ಯುದ್ಧ ಮತ್ತು ಶಾಂತಿ

ಬೆಳಕಿನೊಳಗಣ ಬೆಗು – ೯

ಮನುಷ್ಯ ಎಂಬ ಪ್ರಾಣಿಗೆ ತನ್ನ ಮನೆ, ತನ್ನ ನೆಲ, ತನ್ನ ಭಾಷೆ, ತನ್ನ ದೇಶ ಎಂಬ ಕಲ್ಪನೆಗಳು ಹುಟ್ಟಿಕೊಂಡಾಗಿನಿಂದ ಈ ಜಗತ್ತಿನಲ್ಲಿ ಯುದ್ಧಗಳು ಆರಂಭವಾದವು. ತೀರಾ ಸಣ್ಣ ಮಕ್ಕಳನ್ನೇ ನೋಡಿ. ಅವರು ತಮ್ಮದೊಂದು ಬೊಂಬೆಯನ್ನು ಪಕ್ಕದಲ್ಲಿರುವ ಮಗುವಿನೊಂದಿಗೆ ಹಂಚಿಕೊಳ್ಳಲಾರರು. ಮಕ್ಕಳಿಗೆ ತೀರಾ ಸಣ್ಣ ವಯಸ್ಸಿನಿಂದಲೇ ತನ್ನದು ಎಂಬುದರ ಪರಿಚಯವನ್ನು ಈ ಸಮಾಜ ಮಾಡುತ್ತದೆ. ಅದರಿಂದಾಗಿಯೇ ಮಗುವೊಂದು ವಯಸ್ಕನಾಗುವ ಹೊತ್ತಿಗೆ ತನ್ನದೆಂಬುದನ್ನೆಲ್ಲ ರಕ್ಷಿಸಿಕೊಳ್ಳಬೇಕೆಂಬ ಕೆಟ್ಟ ‘ಅಹಂ’ ಜೊತೆಯಲ್ಲಿಯೇ ಬೆಳೆಯುತ್ತದೆ. ಮಕ್ಕಳ ಕಣ್‌ನೋಟಕ್ಕೆ ಬೆಳೆಯುವ ಹಾದಿಯಲ್ಲಿ; ಮನೆ, ನೆಲ, ಭಾಷೆ, ದೇಶಗಳು ಸೇರಿಕೊಳ್ಳುತ್ತಾ ಹೋಗುತ್ತವೆ. ಇವೆಲ್ಲವುಗಳನ್ನು ಕುರಿತು ಭಾವನಾತ್ಮಕ ಸಂಬಂಧ ಬೆಳೆದುಬಿಡುತ್ತದೆ. ಹೀಗಾದಾಗ ರಕ್ಷಣೆಯ ಹೆಸರಿನಲ್ಲೇ ಹಿಂಸೆಯ ರೂಪಗಳು ಕಾಣಿಸಿಕೊಳ್ಳುತ್ತವೆ. ಆ ಕಾರಣದಿಂದಲೇ ‘ನಮ್ಮ ನೆಮ್ಮದಿಯ ಬದುಕಿನ ಬಹುದೊಡ್ಡ ದುಷ್ಮನ್‌ಗಳು ಭಾಷೆ – ದೇಶ – ಗಡಿಗೆರೆ’ ಎಂದು ಚೀನಾದ ಕವಿಯೊಬ್ಬ ಹೇಳುತ್ತಾನೆ. (ಆ ಮಾತನ್ನು ನಾವು ಜೋರಾಗಿ ಹೇಳುವಂತಿಲ್ಲ. ಭಾಷೆ-  ದೇಶದ ಪ್ರೀತಿಯಿಂದ ಹಿಂಸೆ ಹುಟ್ಟುತ್ತದೆ ಎನ್ನುವವರನ್ನು ಇಲ್ಲಿನ ಕಟ್ಟಾ ರಾಷ್ಟ್ರೀಯವಾದಿಗಳು ಮತ್ತು ಪ್ರಚಂಡ ಭಾಷಾಪ್ರೇಮಿಗಳು ಕೊಚ್ಚಿಹಾಕುವ ಸಾಧ್ಯತೆಯಿದೆ.)

ಇಷ್ಟಾದರೂ ಈ ಜಗತ್ತಿನಾದ್ಯಂತ ಜನ ಯುದ್ಧ ವಿರೋಧಿ ನೀತಿಯನ್ನು ಕುರಿತು, ಜಾಗತಿಕ ಶಾಂತಿಯನ್ನು ಕುರಿತು ಮಾತಾಡುತ್ತಲೇ ಇರುತ್ತಾರೆ. ಯುದ್ಧ ಮತ್ತು ಶಾಂತಿಯನ್ನು ವಸ್ತುವಾಗಿಸಿಕೊಂಡ ಕಥೆ-ಕಾದಂಬರಿಗಳಲ್ಲದೆ ಸಿನೆಮಾಗಳು ಬರುತ್ತಲೇ ಇರುತ್ತವೆ. ಕನ್ನಡದ ಸಂದರ್ಭದಲ್ಲಿಯೇ ಯುದ್ಧವಿರೋಧಿ ನಿಲುವನ್ನುಳ್ಳ ಅನೇಕ ಸಿನೆಮಾಗಳನ್ನು ಹೆಸರಿಸಬಹುದು. ಅವುಗಳಲ್ಲಿ ವಿಶೇಷ ಗಮನ ಸೆಳೆದ ಸಿನೆಮಾ ‘ಮುತ್ತಿನಹಾರ’. ಆದರೆ ಆ ಚಿತ್ರದ ಕಥನ ಕ್ರಮದಲ್ಲಿ ಯುದ್ಧ ಎಂಬುದು ಒಂದು ಕೌಟುಂಬಿಕ ಕಥಾವಿವರದ ಹಿನ್ನೆಲೆಯಾಗಿ ಬಂದಿತ್ತು. ಯುದ್ಧವೇ ಅಲ್ಲಿ ಪ್ರಧಾನವಾಗಿರಲಿಲ್ಲ. ಅಲ್ಲದೇ, ಆ ಚಿತ್ರವು ನಾಯಕ ಪಾತ್ರದ ಸುತ್ತ ಹರಡಿಕೊಂಡ ಕಥೆಯನ್ನು ಹೊಂದಿತ್ತು. ಇಂತಹ ಕಥನಗಳಲ್ಲಿ ವಸ್ತುವಿನ ವಿಶ್ಲೇಷಣೆ ಮುಖ್ಯವಾಗದೆ ನಾಯಕ ಪಾತ್ರದ ವೈಭವೀಕರಣವೇ ಮುಖ್ಯವಾಗಿಬಿಡುತ್ತದೆ. ಇದು ಅಪಾಯಕಾರಿ. ಇದರಿಂದ ನೋಡುಗನಿಗೆ ತನ್ನ ನಿಲುವು ಏನಾಗಬೇಕು ಎಂಬುದರ ಸ್ಪಷ್ಟ ತಿಳುವಳಿಕೆ ದೊರೆಯುವುದಿಲ್ಲ. ಬದಲಿಗೆ ನಾಯಕನ ಮೂಲಕವೇ ಜಗತ್ತನ್ನು ನೋಡುವ ಅಭ್ಯಾಸವನ್ನು ಪ್ರೇಕ್ಷಕ ಮಾಡಿಕೊಳ್ಳುತ್ತಾನೆ. ಹಾಗಾಗಿಯೇ ಇಂತಹ ಕಥನಗಳು ಪ್ರೇಕ್ಷಕರನ್ನು ಬೆಳೆಸುವ ಬದಲಿಗೆ ಯಥಾಸ್ಥಿತಿಯಲ್ಲಿ ಇರಿಸುತ್ತವೆ ಎಂದು ಹೇಳಬಹುದು.
ಇಂತಹುದೇ ಮತ್ತೊಂದು ಪ್ರಯತ್ನ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ ‘ಶಾಂತಿ’. ೨೦೦೩ರಲ್ಲಿ ಚಿತ್ರಿತವಾದ ಈ ಚಿತ್ರದ ವಿಶೇಷವೆಂದರೆ ಇಡೀ ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸುವುದು ಒಂದೇ ಪಾತ್ರ. ಇದು ಈ ಚಿತ್ರದ ಗುಣಾತ್ಮಕ ಅಂಶ. ಯಾಕೆಂದರೆ ಅದೊಂದೇ ಕಾರಣಕ್ಕಾಗಿ ಈ ಸಿನಿಮಾಕ್ಕೆ ಗಿನ್ನೆಸ್ ದಾಖಲೆಗಳಲ್ಲಿ ಪ್ರವೇಶ ದೊರೆಯಿತು. ಆದರೆ ಇಂತಹ ಏಕವ್ಯಕ್ತಿ ನಟನೆಗಳು ಕಲಾಮಾಧ್ಯಮಕ್ಕೆ ದೊಡ್ಡ ಮಿತಿಯಾಗುವುದೇ ಹೆಚ್ಚು. (ನಾಟಕಗಳ್ಲಿ ಏಕವ್ಯಕ್ತಿ ಪ್ರದರ್ಶನಗಳಾದಾಗ ನೀವು ಗಮನಿಸಿರಬಹುದು. ಕರ್ಣನ ಪಾತ್ರದ ಏಕಪಾತ್ರಭಿನಯ ಮಾಡುವವನು ತಾನೇ ಅರ್ಜುನನಂತೆ, ಕೃಷ್ಣನಂತೆ, ದುರ್ಯೋಧನನಂತೆ ಅಭಿನಯಿಸಿ ತೋರಿಸುತ್ತಾ ಆ ಪಾತ್ರಗಳ ನಡುವಿನ ಸಂಘರ್ಷವನ್ನು ಕಥೆಯಾಗಿ ಬಿಚ್ಚಿಡಲು ಪ್ರಯತ್ನಿಸುತ್ತಾ ಇರುತ್ತಾನೆ. ಇದು ಆ ಪಾತ್ರದ ನಟನೆಗೆ ಸಹಾಯವಾಗುವ ಬದಲು ಗೊಂದಲವಾಗಿ ಬಿಡುತ್ತದೆ. ಅದರಿಂದಾಗಿ ಅತ್ಯುತ್ತಮ ನಟ ಸಹ ಏಕಪಾತ್ರಭಿನಯದಲ್ಲಿ ತೀರಾ ಪೇಲವವಾಗಿಬಿಡುವ ಸಾಧ್ಯತೆಯಿದೆ. ಆ ದೃಷ್ಟಿಯಿಂದ ನಟನೆ ಕಲಿಯುವ ವ್ಯಕ್ತಿಗೆ ಏಕಪಾತ್ರಭಿನಯ ಆ ನಿಮಿಷದಲ್ಲಿ ಸವಾಲೆನಿಸಿದರೂ ನಟನಾಗಿ ಆತನ ಬೆಳವಣಿಗೆಯ ದೃಷ್ಟಿಯಿಂದ ಅಪಾಯಕಾರಿ.) ‘ಶಾಂತಿ’ಯಲ್ಲಿ ಈ ಮಿತಿಯನ್ನು ದಾಟಿಕೊಳ್ಳಲು ಅತೀ ಹುಷಾರಿಯಿಂದ ಚಿತ್ರಕಥೆಯನ್ನು ಹೆಣೆಯಲಾಗಿದೆ. ತೆರೆಯ ಮೇಲೆ ಕಾಣಿಸುವ ಪಾತ್ರದ ಜೊತೆಗೆ ಹೊರಗಿನ ಪಾತ್ರಗಳು ದೂರವಾಣಿಯ ಮೂಲಕ ಅಥವಾ ಆಕೆಗೆ ಕಾಣದಂತೆ ಮಾತಾಡುತ್ತವೆ. ಇದರಿಂದ ಚಿತ್ರ ಏಕಪಾತ್ರಭಿನಯವಾಗುವ ಬದಲು ಇದು ಏಕವ್ಯಕ್ತಿ ಅಭಿನಯದ ಚಿತ್ರವಾಗಿದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಏಕೈಕ ವ್ಯಕ್ತಿ ನಟಿ ಭಾವನಾ.
ಈ ಸಿನೆಮಾದ ಕಥೆಯನ್ನ ಸ್ಥೂಲವಾಗಿ ಹೀಗೆ ಹೇಳಬಹುದು: ಖ್ಯಾತ ಚಿತ್ರಕಾರ್ತಿಯೊಬ್ಬಳನ್ನು ವಿಶ್ವಶಾಂತಿ ಸಮ್ಮೇಳನಕ್ಕಾಗಿ ಚಿತ್ರಗಳನ್ನು ರಚಿಸಿಕೊಡಲು ಕೇಳಲಾಗಿದೆ. ಅದಕ್ಕಾಗಿ ಚಿತ್ರರಚಿಸಲು ಆಕೆ ಒಂದು ಬೆಟ್ಟದ ಮೇಲಿರುವ ಫಾರ್ಮ್ ಹೌಸ್‌ನಂತಹ ಜಾಗಕ್ಕೆ ಬರುತ್ತಾಳೆ. ಅಲ್ಲಿ ಅವಳು ಚಿತ್ರ ಬರೆಯುತ್ತಾ ಇರುವಾಗಲೇ ಅವಳ ಕೆಲಸಗಳಿಗೆ ಅಡ್ಡಿಪಡಿಸುವ ಭಯೋತ್ಪಾದಕರ ಗುಂಪು ಆಕೆಯನ್ನು ಹೇಗಾದರೂ ವಿಶ್ವಶಾಂತಿ ಸಮ್ಮೇಳನಕ್ಕೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತದೆ. ಅದಕ್ಕಾಗಿ ಆಕೆಯ ಚಿತ್ರಗಳನ್ನು ಹಾಳುಮಾಡುವ, ಅವಳಿಗೆ ದೂರವಾಣಿಯ ಮೂಲಕ ಬೆದರಿಸುವ ಪ್ರಯತ್ನಗಳಲ್ಲದೆ, ಅವಳನ್ನು ಅಪಹರಿಸುವ ಪ್ರಯತ್ನವೂ ಆಗುತ್ತದೆ. ಇದೆಲ್ಲದರಿಂದ ತಪ್ಪಿಸಿಕೊಂಡು ಆಕೆ ವಿಶ್ವಶಾಂತಿ ಸಮ್ಮೇಳನಕ್ಕೆ ಹೋಗುತ್ತಾಳೆ ಎಂಬಲ್ಲಿಗೆ ‘ಶಾಂತಿ’ ಸ್ಥಾಪಿತವಾಯಿತು ಎನ್ನುತ್ತಾ ಚಿತ್ರವು ಮುಗಿಯುತ್ತದೆ.
ಕಥೆಯ ಸ್ಥೂಲ ನೋಟದಲ್ಲಿಯೇ ನಿಮಗೆ ಒಂದು ಒಳ್ಳೆಯದು-ಮತ್ತೊಂದು ಕೆಟ್ಟದ್ದು ಎಂಬ ಸ್ಪಷ್ಟ ಧೋರಣೆಯಿದೆ. ಇದು ಅದಾಗಲೇ ನಾವು ಹಳೆಯ ಲೇಖನಗಳಲ್ಲಿ ಚರ್ಚಿಸಿರುವಂತೆ ಅಪಾಯಕಾರಿ. ರಾಮ-ರಾವಣರ ನಡುವೆ ಯುದ್ಧವಾದಾಗ ರಾಮನನ್ನ ಬೆಂಬಲಿಸುವಷ್ಟೇ ಜನ ರಾವಣನನ್ನು ಬೆಂಬಲಿಸುತ್ತಾ ಇರುತ್ತಾರೆ. ಯುದ್ಧ ಮುಗಿದ ಮೇಲೆ ಚರಿತ್ರೆ ಗೆದ್ದವನ ಕಥೆಯನ್ನು ಮಾತ್ರ ಹೇಳುತ್ತದೆ. ಸೋತವನನ್ನ ತಪ್ಪಿತಸ್ಥ ಎಂಬಂತೆ ದೂಷಿಸಲಾಗುತ್ತದೆ. ಇದು ‘ಶಾಂತಿ’ ಪ್ರಕ್ರಿಯೆಯ ದೃಷ್ಟಿಯಿಂದ ತೊಂದರೆಯನ್ನು ತರುವಂತಹದು. ಒಬ್ಬನನ್ನ ಗೆದ್ದ ಎಂದು ವೈಭವೀಕರಿಸುವಾಗ ಸೋತವನ ತಂಡದಲ್ಲಿನ ವಿಚ್ಛಿದ್ರ್ರಕಾರಿ ಶಕ್ತಿಗಳ ಪೋಷಣೆಯು ಆರಂಭವಾಗಿಬಿಟ್ಟಿರುತ್ತದೆ. ಇಂತಹ ವಿಷಯಗಳನ್ನು ಕುರಿತು ನಮ್ಮಲ್ಲಿನ ಯುದ್ಧ ಮತ್ತು ಶಾಂತಿಯನ್ನು ವಸ್ತುವಾಗಿಸಿಕೊಂಡ ಸಿನೆಮಾಗಳು ಸಾಮಾನ್ಯವಾಗಿ ಗಮನಿಸುವುದಿಲ್ಲ. ಇದರಿಂದಾಗಿ ಇಂತಹ ಚಿತ್ರಗಳು ಏಕಪಕ್ಷೀಯ ನಿಲುವು ತೆಗೆದುಕೊಳ್ಳುವುದುಂಟು. ಭಾರತ-ಪಾಕಿಸ್ತಾನದ ಯುದ್ಧ ಕುರಿತ ಚಿತ್ರಗಳು ಭಾರತದಲ್ಲಿ ತಯಾರಾಗಿದ್ದರೆ ಈ ದೇಶದ ಪರವಾಗಿಯೂ, ನೆರೆಯ ದೇಶದಲ್ಲಿ ತಯಾರಾಗಿದ್ದರೆ ಆ ದೇಶದ ಪರವಾಗಿಯೂ ನಿಲುವು ತೆಗೆದುಕೊಳ್ಳುವುದನ್ನು ನಾವು ಕಾಣುತ್ತಲೇ ಇದ್ದೇವೆ. ಹೀಗಾಗಿಯೇ ಇಂತಹ ಚಿತ್ರಗಳು ಶಾಂತಿಯನ್ನ ಬೋಧಿಸುತ್ತಲೇ ಸ್ವತಃ ಅಶಾಂತಿಯನ್ನು ಬೆಳೆಸುತ್ತಾ ಇರುತ್ತವೆ ಎಂದು ನನ್ನ ಅನಿಸಿಕೆ.
ಈ ಸಮಸ್ಯೆ ಬರಗೂರು ರಾಮಚಂದ್ರಪ್ಪನವರ ಚಿತ್ರದಲ್ಲಿಯೂ ಇದೆಯಾದರೂ ಅಂತಹ ಸತ್ಯಗಳನ್ನ ಮೀರಿ ಇದೊಂದು ಒಳ್ಳೆಯ ಪ್ರಯತ್ನ. ನಾಯಕ-ನಾಯಕಿ ಎಂದು ಹೆಣೆಯುವ ಕಥೆಗಿಂತ ಇಲ್ಲಿ ಕಥೆ ಭಿನ್ನವಾಗಿದೆ. ಕಥೆ ಹೇಳಿರುವ ಕ್ರಮವೂ ಭಿನ್ನವಾಗಿದೆ. ಸಿನೆಮಾದ ವಿದ್ಯಾರ್ಥಿಗಳು ಇಂತಹ ಪ್ರಯೋಗದಿಂದ ಕಲಿಯಬಹುದಾದ್ದು ಅನೇಕ. ಏಕವ್ಯಕ್ತಿಯನ್ನು ಇಟ್ಟುಕೊಂಡು ಚಿತ್ರಿಸುವಾಗ ಚಿತ್ರನಾಟಕ ಹೆಣೆಯುವುದು ದೊಡ್ಡ ಸವಾಲು. ಆ ಸವಾಲಿನ ನಿರ್ವಹಣೆಗಾಗಿ ನೀವೊಮ್ಮೆ ಈ ಚಿತ್ರವನ್ನು ನೋಡಬೇಕು.
ಬರಗೂರು ರಾಮಚಂದ್ರಪ್ಪನವರು ಈ ಚಿತ್ರದ ವೀಕ್ಷಣೆಗಾಗಿ ನಾಡಿನಾದ್ಯಂತ ಶಾಂತಿ ಯಾತ್ರೆಯೊಂದನ್ನು ಆಯೋಜಿಸಿದ್ದರು. ಪ್ರಾಯಶಃ ಅದು ನಿಮ್ಮೂರಿಗೂ ಬಂದಿತ್ತೋ ಏನೋ! ಆಕಸ್ಮಿಕವಾಗಿ ಆ ಸಂದರ್ಭದಲ್ಲಿ ನೀವು ಚಿತ್ರವನ್ನು ನೋಡಿಲ್ಲವಾದರೆ, ಕೂಡಲೇ ಸಂಪರ್ಕಿಸಿ. ನಿಮ್ಮೂರಿನವರೆಲ್ಲರೂ ಇಂತಹ ಅಪರೂಪದ ಚಿತ್ರವನ್ನು ನೋಡಬೇಕು. ಆ ಮೂಲಕ ಹೊಸ ಪ್ರಯೋಗವನ್ನು ಪ್ರೋತ್ಸಾಹಿಸಬೇಕು.
ಇಂತಹ ಚಿತ್ರಗಳನ್ನು ನಿಮ್ಮೂರಿಗೆ ತರಿಸಿಕೊಳ್ಳಲು ಸಂಪರ್ಕ ಸಂಖ್ಯೆ : ಶ್ರೀಯುತ ಪಿ. ರಾಮದಾಸ ನಾಯ್ಡು – ೯೮೪೫೦ ೭೯೮೮೬ ಅಥವಾ ನನ್ನ ಈ ಮೇಲ್ ವಿಳಾಸಕ್ಕೆ ಬರೆಯಿರಿ.
ನೆನಪಿರಲಿ: ಒಳ್ಳೆಯ ಪ್ರೇಕ್ಷಕರಿದ್ದಾಗ ಮಾತ್ರ ಒಳ್ಳೆಯ ಚಿತ್ರಗಳ ತಯಾರಕರು ಉಳಿಯುತ್ತಾರೆ.

Advertisements

0 Responses to “ಯುದ್ಧ ಮತ್ತು ಶಾಂತಿ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: