ಸಮಾಜಮುಖಿ ಸಂಸ್ಕೃತಿಯ ತುಣುಕುಗಳು

ಬೆಳಕಿನೊಳಗಣ ಬೆಳಗು – ೨ (ಉಷಾಕಿರಣ ವಿದ್ಯಾರ್ಥಿ ಪತ್ರಿಕೆಗೆ ಅಂಕಣ)

ನಮ್ಮಲ್ಲಿ ತಯಾರಾಗುತ್ತಿರುವ ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ಸಮಾಜಮುಖಿಯಲ್ಲ. ಅದಕ್ಕೆ ಪ್ರೇಕ್ಷಕರು ನೋಡುವುದು ಇಂತಹುದೇ ಚಿತ್ರ ಎಂಬ ಹಸೀಸುಳ್ಳನ್ನ ಮನರಂಜನಾತ್ಮಕ ಚಿತ್ರಗಳ ತಯಾರಕರು ನೀಡುತ್ತಾರೆ. ಅದನ್ನು ಹಸೀ ಸಉಳ್ಳು ಎನ್ನುವುದಕ್ಕೆ ಕಾರಣವಿದೆ. ನಮ್ಮ ಬಹುತೇಕ ಚಿತ್ರ ತಯಾರಕರ‍್ಯಾರಿಗೂ ಸಮಾಜವನ್ನ ಒಳಮುಖದಿಂದ ನೋಡುವ ಅಭ್ಯಾಸವೇ ಇಲ್ಲ. ಅವರು ಕೋಟೆಯೊಳಗೆ ಬಂಧಿತರು. ಆ ಕೋಟೆಯೊಳಗಿರುವ ಭಗವಂತಿ ಕಿಟಕಿಯಿಂದ ಜಗತ್ತನ್ನ ನೋಡುತ್ತಾರೆ. ಅಂತೆಯೇ ಅವರು ಹೆಣೆಯುವ ಕಥೆಗಳು ಬದುಕಲ್ಲದ್ದನ್ನ ಬದುಕು ಎಂದು ಚಿತ್ರಿಸುತ್ತಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಮಾಜಮುಖಿ ಚಿತ್ರಗಳನ್ನ ತಯಾರಿಸುವ ಮತ್ತು ಪ್ರೇಕ್ಷಕರನ್ನ ಪ್ರಬುದ್ಧರು ಎಂದು ಭಾವಿಸಿಯೇ ಚಿತ್ರ ತಯಾರಿಸುವ ಜನ ನಮ್ಮಲ್ಲಿ ಅಲ್ಪಸಂಖ್ಯಾತರಂತೆ ಬದುಕುತಿದ್ದಾರೆ. ಈ ಅಲ್ಪಸಂಖ್ಯಾತರು ಸಣ್ಣಮಟ್ಟದಲ್ಲಿ ಮಾಡುವ ಪ್ರಯತ್ನಗಳನ್ನ ನಮ್ಮ ಪ್ರೇಕ್ಷಕರು ಗಮನಿಸಬೇಕು, ಪೋಷಿಸಬೇಕು. ನಾವು ಒಳ್ಳೆಯ ಚಿತ್ರ ನೋಡುವ ಅಭ್ಯಾಸ ಮಾಡಿಕೊಂಡಾಗ ಮಾತ್ರ ನಮ್ಮ ತಯಾರಕರುಗಳಲ್ಲಿ ಒಳ್ಳೆಯ ಚಿತ್ರ ತಯಾರಿಸುವವರ ಸಂಖ್ಯೆ ಹೆಚ್ಚುತ್ತದೆ ಎಂಬುದನ್ನ ಮತ್ತೊಮ್ಮೆ ನೆನಪಿಸುತ್ತಾ ಇಂದು ನಿಮ್ಮೆದುರಿಗೆ ಮತ್ತೊಂದು ಸದಭಿರುಚಿಯ ಕನ್ನಡ ಚಿತ್ರವನ್ನ ಬಿಚ್ಚಿಡುತ್ತೇನೆ.

ಸಹಕಾರಿ ಚಿಂತನೆ

ಪಿ.ಶೇಷಾದ್ರಿ ನಮ್ಮ ನಡುವಿನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಅವರು ತಯಾರಿಸಿದ ಅನೇಕ ಧಾರಾವಾಹಿಗಳನ್ನ ನಮ್ಮ ಜನ ನೋಡಿದ್ದಾರೆ. ಮಾಯಾಮೃಗ, ಕಾಮನಬಿಲ್ಲುವಿನಂತಹ ಧಾರಾವಾಹಿಗಳು ಮನೆಮಾತಾಗಿವೆ. ಆದರೆ ಅದೇ ಪಿ.ಶೇಷಾದ್ರಿ ಅವರು ತಮ್ಮ ಕಿರುತೆರೆಯ ಪ್ರಯತ್ನವನ್ನ ಹಿರಿತೆರೆಗೂ ವಿಸ್ತರಿಸಲು ಬಯಸಿದಾಗ ಅವರಿಗೆ ಆರ್ಥಿಕ ಬೆಂಬಲ ನೀಡುವವರು ದೊರೆಯಲಿಲ್ಲ. ನೆಸೆಸಿಟಿ ಈಸ್ ದ ಮದರ್ ಆಫ್ ಇನ್‌ವೆನ್ಷನ್ಸ್ ಎಂಬ ಗಾದೆ ಮಾತಿದೆ. ಆ ಮಾತಿನಂತೆ ಪಿ.ಶೇಷಾದ್ರಿ ತಮ್ಮ ಸುತ್ತಲೂ ಇದ್ದ ಸಹೃದಯರನ್ನ ಸೇರಿಸಿ ಹೊಸ ಚಿತ್ರತಯಾರಕರ ತಂಡ ಕಟ್ಟಿದರು. ಅದು ಸಹಕಾರಿ ತತ್ವದ ಮೇಲೆ ರೂಪಿತವಾದ ಸಂಸ್ಥೆ. ಹತ್ತು ಹನ್ನೆರಡು ಜನ ಗೆಳೆಯರು ಶ್ರಮಪಟ್ಟು ಸಂಪಾದಿಸಿದ್ದನ್ನ ಒಳ್ಳೆಯ ಚಿತ್ರನಿರ್ಮಾಣಕ್ಕೆ ತೊಡಗಿಸಿದರು. ಹೀಗೆ ಜೋಡಿಸಿದ ಹಣ ಕಡಿಮೆಯಿತ್ತು. ಅಷ್ಟೇ ಹಣದಲ್ಲಿ ಉತ್ತಮ ಚಿತ್ರವೊಂದನ್ನ ತಯಾರಿಸುವುದಕ್ಕಾಗಿ ಪಿ.ಶೇಷಾದ್ರಿ ಹೊರಟರು. ಈ ರೀತಿಯಾಗಿ ಅವರು ತಯಾರಿಸಿದ ಪ್ರಥಮ ಚಿತ್ರ ‘ಮುನ್ನುಡಿ’. ಬೊಳುವಾರು ಮಹಮದ್ ಕುಞ ಅವರು ಬರೆದ ‘ಮುತ್ತುಚ್ಚೇರಾ’ ಎಂಬ ಕಥೆಯನ್ನು ಆಧರಿಸಿ ತಯಾರಾದ ಚಿತ್ರವದು. ಈ ಚಿತ್ರದಲ್ಲಿ ತಾರಾ, ದತ್ತಣ್ಣ, ಛಾಯಾಸಿಂಗ್, ಶಶಿಕುಮಾರ್ ಮುಂತಾದವರು ಅಭಿನಯಿಸಿದ್ದರು. ಬಿ.ಎಸ್.ಶಾಸ್ತ್ರಿ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಬೊಳುವಾರು ಅವರ ಸಂಭಾಷಣೆ ಇದ್ದ ಈ ಚಿತ್ರದಲ್ಲಿ ಚಿತ್ರಕಥೆ/ನಿರ್ದೇಶನ ಪಿ.ಶೇಷಾದ್ರಿ ಅವರದ್ದಾಗಿತ್ತು.

ಚಿತ್ರದಲ್ಲಿದ್ದ ಕಥಾವಿವರವನ್ನ ಸ್ಥೂಲವಾಗಿ ಹೀಗೇ ಹೇಳಬಹುದು: ನಮ್ಮ ಕಡಲತೀರಗಳಿಗೆ ವ್ಯಾಪಾರಕ್ಕೆ ಎಂದು ಹಡಗುಗಳಲ್ಲಿ ಬರುವ ಅರಬ್ಬರು ಅದೇ ಸಮುದ್ರ ತೀರದಲ್ಲಿ ಕನಿಷ್ಟ ಮೂರು ತಿಂಗಳಾದರೂ ನಿಲ್ಲುತ್ತಾರೆ. ಹೀಗೇ ಅವರು ವ್ಯಾಪರಕ್ಕೆಂದು ನಿಲ್ಲುವ ಅವಧಿಯಲ್ಲಿ ಅವರು ತಮ್ಮ ಮಡದಿಯಲ್ಲದ ಹೆಂಡತಿಯರ ಜೊತೆಗೆ ಸಂಪರ್ಕ ಇರಿಸಿಕೊಳ್ಳುವಂತಿಲ್ಲ. ಇದು ಇಸ್ಲಾಂ ಧರ್ಮದಲ್ಲಿರುವ ಒಂದು ಕಾನೂನು. ಯಾರಾದರೂ ಈ ಕಾನೂನಿಗೆ ತಪ್ಪಿ ನಡೆದರೆ ಅಂತಹವರನ್ನ ಧರ್ಮದಿಂದ ಉಚ್ಚಾಟಿಸಲಾಗುತ್ತದೆ. ಇದು ಸೂಳೆಗಾರಿಕೆಯನ್ನ, ಅನೈತಿಕ ಲೈಂಗಿಕ ಸಂಪರ್ಕಗಳನ್ನ ತಪ್ಪಿಸಿಕೊಳ್ಳಬೇಕೆಂದು ಒಂದು ಸಮಾಜ ರೂಪಿಸಿಕೊಂಡದ್ದು. ಈ ಕಾರಣಕ್ಕಾಗಿ ಕಡಲತೀರಕ್ಕೆ ವ್ಯಾಪರಕ್ಕೆ ಬಂದು ಲಂಗರು ಹಾಕಿದ ಅರಬ್ಬರು ಮೂರು ತಿಂಗಳುಗಳಿಗೆ ಯಾವುದಾದರೂ ಭಾರತೀಯ ಹುಡುಗಿಯನ್ನ ನಿಖಾ ಮಾಡಿಕೊಳ್ಳುತ್ತಿದ್ದರು. ಮೂರು ತಿಂಗಳ ನಂತರ ತಲಾಖ್ ನೀಡಿ ತಮ್ಮ ಊರುಗಳಿಗೆ ಹೊರಟು ಹೋಗುತ್ತಿದ್ದರು. ಇದರಿಂದಾಗಿ ಕಡಲತೀರದ ಊರುಗಲ್ಲಿ ಗಂಡನಿಲ್ಲದ, ಕೈಯಲ್ಲೊಂದು ಹಸುಗೂಸನ್ನ ಇಟ್ಟುಕೊಂಡು ಬದುಕು ಮಾಡುವುದು ಹೇಗೆಂದು ಕೊರಗುವ ಹೆಂಗಸರ ದೊಡ್ಡ ದಂಡೇ ಉಳಿಯುತ್ತಿತ್ತು. ಹೀಗೆ ಒಂಟಿಯಾದ ಹೆಂಗಸರ ಜೀವನ ನರಕ ಸದೃಶವಾಗುತ್ತಿತ್ತು. ಈ ಹಿನ್ನೆಲೆಯನ್ನ ಇಟ್ಟುಕೊಂಡು ಬೊಳುವಾರು ಒಂದು ಹೆಂಗಸಿನ ಸುತ್ತಾ ‘ಮುತ್ತುಚ್ಚೇರಾ’ ಕಥೆಯನ್ನ ಹೆಣೆದಿದ್ದರು. ಇದೇ ಕಥೆ ‘ಮುನ್ನುಡಿ’ಯಾಗಿತ್ತು.

ಕೆಟ್ಟವರಿಲ್ಲದ ಲೋಕ

ನಮ್ಮ ಪ್ರಧಾನವಾಹಿನಿಯ ಚಿತ್ರಗಳಲ್ಲಿ ಎಲ್ಲವನ್ನೂ ಎರಡಾಗಿ ನೋಡುವ ಗುಣವಿದೆ. ಅಲ್ಲಿರುವವರನ್ನೆಲ್ಲಾ ಒಳ್ಳೆಯವರು-ಕೆಟ್ಟವರು/ ಕರಿಯರು-ಬಿಳಿಯರು/ ಉದ್ದಾರಕರು-ಭಯೋತ್ಪಾದಕರು/ ರಾಮ-ರಾವಣ ಹೀಗೆ ಎರಡಾಗಿ ನೋಡುವ ಗುಣವದು. ಆದರೆ ನಮ್ಮ ಸಮಾಜದಲ್ಲಿ ಎಲ್ಲವನ್ನೂ ಹೀಗೆ ಎರಡಾಗಿ ಒಡೆಯಲಾಗದು. ಒಳ್ಳೆಯದರ ಒಳಗೆ ಕೆಟ್ಟದ್ದು ಇರುತ್ತದೆ. ಅಂತೆಯೇ ಕೆಟ್ಟದ್ದರ ಒಳಗೆ ಒಳ್ಳೆಯದಿರುತ್ತದೆ. ಯಾವುದೇ ಒಳ್ಳೆಯ ಚಿತ್ರ ಕಟ್ಟಿಕೊಡುವ ಜಗತ್ತು ಸಹ ಹೀಗೆಯೇ ಇರಬೇಕಾಗುತ್ತದೆ. ಅಂತಹ ಪ್ರಯತ್ನ ಮುನ್ನುಡಿಯಲ್ಲಿದೆ. ಇಲ್ಲಿ ಬರುವ ಅರಬ ಕೆಟ್ಟವನಲ್ಲ. ತನ್ನ ಅನುಕೂಲಕ್ಕೆ ಅವನು ಏನೋ ಮಾಡುತ್ತಾನೆ. ಭಾರತೀಯ ಹುಡುಗಿಯರನ್ನ ಅರಬ್ಬರಿಗೆ ಕೊಟ್ಟು ಮದುವೆ ಮಾಡುವ ಮಧ್ಯವರ್ತಿ ಕೆಟ್ಟವನಲ್ಲ. ಅವನಿಗೆ ಅದು ಹೊಟ್ಟೆಪಾಡಿನ ಕೆಲಸ. ಅರಬ್ಬರೊಂದಿಗೆ ವ್ಯಾಪಾರ ಮಾಡುವ ಮತ್ತು ಅರಬ್ಬರೊಂದಿಗೆ ಮದುವೆಗಳಾಗಲು ಸಹಕರಿಸುವ ಊರಿನ ಶ್ರೀಮಂತರು ಕೆಟ್ಟವರಲ್ಲ. ಅವರಿಗೆ ತಮ್ಮ ನಿರ್ಧಾರಗಳ ಹಿಂದೆ ಅವರದ್ದೇ ಆದ ಕಾರಣವಿದೆ. ‘ಮುನ್ನುಡಿ’ ಇಂತಹ ಅನೇಕ ಒಳ್ಳೆಯವರ ನಡುವೆ ನರಳುವ ಹೆಣ್ಣುಮಕ್ಕಳ ಕಥೆಯನ್ನು ಹೇಳಲು ಪ್ರಯತ್ನಿಸುತ್ತದೆ. ಹೀಗಾಗಿ ಈ ಚಿತ್ರದಲ್ಲಿ ನಾವು ಕೇವಲ ಕಥಾಗ್ರಹಿಕೆಯನ್ನಲ್ಲದೆ, ಈ ಸಮಾಜವನ್ನ ಹಿಡಿದಿರಿಸುವ ನೇಯ್ಗೆಯನ್ನ ಗಮನಿಸುತ್ತೇವೆ. ಸಮಾಜವೊಂದನ್ನು ನಾವು ನೋಡಬೇಕಾದ ಬಗೆಯನ್ನು ಕುರಿತ ತಿಳುವಳಿಕೆಯೂ ಇಲ್ಲಿ ದೊರೆಯುತ್ತದೆ. ‘ಕೆಟ್ಟವರಿಲ್ಲದ’ ನಾಡಲ್ಲಿ ಒಳ್ಳೆಯವರು ಅನುಭವಿಸುವ ಸಂದಿಗ್ಧಗಳು, ಸಂಕಷ್ಟಗಳು ಕಥೆಯಾಗಿ ಬಿಚ್ಚಿಕೊಳ್ಳುವುದರಿಂದಲೇ ಪಿ.ಶೇಷಾದ್ರಿ ಅವರ ‘ಮುನ್ನುಡಿ’ ನಮ್ಮ ಕನ್ನಡ ಭಾಷೆಯಲ್ಲಿ ತಯಾರಾದ ಅಪರೂಪದ ಒಳ್ಳೆಯ ಚಿತ್ರಗಳಲ್ಲಿ ಒಂದಾಗಿದೆ.

ಕಥನ

ಪಿ.ಶೇಷಾದ್ರಿ ಅವರು ತಮ್ಮ ಇಡೀ ಚಿತ್ರವನ್ನ ನೇರಕಥನ ಕ್ರಮದಲ್ಲಿ ಇರಿಸುತ್ತಾರೆ. ಒಂದು ಬಡಕುಟುಂಬ. ಅಲ್ಲಿಗೆ ಬರುವ ದಲ್ಲಾಳಿಯಿಂದಾಗಿ ಒಬ್ಬ ಹುಡುಗಿಯ ಮದುವೆ ಅರಬ್ಬನೊಂದಿಗೆ ಆಗುತ್ತದೆ. ಅರಬ್ಬನೊಂದಿಗೆ ಬದುಕುವ ಕನಸುಗಳನ್ನು ಕಟ್ಟಿಕೊಂಡ ಹುಡುಗಿಯನ್ನ ಆತ ಊರು ಸುತ್ತಿಸುತ್ತಾನೆ. ಕಡಲು ಅವಳಿಗೆ ರಮ್ಯತಾಣವಾಗುತ್ತದೆ. ಅರಬ್ಬ ಮರಳಿ ತನ್ನೂರಿಗೆ ಹೊರಟು ನಿಂತಾಗ ಆ ಹುಡುಗಿಗೆ ವಾಸ್ತವದ ಅರಿವಾಗುತ್ತದೆ. ಆದರೂ ಅವಳು ಪ್ರತಿಭಟಿಸದೆ ಎಲ್ಲವನ್ನೂ ನುಂಗಿಕೊಳ್ಳುತ್ತಾಳೆ. ಬಹುಬೇಗ ಅವಳಿಗೆ ಅರಬನಿಂದಲೇ ದಕ್ಕಿದ ಹೆಣ್ಣುಮಗುವಾಗುತ್ತದೆ. ಆಕೆ ಒದ್ದಾಡುತ್ತಾಳೆ. ಹೇಗೋ ಕಷ್ಟಪಟ್ಟು ಬದುಕು ಸಾಗಿಸುತ್ತಾಳೆ. ಅವಳ ಮಗು ದೊಡ್ಡದಾಗುವಷ್ಟರಲ್ಲಿ ಅವಳಿಗೆ ಹೊಸ ಸಮಸ್ಯೆಗಳು ಆರಂಭವಾಗುತ್ತದೆ. ತನ್ನ ಮಗಳನ್ನು ಮದುವೆಯಾಗಲು ಅಲ್ಲಿನ ಹುಡುಗರೇ ಒಪ್ಪುವುದಿಲ್ಲ. ಏಕೆಂದರೆ ಆ ಹುಡುಗಿ ಅರಬನ ರಕ್ತಕ್ಕೆ ಹುಟ್ಟಿದ್ದು. ಅದು ಇಲ್ಲಿನವರಿಗೆ ಸಲ್ಲ. ಈ ಮಧ್ಯೆ ಮತ್ತೊಬ್ಬ ವ್ಯಾಪಾರಿಯ ಆಗಮನವಾಗುತ್ತದೆ. ಆತನಿಗೆ ಈ ಹೆಂಗಸಿನ ಮಗಳನ್ನ ಕೊಡುವ ಪ್ರಯತ್ನ ಆಗುತ್ತದೆ. ಆಗ ಆಕೆ ಸಿಡಿಯುತ್ತಾಳೆ. ತಾನು ಅನುಭವಿಸಿದ್ದು ಸಾಕು, ತನ್ನ ಮಗಳು ಅದೇ ಕಷ್ಟ ಅನುಭವಿಸುವುದು ಬೇಡ ಎಂದು ಒದ್ದಾಡುತ್ತಾಳೆ. ಆದರೆ ಊರಿನ ಹಿರಿಯ ಶ್ರೀಮಂತನಿಗೆ ಅರಬನಿಗೆ ಯಾರೊಂದಿಗಾದರೂ ವಿವಾಹವಾಗುವುದು ಅವನ ವ್ಯಾಪರದ ದೃಷ್ಟಿಯಿಂದ ಅಗತ್ಯ. ದಲ್ಲಾಳಿಗೆ ಆ ಮದುವೆ ಆಗುವುದು ಅವನ ಸ್ವಂತ ಮಗಳ ಮದುವೆಯ ದೃಷ್ಟಿಯಿಂದ ಅಗತ್ಯ. ಆದರೆ ಆಕೆಗೆ ನಂತರದ ಘೋರಗಳ ಹಿನ್ನೆಲೆಯಲ್ಲಿ ಈ ಮದುವೆ ಅನಗತ್ಯ. ಹೀಗೆ ಅಗತ್ಯ-ಅನಗತ್ಯಗಳ ನಡುವೆ ನಡೆಯುವ ಯುದ್ಧದಲ್ಲಿ ಶಕ್ತರು ಈಕೆಯನ್ನ ದಾಟಿ ಮದುವೆಗೆ ಸಿದ್ಧತೆ ನಡೆಸುತ್ತಾರೆ. ಅವಳ ಅನೊಪ್ಪಿಗೆಯ ನಡುವೆ ಅವಳ ಮಗಳಿಗೆ ಮದುವೆಯಾಗುವ ಏರ್ಪಾಡುಗಳಾಗುತ್ತವೆ. ಆಗ ಆಕೆ ಮಚ್ಚು ಹಿಡಿದು ನಿಲ್ಲುತ್ತಾಳೆ. ಆ ಮೂಲಕ ಪ್ರತಿಭಟಿಸದೆ ಹೋದರೆ ಹೆಂಗಸರು ‘ಒಳ್ಳೆಯವರ’ ನಡುವೆಯೂ ನರಳಬೇಕಾಗುತ್ತದೆ ಎಂದು ಹೇಳುತ್ತಾಳೆ.

ಹೀಗೆ ಕಥೆ ಬಿಚ್ಚಿಕೊಳ್ಳುತ್ತಾ ಸಾಗುವಾಗಲೇ ಊರ ಶ್ರೀಮಂತನ ಮನೆಯಲ್ಲಿ ನೆರಳಿನಂತೆ ಪರದೆಯ ಹಿಂದೆ ಬದುಕುವ ಹೆಣ್ಣೊಂದರ ಚಿತ್ರಿಕೆಯನ್ನ ಪಿ.ಶೇಷಾದ್ರಿ ತೋರಿಸುತ್ತಾ ಇರುತ್ತಾರೆ. ನೋಡುಗನಿಗೆ ಇದಾರು? ಎಂಬ ಪ್ರಶ್ನೆ ಕಾಡುತ್ತಾ ಇರುವಂತೆಯೇ ಚಿತ್ರದ ಅಂತ್ಯದಲ್ಲಿ ನೊಂದ ಹೆಣ್ಣು ಮಚ್ಚು ಹಿಡಿದು ನಿಂತಾಗ ಪರದೆಯ ಹಿಂದಿದ್ದ ಹೆಂಗಸು ಪರದೆ ಸರಿಸಿ ನೋಡುತ್ತಾಳೆ. ಅವಳ ಮುಖದಲ್ಲಿ ಒಂದು ನಗು ಮೂಡುತ್ತದೆ. ಆ ನಗುವಿನ ಹಿಂದೆ ಇಂತಹ ಒಂದು ಪ್ರತಿಭಟನೆ ಹಲವು ಸ್ವಾತಂತ್ರ್ಯ ದೊರಕಿಸಿಕೊಡಬಲ್ಲದು ಎಂದು ತಿಳಿಸುತ್ತದೆ. ಆ ಮೂಲಕ ಚಿತ್ರ ನೋಡುವ ಪ್ರೇಕ್ಷಕನಲ್ಲಿ ಒಂದು ಆಶಾಕಿರಣವೂ ಮೂಡುತ್ತದೆ.

ಒಂದು ಒಳ್ಳೆಯಚಿತ್ರ ಮಾಡಬೇಕಾದ್ದು ಇಂತಹ ಕೆಲಸವನ್ನ. ನಮ್ಮ ನಡುವಿನ ಒಳ್ಳೆಯದನ್ನ ತೋರಿಸುತ್ತಲೇ ಅದರೊಳಗಿರುವ ಹುಳುಕುಗಳಿಗೆ ಕನ್ನಡಿಯಾಗಬೇಕು. ಆ ಮೂಲಕ ಚಿತ್ರವೊಂದು ಸಾಮಾಜಿಕಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡಬೇಕು. ತಟ್ಟನೆ ನಿಮಗೊಂದು ಪ್ರಶ್ನೆ ಹುಟ್ಟಬಹುದು. ನಮ್ಮ ಜನಪ್ರಿಯ ಚಿತ್ರಗಳಲ್ಲಿ ಇಂತಹ ಸಮಾಜಮುಖಿ ನೆಲೆಗಳು ಇಲ್ಲವೆ? ಎನ್ನಿಸಬಹುದು. ಅದೊಂದು ದೊಡ್ಡ ವಿಶ್ಲೇಷಣೆಯನ್ನು ಬೇಡುವ ಪ್ರಶ್ನೆ. ಅದಕ್ಕೆ ಮುಂದಿನ ಲೇಖನಗಳಲ್ಲಿ ಉತ್ತರ ನೀಡುತ್ತೇನೆ. ಸಧ್ಯಕ್ಕೆ ಒಳ್ಳೆಯದು ಯಾವುದೆಂಬುದನ್ನ ಅರಿಯೋಣ. ಕೆಟ್ಟದ್ದು ಕೆಟ್ಟದ್ದಾಗಿದ್ದೇಕೆ ಎಂಬ ಚರ್ಚೆಯನ್ನು ನಿಧಾನವಾಗಿ ಮಾಡೋಣ.

Advertisements

0 Responses to “ಸಮಾಜಮುಖಿ ಸಂಸ್ಕೃತಿಯ ತುಣುಕುಗಳು”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: