ಕಥೆಯೋ-ಚಿತ್ರಕಥೆಯೋ?

ಬೆಳಕಿನೊಳಗಣ ಬೆಗು – ೪ (ಉಷಾಕಿರಣ ವಿದ್ಯಾರ್ಥಿ ಪತ್ರಿಕೆಗಾಗಿ ಸಿದ್ಧಪಡಿಸಿದ ಲೇಖನ – ಮಾಲೆ ೪)

ಇದು ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ. ಸಿನಿಮಾ ಒಂದು ಸಿದ್ಧವಾಗುವಾಗ ಮುಖ್ಯವಾಗುವುದು ಕಥೆಯೋ-ಚಿತ್ರಕಥೆಯೋ? ಇದೊಂದು ರೀತಿಯಲ್ಲಿ ಕೋಳಿ ಮೊದಲೋ? ಮೊಟ್ಟೆ ಮೊದಲೋ ಎಂಬಂತಹ ಪ್ರಶ್ನೆಯೇ! ಇಂತಹ ಪ್ರಶ್ನೆಯೋಮದನ್ನು ಹಿಡಿದುಕೊಂಡೇ ಒಂದು ‘ಒಳ್ಳೆಯ’ ಚಿತ್ರವನ್ನ ಪರಾಮರ್ಶಿಸುವ ಪ್ರಯತ್ನ ಮಾಡಿದರೆ ನಮಗೊಂದಿಷ್ಟು ಸತ್ಯ ಗೋಚರವಾಗುತ್ತದೆ. ಎಂ.ಕೆ.ಇಂದಿರಾ ಅವರು ಬರೆದ ಅನೇಕ ಕಾದಂಬರಿಗಳಲ್ಲಿ ಒಂದು ‘ಫಣಿಯಮ್ಮ’ ಇದೇ ಕಾದಂಬರಿಯನ್ನ ಆಧರಿಸಿ ಶ್ರೀಮತಿ ಪ್ರೇಮಾ ಕಾರಂತ ಅವರು ‘ಫಣಿಯಮ್ಮ’ ಎಂಬ ಚಿತ್ರವನ್ನ ತಯಾರಿಸಿದ್ದರು. ಆ ಚಿತ್ರಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಗೌರವ ಸಿಕ್ಕಿತು. ಪ್ರೇಮಾ ಕಾರಂತ ಅವರನ್ನು ನಮ್ಮ ದೇಶದ ಶ್ರೇಷ್ಟ ಮಹಿಳಾ ನಿರ್ದೇಶಕಿಯರಲ್ಲಿ ಒಬ್ಬರು ಎಂದು ಗುರುತಿಸುವಂತಾಯಿತು. ಇದು ಇತಿಹಾಸ. ಆದರೆ ಅದಾಗಲೇ ನಾವು ಎತ್ತಿಕೊಂಡ ಪ್ರಶ್ನೆಯನ್ನು ಹಿಡಿದುಕೊಂಡು ಈ ಚಿತ್ರವನ್ನು ಗಮನಿಸೋಣ.

ಸಾಹಿತ್ಯ ಕೃತಿಯೊಂದು ಮತ್ತೊಂದು ಮಾಧ್ಯಮದ ಮೂಲಕ ಪ್ರಕಟಗೊಳ್ಳುವುದು ಸುಲಭವೇನಲ್ಲ. ಅಕ್ಷರದಲ್ಲಿರುವ ವಿವರಗಳನ್ನು ದೃಶ್ಯವಾಗಿಸುವುದು ದೊಡ್ಡ ಸಾಹಸದ ಕೆಲಸ. ಅಂತೆಯೇ ಜಾಗತಿಕ ಚಿತ್ರರಂಗದಲ್ಲಿ ಸಾಹಿತ್ಯ ಕೃತಿಗಳನ್ನಾಧರಿಸಿ ತಯಾರಾಗುವ ಚಿತ್ರಗಳಿಗಿಂತ ಸಿನಿಮಾಗಾಗಿಯೇ ಲಿಖಿತ ವಿವರಗಳನ್ನು ಇಟ್ಟುಕೊಂಡು ಚಿತ್ರಿತವಾಗುವ ಸಿನಿಮಾಗಳು ಹೆಚ್ಚು. ಇದಕ್ಕೆ ಕಾರಣವೂ ಇದೆ. ಒಂದು ಮಾಧ್ಯಮದಲ್ಲಿ ಪ್ರಕಟವಾದ ಸೃಜನಶೀಲ ವಿವರವು ಮತ್ತೊಂದು ಮಾಧ್ಯಮಕ್ಕೆ ಬಂದಾಗ ಬೇರೆಯದೆ ಅರ್ಥವಿಸ್ತಾರ ಅಥವಾ ಭಿನ್ನ ನೆಲೆಗಟ್ಟನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಉದಾಹರಣೆಗೆಂದು ಶಿಶುನಾಳ ಶರೀಫರ ಗೀತೆಯೊಂದನ್ನು ಗಮನಿಸಿ. ಶರೀಫರು ‘ಕೂಕೂ ಎನುತಿದೆ ಬೆಳವ/ ಬಂದು ಮುಟ್ಟಿತು ಭವವೆಂಬ ದುಃಖದ ಹಳುವ…’ ಎಂದು ಬರೆಯುತ್ತಾರೆ. ಇದು ಚಿತ್ರವಾದಾಗ ನಿರ್ದೇಶಕ ಮೊದಲು ಹುಡುಕುವುದು ದೃಶ್ಯ ವಿವರವನ್ನ. ಆತ ಹಾಡಿನ ಸಾಲಿನ ಒಳಗಡೆಯೇ ಸಿಗುವ ದೃಶ್ಯ ಸೂಚಕಗಳನ್ನ ಗುರುತಿಸುತ್ತಾ ಬೆಳವ ಎಂಬ ಶಬ್ದವನ್ನ ಗ್ರಹಿಸಿ, ಬೆಳ್ಳಕ್ಕಿಯೊಂದು ಹಾರುತ್ತಿರುವ ದೃಶ್ಯವನ್ನ ತೆರೆಯಮೇಲೆ ತಂದುಬಿಟ್ಟರೆ ಆಗ ಆಗುವುದೇನು. ಮೂಲಕೃತಿಯ ತಿರುಳನ್ನ ಗ್ರಹಿಸದೆ ಮೇಲ್‌ಸ್ತರದಲ್ಲಿ ಅರ್ಥ ಗ್ರಹಿಸಿ ಆಗುವ ಅಪಚಾರ. ಶಿಶುನಾಳರು ಬೆಳವ ಎನ್ನುವಾಗ ಮನುಷ್ಯ ಎಂಬ ಪ್ರಾಣಿಯ ಬಗ್ಗೆ ಮಾತಾಡುತ್ತಿದ್ದಾರೆ ಎಂಬುದನ್ನು ಮರೆತು ಬೆಳ್ಳಕ್ಕಿಯನ್ನು ತೋರಿಸಿದರೆ ಅದು ಮೂಲಾರ್ಥದಿಂದ ಪಲ್ಲಟವಾದಂತೆಯೇ ಸರಿ. ಈ ಉದಾಹರಣೆ ನೀಡುವಾಗ ನಾನು ಒಂದು ಕವನವನ್ನು ಕುರಿತು ಮಾತಾಡುತ್ತಿದ್ದೇನೆ. ಇದನ್ನೇ ಒಂದು ಕಾದಂಬರಿಗೆ ಹೋಲಿಸಿಕೊಂಡು ನೋಡಬಹುದು. ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ಯು ಸಿನಿಮಾ ಆಗಿ ಬಂದಾಗ ಕಾದಂಬರಿಯನ್ನ ಓದಿದ್ದವರು ಯಾವರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು ಎಂಬುದನ್ನ ಪ್ರಾಯಶಃ ತಾವು ಮುದ್ರಣ ಮಾಧ್ಯಮ ಮುಖೇನ ಗ್ರಹಿಸಿರುತ್ತೀರಿ. ಈ ಕಾರಣಗಳಿಂದಲೇ ಅನೇಕರು ಸಾಹಿತ್ಯಕೃತಿಯನ್ನ ಆಧರಿಸಿದ ಸಿನಿಮಾ ತಯಾರಿಕೆಯನ್ನು ಒಲ್ಲೆ ಅನ್ನುತ್ತಾರೆ.
ಇಷ್ಟಾದರೂ ನಮ್ಮ ನಾಡಿನಲ್ಲಿ ಅನೇಕರು ತಮ್ಮ ಸಿನಿಮಾಗಳಿಗೆ ಕಾದಂಬರಿಗಳನ್ನು ಆಧರಿಸುವುದು ನಡೆದುಬಂದಿದೆ. ಕನ್ನಡದಲ್ಲಿ ತಯಾರಾದ ಪ್ರಥಮ ಕಾದಂಬರಿ ಆಧಾರಿತ ಚಿತ್ರ ‘ರಾಯರ ಸೊಸೆ’ಯಿಂದ ಆರಂಭಿಸಿ ಇಂದಿನವರೆಗೆ ಅನೇಕ ಚಿತ್ರಗಳು ಕಾದಂಬರಿ ಆಧಾರಿತ. ಪುಟ್ಟಣ್ಣ ಕಣಗಾಲ್ ಅವರಂತಹ ನಿರ್ದೇಶಕರು ತಮ್ಮ ಚಿತ್ರಜೀವನದ ಉದ್ದಕ್ಕೂ ಕಾದಂಬರಿ ಆಧರಿತ ಚಿತ್ರಗಳನ್ನೇ ತಯಾರಿಸಿದ್ದಾರೆ. ಗಿರೀಶ್ ಕಾಸರವಳ್ಳಿಯವರು ಸಹ ಇಂದಿಗೂ ಯಾವುದಾದರೂ ಸಾಹಿತ್ಯಕೃತಿಯನ್ನ ಆಧರಿಸಿಯೇ ಚಿತ್ರ ತಯಾರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಒಂದು ಮಾಧ್ಯಮದ ವಿವರ ಮತ್ತೊಂದು ಮಾದ್ಯಮP ರೂಪುಗೊಳ್ಳುವಾಗ ಆಗುವುದೇನು ಎಂದು ಗಮನಿಸೋಣ.
ಕಥೆಯೊಂದು ಚಿತ್ರಕಥೆ ಆಗುತ್ತಿದೆ ಎಂದಾಗ ಅಲ್ಲಿ ಒಂದು ಹೂರಣದ ಮೇಲೆ ಎರಡು ವ್ಯಕ್ತಿತ್ವಗಳ ಸವಾರಿ ಆರಂಭವಾಗಿದೆ ಎಂದರ್ಥ. ಮೊದಲನೆಯ ವ್ಯಕ್ತಿತ್ವ ಮೂಲ ಲೇಖಕರದ್ದು. ಎರಡನೆಯದು ಚಿತ್ರಕಥಾ ಲೇಖಕನದ್ದು. ಮೊದಲಿನವರು ಅದಾಗಲೇ ತಾವು ಆಲೋಚಿಸಿದ್ದನ್ನ ಅಕ್ಷರಿಸಿ ಇಟ್ಟಿದ್ದಾರೆ. ಎರಡನೆಯವ ತನ್ನ ಅಭಿಪ್ರಾಯಗಳನ್ನು ದೃಶ್ಯದ ಮೂಲಕ ಹೆಣೆಯಲು ಪ್ರಯತ್ನಿಸುತ್ತಿದ್ದಾನೆ. ಹೀಗಾದಾಗ ಒಂದು ವಿಷಯವನ್ನು ನೋಡುವ ಎರಡು ದೃಷ್ಟಿಕೋನಗಳು ಹುಟ್ಟಿಕೊಳ್ಳುತ್ತವೆ. ‘ಫಣಿಯಮ್ಮ’ದಂತಹ ಕೃತಿ ರಚಿಸುವಾಗ ಎಂ.ಕೆ.ಇಂದಿರಾ ಅವರ ಹೆಣ್ಣುದೃಷ್ಟಿಗೆ ಒಬ್ಬ ಬಾಲವಿಧವೆ ಕಾಣಿಸುವುದಕ್ಕೂ ಅದೇ ಕೃತಿಯನ್ನು ಸಿನಿಮಾಕ್ಕೆ ಅಳವಡಿಸುವಾಗ ಒಬ್ಬ ಚಿತ್ರಕಥಾ ಲೇಖಕರು ಅದನ್ನು ನೋಡುವ ದೃಷ್ಟಿಗೂ ವ್ಯತ್ಯಾಸಗಳು ಉಂಟಾಗುತ್ತದೆ. ಅದರಲ್ಲೂ ‘ಫಣಿಯಮ್ಮ’ ಸಿನಿಮಾಕ್ಕೆ ಚಿತ್ರಕಥೆ ಬರೆದವರು ಚಿತ್ರಬೀಷ್ಮ ಎಂದೆ ಕರೆಯಿಸಿಕೊಳ್ಳುತ್ತಿದ್ದ ಜಿ.ವಿ.ಅಯ್ಯರ್ ಅವರು. ಅಯ್ಯರ್ ಅವರ ಆಲೋಚನ ಕ್ರಮ ಖಂಡಿತಾ ಎಂ.ಕೆ.ಇಂದಿರಾ ಅವರ ದೃಷ್ಟಿಕೋನಕ್ಕೆ ತದ್ವಿರುದ್ಧ ನೆಲೆಯದು. ಕಾದಂಬರಿಯಲ್ಲಿ ‘ಫಣಿಯಮ್ಮ’ ಎಂಬ ಹೆಣ್ಣಿನ ಜೀವನದ ವಿವರಗಳು ಬಿಚ್ಚಿಕೊಳ್ಳುತ್ತಾ ಸಾಗಿದಂತೆ ಒಂದು ಕಾಲಘಟ್ಟದ ಸಮಾಜ ಹೆಣ್ಣನ್ನು ನಡೆಸಿಕೊಳ್ಳುತ್ತಿದ್ದ ರೀತಿ ಅನಾವರಣಗೊಳ್ಳುವುದರ ಜೊತೆಗೆ ‘ಫಣಿಯಮ್ಮ’ ಎಂಬ ಪಾತ್ರದ ಕುರಿತು ಅನುಕಂಪ ಹುಟ್ಟುತ್ತದೆ. ಲೇಖಕರು ಹೆಂಗಸರಾದಾಗ ಮಾತ್ರ ಒದಗಿ ಬರುವ ಭಾವವಲಯವೊಂದು ಕಾದಂಬರಿಯಲ್ಲಿ ಸೃಷ್ಟಿಯಾಗುತ್ತದೆ. ಅದರಿಂದಾಗಿ ಕಾದಂಬರಿಯಲ್ಲಿ ‘ಫಣಿಯಮ್ಮ’ ಎಂಬ ಹೆಂಗಸಿನ ಭಾವವಲಯ ದೊರೆಯುತ್ತದೆ. ಸಿನಿಮಾದಲ್ಲಿ ಇದು ಸಂಪೂರ್ಣ ಭಿನ್ನವಾಗುತ್ತದೆ. ಅಲ್ಲಿ ನಿರ್ದೇಶಕಿ ಮಹಿಳೆಯಾದರೂ ಲೇಖಕರ ಪುರುಷ ದೃಷ್ಟಿಕೋನ ತನ್ನ ಅಥಾರಿಟಿಯನ್ನ ಸಿನಿಮಾದುದ್ದಕ್ಕೂ ಸ್ಥಾಪಿಸಿಬಿಡುತ್ತದೆ. ಇದರಿಂದಾಗಿ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿಯ ಮದುವೆ, ಅಕೆಯ ಗಂಡನ ಸಾವು ಮತ್ತು ಅದನ್ನು ಆ ಪುಟ್ಟ ಹುಡುಗಿ ತಿಳಿದುಕೊಂಡಾಗ ಬರುವ ಪ್ರತಿಕ್ರಿಯೆಗಳು ಮುಂತಾದ ಸಿನಿಮಾದ ಮೊದಲರ್ಧದಲ್ಲಿ ‘ಫಣಿಯಮ್ಮ’ನ ಪರಿಸ್ಥಿತಿ ಕುರಿತು ಅನುಕಂಪ ಮೂಡುವ ಬದಲಿಗೆ ಪ್ರೀತಿ ಹುಟ್ಟುತ್ತದೆ. ಅಯ್ಯೋ ಅನಿಸಬೇಕಾದಲ್ಲಿ ಆಹಾ ಎನಿಸಿದಂತಹ ಸ್ಥಿತಿ ಇದು. ಇದರಿಂದಾಗಿ ಕಾದಂಬರಿಯ ಹೂರಣಕ್ಕೆ ಧಕ್ಕೆಯಾಗುವುದಿಲ್ಲವಾದರೂ ನೀಡುಗನಲ್ಲಿ ಮೂಡುವ ಅನುಭಾವ (ಎಂಫಥಿ) ಬೇರೆಯದಾಗಿಬಿಡುತ್ತದೆ.
ಕಾದಂಬರಿಯ ಉತ್ತರಾರ್ಧ ಹಾಗೂ ಸಿನಿಮಾದ ಉತ್ತರಾರ್ಧದಲ್ಲಿನ ವಿವರಗಳನ್ನೂ ನಾವು ಗಮನಿಸಬಹುದು. ಕಾದಂಬರಿಯಲ್ಲಿ ‘ಫಣಿಯಮ್ಮ’ ಹಿರಿಯಳಾದ ನಂತರ ತನ್ನ ದೇಹದ ವಾಂಛೆಗಳನ್ನು ನಿಗ್ರಹಿಸುವ ವಿವರ ಸ್ಥೂಲವಾಗಿ ಬರುತ್ತದೆ. ಆದರೆ ಸಿನಿಮಾದಲ್ಲಿ ಅದು ಪ್ರಧಾನ ವಿಷಯ. ‘ಫಣಿಯಮ್ಮ’ ಇರುವ ಮನೆಯಲ್ಲಿಯೇ ಇನ್ಯಾರೋ ನಡೆಸುವ ಅನೈತಿಕ ವ್ಯವಹಾರವನ್ನು ಫಣಿಯಮ್ಮ ನೋಡುವುದು ಮತ್ತು ಆಗ ಅವಳ ಮುಖದ ಮೇಲೆ ಮೂಡುವ ಬೆವರು ಇತ್ಯಾದಿಗಳು ಮತ್ತೆ ನೋಡುಗನಿಗೆ ‘ಫಣಿಯಮ್ಮ’ ಎಂಬ ವ್ಯಕ್ತಿತ್ವಕ್ಕೆ ಬದಲಾಗಿ ಆ ಪಾತ್ರದ ದೇಹವನ್ನು ನೋಡುವಂತೆ ಪ್ರೇರೇಪಿಸುತ್ತದೆ. ಇದೂ ಸಹ ಮಹಿಳಾ ಲೇಖಕಿಯ ಕೃತಿಯನ್ನ ಪುರುಷನೊಬ್ಬನ ದೃಷ್ಟಿಕೋನದಿಂದ ಚಿತ್ರಿಸುವಾಗ ಮೂಡುವಂತಹ ವಿವರ.
ಕಾದಂಬರಿಯ ಕೊನೆಯ ಹಂತಗಳಲ್ಲಿ ಇಂದಿರಾ ಅವರು ‘ಫಣಿಯಮ್ಮ’ನ ಸೇವಾ ಜಗತ್ತನ್ನ ಪರಿಚಯಿಸುತ್ತಾರೆ. ಈ ಹಂತದಲ್ಲಿ ಕಾದಂಬರಿಕಾರ್ತಿಯು ಪಾತ್ರದ ಮೂಲಕ ಮಾತಾಡುತ್ತಾ ಸಮಯ ಕಳೆಯುವುದಕ್ಕಾಗಿ ಸಮಾಜಸೇವೆ ಎಂಬರ್ಥದ ಮಾತನ್ನ ಹೇಳುತ್ತಾ “ಫಣಿಯಮ್ಮ’ನ ಪಾತ್ರವನ್ನ ನೆಲದ ಮೇಲಿರಿಸುತ್ತಾರೆ. ಹೀಗಾಗಿ ಇಡೀ ಕಾದಂಬರಿಯನ್ನ ಓದಿದವನಿಗೆ ಬದುಕು ಮುಖ್ಯ ಮತ್ತು ಆ ಹಾದಿಯಲ್ಲಿ ನಾವು ನೆಟ್ಟ ಮರಗಳಲ್ಲ ಎಂಬಂತಹ ಭಾವ ಮೂಡುತ್ತದೆ. ಆದರೆ “ಫಣಿಯಮ್ಮ’ ಸಿನಿಮಾದ ಕೊನೆಯಾರ್ಧದಲ್ಲಿ ಅದೇ ಪಾತ್ರ ತನ್ನ ಜನ ಸೇವೆಯಿಂದ ಉದಾತ್ತೀಕರಣದ ಕಡೆಗೆ ಸಾಗುತ್ತದೆ. ಈ ಉದಾತ್ತೀಕರಣದ ಕೊಡುಗೆ ಪುರುಷ ದೃಷ್ಟಿಕೋನದಿಂದಲೇ ಸಿಗುವಂತಹದು. ಇದು ಕನ್ನಡದ ನಾಯಕ ಪ್ರಧಾನ ಸಿನಿಮಾಗಳಲ್ಲಿಯೂ ಇರುವಂತಹ ಪರಿಪಾಠ. ಅಲ್ಲಿ ಪಾತ್ರವೊಂದು ಸಾಮಾನ್ಯೀಕರಣವಾಗುವುದಕ್ಕೆ ಅವಕಾಶವಿಲ್ಲ. ಪ್ರಧಾನ ಪಾತ್ರ ಎಂಬುದು ನೋಡುಗನಿಗಿಂತ ಎರಡಡಿ ಮೇಲಿರಬೇಕು ಎಂಬುದು ಜನಪ್ರಿಯ ಸಿನಿಮಾ ತಯಾರಕರ ವಾದ. ಹೀಗಾಗಿ ‘ಬಂಗಾರದಮನುಷ್ಯ’ನಂತಹ ಚಿತ್ರವಾದರೂ ಸರಿ, ಅಲ್ಲಿರುವ ವಿವರಗಳು ನಮ್ಮ ಗ್ರಾಮೀಣ ಬದುಕಿನ ಸಂಕಷ್ಟಗಳೇ ಆದರೂ ಸರಿ, ಆ ನಾಯಕ ಪಾತ್ರ ಒಂದೇ ನೆಲದಲ್ಲಿ ದ್ರಾಕ್ಷಿಯನ್ನೂ ಬೆಳೆಯುತ್ತದೆ, ಭತ್ತವನ್ನೂ ಬೆಳೆಯುತ್ತದೆ. ಅದು ಸಾಮಾನ್ಯವಾಗಿ ಸಾಧ್ಯವಲ್ಲ ಎಂಬ ಸತ್ಯ ಗೊತ್ತಿದ್ದರೂ ಪ್ರಧಾನಪಾತ್ರವನ್ನು ಅತಿರಂಜನೆಯ ಹಂತಕ್ಕೆ ಕೊಂಡೊಯ್ಯುವುದು ನಮ್ಮ ಚಿತ್ರಕಥಾ ಲೇಖಕರ ಪರಿಪಾಠ. ಅದೇ ‘ಫಣಿಯಮ್ಮ’ ಚಿತ್ರದಲ್ಲಿಯೂ ಆಗುತ್ತದೆ. ಹೀಗಾಗಿ ವಿಧವೆಯೊಬ್ಬಳ ಬದುಕಿನ ತುಣುಕಾಗಿ ಓದಿಸಿಕೊಳ್ಳುವ ಕಾದಂಬರಿ ಸಿನಿಮಾ ಆದಾಗ ಬಾಲವಿಧವೆಯೊಬ್ಬಳು ಸಂಕಷ್ಟಗಳ ಜೊತೆಗೂ ಉದಾತ್ತವಾಗಿ ಬದುಕಿದಳು ಎಂದು ಹೇಳುತ್ತದೆ. ಈ ವ್ಯತ್ಯಾಸದ ಸೂಕ್ಷ್ಮವನ್ನ ಓದುಗ-ನೋಡುಗರು ಗುರುತಿಸಬೇಕು.
ಇಷ್ಟಾದಮೇಲೆ ಮತ್ತೆ ಮೊದಲಿನ ಪ್ರಶ್ನೆಗೆ ಬರೋಣ. ಕಥೆಯೋ-ಚಿತ್ರಕಥೆಯೋ ಎಂಬ ಪ್ರಶ್ನೆಗೆ ಒಂದಿಲ್ಲದೆ ಇನ್ನೊಂದಿಲ್ಲ ಎನ್ನಬೇಕು. ಕಥೆ ಎಂಬ ಬೀಜ ಇಲ್ಲದೆ ಚಿತ್ರಕಥೆ ಎಂಬ ಗಿಡವಾಗದು. ಚಿತ್ರಕಥೆ ಎಂಬ ಗಿಡವೇ ನಂತರ ಸಿನಿಮಾ ಎಂಬ ಮರವಾಗುವುದು ಎಂಬುದು ಸತ್ಯ. ಆದರೆ ಅದು ಸಾಹಿತ್ಯಕೃತಿಯೊಂದನ್ನು ಆಧರಿಸಿದ ಕಥೆಯಾದಾಗ ಅದಾಗಲೇ ಮರವಾಗಿರುವ ವಿವರವೊಂದರಿಂದ ಬೀಜವನ್ನಷ್ಟೆ ಪಡೆದು ಮತ್ತೊಂದು ಮರ ರೂಪಿಸುವ ಕೆಲಸ ಆಗುತ್ತಿರುತ್ತದೆ ಎಂಬುದನ್ನು ನೆನಪಲ್ಲಿಡಬೇಕು. ಹೀಗಾದಾಗ ಮರ ಮೊದಲಿನಂತೆಯೇ ಅದೇ ಆಕೃತಿ ಪಡೆಯುವುದು ಸಾಧ್ಯವಿಲ್ಲ. ಅದು ಮೂಲಕ್ಕಿಂತ ಭಿನ್ನವೇ ಆಗಿ ಉಳಿಯುತ್ತದೆ. ಇದನ್ನು ನೀವು ನಮ್ಮ ನಡುವಿನ ಶ್ರೇಷ್ಟ ನಿರ್ದೇಶಕರಾದ ಕಾಸರವಳ್ಳಿಯವರ ಎಲ್ಲಾ ಚಿತ್ರಗಳಲ್ಲೂ ಗಮನಿಸಬಹುದು. ತೇಜಸ್ವಿಯವರ ‘ತಬರನಕಥೆ’ಗಿರುವ ವೈರುಧ್ಯಗಳನ್ನ ಹಾಸ್ಯದ ಮೂಲಕ ನೋಡುವ ಪ್ರವೃತ್ತಿಗೂ ಅದೇ ಜೀವನ ವಿವರವನ್ನ ಭಾವರಾಹಿತ್ಯದ ಜೊತೆಗೆ ನೋಡುವ ಕಾಸರವಳ್ಳಿಯವರ ಅಭ್ಯಾಸಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಆ ವ್ಯತ್ಯಾಸದಿಂದಾಗಿ ಒಂದು ಕೃತಿ ಎರಡಾಗುತ್ತದೆ. ಮತ್ತು ಒಂದರಿಂದ ಹುಟ್ಟಿದ ಇನ್ನೊಂದು ತನ್ನದೇ ಸ್ವತಂತ್ರ ಅಸ್ಥಿತ್ವ ಪಡೆಯುತ್ತದೆ. ಹೀಗಾಗುವುದು ಅನಿವಾರ್ಯ. ಇದಕ್ಕೆ ಬದಲಾಗಿ ಮೂಲಕೃತಿಯಂತಹುದೇ ಚಿತ್ರನಿರ್ಮಿತಿಯಾದಾಗ ಅದು ಸಿನಿಮಾದ eನೇಂದ್ರಿಯಗಳನ್ನ ಕಳೆದುಕೊಂಡು ಸಾಹಿತ್ಯದ ಗ್ರಹಣೇಂದ್ರಿಯಗಳ ಮೂಲಕ ರೂಪಿತವಾಗಿಬಿಡುತ್ತದೆ. ಇದು ಸಿನಿಮಾ ಎಂಬ ಮಾಧ್ಯಮದ ಅಪೂರ್ಣ ಬಳಕೆಯಾಗಿಬಿಡುವ ಸಾಧ್ಯತೆಯೇ ಹೆಚ್ಚು. ಅಂತಹ ಪ್ರಯೋಗಗಳು ಸಹ ನಮ್ಮಲ್ಲಿ ಆಗಿವೆ. ಅವುಗಳಿಗೆ ಉದಾಹರಣೆಯಾಗಿ ಮಾಸ್ತಿ ಅವರ ನಾಟಕಕೃತಿ‘ಕಾಕನಕೋಟೆ’ ಸಿ.ಆರ್.ಸಿಂಹ ಅವರ ನಿರ್ದೇಶನದಲ್ಲಿ ಸಿನಿಮಾ ಆಗಿದ್ದನ್ನ, ಕುವೆಂಪು ಅವರ ‘ಬೆರಳ್ಗೆ ಕೊರಳ್’ನ ಸಿನಿಮಾ ಆವೃತ್ತಿಯನ್ನ ನೋಡಬಹುದು. ಇಂತಹ ಉದಾಹರಣೆಗಳಲ್ಲಿ ಮೂಲಕೃತಿಯ ನೆರಳು ಉಪಕೃತಿಯ ಮೇಲೆ ಅದೆಷ್ಟು ಢಾಳಾಗಿ ಬಿಟ್ಟಿರುತ್ತದೆ ಎಂದರೆ ಅವುಗಳನ್ನು ಸಿನಿಮಾ ಎಂಬ ವರ್ಗಕ್ಕೆ ಸೇರಿಸುವುದೇ ಕಷ್ಟವಾಗಿಬಿಡುತ್ತದೆ. ಚಲಿಸುವ ಚಿತ್ರಗಳಿದ್ದದೆಲ್ಲಾ ಸಿನಿಮಾ ಆಗುವುದಿಲ್ಲ ಎಂಬುದನ್ನ ಗಮನದಲ್ಲಿಟ್ಟುಕೊಂಡು ಈ ಮಾತುಗಳನ್ನ ಗ್ರಹಿಸಬೇಕು.
ಈ ಎಲ್ಲಾ ಕಾರಣಗಳಿಂದ ಸಾಹಿತ್ಯ ಕೃತಿಯನ್ನಾಧರಿಸಿದ ಚಿತ್ರಗಳು ನಮ್ಮಲ್ಲಿ ಮೈನಾರಿಟಿಯಾಗಿದೆ. ಹಾಗೆಂದು ಈ ಪ್ರಯೋಗವನ್ನು ಬಿಡುವುದು ಬೇಕಾಗಿಲ್ಲ. ಇಂತಹ ಕೊಡುಕೊಳುವಿಕೆಗಳಿಂದಲೇ ಎರಡೂ ಮಾಧ್ಯಮಗಳು (ಅಕ್ಷರ-ದೃಶ್ಯ) ಬೆಳೆಯುವುದು ಸಾಧ್ಯ.
ಇಷ್ಟಾದರೂ ನಾನು ಮೇಲೆ ಹೆಸರಿಸಿದ ಎಲ್ಲಾ ಸಿನಿಮಾಗಳೂ ವಿಶಿಷ್ಟ ಕಲಾಕೃತಿಗಳು ಮತ್ತು ನಾವು ಈ ಹಿಂದೆ ಚರ್ಚಿಸಿದ ’ಒಳ್ಳೆಯ’ ಎಂಬ ಪಟ್ಟಿಗೆ ಸೇರುವಂತಹವು. ಆ ನಿಟ್ಟಿನಿಂದ ನೀವು ಈ ಸಿನಿಮಾಗಳನ್ನ ಮತ್ತೊಮ್ಮೆ ನೋಡಬಹುದು.
ನಾವು ನಿರಂತರವಾಗಿ ‘ಒಳ್ಳೆಯ’ದನ್ನು ಪೋಷಿಸಿದಾಗ ನಮಗೆ ಸಿಗುವ ‘ಒಳ್ಳೆಯ’ದರ ಸಂಖ್ಯೆ ಹೆಚ್ಚುತ್ತದೆ ಎಂಬುದು ನೆನಪಲ್ಲಿರಲಿ.

Advertisements

1 Response to “ಕಥೆಯೋ-ಚಿತ್ರಕಥೆಯೋ?”


  1. 1 AmoghaVarsha C A September 15, 2015 at 10:54 am

    ಮೂಲ ಕಥೆಗಳಿಂದ ಪ್ರಭಾವಗೊಳ್ಳುವುದು ಈಗಿನ ಸಂದರ್ಭದಲ್ಲಿ ತುಂಬಾ useful ಕೂಡ. ಏಕೆಂದರೆ atleast ನಮಗೆ ಒಂದು ಒಳ್ಳೆಯ ಕಥೆಯಾದರೂ ಸಿಗುತ್ತದೆ.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 57,460 ಜನರು
Advertisements

%d bloggers like this: