ಐಎಲ್‌ಓ ವರದಿ ೨೦೦೮ ಮತ್ತು ನಮ್ಮ ಕಾರ್ಮಿಕರ ಸ್ಥಿತಿ

(ಟಿವಿಠೀವಿ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಗೆ ಎಂದು ಬರೆದ ಲೇಖನ)

ಈಚೆಗೆ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆಯ ೨೦೦೮ರ ವರದಿಯು ದೊರೆಯಿತು. ಅದೂ ಇಡಿಯಾಗಿ ಅಲ್ಲ. ಲೇಬರ್ ಫೈಲ್ ಎಂಬ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ದ್ವೈಮಾಸಿಕ ಪತ್ರಿಕೆಯೊಂದರಲ್ಲಿ ಈ ವರದಿಯ ಸ್ಥೂಲ ವಿವರಗಳನ್ನು ನೀಡಲಾಗಿತ್ತು. ಅದನ್ನು ಗಮನಿಸುತ್ತಾ ನಾವು ಹಲವು ವರ್ಷಗಳಿಂದ ನಮ್ಮ ಉದ್ಯಮದಲ್ಲಿ ಕಾಣುತ್ತಿರುವ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕುರಿತು ಪ್ರತ್ಯೇಕವಾಗಿ ಆಲೋಚಿಸಬೇಕು ಎಂದೆನಿಸಿತು. ಹಾಗಾಗಿ ಈ ಮಾತುಗಳನ್ನು ಬರೆಯುತ್ತಾ ಇದ್ದೇನೆ.

ಐಎಲ್‌ಓ ’೦೮ ವರದಿಯ ಪ್ರಕಾರ ಕಳೆದೆರಡು ದಶಕದಲ್ಲಿ ಉತ್ಪಾದನೆಯ ದೃಷ್ಟಿಯಿಂದ ಭಾರತದಲ್ಲಿ ಶೇಕಡಾ ೫ಕ್ಕಿಂತ ಹೆಚ್ಚು ಬೆಳವಣಿಗೆ ಆಗಿದೆ. ಆದರೆ ದುಡಿಯುವವರ ಕನಿಷ್ಟ ವೇತನಕ್ಕೆ ಈ ಅವಧಿಯಲ್ಲಿ ಆಗಿರುವ ಹೆಚ್ಚಳ ಮಾತ್ರ ಶೇಕಡಾ ಒಂದರಷ್ಟು ಹೆಚ್ಚಾಗಿಲ್ಲ. ಹೀಗಾಗಿ ಜಾಗತಿಕವಾಗಿ ಅತಿಹೆಚ್ಚು ಸಂಪಾದಿಸುವವರ ಮತ್ತು ಅತಿಕಡಿಮೆ ಸಂಪಾದಿಸುವವರ ನಡುವಿನ ಅನುಪಾತದಲ್ಲಿ ಅತಿಹೆಚ್ಚು ಅಂತರವುಳ್ಳ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೆಯ ಸ್ಥಾನದಲ್ಲಿದೆ. ಅಂದರೆ ಕಳೆದ ಎರಡು ದಶಕದಿಂದ ಈ ದೇಶದಲ್ಲಿ ಆಗುತ್ತಿರುವ ‘ಅಭಿವೃದ್ಧಿ ಅರ್ಥಶಾಸ್ತ್ರ’ದಿಂದ ಶ್ರೀಮಂತವರ್ಗ ಮತ್ತು ಕಡುಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆಯೇ ಹೊರತು ಅದನ್ನು ತಗ್ಗಿಸುವ ಯಾವ ಹೆಜ್ಜೆಗಳನ್ನೂ ಸರ್ಕಾರಗಳು ಇಟ್ಟಿಲ್ಲ. ಇದೇ ಸಂದರ್ಭದಲ್ಲಿ ಆಗಿರುವ ಜಾಗತಿಕ ಆರ್ಥಿಕ ಕುಸಿತದಿಂದ ಈ ಅಂತರ ಇನ್ನೂ ಹೆಚ್ಚುವ ಸಾಧ್ಯತೆಯೂ ಇದೆ. ಈ ಆರ್ಥಿಕ ಕುಸಿತದಿಂದಾಗಿ ದೇಶದ ಬೊಕ್ಕಸಕ್ಕಾಗುವ ಪರಿಣಾಮದ ಗರಿಷ್ಠ ಭಾರವನ್ನು ಮಾತ್ರ ಶ್ರೀಸಾಮಾನ್ಯನೇ ಹೊರಬೇಕಾದ ಅನಿವಾರ್ಯವಿದೆ. ಆದರೆ ಈ ದೇಶದಲ್ಲಿ ಹೂಡಿದ ಹಣದಿಂದ ಬರುವ ಲಾಭ ಹಂಚಿಕೆ ಮಾಡುವಾಗ ಮಾತ್ರ ಬಂಡವಾಳಶಾಹಿಗಳ ಪರವಾಗಿ ನಮ್ಮ ಅರ್ಥಶಾಸ್ತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಇದು ಅಪಾಯಕಾರಿಯದ ಪರಿಸ್ಥಿತಿ. ‘ಶ್ರೀಮಂತ ಮತ್ತು ಬಡವರ್ಗದ ನಡುವಿನ ಅಂತರ ಹೆಚ್ಚಿದಂತೆ ಆರ್ಥಿಕ ಕುಸಿತವನ್ನು ದೇಶವೊಂದು ಎದುರಿಸುವ ಶಕ್ತಿಯೂ ಕಡಿಮೆಯಾಗುತ್ತದೆ. ಇದರಿಂದಾಗಿ ದೀರ್ಘ ಕಾಲೀನ ಅಭಿವೃದ್ಧಿ ಯೋಜನೆಗಳಿಗೆ ಬಹುದೊಡ್ಡ ಹೊಡೆತ ಬೀಳಲಿದೆ. ಇದರ ಪರಿಣಾಮವೂ ಸಾಮಾಜಿಕ ಸಂರಚನೆಯ ಹೊಲಿಗೆಗಳನ್ನೇ ಹರಿಯಬಹುದು.’ ಎನ್ನುತ್ತಾರೆ ಐಎಲ್‌ಓದ ವರದಿ ಸಿದ್ಧಪಡಿಸಿದವರಲ್ಲಿ ಓಬ್ಬರಾದ ರೇಮಂಡ್ ಟಾರೆಸ್.

ಇದೇ ವರದಿಯ ಪ್ರಕಾರ ೧೯೯೦ ಮತ್ತು ೨೦೦೮ರ ನಡುವಿನ ಅವಧಿಯಲ್ಲಿ ಉದ್ಯೋಗಾವಕಾಶಗಳು ಶೇಕಡಾ ೩೦ರಷ್ಟು ಹೆಚ್ಚಿದೆಯಾದರೂ ಅದೇ ಅಂತರದಲ್ಲಿ ಕನಿಷ್ಟ ವೇತನದಲ್ಲಿ ಏರಿಕೆಯಾಗಿಲ್ಲ ಎಂದು ಸೂಚಿಸಲಾಗಿದೆ. ಇದು ಆತಂಕದ ವಿಷಯ. ವಿಶೇಷವಾಗಿ ಸಂಘಟಿತ ಮತ್ತು ಅಸಂಘಟಿತ ಕಾರ‍್ಮಿಕರ ವಲಯಗಳ ನಡುವಿನ ಕನಿಷ್ಟ ವೇತನವನ್ನು ಬಹುಬೇಗ ಸರಿಪಡಿಸಬೇಕೆಂದು ಈ ವರದಿಯೂ ತಿಳಿಸುತ್ತದೆ. ಭಾರತದಲ್ಲಿಯಂತೂ ೪೫೭ ದಶಲಕ್ಷ ಜನ ಕಾರ್ಮಿಕರಲ್ಲಿ ೪೨೦ ದಶಲಕ್ಷ ಕಾರ್ಮಿಕರು ಅಸಂಘಟಿತ ವಲಯದವರು. ಹೀಗಾಗಿ ಅಸಂಘಟಿತ ವಲಯದವರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕಾದ್ದು ಇಂದಿನ ಅವಶ್ಯಕತೆ ಎಂದು ವರದಿಯು ಸ್ಪಷ್ಟವಾಗಿ ತಿಳಿಸುತ್ತದೆ.
ಇದೇ ವರದಿಯಲ್ಲಿರುವ ಮತ್ತೊಂದು ವಿವರವನ್ನು ಗಮನಿಸಿ. ೨೦೦೬ರಿಂದ ೨೦೦೮ರ ನಡುವಿನ ಅವಧಿಯಲ್ಲಿ ಆಹಾರ ಸಾಮಗ್ರಿಯ ಬೆಲೆಗಳು ಶೇಕಡಾ ೯ರಷ್ಟು ಹೆಚ್ಚಾಗಿದೆ. ಆದರೆ ಅದಾಗಲೇ ಗುರುತಿಸಿದಂತೆ ವೇತನದಲ್ಲಿ ಇದೇ ರೀತಿಯ ಹೆಚ್ಚಳ ಆಗಿಲ್ಲ. ಹೀಗಾಗಿ ಭಾರತದ ಬಡವರ ಮನೆಯಲ್ಲಿನ ಕೊಳ್ಳುವ ಶಕ್ತಿಯಲ್ಲಿ ಶೇಕಡಾ ೬ರಷ್ಟು ಇಳಿಕೆಯಾಗಿದ್ದರೆ. ಮೇಲ್‌ಮಧ್ಯಮವರ್ಗದವರ ಮನೆಗಳಲ್ಲಿ ಕೊಳ್ಳುವ ಶಕ್ತಿಯು ಶೇಕಡಾ ೨ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಸಾಮಾಗ್ರಿಗಳನ್ನು ಮಾರುವವರಿಗೆ ವ್ಯಾಪಾರ ಕಡಿಮೆಯಾಗಿದೆ. ಅದರ ಪರಿಣಾಮವಾಗಿ ನಮ್ಮ ಉದ್ಯಮಕ್ಕೆ ಬರಬೇಕಾದ ಜಾಹೀರಾತು ಕಡಿಮೆಯಾಗಿದೆ. ಹೀಗೆ ಎಲ್ಲವೂ ಒಂದರೊಳಗೊಂದು ಸೇರಿಕೊಂಡು, ನಮ್ಮನ್ನು ರಿಂಗಣಗುಡಿಸುತ್ತಿದೆ. ಹಾಗಾಗಿಯೇ ನಾನು ಈ ವರೆಗೆ ನಿಮ್ಮೆದುರು ಇಟ್ಟ ಐಎಲ್‌ಓದ ೨೦೦೮ರ ವರದಿಯು ನಮಗೆಲ್ಲರಿಗೂ ಮುಖ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ನಮ್ಮ ನಗರಗಳಲ್ಲಿ ತಲೆಎತ್ತಿರುವ ಬೃಹತ್ ಮಾಲ್‌ಗಳಲ್ಲಿ ದುಡಿಯುತ್ತಾ ಇರುವವರನ್ನು ಕುರಿತಂತೆ ಮತ್ತೊಂದು ವರದಿಯು ಬಂದಿದೆ. ಈ ಮಾಲ್‌ಗಳಲ್ಲಿ ಹೇಗೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ, ಸಂಬಳ ವಿಲೇವಾರಿ ಹೇಗೆ ಎಂಬ ವಿವರ ನಮಗೆ ನೇರವಾಗಿ ಸಂಬಂಧಿಸದ್ದಲ್ಲವಾದರೂ ಅವರು ತಮ್ಮಲ್ಲಿನ ಉದ್ಯೋಗಿಗಳಿಗಾಗಿ ಮಾಡಿರುವ ಕೆಲವು ಕ್ಷೇಮಾಭಿವೃದ್ಧಿ ಕೆಲಸವನ್ನು ಗಮನಿಸಿದಾಗ ಅವುಗಳು ನಮ್ಮ ಉದ್ಯಮದಲ್ಲಿ ಇರುವವರಿಗೆ ಉಪಯುಕ್ತವಾಗಬಹುದು ಎಂದು ಭಾವಿಸಿ ಒಂದೆರಡು ವಿಷಯಗಳನ್ನು ಪ್ರಸ್ತಾಪಿಸುತ್ತೇನೆ.

ಈ ಮಾಲ್‌ಗಳಲ್ಲಿನ ತಿಂಗಳ ವೇತನವೂ ಕನಿಷ್ಟ ರೂ.೧೫೦೦/= ರಿಂದ ರೂ.೭೦೦೦/=ದ ವರೆಗೆ. ಯಾವುದೇ ಕೆಲಸಕ್ಕೆ ಯಾರನ್ನಾದರೂ ತೆಗೆದುಕೊಳ್ಳುವ ಮುನ್ನ ಅವರಿಗೆ ಒಂದು ತಿಂಗಳ ಅವಧಿಯ ತರಬೇತಿ ಕಡ್ಡಾಯ. ಈ ತರಬೇತಿಯಲ್ಲಿ ಗಿರಾಕಿಗಳೊಂದಿಗೆ ಅವರು ಮಾತಾಡಬೇಕಾದ ರೀತಿಯನ್ನು ಕುರಿತಂತೆ ಹೆಚ್ಚು ಒತ್ತುಕೊಡಲಾಗುತ್ತದೆ. ನಂತರ ಅವರು ಡ್ರೆಸ್ ಮಾಡಿಕೊಳ್ಳಬೇಕಾದ ರೀತಿ, ಅವರು ಆರೋಗ್ಯ ಕಾಪಾಡಿಕೊಳ್ಳಬೇಕಾದ ರೀತಿ ಹೀಗೆ ಅವರ ಎಲ್ಲಾ ಬಾಹ್ಯ ವಿವರಗಳನ್ನು ಕುರಿತಂತೆ ತಯಾರಿ ನೀಡಲಾಗುತ್ತದೆ. ಇಷ್ಟಾದಮೇಲೆ ಪ್ರತಿಯೊಬ್ಬ ಕೆಲಸಗಾರನಿಗೂ ಆರೋಗ್ಯವಿಮೆ ಮತ್ತು ಜೀವವಿಮೆಗಳನ್ನು ಮಾಡಿಸಲಾಗುತ್ತದೆ. (ಇದಕ್ಕಾಗಿ ಅವರ ಸಂಬಳಗಳಲ್ಲಿ ಮುರಿತವಾಗುತ್ತದೆ.) ಇದೆಲ್ಲವೂ ಈ ಮಾಲ್‌ಗಳು ಅಳವಡಿಸಿಕೊಂಡಿರುವ ಅಭ್ಯಾಸಗಳ ಗುಣಾತ್ಮಕ ವಿವರಗಳು. ಋಣಾತ್ಮಕ ವಿವರಗಳ ಪಟ್ಟಿ ದೊಡ್ಡದಿದೆ. ಅದು ಇಲ್ಲಿ ಚರ್ಚಿಸಬೇಕಾದ ವಿಷಯವಲ್ಲವಾದ್ದರಿಂದ ಅದನ್ನು ಕೈಬಿಟ್ಟು ಈ ಗುಣಾತ್ಮಕ ವಿವರಗಳನ್ನು ನಮ್ಮ ಉದ್ಯಮದಲ್ಲಿ ಅಳವಡಿಸಿಕೊಳ್ಳಲು ಏನು ಮಾಡಬಹುದೆಂದು ನೋಡೋಣ.

ನಮ್ಮ ಉದ್ಯಮವನ್ನು ಅಸಂಘಟಿತ ವಲಯ ಎಂದೇ ಗುರುತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಕಾರ‍್ಯಕ್ರಮ ತಯಾರಿಸುವ ನಿರ್ಮಾಣ ಸಂಸ್ಥೆಯು ತಾನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರತಿ ವ್ಯಕ್ತಿಯ ಜೊತೆಗೆ (ಕಾರ‍್ಮಿಕ/ತಂತ್ರಜ್ಞ/ಕಲಾವಿದರು) ಒಪ್ಪಂದವನ್ನು ಮಾಡಿಕೊಂಡು, ಕಾರ‍್ಯಕ್ರಮ ನಿರ್ಮಾಣಕ್ಕೆ ಮೊದಲು ಕನಿಷ್ಟ ಒಂದು ತಿಂಗಳ ತರಬೇತಿ ಶಿಬಿರವನ್ನು ಮಾಡಿ, ಪ್ರತೀ ವ್ಯಕ್ತಿಗೂ ತಾನು ದುಡಿಯುತ್ತಿರುವ ಕಾರ‍್ಯಕ್ರಮ ಕುರಿತು ‘ಇದು ತನ್ನದು’ ಎಂಬ ಬಾವ ಬರುವಂತೆ ರೂಪಿಸಬೇಕು. ಆನಂತರ ನಿರ್ಮಾನ ಸಂಸ್ಥೆಯೇ ಗ್ರೂಪ್ ಇನ್ಷೂರೆನ್ಸ್ ಮೂಲಕ ತನ್ನಲ್ಲಿ ದುಡಿಯುವ ಪ್ರತಿಯೊಬ್ಬರ ಆರೋಗ್ಯ ವಿಮೆ ಮತ್ತು ಜೀವ ವಿಮೆಯನ್ನು ಮಾಡಿಸಿ, ಅವರವರ ಸಂಬಳ/ಗೌರವಧನದಲ್ಲಿ ತತ್ಸಂಬಂಧ ಹಣ ಮುರಿದುಕೊಳ್ಳಬೇಕು. ಹೀಗೆ ಮಾಡಿದಲ್ಲಿ ಪ್ರತಿಯೊಬ್ಬ ಕಾರ‍್ಮಿಕನಿಗೂ ತಾನು ಸುರಕ್ಷಿತ ಎಂಬ ಭಾವವೊಂದು ಹುಟ್ಟುತ್ತದೆ. ಇಂತಾದ್ದೊಂದು ಭಾವನೆ ನಮ್ಮ ಉದ್ಯಮದವರಲ್ಲಿ ಹುಟ್ಟಬೇಕಾದ್ದು ಐಎಲ್‌ಓ ’೦೮ ವರದಿಯ ಹಿನ್ನೆಲೆಯಲ್ಲಿ ಅವಶ್ಯಕ. ಈ ನಿಟ್ಟಿನಲ್ಲಿ ಈ ಉದ್ಯಮದ ಎಲ್ಲರೂ ಯೋಚಿಸಿ, ನಿಮಗೇನಾದರೂ ಬೇರೆಯ ಮಾರ್ಗಗಳು ತೋಚಿದರೆ ತಿಳಿಸಿ. ಒಟ್ಟಾರೆಯಾಗಿ ನಮ್ಮ ಉದ್ಯಮದಲ್ಲಿರುವ ಎಲ್ಲರ ಹಿತರಕ್ಷಣೆ ಮುಖ್ಯವಾಗಬೇಕಷ್ಟೆ.

Advertisements

1 Response to “ಐಎಲ್‌ಓ ವರದಿ ೨೦೦೮ ಮತ್ತು ನಮ್ಮ ಕಾರ್ಮಿಕರ ಸ್ಥಿತಿ”


  1. 1 ಚಂದಿನ June 22, 2009 at 6:53 am

    ಕಲಾವಿದರು, ತಂತ್ರಜ್ಞರನ್ನು ಕಾರ್ಮಿಕರಿಗೆ ಹೋಲಿಸಿದರೆ, ಹೆಚ್ಚು ಅನುಕೂಲಸ್ತರಾದ್ದರಿಂದ ಬಹುತೇಕರು ಈಗಾಗಲೇ ಜೀವವಿಮೆ ಪಾಲಿಸಿಯನ್ನೊಂದಿರುತ್ತಾರೆಂದು ಭಾವಿಸುತ್ತೇನೆ. ಆದ್ದರಿಂದ, ಮೊದಲಿಗೆ ಕಾರ್ಮಿಕರಿಗೆ ಗ್ರೂಪ್ ಇನ್ಸ್ಯೂರೆನ್ಸ್ ಅತ್ಯಗತ್ಯ. ಈ ಮೂಲಕ ಅವರ ಸುರಕ್ಷತೆಗೆ ಒತ್ತು ಕೊಟ್ಟರೆ, ಅವರು ಆಸ್ಥೆಯಿಂದ, ಪರಿಣಾಮಕಾರಿಯಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ, ಹೀಗಾಗಿ ನಿರ್ಮಾಕರಿಗೆ ಹೆಚ್ಚು ಉಪಯೋಗವಾಗುವ ಸಾಧ್ಯತೆ ಇದೆ. ಅಷ್ಟೊಂದು ದುಬಾರಿ ಅಲ್ಲದಿದ್ದರೂ, ಇಚ್ಛಾಸಕ್ತಿಯ ಕೊರತೆಯಿಂದ ಇದುವರೆಗೂ ಈ ವ್ಯವಸ್ಥೆಯ ಸದುಪಯೋಗ ಪಡೆಯದಿರುವುದು ದುರದೃಷ್ಟಕರ.

    ನಲ್ಮೆಯ
    ಚಂದಿನ


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 57,460 ಜನರು
Advertisements

%d bloggers like this: