ಕ್ರಿಯಾಶೀಲತೆ ಎಂಬ ಹಳವಂಡ !

ಬೆಳಕಿನೊಳಗಣ ಬೆಗು (ಉಷಾಕಿರಣ ವಿದ್ಯಾರ್ಥಿ ಪತ್ರಿಕೆಗಾಗಿ ಸಿದ್ಧಪಡಿಸಿದ ಲೇಖನ – ಮಾಲೆ ೩)

ಹಾಗೆ ನೋಡಿದರೆ ಯಾವುದೇ ಜೀವಂತ ವ್ಯಕ್ತಿಯು ಕ್ರಿಯಾಶೀಲನೇ ಆಗಿರುತ್ತಾನೆ. ಆದರೆ ಆತ ತನ್ನ ಕ್ರಿಯಾಶೀಲತೆಯನ್ನ ಯಾವುದಕ್ಕೆ ಬಳಸಿಕೊಳ್ಳುತ್ತಾನೆ ಎಂಬುದು ಪ್ರಶ್ನೆ. ಪ್ರತಿದಿನ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾಣಿಗಳು ಸಹ ಕ್ರಿಯಾಶೀಲವಾಗುತ್ತವೆ. ಸಮುದ್ರದ ಒಳಗಿರುವ ಮೀನನ್ನು ಆಗಸದಿಂದ ಗುರುತಿಸಿ, ಸರಿಯಾದ ವೇಗದಲ್ಲಿ ಹಾರಿಬಂದು, ಮೀನು ಆಳಕ್ಕೆ ಇಳಿಯುವ ಮುನ್ನ ಬೇಟೆಯಾಡುವ ಬೆಳ್ಳಕ್ಕಿಯೂ ಸಹ ಮಾಡುವುದು ಕ್ರಿಯಾಶೀಲ ಕೆಲಸವನ್ನೇ. ಇಲ್ಲಿ ಕ್ರಿಯೆ ಮತ್ತು ಕಾಲಗಳೆರಡು ಮೇಳೈಸಿ ಭೇಟಿಯಾಗುತ್ತದೆ. ಅಂತೆಯೇ ಕುಲುಮೆಯಲ್ಲಿ ದುಡಿಯುವ ಕಮ್ಮಾರನೊಬ್ಬ ಅದಿರು ಕುದಿಯುತ್ತಿರುವಾಗ ಅದನ್ನು ಅಚ್ಚಿನಲ್ಲಿ ಸುರಿದು, ಪ್ರತಿಮೆ ತಯಾರಿಸುತ್ತಾನಲ್ಲಾ ಅದೂ ಸಹ ಅತ್ಯಂತ ಕ್ರಿಯಾಶೀಲ ಕೆಲಸ. ಕುದಿವ ಅದಿರು ದ್ರವ ರೂಪದಲ್ಲಿರುವ ಅವಧಿ ಮತ್ತು ಅದನ್ನು ಅಚ್ಚಿಗೆ ಹುಯ್ಯುವ ಅವಧಿಯಲ್ಲಿ ವ್ಯತ್ಯಾಸಗಳಾದರೆ ಸರಿಯಾದ ಪ್ರತಿಮೆ ಸಿದ್ಧವಾಗುವುದಿಲ್ಲ. ಇಲ್ಲಿಯೂ ಕಾಲ ಮತ್ತು ಕ್ರಿಯೆಗಳು ಸಾಪೇಕ್ಷ ಸಂಬಂಧ ಹೊಂದಿ ಕ್ರಿಯಾಶೀಲತೆಯು ಮೂಡುತ್ತದೆ. ಇದು ನಮ್ಮೆಲ್ಲರ ಕೆಲಸಗಳಲ್ಲಿಯೂ ಇರುವಂತಹದು. ಹಗಲಿನಲ್ಲಿ ಅರೆಘಳಿಗೆ ತಡವಾಗಿ ಎದ್ದ ವಿದ್ಯಾರ್ಥಿಗೆ ಶಾಲೆ-ಕಾಲೇಜಿಗೆ ಹೋಗುವುದು ಎಷ್ಟು ಕಷ್ಟವಾಗುತ್ತದೆಯೋ ಊಹಿಸಿ. ನೀವು ಶಾಲೆ-ಕಾಲೇಜಿಗೆ ಹೋಗಲೆಂದು ಸಿದ್ಧವಾಗುವುದು ಸಹ ಕ್ರಿಯಾಶೀಲ ಕೆಲಸವೇ ಎನ್ನಿಸಿಕೊಳ್ಳುತ್ತದೆ. ಒಂದು ಅಕೆಡೆಮಿಕ್ ವರ್ಷದ ಒಳಗೆ ಪಠ್ಯ ಕ್ರಮವನ್ನು ಮುಗಿಸಬೇಕಾದ ಉಪಾಧ್ಯಾಯರದ್ದು ಸಹ ಕ್ರಿಯಾಶೀಲ ಕೆಲಸವೇ. ಅಂದರೆ ಒಂದು ಸಿದ್ಧ ಅವಧಿಯೊಳಗೆ ಮತ್ತೊಂದು ಸೂಚಿತ ಕಾರ್ಯವನ್ನು ಮುಗಿಸುವುದನ್ನ ನಾವು ಕ್ರಿಯಾಶೀಲ ಎಂದು ಕರೆಯುತ್ತೇವೆ. ‘ಚಲನೆ’ಯು ಕ್ರಿಯೆ ಆದರೆ, ನಿಗಧಿತ ಕಾಲಾವಧಿಯಲ್ಲಿ ಕೆಲಸ ಮುಗಿಸಿದ್ದರ ಮೌಲ್ಯಮಾಪನವೂ ಶೀಲ ಎಂದು ಗುರುತಿಸಿಕೊಳ್ಳುತ್ತದೆ.

ಇದು ದೃಶ್ಯಮಾಧ್ಯಮದವರಿಗೆ ಸದಾ ಇರಬೇಕಾದ್ದು. ಒಂದು ಟೆಲಿವಿಷನ್ನಿನ ದೈನಿಕ ಧಾರಾವಾಹಿಯನ್ನೇ ತೆಗೆದುಕೊಳ್ಳಿ. ಅಲ್ಲಿ ನಿಗಧಿತ ಅವಧಿಯೊಳಗೆ ಒಂದು ಕಥೆಯನ್ನ ಹೇಳುವ ಕ್ರಿಯೆ ಇದೆ. ಹಾಗೇ ಹೇಳುವಾಗ ಆತನಿಗೆ ಪ್ರತಿದಿನವೂ ಇಂತಿಷ್ಟು ಎಂದು ಕಥೆ ಹೇಳಿ, ಇಂತಿಷ್ಟು ದಿನಗಳ ಒಳಗೆ ಆ ಕಥೆಯನ್ನ ಮುಗಿಸಬೇಕೆಂಬ ಎರಡನೆಯ ಒತ್ತಡವೂ ಇರುತ್ತದೆ. ಅದರೊಂದಿಗೆ ಈಚಿನ ದಿನಗಳಲ್ಲಿ ದೈನಿಕ ಧಾರಾವಾಹಿಯ ಕಥೆ ಹೇಳುವವನಿಗೆ ಮತ್ತೊಂದು ‘ಅಳತೆ’ಯನ್ನ ದಾಟಿಕೊಳ್ಳಬೇಕಾಗುತ್ತದೆ. ಅದು ಜನಪ್ರಿಯತೆಯಿಂದ ದೊರೆಯುವ ವಿಸ್ತರಣೆ. ಕಥೆಗಾರನೊಬ್ಬ ತನ್ನ ಧಾರಾವಾಹಿಯನ್ನು ೧೦೦ ಕಂತುಗಳಿಗೆ ಎಂದು ವಿಂಗಡಿಸಿರಬಹುದು. ಆ ಕಥೆಯು ಜನಪ್ರಿಯವಾದರೆ ಆಗ ಆತನಿಗೆ, ಅದೇ ಕಥೆಯನ್ನು ಮತ್ತಷ್ಟು ಹಿಗ್ಗಿಸಬೇಕಾದ ಅನಿವಾರ್ಯ ಒದಗುತ್ತದೆ. ಅದನ್ನೂ ಆತ ‘ಕ್ರಿಯಾಶೀಲ’ವಾಗಿಯೇ ಮಾಡಬೇಕಾಗುತ್ತದೆ. ಹೀಗೆ ಕ್ರಿಯಾಶೀಲತೆ ಎಂಬುದು ನಮ್ಮನ್ನು ಭ್ರಮೆ(ಹಳವಂಡ)ಯಾಗಿ ಕಾಡುತ್ತದೆ. ಇದು ಎಲ್ಲಾ ಕಥನ ಮಾಧ್ಯಮಗಳಿಗೂ ಇರುವ ಸವಾಲು.

 

ಇಲ್ಲಿ ನಾವು ಗಮನಿಸಬೇಕಾದ ಅಂಶವೊಂದಿದೆ. ಯಾವುದೇ ವ್ಯಕ್ತಿ ಮೇಲೆ ತಿಳಿಸಿದ ಅರ್ಥದಲ್ಲಿ ಕ್ರಿಯಾಶೀಲ ಆಗಿರಬಹುದು, ಆದರೆ ಆತ ಸೃಜನಶೀಲನೂ ಆಗುವುದಿದೆಯಲ್ಲಾ ಅದು ಕಷ್ಟಸಾಧ್ಯವಾದುದು. ಅಂದರೆ ಅದೇ ‘ಕ್ರಿಯಾಶೀಲತೆ’ ಎಂಬ ಪದಕ್ಕೆ ‘ಸೃಷ್ಟಿ’ ಎಂಬ ಮತ್ತೊಂದು ಮಾಪನ ಸೇರಿಕೊಳ್ಳುತ್ತದೆ. ಕ್ರಿಯಾಶೀಲ ಕೆಲಸಗಾರ ನಿಗಧಿತ ಅವಧಿಯಲ್ಲಿ ಸೂಚಿತ ಕೆಲಸವನ್ನು ನಿರ್ವಹಿಸುತ್ತಾನೆ. ಆದರೆ ಸೃಜನಶೀಲ ಕಲಾವಿದ ನಿಗಧಿತ ಅವಧಿಯಲ್ಲಿ ಹೊಸದೊಂದು ಅನುಭವವನ್ನು ನೋಡುಗನಿಗೆ/ ಕೇಳುಗನಿಗೆ/ ಓದುಗನಿಗೆ ಕಟ್ಟಿಕೊಡುತ್ತಾನೆ. ಆ ಅನುಭವ ನೋಡುಗ/ಕೇಳುಗ/ಓದುಗನಲ್ಲಿ ಹುಟ್ಟಿಸುವ ಅನುಭೂತಿಯಿಂದಾಗಿ ಕಲಾವಿದನೊಬ್ಬನ ಶ್ರೇಷ್ಟತೆಯ ಮಾಪನವೂ ಆಗುತ್ತದೆ. ಈ ಮಾತನ್ನು ನಮ್ಮ ದೃಶ್ಯಮಾಧ್ಯಮಕ್ಕೆ ಹೋಲಿಸಿ ಹೇಳುವುದಾದರೆ ಹೀಗೆನ್ನಬಹುದು. ದೃಶ್ಯಮಾಧ್ಯಮದಲ್ಲಿ ದುಡಿವ ಕಲಾವಿದನು ಒಂದು ನಿಗದಿತ ಅವಧಿಯ ಒಳಗೆ ತನ್ನ ಪ್ರದರ್ಶನವನ್ನು ರೂಪಿಸುತ್ತಾನೆ. ಹಾಗೆ ರೂಪಿತವಾದ ಪ್ರದರ್ಶನವು ಅಷ್ಟೆ ಕಾಲಾವಧಿಯ ಒಳಗೆ ತನ್ನ ಹೂರಣವನ್ನೆಲ್ಲಾ ಪ್ರೇಕ್ಷಕ/ವೀಕ್ಷಕನ ಎದುರಿಗೆ ತೆರೆದಿರಿಸಬೇಕಾಗುತ್ತದೆ. ಹೀಗೆ ವೀಕ್ಷಕ/ಪ್ರೇಕ್ಷಕರು ನೋಡಿದ ಪ್ರದರ್ಶನವು ಅವರಲ್ಲಿ ಮೂಡಿಸುವ ಅನುಭೂತಿಯೇ ಅವರು ಮರುಪ್ರದರ್ಶನಕ್ಕೆ ಬರುವ ಅಥವಾ ಬಾರದಿರುವುದಕ್ಕೆ ಕಾರಣವಾಗುತ್ತದೆ. ಆ ಮೂಲಕ ಅಂತಹ ಪ್ರದರ್ಶನ ರೂಪಿಸಿದವನ ಸೃಜನಶೀಲ ಶಕ್ತಿ ಎಂತಹುದು ಎಂದು ತಿಳಿಯುತ್ತದೆ.

ಹಾಗಾದರೆ ಸರ್ಕಸ್ ಸೃಜನಶೀಲ ಚಟುವಟಿಕೆಯೇ?

ಅಲ್ಲ. ಅದು ಕ್ರಿಯಾಶೀಲ ಚಟುವಟಿಕೆ. ಅಲ್ಲಿ ನಿಗದಿತ ಅವಧಿಯ ಒಳಗೆ ಮಾಡುವ ಕಸರತ್ತು ಮುಖ್ಯವಾಗುತ್ತದೆ. ಅಂತಹ ಕಸರತ್ತಿನಲ್ಲಿ ಆಯಾ ಸರ್ಕಸ್ ಕಲಾವಿದ ತೆಗೆದುಕೊಳ್ಳುವ ರಿಸ್ಕ್ ಮುಖ್ಯವಾಗುತ್ತದೆ. ಅಂತಹ ದುರ್ಗಮ ಸಾಹಸದಲ್ಲಿ ಆ ನಿಮಿಷ ನೋಡುಗನಲ್ಲಿ ಮೂಡುವ ಕಾತುರವಷ್ಟೇ ಮುಖ್ಯವಾಗುತ್ತದೆ. ಆ ಸಾಹಸ ಮುಗಿದ ಮೇಲೆ ಅಲ್ಲಿ ಭಾಗವಹಿಸಿದ ವ್ಯಕ್ತಿಯ ಕೆಲಸಕ್ಕೆ ಚಪ್ಪಾಳೆ ಸಿಗಬಹುದು. ಆದರೆ ನೋಡುಗನಲ್ಲಿ ಹೊಸ ಅನುಭೂತಿಯೊಂದು ಮೂಡುವುದಿಲ್ಲ. ಅಂದರೆ ಅಲ್ಲಿ ಕೌಶಲ್ಯ ಮಾತ್ರ ಕೆಲಸಮಾಡುತ್ತಿದೆ. ಸೃಷ್ಟಿಕ್ರಿಯೆಯಲ್ಲ ಎಂದಾಗುತ್ತದೆ. ಆದ್ದರಿಂದಲೇ ಯಾವುದೋ ಬೆಟ್ಟ ಹತ್ತುವುದನ್ನೋ ಅಥವಾ ಯಾವುದು ದುರ್ಗಮ ಹಾದಿಯಲ್ಲಿ ವಾಹನ ಚಲಿಸುವುದನ್ನೋ ಯಾರೂ ಸೃಜನಶೀಲ ಕೆಲಸ ಎನ್ನುವುದಿಲ್ಲ. ಅದು ಕಾಲ ಮತ್ತು ಅವಧಿಯ ಮಾಪನಕ್ಕೆ ಸಿಗುವಂತಹುದಾದ್ದರಿಂದ ಕ್ರಿಯಾಶೀಲ ಎನ್ನಬಹುದು, ಆದರೆ ಸೃಜನಶೀಲ ಕಲೆಯಾಗುವುದಿಲ್ಲ. ಸೃಜನಶೀಲ ಕಲೆಗೆ ಕೇವಲ ಪ್ರದರ್ಶನಪ್ರಿಯತೆ ಇರುವುದಿಲ್ಲ. ಅದು ಪ್ರದರ್ಶನದಾಚೆಗೂ ಪ್ರೇಕ್ಷಕ/ ವೀಕ್ಷಕನಲ್ಲಿ ತನ್ನದೇ ಆದ ರೀತಿಯಲ್ಲಿ ಉಳಿಯುತ್ತದೆ, ಕಾಡುತ್ತದೆ, ಅನುಭಾವ ಮೂಡಿಸುತ್ತದೆ. ಆದ್ದರಿಂದಲೇ ಕಲೆಯೊಂದು ಕೇವಲ ಚಮತ್ಕಾರಿಕವಾದರೆ ಸಾಲದು ಎಂದೆನ್ನುತ್ತಾರೆ. ಸರ್ಕಸ್ ಮತ್ತು ಮ್ಯಾಜಿಕ್‌ಗಳು ಈ ಚಮತ್ಕಾರದ ಕೆಳಗೆ ಗುರುತಿಸಲಾಗುವಂತಹ ಕಲೆಗಳು.

ನಮ್ಮ ನಾಡಿನ ಜನಪ್ರಿಯ ಸಿನಿಮಾಗಳೂ ಬಹುಮಟ್ಟಿಗೆ ಇಂತಹುದೇ ಚಮತ್ಕಾರದ ಕೆಳಗೆ ಗುರುತಿಸಬಹುದಾದ್ದು. ಅವುಗಳಲ್ಲಿ ಪ್ರೇಕ್ಷಕ/ವೀಕ್ಷಕನ ಸುಪ್ತಪ್ರಜ್ಞೆಯನ್ನು ತಾಗುವ ಮತ್ತು ಅವನಲ್ಲಿ ಬದುಕನ್ನು ಕುರಿತು ಪ್ರಶ್ನೆಗಳನ್ನು ಎಬ್ಬಿಸುವ ಗುಣ ಇರುವುದಿಲ್ಲ. ಅಲ್ಲಿ ಸಿದ್ಧ ಮಾದರಿಗಳಿರುತ್ತವೆ. ಎಲ್ಲವನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಗುರುತಿಸುವ ಗುಣವಿರುತ್ತದೆ. ಕಳ್ಳ-ಪೋಲೀಸರ ಜೂಟಾಟವನ್ನು ದೃಶ್ಯವಾಗಿ ಕಲ್ಪಸಿಕೊಳ್ಳಿ. ಜನಪ್ರಿಯ ಸಿನಿಮಾದಲ್ಲಿ ನಾಯಕ ಕಳ್ಳನಾಗಿದ್ದರೆ ಆಗ ಇದೇ ಜೂಟಾಟದಲ್ಲಿ ಕಳ್ಳನ ತಪ್ಪಿಸಿಕೊಳ್ಳುವ ಶಕ್ತಿ ಮುಖ್ಯವಾಗುತ್ತದೆ. ಆ ನಾಯಕ ಪೋಲೀಸನಾಗಿದ್ದರೆ ಆಗ ಕಳ್ಳನನ್ನು ಹಿಡಿಯಲು ಆತ ಮಾಡುವ ಸಾಹಸ ಅಥವಾ ಚಾಣಕ್ಷತೆ ಮುಖ್ಯವಾಗುತ್ತದೆ. ಅಂದರೆ ಪ್ರತಿ ಹಂತದಲ್ಲಿಯೂ ನಾಯಕಮಣಿ ಯಾರು ಎಂಬುದರಿಂದ ಕಥನದ ದೃಷ್ಟಿಕೋನ ಬದಲಾಗುತ್ತದೆ. ವಾಸ್ತವವಾಗಿ ಸೃಜನಶೀಲ ಕಥೆಯೊಂದು ಮಾಡಬೇಕಾದ್ದು ಇಷ್ಟೆ ಅಲ್ಲ. ಅದು ಕಳ್ಳ-ಪೋಲೀಸ್ ಎಂಬ ಎರಡು ಪಾತ್ರಗಳ ಮೂಲಕ ನೋಡುಗನಿಗೆ ಆತನ ಜೀವನವನ್ನು ಕುರಿತು ತಿಳಿಸುವಂತಿರಬೇಕು. ಆತನಿಗೆ ಅಂತಹದೊಂದು ದೃಶ್ಯ ನೋಡಿದ ಅನುಭವದಿಂದ ಆಧುನಿಕ ಜೀವನಕ್ರಮವನ್ನು ಕುರಿತಂತೆ ಹೊಸಪ್ರಶ್ನೆಗಳು ಏಳಬೇಕು. ಆಗ ಅಂತಹ ದೃಶ್ಯವಿವರವು ಕೇವಲ ಚಮತ್ಕಾರವಾಗಿ ಉಳಿಯದೆ ಸೃಜನಶೀಲ ಕಲೆಯಾಗುತ್ತದೆ.

ಪ್ರಿಯ ವಿದ್ಯಾರ್ಥಿಗಳೆ,

ನೀವು ಸಿದ್ಧಪಡಿಸುವ ಕಥೆಗಳು, ನಾಟಕಗಳು, ದೃಶ್ಯಮಾಧ್ಯಮದ ಕಲ್ಪನೆಗಳು ಮೇಲೆ ತಿಳಿಸಿದ ಅರ್ಥದಲ್ಲಿ ಕೇವಲ ಕ್ರಿಯಾಶೀಲವಾಗದೆ ಸೃಜನಶೀಲವಾಗಲಿ ಎಂದು ಹಾರೈಸುತ್ತೇನೆ. ಅದಕ್ಕಾಗಿಯೇ ನೀವು ನೋಡುವ ಚಿತ್ರಗಳನ್ನು, ನಾಟಕಗಳನ್ನು, ಓದುವ ಸಾಹಿತ್ಯವನ್ನೂ ಎಚ್ಚರಿಕೆಯಿಂದ ಗಮನಿಸಿ. ಅದು ಕೇವಲ ಕ್ರಿಯಾಶೀಲವೋ, ಸೃಜನಶೀಲ ಅನುಭವ ಒದಗಿಸುವ ಕಲೆಯೋ ಎಂದು ಪರಾಮರ್ಶಿಸಿ. ಆ ಮೂಲಕ ಸೃಜನಶೀಲ ಕಲಾವಿದರಿಗೆ ಸರಿಯಾದ ಗೌರವ ದೊರೆಯಲಿ. ನಮ್ಮ ನಡುವೆ ಸಿದ್ಧವಾಗುವ ಚಮತ್ಕಾರಿಕಾ ಮನರಂಜನೆಗಳು ಜನಪ್ರಿಯತೆಯ ಹೆಸರಲ್ಲಿ ಮನಸ್ಸುಗಳನ್ನ ಹಾಳುಗೆಡವದಿರಲಿ!

( ಬಾರಿ ಸೃಜನಶೀಲ ಚಿತ್ರ ಒಂದನ್ನು ಪರಿಚಯಿಸುವುದಕ್ಕೆ ಬದಲಾಗಿ, ಸೃಜನಶೀಲತೆಯನ್ನು ಕುರಿತೇ ನನ್ನ ಅಭಿಪ್ರಾಯಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ತಿಳಿಸಿರುವ ಅರ್ಥದಲ್ಲಿ ಸೃಜನಶೀಲ ಎನಿಸುವ ಸಿನಿಮಾಗಳ ಕುರಿತು ಚರ್ಚಿಸೋಣ.)

Advertisements

0 Responses to “ಕ್ರಿಯಾಶೀಲತೆ ಎಂಬ ಹಳವಂಡ !”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: