ಗಾಳಿ ಬೀಸುತಿದೆ, ಹೊತ್ತು ಜಾರುತಿದೆ! (ನವೆಂಬರ್ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ)

ಸಂಘಸುಖ
ಗಾಳಿ ಬೀಸುತಿದೆ, ಹೊತ್ತು ಜಾರುತಿದೆ!
(ನವೆಂಬರ್ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ)
– ಬಿ.ಸುರೇಶ
ಪ್ರಿಯ ಬಂಧು,
ದೆವ್ವಗಳ ಹೊತ್ತಲ್ಲಿ ಎಂದು ಕರೆಸಿಕೊಳ್ಳುವ ಸಮಯದಲ್ಲಿ ನಿಮ್ಮೊಡನೆ ಮಾತಿಗೆ ಇಳಿದಿದ್ದೇನೆ. ನಾನಿರುವ ಈ ಹೋಟೆಲಿನಲ್ಲಿ ಟಿವಿ ಇದೆ. ಆದರೆ ಕರೆಂಟು ಇಲ್ಲ. ಸುತ್ತ ಗಾಳಿ ಇದೆ. ಆದರೆ ಸೊಳ್ಳೆಗಳು ನುಗ್ಗಿ ಬಂದು ಕಡಿಯಲು ಸಿದ್ಧವಾಗಿವೆ. ಈ ಸೊಳ್ಳೆಗಳ ಗುಂಯ್‌ಗಾಟದಲ್ಲಿ ಹುಟ್ಟುತ್ತಿರುವ ನನ್ನ ಮಾತುಗಳು ನಿಮ್ಮನ್ನು ಮತ್ತಷ್ಟು ಜಾಗೃತರಾಗಿಸಲಿ ಎಂದು ಹಾರೈಸುತ್ತಾ ಮಾತನ್ನಾರಂಭಿಸುತ್ತೇನೆ.
ಈಚೆಗೆ ಅನೇಕ ದೈನಂದಿನ ಪತ್ರಿಕೆಗಳಲ್ಲಿ ಬರುತ್ತಿರುವ ಡಬ್ಬಿಂಗ್ ಪರವಾದ ಲೇಖನವನ್ನು ನೀವು ಓದಿರುತ್ತೀರಿ. ಆ ಲೇಖನಗಳಲ್ಲಿ ಚರ್ಚಿತವಾಗಿರುವ ವಿಷಯವನ್ನು ಕುರಿತು ನಮ್ಮ ಸಂಘಟನೆ ಹಾಗೂ ಟೆಲಿವಿಷನ್ ಉದ್ಯಮ ತಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ನಾಲ್ಕುಮಾತು ಬರೆಯುತ್ತಾ ಇದ್ದೇನೆ.


ಇದು ಕಳೆದ ಮೂರು ವರ್ಷಗಳಿಂದ ಮತ್ತೆ ಚರ್ಚೆಗೆ ಬರುತ್ತಿರುವ ವಿಷಯ. ‘ಕನ್ನಡ ಚಿತ್ರರಂಗ ಮತ್ತು ಕನ್ನಡ ಟೆಲಿವಿಷನ್‌ನಲ್ಲಿ ಮಾತ್ರ ಡಬ್ಬಿಂಗ್ ಯಾಕಿಲ್ಲ. ಅದು ಬಂದರೆ ಕನ್ನಡ ಭಾಷೆಯು ಉಳಿಯುತ್ತದೆ’ ಎಂಬ ಮಾತನ್ನು ಹಲವರು ಹೇಳುತ್ತಾ ಇದ್ದಾರೆ. ಇದಕ್ಕಾಗಿ ಡಬ್ಬಿಂಗ್ ಪರ ವಾದ ಮಂಡಿಸುತ್ತಾ ವಿಜಯ ಕರ್ನಾಟಕದಲ್ಲಿ ಶಶಿಧರ್ ಅವರು ಅನುವಾದ ಸಾಹಿತ್ಯಕ್ಕೆ ಹೋಲಿಸುತ್ತಾರೆ. ಸಾಹಿತ್ಯದಲ್ಲಿ ಒಪ್ಪಿತವಾದುದು ಕನ್ನಡ ಚಿತ್ರರಂಗದಲ್ಲಿ ಮತ್ತು ಟೆಲಿವಿಷನ್‌ನಲ್ಲಿ ಯಾಕಿರಬಾರದು ಎಂಬ ಪ್ರಶ್ನೆ ಎತ್ತುತ್ತಾರೆ. ಪ್ರಜಾವಾಣಿಯಲ್ಲಿ ರಘುನಾಥ್ ಅವರು ‘ಇಂದಿರನ್’ ಸಿನಿಮಾದ ಗಳಿಕೆಯನ್ನು ಪ್ರಸ್ತಾಪಿಸುತ್ತಾ ಕನ್ನಡ ಚಿತ್ರರಂಗಕ್ಕೆ ಇಂತಹ ಗಳಿಕೆ ಎಂದಿಗೂ ಬಂದಿಲ್ಲ ಎನ್ನುತ್ತಾ, ಆ ಮೂಲಕ ಡಬ್ಬಿಂಗ್ ಬಂದರೆ ನಮ್ಮ ವಿತರಕರು ಸಹ ಹಣ ಮಾಡಬಹುದು ಎನ್ನುತ್ತಾರೆ. ಈ ಮಾತುಗಳನ್ನೇ ಹಿಡಿದು ಅನೇಕರು ಗಟ್ಟಿದನಿಯಲ್ಲಿ ಕನ್ನಡಕ್ಕೆ ಡಬ್ಬಿಂಗ್ ಬರಲಿ ಎಂದು ಕೂಗುತ್ತಾ ಇದ್ದಾರೆ. ‘೧೯೬೦ರ ದಶಕದಲ್ಲಿ ಆದ ಡಬ್ಬಿಂಗ್ ವಿರೋಧಿ ಚಳುವಳಿಯು ಆಗಿದ್ದ ಕಾರಣಗಳಿಗೂ, ಸಂದರ್ಭಗಳಿಗೂ ವಿಭಿನ್ನವಾದ ಸಂದರ್ಭ ಇಂದು ನಮ್ಮೆದುರಿಗಿದೆ. ಆದ್ದರಿಂದ ಡಬ್ಬಿಂಗ್ ಆರಂಭಿಸಬಹುದು’ ಎನ್ನುವುದು ಡಬ್ಬಿಂಗ್ ಪರವಾಗಿ ಮಾತಾಡುತ್ತಾ ಇರುವವರ ನಿಲುವು.
ಹೀಗೆ ಡಬ್ಬಿಂಗ್ ಪರವಾಗಿ ಮಾತಾಡುತ್ತಾ ಇರುವ ಎಲ್ಲರನ್ನೂ ನಾವು ಸಂಘಟಿತರಾಗಿ ವಿರೋಧಿಸಲೇಬೇಕು. ಏಕೆಂದರೆ ಇದು ಕೇವಲ ನಮ್ಮ ಅನ್ನದ ಪ್ರಶ್ನೆಯಲ್ಲ, ನಮ್ಮ ಸಂಸ್ಕೃತಿಯ ಪ್ರಶ್ನೆ. ನಾವು ನಮ್ಮ ಅನ್ನ ಸಂಪಾದಿಸಲು ದುಡಿಯುತ್ತಾ ಇರುವಾಗಲೇ, ನಮ್ಮ ಸಂಸ್ಕೃತಿಯನ್ನು ಕಾಪಾಡಲು ಹೋರಾಡಬೇಕಾದ ಅಗತ್ಯವೂ ಇಂದು ನಮ್ಮೆದುರಿಗಿದೆ.
ನಮ್ಮ ನಿಲುವಿಗೆ ಕಾರಣಗಳೇನು?
ಮೊದಲಿಗೆ ಡಬ್ಬಿಂಗ್ ಎಂದರೆ ಏನು ಎಂದು ಅರ್ಥ ಮಾಡಿಕೊಳ್ಳೋಣ. (ಈ ಉದ್ಯಮದಲ್ಲಿರುವ ಬಹುತೇಕರಿಗೆ ಇದು ತಿಳಿದಿದೆ. ಆದರೆ ಇತರರಿಗೆ ಎಂದು ಮತ್ತೊಮ್ಮೆ ತಿಳಿಸಬೇಕಾದ್ದು ಅವಶ್ಯಕ. ಹಾಗಾಗಿ ಈ ವಿವರಣೆ.) ಯಾವುದೋ ಅನ್ಯಭಾಷೆ ಮತ್ತು ಅನ್ಯ ಸಂಸ್ಕೃತಿಯಲ್ಲಿ ತಯಾರಾದ ಚಿತ್ರವೊಂದಕ್ಕೆ ಕನ್ನಡ ಭಾಷೆಯನ್ನು ಕೇವಲ ಧ್ವನಿಯಾಗಿ ಸೇರಿಸುವುದು ಈ ಡಬ್ಬಿಂಗ್ ವ್ಯವಸ್ಥೆಯ ಗುಣ. ಅಂದರೆ ಜೇಮ್ಸ್‌ಬಾಂಡ್ ಚಿತ್ರವೊಂದು ಮೂಲತಃ ಆಂಗ್ಲದಲ್ಲಿ ತಯಾರಾಗಿದ್ದರೂ, ನಂತರ ಅಲ್ಲಿನ ಎಲ್ಲಾ ಪಾತ್ರಗಳ ತುಟಿ ಚಲನೆಗೆ ತಕ್ಕಂತೆ ಕನ್ನಡದಲ್ಲಿ ಮಾತು ಕೂಡಿಸುವುದು.
ಯೋಚಿಸಿ. ಜೇಮ್ಸ್‌ಬಾಂಡೋ ಅಥವಾ ಇನ್ನಾವುದೋ ನಮ್ಮ ಸಂಸ್ಕೃತಿಯಲ್ಲದ ಪಾತ್ರ ನಮ್ಮ ಭಾಷೆಯನ್ನು ಮಾತಾಡುತ್ತಾ, ನಮ್ಮ ಸಂಸ್ಕೃತಿಯಲ್ಲದ ವಾತಾವರಣದಲ್ಲಿ ಇರುವುದನ್ನ ನಾವು ನೋಡಲು ಸಾಧ್ಯವೇ? ಖಂಡಿತಾ ನೋಡಬಹುದು. ಹಿರಿಯರಾದ ನಮಗೆ ಇದು ಕಷ್ಟವಾಗದು. ಆದರೆ ನಮ್ಮ ಮುಂದಿನ ತಲೆಮಾರು ಇಂತಹುದನ್ನು ನೋಡುವಾಗ ಅವರ ಮನಸ್ಸಿನಲ್ಲಿ ಮೂಡುವ ಸಂಸ್ಕೃತಿಗೆ ಏನಾಗುತ್ತದೆ ಎಂದು ಯೋಚಿಸಿ. ಈ ಪ್ರಶ್ನೆಗೂ ಡಬ್ಬಿಂಗ್ ಪರವಾದ ವಾದ ಮಂಡಿಸುವವರು ‘ಇಂದಿನ ಜಾಗತೀಕರಣದ ಕಾಲಘಟ್ಟದಲ್ಲಿ ಎಲ್ಲಾ ನಗರಗಳೂ, ಎಲ್ಲಾ ರಸ್ತೆಗಳು, ಎಲ್ಲಾ ಜನ ಬದುಕುವ ಆವರಣವೂ ಒಂದೇ ರೀತಿಯದಾಗಿದೆ. ಅಮೇರಿಕಾದ ಮಾಲ್‌ಗಳು ಬೆಂಗಳೂರಿಗೆ ಬಂದಿಲ್ಲವೇ’ ಎನ್ನುತ್ತಾರೆ. ನಾವು ವಿರೋಧಿಸಬೇಕಾದ್ದು ಇದನ್ನೇ. ಈ ಏಕಮುಖಿ ಸಂಸ್ಕೃತಿಯನ್ನು ಕಟ್ಟಲು ಹೊರಟಿರುವ ಜಾಗತೀಕರಣವನ್ನು ಬೆಂಬಲಿಸುವವರನ್ನೇ ನಾವು ಹಿಮ್ಮೆಟ್ಟಿಸಬೇಕು. ನಮ್ಮದು ಬಹುಮುಖೀ ಸಂಸ್ಕೃತಿ. ಕಾವೇರಿ ಕಣಿವೆಯಲ್ಲಿ ಬದುಕುವವರ ಜಾನಪದ, ಭಾಷೆ ಬೇರೆಯದು ಹೇಗೋ – ಹಾಗೆಯೇ ದಕ್ಷಿಣ ಕನ್ನಡದ, ಉತ್ತರ ಕರ್ನಾಟಕದ, ಮಲೆನಾಡಿನ, ನೈಜಾಮೀ ಕರ್ನಾಟಕದ ಭಾಷೆ ಭಿನ್ನ. ಈ ಭಿನ್ನತೆಯ ನಡುವೆಯೆ ಕನ್ನಡ ಬದುಕುತ್ತಿದೆ. ಕನ್ನಡತನವೂ ಉಸಿರಾಡುತ್ತಿದೆ. ಇದನ್ನು ಉಳಿಸದೆ ನಾವು ಕೇವಲ ಲಾಭಬಡುಕತನದ ಮಾತಾಡತೊಡಗಿದರೆ ಆಗುವ ಅನಾಹುತ ದೊಡ್ಡದು.
ಭ್ರಮೆಯ ಬಲೂನು
ಅದಾಗಲೇ ಈ ಜಾಗತೀಕರಣದ ಬೆನ್ನಲ್ಲಿ ನಮ್ಮ ಮಕ್ಕಳನ್ನು ಇಂಗ್ಲೀಷ್ ಭಾಷೆಗೆ ತಳ್ಳಿದ್ದೇವೆ. ‘ಇಂಗ್ಲೀಷ್ ಕಲಿತವನಿಗೆ ಮಾತ್ರ ಅನ್ನ ಹುಟ್ಟುತ್ತದೆ. ಕನ್ನಡ ಕಲಿತರೆ ಬದುಕಲಾಗದು’ ಎಂಬ ಭ್ರಮೆಯ ಬಲೂನೊಂದನ್ನು ನಾವೇ ಊದಿಕೊಂಡಿದ್ದೇವೆ. ಹೀಗಾಗಿ ಇಂದು ಕನ್ನಡ ಓದಲು-ಬರೆಯಲು ಬಲ್ಲ ಹೊಸ ತಲೆಮಾರಿನವರ ಸಂಖ್ಯೆ ಆತಂಕ ಹುಟ್ಟುವಷ್ಟು ಇಳಿದಿದೆ. ಇನ್ನು ವಿದೇಶಿ ಸಂಸ್ಕೃತಿಗೆ ಕನ್ನಡದ ಮಾತಿನ ಲೇಪನ ಮಾಡಿ ಕನ್ನಡವನ್ನು ಉಳಿಸುತ್ತೇವೆ ಎಂಬ ಮಾತಾಡುವವರಿಗೆ ಹಾಗೆ ಕನ್ನಡಕ್ಕೆ ಡಬ್ ಆದ ಪರಭಾಷೆಯ ಚಿತ್ರವನ್ನು ನೋಡುವವರೇ ಇರುವುದಿಲ್ಲ ಎಂಬುದರ ಅರಿವಾಗಬೇಕಾಗಿದೆ. ಏಕೆಂದರೆ ಒಂದೇ ಮಾಲ್‌ನಲ್ಲಿ ರಜನೀಕಾಂತ್ ಅಭಿನಯದ ತಮಿಳು ಚಿತ್ರವೂ ಇದ್ದು, ಅದರ ಕನ್ನಡ ಡಬ್ ಆವೃತ್ತಿಯೂ ಇದ್ದರೆ ಯಾವುದೇ ಚಲನಚಿತ್ರ ಅಭಿಮಾನಿಯು ಮೂಲ ಚಿತ್ರವನ್ನೇ ಆಯ್ದುಕೊಳ್ಳುತ್ತಾನೆ ಎಂಬುದು ಅದಾಗಲೇ ತಿಳಿದಿರುವ ಸತ್ಯ. ಇನ್ನು ‘ಅವತಾರ್‌ನಂತಹ ಚಿತ್ರಗಳನ್ನು ಕನ್ನಡಿಗನು ಕನ್ನಡದಲ್ಲಿ ನೋಡಬಹುದು’ ಎನ್ನುವ ಮಾತಾಡುವವರಿಗೂ ಸಹ ನಾವು ಈ ಸತ್ಯವನ್ನು ಮತ್ತೆ ತಿಳಿಸಬೇಕಿದೆ. ಭಾರೀ ಗ್ರಾಫಿಕ್‌ನ ಚಿತ್ರವೊಂದು ಆ ಕ್ಷಣದಲ್ಲಿ ನೀಡುವ ಮನರಂಜನೆಗೂ ನಮ್ಮದೇ ಸಂಸ್ಕೃತಿಯ ವಿವರಗಳಿಂದ ಪಡೆದ ಆನಂದ ನಮ್ಮಲ್ಲಿ ಶಾಶ್ವತವಾಗಿ ನಿಲ್ಲುವುದಕ್ಕೂ ದೊಡ್ಡ ವ್ಯತ್ಯಾಸ ಇದೆ. ಇನ್ನು ‘ಅವತಾರ್’ನಂತಹದನ್ನು ಕನ್ನಡದಲ್ಲಿ ನೋಡಿದರೂ ಕನ್ನಡಿಗನಿಗೆ ಸಿಗುವ ಭೌದ್ಧಿಕ ಲಾಭ ಸೊನ್ನೆಯೇ ಎಂದು ಮತ್ತೆ ಹೇಳಬೇಕಾಗಿಲ್ಲ. ಇನ್ನು ‘ಅವತಾರ್’ನಂತಹ ಚಿತ್ರಗಳು ಎಲ್ಲಿ ನಡೆಯುತ್ತವೋ ಅಲ್ಲಿ ಇಂಗ್ಲೀಷ್ ಬಲ್ಲವರೇ ಹೆಚ್ಚು. ಹಾಗಾಗಿ ಆ ‘ಅವತಾರ್’ ಕನ್ನಡದಲ್ಲಿ ದಕ್ಕಿದರೂ ನೋಡುವವರು ಇರುವುದಿಲ್ಲವಾದ್ದರಿಂದ ಅಂತಹದನ್ನು ‘ಡಬ್ಬಿಂಗ್’ ಮಾಡಿ ಕನ್ನಡವನ್ನು ಕೊಲ್ಲುವುದಕ್ಕಿಂತ ಸುಮ್ಮನಿರುವುದು ಲೇಸು. ಹೀಗಾಗಿ ಡಬ್ಬಿಂಗ್ ಮಾಡಿ ಕನ್ನಡವನ್ನು ಉಳಿಸುತ್ತೇವೆ ಎನ್ನುವವರು ಮತ್ತೆ ಸೋಲುತ್ತಾರೆ. ಈ ಕಾರಣಕ್ಕಾಗಿಯೂ ನಾವು ‘ಡಬ್ಬಿಂಗ್ ಮರು ಆರಂಭ’ವನ್ನು ವಿರೋಧಿಸಬೇಕಿದೆ.
ನಮ್ಮವರಿಗೆ ಉದ್ಯೋಗ ಎಂಬ ಮೂಲಮಂತ್ರ
ಕರ್ನಾಟಕದಲ್ಲಿ ಕನ್ನಡ ಚಿತ್ರರಂಗ ಹಾಗೂ ಟೆಲಿವಿಷನ್ ಉದ್ಯಮದಲ್ಲಿ ನೇರವಾಗಿ ಬದುಕುತ್ತಿರುವ, ಅಲ್ಲಿಯೇ ಅನ್ನ ಸಂಪಾದಿಸುತ್ತಿರುವ ಜನರ ಸಂಖ್ಯೆ ಐವತ್ತು ಸಾವಿರವನ್ನು ಮೀರುತ್ತದೆ. ಅಂದರೆ ಐವತ್ತು ಸಾವಿರ ಕುಟುಂಬಗಳಿಗೆ ಈ ಉದ್ಯಮಗಳು ಅನ್ನ ನೀಡುತ್ತಿವೆ. ಹಾಗಾದರೆ ಆ ಸಂಖ್ಯೆಯು ಕುಟುಂಬವೊಂದಕ್ಕೆ ನಾಲ್ಕು ಜನ ಎಂದು ಊಹಿಸದರೂ ಎರಡು ಲಕ್ಷ ಜನರಷ್ಟಾಗುತ್ತದೆ. ಇನ್ನು ಪರೋಕ್ಷವಾಗಿ ಈ ಉದ್ಯಮವನ್ನು ನೆಚ್ಚಿಕೊಂಡು ಬದುಕುತ್ತಿರುವವರ ಸಂಖ್ಯೆ ಈ ಸಂಖ್ಯೆಯ ನಾಲ್ಕರಷ್ಟಿದ್ದಾರೆ. ಇಷ್ಟೂ ಜನ ‘ಡಬ್ಬಿಂಗ್ ಸಿನಿಮಾ’ ಆರಂಭವಾದರೆ ಬೀದಿಗೆ ಬೀಳುತ್ತಾರೆ. ಈ ಮಾತಿಗೆ ಡಬ್ಬಿಂಗ್ ಪರವಾಗಿ ಮಾತಾಡುವವರು ‘ಖಂಡಿತಾ ಇಲ್ಲ. ಡಬ್ಬಿಂಗ್ ಸಿನಿಮಾಗಳಿಗೆ ಮಾತು ಬರೆಯುವ, ಕೂಡಿಸುವ ಕೆಲಸಗಳಿಂದಾಗಿ ಕನ್ನಡಿಗರಿಗೆ ಲಾಭ ಇದೆ’ ಎನ್ನುತ್ತಾರೆ. ಇದು ಅರ್ಧಸತ್ಯ. ಅಮೇರಿಕಾದಲ್ಲಿ ತಯಾರಾದ ಅಥವಾ ಚೆನ್ನೈನಲ್ಲಿ ತಯಾರದ ಮೂಲ ಚಿತ್ರವೊಂದರ ಧ್ವನಿ ಸಂಸ್ಕರಣದ ಕೆಲಸಗಳು ಆಯಾ ಊರಲ್ಲಿಯೇ ನಡೆಯುತ್ತದೆ. ಹೀಗಾಗಿಯೇ ಅದೇ ಊರುಗಳಲ್ಲಿ ವಾಸಿಸುವ ‘ಕನ್ನಡಿಗರು’ ಈ ಕೆಲಸಗಳನ್ನು ಮಾಡುತ್ತಾರೆ. (ಹೀಗಾಗಿಯೇ ಅನೇಕ ಜಾಹೀರಾತುಗಳಲ್ಲಿ ಬಳಕೆಯಾಗುವ ಭಾಷೆ ಹಾಳಾಗಿರುವುದನ್ನು ನಾವು ನೋಡಿದ್ದೇವೆ.) ಇಂತಹ ಡಬ್ಬಿಂಗ್ ಕೆಲಸಗಳು ಕರ್ನಾಟಕದಲ್ಲಿಯೇ ಆಗುವಂತೆ ಮಾಡುತ್ತೇವೆ ಎಂದರೂ ಅದು ಪ್ರಾಕ್ಟಿಕಲಿ ಡಿಫಿಕಲ್ಟ್! ಒಂದು ಸಿನಿಮಾದ ಧ್ವನಿಗಾಗಿ ನೂರಕ್ಕೂ ಹೆಚ್ಚು ಟ್ರ್ಯಾಕ್‌ಗಳನ್ನು ಬಳಸಲಾಗುತ್ತದೆ. ಆ ಎಲ್ಲಾ ಟ್ರ್ಯಾಕ್‌ಗಳನ್ನು ಯಾವುದೋ ಊರಿಂದ ಇಲ್ಲಿಗೆ ವರ್ಗಾಯಿಸುವಾಗ ಆಗುವ ಗುಣಮಟ್ಟದ ಲಾಸ್ ಮತ್ತು ಅದನ್ನು ಸರಿಪಡಿಸಲು ಬೇಕಾಗುವ ಹೆಚ್ಚುವರಿ ಹಣದ ಬಗ್ಗೆ ತಿಳಿದಿರುವ ಯಾವ ಉದ್ಯಮಿಯೂ ಈ ವರ್ಗಾವಣೆಯನ್ನು ಒಪ್ಪುವುದಿಲ್ಲ. ಹೀಗಾಗಿ ‘ಡಬ್ಬಿಂಗ್‌ನಿಂದಾಗಿ ಕನ್ನಡ ಕಲಾವಿದರು/ತಂತ್ರಜ್ಞರು/ಕಾರ್ಮಿಕರು ನಿರುದ್ಯೋಗಿಗಳಾಗುವುದಿಲ್ಲ’ ಎಂದೆನ್ನುತ್ತಿರುವವರು ದೊಡ್ಡ ಸುಳ್ಳನ್ನು ಹೇಳುತ್ತಾ ಇದ್ದಾರೆ. ಆ ಸುಳ್ಳನ್ನ ಅವರಿಗೆ ಮನಗಾಣಿಸುವ ಜವಾಬ್ದಾರಿ ನಮ್ಮದೇ ಆಗಿದೆ.
‘ಡಬ್ಬಿಂಗ್ ಮರುಆರಂಭ’ ಪರವಾಗಿ ಮಾತಾಡುತ್ತಿರುವವರು ಮತ್ತೊಂದು ಮಾತಾಡುತ್ತಾ ಇದ್ದಾರೆ. ಅದು ನಮ್ಮಲ್ಲಿ ಹೆಚ್ಚಿರುವ ರಿಮೇಕ್ ಚಿತ್ರಗಳು, ಹಾಗೂ ಧಾರಾವಾಹಿಗಳನ್ನು ಕುರಿತಾದ್ದು. ‘ಈ ರಿಮೇಕ್ ಪಿಡುಗು ತಪ್ಪಿಸಲು ಡಬ್ಬಿಂಗ್ ಬರುವುದು ಉತ್ತಮ’ ಎಂಬುದು ಆ ಜನರ ವಾದ. ಹೌದು. ರಿಮೇಕ್ ಎಂಬುದು ದೊಡ್ಡ ಪಿಡುಗು. ಅದನ್ನು ತಪ್ಪಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಆ ಮಾತನ್ನು ಒಪ್ಪುತ್ತಲೇ ರಿಮೇಕ್ ನಿಂತು ಡಬ್ಬಿಂಗ್ ಬಂದರೆ ಏನಾಗುತ್ತದೆ ಎಂದು ಯೋಚಿಸಿ. ಈಗ ನಮ್ಮಲ್ಲಿ ಪ್ರಸಾರವಾಗುತ್ತಿರುವ ‘ಮಾಂಗಲ್ಯ’, ‘ರಂಗೋಲಿ’ ಮುಂತಾದ ರಿಮೇಕ್ ಧಾರಾವಾಹಿಗಳು ಜನಪ್ರಿಯವಾಗಿವೆ. ಅವುಗಳಲ್ಲಿ ಅಭಿನಯಿಸುತ್ತಿರುವ ಅನೇಕ ಕಲಾವಿದರು ಜನಪ್ರಿಯರಾಗಿದ್ದಾರೆ. ಹೀಗೆ ರಿಮೇಕ್ ಆಗುವ ಬದಲಿಗೆ ಅವುಗಳ ಮೂಲ ಧಾರಾವಾಹಿಗಳಿಗೆ ಕನ್ನಡ ಮಾತನ್ನು ಮಾತ್ರ ಕೂಡಿಸಿದರೆ ಯಾವುದೋ ಪರಭಾಷೆಯ ಕಲಾವಿದನನ್ನು ನೋಡುತ್ತಾ, ಕನ್ನಡವನ್ನು ಕೇವಲ ಕೇಳುವ ಸ್ಥಿತಿಗೆ ನಾವು ಬರಲಿದ್ದೇವೆ. ಇದರಿಂದ ವಾಹಿನಿಗಳ ಮಾಲೀಕರಿಗೆ ಖರ್ಚು ಕಡಿಮೆ ಆಗಬಹುದು. ಲಾಭವೂ ಹೆಚ್ಚಾಗಬಹುದು. ಆದರೆ ಈ ರಿಮೇಕ್ ಧಾರಾವಾಹಿಗಳಲ್ಲಿ ದುಡಿಯುತ್ತಿರುವ ಕಲಾವಿದರು ಮಾತ್ರವಲ್ಲ, ತಂತ್ರಜ್ಞರು ಹಾಗೂ ಕಾರ್ಮಿಕರು ಸಹ ಕೆಲಸ ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ನಾವು ‘ಡಬ್ಬಿಂಗ್ ಮರು ಆರಂಭ’ವನ್ನು ವಿರೋಧಿಸಬೇಕಿದೆ. ಈ ವಿರೋಧಗಳಿಗೆ ರಿಮೇಕ್ ಧಾರಾವಾಹಿಗಳನ್ನೂ ವಿರೋಧಿಸಿ ಅಲ್ಲಿ ಕನ್ನಡದ ಸೊಗಡಿನ ಧಾರಾವಾಹಿಗಳನ್ನು ಎಳೆತಂದು ನಿಲ್ಲಿಸಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ನೆನಪಲ್ಲಿಟ್ಟುಕೊಳ್ಳೋಣ. ಆದರೆ ರಿಮೇಕ್‌ಗಳನ್ನು ನಿಲ್ಲಿಸುವುದಕ್ಕೂ ಮುನ್ನ ಡಬ್ಬಿಂಗ್ ಎಂಬ ಮಾರಿಯು ಒಳಬರದಂತೆ ತಡೆಯೋಣ.
ಪಿಡುಗಿನ ಮತ್ತೊಂದು ಸ್ವರೂಪ
‘ಡಬ್ಬಿಂಗ್ ಮರು ಆರಂಭ’ ಆದರೆ ಮೊದಲು ಡಬ್ ಆಗುವುದು ಧಾರಾವಾಹಿಗಳು. ಇದಕ್ಕಾಗಿ ‘ರಾಮಾಯಣ’ದ ಡಬ್ಬಿಂಗ್ ಮಾಡಲು ಪ್ರಯತ್ನಿಸಿದವರ ಕಾಲದಿಂದಲೂ ಹಿಂಬಾಗಿಲಿಂದ ಒಳಗೆ ಬರುವ ಪ್ರಯತ್ನಗಳು ಆಗುತ್ತಿವೆ. ಕನ್ನಡಿಗರು ಗಟ್ಟಿಯಾಗಿ ವಿರೋಧಿಸಿ ಇದನ್ನು ಈ ವರೆಗೆ ತಡೆದಿದ್ದಾರೆ. ನೀವೇ ಯೋಚಿಸಿ. ‘ಕಲರ‍್ಸ್’ನಲ್ಲಿಯೋ ‘ಸ್ಟಾರ್’ನಲ್ಲಿಯೋ ಬರುವ ಧಾರಾವಾಹಿಗಳು ತಮ್ಮ ಉತ್ತರ ಭಾರತೀಯ ಸಂಸ್ಕೃತಿಯ ಜೊತೆಗೆ ಕನ್ನಡಕ್ಕೆ ಬಂದರೆ ಏನಾಗಬಹುದು? ಅದರಿಂದ ನಾಡಿನ ಸಂಸ್ಕೃತಿಯನ್ನಂತೂ ಕಟ್ಟಲಾಗದು. ಪ್ರಾಯಶಃ ರಸ್ತೆಗೆ ನಾಲಕ್ಕು ಬ್ಯೂಟಿ ಪಾರ್ಲರ್‌ಗಳು ಬರಬಹುದು. ಈ ನಾಡಿನ ಹೊಸ ತಲೆಮಾರು ಪೂರ ‘ಸೌಂದರ್ಯ ಪ್ರಜ್ಞೆ’ ಎಂದು ಈ ಧಾರಾವಾಹಿಗಳು ತೋರುವ ವಿವರವನ್ನೇ ನಂಬಿಕೊಂಡು ಹಳವಂಡಗಳ ನಡುವೆ ಹಳಹಳಿಸಬಹುದು, ಅಷ್ಟೆ. ‘ಬಿಳಿಯೇ ಸೌಂದರ್ಯ! ೮ರ ಆಕಾರದಲ್ಲಿರುವುದೇ ಸೌಂದರ್ಯ’ ಎಂದು ಹೇಳುತ್ತಾ ಈವರೆಗೆ ಈ ಜಾಗತೀಕರಣದ ಹುನ್ನಾರಗಳು ಮಾಡಿರುವ ಅಪಭ್ರಂಶಗಳನ್ನು ಒರೆಸುವ ಕೆಲಸ ಬಾಕಿ ಇರುವಾಗಲೇ ಮತ್ತಷ್ಟು ಹೊಲಸನ್ನು ನಮ್ಮ ಮೇಲೆ ಹೇರುವುದನ್ನು ನಾವು ಸುಮ್ಮನೆ ಸಹಿಸಿಕೊಳ್ಳಲಾಗದು. ಈ ಕಾರಣಕ್ಕಾಗಿಯೂ ನಾವು ‘ಡಬ್ಬಿಂಗ್ ಮರುಆರಂಭ’ ವಿರೋಧಿಸಬೇಕಿದೆ.
ಏಕರೂಪೀ ಸಂಸ್ಕೃತಿಯನ್ನು ನಾಡಿಗೆಲ್ಲಾ ಉಣಬಡಿಸುವ ಹೆಸರಲ್ಲಿ ನಮ್ಮ ಬಹುಮುಖಿ ಸಂಸ್ಕೃತಿಯನ್ನ, ನಮ್ಮ ಅಸ್ಮಿತೆಯನ್ನ ನಾಶ ಮಾಡಲು ಹೊರಟಿರುವ ಎಲ್ಲಾ ಶಕ್ತಿಗಳನ್ನ ವಿರೋಧಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈಚೆಗೆ ದೈನಂದಿನ ಪತ್ರಿಕೆಗಳಲ್ಲಿ ಡಬ್ಬಿಂಗ್ ಪರವಾದ ಲೇಖನ ಬರೆದ ಪತ್ರಕರ್ತರ ಮೇಲೆ ನಮ್ಮ ಕೋಪಗಳಿಲ್ಲ. ಅವರೆಲ್ಲರೂ ತಮ್ಮ ಆಳುವವರ್ಗ ಮತ್ತು ಆ ಆಳುವವರ್ಗವನ್ನು ನಿಯಂತ್ರಿಸುವ ಬೃಹತ್ ಉದ್ದಿಮೆದಾರರ ಕೈಗೊಂಬೆಗಳು. ಸಂಬಳಕ್ಕಾಗಿ ಸಾಲು ಬರೆದು ಪುಟ ತುಂಬಿಸುವವರು. ಹಾಗಾಗಿ ಆ ಪತ್ರಕರ್ತರನ್ನು ಸಹ ನಮ್ಮ ಆವರಣದ ಒಳಗೆ ತರುತ್ತಾ, ಅವರಿಂದ ಇಂತಹ ಲೇಖನ ಬರೆಸಿದ ಕಾಣದ ಕೈಗಳನ್ನು ವಿರೋಧಿಸೋಣ.
ನಮ್ಮ ಸಂಘಟನಾ ಶಕ್ತಿಯಿಂದ ನಮ್ಮ ಸಂಸ್ಕೃತಿಯನ್ನು ಉಳಿಸುವತ್ತಾ ನಮ್ಮ ಹೋರಾಟಗಳು ಸಾಗಬೇಕು ಎನ್ನುವಾಗ ಭಾರೀ ಉದ್ಯಮಿಗಳು ಬೀಸುತ್ತಿರುವ ಗಾಳಿಯಲ್ಲಿ ನಾವು ತೇಲಿಹೋಗಿ, ಆ ನಂತರ ಹೊತ್ತು ಜಾರಿತು ಎಂದು ಕೊರಗುವ ಹಾಗೆ ಆಗದಿರಲಿ.
ಸಂಘಟನೆಯಲ್ಲಿ ವಿಶ್ವಾಸವಿರಲಿ ಎಂದು ನೆನಪಿಸುತ್ತಾ ವಿರಮಿಸುತ್ತೇನೆ.
ನಿಮ್ಮವ
ಬಿ.ಸುರೇಶ
೨೩ ಅಕ್ಟೋಬರ್ ೨೦೧೦
ರಾತ್ರಿ ೧೨.೩೦
ಕ್ಯಾಂಪ್ : ಪಾಂಡವಪುರ
* * *

Advertisements

0 Responses to “ಗಾಳಿ ಬೀಸುತಿದೆ, ಹೊತ್ತು ಜಾರುತಿದೆ! (ನವೆಂಬರ್ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ)”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 60,851 ಜನರು
Advertisements

%d bloggers like this: