ವಿಶೇಷಗಳನ್ನು ಅರಸುತ್ತಾ…!

ವಿಜಯ ಕರ್ನಾಟಕದ ವಿಶೇಷಾಂಕ ಕುರಿತ ಸಂಚಿಕೆಗೆ ಬರೆದ ಲೇಖನ

ನಾನು ಕನ್ನಡದ ಜಾಯಮಾನಕ್ಕೆ ಒಗ್ಗಿಕೊಂಡ ಕಾಲದಿಂದ ದೀಪಾವಳಿಗೆ ಮತ್ತು ಯುಗಾದಿಗೆ ಕಾಯುತ್ತಾ ಬೆಳೆದವನು. ಆ ದಿನಗಳಲ್ಲಿ ಮನೆಯಲ್ಲಿ ಹಬ್ಬ ಇರುತ್ತದೆ ಎಂಬುದಕ್ಕಿಂತ ಅದೇ ಕಾಲಕ್ಕೆ ‘ಪ್ರಜಾವಾಣಿ’, ‘ಉದಯವಾಣಿ’ಗಳ ವಿಶೇಷಾಂಕಗಳು ಬರುತ್ತಿದ್ದವು ಎಂಬುದು ನನ್ನ ಕಾಯುವಿಕೆಗೆ ಕಾರಣವಾಗಿರುತ್ತಿತ್ತು. ಈ ವಿಶೇಷಾಂಕಗಳಿಗೆ ಎಂದೇ ನಾಡಿನ ಖ್ಯಾತ ಸಾಹಿತಿಗಳು ಬರೆದ ಕತೆಗಳು, ಕವನಗಳು ಅಲ್ಲಿ ಸಿಗುತ್ತಿದ್ದವು. ಈ ನಾಡಿನ ಎಲ್ಲಾ ಸಾಹಿತಿಗಳ ಲೋಕಕ್ಕೂ ನನ್ನ ಪ್ರವೇಶ ಆಗಿದ್ದೇ ವಿಶೇಷಾಂಕಗಳಿಂದ. ಮಾಸ್ತಿ, ಚದುರಂಗ, ಆನಂದ, ಅನಂತಮೂರ್ತಿ ತರಹದ ಹಿರಿಯ ಕತೆಗಾರರಿಂದ ನನ್ನ ಕಾಲದವರಾದ ಜಯಂತ್ ಕಾಯ್ಕಿಣಿ, ಅಮರೇಶ ನುಗಡೋಣಿ ಮುಂತಾದವರ ಕಥಾಲೋಕ ನನಗೆ ಪರಿಚಿತವಾದದ್ದೇ ಈ ವಿಶೇಷಾಂಕಗಳಿಂದ.

ಒಂದು ಪತ್ರಿಕೆಯು ವಿಶೇಷಾಂಕಗಳನ್ನು ತಯಾರಿಸಲು ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಪ್ರಧಾನ ಕಾರಣ ಜಾಹೀರಾತು ಸಂಗ್ರಹ ಎಂಬುದು ಎಲ್ಲರಿಗೂ ತಿಳಿದಿರುವಂಥಾದ್ದೇ. ಆದರೆ ಕೆಲವೊಮ್ಮೆ ಇನ್ನೂ ವಿಶೇಷ ಕಾರಣಗಳಿಗಾಗಿ ವಿಶೇಷಾಂಕ ಆಗುತ್ತದೆ. ನನ್ನ ತಾಯಿಯ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಉದಯವಾಣಿ’ಯಲ್ಲಿ ಪ್ರತೀ ವರ್ಷದ ವಿಶೇಷಾಂಕಕ್ಕೇ ಒಂದು ವಸ್ತುವನ್ನು ಇರಿಸಿಕೊಂಡು ಆಯಾ ವರ್ಷದ ಸಂಚಿಕೆಯ ಎಲ್ಲಾ ಕತೆ, ಕವನಗಳು ಇರುತ್ತಿದ್ದವು. ‘ತವಕ’ ಎಂಬ ಒಂದೇ ವಿಷಯ ಅನೇಕ ಲೇಖಕರ ಲೇಖನಿಯಿಂದ ಅನೇಕ ಕಥೆ, ಕವನಗಳನ್ನು ಹೊರಡಿಸುತ್ತಿತ್ತು. ಅವುಗಳನ್ನು ಓದುತ್ತಾ ನಮ್ಮ ಅನುಭವ ಲೋಕ ವಿಸ್ತಾರವಾಗುತ್ತಿತ್ತು. ಆ ಕಾಲದಲ್ಲಿ ನಾನು ಓದಿದ ಅನೇಕ ಕತೆಗಳು ಇಂದಿಗೂ ನನ್ನ ಕಣ್ಣೆದುರು ಕುಣಿಯುತ್ತಿವೆ.

ಇಂತಹ ವಿಶೇಷಾಂಕಗಳನ್ನು ಓದುತ್ತಾ ಬೆಳೆದ ನನಗೆ ಸ್ವತಃ ಸಹ ಸಂಪಾದಕನಾಗಿ ಕೆಲಸ ಮಾಡುವ ಅವಕಾಶ ‘ಸಂಕುಲ’ ಪತ್ರಿಕೆಯಿಂದ ದೊರಕಿತ್ತು. ಆ ಪತ್ರಿಕೆಯ ಪ್ರತೀ ಸಂಚಿಕೆಯನ್ನೂ ವಿಶೇಷಾಂಕಗಳ ಹಾಗೆಯೇ ತರಲು ಪ್ರಯತ್ನಿಸಿದ್ದೆವು. ಅಡಿಗರ ಪದ್ಯಕ್ಕೆ ವಾಸುದೇವ್ ಅವರ ಚಿತ್ರ ಬರೆಸಿದ್ದು, ಅದೇ ಪದ್ಯಕ್ಕೆ ಎಂ.ಎಚ್.ಕೃಷ್ಣಯ್ಯನವರ ಸಿಮಿಯಾಟಿಕ್ ವಿಮರ್ಶೆ; ಎ.ಕೆ.ರಾಮಾನುಜಮ್ ಅವರ ಪದ್ಯಕ್ಕೆ ಚಂದ್ರಶೇಖರ್ ಅವರ ಚಿತ್ರ, ಎ.ಎಸ್.ಮೂರ್ತಿ ಅವರ ತಂಡದಿಂದ ದೃಶ್ಯ ರೂಪ; ಅಕ್ಕ ಮಹಾದೇವಿಯ ವಚನಕ್ಕೆ ಶ್ರೀಧರ್ ಅವರಿಂದ ನೃತ್ಯ ರೂಪಕ… ಹೀಗೇ ಅನೇಕ ವಿಶೇಷ ಪ್ರಯೋಗಗಳನ್ನು ನಾವು ‘ಸಂಕುಲ’ ಪತ್ರಿಕೆಯಲ್ಲಿ ಮಾಡಿದ್ದೆವು. ವಿಭಿನ್ನ ಮಾಧ್ಯಮಗಳಲ್ಲಿ ಅಭಿನಯವನ್ನು ಕುರಿತೇ ವಿಶೇಷ ಸಂಚಿಕೆ ಮಾಡಿ, ಪದ್ಮಿನಿ ರವಿ, ಪ್ರಕಾಶ್ ರೈ, ಗಿರೀಶ್ ಕಾಸರವಳ್ಳಿ ಮುಂತಾದ ದಿಗ್ಗಜರ ಪ್ರಯೋಗಗಳನ್ನು ವಿಮರ್ಶೆ-ಆತ್ಮವಿಮರ್ಶೆಗೆ ಒಳಪಡಿಸಿದ್ದೆವು. ಇಂತಹ ಮುವ್ವತ್ತು ಸಂಚಿಕೆಗಳನ್ನು ತಂದಿದ್ದೆವು. ನಂತರ ಅದನ್ನು ಮುಂದುವರೆಸಲು ಬೇಕಾದ ಸಮಯ ಮತ್ತು ಹಣ ಸಾಲದೆ ನಿಲ್ಲಿಸಬೇಕಾಯಿತು. ಆದರೆ ‘ಸಂಕುಲ’ ಪತ್ರಿಕೆಯ ಪ್ರಯೋಗದಿಂದಾಗಿ ರಂಗವಿಮರ್ಶೆಯನ್ನು ಬರೆಯುವ ಕ್ರಮ ಬದಲಾಯಿತು. ಇನ್ನಿತರ ಸಣ್ಣ ರಂಗಪತ್ರಿಕೆಗಳು ಸಹ ‘ಸಂಕುಲ’ ಮಾದರಿಯ ರಂಗಭಾಷೆಯ ಮೂಲಕ ರಂಗವಿಮರ್ಶೆ ಮಾಡುವ ಅಭ್ಯಾಸಕ್ಕೆ ಇಳಿದವು. ಸಿನಿಮಾ ವಿಮರ್ಶೆಗೂ ಸಹ ಹೊಸ ಮಾರ್ಗವನ್ನು ರೂಪಿಸಲು ‘ಸಂಕುಲ’ದ ಮೂಲಕ ಪ್ರಯತ್ನಿಸಿದ್ದೆವು. ಆದರೆ ಸಿನಿಮಾ ಪತ್ರಿಕೆಗಳ ವ್ಯಾಪಾರೀ ಗುಣದಿಂದಾಗಿ ‘ಸಂಕುಲ’ದ ಪ್ರಾಗ್ರೂಪವನ್ನು ಕೆಲವು ಸಾಹಿತ್ಯಕ ಪತ್ರಿಕೆಗಳು ಮಾತ್ರ ಇಂದಿಗೂ ಬಳಸುತ್ತಿರುವುದನ್ನು ನೋಡಬಹುದು.

ನಾನೇ ಸ್ವತಃ ಪಾಲ್ಗೊಂಡ ವಿಶೇಷಾಂಕ ಪ್ರಯೋಗ ಒಂದು ಬಗೆಯಾದರೆ ನಾನು ಗಮನಿಸಿದ ವಿಶಿಷ್ಟ ಎನಿಸಿದ ಮತ್ತಷ್ಟು ಪ್ರಯೋಗಗಳನ್ನು ಇಲ್ಲಿ ಹೇಳಲೇಬೇಕು. ದೈನಿಕಗಳು ಮಾಡುವ ವಿಶೇಷಾಂಕಗಳಿಗೆ ಕಳೆದ ಐದು ವರ್ಷಗಳಲ್ಲಿ ಏಕತಾನತೆ ಬಂದಿದೆ. ಆದರೆ ಅನೇಕ ಕಿರುಪತ್ರಿಕೆಗಳು ತಮ್ಮ ಸೃಜನ ಶಕ್ತಿಯನ್ನು ಗಟ್ಟಿಯಾಗಿ ಉಳಿಸಿಕೊಂಡಿವೆ. ‘ಸಂಚಯ’ (ಸಂಪಾದಕರು:ಪ್ರಹ್ಲಾದ್) ದಂತಹ ಪತ್ರಿಕೆ ಒಬ್ಬ ಕವಿಯ/ವ್ಯಕ್ತಿಯ ಎಲ್ಲಾ ಮಗ್ಗುಲುಗಳನ್ನೂ ನೋಡುವಂತಹ ವಿಶೇಷಾಂಕಗಳನ್ನು ತರುತ್ತಲೇ ಇದೆ. ಈ ಪತ್ರಿಕೆಯಲ್ಲಿ ಬಂದ ಗಾಂಧಿ ಕುರಿತ ವಿಶೇಷಾಂಕವಂತೂ ನಾನು ಮತ್ತೆ ಮತ್ತೆ ಓದುವ ಸಂಚಿಕೆ. ಹಾಗೆಯೇ ಮೈಸೂರಿನ ಕೆಲವರು ತರುತ್ತಿರುವ ‘ಅರುಹು-ಕುರುಹು’ (ಸಂಪಾದಕರು:ಲಿಂಗದೇವರು ಹಳೇಮನೆ) ಎಂಬ ಪತ್ರಿಕೆಯು ಈಚೆಗೆ ಸಂಸ್ಕೃತಿ-ಸಂಶೋಧನೆಯನ್ನು ಕುರಿತೇ ವಿಶೇಷಾಂಕವನ್ನು ಹೊರತಂದಿತ್ತು. ಇಂಗ್ಲೀಷ್ ಮತ್ತು ಇತರ ಭಾಷೆಗಳಲ್ಲಿ ಈ ವಿಷಯ ಕುರಿತು ಸಂಶೋಧನೆ ಮಾಡಿರುವ ಅನೇಕ ಲೇಖನಗಳು ಈ ಸಂಚಿಕೆಯಲ್ಲಿ ಅನುವಾದಿತವಾಗಿದ್ದವು. ಸುಮಾರು ಇನ್ನೂರು ಪುಟದ ಒಂದು ಸಂಚಿಕೆಯ ಪ್ರತೀ ಲೇಖನವೂ ಓದಲೇ ಬೇಕು ಎಂಬ ಒತ್ತಾಯವನ್ನು ಮೂಡಿಸಿದ್ದವು. ಇದೇ ರೀತಿಯ ವಿಶಿಷ್ಟ ಎನಿಸುವ ಇನ್ನೂ ಹಲವು ವಿಶೇಷಾಂಕಗಳನ್ನು ನಾನು ನೋಡಿದ್ದೇನೆ. ಅವುಗಳಲ್ಲಿ ವಸಂತ ಬನ್ನಾಡಿ ಸಂಪಾದಕತ್ವದ ‘ಶಬ್ದದನಿ’ ಎಂಬ ಪತ್ರಿಕೆ, ’ಪಾಂಚಾಲಿ’ಯ ವಿಶೇಷಾಂಕ ಮುಂತಾದವುಗಳನ್ನು ಮರೆಯುವಂತೆಯೇ ಇಲ್ಲ.

ಕೇವಲ ಜಾಹೀರಾತಿಗೆ ಎಂದು ಬರುವ ವಿಶೇಷಾಂಕಗಳಿಗಿಂತ ಹೀಗೆ ಓದುಗನ ನೆನಪಿನ ಭಂಡಾರದಲ್ಲಿ ಶಾಶ್ವತ ಸ್ಥಾನ ಪಡೆದು, ಓದುಗನ ಮನೆಯಲ್ಲಿರುವ ಪುಸ್ತಕ ಭಂಡಾರದಲ್ಲಿ ಉಳಿಯುವಂತಹ ಶಕ್ತಿಯು ವಿಶೇಷಾಂಕಗಳಿಗೆ ದೊರೆಯಬೇಕು. ಆಗ ಮಾತ್ರ ವಿಶೇಷಾಂಕ ಎಂಬ ಹೆಸರು ನೀಡುವುದು ಸಾರ್ಥಕವಾಗುತ್ತದೆ. ಅಂತಹ ಕೆಲಸ ವಿಜಯಕರ್ನಾಟಕದಿಂದಲೂ ಆಗಲಿ ಎಂದು ಹಾರೈಸುತ್ತೇನೆ.

Advertisements

2 Responses to “ವಿಶೇಷಗಳನ್ನು ಅರಸುತ್ತಾ…!”


 1. 1 raviraj April 8, 2010 at 3:01 pm

  gurugale lekhana chennagide !

 2. 2 bsuresha April 9, 2010 at 11:11 am

  ಥ್ಯಾಂಕ್ಯೂ…
  ನಿಮ್ಮಂತಹವರ ಹಾರೈಕೆ ಇರುವವರೆಗೆ ಒಂದಷ್ಟು ಒಳ್ಳೆಯ ಕೆಲಸ ಮಾಡುತ್ತೇನೆ.
  ನಿಮ್ಮವ
  ಬಿ.ಸುರೇಶ


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: