ಒಂದು ವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗೆ ಆಹ್ವಾನ

ಟಾಂ ಟ್ವೈಕರ್ ನಿರ್ದೇಶನದ ‘ರನ್‌ ಲೋಲಾ ರನ್’ ಕುರಿತು ಲೇಖನ
(‘ಸಾಂಗತ್ಯ’ ಪತ್ರಿಕೆಗಾಗಿ ಬರೆದ ಲೇಖನ)

ಆ ಸಿನಿಮಾದ ಅವಧಿ ೮೧ ನಿಮಿಷ (ಆರಂಭಿಕ ಮತ್ತು ಕಡೆಯ ಶೀರ್ಷಿಕೆಗಳನ್ನು ಬಿಟ್ಟು) ಅದರಲ್ಲಿ ೧೫೮೧ ಛೇದಗಳು (ಷಾಟ್‌ಗಳು), ಕಟ್ಸ್, ಡಿಸಾಲ್ವ್, ಫೇಡ್, ವೈಪ್ ಎಲ್ಲವೂ ಸೇರಿ. ಪ್ರತೀ ಷಾಟ್‌ನ ಅವಧಿ ಸರಿಸುಮಾರು ೨ ಸೆಕೆಂಡುಗಳು. ಅಂದರೆ ನೋಡುಗನ ಎದುರಿಗೆ ನಿರಂತರ ದೃಶ್ಯ ಬದಲಾವಣೆಯ ಚಮತ್ಕಾರ. ಇಂತಹದೊಂದು ಅನೇಕ ಷಾಟ್‌ಗಳ ಸಿನಿಮಾ ಸಮಕಾಲೀನ ದಿನಗಳಲ್ಲಿ ಅಪರೂಪವಲ್ಲ. ಆದರೆ ೧೯೯೯ರಲ್ಲಿ ಇದು ಹೊಸ ಪ್ರಯೋಗ. ಆಗ ಜಾಹೀರಾತು ಚಿತ್ರಗಳಲ್ಲಿಯೂ ೩೦ ಸೆಕೆಂಡಿಗೆ ೧೫ ಷಾಟ್ ಬಳಸುತ್ತಾ ಇರಲಿಲ್ಲ. ಪ್ರತೀ ಷಾಟ್‌ನ ಅವಧಿ ದೊಡ್ಡದಿರಬೇಕು ಎಂಬ ಅಲಿಖಿತ ನಿಯಮವೊಂದು ಆಗಿನ ಸಿನಿಮಾ ನಿರ್ಮಿತಿಯಲ್ಲಿ ಇತ್ತು. ಈಗ ಅದು ೩೦ ಸೆಕೆಂಡಿನ ಜಾಹೀರಾತಿಗೆ ೫೦ ಚಿತ್ರಿಕೆಯಾದರೂ ಸಾಲದು ಎನ್ನುವವರೆಗೆ ಬೆಳೆದಿದೆ. ಅಮೇರಿಕನ್ ಜನಪ್ರಿಯ ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್ ಜಾಹೀರಾತಿನಲ್ಲಿ ಹೀಗೆ ಅನೇಕ ಷಾಟ್‌ಗಳನ್ನ ಬಳಸಿ ಸಿನಿಮಾದ ‘ಗತಿ’ಯನ್ನು ಹೆಚ್ಚಿಸುವ ಅಭ್ಯಾಸ ಚಾಲ್ತಿಗೆ ಬಂದಿತ್ತು. ವಿಶೇಷವಾಗಿ ಮ್ಯೂಸಿಕ್ ವಿಡಿಯೋ ಪ್ರಾಕರದಲ್ಲಿ ಈ ಪ್ರಯೋಗಗಳು ಮೊದಲು ಆದವು. ಆದರೆ ಯೂರೋಪಿಯನ್ ಮತ್ತು ಇತರ ದೇಶಗಳ ಸಿನಿಮಾಗಳಲ್ಲಿ ಇಂತಹ ’ವೇಗ’ವರ್ಧಕ ಬಳಸುವ ಅಭ್ಯಾಸ ಇರಲಿಲ್ಲ. ಇಂತಹ ಪ್ರಯೋಗವನ್ನು ಮೊದಲಬಾರಿಗೆ ಜರ್ಮನ್ ಸಿನಿಮಾದಲ್ಲಿ ಮಾಡಿದವನು ಟಾಂ ಟ್ವೈಕರ್. ‘ರನ್ ಲೋಲಾ ರನ್’ ಸಿನಿಮಾದಿಂದಾಗಿ ಈತ ಜರ್ಮನಿಯ ಪ್ರಖ್ಯಾತ ಸಿನಿಮಾ ನಿರ್ದೇಶಕರ ಪಟ್ಟಿಗೆ ಸೇರಿದ. “ಈತನ ಇನ್ನಿತರ ಚಿತ್ರಗಳು ಹೇಗಿದ್ದವು? ಅವುಗಳ ‘ಗತಿ’ ಏನು?” ಎಂದು ಆ ವ್ಯಕ್ತಿಯ ಚಾರಿತ್ರಿಕ ಮತ್ತು ಸೃಜನಾತ್ಮಕ ಮೌಲ್ಯಮಾಪನ ಮಾಡಲು ಈ ಲೇಖನ ನಾನು ಬರೆಯುತ್ತಿಲ್ಲ. ಹಾಗಾಗಿ ‘ರನ್ ಲೋಲಾ ರನ್’ ಸಿನಿಮಾಗೆ ಮಾತ್ರ ಸೀಮಿತವಾಗಿ ನಿಮ್ಮೆದುರು ಒಂದು ಚರ್ಚೆಯನ್ನು ಇಡುತ್ತಾ ಇದ್ದೇನೆ. ಆ ಮೂಲಕ ದೃಶ್ಯ ಭಾಷೆಯನ್ನು ಕಟ್ಟುವವರ ಎದುರಿಗೆ ಇರುವ ಸವಾಲುಗಳು ಮತ್ತು ಅದನ್ನು ಗ್ರಹಿಸುವವರ ಎದುರಿಗೆ ಇರುವ ಆಯ್ಕೆಗಳನ್ನು ಕುರಿತು ಮಾತಾಡುವ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಈ ಚಿತ್ರದ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಚಿತ್ರರಂಗದ ಎದುರಿಗೆ ಇರುವ ಸಮಕಾಲೀನ ಆಯ್ಕೆಗಳನ್ನು ಕುರಿತು ಚರ್ಚಿಸುತ್ತೇನೆ.

ಅಮೇರಿಕಾದ ‘ಜನಪ್ರಿಯ’ ಸಿನಿಮಾ ಮತ್ತು ಯೂರೋಪಿಯನ್ ಸಿನಿಮಾ ಜಗತ್ತು
“ಜನಪ್ರಿಯವಾದುದು ಎಂದರೆ ಅದು ವಿರಾಮ ಸಂಸ್ಕೃತಿಯದು. ಅಲ್ಲಿ ಸಮಯ ಕಳೆಯುವುದಷ್ಟೇ ಮುಖ್ಯ. ಭೌದ್ಧಿಕತೆಗೆ ಕೆಲಸವಿಲ್ಲ. ಯಾವುದೇ ವಿವರದ ಒಳಗೆ ಇಳಿಯದೆ ಮೇಲ್‌ಸ್ತರದ ತಿಳುವಳಿಕೆಯೊಡನೆ ರೋಲರ್ ಕೋಸ್ಟರ್ ಓಟದಂತೆ ಇದ್ದರೆ ಆಯಿತು. ಅದು ಜನಪ್ರಿಯತೆಯ ಮೌಲ್ಯವನ್ನು ಪಡೆದಂತೆ.” ಎನ್ನುತ್ತಾನೆ, ಅಮೇರಿಕಾದ ಸಿನಿಮಾ ವಿಶ್ಲೇಷಕ ನಿಖೊಲಸ್ ಲೂಮನ್. ಇಂತಹ ಮಾತು ಬಳಕೆಗೆ ಬರುವುದಕ್ಕೆ ಎಷ್ಟೋ ಮುಂಚೆ ಅಮೇರಿಕಾದ ಸಿನಿಮಾಗಳು ಇದೇ ಅಲಂಕರಣಗಳ ಜೊತೆಗೆ ತಯಾರಾಗುತ್ತಾ ಇದ್ದವು. ವಿಶೇಷವಾಗಿ ಸ್ಪೀಲ್‌ಬರ್ಗ್‌, ಲೂಕಾಸ್‌ರಂತಹ ನಿರ್ದೇಶಕರ ಆಗಮನದ ಜೊತೆಗೆ ಅಮೇರಿಕಾದ ಸಿನಿಮಾಗಳಿಗೆ ಹೂರಣಕ್ಕಿಂತ ಅಲಂಕಾರಿಕ ಗುಣ ಹೆಚ್ಚಾಗುತ್ತಾ ಹೋಯಿತು. ವಿಶೇಷವಾಗಿ ಸ್ಟುಡಿಯೋ ವ್ಯವಸ್ಥೆಯಲ್ಲಿ ತಯಾರಾದ ಸಿನಿಮಾಗಳಿಗೆ ನಿರ್ದೇಶಕ ಯಾರು? ಅವನ ಆಲೋಚನೆ ಏನು? ಎಂಬುದು ಯಾವತ್ತೂ ಮುಖ್ಯವಾಗಿರಲಿಲ್ಲ. ಸಿನಿಮಾ ತಯಾರಿಸುವ ಸಂಸ್ಥೆಗೆ, ಅದು ಸಂಗ್ರಹಿಸುವ ಹಣ ಮತ್ತು ನಿವ್ವಳ ಲಾಭ ಮಾತ್ರ ಮುಖ್ಯವಾಗುತ್ತಿತ್ತು. ಹೀಗಾಗಿಯೇ ಅಮೇರಿಕಾದ ಜನಪ್ರಿಯ ಸಿನಿಮಾಗಳು ಅತಿ ಹೆಚ್ಚು ಬಂಡವಾಳ ಹೂಡುತ್ತಾ ಇದ್ದದ್ದು ಪ್ರಚಾರಕ್ಕೆ. ಉದಾಹರಣೆಗೆ ಎಂದು ನೆನಪಿಸಿಕೊಳ್ಳುವುದಾದರೆ : “ಗೇಬಲ್ ಷರಟು ಬಿಚ್ಚಿದನೆಂದರೆ ಜಗತ್ತಿನ ಎಲ್ಲಾ ಬನಿಯನ್ ಫ್ಯಾಕ್ಟರಿಗಳ ಬಾಗಿಲು ಹಾಕಿದಂತೆ” ಎಂಬ ಘೋಷಾ ವಾಕ್ಯವನ್ನು ‘ಗಾನ್ ವಿಥ್‌ ದ ವಿಂಡ್’ ಸಿನಿಮಾದ ಪ್ರಚಾರದಲ್ಲಿ ವ್ಯಪಾಕವಾಗಿ ಬಳಸಲಾಗಿತ್ತು. ಸಿನಿಮಾದ ಭಿತ್ತಿಪತ್ರಗಳಲ್ಲೂ ಕ್ಲಾರ್ಕ್‌ ಗೇಬಲ್ ಎಂಬ ನಟ ಷರಟು ತೆಗೆದು ಎದೆ ತೋರಿಸುತ್ತಾ ನಿಂತಿರುವುದನ್ನು ಪ್ರಧಾನವಾಗಿ ಬಳಸಲಾಗಿತ್ತು. ಈ ಸಿನಿಮಾದ ಪ್ರಚಾರಕ್ಕಾಗಿ ಬಳಸಿದ ಹಣ ಆ ಸಿನಿಮಾದ ತಯಾರಿಕೆಗಿಂತ ಎರಡು ಪಟ್ಟು ಹೆಚ್ಚಿತ್ತು. ಹಾಗಾಗಿಯೇ ಈ ಸಿನಿಮಾ ಜಗತ್ತಿನಾದ್ಯಂತ ಸುದ್ದಿ ಮಾಡಿಯೇ ಯಶಸ್ವಿಯಾಯಿತು ಎನ್ನುತ್ತದೆ ಸ್ಯಾನ್‌ಫ್ರಾನ್ಸಿಸ್ಕೊ ಯೂನಿವರ್ಸಿಟಿಯು ಸಿನಿಮಾ ವಿಭಾಗದವರು ಸಂಗ್ರಹಿಸಿದ ಯಶಸ್ವಿ ಸಿನಿಮಾಗಳನ್ನು ಕುರಿತ ಅಂಕಿ ಅಂಶಗಳು. ಈ ಘೋಷಾ ವಾಕ್ಯದಿಂದ ಬನಿಯನ್ ಫ್ಯಾಕ್ಟರಿಗಳ ಬಾಗಿಲು ಹಾಕಿತೋ – ಇಲ್ಲವೋ ಮುಖ್ಯವಲ್ಲ. ಆದರೆ ಇಂತಹ ಪ್ರಚಾರದಿಂದಾಗಿ ಪ್ರತೀ ಸಿನಿಮಾದ ಸುತ್ತಾ ಒಂದು ಜನಾಭಿಪ್ರಾಯದ ಆವರಣ ಸೃಷ್ಟಿಯಾಗುತ್ತಿತ್ತು. ಅದರೊಂದಿಗೆ ಅಮೇರಿಕಾಗೆ ಎರಡನೆಯ ಮಹಾಯುದ್ಧದ ನಂತರ ದೊರೆತ ಹಿರಿಯಣ್ಣನ ಪಾತ್ರವೂ ಸೇರಿಕೊಂಡು, ಅಲ್ಲಿ ತಯಾರಾದ ಚಿತ್ರಗಳು ಜಗತ್ತಿನ ಎಲ್ಲಾ ಮೂಲೆಗೂ ತಲುಪತೊಡಗಿದವು. ಇಂಗ್ಲೀಷ್ ಬಾರದವರೂ ಸಹ ಆ ಸಿನಿಮಾಗಳನ್ನು ತಮ್ಮ ತಮ್ಮ ಭಾಷೆಯಲ್ಲಿ ನೋಡುವಂತೆ ಸಿನಿಮಾಗಳನ್ನು ಡಬ್ ಮಾಡಲು ಆರಂಭಿಸಿದ್ದು ಸಹ ಅಮೇರಿಕನ್ ಸ್ಟುಡಿಯೋ ವ್ಯವಸ್ಥೆಯೇ. ಇಂತಹ ಸಿನಿಮಾಗಳು ಜಾಗತಿಕ ಸಿನಿಮಾದ ಮೇಲೆ ಎಂತಹ ಪ್ರಬಾವ ಬೀರಿದ್ದವೆಂದರೆ ಆಯಾ ದೇಶಗಳ/ ಪ್ರದೇಶಗಳ/ ಭಾಷೆಗಳ ಸಿನಿಮಾ ಉದ್ಯಮವೂ ಅಮೇರಿಕನ್ ಸಿನಿಮಾದ ಎದುರು ಸ್ಪರ್ಧಿಸಲಾಗದೆ ಸೋಲುತ್ತಾ ಇದ್ದವು. ಅಮೇರಿಕನ್ ಸಿನಿಮಾಗಳ ಶ್ರೀಮಂತಿಕೆ ಸ್ಥಳೀಯ ಸಿನಿಮಾಗಳಿಗೆ ಬರುವುದು ಖರ್ಚಿನ ದೃಷ್ಟಿಯಿಂದ ಕಷ್ಟವಾಗಿತ್ತು. ಹೀಗಾಗಿ ಜಗತ್ತಿನಾದ್ಯಂತ ಎಲ್ಲಾ ಸಿನಿಮಾ ತಯಾರಕರೂ ಸಹ ಅಮೇರಿಕನ್ ಸಿನಿಮಾಗಳ ಈ ಹೇರಿಕೆಯ ಕುರಿತು ಹೇವರಿಕೆಯಿಂದ ಇದ್ದರು, ಜೊತೆಗೆ ಈ ಸ್ಪರ್ಧೆಗೆ ಪರ್ಯಾಯ ಮಾರ್ಗ ಹುಡುಕುವ ಪ್ರಯತ್ನದಲ್ಲಿ ಇದ್ದರು. ಈ ಹಾದಿಯಲ್ಲಿ ಅಮೇರಿಕನ್ ಕಥನ ತಂತ್ರವನ್ನು ಬಿಟ್ಟು ಬೇರೆಯದೇ ಮಾರ್ಗವನ್ನು ಅನ್ವೇಶಿಸುತ್ತಾ ೧೯೮೦ ರಿಂದ ೨೦೦೦ದ ವರೆಗೆ ಅನೇಕ ಸಿನಿಮಾಗಳು ತಯಾರಾದವು. ಆದರೆ ಅಮೇರಿಕನ್ ಕಥನ ತಂತ್ರವನ್ನೇ ಬಳಸಿ, ಸಿನಿಮಾದ ಅವಧಿಯನ್ನು ಸಹ ಅಮೇರಿಕನ್ ಸಿನಿಮಾಗಳಂತೆ ಕಿರಿದು ಗೊಳಿಸಿ, ಪ್ರೇಕ್ಷಕರನ್ನು ೯೦ ನಿಮಿಷಗಳ ಕೌತುಕದಲ್ಲಿ ಇಡಲು ಸಾಧ್ಯವಾದದ್ದು ಟಾಂ ಟ್ವೈಕರ್ ಗೆ. ಆತ ಜನಪ್ರಿಯ ತಂತ್ರವನ್ನು ವಿರೋಧಿಸದೆ, ಆ ತಂತ್ರದ ಒಳಗಡೆಯೇ ತನ್ನ ಕಥನವನ್ನು ಇಟ್ಟಿದ್ದ. ಹೀಗಾಗಿಯೇ ‘ರನ್ ಲೋಲಾ ರನ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿಯಾಯಿತು. ಯುರೋಪಿಯನ್ ಚಿತ್ರ ವಿಮರ್ಶಕರಿಗೆ ಬೇಕಾಗಿದ್ದ ಪ್ರಯೋಗಶೀಲ ಗುಣವೂ ಸಿನಿಮಾದೊಳಗೆ ಕಣ್ಣಿಗೆ ಕಾಣುವಂತೆ ಇತ್ತು. ಈ ಚಿತ್ರವೂ ಏಕಕಾಲಕ್ಕೆ ಅನೇಕ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತು ಮತ್ತು ಪ್ರದರ್ಶನವಾದ ಕಡೆಯಲೆಲ್ಲಾ ಜನಮೆಚ್ಚುಗೆಯನ್ನು ಮಾತ್ರವೇ ಅಲ್ಲದೇ ಚರ್ಚೆಯನ್ನೂ ಹುಟ್ಟುಹಾಕಿತು. ‘ರನ್ ಲೋಲಾ ರನ್’ ಸಿನಿಮಾ ಇವತ್ತಿಗೂ ಚರ್ಚೆಗೆ ಯೋಗ್ಯವಾದ ಸಿನಿಮಾ. ‘ಅಮೇರಿಕನ್ ಜನಪ್ರಿಯ ಸಿನಿಮಾಗಳ ಹೊಡೆತಕ್ಕೆ ಜರ್ಮನ್ ಉತ್ತರ ರನ್ ಲೋಲಾ ರನ್’ ಎಂದು ಸಹ ಅನೇಕರು ಇಂದಿಗೂ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿಯೇ ಈ ಸಿನಿಮಾ ಬಗೆವ ಬಗೆ ಏನು ಎಂದು ಮತ್ತೊಮ್ಮೆ ತಮ್ಮೆದುರು ಪ್ರಶ್ನೆಗಳನ್ನು ಇಡುತ್ತಿದ್ದೇನೆ.
೨೦ ನಿಮಿಷಗಳ ಕೌತುಕ
‘ರನ್ ಲೋಲಾ ರನ್’ ಸಿನಿಮಾದಲ್ಲಿನ ಕಥಾವಸ್ತು ತೀರಾ ಸಣ್ಣದು. ಲೋಲಾಳ ಗೆಳೆಯ ಮಾನ್ನಿಗೆ ಇಪ್ಪತ್ತು ನಿಮಿಷಗಳ ಒಳಗೆ ನೂರುಸಾವಿರ ಮಾರ್ಕ್‌ ಹಣ ಬೇಕಾಗಿದೆ. ಆ ಹಣ ಹೊಂದಿಸದೆ ಇದ್ದರೆ ಆತ ಸಾಯುತ್ತಾನೆ. ಲೋಲಾ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನು ಮಾಡುತ್ತಾಳೆ? ಹೇಗೆ ಹಣ ಹೊಂದಿಸುತ್ತಾಳೆ? ಮಾನ್ನಿ ಮತ್ತು ಲೋಲಾರ ಪ್ರೇಮ ಉಳಿಯುತ್ತದೆಯೇ ಅಥವಾ ದುರಂತ ಕತೆಯಾಗುತ್ತದೆಯೇ ಎಂಬುದು ‘ರನ್ ಲೋಲಾ ರನ್’ ಸಿನಿಮಾದ ತಿರುಳು. ಲೋಲಾ ತನಗಿರುವ ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಏನೇನು ಮಾಡಬಹುದು ಎಂಬ ಮೂರು ವಿಭಿನ್ನ ಮಾರ್ಗಗಳನ್ನು ಟ್ವೈಕರ್ ಚಿತ್ರಿಸುತ್ತಾನೆ. ಹೀಗಾಗಿ ಲೋಲಾ ಚಿತ್ರದ ಉದ್ದಕ್ಕೂ ಓಡುತ್ತಲೇ ಇರುತ್ತಾಳೆ. ಈ ಓಟಕ್ಕೆ ಸಾವಿರಾರು ಛೇದಗಳನ್ನು ಬಳಸುತ್ತಲೇ ವಿಡಿಯೋ ಫುಟ್ಟೇಜ್ ಮತ್ತು ೨ಡಿ ಆನಿಮೇಷನ್ ಸಹ ಬಳಸಲಾಗುತ್ತದೆ. ಹೀಗಾಗಿ ಇಡೀ ಸಿನಿಮಾದಲ್ಲಿ ಅಸಂಭಾವ್ಯ ಪಾತ್ರವೊಂದರ ಸಂಭಾವ್ಯ ಸಾಧ್ಯತೆಗಳ ಮೂರು ಮುಖಗಳು ಪ್ರೇಕ್ಷಕನ ಎದುರಿಗೆ ಕಾಣಿಸುತ್ತವೆ. ಲೇಖನದ ಆರಂಭದಲ್ಲಿಯೇ ತಿಳಿಸಿದ ಅಷ್ಟೂ ಚಿತ್ರಿಕೆಗಳು (೧೫೮೧) ಲೋಲಾಳ ಈ ಮೂರು ಕಲ್ಪನೆಗಳನ್ನು ಅನಾವರಣಗೊಳಿಸಲು ಬಳಕೆಯಾಗುತ್ತವೆ.
ಒಂದೇ ಸಿನಿಮಾದ ಒಳಗೆ ದೊಡ್ಡ ಷಾಪಿಂಗ್ ಮಾಲ್‌ನ ದರೋಡೆ, ಬ್ಯಾಂಕ್‌ ದರೋಡೆ, ಗುಂಡಿನ ಕಾಳಗ, ಆಕ್ಸಿಡೆಂಟ್‌ನಲ್ಲಿ ಪ್ರಧಾನ ಪಾತ್ರದ ಸಾವು, ಕ್ಯಾಸಿನೋದಲ್ಲಿ ಸಾವಿರಾರು ರೂಪಾಯಿ ಸಂಪಾದನೆ, ಇವೆಲ್ಲವೂ ಆಗುವುದಲ್ಲದೆ ಸುಖಾಂತವೂ ಇರುವುದು ಅಮೇರಿಕನ್ ಸಿನಿಮಾದಲ್ಲಿಯೂ ಅಪರೂಪ. ಇದೆಲ್ಲವನ್ನೂ ಒಳಗೊಂಡ ಸಿನಿಮಾ ‘ರನ್ ಲೋಲಾ ರನ್’ ಹಾಗಾಗಿಯೇ ಎಲ್ಲರಿಗೂ ಬೇಕಾದ ಎಲ್ಲವೂ ಇರುವ ಸಿನಿಮಾ ಆಗಿ ಇದು ಜಗತ್ತಿನಾದ್ಯಂತ ಯಶಸ್ವಿಯೂ ಆಗಿರಬಹುದು.
ಈ ಸಿನಿಮಾದ ಕಥನ ಕ್ರಮದಲ್ಲಿ ಮೂರು ವಿಭಿನ್ನ ಕತೆಗಳನ್ನು ಒಂದೇ ಕಾರಣಕ್ಕಾಗಿ ಹೇಳಲು ಟಾಂ ಟ್ವೈಕರ್ ೨ ಆಯಾಮಾದ ಆನಿಮೇಷನ್ ಚಿತ್ರಗಳನ್ನು ಬಳಸುತ್ತಾನೆ. ಕತೆ ಹೇಳಲು ಅತ್ಯಗತ್ಯ ಎಂದು ಸಿದ್ಧಾಂತಿಗಳು ಹೇಳುವ ಕಾಲೈಕ್ಯ, ಸ್ಥಳೈಕ್ಯಗಳನ್ನು ಈ ಆನಿಮೇಷನ್‌ನ ಬಳಕೆಯಿಂದ ನಿರ್ದೇಶಕ ದಾಟಿಕೊಳ್ಳುತ್ತಾನೆ. ಆನಿಮೇಷನ್ ಚಿತ್ರಗಳಿಗೆ ಕಾಲ್ಪನಿಕ ಗುಣವೊಂದಿದೆ. ಅದನ್ನು ನೋಡುವವರು ಇದು ಸುಳ್ಳು ಎಂದು ತಿಳಿದೇ ನೋಡುತ್ತಾ ಇರುತ್ತಾರೆ. ಅಂತಹ ಎರಡು ಆಯಾಮಾದ ಪಾತ್ರವೊಂದಕ್ಕೆ ಕಾಲ್ಪನಿಕ ಶಕ್ತಿಯೊಂದು ದತ್ತವಾಗುತ್ತದೆ. ಆ ಶಕ್ತಿಯ ಸಹಾಯ ಪಡೆಯುವ ’ರನ್ ಲೋಲಾ ರನ್‌’ ಚಿತ್ರದ ನಿರ್ದೇಶಕ ಅದೇ ಇಪ್ಪತ್ತು ನಿಮಿಷಗಳ ಕತೆಗೆ ಮತ್ತೆ ಮತ್ತೆ ಬಂದು, ಪ್ರತೀ ಬಾರಿಯೂ ಹೊಸದೇ ಎನಿಸುವ ಅನುಭವವನ್ನು ನೋಡುಗನ ಎದುರಿಗೆ ಇಡುತ್ತಾನೆ.
ಹಾಗೆ ನೋಡಿದರೆ ಈ ಪ್ರಯೋಗ ಹೊಸದೇನೂ ಅಲ್ಲ. ಅದಾಗಲೇ ಕುರಸೋವಾ ತನ್ನ ’ರಾಶೋಮನ್‌’ನಲ್ಲಿ ಒಂದೇ ಕತೆಯ ಮೂರು ವಿಭಿನ್ನ ನೋಟಗಳನ್ನು ಕಾಣಿಸಿದ್ದಿದೆ. ಅದಲ್ಲದೆ ಕ್ವಾಂಟಿನ್ ಟಾರಂಟಿನೊ ತನ್ನ ’ಪಲ್ಪ್ ಫಿಕ್ಷನ್’ ಸಿನಿಮಾದಲ್ಲಿ ಕಾಲಂತರಗಳ ಹಂಗಿಲ್ಲದೆ ಲಂಘಿಸುವ ಪ್ರಯೋಗ ಮಾಡಿದ್ದಿದೆ. ರಾಮಿಸಸ್‌ನ “ಗ್ರೌಂಡ್ ಹಾಗ್ ಡೇ”, ಹೌವಿಟ್ಜ್‌ ನ “ಸ್ಲೈಡಿಂಗ್ ಡೋರ್ಸ್” ಮುಂತಾದ ಸಿನಿಮಾಗಳಲ್ಲಿಯೂ ಹೀಗೆಯೆ ಕಾಲ ಲಂಘನದ ಪ್ರಯತ್ನಗಳು ಆಗಿವೆ. ತೀರಾ ಈಚೆಗಿನ ಸಿನಿಮಾಗಳಾದ “ಅಮೇರೋಸ್ ಪರ್ರೋಸ್” ಮತ್ತು “ಬರಾನ್‌” ನಂತಹ ಸಿನಿಮಾಗಳಲ್ಲಿಯೂ ಮೂರು ಕತೆಗಳು ಒಂದಾಗುವ ಪ್ರಯೋಗ ಆಗಿದೆ. ಆದರೆ “ಲೋಲಾ” ಇವೆಲ್ಲವುಗಳಿಗಿಂತ ಭಿನ್ನವಾಗಿಯೇ ನಿಲ್ಲುತ್ತದೆ. ಇಲ್ಲಿ ಒಬ್ಬ ಪ್ರೇಮಿಯು ತನ್ನ ಪ್ರೇಮ ಮತ್ತು ಪ್ರಿಯಕರನನ್ನು ಉಳಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುತ್ತಾ ಸಾಗುತ್ತಾಳೆ. ಆ ಹಾದಿಯಲ್ಲಿ ಅವಳಿಗೆ ಆಗುವ ಸತ್ಯದ ದರ್ಶನವನ್ನು ‘ಟ್ಯೂಟಾನಿಕ್’ ಎನ್ನಬಹುದು. ಟ್ಯೂಟಾನಿಕ್ ಎನ್ನುವುದು ಜರ್ಮನ್ ವೇದಾಂತಕ್ಕೆ ಮತ್ತೊಂದು ಹೆಸರು. ಅಲ್ತೂಸರ್ ಈ ಸಿದ್ಧಾಂತದ ಪ್ರತಿಪಾದಕ ಎಂದು ಗುರುತಿಸುತ್ತಾರಾದರೂ ಇದಕ್ಕೆ ಜರ್ಮನ್‌ ಭಾಷೆಗೆ ಇರುವಷ್ಟೇ ಇತಿಹಾಸವಿದೆ. ಈ ಸಿದ್ಧಾಂತವನ್ನು ಭೌತವಾದದ ವಿಸ್ತರಣೆ ಎನ್ನಬಹುದು. ಟಾಂ ಟ್ವೈಕರ್ ’ರನ್ ಲೋಲಾ ರನ್‌’ನ ಮೂಲಕ ಎಲ್ಲ ಆಯ್ಕೆಗಳಿಗಿಂತ ಈ ಕ್ಷಣ ಮುಖ್ಯ ಎಂಬ ಟ್ಯೂಟಾನಿಕ್ ಸಿದ್ಧಾಂತವನ್ನು ತನ್ನ ಸಿನಿಮಾದ ಮೂಲಕವೇ ಸ್ಪಷ್ಟಪಡಿಸುತ್ತಾನೆ.
ಕಥನ ತಂತ್ರ
ಟ್ವೈಕರ್ ನ ಸಿನಿಮಾ ಆರಂಭವಾಗುವುದು ದೊಡ್ಡ ಗಡಿಯಾರದ ಪೆಂಡ್ಯೂಲಮ್ ತೂಗುವುದರಿಂದ. ಗಡಿಯಾರವೂ ತೂಗುತ್ತಿರುವಂತೆಯೇ ಟಿ.ಎಸ್ ಎಲಿಯಟ್‌ನ ಪದ್ಯದ ಸಾಲುಗಳು ಕಾಣಿಸುತ್ತವೆ. “ವಿ ಷೆಲ್ ನಾಟ್ ಸೀಸ್ ಫ್ರಮ್ ಎಕ್ಸಪ್ಲೋರೇಷನ್ ಅಂಡ್ ದ ಎಂಡ್ ಆಫ್ ಆಲ್ ಎಕ್ಸಪ್ಲೋರೇಷನ್ ವಿಲ್ ಬಿ ಟು ಅರೈವ್ ಅಟ್ ವೇರ್ ವಿ ಸ್ಟಾರ್ಟೆಡ್ ಅಂಡ್ ನೋ ದ ದ ಪ್ಲೇಸ್ ಫಾರ್ ದ ಫಸ್ಟ್ ಟೈಂ” ಎಂಬ ಈ “ಲಿಟಲ್ ಗಿಡ್ಡಿಂಗ್” ಪದ್ಯದ ಸಾಲುಗಳು ಸಿನಿಮಾದ ಆತ್ಮದ ಹಾಗೆಯೇ ಧ್ವನಿಸುತ್ತವೆ. ಇದಾದ ನಂತರ ಯಾರ ಮುಖಗಳು ಎಂದು ತಿಳಿಯದ ಜನರ ನಡುವೆ ಓಡಾಡುವ ಕ್ಯಾಮೆರಾ ಯಾವುದೋ ವ್ಯಕ್ತಿಯ ಬಳಿ ಸುಮ್ಮನೆ ನಿಲ್ಲುತ್ತದೆ. ನಿರ್ಭಾವುಕ ವ್ಯಕ್ತಿಯನ್ನು ತೋರುತ್ತಾ ಮತ್ತೆ ಚಲಿಸುತ್ತದೆ. ಹೀಗೆ ಅನೇಕ ಅಪರಿಚಿತ ಮುಖಗಳನ್ನು ತೋರುತ್ತಾ ಕಡೆಗೆ ಜರ್ಮನಿಯ ಪ್ರಖ್ಯಾತ ಫುಟ್‌ಬಾಲ್ ಕೋಚ್‌ನನ ಮುಖ ತೋರಿಸುತ್ತದೆ. ಆತ ಹೇಳುತ್ತಾನೆ. “ಇನ್ನೆಲ್ಲವೂ ಸುಳ್ಳು. ಆಟ ೯೦ ನಿಮಿಷದ್ದು ಎಂಬುದಷ್ಟೇ ಮುಖ್ಯ. ಚೆಂಡಿನ ಓಟ ನೋಡಿ” ಎಂದು ಆತ ಒಂದು ಫುಟ್‌ಬಾಲನ್ನು ಒದೆಯುತ್ತಾನೆ. ಆವರೆಗೆ ನೆಲ ಮಟ್ಟದಲ್ಲಿದ್ದ ಕ್ಯಾಮೆರಾ ದಿಢೀರನೆ ಎಲ್ಲರ ನೆತ್ತಿಯ ಮೇಲೆ, ಆಕಾಶದಲ್ಲಿ ನಿಂತಂತೆ ಬಾಲ್ ತನ್ನತ್ತ ಬರುವುದನ್ನು ನೋಡುತ್ತದೆ. ಆ ಚೆಂಡು ಕ್ಯಾಮೆರಾದ ಬಳಿಗೆ ಬಂದೊಡನೆಯೆ ಟ್ವೈಕರ್ ಆನಿಮೇಷನ್ ಚಿತ್ರವೊಂದಕ್ಕೆ ಕತ್ತರಿಸುತ್ತಾನೆ. ಕೆಂಪು ಕೂದಲ ಹುಡುಗಿಯಿಬ್ಬಳು ಕ್ಯಾಮೆರಾಗೆ ಬೆನ್ನಾಗಿ ಓಡುತ್ತಾಳೆ. ಓಡುತ್ತಾ ಓಡುತ್ತಾ ಆ ಎರಡು ಆಯಾಮದ ಚಿತ್ರವು ಗುಹೆಗಳಲ್ಲಿ ಸಾಗಿ ಕಡೆಗೆ ಚಕ್ರದಾಕಾರದ ಮೆಟ್ಟಿಲುಗಳ ಮೇಲೆ ಓಡಿ, ಅಂತಿಮವಾಗಿ ದೊಡ್ಡ ಗಡಿಯಾರ ಒಂದರ ಬಾಯಿಯ ಒಳಗೆ ಸಾಗಿಬಿಡುತ್ತದೆ. ಅಲ್ಲಿ ಕೇಳುವ ಟೆಲಿಫೋನ್ ಸದ್ದನ್ನು ಹಿನ್ನೆಲಯಲ್ಲಿ ಇರಿಸಿಕೊಂಡೇ ಈ ವರೆಗೆ ನೋಡಿದ ಚಿತ್ರವೇ ಜೀವಂತವಾಯಿತೋ ಎಂಬಂತೆ ಕೋಣೆಯೊಂದರೊಳಗೆ ಇರುವ ಕೆಂಪು ಟೆಲಿಫೋನ್ ತೋರುವ ಕ್ಯಾಮೆರಾ. ಅದನ್ನು ಹೆಂಗಸಿನ ಕೈಯೊಂದು ತೆಗೆದುಕೊಳ್ಳುತ್ತದೆ. ಅದರೊಡನೆ ಸರಿವ ಕ್ಯಾಮೆರಾಗೆ ಈ ವರೆಗೆ ಆನಿಮೇಷನ್ ಚಿತ್ರವಾಗಿ ನೋಡಿದ್ದ ಹುಡುಗಿಯೇ ಜೀವಂತವಾದಳೋ ಎಂಬಂತೆ ಲೋಲಾ ಕಾಣುತ್ತಾಳೆ. ಹೀಗೆ ನಿರ್ದೇಶಕ ಕಾಲ್ಪನಿಕ ಚಿತ್ರದಿಂದ ವಾಸ್ತವಕ್ಕೆ ಬರುತ್ತಾರೆ. ಲೋಲಾಳ ಜೊತೆಗೆ ಮಾತಾಡುತ್ತಾ ಇರುವ ಮಾನ್ನಿ ಯಾವುದೋ ರಸ್ತೆಯಲ್ಲಿರು ಫೋನ್ ಬೂತಿನಲ್ಲಿದ್ದಾನೆ. ಕ್ರೇನ್‌ನಲ್ಲಿ ನೆತ್ತಿಯ ಮೇಲಿಂದ ನೋಡುತ್ತಾ ಇದ್ದಂತೆ ಕೆಳಗಿಳಿದು ಬೂತಿನ ಒಳಗಿರುವ ಮಾನ್ನಿಯನ್ನು ತೋರುತ್ತದೆ. ಹೀಗೆ ಸಾಮಾನ್ಯವಾಗಿ ಆಕ್ಷನ್ ಸಿನಿಮಾಗಳಲ್ಲಿ ಬಳಸುವ ವ್ಯಾಕರಣವನ್ನು ಬಳಸುತ್ತಲೇ ನಿರ್ದೇಶಕ ಪ್ರೇಮ ಕತೆಯೊಳಗೆ ಸಾಗುತ್ತಾನೆ. ‘ಲೋಲಾ’ ಚಿತ್ರವನ್ನ ನೋಡಿದವರಿಗೆ ಇದಕ್ಕೆ ‘ಸ್ಪೀಡ್’ ಎಂದು ಹೆಸರಿಟ್ಟಿದ್ದರೆ ಸರಿಯಾಗುತ್ತಿತ್ತು ಎನಿಸಬಹುದು. ಆ ವೇಗ ಈ ಸಿನಿಮಾದ್ದು. ೧೯೦೯ರ ಫ್ಯೂಚರಿಸ್ಟ್ ಮೂವ್‌ಮೆಂಟ್‌ನ ವಕ್ತಾರ ಫಿಲಿಪ್ಪೋ ಮಾರಿನೆಟ್ಟಿ ತಮ್ಮ ಹೊಸ ಚಳುವಳಿಯನ್ನು ಕುರಿತು ಮಾತಾಡುತ್ತಾ ಹೀಗೆ ಹೇಳುತ್ತಾನೆ, “ವೇಗವೇ ನಮ್ಮ ದೇವರು. ಅದೇ ನಮ್ಮ ಸೌಂದರ್ಯ. ಮೆಚಿನ್‌ಗನ್ನಿನ ಹಾಗೆ ಸದ್ದು ಮಾಡುತ್ತಾ ಅದೇ ವೇಗದಲ್ಲಿ ಸಾಗುವ ಮೋಟಾರ್ ಬೈಕ್ ನಮಗೆ ಪ್ರಿಯವಾದದ್ದು.” ಇದು “ಲೋಲಾ” ಸಿನಿಮಾದಲ್ಲಿ ಯಥಾವತ್ತಾಗಿ ಬಳಕೆಯಾದಂತಿದೆ. ಅತಿ ವೇಗದ ಸಂಕಲನ, ಹೊಸದೆನಿಸುವ ಮೂರು ದೃಷ್ಟಿಕೋನದ ಒಂದೇ ಕತೆ, ಶಕ್ತಿ ಸಂಚಯನವಾದಂತಿರುವ ಪ್ರತೀ ದೃಶ್ಯ, ಆನಿಮೇಷನ್, ವಿಡಿಯೋ ಮತ್ತು ೩೫ ಎಂಎಂ ಕಚ್ಚಾ ಫಿಲಂಗಳ ಬಳಕೆ, ಫ್ಲಾಷ್ ಫಾರ್ವರ್ಡ್ ಮತ್ತು ಸ್ಟಾಪ್ ಮೋಷನ್ ಫೋಟೋಗ್ರಫಿ… ಹೀಗೇ ಎಲ್ಲಾ ತಂತ್ರಗಳನ್ನು ಟಾಂ ಟ್ವೈಕರ್ ತನ್ನ ಸಿನಿಮಾದಲ್ಲಿ ಬಳಸುತ್ತಾನೆ. ಈ ಮೂಲಕ ನವ್ಯೋತ್ತರದ ಘೋಷಾ ವಾಕ್ಯವಾದ “ಎಲ್ಲವೂ ಓಕೆ/ ಸಬ್ ಕುಚ್ ಚಲ್ತಾ ಹೇ/ ಎವರಿಥಿಂಗ್ ಗೋಸ್” ಎಂಬುದನ್ನು ನಿರ್ದೇಶಕ ಸಕಾರಣದೊಡನೆ ಬಳಸಿಕೊಳ್ಳುತ್ತಾನೆ.
ಕತೆಯೊಂದನ್ನು ಮೂರು ಹಂತದಲ್ಲಿ ಹೇಳುವಾಗಲೇ ಪ್ರಧಾನ ಪಾತ್ರದ ಸುತ್ತ ಬದುಕುತ್ತಿರುವ ಇನ್ನಿತರ ಪಾತ್ರಗಳ ಬಣ್ಣಗಳನ್ನು ಸಹ ಪ್ರತೀ ಕತೆಯಲ್ಲಿ ನಿರ್ದೇಶಕ ಬದಲಾಯಿಸುತ್ತಾನೆ. ಮೊದಲ ಕತೆಯಲ್ಲಿ ಲೋಲಾಳ ಅಪ್ಪನಿಗೆ ಮದುವೆಯಾಚೆಗೆ ಒಂದು ಹೊಸ ಸಂಬಂಧವಿದೆ ಎಂದು ತಿಳಿದರೆ, ಮುಂದಿನ ಕತೆಯಲ್ಲಿ ಅದೇ ಅಪ್ಪ ತನ್ನ ಮಗಳಿಗೆ ನೀನಿ ನನಗೆ ಹುಟ್ಟಿದವಳಲ್ಲ ಎಂದು ಬಿಡುತ್ತಾನೆ, ಮೂರನೆಯ ಕತೆಯಲ್ಲಿ ಅಪ್ಪ ಮಾತಿಗೆ ಸಿಗುವ ಬದಲು ಆತನ ಗೆಳೆಯ ಮತ್ತು ಈ ಹಿಂದಿನ ಕತೆಯಲ್ಲಿ ಅಪ್ಪ ಲೋಲಾ ಯಾರಿಗೆ ಹುಟ್ಟಿದಳು ಎಂದು ತಿಳಿಸಿರುತ್ತಾನೋ ಆ ವ್ಯಕ್ತಿ ಸಿಗುತ್ತಾನೆ. ಅವನೊಂದಿಗಿನ ಸಣ್ಣ ಭೇಟಿಯು ಮುಂದುವರಿದು ಆತನಿಗೆ ರಸ್ತೆ ಅಪಘಾತವಾಗಿ, ಅದೇ ಆಂಬುಲೆನ್ಸ್ ಒಳಗೆ ಕುಳಿತ ಲೋಲಾ ಆತನ ಕೈ ಹಿಡಿದೊಡನೆ ಹೃದಯಾಘಾತ ಆಗಿ ಸಾಯಲಿದ್ದವನು ಬದುಕಿಬಿಡುತ್ತಾನೆ. ಹೀಗೆ ಕತೆಯಿಂದ ಕತೆಗೆ ಲಂಘನಗೊಳ್ಳುತ್ತಾ ಸಾಗುವ ವಿವರಗಳು ಪಾತ್ರಗಳನ್ನೂ ವಿಸ್ತರಿಸುತ್ತವೆ.
ಮೂರೂ ಕತೆಗಳಲ್ಲಿ ಸ್ವರೂಪ ಬದಲಾಗುತ್ತಾ ಸಾಗುವ ಮತ್ತೊಂದು ವಿವರ ಆಂಬುಲೆನ್ಸ್‌ ನದ್ದು. ಮೊದಲ ಕತೆಯಲ್ಲಿ ಲೋಲಾ ಆಂಬುಲೆನ್ಸ್ ಡ್ರೈವರ್, ರಸ್ತೆಯಲ್ಲಿ ಓಡುತ್ತಿರುವ ಲೋಲಾಳನ್ನು ನೋಡುತ್ತಲೇ, ದೊಡ್ಡ ಗಾಜಿನ ಹಾಳೆ ಹಿಡಿದು ರಸ್ತೆ ದಾಟುತ್ತಾ ಇದ್ದವರಿಗೆ ಡಿಕ್ಕಿ ಹೊಡೆಯುವುದರಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಳ್ಳುತ್ತಾನೆ. ಹಾಗೆ ನಿಂತ ಆಂಬುಲೆನ್ಸ್ ಡ್ರೈವರ್ ನನ್ನು ಲಿಫ್ಟ್ ಕೊಡು ಎಂದು ಲೋಲಾ ಕೇಳುತ್ತಾಳೆ. ಆತ ಆಗದು ಎಂದು ಸಾಗುತ್ತಾನೆ. ಎರಡನೆಯ ಕತೆಯಲ್ಲಿ ಅದೇ ಗಾಜಿನ ಹಾಳೆಗೆ ಆಂಬುಲೆನ್ಸ್ ಡಿಕ್ಕಿ ಹೊಡೆಯುತ್ತದೆ. ಲೋಲಾ ಅದನ್ನು ನೋಡೇ ಇಲ್ಲವೇನೋ ಎಂಬಂತೆ ಓಡುತ್ತಾಳೆ. ಮೂರನೆಯ ಕತೆಯಲ್ಲಿ ಅದೇ ಆಂಬುಲೆನ್ಸ್ ನಿಂತಿರುವಾಗ ಲೋಲಾ ಹಿಂದಿನ ಬಾಗಿಲಿಂದ ಹತ್ತಿಕೊಳ್ಳುತ್ತಾಳೆ. ಹೀಗೆ ಒಂದು ವಸ್ತು ಕತೆಯೊಳಗೆ ಅನೇಕ ಬಗೆಯಾಗಿ ಬದಲಾಗುತ್ತದೆ. ಮೂರೂ ಕತೆಯಲ್ಲಿ ಕೇವಲ ಪ್ರಧಾನ ಪಾತ್ರದ ಕತೆ ಮಾತ್ರವಲ್ಲ ಅಕ್ಕಪಕ್ಕದ ವಿವರಗಳು ಸಹ ಹೊಸ ರೂಪ ಪಡೆದುಕೊಳ್ಳುತ್ತವೆ. ಈ ಹಾದಿಯಲ್ಲಿ ಲೋಲಾ ಪ್ರತೀ ಬಾರಿ ಓಡುವಾಗ ಅವಳಿಗೆ ಎದುರಾಗುವ ವಾಕಿಂಗ್ ಹೋಗುತ್ತಿದ್ದ ಹೆಂಗಸೊಬ್ಬಳು ಲೋಲಾಳನ್ನು ಬೈಯುತ್ತಾಳೆ. ಕೂಡಲೇ ಅವಳ ಕತೆಯು ಫ್ಲಾಷ್ ಫಾರ್ವರ್ಡ್‌ನಲ್ಲಿ ನಡೆಯುವಂತೆ ಆ ಹೆಂಗಸಿನ ಜೀವನದ ಅನೇಕ ಮಜಲುಗಳನ್ನು ತೋರಿಸಿ, ಕಡೆಗೆ ಅವಳು ಹಣ್ಣು ಹಣ್ಣು ಮುದುಕಿಯಾಗುವವರೆಗೆ ಸಾಗುತ್ತಾರೆ ನಿರ್ದೇಶಕರು. ಇದೇ ಹೆಂಗಸು ಎರಡನೇ ಕತೆಯಲ್ಲಿ ಆಕ್ಸಿಡೆಂಟ್ ಆಗಿ ಗುರುತು ಹಿಡಯಲಾಗದ ಸ್ಥಿತಿ ತಲುಪುತ್ತಾಳೆ. ಮೂರನೆಯ ಕತೆಯಲ್ಲಿ ಮತ್ತೆನೋ ಆಗುತ್ತಾಳೆ. ಪ್ರತೀ ಭಾರಿ ಸ್ಟಿಲ್ ಫೋಟೊಗಳ ಮೂಲಕ ಆ ಪಾತ್ರದ ಭವಿಷ್ಯವನ್ನು ಬಿಚ್ಚಿಡುತ್ತಾರೆ. ಹೀಗೆ ಇನ್ನೂ ಅನೇಕ ಪಾತ್ರಗಳಿಗೆ ಮೂರೂ ಘಟ್ಟಗಳಲ್ಲಿ ವಿಭಿನ್ನ ನೆಲೆಗಳನ್ನು ನಿರ್ದೇಶಕರು ಕಲ್ಪಿಸುತ್ತಾರೆ. ಹೀಗಾಗಿ ಪ್ರತೀ ಬಾರಿ ಅದೇ ಪಾತ್ರ ಕತೆಯೊಳಗೆ ಎದುರಾದರೂ ಆ ಪಾತ್ರದ ಮುಂದಿನ ವಿವರಗಳು ಭಿನ್ನವಾಗುವುದರಿಂದ ಏಕತಾನತೆಯು ತಪ್ಪುತ್ತದೆ ಮತ್ತು ಕತೆಗೆ ಹೊಸ ತಿರುವೂ ದಕ್ಕುತ್ತದೆ.
ಪ್ರತೀ ಕತೆಯ ಅಂತ್ಯದಲ್ಲಿ ಬರುವ ಪ್ರೀತಿಯ ವಿವರಗಳನ್ನು ನಿರ್ದೇಶಕರು ಟಾಪ್ ಆಂಗಲ್‌ನಲ್ಲಿ ದಟ್ಟ ಕೆಂಪು ಬಣ್ಣವನ್ನು ಬಳಸಿ ಚಿತ್ರಿಸಿದ್ದಾರೆ. ಇಲ್ಲಿಯೂ ಲೋಲಾ ಮತ್ತು ಮಾನ್ನಿ ಪಾತ್ರಗಳ ನಡುವಿನ ಸಂಭಾಷಣೆಯು ಪ್ರತೀ ಬಾರಿ ಬದಲಾಗುತ್ತದೆ. ಆ ಮೂಲಕ ಪ್ರೇಮವನ್ನು ಕುರಿತ ಅನೇಕ ವ್ಯಾಖ್ಯಾನಗಳನ್ನು ಹೇಳುವುದು ಸಾಧ್ಯವಾಗುತ್ತದೆ. ಚಿತ್ರದ ಉದ್ದಕ್ಕೂ ಅನೇಕ ಹಂತಗಳಲ್ಲಿ ಪ್ರೀತಿಯನ್ನು ಕುರಿತ ವ್ಯಾಖ್ಯೆ ಬರುತ್ತದೆ. ಲೋಲಾ ತನ್ನ ತಂದೆಯನ್ನು ಭೇಟಿಯಾಗಲು ಬ್ಯಾಂಕ್ ಒಂದರೊಳಗೆ ಹೋದಾಗೆಲ್ಲಾ ಆ ತಂದೆಯ ಪಾತ್ರ ಮತ್ತೊಂದು ಹೆಣ್ಣಿನ ಜೊತೆಗೆ ಮದುವೆಯಾಚೆಗಿನ ಪ್ರೀತಿಯಲ್ಲಿ ಮುಳುಗಿರುತ್ತದೆ. ಈ ಪ್ರೀತಿಗೂ ಪ್ರತೀ ಕತೆಯಲ್ಲಿ ವಿಭಿನ್ನ ಅಂತ್ಯಗಳನ್ನು ಪಡೆದುಕೊಳ್ಳುತ್ತದೆ. ಇಲ್ಲೆಲ್ಲಾ ನಿರ್ದೇಶಕರು ಬಳಸುವ ಕ್ಲೋಸ್ ಅಪ್‌ಗಳು ಸೃಷ್ಟಿಸುವ ವಿನ್ಯಾಸ ಪ್ರೀತಿಯ ವ್ಯಾಖ್ಯೆಗೆ ಮತ್ತಷ್ಟು ಹೂರಣ ತುಂಬಿಸಿಕೊಡುತ್ತದೆ.
ಹೀಗೆ ೮೧ ನಿಮಿಷದಲ್ಲಿ ಇಷ್ಟೆಲ್ಲಾ ಛೇದಗಳ ಮೂಲಕ ಒಂದು ಇಪ್ಪತ್ತು ನಿಮಿಷದ ಕತೆಯ ಮೂರು ಬಗೆಯನ್ನು ತೋರಿಸುತ್ತಾ ಸುಖಾಂತ ಆಗಿಸುವುದು ಒಂದು ರಾಜಕೀಯ ನಿರ್ಧಾರ. ಟಾಂ ಟ್ವೈಕರ್ ’ರನ್ ಲೋಲಾ ರನ್’ ಮೂಲಕ ಜನಪ್ರಿಯ ಸಿನಿಮಾಗಳ ಮೌಲ್ಯಗಳನ್ನೆಲ್ಲಾ ಬಳಸಿಕೊಳ್ಳುತ್ತಲೇ ತನ್ನ ದೇಶದ ತಾತ್ವಿಕ ವಿವರಗಳನ್ನೂ ಇಡುತ್ತಾನೆ. ಸಿನಿಮಾದ ಆರಂಭದಲ್ಲಿ ಜರ್ಮನಿಯು ೧೯೫೪ರ ಫುಟ್‌ಬಾಲ್ ವಿಶ್ವಕಪ್ ಗೆಲ್ಲುವಂತೆ ಮಾಡಿದ್ದ ಕೋಚ್ ಹೇಳುವ “ಚಂಡು ಗುಂಡಗಿದೆ. ಆಟ ೯೦ ನಿಮಿಷದ್ದು. ಉಳಿದದ್ದೆಲ್ಲಾ ಚರಿತ್ರೆ” ಎಂಬ ಮಾತಿದೆ. ಆ ಮಾತನ್ನು ಸ್ವತಃ ಧಿಕ್ಕರಿಸುವ ಟಾಂ ಟ್ವೈಕರ್ ತನ್ನ ಸಿನಿಮಾವನ್ನು ೮೧ ನಿಮಿಷದಲ್ಲಿ ಮುಗಿಸುತ್ತಾನೆ. ಆಟ ೮೧ ನಿಮಿಷದಲ್ಲಿ ಮುಗಿಯಲೂಬಹುದು ಎಂದು ಸೂಚಿಸುತ್ತಲೇ ಯಶಸ್ವಿ ಪ್ರಯೋಗ ಮಾಡುತ್ತಾನೆ.
ಜರ್ಮನಿಯ ಚರಿತ್ರೆ ಮತ್ತು ಲೋಲಾ
ಹಾಗೆ ನೋಡಿದರೆ ರನ್ ಲೋಲಾ ರನ್ ಸಿನಿಮಾದಲ್ಲಿ ಆ ದೇಶದ ಚರಿತ್ರೆಯ ವಿವರಗಳು ಬರುವುದೇ ಇಲ್ಲ. ಸಾಮಾನ್ಯವಾಗಿ ಜರ್ಮನ್ ಸಿನಿಮಾಗಳಲ್ಲಿ ಆ ದೇಶದ ಛಿದ್ರ ಬದುಕನ್ನು ಹೇಳುವುದೇ ಪ್ರಧಾನವಾದ ಅಂಶವಾಗಿರುತ್ತಿತ್ತು. ಬರ್ಲಿನ್ ಎಂಬ ಊರಿನ ನಡುವೆ ಇರುವ ಬೃಹತ್ ಗೋಡೆಯೇ ಜನರ ಬದುಕನ್ನು ಹೇಗೆ ಕಾಡುತ್ತಿದೆ ಎಂಬುದು ಬಹುತೇಕ ಜರ್ಮನ್ ಸಿನಿಮಾಗಳ ವಸ್ತುವಾಗಿತ್ತು. ಟಾಂ ಟ್ವೈಕರ್ ಈ ಸಿನಿಮಾದಲ್ಲಿ ಆ ವಿವರಗಳ ಗೋಜಿಗೆ ಹೋಗುವುದಿಲ್ಲ. ಆತ ಹೊಸ ತಲೆಮಾರಿನವನು. ಆತನಿಗೆ ಚರಿತ್ರೆಗಿಂತ ವರ್ತಮಾನ ಮತ್ತು ಭವಿಷ್ಯ ಮುಖ್ಯವಾಗುತ್ತದೆ.
ಸಿನಿಮಾದ ಆರಂಭದಲ್ಲಿ ಮಾನ್ನಿಯು ತಾನು ಕಾಯುತ್ತಿದ್ದ ಕಡೆಗೆ ಲೋಲಾ ಬರಲಿಲ್ಲ ಏಕೆ ಎನ್ನುವಾಗ ಆಕೆ ತಾನು ಕಳೆದುಕೊಂಡ ತನ್ನ ಮೊಪೆಡ್‌ನ ವಿವರ ಹೇಳುತ್ತಾಳೆ. ಆಗ ಒಂದು ಭಾಗದ ಜರ್ಮನಿಯಲ್ಲಿರುವ ಶ್ರೀಮಂತಿಕೆ ಮತ್ತೊಂದು ಭಾಗದಲ್ಲಿರುವ ಬಡತನದಿಂದಾಗಿ ಹೆಚ್ಚುತ್ತಿರುವ ಕಳ್ಳತನಗಳ ವಿವರ ಬರುತ್ತದೆ. ನಂತರ ಲೋಲಾ ಕೂತಿದ್ದ ಟ್ಯಾಕ್ಸಿಯವನು ಗ್ರುನ್‌ವಾಲ್ಟ್ ರಸ್ತೆಗೆ ಹೋಗುತ್ತಾನಾದರೂ ಅದು ಮಾನ್ನಿ ಕಾಯುತ್ತಿದ್ದ ಪಶ್ಚಿಮ ಬರ್ಲಿನ್‌ನ ಅದೇ ಹೆಸರಿನ ರಸ್ತೆಯ ಬದಲಿಗೆ ಪೂರ್ವ ಬರ್ಲಿನ್‌ನಲ್ಲಿರುವ ಅದೇ ರಸ್ತೆಗೆ ಆಗಿರುತ್ತದೆ. ಆ ಮೂಲಕ ಗೋಡೆ ಬಿದ್ದ ಮೇಲಿನ ಬರ್ಲಿನ್ ನಗರದಲ್ಲಿ ಗೊಂದಲಗಳನ್ನು ಕುರಿತು ಟಾಂ ಟ್ವೈಕರ್ ಸೂಕ್ಮವಾಗಿ ಸೂಚಿಸುತ್ತಾನೆ. ಅದನ್ನು ಹೊರತು ಪಡಿಸಿದರೆ ರನ್ ಲೋಲಾ ರನ್ ನಲ್ಲಿ ಎಲ್ಲಿಯೂ ಬರ್ಲಿನ್‌ನಲ್ಲಿ ಒಂದು ಗೋಡೆ ಇತ್ತು, ಅದು ಮುರಿದು ಬಿದ್ದ ಮೇಲೆ ಏನಾಯಿತು ಎಂಬ ಮಾತು ಬರುವುದಿಲ್ಲ. ಆ ಮೂಲಕ ಒಂದಾದ ಎರಡು ಜರ್ಮನಿಗಳಲ್ಲಿ ಇರುವ ಹೊಸ ತಲೆಮಾರು ಆಲೋಚಿಸುತ್ತಿರುವ ಹಾದಿಯನ್ನು ಕುರಿತ ಸೂಚನೆಯೂ ಸಹ ಸಿಗುತ್ತದೆ. ಜರ್ಮನಿಯ ಆಧುನಿಕ ಚಲನಚಿತ್ರ ವಿಮರ್ಶಕಿಯಲ್ಲಿ ಒಬ್ಬಲಾದ ಸಿಂಕಾ ಎಂಬಾಕೆ ’ರನ್ ಲೋಲಾ ರನ್’ನ ಈ ವಿವರವನ್ನು ಗುರುತಿಸುತ್ತಾ ಇದನ್ನು ಆಧುನಿಕ ತಲೆಮಾರಿನ ಉತ್ಸಾಹ ಮತ್ತು ಶಕ್ತಿ ಎಂದು ಗುರುತಿಸುತ್ತಾಳೆ. “ಹೊಸ ತಲೆಮಾರಿನವರು ಚರಿತ್ರೆಯ ಜೊತೆಗೆ ಮುಖಾಮುಖಿಯಾಗಿ ಚರ್ಚೆಗೆ ಇಳಿಯುವ ಬದಲು, ನೆನಪುಗಳಲ್ಲಿ ಕಳೆದು ಹೋಗುವ ಬದಲು ಮುಂದಿರುವ ಬದುಕನ್ನು ಕುರಿತು ಚಿಂತಿಸುತ್ತಾ ಇರುವುದನ್ನು ಈ ಸಿನಿಮಾ ಸೂಚಿಸುತ್ತದೆ” ಎಂದು ಆಕೆ ಹೇಳುತ್ತಾಳೆ.
ಹೀಗೆ ಜರ್ಮನಿಯ ಅಸ್ಮಿತೆಯ ಚರಿತ್ರೆಯೇ ಪೂರ್ವಾಗ್ರಹದಂತೆ ಬಳಕೆಯಾಗುತ್ತಿದ್ದ ಜರ್ಮನ್ ಸಿನಿಮಾಗಳ ನಡುವೆ ಟ್ವೈಕರ್ ಒಂದು ಹೊಸ ಪ್ರಯೋಗ ಮಾಡುತ್ತಾನೆ. ಅದರಿಂದಾಗಿ ಆತನಿಗೆ ಅಮೇರಿಕಾದ ಹಾಲಿವುಡ್‌ನಲ್ಲಿಯೇ ಹೊಸ ಸಿನಿಮಾ ಮಾಡುವ ಅವಕಾಶ ದೊರಕುತ್ತದೆ. ಜೊತೆಗೆ ಜರ್ಮನಿಯಲ್ಲಿ ವಾರ್ಷಿಕವಾಗಿ ಸಿನಿಮಾಗಳಿಗೆ ನೀಡುವ ಪ್ರಶಸ್ತಿಯ ಹೆಸರೇ ‘ಲೋಲಾ’ ಎಂದು ಬದಲಾಗುತ್ತದೆ. ಒಟ್ಟಾರೆಯಾಗಿ ’ರನ್ ಲೋಲಾ ರನ್’ ಮೂಲಕ ಟಾಂ ಟ್ವೈಕರ್ ಅಮೇರಿಕನ್ ಜನಪ್ರಿಯ ಸಿನಿಮಾಗಳ ಹೊಡೆತವನ್ನು ತಪ್ಪಿಸಿಕೊಳ್ಳುವ ದಾರಿಯನ್ನು ತೋರುತ್ತಲೇ ಜರ್ಮನ್ ಸಿನಿಮಾಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಲು ಸಹ ಕಾರಣವಾಗುತ್ತಾನೆ.
‘ಲೋಲಾ’ ಕಣ್ಣಲ್ಲಿ ನಾವು
ಸಮಕಾಲೀನ ಕನ್ನಡ ಸಿನಿಮಾಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಟಾಂ ಟ್ವೈಕರ್‌ನಂತಹವರು ತಮ್ಮ ಸಿನಿಮಾ ತಯಾರಿಕೆಗೆ ಎದುರಿಸುತ್ತಿದ್ದ ಸಮಸ್ಯೆಗಳು ಬಹುತೇಕ ಒಂದೇ ರೀತಿಯದು. ಈ ಹಿನ್ನೆಲೆಯಲ್ಲಿ ನಮ್ಮ ವಾಣಿಜ್ಯ ಪ್ರಧಾನ ಸಿನಿಮಾಗಳ ತಯಾರಕರು ಟಾಂ ಟ್ವೈಕರ್ ಹುಡುಕಿಕೊಂಡ ಮಾರ್ಗವನ್ನು ತಾವೂ ಅರಸಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ‘ರನ್ ಲೋಲಾ ರನ್’ ಚಿತ್ರ ತಯಾರಾದ ಕಾಲದಿಂದ ಇಲ್ಲಿಗೆ ಬಹು ದೊಡ್ಡ ಅಂತರವಿದೆ. ಇಂದು ಸಿನಿಮಾ ಅನ್ನುವುದು ಡಿಜಿಟಲ್ ತಂತ್ರಜ್ಞಾನದ ಅಡಿಯಲ್ಲಿ ಹೊಸ ಹೊಸ ಸ್ಪರ್ಧೆಗಳನ್ನು ಎದುರಿಸುತ್ತಿದೆ. ಹೀಗಾಗಿ ಟ್ವೈಕರ್ ಹುಡುಕಿಕೊಂಡ ಮಾರ್ಗವನ್ನು ಗಮನಿಸುತ್ತಲೇ ಹೊಸ ತಂತ್ರಜ್ಞಾನದ ಸವಾಲುಗಳನ್ನು ಪೋಷಕ ಸಾಮಗ್ರಿ ಎಂಬಂತೆ ಬಳಸಿಕೊಳ್ಳಬೇಕಾಗಿದೆ. ಹೀಗೆ ಮಾಡುವಾಗ ಇರುವ ಅಪಾಯವೆಂದರೆ ತಂತ್ರಜ್ಞಾನವೇ ಪ್ರಧಾನವಾಗಿ ಕಥನವನ್ನು ಮರೆಸಿಬಿಡುವ ಸಾಧ್ಯತೆ. ಹೀಗಾಗಿಯೇ ಈಚೆಗೆ ನಮ್ಮಲ್ಲಿ ತಯಾರಾದ ಕೆಲವು ಸಿನಿಮಾಗಳು ಸೊರಗಿದ್ದನ್ನ ನಾವು ನೋಡಿದ್ದೇವೆ. ಅದಕ್ಕೆ ಉದಾಹರಣೆಯಾಗಿ ಈಚೆಗಷ್ಟೇ ಬಿಡುಗಡೆಯಾದ ‘ಜುಗಾರಿ’ ಮುಂತಾದ ಸಿನಿಮಾಗಳು ಇವೆ. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಚಿತ್ರ ತಯಾರಕರು ಕಥನವನ್ನು ಮತ್ತು ಕಥಾ ಹೂರಣವನ್ನು ಹೊಸ ತಂತ್ರಜ್ಞಾನಕ್ಕೆ ಬಾಗಿಸಿಕೊಳ್ಳುವ ಬದಲಿಗೆ ತಂತ್ರಜ್ಞಾನವನ್ನು ಕತೆಗೆ ಬಾಗಿಸಿಕೊಳ್ಳುವುದು ಮುಖ್ಯ. ಆ ನಿಟ್ಟಿನಲ್ಲಿ ಇನ್ನಷ್ಟು ಚರ್ಚೆಯಾಗಬೇಕು. ಸಿನಿಮಾ ತಯಾರಿಕೆಗೆ ಮುನ್ನವೇ ಹಲವರ ಜೊತೆಯಲ್ಲಿ ಕೂತು ಕತೆಯನ್ನು ಬಿಚ್ಚಿಡುವುದು ಒಂದು ಮಾರ್ಗ. ಮತ್ತೊಂದು ಪ್ರಮುಖ ಮಾರ್ಗ ಆತ್ಮವಿಮರ್ಶೆ. ನಮ್ಮ ಬಹುತೇಕ ಹೊಸ ತಲೆಮಾರಿನ ಸಿನಿಮಾ ತಯಾರಕರಲ್ಲಿ ಇವುಗಳ ಕೊರತೆ ಇದೆ. ಹೀಗಾಗಿಯೇ ನಮ್ಮಲ್ಲಿನ ಅನೇಕ ಪ್ರಯತ್ನಗಳು ಕೇವಲ ಹೊಸಪ್ರಯೋಗವಾಗಿ ಮಾತ್ರ ದಾಖಲಾಗುತ್ತವೆ. ಅವುಗಳು ಪ್ರಯೋಗವಾಗಿ ಉಳಿಯದೆ ಯಶಸ್ಸನ್ನು ಸಹ ಕಾಣಬೇಕು. ಆಗ ಇಲ್ಲಿನ ಸಿನಿಮಾ ಉದ್ಯಮಕ್ಕೆ ಹೊಸ ಚೇತನ ಬರಬಹುದು.
ಇದೇ ಮಾತನ್ನು ಮುಂದುವರೆಸುತ್ತ ನಮ್ಮಲ್ಲಿನ ಕಲಾತ್ಮಕ ಅಥವಾ ಸಮಾನಂತರ ಸಿನಿಮಾ ಚಳುವಳಿಗೆ ವಿಸ್ತರಿಸುವುದಾದರೆ, ಇಲ್ಲಿ ಹೊಸ ತಂತ್ರಜ್ಞಾನದ ಬಳಕೆ ಬಹುತೇಕ ಆಗುತ್ತಲೇ ಇಲ್ಲ. ಇದಕ್ಕೆ ತಂತ್ರಜ್ಞಾನದ ವೆಚ್ಚ ಪ್ರಧಾನ ಕಾರಣವಾಗಿಬಹುದು. ಆ ವೆಚ್ಚವು ಈಚಿನ ದಿನಗಳಲ್ಲಿ ಕೊಂಚ ಕೊಂಚವಾಗಿ ಕಡಿಮೆ ಆಗುತ್ತಾ ಇದೆ. ಹೀಗಾಗಿ ಡಿಜಿಟಲ್ ತಂತ್ರಜ್ಞಾನವನ್ನು ಸಮಾನಂತರ ಚಿತ್ರ ಚಳುವಳಿಕಾರರು ಹೆಚ್ಚು ಬಳಸಲು ಸಾಧ್ಯವಾಗಬಹುದು. ಅದರಿಂದಾಗಿ ಆ ಚಳುವಳಿಗೆ ಹೊಸ ಶಕ್ತಿಯೂ ದೊರಕುವ ಸಾಧ್ಯತೆಯಿದೆ.
ಕಡೆಯಲ್ಲಿ
ಇಲ್ಲಿ ಆಡಿರುವ ಮಾತುಗಳು ಒಂದು ವೇದಿಕೆಯಾಗಲಿ ಎಂದು ನಿಮ್ಮೆದುರು ಇರಿಸಲಾಗಿದೆ. ಸಿನಿಮಾ ಎಂಬ ದೃಶ್ಯ ಬಾಷೆಯನ್ನು ಕುರಿತು ಆಸಕ್ತರಾಗಿರುವವರು ಎಲ್ಲರೂ ಈ ವೇದಿಕೆಯಲ್ಲಿ ಮಾತನ್ನು ಆರಂಭಿಸಬೇಕು. ಆ ಮಾತು ಹೊಸ ಕನಸಿಗೆ ನಾಂದಿಯಾಗಬೇಕು. ಆ ಕನಸು ಹೊಸ ಶಕ್ತಿ ಸಂಚಯನಕ್ಕೆ ಕಾರಣವಾಗಬೇಕು ಎಂಬುದು ಆಶಯ.
* * *
ಆಕರಗಳು:
೧. ಬಾರ್ಬರ ಕೋಸ್ಟ ಅವರ ’ರನ್ ಲೋಲಾ ರನ್’ ಕುರಿತ ವಿಶ್ಲೇಷಣೆ.
೨. ರಾಬರ್ಟ್‌ ಫಾಲ್ಕನ್ ಅವರು ’ಸೈಟ್ ಅಂಡ್ ಸೌಂಡ್’ ಪತ್ರಿಕೆಯಲ್ಲಿ ಬರೆದ ’ರನ್ ಲೋಲಾ ರನ್’ ಕುರಿತ ವಿಮರ್ಶೆ.
೩. ಫಿಲ್ಮ ಕ್ವಾರ್ಟರ್ಲಿ ಪತ್ರಿಕೆಯ ೨೦೦೧ರ ೩ ನೇ ಸಂಚಿಕೆಯಲ್ಲಿನ ಟಾಂ ವಾಲನ್ ಅವರ ಲೇಖನ.
೪. ನಿಖೋಲಸ್ ಲೂಮನ್‌ನ ‘ದ ರಿಯಾಲಿಟಿ ಆಫ್ ಮಾಸ್ ಮೀಡಿಯಾ’ (ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪ್ರಕಟಣೆ/೨೦೦೦)
೫. ಜಾನ್ ಸ್ಟೂರಿ ಅವರ “ಆನ್ ಇಂಟ್ರಡಕ್ಷನ್ ಟು ಕಲ್ಚರಲ್ ಥಿಯರಿ ಅಂಡ್ ಪಾಪ್ಯುಲರ್ ಕಲ್ಚರ್” / ಯೂನಿವರ್ಸಿಟಿ ಆಫ್ ಜಾರ್ಜಿಯ ಪ್ರೆಸ್/೧೯೯೮/ ಎರಡನೇ ಆವೃತ್ತಿ)
೬. ಗಿಯೋವನಿ ಲಿಸ್ಟಾ ಅವರ “ಫ್ಯೂಚರಿಸಂ” (ಯೂನಿವರ್ಸ್ ಬುಕ್ಸ್, ನ್ಯೂಯಾರ್ಕ್‌/೧೯೮೬)
೭. ಪಾಲ್ ವೆಲ್ಸ್ ಅವರ “ಅಂಡ್‌ಸ್ಟಾಂಡಿಂಗ್ ಆನಿಮೇಷನ್” (ರೌಟ್‌ಲೆಡ್ಜ್, ನ್ಯೂಯಾರ್ಕ್‌/೧೯೮೮)
೮. ಅಂತರ್ಜಾಲದ ಅನೇಕ ತೋಟಗಳಲ್ಲಿ ದೊರೆತ “ರನ್ ಲೋಲಾ ರನ್” ಕುರಿತ ಲೇಖನಗಳು.

Advertisements

3 Responses to “ಒಂದು ವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗೆ ಆಹ್ವಾನ”


 1. 1 Pramod March 22, 2010 at 7:38 am

  ಸೂಪರ್. ಅತ್ಯುತ್ತಮ ವಿಶ್ಲೇಷಣೆ. ಪಲ್ಪ್ ಫಿಕ್ಷನ್, ಗ್ರೌಂಡ್ ಹಾಗ್ ಡೇ, ಅಮೇರೋಸ್ ಪರ್ರೋಸ್ ಎಲ್ಲವೂ ಸೂಪರ್ ಕಥಾ ಸ೦ಗಮಗಳು. ಅಮೇರೋಸ್ ಪರ್ರೋಸ್ ಹೈಪರ್ ಲಿ೦ಕಿ೦ಗ್ ಸಿನೆಮಾ. ಡೆಥ್ ಟ್ರಯೋಲಜಿಯಲ್ಲಿನ ಅಧ್ಬುತ ಚಿತ್ರ. ಮಾಗ್ನೋಲಿಯ, ಹತ್ತು ಕಥೆಗಳ ಸ೦ಗಮ ಇನ್ನೊ೦ದು ತರಹದ ಪ್ರಯೋಗಶೀಲತೆ ಉದಾಹರಣೆ.

 2. 2 ಬಿ.ಸುರೇಶ March 22, 2010 at 2:38 pm

  ಪ್ರಿಯ ಪ್ರಮೋದ್,
  ಅಮೆರೋಸ್ ಪರ್‍ರೋಸ್ ಹಾಗೆಯೇ ಟರ್ಕಿಯ ಮತ್ತೊಂದು ಸಿನಿಮಾ ಇದೆ. ಅದರ ಹೆಸರು ’ಬಿಫೋರ್‍ ದ ರೈನ್’ ಅದನ್ನೊಮ್ಮೆ ನೋಡಿ. ಅದು ಈ ಜಾನರ್‌ನ ಅತ್ಯುತ್ತಮ ಸಿನಿಮಾ.

 3. 3 AmoghaVarsha C A September 15, 2015 at 10:09 am

  ಅಪರೂಪದ ಚಿತ್ರ ವಿಶ್ಲೇಷಣೆ ಗುರುಗಳೇ 🙂


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s




ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: