“ಬೇರು’ಬಿಟ್ಟ ಭ್ರಷ್ಟರು….

ಬೆಳಕಿನೊಳಗಣ ಬೆಳಗು – ೧೪

ಈ ಬೃಹತ್ ದೇಶದ ಬೃಹತ್ ಸಮಸ್ಯೆ ಎಂದರೆ ಭ್ರಷ್ಟತೆ. ಇದಕ್ಕಾಗಿ ನಮ್ಮ ಮಾಧ್ಯಮಗಳು ಮಾಡುತ್ತಿರುವ ಕೆಲಸಗಳು ಅನೇಕ. ಮಾಧ್ಯಮಗಳ ಪ್ರಯತ್ನದಿಂದಲೇ ಕರ್ನಾಟಕದಲ್ಲಿ ಲೋಕಾಯುಕ್ತ ಎಂಬುದೊಂದು ವಿಭಾಗವೇ ಆಯಿತು. ಈಗ ಅಲ್ಲಿಗೆ ಹೊಸ ಆಯುಕ್ತರು ಸಹ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸಿನಿಮಾ ಮಾಧ್ಯಮವು ಭ್ರಷ್ಟತೆಯನ್ನು ಕುರಿತು ಹೇಳುವ ಪ್ರಯತ್ನಗಳೇನ್ನೇನು ಮಾಡಿದೆ ಮತ್ತು ಅದು ಎಷ್ಟು ಸಾಧುವಾದದ್ದು ಎಂದು ನೋಡೋಣ.

ನಮ್ಮ ವಾಣಿಜ್ಯ ಪ್ರಧಾನ ಸಿನಿಮಾಗಳಲ್ಲಿ, ಸರಿ ಸುಮಾರು ೮೦ರ ದಶಕದ ಮಧ್ಯಭಾಗದಲ್ಲಿಯೇ ರಾಜಕಾರಣಿಗಳನ್ನು ಖಳರನ್ನಾಗಿ ಮಾಡುವ ಪ್ರಯತ್ನ ಆಯಿತು. ಅದಕ್ಕೆ ಮುಂಚೆ ಕಾಡಿನಲ್ಲಿಯೋ, ಬೆಟ್ಟದಲ್ಲಿಯೋ ತನ್ನ ಬೃಹತ್ ತಂಡದ ಜೊತೆಗೆ ಇರುತ್ತಿದ್ದ ಖಳನಿಗೆ ಈ ದಶಕದಲ್ಲಿ ಹೊಸ ಪೋಷಾಕು ತೊಡಿಸಲಾಯಿತು. ಹಿಂದೆ ಬೆಟ್ಟಕ್ಕೋ ಕಾಡಿಗೋ ಹೋಗಿ ಖಳನನ್ನು ಹುಡುಕಿ, ಹೊಡೆಯುತ್ತಿದ್ದ ನಾಯಕನು, ಈಗ ವಿಧಾನಸೌಧದ ಸುತ್ತ ತನ್ನ ಖಳರನ್ನು ಹುಡುಕಿ, ಹೊಡೆಯತೊಡಗಿದ. ಆ ಅರ್ಥದಲ್ಲಿ “ಭ್ರಷ್ಟತೆಯನ್ನು ಕುರಿತು ಹೇಳುವ ಪ್ರಯತ್ನ ಆಯಿತು’ ಎನ್ನಬಹುದು. ಆದರೆ ಯಾವುದೋ ನಾಯಕನೊಬ್ಬ ಎಲ್ಲಾ ಭ್ರಷ್ಟರನ್ನು ಹೊಡೆದು ಕೊಲ್ಲುತ್ತಾನೆ ಎಂದು ಹೇಳುತ್ತಾ ಪ್ರೇಕ್ಷಕರನ್ನು  ಭ್ರಮಾತ್ಮಕ ಲೋಕದಲ್ಲಿ ಉಳಿಸುವುದು ಸರಿಯೇ? ಇದು ಭ್ರಷ್ಟತೆಯ ನಿರ್ಮೂಲನಕ್ಕೆ ಕಾರಣವಾಗುವ ಬದಲು ಪ್ರೇಕ್ಷಕನನ್ನು ನಿಷ್ಕ್ರಿಯ ಸ್ಥಿತಿಯಲ್ಲಿಯೇ ಉಳಿಸುತ್ತದೆ ಅಲ್ಲವೇ! ಇದು ಅಪಾಯಕಾರಿ.
ಎಲ್ಲಿ ಪ್ರೇಕ್ಷಕ ಚಿಂತಿಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ನೆರವು ದೊರೆಯುವುದಿಲ್ಲವೋ ಮತ್ತು ಪ್ರೇಕ್ಷಕನಲ್ಲಿ “ಅದೆಲ್ಲೋ ತನ್ನ ನಾಯಕ ಇದ್ದಾನೆ, ಆತ ಎಲ್ಲರನ್ನೂ ಬಡಿದು ಕೊಲ್ಲುತ್ತಾನೆ’ ಎಂಬ ಭ್ರಮೆಯ ಸೃಷ್ಟಿಯಾಗುತ್ತದೋ ಅದು ಪ್ರತಿಗಾಮಿಚಿತ್ರ/ ಪ್ರಗತಿವಿರೋಧಿ ಚಿತ್ರ. ಇಂತಹ ಚಿತ್ರಗಳು ಅದಾಗಲೇ ನಾನು ಹಲವು ಲೇಖನಗಳಲ್ಲಿ ಚರ್ಚಿಸಿದ ಜಮೀನುದಾರಿ ಪದ್ಧತಿಯ ಪ್ರತೀಕವಾದ ನಾಯಕ/ತಾರೆಯ ಸೃಷ್ಟಿಗಾಗಿ ತಯಾರಾದ ಚಿತ್ರಗಳು. ಇಂತಹವು ಉದ್ಯಮದ ಹೊಟ್ಟೆ ತುಂಬಿಸುತ್ತವೆ. ಪ್ರೇಕ್ಷಕರ ಮನಸ್ಸನ್ನು ಎಬ್ಬಿಸುವುದಿಲ್ಲ. ಆದ್ದರಿಂದಲೇ ಇಂತಹವುಗಳಿಂದ ಈ ನಾಡಿಗೆ ಉಪಯೋಗವಾಗಿಲ್ಲ. ಇಂತಹ ಚಿತ್ರಗಳ ಆರಂಭವಾಗಿದ್ದು ರಾಜೇಂದ್ರಸಿಂಗ್ (ಬಾಬು) ಅವರ ನಿರ್ದೇಶನದ “ಅಂತ’ ಚಿತ್ರದಿಂದ. ಆ ಚಿತ್ರಕ್ಕೆ ಅದೆಂಥಾ ಜನಪ್ರಿಯತೆ ಸಿಕ್ಕಿತೆಂದರೆ ಅದು ಭಾರತದಾದ್ಯಂತ ರಾಜಕೀಯ ನಾಯಕರನ್ನು ಖಳರಾಗಿ ಕಾಣಿಸುವ ಚಿತ್ರಗಳ ಸೃಷ್ಟಿಗೆ ಕಾರಣವಾಯಿತು. ಇದನ್ನು ಚಾರಿತ್ರಿಕ ಕಾರಣಗಳಿಗಾಗಿ ಹೇಳಬೇಕಷ್ಟೆ. ಇವುಗಳಿಂದ ಈ ನಾಡಿಗಾಗಲಿ ದೇಶಕ್ಕಾಗಲಿ ಯಾವುದೇ ಪ್ರಯೋಜನವಾಗಿಲ್ಲ.
ಆದರೆ ಭಾರತದ ಹೊಸಅಲೆಯ ಚಿತ್ರಗಳ ತಯಾರಕರು ಸದಾ ಕಾಲ ಎಚ್ಚರವಾಗಿದ್ದವರು. ಅವರು ಸಿನಿಮಾವನ್ನು ಕೇವಲ ಪ್ರಭಾವೀ ಕಲೆ ಎಂದು ಭಾವಿಸದೆ ಅದು ಪ್ರಬಲ ಮಾಧ್ಯಮ ಎಮದು ನಂಬಿದ್ದವರು. ಹೀಗಾಗಿಯೇ ಮೊದಲಿಗೆ ಸತ್ಯಜಿತ್ ರಾಯ್ ಅವರು “ಮಹಾನಗರ್’ ಎಂಬ ಚಿತ್ರದಲ್ಲಿ ಆಧುನಿಕ ನಗರ ಜೀವನದಲ್ಲಿ ನುಸುಳುತ್ತಿರುವ ಭ್ರಷ್ಟತೆಯ ಬಗ್ಗೆ ಮಾತಾಡಿದರು. ಆ ಭ್ರಷ್ಟತೆ ಕೇವಲ ರಾಜಕೀಯ ನಾಯಕರದ್ದಲ್ಲ, ಮಧ್ಯಮವರ್ಗದ ಮನೆಯ ಒಳಗೂ ಅದು ಸೇರಿಹೋಗಿದೆ ಎಂಬುದನ್ನು ಒಂದು ಮಧ್ಯಮವರ್ಗದ ಕುಟುಂಬದ ಮೂಲಕವೇ ನೋಡುವ ಪ್ರಯತ್ನ ಆ ಚಿತ್ರದಲ್ಲಿತ್ತು. ನಂತರದ ದಿನಗಳಲ್ಲಿ ಕೆ.ಬಾಲಚಂದರ್ ನಿರ್ದೇಶಿಸಿದ ತಮಿಳು ಚಿತ್ರ “ತಣ್ಣೀರ್ ತಣ್ಣೀರ್’ ಮುಂತಾದ ಅನೇಕ ಚಿತ್ರಗಳಲ್ಲಿ ಭ್ರಷ್ಟತೆಯನ್ನು ಕುರಿತ ವಸ್ತುನಿಷ್ಟ ಚರ್ಚೆಯಾಗಿದೆ. ಮಲೆಯಾಳ ಚಿತ್ರರಂಗದಲ್ಲಂತೂ ಇಂತಹ ಅನೇಕ ಚಿತ್ರಗಳ ಪಟ್ಟಿಯನ್ನು ಕೊಡಬಹುದು. ಇದೇ ಸಾಲಿನಲ್ಲಿ ಹಿಂದಿಯಲ್ಲಿ ಬಂದಂತಹ “ಚಕ್ರ’, “ಆಲ್ಬರ್ಟ್‌ಪಿಂಟೋ ಕೋ ಗುಸ್ಸಾ ಕ್ಯೂಂ ಆತೀ ಹೈ’ನಂತಹ ಅನೇಕ ಚಿತ್ರಗಳು ಆದವು. ಕನ್ನಡದ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ಕಡಿಮೆ. ಈ ನಿಟ್ಟಿನಲ್ಲಿ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ “ಬೇರು’ ಒಂದು ಅಪರೂಪದ ಪ್ರಯತ್ನ.
ಈ ಚಿತ್ರದಲ್ಲಿ ದತ್ತಣ್ಣ, ಸುಚೇಂದ್ರಪ್ರಸಾದ್, ನಿಖಿತಾ, ವೆಂಕಟರಾವ್ ಮುಂತಾದ ಕಲಾವಿದರು ಅಭಿನಯಿಸಿದ್ದರು. ಎಸ್.ರಾಮಚಂದ್ರ ಅವರ ಛಾಯಾಗ್ರಹಣ, ಜೆ.ಎಂ.ಪ್ರಹ್ಲಾದ್ ಅವರ ಚಿತ್ರಕಥೆ-ಸಂಭಾಷಣೆ ಇತ್ತು. ಚಿತ್ರದ ಕಥೆಯು ಮೂರು ನೆಲೆಯಲ್ಲಿ ಆಗುವಂತಹದು. ಮೊದಲ ನೆಲೆಯಲ್ಲಿ ಕರಡಿಮಜಲು ಮಾಡುವ ವೃದ್ಧ ಕಲಾವಿದನಿಗೆ ತನ್ನ ಮನೆಯ ಪಕ್ಕದಲ್ಲಿರುವ ಮರದ ಬೀಳಲು ಮನೆಯೊಳಗೆ ಇಳಿದು ಮನೆಯ ಗೋಡೆಗಳು ಒಡೆಯುತ್ತಿವೆ ಎಂಬ ಚಿಂತೆ. ಅದಕ್ಕಾಗಿ ಆತ ಸರ್ಕಾರಕ್ಕೆ ಅಹವಾಳು ಸಲ್ಲಿಸಿ, ಮರ ಕಡಿಯಲ್ಲು ಒಪ್ಪಿಗೆ ಪತ್ರ ಪಡೆದುಕೊಳ್ಳು ಅಲೆಯುತ್ತಿದ್ದಾನೆ. ವೃದ್ಧನ ಕಾಯುವ ತಾಳ್ಮಗೆ ಪರೀಕ್ಷೆ ಎಂಬಂತೆ ಗೋಡೆಯ ಬಿರುಕು ಹೆಚ್ಚಾಗುತ್ತಾ ಸಾಗಿ ಆತನ ಮಡದಿ ಮನೆ ಕುಸಿದು ಸಾಯುತ್ತಾಳೆ. ಆ ವೃದ್ಧ ಹತಾಶನಾಗುತ್ತಾನೆ. ಇಲ್ಲಿ ಮನೆಯೊಳೆಗೆ ಇಳಿಯುವ ಬೇರು ಒಂದು ಪ್ರತಿಮೆಯಾಗಿಯೂ ಬಳಕೆಯಾಗುತ್ತದೆ. ಎರಡನೆಯ ಮಜಲಿನಲ್ಲಿ ಸರ್ಕಾರಿ ಇಲಾಖೆಯೊಂದರಲ್ಲಿ ದುಡಿಯುವ ಗುಮಾಸ್ತನ ಕುಟುಂಬವಿದೆ. ಈತ ತನ್ನ ಅಗತ್ಯಗಳು ಸಂಬಳದಿಂದಷ್ಟೇ ಪರಿಹಾರವಾಗುವುದಿಲ್ಲ ಎಂದು ತಿಳಿದಾಗ ಭ್ರಷ್ಟನಾಗತೊಡಗುತ್ತಾನೆ. ತನ್ನ ಭ್ರಷ್ಟತೆಯು ಲೋಕದ ಕಣ್ಣಿಗೆ ನ್ಯಾಯಯುತ ಎಂದು ಕಾಣುವಂತೆ ದಾಖಲೆಗಳನ್ನು ಸೃಷ್ಟಿಸುತ್ತಾನೆ. ಕೊನೆಗೊಮ್ಮೆ ಸಿಕಿಬಿದ್ದು ಪಶ್ಚಾತ್ತಾಪದಿಂದ ನರಳುತ್ತಾನೆ. ಕಥೆಯ ಮೂರನೆಯ ಮಜಲಿನಲ್ಲಿ ಸರ್ಕಾರಿ ಅಧಿಕಾರಿಯೊಬ್ಬನಿದ್ದಾನೆ. ಆತ ಆದರ್ಶವಾದಿ. ಭ್ರಷ್ಟತೆಯೆಂದರೆ ಆಗದವನು. ಆದರೆ ಇಲಾಖೆಯ ಒಳಗಡೆಯೇ ಇರುವ ವ್ಯವಸ್ಥೆಗಳು ಆತನನನ್ನು ಹೇಗೆ ಭ್ರಷ್ಟತೆಯ ಹಾದಿ ಹಿಡಿಸುತ್ತವೆ ಮತ್ತು ಆತನು ಸಹ ಹೇಗೆ ಒಂದು ವ್ಯವಸ್ಥೆಯೊಳಗೆ ಅಸಹಾಯಕನಾಗಿ ಬಿಡುತ್ತಾನೆ ಎಂಬ ವಿವರವಿದೆ. ಹೀಗೆ ಭ್ರಷ್ಟತೆ ಎಂಬ ಒಂದು ಸಾಮಾಜಿಕ ಖಾಯಿಲೆ ಸಮಾಜದ ಎಲ್ಲ ಸ್ಥರಗಳಲ್ಲಿ ಹೇಗೆ ಇಳಿಯುತ್ತದೆ ಮತ್ತು ಕೊರಗಿಸುತ್ತದೆ ಎಂಬುದನ್ನು ಪಿ.ಶೇಷಾದ್ರಿ ಅವರ “ಬೇರು’ ಬಿಚ್ಚಿಡುತ್ತದೆ.
ಕನ್ನಡದ ಸಂದರ್ಭದಲ್ಲಿ ಭ್ರಷ್ಟತೆಯ ಎಲ್ಲಾ ಸೂಕ್ಷ್ಮಗಳನ್ನೂ ಇಷ್ಟು ವಿವರವಾಗಿ ಮತ್ತು ಹತ್ತಿರದಿಂದ ನೋಡುವ ವಿವರಗಳನ್ನುಳ್ಳ ಸಿನಿಮಾಗಳು ಅತ್ಯಂತ ಕಡಿಮೆ. ಅಂತಹ ಮತ್ತೊಂದು ಪ್ರಯತ್ನವಾಗಿದ್ದು ಗಿರೀಶ್ ಕಾಸರವಳ್ಳಿ ಅವರ ‘ತಬರನ ಕಥೆ’ಯಲ್ಲಿ. ಆ ಚಿತ್ರ ಕುರಿತು ಮುಂದೊಮ್ಮೆ ಚರ್ಚಿಸೋಣ.
ಸಧ್ಯಕ್ಕೆ ನೀವು “ಬೇರು’ವಿನಂತಹ ಬದುಕನ್ನು ಸೂಕ್ಷ್ಮಗಳ ಮೂಲಕ ಗ್ರಹಿಸುವ, ನೋಡುಗನನ್ನು ಚಿಂತನೆಗೆ ಹಚ್ಚುವ ಚಿತ್ರವನ್ನು ನೋಡಬೇಕು ಎಂಬುದಷ್ಟೇ ನನ್ನ ಉದ್ದೇಶ. ನಿಮ್ಮೂರಿಗೆ ಈ ಚಿತ್ರವನ್ನು ತರಿಸಿಕೊಳ್ಳಿ. ಹತ್ತಿರದ ಚಿತ್ರಮಂದಿರದಲ್ಲಿ ಈ ಚಿತ್ರ ತೆರೆಕಾಣುವಂತೆ, ನೀವು ನೋಡಲಾಗುವಂತೆ ಮಾಡಿ. ಚಿತ್ರದ ಪ್ರತಿಗಾಗಿ ನನ್ನನ್ನು ಸಂಪರ್ಕಿಸಿ. ಅಥವಾ “ಚಿತ್ರಸಮೂಹ’ ಸಂಸ್ಥೆಯ ಪಿ.ರಾಮದಾಸ್‌ನಾಯ್ಡು ಅವರನ್ನು ಸಂಪರ್ಕಿಸಿ.
ನೆನಪಿರಲಿ : ನಿಮ್ಮ ಆಯ್ಕೆ ಒಳ್ಳೆಯದಾದಾಗ ಮಾತ್ರ, ನಿಮಗಾಗಿ ಚಿತ್ರ ತಯಾರಿಸುವವನಿಗೆ ಒಳ್ಳೆಯದನ್ನೇ ತಯಾರಿಸುವ ಒತ್ತಾಯ ಮೂಡುವುದು. ಅದರಿಂದ ಮಾತ್ರ ಒಳ್ಳೆಯ ಚಿತ್ರಗಳ ತಯಾರಿಕೆಯ ಸಂಖ್ಯೆ ಹೆಚ್ಚುವುದು.

Advertisements

0 Responses to ““ಬೇರು’ಬಿಟ್ಟ ಭ್ರಷ್ಟರು….”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: