ಮಕ್ಕಳ ಸಿನಿಮಾ ಹೇಗಿರಬೇಕು?

ಬೆಳಕಿನೊಳಗಣ ಬೆಗು – ೮

ಮಕ್ಕಳ ಸಿನಿಮಾ ತಯಾರಿಕೆ ಅತ್ಯಂತ ಕಷ್ಟದ ಕೆಲಸ. ಅದಕ್ಕೆ ಬೇಕಾದ ಹಣ ಹೊಂದಿಸುವುದರಿಂದ ಹಿಡಿದು, ಚಿತ್ರ ಬಿಡುಗಡೆಯವರೆಗೆ ಬಿಕ್ಕಟ್ಟುಗಳ ಸರಮಾಲೆಯನ್ನೇ ಅಂತಹ ಚಿತ್ರಗಳ ತಯಾರಿಕೆ ಎದುರಿಸಬೇಕಾಗುತ್ತದೆ. ಇದಕ್ಕೆ ಹಲವು ಕಾರಣಗಳಿದೆ. ಮೊದಲಿಗೆ ಮಕ್ಕಳ ಚಿತ್ರಗಳಲ್ಲಿಯೇ ಮೂರು ಬಗೆಯ ಚಿತ್ರಗಳಿವೆ. ೧. ಮಕ್ಕಳಿಂದ ಮಕ್ಕಳಿಗಾಗಿ ತಯಾರದ ಚಿತ್ರ, ೨. ದೊಡ್ಡವರು ಮಕ್ಕಳಿಗಾಗಿ ತಯಾರಿಸಿದ ಚಿತ್ರ, ೩. ಮಕ್ಕಳ ಮೂಲಕ ದೊಡ್ಡವರಿಗಾಗಿ ತಯಾರಾದ ಚಿತ್ರ. ಈ ಮೂರು ಬಗೆಯವುಗಳಲ್ಲದೆ ಅದಾಗಲೇ ಪ್ರಚಲಿತವಾದ ಸಾಮಾಜಿಕ, ಐತಿಹಾಸಿಕ, ವೈeನಿಕ, ಸಾಹಸಮಯ ಇತ್ಯಾದಿ ಪ್ರಭೇದಗಳು ಸಹ ಇವೆ. ಇವುಗಳಲ್ಲಿ ಯಾವ ರೀತಿಯ ಚಿತ್ರ ತಯಾರಿಸುತ್ತೇವೆ ಎಂಬುದನ್ನು ಚಿತ್ರ ತಯಾರಕ ಮೊದಲು ತೀರ್ಮಾನಿಸಬೇಕಾಗುತ್ತದೆ. ಭಾರತದಲ್ಲಿ ಮಕ್ಕಳಿಂದ ದೊಡ್ಡವರಿಗೆ ನೀತಿ ಪಾಠ ಹೇಳುವ ಚಿತ್ರಗಳೇ ಮಕ್ಕಳ ಚಿತ್ರಗಳೆಂಬ ಹೆಸರಲ್ಲಿ ತಯಾರಾಗುತ್ತಿದೆ. ಮಕ್ಕಳು ಮಕ್ಕಳಿಗಾಗಿ ತಯಾರಿಸುವು ಚಿತ್ರಗಳು ಈವರೆಗೆ ಭಾರತದಲ್ಲಿ ತಯಾರಾಗಿಯೇ ಇಲ್ಲ ಎನ್ನಬಹುದು. (ಈಚೆಗೆ ಬಾಲನಟ ಮಾ.ಕಿಶನ್ ಇಂತಹದೊಂದು ಪ್ರಯತ್ನ ಮಾಡುತ್ತಿದ್ದಾರೆ. ಅದು ಸಂತಸದ ಸಂಗತಿ) ಹೀಗಾಗುವುದಕ್ಕೆ ಭಾರತೀಯ ಚಲನಚಿತ್ರ ಮಾರುಕಟ್ಟೆಯೇ ಕಾರಣ. ಇಲ್ಲಿ ಮಕ್ಕಳ ಚಿತ್ರಗಳನ್ನು ಪೋಷಿಸುವ ಮಾರುಕಟ್ಟೆಯಿಲ್ಲ. ಹಾಗೇ ಚಿತ್ರ ತಯಾರಿಸುವ ಆಲೋಚನೆ ಮಾಡಿದವರಿಗೆ ಮರಳಿ ಹಣ ಬಾರದಿರುವುದು ಮತ್ತೊಂದು ದೊಡ್ಡ ಕಷ್ಟ. ಈ ಪರಿಸ್ಥಿತಿಯ ಸುಧಾರಣೆಗಾಗಿ ಕರ್ನಾಟಕ ಸರ್ಕಾರ ಕೆಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಅದರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ಪ್ರಶಸ್ತಿ ನೀಡುವುದಲ್ಲದೇ ಈಗ ವರ್ಷದಲ್ಲಿ ಎರಡು ಮಕ್ಕಳ ಚಿತ್ರಗಳಿಗೆ ೨೫ಲಕ್ಷ ರೂ.ಗಳ ಸಹಾಯಧನವೂ ಕೊಡುತ್ತಿದೆ. ಇದು ಮಕ್ಕಳ ಚಿತ್ರ ತಯಾರಕರಿಗೆ ಸಿಕ್ಕಿರುವ ಸಣ್ಣ ಸಂತೋಷ. ಆದರೆ ಇಲ್ಲಿರುವ ಸಮಸ್ಯೆ ಎಂದರೆ ಮಕ್ಕಳ ಚಿತ್ರ ಎಂಬ ಹಣೆಪಟ್ಟಿಯೊಡನೆ ೨೫ ಲಕ್ಷ ರೂ,ಗಳ ಸಹಾಯಧನ ಪಡೆಯಲು ಅವಸರದಲ್ಲಿ ರೀಲು ಸುತ್ತುವ ಅಭ್ಯಾಸವೊಂದು ನಿಧಾನವಾಗಿ ಶುರುವಾಗಿದೆ. ಆದ್ದರಿಂದಲೇ ಈ ವರ್ಷ ತಯಾರಾದ ಮಕ್ಕಳ ಚಿತ್ರಗಳ ಸಂಖ್ಯೆ ಐದೋ ಆರೋ ಆಗಿದೆ. ಅವುಗಳಲ್ಲಿ ನಿಜವಾಗಿಯೂ ಮಕ್ಕಳ ಚಿತ್ರ ಯಾವುದು ಎಂದು ತಿಳಿಯಬೇಕಷ್ಟೆ.

ಈ ಪರಿಸ್ಥಿತಿಯಲ್ಲಿ ತಯಾರಾದ ಒಂದು ಮಕ್ಕಳ ಚಿತ್ರ ‘ತುತ್ತೂರಿ’. ಗೆಳೆಯ ಪಿ.ಶೇಷಾದ್ರಿಯನ್ನು ಕುರಿತು ಅದಾಗಲೇ ಈ ಅಂಕಣದಲ್ಲಿ ಚರ್ಚಿಸಿದ್ದೇನೆ. ಈಗ ಮತ್ತೊಮ್ಮೆ ಮಾತಾಡುವ ಅವಕಾಶ ದೊರೆತಿದೆ. ಪಿ.ಶೇಷಾದ್ರಿ ನಿರ್ದೇಶಿಸಿರುವ ಮಕ್ಕಳ ಚಿತ್ರ ‘ತುತ್ತೂರಿ’(ನಿರ್ಮಾಪಕರು: ಜಯಮಾಲ). ಚಿತ್ರದಲ್ಲಿ ಸ್ಪಷ್ಟವಾದ ಸಂದೇಶವಿದೆ. ನಗರದ ಪ್ರತಿ ಬಡಾವಣೆಯಲ್ಲಿ ಮಕ್ಕಳು ಸುರಕ್ಷಿತವಾಗಿ ಆಡಲು ಬಯಲು ಅಥವಾ ಕ್ರೀಡಾಂಗಣ ಬೇಕು ಎಂಬುದು ಈ ಚಿತ್ರದ ವಸ್ತು. ಇಂತಹ ಮಾತುಗಳು ಸಾಮಾನ್ಯವಾಗಿ ಒಂದು ಉದ್ಘೋಷದ ಮಟ್ಟಕ್ಕೆ ಇಳಿದು ಕಥೆಯಾಗಿ ತಲುಪುವುದು ಕಷ್ಟವಾಗಿ ಬಿಡುತ್ತದೆ. ಆ ಕಷ್ಟವನ್ನು ದಾಟಲು ಪಿ.ಶೇಷಾದ್ರಿ ಕಥೆಯೊಂದನ್ನು ಜೋಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ, ತಮ್ಮ ‘ತುತ್ತೂರಿ’ ಚಿತ್ರದಲ್ಲಿ.
ನಮ್ಮ ಕಾಲದ ನಗರ ಎಂದರೆ ಕಾಂಕ್ರೀಟ್ ಕಾಡು. ಅಲ್ಲಿ ಜನ ಸಂಚಾರಕ್ಕಿಂತ ವಾಹನ ಸಂಚಾರವೇ ಹೆಚ್ಚು. ಶಾಲೆಗಳು ಸಹ ಇಂತಹ ಕಾಂಕ್ರೀಟ್ ಕಾಡಿನ ನಡುವೆಯೇ ಇರುತ್ತವೆ. ಆ ಶಾಲೆಗಳಲ್ಲಿ ಆಟದ ಬಯಲು ಎಂಬುದು ಇರುವುದೇ ಇಲ್ಲ. ಹೀಗಾಗಿ ಮಕ್ಕಳು ಬಯಲಿನಲ್ಲಿ ಅರಳುವ ಬದಲು ಕಂಪ್ಯೂಟರ್ ಗೇಮು ಮತ್ತು ಟೆಲಿವಿಷನ್ ಷೋಗಳಲ್ಲಿ ಕಾಲ ಕಳೆಯುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದಾಗಿ ಮಕ್ಕಳ ಮನಸ್ಸಿನ ಅರಳುವಿಕೆ ಅಸಹಜವಾಗುತ್ತದೆ. ಆಟಗಳಲ್ಲಿ ಮತ್ತು ಮಕ್ಕಳ ಗುಂಪಿನ ನಡುವೆ ಬದುಕಲು ಕಲಿಯಬೇಕಾದವರು ಜೈಲಿನಂತಹ ಗೋಡೆಗಳ ನಡುವೆ ಬೆಳೆಯುತ್ತಾರೆ. ಇದರ ಪರಿಣಾಮವಾಗಿಯೇ ಇಂದು ಭಾರತದಲ್ಲಿ ಆಟಗಾರರ ಸಂಖ್ಯೆ ಕಡಿಮೆಯಾಗಿದೆ. ಒಲಂಪಿಕ್‌ನಂತಹ ಆಟಗಳಲ್ಲಿ ನಮ್ಮವರು ಪದಕ ಗೆಲ್ಲುವುದು ದುರ್ಲಭವಾಗಿದೆ. ಈ ಪರಿಸ್ಥಿತಿ ನೀಗಲು ಇರುವ ಏಕೈಕ ಮಾರ್ಗ ಎಂದರೆ ಕ್ರೀಡಾಂಗಣಗಳ ಸಂಖ್ಯೆ ಹೆಚ್ಚಿಸುವುದು. ಈಚೆಗಿನ ದಿನಗಳಲ್ಲಿ ಯಾವುದೇ ಬಡಾವಣೆಯಾದರೂ ಸರಿ, ಅಲ್ಲಿ ಒಂದು ಪಾರ್ಕ್ ಮಾಡುವ ಅಭ್ಯಾಸವಿದೆ. ಅದು ಆ ಬಡಾವಣೆಯ ಹಿರಿಯರಿಗೆ ವಾಕಿಂಗ್ ಮಾಡಲು ಸಹಾಯವಾಗುತ್ತದೆ. ಆದರೆ ಅಂತಹ ವಿಶಾಲ ಆಟದ ಜಾಗ ಮಕ್ಕಳಿಗೆ ಸಿಗುವುದೇ ಇಲ್ಲ. ಅವರು ರಸ್ತೆಯ ಬದಿಯಲ್ಲೇ ಆಡುತ್ತಾರೆ. ಅವರಿವರ ಕೈಯಲ್ಲಿ ಬಯ್ಯಿಸಿಕೊಳ್ಳುತ್ತಾರೆ.
‘ತುತ್ತೂರಿ’ ಚಿತ್ರದಲ್ಲಿ ಹೀಗೆ ಕಷ್ಟಪಡುವ ಮಕ್ಕಳು ಖಾಲಿ ಇದ್ದ ನಿವೇಶನವೊಂದನ್ನು ಹುಡುಕಿಕೊಳ್ಳುತ್ತಾರೆ. ಆ ನಿವೇಶನದ ಮಾಲೀಕನಾದ ವೃದ್ಧ ಉದ್ಯಮಿಯೊಬ್ಬನ ವಿಶ್ವಾಸ ಸಂಪಾದಿಸುತ್ತಾರೆ. ತಾವೇ ನಿಂತು ಖಾಲಿ ನಿವೇಶನವನ್ನು ಆಟದ ಬಯಲು ಮಾಡಿಕೊಳ್ಳುತ್ತಾರೆ. ಆದರೆ ನಗರದ ನಡುವೆ ಹೀಗೆ ನಿವೇಶನವೊಂದನ್ನು ಖಾಲಿ ಬಿಡಲು ಕಟ್ಟಡದ ಉದ್ಯಮ ಬಿಡುತ್ತದೆಯೇ. ಅದು ‘ತುತ್ತೂರಿ’ಯಲ್ಲಿ ವೃದ್ಧನ ಮಗನ ರೂಪದಲ್ಲಿ ಬರುತ್ತದೆ. ಮಕ್ಕಳು ಕಟ್ಟಿದ ಆಟದ ಬಯಲನ್ನು ಮಗ ನೆಲಸಮ ಮಾಡಿಸುತ್ತಾನೆ. ಅಲ್ಲಿ ಬೃಹತ್ ಕಟ್ಟಡ ಏಳಲು ಸಿದ್ಧತೆಗಳಾಗುತ್ತವೆ. ಆದರೆ ಮಕ್ಕಳು ಹೋರಾಟ ಮಾಡುತ್ತಾರೆ. ತಮಗೆ ಬೇಕಾದ ನೆಲವನ್ನು ಹೋರಾಟದಿಂದಲೇ ಪಡೆಯುತ್ತಾರೆ. ಹೀಗೆ ಚಿತ್ರವು ಸುಖಾಂತವಾಗುತ್ತದೆ.
ಸಿನಿಮಾದಲ್ಲಿ ಇಂತಹ ಸಮಸ್ಯೆಗಳು ಸರಳವಾಗಿ ಬಗೆಹರಿಸಬಹುದು. ನಿಜ ಜೀವನದಲ್ಲಿ ಸಾಧ್ಯವಿಲ್ಲ. ಮಕ್ಕಳ ಸಿನಿಮಾಗಳು ತಯಾರಾಗುವುದೇ ಕಡಿಮೆ ಎಂಬರ್ಥದಲ್ಲಿ ನೋಡಿದಾಗ ‘ತುತ್ತೂರಿ’ ಮರಳುಗಾಡಿನ ನಡುವೆ ಒಯಸಿಸ್‌ನಂತೆ ಬಂದಿದೆ. ಇದನ್ನು ಪೂರ್ಣ ಪ್ರಮಾಣದ ಮಕ್ಕಳ ಚಿತ್ರ ಎಂದು ಕರೆಯಲಾಗದು. ಇದು ಮಕ್ಕಳಿಂದ ದೊಡ್ಡವರಿಗೆ ಬುದ್ಧಿ ಹೇಳುವ ಪ್ರಯತ್ನ. ಆದರೂ ನೀವೊಮ್ಮೆ ಈ ಚಿತ್ರ ನೋಡಿ. ನೀವು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಚಿತ್ರ ನೋಡಲು ಆರಂಭಿಸಿದಾಗ ಮಾತ್ರ ಇಂತಹ ಸಿನಿಮಾಗಳ ತಯಾರಿಕೆಯೂ ಹೆಚ್ಚುತ್ತದೆ. ಮತ್ತೊಮ್ಮೆ ನೆನಪಿಸುತ್ತೇನೆ: ಒಳ್ಳೆಯ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚಾದಾಗ ಮಾತ್ರ ಒಳ್ಳೆಯ ಚಿತ್ರಗಳ ತಯಾರಕರ ಸಂಖ್ಯೆಯೂ ಹೆಚ್ಚುತ್ತದೆ.
ನೀವೂ ನಿಮ್ಮ ಗೆಳೆಯರು ಆದಷ್ಟು ಬೇಗ ‘ತುತ್ತೂರಿ’ ನೋಡಿ. ನಿಮ್ಮ ಊರಿನಲ್ಲಿ ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲವೆಂದರೆ ನನ್ನ ವಿಳಾಸಕ್ಕೊಂದು ಪತ್ರ ಹಾಕಿರಿ.

Advertisements

0 Responses to “ಮಕ್ಕಳ ಸಿನಿಮಾ ಹೇಗಿರಬೇಕು?”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: