‘ನಾಕುತಂತಿ’ಯ ಸಾವಿತ್ರಮ್ಮ… ನಮ್ಮೆಲ್ಲರ ಪ್ರೀತಿಯ ಅಮ್ಮ (ಮಾಲತಿಶ್ರೀ ಮೈಸೂರು ಅವರ ಅಭಿನಯ-ಅನುಭವ ಕುರಿತ ಲೇಖನ)

‘ನಾಕುತಂತಿ’ಯ ಸಾವಿತ್ರಮ್ಮ… ನಮ್ಮೆಲ್ಲರ ಪ್ರೀತಿಯ ಅಮ್ಮ

(ಮಾಲತಿಶ್ರೀ ಮೈಸೂರು ಅವರ ಅಭಿನಯ-ಅನುಭವ ಕುರಿತ ಲೇಖನ)

– ಬಿ.ಸುರೇಶ

ಈ ಬದುಕು ಅನ್ನೋದು ಅಚ್ಚರಿಗಳ ಸಂತೆ. ಈ ಪ್ರಯಾಣದಲ್ಲಿ ಎದುರಾಗುವ ಅವಘಡಗಳೆಷ್ಟೋ ಅಪರೂಪಗಳೂ ಅಷ್ಟೇ ದೊಡ್ಡ ಸಂಖ್ಯೆಯದು.

ಆ ದಿನ ನಾನು ‘ಗುಪ್ತಗಾಮಿನಿ’ ಅನ್ನುವ ಧಾರಾವಾಹಿಗಾಗಿ ಸಂಭಾಷಣೆ ಹೆಣೆಯುತ್ತಿದ್ದೆ. ಆ ಧಾರಾವಾಹಿಯೋ ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿ ಜನಪ್ರಿಯವಾಗಿ ಹೋಗಿತ್ತು. ಯಾವುದಾದರೂ ವಿಷಯವಾಗಿರಲಿ, ಜನಪ್ರಿಯತೆ ಅನ್ನೋದಿದೆಯಲ್ಲಾ, ಅದು ನಮ್ಮ ಸುತ್ತಲ ಜನಗಳನ್ನೇ ನಮಗರ್ಥವಾಗದ ಸ್ಥಿತಿಗೆ ತಂದು ನಿಲ್ಲಿಸಿ ಬಿಡುತ್ತದೆ. ಆ ಧಾರಾವಾಹಿಯಲ್ಲಿಯೂ ಅದೇ ಆಯಿತು. ಜನಪ್ರಿಯತೆ ದೊರಕಿದಂತೆಯೇ ಆ ನಿರ್ಮಾಪಕರು ಮಾತಾಡುವ ಕ್ರಮ ಬದಲಾಯಿತು. ನಮ್ಮೊಡನೆ ಅವರ ವ್ಯವಹಾರದ ರೀತಿ ಹೊಸ ರೂಪ ಪಡೆದಿತ್ತು. ಕೆಲಸ ಮಾಡಿದವರನ್ನೆಲ್ಲಾ ಮರೆತು ಅವರೊಬ್ಬರೇ ಏನೇನೋ ಹೇಳಿಕೆ ಕೊಡಲು ಆರಂಭಿಸಿದರು. ನಾನು ಕಟ್ಟಿದ ತಂಡವನ್ನು ನನ್ನ ಎದುರಿಗೇ ಒಡೆಯಲು ಆರಂಭಿಸಿದರು. ಇಂತಹ ಸಂದರ್ಭದಲ್ಲಿ ನಾನು ಆ ತಂಡದ ಒಳಗಿರುವುದು ಸರಿಯಲ್ಲ ಎಂದು ಹೊರಗೆ ಬಂದೆ. ಆದರೆ ಆ ಧಾರಾವಾಹಿಗೆ ಬದಲಿ ಲೆಖಕರು ಸಿಗುವವರೆಗೆ ಚಿತ್ರಕತೆ/ಸಂಭಾಷಣೆ ಬರೆದುಕೊಡಲು ಒಪ್ಪಿಕೊಂಡಿದ್ದೆ. ಅಂತಹ ಒಂದು ದಿನ, ಆ ಧಾರಾವಾಹಿಗಾಗಿ ಸಂಭಾಷಣೆ ಬರೆಯುತ್ತಾ ಇರುವಾಗ ನನ್ನ ಗೆಳೆಯ ಸಕ್ಕರೆಬೈಲು ಶ್ರೀನಿವಾಸ ನನ್ನ ಕಛೇರಿಗೆ ಒಂದಷ್ಟು ಕಲಾವಿದರ ಫೋಟೊ ಹಿಡಿದು ಬಂದ. ಆತ ಕೊಟ್ಟ ಫೋಟೊಗಳಲ್ಲಿ ಇದ್ದ ಮೊದಲ ಫೋಟೋ ಮಾಲತಿಶ್ರೀ ಮೈಸೂರು ಅವರದ್ದಾಗಿತ್ತು. ವೃತ್ತಿ ನಾಟಕ ಕಂಪೆನಿಯ ಅನುಭವ ಇರುವ ಕಲಾವಿದೆ ಎಂದು ಫೋಟೊದ ಹಿಂದೆ ಬರೆಯಲಾಗಿತ್ತು. ಅದೇಕೋ ಆ ಫೋಟೊದಲ್ಲಿದ್ದ ವ್ಯಕ್ತಿಯ ಕಣ್ಣುಗಳು ನನ್ನನ್ನು ಕಾಡಿದವು. ಈ ವ್ಯಕ್ತಿಯ ನಟನೆಯ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲಾದರೂ ಇವರನ್ನು ಬಳಸಬೇಕು ಎಂದುಕೊಂಡೆ. ಆದರೆ ಆಗ ನಾನು ಬರೆಯುತ್ತಿದ್ದ ಧಾರಾವಾಹಿಯಲ್ಲಿ ಆ ಮುಖಕ್ಕೆ ತಕ್ಕುದಾದ ಪಾತ್ರ ಇರಲಿಲ್ಲ. ಸುಮ್ಮನಾದೆ.

ಅದಾಗಿ ಒಂದು ತಿಂಗಳಿಗೆ ನನ್ನ ಮತ್ತೊಂದು ಧಾರಾವಾಹಿ ‘ನಾಕುತಂತಿ’ಗೆ ರಹದಾರಿ ಸಿಕ್ಕಿತ್ತು. ಆ ಧಾರಾವಾಹಿಯ ಆರಂಭದ ದಿನಗಳಲ್ಲಿ ನನ್ನೊಂದಿಗೆ ಇದ್ದ ಮತ್ತೊಬ್ಬ ಗೆಳೆಯ ಏಣಗಿ ನಟರಾಜನ ಸಹಾಯದಿಂದ ಬೇಂದ್ರೆ ಅವರ ಪದ್ಯ ಬಳಸಲು ಅನುಮತಿ ಸಿಕ್ಕಿತ್ತು. ನಾನು ಏಣಗಿ ನಟರಾಜ ಇಬ್ಬರೂ ಧಾರವಾಡದ ಕೋರ್ಟ್ ಕ್ಯಾಂಟೀನಿನಲ್ಲಿ ಅವಲಕ್ಕಿ-ಮೊಸರು ತಿನ್ನುವಾಗಲೇ ಕತೆಯ ತಿರುಳನ್ನು ಮತ್ತು ಪಾತ್ರಧಾರಿಗಳನ್ನು ಕುರಿತು ಚರ್ಚಿಸತೊಡಗಿದೆವು. ಆಗ ಏಣಗಿ ನಟರಾಜ ಮತ್ತೆ ಮಾಲತಿಶ್ರೀ ಅವರ ಹೆಸರನ್ನು ಪ್ರಸ್ತಾಪಿಸಿದ. ಯಾವ ಪಾತ್ರಕ್ಕೆ ಮಾಲತಿಶ್ರೀ ಅವರು ಹೊಂದಬಹುದು ಎಂದು ವಿಸ್ತೃತವಾಗಿ ಚರ್ಚಿಸಿದೆವು. ಆಗ ನಾವು ಸಿದ್ಧಪಡಿಸಿಕೊಂಡಿದದ್ದು ಉತ್ತರ ಕರ್ನಾಟಕದಲ್ಲಿಯೇ ನಡೆಯುವಂತಹ ಕತೆ. ಅದರಲ್ಲಿನ ಒಂದು ಪಾತ್ರಕ್ಕೆ ಮಾಲತಿಶ್ರೀ ಅವರೇ ಸರಿ ಎಂದು ಗೊತ್ತುಪಡಿಸಿಕೊಂಡಿದ್ದೆವು.

ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ನಾವು ‘ನಾಕುತಂತಿ’ಯನ್ನ ಯಾವ ವಾಹಿನಿಗೆಂದು ಸಿದ್ಧಪಡಿಸಿದ್ದೆವೋ ಅದಕ್ಕೆ ಬದಲಾಗಿ ಮತ್ತೊಂದು ವಾಹಿನಿಗೆ ಅದೇ ಹೆಸರಿನ, ಆದರೆ ಬೇರೆಯ ಕತೆಯನ್ನು ಮಾಡಬೇಕು ಎಂಬ ಬದಲಾವಣೆ ಆಯಿತು. ಆವರೆಗೆ ಹಳ್ಳಿಯಲ್ಲಿ ಆಗಬೇಕಾಗಿದ್ದ ಕತೆಯು ಈಗ ನಗರದ ನಡುವೆ ಆಗಬೇಕೆಂದಾಯಿತು. ಈ ಬದಲಾವಣೆಯಿಂದಾಗಿ ಮತ್ತೆ ಮಾಲತಿಶ್ರೀ ಅವರಿಗೆ ಪಾತ್ರ ಇಲ್ಲದಂತಾಗಿತ್ತು. ಯಾಕೋ ನಾನು ಮೆಚ್ಚುವ ಕಲಾವಿದರೊಬ್ಬರಿಗೆ ಪಾತ್ರ ಕೊಡಲು ಆಗುತ್ತಿಲ್ಲವಲ್ಲ ಎಂದು ಬೇಸರವಾಗಿತ್ತು. ಹೊಸ ಕತೆ ಬರೆಯಲು ಕುಳಿತೆವು.

ಆಗ ಹುಟ್ಟಿದ ಕತೆಯೇ ತೆರೆಯಲ್ಲಿ ಸುಮಾರು ೧೪೦೦ ಕಂತುಗಳಷ್ಟು, ಅಂದರೆ ಸರಿ ಸುಮಾರು ಆರು ವರ್ಷಗಳ ಕಾಲ ಕನ್ನಡ ಜನಮಾನಸದ ಎದುರು ಗರಿಬಿಚ್ಚಿಕೊಂಡ ‘ನಾಕುತಂತಿ’. ಬೇಂದ್ರೆ ಅಜ್ಜನ ಹಾಡನ್ನು ಕನ್ನಡಿಗರ ಕಿವಿಗೆ ಮತ್ತೆ ಮತ್ತೆ ತಾಗಿಸಬೇಕೆಂದು ಹೊರಟವನಿಗೆ ಅಪರೂಪದ ಯಶಸ್ಸನ್ನು ಬೇಂದ್ರೆ ಅಜ್ಜನೇ ಕೊಟ್ಟಿದ್ದಿರಬೇಕು.

ಈ ಕತೆಯನ್ನು ಹೆಣೆಯುವಾಗಲೇ ಖಂಜೂಸ್ ಪ್ರಭು ಎಂಬ ಪಾತ್ರವೊಂದು ಹುಟ್ಟಿತು. ಇಂತಹ ಪಾತ್ರವನ್ನು ತೀವ್ರವಾಗಿ ಪ್ರೀತಿಸುವ ತಾಯಿಯೊಬ್ಬಳು ಬೇಕಿತ್ತು. ಆದರೆ ಕತೆ ಬೆಳೆದಂತೆ ಆ ಪಾತ್ರದ ಖಂಜೂಸ್‌ತನದಿಂದ ಆ ತಾಯಿಗೆ ಮಗನ ಮೇಲಿನ ವ್ಯಾಮೋಹ ಹೋಗಿ, ಆತನ ಮಗುವನ್ನ ಕಾಪಾಡುವುದು ನನ್ನ ಕರ್ತವ್ಯ ಎಂಬ ಸತ್ಯದ ಅರಿವಾಗಬೇಕಿತ್ತು. ಇದೊಂದು ವಿಶಾಲ ಹರಹಿನ ಪಾತ್ರ. ಈ ಪಾತ್ರಕ್ಕೆ ಗಟ್ಟಿ ಜೀವನಾನುಭವ ಇರುವ ಪಾತ್ರಧಾರಿಯ ಅಗತ್ಯವಿತ್ತು. ಆಗ ಮತ್ತೆ ಕಣ್ಣೆದುರಿಗೆ ಬಂದವರೇ ಮಾಲತಿಶ್ರೀ ಅವರು.

ಮಾಲತಿಶ್ರೀ ಅವರ ಜೀವನ ಯಾತ್ರೆ ಬೃಹತ್ತಾದ್ದು. ಎಲ್ಲೋ ಹುಟ್ಟಿ, ಹೇಗೋ ಬೆಳೆದು, ರಂಗಾನುಭವ ಪಡೆದು, ಸ್ವತಃ ರಂಗತಂಡ ಕಟ್ಟಿ, ಅದರ ಏಳು ಬೀಳುಗಳ ಹೊಡೆತಕ್ಕೆ ಜರ್ಜರಿತರಾಗಿದ್ದವರಾಕೆ. ಅಂತಹ ಒಬ್ಬ ಕಲಾವಿದರು ನನ್ನ ಧಾರಾವಾಹಿಯ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡರೆ ಅದರಿಂದ ಧಾರಾವಾಹಿಗೆ ಒಳಿತಾಗುತ್ತದೆ ಎಂದು ಮಾಲತಿಶ್ರೀ ಅವರನ್ನು ಸಂಪರ್ಕಿಸಿದೆವು. ಆಕೆ ಮರುಮಾತಾಡದೆ ಒಪ್ಪಿಕೊಂಡರು. ಅಲ್ಲಿಂದ ಶುರುವಾಯಿತು ಆರು ವರ್ಷಗಳ ಯಾತ್ರೆ. ೨೦೦೪ರ ಮಾರ್ಚ್ ೧೫ ರಿಂದ ೨೦೦೯ರ ಜೂನ್ ೧೨ರ ವರೆಗಿನ ಸುದೀರ್ಘ ಪಯಣ ಅದು. ಈ ಹಾದಿಯಲ್ಲಿ ಆದ ಅನುಭವಗಳೂ ಅನೇಕ. ಅವುಗಳಲ್ಲಿ ನಾನು ಮಾಲತಿಶ್ರೀ ಅವರಿಂದ ಗಳಿಸಿದ ಪ್ರೀತಿಯೂ ದೊಡ್ಡದು.

ಇಡೀ ತಂಡ ಮಾಲತಿಶ್ರೀ ಅವರನ್ನು ಅಮ್ಮಾ ಎನ್ನುತ್ತಿತ್ತು. ಎಲ್ಲರನ್ನು ಪ್ರೀತಿಯಿಂದ ಮಾತಾಡಿಸುವ ಈ ಅಮ್ಮನಿಗೆ ಸಹಾಯ ಮಾಡುವವರೂ ಅನೇಕ. ನಮ್ಮೆಲ್ಲರ ತಮಾಷೆಗಳಿಗೆ ನಗುತ್ತಾ, ನಮ್ಮ ಉದ್ವೇಗದ ಕ್ಷಣಗಳಲ್ಲಿ ಎಲ್ಲರನ್ನೂ ತಣ್ಣಗಿಡುತ್ತಾ ನಿಜವಾಗಿಯೂ ಇಡೀ ತಂಡಕ್ಕೆ ಅಮ್ಮನಾಗಿದ್ದವರು ಮಾಲತಿಶ್ರೀ ಅವರು. ಹೀಗಾಗಿಯೇ ‘ನಾಕುತಂತಿ’ಯ ನಡೆಯಲ್ಲಿ ಆಗೀಗ ಎದುರಾಗುತ್ತಿದ್ದ ಅಪರೂಪದ ಪ್ರಸಂಗಗಳನ್ನು ನಿಭಾಯಿಸುವುದೂ ಸಹ ನಮಗೆಲ್ಲರೀಗೂ ಸುಲಭವಾಗಿತ್ತು. ದಿಢೀರನೆ ಪಾತ್ರವೊಂದನ್ನ ಅಭಿನಯಿಸುತ್ತಿದ್ದವರು ಇನ್ನು ನಾನು ಬರುವುದಿಲ್ಲ ಎಂದ ಪ್ರಸಂಗದಿಂದ ಮೊಮ್ಮಗುವಿನ ಪಾತ್ರಧಾರಿ ಕತೆ ಸಾಗುವ ಹಾದಿಯಲ್ಲೇ ದೊಡ್ಡದಾಗುವರೆಗಿನ ಅನೇಕ ಪ್ರಸಂಗಗಳನ್ನು ಮಾಲತಿಶ್ರೀ ಅವರು ತಮ್ಮ ಅನುಭವದ ಧಾರೆಯಿಂದ ನಿಭಾಯಿಸಿದ್ದನ್ನು ಕಂಡಿದ್ದೇವೆ. ಈ ಮಧ್ಯೆ ಆಕೆಯ ಮಗಳ ಪಾತ್ರ ನಿರ್ವಹಿಸುತ್ತಿದ್ದ ಹುಡುಗಿಯ ಬದುಕಿನಲ್ಲಿ ಆದ ಸಣ್ಣ ತಲ್ಲಣಗಳನ್ನು ಸಹ ನಮಗ್ಯಾರಿಗೂ ತಿಳಿಸದೆ ಮಾಲತಿಶ್ರೀ ಅವರು ಸ್ವತಃ ನಿಭಾಯಿಸಿ, ಆ ಹುಡುಗಿಯ ಬದುಕಿಗೆ ದಾರಿ ತೋರಿದ್ದನ್ನು ಕೇಳಿದ್ದೇವೆ. ಈ ಎಲ್ಲಾ ಕಾರಣಕ್ಕಾಗಿಯೇ ನಾವು ಮಾಲತಿಶ್ರೀ ಅವರನ್ನು ‘ಅಮ್ಮ’ ಎಂದು ಕರೆಯುತ್ತಾ ಇದ್ದೆವು.

ಇಷ್ಟೆಲ್ಲದರ ಆಚೆಗೆ ಮಾಲತಿಶ್ರೀ ಅವರು ನಟಿಯಾಗಿ ಈ ಪಾತ್ರಕ್ಕೆ ಜೀವ ತುಂಬಿದ ವಿವರವನ್ನು ಹೇಳಬೇಕು. ‘ನಾಕುತಂತಿ’ಯ ಸಾವಿತ್ರಮ್ಮ ಕತೆಯ ಆರಂಭದಲ್ಲಿ ತಾನೇ ಜಗತ್ತನ್ನು ಗೆದ್ದಿರುವವಳು, ತನ್ನ ಬದುಕೇ ಅತೀ ಸುಂದರ ಎಂದು ಬೀಗುವವಳು. ಹೀಗಾಗಿ ಅವಳಿಗೆ ತನ್ನ ಮಗನ ತಪ್ಪುಗಳು ಕಾಣುವುದೇ ಇಲ್ಲ. ಅದರಿಂದಾಗಿ ಸೊಸೆ ಅನುಭವಿಸುವ ಕಷ್ಟಗಳಿಗೆ ಆಕೆ ಕುರುಡಿಯಾಗಿಯೇ ಇರುತ್ತಾಳೆ. ಈ ಕಥನದ ಅವಧಿಯಲ್ಲಿ ಹಮ್ಮು ತುಂಬಿದ ಹಿರಿಯಳಾಗಿ ಅಭಿನಯ ನೀಡಬೇಕಿತ್ತು. ಅದಕ್ಕಾಗಿ ತಮ್ಮ ದಿರಿಸಿನ ಕ್ರಮವನ್ನು ತಾವೇ ವಿನ್ಯಾಸ ಮಾಡಿಕೊಂಡ ಮಾಲತಿಶ್ರೀ ಅವರು ಕ್ಯಾಮೆರಾ ಎದುರು ಚಿನ್ನದ ಫ್ರೇಮಿನ ಕನ್ನಡಕ ಹಾಕಿ ನಿಂತಾಗ ನಾವೆಲ್ಲರೂ ಅಚ್ಚರಿಯಿಂದ ನೋಡಿದ್ದೆವು. ಆ ಹಂತದಲ್ಲಿ ತಮ್ಮ ಪಾತ್ರಕ್ಕೆ ಕ್ಯಾರಿಕೇಚರ್ ವಿವರ ತುಂಬಲು ‘ಓಂ ಸಾಯಿರಾಂ’ ಎಂಬ ಕೀಲೈನ್ ಒಂದನ್ನು ಸಹ ಮಾಲತಿಶ್ರೀ ಅವರು ನೀಡಿದ್ದರು. ಜೊತೆಗೆ ಕೈಯಲ್ಲೊಂದು ಜಪಮಾಲೆ. ಇವುಗಳಿಂದ ಮಧ್ಯಮವರ್ಗದ ಮನೆಯೊಳಗಡೆಯೇ ಹಮ್ಮಿನ ಹೆಂಗಸನ್ನು ಸೃಷ್ಟಿಸುವುದು ಸಾಧ್ಯವಾಗಿತ್ತು. ಇದೆ ಕತೆಯ ಎರಡನೆಯ ಹಂತದಲ್ಲಿ ಮಗನ ಖಂಜೂಸ್‌ತನದಿಂದ ಸೊಸೆ ಮತ್ತು ಆಕೆಯ ಗಂಡ ಮನೆಯಾಚೆಗೆ ಹೋಗುತ್ತಾರೆ. ಆಗ ದೊಡ್ಡ ಮನೆಯಲ್ಲಿ ಒಂಟಿಯಾಗುವ ಸಾವಿತ್ರಮ್ಮನ ಪಾತ್ರಕ್ಕೆ ಸಂಕಟಗಳಾಗುತ್ತವೆ. ಇದು ಆ ಪಾತ್ರದ ಪಯಣದಲ್ಲಿ ಬರುವ ಮೊದಲ ಪಲ್ಲಟ. ಆ ಪಾತ್ರವು ಪ್ರೀತಿಯನ್ನು ಅರಸುತ್ತಾ ಸಾಗುತ್ತದೆ. ಈ ಸನ್ನಿವೇಶಗಳಲ್ಲಿ ಮಾಲತಿಶ್ರೀ ಅವರ ಅಭಿನಯ ಅಪರೂಪದ್ದಾಗಿತ್ತು. ಇಲ್ಲಿ ಆ ಪಾತ್ರದ ಒಳಗಡೆಗೆ ಸಂಕಟವಿದೆ, ಅಳುವಿದೆ. ಆದರೆ ಅದನ್ನು ಹೊರಗೆ ತೋರಿಸಲಾಗದ ತೋರ್ಪಡಿಕೆಯೇ ಹಮ್ಮು ಇದೆ. ಇಂತಹದೊಂದು ಸನ್ನಿವೇಶದ ನಿಭಾವಣೆ ಸುಲಭವಲ್ಲ. ಮಾಲತಿಶ್ರೀ ಅವರು ತಮ್ಮ ಅನುಭವದಿಂದಲೇ ಈ ಸನ್ನಿವೇಶವನ್ನುನ ಕಟ್ಟಿಕೊಟ್ಟರು.

ಆ ನಂತರದಲ್ಲಿ ಸಾವಿತ್ರಮ್ಮನ ಪಾತ್ರ ಗಂಡ ಇರುವಲ್ಲಿಯೇ ತಾನೂ ಇರುತ್ತೇನೆ ಎಂದು ಮಗನನ್ನು ತೊರೆದು ಸೊಸೆಯ ಮನೆಗೆ ಬರುತ್ತದೆ. ಈ ಹಂತದಲ್ಲಿ ಅಜ್ಜಿಗೂ ಮೊಮ್ಮಗಳಿಗೂ ಅರಳುವ ಪ್ರೀತಿಯ ವಿವರಗಳು ವಿಶಿಷ್ಟವಾದಂತಹವು. ಇದೊಂದು ಸ್ಟಿರಿಯೋ ಟೈಪ್ ಸ್ಥಿತಿಯೇ. ಈ ಹಂತದ ನಂತರ ಸೊಸೆಯನ್ನು ಮಗನೇ ಕೊಲ್ಲುವ ಹಂತಕ್ಕೆ ಸಾಗಬೇಕಿತ್ತು. ಹಾಗಾಗಿ ಕತೆಯೊಳಗೆ ಇಂತಹ ತೆಳು ವಿವರವನ್ನು ಇರಿಸುವುದು ಅನಿವಾರ್ಯವಾಗಿತ್ತು. ಆದರೆ ಇಂತಹ ವಿವರವನ್ನೂ ಸಹ ಮಾಲತಿಶ್ರೀ ಮತ್ತು ಅವರ ಪತಿಯ ಪಾತ್ರ ಮಾಡುತ್ತಿದ್ದ ಗೋವಿಂದರಾಜ್ ಅವರು ಸುಂದರವಾಗಿಸಿದರು. ನಂತರದ ಹಂತದಲ್ಲಿ ತಾಯಿಯನ್ನು ಕಳೆದುಕೊಂಡ ಮೊಮ್ಮಗಳಿಗೆ ಅಜ್ಜ-ಅಜ್ಜಿಯೇ ಅಪ್ಪ-ಅಮ್ಮನಾಗುವ ವಿವರಬರುತ್ತದೆ. ಅದು ಉದಾತ್ತತೆಯ ಪರಾಕಾಷ್ಠೆ. ಅಲ್ಲಿ ಮೊಮ್ಮಗಳಿಗಾಗಿ ಮರುಗುವ ಅಜ್ಜಿಯಾಗಿ ಮಾಲತಿಶ್ರೀ ಅವರ ಅಭಿನಯ ಸ್ಮರಣೀಯವಾದದ್ದು. ಈ ಹಂತದಲ್ಲಿ ಮಗ ಎರಡನೇ ಮದುವೆಗೆ ನಿಂತಾಗ ತಾಯಿಯೇ ವಿರೋಧಿಸುತ್ತಾಳೆ. ಆದರೆ ಮಗನ ಅಧಿಕಾರವಾಣಿಯಿಂದಾಗಿ ಏನನ್ನೂ ಮಾಡಲಾಗದ ಅಸಹಾಯಕತೆ ಆಕೆಯನ್ನು ಕಾಡುತ್ತದೆ. ಕಡೆಗೆ ಅಜ್ಜಿಯೇ ನಿಂತು ಮೊಮ್ಮಗಳಿಗೂ ಮತ್ತು ಮಲತಾಯಿಗೂ ಪ್ರೀತಿ ಹುಟ್ಟುವಂತೆ ಮಾಡುತ್ತಾಳೆ. ಈ ಸನ್ನಿವೇಶಗಳಲ್ಲಿ ಮಾಲತಿಶ್ರೀ ಅವರ ಅಭಿನಯವನ್ನು ನಾನು ಎಂದಿಗೂ ಮರೆಯಲಾರೆ. ತಾನು ಒಪ್ಪದ ಸಂಬಂಧವನ್ನು ತನ್ನ ಮೊಮ್ಮಗಳ ಜೊತೆಗೆ ಕೂಡಿಸಿಕೊಡುವ ಪ್ರಯತ್ನ ಮಾಡುವುದು ಸುಲಭವಲ್ಲ. ಲೇಖಕನಾಗಿ ಏನೇ ಬರೆದರೂ ಅದು ಪ್ರೇಕ್ಷಕರಿಗೆ ನಿಜ ಎಂಬಂತೆ ತಲುಪುವುದು ಸುಲಭವಲ್ಲ. ಮಾಲತಿಶ್ರೀ ಅವರ ಅಭಿನಯದಿಂದಾಗಿ ಈ ಹಂತದಲ್ಲಿನ ದೃಶ್ಯಗಳು ಸಹ್ಯವಾದವು ಎಂದರೆ ತಪ್ಪಾಗಲಾರದು.

‘ನಾಕುತಂತಿ’ಯ ಉದ್ದಕ್ಕೂ ಇಂತಹ ಅನೇಕ ಘಟ್ಟಗಳಿವೆ. ಸ್ವಂತ ಮಗನೇ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು, ಮೊಮ್ಮಗಳು ತನ್ನ ತಂದೆಯನ್ನ ಕೊಲ್ಲುವ ಪ್ರಯತ್ನ ಮಾಡುವುದು ಮುಂತಾದ ಅಪರೂಪದ ಸನ್ನಿವೇಶಗಳಲ್ಲಿ ಮಾಲತಿಶ್ರೀ ಅವರ ಪ್ರಬುದ್ಧತೆ ಕಥಾನಿರೂಪಣೆಗೆ ಸಹಾಯ ಮಾಡಿದೆ. ಇನ್ನು ‘ನಾಕುತಂತಿ’ಯ ಅಂತಿಮ ಘಟ್ಟಗಳಲ್ಲಿ ಗಂಡನನ್ನೂ ಕಳೆದುಕೊಂಡ ವೃದ್ಧೆ ತನ್ನ ಜೀವನೋಪಾಯಕ್ಕೆ ಯಾವುದೋ ರಾಜಕಾರಣಿಯ ಮನೆಯಲ್ಲಿ ಅಡಿಗೆಯವಳಾಗಿ ಸೇರುವ ಮತ್ತು ಅದನ್ನು ಅಪಾರ್ಥ ಮಾಡಿಕೊಂಡ ಮೊಮ್ಮಗಳು ಆ ರಾಜಕಾರಣಿಯ ಮನೆಯ ಮುಂದೆ ಧರಣಿ ಕೂರುವ ವಿವರಗಳು ಬರುತ್ತವೆ. ಈ ಹಂತದಲ್ಲಿ ಆ ರಾಜಕಾರಣಿಯ ಎದುರಿಗೆ ನಡೆಯುವ ಮಾತಿನ ದೃಶ್ಯದಲ್ಲಿ ಮಾಲತಿಶ್ರೀ ಅವರ ಅಭಿನಯ ಪ್ರೇಕ್ಷಕರ ಮನಗೆದ್ದಿತ್ತು.

ಹೀಗೇ ಈ ಧಾರಾವಾಹಿಯ ಉದ್ದಕ್ಕೂ ಮಾಲತಿಶ್ರೀ ಅವರ ಅತ್ಯುತ್ತಮ ಅಭಿನಯದ ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. ಆದರೆ ಇಷ್ಟಂತೂ ಸತ್ಯ. ನಮ್ಮಲ್ಲಿ ಸ್ವಚ್ಛ ಕನ್ನಡ ಮಾತಾಡುವ ಕಲಾವಿದರ ಕೊರತೆ ದೊಡ್ಡದು. ಜೊತೆಗೆ ಪಾತ್ರದ ಆಳ-ವಿಸ್ತಾರಗಳನ್ನು ಗ್ರಹಿಸಿ ಅಭಿನಯಿಸುವ ಶಕ್ತಿಯುಳ್ಳ ಕಲಾವಿದರ ಕೊರತೆಯೂ ದೊಡ್ಡದು. ಈ ನಿಟ್ಟಿನಲ್ಲಿ ಮಾಲತಿಶ್ರೀ ಅವರು ದೊರೆತಿರುವುದು ಪೋಷಕ ಪಾತ್ರಗಳಿಗೆ ದೊಡ್ಡ ಜೀವ ಸಿಕ್ಕಂತಾಗಿದೆ. ಅವರ ರಂಗಾನುಭವದಿಂದಾಗಿ ಕಿರುತೆರೆ ಮತ್ತು ಹಿರಿತೆರೆಗಳೆರಡೂ ಲಾಭ ಪಡೆಯುತ್ತಿವೆ. ಮಾಲತಿಶ್ರೀ ಅವರು ಹೀಗೆಯೇ ಬಹುಕಾಲ ನಮ್ಮೊಡನಿದ್ದು ನಮ್ಮ ಕನಸುಗಳಿಗೆ ‘ಅಮ್ಮ’ನಾಗಿರಲಿ ಎಂದು ಹಾರೈಸುತ್ತೇನೆ.

* * *

Advertisements

0 Responses to “‘ನಾಕುತಂತಿ’ಯ ಸಾವಿತ್ರಮ್ಮ… ನಮ್ಮೆಲ್ಲರ ಪ್ರೀತಿಯ ಅಮ್ಮ (ಮಾಲತಿಶ್ರೀ ಮೈಸೂರು ಅವರ ಅಭಿನಯ-ಅನುಭವ ಕುರಿತ ಲೇಖನ)”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: