ಸಡಗರಕ್ಕೆ ಸಾವಿಲ್ಲ

(ಬಿ.ವಿ.ಕಾರಂತರನ್ನು ಕುರಿತಂತೆ ಕೆಲವು ಮಾತು)

(ಕಾರಂತರಿಗೆ ಎಂಬತ್ತು ಎಂಬ ಹೆಸರಿನಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಉತ್ಸವದಲ್ಲಿ ಸೆಪ್ಟಂಬರ್ ೨೦ರಂದು ಆಡಿದ ಮಾತಿನ ಲೇಖನ ರೂಪ)
(ನನಗೆ ಇಂದು ಉಪನ್ಯಾಸ ನೀಡು ಎಂದಿದ್ದಾರೆ. ನಾನು ಉಪನ್ಯಾಸಕ ಅಲ್ಲ. ಇನ್ನು ಭಾಷಣ ಮಾಡುವ ಕಲೆ ನನಗೆ ಸಿದ್ಧಿಸಿಲ್ಲ. ಹಾಗಾಗಿ ನಾನು ಮಾತಾಡುವುದೇ ಸೂಕ್ತ ಅಂದುಕೊಂಡಿದ್ದೇನೆ. ಮಾತು ಜಂಗಮ. ಅದಕ್ಕೆ ಲಂಘನದ ಸಾಧ್ಯತೆ ಹೆಚ್ಚು. ಹಾಗಾಗಿ ನಾನು ಮಾತನ್ನೇ ಆಡುತ್ತೇನೆ. ಈ ಮಾತುಗಳಲ್ಲಿ ಒಂದು ಕ್ರಮ ಇಲ್ಲ. ಇದು ನೆನಪಿನ ಹಾದಿ. ಇದಕ್ಕೆ ಹಿಡಿದದ್ದೇ ದಾರಿ. ಆದ್ದರಿಂದ ಇಲ್ಲಿ ಬರೆದಿರುವುದು ಚರಿತ್ರೆಯೂ ಅಲ್ಲ. ಇದು ನನ್ನ ಅನುಭವ ಮಾತ್ರ. ನನ್ನ ಅನುಭವ ನಿಮ್ಮದೂ ಆಗಬೇಕೆಂಬ ಒತ್ತಾಯವೂ ಇಲ್ಲ. ನನ್ನ ಅಭಿಪ್ರಾಯ ನಿಮ್ಮದಾಗಬೇಕೆಂಬ ಹೇರಿಕೆಯೂ ಇಲ್ಲ. ಇನ್ನು ಮಾತಿಗಿಳಿಯುತ್ತೇನೆ.
ಈ ಮಾತಿಗೆ ಬಿ.ವಿ.ಕಾರಂತ್-ಮೈ ಇಂಪ್ರೆಶನ್ಸ್ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ ಸಂಘಟಕರು. ಇದು ಮತ್ತೊಂದು ಕಷ್ಟದ ಕೆಲಸ. ನನ್ನ ಅನಿಸಿಕೆಗಳು ಅನ್ನುವುದು ನಾನು ಗ್ರಹಿಸಿದ ವಿವರಗಳಿಂದ ದಾಖಲಾಗುವಂತಹದು. ಅದು ಎಂದಿಗೂ ಪರಿಪೂರ್ಣವಲ್ಲ. ಇನ್ನು ದಾಖಲೆಗಳ ಸಮೇತ, ಅಂಕಿ-ಸಂಖ್ಯೆಗಳ ಸಹಿತ ಯಾರಾದರೂ ಬಿಟ್ಟುಹೋದ ಗುರುತುಗಳನ್ನ ಹುಡುಕುವುದು ಎಂದರೆ ಅದೊಂದು ತಜ್ಞರ ಕೆಲಸ. ಆ ಕೆಲಸ ಮಾಡಲು ನಾನು ತಜ್ಞನಲ್ಲ.
ಇನ್ನು ‘ಮೈ ಇಂಪ್ರೆಷನ್ಸ್’ ಎಂಬಲ್ಲಿ ‘ಮೈ’ ಎಂಬುದು ಕನ್ನಡವೋ-ಇಂಗ್ಲಿಷೋ ಎಂಬ ಪ್ರಶ್ನೆಯೂ ಇದೆ. ಈ ಕುರಿತು ಸಂಘಟಕರಾದ ಶ್ರೀನಿವಾಸ್ ಜಿ.ಕಪ್ಪಣ್ಣ ಅವರೊಂದಿಗೆ ಮಾತಾಡಿದಾಗ ಅವರು ಜೋಕ್ ಮಾಡಿಬಿಟ್ಟರು. ನಾನು ನಿಮ್ಮೆದುರಿಗೆ ಜೋಕ್ ಮಾಡಲಾರೆ. ಹೀಗಾಗಿ ನನ್ನ ಮಾತುಗಳ ಮೂಲಕ ಕಾರಂತರನ್ನು ಹುಡುಕುವ ಪ್ರಯತ್ನ ಮಾಡುತ್ತಾ ಇದ್ದೇನೆ. ಅಷ್ಟ. ಇನ್ನು ಕಾರಂತರ ಲೋಕಕ್ಕೇ ಹೋಗೋಣ.)

ಬಿ.ವಿ.ಕಾರಂತರು ಕನ್ನಡ ರಂಗಭೂಮಿಯ ಅಪರೂಪದ ಸಾಧಕರು. ಅವರ ರಂಗಪ್ರಯಾಣ ಐದಾರು ದಶಕಗಳನ್ನು ಮೀರಿದ್ದು. ಆದರೆ ನನಗೆ ಆ ಪ್ರಯಾಣದಲ್ಲಿನ ಎರಡೂವರೆ ಅಥವಾ ಮೂರು ದಶಕಗಳಷ್ಟು ಅನುಭವ ಮಾತ್ರ ಪರಿಚಿತ. ಇನ್ನುಳಿದದ್ದನ್ನು ಅವರಿವರಿಂದ ಕೇಳಿ ತಿಳಿದುಕೊಂಡಿದ್ದೇನೆ. ಆದರೆ ಅದು ನನ್ನ ಅನುಭವಕ್ಕೆ ದಕ್ಕಿದ್ದಲ್ಲವಾದ್ದರಿಂದ ಅದು ಅಪ್ರಸ್ತುತ ಎಂದು ನನ್ನ ಭಾವನೆ. ಕಾರಂತರನ್ನ ನಾನು ಮೊದಲು ಕಂಡದ್ದು ರವೀಂದ್ರ ಕಲಾಕ್ಷೇತ್ರದಲ್ಲಿ. ಎಪ್ಪತ್ತರ ದಶಕದ ಕನ್ನಡ ಹವ್ಯಾಸೀ ರಂಗಭೂಮಿಯ ಬಹುಮುಖ್ಯ ಮಜಲು ಎಂದು ರಂಗವಿಮರ್ಶಕರು ಗುರುತಿಸುವ ಬಯಲು ರಂಗೋತ್ಸವದಲ್ಲಿ. ಕಾರಂತರು ಆಗ ಮೂರು ನಾಟಕಗಳನ್ನು ನಿರ್ದೇಶಿಸಿದ್ದರು. ಆಗ ನನಗಿನ್ನೂ ಒಂಬತ್ತು ವರ‍್ಷ. ಆ ನಾಟಕಗಳನ್ನ ಗ್ರಹಿಸುವ ಶಕ್ತಿ ನನಗಿರಲಿಲ್ಲ. ಹಾಗಾಗಿ ಆ ನಾಟಕಗಳು ಮೈಲಿಗಲ್ಲುಗಳು ಎಂದು ಈಗ ಯಾರಾದರೂ ನುಡಿದರೆ ನನಗೆ ಹೌದಾ ಎಂಬ ಉದ್ಘಾರವೊಂದೇ ಸಾಧ್ಯ. ಆದರೆ ಆ ಮೂರು ನಾಟಕಗಳಲ್ಲಿ ಒಂದು ನಾಟಕದಲ್ಲಿನ ಸಣ್ಣ ಹುಡುಗ ಪ್ರದರ್ಶನದ ಸಂದರ್ಭದಲ್ಲಿ ಮಿಸ್ ಆಗಿದ್ದ. ಹಾಗಾಗಿ ಯಾರದೋ ಬದಲಿಗೆ ಎಂದು ನನ್ನನ್ನು ರಂಗದ ಮೇಲೆ ತಳ್ಳಿದ್ದರು. ಆಗ ನನ್ನ ನಟನೆ ಹೇಗಿತ್ತೋ ನಾನರಿಯೆ. ಆದರೆ ಅಲ್ಲಿ ಸೇರಿದ್ದ ಜನರನ್ನು ನೋಡಿ ನಾನು ಗಾಬರಿಯಾಗಿದ್ದಿರಬೇಕು. (ಇದು ಇಂದಿಗೂ ನನ್ನನ್ನು ಕಾಡುವ ಸಮಸ್ಯೆ. ಹೆಚ್ಚು ಜನ ಇದ್ದಲ್ಲಿ ನಾನು ನಾಪತ್ತೆ ಆಗುತ್ತೇನೆ.) ಆದರೆ ಕಾರಂತರು ಆ ಕ್ಷಣದಲ್ಲಿ ನನ್ನನ್ನು ಪ್ರೀತಿಯಿಂದ ಮಾತಾಡಿಸಿದ್ದರು. ಆ ಪ್ರೀತಿಯ ನೆನಪಿದೆ ನನಗೆ.
ಅದು ಕಾರಂತರಿಗೆ ಕಡೆಯವರಗೂ ಇದ್ದದ್ದು. ಅವರು ನನ್ನನ್ನ ಮೊದಲ ಬಾರಿಗೆ ಕಂಡ ಹಾಗೆಯೇ ಕಡೆಯವರೆಗೂ ಮಾತಾಡಿಸಿದ್ದರು. ಪ್ರಾಯಶಃ ನಾನು ಅವರ ಕಣ್ಣಲ್ಲಿ ಅದೇ ಒಂಬತ್ತರ ಹರೆಯದವನಾಗಿ ಉಳಿದಿದ್ದೆನೋ ಏನೋ?

ಈಗ ಕಾರಂತರಿಗೆ ಎಂಬತ್ತು ಎಂಬ ಕಾರಣಕ್ಕೆ ನಾವೆಲ್ಲಾ ಸೇರಿದ್ದೇವೆ. ಇಲ್ಲಿ ಜನಕ್ಕೆ ಕೊರತೆ ಇಲ್ಲ. ಸೇರಿದ ಜನರಲ್ಲಿ ಅದೇ ಸಂಭ್ರಮ ಇದೆ. ಸಡಗರ ಇದೆ. ಕಾರಂತರ ನಾಟಕ ನೋಡುವ ಉತ್ಸಾಹ ಇದೆ. ಇದು ಎಲ್ಲಾ ನಾಟಕಗಳಿಗೂ ಸಿಗುವ ಪ್ರತಿಕ್ರಿಯೆ ಅಲ್ಲ. ಕಾರಂತ ವಿಶಿಷ್ಟ ಪ್ರತಿಕ್ರಿಯೆ ಇದು. ಇದನ್ನು ನಾನು ‘ಕಾರಂತರ ಸಡಗರ’ ಎಂದು ಗುರುತಿಸುತ್ತೇನೆ. ಬಿ.ವಿ.ಕಾರಂತರು ಭಾರತೀಯ ರಂಗಭೂಮಿಗೆ ಕೊಟ್ಟ ಕಾಣಿಕೆಯೇ ಇದು. ಈ ಸಡಗರದಲ್ಲಿ ನಮ್ಮ ಮಧ್ಯಮವರ್ಗದ ಹಬ್ಬಕ್ಕೆ ಕಾಯುವ ತವಕ ಇದೆ. ಹಬ್ಬವನ್ನು ಆನಂದಿಸುವ ಗುಣ ಇದೆ. ಹಬ್ಬದ ಸಂಭ್ರಮವೇ ಇದೆ. ಇದನ್ನೇ ನಾನು ‘ಕಾರಂತ ವಿಶಿಷ್ಟ’ ಎನ್ನುವುದು.

ಈ ಮಾತಿನ ಗ್ರಹಿಕೆಗೆ ನಾವು ಎಪ್ಪತ್ತರ ದಶಕದ ಆರಂಭಿಕ ಹಂತದಲ್ಲಿ ಇದ್ದ ನಮ್ಮ ಹವ್ಯಾಸೀ ರಂಗಭೂಮಿಯ ಸ್ಥಿತಿಯನ್ನು ನೋಡಬೇಕು. ನಮ್ಮ ಹವ್ಯಾಸೀ ರಂಗಭೂಮಿಯು ಆಗ ವಿಲಾಸೀ ಎಂದು ಕರೆಸಿಕೊಳ್ಳುತ್ತಿತ್ತು. ಅಲ್ಲಿದ್ದ ನೋಡುಗರು ಹಾಗೂ ‘ಮಾಡು’ಗರು ಇಬ್ಬರಿಗೂ ರಂಗಭೂಮಿ ಎಂಬುದು ಟೈಂಪಾಸ್ ಕೆಲಸವಾಗಿತ್ತು. ಯಾವುದೋ ಸಿನಿಮಾ ನೋಡುವುದಕ್ಕಿಂತ, ಎಂದೋ ಒಮ್ಮೆ ಊರಿಗೆ ಬರುವ ವೃತ್ತಿ ರಂಗಭೂಮಿಯ ನಾಟಕ ನೋಡುವುದಕ್ಕಿಂತ ಒಂದು ಸಂಜೆಯನ್ನ ತಾವೇ ಪಾತ್ರಗಳನ್ನು ಹಾಕಿಕೊಂಡು ಕಳೆಯುವ ಎಂಬ ಗುಣ ಆ ವಿಲಾಸೀ ರಂಗಭೂಮಿಯದಾಗಿತ್ತು. ಹಾಗಾಗಿಯೇ ಅಲ್ಲಿ ಕೈಲಾಸಂ ಅತೀ ಜನಪ್ರಿಯರು. ಅವರ ನಾಟಕಗಳಲ್ಲಿನ ಹೂರಣಕ್ಕಿಂತ, ಅವರ ನಾಟಕದ ಮಾತು, ಪಾತ್ರಗಳಿಗೆ ಜನ ಮೆಚ್ಚುಗೆ ದೊರೆಯುತ್ತಿತ್ತು. ಆ ನಾಟಕ ಅಭಿನಯಿಸುತ್ತಾ ಇದ್ದವರಿಗೂ ಕೈಲಾಸಂ ಮಾತುಗಳನ್ನ ‘ಸರಿಯಾಗಿ’ ಆಡಿದೆ ಎಂಬುದೇ ಪ್ರಧಾನ ಸಂತಸದ ಸಂಗತಿ. (ಈ ‘ಸರಿಯಾಗಿ’ ಎನ್ನುವುದು ಭಾಷೆಯನ್ನು ನಾಲಿಗೆಯಿಂದ ಹೊರಡಿಸುವುದಕ್ಕೆ ಸೀಮಿತವಾದುದು. ಅಲ್ಲಿ ಹೃದಯಕ್ಕೆ ತಾಗಿ, ಹೊಟ್ಟೆಯಿಂದ ಹೊರಡುವ ಸತ್ಯದ ವಿವರ ಇಲ್ಲ. ಹೀಗಾಗಿಯೇ ಸರಿಯಾಗಿ ಮಾತಾಡುವುದು ಎಂಬುದನ್ನ ಕೊಂಬಿನ ಗುರುತಿನ ಜೊತೆಗೆ ಸೂಚಿಸಿದ್ದೇನೆ.) ಈ ಸ್ಥಿತಿಯನ್ನು ದಾಟಿಕೊಳ್ಳಲು ಬಿ.ವಿ.ಕಾರಂತರಿಗಿಂತ ಮುಂಚೆಯೇ ಅನೇಕರು ಪ್ರಯತ್ನಿಸಿದ್ದರು. ಆ ನಿಟ್ಟಿನಲ್ಲಿ ಪ್ರೊ.ಬಿ.ಸಿ. ಅವರ ಪ್ರಯತ್ನ ಮೆಚ್ಚತಕ್ಕಂತಹುದಾಗಿತ್ತು. ರಂಗಭೂಮಿ ಎಂಬುದು ಕೇವಲ ಟೈಂಪಾಸ್ ಅಲ್ಲ, ಅದೊಂದು ಸೃಜನಶೀಲ ಪ್ರಾಕಾರ ಮತ್ತು ಅದನ್ನು ರೂಢಿಸಲು ವಿಶೇಷ ಶಿಸ್ತುಗಳ ಅಗತ್ಯವಿದೆ ಎಂಬುದನ್ನು ಬಿ.ಸಿ. ಅವರು ಸಾಬೀತು ಪಡಿಸಿದ್ದರು. ಈ ಅವಧಿಯಲ್ಲಿಯೇ ಕಾರಂತರು ರಾಷ್ಟ್ರೀಯ ನಾಟಕ ಶಾಲೆಯ ಪದವಿಯೊಡನೆ ಬೆಂಗಳೂರಿನ ಹವ್ಯಾಸೀ ರಂಗಭೂಮಿಗೆ ಬಂದರು. ರಂಗಭೂಮಿ ಎಂದರೆ ಟೈಂಪಾಸ್ ಆಟ ಎಂದುಕೊಂಡಿದ್ದ ನಮ್ಮ ರಂಗಭೂಮಿಯವರಿಗೆ ರಂಗಸಾಧ್ಯತೆಯ ಹೊಸ ಮಜಲನ್ನು ತೋರಿಸಿಕೊಟ್ಟರು. ಈ ಅವಧಿಯಲ್ಲಿ ಕಾರಂತರು ಕಟ್ಟಿದ ‘ಜೋಕುಮಾರಸ್ವಾಮಿ’, ‘ಈಡಿಪಸ್’, ‘ಸಂಕ್ರಾಂತಿ’ ನಾಟಕಗಳು ನಾಟಕ ನೋಡುವವರಿಗೆ ಇದು ಕೇವಲ್ಲ ‘ನಮ್ಮ’ ಹುಡುಗರು ಮಾಡಿದ ತಮಾಷೆಯಲ್ಲ, ಇಲ್ಲಿ ತಲೆಗೂ ಗ್ರಾಸ ಇದೆ ಎಂಬುದು ಗೊತ್ತಾಗಿತ್ತು. ಆ ವರೆಗೆ ಇದ್ದ ರಂಗಭೂಮಿ ಚಟುವಟಿಕೆಗಳಿಗೆ ಕಾರಂತರು ಹೊಸ ಶಕ್ತಿಯನ್ನು ಧಾರೆ ಎರೆದಿದ್ದರು. ನಾಟಕ ಪ್ರದರ್ಶನ ಎಂಬುದು ಒಂದು ಸಂಭ್ರಮದ ಕೆಲಸ ಎಂಬ ಚುರುಕು ‘ನಮ್ಮ’ ರಂಗಕರ್ಮಿಗಳಿಗೆ ಸಿಕ್ಕಿತ್ತು. ಈ ಚುರುಕು ಇಂದಿಗೂ ಉಳಿದಿದೆ. ಹಾಗಾಗಿಯೇ ಇವತ್ತಿಗೂ ಕಾರಂತರ ನಾಟಕ ಎಂದರೆ ಜನ ಸೇರುತ್ತಾರೆ. ಹೀಗೆ ಸೇರುವ ಜನರ ಮುಖದ ತುಂಬಾ ಕಾರಂತರು ತಮ್ಮ ನಾಟಕದ ಮುಖೇನ ಕಟ್ಟುತ್ತಿದ್ದ ಅದೇ ಸಡಗರ ಉಳಿದಿರುತ್ತದೆ. ಮತ್ತು ಈ ಸಡಗರವೂ ತಲೆಮಾರಿನಿಂದ ತಲೆಮಾರಿಗೆ ಅದೇ ಉತ್ಸಾಹದ ಜೊತೆಗೆ ಹಸ್ತಾಂತರವಾಗುತ್ತಿದೆ. ಇದರಿಂದಾಗಿಯೇ ಈಗ ‘ಕಾರಂತರಿಗೆ ಎಂಬತ್ತು’ ಎಂಬ ಹೆಸರಿನಲ್ಲಿಯೋ ಅಥವಾ ಇನ್ಯಾವುದೇ ಹೆಸರಿನಲ್ಲಿಯೋ ರಂಗೋತ್ಸವ ಆದರೆ ಅಲ್ಲಿ ಸಂಕ್ರಾಂತಿಯ ಹಬ್ಬಕ್ಕೋ ಯುಗಾದಿಯ ಸಂಭ್ರಮಕ್ಕೋ ದೀಪವಾಳಿಯ ಆನಂದಕ್ಕೋ ಎಂಬಂತೆ ಜಣ ನೆರೆಯುತ್ತಾರೆ. ಈ ಸುಖ ಇನ್ನಿತರ ಕನ್ನಡ ರಂಗನಿರ‍್ದೇಶಕರ ನಾಟಕಕ್ಕೆ ಇಲ್ಲ. ಹಾಗಾಗಿಯೇ ಕಾರಂತರ ನಾಟಕ ಎಂಬುದು ಇಂದಿಗೂ ಯು.ಎಸ್.ಪಿ. (Unique selling point) ಆಗಿಯೇ ಉಳಿದಿದೆ. ಇದು ಕಾರಂತರು ನಮ್ಮ ರಂಗಭೂಮಿಗೆ ಕೊಟ್ಟ ಪ್ರಧಾನ ಕಾಣಿಕೆ.

ಸಡಗರಕ್ಕೂ ಸಂಕಟಕ್ಕೂ ಇರುವ ವ್ಯತ್ಯಾಸ

ನಮ್ಮ ರಂಗಭೂಮಿಯಲ್ಲಿ ಕಾರಂತರ ನಂತರವೂ ಅನೇಕ ರಂಗನಿರ‍್ದೇಶಕರು ಬಂದು ಹೋಗಿದ್ದಾರೆ, ಬರುತ್ತಲೇ ಇದ್ದಾರೆ. ಅವರಾರಿಗೂ ದಕ್ಕದ ಅಪರೂಪದ ಯು.ಎಸ್.ಪಿ. ಕಾರಂತರಿಗೆ ಸಿಕ್ಕದ್ದು ಏಕೆ? ಹೇಗೆ? ಎಂಬುದು ಆಲೋಚಿಸಬೇಕಾದ ಪ್ರಶ್ನೆ. ಕಾರಂತರು ಬಾಲ್ಯದಲ್ಲಿ ಯಕ್ಷಗಾನದ ಮಟ್ಟುಗಳ ನಡುವೆ ಬೆಳೆದವರು. ನಂತರ ವೃತ್ತಿ ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸುತ್ತಾ, ಹಾಡುತ್ತಾ ರಂಗಭೂಮಿಯ ಹೂರಣವನ್ನು ಮೈಗೆ ಹತ್ತಿಸಿಕೊಂಡವರು. ಅಲ್ಲಿಂದಾಚೆಗೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಭೂಮಿಯ ಸಿದ್ಧಾಂತಗಳನ್ನು ಮಿದುಳಿಗೆ ಇಳಿಸಿಕೊಂಡವರು. ಹೀಗೆ ರಂಗಭೂಮಿ ಎಂಬುದು ಕಾರಂತರಿಗೆ ಬಹುಕೋನಗಳಿಂದ ತಾಗಿದ ಅಪರೂಪ. ಇದು ಇನ್ನಿತರ ರಂಗಕರ್ತರಿಗೆ ದಕ್ಕಿದ್ದಲ್ಲ ಎಂಬುದು ಪ್ರಥಮ ವ್ಯತ್ಯಾಸ. ಹೀಗಾಗಿಯೇ ಇತರರು ರಂಗಭೂಮಿಯನ್ನು ನೋಡಿದ, ಕಟ್ಟಿದ ಕ್ರಮಕ್ಕೂ ಕಾರಂತರ ನಾಟಕ ಕಟ್ಟುವ ಕ್ರಮಕ್ಕೂ ದೊಡ್ಡ ವ್ಯತ್ಯಾಸಗಳಾಗುತ್ತವೆ. ಗಮನಿಸಿ. ಪ್ರಸನ್ನ ಅಥವಾ ಸಿಜಿಕೆ ಮುಂತಾದವರ ನಾಟಕಗಳು ಭಾರೀ ಸದ್ದು ಗದ್ದಲದೊಂದಿಗೆ ಪ್ರಚಾರ ಪಡೆದದ್ದು ಹೌದು. ಇಂತಹವರ ನಾಟಕಗಳು ಆಗುವ ಕಾಲಕ್ಕೆ ವಿಚಾರ ಸಂಕಿರಣಗಳು ಸಹ ಆಯೋಜಿತವಾಗಿದ್ದುಂಟು. ಆದರೆ ಈ ನಾಟಕಗಳ ಪುನರ್ ಪ್ರದರ್ಶನಗಳಾಗುವಾಗ ಕಾರಂತರ ನಾಟಕಕ್ಕೆ ಸೇರಿದಂತೆ ಸಡಗರದ ಸಂತೆ ಸೇರುವುದಿಲ್ಲ. ಈ ಸತ್ಯದ ಹಿಂದೆಯೇ ಕಾರಂತರ ನಾಟಕಗಳ ಗುಣ-ಅವಗುಣ ಎರಡೂ ಇದೆ.

ಕಾರಂತರು ತಮ್ಮ ನಾಟಕಗಳಿಗೆ ಎಂದೂ ರಾಜಕೀಯ ಪೋಷಾಕು ತೊಡಿಸುತ್ತಾ ಇರಲಿಲ್ಲ. ಕಾರಂತರಿಗೆ ನಾಟಕ ಎನ್ನುವುದು ಹಬ್ಬದ ಉತ್ಸಾಹ ಮೂಡಿಸುವ ರಂಗಕ್ರಿಯೆಯೇ ಆಗಿತ್ತು. ಅವರು ನಾಟಕ ಕಟ್ಟುವ ಕ್ರಮದಲ್ಲೂ ಹಾಡು ಮತ್ತು ಸಂಗೀತಕ್ಕೆ ಪ್ರಾಧಾನ್ಯ ನೀಡುತ್ತಾ ಇದ್ದರು. ‘ಹಯವದನ’ದ ತಲೆ ಬದಲಿ ಎಂಬ ವಸ್ತು ಕಾರಂತರಿಗೆ ರಾಜಕೀಯ ಆಟ ಎನ್ನಿಸುವ ಬದಲು ಜನಪದ ಕಲ್ಪನೆ ಮಾತ್ರ ಆಗುತ್ತಿತ್ತು. ಅಥವಾ ‘ಸತ್ತವರ ನೆರಳು’ ನಮ್ಮ ಮಠ ಮಾನ್ಯಗಳ ಒಳಗಿನ ಜಡಗಟ್ಟಿದ ವ್ಯವಸ್ಥೆಯನ್ನು ಕುರಿತು ಮಾತಾಡುವ ನಾಟಕವಾಗದೆ ದಾಸರ ಹಾಡುಗಳ ಮೂಲಕ ಮನುಷ್ಯ ಲೋಕದ ಗೇಯ ಗುಣವನ್ನು ಕಾಣಿಸುವ ಪ್ರಯೋಗವಾಗಿತ್ತು. ಇದೇ ಮಾತುಗಳನ್ನು ಕಾರಂತರ ಬಹುತೇಕ ನಾಟಕಗಳಿಗೆ ಹೇಳಬಹುದು. ಉದಾಹರಣೆಗೆ ಬಾದಲ್ ಸರ್ಕಾರ್ ಅವರ ‘ಏವಂ ಇಂದ್ರಜಿತ್’. ಈ ನಾಟಕ ಆ ಕಾಲದ ರಾಜಕೀಯ ಸ್ಥಿತಿಯನ್ನು ಬಿಚ್ಚಿಡುವ ಪ್ರಯತ್ನವಾಗಿತ್ತು. ಆದರೆ ಕಾರಂತರು ಇದೇ ನಾಟಕವನ್ನು ‘ಕಮಲ್-ವಿಮಲ್-ಅಮಲ್-ಏವಂ’ ಎಂಬ ಸಂಗೀತ ನಾಟಕ ಮಾಡಿದ್ದರು. ಇದು ಕಾರಂತ ಗುಣ.

ಇದು ಎಷ್ಟು ಸರಿ ಎಂಬ ಚರ್ಚೆ ನಮ್ಮ ರಂಗಭೂಮಿಯಲ್ಲಿ ಬಹುಕಾಲದಿಂದ ನಡೆಯುತ್ತಿದೆ. ಆ ಚರ್ಚೆಯ ವಿವರಗಳನ್ನು ಈ ಮಾತಿನೊಳಗೆ ತರುವುದು ಸಾಧುವಲ್ಲ. ಆದರೆ ಅಂತಹ ಚರ್ಚೆಯ ಹಿನ್ನೆಲೆಯಲ್ಲಿ ಕಾರಂತರನ್ನು ಅವರ ನಾಟಕಗಳನ್ನು ನೋಡುವುದು ಒಳಿತು. ‘ಸಧ್ಯದ ಈಗ’ ಎಂಬುದನ್ನು ತಾಗಿಕೊಂಡೇ ಸೃಜನಶೀಲ ಚಟುವಟಿಕೆಗಳು ನಡೆಯಬೇಕು. ಆಗ ಮಾತ್ರ ಜಗತ್ತಿನ ಅತಿ ದೊಡ್ಡ ಭಾಗವಾದ ಮಧ್ಯಮವರ್ಗ ಎಂಬುದರ ಬದುಕನ್ನ ರಾಜಕೀಯ ಎಚ್ಚರದೊಂದಿಗೆ ರೂಢಿಸಲು ಸಾಧ್ಯ ಎಂಬ ಹೇಳಿಕೆಯೊಂದಿದೆ. ಅದು ಎಲ್ಲಾ ಸೃಜನಶೀಲ ಚಟುವಟಿಕೆಗಳನ್ನೂ ನಡೆಸುವವರಿಗೆ ‘ದಿಕ್ಸೂಚಿ ವಾಕ್ಯ’ ಎಂತಲೂ ಗುರುತಿಸಬಹುದಾದ್ದು. ಆದರೆ ಕಾರಂತರು ತಮ್ಮ ನಾಟಕಗಳನ್ನು ಕಟ್ಟುವಾಗ ಈ ಮಾತನ್ನು ವಿರೋಧಿಸಿಯೇ ನಾಟಕ ಕಟ್ಟುತ್ತಾ ಇದ್ದರೆನಿಸುತ್ತದೆ. ಇದು ಕೂಡ ಪ್ರಾಯಃ ಕಾರಂತರ ರಾಜಕೀಯ ಆಯ್ಕೆ ಆಗಿದ್ದಿರಬಹುದು. ಉತ್ತರಿಸಲು ಕಾರಂತರು ನಮ್ಮೊಂದಿಗೆ ಇಲ್ಲ. ಇರಲಿ. ಈ ಹಿನ್ನೆಲೆಯಿಂದ ಕಾರಂತರು ಕಟ್ಟಿದ ನಾಟಕಗಳನ್ನು ನೋಡಿದರೆ ನಾನು ಈ ಮುಂಚೆ ಹೇಳಿದ ಸಡಗರಕ್ಕೆ ಸಾವಿಲ್ಲ ಎಂಬ ಮಾತಿಗೆ ಇರುವ ತೂಕ ಸ್ಪಷ್ಟವಾಗುತ್ತದೆ. ಚಳವಳಿಗಳು ಒಂದು ಸಾಮಾಜಿಕ-ರಾಜಕೀಯ ಸ್ಥಿತಿಯಲ್ಲಿ ಬದುಕುತ್ತವೆ. ಆ ಸ್ಥಿತ್ಯಂತರವಾದಮೇಲೆ ಆ ಚಳುವಳಿ ಕೇವಲ ನೆನಪು ಮಾತ್ರ. ಭಾರತದ ತುರ್ತುಪರಿಸ್ಥಿತಿ ಸಂದರ್ಭ ಇರಬಹುದು. ಬಂಡಾಯ ಸಾಹಿತ್ಯ ಚಳುವಳಿ ಇರಬಹುದು. ಎಲ್ಲವೂ ಆಯಾ ಕಾಲ ಘಟ್ಟದ ಪ್ರಮುಖ ಸಂಗತಿಗಳೇ. ಆದರೆ ಆ ಕಾಲದಲ್ಲಿ, ಗಟ್ಟಿಯಾದ ಚಳುವಳಿ ಪ್ರೇರಿತ ಕಾವ್ಯವೋ-ನಾಟಕ ಎನಿಸಿಕೊಂಡದ್ದು, ಇಂದು ಬಣ್ಣ ಕಳೆದುಕೊಂಡ ಹಳೆಯ ಬಟ್ಟೆಯಂತೆ ಕಾಣುತ್ತದೆ. ಪ್ರಾಯಶಃ ಆ ಕಾರಣಕ್ಕಾಗಿಯೇ ನಮ್ಮ ರಂಗಚರಿತ್ರೆಯ ಅನೇಕ ಮಹಾನ್ ನಾಟಕಗಳು ಇಂದು ಪುನರಾವರ್ತನೆಯ ಸುಖಕ್ಕೂ ದಕ್ಕುವುದಿಲ್ಲ. ಆ ನಾಟಕಗಳನ್ನು ಇಂದಿನ ಸ್ಥಿತಿಗಾಗಿ ಪುನರ್‌ಸೃಷ್ಟಿಸಬೇಕಾದ ಅನಿವಾರ್ಯತೆ ಬಂದಿರುತ್ತದೆ. ಆದರೆ ಕಾರಂತರ ನಾಟಕಗಳು ಹಾಗಲ್ಲ. ಅವು ಆ ನಾಟಕಗಳು ಸೃಷ್ಟಿಯಾದ ಸಮಯದಲ್ಲಿ ಇದ್ದಂತೆಯೇ ಇಂದೂ ಆಡಬಹುದು. ಅಕಸ್ಮಾತ್ ನಾಟಕದ ಪಾತ್ರಧಾರಿಗಳು ದಿಕ್ಕುತಪ್ಪಿ ನಟಿಸಿದರೂ, ನಾಟಕದ ಹಾಡುಗಳು ಪ್ರದರ್ಶನಕ್ಕೆ ತೂಕ ತಂದುಬಿಡುತ್ತವೆ. ಹಾಗಾಗಿಯೇ ಕಾರಂತರ ನಾಟಕಗಳಿಗೆ ಇಂದಿಗೂ ಪುನರ್ ಪ್ರದರ್ಶನ ಸಾಧ್ಯ. ಈ ಅರ್ಥದಲ್ಲಿ ನೋಡಿದಾಗ ‘ಚಳುವಳಿಗಳು ಮುಗಿಯುತ್ತವೆ. ಚಳುವಳಿಯಲ್ಲಿ ಹುಟ್ಟಿದ ಕಾವುಗಳು ತಣ್ಣಗಾಗುತ್ತವೆ. ಆದರೆ ಸಡಗರಗಳು ಸಾಯುವುದಿಲ್ಲ. ಸಡಗರ ಎಂಬುದು ನಿತ್ಯವೂ ಅರಳುವ ವಿವರ’ ಎಂಬ ಮಾತು ಸರಿಯಾಗುತ್ತದೆ. ಕಾರಂತರ ನಾಟಕಗಳು ಚಳುವಳಿಯಿಂದ ಹುಟ್ಟಿದ್ದಲ್ಲ. ಆದರೆ ಅವುಗಳಲ್ಲಿ ಸಡಗರವಿದೆ. ಈ ವರ್ಷ ನಾವು ಆನಂದಿಸಿದ ವಿಜಯದಶಮಿಯೋ-ದೀಪಾವಳಿಯೋ ಮುಂದಿನ ವರ್ಷ ಬಂದಾಗಲೂ ನಮಗೆ ಅದೇ ಸಂಭ್ರಮ ಇರುವ ಹಾಗೇ ಕಾರಂತರ ನಾಟಕಗಳು ನಿತ್ಯ ಸಡಗರದೊಡನೆ ಪ್ರದರ್ಶನ ಕಾಣುತ್ತವೆ.

ನಾಟಕಗಳು ಪೊಲಿಟಿಕಲಿ ಕರೆಕ್ಟ್ ಆಗಿರಬೇಕೆ ಬೇಡವೇ?

ನಾಟಕದ ಜವಾಬ್ದಾರಿ ಏನು? ಅದನ್ನು ನಾವು ಯಾಕಾಗಿ ಮಾಡುತ್ತೇವೆ? ಅದನ್ನು ನೋಡಿದವರಿಗೆ ಏನಾಗಬೇಕು ಎಂದು ನಾವು ಬಯಸುತ್ತೇವೆ? ಎಂಬುದು ಸಾರ್ವಕಾಲಿಕ ಪ್ರಶ್ನೆ. ಈ ಪ್ರಶ್ನೆಗೆ ಪ್ಲಾಟೋನ ಕಾಲದಿಂದಲೂ ಅನೇಕ ಉತ್ತರಗಳನ್ನು ಹೇಳಲಾಗಿದೆ. ವಿಮರ್ಶಕರ ಪಡೆಗಳು ಬಹು ಬಗೆಯ ಉತ್ತರಗಳನ್ನು ಬರೆದಿವೆ. ಆದರೆ ನಮ್ಮ ಸಮಕಾಲೀನ ಸಂದರ್ಭದಲ್ಲಿ ನಾವು ಈ ಎಲ್ಲಾ ವಿವರಗಳನ್ನೂ ಮೀರುವಂತೆ ಮನರಂಜನೆಗಳನ್ನು ‘ಕೊಂಡು’ ನೋಡುವ ಚಟಕ್ಕೆ ಬಿದ್ದಿದ್ದೇವೆ. ಪಾರ್ಸಿ ನಾಟಕ ಕಂಪೆನಿಗಳು ತೋರಿಸುತ್ತಿದ್ದ ಮಾಯಾಲೋಕದಿಂದ ಪ್ರೇರಿತರಾಗಿ ಕನ್ನಡ ವೃತ್ತಿ ರಂಗಭೂಮಿಯ ನಾಟಕಗಳನ್ನು, ವೃತ್ತಿ ರಂಗಭೂಮಿಯ ಟಿಸಿಲೋ ಎಂಬಂತೆ ಬೆಳೆದು ಬಂದ ಕನ್ನಡ ಸಿನಿಮಾಗಳನ್ನು ನೋಡುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಹೀಗೆ ನೋಡುವವರಿಗೆ ಮನರಂಜನೆಯ ಜೊತೆಗೆ ಚಿಂತನೆಯನ್ನೂ ದಾಟಿಸಬೇಕು ಎಂಬ ಆಲೋಚನೆ ನಮ್ಮ ರಂಗಭೂಮಿಯ ಬೆಳವಣಿಗೆಯ ಹಾದಿಯಲ್ಲೇ ಬಂದದ್ದು. ಇದರಿಂದಾಗಿಯೇ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ರಂಗಭೂಮಿಯು ಕಿತ್ತುರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ನಾಟಕಗಳ ಮೂಲಕ ಸಮಕಾಲೀನ ರಾಜಕೀಯ ಅಗತ್ಯಗಳನ್ನು ಹೇಳಲು ಪ್ರಯತ್ನಿಸಿತ್ತು. ಬಂಗಾಲದ ಎಡಪಂಥೀಯ ಚಳುವಳಿಗಳ ನೆರಳಲ್ಲಿಯೇ ಇಪ್ಟಾ ದಂತಹ ತಂಡಗಳು ಸಾಮಾನ್ಯ ಜನರನ್ನು ಸಮಕಾಲೀನ ಸಮಾಜದತ್ತ ನೋಡುವುದಕ್ಕೆ ಸಿದ್ಧಗೊಳಿಸಲು ನಾಟಕ ಚಳುವಳಿಯನ್ನು ಬಳಸಿಕೊಂಡವು.  ಅರವತ್ತು-ಎಪ್ಪತ್ತರ ದಶಕಗಳಲ್ಲಿಯಂತೂ ನಮ್ಮ ದೇಶದ ಉದ್ದಗಲಕ್ಕೂ ಬೃಹತ್ ಉದ್ದಿಮೆಗಳನ್ನು ಬೆಂಬಲಿಸಿ, ನಾಡು ಕಟ್ಟುವ ಹೇಳಿಕೆಗಳನ್ನುಳ್ಳ ನಾಟಕ-ಸಿನಿಮಾಗಳು ತಯಾರಾದವು.

ಇಷ್ಟೆಲ್ಲಾ ಇತಿಹಾಸವನ್ನು ಬೆನ್ನಿಗೆ ಕಟ್ಟಿಕೊಂಡು ಕಾರಂತರ ರಂಗಭೂಮಿ ಅರಳುತ್ತಿತ್ತು. ಕಾರಂತರ ಉಚ್ಚ್ರಾಯ ಸ್ಥಿತಿಯಲ್ಲಿಯಂತೂ ಭಾರತವಯ ತುರ್ತುಪರಿಸ್ಥಿತಿಯ ಕರಾಳ ನೋವನ್ನು ಅನುಭವಿಸುತ್ತಿತ್ತು. ಕಾರಂತರ ಯಾವ ನಾಟಕವೂ ಈ ಸಮಕಾಲೀನ ರಾಜಕೀಯ ಸ್ಥಿತಿಗೆ ಪ್ರತಿಕ್ರಿಯೆ ಆಗಲೇ ಇಲ್ಲ. ಬದಲಿಗೆ ಅವುಗಳು ಅದೇ ಸಡಗರದಲ್ಲಿ, ಸಂಭ್ರಮದಲ್ಲಿ ಹಾಡು ಕಟ್ಟುವ ಲೋಕದಲ್ಲಿ ಉಳಿದು ಬಿಟ್ಟವು ಎಂಬುದು ಸತ್ಯ. ಇದು ಕಾರಂತರನ್ನು ಕುರಿತ ಆಕ್ಷೇಪ ಅಲ್ಲ. ಊರಿಗೆ ಬೆಂಕಿ ಬಿದ್ದಾಗ ಯಾವುದೋ ರಾಜ ಪಿಟೀಲು ಕುಯ್ಯುತ್ತಿದ್ದ ಎಂಬ ಗಾದೆಯಿದೆಯಲ್ಲಾ ಅಂತಹ ಗಾದೆಗೆ ಹೊಂದುವ ಸ್ಥಿತಿ.
ಆದರೆ ಕಾರಂತರು ವರ್ಗ ಸಂಘರ್ಷದ ಕಥೆಯನ್ನುಳ್ಳ ‘ಚೋಮನದುಡಿ’ಯಂತಹುದನ್ನ ಸಿನಿಮಾ ಮಾಡಿದರು. ನಾಟಕದಲ್ಲಿ ಎಲ್ಲಯೂ ಆ ಮಟ್ಟದ ಚರ್ಚೆಯನ್ನೂ ತರಲಿಲ್ಲ. ಕಾರಂತರ ನಾಟಕಗಳು ಹಾಡುಗಳಲ್ಲಿ ಉಳಿದುಬಿಟ್ಟಿದ್ದವು. ಅವರ ಸಮಕಾಲೀನ ರಂಗನಿರ‍್ದೇಶಕರಾದ ಹಬೀಬ್ ತನ್ವೀರ್ ಮುಂತಾದವರು ನಿರಂತರವಾಗಿ ಸಮಕಾಲೀನ ರಾಜಕೀಯದ ವಿವರವನ್ನು ಕ್ಲಾಸಿಕಲ್ ನಾಟಕಗಳ ಸ್ಟ್ರಕ್ಚರ್ ಒಳಗಡೆಯೇ ತರುತ್ತಾ ಇದ್ದಾಗಲೂ ಕಾರಂತರು ಮೇಘಸಂದೇಶ, ಚಂದ್ರಹಾಸ ಮುಂತಾದ ನಾಟಕಗಳಲ್ಲಿ ಉಳಿದುಬಿಟ್ಟಿದ್ದರು. (ಈ ಸಂದರ್ಭದಲ್ಲಿ ಕಾರಂತರು ‘ತುಘಲಕ್’ ಅನ್ನು ಹಿಂದಿಗೆ ಅನುವಾದಿಸಿದ್ದರು ಎಂಬುದನ್ನು ನೆನೆಯಲೇಬೇಕು.)

ಶಬ್ದವಿನ್ಯಾಸ

ಈ ಪ್ರಶ್ನೆ ನನ್ನಂತಹ ಅನೇಕರನ್ನು ಬಹುಕಾಲದಿಂದ ಕಾಡಿರುವುದು ಹೌದು. ಹಾಗಾಗಿಯೇ ಒಂದೊಮ್ಮೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ನನ್ನಂತಹ ಕೆಲವು ರಂಗಕರ್ಮಿಗಳ ಜೊತೆಗೆ ಒಂದು ವಾರಕಾಲದ ಸಂವಾದವನ್ನು ಬಿ.ವಿ.ಕಾರಂತರ ಜೊತೆಗೆ ಏರ್ಪಡಿಸಿದ್ದಾಗ ನಾನು ಈ ಪ್ರಶ್ನೆಯನ್ನು ಕೇಳಿದ್ದೆ. ಕಾರಂತರು ಆಗಲೂ ಸ್ಪಷ್ಟ ಉತ್ತರ ನೀಡಿರಲಿಲ್ಲ. ಆದರೆ ತಾವು ನಾಟಕ ಕಟ್ಟುವ ಕ್ರಮವನ್ನು ಕುರಿತು ಸುಧೀರ್ಘವಾಗಿ ಮಾತಾಡಿದ್ದರು. ಈ ಮಾತುಗಳ ನಡುವೆ ಅವರು ‘ನಾಟಕ ಎಂಬುದು ಮೂಲತಃ ದೃಶ್ಯವೇ ಆದರೂ ಇಲ್ಲಿ ಶಬ್ದ ವಿನ್ಯಾಸ ತುಂಬಾ ಮುಖ್ಯ’ ಎಂದು ಹೇಳಿದ್ದರು. ಈ ಶಬ್ದವಿನ್ಯಾಸದ ಹಿನ್ನೆಲಯಲ್ಲಿ ಅವರ ಎಲ್ಲಾ ನಾಟಕಗಳನ್ನು ನೋಡಿದರೆ ನಮಗೆ ಕಾರಂತರು ಕಟ್ಟಿದ ರಂಗಸಂಗೀತದ ಮತ್ತೊಂದು ಮಜಲು ಕಣ್ತೆರೆಯುತ್ತದೆ. ಕಾರಂತರು ಸಂಯೋಜಿಸಿದ ಹಾಡುಗಳಿಗೆ ಸ್ವತಃ ನಾಟಕೀಯ ಗುಣ ಇರುತ್ತಿತ್ತು. ‘ಹಯವದನ’ದ ಪ್ರಾರ್ಥನೆಯ ಪದ್ಯವನ್ನು ನೆನಪಿಸಿಕೊಳ್ಳಿ. ‘ಗಜವದನ ಹೇ ರಂಭಾ’ ಎಂದು ಆರಂಭವಾಗು ಆ ಪದ್ಯದ ಚರಣಗಳ ಅಂತ್ಯದಲ್ಲಿ ಕಾರಂತರು ಪದಗಳ ಜೊತೆಗೆ ಆಟವಾಡುತ್ತಾರೆ. ‘ಆದಿ ಪ್ರೇಕ್ಷಕನೇ’ ಎಂಬ ಸಾಲನ್ನು ಅನೇಕ ಪದಗಳ ತುಂಡುಗಳಾಗಿ ಒಡೆದು ‘ಹಯವದನ’ ನಾಟಕದ ನಾಂದಿ ಪದ್ಯದ ಮೂಲಕವೇ ಆ ನಾಟಕದ ಹೂರಣವನ್ನು ಪ್ರವೇಶಿಸುತ್ತಾರೆ. ಅದೇ ನಾಟಕದಲ್ಲಿ ಬರುವ ‘ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ’ ಎಂಬ ಹಾಡಂತೂ ಕೇಳುಗನ ಕಿವಿಯ ಮೂಲಕವೇ ನದಿಯ ಓಘವನ್ನು ಚಿತ್ರಿಸುತ್ತದೆ. ಈ ಹಿನ್ನೆಲಯಲ್ಲಿ ಕಾರಂತರು ಶಬ್ದವಿನ್ಯಾಸದ ಮೂಲಕವೇ ಕಟ್ಟಿದ ‘ಗೋಕುಲ ನಿರ್ಗಮನ’ ಸಹ ಪ್ರಮುಖ ಪ್ರಯೋಗ.

ಈ ಶಬ್ದವಿನ್ಯಾಸದಿಂದಾಗಿ ಕಾರಂತರ ನಾಟಕದ ಹಾಡುಗಳು ಅದೆಷ್ಟು ನೆನಪಲ್ಲಿ ಉಳಿಯಿತು ಎಂದರೆ, ಕಾಲಾಂತರದಲ್ಲಿ ರಂಗಸಂಗೀತ ಎಂಬುದು ಸುಗಮ ಸಂಗೀತದಷ್ಟೇ ಜನಪ್ರಿಯ ಪ್ರಾಕಾರವಾಗಿದೆ. ಇದು ಕಾರಂತ ಶಕ್ತಿ. ಈ ಕಾರಣಕ್ಕಾಗಿಯೇ ಇಂದಿಗೂ ಕಾರಂತರ ನಾಟಕಗಳ ಪುನರ್‌ಪ್ರದರ್ಶನ ಆದಾಗ ನೋಡುಗ ಆ ನಾಟಕದ ಪ್ರದರ್ಶನ ಶಕ್ತಿ ಸಡಿಲವಾಗಿದ್ದರೂ ಹಾಡುಗಳ ಮೂಲಕವೇ ಕಾರಂತರನ್ನು ಆಸ್ವಾದಿಸುತ್ತಾನೆ, ಕಾರಂತರು ಕಟ್ಟಿದ ಸಡಗರವನ್ನು ಆನಂದಿಸುತ್ತಾನೆ.

ಇವೆಲ್ಲಾ ಕಾರಣಗಳಿಂದಾಗಿಯೇ ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಕಾರಂತರ ಸಡಗರ ಸಾಯದೇ ಚಿರಂಜೀವವಾಗಿರುತ್ತದೆ. ಕಾರಂತರ ಅವಘಡಗಳು. ಇಷ್ಟೆಲ್ಲಾ ಸಂಭ್ರಮ ಸಡಗರಗಳನ್ನು ನಮ್ಮ ರಂಗಭೂಮಿಗೆ ಕೊಟ್ಟ ಕಾರಂತರು ಅನೇಕ ಅವಘಡಗಳನ್ನೂ ಮಾಡಿದ್ದಾರೆ. ಅವುಗಳಲ್ಲಿ ‘ರಂಗಾಯಣ’ ಒಂದು. ರಂಗಕಲಾವಿದರನ್ನು ಪೂರ್ಣಾವಧಿಗೆ ಎಂದು ತೆಗೆದುಕೊಂಡು ಕಾರಂತರು ‘ರಂಗಾಯಣ’ ಆರಂಭಿಸಿದಾಗ ಎಲ್ಲಾ ಪ್ರಯೋಗಗಳನ್ನೂ ಕಣ್ಣರಳಿಸಿ ನೋಡಿದ್ದ ಕನ್ನಡದ ಪ್ರೇಕ್ಷಕ, ಕಾರಂತರ ನಂತರ ಅದೇ ‘ರಂಗಾಯಣ’ ಬಿಳಿಯಾನೆ ಆಗಿರುವುದನ್ನೂ ನೋಡುತ್ತಾ ಇದ್ದಾನೆ. ‘ಹಸಿವು ಇದ್ದಾಗಲೇ ಒಳ್ಳೆಯ ಕಲೆ ಹುಟ್ಟುವುದು’ ಎನ್ನುತ್ತಿದ್ದ ಕಾರಂತರೇ ಹಸಿವೇ ಇಲ್ಲದಂತಹ ಕಲಾವಿದರ ದಂಡೊಂದನ್ನು ‘ರಂಗಾಯಣ’ದಲ್ಲಿ ಉಳಿಸಿ ಹೋಗಿದ್ದಾರೆ. ಆ ಕಲಾವಿದರಿಗೆ ಹೊಸ ನಾಟಕವನ್ನು ಮಾಡುವ ಉಮೇದೂ ಇದ್ದಂತಿಲ್ಲ. ಅವರು ಪಡೆಯುತ್ತಾ ಇರುವ ಸಂಬಳಕ್ಕೆ ಯೋಗ್ಯವಾದ ರಂಗ ಕೆಲಸಗಳನ್ನು ಮಾಡುವ ಉತ್ಸಾಹವೂ ಇದ್ದಂತಿಲ್ಲ. (ಆ ಕಲಾವಿದರ ತಂಡದಲ್ಲಿ ಈ ಮಾತಿಗೆ ಅಪವಾದ ಎಂಬಂತೆ ಕೆಲವರು ಇದ್ದಾರೆ. ಅಂತಹವರನ್ನು ಹೊರತುಪಡಿಸಿ, ಈ ಮಾತುಗಳನ್ನ ಸ್ವೀಕರಿಸಬೇಕಿದೆ.) ಇಂತಹದೊಂದು ರಂಗಾಯಣಕ್ಕೆ ಕಾರಂತರೇ ವಾರ್ಷಿಕ ಅನುದಾನ ಹೆಚ್ಚಾಗುವಂತೆ ಮಾಡಿದ್ದಾರೆ. ಈಗ ರಂಗಾಯಣವೂ ಪ್ರತೀ ವರ್ಷ ಮೂರು ಕೋಟಿಗಳಷ್ಟು ಹಣ ಪಡೆಯುತ್ತದೆ. ಆದರೆ ಆ ಹಣದಲ್ಲಿ ಮುಕ್ಕಾಲರಷ್ಟು ಕೇವಲ ಕಲಾವಿದರ ಮತ್ತು ಸಿಬ್ಬಂದಿಯ ಸಂಬಳಕ್ಕೆ ಹೋಗುತ್ತದೆ. ಹೀಗಾಗಿ ಇಂತಹದೊಂದು ಮುಂದಾಲೋಚನೆಯಿಲ್ಲದ ಸಂಸ್ಥೆಯನ್ನ ಕಾರಂತರು ಯಾಕೆ ಕಟ್ಟಿದರು ಎಂಬ ಪ್ರಶ್ನೆ ಉಳಿಯುತ್ತದೆ.

ಇಂತಹ ಮುನುಷ್ಯ ಸಹಜ ತಪ್ಪುಗಳ ನಡುವೆಯೇ ಕಾರಂತರು ನಮ್ಮ ನಡುವೆ ನಿರಂತರವಾಗಿ ಉಳಿಯುತ್ತಾರೆ, ಅವರ ರಂಗಸಂಗೀತದ ಮೂಲಕ, ಅವರ ರಂಗಪ್ರೀತಿಯ ಮೂಲಕ. ಒಟ್ಟಾರೆಯಾಗಿ ಹೇಳಬಹುದಾದ್ದಿಷ್ಟೆ ‘ಸಡಗರಕ್ಕೆ ಎಂದಿಗೂ ಸಾವಿಲ್ಲ! ಕಾರಂತರ ರಂಗಸಂಭ್ರಮಕ್ಕೂ ಸಾವು ಬಾರದು!’

* * *

Advertisements

2 Responses to “ಸಡಗರಕ್ಕೆ ಸಾವಿಲ್ಲ”


  1. 1 mandya ramesh September 8, 2011 at 5:32 am

    ADHBHTAVADA LEKHANA,,,,TUMBA VICHARATMAKAVAAGIDE..THANK U..

  2. 2 B.Suresha September 8, 2011 at 3:57 pm

    Thanks Ramaeshanna! Neenu sai andmEle naanu safeu!


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 44,440 ಜನರು

%d bloggers like this: