ಬೆಳಕಿನೊಳಗಣ ಬೆಗು

ಒಳ್ಳೆಯದು ಎಂದರೆ….?

( ಉಷಾಕಿರಣ ವಿದ್ಯಾರ್ಥಿ ಪತ್ರಿಕೆಗಾಗಿ ಬರೆದ ಲೇಖನ )

ಹೌದು, ಅದು ಯಾವಾಗಲೂ ಪ್ರಶ್ನಾರ್ಥಕ ಚಿಹ್ನೆಯೇ? ಒಳ್ಳೆಯದನ್ನು ಗುರುತಿಸುವುದೂ ಕಷ್ಟ. ಆಕಸ್ಮಿಕವಾಗಿ ಒಳ್ಳೆಯದು ಎಂದು ಗೊತ್ತಾದುದನ್ನ ಒಳ್ಳೆಯದು ಎಂದು ಒಪ್ಪಿಕೊಳ್ಳುವುದು ಇನ್ನೂ ಕಷ್ಟ. ವಿಶೇಷವಾಗಿ – ಕ್ರಿಯಾಶೀಲ ಜಗತ್ತಿನ, ಅದರಲ್ಲೂ ದೃಶ್ಯ ಮಾಧ್ಯಮದ ವಿಷಯದಲ್ಲಂತೂ ಇದು ಹೆಚ್ಚು ಚರ್ಚಿತವಾಗುತ್ತಿರುವ ಮಾತು. ನನ್ನ ಈ ಮಾತಿಗೆ ಹಿನ್ನೆಲೆಯಾಗಿ ಒಂದು ಉದಾಹರಣೆಯನ್ನ ಹೇಳುತ್ತೇನೆ. ತೀರಾ ಇತ್ತೀಚೆಗೆ ಆಂಗ್ಲ ಭಾಷೆಯ ಕಾದಂಬರಿ ‘ಹ್ಯಾರಿಪಾಟರ್’ ಎಂಬುದು ಬಿಡುಗಡೆಯಾದ ದಿನವೇ ಭಾರತದಲ್ಲಿ ಆರು ಲಕ್ಷ ಪ್ರತಿಗಳು ಮಾರಾಟವಾಯಿತು ಎಂದು ಪತ್ರಿಕೆಗಳಲ್ಲಿ ಓದಿದ್ದೆವು. ಆದರೆ ನಮ್ಮವರೇ ಆದ, ಖ್ಯಾತನಾಮರೂ ಆದ ಎಸ್.ಎಲ್.ಭೈರಪ್ಪನಂತಹವರು ಬರೆದ  ‘ಪರ್ವ’ದಂತಹ ಅಪರೂಪದ ಕಾದಂಬರಿಯು, ಅದು ಪ್ರಕಟವಾಗಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಾಗಿದ್ದರೂ ಈ ವರೆಗೆ ಒಂದು ಲಕ್ಷ ಪ್ರತಿಗಳಷ್ಟು ಮಾರಾಟವಾಗಿರಲಿಕ್ಕಿಲ್ಲ. ದ್ಯಾವನೂರು ಮಹಾದೇವ ಅವರ ಶ್ರೇಷ್ಟ ಕೃತಿಗಳಾದ ‘ಕುಸುಮಬಾಲೆ’, ‘ಒಡಲಾಳ’ದಂತಹವು ಹತ್ತುಸಾವಿರದ ಸಂಖ್ಯೆಯನ್ನು ದಾಟಿರುವುದೂ ಅನುಮಾನ. ಇದು ಅಕ್ಷರ ಪ್ರಪಂಚದ ಸತ್ಯವಾದರೆ, ದೃಶ್ಯಮಾಧ್ಯಮದ ವಿವರ ಗಮನಿಸಿ. ಈ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಗಳಿಸಿದ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಚಿತ್ರ ‘ದ್ವೀಪ’ವನ್ನು ನೋಡಿರುವ ಕನ್ನಡಿಗರ ಸಂಖ್ಯೆ ಒಂದು ಲಕ್ಷವನ್ನು ದಾಟುವುದಿಲ್ಲ. ಆದರೆ ಅದೇ ಚಿತ್ರದ ನಿರ್ಮಾಪಕಿ/ನಟಿ ದಿ.ಸೌಂದರ್ಯ ಅವರ ಅಭಿನಯ ಮಾತ್ರ ಇರುವ ‘ಆಪ್ತಮಿತ್ರ’ ಎಂಬ ಕಾರ್ಬನ್ ಕಾಪಿ (ಮಲೆಯಾಳದ ‘ಮಣಿಚಿತ್ರತಾಳ್’ ಚಿತ್ರದ ರಿಮೇಕು) ಚಿತ್ರವನ್ನ ನೋಡಿರುವವರು ಈ ನಾಡಿನ ತುಂಬಾ ಸಿಗುತ್ತಾರೆ. ಆ ಚಿತ್ರದ ಹಾಡುಗಳು ಎಲ್ಲರ ಬಾಯಲ್ಲೂ ಧಾರಾಳವಾಗಿ ತುಂಬಿಕೊಂಡಿರುತ್ತವೆ. ಒಟ್ಟಾರೆಯಾಗಿ ಜನ ನೋಡಿದ್ದು ಒಳ್ಳೆಯದೋ ಅಥವಾ ಪ್ರಶಸ್ತಿ-ಮನ್ನಣೆಗಳನ್ನು ಪಡೆದದ್ದು ಒಳ್ಳೆಯದೋ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ವಿದ್ಯಾರ್ಥಿಗಳಿಗೆ

ಈ ಪತ್ರಿಕೆಯನ್ನ ಓದುತ್ತಿರುವವರು ವಿದ್ಯಾರ್ಥಿಗಳು ಎಂದು ಮತ್ತು ಆ ವಿದ್ಯಾರ್ಥಿಗಳು ಕೇವಲ ಕಾಲೇಜಿನಲ್ಲಿ ಕಲಿತದ್ದನ್ನೇ ಬದುಕಿ ಗುಮಾಸ್ತರಾಗುವವರಲ್ಲ ಎಂದು ಭಾವಿಸಿ ಇಲ್ಲಿಂದಾಚೆಗೆ ನಾನು ಹೇಳಬೇಕಾದ ಮಾತುಗಳನ್ನ ಹೇಳುತ್ತೇನೆ. ಹೀಗೆನ್ನುವುದಕ್ಕೆ ಕಾರಣವಿದೆ. ಈ ದೇಶದ ವಿದ್ಯಾಭ್ಯಾಸ ಪದ್ಧತಿಯ ಬಗ್ಗೆಯೇ ನನಗೆ ಅನುಮಾನವಿದೆ. ಬೆಳಗಿನ ಒಂಬತ್ತರಿಂದ ಸಂಜೆಯ ನಾಲ್ಕರವರೆಗೆ ಎಂದು ದಿನಕ್ಕೆ ಎಂಟು ಗಂಟೆಯ ಲೆಕ್ಕ ಹಿಡಿದು ಮಕ್ಕಳನ್ನ ಶಾಲೆಯ ನಾಲ್ಕು ಗೋಡೆಯ ಮಧ್ಯೆ ಕೂಡಿಸುವ ಶಿಕ್ಷಣ ಪದ್ಧತಿಯಿಂದ ಏನಾದರೂ ಒಳ್ಳೆಯದಾಗಬಹುದು ಎಂದು ನನಗನ್ನಿಸುವುದಿಲ್ಲ. ಹೀಗೆ ಕಲಿತ ವಿದ್ಯಾರ್ಥಿಗಳು ಮುಂದೆ ಸರ್ಕಾರಿ ಕಛೇರಿಯಲ್ಲೋ ಇಲ್ಲಾ ಯಾವುದೋ ಖಾಸಗಿ ವಲಯದ ಕಛೇರಿಯೋ ಅಥವಾ ಕಾರ್ಖಾನೆಯಲ್ಲಿ ದಿನಕ್ಕೆ ಎಂಟು ಗಂಟೆ ದುಡಿಯುವ ಎತ್ತುಗಳಾಗುತ್ತಾರೆ. ಅದರಿಂದ ಈ ದೇಶಕ್ಕೆ, ಈ ನಾಡಿಗೆ ಉಪಯೋಗವಾಗುವುದು ತೀರಾ ಕಷ್ಟ. ಮಕ್ಕಳು ಕಲಿಯಬೇಕಾದ್ದು ಬಯಲಿನಲ್ಲಿ, ಕಾಡಿನಲ್ಲಿ, ನಿಸರ್ಗದ ಜೊತೆಗೆ ಹೈಡ್ರೋ ಎಲೆಕ್ಟ್ರಿಕ್ ಪವರ್ ಬಗ್ಗೆ ಕಲಿತ ಮಗುವಿನ ಮನಸ್ಸಿನಲ್ಲಿ ಮೂಡುವ ಚಿತ್ರ ಎಂತಹದು ಎಂದು ಯೋಚಿಸಿ. ಆನಂತರ ಆ ಮಗು ಸಾಯುವವರೆಗೂ ಆ ವಿಷಯ ಕುರಿತು ಯಾವುದೇ ಪ್ರಶ್ನೆ ಕೇಳಿದರೂ ತಪ್ಪಾಗಲು ಸಾಧ್ಯವೇ ಇಲ್ಲ. ೧೮ನೇ ಶತಮಾನದಲ್ಲಿ ಮೆಕಾಲೆ ಎಂಬಾತ ಈಸ್ಟ್ ಇಂಡಿಯಾ ಕಂಪೆನಿಗೆ ಗುಮಾಸ್ತರನ್ನು ತಯಾರಿಸಲು ಸಿದ್ಧಪಡಿಸಿದ ಅದೇ ವಿದ್ಯಾಭ್ಯಾಸ ಪದ್ಧತಿಯನ್ನ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೂ ಬಳಸುವುದಿದೆ ನೋಡಿ, ಅದೇ ಈ ದೇಶದ ವಿದ್ಯಾಭ್ಯಾಸ ಪದ್ಧತಿಯ ದುರಂತ. ಆದರೆ ಅದನ್ನು ಸದ್ಯಕ್ಕೆ ತಪ್ಪಿಸಲು ನಮ್ಮ ರಾಜಕಾರಣಿಗಳು ಸಿದ್ಧರಿಲ್ಲ. ಅವರಿಗೆ ಯಾವ ಆಲೋಚನೆಯೂ ಇಲ್ಲದೆ ಓಟು ಹಾಕುವ ಜನ ಬೇಕು. ಅದಕ್ಕಾಗಿ ಅವರು ಇದೇ ಕ್ರಮವನ್ನು ಮುಂದುವರೆಸಿಕೊಂಡು ಹೋಗುತ್ತಾ ಇರುತ್ತಾರೆ. ಕೊಂಚವಾದರೂ ಆಲೋಚಿಸುವ ಹೊಸ ತಲೆಮಾರೊಂದು ಬಾರದೆ, ನಮ್ಮ ರಾಜಕೀಯ ವಲಯ ಕ್ರಿಯಾಶೀಲವಾದುದನ್ನ ಒಪ್ಪುವುದೇ ಇಲ್ಲ. ಆದ್ದರಿಂದ ಅಂತಹುದೇ ‘ಸತ್ತ’ ಕ್ರಮದಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಲು ನಾವುಗಳು ಈ ಮಾಧ್ಯಮದ ಮೂಲಕ ಮಾತಾಡಬೇಕಿದೆ.

 

ಮಾಲಿಕೆಯ ಕಾರಣಉದ್ದಿಶ್ಯ

ಈ ಪತ್ರಿಕೆಯಲ್ಲಿ ನನಗೆ ಒಳ್ಳೆಯದು ಎಂದೆನಿಸಿದ ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದ ಅಪರೂಪಗಳ ಬಗೆಗೆ ಬರೆಯುತ್ತೇನೆ. ಅದು ನಿಮಗೂ ಒಳ್ಳೆಯದು ಎನಿಸಿದರೆ ಅದರಿಂದ ಎರಡು ರೀತಿಯ ಲಾಭವಾಗಬಹುದು. ಒಂದು: ನೀವು ಒಳ್ಳೆಯದನ್ನು ನೋಡಲಾರಂಭಿಸುತ್ತೀರಿ. ಎರಡು: ಒಳ್ಳೆಯದನ್ನು ಮಾಡ ಹೊರಟ ಸಾಹಸಿಗಳಿಗೆ ಒಂದಷ್ಟು ಹೊಸ ಪ್ರೇಕ್ಷಕರು ಸಿಗುತ್ತಾರೆ. ಇದರಿಂದ ಈ ನಾಡಿನ ಸಂಸ್ಕೃತಿಗೆ ಒಳ್ಳೆಯದು ಎಂಬುದು ನಿರಂತರವಾಗಿ ಹರಿದು ಬರುತ್ತದೆ. ಆ ಉದ್ದೇಶದಿಂದ ನಾನು ಈ ಲೇಖನ ಮಾಲೆಯನ್ನು ಬರೆಯಲು ಒಪ್ಪಿಕೊಂಡಿದ್ದೇನೆ. ತಿಂಗಳಲ್ಲಿ ಎರಡು ಬಾರಿ ನಿಮ್ಮೆದುರು ನನ್ನ ಅಕ್ಷರ ಚಿಂತನೆಯನ್ನ ಇರಿಸುತ್ತೇನೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ದ್ವೀಪ

ಇದು ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ, ನಾ.ಡಿಸೋಜಾ ಅವರ ನೀಳ್ಗತೆಯೊಂದನ್ನ ಆಧರಿಸಿ ತಯಾರಾದ ಕನ್ನಡ ಸಿನಿಮಾ. (ನಾನು ವಿದೇಶಿ ಸಿನಿಮಾ ಒಂದನ್ನ ಚರ್ಚಿಸದೆ ಕನ್ನಡದ್ದೇ ಸಿನಿಮಾ ಒಂದನ್ನು ಚರ್ಚಿಸುವುದರ ಹಿಂದಿರುವ ಉದ್ದೇಶ ಸರಳ. ನಾನು ಮಾತಾಡುವ ವಿವರಗಳು ನಿಮಗೆ ದಕ್ಕುವಂತಿರಬೇಕು. ನಿಮ್ಮೂರಿನ ಚಿತ್ರಮಂದಿರದಲ್ಲಿ ನೀವು ಇಂತಹದೊಂದು ಚಿತ್ರವನ್ನ ಟಿಕೇಟ್ ಕೊಂಡು ನೋಡುವಂತಾಗಬೇಕು. ರಿಮೇಕ್ ಚಿತ್ರಗಳನ್ನ ಕನ್ನಡಿಗರು ನೋಡುವುದನ್ನು ನಿಲ್ಲಿಸಬೇಕು.) ಈ ಚಿತ್ರ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿದೆ. ಭಾರತ ಸರ್ಕಾರ ನೀಡುವ ಸ್ವರ್ಣಕಮಲ ಪ್ರಶಸ್ತಿಯು ಈ ಚಿತ್ರಕ್ಕೆ ದೊರಕಿದೆ.

ಚಿತ್ರದ ಕಥಾಸಾರಾಂಶವನ್ನ ಸ್ಥೂಲವಾಗಿ ಹೇಳುವುದಾದರೆ, ಇಲ್ಲಿ ಮಾನವ ನಿರ್ಮಿತ ಆಣೆಕಟ್ಟೆಯೊಂದರಿಂದಾಗಿ ತಮ್ಮದು ಎನ್ನುವ ಜಾಗವನ್ನ ಕಳೆದುಕೊಳ್ಳುವ ಮತ್ತು ಅದರಿಂದ ಸಾಮಾನ್ಯ ಜನರು ಅನುಭವಿಸುವ ಸಂಕಟಗಳು ಪ್ರಸ್ತಾಪವಾಗುತ್ತದೆ. ಇದನ್ನ ಡಿಸ್‌ಪ್ಲೇಸ್‌ಮೆಂಟ್ ಡಿಫಿಕಲ್ಟೀಸ್ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಆದರೆ ಅಂತಹ ಸಮಸ್ಯೆಯ ಹಿಂದಿರುವ ಸಂಕಷ್ಟಗಳು ಅನೇಕ. ಸುಮ್ಮನೆ ಯೋಚಿಸಿ. ನೀವು ಬೆಳೆದ ಊರು, ನೀವು ಬೆಳೆದ ಮನೆ, ನೀವು ಓಡಾಡಿದ ರಸ್ತೆ, ನೀವು ನಿತ್ಯ ನೋಡುತ್ತಿದ್ದ ಮರವೊಂದರ ಜೊತೆಗೆ ನಿಮಗಿರುವ ಸಂಬಂಧ ಎಂತಹುದು. ಅವುಗಳು ‘ನಾಳೆಯಿಂದ ಇಲ್ಲ’ ಎಂದಾದರೆ ನಿಮಗಾಗುವ ನೋವು ಎಂತಹುದು? ಮಗುವೊಂದು ತಾನಾಡುತ್ತಿದ್ದ ಬೊಂಬೆಯನ್ನ ಯಾರೋ ಒಯ್ದರೆ ಹೇಗಾಡುತ್ತದೋ ಅದೇ ರೀತಿಯ ಸಂಕಟ ನಮ್ಮನ್ನ ಆವರಿಸುತ್ತದೆ ಅಲ್ಲವೇ? ‘ದ್ವೀಪ’ ಚಿತ್ರದಲ್ಲಿ ಚರ್ಚಿತವಾಗಿರುವ ಸಮಸ್ಯೆ ಅಂತಹುದೇ. ಅಲ್ಲಿರುವ ಸಂಕಟ ಅನುಭವಿಸುವವರು ಕಳೆದುಕೊಳ್ಳುವುದು ತಮ್ಮದು ಎಂದು ಸರ್ಕಾರ ಗುರುತಿಸದೆ ಇರುವ ಜಾಗವನ್ನ.

ಆತ ಮುದುಕ. ಒಂದು ಕಾಡಿನ ದೇವರ ಪೂಜಾರಿ. ಆ ದೇವಸ್ಥಾನವನ್ನ ಸಾರ್ವಜನಿಕರ ಜಾಗದಲ್ಲಿ ಯಾರೋ ಭಕ್ತರು ಕಟ್ಟಿಸಿದ್ದಾರೆ. ಆ ದೇವಸ್ಥಾನವೇ ಮುದುಕನ ಕುಟುಂಬಕ್ಕೆ ಆಧಾರ. ಅವನ ಮಗನೊಬ್ಬನಿದ್ದಾನೆ. ಅವನು ಅಪ್ಪನ ಕೆಲಸದಲ್ಲಿ ಸಹಾಯ ಮಾಡುತ್ತಾನೆ. ಅವನಿಗೆ ಸ್ವತಂತ್ರವಾದ ಬೇರೊಂದು ಉದ್ಯೋಗ ಇಲ್ಲ. ಆ ದೇವಸ್ಥಾನ ಆಣೆಕಟ್ಟೆಯಿಂದಾಗಿ ಹಿನ್ನೀರಿನಲ್ಲಿ ಮುಳುಗಲಿದೆ ಎಂದು ಸರ್ಕಾರದ ವಕ್ತಾರರು ಹೇಳುತ್ತಾರೆ. ವೃದ್ಧ ಪೂಜಾರಿಗೆ ಆ ಮಾತನ್ನು ನಂಬಲಾಗುತ್ತಿಲ್ಲ. ‘ತಾನು ಇಷ್ಟೂ ದಿನ ಪೂಜೆ ಮಾಡಿದ ದೇವರು ಮುಳುಗುವುದು ಸಾಧ್ಯವೇ?’ ಎಂಬುದು ಅವನ ಪ್ರಶ್ನೆ. ಮಗನಿಗೆ ‘ಅದು ಮುಳುಗಿದರೆ ಬದಲಿ ವ್ಯವಸ್ಥೆಯೇನು?’ ಎಂಬ ವಾಸ್ತವದ ಪ್ರಶ್ನೆ. ಮಗನ ಮಡದಿಗೆ ‘ಈ ಅಪ್ಪ-ಮಗನ ಜೊತೆಗೆ ಸಂಸಾರ ನೀಗುವುದು ಹೇಗೆ?’ ಎಂಬ ಪ್ರಶ್ನೆ. ಹೀಗೆ ಅನೇಕ ಪ್ರಶ್ನೆಗಳನ್ನ ನಮ್ಮೆದುರು ತೆರೆದಿಡುವ ‘ದ್ವೀಪ’ ಕೇವಲ ಹಿನ್ನೀರಿನಲ್ಲಿ ತಮ್ಮ ಜಾಗವನ್ನ ಕಳೆದುಕೊಂಡವರ ಕಥೆಯಾಗದೆ ಮನುಷ್ಯನನ್ನ ಸಮಕಾಲೀನ ಜಗತ್ತಿನಲ್ಲಿ ಕಾಡುತ್ತಿರುವ ಸಮಸ್ಯೆಗಳನ್ನು ಕುರಿತು ಕಣ್ಣು ತೆರೆಸುತ್ತದೆ.

ಇಂದಿನ ಸಮಾಜದಲ್ಲಿ ಕೊಳ್ಳುವವನೇ ನಾಯಕ. ಕೊಳ್ಳಲಾಗದವನು ಅಸಹಾಯಕ. ನನ್ನ ಪಕ್ಕದಲ್ಲಿರುವಾತನ ಕೈಯಲ್ಲಿ ಆಧುನಿಕ ಮೊಬೈಲಿದ್ದು ನನ್ನ ಕೈಯಲ್ಲಿ ಕೇವಲ ದೂರಸಂಪರ್ಕಕ್ಕೆ ಮಾತ್ರ ಉಪಯೋಗವಾಗುವಂತಹ ಮೊಬೈಲ್ ಫೋನಿದ್ದರೆ ಏನಾಗುತ್ತದೆ? ಯೋಚಿಸಿ. ‘ನನ್ನ ಬಳಿ ಇಲ್ಲದ್ದನ್ನ ನಾನು ಕೊಳ್ಳುವುದು ಹೇಗೆ?’ ಎಂಬ ಆಲೋಚನೆಯೊಂದು ಮನಸ್ಸಿನ ಸುತ್ತ ಗಿರಕಿ ಹೊಡೆಯಲು ಆರಂಭಿಸುತ್ತದೆ. ಆಮೇಲೆ ಮನೆಯಲ್ಲಿರುವ ಹಿರಿಯರನ್ನು ಕೇಳುವುದೋ ಅಥವಾ ಎಲ್ಲಿಯಾದರೂ ಸಾಲ ತೆಗೆದುಕೊಳ್ಳುವುದೋ ಎಂಬ ಚಿಂತೆ ಶುರುವಾಗುತ್ತದೆ. ಇವೆಲ್ಲವುಗಳ ಮುಂದುವರಿಕೆ ಎಂಬಂತೆ ನಾವು ಕೊಳ್ಳುಬಾಕ ಸಂಸ್ಕೃತಿಯ ಭಾಗವಾಗಲು ಆರಂಭಿಸುತ್ತೇವೆ. ಕೈಲಾಗದವನು ಮೈಪರಚಿಕೊಳ್ಳುತ್ತಾ, ಕೊರಗುತ್ತಾ ಉಳಿಯುತ್ತಾನೆ. ಇದರಿಂದಾಗಿ ನಮ್ಮ ಸುತ್ತಾ ಅನೇಕ ಅತೃಪ್ತ ಮನಸ್ಸುಗಳು ಕಾಣಿಸುತ್ತವೆ. ಅವು ಜೀವನವನ್ನ ಸುಂದರವಾಗಿಸುವುದರತ್ತ ಆಲೋಚಿಸುವುದಿಲ್ಲ, ಬದಲಿಗೆ ಅದಾವುದೋ ಒಂದು ಪರಿಕರ ತನ್ನ ಕೈಯಲ್ಲಿ ಇಲ್ಲ ಎಂದು ತಹತಹಿಸುತ್ತವೆ. ಹಪಾಪಿತನದಿಂದ ಮರುಗುತ್ತವೆ.

‘ದ್ವೀಪ’ದಲ್ಲಿ ಇರುವುದು ಇದೇ ಸ್ಥಿತಿಯ ಮುಂದುವರಿಕೆ. ಈ ದೇಶಕ್ಕೆಲ್ಲಾ ಕೊಡಮಾಡುವಷ್ಟು ಸೌರಶಕ್ತಿ ಉಚಿತವಾಗಿ ದೊರೆಯುತ್ತದೆ. ವಾಯುಶಕ್ತಿಯನ್ನ ಕುರಿತು ಕೂಡ ನಮಗೆ ತಿಳುವಳಿಕೆ ಇದೆ. ಆದರೆ ನಾವು ಹೈಡಲ್ ಪವರ್ ಸೃಷ್ಟಿಗಾಗಿಯೇ ನಮ್ಮ ರಾಜಕೀಯ ಶಕ್ತಿಗಳು ಒದ್ದಾಡುತ್ತವೆ. ಅವರಿಗೆಗೆ ಬೃಹತ್ತಾದ ಆಣೆಕಟ್ಟೆಯನ್ನು ನಿರ್ಮಿಸಿ ಅದರ ಮೇಲೆ ಉದ್ಘಾಟಕರ ಹೆಸರನ್ನ ಕೊರೆಸುವ ಉತ್ಸಾಹ ಮಾತ್ರವಿದೆ ಎನ್ನುವುದು ಅದಾಗಲೇ ಗೊತ್ತಾಗಿದೆ. ಅಂತಹದೊಂದು ಕಾಂಕ್ರೀಟ್ ಸ್ಟ್ರಕ್ಚರ್‌ನಿಂದ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಪರಿಕಲ್ಪನೆಯಂತೂ ಅವರಿಗೆ ಇಲ್ಲ. ನರ್ಮದಾ ಬಚಾವ್ ಆಂದೋಲನದ ಹಿಂದಿರುವ ಹೋರಾಟಗಾರ ಏನು ಹೇಳುತ್ತಿದ್ದಾರೆ ಕೇಳಿ. ನರ್ಮದಾ ಸರೋವರ್‌ನ ನಿರ್ಮಾಣದಿಂದ ನೀರಾವರಿ ಪಡೆಯುವವರಿಗಿಂತ ನೆಲ ಕಳೆದುಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಇಷ್ಟಾಗಿ ಅಂತಹ ಸರೋವರದಿಂದ ಉತ್ಪಾದನೆಯಾಗುವ ಹತ್ತೋ ಹದಿನೈದೋ ಸಾವಿರ ಮೆಗಾವ್ಯಾಟಿನ ವಿದ್ಯುತ್ತನ್ನ ಈಗ ಈ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ತು ಮತ್ತು ಅದರಲ್ಲಿ ಸೋರಿ ಹೋಗುತ್ತಿರುವ ವಿದ್ಯುತ್ತಿಗೆ ಹೋಲಿಸಿ. ಹಾಗೆ ಪೋಲಾಗುತ್ತಿರುವ ವಿದ್ಯುತ್ತು ನರ್ಮದಾ ಸರೋವರ ಆಣೆಕಟ್ಟಿನ ನಿರ್ಮಾಣಾನಂತರ ತಯಾರಾಗುವ ವಿದ್ಯುತ್ತಿಗೆ ಸರಿಸಮಾನವಾಗಿದೆ. ಹೀಗಾದಾಗ ನಮ್ಮ ಗಮನ ಇರಬೇಕಾದ್ದು ಇಂತಹ ಬೃಹತ್ ಕಾಂಕ್ರೀಟ್ ಸ್ಟ್ರಕ್ಚರ್ ಕಟ್ಟುವ ಕಡೆಗೋ, ವಿದ್ಯುತ್ ಸೋರಿಕೆಯನ್ನ ತಡೆಯುವ ಕಡೆಗೋ ಅಥವಾ ಅದೇ ಜಾಗದಲ್ಲಿ ಎಷ್ಟೋ ಸಾವಿರ ವರ್ಷದಿಂದ ಬದುಕುತ್ತಿರುವ ಅಮಾಯಕರನ್ನ ಗುಳೆ ಎಬ್ಬಿಸುವ ಕಡೆಗೋ ನೀವೇ ಊಹಿಸಿ.

ಇವು ಒಂದು ‘ಒಳ್ಳೆಯ’ ಸಿನಿಮಾ ನಮ್ಮಲ್ಲಿ ಹುಟ್ಟಿಸಬೇಕಾದ ಪ್ರಶ್ನೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಬದುಕುತ್ತಾ ಇರುವವರಾಗಿ, ನಾವು ರಾಷ್ಟ್ರ ನಿರ್ಮಾಣ ಮಾಡುವತ್ತ ಯೋಚಿಸಲು ನಮ್ಮ ಸಮೂಹ ಮಾಧ್ಯಮಗಳು ಪ್ರೇರೇಪಿಸಬೇಕು. ಅದಾಗಲೇ ನಾನು ಹೆಸರಿಸಿದ ಜನಪ್ರಿಯ ಸಿನಿಮಾಗಳಲ್ಲಿ ಇಂತಹ ಸಮಾಜಮುಖಿ ಕಾಳಜಿಯ ಕುರುಹು ಸಹ ಇರುವುದಿಲ್ಲ. ಅಕಸ್ಮಾತ್ ಇದ್ದರೂ, ಅಲ್ಲಿ ಏಳುವ ಪ್ರಶ್ನೆಗಳನ್ನ ಯಾವುದೋ ನಾಯಕ ಹತ್ತು ಜನರನ್ನ ಸದೆಬಡಿದು ಪರಿಹರಿಸಿ ಬಿಡುತ್ತಾನೆ. ಅಸಾಧ್ಯವನ್ನ ಚಿಟಿಕೆ ಹೊಡೆಯುವಷ್ಟರಲ್ಲಿ ಸಾಧಿಸಿ, ಲೋಕ ಇನ್ನು ಮುಂದೆ ನೆಮ್ಮದಿಯಾಗಿರಬಹುದು ಎಂಬ ಭಾವನೆ ಮೂಡಿಸಿ, ಯಾವುದೋ ನಾಯಕಿಯ ಹಿಂದೆ ಮರ ಸುತ್ತುತ್ತಾ ಹಾಡತೊಡಗುತ್ತಾನೆ. ಇಂದು ನಾವು ಗಮನಿಸಬೇಕಾದ ‘ಒಳ್ಳೆಯದು’ ಖಂಡಿತಾ ಈ ಜನಪ್ರಿಯ ಚಿತ್ರಗಳಲ್ಲಿ ಇಲ್ಲ.

‘ಹಾಗಾದರೆ ಸಿನಿಮಾದ ಮೂಲ ಉದ್ದಿಶ್ಯ ಮನರಂಜನೆ ಅಲ್ಲವೇ?’ ಎಂಬ ಪ್ರಶ್ನೆಯನ್ನ ಎತ್ತುವವರಿದ್ದಾರೆ. ‘ಮನರಂಜನೆ ಎಂದರೆ ಏನು?’ ಎಂದು ಅರಿತರೆ ಆಗ ನಾವು ಜನಪ್ರಿಯ ಸಿನಿಮಾಗಳಲ್ಲಿ ಇರುವ ಮನರಂಜನೆ ಎಂತಹುದು ಎಂದು ಮಾತಾಡಬಹುದು.

ಜರ್ಮನಿಯ ಖ್ಯಾತ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್, ‘ಮನರಂಜನೆ ಎಂದರೆ ಕೇವಲ ಕಥೆ ಹೇಳುವುದಲ್ಲ, ಆ ಕಥೆಯನ್ನು ಕುರಿತು ಜನ ಆಲೋಚಿಸುವಂತೆ ಮಾಡುವುದು ಮತ್ತು ಆ ಅಲೋಚನೆಯಿಂದ ಸಮಾಜಮುಖಿ ಚಿಂತನೆಯೊಂದು ಪ್ರೇಕ್ಷಕರಲ್ಲಿ ಮೂಡುವಂತೆ ಮಾಡುವುದು’ ಎನ್ನುತ್ತಾನೆ. ‘ದ್ವೀಪ’ದಂತಹ ಚಿತ್ರಗಳು ಮಾಡುವುದು ಇಂತಹ ಕೆಲಸವನ್ನ.

ಹಾಗಾದರೆ ಒಳ್ಳೆಯದು ಅಂದರೆ

ಹೌದು, ‘ಒಳ್ಳೆಯದು’ ಎಂದರೆ ಕೇವಲ ಕರಪತ್ರವಲ್ಲ. ಅದು ದೃಶ್ಯಕಾವ್ಯವೂ ಆಗಬೇಕು. ನೋಡುಗನಲ್ಲಿ ತೆರೆಯ ಮೇಲೆ ಮೂಡುವ ಕಥೆಯನ್ನು ಕುರಿತು ಅನುಭೂತಿ ಹುಟ್ಟಿಸುವಂತಿರಬೇಕು. ಆ ಕೆಲಸವನ್ನ ‘ದ್ವೀಪ’ ತೀರಾ ಚೆನ್ನಾಗಿಯೇ ಮಾಡುತ್ತದೆ.

ಚಿತ್ರ ಆರಂಭವಾಗುವುದು ಮಳೆ ಸುರಿಯುತ್ತಿರುವ ಹಿನ್ನೀರಿನ ಕೆರೆಯಲ್ಲಿ ಪ್ರವೇಶಿಸುವ ನಾಡದೋಣಿಯಿಂದ. ಆ ದೋಣಿ ನಡೆಸುತ್ತಿರುವಾಕೆ ನಾಗಿ. ಅವಳು ಒಬ್ಬ ಗಿರಿಜನ ಹೆಣ್ಣುಮಗಳು. ಅದಾಗಲೇ ‘ದ್ವೀಪ’ವಾಗಿರುವ ತನ್ನ ಮನೆಯನ್ನ ತಲುಪಲು ಅವಳಿಗೆ ನಾಡದೋಣಿಯೇ ಬೇಕು. ಹಾಗೆ ನಾಡದೋಣಿಯೊಂದಿಗೆ ಅವಳು ತನ್ನ ಮನೆಯಿರುವತ್ತ ಬರುವಾಗಲೆ, ಸರ್ಕಾರಿ ಕೆಲಸಗಾರನೊಬ್ಬ ಅದಾಗಲೆ ಸಿದ್ಧವಾಗಿರುವ ಆಣೆಕಟ್ಟೆಯ ಕ್ರೆಸ್ಟ್ ಗೇಟನ್ನ ಮುಚ್ಚಲಿದ್ದಾರೆ ಮತ್ತು ಹಿನ್ನೀರಕೆರೆಯ ನೀರಿನ ಮಟ್ಟ ಏರಲಿದೆ ಎಂದು ಹೇಳುತ್ತಾನೆ. ನಾಗಿಗೆ ತಾವು ಆದಷ್ಟು ಬೇಗ ಮನೆ ಮತ್ತು ದೇವಸ್ಥಾನವನ್ನು ಖಾಲಿ ಮಾಡಬೇಕು ಎಂಬ ತಿಳುವಳಿಕೆ ಸಿಗುತ್ತದೆ. ಅದನ್ನೇ ಮನೆಗೆ ಹೋಗಿ ತನ್ನ ಗಂಡ ಮತ್ತು ಮಾವನಿಗೆ ಹೇಳುತ್ತಾಳೆ. ಗಂಡ ಪ್ರತಿಕ್ರಿಯಿಸದ ಸೋಮಾರಿ. ಮಾವ ಎಲ್ಲವನ್ನೂ ನಂಬಿಕೆ ಬಿಟ್ಟ ಪೂಜಾರಿ. ಇದನ್ನು ಸ್ಪಷ್ಟ ಪಡಿಸುವ ಮೂಲಕ ಗಿರೀಶ್ ಕಾಸರವಳ್ಳಿಯವರು ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಇರುವ ಹೆಣ್ಣಿನ ಸ್ಥಾನ ಮತ್ತು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಅವಳ ನಿರ್ಧಾರಗಳಿಗೆ ಹೇಗೆ ಬೆಲೆಯೇ ದೊರೆಯದು ಎಂದು ಸೂಚಿಸುತ್ತಾರೆ. ನಿಸರ್ಗದ ನಡುವೆ ಅಪರೂಪದ ಕಲಾಕೃತಿ ಎಂಬಂತೆ ಕಾಣುವ ನಾಗಿಯ ಮನೆಯ ಒಳಗೆ ಮಾತ್ರ ನರಳುವ ಹೃದಯಗಳಿವೆ ಎಂಬುದು ದಾಖಲಾಗುತ್ತದೆ. ಇಲ್ಲಿಂದಾಚೆಗೆ ಅತ್ಯಂತ ಕಡಿಮೆ ಮಾತುಗಳಲ್ಲಿ ಕಥೆಯನ್ನು ದೃಶ್ಯವಾಗಿ ಕಟ್ಟಿಕೊಡುವ ಗಿರೀಶರು ನಮ್ಮೆದುರಿಗೆ ನಾವು ಅರಿಯದ ಗಿರಿಜನರ ಬದುಕಿನ ಒಂದು ಲೋಕವನ್ನ ತೆರೆದಿಡುತ್ತಾರೆ. ಇದಕ್ಕಾಗಿ ಹಾಲ್ಕೆರೆ ರಾಮಚಂದ್ರ ಅವರ ಕನ್ನಡ ಚಿತ್ರಗಳಲ್ಲಿಯೇ ಅಪರೂಪದ್ದು ಎನಿಸುವಂತಹ ಛಾಯಾಗ್ರಹಣವೂ ಕೆಲಸ ಮಾಡುತ್ತದೆ. ಚಿತ್ರದುದ್ದಕ್ಕೂ ಮಳೆಯೇ ಒಂದು ಪಾತ್ರವಾಗಿ ಕಣ್ಣೆದುರು ತೆರೆದುಕೊಳ್ಳುತ್ತದೆ. ಮಲೆನಾಡಿನ ಸೆರಗಲ್ಲಿರುವ ರಮ್ಯತೆಯ ಜೊತೆಗೆ ಮನುಷ್ಯನ ಬದುಕಿನ ತಲ್ಲಣಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಇಲ್ಲಿಂದಾಚೆಗೆ ಈ ಚಿತ್ರದ ಎಲ್ಲಾ ವಿವರಗಳನ್ನು ತಿಳಿಸಿದರೆ ನಿಮ್ಮ ರಸಾಸ್ವಾದನೆಗೆ ತೊಂದರೆಯಾಗುತ್ತದೆ. ನೀವೇ ಈ ಚಿತ್ರವನ್ನ ನೋಡಿ.

ನಾವು ಬಯಸಿದ ಚಿತ್ರವನ್ನ ನೋಡುವುದು ಹೇಗೆ?

ತುಂಬಾ ಸರಳ. ನಿಮ್ಮ ಹಾಗೇ ಆಲೋಚಿಸುವ ಉತ್ಸಾಹಿಗಳು ನಿಮ್ಮ ಆಸುಪಾಸಲ್ಲಿಯೇ ಇರುತ್ತಾರೆ. ಅವರನ್ನ ಒಗ್ಗೂಡಿಸಿ ಒಂದು ಸಿನಿಮಾಕ್ಲಬ್ ಆರಂಭಿಸಿ. ಆ ಕ್ಲಬ್ ಮೂಲಕ ಯಾವುದಾದರೂ ಚಿತ್ರಮಂದಿರವನ್ನ ಕಾಯ್ದಿರಿಸಿ. ಚಿತ್ರ ನಿರ್ಮಾಪಕರಿಗೆ ನೀವು ಕೊಡಬಹುದಾದ ಆದಾಯವನ್ನು ಸೂಚಿಸಿ ಪತ್ರ ಬರೆಯಿರಿ. ಪ್ರೇಕ್ಷಕರು ತನ್ನ ಚಿತ್ರ ನೋಡಲಿ ಎಂದು ಕಾಯುತ್ತಿರುವ ಸದಭಿರುಚಿಯ ಚಿತ್ರ ನಿರ್ದೇಶಕರು ಆದಾಯ ಕೊಂಚ ಕಡಿಮೆಯಾದರೂ ಚಿತ್ರ ಕಳಿಸಿಕೊಡುತ್ತಾರೆ.

ನೆನಪಿರಲಿ. ಇಂದಿನ ಕೊಳ್ಳುಬಾಕ ಸಂಸ್ಕೃತಿಯ ಉಚ್ಛ್ರಾಯದ ದಿನದಲ್ಲಿ ಒಳ್ಳೆಯ ಚಿತ್ರ ಮಾಡುವುದೆಷ್ಟು ಕಷ್ಟವೋ? ಅದನ್ನು ನೋಡುವುದು ಸಹ ಅಷ್ಟೇ ಕಷ್ಟ. ಅವೆಲ್ಲಾ ಕಷ್ಟವನ್ನು ತಾಳ್ಮೆಯಿಂದ ಎದುರಿಸುತ್ತೇವೆ ಮತ್ತು ಇನ್ನುಮುಂದೆ ರಿಮೇಕ್ ಅಥವಾ ರಿಮಿಕ್ಸ್ ಚಿತ್ರವನ್ನು ಇನ್ನುಮುಂದೆ ನೋಡುವುದೇ ಇಲ್ಲ ಎಂಬ ನಿರ್ಧಾರದ ಜೊತೆಗೆ ಮುಂದುವರೆಯಿರಿ. ಅನುಮಾನಗಳಿದ್ದರೆ ನನಗೊಂದು ಈ-ಪತ್ರ ಬರೆಯಿರಿ. ‘ದ್ವೀಪ’ ಚಿತ್ರಕ್ಕಾಗಿ ನೀವು ಈ-ಪತ್ರ ಬರೆಯಬೇಕಾದ ವಿಳಾಸ : kasaravalli@excite.com

ಮತ್ತೆ ಅಕ್ಷರದ ಮೂಲಕ ಭೇಟಿಯಾಗೋಣ. ಒಳ್ಳೆಯದು ಉಳಿಯಲಿ ಎಂದು ಹಾರೈಸೋಣ!

Advertisements

0 Responses to “ಬೆಳಕಿನೊಳಗಣ ಬೆಗು”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: