ಹೊಸ ಅವಘಡಗಳ ನಡುವೆ ಹೊಸ ವರುಷಾರಂಭ…!

ಸಂಘಸುಖ (‘ಟಿವಿಠೀವಿ’ ಪತ್ರಿಕೆಗಾಗಿ ಬರೆದ ಲೇಖನ, ಜನವರಿ – ೨೦೧೦)

ಪ್ರಿಯ ಬಂಧು,
ಬಹಳ ದಿನವಾಗಿತ್ತು ನಿಮ್ಮ ಜೊತೆಗೆ ಮಾತಿಗಿಳಿದು. ಹೇಳಲೇಬೇಕಾದ ಕೆಲವು ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲೆಂದು ಮತ್ತೆ ಅಕ್ಷರ ಸಂವಹನಕ್ಕೆ ಇಳಿದಿದ್ದೇನೆ. ಸ್ವೀಕರಿಸಿ. ಮೊದಲಿಗೆ ಹೊಸ ವರುಷ ನಿಮಗೆಲ್ಲರಿಗೂ ಶುಭತರಲಿ, ಹಿತವಾಗಲಿ, ಒಳಿತಾಗಲಿ! ವರ್ಷ ಮುಗಿಯುವುದಕ್ಕೆ ದಿನಗಣನೆ ನಡೆದಿದ್ದಾಗಲೇ ನಮ್ಮ ಇಬ್ಬರು ದಿಗ್ಗಜರು ನಮ್ಮನ್ನಗಲಿದರು.
ಸಿ.ಅಶ್ವತ್ಥ್

ಟೆಲಿವಿಷನ್ ಧಾರಾವಾಹಿಗಳ ಹಾಡನ್ನೂ ಮನೆಮಾತಾಗಿಸಿದವರು ಸಿ.ಅಶ್ವತ್ಥ್. ಅವರು ಸಂಗೀತ ಸಂಯೋಜಿಸಿ ಹಾಡಿದ ಅನೇಕ ಶೀರ್ಷಿಕೆ ಗೀತೆಗಳು ಸದಾ ಕನ್ನಡಿಗರ ನೆನಪಲ್ಲಿವೆ. ಅಂತಹ ಅಶ್ವತ್ಥ್ ಹಲವು ಕಾಲ ಅಸ್ವಸ್ಥರಾಗಿದ್ದವರು ಅವರ ೭೦ನೇ ಹುಟ್ಟುಹಬ್ಬದ ದಿನವೇ ನಮ್ಮನ್ನಗಲಿದರು. ಮತ್ತೆ ಬಾರದ ದೂರಕ್ಕೆ ಸಾಗಿಬಿಟ್ಟರು. ಅದೇ ದಿನ ಅವರ ಹುಟ್ಟುಹಬ್ಬ ಮಾಡಲು ಸಂಭ್ರಮಿಸುತ್ತಿದ್ದ ಅಭಿಮಾನಿಗಳನ್ನು ದುಃಖಕ್ಕೆ ತಳ್ಳಿ, ತಾವು ಚಿರನಿದ್ರೆಗೆ ಸಾಗಿದರು. ಈ ಲೀವರ್ ಸಿರೋಸಿಸ್‌ನ ಗುಣವೇ ಹಾಗೆ. ಅದು ಮೈಸೂರು ಅನಂತಸ್ವಾಮಿಯವರನ್ನ, ರಾಜು (ಸತ್ಯಪ್ರಕಾಶ್) ಅನಂತಸ್ವಾಮಿಯನ್ನ, ಈಗ ಸಿ.ಅಶ್ವತ್ಥ್ ಅವರನ್ನ ಕರೆದೊಯ್ದಿತು. ಮಧ್ಯವ್ಯಸನಿಗಳನ್ನು ಕಾಡುವ ಬೃಹತ್ ಸಮಸ್ಯೆ ಇದು. ಈ ಮೂವರು ಹಾಡುಗಾರರೂ ತಮ್ಮ ವ್ಯಸನಗಳಿಂದಲೇ ಕಡೆಗಾಲದಲ್ಲಿ ನರಳಿದರು. ಹಾಗೆ ನೋಡಿದರೆ, ಅಶ್ವತ್ಥ್ ಅವರು ತೀರಾ ವ್ಯಸನೀ ಅನ್ನುವಷ್ಟು

ಒಳಗಿಳಿದಿರಲಿಲ್ಲ. ಆದರೆ ಅವರಿಗಿದ್ದ ರಕ್ತದೊತ್ತಡ, ಇನ್ನಿತರ ಸಮಸ್ಯೆಗಳು ಈ ಸಮಸ್ಯೆಯನ್ನು ದೊಡ್ಡದು ಮಾಡಿದವು.
ಕನ್ನಡ ಟೆಲಿವಿಷನ್ ಉದ್ದಿಮೆಗೆ ಮಾತ್ರವಲ್ಲ, ಕನ್ನಡ ಸುಗಮ ಸಂಗೀತಪ್ರೇಮಿಗಳಿಗೆಲ್ಲಾ ಇದು ದೊಡ್ಡ ಆಘಾತವೇ ಸರಿ. ನಮ್ಮ ನಡುವಿನ ಅನೇಕ ನಿರ‍್ದೇಶಕರು ‘ಅಶ್ವತ್ಥ್ ಅವರ ಶೀರ್ಷಿಕೆ ಗೀತೆ ಇಲ್ಲವಾಯಿತೇ!’ ಎನ್ನುವಂತಾಗಿದೆ. ನಮ್ಮ ಉದ್ಯಮದ ಜೊತೆಗಂತೂ ಅಶ್ವತ್ಥ್ ಅವರದು ವಿಶಿಷ್ಟ ನಂಟು. ಅವರು ಸಂಗೀತ ಸಂಯೋಜಿಸಿದ್ದ ಅನೇಕ ಗೀತೆಗಳನ್ನು ದೂರದರ್ಶನಕ್ಕೆ ದೃಶ್ಯವಾಗಿ ಮಾರ್ಪಡಿಸುವವರ ದಂಡೇ ನಮ್ಮಲ್ಲಿತ್ತು. ಅದರಿಂದಾಗಿ ಅಶ್ವತ್ಥ್ ಅವರು ನಮ್ಮ ನಾಡಿನಲ್ಲಿ ದಂತಕತೆಯಾಗುವಂತೆ ಬೆಳೆದದ್ದೂ ಹೌದು. ಅವರ ಹಾಡುಗಳನ್ನ ಕ್ಯಾಸೆಟ್‌ಗಳಲ್ಲಿ ಕೇಳಿ ಅಭಿಮಾನಿಗಳಾಗಿದ್ದವರು, ನಂತರ ಅವರ ‘ಕನ್ನಡವೇಸತ್ಯ’ ಮುಂತಾದ ಕಾರ್ಯಕ್ರಮಗಳನ್ನು ಮುಗಿಬಿದ್ದು ನೋಡಿದ್ದು ಈಗ ಇತಿಹಾಸ. ಅಶ್ವತ್ಥ್ ಅವರ ಸಾವು ನಮ್ಮ ಉದ್ಯಮದ ಪಾಲಿಗಂತೂ ತುಂಬಾ ದೊಡ್ಡ ಆಘಾತ.

ವಿಷ್ಣುವರ್ಧನ್

ಮತ್ತೊಬ್ಬರು ನಮ್ಮ ಸ್ನೇಹಲೋಕದ ವಿಷ್ಣುವರ್ಧನ್! ಗಾಯಕರನ್ನು ಕಳೆದುಕೊಂಡ ದುಃಖದಲ್ಲಿರುವಾಗಲೇ ನಾಯಕರನ್ನು ಕಳೆದುಕೊಂಡೆವು. ವಿಷ್ಣು ಅವರು ನಮ್ಮ ಸಂಘಟನೆಗೆ ಆರಂಭದಿಂದಲೂ ಬೆಂಬಲ ನೀಡುತ್ತಾ ಬಂದವರು. ನಮ್ಮೆಲ್ಲರ ಬಗ್ಗೆ ಅವರಿಗೆ ವಿಶೇಷ ಪ್ರೀತಿಯಿತ್ತು. ನಾವು ಮಾಡುತ್ತಿದ್ದ ‘ಬಣ್ಣದಕಾರಂಜಿ’ಗೆ ಖುದ್ದು ಬರುತ್ತಿದ್ದರು. ನಮ್ಮ ಪ್ರಯತ್ನಗಳನ್ನು ಹರಸುತ್ತಿದ್ದರು. ನಮ್ಮ ಸಂಘಟನೆಯ ಕ್ಷಿಪ್ರ ಬೆಳವಣಿಗೆ ಕಂಡು ಬೆರಗಾಗಿದ್ದರು. ನಾವು ಕ್ರಿಕೆಟ್ ಮೂಲಕ ಸಂಘಟನೆಯನ್ನು ಗಟ್ಟಿಗೊಳಿಸುವಾಗ ಅವರೂ ಸಹ ‘ಸ್ನೇಹಲೋಕ’ ಎಂಬ ವೇದಿಕೆ ಮಾಡಿಕೊಂಡು ಕ್ರಿಕೆಟ್ ಮೂಲಕವೇ ಎಲ್ಲರನ್ನೂ ಸೇರಿಸುವ ಪ್ರಯತ್ನ ಮಾಡಿದ್ದರು. ಅವರನ್ನು ಕೇವಲ ನಮ್ಮ ಸಿನಿಮಾಗಳ ನಾಯಕ ಎಂದು ನೋಡುವುದಕ್ಕಿಂತ ನಮ್ಮ ನಡುವೆ ಆಗಿಹೋದ ಅಪರೂಪದ ವ್ಯಕ್ತಿ ಎನ್ನುವುದೇ ಸರಿ. ಶಂಕರ್‌ನಾಗ್ ಅವರ ಮಾಲ್ಗುಡಿಡೇಸ್‌ನಲ್ಲಿಯೂ ಅವರು ಪಾತ್ರ ನಿರ್ವಹಿಸಿದ್ದರು. ಹೀಗಾಗಿ ಅವರು ನಮ್ಮ ಕಿರುತೆರೆಗೂ ಸೇವೆ ಸಲ್ಲಿಸಿದವರಲ್ಲಿ ಒಬ್ಬರು. ಇವರ ಅಗಲಿಕೆಯ ನೋವನ್ನು ಮರೆಯಲು ಬಹುಕಾಲ ಬೇಕು. ಆ ಶಕ್ತಿ ಎಲ್ಲರಿಗೂ ಒದಗಿ ಬರಲಿ.

ನಮ್ಮ ರೈತರಿಗೆ ಬೇಡಿ!

ಇದೇ ಸಂದರ್ಭದಲ್ಲಿ ಒಂದೆಡೆ ರೈತರು ತಮ್ಮ ನೆಲವನ್ನು ಆಕ್ರಮಿಸಿಕೊಳ್ಳುತ್ತಿರುವ ಬಂಡವಾಳಶಾಹಿಗಳ ಹುನ್ನಾರವನ್ನು ವಿರೋಧಿಸಿ ಧರಣಿ ನಡೆಸಿದರು. ನಮ್ಮೂರು ದಾವಣಗೆರೆಯಲ್ಲಿ ಹಸಿರು ಟವೆಲ್ಲು ರಾರಾಜಿಸುತ್ತಿತ್ತು. ಅದನ್ನು ನಮ್ಮ ಸರ್ಕಾರ ಮಣಿಸಿದ ರೀತಿ ಮಾತ್ರ ಘೋರ. ರೈತರನ್ನು ಮಹಾಪರಾಧಿಗಳಂತೆ ಜೈಲಿಗೆ ತಳ್ಳಿದ್ದು, ಅವರ ಜೊತೆಗೆ ಮಾತಿಗೆ ಕೂರುವ ಬದಲು ನಿರ್ಲಕ್ಷ್ಯ ತೋರಿದ್ದು ಅಕ್ಷಮ್ಯ. ರೈತರು ಈ ನಾಡಿನ ಜೀವ. ಕೃಷಿಯನ್ನು ಆಧರಿಸಿಯೇ ಇಡೀ ದೇಶ ಬಹುಕಾಲ ನಡೆದು ಬಂದಿದೆ. ಇಂತಹ ನಾಡಲ್ಲಿ ರೈತರ ಜೊತೆಗೆ ಸರಿಯಾಗಿ ವರ್ತಿಸದೆ ಉಳಿದದ್ದು ದುರಂತ. ರೈತರಿಗೆ ಬೇಡಿ ಹಾಕಿ ಕರೆದೊಯ್ದದ್ದಂತೂ ಯಾರೂ ಮನ್ನಿಸಲಾಗದ ವಿಷಯ.

ಈ ವಿಶೇಷ ಆರ್ಥಿಕ ವಲಯಗಳ ನಿರ್ಮಾಣ ಎಂಬುದು ಈ ದೇಶದ ಜನರ ಎದುರಿಗೆ ನಮ್ಮ ಸರ್ಕಾರಗಳು ಇಡುತ್ತಿರುವ ಬೆಣ್ಣೆ ಬಿಸ್ಕತ್ತುಗಳು. ಇವುಗಳಿಂದ ನೆಲಗಳ್ಳರಿಗೆ, ಸಂಪತ್ತು ಕೊಳ್ಳೆ ಹೊಡೆಯುವವರಿಗೆ ಮಾತ್ರ ಲಾಭ ಎಂಬುದು ಅದಾಗಲೇ ಸಾಬೀತಾಗಿದೆ. ಆದರೂ ನಮ್ಮ ಸರ್ಕಾರಗಳು ರಾಜ್ಯಕ್ಕೆ ವಿದೇಶಿ ಬಂಡವಾಳ ತರುತ್ತೇವೆ ಎಂಬ ಹೆಸರಲ್ಲಿ ಹೊಸ ಹೊಸ ಒಪ್ಪಂದ ಮಾಡಿಕೊಳ್ಳುತ್ತಲೇ ಇವೆ. ಇದರಿಂದಾಗುವ ಅನಾಹುತಗಳಿಗೆ ಈ ನಾಡಿನ ಆದಾಯಗಳ ಅನುಪಾತದಲ್ಲಿ ಆಗಿರುವ ವ್ಯತ್ಯಾಸವೇ ಸಾಕ್ಷಿ.

ನಮ್ಮ ಟೆಲಿವಿಷನ್ ಉದ್ಯಮದವರು ಇಂತಹ ‘ಅಬಿವೃದ್ಧಿ’ಯ ಹಣೆಪಟ್ಟಿ ಹಚ್ಚಿಕೊಂಡ ನಾಟಕಗಳನ್ನು ವಿರೋಧಿಸಬೇಕು. ಇಲ್ಲವಾದರೆ ನಾಡಿನ ರೈತರು ತಮ್ಮ ನೆಲಕ್ಕಾಗಿ ಹೋರಾಡುತ್ತಾ ಇರುವಂತೆಯೇ ನಾವೂ ಸಹ ನಮ್ಮ ಕೆಲಸವನ್ನು ಕಿತ್ತುಕೊಳ್ಳಲು ಬರುತ್ತಿರುವ ಹೊರನಾಡಿಗರಂದಿಗೆ ಹೋರಾಡ ಬೇಕಾಗುತ್ತದೆ. ಈ ಮಾತನ್ನು ಇನ್ನೂ ಸ್ಪಷ್ಟ ಪಡಿಸುವುದು ಅಗತ್ಯವೆಂದು ವಿವರಿಸುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ರಿಯಾಲಿಟಿ ಷೋಗಳಿಗೆ ಗಂಟು ಬಿದ್ದಿರುವ ನಮ್ಮ ವಾಹಿನಿಗಳವರು, ಆ ಕಾರ್ಯಕ್ರಮ ತಯಾರಿಸಲು ಹೊರರಾಜ್ಯಗಳಿಂದಲೇ ಹೆಚ್ಚು ಜನರನ್ನು ಕರೆತರುತ್ತಾ ಇದ್ದಾರೆ. ಹೀಗಾಗಿ ಈ ನಾಡಿನ ಅನೇಕ ತಂತ್ರಜ್ಞರು ಕೆಲಸ ಇಲ್ಲದಂತಾಗಿದ್ದಾರೆ. ಇದನ್ನು ತಪ್ಪಿಸುವುದು ಇಂದಿನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಂಘಟನೆಯ ಎಲ್ಲರೂ ಕೈ ಜೋಡಿಸಿ ಹೋರಾಡಬೇಕಾಗಿದೆ.

ಅಸಂಘಟಿತ ಕಾರ್ಮಿಕರ ಮೇಲಿನ ಧಾಳಿಗಳು

ರೈತರ ಹೋರಾಟ ನಡೆಯುತ್ತಿದ್ದ ಕಾಲದಲ್ಲಿಯೇ ನಮ್ಮ ರಾಜಧಾನಿಯ ಮೂರು ಗಾರ್ಮೆಂಟ್ ಫ್ಯಾಕ್ಟರಿಯ ಸರಿಸುಮಾರು ಮೂರುಸಾವಿರ ಕಾರ್ಮಿಕರು ಸಹ ಹೋರಾಡುತ್ತಾ ಇದ್ದಾರೆ. ಕಾರಿಗ ಗಾರ್ಮೆಂಟ್ಸ್ ಎಂಬ ಹೆಸರಿನ ಸಂಸ್ಥೆಯೊಂದು ವ್ಯವಸ್ಥಿತವಾಗಿ ಕಾರ್ಮಿಕರಿಗೆ ಮೋಸ ಮಾಡುತ್ತಾ ಇದೆ. ಕಳೆದ ಆರು ತಿಂಗಳಿನ ಸಂಬಳವನ್ನು ಕಾರ್ಮಿಕರಿಗೆ ಕೊಡದೆ, ಕಾರ್ಖಾನೆಯ ಬಾಗಿಲನ್ನೂ ತೆಗೆಯದೆ ಎಲ್ಲರ ರಾಜೀನಾಮೆಯನ್ನು ಕೇಳುವ ಯತ್ನ ಮಾಡುತ್ತಿದೆ. ಇಂತಲ್ಲಿ ಕೆಲವು ‘ಉಟ್ಟು ಓರಾಟಗಾರರು’ ಮಧ್ಯವರ್ತಿಗಳಾಗಿ ಎರಡೂ ಬಣದಿಂದ ಹಣ ವಸೂಲಿ ಮಾಡುತ್ತಾ ಇದ್ದಾರೆ. ಕಾರ್ಮಿಕರ ಪ್ರಾವಿಡೆಂಟ್ ಫಂಡ್‌ನಲ್ಲಿ ಕಾರ್ಖಾನೆಯವರು ತಾವು ಕಟ್ಟಬೇಕಾದ ಪಾಲನ್ನೂ ಕಟ್ಟಿಲ್ಲ. ಹೀಗಾಗಿ ರಾಜೀನಾಮೆ ಕೊಟ್ಟರೆ ಕಾರ್ಮಿಕರು ಕೆಲಸವಿಲ್ಲದಂತಾಗುವುದಲ್ಲದೆ, ತಮ್ಮ ಪಾಲಿಗೆ ಬರಬೇಕಾದ್ದನ್ನೂ ಕಳೆದುಕೊಳ್ಳುತ್ತಾರೆ. ಈ ಕಾರ್ಮಿಕರು ಸಹ ನಮ್ಮ ಉದ್ಯಮದ ಕಾರ್ಮಿಕರಂತೆಯೇ ಅಸಂಘಟಿತರು. ಇಂತಹವರ ಒಗ್ಗಟ್ಟನ್ನು ಒಡೆಯಲು ಹಲವು ಬಗೆಯ ಪ್ರಯತ್ನಗಳು ಆಗುತ್ತಲೇ ಇರುತ್ತವೆ. ಅದರೊಂದಿಗೆ ರಾಜ್ಯ ಸರ್ಕಾರದ ಹಾಲಿ ಕಾರ್ಮಿಕ ಮಂತ್ರಿಗಳಂತೂ ಈ ಕಾರ್ಮಿಕರ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಮನೆಯ ಬಾಗಿಲಿಗೆ ಬಂದವರನ್ನು ಬಂಧಿಸಿ, ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇರುವ ಕೆಲವರಾದರೂ ಮಾನವೀಯವಾಗಿ ಇರುವುದರಿಂದ ಕಾರ್ಮಿಕರಿಗೆ ತೀರಾ ದೊಡ್ಡ ತೊಂದರೆಯಾಗಿಲ್ಲ. ಆದರೆ ಇಂತಹ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಸಿಗಬೇಕಾದ್ದು ಮುಖ್ಯ. ಯಾವು ಯಾವುದೋ ಊರುಗಳಿಂದ ವಲಸೆ ಬಂದು ಗಾರ್ಮೆಂಟ್ ಜಗತ್ತಿನಲ್ಲಿ ನೆಲೆ ಕಂಡುಕೊಂಡೆವು ಎಂದುಕೊಂಡ ಜೀವಗಳಿಗೆ ಈ ಪರಿಯ ಅನ್ಯಾಯವಾಗುವುದಿದೆಯಲ್ಲಾ ಅದು ನಮಗೂ ಆಗುವ ಅನ್ಯಾಯ.

ಇಂತಹ ಕಾರ್ಖಾನೆಗಳವರು ನಷ್ಟವಾಗಿದೆ ಎಂದು ಕಾರ್ಖಾನೆಯ ಬಾಗಿಲು ಮುಚ್ಚಿದರೂ ಕೇಂದ್ರ ಸರ್ಕಾರದಿಂದ ಕಾರ್ಮಿಕರಿಗೆ ವಿಶೇಷ ಪರಿಹಾರ ದೊರೆಯುತ್ತದೆ. ಆದರೆ ಆ ಮಾಲೀಕರು ಕಂಪೆನಿಗಾಗಿ ಸೋಡಾಚೀಟಿ (ಇನ್‌ಸಾಲ್‌ವೆನ್ಸಿ) ತೆಗೆದುಕೊಳ್ಳುವ ಬದಲಿಗೆ ಕೇವಲ ಕಾರ್ಮಿಕರ ರಾಜೀನಾಮೆಯನ್ನು ಕೇಳುತ್ತಿದ್ದಾರೆ. ಇದರ ಹಿಂದಿನ ಹುನ್ನಾರವೇನೆಂದರೆ, ಯಾವುದೇ ಕಾರ್ಮಿಕ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೆಡೆ ದುಡಿದರೆ ಆತನಿಗೆ ಕೊಡಬೇಕಾಗುವ ಸವಲತ್ತುಗಳು ದೊಡ್ಡದು. ಅದರಿಂದ ತಪ್ಪಿಸಿಕೊಳ್ಳಲು ಮಾಲೀಕರು ನಾಟಕ ಆಡುತ್ತಾ ಇದ್ದಾರೆ. ಇಂತಹ ನಾಟಕಗಳನ್ನು ಕುರಿತು ನಮ್ಮ ಉದ್ಯಮದಲ್ಲಿ ದುಡಿಯುತ್ತಾ ಇರುವವರು ಎಚ್ಚರಿಕೆಯಿಂದಿರಬೇಕು. ಏಕೆಂದರೆ ನಮ್ಮ ಬಹುತೇಕ ವಾಹಿನಿಗಳಲ್ಲಿ ದುಡಿಯುವವರು ಸಹ ಇದೇ ರೀತಿಯ ಮೂರು ವರ್ಷದ ಗುತ್ತಿಗೆ ಎಂದು ಸಹಿ ಹಾಕಿ ಕೆಲಸಕ್ಕೆ ಸೇರುತ್ತಾರೆ. ಒಪ್ಪಂದದ ಅವಧಿ ಮುಗಿದ ಕೂಡಲೇ ಹೊರಗೆ ಕಳಿಸಿ, ಎರಡು ವಾರದ ನಂತರ ಹೊಸ ಒಪ್ಪಂದ ಬರೆಸಿಕೊಳ್ಳುತ್ತಾರೆ. ಈ ಮೂಲಕ ಮಾಲೀಕನ ಲಾಭಗಳಿಕೆ ಮಾತ್ರ ಹೆಚ್ಚುತ್ತದೆ. ದುಡಿಯುವ ವರ್ಗದ ನೆಮ್ಮದಿಗೆ ಕತ್ತರಿ ಬೀಳುತ್ತಲೇ ಇರುತ್ತದೆ.

ಹೊಸವರ್ಷ ಆರಂಭವಾಗಿರುವ ಈ ಸಂದರ್ಭದಲ್ಲಿ ನಮ್ಮೆದುರಿಗೆ ಇರುವ ಈ ಅವಘಡಗಳು ಮತ್ತು ತಲ್ಲಣಗಳನ್ನು ಕುರಿತು ನಿಮಗೆ ಹೇಳಬೇಕಿತ್ತು ಹಾಗಾಗಿ ನಾಲ್ಕು ಸಾಲು ಬರೆದಿದ್ದೇನೆ. ಯೋಚಿಸಿ.

ಹೊಸವರ್ಷ ನಿಮಗೆ ಹೊಸತನ್ನು ತರದೇ ಇದ್ದರೆ ಪರವಾಯಿಲ್ಲ, ನಿಮಗೆ ಅನ್ಯಾಯವಾಗದಿದ್ದರೆ ಸಾಕು ಎಂದು ಹಾರೈಸುತ್ತೇನೆ.

ನಿಮ್ಮವ
ಬಿ.ಸುರೇಶ

Advertisements

3 Responses to “ಹೊಸ ಅವಘಡಗಳ ನಡುವೆ ಹೊಸ ವರುಷಾರಂಭ…!”


 1. 1 Badarinath Palavalli February 1, 2010 at 7:12 am

  ಸರ‍್, ನಾನೊಬ್ಬ ಟೆಲಿವಿಷನ್ ಛಾಯಾಗ್ರಾಹಕ.
  ಸಧ್ಯ ಕಸ್ತೂರಿ ಟೀವಿಯಲ್ಲಿದ್ದೇನೆ.
  ಈ ಲೇಖನ ಚೆನ್ನಾಗಿದೆ.
  – ಬದರಿನಾಥ ಪಲವಳ್ಳಿ
  pl. visit my Kannada Poems blog:
  http://www.badari-poems.blogspot.com

 2. 2 ಬಿ.ಸುರೇಶ March 22, 2010 at 2:39 pm

  ವಂದನೆಗಳು ಬದರಿ ಅವರೇ, ನಿಮ್ಮ ಪ್ರಯತ್ನಗಳು ಯಶಪಡೆಯಲಿ.

 3. 3 murali. B K. October 2, 2010 at 11:24 am

  hello Sir How R U
  Iam Murali. B. K.

  Raghavendra Printing Press/Raghavendra Web Hut

  # 46, Gandhi Bazaar Main Road, Basavanagudi, Bangalore – 560 004.

  Fone:- 080-41692136 / 97411 88713


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 60,851 ಜನರು
Advertisements

%d bloggers like this: