ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಸಮೂಹ ಮಾಧ್ಯಮಗಳು

ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಸಮೂಹ ಮಾಧ್ಯಮಗಳು
– ಬಿ.ಸುರೇಶ
(ನಾಗತಿಹಳ್ಳಿ ಚಂದ್ರಶೇಖರ್ ಅವರ ಸಂಪಾದಕತ್ವದಲ್ಲಿ ಬರುತ್ತಿರುವ ‘ತರಳಬಾಳು ಹುಣ್ಣಿಮೆ’ ಗ್ರಂಥಕ್ಕಾಗಿ ಸಿದ್ಧಪಡಿಸಿದ ಲೇಖನ)

‘ಟೆಲಿವಿಷನ್ ಮಾಧ್ಯಮವು ನಮ್ಮ ಸಮಾಜವನ್ನು ಬದಲಿಸುತ್ತಿದೆ’, ‘ಆಧುನಿಕ ತಂತ್ರಜ್ಞಾನ ನಮ್ಮ ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿದೆ’, ‘ಈ ಮಾಧ್ಯಮಗಳಿಂದಾಗಿ ನಮ್ಮ ಸಮಾಜದಲ್ಲಿ ಆತ್ಮಹತ್ಯೆಗಳು ಮತ್ತು ಅಪರಾಧಗಳು ಹೆಚ್ಚಾಗುತ್ತಿವೆ’ ‘ನಮ್ಮ ಸಮಾಜವು ಈ ಮಾಧ್ಯಮಗಳ ಪರಿಣಾಮವಾಗಿ ಆಧುನಿಕವಾಗುತ್ತಿದೆ’ ಮುಂತಾದ ಮಾತುಗಳನ್ನು ನಾವು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ. ನಾವು ಇಂತಹ ಮಾತುಗಳಿಗೆ ಅದೆಷ್ಟು ಹೊಂದಿಕೊಂಡು ಬಿಟ್ಟಿದ್ದೇವೆ ಎಂದರೆ ಮಾಧ್ಯಮಗಳಿಂದಲೇ ಇವೆಲ್ಲವೂ ಆಗುತ್ತಿದೆ ಎಂಬ ನಂಬಿಕೆಯೂ ಸಹ ನಮ್ಮ ಸಮಾಜದಲ್ಲಿ ಐತಿಹ್ಯದ ಹಾಗೆ ಬೇರು ಬಿಟ್ಟಿದೆ. ಇದರಿಂದಾಗಿ ಈ ಮಾಧ್ಯಮಗಳನ್ನು ನೋಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಬದಲಿಗೆ ಇಂತಹ ಮಾತಾಡುತ್ತಿರುವ ಸಾಮಾನ್ಯರನ್ನೂ ನೋಡುತ್ತಾ ಇದ್ದೇವೆ. ಹೀಗಾಗಿಯೇ ಇಂತಹ ಪ್ರಶ್ನೆಗಳು ಅಥವಾ ಅಭಿಪ್ರಾಯಗಳನ್ನು ಕುರಿತು ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗದೆ ಉಳಿದಿದ್ದೇವೆ. ಆಕಸ್ಮಿಕವಾಗಿ ಕೆಲವು ಮಾಧ್ಯಮ ಮಿತ್ರರೇ ಉತ್ತರಗಳನ್ನು ನೀಡಲು ಹೊರಟರೂ ಅಂತಹ ಉತ್ತರಗಳು ಈ ಪ್ರಶ್ನೆ/ ಅಭಿಪ್ರಾಯಗಳ ಹಿಂದಿರುವ ತಾತ್ವಿಕ ಜಿಜ್ಞಾಸೆಗೆ ತೊಡಗದೆ ತಮ್ಮ ಮಾಧ್ಯಮವನ್ನು ಒಪ್ಪಿಟ್ಟುಕೊಳ್ಳುವ ಗುಣದಿಂದಲೇ ಹುಟ್ಟಿದ ಮಾತು ಮಾತ್ರ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಮೂಹ ಮಾಧ್ಯಮ ಎಂಬುದನ್ನು ಕುರಿತಂತೆ ಮತ್ತು ನಮ್ಮ ಸಮಕಾಲೀನ ಸಮಾಜವನ್ನು ಕುರಿತಂತೆ ವಿಸ್ತೃತವಾಗಿ ನೋಡಲು, ಆ ಮೂಲಕ ಮೇಲೆ ಕಾಣಿಸಿದಂತಹ ಪ್ರಶ್ನೆಗಳ ಹಿಂದಿನ ತಾತ್ವಿಕ ಮತ್ತು ಸೈದ್ಧಾಂತಿಕ ವಿವರಗಳನ್ನು ಕುರಿತು ಚರ್ಚಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.
“ಅತ್ಯಂತ ಸ್ಪಷ್ಟವಾದ ಮತ್ತು ನಿಖರ ಎಂದು ಕರೆಸಿಕೊಳ್ಳುವ ಮಾಧ್ಯಮಗಳನ್ನು ಕುರಿತ ಅಭಿಪ್ರಾಯಗಳು/ಲೇಖನಗಳು ಸಹ ತಂತ್ರಜ್ಞಾನ ಮತ್ತು ಸಮಾಜ, ತಂತ್ರಜ್ಞಾನ ಮತ್ತು ಸಂಸ್ಕೃತಿ ಹಾಗೂ ತಂತ್ರಜ್ಞಾನ ಹಾಗೂ ಮನಶಾಸ್ತ್ರೀಯ ನೆಲೆಗಳನ್ನು ಕುರಿತಂತೆ ತೀರಾ ಮೇಲ್‌ಸ್ತರದಲ್ಲಿ ವಿಷಯವನ್ನು ಚರ್ಚಿಸುತ್ತವಾದ್ದರಿಂದ ಕಾರಣ-ಪರಿಣಾಮಗಳ ಸ್ವರೂಪವೇ ದಕ್ಕುವುದಿಲ್ಲ” ಎಂಬ ರೇಮಂಡ್ ವಿಲಿಯಮ್ಸ್‌ನ (ಟೆಲಿವಿಷನ್ & ಕಲ್ಚರಲ್ ಫಾರ್ಮ್/ಯೂನಿವರ್ಸಿಟಿ ಪ್ರೆಸ್ ಆಫ್ ಇಂಗ್ಲೆಂಡ್/ ವೆಸ್ಲಿಯನ್ ಯೂನಿವರ್ಸಿಟಿ/ ೧೯೯೨) ಮಾತು ಮೇಲೆ ಹೇಳಿದ ಹಲವು ಮಾತುಗಳಿಗೆ ಪುಷ್ಟಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಾಗ ಸುಲಭ ಮತ್ತು ಸರಳ ಉತ್ತರಗಳು ದೊರೆಯುವುದಿಲ್ಲ ಎಂಬುದೂ ಸತ್ಯ. ಹೀಗಾಗಿ ಸಮಾಜ ಎಂದರೆ ಏನು ಎಂದು ಬಲ್ಲವರ ಎದುರಿಗೆ ಸಮೂಹ ಮಾಧ್ಯಮ ಎಂದರೇನು ಎಂದು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.


ಸಮೂಹ ಮಾಧ್ಯಮ ಎಂದರೇನು?
ಇದೊಂದು ಸರಳ ಪ್ರಶ್ನೆ. ಈ ಮಾಧ್ಯಮಗಳನ್ನು ಸಮಾಜ ಮಾಧ್ಯಮ ಎನ್ನುವ ಬದಲು ಸಮೂಹ ಮಾಧ್ಯಮ ಎಂದು ಏಕೆ ಕರೆಯಲಾಯಿತು ಎಂಬ ಅನುಮಾನ ಹುಟ್ಟುತ್ತದೆ. ಸಮಾಜ ಎಂದಾಗ ಸಮಾನವಾಗಿ ಬದುಕುವ ಜನಗಳು ಎಂದು ಹೇಳಬಹುದು. ಆದರೆ ನಮ್ಮ ಸಮಕಾಲೀನ ಸ್ಥಿತಿಯಲ್ಲಿ ಸಮಾನವಾಗಿ ಬದುಕುವ ಜನಗಳಿರುವ ಒಂದು ಸಮಾಜ ಇಲ್ಲ. ಇಲ್ಲಿರುವುದು ತೋರಿಕೆಯ ಸಮಾಜವಾದ. ಹಾಗಾಗಿ ಒಂದೇ ಆರ್ಥಿಕ ನೆಲೆಗಟ್ಟಿನಲ್ಲಿ, ಒಂದೇ ಧಾರ್ಮಿಕ ನೆಲೆಗಟ್ಟಿನಲ್ಲಿ, ಒಂದೇ ಸಾಮಾಜಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳುವ ಜನ ಸಂಕುಲ ದುರ್ಲಭ. ಹೀಗಾಗಿಯೇ ನಮ್ಮ ಮಾಧ್ಯಮಗಳು ಸಮೂಹಗಳನ್ನು ಹುಡುಕುತ್ತವೆ. ಈ ಮಾಧ್ಯಮಗಳೂ ಸಹ ಅದೇ ಸರಕು ಸಂಸ್ಕೃತಿಯ ಕೊಡುಗೆಯಾದ್ದರಿಂದ, ಮಾಧ್ಯಮಗಳಲ್ಲಿ ಬಿತ್ತರವಾಗುವ ಎಲ್ಲಾ ವಿವರಗಳೂ ಬಿಕರಿಗಿರುವ ಸರಕುಗಳೇ. ಈ ಸರಕುಗಳಿಗೆ ಸ್ಪಷ್ಟ ಉದ್ದಿಶ್ಯವಿದೆ. ಈ ಉದ್ದಿಶ್ಯಗಳನ್ನು ಕುರಿತಂತೆ, ವಿಶೇಷವಾಗಿ ಟಡಲಿವಿಷನ್ ಕುರಿತಂತೆ ರೇಮಂಡ್ ವಿಲಿಯಮ್ಸ್ (ಅದೇ ಪುಸ್ತಕ) ತನ್ನ ಲೇಖನದಲ್ಲಿ ಹೀಗೊಂದು ಪಟ್ಟಿ ಮಾಡುತ್ತಾನೆ.
೧. ಮಾಧ್ಯಮಗಳ ಉಗಮವಾಗಿದ್ದು ವೈಜ್ಞಾನಿಕ ಸಂಶೋಧನೆಯಿಂದ. (ಮುದ್ರಣ ಮಾಧ್ಯಮ, ರೇಡಿಯೋ, ಸಿನಿಮಾ, ಟೆಲಿವಿಷನ್ ಎಂಬ ಅದೇ ಅನುಕ್ರಮದಲ್ಲಿ ಮಾಧ್ಯಮಗಳ ಆವಿಷ್ಕಾರವಾಯಿತು.) ಹೀಗಾಗಿ ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರ ಎನ್ನಬಹುದು. ಟೆಲಿವಿಷನ್ ಮಾಧ್ಯಮಕ್ಕಿದ್ದ ಹರಹು ಮತ್ತು ಶಕ್ತಿಯ ಕಾರಣದಿಂದಾಗಿ ಅದು ಉಳಿದ ಮಾಧ್ಯಮಗಳನ್ನು ಮೀರಿದ ಶಕ್ತಿಯನ್ನು ಸುದ್ದಿ ಮಾಧ್ಯಮವಾಗಿ ಪಡೆಯಿತು. (ಈ ಹಂತದಿಂದ ಆಚೆಗೆ ಟೆಲಿವಿಷನ್‌ಗಿಂತ ಮುಂಚಿತವಾಗಿ ಅಸ್ಥಿತ್ವದಲ್ಲಿದ್ದ ಮಾಧ್ಯಮಗಳು ತಮ್ಮ ಅಸ್ತಿತ್ವಕ್ಕಾಗಿ ಬೇರೆಯದೇ ಮಾರ್ಗಗಳನ್ನು ಹುಡುಕಿಕೊಂಡು ಇಂದಿನವರೆಗೆ ಜೀವಿಸುತ್ತಿವೆ ಎಂಬುದನ್ನು ಗಮನದಲ್ಲಿರಿಸಕೊಳ್ಳಬೇಕು)
೨. ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರ. ಈ ಟೆಲಿವಿಷನ್‌ಗಿದ್ದ ‘ಮಾಧ್ಯಮ ಶಕ್ತಿ’ಯಿಂದಾಗಿ ಅದು ನಮ್ಮ ಸಾಮಾಜಿಕ ಸಂಬಂಧಗಳನ್ನು ಹಾಗೂ ನಮ್ಮ ವ್ಯವಸ್ಥೆಯ ಅನೇಕ ವಿವರಗಳನ್ನು ಬದಲಿಸಿತು.
೩. ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರ. ಆದರೆ ಅದರ ಬಳಕೆಯಿಂದಾಗಿ ನಾವು ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಯಿತು. ಅದರಿಂದಾಗಿ ನಮ್ಮ ಜೊತೆಗಾರರ ನಡುವಿನ ಸಂಬಂಧ ಮಾತ್ರ ಅಲ್ಲ ಜಾಗತಿಕವಾಗಿಯೇ ನಮ್ಮ ಸಂಬಂಧಗಳು ಬದಲಾದವು.
೪. ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರ. ಇದಕ್ಕೆ ಇದ್ದ ಜಂಗಮ ಗುಣದಿಂದಾಗಿ (ನಿರಂತರವಾಗಿ ಚಲಿಸುವ ದೃಶ್ಯಗಳ ಮೂಲಕ ಸುದ್ದಿಯನ್ನು ತೋರಿಸುವ ಗುಣವಿದು. ಇದರಿಂದಾಗಿ ನೋಡುಗನ ನಿರಂತರ ಆಸಕ್ತಿಯು ಚಲನೆಯ ಮೇಲೆ ಮತ್ತು ಕಿವಿಗೆ ಅಪ್ಪಳಿಸುವ ವಿವರಗಳ ಮೇಲೆಯೇ ಇರುತ್ತದೆ.) ಅದು ನಮ್ಮ ಸಮಾಜದಲ್ಲಿನ ಕೊಳ್ಳುಬಾಕ ಶಕ್ತಿಯನ್ನು ಹೆಚ್ಚಿಸಿತು ಹಾಗೂ ಹಳ್ಳಿ, ನಗರ, ಪಟ್ಟಣ ಎಂಬ ವರ್ಗೀಕರಣವನ್ನು ಇಡೀ ಸಮಾಜವು ದಾಟಿಕೊಳ್ಳುವಂತಹ ಸಮಾಜವನ್ನು ಸೃಷ್ಟಿಸಲು ಕಾರಣವಾಯಿತು.
೫. ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರವಾಗಿತ್ತು. ಈ ಮಾಧ್ಯಮದ ಶಕ್ತಿಯ ಕಾರಣವಾಗಿಯೇ ಅದು ಪ್ರಧಾನ ಸುದ್ದಿ ಮಾಧ್ಯಮವಾಯಿತು. ಇದರ ಪರಿಣಾಮವಾಗಿ ಮನರಂಜನಾ ಮಾಧ್ಯಮಗಳು ಮತ್ತಿತರ ಸುದ್ದಿ ಮಾಧ್ಯಮಗಳ ಸ್ವರೂಪ ಬದಲಾಗಿದ್ದಲ್ಲದೆ ಸಮಾಜದ ಕಟ್ಟಕಡೆಯ ಗುರುತಾದ ಸಂಸಾರ ಎಂಬುದರ ಸ್ವರೂಪವನ್ನೇ ಈ ಮಾಧ್ಯಮವು ಬದಲಿಸಿತು.
೬. ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರವೇ. ಇದು ಕೇವಲ ಸುದ್ದಿ ಮಾಧ್ಯಮವಾಗಿ ಅಲ್ಲದೆ ಮನರಂಜನಾ ಮಾಧ್ಯಮವಾಗಿಯೂ ಬೆಳೆಯಿತು. ಇದರಿಂದಾಗಿ ಹಣಹೂಡುವ ಬಂಡವಾಳಶಾಹಿ ವ್ಯವಸ್ಥೆಗೆ, ವಿಶೇಷವಾಗಿ ಮನರಂಜನಾ ಉದ್ಯಮಕ್ಕೆ ಒಂದು ಕೇಂದ್ರೀಕೃತ ಆದಾಯ ತರುವ ಮಾಧ್ಯಮವಾಗಿಯೂ ಇದು ಬೆಳೆಯಿತು. ಇದರಿಂದಾಗಿ ಕೇಂದ್ರೀಕೃತ ಮನರಂಜನೆಯಷ್ಟೇ ಅಲ್ಲದೆ ಕೇಂದ್ರೀಕೃತ ಅಭಿಪ್ರಾಯ ಸೃಷ್ಟಿಯ ಕೇಂದ್ರವಾಗಿಯೂ ಟೆಲಿವಿಷನ್ ಎದ್ದುನಿಂತಿತು.
೭. ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರ. ಇದರಿಂದಾಗಿ ಸರಕು ಸಂಸ್ಕೃತಿಯನ್ನು ಮಾತ್ರವೇ ಅಲ್ಲದೆ ಜನ ಸಮುದಾಯದ ಮೇಲೆ ಕೊಳ್ಳಬೇಕೆಂಬ ಒತ್ತಾಯವನ್ನು ಹೇರುವುದು ಸಾಧ್ಯವಾಯಿತು. ಆ ಮೂಲಕ ಟೆಲಿವಿಷನ್ ಎನ್ನುವುದು ಎಲ್ಲ ಮನೆಗಳಲ್ಲಿ ಇರಲೇಬೇಕಾದ ‘ಯಂತ್ರ’ವಾಗಿ ಬಿಟ್ಟಿತು.
೮. ಟೆಲಿವಿಷನ್ ದೊರೆತದ್ದು ತಾಂತ್ರಿಕ ಆವಿಷ್ಕಾರಗಳಿಂದ. ಆದರೆ ಅದು ತನ್ನ ಒಳಗಿರುವ ನಿರೂಪಣಾ ಗುಣಗಳಿಂದಲೇ ನೋಡುಗನನ್ನು ನಿಷ್ಕ್ರಿಯ ಗೊಳಿಸುವ, ಆತಂಕದಲ್ಲಿ ಉಳಿಸುವ ಶಕ್ತಿಯನ್ನು ಪಡೆದುಕೊಂಡಿತು. ಇದರಿಂದಾಗಿ ನೋಡುಗನು ಮಾನಸಿಕವಾಗಿ ಕುಗ್ಗುವ ಮತ್ತು ತನ್ನ ಗೂಡಿನಿಂದ ಹೊರಗೆ ಬರದಂತಹ ಸ್ಥಿತಿಗೆ ಬರುವಂತೆ ಮಾಡುವುದು ಟೆಲಿವಿಷನ್‌ಗೆ ಸಾಧ್ಯವಾಯಿತು. ಎಲ್ಲ ಮನೆಯ ಭಾಗವಾಗಿಯೂ ಉಳಿದ ಈ ಯಂತ್ರವೂ ಮನೆಯವರೆಲ್ಲರ ಅಗತ್ಯವಾಯಿತು. ಆದರೆ ಮನೆಯವರನ್ನು ಮನೆಯವರಿಂದಲೇ ದೂರ ಉಳಿಸುವಷ್ಟು ಶಕ್ತವಾಯಿತು.
೯. ಟೆಲಿವಿಷನ್ ಒಂದು ತಾಂತ್ರಿಕ ಆವಿಷ್ಕಾರವಾಗಿತ್ತು ಎಂಬುದು ಸತ್ಯವಾದರೂ ಅದು ಮಾಧ್ಯಮವಾಗಿ ಬೆಳೆದಂತೆ ವ್ಯವಸ್ಥಿತವಾಗಿ ಕುಟುಂಬಗಳ ವಿಕೇಂದ್ರೀಕರಣಕ್ಕೆ ಕಾರಣವಾಗಿ ಸಣ್ಣ ಸಣ್ಣ ಕಣಗಳಂತಹ ಸಮಾಜವೊಮದರ ಸೃಷ್ಟಿಗೆ ಕಾರಣವಾಯಿತು.
ಹೀಗೆ ರೇಮಂಡ್ ವಿಲಿಯಮ್ಸ್ ಒಂದು ಪ್ರಧಾನ ಸಾಲನ್ನು ಇಟ್ಟುಕೊಂಡು ಟೆಲಿವಿಷನ್ನಿನ ಅಡ್ಡ ಪರಿಣಾಮಗಳನ್ನು ಪಟ್ಟಿ ಮಾಡುತ್ತಾನೆ. ಈ ಮಾತುಗಳ ಮೂಲಕ ನಾವು ಇಂದು ಸಮೂಹ ಎಂದು ಗುರುತಿಸುವುದನ್ನು ಸಮಾನವಾಗಿ ಊಹೆಗಳನ್ನು ನಂಬುವ ಸಮಾಜ ಎಂದು ಸ್ಪಷ್ಟ ಪಡಿಸಿಕೊಳ್ಳಬಹುದು. ಇದಕ್ಕೆ ಉದಾಹರಣೆಯಾಗಿ ಅಮೇರಿಕಾ ದೇಶವೂ ಇಡಿಯ ಜಗತ್ತನ್ನು ಇರಾಕಿನಲ್ಲಿ ಜೈವಿಕ ಆಸ್ತ್ರಗಳಿವೆ ಎಂದು ನಂಬಿಸಿದ್ದನ್ನು ಹಾಗೂ ಜನರ ಆ ನಂಬಿಕೆಯ ಲಾಭ ಪಡೆದು ಸಣ್ಣ ದೇಶದ ಮೇಲೆ ಬೃಹತ್ ಯುದ್ಧ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಅದೇ ರೀತಿ ಎರಡು ವಿಮಾನಗಳು ಅಮೇರಿಕೆಯ ಮೇಲೆ ಧಾಳಿ ಮಾಡಿದ್ದನ್ನೇ ಕಾರಣ ಮಾಡಿಕೊಂಡು ಇಡಿಯ ಜಗತ್ತನ್ನ ಎರಡು ಹೋಳು ಮಾಡಿದಂತೆ, ಒಂದು ಧರ್ಮದ ಜನ ಸಮುದಾಯವನ್ನೇ ಅನುಮಾನದಿಂದ ನೋಡುವಂತೆ ಮಾಡಿದ್ದು ಸಹ ಇದೇ ಟೆಲಿವಿಷನ್.
ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. ಅವೆಲ್ಲವುಗಳ ಒಟ್ಟಂದದಲ್ಲಿ ನಮಗೆ ಗೋಚರವಾಗುವ ಸತ್ಯ ಎಂದರೆ ಈ ಸಮೂಹ ಮಾಧ್ಯಮವು ಸಾಮಾನ್ಯ ಜನರನ್ನು ಸಮೂಹ ಸನ್ನಿಗೆ ಒಳಪಡಿಸುವಷ್ಟು ಶಕ್ತವಾದ ಸಾಧನ. ಈ ಅರ್ಥದಲ್ಲಿ ‘ಸಮೂಹ ಮಾಧ್ಯಮ’ ಎಂದು ನಾವು ಕರೆಯುವ ಈ ಸಾಧನವನ್ನು ಈ ಹಿಂದೆ ನೀಡಿದ ರೇಮಂಡ್ ವಿಲಿಯಮ್ಸ್‌ನ ಪಟ್ಟಿಯನ್ನು ಹಿಡಿದು ಮರಳಿ ನೋಡಬೇಕಾಗುತ್ತದೆ. ಮತ್ತು ಇಂತಹ ಸನ್ನಿಗೆ ಒಳಗಾದ ಸಮುದಾಯವನ್ನು ಮತ್ತೆ ಆಲೋಚನಪರವಾಗಿಸುವುದಕ್ಕೆ ಇದೇ ಮಾಧ್ಯಮವನ್ನು ಹೇಗೆ ಬಳಸಿಕೊಳ್ಳಬಹುದು ಎಂತಲೂ ಆಲೋಚಿಸಿಬೇಕಾಗುತ್ತದೆ.
ಸಮಕಾಲೀನ ಸಾಮಾಜಿಕ ತಲ್ಲಣಗಳು
ಸಧ್ಯದ ಸಮಕಾಲೀನ ಎಂಬುದು ಎಂದಿಗೂ ನಮ್ಮ ಕೈಗೆಟುಕದೆ ಉಳಿಯುತ್ತದೆ. ನಾವು ಆ ಸಧ್ಯವನ್ನು ಹಿಡಿಯುವಷ್ಟರಲ್ಲಿಯೇ ಅದು ನಮ್ಮಿಂದ ದೂರ ಸರಿದು ಮತ್ತೊಂದು ಹೊಸ ಕ್ಷಣವನ್ನು ಸೃಷ್ಟಿಸಿರುತ್ತದೆ. ಹೀಗಿರುವಾಗ ನಮ್ಮ ಸಮಕಾಲೀನ ತಲ್ಲಣಗಳನ್ನು ಈ ಮಾಧ್ಯಮವು ಹೇಗೆ ಹಿಡಯುತ್ತದೆ, ವಿಶ್ಲೇಷಿಸುತ್ತದೆ ಎಂಬುದನ್ನು ಗಮನಿಸುವುದು ತ್ರಾಸದಾಯಕ ಕೆಲಸ. ಆದರೆ ನಮ್ಮ ನಡುವೆ ಆಗಿಹೋದ, ನಮಗೆ ಸ್ಪಷ್ಟವಾಗಿ ನೆನಪಿರುವ ಸುದ್ದಿ ವಿವರಗಳನ್ನು ಹಿಡಿದು ಮಾಧ್ಯಮಗಳು ಏನು ಮಾಡುತ್ತಿವೆ ಎಂಬುದನ್ನು ಗಮನಿಸೋಣ.
ಈಚೆಗೆ ನಾನು ಧಾರವಾಡ ನಗರಕ್ಕೆ ಒಂದು ರಂಗಪ್ರದರ್ಶನಕ್ಕಾಗಿ ಹೋಗಬೇಕಾಗಿ ಬಂತು. ಅದೇ ಸಮಯದಲ್ಲಿ ನಮ್ಮ ರಾಜ್ಯಪಾಲರು ನಮ್ಮ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳ ಮೇಲೆಯೂ ಕಾನೂನು ಕಟ್ಳೆ ನಡೆಸಬಹುದೆಂದು ಸೂಚಿಸಿದ್ದರು. ಇದರಿಂದ ರೊಚ್ಚಿಗೆದ್ದ ಒಂದು ಪಕ್ಷದ ಜನ ಧಿಕ್ಕಾರ ಕೂಗುತ್ತಾ ಟೈರುಗಳಿಗೆ ಬೆಂಕಿ ಹಾಕುವುದನ್ನು ನಾವು ಎಲ್ಲಾ ಮಾಧ್ಯಮಗಳಲ್ಲಿಯೂ ನೋಡಿದೆವು. ಇದರೊಮದಿಗೆ ರಾಜ್ಯಾದ್ಯಂತ ಬಂದ್ ಘೋಷಿಸಲಾಗಿದೆ ಎಂಬ ವಿವರವನ್ನೂ ಮಾಧ್ಯಮವು ನೀಡಿತ್ತು. ಇವೆಲ್ಲದರ ಪರಿಣಾಮವಾಗಿ ನಾವಿದ್ದ ಕೋಣೆಯಿಂದ ಆಚೆಗೆ ಬರಬೇಕೋ – ಬೇಡವೋ ಎಂಬ ಗೊಂದಲದಲ್ಲಿ ನಾವಿದ್ದೆವು. ನಮ್ಮ ನಾಟಕ ಪ್ರದರ್ಶನ ನಿಂತು ಹೋಗುತ್ತದೆ ಎಂಬ ಅನುಮಾನ ನಮಗಿತ್ತು. ಅದೇ ಸಮಯಕ್ಕೆ ನಾವಿದ್ದ ಬಿಡಾರಕ್ಕೆ ನಿರಂತರವಾಗಿ ಈ ಮಾಧ್ಯಮವನ್ನು ನೋಡುವ ಅಭ್ಯಾಸ ಇಲ್ಲದ ಸ್ಥಳೀಯ ಗೆಳೆಯರೊಬ್ಬರು ಬಂದರು. ನಾವು ಊರಿನ ಪರಿಸ್ಥಿತಿ ಹೇಗಿದೆ ಎಂದು ಆತಂಕದಿಂದಲೇ ವಿಚಾರಿಸಿದೆವು. ಗೆಳೆಯರು ನಗುತ್ತಾ ಊರು ಎಂದಿನಂತೆ ತಣ್ಣಗೆ ಇದೆ ಎಂದಾಗ ನಾವು ಮತ್ತೆ ಗೊಂದಲಕ್ಕೆ ಒಳಗಾದೆವು. ಅದೇ ಗೆಳೆಯರು ತಮ್ಮ ವಾಹನದಲ್ಲಿ ನಮ್ಮನ್ನು ಊರು ಸುತ್ತಿಸಿದರು. ಖಾರ ಮಂಡಕ್ಕಿ, ಮಿರ್ಚಿ ಕೊಡಿಸಿದರು. ಎಲ್ಲಾ ಅಂಗಡಿ ಮುಂಗಟ್ಟುಗಳೂ ತೆಗೆದಿದ್ದವು. ಊರು ನಿರುಮ್ಮಳವಾಗಿ ಬದುಕುತ್ತಾ ಇದ್ದುದನ್ನ ನಾವು ಕಣ್ಣಾರೆ ಕಂಡೆವು. ಮರಳಿ ನಮ್ಮ ಬಿಡಾರಕ್ಕೆ ಬಂದು ಮಾಧ್ಯಮದಲ್ಲಿ ಏನು ಹೇಳುತ್ತಿದ್ದಾರೆ ಎಂದು ನೋಡಿದರೆ ಅದೇ ಆತಂಕದ ಸುದ್ದಿ. ನಮಗೀಗ ಈ ಮಾಧ್ಯಮವನ್ನು ಕಂಡು ನಗುವುದನ್ನು ಬಿಟ್ಟು ಅನ್ಯ ಮಾರ್ಗ ಇರಲಿಲ್ಲ.
ಇಂತಹುದೇ ಅನುಭವ ಭಟ್ಕಳದಲ್ಲಿ ನಾನಿದ್ದಾಗ ಮಾಧ್ಯಮಗಳಲ್ಲಿ ಬಿತ್ತರವಾದ ಕೋಮುಗಲಭೆಯ ಸುದ್ದಿಯಿಂದಾಗಿಯೂ ಆಗಿತ್ತು.
ಹಾಗಾದರೆ ಈ ಮಾಧ್ಯಮಗಳು ಸುಳ್ಳು ಹೇಳುತ್ತಿವೆಯೇ ಎಂಬ ಪ್ರಶ್ನೆ ಬರುತ್ತದೆ. ಇಲ್ಲ. ಮಾಧ್ಯಮಗಳು ಖಂಡಿತಾ ಸುಳ್ಳುಗಳನ್ನು ಹೇಳಿಲ್ಲ. ಅದಕ್ಕೆ ದಾಖಲೆಯಾಗಿ ವಿಡಿಯೋ ದಾಖಲೆಗಳಿವೆ. ಆ ಘಟನೆ ಅದೇ ಊರಿನ/ಸ್ಥಳದ ಯಾವುದೋ ಒಂದು ಮೂಲೆಯಲ್ಲಿ ಆಗಿರುತ್ತದೆ. ಅದು ಮಾಧ್ಯಮಗಳೇ ಸೃಷ್ಟಿಸಿದ್ದಂತೂ ಅಲ್ಲ. ನಡೆದುದನ್ನೇ ಚಿತ್ರಿಸಿ, ನೋಡುಗನಿಗೆ ತೋರಿಸಲಾಗುತ್ತದೆ.
ಹಾಗಾದರೆ ಸಮಸ್ಯೆ ಎಲ್ಲಿಯದು?
ಈ ಸಮಸ್ಯೆಯ ವಿಶ್ಲೇಷಣೆಗೆ ಎರಡು ಮಗ್ಗುಲಿನ ದಾರಿ ಇದೆ. ಎರಡನ್ನೂ ನೋಡುವ. ಮೊದಲಿನದು ಮಾಧ್ಯಮವು ಸುದ್ದಿಯನ್ನ ಸಂಗ್ರಹಿಸುವ ಬಗೆ ಮತ್ತು ಅದನ್ನು ವಿಶ್ಲೇಷಿಸುವ ಬಗೆ. ಎರಡನೆಯದು ಸುದ್ದಿಯನ್ನು ನೋಡುವ ಜನ ಮತ್ತು ಆ ವಿವರವನ್ನು ಅವರು ಅರ್ಥೈಸಿಕೊಳ್ಳುವ ಬಗೆ.
ಎಲ್ಲಾ ಸುದ್ದಿ ಮಾದ್ಯಮಗಳಿಗೂ ಆಯಾ ಊರುಗಳಲ್ಲಿ ಸುದ್ದಿ ಸಂಗ್ರಾಹಕರು ಮತ್ತು ಸುದ್ದಿ ಸಂಗ್ರಹಣೆಗೆ ಬೇಕಾದ ಸಲಕರಣೆಗಳಿರುತ್ತವೆ. ಆಯಾ ಸುದ್ದಿ ಸಂಗ್ರಾಹಕ ನೇರವಾಗಿ ತನ್ನ ಕಛೇರಿಗೆ ಫೋನ್ ಮೂಲಕ ಸಂಪರ್ಕಿಸುತ್ತಿರುತ್ತಾನೆ. ತನ್ನ ಕ್ಷೇತ್ರದ ವಿವರ ತಿಳಿಸುತ್ತಾ ಇರುತ್ತಾನೆ. ಯಾವ ಸುದ್ದಿ ಸಂಗ್ರಾಹಕ ಹೆಚ್ಚು ವಿವರಗಳನ್ನು ವಾಹಿನಿಗೆ ಒದಗಿಸುತ್ತಾನೋ ಆತನಿಗೆ ಸಂಬಳ ಹೆಚ್ಚಾಗುತ್ತದೆ ಅಥವಾ ಬಡ್ತಿ ಸಿಗುತ್ತದೆ. ಹೀಗಾಗಿ ಎಲ್ಲಾ ಸುದ್ದಿ ಸಂಗ್ರಾಹಕರು ತಮ್ಮ ಕ್ಷೇತ್ರದಲ್ಲಿನ ವಿವರಗಳ ಮೇಲೆ ನಿರಂತರವಾಗಿ ನಿಗಾ ಇಟ್ಟಿರುತ್ತಾರೆ. ಹೀಗೆ ಬಂದ ಸುದ್ದಿಯಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆಯಬಲ್ಲ ಸುದ್ದಿಗೆ ಆದ್ಯತೆ ಇರುತ್ತದೆ. ಹೀಗೆ ವಾಹಿನಿಗೆ ಬಂದ ಸುದ್ದಿಯನ್ನು ಮೊದಲು ಉಪಸಂಪಾದಕರು ಪಡೆಯುತ್ತಾರೆ. ಸುದ್ದಿಯ ಶಕ್ತಿಯನ್ನು ಆಧರಿಸಿ ಆ ವಿವರ ಸುದ್ದಿ ಸಂಪಾದಕರಿಗೆ ತಲುಪುತ್ತದೆ. ಸುದ್ದಿ ಸಂಪಾದಕ ಯಾವ ಸುದ್ದಿಯನ್ನು ಅಂದು ಪ್ರಸಾರವಾಗುವ ವಾರ್ತೆಗಳಿಗೆ ಬಳಸುತ್ತಾನೆ ಎಂಬುದಕ್ಕೆ ಆಯಾ ದಿನದ ರಾಜಕೀಯ ಆದ್ಯತೆಗಳು, ಸಾಮಾಜಿಕ ಆದ್ಯತೆಗಳು, ಆರ್ಥಿಕ ಸ್ಥಿತಿಗತಿಗಳಲ್ಲದೆ ಆಯಾ ಸುದ್ದಿ ಸಂಪಾದಕನ ರಾಜಕೀಯ ನಿಲುವುಗಳು ಕಾರಣವಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ವಾಹಿನಿಯ ಮಾಲೀಕರು ನಿಷ್ಕರ್ಷೆಗೊಳಿಸಿರುವ ದೃಷ್ಟಿಕೋನ-ನಿಲುವುಗಳಿಗೆ ಆಯಾ ಸುದ್ದಿ ಹೊಂದಬೇಕಿರುತ್ತದೆ. ಹೀಗೆ ಅನೇಕ ಮಾನದಂಡಗಳನ್ನು ಗೆದ್ದು ಒಂದು ದಿನದ ವಾರ್ತೆಯಲ್ಲಿ ಪ್ರಧಾನ ಸುದ್ದಿಯಾಗಿ ಕಾಣಿಸಿಕೊಳ್ಳುವುದು ಎಲ್ಲಾ ಸುದ್ದಿಗಳಿಗೂ ಸಾಧ್ಯವಿಲ್ಲ. ಇಲ್ಲಿ ಅದಾಗಲೇ ಅನೇಕ ವಿಶ್ಲೇಷಣೆಗಳಿಂದ ತಿಳಿದಿರುವಂತೆ ಗಲಭೆ, ಕಾನೂನು ಸುವ್ಯವಸ್ಥೆಯ ತೊಡಕುಗಳು, ಅಪರಾಧ, ಅಪಘಾತ, ವಿಶೇಷ ವ್ಯಕ್ತಿಗಳ ಸಾವುಗಳು, ಜನಪ್ರಿಯ ವ್ಯಕ್ತಿಗಳ ಖಾಸಗಿ ಬದುಕಿನ ವಿವರಗಳು, ರಾಸಲೀಲ ಪ್ರಕರಣಗಳು ಎಲ್ಲಾ ಕಾಲದಲ್ಲಿಯೂ ಆದ್ಯತೆಯನ್ನು ಪಡೆಯುವ ಸುದ್ದಿ ಆಗಿರುತ್ತವೆ. ಹೀಗಾಗಿಯೇ ಯಾವುದೇ ಸುದ್ದಿ ಸಂಗ್ರಾಹಕ ತನ್ನ ಕ್ಷೇತ್ರದಲ್ಲಿ ಆದ ಗಲಭೆ ಮತ್ತು ಕಾನೂನು ಸುವ್ಯವಸ್ಥೆಯ ವರದಿಯನ್ನು ಅತ್ಯಂತ ರೋಚಕವಾಗಿ ಕಟ್ಟಲು ಪ್ರಯತ್ನಿಸುತ್ತಾನೆ. ಆ ಸುದ್ದಿಯನ್ನು ಅತಿ ಹೆಚ್ಚು ವೀಕ್ಷಕರು ನೋಡಲಿ ಎಂಬುದೇ ಸುದ್ದಿ ತಯಾರಕನ ಆದ್ಯತೆ. ಇಂದು ನಮ್ಮಲ್ಲಿನ ವಾಹಿನಿಗಳ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆಯುವ ಸುದ್ದಿಯಿಂದಾಗಿಯೇ ಆಯಾ ವಾಹಿನೆಗೆ ಜಾಗೀರಾತುದಾರರು ಮತ್ತು ಆದಾಯ ದೊರೆಯುತ್ತದೆ. ಹಾಗಾಗಿಯೇ ಸುದ್ದಿಯೊಂದು ಪ್ರಸಾರವಾಗುವುದಕ್ಕೆ ರೋಚಕತೆಯೇ ಪ್ರಧಾನ ಮಾನದಂಡವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಈ ಹಿಂದೆ ಪ್ರಸ್ತಾಪಿಸಿದ ಎರಡು ಉದಾಹರಣೆಗಳನ್ನು ನಾವು ಗಮನಿಸಬಹುದು.
ರೋಚಕ ಸುದ್ದಿ ಎಂದರೇನು?
ರೋಚಕತೆ ಎನ್ನುವುದು ಯಾವುದೇ ನೋಡುಗರ ಅನುಭವಕ್ಕೆ ದಕ್ಕುವ ಸಾಮಗ್ರಿ. ಆದರೆ ಅದು ಕಾಲಾಂತರದಲ್ಲಿ ಅನೇಕ ಅರ್ಥಗಳನ್ನು ಪಡೆದುಕೊಂಡಿದೆ. ಒಂದು ಕಾಲಕ್ಕೆ ಅಶ್ಲೀಲ ಸಾಹಿತ್ಯವೇ ರೋಚಕ ಎಂಬ ಭಾವನೆ ನಮ್ಮ ಸಮಾಜದಲ್ಲಿ ಬೇರೂರಿತ್ತು. ಎನ್.ನರಸಿಂಹಯ್ಯನವರ ಕಾದಂಬರಿಯೇ ಅತ್ಯಂತ ರೋಚಕ ಸಾಹಿತ್ಯವಾಗಿತ್ತು. ಇಂದು ಆ ಕಾದಂಬರಿಯೂ ಒಣ ಎನ್ನುವಂತೆ ಸಮಾಜ ಪಲ್ಲಟವಾಗಿದೆ. ಇಂದು ಸರ್ಕಾರಗಳನ್ನು ಮಾಡುವ, ನಡೆಸುವ ಅಧಿಕಾರ ವರ್ಗದ ವಿವರಗಳು, ಒಬ್ಬರನ್ನೊಬ್ಬರು ಬೀಳಿಸಲು ಮಾಡುವ ಹುನ್ನಾರಗಳು ರೋಚಕ ಎನಿಸಿವೆ. ನಮ್ಮ ನಾಯಕರು ಮಾಧ್ಯಮದಲ್ಲಿ ಕ್ಯಾಮೆರಾ ಎದುರೇ ಕೂತು ಆಡುವ ಜಗಳಗಳು ರೋಚಕ ಎನಿಸಿವೆ. ಯಾವುದೋ ನಗರದಲ್ಲಿ ಯಾವುದೋ ರಾಜಕೀಯ ಲಾಭಕ್ಕಾಗಿ ಯಾರೋ ಮಾಡಿಸುವ ಕೋಮುಗಲಭೆ, ಅಶಾಂತಿಯ ವಿವರಗಳು ರೋಚಕ ಎನಿಸಿವೆ. ಈ ವಿಷಯಕ್ಕೆ ಬಂದೊಡನೆ ಮುಂಬೈ ಟೆರರಿಸ್ಟ್ ದಾಳಿಯನ್ನು ೨೪ ಗಂಟೆಗಳ ಕಾಲ ನೇರ ಪ್ರಸಾರ ಮಾಡಿದ ಸುದ್ದಿ ವಾಹಿನಿಗಳ ಮನಸ್ಥಿತಿಯನ್ನು ನೆನೆಸಿಕೊಳ್ಳಬಹುದು. ಅಥವಾ ಯಾವುದೋ ಮಂತ್ರಿಗೆ ಬೆಂಗಾವಲಾಗಿ ಹೋಗುತ್ತಿದ್ದ ಇನ್ಸ್‌ಪೆಕ್ಟರ್ ಒಬ್ಬನನ್ನು ಯಾರೋ ಕೊಂದದ್ದನ್ನು ಯಥಾವತ್ತಾಗಿ ತೋರಿಸಿದ ವಾಹಿನಿಯಲ್ಲಿ ಬಂದ ದೃಶ್ಯ ವಿವರವನ್ನು ನೆನಪಿಸಿಕೊಳ್ಳಬಹುದು. ಈ ಎಲ್ಲಾ ವಿವರಗಳೂ ಇಂದು ರೋಚಕವಾಗಿರುವ ವಿವರಗಳು ಕೇವಲ ನಿಘಂಟಿನ ಅರ್ಥಕ್ಕೆ ಸೀಮಿತವಾದ ವಿವರವಲ್ಲ, ಬದಲಿಗೆ ಸಮಾಜದ ಮೇಲ್‌ವರ್ಗವು ನಡೆಸುವ ಎಲ್ಲಾ ಹರಾಮಿ ಕೆಲಸಗಳೂ ರೋಚಕ ಎನಿಸಿಕೊಂಡಿವೆ. ಹಾಗೆಯೇ ಯಾವುದೋ ಬಡವರ್ಗದ ಜನ ತಮ್ಮ ಮನೆಯ ಮದುವೆಗೆ ಹೋಗುವ ಹಾದಿಯಲ್ಲಿ ಅಪಘಾತವಾಗಿ ಸತ್ತರೆ ಅದು ರೋಚಕ ಸುದ್ದಿಯ ಸ್ಥಾನ ತೆಗೆದುಕೊಳ್ಳುತ್ತದೆ. ಅಲ್ಲಿ ಸತ್ತವರ ವಿವರಕ್ಕಿಂತ ಅಧಿಕಾರ ಹಿಡಿದವರು ರಸ್ತೆ ಸರಿಯಾಗಿ ಮಾಡಿಲ್ಲ ಎಂಬ ವಿವರ ಪ್ರಧಾನವಾಗಿ ಬಿಡುತ್ತದೆ. ಹೀಗಾಗಿ ಇಂದು ‘ರೋಚಕ’ ಎಂಬುದು ಆಯಾ ಮಾಧ್ಯಮಗಳವರಿಗೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ, ಆ ಮೂಲಕ ಆದಾಯ ತಮದುಕೊಡುವ ಸುದ್ದಿ ಮಾತ್ರ ಆಗಿರುತ್ತದೆ. ಇಂತಹ ಸುದ್ದಿಗಳಲ್ಲಿ ಸಾಮಾಜಿಕ ಕಾಳಜಿಗಿಂತ ‘ರೋಚಕ’ತೆ ಮಾತ್ರ ಪ್ರಧಾನವಾಗಿರುತ್ತದೆ. ಹಾಗಾಗಿ ನಾನು ಮೊದಲು ಉದಾಹರಿಸಿದ ಸುದ್ದಿ ತುಣುಕುಗಳು ಮಾತ್ರ ಮಾಧ್ಯಮದಲ್ಲಿ ಪ್ರಸಾರವಾಗುತ್ತಾ ಇರುತ್ತದೆ.
ಸಮಾಜವು ಈ ಮಾಧ್ಯಮಗಳನ್ನು ಗ್ರಹಿಸುವ ಬಗೆ
ಭಗವದ್ಗೀತೆಯಲ್ಲಿ ಒಂದು ಶ್ಲೋಕವಿದೆ. ಅದರ ಇಡೀ ಅರ್ಥ ನಮಗೆ ಈಗ ಬೇಕಿಲ್ಲ. ಆದರೆ ಅದರಲ್ಲಿ ಬರುವ ಒಂದು ಪ್ರತಿಮೆಯು ಮರವೊಂದರದ್ದು. ಆ ಮರವೋ ನೆಲದ ಮೇಲೆ ಎಷ್ಟು ಹರಡಿದೆಯೋ ನೆಲದೊಳಗೂ ಅಷ್ಟೇ ಹರಡಿದೆ ಎಂಬ ವಿವರಣೆ ಆ ಶ್ಲೋಕದಲ್ಲಿ ಬರುತ್ತದೆ. ಈ ಮರದ ಚಿತ್ರಕ್ಕೂ ನಮ್ಮ ಟೆಲಿವಿಷನ್ ಎಂಬ ಯಂತ್ರವನ್ನು ಮನೆಯಲ್ಲಿಟ್ಟುಕೊಂಡು ನೋಡುವವರಿಗೂ ವ್ಯತ್ಯಾಸವಿಲ್ಲ. ಈ ನಾಡಿನ ಪ್ರತಿಯೊಬ್ಬರಿಗೂ ಅವರು ನೋಡುವ ವಿವರ ದಕ್ಕುವುದು ಅದಾಗಲೇ ಅವರು ಪಡೆದುಕೊಂಡಿರುವ ಅನೇಕ ಜೀವನ ವಿವರಗಳಿಂದ. ರಥದ ಮೇಲೆ ಕೃಷ್ಣ ಕುಳಿತು ಕೈ ಚಾಚಿರುವ ಚಿತ್ರ ನೋಡಿದರೆ ಇದು ಮಹಾಭಾರತದಲ್ಲಿನ ಕೃಷ್ಣಾರ್ಜುನ ಪ್ರಕರಣ, ಭಗವದ್ಗೀತೆಯ ಆರಂಭ ಎಂದು ನಮಗೆ ಗೊತ್ತಾಗುವ ಹಾಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯೇ ನಮ್ಮನ್ನು ಸಿದ್ಧಪಡಿಸಿರುತ್ತದೆ. ಇದು ಎಲ್ಲಾ ಸಿದ್ಧ ಮಾದರಿಯ ಪ್ರತಿಮೆಗಳಿಗೂ ಹೇಳಬಹುದಾದ ಮಾತು. ಆದರೆ ಟೆಲಿವಿಷನ್ ಸುದ್ದಿಯಲ್ಲಿ ತೋರುವ ಪ್ರತಿಮೆಗಳು ಇಷ್ಟು ಸ್ಪಷ್ಟವಾದ ಉತ್ತರವನ್ನು ನೀಡಬಲ್ಲಂತಹವಲ್ಲ. ಆದರೆ ಯಾರೋ ಕಲ್ಲು ತೂರುತ್ತಾ ಇರುವ ದೃಶ್ಯವೊಂದು ಕಂಡ ಕೂಡಲೇ ಅದು ಯಾವುದೋ ದೊಂಬಿ ಎಂಬುದನ್ನು ಕಳೆದ ಇಪ್ಪತ್ತೈದು ವರ್ಷಗಳ ಟೆಲಿವಿಷನ್ ವೀಕ್ಷಣೆ ನಮಗೆ ತಿಳಿಸಿದೆ. ಹೀಗಾಗಿಯೇ ಟೆಲಿವಿಷನ್ನಿನಲ್ಲಿ ತೋರುವ ಪ್ರತಿಮೆಗೂ ಹಿನ್ನೆಲೆಯಲ್ಲಿ ಬರುವ ಮಾತುಗಳಿಗೂ ನೇರವಾದ ಸಂಬಂಧ ಇಲ್ಲವಾದರೂ ನಮಗೆ ಆ ವಿವರಗಳು ಅರ್ಥವಾಗುವುದು ಬೇರೆಯದೇ ರೀತಿಯಲ್ಲಿ. ಟೆಲಿವಿಷನ್ ವೀಕ್ಷಣೆ ನೋಡುಗನ ಒಳಗಿರುವ ಐತಿಹ್ಯಗಳ ವಿಗ್ರಹಭಂಜನೆಯನ್ನು ಮಾಡುತ್ತಲೇ ಇರುತ್ತದೆ. ಕಾಳಿದಾಸ ವರ್ಣಿಸುವ ಹೆಣ್ಣಿನ ಸೌಂದರ್ಯದ ವಿವರಗಳು ‘ಮಾಣಿಕ್ಯ ವೀಣಾಂ ಮುಪಲಾಲಯಂತಂ’ ಎಂಬ ಪದ್ಯದಲ್ಲಿ ಇದೆ. ಅದೇ ಗುಣಗಳನ್ನುಳ್ಳ ಒಂದು ಹೆಣ್ಣಿನ ಚಿತ್ರ ಇಂದು ನಮಗೆ ಅತ್ಯಂತ ಕೆಟ್ಟದಾಗಿ ಕಾಣಬಹುದು. ಏಕೆಂದರೆ ಟೆಲಿವಿಷನ್ ತನ್ನ ಜಾಹೀರಾತು ಲೋಕದ ಮೂಲಕ, ತನ್ನ ಸೌಂದರ್ಯ ಸ್ಫರ್ಧೆಯ ಮೂಲಕ ನಮಗೆ ತಿಳಿಸಿಕೊಟ್ಟಿರುವ ಸೌಂದರ್ಯ ಪ್ರಜ್ಷೆಗೂ ಕಾಳಿದಾಸ ತಿಳಿಸುವ ಸೌಂದರ್ಯದ ಲಕ್ಷಣಗಳಿಗೂ ಇಂದು ಸಂಬಂಧವೇ ಇಲ್ಲದಂತಾಗಿದೆ. ಹೀಗೆ ನಾವು ನೋಡುತ್ತಿದ್ದ ಅನೇಕ ವಿವರಗಳು ಟೆಲಿವಿಷನ್ ಆಗಮನದ ನಂತರ ನಮಗೆ ಬೇರೆಯದೇ ಆಗಿ ಕಾಣುತ್ತಿವೆ. ಯಾರಾದರೂ ಕೈ ಬೀಸುತ್ತಾ ನಡೆಯುವುದು ಎಂದರೆ ಆತನಿಗೆ ಏನೋ ಬೇಡವಾಗಿದೆ ಎಂಬ ಅರ್ಥ ನಮ್ಮ ಸಮಾಜದಲ್ಲಿತ್ತು. ಆದರೆ ಈಗ ಯಾರಾದರೂ ಕ್ಯಾಮೆರಾದ ಎದುರಿಗೆ ಕೈಯೆತ್ತಿ, ಅದನ್ನು ಆಡಿಸುತ್ತಾ ನಡೆದರೆ, ಆ ವ್ಯಕ್ತಿಯು ತನ್ನ ಮತದಾರರಿಗೋ, ಅಭಿಮಾನಿಗಳಿಗೋ ನಮಸ್ಕರಿಸುತ್ತಾ ಇದ್ದಾನೆ ಎಂಬರ್ಥ ಬಂದಿದೆ. ಹೀಗೆ ಕಾಲಾಂತರದಲ್ಲಿ ನಮ್ಮ ಗ್ರಹಿಕೆಗಳನ್ನು ಟೆಲಿವಿಷನ್ ಪಲ್ಲಟಗೊಳಿಸಿದೆ. ಇದನ್ನೇ ನೋಮ್ ಚಾಮ್‌ಸ್ಕಿ ‘ಪ್ರತಿಮಾ ರಾಜಕಾರಣ’ ಎನ್ನುತ್ತಾನೆ. ಈ ರಾಜಕಾರಣದ ಹಿಂದೆ ನೋಡುಗನ ಮನಸ್ಸನ್ನು ಇಂತಹುದೇ ಸ್ಥಿತಿಯಲ್ಲಿ ಇರಿಸಬೇಕೆಂಬ ಕಾರ್ಪೋರೇಟ್ ಹುನ್ನಾರ ಇರುತ್ತದೆ ಎಂಬುದು ಚಾಮ್‌ಸ್ಕಿಯ ವಾದ. ಹೀಗೇ ನೋಡುಗನನ್ನು ಒಂದು ಸೈಕೆಡೆಲಿಕ್ ಸ್ಥಿತಿಯಲ್ಲಿ ಇರಿಸಲೆಂದೇ ನೇರ ಸಂಬಂಧ ಇಲ್ಲದ ದೃಶ್ಯಗಳ ಜೋಡಣೆಯ ಮೂಲಕ ಕಥನ ಎಂಬುದನ್ನು ಎಂಟಿವಿ ಎಂಬ ಒಂದು ವಾಹಿನಿಯು ಬದಲಿಸಿದ್ದನ್ನ ನಾವು ಖುದ್ದಾಗಿ ಅನುಭವಿಸಿದ್ದೇವೆ. ಪುರಾಣರೂಪವನ್ನೇ ಹೋಲುತ್ತಿದ್ದ ನಮ್ಮ ಸಿನಿಮಾಗಳ ಕಥನ ಕ್ರಮವನ್ನು ಸಹ ಈ ಎಂಟಿವಿ ಕ್ರಮವು ಪಲ್ಲಟಗೊಳಿಸಿದೆ. ನಮ್ಮ ಸಿನಿಮಾ ಹಾಡುಗಳ ಸಾಹಿತ್ಯವನ್ನೂ ಸಹ ಈ ಟೆಲಿವಿಷನ್ ಕಥನ ಕಟ್ಟಡವು ಬದಲಿಸಿದೆ. ಹೀಗಾಗಿಯೇ ಇಂದು ಸಿನಿಮಾದ ಹಾಡುಗಳಿಗೂ ಚಿತ್ರದ ದೃಶ್ಯಕ್ಕೂ ನೇರ ಸಂಬಂಧ ಇಲ್ಲದ ಒಂದು ಹೊಸ ಕ್ರಮವೊಂದು ಚಾಲ್ತಿಗೆ ಬಂದಿದೆ. ಇದು ನಮ್ಮ ಸಾಹಿತ್ಯಕ್ಕೂ ವ್ಯಾಪಿಸಿದೆ ಎಂಬುದನ್ನು ಈಗಿನ ಹೊಸ ಕತೆಗಾರರ ಕಥನ ಕ್ರಮದಲ್ಲಿಯೂ ಕಾಣಬಹುದು. ಹೀಗೆ ಒಂದು ಮಾಧ್ಯಮವು ತನ್ನ ಸ್ವರೂಪವನ್ನು ನೋಡುಗನಿಗೆ ಅಭ್ಯಾಸ ಮಾಡಿಸುತ್ತಲೇ, ನೋಡುಗನ ಸುತ್ತಲೂ ಇದ್ದ ಎಲ್ಲಾ ವಿವರಗಳನ್ನೂ ಬದಲಿಸಿದ್ದನ್ನು (ಭಾರತದ ಮಟ್ಟಿಗೆ ಎಂಬತ್ತರ ದಶಕದಿಂದ ಇಲ್ಲಿನವೆರೆಗಿನ ಟೆಲಿವಿಷನ್ ಇತಿಹಾಸ ಇದು) ನಾವು ‘ಕ್ರಾಂತಿಕಾರಿ ಸಾಂಸ್ಕೃತಿಕ ಪಲ್ಲಟ’ ಎಂದೇ ಗುರುತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅದಾಗಲೇ ಉದಾಹರಿಸಿದ ಭಗವದ್ಗೀತೆಯ ಮರದ ಚಿತ್ರಕ್ಕೆ ಟೆಲಿವಿಷನ್ ಸೃಷ್ಟಿಸಿರುವ ಅರ್ಥ ವಿನ್ಯಾಸವೇ ಬೇರೆ. ಭಗವದ್ಗೀತೆಯ ಮರದ ಚಿತ್ರವು ಮನುಷ್ಯನ ಒಳಗಿನ ಮರ ಮತ್ತು ಆತನ ಹೊರಗಿನ ಪ್ರಪಂಚವನ್ನು ಕುರಿತು ಮಾತಾಡುತ್ತದೆ ಎಂದು ಭಾರತೀಯ ವ್ಯಾಖ್ಯಾನಕಾರರು ಹೇಳಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಮೇಲಿನ ಮರಕ್ಕೆ ನೆಲದೊಳಗಿನ ಮರ ಕನ್ನಡಿಯಾಗಿ ಉಳಿದುಬಿಡುತ್ತದೆ. ಈ ಕನ್ನಡಿತನದ ಅರ್ಥ ವಿನ್ಯಾಸಕ್ಕೆ ಭೌದ್ಧಿಕ ವಿಸ್ತಾರ ಇಲ್ಲ. ನೆಲದೊಳಗಿನ ಮರಕ್ಕೆ ಭಗವದ್ಗೀತೆಯು ನೀಡುವ ಪ್ರತ್ಯೇಕ ಅಸ್ತಿತ್ವ ‘ಕನ್ನಡಿ’ ಪ್ರತಿಬಿಂದವಾದ ಮರಕ್ಕೆ ದಕ್ಕುವುದಿಲ್ಲ. ಹೀಗೆ ನಾವು ನಮ್ಮದೇ ಸಂಸ್ಕೃತಿಯ ವಿವರಗಳನ್ನು ಬದಲಿಸುವಂತೆ ಟೆಲಿವಿಷನ್ ಮಾಧ್ಯಮ ನಮ್ಮ ನೆತ್ತಿಯ ಮೇಲೆ ಜಂಬೂಸವಾರಿ ಮಾಡುತ್ತಲೇ ಇದೆ. ಇದರ ಹಿಂದೆ ಇರುವ ‘ಪ್ರತಿಮಾಸೃಷ್ಟಿಯ ರಾಜಕಾರಣ’ ಕುರಿತಂತೆ ನೋಮ್ ಚಾಮ್‌ಸ್ಕಿ ವಿಸ್ತೃತವಾಗಿ ವಿವರಿಸಿದ್ದಾನೆ. ಬಂಡವಾಳಶಾಹಿಗಳು ತಮ್ಮ ಸರಕುಗಳನ್ನು ಸುಲಭವಾಗಿ ಮಾರಾಟ ಮಾಡಲನುವಾಗುವ, ಆ ಮೂಲಕ ಸರ್ಕಾರಗಳು ಯಾವುದೇ ಸ್ಥಿತಿಯಲ್ಲಿದ್ದರೂ ಸರಕುಗಳ ಮಾರಾಟಕ್ಕೆ ನಿರಂತರತೆಯನ್ನು ಒದಗಿಸುವ ಸಮಾಜ ಸೃಷ್ಟಿಸಲು ಮಾಡಿದ ಅನೇಕ ಪ್ರಯತ್ನಗಳ ಫಲ ಟೆಲಿವಿಷನ್ ಎಂದು ಚಾಮ್‌ಸ್ಕಿ ತೀರಾ ಸ್ಪಷ್ಟವಾಗಿ ಗುರುತಿಸುತ್ತಾನೆ.
ಈ ಹಿನ್ನೆಲೆಯಲ್ಲಿ ನಾವು ನೋಡುವ ಪ್ರತಿ ಸುದ್ದಿಯ ತುಣುಕು ಸಹ ಒಂದು ನಿರ್ದಿಷ್ಟ ವಾತಾವರಣ ಸೃಷ್ಟಿಗೆ ಮತ್ತು ನೋಡುಗನ ಮನಸ್ಸನ್ನು ಒಂದು ಸ್ಪಷ್ಟ ಸ್ಥಿತಿಯಲ್ಲಿ ಇರಿಸಬೇಕೆಂಬ ಕಾರಣಕ್ಕಾಗಿಯೇ ಸೃಷ್ಟಿಯಾಗುತ್ತದೆ ಎಂಬುದು ಸ್ಪಷ್ಟ. ಈ ನಿರ್ದಿಷ್ಟ ಮಾನಸಿಕ ಸ್ಥಿತಿಯ ಸೃಷ್ಟಿಯಲ್ಲಿ ;
೧) ನೋಡುಗನಲ್ಲಿ ಸರಕು ಕೊಳ್ಳಲೇಬೇಕೆಂಬ ತೀವ್ರ ವಾಂಛೆಯನ್ನು ಸೃಷ್ಟಿಸುವುದು,
೨) ನೋಡುಗನು ತನ್ನನ್ನು ಆಳುವ ವರ್ಗವನ್ನು ಕುರಿತು ಸದಾ ಹಾಸ್ಯ ಮಾಡುತ್ತಾ, ಆದರೆ ಆಳುವ ವರ್ಗವನ್ನು ಕುರಿತ ವಿಮರ್ಶೆಗೆ ಇಳಿಯದಂತೆ ಇರಿಸುವುದು,
೩) ನೋಡುಗನು ಸದಾ ಯಾವುದೋ ಆತಂಕದಲ್ಲಿರುವಂತಹ ಸುದ್ದಿಗಳನ್ನು ನೀಡುವುದರ ಮೂಲಕ ಆತನಲ್ಲಿ ಮಾನಸಿಕ ಒತ್ತಡವನ್ನು ಸೃಷ್ಟಿಸಿ ಔಷಧೋದ್ಯಮದ ಎಲ್ಲಾ ಸರಕುಗಳ ಮಾರಾಟಕ್ಕೆ ದಾರಿ ಮಾಡುವುದು,
೪) ನೋಡುಗನ ಸೌಂದರ್ಯ ಪ್ರಜ್ಞೆಯನ್ನು ಪಲ್ಲಡಗೊಳಿಸುವ ಮೂಲಕ ಸೌಂದರ್ಯ ಸಾಧನಗಳನ್ನು ಆತ ಎಡಬಿಡದೆ ಕೊಳ್ಳುವಂತೆ ಮಾಡುವುದು,
೫) ನೋಡುಗನ್ನಲ್ಲಿ ತೋರಿಕೆಯ ರಾಷ್ಟ್ರಪ್ರಜ್ಞೆಯನ್ನು ಕಾಪಾಡುತ್ತಾ, (ರೆಹಮಾನ್ ಸಂಗೀತ ಸಂಯೋಜನೆಯ ‘ವಂದೇಮಾತರಂ’ ಹಾಡಿನಂತೆಯೇ ನಾವು ಕೇವಲ ಬಾವುಟ ಬೀಸುವ ಸ್ಥಿತಿಗೆ ಇಳಿದಿದ್ದೇವೆ ಮತ್ತು ಅಂತಹದೊಂದು ಸಂಗೀತ ಸಂಯೋಜನೆಯಲ್ಲಿ ನಮ್ಮ ನೆಲದ ಗುಣಕ್ಕಿಂತ ಪರಕೀಯ ಗುಣಗಳೇ ಇರುವುದನ್ನು ನಾವು ಎಷ್ಟು ಸಲೀಸಾಗಿ, ವಿಮರ್ಶಾತೀತವಾಗಿ ಒಪ್ಪಿಕೊಂಡಿದ್ದೇವೆ ಎಂಬುದನ್ನು ಗಮನಿಸಿ) ನೋಡುಗನು ಸದಾಕಾಲ ಜಾಗತಿಕ ವ್ಯಾಪರದ ಚಿಂತೆಯಲ್ಲಿರುವಂತೆ ಮಾಡುತ್ತಾ, ಆಯಾ ಪ್ರಾದೇಶಿಕತೆಗಳನ್ನು ಅವಸಾನದ ಅಂಚಿಗೆ ತಳ್ಳುವುದು,
ಹೀಗೆ ಹಲವು ಕೆಲಸಗಳನ್ನು ಟೆಲಿವಿಷನ್ ಮಾಧ್ಯಮ ಏಕಕಕಾಲಕ್ಕೆ ಮಾಡುತ್ತಾ ಇರುತ್ತದೆ. ಇದರಿಂದಾಗಿಯೇ ಜಾಗತಿಕವಾಗಿ ಉದ್ವೇಗಕ್ಕೆ ಸಂಬಂಧಿಸಿದ ಖಾಯಿಲೆಗಳನ್ನುಳ್ಳ ಜನರ ಸಂಖ್ಯೆಯೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದು. ಈಗ ಆರಂಭದಲ್ಲಿ ಹೇಳಿದ ಸಮಾನ ಊಹೆಗಳನ್ನು ಸೃಷ್ಟಿಸುವ ಮಾಧ್ಯಮ ಸಮೂಹ ಮಾಧ್ಯಮ ಎಂದು ತಿಳಿಸಿದ್ದು ಮತ್ತಷ್ಟು ಸ್ಪಷ್ಟವಾಗುತ್ತದೆ.
ಇನ್ನುಳಿದ ಮಾಧ್ಯಮಗಳು ಏನು ಮಾಡುತ್ತಿವೆ?
ಇದು ಸಹಜವಾಗಿ ನಮ್ಮನ್ನು ಕಾಡುವ ಪ್ರಶ್ನೆ. ಟೆಲಿವಿಷನ್ ಎಲ್ಲಾ ಸಮೂಹ ಮಾಧ್ಯಮಗಳ ದೊರೆ ಆದ ನಂತರ ಮುದ್ರಣ ಮಾಧ್ಯಮವೂ ಸಹ ಬಹುತೇಕ ಅದೇ ಮಾದರಿಯದ್ದಾಗಿದೆ. ನಮ್ಮ ದೈನಿಕಗಳು ಅದೇ ಸೌಂದರ್ಯ ಪ್ರಜ್ಞೆಯನ್ನು ಬೋಧಿಸುತ್ತಾ ತಮ್ಮ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ಈ ದೈನಿಕಗಳಲ್ಲಿನ ಸುದ್ದಿ ಪ್ರಾಧನ್ಯತೆಯನ್ನು ಸಹ ಬಹುತೇಕ ಟೆಲಿವಿಷನ್ನಿನ ಆದ್ಯತೆಗಳೇ ನಿರ್ದರಿಸುತ್ತವೆ. ಹಿಂದಿನ ದಿನ ರಾತ್ರಿ ನೀವು ಟೆಲಿವಿಷನ್ನಿನಲ್ಲಿ ನೋಡಿದ ಪ್ರಧಾನ ಸುದ್ದಿಯೇ ಮಾರನೆಯ ದಿನ ದೈನಿಕದಲ್ಲಿ ತಲೆಬರಹ ಆಗಿರುತ್ತದೆ. ಹೀಗಾಗಿ ದೈನಿಕಗಳು ಸಹ ಅದೇ ‘ಪ್ರತಿಮಾ ಸೃಷ್ಟಿ ರಾಜಕಾರಣ’ದ ಪಾಲುದಾರರಾಗಿವೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಕೆಲವು ನಿಯತಕಾಲಿಕೆಗಳು ಪ್ರಯತ್ನಿಸುತ್ತಿವೆ. ಆದರೆ ಅವು ಅದಾಗಲೇ ಪಲ್ಲಟಗೊಂಡಿರುವ ಮನಸ್ಥಿತಿಗಳ ಮೇಲೆ ವಿಶೇಷ ಪರಿಣಾಮ ಬೀರುವುದು ಕಷ್ಟಸಾಧ್ಯ.
ಇನ್ನು ರೇಡಿಯೋದಂತಹ ಮಾಧ್ಯಮಗಳು ಸುದ್ದಿ ಮಾಧ್ಯಮವಾಗಿ ಉಳಿದೇ ಇಲ್ಲ. ಅವು ಕೇವಲ ಸಂಗೀತ ಕೇಳಲು ಎಂಬಂತಾಗಿದೆ. ಆ ರೇಡಿಯೋದಲ್ಲಿ (ವಿಶೇಷವಾಗಿ ಕಳೆದ ಐದು ವರ್ಷದಿಂದ ಚಾಲ್ತಿಗೆ ಬಂದಿರುವ ಎಫ್.ಎಂ.ನಂತಹದ್ದರಲ್ಲಿ) ಮಾತು ಎಂಬುದಕ್ಕೆ ತೂಕ ಇರಬೇಕಿಲ್ಲ ಎಂದಾಗಿದೆ. ಆ ವಾಹಿನಿಗಳಲ್ಲಿ ನಿಮಿಷಗಟ್ಟಲೆ ಅರ್ಥ-ಆತ್ಮ ಎರಡೂ ಇಲ್ಲದ ಮಾತಾಡಬಲ್ಲಂತಹ ರೇಡಿಯೋ ಜಾಕಿಗಳನ್ನು ಸೃಷ್ಟಿಸಲಾಗಿದೆ. ಹೀಗಾಗಿ ಇಂದು ರೇಡಿಯೋ ಕೂಡ ಸಮೂಹ ಸನ್ನಿ ಸೃಷ್ಟಿಗೆ ಎಂಟಿವಿಯ ವಿಸ್ತರಣೆಯಂತಾಗಿದೆ. ಅಲ್ಲಿ ಪ್ರಸಾರವಾಗುವ ಹಾಡುಗಳು ಸಹ ಅದಾಗಲೇ ನಿಷ್ಕರ್ಷೆಯಾಗಿರುವ ಟೆಲಿವಿಷನ್ ಒದಗಿಸಿದ ಮಾದರಿಯನ್ನುಳ್ಳ ಹಾಡುಗಳೇ ಆಗಿರುತ್ತವೆ. ಆಕಸ್ಮಿಕವಾಗಿ ಯಾವುದಾದರೂ ಅತೀಮಧುರ ಎನಿಸುವ ಹಾಡು ಕೇಳಿಬಂದರೆ ಅದು ಹೆಚ್ಚು ಜನ ರೇಡಿಯೋಗೆ ಕಿವಿ ಹಚ್ಚದ ಸಮಯದಲ್ಲಿ ಆಗಿರುತ್ತದೆ ಎಂಬುದನ್ನು ಗಮನಿಸಬಹುದು.
ಒಟ್ಟಾರೆಯಾಗಿ ಸಮಕಾಲೀನ ಸಾಮಾಜಿಕ ತಲ್ಲಣಗಳನ್ನು ಅದರ ಮೂಲರ್ಥದಲ್ಲಿ ಗ್ರಹಿಸದೆ ‘ಸಾಂಸ್ಕೃತಿಕ ರಾಜಕಾರಣ’ ಹಾಗೂ ‘ಪ್ರತಿಮಾ ಸೃಷ್ಟಿ ರಾಜಕಾರಣ’ ಮಾಡುತ್ತಿರುವ ಮಾಧ್ಯಮಗಳಿಗೆ ಸಿಕ್ಕಿದೆ. ಹೀಗಾಗಿ ಒಟ್ಟು ಸಮಾಜವು ಯಾರಾದರೂ ಚಳುವಳಿಗಾರರು ಎಂದರೆ ಅವರನ್ನು ಬೆನ್ನ ಹಿಂದೆ ಆಡಿಕೊಂಡು ನಗುತ್ತದೆ. ಯಾರಾದರೂ ಗಂಭೀರ ಸಾಹಿತ್ಯದ ಮಾತಾಡಿದರೆ ‘ಅವರೇಕೆ ನಮ್ಮ ಭಾಷೆಯಲ್ಲಿ ಮಾತಾಡುವುದಿಲ್ಲ’ ಎಂತಲೋ ‘ಅವರ ಮಾತನ್ನು ನಮ್ಮ ಭಾಷೆಗೆ ಅನುವಾದಿಸಿ’ ಎಂತಲೋ ಅತ್ಯಂತ ಹಗುರ ಮಾತಾಡುವ ಸ್ಥಿತಿಗೆ ಇಡೀ ಸಮೂಹವನ್ನ ಅಲಿಯಾಸ್ ಸಮಾಜವನ್ನು ನಮ್ಮ ಮಾಧ್ಯಮಗಳು ಶೃತಿಗೊಳಿಸಿವೆ.
ಹಾಗಾದರೆ ಹತಾಶೆಯೊಂದೇ ಉಳಿಯುವುದೇ?
ಹಾಗೇನಿಲ್ಲ. ಎಲ್ಲಾ ಹತಾಶೆಗಳಿಗೂ ಸಮೂಹವನ್ನು ಮೀರುವಂತೆ ಸಮಾಜ ಉತ್ತರಿಸುತ್ತದೆ. ಅದನ್ನು ಈಚೆಗೆ ಈಜಿಪ್ಟ್‌ನಲ್ಲಿ ನಡೆದ ಜನಸಾಗರವೇ ಪಾಲ್ಗೊಂಡ ಚಳುವಳಿಯಲ್ಲಿ ಗಮನಿಸಬಹುದು. ಅಥವಾ ಈಚೆಗೆ ಪ್ರಾದೇಶಿಕ ಬಾಷೆಯನ್ನು ಕುರಿತಂತೆ ನಡೆದ ನುಡಿಹಬ್ಬಗಳಲ್ಲಿ ಪಾಲ್ಗೊಳ್ಳುತ್ತಾ ಇರುವ ಜನರ ಸಂಖ್ಯೆಯಿಂದಲೂ ಗಮನಿಸಬಹುದು. ಈ ಸಮಾಜ ಎಲ್ಲಾ ‘ರಾಜಕಾರಣ’ಗಳಿಗೂ ಉತ್ತರ ಕೊಟ್ಟು, ತನ್ನದೇ ಆದ ಆರೋಗ್ಯವನ್ನು ಕಾಪಾಡಿಕೊಳ್ಳುವಷ್ಟು ಶಕ್ತವಾದುದು. ಹೀಗಾಗಿ ಈ ಸಮಾಜದ ಅಗತ್ಯಕ್ಕಾಗಿ ‘ಸಮೂಹಸನ್ನಿ’ ಸೃಷ್ಟಿಯ ಮಾಧ್ಯಮಗಳು ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳುವ ಕಾಲ ದೂರವಿಲ್ಲ.

Advertisements

0 Responses to “ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಸಮೂಹ ಮಾಧ್ಯಮಗಳು”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: