“ತಬರನ ಕಥೆ’- ಕಥೆಯೊಂದು ಸಿನಿಮಾ ಆಗುವ ಬಗೆ….

ಬೆಳಕಿನೊಳಗಣ ಬೆಳಗು೧೫

ಕಳೆದ ಬಾರಿ ನಮ್ಮಲ್ಲಿ ತಯಾರಾಗುತ್ತಿರುವ ಸಿನಿಮಾಗಳಲ್ಲಿ “ಭ್ರಷ್ಟಾಚಾರ’ವನ್ನು ತೋರಿಸುತ್ತಿರುವ ಬಗೆಯನ್ನು ಕುರಿತು ಪ್ರಸ್ತಾಪಿಸಿದ್ದೆ. ಅದೇ ಮಾತುಗಳ ಮುಂದುವರಿಕೆಯಾಗಿ ಮತ್ತೊಂದು ಸಿನಿಮಾದ ವಿವರಗಳನ್ನಿಟ್ಟುಕೊಂಡು, ನಿಮ್ಮೊಡನೆ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯಲೋಕ ಕಂಡ ಅಪರೂಪದ ಕಥೆಗಾರ. ಅವರ ಕಥೆಯ ಒಳವಿವರಗಳಿಗಿಂತ ಅವರು ಬಳಸುವ ಭಾಷೆ ಮತ್ತು ಕಥನ ಕಟ್ಟಡ ನಮ್ಮನ್ನು ಒಳಗೊಳ್ಳುತ್ತದೆ. ಜೊತೆಗೆ ಪೂಚಂತೇ ಅವರಿಗಿರುವ ಆಧುನಿಕ ಜೀವನ ಕುರಿತ ವ್ಯಂಗ್ಯ ದೃಷ್ಟಿಕೋನ ಓದುಗನನ್ನು ಆವರಿಸುತ್ತದೆ. ಇವರು ಬರೆದ ಕಥೆಗಳೆಲ್ಲವೂ ಶಕ್ತಿಯುತವಾಗುವುದೇ ಲೇಖಕರ ಅತ್ಯಂತ ಮೊನಚಾದ ಜೀವನದೃಷ್ಟಿಯಿಂದ. ಇಂತಹ ಕಥೆಗಳನ್ನು ಅಕ್ಷರದಿಂದ ದೃಶ್ಯ ಮಾಧ್ಯಮಕ್ಕೆ ತರುವುದು ಬಹು ಕಷ್ಟದ ಕೆಲಸ. ಏಕೆಂದರೆ, ಸಾಮನ್ಯವಾಗಿ ಪೂಚಂತೇ ಅವರು ತಮ್ಮ ಎಲ್ಲಾ ಕಥೆಗಳಲ್ಲೂ ತಾವೇ ನಿರೂಪಕರಾಗಿ ಇದ್ದುಬಿಟ್ಟಿರುತ್ತಾರೆ. ಹೀಗಾಗಿ ಪೂಚಂತೇ ಅವರ ಬಹುಮುಖ್ಯ ಅಭಿಪ್ರಾಯಗಳು ಕಣ್ಣೆದುರು ಬಾರದ ನಿರೂಪಕನದ್ದೇ ಆಗಿ ಕಥೆಗಳಲ್ಲಿ ಬಂದಿರುತ್ತದೆ. ಇಂತಹವನ್ನು ದೃಶ್ಯಕ್ಕೆ ತರುವುದು ನಿಜಕ್ಕೂ ಸಾಹಸವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಸಾಹಿತ್ಯ ಪ್ರಕಾರವನ್ನು ಆಧರಿಸಿ ಸಿನಿಮಾ ಆಗಿರುವ ಎಲ್ಲಾ ಚಿತ್ರಗಳಲ್ಲಿಯೂ ಇದೊಂದು ಸಮಸ್ಯೆಯೇ. ಕಾದಂಬರಿ ಅಥವಾ ಕಥೆಯಲ್ಲಿ ವಾಕ್ಯವೊಂದರಲ್ಲಿ ಬಂದುಬಿಡಬಹುದಾದ ವಿವರವನ್ನ ತೆರೆಯ ಮೇಲೆ ದೃಶ್ಯವಾಗಿ ಹೇಳುವಾತ ಮೂಲರೂಪ ಕೊಟ್ಟವನಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಯೋಚಿಸುವವನಾಗಬೇಕು. ಹಾಗಲ್ಲವಾದರೆ, ಮೂಲಕೃತಿಯೇ ಪ್ರತಿರೂಪದ ಮೇಲೆ ತನ್ನ ಛಾಯೆಯನ್ನ ಅಚ್ಚೊತ್ತಿಬಿಡುತ್ತದೆ. ಈ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಸಂದರ್ಭದಲ್ಲಿ, ಸಾಹಿತ್ಯ ಪ್ರಕಾರವನ್ನು ಆಧರಿಸಿ ತಯಾರದ ಸಿನಿಮಾಗಳಲ್ಲಿ ಶ್ರೇಷ್ಟವಾದುದು ಎಂದು ಕರೆಸಿಕೊಳ್ಳುವ ಕೆಲವೇ ಸಿನಿಮಾಗಳಲ್ಲಿ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ “ತಬರನಕಥೆ’ಯೂ ಒಂದು.

“ತಬರನಕಥೆ’ ಪೂಚಂತೇ ಅವರ ಬರಹದಲ್ಲಿ ಆಧುನಿಕ ಬದುಕನ್ನು ಕುರಿತ ವಿಡಂಬನೆಯಾಗಿ ಕಂಡರೆ, ಗಿರೀಶರ “ತಬರನಕಥೆ’ ಅನಕ್ಷರಸ್ಥ ಜಗತ್ತು ಅಕ್ಷರ ಜಗತ್ತಿನಿಂದ ಅನುಭವಿಸುವ ಕ್ರೌರ್ಯವಾಗಿ ತೆರೆದುಕೊಳ್ಳುತ್ತದೆ. ಇಲ್ಲಿ ಮೂಲ ಲೇಖಕನ ಅದೇ ಕಥೆಯನ್ನ ಗಮನಿಸುವ ಕಣ್ಣುಗಳು ಬೇರೆಯ ಮಗ್ಗುಲಿಂದ ನೋಡುತ್ತಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿಯೇ ಇದು ಪೂಚಂತೇ ಅವರ ಮೂಲಕೃತಿಗಿಂತ ಭಿನ್ನವಾಗಿ ಸ್ವತಂತ್ರರೂಪ ಪಡೆದು ನಿಲ್ಲುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ತಯಾರಾಗುವ ಕಾದಂಬರಿ ಆಧಾರಿತ ಚಿತ್ರಗಳಿಗೆ ಇಂತಹ ಸ್ವರೂಪ ಇರುವುದಿಲ್ಲ. ಅಲ್ಲಿ ನಿರ್ದೇಶಕನಾದವನು ಮತ್ತು ಚಿತ್ರಕಥಾ ಲೇಖಕ ಮೂಲಕೃತಿಗೆ ಜೋತು ಬಿದ್ದು ಅದೇ ನಿಲುವನ್ನು ಹೇಳಲು ಹೊರಟಿರುತ್ತಾನೆ. ಹೀಗಾಗಿ ಮೂಲಕೃತಿಯ ದೈತ್ಯ ಸ್ವರೂಪದ ಛಾಯೆಯ ಅಡಿಯಲ್ಲಿ ಮತ್ತೊಂದು ಸ್ವರೂಪಕ್ಕೆ ಬಂದ ಅದೇ ಕಥೆಯು ಸ್ವತಂತ್ರವಾಗಿ ನಿಲ್ಲುವುದಿಲ್ಲ. ಗಿರೀಶ್ ಕಾಸರವಳ್ಳಿಯವರ ಬಹುತೇಕ ಚಿತ್ರಗಳು ಇಂತಹ ಅಪವಾದಗಳಿಂದ ಹೊರಗುಳಿಯುತ್ತವೆ. ಇದಕ್ಕೆ ಗಿರೀಶ್ ಕಾಸರವಳ್ಳಿಯವರು ಮೂಲಕೃತಿಕಾರನಿಗಿಂತ ಭಿನ್ನ ದೃಷ್ಟಿಕೋನವುಳ್ಳವರೆಂಬುದು ಪ್ರಧಾನ ಕಾರಣವಾಗಿರುತ್ತದೆ.

“ತಬರನಕಥೆ’ಯ ಪ್ರಧಾನ ಪಾತ್ರಧಾರಿ ತಬರಶೆಟ್ಟಿ ಎಂಬ ಅಕ್ಷರ ತಿಳಿಯದ ಕಾರಕೂನ. ಆತ ಸ್ವಾತಂತ್ರ್ಯಪೂರ್ವದಿಂದಲೂ ಸರ್ಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಾ ಇರುವವನು. ಈತನ ನಿವೃತ್ತಿಯ ಅವಧಿಯು ಹತ್ತಿರಕ್ಕೆ ಬರುವ ಕಾಲದಲ್ಲಿಯೇ ಕಾಫಿ ಬೆಳೆಗಾರರು ಒಂದು ಸಣ್ಣ ಪ್ರತಿಭಟನೆಯನ್ನು ಮಾಡುತ್ತಾರೆ. ಆ ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದಂತೆ ಹಣಸಂದಾಯದ ರಶೀದಿಯನ್ನು ತಬರ ಬರೆದಿರುತ್ತಾನೆ, ಆದರೆ ಆ ಶ್ರೀಮಂತ ಹಣವನ್ನು ಕೊಡದೆ ಪ್ರತಿಭಟನೆಯನ್ನು ಆರಂಭಿಸುತ್ತಾನೆ. ಸರ್ಕಾರದ ಪ್ರಕಾರ ಅದಾಗಲೇ ರಶೀದಿ ಬರೆದಿರುವ ಹಣ ಬೊಕ್ಕಸಕ್ಕೆ ಸಂದಾಯವಾಗಿಲ್ಲ. ಹೀಗಾಗಿ ತಬರಶೆಟ್ಟಿಯ ನಿವೃತ್ತಿವೇತನವನ್ನು ಸರ್ಕಾರ ತಡೆಹಿಡಿಯುತ್ತದೆ. ಆ ಹಣ ಪಡೆಯಲಿಕ್ಕಾಗಿ ತಬರ ಪ್ರಯಾಸಪಡತೊಡಗುತ್ತಾನೆ. ಅದರ ಜೊತೆಯಲ್ಲಿಯೇ ಆತನ ಮಡದಿಯು ಸಕ್ಕರೆ ಖಾಯಿಲೆಯಿಂದ ನರಳುತ್ತಾಳೆ. ಅವಳಿಗೆ ಸರಿಯಾದ ಔಷಧಿಯನ್ನು ಕೊಡಿಸಲು ಬೇಕಾದ ಹಣವೂ ಇಲ್ಲದೆ ತಬರಶೆಟ್ಟಿ ಹತಾಶನಾಗುತ್ತಾನೆ. ಇದೇ ಹಾದಿಯಲ್ಲಿ ಅವನ ಮಡದಿ ತೀರಿಕೊಂಡುಬಿಡುತ್ತಾಳೆ. ಇದೆಲ್ಲಾ ಆಗುವ ಹೊತ್ತಿಗೆ ತಬರನಿಗೆ ಸರ್ಕಾರವು ನಿವೃತ್ತಿವೇತನವನ್ನು ಮಂಜೂರು ಮಾಡುತ್ತದೆ. ಆದರೆ ಆ ಹೊತ್ತಿಗೆ ಹಣದ ಅಗತ್ಯವೇ ಇಲ್ಲದ ತಬರ ಹತಾಶಸಿಟ್ಟಿನಿಂದ ಹುಚ್ಚನಾಗಿಬಿಟ್ಟಿರುತ್ತಾನೆ. ಇದು “ತಬರನಕಥೆ’ಯ ಸ್ಥೂಲ ಕಥಾಹಂದರ. ಇಂತಹದೊಂದು ಕಥೆಯನ್ನು ಹೇಳುವಲ್ಲಿ ಪೂಚಂತೇ ಅವರು ಭ್ರಷ್ಟವ್ಯವಸ್ಥೆಯನ್ನು ಕುರಿತು ಕಥೆಗಾರರಾಗಿ ಅತ್ಯಂತ ಮೊನಚಾದ ಮಾತುಗಳನ್ನು ದಾಖಲಿಸುತ್ತಾರೆ. ತಬರ ಸರ್ಕಾರಿ ಟೇಬಲ್ಲುಗಳಿಂದ ಟೇಬಲ್ಲುಗಳಿಗೆ ಹೋಗುವುದು ಮೂಲಕಥೆಯಲ್ಲಿ ಪ್ರಧಾನವಾಗಿ ಬಿಡುತ್ತದೆ. ಅಲ್ಲಿ ತಬರನ ಅನಕ್ಷರತೆಯು ಸಹ ಆಧುನಿಕ ಜೀವನದ ನಡುವೆ ಮತ್ತೊಂದು ವ್ಯಂಗ್ಯವಾಗಿ ಕಾಣುತ್ತದೆ. ಆದರೆ ಗಿರೀಶರು ತಮ್ಮ ಚಿತ್ದುದ್ದಕ್ಕೂ ತಬರನನ್ನು ಕುರಿತು ಅನುಕಂಪ ಹುಟ್ಟುವಂತೆ ಮಾಡುತ್ತಾರೆ. ತಬರನ ಅಸಹಾಯಕತೆ ನೋಡುಗನ ಅಸಹಾಯಕತೆಯಾಗುತ್ತದೆ. ಆತನ ಮಡದಿಗೆ ಮಧುಮೇಹದಿಂದಾಗಿ ಕಾಲು ಕತ್ತರಿಸಬೇಕೆಂದು ಡಾಕ್ಟರರು ಹೇಳಿದಾಗ ತಬರ ತನ್ನ ಗೆಳೆಯನಾದ ಮಾಂಸದಂಗಡಿಯ ಸಾಹೇಬನ ಬಳಿ ಬಂದು ವೈದ್ಯರಿಗೆ ಕೊಡಲು ದುಡ್ಡಿಲ್ಲ ಎನ್ನುತ್ತಾ ಮಾಂಸ ಕತ್ತರಿಸುವವನು ತನ್ನ ಮಡದಿಯ ಕಾಳು ಕತ್ತರಿಸಲಾರನೇ ಎಂದು ಕೇಳುವಾಗ ನೋಡುಗನಿಗೆ ಆತನ ಅಸಹಾಯಕತೆಯನ್ನು ಕುರಿತು ಸ್ಪಷ್ಟ ಚಿತ್ರ ಮೂಡುವುದಲ್ಲದೆ, ತಬರನ ಅಸಹಾಯಕತೆ ನಾವೇ ಕಟ್ಟಿದ ಸಮಾಜದೊಳಗಿನ ಹುಳುಕಿನಿಂದ ಆಗಿರುವುದು ಎಂದು ತಿಳಿಯುತ್ತದೆ.

ಇದು ಒಂದು ಉತ್ತಮ ಚಿತ್ರದ ಶಕ್ತಿ. ಕಥೆಯೊಳಗಿನ ಮೂಲ ಪಾತ್ರದ ಸಮಸ್ಯೆಗಳಲ್ಲಿ ಪ್ರೇಕ್ಷಕ ತೊಡಗಿಕೊಳ್ಳುವಂತಾಗುವುದು ಅತ್ಯಂತ ಮುಖ್ಯ. ಆಗ ಮಾತ್ರ ಯಾವುದೇ ಚಿತ್ರ ತಯಾರಿಕೆಯೂ ಸಾರ್ಥಕವಾಗುತ್ತದೆ. ಇಂತಹದನ್ನು ಗಿರೀಶ್ ಕಾಸರವಳ್ಳಿಯವರ “ತಬರನಕಥೆ’ ಸಾಧಿಸಿದ್ದರ ಫಲವಾಗಿಯೇ ಆ ಚಿತ್ರಕ್ಕೆ ರಾಷ್ಟ್ರಚಲನಚಿತ್ರೋತ್ಸವದಲ್ಲಿ ಸ್ವರ್ಣಕಮಲ ಲಭಿಸಿದ್ದು ಮತ್ತು ತಬರನ ಪಾತ್ರಧಾರಿ ಚಾರುಹಾಸನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯೂ ದೊರೆತದ್ದು.

ಪ್ರಶಸ್ತಿಗಳ ವಿಷಯ ಒತ್ತಟ್ಟಿಗಿರಲಿ. ಈ ಕಥೆಯು ತೆರೆಯ ಮೇಲೆ ಬಿಚ್ಚಿಕೊಳ್ಳುವ ಕ್ರಮದಲ್ಲಿ ಪ್ರೇಕ್ಷಕನ ಮನಸ್ಸಿನ ಮೇಲೆ ನಮ್ಮ ಭ್ರಷ್ಟ ಸಮಾಜ ಕುರಿತು ಮೂಡುವ ಅಭಿಪ್ರಾಯವಿದೆಯಲ್ಲ ಅದು ಮುಖ್ಯವಾದುದು. ಒಂದು ಜನಪ್ರಿಯ ಚಿತ್ರದಲ್ಲಿ ನಾಯಕನೊಬ್ಬ ಎಲ್ಲಾ ಭ್ರಷ್ಟರನ್ನು ಕೊಂದು ನೂಡುಗನಿಗೆ ತೃಪ್ತಿ ಮೂಡಿಸುತ್ತಾನೆ. ಆದರೆ ಒಂದು ಒಳ್ಳೆಯ ಚಿತ್ರವು ವಾಸ್ತವವನ್ನು ಪ್ರೇಕ್ಷಕನ ಎದುರಿಗೆ ಇಟ್ಟು, ನೋಡುಗ ಚಿಂತಿಸುವಂತೆ ಪ್ರೇರೇಪಿಸುತ್ತದೆ. ಯಾವ ಚಿತ್ರ ನೋಡುಗನಲ್ಲಿ ತನ್ನ ಸಮಕಾಲೀನ ಜೀವನ ಕುರಿತು ಪ್ರಶ್ನೆಗಳನ್ನು ಎಬ್ಬಿಸುವುದಿಲ್ಲವೋ ಮತ್ತು ಪ್ರೇಕ್ಷಕನನ್ನು ಭ್ರಮಾತ್ಮಕ ಲೋಕದಲ್ಲಿ ಉಳಿಸಿಬಿಡುತ್ತದೋ ಅದು ಪ್ರಗತಿವಿರೋಧಿ ಸಿನಿಮಾ ಎಂದು ನನ್ನ ಭಾವನೆ. ಒಳ್ಳೆಯ ಸಮಾಜ ನಿರ್ಮಾನವಾಗಬೇಕೆಂದು ಬಯಸುವವರು ಅಂತಹ ಭ್ರಮಾತ್ಮಕ ಸಿನೆಮಾಗಳನ್ನು ನೋಡುವುದನ್ನು ಬಿಟ್ಟು ಸದಭಿರುಚಿ ಮತ್ತು ಸದ್‌ಚಿಂತನೆಯ ಚಿತ್ರಗಳನ್ನ ನೋಡಬೇಕು. ಆಗ ಮಾತ್ರ ನಮ್ಮದು ಸಾಸ್ಥ್ಯವುಳ್ಳ ಸಮಾಜವಾಗುತ್ತದೆ.

ನೆನಪಿರಲಿ : ಒಳ್ಳೆಯದನ್ನು ಪ್ರೇಕ್ಷಕರು ಪ್ರೋತ್ಸಾಹಿಸಿದಾಗ ಮಾತ್ರ, ಒಳ್ಳೆಯ ಸಿನಿಮಾಗಳು ನಿರ್ಮಾಣವಾಗುತ್ತವೆ.

 

Advertisements

6 Responses to ““ತಬರನ ಕಥೆ’- ಕಥೆಯೊಂದು ಸಿನಿಮಾ ಆಗುವ ಬಗೆ….”


 1. 1 S.N.Srikanta November 25, 2009 at 10:46 am

  Dear Mr. B.Sureshji
  I have seen your blog today after hearing from you in our favourit Kannada news paper Vijaya Karnataka.
  I have also created a blog. I want to put some inputs into my blog
  I have no experience about blog writing. Since a week I am following the articles published about blogs in Kannada. So I am trying to prepare some blogs.
  Mr. Ashok Vardhanji guided me to down load Nudi and Baraha from the web site. I have done it.
  As there was no e-mail Id of your good self I was reluctant to leave my sayings in the comment space. Pls excuse me for this over head behavious. and Pls guide me about writing Blogs in Kannada
  Your artelces are supurb and I have glanced all of them today for about an hour. I would like to express my thanks to Vijaya Karnataka to weld your friend ship at least now.
  I would like to state that i have served as a reporter both in Kannada and English news papers including PTI and UNI national news agencies for over five decades. Now I have been retired and job less.
  Mr. Sureshji pls help to write blogs in kannada.
  Thanks
  With warm regards
  Samudravalli Narasimha Srikanta
  25th November 2009

 2. 2 bharath November 26, 2009 at 7:15 am

  ‘ತಬರನ ಕಥೆ’ಯನ್ನು ಕಥೆಯಾಗಿಯೇ ಓದಿದ್ದ ನನಗೆ ಕಾಸರವಳ್ಳಿಯವರ ಸಿನೆಮ ರೂಪದಲ್ಲಿ ನೋಡುವ ಅವಕಾಶ ಸಿಕ್ಕಿಲ್ಲ. ಬಹಳ ಕಡೇ ಆ ಸಿನೆಮಾದ ಸಿ.ಡಿ ಗಾಗಿ ಹುಡುಕಿದ್ದೇನೆ, ಹುಡುಕುತ್ತಿದ್ದೇನೆ. ಮೊನ್ನೆ ‘ಅಬಚೂರಿನ ಪೋಸ್ಟಾಫೀಸು’ ನೋಡಿದೆ. ನನಗ್ಯಾಕೋ ಇಷ್ಟ ಆಗಲಿಲ್ಲ. ಮೂಲ ಕಥೆಯನ್ನು ಓದುವಾಗ ಸಿಕ್ಕ ಅನುಭೂತಿ ಸಿನಿಮಾ ನೋಡುವಾಗ ಸಿಗಲಿಲ್ಲ. ಇದು ದೃಶ್ಯ ಮಾಧ್ಯಮದ ಒಂದು limitations ಇರಬಹುದೇನೋ. ಆದರೆ ಮೊನ್ನೆ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ ಮುದ್ದುಶ್ರಿ ಉತ್ಸವ’ ದಲ್ಲಿ ‘ಬೆನಕ’ ತಂಡದವರು ತಬರನ ಕಥೆ ನಾಟಕ ಪ್ರದರ್ಶಿಸಿದರು….. ನಿಜಕ್ಕೂ ನಾಟಕ ಅದ್ಭುತವಾಗಿ ಮೂಡಿಬಂತು. ಯಾವುದೇ ಸೆಟ್ಟುಗಳ ಹಂಗಿಲ್ಲದೆ ಕೇವಲ ಬೆಳಕಿನ ಸಂಯೋಜನೆ, ಪಾತ್ರದಾರಿಗಳ ಅಮೋಘ ಅಭಿನಯ, ಹಾಗು ಮೂಲ ಕಥೆಗೆ ಬದ್ದವಾಗಿದ್ದುಕೊಂಡೆ ನಾಟಕವನ್ನು ಯಶಸ್ವಿಯಾಗಿಸಿದರು. ನಾಗಾಭರಣ ತಬರನಾಗಿ ನೀಡಿದ ಅಭಿನಯ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಕೂತಿದೆ.

  ಕೊನೆಯಲ್ಲಿ ನನ್ನದೊಂದು ಪ್ರಶ್ನೆ….ಒಂದು ಕಥೆ ಅಥವಾ ಕಾದಂಬರಿಯನ್ನು ಸಿನಿಮಾ ಮಾಡುವಾಗ ಮೂಲ ಕಥೆಯ ಭಾವವೇ ಬದಲಾಗಿಬಿಡುವುದಕ್ಕೆ ಕಾರಣವೇನಿರಬಹುದು?

 3. 3 Satish November 27, 2009 at 5:51 pm

  Hi Sureshji,

  Among few kannada films of my favourite this is one among them….

  Tharegalu Team wishes you for your future articles.

  Regards,
  Satish.N
  http://www.tharegalu.com
  Kannada Film Stardom

 4. 4 ಬಿ.ಸುರೇಶ December 8, 2009 at 1:37 pm

  ಪ್ರಿಯ ಭರತ್ ಅವರಿಗೆ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
  ನೀವು ತಬರನ ಕತೆಯ ಸಿಡಿಯನ್ನು ಪಡೆಯುವುದಕ್ಕೆ ಗಿರೀಶರನ್ನು ಸಂಪರ್ಕಿಸಬಹುದು. ಪ್ರಾಯಶಃ ಇಂತಹ ಅಪರೂಪದ ಚಿತ್ರಗಳು ಮಾರುಕಟ್ಟೆಯಲ್ಲಿ ದೊರೆಯುವುದು ದುರ್ಲಭ. ಹಾಗಾಗಿ ತಯಾರಕರ ಮೊರೆ ಹೋಹಬೇಕಾಗುತ್ತದೆ.
  ಇನ್ನು ನಿಮ್ಮ ಪ್ರಶ್ನೆಗೆ ನನ್ನ ಪ್ರತಿಕ್ರಿಯೆ:
  ಮೂಲ ಸಾಹಿತ್ಯ ಕೃತಿಯೊಂದು ಮತ್ತೊಂದು ಪ್ರಾಕಾರಕ್ಕೆ ಬರುವಾಗ ಅನೇಕ ಬದಲಾವಣೆಗಳಿಗೆ ಒಳಗಾಗಬೇಕಾದ್ದು ಅನಿವಾರ್ಯ. ಇಲ್ಲವಾದರೆ ಮೂಲದಲ್ಲಿ ಆದಾಗಲೇ ಸೃಷ್ಟಿಯಾಗಿರುವುದನ್ನು ಯಥಾವತ್ತಾಗಿ ತೆರೆಗೆ ತಂದಂತಾಗುತ್ತದೆ. ಆಗ ಅಂತಹ ಕೃತಿಯ ಮೂಲ ರೂಪವನ್ನು ನೋಡಿರುವ ಓದುಗನಿಗೆ ಮತ್ತೊಂದು ಅನುಭವ ಸಿಗದೆ ಮೂಲವನ್ನು ಚಿತ್ರಿತ ರೂಪದಲ್ಲಿ ನೋಡಿದ್ದಷ್ಟೆ ಆಗುವ ಸಾಧ್ಯತೆ ಇದೆ. ಹೀಗಾಗಿ ಕತೆಯೊಂದನ್ನು ಸಿನಿಮಾಕ್ಕೆ ತರುವ ಚಿತ್ರತಯಾರಕ ಮೂಲದ ಆಶಯವನ್ನಷ್ಟೆ ಬಳಸಿಕೊಂಡು ಹೊಸ ಅನುಭವವನ್ನು ಉಣಬಡಿಸುವ ಪ್ರಯತ್ನ ಮಾಡುತ್ತಾನೆ. ಅಲ್ಲಿ ಮೂಡುವ ಅನುಭೂತಿ ಮೂಲದಲ್ಲಿ ದೊರೆತ ಅನುಭೂತಿಗಿಂದ ಭಿನ್ನವಾಗುತ್ತದೆ. ಅಲ್ಲದೆ ಮೂಲಕೃತಿಯೊಂದರ ಆಧಾರದಿಂದ ತಯಾರಾದ ‘ಹೊಸ ಕೃತಿ’ ಆಗುವ ಸಾಧ್ಯತೆಯೂ ಆ ಸಿನಿಮಾಕ್ಕೆ ಒದಗುತ್ತದೆ.
  ಹೀಗೆ ಹೊಸ ಪ್ರಯತ್ನವಾಗದೆ ಹೋದಾಗ ಸಿನಿಮಾ ಮೂಲದ ಛಾಯೆಯಲ್ಲಿ ನರಳುತ್ತದೆ. ಇಂತಹ ನರಳುವಿಕೆಗೂ ಅನೇಕ ಉದಾಹರಣೆಗಳು ಇವೆ.
  ಕತೆಯೊಂದನ್ನಾಧರಿಸಿದ ಸಿನಿಮಾವನ್ನು ಓದಿದ ನೆನಪಿನಿಂದ ನೋಡದೆ, ಪ್ರತ್ಯೇಕವಾಗಿ ನೋಡಲು ಪ್ರಯತ್ನಿಸಿ. ಆಗ ನಿಮಗೆ ಸಿಗುವ ಅನುಭವ ಜಗತ್ತು ವಿಭಿನ್ನವಾಗಿರುತ್ತದೆ.
  ವಂದನೆಗಳು. ಬಿಡುವಾದಾಗ ಬರೆಯುತ್ತಿರಿ.
  ನಿಮ್ಮವ
  ಬೀಸು

 5. 5 raviraj December 20, 2009 at 11:54 am

  puchante nanna necchina lekhaka, avara bagge, a chitrada bagge bareda lekhana mahitipoornavagide, thanks…

 6. 6 chethan October 23, 2010 at 6:15 pm

  poochante nanna gurugugalu.. avarau chitrisuva paatragaligaagi hudukaadidavanu naanu. adbuthavaada tabarana katheya bagge baredu , avarannu nenapisiddakkaagi thumbaa thanks..
  I have read all the articles .. its good sir!! swalpa vichaara maaduvanthavu .. thank you sirr again


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 60,851 ಜನರು
Advertisements

%d bloggers like this: