ತರವಲ್ಲ ತಗಿ ನಿನ್ನ ತಂಬೂರಿ ಸ್ವರ…

ಸಿ.ಅಶ್ವತ್ಥ್ ಒಂದು ನೆನಪು (ಛಾರ್ಜ್‌ಷೀಟ್ ಪತ್ರಿಕೆಗಾಗಿ ಬರೆದ ಲೇಖನ)

ಆಗ ನಾವೆಲ್ಲಾ ಸಣ್ಣ ಹುಡುಗರು. ನಾಟಕ-ಸಿಮಾ ನೋಡಿ ಅರ್ಥ ಮಾಡಿಕೊಳ್ಳುವಷ್ಟು ತಿಳುವಳಿಕೆ ಇರಲಿಲ್ಲ. ಆದರೆ ಹಾಡು ಕೇಳುವ ಮತ್ತು ಜೊತೆಗೂಡಿ ಹಾಡುವ ಹುಚ್ಚು ಇತ್ತು ನಮಗೆ. ಹಾಡುತ್ತಾ ಕುಳಿತರೆ ಲೋಕ ಮರೆಯುವ ಅಭ್ಯಾಸ ಆಗಿತ್ತು. ಅದು ಎಪ್ಪತ್ತರ ದಶಕದ ಮೊದಲರ್ಧ. ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಾಕನಕೋಟೆ’ ನಾಟಕ. ನಾವು ಹುಡುಗರೆಲ್ಲರೂ ಈ ನಾಟಕದ ಹಾಡುಗಳನ್ನ ಅದಾಗಲೇ ಕೇಳಿದ್ದೆವು. ನಾಟಕವನ್ನೇ ನೋಡುವ ಅವಕಾಶ ಸಿಕ್ಕಾಗ ಎಲ್ಲರೂ ಒಟ್ಟಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ಹೋದೆವು. ನಾಟಕದ ಕಥೆ, ಮೈಸೂರಿನ ಇತಿಹಾಸ ಇತ್ಯಾದಿಗಳು ನಮಗೆ ತಿಳಿಯಲಿಲ್ಲ. ಆದರೆ ನಾಟಕದಲ್ಲಿ ಇದ್ದ ಅಷ್ಟೂ ಹಾಡುಗಳೂ ನಮ್ಮ ಕಿವಿಯೊಳಗೆ ತುಂಬಿದ್ದವು. ‘ನೇಸರಾ.. ನೋಡು…’, ‘ಕರಿಹೈದನೆಂಬೋನು…’ ಮುಂತಾದ ಹಾಡುಗಳು ನಾಟಕ ಮುಗಿವ ಹೊತ್ತಿಗೆ ನಮ್ಮ ಗಂಟಲಿನಲ್ಲೂ ಇಳಿದಿದ್ದವು. ಸುಮಾರು ದಿನಗಳವರೆಗೆ ಮನೆಯಲ್ಲಿ ನಾನು ಆ ಹಾಡುಗಳನ್ನ ಗಂಟಲು ಬಿಚ್ಚಿ ಹಾಡುತ್ತಿದ್ದೆ. ಅಕ್ಕಪಕ್ಕದ ಮನೆಯವರೂ ಸಹ ನನ್ನ ಗದ್ದಲ ಕೇಳಿ ‘ಯಾವುದೋ ಈ ಅಪಸ್ವರಾ?’ ಎಂದು ಬೈಯ್ಯುತ್ತಾ ಇದ್ದರು. ಆದರೆ ನನಗೆ ಆ ಹಾಡುಗಳು ಮತ್ತು ಹಾಡುಗಾರ ಭಾರಿ ಇಷ್ಟವಾಗಿದ್ದರು. ಅಂದು ನಾಟಕದಲ್ಲಿ ಮೇಳದಲ್ಲಿ ಕೂತು ಹಾಡುಗಳನ್ನ ಹೇಳಿದ್ದವರು ಸಿ.ಅಶ್ವತ್ಥ್ ಎಂದು ನಂತರ ತಿಳಿಯಿತು. ಆ ಹಾಡುಗಳು ಕನ್ನಡ ರಂಗಸಂಗೀತದ ಇತಿಹಾಸದಲ್ಲಿ ಅಜರಾಮರ ಸ್ಥಾನವನ್ನೂ ಪಡೆದವು. ಆದರೆ ಇಂದಿಗೂ ನನ್ನ ಬಾಲ್ಯದ ನೆನಪಾಗಿ, ನಾನು ಕುಣಿಯುತ್ತಾ ಹಾಡುತ್ತಿದ್ದ ‘ಕರಿಹೈದನೆಂಬೋನು ಮಾದೇಸ್ವರಾ! ಮಾದೇಸ್ವರಗೆ ಸರಣು ಮಾದೇಸ್ವರಾ!’ ಕಣ್ಣ ಮುಂದಿದೆ.

ಅಂದು ಹಾಡಿದ ಸಿ.ಅಶ್ವತ್ಥ್ ನನಗೆ ಪರಿಚಿತರಾಗಿರಲಿಲ್ಲ. ಆದರೆ ಅವರ ಸಂಗೀತ ಯಾತ್ರೆಯ ಅನೇಕ ಹಾಡುಗಳು ನನಗೆ ಆಗಿಂದಾಗ್ಗೆ ಕೇಳುತ್ತಾ ಇದ್ದವು. ಪಿ.ಶ್ರೀನಿವಾಸ್ ‘ಸ್ಪಂದನ’ ಸಿನಿಮಾಗಾಗಿ ಅವರು ಸಂಯೋಜಿಸಿದ್ದ ‘ಎಲ್ಲಾ ಮರುಳಯ್ಯಾ ಇದು ಎಲ್ಲಾ ಮರುಳು’ ಹಾಡಂತೂ ನಮ್ಮನ್ನು ಮರುಳು ಮಾಡಿತ್ತು. ಆಗಷ್ಟೇ ಹಿಂದೂಸ್ಥಾನೀ ಸಂಗೀತ ಕಲಿಯಲು ಆರಂಭಿಸಿದ್ದ ನನಗೆ ಸೂಫಿ ಸಂಗೀತವನ್ನು ಪರಿಚಯಿಸಿದ ಹಾಡು ಇದು. ಅಲ್ಲಿಂದಾಚೆಗೆ ಸಿ.ಅಶ್ವತ್ಥ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಎಲ್ಲಾ ಕ್ಯಾಸೆಟ್‌ಗಳನ್ನು (ನಂತರದ ದಿನಗಳಲ್ಲಿ ಸಿಡಿಗಳನ್ನು) ಕೊಂಡು ಕೇಳಲಾರಂಭಿಸಿದೆವು. ಶಿಶುನಾಳ ಶರೀಫನಂತಹ ಅಪರೂಪದ ಕನ್ನಡ ತತ್ವಪದಕಾರರನ್ನು ನಮಗೆಲ್ಲಾ ಪರಿಚಯಿಸದವರೇ ಅಶ್ವತ್ಥ್ ಅವರು. ಇಂದಿಗೂ ಆ ಧ್ವನಿಸುರುಳಿಗಳಲ್ಲಿ ಕೇಳಿದ ಹಾಡುಗಳು ನನ್ನ ನೆನಪಲ್ಲಿವೆ. ಆಗ ನಾವು ಹುಡಗರೆಲ್ಲಾ ಯಾವುದಾದರೂ ಊರಿಗೆ ಹೊರಟರೆ ಹಾದಿಯುದ್ದಕ್ಕೂ ಅಶ್ವತ್ಥ್ ಅವರ ಸಂಯೋಜನೆಯ ಹಾಡುಗಳದ್ದೇ ಸಂತೆ. ಹಾಗೆ ನಮ್ಮನ್ನೆಲ್ಲಾ ಆವರಿಸಿಕೊಂಡ ಅಶ್ವತ್ಥ್ ಅವರು ಕನ್ನಡಕ್ಕೆ ಕೊಟ್ಟ ದೊಡ್ಡ ಕೊಡುಗೆಯೇ ಇದು. ಅವರಿಂದಾಗಿ ಕನ್ನಡದ ಅನೇಕ ಕವಿಗಳ ಸಾಹಿತ್ಯ ಹೊಸ ತಲೆಮಾರಿನ ಹುಡುಗರಿಗೆ ತಲುಪಿತು. ನಾನು ಓದು ಮುಗಿಸಿ, ಫ್ಯಾಕ್ಟರಿ ಸೇರಿದಾಗಲೂ ನನ್ನ ಕಿವಿಗೆ ಮತ್ತೆ ಮತ್ತೆ ಬೀಳುತ್ತಾ ಇದ್ದದ್ದು ಸಿ.ಅಶ್ವತ್ಥ್ ಅವರ ಹಾಡುಗಳೇ. ಅವರು ವೈದಿ ಅವರ ಜೊತೆಗೆ ಸೇರಿಕೊಂಡು ಮಾಡಿದ ಹಾಡುಗಳು ಆವರೆಗಿನ ಸಿನಿಮಾ ಸಂಗೀತಕ್ಕೆ ಹೊಸ ಶೈಲಿಯನ್ನು ಕೊಟ್ಟಿದ್ದವು. ಅವರ ಸಂಗೀತದ ‘ನಾರದ ವಿಜಯ’ ಮುಂತಾದ ಸಿನಿಮಾಗಳು ಕೇವಲ ಹಾಡುಗಳಿಂದಾಗಿಯೇ ಇಂದಿಗೂ ಅನೇಕರ ನೆನಪಲ್ಲಿವೆ.

*
ಇಂತಹ ಅಶ್ವತ್ಥ್ ಅವರು ಡಿಸೆಂಬರ್ ತಿಂಗಳ ೨೯ನೇ ತಾರೀಖು ತಮ್ಮ ಹುಟ್ಟುಹಬ್ಬದ ದಿನವೇ ನಮ್ಮನ್ನೆಲ್ಲಾ ಅಗಲಿ ದೂರದೂರಿಗೆ ಹೊರಟರು. ಆ ಹೊತ್ತಿಗೆ ಅವರು ಅಸ್ವಸ್ಥರಾಗಿದ್ದಾರೆ, ತೀವ್ರನಿಗಾ ಘಟಕದಲ್ಲಿದ್ದಾರೆ ಎಂಬ ಸುದ್ದಿ ಬರುತ್ತಲೇ ಇತ್ತು. ಆದರೆ ಅಶ್ವತ್ಥ್ ಅವರು ಗೆದ್ದುಬರುತ್ತಾರೆ, ಮತ್ತೆ ಹಾಡುತ್ತಾರೆ ಎಂಬ ನಂಬಿಕೆ ಇತ್ತು. ಹಾಗಾಗಲಿಲ್ಲ. ಹಿಂದಿನ ದಿನವಷ್ಟೇ ನಾವು ಗೆಳೆಯರೆಲ್ಲಾ ಸೇರಿ ಮಾತಾಡುವಾಗಲೂ ನನ್ನ ಜೊತೆಗಿದ್ದವರು ಅಶ್ವತ್ಥ್ ಅವರ ಸ್ಥೈರ್ಯವನ್ನ ಮತ್ತು ಏನನ್ನಾದರೂ ಸಾಧಿಸಲು ನಿಂತಾಗ, ಕೆಲಸ ಮುಗಿಯುವವರೆಗೆ ಬಿಡದೆ ಹಠಕ್ಕೆ ಬಿದ್ದಂತೆ ನಿಲ್ಲುತ್ತಿದ್ದ ಕ್ರಮವನ್ನು ಕುರಿತು ಮಾತಾಡಿದ್ದೆವು. ಆದರೆ ಮಾರನೆಯ ದಿನವೇ, ಅದು ಅವರ ಎಪ್ಪತ್ತನೆಯ ಹುಟ್ಟುಹಬ್ಬವನ್ನು ಗಾಯನದಲ್ಲಿ ಆಚರಿಸಲೆಂದು ಎಲ್ಲರೂ ಸಿದ್ಧವಾಗುತ್ತಿದ್ದ ಕ್ಷಣದಲ್ಲಿಯೇ ಅಶ್ವತ್ಥ್ ಅವರು ಇಹಲೋಕ ಯಾತ್ರೆ ಮುಗಿಸಿದ್ದರು.
ಲಿವರ್ ಸಿರೋಸಿಸ್ ಎಂಬ ಕಾಯಿಲೆ ಅದು. ವರ್ಷದ ಆರಂಭದಲ್ಲಿ ನನ್ನ ಆತ್ಮೀಯ ಗೆಳೆಯ ರಾಜು ಅನಂತಸ್ವಾಮಿಯನ್ನು ಕೊಂಡೊಯ್ದಿದ್ದ ಅದೇ ಕಾಯಿಲೆ ಮತ್ತೊಬ್ಬ ಹಾಡುಗಾರ ಅಶ್ವತ್ಥ್ ಅವರನ್ನೂ ಕೊಂಡೊಯ್ದು ಬಿಟ್ಟಿತು.

*
ನನಗೆ ಅಶ್ವತ್ಥ್ ಅವರ ವೈಯಕ್ತಿಕ ಪರಿಚಯವಾಗಿದ್ದು ‘ಶಂಖನಾದ’ ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ನಿರ್ದೇಶನ ಸಹಾಯಕನಾಗಿದ್ದೆ, ಕೆಲಕಾಲ ಮಾತ್ರ. ಆ ಹಂತದಲ್ಲಿ ಹಾಡುಗಳ ಸಂಯೋಜನೆ ಮಾಡುವಾಗ ಸಿ.ಅಶ್ವತ್ಥ್ ಅವರ ನೇರ ಪರಿಚಯವಾಗಿತ್ತು. ಸ್ವಲ್ಪ ಕೋಪಿಷ್ಟರಂತೆ ಕಾಣುತ್ತಿದ್ದ ಆತ ನನಗೆ ಹತ್ತಿರವಾಗಲಿಲ್ಲ. ಆನಂತರ ನಾನು ಸಿನಿಮಾ ರಂಗಕ್ಕೆ ಪೂರ್ಣಾವಧಿಗೆ ದುಡಿಯಲು ತೊಡಗಿದರೂ ಸಿ.ಅಶ್ವತ್ಥ್ ಅವರ ಜೊತೆಗೆ ಆತ್ಮೀಯ ಒಡನಾಟ ಸಾಧ್ಯವಾಗಿದ್ದು ‘ನಾಗಮಂಡಲ’ ನಾಟಕ ಮಾಡುವಾಗ. ಆ ನಾಟಕದಲ್ಲಿ ನಾನು ಬೊಂಬೆಗಳನ್ನು ಆಡಿಸುತ್ತಿದ್ದೆ. ಅದೇ ನಾಟಕಕ್ಕೆ ಸಿ.ಅಶ್ವತ್ಥ್ ಅವರು ಸಂಗೀತ ಸಂಯೋಜನೆಯನ್ನು ಮಾಡಿದ್ದರು. ಆ ಹಾಡುಗಳನ್ನು ಮೇಳದವರಿಗೆ ಕಲಿಸುವಾಗ ಅಶ್ವತ್ಥ್ ಅವರ ಜೊತೆಗೆ ಅನೇಕ ಕಾಲ ಕಳೆಯುವುದು ಸಾಧ್ಯವಾಗಿತ್ತು. ಆತ ಮೊದಲು ಕಂಡಾಗ ಕೋಪಿಷ್ಟರಂತೆ ಕಂಡಿದ್ದರೂ ಎಂದೆನೆಲ್ಲಾ ಈ ನಾಟಕದಿಂದಾಚೆಗೆ ಅವರು ನನ್ನ ಆತ್ಮೀಯರಲ್ಲಿ ಒಬ್ಬರಾದರು. ಆಗಾಗ ನಾವು ಒಬ್ಬರನ್ನೊಬ್ಬರು ಎಡತಾಕುತ್ತಿದ್ದೆವು. ಸಿನಿಮಾ-ನಾಟಕ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೆವು. ಅವರದು ತೀರಾ ಆರ್‌ಎಸ್‌ಎಸ್ ಮನಸ್ಸು. ಅವರು ಆ ಸಂಘಟನೆಗಾಗಿ ದುಡಿದವರೂ ಹೌದು. ಹೀಗಾಗಿ ನನಗೂ ಅವರಿಗೂ ಅನೇಕ ಸಲ ಜಗಳಗಳಾಗಿದ್ದವು. ಬಾಬರಿ ಮಸೀದಿಯನ್ನು ಕೆಡವಿದ ವಿಷಯದಲ್ಲಂತೂ ನಾನು ಅವರನ್ನು ನೇರವಾಗಿ ನಿಂದಿಸಿದ್ದೆ. ಈ ಪ್ರಕರಣವನ್ನು ವಿರೋಧಿಸಿ ನಾವು ಕಾರ್ನಾಡರ ನಾಯಕತ್ವದಲ್ಲಿ ಮುಷ್ಕರ ಕೂತಿದ್ದಾಗಲೂ ಅಶ್ವತ್ಥ್ ಅವರು ಅಲ್ಲಿಗೆ ಬಂದು ಎಲ್ಲರೊಂದಿಗೆ ಜಗಳವಾಡಿದ್ದರು. ಅವರ ಕಟು ಹಿಂದೂ ನಿಲುವು ಮತ್ತು ಅವರು ಹಾಡುತ್ತಿದ್ದ ಶಿಶುನಾಳರ ಹಾಡಿಗೂ ಸಂಬಂಧ ಹೊಂದದೆ ನಾವೆಲ್ಲರೂ ಒಂದರ್ಥಕ್ಕೆ ಅಶ್ವತ್ಥ್ ಅವರಿಂದ ದೂರವೇ ಉಳಿದುಬಿಟ್ಟೆವು. ಹೀಗಾಗಿ ನಾನು ಮಾಡಿದ ಯಾವ ಸಿನಿಮಾದಲ್ಲೂ ಅವರು ಪಾಲ್ಗೊಳ್ಳಲಿಲ್ಲ. ಅವರ ಸಂಗೀತ ಸಂಯೋಜನೆಯನ್ನು ನಾನೂ ಬಳಸಲಿಲ್ಲ. ಒಬ್ಬ ವ್ಯಕ್ತಿಯ ರಾಜಕೀಯ ನಿಲುವು ಎಂತಹ ಅಪರೂಪದ ಅನುಭವಗಳನ್ನು ನಮ್ಮಿಂದ ದೂರ ಮಾಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

*

ಆದರೆ ಗೆಳೆಯ ರಾಜು ಅನಂತಸ್ವಾಮಿಯ ಜೊತೆಗೆ ಸೇರಿದಾಗೆಲ್ಲಾ ಅವನು ಅಶ್ವತ್ಥ್ ಅವರ ಹಾಡುಗಾರಿಕೆಯನ್ನು, ಅವರೊಂದಿಗಿನ ವಿಶಿಷ್ಟ ಘಟನೆಗಳನ್ನು ಅಭಿನಯಿಸಿ ತೋರಿಸುತ್ತಿದ್ದ. ಆಗೆಲ್ಲಾ ನಮಗೆ ಅಶ್ವತ್ಥ್ ಅವರು ಹಾಸ್ಯದ ವಸ್ತುವೇ ಆಗಿದ್ದರು. ನಾವು ಗೆಳೆಯರೆಲ್ಲಾ ಸೇರಿದಾಗ ಅಶ್ವತ್ಥ್ ಅವರ ಜೋಕುಗಳು ಸರದಾರಜೀಗಳ ಜೋಕಿಗಿಂತ ಹೆಚ್ಚು ಕೇಳುತ್ತಿತ್ತು.
ಒಂದು ಕಾಲದಲ್ಲಿ ಅಶ್ವತ್ಥರ ಹಾಡುಗಾರಿಕೆಯನ್ನು ಮೆಚ್ಚಿಕೊಳ್ಳುತ್ತಾ, ಅದನ್ನೇ ಗುನುಗುತ್ತಾ ಇದ್ದ ನಾನೂ ಸಹ ಅವರ ಅದೇ ಹಾಡುಗಾರಿಕೆಯನ್ನು ಕಿರುಚಾಟ ಎಂದದ್ದಿದೆ. ನನ್ನ ಮತ್ತೊಬ್ಬ ಗೆಳೆಯ ರವಿಕಿರಣ್ ತನ್ನ ಧಾರಾವಾಹಿಗಾಗಿ ಅಶ್ವತ್ಥ್ ಅವರಿಂದ ಹಾಡು ಮಾಡಿಸುತ್ತಿದ್ದೇನೆ, ನೀನೂ ಕೇಳು ಬಾ ಎಂದು ಕರೆದೊಯ್ದಿದ್ದ. ಅಲ್ಲಿ ಅವರ ಸಂಯೋಜನೆಯ ಹಾಡು ಕೇಳಿ ಏನೂ ಮಾತಾಡದೆ ನಿಂತಿದ್ದ ನನ್ನನ್ನು ಸ್ವತಃ ಅಶ್ವತ್ಥರೇ ಮಾತಾಡಿಸಿದ್ದರು. ಹಾಡು ಹೇಗಿದೆ ಎಂದು ಕೇಳಿದ್ದರು. ನಾನು ವ್ಯಂಗ್ಯವಾಗಿ ‘ಹಾಡು ಕೇಳಲಿಲ್ಲವಲ್ಲಾ’ ಎಂದೆ. ‘ಈಗ ಕೇಳಿದ್ದೇನ್ರೀ?’ ಎಂದ ಹಿರಿಯರಿಗೆ ‘ಅದು ಕಿರುಚಾಟ, ಹಾಡಲ್ಲ’ ಎಂದು ಹೊರನಡೆದಿದ್ದೆ. ನಂತರ ನನ್ನ ಗೆಳೆಯನ ಧಾರಾವಾಹಿಯಲ್ಲಿ ಅದೇ ಹಾಡು ಬಿತ್ತರವಾಗುತ್ತಿತ್ತು. ನಾನು ಶೀರ್ಷಿಕೆ ಹಾಡು ಕೇಳದೆ ಕೇವಲ ಧಾರಾವಾಹಿಯನ್ನು ಮಾತ್ರ ನೋಡುತ್ತಿದ್ದೆ. ಹೀಗೆ ನನಗೇ ತಿಳಿಯದೆ ನಾನು ಒಬ್ಬ ಅಪರೂಪದ ಕಲಾವಿದನ ಬಗ್ಗೆ ಉಪೇಕ್ಷೆಯನ್ನು ಬೆಳೆಸಿಕೊಂಡಿದ್ದೆ.

ಅದರಲ್ಲೂ ರಾಜ್ಯಸರ್ಕಾರವೂ ‘ಜೈ ಭಾರತ ಜನನಿಯ ತನುಜಾತೆ’ ಎಂಬ ಕುವೆಂಪು ಅವರ ಪದ್ಯವನ್ನು ನಾಡಗೀತೆ ಎಂದು ಘೋಷಿಸಿದಾಗ ಅದಕ್ಕೆ ತಾವು ಮಾಡಿದ ಸಂಯೋಜನೆಯನ್ನೇ ಬಳಸಬೇಕೆಂದು ಅಶ್ವತ್ಥರು ಮಾಡಿದ್ದ ಲಾಬಿಗಳನ್ನು ಕುರಿತು ಗೆಳೆಯ ರಾಜು ಹೇಳುತ್ತಿದ್ದ. ಆಗೆಲ್ಲಾ ನಾವು ಕೆಲವರು ರಾಜು ಅನಂತಸ್ವಾಮಿಯ ಜೊತೆಗೆ ನಿಂತು, ಮೈಸೂರು ಅನಂತಸ್ವಾಮಿಯವರ ಸಂಯೋಜನೆಯನ್ನೇ ಸರ್ಕಾರ ಒಪ್ಪುವಂತೆ ಮಾಡಿದ್ದೆವು. ಹಾಗಾಗಿ ಸಿ.ಅಶ್ವತ್ಥ್ ಅವರು ಬಹುತೇಕ ನಮ್ಮೆಲ್ಲರ ವಿರೋಧಿ ಬಣದಲ್ಲಿಯೇ ಇದ್ದರು. ಇಂತಹ ಅಶ್ವತ್ಥ್ ಅವರ ನೆಚ್ಚಿನ ಸಂಘಟನೆಯೇ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಾಗ ತಮ್ಮ ಸಂಯೋಜನೆ ಇದ್ದ ‘ನೇಗಿಲಯೋಗಿ’ ಪದ್ಯವನ್ನು ನಾಡಿನ ರೈತಗೀತೆ ಮಾಡಿದರು. ಈ ವಿಷಯ ಕುರಿತಂತೆ ನಾವುಗಳು ತೀರಾ ನಕಾರಾತ್ಮಕ ಮಾತುಗಳನ್ನು ಆಡಿದ್ದಿದೆ. ಇಷ್ಟಲ್ಲದೆ ತಮ್ಮದೇ ಸರ್ಕಾರ ತಾವು ಇಲ್ಲಿ ಏನೂ ಮಾಡಿಸುತ್ತೇವೆ ಎಂಬರ್ಥದ ಮಾತುಗಳನ್ನು ಹಲವು ಬಾರಿ ಅಶ್ವತ್ಥ್ ಅವರು ಸಣ್ಣಪುಟ್ಟ ಸಭೆಗಳಲ್ಲಿ ಹೇಳಿದಾಗೆಲ್ಲಾ ನಾವುಗಳು ಅವರ ಸಲಹೆಗಳು ಆದೇಶಗಳಾಗದಂತೆ ತಡೆದದ್ದೂ ಇದೆ. ಇದು ನಾನು ಕಂಡ ಅಶ್ವತ್ಥರ ಮತ್ತೊಂದು ಮುಖ.

*
ಇಂತಹ ಅಶ್ವತ್ಥ್ ಮತ್ತೆ ನನಗೆ ಹತ್ತಿರವಾದದದ್ದು ‘ನಾ ತುಕಾರಾಂ ಅಲ್ಲಾ’ ಎಂಬ ನಾಟಕದಿಂದ. ಈ ನಾಟಕಕ್ಕೆ ಅವರು ಸಂಗೀತವನ್ನೂ ಮಾಡಿರಲಿಲ್ಲ. ಆದರೂ ಈ ನಾಟಕ ಪ್ರದರ್ಶನಕ್ಕೆ ಅವರು ಬಂದಿದ್ದರು. ರಂಗಶಂಕರದ ಮೂರನೇ ಸಾಲಿನಲ್ಲಿ ಕೂತು ಇಡೀ ನಾಟಕವನ್ನು ನೋಡಿದರು. ನಾನು ಈ ನಾಟಕದಲ್ಲಿ ೮೪ರ ವೃದ್ಧನ ಪಾತ್ರ ಮಾಡಿದ್ದೆ. ಅತಿಹೆಚ್ಚು ಬೀದಿ ನಾಟಕ ಮಾಡಿದ ಹಿನ್ನೆಲೆಯಿಂದ ಬಂದ ನನಗೆ ನಾಟಕ ಮಾಡುವಾಗ ಇತರ ನಟರಂತೆ ಪ್ರೇಕ್ಷಕರನ್ನು ಮರೆತು ಅಭಿನಯಿಸುವ ಅಭ್ಯಾಸವಿಲ್ಲ. ಹೀಗಾಗಿ ನಾಟಕದುದ್ದಕ್ಕೂ ಪ್ರೇಕ್ಷಕರಿಮದ ಬರುವ ಎಲ್ಲಾ ಪ್ರತಿಕ್ರಿಯೆಗಳನ್ನು ಗಮನಿಸುತ್ತಲೇ ಅಭಿನಯಿಸುತ್ತಿದ್ದೆ. ಇದರಿಂದಾಗಿ ಪ್ರೇಕ್ಷಾಂಗಣದ ಪ್ರತೀ ನಿಟ್ಟುಸಿರನ್ನ, ನಗುವನ್ನ, ಕೆಲವೊಮ್ಮೆ ಅಳುವನ್ನೂ ಕೇಳುವುದು ನನಗೆ ಸಾಧ್ಯವಾಗುತ್ತಿತ್ತು. ಆ ದಿನ ಪ್ರೇಕ್ಷಾಂಗಣದ ನಡುವೆ ಅತೀ ಜೋರಾಗಿ ನಗುತ್ತ ಇದ್ದ ಅಶ್ವತ್ಥ್ ಅವರ ದನಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅದೇ ನಾಟಕದ ಎರಡನೆಯ ಅಂಕದಲ್ಲಿ ಅಶ್ವತ್ಥ್ ಅವರು ಅಕ್ಷರಶಃ ಅಳುವುದನ್ನು ಸಹ ನಾನು ನೋಡಿದ್ದೆ. ಹೀಗೆ ಪ್ರೇಕ್ಷಾಗೃಹದಲ್ಲಿರುವವರು ಪ್ರತಿಕ್ರಿಯಿಸುವುದನ್ನು ನೋಡುತ್ತಾ ನನ್ನ ಅಭಿನಯವನ್ನು ವಿಸ್ತರಿಸಿಕೊಳ್ಳುವುದು ನನ್ನ ಅಭ್ಯಾಸ. ಅಂದು ಸಹ ಅದೇ ಆಗಿತ್ತು.

ನಾಟಕದ ನಂತರ ಖುದ್ದಾಗಿ ನನ್ನನ್ನು ಭೇಟಿಯಾಗಲು ಅಶ್ವತ್ಥ್ ಅವರು ಬಹುಕಾಲ ಕಾದಿದ್ದರಂತೆ. ಆದರೆ ಪ್ರದರ್ಶನ ಮುಗಿದ ಕ್ಷಣದಲ್ಲಿಯೇ ಯಾರೊಂದಿಗೂ ಮಾತಾಡುವ ಅಭ್ಯಾಸ ನನ್ನದಲ್ಲ. ಹೀಗಾಗಿ ಅಂದು ನಾನು ಅಶ್ವತ್ಥರ ಕೈಗೆ ಸಿಗದೆ ಹೋಗಿದ್ದೆ. ಆದರೆ ಅವರು ಬಿಡಲಿಲ್ಲ. ಯಾರಿಂದಲೋ ನನ್ನ ನಂಬರ್ ಸಂಗ್ರಹಿಸಿ ರಾತ್ರಿಯೇ ಫೋನಾಯಿಸಿದ್ದರು. ಒಂದು ಗಂಟೆಯವರೆಗೆ ಆ ಎರಡು ಗಂಟೆಗಳ ನಾಟಕ ಕುರಿತು ನ್ನೊಡನೆ ಮಾತಾಡಿದರು. ಆ ನಾಟಕದ ಪ್ರತೀ ವಿವರವನ್ನೂ ಅವರು ವಿಶ್ಲೇಷಿಸಿದ ರೀತಿ, ನನ್ನ ಅಭಿನಯ ಕುರಿತು ಅವರಾಡಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಯಾರಾದರೂ ನನ್ನನ್ನು ಹೊಗಳಿದರೆ ಅನುಮಾನದಿಂದ ನೋಡುವ ನನ್ನ ಅಭ್ಯಾಸದಂತೆ ಅಂದೂ ಸಹ ನಾನು ಅಶ್ವತ್ಥ್ ಅವರ ಬಳಿ ನನ್ನ ಅಭಿನಯದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಯನ್ನು ಕುರಿತು ಕೇಳಿದ್ದೆ. ಅಶ್ವತ್ಥ್ ಅವರು ನಿನಗೆ ಸಾಟಿಯೇ ಇಲ್ಲ ಎಂದೆಲ್ಲಾ ಹೇಳಿಬಿಟ್ಟರು. ಇದು ಯಾಕೋ ಜಾಸ್ತಿಯಾಯಿತು ಎನಿಸಿ ನಾನು ಮಾತು ಮುಗಿಸಿದ್ದೆ. ಆದರೆ ಅಶ್ವತ್ಥ್ ಅವರು ನಮ್ಮ ನಾಟಕದ ಪ್ರದರ್ಶನವಿದ್ದಾಗೆಲ್ಲಾ ಊರ ತುಂಬಾ ಅದರ ಬಗ್ಗೆ ಮಾತಾಡಿ ಅನೇಕರನ್ನು ಕಳಿಸುತ್ತಾ ಇದ್ದರು. ‘ನಮಗೆ ಅಶ್ವತ್ಥ್ ಅವರು ಹೇಳದೆ ಹೋಗಿದ್ದರೆ ನಾವು ಈ ನಾಟಕ ಮಿಸ್ ಮಾಡುತ್ತಾ ಇದ್ದೆವು’ ಎಂದು ಇನ್ನಿತರರು ಹೇಳಿದಾಗ ಮತ್ತೆ ಅಶ್ವತ್ಥ್ ನೆನಪಾಗುತ್ತಿದ್ದರು. ಕೇವಲ ರಾಜಕೀಯ ಭಿನ್ನಾಭಿಪ್ರಾಯದಿಂದ ನಾನು ಈ ವ್ಯಕ್ತಿಯಿಂದ ದೂರ ಉಳಿದೆನಲ್ಲಾ ಎಂದೆನಿಸುತ್ತಿತ್ತು.

ಆಗಲೇ ಅಶ್ವತ್ಥ್ ಅವರು ತಮ್ಮ ತಂಡಕ್ಕೆ ಸರಿಯಾಗಿ ದುಡ್ಡು ಕೊಡುವ ಏಕೈಕ ವ್ಯಕ್ತಿ ಎಂದು ತಿಳಿಯಿತು. ಅಶ್ವತ್ಥ್ ಅವರು ಅನೇಕರಿಗೆ ಹಾಡು ಹೇಳಿಯೇ ಸಹಾಯ ಮಾಡಿದ ವಿಷಯ ತಿಳಿಯಿತು. ಒಬ್ಬ ಕಲಾವಿದನಿಗೆ ಇರಬೇಕಾದ ಎಲ್ಲಾ ಆರ್ದ್ರತೆಗಳನ್ನು ಉಳಿಸಿಕೊಂಡೇ ಆ ವ್ಯಕ್ತಿ ಬದುಕು ಸಾಗಿಸಿದ್ದರು ಎಂಬುದು ತಿಳಿಯಿತು. ನನ್ನ ಮನಸ್ಸು ಅಶ್ವತ್ಥರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಂಡಿತ್ತು. ಆತನನ್ನು ಒಬ್ಬ ಕಲಾವಿದನೆಂಬಂತೆ ನಾನು ಮತ್ತೆ ನೋಡಲಾರಂಭಿಸಿದ್ದೆ. ಅವರ ಸಂಯೋಜನೆಗಳನ್ನು ಮತ್ತೆ ಕೇಳಲಾರಂಭಿಸಿದ್ದೆ. ಅವರಿಂದ ಕಡಕೋಳ ಮಹದೇವಪ್ಪನವರ ತತ್ವಪದಗಳನ್ನು ಜನಪ್ರಿಯಗೊಳಿಸಬೇಕೆಂದು ಅವರೊಡನೆ ಮಾತನ್ನೂ ಆಡಿದ್ದೆ. ನಾನೂ-ಅವರು ಒಟ್ಟಿಗೆ ಸೇರಿ ಹೊಸದೊಂದನ್ನು ಸೃಷ್ಟಿಸಬೇಕೆಂಬ ಕನಸಲ್ಲಿ ಇದ್ದಾಗಲೇ ಸಿ.ಅಶ್ವತ್ಥ್ ಅವರು ನಮ್ಮನ್ನಗಲಿದರು.
ಈಗ ಅವರು ನಮ್ಮೊಡನೆ ಇಲ್ಲವೇ ಇಲ್ಲ ಎನ್ನುವಾಗ ನನಗನ್ನಿಸುವುದಿಷ್ಟೆ. ನಾವು ಯಾವುದೇ ಕಾರಣಕ್ಕೂ ಯಾರನ್ನೂ ದ್ವೇಷಿಸಬಾರದು. ಯಾರನ್ನೂ ಉಪೇಕ್ಷಿಸಬಾರದು. ಯಾರ ಬಗ್ಗೆಯೂ ಹೀಗಳೆಯುವ ಮಾತನ್ನು ಆಡಬಾರದು. ಕಲಾವಿದನ ರಾಜಕೀಯ ನಿಲುವುಗಳೇನೇ ಇರಲಿ ಆತನ ಕಲಾಕೃತಿಯನ್ನು ಗುಣಮಟ್ಟವನ್ನಾಧರಿಸಿಯೇ ಗುರುತಿಸಬೇಕು, ಗೌರವಿಸಬೇಕು. ಇಲ್ಲವಾದರೆ, ನಾವು ದೃಷ್ಟಿಕೋನ ಬದಲಿಸುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

*

ಸಿ.ಅಶ್ವತ್ಥ್ ಅವರು ಈ ನಾಡು ಕಂಡ ಅಪರೂಪದ ಗಾಯಕ, ಸಂಗೀತ ಸಂಯೋಜಕ. ಅನೇಕ ಕನ್ನಡ ಕವಿಗಳ ಗೀತೆಗಳು ಬಹುಕಾಲ ಕನ್ನಡಿಗರ ನಡುವೆ ಬಾಳುವುದಕ್ಕೆ ಕಾರಣವಾದವರು. ಅವರ ಹಾಡುಗಾರಿಕೆಯಲ್ಲಿ ಇದ್ದ ಉತ್ಸಾಹ ಮತ್ತು ಸಾಹಿತ್ಯವನ್ನ ಕಿವಿಗಳಿಗೆ ತಲುಪಿಸಬೇಕು ಎಂಬ ಗುಣದಿಂದಾಗಿ ಕನ್ನಡ ಸಾಹಿತ್ಯ ಇನ್ನೂ ಹಲವು ಕಾಲ ಹೊಸ ತಲೆಮಾರಿನ ಕನ್ನಡಿಗರಲ್ಲಿ ಉಳಿಯುತ್ತದೆ. ಸಿ.ಅಶ್ವತ್ಥ್ ಅವರು ಜಗತ್ತಿನಾದ್ಯಂತ ನಡೆಸಿದ ‘ಕನ್ನಡವೇ ಸತ್ಯ’ ಕಾರ್ಯಕ್ರಮವಂತೂ ಕನ್ನಡಿಗರಲ್ಲದವರನ್ನೂ ಕನ್ನಡ ಬಳಗಕ್ಕೆ ಕರೆತಂದಿದೆ. ಒಬ್ಬ ಕಲಾವಿದನಿಗೆ ಆತನನ್ನ ನೆನೆಯುವವರು ಇಲ್ಲದ ದಿನ ಬಂದಾಗ ಮಾತ್ರ ಸಾವು ಬಂದಿದೆ ಎನ್ನಬಹುದು. ಹಾಗೇ ನೋಡುವುದಾದರೆ ಸಿ.ಅಶ್ವತ್ಥ್ ಅವರಿಗೆ ಸಾವೇ ಇಲ್ಲ. ಅವರ ನೆನಪು ನಿರಂತರ.

Advertisements

17 Responses to “ತರವಲ್ಲ ತಗಿ ನಿನ್ನ ತಂಬೂರಿ ಸ್ವರ…”


 1. 1 Pramod January 7, 2010 at 6:47 am

  ಅಶ್ವತ್ಥ್ ಅವರ ಬೇರೆ ಬೇರೆ ಮುಖಗಳನ್ನು ಚೆನ್ನಾಗಿ ಬರೆದಿದ್ದೀರಾ ಸರ್. ಹಾಡುಗಳಿಗೆ ಜಾಸ್ತಿ ಕಿವಿಗಳನ್ನು ಕೊಡಿಸಿದವರವರು, ಕೂಡಿಸಿದವರವರು.

 2. 2 Vinayak January 7, 2010 at 6:50 am

  ತರವಲ್ಲ ತಗಿ ನಿನ್ನ ತಂಬೂರಿ ಸ್ವರ… ಅಪರೂಪದ ಲೇಖನ… thanks for for the link on facebook..

 3. 3 ಬಿ.ಸುರೇಶ January 7, 2010 at 7:25 am

  ವಂದನೆಗಳು.
  ನಿಮ್ಮಂತಹವರ ಹಾರೈಕೆಯಿರುವವರೆಗೆ ಒಳ್ಳೆಯದನ್ನು ಮಾಡುವ ಪ್ರಯತ್ನ ಮಾಡುತ್ತೇನೆ.

 4. 4 Naveen Sagar January 7, 2010 at 7:26 am

  Adhbutha lekhana. Ashwath avara bagge bareyuttha adheshtu sookshma haagoo filter less shailiyalli nimma gunavimarshe, aatmaavalokana maadikondiddheeri.. Ashwath rannu innashtu miss maadikoltha nimmannu hecchu gauravisalaarambhisiddhene.

  ashwathra bagge avara saavina nanthara odhidha ashtoo lekhanagaLalli THE BEST idhu. Thank u Sir…

 5. 5 Avinash Kamath January 7, 2010 at 7:52 am

  “ನಾವು ಯಾವುದೇ ಕಾರಣಕ್ಕೂ ಯಾರನ್ನೂ ದ್ವೇಷಿಸಬಾರದು. ಯಾರನ್ನೂ ಉಪೇಕ್ಷಿಸಬಾರದು. ಯಾರ ಬಗ್ಗೆಯೂ ಹೀಗಳೆಯುವ ಮಾತನ್ನು ಆಡಬಾರದು. ಕಲಾವಿದನ ರಾಜಕೀಯ ನಿಲುವುಗಳೇನೇ ಇರಲಿ ಆತನ ಕಲಾಕೃತಿಯನ್ನು ಗುಣಮಟ್ಟವನ್ನಾಧರಿಸಿಯೇ ಗುರುತಿಸಬೇಕು, ಗೌರವಿಸಬೇಕು. ಇಲ್ಲವಾದರೆ, ನಾವು ದೃಷ್ಟಿಕೋನ ಬದಲಿಸುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.”

  ಅತ್ಯಂತ ಸೂಕ್ತವಾದ ಮಾತುಗಳನ್ನು ಹೇಳಿದ್ದೀರಿ ಸರ್! ಕಣ್ತೆರೆಸಿದ ಲೇಖನ. ಧನ್ಯವಾದಗಳು.
  ಪ್ರೀತಿಯಿಂದ
  ಅವಿನಾಶ್

 6. 6 ಶರತ್ ಪಿ ಯಸ್ January 7, 2010 at 8:39 am

  ಸಿ ಅಶ್ವತ್ಥರ ಬಗ್ಗೆ ನಿಮ್ಮ ಮನದಾಳದ ನೇರ ಮಾತುಗಳು ತುಂಬಾ ಇಷ್ಟವಾಯಿತು.

 7. 7 Ramesh Gururajarao January 7, 2010 at 8:45 am

  ಸುರೇಶ….. ಒಳ್ಳೆಯ ಲೇಖನ ಕಣೋ. ನಾನು ಕೂಡ ನೆನಪಿನಾಳಕ್ಕೆ ಇಳಿದೆ.

  ರಾಜು ಅನಂತಸ್ವಾಮಿಯನ್ನು ಸೆಳೆದೊಯ್ದ ಪಾಶ ಅಶ್ವತ್ಥರನ್ನು ಕೂಡ ಸೆಳೆದೊಯ್ದದ್ದು ವಿಪರ್ಯಾಸ.

  ನಿನ್ನಂತೆ ನನಗೂ ಕೂಡ ಅಶ್ವತ್ಥರ ಒಡನಾಟ ಕೊಂಚ ಆದದ್ದು ನಾನು ನಾಗಮಂಡಲ ನಾಟಕದ ಹಾಡುಗಳನ್ನು ಕಲಿಯುವ ಸಮಯದಲ್ಲಿ.

  ಕಲ್ಕತ್ತಾದಲ್ಲಿ ನಾಂದಿಕಾರ್ ರಂಗ ಉತ್ಸವಕ್ಕೆ ನಾಗಮಂಡಲ ನಾಟಕದ ತಯಾರಿ ನಡೆಸಿದ್ದ ಸಮಯ. ಶಂಕರ ನಾಗ್ ಅವರ ಫಾರ್ಮ್ ಹೌಸ್ ನಲ್ಲಿ ನಾಗಾನಾಥ್ ನನಗೆ ಹಾಡುಗಳನ್ನು ಹೇಳಿಕೊಡುತ್ತಿದ್ದಾಗ ಅಲ್ಲಿದ ಅಶ್ವಥ್ಥರು ನನಗೆ ಆ ಹಾಡುಗಳ ಅದ್ಭುತ ಸೌಂದರ್ಯವನ್ನು ವಿವರಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅದ್ಭುತ ಕಲಾವಿದ.

  ಇದು ಒಂದು ಮುಖವಾದರೆ, ನಾವೆಲ್ಲಾ ರಾಮಜನ್ಮ ಭೂಮಿಯ ವಿವಾದದ ಸಮಯದಲ್ಲಿ, ಕಲಾಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಿದ್ದಾಗ ಅಶ್ವಥ್ಥರು ಅಲ್ಲಿಗೆ ಬಂದು ಮಾತಾಡಿದ್ದು ಎಲ್ಲಾ ಪುನಃ ನೆನಪಿಗೆ ಬಂತು.

  ಇಂದಿಗೂ ನನಗೆ, ವೈಯಕ್ತಿಕವಾಗಿ, ಅಶ್ವಥ್ಥರು ಉತ್ತಮ ಸಂಗೀತ ನಿರ್ದೇಶಕರಾಗಿ ಮೆಚ್ಚುಗೆಯಾದದ್ದೇ ವಿನಃ ಗಾಯಕರಾಗಿ ಅವರ ಕೆಲವು ಹಾಡುಗಳನ್ನು ಮಾತ್ರ ಇಷ್ಟ ಪಟ್ಟೆ.

  ಅಶ್ವತ್ಥರನ್ನು ನವೆಂಬರ್ ೨೯ ರಂದು ಮೆರವಣಿಗೆಯಲ್ಲಿ ರಾಮಕೃಷ ಆಶ್ರಮದ ದ್ವಾರದಿಂದ ಕರೆ ತರುವ ಮುಂಚೆ, ನನ್ನ ಕಾರಿನಲ್ಲಿ ಅವರನ್ನು ಅವರ ಮನೆಯಿಂದ ಆಶ್ರಮದ ದ್ವಾರದವರೆವಿಗೂ ಕರೆತಂದದ್ದೇ ಕೊನೆಯಾಯ್ತು.

  ಅವರ “ನೇಸರ ನೋಡು” ನಾಟಕದ ಹಾಡುಗಳ ಸಂಗ್ರಹವಂತೂ ಅದ್ಭುತ….

  ಒಟ್ಟಿನಲ್ಲಿ ನನ್ನ ನೆನಪುಗಳನ್ನು ಪಾತಾಳಗರಡಿ ಹಾಕಿ ತೆಗದಿದ್ದೀಯ….. ಥ್ಯಾಂಕ್ಸ್ ಗುರುವೇ… 🙂

 8. 8 Har January 7, 2010 at 10:19 am

  It is unfortunate to know that there is so much politics in the world of performing arts. Sad but true…the only reason is Artistes are always too emotional and egotic. Only if such things were not there, the world of art in Karnataka would have catapulted to huge heights. Thanks for sharing some memories about Late C.Aswath! He is someone who is always alive in our hearts…

 9. 9 ಜಗದೀಶ್ January 7, 2010 at 11:41 am

  ಸರ್ ನಿಮ್ಮ ಲೇಖನ ಚನ್ನಾಗಿದೆ, ಬಾಬ್ರಿ ಮಸಿದಿಯನ್ನು ಕೆಡವಿದ ದಿನ ಕಲಾಕ್ಷೇತ್ರದ ಬಳಿ ಅವರು ನಡೆದುಕೊಂಡ ರೀತಿಯಿಂದ ಅವರ ಮೇಲಿನ ಪ್ರೀತಿ ಅಭಿಮಾನ ಹೊರಟು ಹೋಯಿತು ಶಿಶುನಾಳರ ಗೀತೆಗಳನ್ನು ಅವರ ದನಿಯಲ್ಲಿ ಕೇಳುವುದು ಕ್ಲೀಷೆ ಎನಿಸ ತೊಡಗಿತು. ಯಾವುದೀ ಪ್ರವಾಹವೋ ಹಾಡಿದ್ದು ಈ ಮಾನುಷ್ಯನೇನ ಎನಿಸುತ್ತಿತ್ತು, ಉಳಿದಂತೆ ಹಾಡುಗಾರನಾಗಿ ಅವರು ಮಾಡಿದ ಕೆಲಸ ಶ್ಲಾಘನೀಯಾ

 10. 10 gundanna chickmagalur January 7, 2010 at 1:35 pm

  A well balanced article by you Suresh.. Perhaps everyone’s experience with Sri.C.Ashwath is one and the same.. I had a privilage and opportunity to move closer with him – with the projects like NITHYOSTAVA ( I worked as coordinator for the project under Sri.Kappanna) and the NATIONAL GAMES ( once again with Sri.Kappanna)-.. But the way he behaved with us when we protested agaist the demolition of Babri Masjid is still green in my memory.. D.R.Nagaraj, Shudra Srinivas, M G Venakatesh, G K Govina Rao, Dr.G.R., so many were protesting in Kalakshetra and he was shouting by standing outside the Kalakashetra Compound asking the police to arrest us… wE all had the difference of poinion as for as his political leanings were concerned.. but somewhere I accepted his music.. More than this I was angry when he got the award of National Integration for the movie Santha Shisunala (both Director Bharana and Ashwath got it)..With all this I am of the opinion that he was a schemer.. planner, Croud Puller.. It is very difficult to imagine such a person in the field of Sugama Sangeetha for some more years to come..The other man whom we can think in his place is only G V Athri.. Unfortunately he left us quite long back… gundanna chickmagalur.

 11. 11 ಬಿ.ಸುರೇಶ January 7, 2010 at 2:21 pm

  ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಓದಿದೆ.
  ನಾಲ್ಕು ಸಾಲು ಬರೆದದ್ದು ಸಾರ್ಥಕ ಎನಿಸಿತು.
  ಓದಿದ ಎಲ್ಲರಿಗೂ ನಮನಗಳು.
  ನಿಮ್ಮವ
  ಬೀಸು

 12. 12 sharaschandra January 7, 2010 at 4:52 pm

  we can call it as an experiment with suresh devru experience 🙂

 13. 13 neelanjana January 7, 2010 at 5:36 pm

  ಯಾರನ್ನೂ ಒಂದೇ ಕಪ್ಪುಕನ್ನಡಕದೊಳಗಿಂದ ನೋಡುವುದು ಸರಿಯಲ್ಲ ಅನ್ನುವ ಮಾತನ್ನ ನಿಮ್ಮ ಬರಹ ಸ್ಪಷ್ಟ ಪಡಿಸಿದೆ. ಚೆನ್ನಾಗಿ ಬರೆದಿದೀರ.

 14. 14 Anil Ramesh January 7, 2010 at 7:26 pm

  ಬೀಸು,
  ಸಿ. ಅಶ್ವಥ್ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳಿದ್ದೀರ.. ಅದು ನನಗೆ ತುಂಬಾ ಹಿಡಿಸಿತು..

  ನಿಮ್ಮ ಲೇಖನ ಇಷ್ಟ ಆಯ್ತು..

  -ಅನಿಲ್

 15. 15 sharanu hullur January 28, 2010 at 8:56 am

  gurugale
  tumba artapurna baraha.

  sharanu hullur

 16. 16 ಬಿ.ಸುರೇಶ March 22, 2010 at 2:41 pm

  ವಂದನೆಗಳು ಶರಣು.
  ನಿಮ್ಮಂಥಾ ಕವಿಗಳು ನನ್ನ ಬರಹ ಓದುತ್ತೀರಿ ಎಂಬುದೇ ನನಗೆ ಸಂತೋಷ.

 17. 17 Santhosh September 24, 2013 at 8:47 am

  ಬೀಸು,

  ನಾನೊಬ್ಬ ಆವರೇಜ್ ಬರಹಗಾರ ಕೂಡ ಅಲ್ಲದಿದ್ದರೂ ನಿಮ್ಮ ಈ ಲೇಖನ ಓದಿದಮೇಲೆ ಕೆಲವು ಮಾತುಗಳನ್ನು ಹಂಚಿಕೊಳ್ಳುವ ಮನಸಾಗುತ್ತಿದೆ, ಬೇರೆಯವರ ಮುಂದೆ ಹೇಳಿದರೆ ನಗುತ್ತಾರೇನೋ ಅದಕ್ಕೆ ನಿಮ್ಮಮುಂದೆ ಇಳಿಸುತ್ತಿದ್ದೇನೆ.

  ನೀವು ಫಸೆಬೂಕ್ ನಲ್ಲಿ ಶೇರ್ ಮಾಡಿದ “ಅಗಲಿದ ಗೆಳೆಯನ ನೆನಪಲಿ” ಲೇಖನ ಓದಿದೆ ಹಾಗೆ ನಿಮ್ಮ blog ನಲ್ಲಿ ಕಣ್ಣಾಯಿಸಿದಾಗ ಕಂಡದ್ದು “ತರವಲ್ಲ ತಗಿ ನಿನ್ನ ತಂಬೂರಿ ಸ್ವರ” ಲೇಖನ, ಹಾಗೆ ಅದನ್ನೂ ಓದಿ ಮುಗಿಸಿದೆ ಆಗಲೇ ನನಗೂ ಕೆಲವು ಮಾತುಗಳನ್ನು ಹಂಚಿಕೊಳ್ಳುವ ಮನಸಾದಾದ್ದು.

  ನಾನು 8 ವರ್ಷದವನಿರಬೇಕು, ನಾನು ಅಶ್ವಥರ ಹಾಡುಗಳನ್ನ ಕೇಳೋಕೆ ಶುರು ಆದದ್ದು. ಮೊದಮೊದಲು ತಂದೆ ಹಾಕಿದ ಹಾಡುಗಳನ್ನು ಬಲವಂತವಾಗಿ ಕೇಳುತ್ತಾ ಕೇಳುತ್ತಾ ಅವರ ಹಾಡುಗಳು ಇಷ್ಟವಾಗೋಕೆ ಶುರುವಾದವು. ಹಾಡುಗಳ ಅರ್ಥ ಗೊತ್ತಾಗದಿದ್ದರೂ ಅಶ್ವತ್ತರ ಎತ್ತರದ ದ್ವನಿ ಇಷ್ಟವಾಗುತ್ತಿತ್ತು ಅದರಲು ನನ್ನ ಅಪ್ಪನ ಪಾನಗೋಷ್ಟಿ ಶುರುವಾದಾಗ ಹಾಕುತ್ತಿದ್ದ ರಾಜು ಅನಂತಸ್ವಾಮಿ ಹಾಡಿದ ರತ್ನನ ಪದಗಳು ತುಂಬಾ ಇಷ್ಟವಾಗುತ್ತಿದ್ದವು. ಅಪ್ಪ ತುಂಬಾ ಎಂಜಾಯ್ ಮಾಡುತ್ತಿದ್ದರು. ನನಗೆ ನೆನಪಿದೆ ಅಪ್ಪ ಯಾವಾಗಲೂ “ವಾಸಂತಿ” ಅನ್ನುವ ಅಶ್ವಥರೆ ಸಂಯೋಜಿಸಿದ ಹಾಡುಗಳನ್ನು ಕೇಳುತ್ತಿದ್ದರು, ಆ ಹಾಡುಗಳನ್ನು ನಾನು ಕೇಳದೆ ಹೆಚ್ಚುಕಡಿಮೆ 15 ವರ್ಷಗಳಾಗಿವೆ ಈಗಲೂ ಆ ಹಾಡುಗಳು ನೆನಪಿವೆ. ಒಬ್ಬನೇ ಕೂತಾಗ, ಒಬ್ಬನೇ ಬೈಕಿನಲ್ಲಿ ಹೋಗುವಾಗ ಅಶ್ವಥರ ಹಾಗೆ ಎತ್ತರದ ದ್ವನಿಯಲ್ಲಿ ಹಾಡುತ್ತಿರುತ್ತೇನೆ. ಪಕ್ಕದ ಇನ್ನೊಬ್ಬ ಬೈಕ್ಸವಾರ ನನ್ನನ್ನು ಅನುಮಾನದಲ್ಲಿ ನೋಡಿದಾಗಲೇ ಅರಿವಾಗುತ್ತಿತ್ತು ನಾನು ಕಿರುಚಾಡುತ್ತಿದ್ದೇನೆಂದು.
  ಅಶ್ವತ್ತರ ನಿಧನದ ವಿಷಯ ಅಪ್ಪನಿಂದ ತಿಳಿದಾಗ ನನ್ನ ಮನೆಯಲ್ಲೇ ಯಾರು ನಿಧನರಾದಂತೆ ಅತ್ತಿದ್ದೆ. ಇದೇ ಥರ ಅತ್ತಿದ್ದು ರಾಜು ಅನಂತಸ್ವಾಮಿ ಹೋದಾಗ.

  ಹೀಗೆ ಸ್ವಲ್ಪ ದಿನದ ಹಿಂದೆ ನನ್ನ ಮೊಬೈಲ್ನಲ್ಲಿ ಅಶ್ವಥರ ಹಾಡುಗಳನ್ನ ಪ್ಲೇ ಮಾಡಿ, ಕಿವಿಗಳಿಗೆ ಹೆಡ್‌ಫೋನ್ ಸಿಕ್ಕಿಸಿಕೊಂಡು ಅಫ್ಫೀಸಿನಿಂದ ಮನೆಕಡೆಗೆ ಬೈಕ್ನಲ್ಲಿ ಬರುತ್ತಿದ್ದೆ. ಎಲ್ಲಾ ಹಾಡುಗಳ ಮದ್ಯೆ “ಕಾಣದ ಕಡಲಿಗೆ ಹಂಬಲಿಸಿದೆ ಮನ” ಹಾಡು ಬಂತು, ಅದು “ನಿನಾದ” ಅನ್ನುವ ಆಲ್ಬಮ್ನದ್ದು. ಆ ಹಾಡು ಕೇಳುತ್ತಾ ನನಗೇ ಗೊತ್ತಿಲ್ಲದಂತೆ ನನ್ನ ಕಣ್ಣಲ್ಲಿ ನೀರು ತುಂಬಿ ಹರಿಯೋಕೆ ಶುರುವಾಯಿತು. ಆಶ್ವಥರನ್ನಾಗಲಿ ರಾಜು ಅವರಾಗಲೀ ನಾನು ಯಾವತ್ತೂ ನೋಡಿಲ್ಲ ಫೋಟೋ, ವೀಡಿಯೊಸ್ ಬಿಟ್ಟು, ಆದರೂ ಈ ಹಾಡುಗಳಿಂದ ಎಷ್ಟು ನನ್ನನ್ನ ತುಂಬಿಕೊಂಡಿದಾರೆ ಅಂತ ನಿಜವಾಗಲೂ ಅರ್ಥವಾಗುವುದಿಲ್ಲ.

  ಕಾಲನ ಕಡಲಲಿ ಕಳೆದು ಹೋದ ಈ ರಾತ್ನಗಳನ್ನ ಮನಸ್ಸು ಮಿಸ್ ಮಾಡ್ಕೋತಿದೆ.

  ಇವರೆಲ್ಲರ ಪರಿಚಯ ಮಾಡಿಸಿದ ನನ್ನ ಅಪ್ಪನಿಗೆ ಒಂದು ಥ್ಯಾಂಕ್ಸ್ ಹೇಳೋ ಮನಸ್ಸಾಗುತ್ತಿದೆ, ಈಗಲೇ ಕಾಲ್ ಮಾಡ್ತೀನಿ.

  ಧನ್ಯವಾದ
  ಸಂತೋಷ್


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 57,460 ಜನರು
Advertisements

%d bloggers like this: