ಬಿ.ಸುರೇಶ ಬರೆದಿರುವ ‘ಅರ್ಥ’

(ಒಂದು ದೃಶ್ಯದ ನಾಟಕ)

ಸ್ಫೂರ್ತಿ : ಜಯವಂತ ದಳವಿ ಅವರ ಮರಾಠಿ ಕಥೆ “ಜುಟ್ಟಿನ ಗಂಟು” ನಾಟಕದ ಅವಧಿ : ಸುಮಾರು ೪೫ ನಿಮಿಷಗಳು

ಪಾತ್ರಗಳು :
೧.    ಅಪ್ಪಾಜಿ – ಎಪ್ಪತ್ತರ ಹರೆಯದವ. ಸ್ವಾತಂತ್ರ್ಯ ಹೋರಾಟಗಾರ
೨.    ಟಿ.ಸಿ.ಜಗಳೂರು – ಮಧ್ಯವಯಸ್ಕ (ನಲ್ವತ್ತು ದಾಟಿದವನು), ರಾಘುವಿನ ಕಂಪೆನಿಯ ಸೆಕ್ರೆಟರಿ.
೩.    ರಾಘು – ಅಪ್ಪಾಜಿಯ ಮಗ (ಮುವ್ವತ್ತು ದಾಟಿದವನು), ವ್ಯಾಪಾರಿ
೪.    ಧ್ವನಿಗಳು – ರಾಘವೇಂದ್ರನ ಮನೆಗೆ ಪಾರ‍್ಟಿಗೆಂದು ಬಂದಿರುವ ಶ್ರೀಮಂತರು ಮತ್ತು ಸರ‍್ಕಾರೀ ಅಧಿಕಾರಿಗಳು.

ಮೊದಲ ಪ್ರತಿ: ೧೧ ಡಿಸೆಂಬರ್ ೧೯೯೨
(ಕಾವೇರಿ ಗಲಾಟೆಯಿಂದಾಗಿ ಕರ್ಫ್ಯೂ ಇದ್ದಕಾರಣ ದಿನವಿಡೀ ಮನೆಯಲ್ಲಿ ಕೂತಾಗ ಬರೆದದ್ದು)
ಪರಿಷ್ಕೃತ ಎರಡನೆಯ ಪ್ರತಿ : ೨೫ ಡಿಸೆಂಬರ್ ೧೯೯೮
ಪರಿಷ್ಕೃತ ಮೂರನೆಯ ಪ್ರತಿ : ೩ ಮಾರ್ಚ್ ೨೦೦೭
ಪರಿಷ್ಕೃತ ನಾಲ್ಕನೆಯ ಬೆರಳಚ್ಚು ಪ್ರತಿ : ೧೦ ಅಕ್ಟೋಬರ್ ೨೦೦೭ರಿಂದ ೨೧ ಅಕ್ಟೋಬರ್ ೨೦೦೭

ಮೊದಲ ಪ್ರದರ್ಶನ : ಜನವರಿ ೧೯೯೯
ಪ್ರದರ್ಶನ ಸ್ಥಳ : ಸುಚಿತ್ರಾ ರಂಗಮಂದಿರ, ಬೆಂಗಳೂರು
ರಂಗ ವಿನ್ಯಾಸ/ ಬೆಳಕು/ ನಿರ್ದೇಶನ : ಬಿ.ಸುರೇಶ
ಪ್ರಸಾಧನ : ನಾಣಿ ಬಹುರೂಪಿ
ಅಭಿನಯಿಸಿದ ಕಲಾವಿದರು :
ಸಿಹಿಕಹಿ ಚಂದ್ರು (ಜಗಳೂರು),
ಸುಧೀಂದ್ರ ಕುಲಕರ್ಣಿ (ಅಪ್ಪಾಜಿ),
ಅಲಕ್‌ನಂದಾ (ರಾಘು)

ದ್ವಿತೀಯ ಪ್ರದರ್ಶನ : ಮಾರ್ಚ್ ೨೦೦೭
ಪ್ರದರ್ಶನ ಸ್ಥಳ : ರಂಗಶಂಕರ, ಬೆಂಗಳೂರು
ವಿನ್ಯಾಸ/ ನಿರ್ದೇಶನ : ಬಿ.ಸುರೇಶ
ಬೆಳಕು ವಿನ್ಯಾಸ : ಕಲಾಗಂಗೋತ್ರಿ ಮಂಜು
ಪ್ರಸಾಧನ : ಮು.ಚಿ.ರಾಮಕೃಷ್ಣ
ಅಭಿನಯಿಸಿದ ಕಲಾವಿದರು :
ಮಂಜುನಾಥ್ ಹೆಗಡೆ (ಜಗಳೂರು),
ಶಂಕರ್ ಬಿಲೆಮನೆ (ಅಪ್ಪಾಜಿ),
ಚೆಸ್ವಾ, (ರಾಘು)

[ರಂಗದ ಮೇಲೆ ಆಧುನಿಕ ಎನಿಸುವ ಮನೆಯೊಂದರ ಕೋಣೆ. ಅದು ಬಹುಮಹಡಿ ಕಟ್ಟಡವೊಂದರಲ್ಲಿರುವ ಮನೆ. ಅಪಾರ್ಟ್‌ಮೆಂಟ್ ಎಂದು ಕರೆಯಬಹುದಾದ ರೀತಿಯಲ್ಲಿದೆ. ಕಟ್ಟಡವು ಸಮುದ್ರವೊಂದರ ಪಕ್ಕದಲ್ಲಿದೆ ಎಂಬುದನ್ನು ಸೂಚಿಸುವಂತೆ ಭೋರ್ಗರೆತ ಕೇಳುತ್ತಿದೆ. ಕೋಣೆಯಲ್ಲಿರುವ ಸಿಂಗಲ್ ಬೆಡ್ ಮಂಚಕ್ಕೆ ಸೊಳ್ಳೆಪರದೆ ಕಟ್ಟಿದೆ. ಕೋಣೆಯಲ್ಲಿರುವ ಎಲ್ಲಾ ವಿವರಗಳು ಶ್ರೀಮಂತಿಕೆಯನ್ನು ಸೂಚಿಸುತ್ತಿವೆ. ಕೋಣೆಯ ಒಂದು ಗೋಡೆಗೆ ಬೃಹತ್ತಾದ ಗಾಂಧಿಯ ಫೋಟೊ ಇದೆ. ಕೋಣೆಯ ಒಂದು ಮೂಲೆಯಲ್ಲಿ ಚರಕವೊಂದಿದೆ, ಪುಟ್ಟ ಸ್ಟೂಲಿನ ಮೇಲೆ. ಕೋಣೆಯೊಳಗೆ ಒಂದೆರಡು ಹೂ ಕುಂಡಗಳನ್ನ ಕಂಚಿನದು ಎನಿಸುವ ಪಾತ್ರೆಗಳಲ್ಲಿ ಇರಿಸಿದೆ. ರಂಗದ ಮತ್ತೊಂದು ಬದಿಗೆ ಒಂದು ಬರೆಯುವ ಟೇಬಲ್ ಇದೆ. ಅದರ ಪಕ್ಕದಲ್ಲಿ ಒಂದು ತಗಡಿನ ಕಸದ ಬುಟ್ಟಿ ಇದೆ. ರಂಗದ ಹಿಂಬದಿಯಲ್ಲಿ ಒಂದು ಪಕ್ಕಕ್ಕೆ ಕಿಟಕಿ ಮತ್ತೊಂದು ಪಕ್ಕಕ್ಕೆ ಕೋಣೆಯ ಬಾಗಿಲು ಕಾಣುತ್ತದೆ.]
[ವೇದಿಕೆಯಲ್ಲಿ ಕಿಟಕಿಯಾಚೆಗಿನ ಲೋಕವನ್ನ ನೋಡುತ್ತಾ ನಿಂತಿರುವ ಅಪ್ಪಾಜಿ ಕಾಣುತ್ತಾರೆ. ಆತನ ಬಲಬದಿಗೆ ವಾಯು ಆಗಿದೆ. ತಲೆಗೂದಲು ಸಂಪೂರ‍್ಣ ಬಿಳಿಯಾಗಿದೆ. ಆತ ಎಡಗಾಲನ್ನು ಎಳೆಯುತ್ತಾ ನಡೆಯುತ್ತಾರೆ. ಅವರ ಕಣ್ಣಿಗೆ ಒಂದು ಗಾಂಧಿ ಶೈಲಿಯ ಕನ್ನಡಕವೂ ಇದೆ. ಆತ ಖಾದಿ ಪಂಚೆ ಮತ್ತು ಒಂದು ಖಾದಿಯ ಒಳಅಂಗಿ ಧರಿಸಿದ್ದಾರೆ. ಆತ ಮಾತನ್ನು ಆರಂಭಿಸುವವರೆಗೆ ಹಿನ್ನೆಲೆಯಲ್ಲಿ ಗಾಂಧಿ ಭಜನ್ “ವೈಷ್ಣವ ಜನತೋ…” ಕೇಳುತ್ತಿದೆ. ಆತ ನಿಧಾನವಾಗಿ ಮಾತಾಡುತ್ತಾರೆ. ಆರಂಭದಲ್ಲಿ ಪ್ರೇಕ್ಷಕರಿಗೆ ಬೆನ್ನಾಗಿಯೇ ನಿಂತು ಮಾತನ್ನು ಆರಂಭಿಸುತ್ತಾರೆ.]
ಅಪ್ಪಾಜಿ : ಉಹ್ಞುಂ…! ಏನೂ ಸರ‍್ಯಾಗಿ ತಿಳಿಯೋದಿಲ್ಲ!.. ಈ ಇಪ್ಪತ್ತೆಂಟನೆ ಮಹಡಿಯ ಜೀವನವೇ ಇಷ್ಟು!… ಇಷ್ಟಕ್ಕೂ ನೋಡೋಕ್ಕಾದ್ರೂ ಇಲ್ಲೇನಿದೆ?… ಭೂಮೀನೇ ನುಂಗೋ ಹಾಗೆ ನುಗ್ಗೋ ಆ ಸಮುದ್ರದ ಅಲೆಗಳು ಅಂಚಿನಲ್ಲಿರೋ ಬಂಡೆಗಳಿಗೆ ಬಡಿದು ನಿಟ್ಟುಸಿರು ಬಿಡೋದನ್ನ ಬಿಟ್ಟರೆ, ಇಲ್ಲಿ ನೋಡೋಕ್ಕೆ ಬೇರೇನೂ ಇಲ್ಲ! ಅದನ್ನಾದರೂ ಎಷ್ಟು ದಿನ ನೋಡೋದು? (ನಡೆದು ಚರಕದ ದಿಕ್ಕಿಗೆ ಬರುತ್ತಾನೆ.) ಇಲ್ಲ…! ನನಗೆ ಬೇರೆ ದಾರೀನೇ ಇಲ್ಲ…! ಇರೋ ಒಬ್ಬ ಮಗನ ಮನೆ ಬಿಟ್ಟು, ಈ ವಯಸ್ನಲ್ಲಿ ನಾನಾದ್ರೂ ಇನ್ನೆಲ್ಲಿಗ್ ಹೋಗ್ಲಿ?… (ನಿಟ್ಟುಸಿರು) ಮುದಿ ಅಪ್ಪಂದ್ರು – ಅಮ್ಮಂದ್ರನ್ನ ಮನೇಲ್ಲಿಟ್ಕೊಳೊ ಮಕ್ಕಳ ಸಂಖ್ಯೇನೆ ಕಡಿಮೆ ಆಗ್ತಾ ಇದ್ಯಂತೆ… ಇನ್ನು ಆ ಮಾತಿಗೆ ಅಪವಾದ ಅನ್ನೋ ಹಾಗೆ ನನ್ನನ್ನ ಇಂಥಾದ್ದೊಂದು ಮನೇಲ್ಲಿಟ್ಟು, ಎರಡು ಹೊತ್ತು ಊಟ ಹಾಕ್ತಾ ಇರೋ ಮಗನ್ನ ಬಿಟ್ಟು, ನಾನೆಲ್ಲಿಗ್ ಹೋಗ್ಲಿ?… ಇಲ್ಲ! ಕಾಲ ಬದಲಾಗಿದೆ, ಪೂರಾ ಬದ್ಲಾಗಿದೆ!… (ಚರಕವನ್ನ ತಿರುವುತ್ತಾ ಅದರ ಮೇಲಿನ ಧೂಳು ಕೊಡವುತ್ತಾನೆ. ಹೆಗಲ ಮೇಲಿರುವ ವಸ್ತ್ರದಿಂದಲೇ ಅದನ್ನ ಒರೆಸುತ್ತಾನೆ.) ನನಗೂ ಒಂದ್ಕಾಲದಲ್ಲಿ ಅನ್ನಸ್ತಾ ಇತ್ತು… ಅಪ್ಪಾಜಿ ಅಂತ ನನಗೂ ಒಂದು ಮಹತ್ವ ಸಿಗಬಹುದು ಅನ್ನಸ್ತಾ ಇತ್ತು!… ಗಾಂಧೀಜಿ ಜೊತೆ ಇದ್ದೋನು! ಸ್ವಾತಂತ್ರ್ಯ ಹೋರಾಟದಲ್ಲಿ ಹತ್ತು ವರ‍್ಷ ದುಡಿದೋನು! ಜೈಲು ಕಂಡೋನು!… ಈ ಎಲ್ಲಾ ಸಂಗತಿಗಳಿಗೆ ಇವತ್ತಲ್ಲ – ನಾಳೆ ಬೆಲೆ ಬರತ್ತೆ ಅಂತ ಅನ್ನಸ್ತಾ ಇತ್ತು!… ಆದರೆ… ನಾವು ತಂದುಕೊಟ್ಟ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲ ಅನ್ನೋದು ಈಗ ಗೊತ್ತಾಗ್ತಾ ಇದೆ… ಅದು ಬರೀ ಪೋಸ್ಟಲ್ ಡಿಪಾರ‍್ಟ್‌ಮೆಂಟ್‌ನೋರು ತರೋ ಸ್ಟಾಂಪಿನ ಮೇಲೆ ಲೆಕ್ಕ ಇಡೋಕ್ಕೆ ಮಾಡಿದ ಚಳವಳಿ ಅನ್ನಸ್ತಾ ಇದೆ… ಈಗ ಎಲ್ಲಾ ಬದಲಾಗಿದೆ, ಪೂರಾ ಬದ್ಲಾಗಿದೆ… ಸ್ವಾತಂತ್ರ್ಯದ ಅರ‍್ಥವೇ ಬದ್ಲಾಗಿದೆ… ನಮ್ಮ ಕಾಲದ ಯಾವ ಮೌಲ್ಯಕ್ಕೂ ಈಗ ಅರ‍್ಥ ಉಳ್ದೇ ಇಲ್ಲ… ಉಹ್ಞುಂ… ಯಾವುದಕ್ಕೂ ಅರ‍್ಥ ಉಳ್ದಿಲ್ಲ…
[ಆಗಲೇ ಹೊರಗೆ ಕಾಲಿಂಗ್ ಬೆಲ್ ಸದ್ದು ಕೇಳುತ್ತದೆ. ಅಪ್ಪಾಜಿ ಚರಕ ಬಿಟ್ಟು ಧ್ವನಿ ಬಂದ ಕಡೆಗೆ ನೋಡುತ್ತಾರೆ. ಯಾರೋ ಕೋಣೆಯೊಳಗೆ ಬರಬಹುದು ಎಂದು ನೋಡುತ್ತಾ ಇರುವ ಅಪ್ಪಾಜಿಗೆ ಕಾತರವಿದೆ. ಈವರೆಗೆ ಇದ್ದ ವಿಶ್ರಾಂತ ಸ್ಥಿತಿಯಿಲ್ಲ. ಯಾರನ್ನೋ ನಿರೀಕ್ಷಿಸುವಂತೆ ಅಪ್ಪಾಜಿ ಬಾಗಿಲಿನತ್ತ ನೋಡುತ್ತಾ ಇದ್ದಾರೆ.
ಹೊರಗೆ ಬಾಗಿಲು ತೆಗೆದ ಸದ್ದು ಮತ್ತು ಯಾರೋ ಒಳಗೆ ಬಂದ ಸದ್ದು ಕೇಳುತ್ತದೆ. ಬಂದವರೊಂದಿಗೆ ಮಾತಾಡುವ ರಾಘುವಿನ ಮಾತು ಕೇಳುತ್ತದೆ. (ರಂಗದ ಹಿನ್ನೆಲೆಯಲ್ಲಿ ರಾಘುವಿನ ಮಾತಿಗಾಗಿ ಒಂದು ಕಿಟಕಿಯನ್ನು ಬಳಸಬಹುದು.)]
ರಾಘು : (ಆತ ಯಾರಿಗೋ ಇನ್‌ಸ್ಟ್ರಕ್ಷನ್ ಕೊಡುತ್ತಾ ಇದ್ದಾನೆ) ಶಂಕ್ರ… ಇವತ್ತು ರಾತ್ರಿ ಒಂದ್ ಹತ್ತು ಜನಕ್ಕೆ ಆಗೋಷ್ಟು ಅಡಿಗೆ ಮಾಡು… ಖಾರದ್ದೂ ಇರಲಿ… ಅಪ್ಪನಿಗೆ ಆ ವಾಸನೆ ಆಗಲ್ಲ… ಬಾಲ್ಕನೀಲ್ಲಿ ಕೂತು ಕೋಳಿ ಕತ್ತರ‍್ಸು… ಆಯ್ತಾ?… (ನೆನಪಾದಂತೆ) ಆಮೇಲೆ ಆ ಕಾಕಾನ ಅಂಗಡೀಲ್ಲಿ ಎರಡು ಕ್ರೇಟ್ ಸೋಡಾಗ್ ಹೇಳಿದೀನಿ… ತಂದ್ ಇಟ್‌ಬಿಡು… ನಾನು ಇನ್ನೊಂದರ‍್ಧ ಗಂಟೇಲ್ಲಿ ಬಂದ್‌ಬಿಡ್ತೀನಿ…
[ರಾಘು ಹೊರಟದ್ದು, ಬಾಗಿಲು ಮುಚ್ಚಿದ್ದು ಕೇಳುತ್ತದೆ. ಅಪ್ಪಾಜಿ ಮತ್ತೆ ನಿರಾಳರಾಗುತ್ತಾರೆ. ಮತ್ತೆ ಮಾತು ಆರಂಭಿಸುತ್ತಾರೆ, ಸ್ವಗತದಂತೆ]
ಅಪ್ಪಾಜಿ : ಈ ಮಸಾಲೆಗಳ ವಾಸನೆ ಬಂತೂಂದ್ರೆ ನನ್ನ ತಲೇಲ್ಲಿ ಹುಳಾ ತುಂಬ್ಕೊಳತ್ತೆ. ಆ ವಾಸ್ನೆ ಹಿಂದೇನೇ ಪಾರ‍್ಟಿ… ಪಾರ‍್ಟಿ ವಾಸನೇಗ್ ಬರೋ ಜನ. ಜೊತೇಲ್ಲಿ ಅವರ ಹೆಂಡತೀರೋ ಅಥವಾ ಬೇರ‍್ಯೋರ ಹೆಂಡತೀರೋ ಅನ್ನೋದೂ ಗೊತ್ತಾಗ್ದೆ ಇರೋಷ್ಟು ಮೇಕಪ್ ಮಾಡ್ಕೊಂಡ ಹೆಂಗಸರು… ಛೇ!ಛೇ! ಅವರನ್ನ ಮನುಷ್ಯರು ಅಂದ್ರೆ ತಪ್ಪಾಗತ್ತೆ! ಪ್ರಾಣಿಗಳು ಅನ್ನೋದೇ ವಾಸಿ!… ಅವರನ್ನ ನೋಡ್‌ದ್ರೆ ಬಕಿಂಗ್‌ಹ್ಯಾಮ್ ಪ್ಯಾಲೆಸ್‌ನಿಂದಾನೇ ಇಳಿದು ಬಂದವರು ಅನ್ನಸ್ಬೇಕು! ಹಾಗಿರ‍್ತಾರೆ. …ಆ ಊಟ, ಆ ಕುಡಿತ, ಆ ಮಾತು, ಆ ನಗು! …ಇದನ್ನೆಲ್ಲಾ ಕೇಳ್ದಾಗ ನನ್ನ ತಲೆ ಕೆಟ್ಟು ಮೊಸರು ಗಡಿಗೆ ಆಗತ್ತೆ…. ಗಾಂಧೀಜಿ ಅವರ ಜೊತೆ ಅಷ್ಟು ಕಾಲ ಇದ್ದೂ, ಅವರ ಸಿದ್ಧಾಂತದ ಹಾಗೇ ಇಷ್ಟೂ ಕಾಲ ಬದುಕಿದ್ದರೂ… ಈ ಪಾರ‍್ಟೀಗ್ ಬರೋ ಜನರನ್ನ ನೋಡ್ದಾಗ… ಅವರನ್ನೆತ್ತಿ ಕಿಟಕಿಯಿಂದಾಚೇಗೆ… ಆ ಅರಬ್ಬೀ ಸಮುದ್ರಕ್ಕೆ ಎಸೆದುಬಿಡ್ಬೇಕು ಅನ್ಸತ್ತೆ. ಅಷ್ಟು ಕೋಪ ಸರಿ ಅಲ್ವೇನೋ… ಆದರೂ ಒಂದೊಂದ್ ಸಲ ಇಂಥಾ ಹಿಂಸೆಯಿಂದಾದ್ರೂ ಶಾಂತಿ ಸಿಗ್ಬೋದೇನೋ ಅನ್ಸತ್ತೆ. (ಮತ್ತೆ ಚರಕ ಒರೆಸುತ್ತಾ, ಖಾಲಿ ಚರಕವನ್ನು ತಿರುವುತ್ತಾರೆ. ಹಿನ್ನೆಲೆಯಲ್ಲಿ “ವೈಷ್ಣವ ಜನತೋ…” ಕೇಳುತ್ತದೆ. ಕೆಲಕ್ಷಣದ ನಂತರ) ಈ ನಮ್ಮ ರಾಘೂ ವ್ಯವಹಾರಗಳ್ಯಾವ್ದೂ ನಾನು ತಿಳ್ಕೊಂಡಿರೋಷ್ಟು ಸರಳವಾಗಿಲ್ಲ… ಅವನದ್ದು ಬೇರೆ ಬೇರೆ ಹೆಸರಿನ ಐದಾರು ಕಂಪೆನಿಗಳಿದೆ… ಇನ್ನೂ ಜಾಸ್ತೀನೆ ಇರ‍್ಬೋದೋ ಏನೋ?… ಆದರೆ ಅವನು ಆಗಾಗ ಪಾರ‍್ಟಿ ಕೊಡ್ತಾ ಇರ‍್ತಾನೆ. ವ್ಯಾಪಾರ ಶುರು ಮಾಡಿದ್ದಕ್ಕೆ, ವ್ಯಾಪಾರ ಮುಗ್‌ದಿದ್ದಕ್ಕೆ, ಆಗದೆ ಹೋಗಿದ್ದಕ್ಕೆ… ಹೀಗೇ ಏನೆಲ್ಲಾ ಕಾರಣ ಇದೆ ಗೊತ್ತಾ ಅವನ ಪಾರ‍್ಟೀಗೆ?…ಅವನನ್ನೇ ಕೇಳಿದ್ರೆ “ಇನ್ ದ ನೇಮ್ ಆಫ್ ಬಿಸಿನೆಸ್ ಪಪ್ಪಾ!” ಅಂತ ಅಂಗ್ರೇಜಿನಲ್ಲಿ ಹೇಳ್‌ಬಿಡ್ತಾನೆ. (ಕೊಂಚ ಅಸಹನೆಯ ಜೊತೆಗೆ) ಛೇ! ಇಂಥಾ ಮಗನ ಜೊತೆ ಬದುಕೋದಕ್ಕಿಂತ ಆತ್ಮಹತ್ಯೆ ಒಳ್ಳೇದೇನೋ? ಆದರೆ… ನನ್ನದಲ್ಲದ ದೇಹವನ್ನ ತ್ಯಜಿಸೋ ಹಕ್ಕು ನನಗಿಲ್ಲ ಅಂತ ಮಹಾತ್ಮರು ಹೇಳಿದಾರೆ.  …ಹ್ಞೂಂ!…  ಹೇಗೋ ಕಾಲ ಹಾಕ್ಬೇಕು, ಉಸಿರಿರೋವರ‍್ಗೆ!
[ಮತ್ತೆ ಕಾಲಿಂಗ್ ಬೆಲ್ಲಿನ ಸದ್ದಾಗುತ್ತದೆ. ಅಪ್ಪಾಜಿ ಚರಕ ಬಿಟ್ಟು ಹೊರಗಿನ ಮಾತು ಆಲಿಸುವವರಂತೆ ಮಂಚದ ಮೇಲೆ ಹೋಗಿ ಕೂಡುತ್ತಾರೆ. ಎದುರಿಗೆ ಓದಲೆಂಬಂತೆ ಭಗವದ್ಗೀತೆಯನ್ನು ತೆರೆದಿಟ್ಟುಕೊಳ್ಳುತ್ತಾರೆ.
ಹೊರಗೆ ಬಾಗಿಲು ತೆರೆದ ಸದ್ದು. ಯಾರೋ ಬಂದರೆಂಬಂತೆ ಮಾತುಗಳು. ಅಪ್ಪಾಜಿ ಹೊರಗಿನ ದಿಕ್ಕಿಗೇ ನೋಡುತ್ತಾರೆ.]
ರಾಘೂ : (ಧ್ವನಿ) ಓಹೋ! ಕಮಿನ್, ಕಮಿನ್ ಮಿಸ್ಟರ್ ಅಂಡ್ ಮಿಸೆಸ್ ಕುಲಕರ‍್ಣಿ! ಕಮಿನ್!…. ಓಹೋಹೋ! ಮಿ.ಅಂಡ್ ಮಿಸೆಸ್ ಗುಪ್ತಾ, ಐ ಯಾಮ್ ಹ್ಯಾಪಿ! ಐ ಯಾಮ್ ರಿಯಲಿ ಹ್ಯಾಪಿ ದಟ್ ಯುವ್ ಕುಡ್ ಮೇಕ್ ಇಟ್!… (ಕೃತಕ ನಗುಗಳು ಕೇಳುತ್ತವೆ) ವಾಟ್ ವಿಲ್ ಯೂವ್ ಹ್ಯಾವ್? ವಿಸ್ಕಿ, ಸ್ಕಾಚ್?… ಓ! ಯೆಸ್! ವಿತ್ ಆರ್ ವಿಥೌಟ್ ಐಸ್? (ಮತ್ತೆ ಕೃತಕ ನಗು)
ಅಪ್ಪಾಜಿ : (ಮತ್ತೆ ಪ್ರೇಕ್ಷಕರ ದಿಕ್ಕಿಗೆ ನೋಡುತ್ತಾ ಮಾತು ಮುಂದುವರೆಸುತ್ತಾರೆ) ಆ ನಗು ಕೇಳ್‌ಸ್ತಾ? ಅದು ಹೊಟ್ಟೆಯಿಂದ ಬಂದದ್ದೇ ಅಲ್ಲ… ಇಲ್ಲೇ, ಗಂಟಲಿಂದ… ಎಂಜಲು ಹಾರಿದ್ಹಾಗೆ!… ಥತ್! (ಬಾಗಿಲತ್ತ ನೋಡಿ) ಇನ್ನು ಸ್ವಲ್ಪ ಹೊತ್ತಿಗೆ ರಾಘು ನನ್ನ ವಿಷಯ ಶುರು ಮಾಡ್ತಾನೆ, ಹ್ಞೂಂ!
ರಾಘು : (ಧ್ವನಿ) ಯೂವ್ ನೋ, ಮೈ ಫಾದರ್ ವಾಸ್ ಎ ಫ್ರೀಡಮ್ ಫೈಟರ್… ಹಿ ಪಾರ‍್ಟಿಸಿಪೇಟಡ್ ಇನ್ ಆಲ್ ದ ಸ್ಟ್ರಗಲ್ಸ್ ಫಾರ್ ಫ್ರೀಡಮ್! ಹಿ ವಾಸ್ ಆಲ್ಸೋ ಜೈಲ್ಡ್ ಫಾರ್ ಎ ಲಾಂಗ್ ಟೈಂ, ಯೂವ್ ಸೀ… ಅವರು ಗಾಂಧೀಜಿ ಜೊತೇಲ್ಲೇ ಇದ್ದರಂತೆ!… ಈಗಲೂ ಚರಕ ತಿರುಗ್ಸಿ ನೂಲು ತೆಗೀತಾರೆ! ಉಪವಾಸ ಕೂಡ ಮಾಡ್ತಾರೆ, ಯೂವ್ ನೋ!
ಅಪ್ಪಾಜಿ : (ತಟ್ಟನೆ ಪ್ರೇಕ್ಷಕರಿಗೆ) ಅದಕ್ಕೆ ಆ ಅವರು, ಆ ಪಾರ‍್ಟೀಗ್ ಬಂದಿರೋ ಜನ! ಊರಗಲ ಬಾಯಿ ತೆಗೆದು, ” ಹ್ಞಾಂ! ಇಸ್ ಇಟ್?” ಅಂತಾರೆ… ಸುಳ್ಳ್ ಸುಳ್ಳೇ ಗೌರವ ಆದರ ತೋರ್‌ಸ್ತಾರೆ!… ನಾನೇ ಏನಾದ್ರೂ ಅವರ ಎದುರ‍್ಗೆ ಇದ್ದಿದ್ದ್ರೆ, ನನ್ನನ್ನ ವಿಚಿತ್ರ ಪ್ರಾಣೀನ ನೋಡೋ ಹಾಗೆ ನೋಡ್ತಿದ್ದ್ರು… ಅದಕ್ಕೇ, ನಾನಲ್ಲೀಗ್ ಹೋಗೋದೇ ಇಲ್ಲ… ಈ ಪಾರ‍್ಟೀಗಳು ಅಂದ್ರೆ ನನಗ್ ಅಸಹ್ಯ! ಥೂ!… (ಮತ್ತೆ ಬಾಗಿಲತ್ತ ನೋಡಿ) ಆ ಗದ್ದಲ ಕೇಳಿ! ಗಲಾಟೇಲ್ಲಿ ಇವರು ಪಾಶ್ಚಾತ್ಯ ಸಂಗೀತಾನ ಮೀರ್‌ಸ್ತಾರೆ.
[ಹೊರಗೆ ಗದ್ದಲ ಮತ್ತು ಜೋರು ಜೋರಾದ ಮಾತಿನ ಜೊತೆಗೆ ಗದ್ದಲದ ಸಂಗೀತ ಸಹ ಕೇಳುತ್ತದೆ]
ಅಪ್ಪಾಜಿ : (ಪ್ರೇಕ್ಷಕರತ್ತ ತಿರುಗಿ ಗುಟ್ಟು ಹೇಳುವವರಂತೆ) ಈ ಪಾರ‍್ಟಿ ಆದ್‌ಮೇಲೆ ನಮ್ಮ ರಾಘು ಅವರ‍್ಗೆಲ್ಲಾ ಉಡುಗೊರೆ ಕಳಿಸಿಕೊಡ್ತಾನೆ. …ಟಿ.ವಿ., ಟೇಪ್‌ರೆಕಾರ‍್ಡರ್, ವಿದೇಶಿ ಮದ್ಯ! ಇನ್ನೂ ಏನೇನೋ!… ಈ ಪಾರ‍್ಟೀಗಲ್ಲದೆ ಇದ್ದರೂ ರಾಘು ಕೊಡೊ ಉಡುಗೊರೆಗೆ ಬೆಲೆ ಇದ್ಯಲ್ಲಾ?… ಆ ಜನ ಇವನಿಗೆ ಲೈಸನ್ಸ್ ಕೊಡುಸ್ತಾರೆ… ಮತ್ತೆ ಹೊಸಾದೊಂದು ಪ್ರಾಜೆಕ್ಟ್ ಶುರು ಆಗತ್ತೆ! ಅಲ್ಲಿಗೆ ಪಾಪಗಳೆಲ್ಲಾ ಪಚನ ಆಗ್‌ಹೋಗತ್ತೆ… (ಮತ್ತೆ ಚರಕ ಸುತ್ತಲು ಕೂರುತ್ತಾ) ಉಹ್ಞುಂ… ಈಗ ಯಾವುದಕ್ಕೂ ಅರ‍್ಥ ಉಳ್‌ದಿಲ್ಲ… ಸಂಬಂಧಗಳೇ ವ್ಯಾಪಾರ ಆಗೋ ಸ್ಥಿತಿ ಬಂದ್‌ಬಿಟ್ಟಿದೆ… ಒಟ್ಟ್‌ನಲ್ಲಿ ಹೇಳ್ಬೇಕೂಂದ್ರೆ, ಕಾಲ ಪೂರ, ಪೂರಾ ಬದಲಾಗಿದೆ.
[ಹೊರಗಿನ ಗದ್ದಲ ಹೆಚ್ಚಾಗುತ್ತದೆ. ಅಪ್ಪಾಜಿ ಆ ಗದ್ದಲ ಮರೆಯಲೆಂಬಂತೆ ದೊಡ್ಡದನಿಯಲ್ಲಿ ಭಗವದ್ಗೀತೆಯನ್ನು ಓದುತ್ತಾರೆ. ಗದ್ದಲದ ಸದ್ದನ್ನು ಮೀರಿಸುವಂತೆ ಧ್ವನಿ ಏರಿಸುತ್ತಾರೆ. ಅವರ ಓದಿನ ರಾಗಕ್ಕೆ ತಕ್ಕಂತೆ ಮೈದೂಗುತ್ತಾರೆ. ಗೀತೆಯ ಸಾಲುಗಳು ಕಂಠಸ್ಥವಾಗಿದೆ ಎಂಬಂತೆ ಓದುತ್ತಲೇ ಹೊರಕೋಣೆಯತ್ತ ನೋಡುತ್ತಾರೆ.
ಹೊರಗಿನ ಗದ್ದಲ ಈಗ ಚೀರಾಟದ ಹಂತ ತಲುಪಿದೆ. ಅಲ್ಲಿ ಯಾವುದೋ ವಿಷಯಕ್ಕೆ ಭಾರೀ ಜಗಳ ಆಗುತ್ತಾ ಇರುವಂತಿದೆ. “ಇದೆಲ್ಲಾ ಆಗಿದ್ದು ನಿಮ್ಮಿಂದಾರೀ!”, “ನಾನೇನಯ್ಯ ಮಾಡ್ದೆ?”, “ನೋಡಿ ಈ ಸಿಂಗ್ಯುಲರ್ ಎಲ್ಲಾ ಸರಿ ಬರೋದಿಲ್ಲ, ಮರ‍್ಯಾದೆ, ಮರ‍್ಯಾದೆ ಕೊಟ್ಟು ಮಾತಾಡಿ.” “ಮರ‍್ಯಾದೆ ಇರೋರ‍್ಗೆ ಕೊಡ್ಬೋದು, ಅದೇ ಇಲ್ಲದೋರ‍್ಗೆ ಏನ್ರೀ ಕೊಡೋದು?” “ಯೂವ್ ಬಾಸ್ಟರ‍್ಡ್!” “ಯೂವ್ ಸನ್ ಆಫ್ ಎ ಬಿಚ್!” ಗದ್ದಲದ ನಡುವೆ ಮಾತುಗಳು ಕಲಸಿಕೊಳ್ಳುತ್ತವೆ.]
ಅಪ್ಪಾಜಿ : (ಪ್ರೇಕ್ಷಕರತ್ತ ತಿರುಗಿ, ಹುಸಿನಗೆಯೊಂದಿಗೆ ಮಾತನ್ನಾರಂಭಿಸುತ್ತಾರೆ) ನಗುವಿನಿಂದ ಆರಂಭ ಆಗಿದ್ದು ಅಂತ್ಯ ಆಗೋದು ಇಲ್ಲೇ!… ಜಟಾಪಟೀನೇ ಶುರು ಆಗಿರತ್ತೆ. ಯಾವುದಕ್ಕೆ ಗೊತ್ತಾ?… ಯಾವುದೋ ಊರಲ್ಲಿ ಆಗಿರೋ ರೇಸ್ಗೆ, ಅದರಲ್ಲಿ ಗೆಲ್ಲೋ ಕುದುರೇಗೆ! ಹಾಗೆ ಓಡೋ ಕುದುರೇಗೂ ಈ ಪಾರ‍್ಟೀಲ್ಲಿ ಕಿತ್ತಾಡ್ತಾ ಇರೋರ‍್ಗೂ ತುಂಬಾ ವ್ಯತ್ಯಾಸ ಏನೂ ಇಲ್ಲ! ಎಲ್ಲಾರ‍್ಗೂ ಒಂದೇ ಸಲ ಗುರಿ ಮುಟ್ಟಿ ಕಿರೀಟ ತೊಡ್‌ಸ್ಕೊಳೊ ಆಸೆ! … ಆದರೆ, ಅವರ‍್ಯಾರ‍್ಗೂ ಗುರಿ ಯಾವುದು ಅಂತಾನೇ ಗೊತ್ತಿಲ್ಲ, ಪಾಪ!
[ಆ ಹೊತ್ತಿಗೆ ಯಾರೋ ಕೋಣೆಯ ಬಾಗಿಲು ತಟ್ಟಿದ ಸದ್ದು ಕೇಳುತ್ತದೆ. ಅಪ್ಪಾಜಿ ತಟ್ಟನೆ ಮೊದಲಿನಂತೆಯೇ ಗೀತೆ ಓದಲಾರಂಭಿಸುತ್ತಾರೆ. ಕೋಣೆಯ ಬಾಗಿಲು ದೂಡಿಕೊಂಡು ಸೂಟು ಧರಿಸಿದ ನಲ್ವತ್ತರ ಹರೆಯದ ಟಿ.ಸಿ.ಜಗಳೂರು ಉರುಫ್ ತಿಪ್ಪೇಸ್ವಾಮಿ ಚೌಡಪ್ಪ ಜಗಳೂರು ಪ್ರವೇಶಿಸುತ್ತಾನೆ. ಆತನ ಚಿನ್ನದ ಫ್ರೇಮಿನ ಕನ್ನಡಕಕ್ಕೆ ಚೈನು ಇದೆ. ಆ ಕನ್ನಡಕ ಎದೆಯ ಮೇಲೆ ತೂಗುತ್ತಿದೆ. ಆತನ ಕೈಯಲ್ಲಿ ಗುಂಡಿನ ಫ್ಲಾಸ್ಕ್ ಇದೆ. ಆತ ತನಗೆ ಯಾವುದೇ ರೀತಿಯಲ್ಲೂ ಹೊಂದದ ಡ್ರೆಸ್ಸಿನಲ್ಲಿ ಇದ್ದಾನೆ ಎಂಬುದು ಸ್ಪಷ್ಟ. ಆತನ ಮೈ ಬಣ್ಣ ಆತ ದಲಿತ ಎಂಬುದನ್ನು ಸೂಚಿಸುತ್ತಿದೆ.
ಜಗಳೂರು ಬಂದುದನ್ನ ಗಮನಿಸದೆ ಗೀತ ಪಠಣ ಮಾಡುತ್ತಾ ಇರುವ ಅಪ್ಪಾಜಿ. ಜಗಳೂರು ಅಪ್ಪಾಜಿಯ ಬೆನ್ನ ಹಿಂದೆ ಬಂದು ನಿಲ್ಲುತ್ತಾನೆ. ಅಪ್ಪಾಜಿ ಓದುತ್ತಾ ಇರುವ ಸಂಸ್ಕೃತವನ್ನು ತಾನೂ ಓದಲು ಪ್ರಯತ್ನಿಸುತ್ತಾನೆ.]
ಅಪ್ಪಾಜಿ : ಚಾತುರ್‌ವರ‍್ಣ್ಯಂ ಮಯಾ ಸೃಷ್ಟ್ಯಂ ಗುಣಕರ‍್ಮವಿಭಾಗಶಃ| ತಸ್ಯ ಕರ‍್ತಾರಮಪಿ ಮಾಂ ವಿದ್ಧ್ಯಕರ‍್ತಾರಮವ್ಯಯಮ್|| (ಅಧ್ಯಾಯ ೪/ ಶ್ಲೋಕ ೧೩)
ಜಗಳೂರ್ : (ಸಂಸ್ಕೃತ ಬಾರದವನಂತೆ) ಚತುರ…. ವರ‍್ಣ್ಯಂ… ಮಾಯಾ… ಸೃಷ್ಟ್ಯಂ…
ಅಪ್ಪಾಜಿ : ಅರರೆ! ಮಿಸ್ಟರ್ ಟಿ.ಸಿ. ಜಗಳೂರ್! ನೀವು ಬಂದ್ರಾ? ನಾನು ರಾಘು ಅಂದ್ಕೊಂಡೆ… ನೀವೂ ಕೂಡ ಗೀತೆ ಓದ್ತೀರೇನು?
ಜಗಳೂರ್ : ಓದೋ ಪ್ರಯತ್ನ ಅಷ್ಟೆ… ಹ್ಹೆಹ್ಹೆ… ಆ ಭಾಷೆ ನಮ್ಮ ನಾಲ್ಗೇಗ್ ಒಗ್ಗೋದಿಲ್ಲ. ಹೆಹ್ಹೆಹ್ಹೆ (ಕೃತಕವಾಗಿ ನಗ್ತಾನೆ)
ಅಪ್ಪಾಜಿ : ಕಂಪೆನಿ ಸೆಕ್ರೆಟರಿಗೆ ಸಂಸ್ಕೃತ ಬೇಕಾಗೋದೂ ಇಲ್ಲ ಬಿಡಿ. ಕೂತ್ಕೊಳಿ! (ತನ್ನ ಮಂಚದ ಮೇಲೇ ಕೂರಲು ಸೂಚಿಸುತ್ತಾನೆ) ಅದೇನು? ಪಾರ‍್ಟಿ ಬಿಟ್ಟು ಇಲ್ಲೀಗ್ ಬಂದ್ರಿ?
ಜಗಳೂರ್ : (ಅವರು ತೋರಿಸಿದಲ್ಲಿ ಕೂರದೆ ಅತ್ತಿತ್ತ ಕೂರಲು ಜಾಗ ನೋಡುತ್ತಾ) ಆ ಗಲಾಟೆ ನನಗಾಗಲ್ಲ ಅಪ್ಪಾಜಿ?
ಅಪ್ಪಾಜಿ : (ಬಾಗಿಲತ್ತ ನೋಡಿ) ಈಗ ಗಲಾಟೆ ಆಗ್ತಾ ಇರೋದ್ ಯಾವುದಕ್ಕೆ?
ಜಗಳೂರ್ : ಜನಶಕ್ತಿ ಸೊಸೈಟಿಯ ಪ್ರಪೋಸಲ್ ದಡ ಸೇರಿದ್ದಕ್ಕೆ! ಹಹ್ಹ… (ಎನ್ನುತ್ತಾ ಏನೋ ಹುಡುಕ್ತಾನೆ)
ಅಪ್ಪಾಜಿ : ದಡ ಸೇರ್‌ದ್ಮೇಲೆ ಗಲಾಟೆ ಯಾಕೇಂತ?
ಜಗಳೂರ್ : ಕೆಲಸ ಮಾಡಿದ್ದು ಯಾರು ಅನ್ನೋ ಕ್ರೆಡಿಟ್ ಬೇಡ್ವಾ ಅಪ್ಪಾಜಿ. (ಇನ್ನೂ ಹುಡುಕುತ್ತಾ) ಈಗ ನಿಮ್ಮ ಮಗ ರಾಘವೇಂದ್ರ ಪಾರ‍್ಟಿ ಕೊಡ್ತಾ ಇದಾರೆ… ಬಂದಿರೋರು – “ತಾವು ಈ ಪ್ರಪೋಸಲ್ ಓಕೆ ಮಾಡ್ಸೋಕ್ಕೆ ಏನೇನ್ ಕಷ್ಟ ಪಟ್ಟ್‌ವಿ” ಅಂತ ಒಬ್ಬರ ಮೇಲ್ ಒಬ್ಬರು ರೇಗಾಡ್ಕೊಂಡ್ ಮಾತಾಡ್ತಾರೆ. ನಾಳೆ ಆ ಬೋಲಾರಾಮ್ ಗೋಲ್‌ವಾಳ್ಕರ್ ಪಾರ‍್ಟಿ ಕೊಟ್ಟರೆ, ಅಲ್ಲಿ ಈ ಪ್ರಪೋಸಲ್‌ನ ತಡ್ಯೋಕ್ಕೆ ಏನೇನ್ ಕಷ್ಟ ಪಟ್ಟ್‌ವಿ ಅಂತ ಇದೇ ಜನ ಮಾತಾಡ್ತಾರೆ… ಹ್ಹೆಹ್ಹೆ! ಅಪ್ಪಾಜಿ, ಅಲ್ಲಿರೋರೆಲ್ಲಾ ಬಾಯಿಹರುಕ್ರು! (ನಗು)
ಅಪ್ಪಾಜಿ : ಇದೆಲ್ಲಾ ರಾಘೂಗೆ ಗೊತ್ತಾಗಲ್ವಾ?
ಜಗಳೂರ್ : ಗೊತ್ತಾಗ್ದೆ ಏನು? ಚೆನ್ನಾಗ್ ಗೊತ್ತಿರತ್ತೆ. ಆದರೂ ಪಾರ‍್ಟಿ ಕೊಡ್ತಾರೆ. ಬಂದವರಿಗೆ ಕೈ ತುಂಬಾ ಪ್ರೆಸೆಂಟೇಷನ್ ಕೊಡ್ತಾರೆ… ಹಹ್ಹಹ್ಹ! (ಇನ್ನೂ ಹುಡುಕುತ್ತಾ)
ಅಪ್ಪಾಜಿ : (ಕುತೂಹಲದಿಂದ ನೆನಪಿಸಿಕೊಳ್ಳುತ್ತಾ) ಈ ಜನಶಕ್ತಿ ವಾದಿರಾಜ್ ಅವರದ್ದಲ್ವಾ?
ಜಗಳೂರ್ : ಹ್ಞೂಂ… ಅವರದ್ದೇ!… ಹೆಸರಿಗೆ ಅವರ ಚಿಕ್ಕಪ್ಪ ಏಕನಾಥ್‌ರಾವ್ ಛೇರ‍್ಮನ್ ಆಗಿದಾರೆ, ಅಷ್ಟೆ. (ಇನ್ನೂ ಹುಡುಕ್ತಾ)
ಅಪ್ಪಾಜಿ : ಅಂತೂ ಒಳ್ಳೇ ಕೆಲಸಕ್ಕೆ ಅಂತ ಆರಂಭ ಆಗಿದ್ದೆಲ್ಲಾ ಈಗ ಕೆಲವರ ಸ್ವತ್ತಾಗ್ ಬಿಟ್ಟಿದೆ. ಛೇ! ಇಂಥಾ ವಿಷಯಗಳು ನಮ್ಮಂಥೋರ ಕಿವೀಗ್ ಬೀಳ್‌ಬಾರ‍್ದು!
ಜಗಳೂರ್ : (ಹುಡುಕುವುದನ್ನ ನಿಲ್ಲಿಸಿ, ನಗ್ತಾ) ಬೇಡ ಅಂದರೂ ಕಿವೀಗ್ ಬಂದು ಅಪ್ಪಳ್ಸೋದೇ ಇದು ಅಪ್ಪಾಜಿ… ಹ್ಹೆಹ್ಹೆಹ್ಹೆ… ಆ ಕುಲಕರ‍್ಣಿ ಅಂತೂ ವಾಂತೀನೇ ಮಾಡ್‌ಬಿಟ್ಟ…
ಅಪ್ಪಾಜಿ : ಕುಲಕರ‍್ಣಿ ಯಾರು?
ಜಗಳೂರ್ : ಫೈನಾನ್ಸ್ ಡಿಪಾರ‍್ಟ್‌ಮೆಂಟ್‌ನೋನು!… (ನಗ್ತಾ)
ಅಪ್ಪಾಜಿ : ಛೇ! ಈ ಜನ ಕೈಲಾಗದೆ ಇದ್ದರೂ ಕುಡ್ಯೋದು ಯಾಕೇಂತ?
ಜಗಳೂರ್ : ಅದು ಪ್ರಜ್ಞೇಗ್ ಬರೋದೇ ಇಲ್ವಲ್ಲ, ಅಪ್ಪಾಜಿ?… ಹ್ಹೆಹ್ಹೆ… ಕುಡಿಯೋನ್ಗೆ ಎಷ್ಟು ಕುಡೀಬೇಕೂಂತ ತಿಳುವಳಿಕೆ ಇರಲ್ಲ… ನನ್ನನ್ನೇ ತಗೊಳಿ… ನಾನು ಹೆಚ್ಚಿಗೆ ಕುಡ್ಯೋದಿಲ್ಲ. ಯಾಕೇಂದ್ರೆ, ನಾನು ಕಂಠಮಟ್ಟ ಕುಡಿದ್ ತಕ್ಷಣ ಬಡಬಡ್ಸೋಕ್ಕೇ ಶುರು ಮಾಡ್ತೀನಿ… ಏನ್ ಹೇಳ್ದೆ? ಯಾಕ್ ಹೇಳ್ದೆ ಅಂತಾನೆ ತಿಳ್ಯಲ್ಲಾ… ಒಂದ್ಸಲ ಬಡಬಡಿಕೆ ಶುರು ಆದರೆ ಸಾಕು… ಹೊಟ್ಟೆಯಿಂದ ಏನೇನ್ ಹೊರಗ್ ಬಂತು ಅಂತ ಗೊತ್ತೇ ಆಗಲ್ಲ. ಹ್ಹೆಹ್ಹೆ.
ಅಪ್ಪಾಜಿ : (ಅವನ ಕೈಯಲ್ಲಿರುವ ಗುಂಡಿನ ಪ್ಲಾಸ್ಕ್ ನೋಡ್ತಾ) ಆದರೂ…?
ಜಗಳೂರ್ : ಆದರೂ ಕುಡೀತೀನಿ… ನನಗಾಗಿ ಅಲ್ಲ!… ರಾಘವೇಂದ್ರಜೀಗೇ ಅಂತ, ವಾದಿರಾಜ್‌ಜೀಗೇ ಅಂತ… ನಾವು ಅವರ‍್ಗಿಂತ ಬೇರೆ ಅನ್ನಸ್‌ಬಾರ‍್ದಲ್ಲ… ಅದಕ್ಕೇ ಕುಡೀತೀನಿ… ಹ್ಹೆಹ್ಹೆ (ಎಂದು ಫ್ಲಾಸ್ಕಲ್ಲಿ ಇದ್ದುದನ್ನ ಕುಡಿದು ಮತ್ತೆ ಕೋಣೆಯಲ್ಲಿ ಏನನ್ನೋ ಹುಡುಕಲಾರಂಭಿಸುತ್ತಾನೆ.)
ಅಪ್ಪಾಜಿ : ನೀವೇನ್ ಹುಡುಕ್ತಾ ಇದೀರಿ?
ಜಗಳೂರ್ : ಏನಿಲ್ಲ, ಏನಿಲ್ಲ… (ಎಂದು ಮೂಲೆಯಲ್ಲಿದ್ದ ಒಂದು ಕಸದಬುಟ್ಟಿಯನ್ನ ತೆಗೆದು ಬೋರಲು ಹಾಕಿಕೊಂಡು ಕೂರುತ್ತಾನೆ.)
[ಅಪ್ಪಾಜಿ ಅವನನ್ನೇ ಗಮನಿಸುತ್ತಾ ಇದ್ದಾರೆ]
ಜಗಳೂರ್ : ಅಪ್ಪಾಜೀ… ನಾನೇನಾದ್ರೂ ತುಂಬಾ ಮಾತಾಡ್‌ಬಿಟ್ಟ್ನಾ?
ಅಪ್ಪಾಜಿ : ಇಲ್ಲ… ತುಂಬಾ ಏನೂ ಮಾತಾಡಿಲ್ಲ.
ಜಗಳೂರ್ : (ಅಮಲು ಅವನ ಮಾತಿನ ತೂಕ ತಪ್ಪಿಸುತ್ತಾ ಇರುವಂತೆ) ನಾನು ಮರ‍್ಯಾದೆ ಮರ‍್ತು ಏನಾದ್ರೂ ಮಾತಾಡಿದ್ದ್ರೆ ನಿಮ್ಮ ಕಾಲಿಂದ್ ತೆಗ್ದು ಹೊಡೀರಿ! ಅಪ್ಪಾಜಿ! …ಆ ಅಧಿಕಾರ ನಿಮಗೊಬ್ಬರ‍್ಗೆ ಇರೋದು. …ನೀವು… ನೀವು ನನ್ನ… …ನನ್ನ ಅಪ್ಪ ಇದ್ದ್‌ಹಾಗೆ! (ಅವನ ಧ್ವನಿಯಲ್ಲಿ ಗೌರವ-ಪ್ರೀತಿ) ಅದ್ಕೆ ಇಲ್ಲೀಗ್ ಬಂದಾಗೆಲ್ಲಾ ತಪ್ಪದೆ ನಿಮ್ಮ ಹತ್ತಿರ ಮಾತಾಡ್ತೀನಿ! ಬೇರ‍್ಯೋರ‍್ಹತ್ರ? …ಉಹ್ಞುಂ! …ಬಾಯ್ಕೂಡ ಬಿಚ್ಚಲ್ಲ (ಫ್ಲಾಸ್ಕಿನಿಂದ ಅಪ್ಪಾಜಿಗೆ ಕಾಣದಂತೆ ಏರಿಸಿಕೊಳ್ಳುತ್ತಾನೆ) …ಅಪ್ಪಾಜಿ, ನಿಮ್ಮ ಹತ್ತಿರ ಇದ್ದ್ರೆ ಹೊಂಗೆ ಮರದ ನೆರಳಲ್ಲಿ ಇದ್ಹಾಗ್ ಆಗತ್ತೆ… ನಿಜವಾಗ್ಲೂ!
[ಅಪ್ಪಾಜಿ ಅವನನ್ನ ಕನಿಕರದಿಂದ ನೋಡುತ್ತಾರೆ.]
ಜಗಳೂರ್ : ಹ್ಹಹ್ಹೆ!… ಅಪ್ಪಾಜೀ… ಅದ್ಯಾಕ್ ಹಾಗ್ ನೋಡ್ತಾ ಇದೀರಿ ನನ್ನ?… ಹ್ಹೆಹ್ಹೆ! …ಯಾವ್ದೋ ಜೂ ಗಾರ‍್ಡನ್‌ನಲ್ಲಿ ಇರ‍್ಬೇಕಾದೋನು ಇಲ್ಲೀದೀನಿ ಅಂತಾನಾ? …ಹ್ಹೆಹ್ಹೆ?
ಅಪ್ಪಾಜಿ : ಹಾಗೇನೂ ಇಲ್ಲ ಮಿಸ್ಟರ್ ಟಿ.ಸಿ.ಜಗಳೂರ್.
ಜಗಳೂರ್ : ತಿಪ್ಪೆ… ತಿಪ್ಪೇಸ್ವಾಮಿ ಚೌಡಪ್ಪಾ ಜಗಳೂರ್…
ಅಪ್ಪಾಜಿ : (ತಲೆದೂಗಿ) ಜಗಳೂರ್, ನಿಮ್ಮನ್ನ ನೋಡ್ದಾಗೆಲ್ಲಾ ನನ್ನನ್ನ ಒಂದು ಪ್ರಶ್ನೆ ಕಾಡತ್ತೆ!
ಜಗಳೂರ್ : (ನಗ್ತಾ, ಹೆಬಗನಂತೆ) ಕೇಳಿ ಮತ್ತೆ?
ಅಪ್ಪಾಜಿ : ಈಗ ನೀವು ವಾದಿರಾಜ ಮತ್ತೆ ನಮ್ಮ ರಾಘು ಕಂಪೇನೀಲ್ಲಿ ದೊಡ್ಡ ಹುದ್ದೇಲ್ಲಿದೀರಿ. ಆದರೆ… ನೀವು ಯಾವ ಸ್ಥಿತಿಯಿಂದ ಯಾವುದಕ್ಕೆ ತಲುಪಿದ್ರಿ ಅಂತ ನೆನಸ್ಕೊಂಡ್ರೆ… ನನಗ್ ಸೋಜಿಗ ಅನ್ಸತ್ತೆ!
ಜಗಳೂರ್ : “ನಾನು” ಅಂದ್ರೆ? … ಓ! ನಾನು ಏ.ಕೆ. ಅಂತಾನಾ? ಹ್ಹೆಹ್ಹೆ… ನನ್ನನ್ನ ಆದಿಕರ‍್ನಾಟಕ ಅನ್ನೋ ಧೈರ‍್ಯ ಯಾರ‍್ಗಿದೆ ಈಗ, ಹೇಳಿ?… ಹ್ಹೆಹ್ಹೆ… ಇತ್ತು! ಈ “ಏ.ಕೆ., ಏ.ಕೆ.” ಅನ್ನೋ ಶಬ್ದ ನಾನು ಕೆಲಸಕ್ಕೆ ಸೇರ‍್ಕೊಂಡ ಹೊಸದರಲ್ಲಿ ಕೇಳ್ತಾ ಇತ್ತು! …ಒಂದ್ ಸಲ ಕೋಪದಲ್ಲಿ ನಿಮ್ಮ ಮಗ ರಾಘವೇಂದ್ರ ಅವರೂ ಹಾಗ್ ಕರ‍್ದಿದ್ದ್ರೂ ನನ್ನನ್ನ! …ನಾನು ಉಗ್ದೆ, ಸರ‍್ಯಾಗ್ ಹೇಳ್ದೆ. (ಎದುರಿಗೆ ರಾಘುವೇ ಇದ್ದಾನೋ ಎಂಬಂತೆ ಅಪ್ಪಾಜೀನ ನೋಡಿಕೊಂಡು) “ಬಾಯ್ ಮುಚ್ಚ್ರಿ, ನನ್ನನ್ನ ಏ.ಕೆ. ಅಂತ ಕರ‍್ಯೋ ನಿಮ್ಮ ಕೆಲ್ಸಾನೇ ನನಗ್ ಬೇಡ! ತಗೋಳ್ರಿ ರಾಜೀನಾಮೆ! ನಿಮ್ಮ ಹಾಳಾದ ಹಿಂದೂ ಧರ‍್ಮ ಕಟ್ಕೊಂಡ್ ನನಗೇನ್ ಆಗ್ಬೇಕಾಗಿದೆ. ನಾನು ಬೌದ್ಧ, ನವಬೌದ್ಧ, ನಿಯೋಬುದ್ಧಿಷ್ಟ್” (ಮಾತಾಡುತ್ತಾ ಜಗಳೂರ್ ಧ್ವನಿ ತಾರಕಕ್ಕೇರುತ್ತದೆ. ಆತನಿಗೆ ತಾನು ಚೀರುತ್ತಾ ಇರುವುದು ಅಪ್ಪಾಜಿಯ ಮುಂದೆ ಎಂದು ಅರಿವಾಗಿ ಆತ ತಟ್ಟನೆ ಮಾತು ನಿಲ್ಲಿಸುತ್ತಾನೆ) ಹೋಗ್ಲಿ ಬಿಡಿ ಅಪ್ಪಾಜಿ. ಈಗ ಅದೆಲ್ಲಾ ಯಾಕೆ?
ಅಪ್ಪಾಜಿ : ಪರವಾಗಿಲ್ಲ ಹೇಳಿ ಜಗಳೂರ್?
ಜಗಳೂರ್ : ಅಪ್ಪಾಜಿ, ನೀವು ಬೇಕಾದ್ರೆ ನನ್ನ ತಿಪ್ಪೇಸ್ವಾಮಿ ಅನ್ನಿ. ಅಥವಾ ತಿಪ್ಪ ಅಂತನ್ನಿ. ಆದ್ರೆ ಜಗಳೂರು ಅನ್ಬೇಡಿ… ಹ್ಹೆಹ್ಹೆ… ನೀವು ಹಾಗ್ ಕರ್‌ದ್ರೆ ನನಗ್ ನಿಮ್ಮಗ “ಏ.ಕೆ.” ಅಂತ ಅಂದ್ಹಾಗೆ ಕೇಳತ್ತೆ… ಹ್ಹೆಹ್ಹೆ… ಹ್ಹೆಹ್ಹೆ!
ಅಪ್ಪಾಜಿ : ಆಯ್ತು. ಹಾಗೆ ಕರ‍್ಯೋಣಂತೆ! ಆದ್ರೆ ನೀವು ಅದೇನೋ ಹೇಳ್ತಾ ಇದ್ದರಲ್ಲ, ಅದನ್ನ ನಿಲ್ಲಸ್ಬೇಡಿ. ಹೇಳಿ!
ಜಗಳೂರ್ : ಅಯ್ಯೋ! ಬೇಡ ಬಿಡಿ, ಅಪ್ಪಾಜಿ… ಅದನ್ನೆಲ್ಲಾ ಕೇಳಿ ಆಗ್ಬೇಕಾದ್ದೇನಿದೆ? ಹ್ಹೆಹ್ಹೆ… ನಾನ್ ಬೇರೆ ಕುಡ್ದಿದೀನಿ. ಹ್ಹೆಹ್ಹೆ… ಕುಡ್ದಾಗ ಮಾತಾಡ್‌ಬಾರ‍್ದು, ಅಪ್ಪಾಜಿ!
[ಅಪ್ಪಾಜಿ ಅವನು ಮಾತಾಡಿಯೇ ಆಡುತ್ತಾನೆ ಎಂಬ ನಂಬಿಕೆಯೊಡನೆ ಕೇಳುಗರಂತೆ ಕೂರುತ್ತಾರೆ. ಜಗಳೂರ್ ಮತ್ತೆ ಫ್ಲಾಸ್ಕಿನಿಂದ ಗುಂಡನ್ನ ಗಂಟಲಿಗಿಳಿಸುತ್ತಾನೆ. ತಾನು ಕೂತಿದ್ದ ಕಸದಬುಟ್ಟಿಯಿಂದ ಎದ್ದು ಓಡಾಡುತ್ತಾನೆ. ಕೆಲಕ್ಷಣದ ನಂತರ ಮಾತನ್ನಾರಂಭಿಸುತ್ತಾನೆ.]
ಜಗಳೂರ್ : ಬಟ್… ಅಪ್ಪಾಜಿ, ವಾದಿರಾಜರಾವ್ ದೊಡ್ಡಮನುಷ್ಯರು!… ತುಂಬಾ ಅಂದ್ರೆ ತುಂಬಾ ದೊಡ್ಡ ಮನುಷ್ಯರು! ಅವರು ಹೇಳಿದ್ರೂ! “ಯಾರೂ ಯಾವುದೇ ಕಾರಣಕ್ಕೂ ಟಿ.ಸಿ. ಜಗಳೂರ್‌ಗೆ ಅವಮಾನ ಮಾಡಬಾರದು” ಅಂತ ಅವರು ಹೇಳಿದ್ರು! ಆಮೇಲೆ! ಹ್ಹೆಹ್ಹೆ… ಈ “ಏ.ಕೆ., ಏ.ಕೆ.” ಅಂತ ಕೇಕೆ ಹಾಕ್ತಾ ಇದ್ದೋರೆಲ್ಲಾ ಸುಮ್ಮನಾಗ್ಹೋದ್ರೂ!… ಹ್ಹೆಹ್ಹೆ… ಬಟ್ ಅಪ್ಪಾಜಿ! ವಾದಿರಾಜ್ ಅವರಿಂದ ನನಗೆ ಸ್ಟೇಟಸ್ ಬಂತು! ಐ ಯಾಂ ನಾಟ್ ಆನ್ ಆರ‍್ಡಿನರಿ ಏ.ಕೆ. ಎನಿಮೋರ್!… ಹ್ಹೆಹ್ಹೆ… ಐ ಯಾಂ ಟಿ.ಸಿ.ಜಗಳೂರ್! ತಿಪ್ಪೇಸ್ವಾಮಿ ಚೌಡಪ್ಪ ಜಗಳೂರ್! ಕಂಪೆನಿ ಸೆಕ್ರೆಟರಿ!
[ಅಪ್ಪಾಜಿ ಮತ್ತೇನೋ ಕೇಳಬೇಕೆಂದು ಹೊರಟವರು ಕೈ ಎತ್ತಿದನ್ನ ಇಳಿಸುತ್ತಾರೆ. ಮಾತು ತಡೆದುಕೊಳ್ಳುತ್ತಾರೆ. ಅದನ್ನು ಗಮನಿಸುವ ಜಗಳೂರ್]
ಜಗಳೂರ್ : ಅಪ್ಪಾಜಿ! ಐ ಥಿಂಕ್ ಯೂವ್ ಹ್ಯಾವ್ ಒನ್‌ಮೋರ್ ಕ್ವಶ್ಚನ್ನ್?… ಕೇಳಿ. ಈ ಕಂಪೆನಿ ಸೆಕ್ರೆಟರಿ ಎಲ್ಲಾ ಪ್ರಶ್ನೇಗೂ ಉತ್ತರ ಕೊಡ್ತಾನೆ.
ಅಪ್ಪಾಜಿ : (ವಿಷಾದದ ಜೊತೆಗೆ ನಗ್ತಾ) ನನ್ನಂಥೋರ‍್ನ ಈ ವಯಸ್ನಲ್ಲಿ ಕಾಡೋದು ಬರೀ ಪ್ರಶ್ನೆಗಳೇ…
ಜಗಳೂರ್ : ಮತ್ತೇ ಕೇಳಿ?… ಹೊರಗ್ ಹೋಗಿ ಆ ನಾಟಕ ನೋಡೋದಕ್ಕಿಂತ ನಿಮ್ಮಂಥ ಗಾಂಧೀವಾದಿಗಳ ಜೊತೆ ಕೂತ್ಜೋಳೋದು ವಾಸಿ ಅಲ್ವಾ?… ಅದೇನ್ ಬೇಕಾದ್ರೂ ಕೇಳಿ… ನೋ ಹೆಸಿಟೇಷನ್ಸ್ ಪ್ಲೀಸ್!
ಅಪ್ಪಾಜಿ : ತಿಪ್ಪೆಸ್ವಾಮಿ, ನೀವು ಈ ಸಮಾಜದ ಯಾವುದೋ ಸ್ಥರದಿಂದ ಯಾವುದೋ ಎತ್ತರ ತಲ್ಪಿದೀರಿ. ಆದರೆ ನಿಮ್ಮ ಜನರ ಮೇಲೆ ಸಾವಿರಾರು ವರ‍್ಷಗಳಿಂದ ಅನ್ಯಾಯ ಆಗಿದೆ, ಅತ್ಯಾಚಾರ ಆಗಿದೆ…
ಜಗಳೂರ್ : (ಅವರ ಮಾತನ್ನ ಅರ‍್ಧದಲ್ಲಿಯೇ ತಡೆದು) ನನಗ್ ಗೊತ್ತು ಬಾಪೂಜಿ, ನನಗೆಲ್ಲಾ ಗೊತ್ತು… ಅದನ್ನ ಮರ‍್ಯೋಕ್ಕೇ ನಾನ್ ಇದನ್ನ ಹಿಡ್ಯೋದು. (ಕೈಯಲ್ಲಿರುವ ಗುಂಡಿನ ಫ್ಲಾಸ್ಕ್ ತೋರಿಸಿ, ಅದರಲ್ಲಿದ್ದುದನ್ನ ಗಂಟಲಿಗೆ ಸುರಿದುಕೊಂಡು) ಅಪ್ಪಾಜಿ, ನಾನು ಬಿ.ಎ. ಓದಿದ್ ಮೇಲೆ, ಹಳ್ಳೀಗ್ ಹೋದೆ! ನಮ್ಮವ್ವಂಗೆ ನನ್ನ ಗುರುತೇ ಸಿಗ್ಲಿಲ್ಲ. “ಬಾಬ್ಲ್ಯಾ, ನೀನು ಪೂರಾ ಬದ್ಲಾಗ್‌ಬಿಟ್ಟಿದ್ಯೋ ಯಪ್ಪಾ! ನಮ್ಮೋರಂಗೇ ಇಲ್ವಲ್ಲೋ!” ಅಂತಂದ್‌ಬಿಟ್ಳು!… ನನಗ್ ಆಶ್ಚರ‍್ಯ ಆಯ್ತು. ಆವತ್ತೇ ರಾತ್ರಿ, ನಾನು ಊರಿಗ್ ಬಂದೇ ಅಂತ ಹೆಂಡ ತರ‍್ಸ್‌ದ್ಲು, ಬಾಡು ಮಾಡ್‌ದ್ಲು… ಕುಡಿದು ತಿಂದು, ಹಾಡಿದ್ಲು… (ಯಾವುದೋ ಜಾನಪದೀಯ ರಾಗವನ್ನ ಹೇಳುತ್ತಾನೆ)
[ಹಾಡುತ್ತಾ, ಹಾಡುತ್ತಾ ಕೋಣೆಯ ಸುತ್ತಾ ತನ್ನ ಜನರ ಶೈಲಿಯಲ್ಲೇ ಕುಣಿಯುತ್ತಾನೆ. ದಿಢೀರನೆ ರಂಗ ಮಧ್ಯದಲ್ಲಿ ಜಾರಿದಂತೆ ಕೂರುತ್ತಾನೆ. ಅಪ್ಪಾಜಿ ಗಾಬರಿಯಿಂದ ಬಳಿಗೆ ಬರುವಷ್ಟರಲ್ಲಿ ಮಾತನ್ನ ಆರಂಭಿಸುತ್ತಾನೆ.]
ಜಗಳೂರ್ : …ಆಮೇಲ್ ನನ್ನ ಹಿಡ್ಕೊಂಡ್ ಅಳೋಕ್ಕೆ ಶುರು ಮಾಡ್‌ದ್ಲು… ಅಳ್ತಾ, ಅಳ್ತಾ ಹೇಳದ್ಲು, “ಬಾಬ್ಲ್ಯಾ, ಅಂಗಿ ಕಳಚೋ! ಲಂಗೋಟಿ ಕಟ್ಟೋ! ಕಂಬಳಿ ಹೊದ್ದು, ಕೈಯಲ್ಲಿ ಗೆಜ್ಜೆ ಕೋಲು ಹಿಡ್ದು ಕಾಡುಬೇಟೇಗ್ ಹೋಗೋ! ದೊಡ್ಡಮರಿ ಹೊಡ್ಕೊಂಡ್ ಬಾರೋ! ನನಗೆ ನಿಮ್ಮಪ್ಪನ್ನ ನೋಡ್ಬೇಕಾಗಿದ್ಯೋ! ಇಪ್ಪತ್ತೊರ‍್ಸ ಆತು ಕಣೊ! ಆ ವಾದಿರಾಜನ ಅಪ್ಪ ನಿಮ್ಮಪ್ಪನ್ನ ಸುಟ್ಟ! ನಿನ್ನ ತಂಗೀನ… ನಿನ್ನ ತಂಗೀನ…”
[ಅವನ ಮಾತು ಕೇಳುತ್ತಾ ಅಪ್ಪಾಜಿಯ ಕೈಕಾಲುಗಳು ಸೆಟೆದುಕೊಳ್ಳುತ್ತವೆ. ಅಪ್ಪಾಜಿ ಮೆಲ್ಲಗೆ “ಇಲ್ಲ, ಇಲ್ಲ! ನಿಲ್ಸು, ನಿಲ್ಸು!” ಎಂದೆನ್ನತೊಡಗುತ್ತಾರೆ. ಜಗಳೂರು ಆ ಮಾತು ಕೇಳಲೇ ಇಲ್ಲವೋ ಎಂಬಂತೆ ಕೆಲಕ್ಷಣದ ನಂತರ ಮಾತು ಮುಂದುವರೆಸುತ್ತಾನೆ. ಭಾವುಕನಾಗಿ ನೆಲಕ್ಕೆ ಕುಸಿದು ಅಳುತ್ತಾ ಮಾತಾಡುತ್ತಾನೆ. ತನ್ನ ಜನರಂತೆ ಕುಕ್ಕರುಗಾಲಲ್ಲಿ ಕೂತು ಆಕಾಶ ನೋಡುತ್ತಾ, ಎದೆ ಬಡಿದುಕೊಂಡು ರೋಧಿಸುತ್ತಾನೆ.]
ಜಗಳೂರ್ : ನನಗ್ ಗೊತ್ತೇ ಇರ‍್ಲಿಲ್ಲ. ವಾದಿರಾಜರಾವ್ ಅವರ ಚಿಕ್ಕಪ್ಪ ಏಕನಾಥ್‌ರಾವ್, ಜನಶಕ್ತಿ ಸೋಸೈಟಿಯ ಛೇರ‍್ಮನ್ನ್…. ಅವನು ನನ್ನ ತಂಗೀನ ಕೆಡ್ಸಿದ್ದಾ!… ಆ ವಿಷಯಾನ ನಮ್ಮಪ್ಪ ಊರ‍್ಗೇ ಕೇಳೋ ಹಾಗ್ ಅತ್ಕೋತಾ ಹೇಳ್‌ದ್ನಂತೆ!… ಅದಕ್ಕೆ… ಅದಕ್ಕೇ ಅವರು! ಆ ಊರಿನ ದೊಡ್ಡ ಜನ! ನಮ್ಮಪ್ಪನ್ನ ಊರಿನ ಮಧ್ಯ ಇದ್ದ ಕಲ್ಲಿನಕಂಭಕ್ಕೆ ಕಟ್ಟ್‌ಹಾಕಿ ಸುಟ್ಟುಬಿಟ್ಟರಂತೆ!
[ಜಗಳೂರು ನೆಲಕ್ಕೆ ಹಣೆ ಬಡಿದುಕೊಳ್ಳುತ್ತಾ ಅಳುತ್ತಾನೆ. ಕೆಲಕ್ಷಣದ ನಂತರ ಅವನ ಅಳುನಿಂತು, ಕೊಂಚ ಸ್ಪಷ್ಟವಾಗಿ ಮಾತು ಮುಂದುವರೆಸುತ್ತಾನೆ.]
ಜಗಳೂರ್ : (ಮಂದ್ರದಲ್ಲಿ ಆರಂಭವಾಗಿ ದನಿಯೇರಿಸುತ್ತಾ) …ನಮ್ಮಮ್ಮ ಅಳ್ತಾ ಹೇಳ್ತಾ ಇದ್ಲು, “ಬಾಬ್ಲ್ಯಾ, ಸತ್ತಮೇಲೆ ಈ ನಿಮ್ಮವ್ವಂಗೆ ಆಸೆ ಉಳ್‌ದು ಹೋಗತ್ತೋ ಯಪ್ಪಾ! ಆಸೆ ಸಾಯೋಕ್ಕೆ ಬಿಡಬೇಡ್ವೋ ಯಪ್ಪಾ!”
ಅಪ್ಪಾಜಿ : (ಕೈಕಾಲು ನಡುಗುವಾಗಲೇ) ಏನಾಸೆ?
ಜಗಳೂರ್ : (ಅಪ್ಪಾಜಿಯತ್ತ ತಿರುಗಿ, ತಟ್ಟನೆ) ವಾದಿರಾಜನ ಮನೆ ಸುಡೋ ಆಸೆ!
ಅಪ್ಪಾಜಿ : (ಅಚ್ಚರಿ, ಕಾತರದಿಂದ) ಏನಂದ್ರಿ?… ನೀವು ಏನಂದ್ರೀ ತಿಪ್ಪೇಸ್ವಾಮಿ?
ಜಗಳೂರ್ : (ಎಚ್ಚರವಾದಂತೆ) ಏನೂ ಹೇಳ್ಲಿಲ್ಲ, ಹ್ಹೆಹ್ಹೆ, ಏನೂ ಹೇಳ್ಲಿಲ್ಲ… (ಮತ್ತೆ ಆಕಾಶಕ್ಕೆ ಮುಖಮಾಡಿ) ಆದ್ರೆ… ಆವತ್ತು ರಾತ್ರೆ ನನಗ್ ನಿದ್ದೆ ಬರ‍್ಲಿಲ್ಲ. ಸ್ವಲ್ಪ ಕಣ್ಣ್ ಮುಚ್ಚಿದ್ರೂ ದಬಕ್ಕಂತ ಎಚ್ಚರ ಆಗ್ತಿತ್ತು. ಯಾಕೇಂದ್ರೆ ನನಗ್ ಕನಸು ಬೀಳ್ತಾ ಇತ್ತು!… ಕೆಟ್ಟ ಕನಸು!… ನಾನು ಪಂಜು ಹಿಡ್ಕೊಂಡು ಅವರ್ ಮನೆ ಸುಡ್ತಾ ಇದೀನಿ!… ಮನೆ ಒಳಗೆ ಅವರೆಲ್ಲಾರೂ ಇದಾರೆ, ಆ ವಾದಿರಾಜನ ಅಪ್ಪ, ಚಿಕ್ಕಪ್ಪ!… ನಮ್ಮಪ್ಪನ್ನ ಕೊಂದೋರು! ನನ್ನ ತಂಗೀನ ತಿಂದೋರು!… ಅವರು ಅಳ್ತಾ ಇದಾರೆ… ಜೀವಭಯದಿಂದ ಚೀರ‍್ತಾ ಇದಾರೆ!… (ಕಲ್ಪನೆಯ ಗುಂಗಿನಲ್ಲೇ ವಿಕಟವಾಗಿ ನಗುತ್ತಾ, ಕುಣಿಯುತ್ತಾನೆ. ಮಂಚದ ಸುತ್ತಾ ಕೇಕೆ ಹಾಕಿ ನಗುತ್ತಾ ಸುತ್ತುತ್ತಾನೆ. ಅವನು ಕುಣಿದಂತೆ ಅಪ್ಪಾಜಿಯ ನಡುಕ ಹೆಚ್ಚುತ್ತದೆ. ಜಗಳೂರು ಕುಣಿಯುತ್ತಾ ಇದ್ದವನು ಮತ್ತೆ ಕಾಲುಜಾರಿ ಬೀಳುತ್ತಾನೆ. ಅಪ್ಪಾಜಿ ಅವನನ್ನ ಎಬ್ಬಿಸಲೆಂಬಂತೆ ಬಳಿಗೆ ಹೋಗುವ ಪ್ರಯತ್ನದಲ್ಲಿದ್ದಾಗಲೇ, ಜಗಳೂರಿಗೆ ಎಚ್ಚರವಾದಂತೆ) ಕ್ಷಮ್ಸಿ ಅಪ್ಪಾಜಿ, ನಾನು ಅದೇನೇನೋ ಬಡಬಡ್‌ಸ್ಬಿಟ್ಟೆ… ನಾನು, ನಾನು ಕಿರುಚ್ಲಿಲ್ಲ ಅಲ್ವಾ?
ಅಪ್ಪಾಜಿ : ಇಲ್ಲ, ನನ್ನ ಕಿವೀಗೆ ಹಾಗೇನೂ ಕೇಳ್‌ಸ್ಲಿಲ್ಲ!
ಜಗಳೂರ್ : (ಎದ್ದು ಮೊದಲಿನಂತೆ ಕಸದಬುಟ್ಟಿಯ ಮೇಲೆ ಕೂರುತ್ತಾ) ನನಗೂ ಎಷ್ಟೋ ಸಲ ಹೀಗಾಗತ್ತೆ ಅಪ್ಪಾಜಿ! ಯಾರೋ ಏನೋ ಮಾತಾಡ್‌ದ್ರೆ ಕೇಳೋದೇ ಇಲ್ಲ!… ಇಲ್ಲಾ, ಆಗ ಕೇಳಿದ್ದು ಅದೇ ಕ್ಷಣದಲ್ಲಿ ಮರ‍್ತುಹೋಗತ್ತೆ. ಹ್ಹೆಹ್ಹೆ!
ಅಪ್ಪಾಜಿ : ಆಮೇಲೇನಾಯ್ತು?
ಜಗಳೂರ್ : ಯಾವ ಮೇಲೆ?
ಅಪ್ಪಾಜಿ : ಅದೇ ನಿಮ್ಮ ಕನಸಾದ್ಮೇಲೆ?
ಜಗಳೂರ್ : ಯಾವ ಕನಸಾದ್ಮೇಲೆ?
ಅಪ್ಪಾಜಿ : ಅದೇ ಏಕನಾಥ್‌ರಾವ್‌ನ ಸುಡೋ ಕನಸು…
ಜಗಳೂರ್ : (ನಾನು ಹೇಳಬಾರದ ಮಾತು ಹೇಳಿದ್ದೇನೆ ಎಂದು ಗಲಿಬಿಲಿಗೊಂಡು) ಹ್ಹೆಹ್ಹೆ… ಅದನ್ನೆಲ್ಲಾ ಮರ‍್ತು ಬಿಡ್ಬೇಕು… ನೆನಪನ್ನ ಕೆದಕೋದ್ರಲ್ಲಿ ಅರ‍್ಥ ಇಲ್ಲ… ಹ್ಹೆಹ್ಹೆ… (ತಟ್ಟನೆ ಧ್ವನಿ ಬದಲಿಸಿ ವಿನೀತನಾಗಿ) ಅಪ್ಪಾಜಿ ನಾನ್ ಮತ್ತೇನಾದ್ರೂ ಹೇಳ್‌ದ್ನಾ?
[ಅಪ್ಪಾಜಿ ಸುಮ್ಮನೆ ತಲೆಯಾಡಿಸುತ್ತಾರೆ]
ಜಗಳೂರ್ : ಅದಕ್ಕೆ… ಅದಕ್ಕೇ ನಾನು ಕುಡ್ಯೋದಿಲ್ಲಾ… ಕುಡ್‌ದ್ರೆ ನೋಡಿ, ನಮ್ಮ ನಾಲಿಗೇನೆ ನಮ್ಮ ಮಾತು ಕೇಳಲ್ಲ. (ಎನ್ನುತ್ತ ಮತ್ತೆ ಕುಡಿಯುತ್ತಾನೆ)
ಅಪ್ಪಾಜಿ : (ಅವನನ್ನೇ ನೋಡುತ್ತಾ) ಇಷ್ಟೆಲ್ಲಾ ಆದರೂ ನೀವು ವಾದಿರಾಜರಾವ್ ಅವರ ಕಂಪೇನೀಲ್ಲೇ ಕೆಲಸ ಮಾಡ್ತಾ ಇದೀರಲ್ಲಾ? ಯಾಕೆ?
ಜಗಳೂರ್ : (ಗುಂಡಿನ ಲೋಕಕ್ಕೆ ಇಳಿಯುತ್ತಾ) ಆವತ್ತು ಅವರು ರಸ್ತೇಲ್ಲಿ ಸಿಕ್ಕಿದ್ದ್ರು!… ನನ್ನ ಭುಜದ ಮೇಲೆ ಕೈಯಿಟ್ಟು ಹೇಳ್‌ದ್ರು, “ನಮ್ಮಪ್ಪ-ನಿಮ್ಮಪ್ಪನ್ನ ಸುಟ್ಟ!… ನಾನು ಆ ಪಾಪ ತೊಳ್ಕೋಬೇಕು. ನೀನ್ ನನ್ನ ಜೊತೆ ಇರು. ನಾನ್ ನಿನ್ನ ದೊಡ್ಡ ಮನ್ಷಾ ಮಾಡ್ತೀನಿ!” ಅಂತಂದ್ರು.!
ಅಪ್ಪಾಜಿ : ದೊಡ್ಡ ಮನುಷ್ಯಾನಾ?
ಜಗಳೂರ್ : ಹ್ಞೂಂ… ವಾದಿರಾಜರಾವ್ ದೊಡ್ಡೋರು! ಅವರದ್ದು ದೊಡ್ಡ ಮನಸ್ಸು!… ಅದಕ್ಕೇ ಅವರು ನನ್ನನ್ನ ಕರ‍್ಕೊಂಡ್ ಹೋಗಿ ಅವರ ಕಂಪೆನೀಗೇ ಸೆಕ್ರೆಟರಿ ಮಾಡ್‌ದ್ರು!… ಹ್ಹೆಹ್ಹೆ!
ಅಪ್ಪಾಜಿ : ಇದಕ್ಕೇ… ಆ ತಾಯಿ ಒಪ್ಪಿದ್ಲಾ?
ಜಗಳೂರ್ : ಜೀವನ ಎಲ್ಲಾ ಉರೀತಾ ಇದ್ದೋಳ್ನ, ನನ್ನ ಸಂಬಳದ್ ದುಡ್ಡು ತಣ್ಣಗ್ ಮಾಡ್ತು!… “ಸೇರ‍್ಕೋ, ಸೇರ‍್ಕೋ… ಈ ದರಿದ್ರ ಬಡತನ ಮೊದ್ಲು ಹೋಗ್ಲಿ” ಅಂತಂದ್ಲು… ನಾನು? …ಕೆಲಸಕ್ಕ್ ಸೇರ‍್ಕೊಂಡು, ದೊಡ್ಡ ಮನುಷ್ಯ ಆದೆ!
[ಜಗಳೂರು ನೆಲವನ್ನೇ ನೋಡುತ್ತಾ ನಿಲ್ಲುತ್ತಾನೆ. ಅಪ್ಪಾಜಿ ಚರಕದ ಬಳಿ ಸಾಗುತ್ತಾರೆ. ಖಾಲಿ ಚರಕ ಸುತ್ತುತ್ತಾರೆ. ಸುತ್ತುತ್ತಾ ಸುತ್ತುತ್ತಾ ಮಾತಾಡುತ್ತಾರೆ.]
ಅಪ್ಪಾಜಿ : ಆವತ್ತು ಗಾಂಧಿ ಹಿಂದೆ ಇದ್ದೋರೂ ಹಿಂಗೇ ಯೋಚ್ನೆ ಮಾಡಿದ್ದ್ರೆ… ಈ ದೇಶಕ್ಕೆ ಸ್ವಾತಂತ್ರ್ಯಾನೇ ಕನಸಾಗ್ತಾ ಇತ್ತು! …ಛೇ! ಈ ಜನ ಅನ್ಯಾಯ ಆದರೂ ಯಾಕೆ ಉರ‍್ಯೋಲ್ಲಾ?
ಜಗಳೂರ್ : (ತನ್ನದೇ ಲೋಕದಲ್ಲಿ, ಅಪ್ಪಾಜಿಯ ಮಾತು ಕೇಳದೆ ಇದ್ದವನಂತೆ) ನಾನು ದೊಡ್ಡೋನಾಗೋ ದಾರಿ ಹಿಡ್ದು ಲಗ್ನ ಆದೆ. ನಮ್ಮ ಕೇರಿ ಲಕ್ಕೂ ನನ್ನ ಕೈ ಹಿಡ್ದು, ಪಟ್ಟಣ ಸೇರಿ, ಲಕ್ಷ್ಮಿ ಆಗ್‌ಹೋದ್ಲು, ಮಿಸೆಸ್ ಲಕ್ಷ್ಮಿ ಟಿ.ಸಿ.ಜಗಳೂರ್ ಆಗ್‌ಹೋದ್ಲು… ಹ್ಹೆಹ್ಹೆ!
ಅಪ್ಪಾಜಿ : (ತಮ್ಮ ಲೋಕದಲ್ಲಿ) ರಾಧೆ ಕೂಡ ಇದೆ ಹೇಳ್ತಾ ಇದ್ಲು! “ನಮ್ಮ ಮದ್ವೆ ಆಗಿದೆ. ಈ ಗಾಂಧಿ-ಪಾಂಧಿ ಬಿಟ್ಟು, ಸಂಸಾರ ನಡ್ಸಿ. ಸ್ವಾತಂತ್ರ್ಯ ಅನ್ಕೊಂಡು ನೀವೂ ಸಾಯೋದಲ್ದೆ ನಮ್ಮನ್ನೂ ಯಾಕ್ ಸಾಯ್‌ಸ್ತೀರಿ. ಊರಲ್ಲಿರೋರೆಲ್ಲಾ ಕಂಪನಿ ಸರ‍್ಕಾರದ ನೌಕರಿ ಮಾಡ್ಕೊಂಡು ಸುಖವಾಗಿಲ್ವೇನು? ಅವರಿಗೆಲ್ಲಾ ಬೇಡವಾದ್ದು ನಿಮಗ್ಯಾಕ್ ಬೇಕು? ನೀವು ಜೈಲಲ್ಲಿ ಯಾಕ್ ಕೊಳೀಬೇಕು? ಈ ದೇಶಕ್ಕೆ ಸ್ವಾತಂತ್ರ್ಯ ಬರದೆ ಇದ್ದರೆ ಏನ್ ಹಾಳಾಗತ್ತೆ?” ಅಂತಿದ್ದ್ಲು. ನಾನೂ ಆಗ ರಾಧೆ ಹೇಳಿದ್ ಹಾಗೇ ಕೇಳಿದ್ದ್ರೆ ಈಗ ಪ್ರತಿ ತಿಂಗಳೂ ಪೆನ್ಷನ್ ಬರ‍್ತಾ ಇತ್ತೋ ಏನೋ? ರಾಘು ಹತ್ತಿರ ಚಿಲ್ಲರೆ ಕಾಸಿಗೆ ಕೈ ಒಡ್ಡೋ ಗೋಳೂ ತಪ್ಪ್‌ತಾ ಇತ್ತೇನೋ? ಹೇಗಾದರೂ ಬರಲಿ, ಎಷ್ಟು ದುಡ್ಡು ಬರತ್ತೆ? ಬಂದಿದ್ರಲ್ಲಿ ನನಗೇನ್ ಸಿಗತ್ತೆ ಅನ್ನೋ ಲೆಕ್ಕಾಚಾರದಲ್ಲೇ ಸುಖ ಸಿಗ್ತಾ ಇತ್ತೇನೋ? ಅಥವಾ ನಾನು ಮದುವೆ ಆಗದೆ ಹೋಗಿದ್ದ್ರೆ?… ಏನಾಗ್ತಾ ಇತ್ತು? ಯಾರಿಗ್ಗೊತ್ತು? ನಾನೂ ಫಕೀರ ಆಗ್ಬೋದಿತ್ತು! ಸಂಸಾರ ಅಂದರೆ ತಾವರೆಕೆರೆ ಇದ್ದಹಾಗೆ. ಅಲ್ಲಿ ನನ್ನಂಥಾ ಸಂನ್ಯಾಸೀಗ್ ಈಜೋಕ್ಕಾಗಲ್ಲ! ಆದರೂ ನಾನು ಚಳುವಳಿ ಸೇರ‍್ಕೊಂಡೆ! ನನ್ನ್ ಎದೇಲ್ಲಿ ಬೆಂಕಿ ಇತ್ತು!… ಬ್ರಿಟಿಷರು ಈ ದೇಶಕ್ಕೆ ಮಾಡ್ತಾ ಇದ್ದ ಗಾಯ ಜ್ಷಾಪಕದಲ್ಲಿತ್ತು! ನಾನು, ನಾನು…
[ಅಪ್ಪಾಜಿಯ ಮಾತು ನಡೆಯುವಾಗ ಕೇಳದೆ ಗುಂಡೇರಿಸುತ್ತಾ ಇದ್ದ ಜಗಳೂರು ಮತ್ತಿನಲ್ಲಿ ಮತ್ತೆ ಮಾತಾಡುತ್ತಾನೆ.]
ಜಗಳೂರ್ : ಅಕಸ್ಮಾತ್ ನಾನು ಮದುವೆ ಆಗದೆ ಇದ್ದಿದ್ದ್ರೆ?… ಕೊಳ್ಳಿ ಹಿಡ್ಕೊಂಡ್ ಹೋಗಿ ವಾದಿರಾಜರಾವ್ ಮನೇಗ್ ಬೆಂಕಿ ಇಟ್ಟಿದ್ದ್ರೆ?… ಸಿಟ್ಟು ಈಗಲೂ ಇದೆ. ಆದರೆ ಉಪಯೋಗ ಇಲ್ಲ. ಖಂಡಿತಾ ಉಪ್ಯೋಗ ಇಲ್ಲಾ! (ಮೌನದ ನಂತರ) …ಈಗ್ಲೂ ಪೇಪರ‍್ನಲ್ಲಿ ಬರ‍್ತಾನೆ ಇರತ್ತೆ, “ಯಾರನ್ನೋ ಸುಟ್ಟರು! ಯಾರದ್ದೋ ಕಣ್ಣು ಕಿತ್ತ್ರು! ಯಾರದ್ದೋ ಮಾನಭಂಗ ಆಯ್ತು! ಯಾರದ್ದೋ ಕೈ ಕಾಲು ಮುರ್‌ದ್ರೂ!” ಆಗ ನನಗ್ ಉರೀತಿರೋ ಮರ ಕಾಣತ್ತೆ. ಕಾಪಾಡಿ ಅನ್ತಾ ಕಿರುಚ್ತಾ ಇರೋ ನಮ್ಮಪ್ಪ ಕಾಣ್ತಾನೆ. (ಮುಖದಲ್ಲಿ ಸಿಟ್ಟು ಮೂಡುತ್ತದೆ) ಆಗ ನಾನು ಮನಸ್ನಲ್ಲೇ ಕೊಳ್ಳಿ ಹಿಡೀತೀನಿ! ಓಡ್ತೀನಿ!… ಎದುರಿಗೆ ಸಿಕ್ಕವರನ್ನೆಲ್ಲಾ ಸುಡ್ತೀನಿ! (ಬಿಕ್ಕಿ ಬಿಕ್ಕಿ ಅಳಲು ಆರಂಭಿಸುತ್ತಾನೆ. ಅಪ್ಪಾಜಿ ಆತನನ್ನ ದಿಟ್ಟಿಸಿ ನೋಡುತ್ತಾರೆ. ಜಗಳೂರು ಅಪ್ಪಾಜಿಯನ್ನು ಗಮನಿಸಿ ಬದಲಾಗುತ್ತಾನೆ.) ಅದಕ್ಕೆ… ಅದಕ್ಕೇ ನಾನು ಬಿಜಿಯಾಗಿರ‍್ತೀನಿ! ಬಿಡುವೇ ಸಿಗದೆ ಇರೋ ಹಾಗೆ ಕೆಲಸ ಮಾಡ್ತೀನಿ! ಏನೂ ಕೆಲಸ ಇಲ್ಲದೆ ಇದ್ದಾಗ ವಾದಿರಾಜರಾವ್ ನನಗ್ ಕೊಟ್ಟಿರೋ ಸೌಂಡ್‌ಸ್ಟೇಷನ್‌ನಲ್ಲಿ ಪಾಪ್ ಸಂಗೀತ ಕೇಳ್ತೀನಿ! ನನ್ನ ಮಗ ಮಾತಾಡೋ ಕಾನ್ವೆಂಟ್ ಇಂಗ್ಲೀಷ್ ಕೇಳ್ತೀನಿ! ಅವನನ್ನ ಫಾರಿನ್ನಲ್ಲೇ ಓದ್‌ಸ್ಬೇಕು ಅನ್ತಾ ಇಂಗ್ಲೀಷಿನ ಗಂಧ-ಗಾಳಿ ಇಲ್ದೆ ಇರೋ ನನ್ನ ಲಕ್ಕೂಗೆ ಇಂಗ್ಲೀಷ್‌ನಲ್ಲೇ ಹೇಳ್ತೀನಿ! ಹ್ಹೆಹ್ಹೆ… ಅವಳು ನನ್ನ ಮಾತು ಅರ‍್ಥ ಆಗದೆ ನಕ್ಕಾಗ ತೃಪ್ತಿ ಪಟ್ಕೊಂಡು ಕುಡೀತೀನಿ! ಮತ್ತೆ ಬೆಳಗಾಗ್ಲೇಬಾರದು ಅಂದ್ಕೊಂಡು ಗೊರಕೆ ಹೊಡೀತಾ ಮಲಗ್ತೀನಿ! ಹ್ಹೆಹ್ಹೆ… ಹ್ಹೆಹ್ಹೆಹ್ಹೆ!
ಅಪ್ಪಾಜಿ : ಮತ್ತೆ? …ನಿಮ್ಮ ತಾಯಿ?
ಜಗಳೂರ್ : ಅವಳು?… ಹ್ಹೆಹ್ಹೆ… ಅವಳಿಂಥಾದ್ದನ್ನೆಲ್ಲಾ ನೋಡೇ ಇರ‍್ಲಿಲ್ವಲ್ಲಾ! ಅದಕ್ಕೆ ಬೆಳಗ್ನಿಂದ ಸಂಜೇವರ‍್ಗೂ ಟಿ.ವಿ. ಮುಂದೆ ಬಾಯ್‌ಬಿಟ್ಕೊಂಡ್ ಕೂತಿರ‍್ತಾಳೆ. ಯಾವುದೋ ಫಾರಿನ್ ಚಾನೆಲ್ ನೋಡಿ, “ಲಂಡನ್ ದೇಸ ಚೆಂದಾಕೈತೆ, ಮಗಾ” ಅನ್ತಾ ಇರ‍್ತಾಳೆ.
ಅಪ್ಪಾಜಿ : ಮತ್ತೆ? …ಅವಳ್ಗಂಡನ್ನ…?
ಜಗಳೂರ್ : ಮರ‍್ತಿದಾಳೆ! …ಪೂರಾ ಮರ‍್ತಿದಾಳೆ. ಸುಖ ಬಂತೂಂದ್ರೆ ದುಃಖ ಎಲ್ಲಾ ಮರ‍್ತುಹೋಗತ್ತೆ, ಅಪ್ಪಾಜಿ! …ಒಂದು ಮಡಕೆ ನೀರು ತರೋಕ್ಕೇ ಮೈಲಿಗಟ್ಟಲೆ ನಡೀತಾ ಇದ್ದೋಳ್ಗೆ ಮೆತ್ತೆ ಹಾಕಿದ ಮಂಚದ ಮೇಲ್ ಕೂತ್‌ತಕ್ಷಣ ಎಲ್ಲಾ ಮರತ್ಕಂಡ್ಳು… ಹ್ಹಹ್ಹಹ್ಹ! …ವಾದಿರಾಜರಾವ್ ನನಗೆ ಫೈವ್ ಬೆಡ್‌ರೂಂ ಮನೆ ಕೊಟ್ಟಿದಾರೆ. ಫೋನಿದೆ, ಫ್ರಿಡ್ಜ್ ಇದೆ, ಎ.ಸಿ. ಇದೆ! …ಈಗ ನಾನು ಆರ‍್ಡಿನರಿ ಮ್ಯಾನ್ ಅಲ್ಲ, ಯೂವ್ ಸೀ? ಇಪ್ಪತ್ತು ಸಾವಿರ ಸಂಬಳದೋನು! …ನನಗೇ ಸೋಷಿಯಲ್ ಸ್ಟೇಟಸ್ ಇದೆ! ಐ ಯಾಂ ಹ್ಯಾಪಿ! ವೆರಿ ವೆರಿ ಹ್ಯಾಪಿ!
ಅಪ್ಪಾಜಿ : ಮತ್ತೆ? …ಈಗ ಹಾಗನ್ಸೋಲ್ವಾ?
ಜಗಳೂರ್ : ಹ್ಯಾಗೆ?
ಅಪ್ಪಾಜಿ : ಅನ್ಯಾಯಕ್ಕೆ ಸೇಡು ತೀರ್‌ಸ್ಕೋಬೇಕು ಅನ್ತಾ?
ಜಗಳೂರ್ : (ಮತ್ತೆ ಸಿಟ್ಟಿಗೆ ಸಾಗುತ್ತಾ) ಅನ್ಸತ್ತೆ. ಕೆಲವು ಸಲ ಇದನ್ನೆಲ್ಲಾ ಬಿಟ್ಟು ಉರಿಯೋ ಪಂಜು ಹಿಡ್ಕೊಂಡ್ ಓಡೋಣಾಂತ ಅನ್ಸತ್ತೆ!… ಬಾಪೂಜಿ, ನಾನು ಸುಳ್ಳು ಹೇಳ್ತಾ ಇಲ್ಲಾ! …ಒಂದು ದಿನ ನಿಜವಾಗ್ಲೂ ಎದ್ದು ಬಿಡ್ತೀನಿ! …ಆಗ ಊರ‍್ಗೆಲ್ಲಾ ಕೂಗಿ ಕೂಗಿ ಹೇಳ್ತೀನಿ! …”ಏಕ್‌ನಾಥ್‌ರಾವ್ ನನ್ನ ತಂಗೀನ ಕೆಡ್‌ಸ್ದಾ! ನಮ್ಮಪ್ಪನ್ನ ಸುಟ್ಟು ಹಾಕ್ದಾ” ಅಂತ್ಹೇಳ್ತೀನಿ! (ಕಿರುಚುತ್ತಾ ಇದ್ದವನು ತಟ್ಟನೆ ಅಪ್ಪಾಜಿಯತ್ತ ತಿರುಗಿ) ಅಪ್ಪಾಜಿ, ಈ ವಿಷಯ ಅಸೆಂಬ್ಲಿವರ‍್ಗೂ ಹೋಗಿತ್ತು! …ಅಲ್ಲಿ ಕಾನೂನು-ಕಾಯಿದೆ ಅನ್ತಾ ನಾಟ್ಕ ಮಾಡ್ಬಿಟ್ಟ್ರು! ಏಕನಾಥ್‌ರಾವ್ ಜಾಗದಲ್ಲಿ ಅವರ್ ಮನೇಲ್ಲಿ ಜೀತಕ್ಕಿದ್ದ ಶಿಂಗ್ಯಾನ ನಿಲ್ಲ್‌ಸಿ, ತಪ್ಪಿತಸ್ಥ ಅಂತನ್ಸಿ, ಜೈಲಿಗ್ ಕಳ್‌ಸ್ಬಿಟ್ಟ್ರು!
ಅಪ್ಪಾಜಿ : ಹೌದಾ?
ಜಗಳೂರ್ : ಹ್ಞೂಂ! …ಈಗ ಶಿಂಗ್ಯಾನ ಹೆಂಡತೀಗೆ ವಾದಿರಾಜ ತಿಂಗ್ಳು ತಿಂಗ್ಳು ದುಡ್ಡು ಕಳ್‌ಸ್ತಾನೆ! ಅವಳ ಸಂಸಾರ ನಡ್‌ಸ್ತಾನೆ! ಹ್ಹಹ್ಹಹ್ಹ…!
ಅಪ್ಪಾಜಿ : (ಸ್ವಗತದಂತೆ) ಇದೆಲ್ಲಾ ಸಾಧ್ಯಾನಾ? ದುಡ್ಡು ಕೊಟ್ಟು ಯಾರನ್ನ್ ಬೇಕಾದ್ರೂ ಖೈದಿ ಮಾಡ್ಬೋದಾ? ದುಡ್ಡಿದ್ದವನು ಅಪರಾಧ ಮಾಡ್‌ದ್ರೂ ಸುಖವಾಗಿ ಹೊರಗೆ ಇರ‍್ಬೋದಾ? …ಛೇ!ಛೇ! ನಾನು ಇದನ್ನೆಲ್ಲಾ ಯೋಚ್ನೆ ಮಾಡ್‌ಬಾರದು! …ಇದೆಲ್ಲಾ ನನಗ್ ಅರ‍್ಥ ಆಗಲ್ಲ! (ಎನ್ನುತ್ತಾ ಚರಕದ ಬಳಿಬಂದು ಅದನ್ನು ತಿರುವುತ್ತಾರೆ)
[ಅಪ್ಪಾಜಿ ತಮ್ಮದೇ ಲೋಕದಲ್ಲಿರುವುದನ್ನ ಗಮನಿಸಿ ಅವರ ಬಳಿಗೆ ಬರುವ ಜಗಳೂರ್. ಅಪ್ಪಾಜಿಯನ್ನು ಹಿಂದಕ್ಕೆ ಸರಿಸಿ ತಾನು ಚರಕ ತಿರುವುತ್ತಾ ಮಾತಾಡುತ್ತಾನೆ.]
ಜಗಳೂರ್ : ಆದರೆ ಅಪ್ಪಾಜಿ, ವಾದಿರಾಜರಾವ್ ಒಳ್ಯೋನು! …ಅವನದ್ದು ವಿಶಾಲ ಹೃದಯ! ಅವನು ಶಿಂಗ್ಯಾನ್ಗೂ ಒಳ್ಳೇದು ಮಾಡ್ತಾನೆ! ಇನ್ನೊಂದೆರಡು ವರ‍್ಷದಲ್ಲಿ ಶಿಂಗ್ಯಾನ ಮಗನ್ಗೆ ನಮ್ಮ ಆಫೀಸಲ್ಲೇ ಪ್ಯೂನ್ ಕೆಲಸ ಕೊಡ್ತಾನಂತೆ! ವಾಟ್ ಎವರ್ ಮೇ ಬಿ ಹಿಸ್ ಪರ್ಸನಲ್ ಲೈಫ್? ವಾದಿರಾಜ್‌ರಾವ್ ಇಸ್ ಎ ಜಂಟಲ್‌ಮನ್! …ಅವನನ್ನ ನೋಡ್ಕೊಂಡು ಮನಸ್ಸನ್ನ ಸಾಯಿಸ್ಕೋಬೇಕು!
ಅಪ್ಪಾಜಿ : ನಿಜ, ನಿಜ. ಹೊಟ್ಟೇನ ಸಾಯ್ಸೋದಕ್ಕಿಂತ ಮನಸ್ಸನ್ನ ಸಾಯ್ಸೋದೆ ಒಳ್ಳೇದು! ಅದು ಸುಲಭ ಕೂಡ! (ಜಗಳೂರ್ ನಕ್ಕಂತೆ ನಗುತ್ತಾರೆ)
ಜಗಳೂರ್ : (ಚರಕ ನಿಲ್ಲಿಸಿ ಮೊದಲಿನಂತೆ ಕಸದ ಬುಟ್ಟಿಯ ಮೇಲೆ ಕೂರುತ್ತಾ) ನಗಿ ಬಾಪೂಜಿ, ನಗಿ! ಆದರೆ ಇದು ಸತ್ಯ! ಮನಸ್ಸನ್ನ ಸಾಯ್‌ಸ್ಕೊಂಡ್ ಬಹಿರಂಗದಲ್ಲಿ ಬದುಕ್ಬೋದು, ಹೊಟ್ಟೆ ಸಾಯ್‌ಸ್ಕೊಂಡು ಬದುಕೋಕ್ಕಾಗಲ್ಲ!
ಅಪ್ಪಾಜಿ : ಹೌದು, ಹೌದು. …ಇನ್ನ್‌ಮುಂದೆ ಹಸಿವನ್ನ ಕೊಂದು, ಮನಸ್ಸನ್ನ ಬದುಕ್ಸೋ ಜನ ಇರೋದೇ ಇಲ್ವೇನೋ?
ಜಗಳೂರ್ : (ಗುಂಡಿನ ಫ್ಲಾಸ್ಕನ್ನ ಎತ್ತಿ ಖಾಲಿ ಮಾಡುವಂತೆ ಕುಡಿಯುತ್ತಾನೆ. ನಂತರ ಫ್ಲಾಸ್ಕಿನಿಂದ ಉದುರುವ ಕೊನೆ ಹನಿಗಾಗಿ ನಾಲಿಗೆ ಚಾಚಿ ಹಿಡಿದು) ಹ್ಞೂಂ! ಹ್ಞೂಂ! ಕೊನೆಹನೀಗೆ ಕಾಯ್ತಾ ಎಲ್ಲಾ ಮರೀಬೇಕು!
ಅಪ್ಪಾಜಿ : ಎಲ್ಲಾ ಸುಖಗಳು ಎದುರಿಗೇ ಇದೆ! ಯಾವುದನ್ನ ಎತ್ಕೊಳ್ಲಿ? ಯಾವುದನ್ನ ಬಿಡ್ಲಿ? ಸಂತೆಯಲ್ಲಿ ನಿಂತಿದ್ದಾನೆ ಕಬೀರ! (ಹಾಡಿನಂತೆ) ಕಬೀರ್ ಖಡ ಬಾಜರ್ ಮೇ| ಲಿಯೇ ಲುಕಾಠಿ ಹಾಥ್|| ಜೋ ಫುಕೇ ಅಪ್‌ನಾ ಘರ್ ಅಪ್‌ನೇ ಹಾಥ್| ವಹೀ ಹಮಾರೇ ಸಾಥ್||
[ಹಾಡುವ ಅಪ್ಪಾಜಿಯನ್ನ ಅರೆನಿದ್ರಾ ಭಂಗಿಯಲ್ಲಿ ನೋಡುವ ಜಗಳೂರ್]
ಅಪ್ಪಾಜಿ : ಸಂಸಾರ ಸುಖ ಮರ‍್ತೋನ್ಗೆ ಮಾತ್ರ ಸಮಾಜದ ಏಳಿಗೆಗೆ ಬಂಡಾಯ ಮಾಡೋಕ್ಕೆ ಸಾಧ್ಯನಂತೆ! ನಮ್ಮ ಜೊತೆ ಜೈಲಲ್ಲಿದ್ದ ಸ್ವಾತಂತ್ರ್ಯವೀರರು ಯಾವಾಗ್ಲೂ ಈ ಹಾಡು ಹೇಳ್ತಾ ಇದ್ದರು! ಈಗ ಈ ಹಾಡಿಗೆ ಅರ‍್ಥ ಉಳ್ದಿಲ್ಲ. ಇವೆಲ್ಲಾ ಹಿತವಾಗಿ ಕಾಲ್‌ಚಾಚ್ಕೊಂಡು ಕೂತೋರು ಕೇಳೋಕ್ಕಿರೋ ಸಾಲು ಮಾತ್ರ. ಇದು ನಿಜ ಆಗೋದಲ್ಲ! ಕಾಲ ಬದ್ಲಾಗಿದೆ, ಪೂರಾ ಬದ್ಲಾಗಿದೆ!
[ಜಗಳೂರ್ ಮತ್ತೆ ಅಸ್ವಸ್ಥನಾಗುತ್ತಾನೆ. ಕೋಣೆಯ ತುಂಬಾ ಎಡ್ಡಾದಿಡ್ಡಿ ನಡೆಯುತ್ತಾನೆ. ಅವನ ನಡಿಗೆಯ ಜೊತೆಗೆ ಅವನ ತಾಯಿ ಹೇಳುತ್ತಾ ಇದ್ದ ಜನಪದ ಹಾಡಿನ ರಾಗವನ್ನೂ ಹೇಳುತ್ತಾನೆ. ಆಗಲೇ ಕೋಣೆಯ ಬಾಗಿಲನ್ನ ಯಾರೋ ತಟ್ಟಿದ ಸದ್ದು ಕೇಳುತ್ತದೆ. ಜಗಳೂರ್ ಹಾಡು ನಿಲ್ಲಿಸದೆ ಬಾಗಿಲತ್ತ ನೋಡುತ್ತಾನೆ. ಹಾಗೇ ನೋಡುವಾಗಲೇ ಮತ್ತೆ ಜಾರಿ ಬೀಳುತ್ತಾನೆ.]
ಅಪ್ಪಾಜಿ : (ಬಾಗಿಲತ್ತ ನೋಡುತ್ತಾ) ಯಾರದು? ಬನ್ನಿ ಒಳಗಡೆ!
[ಬಾಗಿಲು ತೆರೆದು ಒಳಗೆ ಬರುವ ರಾಘು. ಅವನು ಮಧ್ಯವಯಸ್ಕ. ಉದ್ಯಮಿಯ ವೇಷದಲ್ಲಿದ್ದಾನೆ. ಬಾಗಿಲ ಬಳಿಯೇ ನಿಲ್ಲುತ್ತಾನೆ]
ರಾಘು : ಮಿಸ್ಟರ್ ಟಿ.ಸಿ.ಜಗಳೂರ್! (ಎಂದು ಮಾತು ತಡೆಯುತ್ತಾನೆ) ಐ ಯಾಂ ಸ್ಸಾರಿ! ನಿಮ್ಮ ತಾಯಿ…
ಅಪ್ಪಾಜಿ : (ಕಾತರದಿಂದ) ಏನಾಯ್ತು ಆಕೇಗೆ? ಕೇಳಿ ತಿಪ್ಪೇಸ್ವಾಮಿ, ಏನಾಯ್ತು ಆ ತಾಯಿಗೆ ಅನ್ತಾ ಕೇಳಿ?
ರಾಘು : ಷಿ ಇಸ್ ಸೀರಿಯಸ್! ಆಕೇನ ಹಾಸ್ಪಿಟಲ್‌ಗೆ ಅಡ್‌ಮಿಟ್ ಮಾಡಿದಾರೆ! …ಅವರು ಪ್ರತಿನಿಮಿಷ ನಿಮ್ಮ ಹೆಸರನ್ನ ಹೇಳ್ತಾ ಇದಾರಂತೆ, ಮಿ.ಜಗಳೂರ್! ನಮ್ಮ ಡ್ರೈವರ್‌ಗೆ ಹೇಳಿದೀನಿ. ನೀವು ಆದಷ್ಟು ಬೇಗ ಆಸ್ಪತ್ರೆ ತಲುಪಿದ್ರೆ ಒಳ್ಳೇದು!
[ಜಗಳೂರ್ ಜಾರಿಬಿದ್ದಿದ್ದವನು ಮೊಣಕಾಲ ಮೇಲೆ ಕೂರುತ್ತಾನೆ. ಮತ್ತೆ ಅದೇ ಜನಪದ ಹಾಡನ್ನು ಹೇಳತೊಡಗುತ್ತಾನೆ. ತಾಯಿಯ ಸುದ್ದಿ ಅವನಿಗೆ ತಲುಪಿದಂತೆ ಕಾಣುವುದಿಲ್ಲ.]
ಅಪ್ಪಾಜಿ : ತಿಪ್ಪೇಸ್ವಾಮಿ, ತಿಪ್ಪಣ್ಣಾ!… ಏಳಿ, ನಿಮ್ಮ ತಾಯಿ ಕರೀತಾ ಇದಾಳಂತೆ, ತಕ್ಷಣ ಹೊರಡಿ.
[ಏಳಲಾಗದ ಅವನನ್ನ ರಾಘು ಬಳಿಗೆ ಬಂದು ತೋಳು ಹಿಡಿದು ಎಬ್ಬಿಸುತ್ತಾನೆ. ರಾಘುವಿನ ಜೊತೆಗೆ ಬಾಗಿಲ ಕಡೆಗೆ ಸಾಗುವಾಗ ಅದೇ ಹಾಡು ಹೇಳುತ್ತಾ ಇರುವ ಜಗಳೂರ್, ಬಾಗಿಲ ಬಳಿ ನಿಂತು ಅಪ್ಪಾಜಿಯತ್ತ ನೋಡುತ್ತಾ ಮಾತಾಡುತ್ತಾನೆ.]
ಜಗಳೂರ್ : ನಾನು ಬರ‍್ತೀನಿ ಅಪ್ಪಾಜಿ! …ತುಂಬಾ, ತುಂಬಾ ಮಾತಾಡ್‌ಬಿಟ್ಟೆ. …ಗಾಯಗಳೆಲ್ಲಾ ಮತ್ತೆ ಹಸಿ ಆಗ್‌ಬಿಟ್ಟಿದಾವೆ. …ಅವಕ್ಕೆಲ್ಲಾ ಕೀವು ತುಂಬ್ಕೊಳೋಕ್ಕೆ ಮುಂಚೆ ತೊಳ್ಕೋಬೇಕು. ಬರ‍್ತೀನಿ! (ಎಂದು ಹೊರಟವನು ಆಯಾತಪ್ಪಿ ಬೀಳಲಿದ್ದಾಗ ರಾಘು ಹಿಡಿದುಕೊಳ್ಳುತ್ತಾನೆ. ಜಗಳೂರ್ ಸಂಭಾವಿತನಂತೆ “ಎಕ್ಸ್‌ಕ್ಯೂಸ್ ಮಿ” ಎಂದು, ಮರಳಿ ಅಪ್ಪಾಜಿಯತ್ತ ತಿರುಗಿ ಹಾಡುತ್ತಾನೆ) “ಕಬೀರ್ ಖಡಾ ಬಾಜಾರ್ ಮೇ ಲಿಯೇ ಲುಕಾಠಿ ಹಾಥ್!” ಸರೀನಾ ಬಾಪೂಜಿ!
[ರಾಘು ಅವನನ್ನು ಬಾಗಿಲಿಂದ ಆಚೆಗೆ ಬಲವಂತವಾಗಿ ತಳ್ಳುತ್ತಾನೆ]
ರಾಘು : ಶಂಕ್ರ, ಇವರನ್ನ ಕಾರಿನ ತನಕ ಕರ‍್ಕೊಂಡ್‌ಹೋಗಿ ಬಿಡೋ! (ಎಂದು ಕೂಗುತ್ತಾನೆ. ನಂತರ ತಾನೂ ಹೊರಡಲಿದ್ದಾಗ)
ಅಪ್ಪಾಜಿ : ರಾಘೂ!
ರಾಘು : ಯೆಸ್ ಪಪ್ಪಾ! ಊಟ ತರೋಕ್ಕೆ ಹೇಳ್ಲಾ?
ಅಪ್ಪಾಜಿ : (ಬೇಡ ಎಂಬಂತೆ ತಲೆಯಾಡಿಸಿ) ತಿಪ್ಪೇಸ್ವಾಮಿ ಅವರ ತಾಯೀಗ್ ಏನಾಯ್ತಂತೆ?
ರಾಘು : ಸರಿಯಾಗ್ ಗೊತ್ತಾಗ್ಲಿಲ್ಲ ಪಪ್ಪಾ! ಆ ಶತದಡ್ಡನ ಹೆಂಡತಿ ಫೋನಲ್ಲಿ ಏನೇನೋ ವದರ‍್ತಾ ಇದ್ಲು. ಆತನ ತಾಯಿ ಏನೋ ಬೆಂಕಿ ಹಚ್ಕೊಂಡ್ರೂಂತ ಅಸ್ಪಷ್ಟವಾಗ್ ಗೊತ್ತಾಯ್ತು. …ಮೈ ಮೇಲೆ ಸೀಮೆಎಣ್ಣೆ ಸುರ‍್ಕೊಂಡಿರ‍್ಬೇಕು! ಈ ಜನ ಅದಕ್ಕಿಂತ ಒಳ್ಳೇ ಕೆಲಸ ಇನ್ನೇನ್ ಮಾಡ್ತಾರೆ ಹೇಳಿ? …ಪಪ್ಪಾ, ನೀವು ಇಂಥಾ ವಿಷಯಕ್ಕೆಲ್ಲಾ ಹೆಚ್ಚಿಗೆ ತಲೆಕೆಡಸ್ಕೋಬೇಡಿ! ನಿಮ್ಮ ಆರೋಗ್ಯಕೆ ಒಳ್ಳೇದಲ್ಲಾ! …ನಾನ್ ಊಟ ಕಳ್‌ಸ್ತೀನಿ.
[ರಾಘು ನಿಷ್ಕ್ರಮಿಸುತ್ತಾನೆ. ಅಪ್ಪಾಜಿ ಒಬ್ಬರೇ ಉಳಿಯುತ್ತಾರೆ. ಮತ್ತೆ ಸಮುದ್ರದ ಭೋರ್ಗರೆತ ಕೇಳುತ್ತದೆ. ಅಪ್ಪಾಜಿ ರಂಗದ ಮುಂಭಾಗಕ್ಕೆ ಬರುತ್ತಾರೆ.]
ಅಪ್ಪಾಜಿ : ಬದ್ಲಾಗಿದೆ. ಎಲ್ಲಾ ಬದ್ಲಾಗಿದೆ! ಹೊಟ್ಟೆ ಮನಸ್ಸನ್ನ ತಿನ್ನತ್ತೆ! ಮನುಷ್ಯ ಮನುಷ್ಯನ್ನ ತಿನ್ತಾನೆ! ಯಾವ್ದೂ ಮೊದಲಿನ ಹಾಗಿಲ್ಲ! ಅದಕ್ಕೇ ನಮಗೇನೂ ಅರ‍್ಥ ಆಗಲ್ಲ! ರಾ….ಘೂ…!
[ಅವರ ಮತ್ತೊಂದು ಪಕ್ಕಕ್ಕೂ ವಾಯು ಬಡಿಯಿತೋ ಎಂಬಂತೆ ಅಪ್ಪಾಜಿ ಕುಸಿಯುತ್ತಾರೆ. ಅವರ ಮಾತು ಕೂಡ ನಿಂತಂತೆ, ಬಾಯಿ-ಕೈ ಎಲ್ಲವೂ ಒದರಿಕೊಳ್ಳುತ್ತವೆ. ಅವರ ಮೇಲಿದ್ದ ದೀಪ ಆರಿ, ಅವರ ಹಿಂದಿದ್ದ ಗೋಡೆಯ ಮೇಲಿದ್ದ ಗಾಂಧೀಜಿ ಚಿತ್ರಕ್ಕೆ ದೀಪ ಬರುತ್ತದೆ. ಹಿನ್ನೆಲೆಯಲ್ಲಿ “ವೈಷ್ಣವ ಜನತೋ…” ಭಜನ್ ಕೇಳುತ್ತದೆ. ರಂಗದ ಮೇಲೆ ಸಂಪೂರ್ಣ ಕತ್ತಲಿಳಿಯುತ್ತದೆ.]

Advertisements

1 Response to “ಬಿ.ಸುರೇಶ ಬರೆದಿರುವ ‘ಅರ್ಥ’”


  1. 1 raviraj August 11, 2009 at 12:15 pm

    namste sir, e natakavannu hege nirupane madiddare ? noduva kutuhala hechaguttide


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: