ಒಳ್ಳೆಯದರ ಹುಡಕಾಟದಲ್ಲಿ ಕಳಕೊಂಡದ್ದು…

ಬೆಳಕಿನೊಳಗಣ ಬೆಗು – ೧೧

ಕಳೆದ ಬಾರಿ ನಿಮ್ಮೊಂದಿಗೆ ರಾಜಕೀಯ ಚಿತ್ರಗಳನ್ನು ಕುರಿತು ಮಾತಾಡಿದ್ದೆ. ಈಗ ಅಂತಹ ರಾಜಕೀಯ ಚಿತ್ರವೊಂದರಲ್ಲಿ ಕಥೆಗಾರನಿಗೆ ಅಥವಾ ನಿರ್ದೇಶಕನಿಗೆ ಸ್ಪಷ್ಟ ನಿಲುವು ಇಲ್ಲದೆ ಹೋದಾಗ ಎಂದು ತಿಳಿಸುವ ಪ್ರಯತ್ನ ಮಾಡುತ್ತೇನೆ.
ಚಲನಚಿತ್ರ ಎಂಬುದು ಅತ್ಯಂತ ಪ್ರಬಲ ಮಾಧ್ಯಮ. ಅಲ್ಲಿ ಕಥೆಯಾಗಿ ಒಂದು ಕಲ್ಪನೆಯನ್ನು ಇಡುವಂತೆಯೇ ವಾಸ್ತವವನ್ನು ಸಹ ಕಥೆಯಾಗಿ ಹೇಳುವ ಅವಕಾಶವಿದೆ. ಈ ನಿಟ್ಟಿನಲ್ಲಿ ಅನೇಕ ಚಿತ್ರಗಳು ನಮ್ಮಲ್ಲಿ ಬಂದಿದೆ. ಸ್ವಾತಂತ್ರ್ಯ ಯೋಧರ ಚಿತ್ರಗಳು, ಐತಿಹಾಸಿಕ ವ್ಯಕ್ತಿಗಳನ್ನು ಕುರಿತ ಚಿತ್ರಗಳು ಎಂದು ಇವುಗಳನ್ನು ವಿಂಗಡಿಸಬಹುದು. ಅಂತೆಯೇ ನಮ್ಮ ಸಮಕಾಲೀನ ನಾಯಕರ ಮತ್ತು ವ್ಯಕ್ತಿಗಳನ್ನು ಕುರಿತ ಕಥೆಯನ್ನುಳ್ಳ ಚಿತ್ರಗಳು ಸಹ ನಮ್ಮಲ್ಲಿ ಬಂದಿವೆ. ಇವುಗಳಲ್ಲಿ ಕೆಲವು ಇನ್ಸ್‌ಪೆಕ್ಟರ್‌ಗಳನ್ನು (’ಸಾಂಗ್ಲಿಯಾನ’, ’ಕೆಂಪಯ್ಯ’ ಮುಂತಾದವು) ಕುರಿತ  ಚಿತ್ರಗಳು, ಮತ್ತೆ ಕೆಲವು ಸಮಾಜ ದ್ರೋಹಿಗಳನ್ನು ಕುರಿತ (’ವೀರಪ್ಪನ್’, ‘ಡೆಡ್ಲಿಸೋಮ’ ಮುಂತಾದವು) ಚಿತ್ರಗಳು. ಮೇಲೆ ಹೆಸರಿಸಿದ ಚಿತ್ರಗಳಲ್ಲಿ ಆಯಾ ವ್ಯಕ್ತಿಗಳ ಹೆಸರನ್ನು ಇಡಲಾಗಿತ್ತಾದರೂ ಅವುಗಳಲ್ಲಿ ವಾಸ್ತವವನ್ನು ಮೀರಿದ ಅನೇಕ ಪ್ರಕ್ತಿಪ್ತಗಳು ಇದ್ದವು. ಅವು ಜನಪ್ರಿಯತೆ ಗಳಿಸಲೆಂದೇ ತಯಾರಾದ ಚಿತ್ರಗಳಾಗಿದ್ದವು. ಆದರೆ ವಾಸ್ತವದಲ್ಲಿ ಆಗಿಹೋದ ವ್ಯಕ್ತಿಗಳನ್ನು ಕುರಿತು ವಾಸ್ತವವಾದಿ ನೆಲೆಯಲ್ಲಿ ಚಿತ್ರ ತಯಾರಿಸಿರುವವರು ಕಡಿಮೆ. ಆ ನಿಟ್ಟಿನಲ್ಲಿ ಕನ್ನಡದಲ್ಲಿ ಪ್ರಥಮ ಪ್ರಯತ್ನ ಎಂಬಂತೆ ‘ಸೈಯನೈಡ್’ ಎಂಬ ಚಿತ್ರ ತಯಾರಾಗಿದೆ. ಈ ಚಿತ್ರದಲ್ಲಿ ಭಾರತದ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿಯವರನ್ನ ಹತ್ಯಗೈದ ಶಿವರಾಸನ್ ಮತ್ತು ಶುಭ ಅವರ ಕಡೆಯ ದಿನಗಳನ್ನು ಸಾಕ್ಷ್ಯಚಿತ್ರದ ರೀತಿಯಲ್ಲಿ ಹಿಡಿದಿರಿಸಲಾಗಿದೆ. ಇಂತಹ ಚಿತ್ರಗಳನ್ನು ಕುರಿತ ಒಳನೋಟವೊಂದನ್ನು ನಿಮಗೆ ನೀಡಲೆಂದು ಆ ಚಿತ್ರ ಬಿಡುಗಡೆಯಾಗುವ ಸಂದರ್ಬದಲ್ಲಿಯೇ ಈ ಮಾತುಗಳನ್ನು ನಿಮ್ಮೊಂದಿಗೆ ಆಡುತ್ತಿದ್ದೇನೆ.
ಈ ಚಿತ್ರವನ್ನು ತಯಾರಿಸಿದವರು ಕನ್ನಡದವರೇ ಆದ ರಮೇಶ್ ಅವರು. ಈ ಹಿಂದೆ ಅವರು ’ಸಂತೋಷ’ ಎಂಬ ಚಿತ್ರವನ್ನು ತಯಾರಿಸಿದ್ದರು. ಸೈಯನೈಡ್ ರಮೇಶ್ ಅವರ ಎರಡನೆಯ ಚಿತ್ರ. ಈ ಚಿತ್ರದ ಛಾಯಾಗ್ರಾಹಕರು ರಾಷ್ಟ್ರಖ್ಯಾತಿಯವರಾದ ರತ್ನವೇಲು, ಸಂಕಲನಕಾರರು ಸಹ ರಾಷ್ಟ್ರಖ್ಯಾತಿಯನ್ನು ಹೊಂದಿದ ಆಂಟನಿ ಅವರು. ಆದ್ದರಿಂದಲೇ ಈ ಚಿತ್ರದಲ್ಲಿ ಬಳಸಲಾಗಿರುವ ಬಣ್ಣಗಳು, ಕ್ಯಾಮೆರಾ ಚಲನೆ ಎಲ್ಲಕ್ಕೂ ಒಂದು ಅಂತಾರಾಷ್ಟ್ರೀಯ ಗುಣಮಟ್ಟ ಬಂದಿದೆ. ‘ಸೈಯನೈಡ್’ ಚಿತ್ರ ತಾಂತ್ರಿಕ ಗುಣಮಟ್ಟದ ದೃಷ್ಟಿಯಿಂದ ಕನ್ನಡದ ಶ್ರೇಷ್ಟ ಚಿತ್ರಗಳಲ್ಲಿ ಒಂದು. ಆದರೆ ಚಿತ್ರವೊಂದಕ್ಕೆ ತಂತ್ರ ಪ್ರಧಾನವಲ್ಲ. ಅದು ಕಥೆಗೆ ಬೆಂಬಲವಾಗಿ ನಿಲ್ಲುವ ಸಾಧನ ಮಾತ್ರ. ತಂತ್ರ ಎಂಬುದನ್ನ ಚಿತ್ರದ ಕಥೆಯ ಕೈಕಾಲು ಎನ್ನಬಹುದು. ಅದೇ ಮಿದುಳಾಗುವುದಿಲ್ಲ, ಹೃದಯವಾಗುವುದಿಲ್ಲ.


ಈ ದೃಷ್ಟಿಯಿಂದ ಆಲೋಚಿಸಿದಾಗ ‘ಸೈಯನೈಡ್’ ಅನೇಕ ಗೊಂದಲಗಳನ್ನು ಮತ್ತು ಚಿತ್ರದಲ್ಲಿ ಉತ್ತರಿಸಿಲ್ಲ ಎಂಬಂತಹ ಪ್ರಶ್ನೆಗಳನ್ನು ಎತ್ತುತ್ತದೆ. ಚಿತ್ರದ ಕಥೆ ಸ್ಥೂಲವಾಗಿ ಹೀಗಿದೆ. ಪ್ರಧಾನಮಂತ್ರಿಯನ್ನ ಹತ್ಯೆ ಮಾಡಿದ ನಂತರ ಶಿವರಾಸನ್ ಮತ್ತು ಅವನ ತಂಡದ ಜನ ಪೋಲೀಸರಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬರುತ್ತಾರೆ. ಹಾಗೇ ಬಂದವರು ರಂಗನಾಥ ಎಂಬ ಬ್ರೋಕರ್‌ನ ಸಹಾಯದಿಂದ ಮನೆಯೊಂದನ್ನು ಬಾಡಿಗೆಗೆ ಪಡೆಯುತ್ತಾರೆ. ಆ ಕಾಲದಲ್ಲಿ ಶಿವರಾಸನ್ ಗುಂಪಿನ ಸಂಪರ್ಕಕ್ಕೆ ಬರುವ ರಂಗನಾಥನ ಮಡದಿ, ರಂಗನಾಥ ಎಲ್ಲರೂ ಆ ಗುಂಪು ಸೃಜಿಸುವ ವಾತಾವರಣದಲ್ಲಿ ಬದುಕುತ್ತಾರೆ. ಹೀಗೇ ಬೆಂಗಳೂರಿನಲ್ಲಿ ಇದ್ದುಕೊಂಡೇ ಶ್ರೀಲಂಕಾಗೆ ಪಲಾಯನ ಮಾಡಲು ಶಿವರಾಸನ್ ಮತ್ತು ತಂಡ ಪ್ರಯತ್ನಿಸತೊಡಗುತ್ತದೆ. ಇವರ ಪ್ರಯತ್ನಗಳಿಗೆ ಸಮಾನಂತರವಾಗಿ ಪೋಲೀಸರು ಈ ಭಯೋತ್ಪಾದಕರನ್ನು ಹಿಡಿಯುವ ಯತ್ನ ಮಾಡುತ್ತಿದ್ದಾರೆ. ಅಲ್ಲಿಂದ ಸರಿಸುಮಾರು ಹದಿನೈದು ದಿನಗಳ ಕಥೆ ಪ್ರೇಕ್ಷಕರ ಎದುರು ಬಿಚ್ಚಿಕೊಳ್ಳುತ್ತದೆ. ಪೋಲೀಸರು ಶಿವರಾಸನ್ ಮತ್ತು ತಂಡದವರನ್ನು ಸುತ್ತುಗಟ್ಟಿ ಹಿಡಿಯುತ್ತಾರೆ. ತಪ್ಪಿಸಿಕೊಳ್ಳಲಾಗದ ಶಿವರಾಸನ್ ಗುಂಪು ಸೈಯನೈಡ್ ಸೇವಿಸಿ ಸಾಯುತ್ತದೆ.
ಈ ಕಥೆ ದಿನಪತ್ರಿಕೆ ಓದುವ ಅಭ್ಯಾಸವಿರುವ ಎಲ್ಲಾ ಭಾರತೀಯನಿಗೂ ಗೊತ್ತಿರುವಂತಹುದೇ. ಇಂತಹದೊಂದು ವಿವರವನ್ನು ಹಾಡುಗಳಿಲ್ಲದೆ, ಸಾಹಸ(ಫೈಟ್) ದೃಶ್ಯಗಳಿಲ್ಲದೆ ಸಿನಿಮಾ ಮಾಡುವುದು ಸಾಹಸವೇ.
ಆದರೆ ಚಿತ್ರತಯಾರಕನ ನಿಲುವೇನು ಎಂಬುದು ಚಿತ್ರ ಮುಗಿದ ನಂತರ ಪ್ರಶ್ನೆಯಾಗಿಯೇ ಉಳಿಯುತ್ತದೆ. ಶ್ರೀಲಂಕಾದ ಉಗ್ರರು ನಮ್ಮ ರಾಷ್ಟ್ರದ ನಾಯಕನನ್ನು ಕೊಂದದ್ದು ಸರಿಯೇ-ತಪ್ಪೇ? ಪ್ರೇಕ್ಷಕ ಉಗ್ರರಿಗೆ ಅನುಕಂಪ ತೋರಿಸಬೇಕೇ-ಬೇಡವೇ? ಶ್ರೀಲಂಕಾದಲ್ಲಿ ಆಗುತ್ತಿರುವ ಹಿಂಸೆಯನ್ನ ಸ್ವಾತಂತ್ರ್ಯ ಚಳವಳಿ ಎನ್ನಬೇಕೇ ಅಥವಾ ದೇಶವಿಭಜಕ ಚಳವಳಿ ಎನ್ನಬೇಕೆ? ಇಂತಹ ಉಗ್ರರಿಗೆ ಎಂದೋ ಒಮ್ಮೆ ಆರ್ಥಿಕ ಸಹಾಯ ಮಾಡಿದ ರಂಗನಾಥನಂತಹವರು ಆ ಚಳವಳಿಯ ಬಗ್ಗೆ ಅನುಕಂಪ ಬೆಳೆಸಿಕೊಂಡು, ರಾಷ್ಟ್ರನಾಯಕನನ್ನು ಕೊಂದವರಿಗೆ ರಕ್ಷಣೆ ಒದಗಿಸಿದ್ದು ಸರಿಯೇ? ಹೀಗೆ ಹಲವು ಹತ್ತು ಪ್ರಶ್ನೆಗಳು ಉತ್ತರವಿಲ್ಲದೆ ಉಳಿಯುತ್ತವೆ.
ಚಿತ್ರದ ಕಥೆಗಾರರು ನಿರೂಪಣೆಯನ್ನು ಅತ್ಯಂತ ಚುರುಕಾಗಿ ಮಾಡುತ್ತಾರೆ. ಪ್ರೇಕ್ಷಕ ಯೋಚಿಸಲು ಅವಕಾಶವಿಲ್ಲದಂತಹ ವೇಗದೊಡನೆ ಕಥೆ ಸಾಗುತ್ತದೆ. ಆದರೆ ಅದಾಗಲೇ ಅಂತ್ಯವೇನು ಎಂದು ತಿಳಿದಿರುವ ನೋಡುಗನಿಗೆ ಚಿತ್ರವು ತಾತ್ವಿಕವಾಗಿ ಹೇಳಬೇಕಾದ ವಿವರಗಳನ್ನು ಬಿಟ್ಟುಕೊಡುವುದೇ ಇಲ್ಲ. ಚಿತ್ರದ ಅಂತ್ಯದಲ್ಲಿ ಶಿವರಾಸನ್ ಮತ್ತವನ ತಂಡದವರು ನಮ್ಮ ಚಳವಳಿ ಯಶಸ್ವಿಯಾಗಲಿ ಎಂದು ಕೂಗಿ ಸೈಯನೈಡ್ ಸ್ವೀಕರಿಸುತ್ತಾರೆ. ಈ ವಿವರವನ್ನು ಪ್ರೇಕ್ಷಕ ಯಾವ ಮಗ್ಗುಲಿನಿಂದ ಸ್ವೀಕರಿಸಬೇಕು ಎಂಬುದನ್ನು ಕಥೆಗಾರ ಸೂಚಿಸುವುದಿಲ್ಲ. ಶಿವರಾಸನ್ ತಂಡದ ಕಥೆಗೆ ಸಮಾನಂತರದಲ್ಲಿ ಬರುವ ಪೋಲೀಸ್ ದಳದ ಕಥೆಯಲ್ಲಿ ಐ.ಪಿ.ಎಸ್. ಕೆಂಪಯ್ಯ ಇದ್ದಾರೆ, ರಾಮಲಿಂಗಂ ಇದ್ದಾರೆ, ಕಾರ್ತಿಕೇಯನ್ ಇದ್ದಾರೆ. ಇವರೆಲ್ಲಾ ಈ ನಾಡಿನ ಜನ ಬಲ್ಲ ಅಧಿಕಾರಿಗಳು. ಇವರ ನಡುವೆ ಇರುವ ಮುಸುಕಿನ ಗುದ್ದಾಟದ ವಿವರಗಳು, ಪೋಲೀಸ್ ಇಲಾಖೆಯ ನಿಧಾನ ಇವುಗಳನ್ನು ಕುರಿತು ಚಿತ್ರ ಅಲ್ಲಲ್ಲಿ ಸೂಚ್ಯವಾಗಿ ಹೇಳುತ್ತದೆ. ಆದರೆ ಈ ಹೇಳಿಕೆಗಳು ಪೋಲೀಸರು ಶಿವರಾಸನ್‌ನನ್ನು ಜೀವಂತವಾಗಿ ಹಿಡಿಯುವಲ್ಲಿ ವಿಫಲವಾದವು ಎಂಬುದನ್ನು ಸೂಚಿಸುವುದಿಲ್ಲ. ಮತ್ತು ಶಿವರಾಸನ್ ಮತ್ತು ರಂಗನಾಥನ ಮೂಲಕವೇ ಕಥೆ ಹೇಳುವ ಕ್ರಮದಿಂದಾಗಿ (ಅದು ನಿರ್ದೇಶಕರ ನಿಲುವಾಗಿಲ್ಲದೆ ಇದ್ದರೂ) ಚಿತ್ರ ನೋಡುವವನು ಉಗ್ರರ ಬಗ್ಗೆ ಅನುಕಂಪ ಬೆಳೆಸಿಕೊಳ್ಳುವ ಸ್ಥಿತಿಗೆ ಬರುತ್ತಾನೆ. ಇದು ಅಪಾಯಕಾರಿ.
ಇಂದು, ರಾಜೀವ್ ಹತ್ಯೆಯ ಕುರಿತು ತಿಳುವಳಿಕೆಯುಳ್ಳ ಅನೇಕರು ಇರುವ ಕಾಲದಲ್ಲಿ ಈ ಚಿತ್ರದ ಬಗ್ಗೆ ಏನು ಬೇಕಾದರೂ ಮಾತಾಡಬಹುದು. ನಾಳೆ, ಅಂದರೆ ಸರಿಸುಮಾರು ಇಪ್ಪತ್ತೈದು ವರ್ಷಗಳ ನಂತರ ಇದೇ ಚಿತ್ರವನ್ನ ನೋಡುವ ಜನ ಏನಂದುಕೊಳ್ದಳಬಹುದು ಯೋಚಿಸಿ. ಎಲ್ಲಿ ಸ್ಪಷ್ಟ ರಾಜಕೀಯ ನಿಲುವು ಇಲ್ಲವೋ ಅದು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ನೋಡುಗ ಅವನಿಗರಿವಿಲ್ಲದಂತೆಯೇ ಹಿಂಸ್ರಪ್ರವೃತ್ತಿಯಿಂದ ಅಥವಾ ಹೆದರಿಕೆ ಬೆದರಿಕೆಗಳಿಂದ ನಡೆಸುವ ಚಟುವಟಿಕೆಗಳನ್ನು ಸ್ವಾತಂತ್ರ್ಯ ಚಳವಳಿ ಎಂದುಕೊಳ್ಳುವುದಿದೆಯಲ್ಲಾ, ಅದು ಅನಾರೋಗ್ಯಕಾರೀ ಬೆಳವಣಿಗೆ. ಆ ದೃಷ್ಟಿಯಿಂದಲೇ ‘ಸೈಯನೈಡ್’ ಒಂದು ಉತ್ತಮ ತಾಂತ್ರಿಕ ಗುಣಮಟ್ಟದ ಚಿತ್ರವಾಗುತ್ತದೆ. ಆದರೆ ಉತ್ತಮ ಅನುಭವ ನೀಡುವ ಚಿತ್ರ ಆಗುವುದಿಲ್ಲ. ಒಟ್ಟಾರೆಯಾಗಿ ಹೀಗೆನ್ನಬಹುದು: ಒಳ್ಳೆಯ ಚಿತ್ರವಾಗಬಹುದಾದ ಅವಕಾಶಗಳು, ‘ಸೈಯನೈಡ್’ಗೆ ಅನೇಕವಿದ್ದವು. ಆದರೆ ಕಥೆಗಾರ ತಾಂತ್ರಿಕ ಹಿರಿಮೆಗೆ ಗಮನಕೊಟ್ಟು ಆ ಅವಕಾಶಗಳನ್ನು ಕಳೆದುಕೊಂಡಿದ್ದಾನೆ.
ಇಂತಹ ಚಿತ್ರಗಳನ್ನು ನೋಡುವ ವಿದ್ಯಾರ್ಥಿಗಳು ಚಾರಿತ್ರಿಕ ಹಾಗೂ ರಾಜಕೀಯ ಎಚ್ಚರಗಳ ಜೊತೆಗೆ ಚಿತ್ರವನ್ನು ನೋಡಬೇಕಾಗುತ್ತದೆ. ಇಲ್ಲವಾದಲ್ಲಿ, ನಿಮ್ಮೂರಿನ ರೌಡಿಗಳು ನಿಮಗೆ ನಾಯಕರಾಗಿ ಕಾಣಿಸಿಬಿಡಬಹುದು. ನಿಮ್ಮೂರಿನ ನಿಧಾನಗತಿಯ ಪೋಲೀಸ್ ಇಲಾಖೆಯೇ ನಿಮಗೆ ಖಳನಾಯಕ ಆಗಿಬಿಡಬಹುದು. ಹಾಗೆ ಆಗದಂತೆ ಎಚ್ಚರವಹಿಸಿ! ಒಟ್ಟು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಚಿಂತಿಸುವಂತಾಗಿರಿ.
ಮರೆಯದಿರಿ : ಒಳ್ಳೆಯ ಸಿನಿಮಾ ನೋಡುವ ಪ್ರೇಕ್ಷಕರಿದ್ದಾಗ ಮಾತ್ರ ಒಳ್ಳೆಯ ಚಿತ್ರಗಳ ತಯಾರಿಕೆ ಹೆಚ್ಚುತ್ತದೆ.

Advertisements

0 Responses to “ಒಳ್ಳೆಯದರ ಹುಡಕಾಟದಲ್ಲಿ ಕಳಕೊಂಡದ್ದು…”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: