನ್ನು ನಾವು ಮೂಲಮಂತ್ರ ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ನಾವು ಈ ಸಮಕಾಲೀನ ಸಂಕಟಗಳಿಂದ ಪಾರಾಗಬಹುದು.

ಈಗ ನಮ್ಮೆಲ್ಲರ ನೆಚ್ಚಿನ ಸಹಕಾರೀ ಬ್ಯಾಂಕ್ ಬೆಂಗಳೂರು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗೆ ದಶಕದ ಸಂಭ್ರಮ. ಈ ಸಂಭ್ರಮವನ್ನು ಆಚರಿಸುತ್ತಾ ನಾವು ಈ ಸಂಕಟಗಳನ್ನು ಕುರಿತು ಯೋಚಿಸೋಣ.

Advertisements

2 Responses to “ಬಡಮಧ್ಯಮ ವರ್ಗವು ಮತ್ತು ಸಹಕಾರದ ಅಗತ್ಯವು…”


 1. 1 vineeth January 10, 2010 at 4:58 pm

  Nim Lekhan BJP yellu critisize maadotara ide..

 2. 2 ಬಿ.ಸುರೇಶ January 12, 2010 at 5:24 am

  ವಿನೀತ್ ಅವರೇ,
  ನಮನಗಳು.
  ನಾನು ಪಕ್ಷಗಳನ್ನು ಯಾವತ್ತೂ ಟೀಕಿಸುವುದಿಲ್ಲ. ಆದರೆ ಧರ್ಮದ, ದೇವರುಗಳ ಹಾಗೂ ಜಾತಿಯ ಹೆಸರಲ್ಲಿ ರಾಜಕೀಯ ಮಾಡುವವರನ್ನು ಟೀಲಿಸುತ್ತೇನೆ. ಅಂತಹವರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಸರ್ಕಾರೀ ಇಲಾಖೆಗಳಲ್ಲೂ ಇದ್ದಾರೆ. ಖಾಸಗಿ ಸಂಘ ಸಂಸ್ಥೆಗಳಲ್ಲೂ ಇದ್ದಾರೆ. ಇಂತಹವರು ಎಲ್ಲಿದ್ದರೂ ಅಪಾಯಕಾರಿ ಎಂಬುದು ನನ್ನ ನಿಲುವು.
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
  ನಿಮ್ಮವ
  ಬಿ.ಸುರೇಶ


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: