ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯಾ’ ಒಂದು ವಿಮರ್ಶೆಯ ಯತ್ನ

ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯಾ’
ಒಂದು ವಿಮರ್ಶೆಯ ಯತ್ನ
– ಬಿ.ಸುರೇಶ
ಆತ್ಮಚರಿತ್ರೆಯೆನ್ನುವುದು ಅತಿ ಕಷ್ಟದ ಪ್ರಾಕಾರ. ಇಲ್ಲಿ ತಮ್ಮ ಜೀವನವನ್ನು ತಾವೇ ನೋಡಿಕೊಳ್ಳುವ ಕಷ್ಟ ಒಂದೆಡೆಗಾದರೆ, ನಮ್ಮ ಜೀವನದ ಯಾವ ವಿವರವನ್ನು ಎಷ್ಟು ಹೇಳಬೇಕೆಂಬ ಆಯ್ಕೆಯ ಪ್ರಶ್ನೆ ಮತ್ತೊಂದೆಡೆ ಇರುತ್ತದೆ. ಇವೆರಡನ್ನು ಸರಿದೂಗಿಸಿಕೊಳ್ಳುವಾಗ ಕಟ್ಟುವ ವಾಕ್ಯಗಳು ಮನಸ್ಸಿನ ಭಾವನೆಗಳನ್ನು ಓದುಗನಿಗೆ ಮುಟ್ಟಿಸುತ್ತವೆಯೇ ಎಂಬ ಅನುಮಾನವೂ ಕಾಡುತ್ತದೆ. ಈ ಕಾರಣಕ್ಕಾಗಿಯೇ ನಮ್ಮಲ್ಲಿ ಅನೇಕರು ಈ ಆತ್ಮಚರಿತ್ರೆ ಬರೆಯುವುದಕ್ಕೆ ಪ್ರಯತ್ನಿಸುವುದೇ ಇಲ್ಲ. ಭಾರತದ ಮಟ್ಟಿಗೆ ಗಾಂಧೀಜಿಯವರ ‘ಸತ್ಯಪರೀಕ್ಷೆ ಅಥವ ನನ್ನ ಜೀವನ ಯಾನ’ವೇ ಅತಿಹೆಚ್ಚು ಓದುಗರನ್ನು ಪಡೆದ ಆತ್ಮಚರಿತ್ರೆ ಇರಬೇಕು. ಕನ್ನಡದಲ್ಲಿ ಕುವೆಂಪು, ಎ.ಎನ್.ಮೂರ್ತಿರಾಯರಂತಹವರು ಈ ಪ್ರಾಕಾರದಲ್ಲಿ ಕೃತಿಗಳನ್ನು ತಂದಿದ್ದಾರೆ. ಅವರನ್ನು ಕೈಮರವಾಗಿ ಬಳಸಿದಂತೆ ನಂತರದ ದಿನಗಳಲ್ಲಿ ಲಂಕೇಶರ ವರೆಗೆ ಅನೇಕ ಸಾಹಿತಿಗಳು ಆತ್ಮಚರಿತ್ರೆಯನ್ನು ನೀಡಿದ್ದಾರೆ. ಹೀಗೆ ಆತ್ಮಚರಿತ್ರೆಯನ್ನು ಬರೆದವರಲ್ಲಿ ರಂಗಭೂಮಿ ಮತ್ತು ಸಿನಿಮಾ ನಂಟಿನ ಜನಗಳು ಕಡಿಮೆ. ಗುಬ್ಬಿ ವೀರಣ್ಣ ಅವರ ನಂತರ ಕನ್ನಡದಲ್ಲಿ ಆತ್ಮಚರಿತ್ರೆ ಬರೆದವರೆಂದು ಸಿಗುವ ರಂಗಭೂಮಿಯ ಜನರೆಂದರೆ ಬಿ.ವಿ.ಕಾರಂತರು ಮತ್ತು ಸಿ.ಜಿ.ಕೃಷ್ಣಸ್ವಾಮಿ ಮಾತ್ರ. ಇವರೆಲ್ಲರೂ ತಾವು ಹೇಳಬೇಕಾಗಿದ್ದುದನ್ನು ಮತ್ತೊಬ್ಬರಿಗೆ ಹೇಳಿ ಬರೆಯಿಸಿದವರು. ಈ ಎಲ್ಲಾ ‘ವ್ಯಾಸ’ರಿಗೆ ‘ಗಣೇಶ’ರುಗಳು ಇದ್ದರು. ಹೀಗಾಗಿ ಇವರಿಗೆ ಆತ್ಮಚರಿತ್ರೆ ಬರೆಯುವಾಗಿನ ಮೂರನೆಯ ಪ್ರಶ್ನೆಯಾದ ವಾಕ್ಯರಚನೆಯು ಓದುಗರಿಗೆ ತಲುಪುತ್ತದೆಯೇ ಎಂಬ ಅನುಮಾನ ಬಹುತೇಕ ಇರಲಿಲ್ಲ. ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ಪ್ರೇಮ ಕಾರಂತರು ತಮ್ಮ ಜೀವನ ಯಾನವನ್ನು ತಾವೇ ಅಕ್ಷರ ರೂಪಕ್ಕೆ ತಂದಿದ್ದಾರೆ. ಪ್ರಾಯಶಃ ತಮ್ಮ ಆತ್ಮಚರಿತ್ರೆಯನ್ನು ತಾವೇ ಅಕ್ಷರಕ್ಕೆ ಇಳಿಸಿದ ಮೊದಲ ರಂಗಕರ್ಮಿ ಇವರೇ ಇರಬಹುದು. ಅದಕ್ಕಾಗಿ ಪ್ರೇಮಾ ಅವರಿಗೆ ನಮನ ಸಲ್ಲಿಸೋಣ. ನಮ್ಮ ನಡುವೆ ಸುಳಿದಾಡಿದ ಹೆಣ್ಣು ಮಗಳೊಬ್ಬಳು ತನ್ನ ಜೀವನವನ್ನು ತನ್ನ ಕಣ್ಣು, ತನ್ನ ಭಾಷೆಯ ಮೂಲಕವೇ ಬಿಚ್ಚಿಡುವ ಈ ಪ್ರಯತ್ನವೇ ಮೊದಲಿಗೆ ಮೆಚ್ಚುವಂತಹುದು. ಅದಕ್ಕಾಗಿ ಇಂದು ನಮ್ಮೊಡನೆ ಇಲ್ಲದ ಪ್ರೇಮ ಅವರನ್ನು ಅಭಿನಂದಿಸಲೇಬೇಕು.
ಪ್ರೇಮ ಅವರು ತಮ್ಮ ಕೃತಿಗೆ ಹೆಸರನ್ನಿಡುವಾಗಲೇ ಅತ್ಯಂತ ಜಾಗರೂಕರಾಗಿ ‘ಸೋಲಿಸಬೇಡ ಗೆಲಿಸಯ್ಯಾ’ ಎನ್ನುತ್ತಾರೆ. ಇಲ್ಲಿ ಕಾಣದ ಓದುಗ ದೇವರನ್ನು, ಆ ಮೂಲಕ ಪ್ರೇಮ ಅವರ ಅಭಿಮಾನಿ ಬಳಗದ ಎದುರು ಆರ್ತತೆಯ ವಿನಯವೊಂದನ್ನು ಸಾಧಿಸುತ್ತಾರೆ. ಇದು ಪ್ರೇಮ ಅವರಂತಹ ಹೋರಾಟದ ಬದುಕನ್ನು ಕಂಡ ಹೆಣ್ಣು ಮಗಳಿಗೆ ಅಗತ್ಯವಾದ ಒಂದು ಕ್ರಿಯೆ. ಆರ್ತತೆಯ ಮೊರೆಯನ್ನಿಟ್ಟು ತಮ್ಮ ಜೀವನದ ತೆರೆಯನ್ನು ಸರಿಸುವ ದಾರಿಯನ್ನು ಪ್ರೇಮ ಆತ್ಮಚರಿತ್ರೆಯ ಕಥನಕ್ಕೆ ಆಯ್ದುಕೊಳ್ಳುತ್ತಾರೆ. ಈ ಆರ್ತತೆಯೇ ಅವರ ಪುಸ್ತಕಕ್ಕೆ ಮುನ್ನುಡಿಯೂ ಹೌದು, ಆ ಜೀವನ ಚರಿತ್ರೆಯ ಸ್ಥಾಯೀಭಾವವೂ ಹೌದು. ಹೀಗಾಗಿ ಈ ಜೀವನ ಚರಿತ್ರೆಯ ಅಂತಿಮ ಅಧ್ಯಾಯಕ್ಕೆ ತಲುಪುವಾಗ ಓದುಗನು ಸ್ವತಃ ಕಣ್ಣು ತುಂಬಿಕೊಳ್ಳುವುದು ಖಂಡಿತಾ.


ಆದರೆ ಸಾಹಿತಿಯಲ್ಲದ, ಅಕ್ಷರದ ಮೂಲಕ ಅನುಭವವನ್ನು ಕಟ್ಟುವ ಅಭ್ಯಾಸ ಇಲ್ಲದ ಪ್ರೇಮ ಅವರಿಗೆ ವಾಕ್ಯ ರಚನೆಯೇ ಪ್ರಧಾನ ತೊಡಕು. ಮತ್ತು ಒಂದು ವಿಷಯವನ್ನ ಹೇಲುವಾಗಲೇ ಅವರಿಗೆ ಮತ್ತೊಂದು ವಿಷಯವನ್ನು ಹೇಳುವ ಧಾವಂತ ಹುಟ್ಟಿ, ಹೇಳುತ್ತಿದ್ದುದನ್ನು ಅವಸರದಿಂದ ಮುಗಿಸಿಬಿಡುತ್ತಾರೆ. ಹೀಗಾಗಿ ಅವರು ತಮ್ಮ ಜೀವನದ ಬಹುಮುಖ್ಯ ಘಟ್ಟವನ್ನು ಹೇಳುವಾಗಲೂ ಅದು ಓದುಗನಿಗೆ ಅನುಭವವಾಗಿ ದಕ್ಕುವುದಕ್ಕಿಂತ ವರದಿಯಂತೆ ತಲುಪುವುದೇ ಹೆಚ್ಚು. ಪ್ರಾಯಶಃ ಜೀವನಚರಿತ್ರೆಯ ಮೊದಲ ಆಕಾರ ಸಿದ್ಧಗೊಂಡನಂತರ ಅದನ್ನು ಒಂದಿಬ್ಬರಿಗೆ ಓದಿ, ಓದಿಸಿ, ಜರಡಿಯಾಡುವ ಆ ಮೂಲಕ ಜೊಳ್ಳನ್ನು ತೆಗೆದು ಕೆನೆಯನ್ನಿಡುವ ಅನೇಕ ಲೇಖಕರ ಅಭ್ಯಾಸ ಪ್ರೇಮಾ ಅವರಿಗೆ ಇಲ್ಲದೆ ಹೀಗಾಗಿರಬಹುದು. ಅಥವಾ ಅಂತಹದೊಂದು ಪ್ರಕ್ರಿಯೆ ಘಟಿಸುವ ಮುನ್ನ ಅವರು ರಂಗದಿಂದ ನಿಷ್ಕ್ರಮಿಸಿರಬಹುದು ಎನಿಸುತ್ತದೆ. ಪ್ರಕಾಶಕರು ಸಿಕ್ಕ ಹಸ್ತಪ್ರತಿಯನ್ನೇ ಪ್ರಕಟಿಸರಲೂಬಹುದು.
ಪ್ರೇಮಾ ಅವರು ತಮ್ಮ ಜೀವನವನ್ನು ಅನುಕ್ರಮವಾಗಿ ಹೇಳುವ ಬದಲಿಗೆ ಮನಸ್ಸು ನೀಡಿದ ಆದ್ಯತೆಯನ್ನು ಆಧರಿಸಿ ಜೀವನ ಚರಿತ್ರೆಯ ಕಥನವನ್ನು ಹೇಳುತ್ತಾರೆ. ಇದು ಕೂಡ ಒಂದು ಜಾಣ ಆಯ್ಕೆ. ಸಾಮಾನ್ಯವಾಗಿ ವ್ಯಕ್ತಿಯ ಬಾಲ್ಯದಿಂದ ಆರಂಭವಾಗುವ ಜೀವನ ಚರಿತ್ರೆಗಳ ಆರಂಭಿಕ ಘಟ್ಟವು ಬಹಳಷ್ಟು ಓದುಗರಿಗೂ ಆಗಿರಬಹುದಾದ ಅನುಭವವಾಗಿರುತ್ತದೆ. ಹೀಗಾಗಿ ಮತ್ತೊಬ್ಬರ ಜೀವನ ಚರಿತ್ರೆಯ ಒಳಗೆ ಪ್ರವೆಶಿಸುವುದು ಸುಲಭ. ಆದರೆ ಪ್ರೇಮಾ ಅವರು ತಮ್ಮ ಜೀವನವನ್ನು ಬಹುವಾಗಿ ಕಾಡಿದ ಮತ್ತು ಕಾರಂತ ದಂಪತಿಗಳ ಜೀವನದ ಉದ್ದಕ್ಕೂ ನೆರಳಾಗಿ ಉಳಿದ ಪ್ರಕರಣದಿಂದ ಆರಂಭಿಸುತ್ತಾರೆ. ಬಿ.ವಿ.ಕಾರಂತರ ಜೀವನದ ಪ್ರಮುಖ ಘಟ್ಟವಾದ ಭೋಪಾಲ್ ಪ್ರಕರಣವನ್ನು ಹೇಳಲಾರಂಭಿಸುತ್ತಾರೆ. ತಮ್ಮ ಜೀವನದುದ್ದಕ್ಕೂ ತಾವು ಮತ್ತೊಬ್ಬ ಮಹಾನ್ ಪ್ರತಿಭಾವಂತನ ನೆರಳಾಗಿ ಬಿಟ್ಟದ್ದು ಮತ್ತು ಅದರಿಂದಾಗಿ ವೈಯಕ್ತಿಕವಾಗಿ ಅವರಿಗೆ ಸಿಗಬಹುದಾಗಿದ್ದ ಗೌರವಗಳು ದಕ್ಕಲಿಲ್ಲವೇನೋ ಎಂಬ ಅನುಮಾನ ಪ್ರೇಮಾ ಅವರಿಗಿತ್ತು. ಹೀಗಾಗಿ ಬಿ.ವಿ.ಕಾರಂತರ ಜೀವನದ ಪ್ರಧಾನ ಘಟನೆ ಅವರ ಪಾಲಿಗೂ ಪ್ರಧಾನ ಎನ್ನುವಂತೆ ಮೊದಲಿಗೆ ಅದೇ ಘಟನೆಯನ್ನು ವಿವರಿಸುತ್ತಾರಾದರೂ ಒಬ್ಬ ಹೆಣ್ಣಾಗಿ ಇಂತಹ ಪ್ರಸಂಗವೊಂದರಲ್ಲಿ ಆಕೆ ಅನುಭವಿಸಿದ ಸಂಕಷ್ಟಗಳು ಇಲ್ಲಿ ತೆರೆದುಕೊಳ್ಳುವುದಿಲ್ಲ. ಬದಲಿಗೆ ಆ ಪ್ರಕರಣದಲ್ಲಿ ಪ್ರೇಮಾ ಅವರು ಇಟ್ಟ ಹೆಜ್ಜೆ ಮತ್ತು ತೆಗೆದುಕೊಂಡ ತೀರ್ಮಾನಗಳು ಮಾತ್ರ ಒಣವಿವರಗಳಿಂದ ತಿಳಿಯುತ್ತವೆ. ಆಕೆಯ ತೀರ್ಮಾನಗಳ ಹಿಂದಿನ ಕಾರಣಗಳನ್ನು ಪ್ರೇಮಾ ಅವರು ಬಿಡಿಸಿಡುವುದಿಲ್ಲ. ಹೀಗಾಗಿ ಪ್ರೇಮಾ ಅವರ ಹೋರಾಟದ ಗುಣ, ಗೆಲ್ಲುವ ಛಲ, ಗಂಡನನ್ನು ಉಳಿಸಿಯೇ ತೀರಬೇಕೆಂಬ ಹಂಬಲ ಓದುಗನಿಗೆ ತಲುಪುವುದಿಲ್ಲ. ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸಿದ ಘಟನೆಯು ಓದುಗನ ಅನುಭವ ಆಗುವುದಿಲ್ಲ. ಆದರೆ ಸಣ್ಣ ವಿವರಗಳ ಮೂಲಕ ಅವರು ಪಟ್ಟ ಶ್ರಮ ತಿಳಿಯುತ್ತದೆ. ಈ ಪ್ರಕರಣ ಕುರಿತು ಕರ್ನಾಟಕದ ಪತ್ರಕರ್ತರು ಪ್ರೇಮಾ ಅವರನ್ನು ಘಾಸಿಗೊಳಿಸುವಂತೆ ಪ್ರಶ್ನಿಸುವಾಗ ಅವರು ನೀಡುವ ಉತ್ತರ ಕುರಿತ ಸಣ್ಣ ವಿವರ, ಈ ಪ್ರಕರಣದ ನ್ಯಾಯಾಧೀಶರಿಗೆ ಸ್ವತಃ ಪ್ರೇಮಾ ಅವರೇ ಬರೆಯುವ ಪತ್ರದ ವಿವರ, ಮನೆಗೆ ತನಿಖೆಗೆಂದು ಬಂದ ಅಧಿಕಾರಿಗಳನ್ನು ಆಕೆ ಎದುರುಗೊಂಡ ರೀತಿ ಇವುಗಳಲ್ಲಿ ಪ್ರೇಮಾ ಅವರೊಳಗಿದ್ದ ಹೋರಾಟಗಾರ್ತಿಯ ಗುಣದ ಸಣ್ಣ ವಿವರಗಳು ದಕ್ಕುತ್ತವೆ. ಪ್ರಾಯಶಃ ಇಂತಹ ವಿವರಗಳ ಮೂಲಕ ಪ್ರೇಮಾ ಅವರು ತಮ್ಮ ಇಡಿಯ ಜೀವನವನ್ನು ಕಂಡಿದ್ದರೆ ಈ ಜೀವನ ಚರಿತ್ರೆಯೂ ವಿಶಿಷ್ಟವಾಗುತ್ತಿತ್ತು.
ಈ ಪ್ರಕರಣದ ಹಿಂದೆ ಬಿ.ವಿ.ಕಾರಂತರ ವಿರೋಧಿಗಳ ಕೈವಾಡ ಇತ್ತು ಎಂದು ಪ್ರೇಮಾ ಅವರು ಸೂಚ್ಯವಾಗಿ ತಿಳಿಸುತ್ತಾರೆ. ಆದರೆ ಅಂತಹವರು ಯಾರು? ಮತ್ತು ಅದೇಕೆ ಇಂತಹದೊಂದು ವಿರೋಧ ಇತ್ತು ಎಂಬುದನ್ನು ವಿವರಿಸುವುದಿಲ್ಲ. ಹೀಗಾಗಿ ಪ್ರೇಮಾ ಅವರ ಆರ್ತ ಮೊರೆ ಅಭಿಮಾನಿ ಓದುಗನಲ್ಲಿ ಮೂಡಿಸಬೇಕಾದ ಅನುಕಂಪ ಮೂಡಿಸುವುದಿಲ್ಲ.
ಇಲ್ಲಿಂದಾಚೆಗೆ ತಮ್ಮ ಮತ್ತು ಬಿ.ವಿ.ಕಾರಂತರ ಮದುವೆಯ ವಿವರ, ತಮ್ಮ ಬಾಲ್ಯ, ಓದು, ಮನೆಯ ಪರಿಸರದಲ್ಲಿ ಅನುಭವಿಸಿದ ಬಡತನದ ವಿವರ ಹೀಗೆ, ಜೀವನದ ಅನುಕ್ರಮಕ್ಕೆ ಬದಲಾಗಿ ನೆನಪು ಯಾವುದನ್ನು ಹೆಕ್ಕಿಕೊಟ್ಟಿತೋ ಅವನ್ನೆಲ್ಲಾ ಬಿಚ್ಚಿಡುತ್ತಾರೆ. ಇದು ಹೊಸ ಪ್ರಯೋಗ ಅಲ್ಲ. ಆದರೆ, ಪ್ರೇಮಾ ಕಾರಂತರ ಈ ಪ್ರಯೋಗವು ಅವರ ವ್ಯಕ್ತಿತ್ವವನ್ನೇ ಬಿಚ್ಚಿಡುತ್ತದೆ ಎನ್ನಬಹುದು. ವಿಶೇಷವಾಗಿ ಕಡೆಯ ಭಾಗದಲ್ಲಿ, ಆಕೆ ತನ್ನ ಗಂಡನಾದವನನ್ನು ಜವರಾಯನಿಂದ ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಬರುತ್ತವೆ. ಈ ಹಾದಿಯಲ್ಲಿ ಕೇವಲ ವೆಂಟಿಲೇಟರ್‌ನ ಸಹಾಯದಿಂದ ಬದುಕಿದ್ದ ಬಿ.ವಿ.ಕಾರಂತರನ್ನು ಆ ಸಹಾಯದಿಂದ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಕೆ ತಾವು ಅನುಭವಿಸಿದ ಆರ್ಥಿಕ ಸಂಕಷ್ಟ, ಕುಡಿತದ ಚಟವಿದ್ದ ಗಂಡನನ್ನು ಸಂಭಾಳಿಸುವಲ್ಲಿದ್ದ ಸಮಸ್ಯೆಗಳು ಇಂತಹ ಅನೇಕ ವಿವರಗಳನ್ನು ಬಿಚ್ಚಿಡುತ್ತಾರೆ. ಈ ವರದಿಯಂತೆ ಒದಗುವ ವಿವರಗಳ ಆಚೆಗೆ ವೆಂಟಿಲೆಟರ್ ತೆಗೆಯುವ ನಿರ್ಧಾರ ಯಾವುದೇ ಮಡದಿಗೆ ಕಷ್ಟದ್ದು. ಆ ವಿವರವನ್ನು ಆಕೆ ನೀಡುವಾಗ ಅದೆಲ್ಲವನ್ನೂ ಸ್ವತಃ ಕಂಡಿದ್ದ ಈ ಲೇಖಕನ ಕಣ್ಣುತುಂಬಿದ್ದಂತೂ ಸತ್ಯ.
೧೯೬೦ರ ದಶಕದಿಂದ ೨೦೧೦ರ ದಶಕದ ವರೆಗೆ ನಮ್ಮ ರಂಗಭೂಮಿಯಲ್ಲಿ, ನಮ್ಮ ಸಿನಿಮಾ ಲೋಕದಲ್ಲಿ, ನಮ್ಮ ಸಾಂಸ್ಕೃತಿಕ ಲೋಕದಲ್ಲಿ ಬದುಕಿದ ಜೀವವೊಂದು ತನ್ನ ಬದುಕಿನ ಹಾದಿಯ ಜೊತೆಗೆ ಆಯಾ ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯನ್ನು ಸಹ ಒಂದೆಡೆಗೆ ಸಂಗ್ರಹಿಸುವ ಅವಕಾಶ ಇದಾಗಿತ್ತು. ಪ್ರಾಯಶಃ ಪ್ರೇಮಾ ಅವರು ಅಂತಹ ವಿವರವನ್ನು ತಮ್ಮ ಜೀವನ ಚರಿತ್ರೆಯಲ್ಲಿ ಇಡುವ ಬದಲಿಗೆ ತಾವು ಜೀವನದುದ್ದಕ್ಕೂ ಎದುರಿಸಿದ ಸವಾಲುಗಳನ್ನು-ಸಂಕಷ್ಟವನ್ನು ನಮಗೆ ಒದಗಿಸುತ್ತಾರೆ. ಹಾಗಾಗಿಯೇ ಈ ಪುಸ್ತಕಕ್ಕೆ ‘ಸೋಲಿಸಬೇಡ ಗೆಲಿಸಯ್ಯ’ ಎಂಬ ಹೆಸರನ್ನೂ ಇರಿಸಿದ್ದಾರೆ.
ಆಕೆ ನಮ್ಮೊಂದಿಗೆ ಇದ್ದಿದ್ದರೆ ಈ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿ, ಪರಿಹಾರ ಪಡೆಯಬಹುದಿತ್ತು. ಅವರಿಲ್ಲ. ಹೀಗಾಗಿ ನಮಗೆ ದಕ್ಕಿರುವುದು ಅವರು ಕೊಟ್ಟ ವರ ಎಂದು ಸ್ವೀಕರಿಸಬಹುದು.
* * *

Advertisements

2 Responses to “ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯಾ’ ಒಂದು ವಿಮರ್ಶೆಯ ಯತ್ನ”


  1. 1 bsuresha July 15, 2011 at 12:25 pm

    chennagide.prakara bere,praakara bere. nodi balasa beku


  1. 1 ‘ಸೋಲಿಸಬೇಡ ಗೆಲಿಸಯ್ಯಾ’ – ಬಿ ಸುರೇಶ್ ನೋಟದಲ್ಲಿ « ಅವಧಿ / Avadhi Trackback on April 3, 2012 at 1:28 am

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: