ದಿಕ್ಕೆಟ್ಟವರು ಮತ್ತು ನಮ್ಮ ದೇಶ

ಬೆಳಕಿನೊಳಗಣ ಬೆಗು – ೫

ಆಧುನಿಕ ಭಾರತ ಎನ್ನುವುದು ನಿಧಾನವಾಗಿ ಜಾಗತಿಕಗ್ರಾಮ ಎಂಬುದರ ಭಾಗವಾಗುತ್ತಾ ಇದೆ. ಇದು ಉಳ್ಳವರು ಮತ್ತು ಬಡವರ ನಡುವಿನ ಅಂತರವನ್ನ ಅದೆಷ್ಟು ಹೆಚ್ಚಿಸುತ್ತಾ ಇದೆಯೆಂದರೆ ನಮ್ಮ ಗ್ರಾಮೀಣ ಕುಶಲ ಕೈಗಾರಿಕೆ ಮಾಡುತ್ತಾ ಇದ್ದವರ ಬದುಕು ದಿಕ್ಕುಗಾಣದಂತಾಗಿದೆ. ಇದನ್ನು ನಾವು ಚನ್ನಪಟ್ಟಣದ ಬೊಂಬೆ ಮಾಡುವರ ಉದ್ಯಮದ ಮೇಲೆ ಆದ ಹೊಡೆತದಿಂದ, ನಮ್ಮ ನಡುವೆಯೇ ಆಲೂಗಡ್ಡೆ ಸುಲಿದು ಚಿಪ್ಸ್ ಮಾಡಿ ಮಾರುತ್ತಿದ್ದ ವ್ಯಾಪಾರಿಯ ಮೇಲೆ ಆದ ಪರಿಣಾಮಗಳ ಮೂಲಕ ಗುರುತಿಸಬಹುದು. ಚನ್ನಪಟ್ಟಣದ ಬೊಂಬೆ ತಯಾರಕನಿಗೆ ಆಧುನಿಕ ಮತ್ತು ಪಾಶ್ಚತ್ಯ ಬೊಂಬೆ ತಯಾರಕರು ತಮ್ಮ ಯಂತ್ರಗಳಿಂದ ತಯಾರಾದ ಪ್ಲಾಸ್ಟಿಕ್ ಬೊಂಬೆಗಳ ಜೊತೆಗೆ ಸ್ಪರ್ಧೆಗೆ ನಿಂತು ಸೋಲಿಸಿದರು. ನಮ್ಮ ಗೃಹ ಉದ್ಯೋಗಿ ಚಿಪ್ಸ್ ತಯಾರಕನನ್ನ ಬಹುರಾಷ್ಟ್ರೀಯ ಕಂಪೆನಿಗಳು ತಯಾರಿಸಿದ ಯಾಂತ್ರೀಕೃತ ಚಿಪ್ಸ್‌ಗಳು ಸ್ಪರ್ಧೆಗೆ ಇಳಿದು ಸೋಲಿಸಿದವು. ಇಲ್ಲಿ ಬೊಂಬೆ ಕೊಳ್ಳುವವನು ಬಣ್ಣದ ಪೇಪರ್ರಿನಲ್ಲಿ ಕಟ್ಟಿದ ನಿರ್ಜೀವಕ್ಕೆ ಮಾರುಹೋದುದನ್ನು ನಾವು ನೋಡಬಹುದು. ಇದು ಬರಿ ನಮ್ಮ ದೇಶದ ಸಮಸ್ಯೆ ಅಲ್ಲ. ಈ ಜಗತ್ತಿನಾದ್ಯಂತ ಇರುವ ಅಭಿವೃದ್ಧಿ ಶೀಲ ದೇಶಗಳ ಜನ ಈ ತೊಂದರೆಯನ್ನು ಅನುಭವಿಸುತ್ತಾ ಇದ್ದಾರೆ. ಇದು ವಾಸ್ತವ. ಆದರೆ ಮನುಷ್ಯ ಈ ಸಂಕಟವನ್ನು ಎದುರಿಸಲು ಪ್ರಯತ್ನಿಸುತ್ತಾ ಇರುವ ರೀತಿಯಿದೆಯಲ್ಲ ಅದು ಅಚ್ಚರಿ ಮೂಡಿಸುವಂತಹುದು. ಇಂತಹ ವಿವರಗಳನ್ನ ಉಳ್ಳಂತಹ ಚಿತ್ರಗಳು ನಮ್ಮಲ್ಲಿ ಬರುವುದು ವಿರಳ. ಅಂತಹ ಅಪರೂಪದ ಚಿತ್ರ ‘ಪ್ರವಾಹ’

ಪಿ.ರಾಮದಾಸನಾಯ್ಡು ನಿರ್ದೇಶಿಸಿರುವ ‘ಪ್ರವಾಹ’ ಆಧುನಿಕ ಯುಗದಲ್ಲಿ ಮನುಷ್ಯ ಎದುರಿಸುವ ಸ್ಪರ್ಧೆ ಮತ್ತು ತಲ್ಲಣಗಳನ್ನು ತನ್ನದೇ ಆದ ಕ್ರಮದಲ್ಲಿ ಹಿಡಿಯುವ ಪ್ರಯತ್ನ ಮಾಡುತ್ತದೆ. ಇಲ್ಲಿ ಕುಂಬಾರನ ಮತ್ತವನ ಸಂಸಾರದ ಚಿತ್ರಣವಿದೆ. ಅಚ್ಚುತ, ಮಂಗಳಾ ಮುಂತಾದವರ ಅಭಿನಯವಿದೆ. ೨೦೦೫ರಲ್ಲಿ ತಯಾರಾದ ಈ ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳೆರಡೂ ದೊರೆತಿದೆ. ಅಲ್ಲದೇ ಈ ಚಿತ್ರ ಹಲಕೆಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನ ಕಂಡಿದೆ. ಹೀಗೆ ಪ್ರಶಸ್ತಿಯೋ ಅಥವಾ ಅಂತಾರಾಷ್ಡ್ರೀಯ ಮನ್ನಣೆ ಗಳಿಸುವುದೋ ಪ್ರಮುಖವಲ್ಲ. ಆದರೆ ಚಿತ್ರವೊಂದರ ಮೂಲಕ ಪ್ರೇಕ್ಷಕನನ್ನು ಆಧುನಿಕ ಸವಾಲುಗಳನ್ನ ಎದುರಿಸುವ ಕ್ರಮ ಕುರಿತು ಚಿಂತಿಸುವಂತೆ ಮಾಡುವುದು ಮುಖ್ಯ.
ಇಲ್ಲೊಬ್ಬ ಕುಂಬಾರನಿದ್ದಾನೆ. ಆತ ಇಡೀ ಗ್ರಾಮದ ಜನರಿಗೆ ಬೇಕಾದವನು. ಆತನಿಂದ ಮಡಿಕೆ – ಕುಡಿಕೆ ಕೊಳ್ಳಲು ಅಲ್ಲಿ ಒಂದು ಸಣ್ಣ ಗ್ರಾಹಕರು ಗುಂಪಿದೆ. ಹೀಗಾಗಿ ಆತ ಸುಖಿ. ಆತನ ಸಂಸಾರಕ್ಕೆ ಬದುಕಲು ಬೇಕಾದ ಆದಾಯವಿದೆ. ಇಂಥಾ ಕುಂಬಾರನ ಮಗನ ಮೂಲಕ ‘ಪ್ರವಾಹ’ದ ಕಥೆ ಬಿಚ್ಚಿಕೊಳ್ಳುತ್ತದೆ. ಅವನು ಚೂಟಿ ಹುಡುಗ. ಶಾಲೆಯಲ್ಲಿನ ಓದು ಅವನ ತಲೆಗೆ ಸುಲಭವಾಗಿ ಹತ್ತುವುದಿಲ್ಲ ಎಂಬುದನ್ನು ಹೊರತುಪಡಿಸಿದರೆ ಅವನು ಆ ವಯಸ್ಸಿನ ಯಾವುದೇ ಹುಡುಗರಿಗಿಂತ ಕಡಿಮೆಯಲ್ಲ. ಹರಿದ ಚೀಲ, ಪುಸ್ತಕ ಹಿಡಿದೇ ಶಾಲೆಗೆ ಹೋಗುತ್ತಾನೆ. ಬಿಡುವಾದಾಗ ಅಪ್ಪನಿಗೆ ಸಹಾಯ ಮಾಡುತ್ತಾನೆ. ಇತರ ಗ್ರಾಮೀಣ ಮಕ್ಕಳೊಂದಿಗೆ ಆಡುತ್ತಲೇ ಬೆಳೆಯುತ್ತಾನೆ. ಈ ಸಂದರ್ಭದಲ್ಲಿ ಆ ಹಳ್ಳಿಗೆ ಪ್ಲಾಸ್ಟಿಕ್ ಮಡಿಕೆ ಕುಡಿಕೆಗಳ ಪ್ರವೇಶವಾಗುತ್ತದೆ. ಕುಂಬಾರ ತನ್ನ ಮಡಿಕೆಗಳನ್ನು ಮಾರದ ಸ್ಥಿತಿ ತಲುಪುತ್ತಾನೆ. ಅವನನ್ನು ಸಾಲಗಾರರು ಮುತ್ತತೊಡಗುತ್ತಾರೆ. ಇದನ್ನೆಲ್ಲಾ ನೋಡುತ್ತಾ ಬೆಳೆಯುವ ಆತನ ಮಗ ಈ ಬಿಕ್ಕಟ್ಟುಗಳ ಪ್ರವಾಹದಲ್ಲಿ ಶಾಲೆಗೆ ಶುಲ್ಕ ಕಟ್ಟಲಾಗದೆ ಹಿಂದೆ ಉಳಿಯುತ್ತಾನೆ. ಸ್ವಂತ ತಂದೆಯೇ ಜೀವನ ನಿರ್ವಹಣೆಗಾಗಿ ಮಗನನ್ನು ಕೂಲಿಗೆ ಕಳಿಸುತ್ತಾನೆ. ಯಾವುದರಿಂದಲೂ ಸಂಸಾರದ ರಥ ಸಾಗದಂತಹ ಸ್ಥಿತಿ ಬರುತ್ತದೆ. ಪುಟ್ಟ ಬಾಲಕ ಅನ್ಯ ಮಾರ್ಗ ಕಾಣದೆ ಉತ್ತಮ ಬದುಕನ್ನು ಅರಸುತ್ತಾ ನಗರಕ್ಕೆ ಓಡಿ ಬರುತ್ತಾನೆ. ನಗರ ಎಂಬ ರಾಕ್ಷಸನ ಕಬಂಧ ಬಾಹುಗಳ ನಡುವೆ ಅನ್ನಕ್ಕಾಗಿ ಪರದಾಡುವ ಹುಡುಗನಿಗೆ ಯಾವುದೋ ಹೋಟೆಲ್ಲಿನ ಕೆಲಸ ಸಿಗುತ್ತದೆ. ನಂತರ ನಗರಗಳ ತುಂಬಾ ಇರುವ ಬಾರ್‌ಗಳು, ಕ್ಲಬ್‌ಗಳು ಅವನನ್ನು ಸೆಳೆಯುತ್ತವೆ. ಆ ಹುಡುಗ ಅಂತಹದೊಂದಕ್ಕೆ ಸೇರುತ್ತಾನಾದರೂ ಅವನನ್ನು ಸದಾ ತನ್ನ ತಾಯಿ ಮತ್ತು ತಂದೆಯ ಚಿತ್ರ ಕಾಡುತ್ತದೆ. ತಾನು ಸಂಪಾದಿಸಿದ ಪ್ರತಿ ಪೈಸೆಯನ್ನು ಜೋಪಾನ ಮಾಡುವ ಹುಡುಗ ಕಡೆಗೊಂದು ದಿನ ತನ್ನ ಊರಿಗೆ ತನ್ನದೇ ಮೊಪೆಡ್‌ನಲ್ಲಿ ಸಾಗಿ ತನ್ನ ತಾಯಿಯ ಮನಸ್ಸನ್ನು ಸಂತೋಷ ಪಡಿಸುತ್ತಾನೆ. ತಮ್ಮಂತಹವರು ಉತ್ತಮ ಜೀವನ ರೂಪಿಸಿಕೊಳ್ಳಲು ಪರ್ಯಾಯ ಉದ್ಯಮಗಳನ್ನು ಮತ್ತು ಮಾರ್ಗಗಳನ್ನು ಹುಡುಕಿಕೊಳ್ಳಬೇಕೆಂದು ಸೂಕ್ಷ್ಮವಾಗಿ ಸೂಚಿಸುತ್ತಾನೆ.
ಈ ಚಿತ್ರ ಹೇಳುವ ಅಂತ್ಯವೇ ಸರಿ ಎಂದಲ್ಲ. ಅಥವಾ ಇದೇ ನಮ್ಮ ಗುಡಿ ಕೈಗಾರಿಕೆಗಳವರ ಬದುಕಿಗೆ ಬದಲಿ ಮಾರ್ಗ ಎಂದಲ್ಲ, ಆದರೆ ಸ್ಪರ್ಧೆಗಳ ಎದುರಿಗೆ ಸೋಲದೆ ಸಾಗಬೇಕೆನ್ನುವ ಆಶಾವಾದಿತನವನ್ನ ಈ ಚಿತ್ರವು ಸೂಚಿಸುತ್ತದೆ. ಪರಂಪರೆಗೆ ನೇತುಕೊಂಡು ಬದುಕುವುದಕ್ಕಿಂತ ವಿಭಿನ್ನವಾದ ಮಾರ್ಗಗಳ ಹುಡುಕಾಟದಿಂದಲೇ ನಮಗೆ ನೆಮ್ಮದಿ ದೊರೆಯಲು ಸಾಧ್ಯ ಎನ್ನುವುದು ನೋಡುಗನಿಗೆ ಸ್ಪಷ್ಟವಾಗುತ್ತದೆ.
ಇಂತಹ ಚಿತ್ರಗಳು ನಿಮ್ಮೂರಿನ ಚಿತ್ರಮಂದಿರಗಳಲ್ಲಿ ಕಾಣಿಸುವುದು ಕಷ್ಟ. ಏಕೆಂದರೆ ಇಲ್ಲಿ ಭಾರೀ ತಾರಾಗಣವಿಲ್ಲ ಮತ್ತು ಜನರಂಜಿಸುವ ಹೆಸರಲ್ಲಿ ಪೋಣಿಸಿದ ಹಾಡು, ಕುಣಿತ, ಕುಸ್ತಿಗಳಿಲ್ಲ. ವಾಸ್ತವವನ್ನು ಹಾಗೇ ನಮ್ಮ ಕಣ್ಣೆದಿರಿಗೆ ಇರಿಸುವ ಇಂತಹ ಸಿನಿಮಾಗಳು ‘ಜನ ನೋಡುವ’ ಸಿನಿಮಾಗಳಲ್ಲ, ಬದಲಿಗೆ ‘ಜನ ನೋಡಬೇಕಾದ’ ಸಿನಿಮಾಗಳು. ಇದನ್ನು ನಿಮ್ಮ ಶಾಲೆಯ ಉಪಧ್ಯಾಯರಿಗೆ ಹೇಳಿ ನಿಮ್ಮೂರಿಗೆ ತರಿಸಿಕೊಳ್ಳಿ. ಒಳ್ಳೆಯ ಸಿನಿಮಾಗಳನ್ನು ನೋಡಿ. ಆ ಮೂಲಕ ಸದಭಿರುಚಿಯ ಚಿತ್ರಗಳ ಚಳುವಳಿಯನ್ನು ಬೆಳೆಸಿ.

Advertisements

0 Responses to “ದಿಕ್ಕೆಟ್ಟವರು ಮತ್ತು ನಮ್ಮ ದೇಶ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: