ನಗರೀಕರಣದ ಭರದಲ್ಲಿ…!

ಬೆಳಕಿನೊಳಗಣ ಬೆಗು – ೬

ಭಾರತ ಅಭಿವೃದ್ಧಿ ಶೀಲ ರಾಷ್ಟ್ರ. ಇಲ್ಲಿ ಅಭಿವೃದ್ಧಿಯ ಹೆಸರಲ್ಲಿ ಆಗಿರುವುದು ಮತ್ತು ಆಗುತ್ತಿರುವುದು ನಾಡಿನ ಜನಕ್ಕೆ ಅನುಕೂಲವನ್ನು ಒದಗಿಸುವುದಕ್ಕೆ ಬದಲಾಗಿ ಹತಾಶೆ, ನೋವು ಸಂಕಟಗಳನ್ನ ಒದಗಿಸುವ ಪಲ್ಲಟಗಳು. ಇದರಿಂದಾಗಿ ಅತಿ ಹೆಚ್ಚು ತೊಂದರೆಗೆ ಒಳಗಾಗಿರುವವರು ಹಳ್ಳಿಗರು. ಅದರಲ್ಲೂ ಸಣ್ಣ ಹಿಡುವಳಿದಾರರು ಪಡುತ್ತಿರುವ ಸಂಕಟ ಸಣ್ಣದಲ್ಲ. ಈ ಕಾರಣವಾಗಿಯೇ ನಮ್ಮ ನಾಡಿನಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮತ್ತು ಅದಕ್ಕಾಗಿ ಕೇಂದ್ರಸರ್ಕಾರ ಪ್ರತ್ಯೇಕ ಹಣ ಒದಗಿಸುವ ಏರ್ಪಾಟು ಮಾಡಿಕೊಂಡಿರುವುದು. ಇಂತಹ ವಿಷಯವೊಂದು ಇಡೀ ಸಮಾಜವನ್ನು ಕಾಡುತ್ತಿರುವುದು ನಿಜವಾದರೂ ಇದು ಚಲನಚಿತ್ರಗಳಲ್ಲಿ ವಸ್ತುವಾಗಿ ಚರ್ಚಿತವಾಗಿರುವುದು ಅಪರೂಪ. ನಮ್ಮ ಜನಪ್ರಿಯ ಚಲನಚಿತ್ರಗಳಲ್ಲಿ ಜಮೀನ್ದಾರೀ ಪದ್ಧತಿಯನ್ನು ಕುರಿತ ಕೆಲವು ಕಥೆಗಳು ಸಿಗುತ್ತದೆ. ಅವು ಯಾವುದೋ ನಾಯಕ ಪಾತ್ರವೊಂದು ಊರಿನ ಜಮೀನ್ದಾರನ ಆಟಾಟೋಪದ ವಿರುದ್ಧ ಹೋರಾಡುವ ಅಥವಾ ಜಮೀನುದಾರನೇ ನಾಯಕನ ಪಾತ್ರಧಾರಿಯಾಗಿದ್ದರೆ ಅಂತಹವನ ಒಳ್ಳೆಯತನವನ್ನು ಕುರಿತ ವಿವರವನ್ನು ಮಾತ್ರ ಒದಗಿಸುತ್ತದೆ. ಈ ನಾಡಿನ ರೈತರ ಸಂಕಟಗಳ ಸ್ಪಷ್ಟ ಚಿತ್ರವೊಂದು ಜನಪ್ರಿಯ ಚಿತ್ರಗಳಲ್ಲಿ ದೊರೆಯುವುದಿಲ್ಲ. ಇಂತಹ ಪ್ರಯತ್ನಗಳು ಆಗಿರುವುದು ಕೇವಲ ಸಮಾನಾಂತರ ಚಿತ್ರಗಳಲ್ಲಿ ಮಾತ್ರ. ಅಂತಹ ಮೊದಲ ಪ್ರಯತ್ನ ಗಿರೀಶ್‌ಕಾರ್ನಾಡ್ ನಿರ್ದೇಶನದ ‘ಕಾಡು’ವಿನಲ್ಲಿ ಆಗಿತ್ತು. ಅಲ್ಲಿಯೂ ಒಂದು ಮಗುವಿನ ಕಣ್ಣ ಮೂಲಕ ಜಮೀನ್ದಾರೀ ಪದ್ಧತಿ ಮತ್ತು ಜಾತಿ ಪದ್ಧತಿಯನ್ನು ಕುರಿತ ವಿವರಗಳೇ ಹೆಚ್ಚಾಗಿದ್ದವು. ರೈತರ ಸಮಸ್ಯೆಯನ್ನು ಕುರಿತು ಆ ಚಿತ್ರ ನೇರವಾಗಿ ಮಾತಾಡಿರಲಿಲ್ಲ. ಅಂತಹ ಎರಡನೆಯ ಮತ್ತು ಒಂದರ್ಥಕ್ಕೆ ಪೂರ್ಣಪ್ರಮಾಣದ ಪ್ರಯತ್ನವಾಗಿದ್ದು ಪಿ.ಲಂಕೇಶರು ನಿರ್ದೇಶಿಸಿದ ‘ಎಲ್ಲಿಂದಲೋ ಬಂದವರು’ ಚಿತ್ರದಲ್ಲಿ.

ಪಿ.ಲಂಕೇಶರು ಸ್ವತಃ ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದವರು ಮತ್ತು ರೈತರ ಸಮಸ್ಯೆಗಳನ್ನು ಖುದ್ದಾಗಿ ಕಂಡವರೂ ಆಗಿದ್ದರು. ಹೀಗಾಗಿಯೇ ನೆಲದ ಜೊತೆಗಿನವರ ಬದುಕನ್ನು ಕುರಿತು ಲಂಕೇಶರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳು ತಮ್ಮ ಹೂರಣದಿಂದಾಗಿಯೇ ಇಂದಿಗೂ ಜನಮಾನಸದಲ್ಲಿ ನಿಂತಿವೆ. ಈ ಹಾದಿಯಲ್ಲಿ ಲಂಕೇಶರ ಮತ್ತೊಂದು ಕೃತಿ ‘ಎಲ್ಲಿಂದಲೋ ಬಂದವರು’ ಎಂಬ ಚಿತ್ರ. ಈ ಚಿತ್ರಕ್ಕೆ ರಷ್ಯನ್ ಕಥೆಯೊಂದು ಪ್ರೇರಣೆಯಾಗಿತ್ತು ಎಂದು ತಿಳಿಸಿದ್ದಾರೆ. ಆದರೂ ಇದನ್ನೊಂದು ಸಂಪೂರ್ಣ ಸ್ವತಂತ್ರಕೃತಿ ಎನ್ನಬಹುದು.
ಹಳ್ಳಿಯಲ್ಲಿ ಜೀವನ ನಿರ್ವಹಣೆಯೇ ಕಷ್ಟವಾದ ರೈತರುಗಳು ಉದ್ಯೋಗ ಅರಸಿಕೊಂಡು ನಗರಗಳಿಗೆ ವಲಸೆ ಬರುವುದು ೧೯೩೦ರ ಸುಮಾರಿನಿಂದ ಇಂದಿನವರೆಗೂ ನಡೆದುಕೊಂಡೇ ಬರುತ್ತಿದೆ. ಇದಕ್ಕೆ ವೈದೃಶ್ಯವೆಂಬಂತೆ ನಗರಗಳಲ್ಲಿನ ಜನ ಫಾರ್ಮ್ ಹೌಸ್‌ಗಳನ್ನು ನಗರದಂಚಿನ ಹಳ್ಳಿಗಳಲ್ಲಿ ಕಟ್ಟುವುದು, ಅದಕ್ಕಾಗಿ ಕೆಲಸಗಾರರನ್ನು ತೆಗೆದುಕೊಳ್ಳುವುದು ಒಂದು ಫ್ಯಾಷನ್ ಎಂಬಂತೆ ಚಾಲ್ತಿಗೆ ಬಂದಿದೆ. ಹೀಗೇ ಫಾರ್ಮ್ ಹೌಸ್‌ಗಳನ್ನು ಕಟ್ಟಿಕೊಂಡವರು ತಮ್ಮನ್ನು ತಾವು ಅತ್ಯುತ್ತಮ ರೈತ ಎಂದೆಲ್ಲಾ ಕರೆಸಿಕೊಳ್ಳಲು ತಾವು ಆ ಪ್ರಯೋಗ ಮಾಡಿದೆವು- ಈ ಪ್ರಯೋಗ ಮಾಡಿದೆವು ಎಂದು ಹೇಳುವ ಅಭ್ಯಾಸವೂ ಸಹ ಇಂದಿಗೂ ಇದೆ. ಈ ಎರಡನೆಯ ವರ್ಗದ ಸ್ಯೂಡೊ ಗುಣಗಳು ಮತ್ತು ವಲಸೆ ಬಂದು ಇನ್ಯಾರದೋ ನೆಲದಲ್ಲಿ ದುಡಿಯುವ ಮಣ್ಣಿನ ಮಕ್ಕಳ ನಡುವಣ ತಾಕಲಾಟವೇ ‘ಎಲ್ಲಿಂದಲೋ ಬಂದವರು’.
ಇಲ್ಲಿ ತಾನು ಸಮಾಜವಾದಿ ಎಂದು ಪೋಸು ಕೊಡುವ ಫಾರ್ಮಿನ ಮಾಲೀಕನಾಗಿ ಸುರೇಶ್ ಹೆಬ್ಳೀಕರ್ ಅಭಿನಯಿಸಿದ್ದರೆ, ವಲಸೆ ಬಂದ ರೈತನಾಗಿ ಲೋಕೇಶ್ ಅಭಿನಯಿಸಿದ್ದಾರೆ. ಫಾರ್ಮಿನ ಮಾಲೀಕ ತಾನು ಅತ್ಯಂತ ಪ್ರಮಾಣಿಕ ಎಂದು ಹೇಳಿಕೊಳ್ಳುತ್ತಾ ತನ್ನ ಫಾರ್ಮಿನಲ್ಲಿ ಮಾಡಿರುವ ಪ್ರಯೋಗಗಳನ್ನು ಕುರಿತು ನಗರಿಗರ ಮುಂದೆ ಹೇಳಿಕೊಳ್ಳುತ್ತಾ ಇರುತ್ತಾನೆ. ಆದರೆ ಅವನು ಮಾಡಿರುವ ಯಾವ ಪ್ರಯೋಗಗಳೂ ಸಫಲವು ಯಶಸ್ವಿಯೂ ಆಗಿರುವುದಿಲ್ಲ. ಸರಿಸುಮಾರು ಇದೇ ಕಾಲಕ್ಕೆ  ಅವನ ಫಾರ್ಮಿಗೆ ಹಳ್ಳಿಗನೊಬ್ಬ ಕೆಲಸ ಕೇಳಿಕೊಂಡು ಆ ಫಾರ್ಮಿಗೆ ಬರುತ್ತಾನೆ. ಮೊದಲಿಗೆ ಆತನನನ್ನು ಕಂಡು ಹೆದರುವ ಮನೆಯಾಕೆ (ವಿಮಲನಾಯ್ಡು) ನಂತರ ತಮ್ಮ ಜಮೀನಿನ ಪರಿಸ್ಥಿತಿ ಅರಿತವಳಂತೆ ಆತನನನು ಕೆಲಸಕ್ಕೆ ತೆಗೆದುಕೊಳ್ಳುತ್ತಾಳೆ. ಮನೆಗೆ ಹಿಂದಿರುಗಿದ ಗಂಡನಿಗೆ ಬಂದಿರುವ ಹೊಸ ಕೂಲಿ ಆಳನ್ನು (ರೈತನ) ಕುರಿತು ತಿಳಿಸುತ್ತಾಳೆ. ಗಂಡ ಆತನಿಗೆ ಕೆಲಸ ಬಿಟ್ಟು ಹೋಗಬಾರದು ಎಂದೆಲ್ಲ ದರ್ಪ ತೋರುತ್ತಾನೆ. ನಂತರದ ಕಥೆಯಲ್ಲಿ ಕೂಲಿಯವನನ್ನು ಕುರಿತು ಭಯ ಹುಟ್ಟಿಸುವಂತಹ, ಅವನ ಹಿನ್ನೆಲೆ ತಿಳಿದುಕೊಳ್ಳಲೇಬೇಕು ಎಂಬ ಕುತೂಹಲ ಕೆರಳಿಸುವ ದೃಶ್ಯಗಳನ್ನು ಹೆಣೆಯುವ ಲಂಕೇಶರು ಆತನಿಂದಾಗಿ ಇಡೀ ಫಾರ್ಮಿನ ನೆಲ, ಕೊಟ್ಟಿಗೆಯಲ್ಲಿರುವ ಜಾನುವಾರುಗಳು ಲಾಭ ಕೊಡುವಂತಾಗುವುದನ್ನು ಸೂಚಿಸುತ್ತಾರೆ. ಆತ ತನ್ನದೇ ಕಾರಣಗಳಿಗಾಗಿ ತನ್ನ ಮೂಲ ನೆಲ ಬಿಟ್ಟು ಬಂದಿರುವುದನ್ನ ಚಿತ್ರದ ಅಂತ್ಯದಲ್ಲಿ ಸೂಚಿಸುತ್ತಾರೆ. ಒಟ್ಟಾರೆಯಾಗಿ ನಗರಿಗರ ಪ್ರಯೋಗದ ಹೆಸರಿನ ಬೂಟಾಟಿಕೆಯ ಮುಂದೆ, ಹಳ್ಳಿಗನ ಅನುಭವವನ್ನು ಹಣಾಹಣಿಗೆ ಇಡುತ್ತಾರೆ. ಹೀಗೆ ಒಂದು ಅಪರೂಪದ ಕಥೆ ಕನ್ನಡ ತೆರೆಯ ಮೇಲೆ ಬಿಚ್ಚಿಕೊಳ್ಳುತ್ತದೆ.
ಈ ಚಿತ್ರಕ್ಕಾಗಿ ಲಂಕೇಶರು ರಚಿಸಿದ ಹಾಡುಗಳು (ಸಂಗೀತ:ವಿಜಯಭಾಸ್ಕರ್) ಇಂದಿಗೂ ನೆನಪಲ್ಲಿ ಇರುವಂತಹದು. ಆ ಪದ್ಯದ ಲಯ ಮತ್ತು ಶಬ್ದ ರಚನೆಯ ಕ್ರಮ ಆ ವರೆಗೆ ಕನ್ನಡದಲ್ಲಿ ಬಂದಿದ್ದ ಚಿತ್ರಗಳಲ್ಲಿ ಇದ್ದುದಕ್ಕಿಂಥ ಭಿನ್ನವಾಗಿತ್ತು. ‘ಕೆಂಪಾದವೋ…’ ಮತ್ತು ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಹಾಡುಗಳು ಇಂದಿಗೂ ಜನಪ್ರಿಯ. ಇದೊಂದು ಕಪ್ಪು ಬಿಳುಪು ಚಿತ್ರವಾದರೂ ಆ ವರೆಗಿನ ಜನಪ್ರಿಯ ಚಿತ್ರಗಳಲ್ಲಿ ಇದ್ದ ಕಥನ ಕ್ರಮಕ್ಕಿಂತ ಭಿನ್ನವಾಗಿದ್ದುದಲ್ಲದೇ ಗ್ರಾಮೀಣ ಬದುಕಿನ ಆರ್ಥಿಕ ಸಂಕಷ್ಟಗಳನ್ನು ಈ ಚಿತ್ರ ತೆರೆದಿಟ್ಟ ಬಗೆ ಅನನ್ಯ. ಚಿತ್ರದಲ್ಲಿನ ಕಪ್ಪುಬಿಳುಪು ಛಾಯಾಗ್ರಹಣ (ಎಸ್.ರಾಮಚಂದ್ರ) ಸಹ ವಿಶಿಷ್ಟವಾಗಿತ್ತು.
ಲಂಕೇಶರು ಇಂತಹ ಪ್ರಯೋಗಗಳನ್ನು ಮುಂದಿನ ದಿನಗಳಲ್ಲಿಯೂ ದೃಶ್ಯಮಾಧ್ಯಮದಲ್ಲಿ ಮುಂದುವರೆಸಿಕೊಂಡು ಹೋಗಲಿಲ್ಲ. ಅದಕ್ಕೆ ಅವರದ್ದೇ ಆದ ಕಾರಣಗಳಿರಬಹುದು. ಅವರೇನಾದರೂ ಅಂತಹ ಇನ್ನಷ್ಟು ಚಿತ್ರ ತಯಾರಿಸಿದ್ದರೆ ರೈತಾಪಿ ಜನಗಳ ಬದುಕಿನ ಇನ್ನೂ ಅನೇಕ ಮಗ್ಗುಲುಗಳು ಕನ್ನಡ ತೆರೆಯ ಮೇಲೆ ಬರುವುದು ಸಾಧ್ಯವಿತ್ತು.
ನಿಮಗೆ ಸಮಯ ಸಿಕ್ಕರೆ ಮತ್ತು ಈ ಚಿತ್ರದ ಪ್ರತಿ ಸಿಕ್ಕರೆ ಮತ್ತೊಮ್ಮೆ ‘ಎಲ್ಲಿಂದಲೋ ಬಂದವರು’ ನೋಡಿ. ಚಿತ್ರದಲ್ಲಿರುವ ಲೋಹಿಯಾವಾದದ ವಿವರಗಳನ್ನು ಗಮನಿಸಿ. ಲಂಕೇಶರು ಬಿಚ್ಚಿಡುವ ಜೀವನ ಕ್ರಮ ಇಂದಿಗೂ ಎಷ್ಟು ಪ್ರಸ್ತುತವಾಗಿದೆ ಎಂಬುದನ್ನು ಗುರುತಿಸಿ.
ಒಟ್ಟಾರೆಯಾಗಿ ನಾನು ಹೇಳಬೇಕೆಂದುಕೊಂಡದ್ದು ಇಷ್ಟೆ. ನಮ್ಮ ಸಮಾಜದತ್ತ ಮುಖ ಮಾಡಿ ಹೆಣೆದ ಕಥೆಗಳನ್ನುಳ್ಳ ಚಿತ್ರಗಳು ಎಲ್ಲ ಕಾಲಕ್ಕೂ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುತ್ತವೆ. ಇಲ್ಲವಾದಲ್ಲಿ ಈ ನಡುವೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ ರಿಮೇಕ್ ಪಿಡುಗು ನೆರೆರಾಜ್ಯಗಳ ಸಂಸ್ಕೃತಿಯನ್ನೇ ನಮಗೆ ಉಣಬಡಿಸುತ್ತಾ, ನಾವೆಲ್ಲರೂ ಗಿರಿಜಾ ಮೀಸೆ ಬಿಟ್ಟವನೇ ರೈತ ಎಂದುಕೊಂಡುಬಿಡುವ ಅಪಾಯವಿದೆ. ನಾವು ಅಂತಹುದನ್ನು ಕುರಿತು ಎಚ್ಚರವಾಗಿರಬೇಕು.

Advertisements

0 Responses to “ನಗರೀಕರಣದ ಭರದಲ್ಲಿ…!”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: