ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ – ನಮ್ಮ ಮುಂದಿರುವ ಸವಾಲುಗಳು

ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ – ನಮ್ಮ ಮುಂದಿರುವ ಸವಾಲುಗಳು
(- ಬಿ.ಸುರೇಶ ಸಿದ್ಧಪಡಿಸಿದ ಟಿಪ್ಪಣಿ)
ಪ್ರವೇಶ
ಇಂದು ಮಾಧ್ಯಮ ಎಂಬುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಮಕಾಲೀನ ಬದುಕಿನಲ್ಲಿ ಪ್ರತೀಕ್ಷಣವೂ ಯಾವುದೋ ಮಾಧ್ಯಮವು ನಮಗೆ ಮಾಹಿತಿಗಳ ಮಹಾಪೂರವನ್ನೇ ತಂದು ಇರಿಸುತ್ತಲೇ ಇರುತ್ತದೆ. ಹೀಗಾಗಿಯೇ ಈ ಯುಗವನ್ನು ಮಾಹಿತಿ ಯುಗ ಎಂದು ಗುರುತಿಸಲಾಗಿದೆ. ಹೀಗೆ ನಮಗೆ ದೊರೆಯುವ ಮಾಹಿತಿಗಳೆಲ್ಲವೂ ನಮಗೆ ಉಪಯುಕ್ತವೇ ಎಂದೇನಲ್ಲಾ. ಆದರೂ ಆ ಮಾಹಿತಿಗಳು ಆಯಾ ವ್ಯಕ್ತಿಗೆ ಲಭ್ಯವಾಗುತ್ತಲೇ ಇರುತ್ತದೆ.
ಮಾಧ್ಯಮಗಳು
ಮಾಧ್ಯಮಗಳಲ್ಲಿ ಅನೇಕ ಬಗೆ. ಅವುಗಳು ಕೊಡುವ ಮಾಹಿತಿಗಳೂ ಬಗೆ ಬಗೆ. ಅವುಗಳನ್ನು ಮೂಲಭೂತವಾಗಿ ಹೀಗೆ ವಿಂಗಡಿಸಬಹುದು.
೧. ಮುದ್ರಣ ಮಾಧ್ಯಮ : ಇದರಡಿಯಲ್ಲಿ – ದಿನಪತ್ರಿಕೆ, ವಾರಪತ್ರಿಕೆ, ನಿಯತಕಾಲಿಕೆಗಳು, ಸಾಹಿತ್ಯ ಪತ್ರಿಕೆಗಳು, ಆಯಾ ಗುಂಪುಗಳಿಗಾಗಿ ಹೊರಡಿಸಲಾಗುವ ಪತ್ರಿಕೆಗಳು.
೨. ದೃಶ್ಯ ಮಾಧ್ಯಮ : ಇದರಡಿಯಲ್ಲಿ – ವಿದ್ಯುನ್ಮಾನ ಮಾಧ್ಯಮಗಳು (ಟೆಲಿವಿಷನ್ ವಾಹಿನಿಗಳು ಮತ್ತು ಅಂತರ್ಜಾಲ), ರಸ್ತೆಗಳಲ್ಲಿನ ಫಲಕಗಳು, ಬಸ್ ನಿಲ್ದಾಣ-ರೈಲು ನಿಲ್ದಾಣಗಳಲ್ಲಿನ ಟೆಲಿಷನ್ ಜಾಲಗಳು, ರೈಲು, ಬಸ್ಸು ಮತ್ತು ವಿಮಾನಗಳಲ್ಲಿನ ಟೆಲಿವಿಷನ್ ವ್ಯವಸ್ಥೆಗಳು, ಸಂಚಾರಿ ದೂರವಾಣಿಯಲ್ಲಿನ ಮಾಹಿತಿ ಹಂಚುವ ವಿವರಗಳು.
೩. ಶ್ರವ್ಯ ಮಾಧ್ಯಮ : ಆಕಾಶವಾಣಿ, ಎಫ್‌ಎಂ ರೇಡಿಯೋ ಮತ್ತು ಸಮುದಾಯ ರೇಡಿಯೋವಾಹಿನಿಗಳು.
ಈ ಎಲ್ಲಾ ಮಾಧ್ಯಮಗಳಲ್ಲಿ ಭಾಷೆಯ ಬಳಕೆ ಅನಿವಾರ್ಯ. ಆಯಾ ಸಮಾಜಕ್ಕೆ ಆಯಾ ಮಾಧ್ಯಮಗಳು ಮಾಹಿತಿ ಪ್ರಸಾರವನ್ನು ಮಾಡುತ್ತಲೇ ಇವೆ. ಆದರೆ ಮೇಲೆ ಸೂಚಿಸಿದ ಹಲವು ಮಾಧ್ಯಮಗಳಲ್ಲಿ ಕನ್ನಡದ ಬಳಕೆಯೇ ಸರಿಯಾಗಿ ಆಗುತ್ತಿಲ್ಲ. ಅವುಗಳು: ಸಂಚಾರಿ ದೂರವಾಣಿಗಳು ಹಾಗೂ ರೈಲು, ಬಸ್ಸು, ವಿಮಾನಗಳಲ್ಲಿನ ಟೆಲಿವಿಷನ್ ವ್ಯವಸ್ಥೆ. ಇಲ್ಲಿ ನಮ್ಮ ಭಾಷೆಯನ್ನು ಸ್ಥಾಪಿಸಲು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇನ್ನುಳಿದ ಮಾಧ್ಯಮಗಳಲ್ಲಿನ ಕನ್ನಡದ ಬಳಕೆಯನ್ನು ಕುರಿತು ನೋಡೋಣ.


ಮುದ್ರಣ ಮಾಧ್ಯಮ
ನಮ್ಮ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಕನ್ನಡವನ್ನು ನಿರಂತರವಾಗಿ ಬಳಸುತ್ತಿರುವ ಮಾಧ್ಯಮಗಳು. ಈ ಮಾಧ್ಯಮಗಳ ಮೂಲಕ ಕನ್ನಡ ಲಿಪಿಗೆ ಒಂದು ಸಾಮಾನ್ಯೀಕರಣ ದೊರೆತಿದೆ. ಆದರೆ ಕಳೆದ ಒಂದು ದಶಕದಿಂದ ಈ ಮುದ್ರಣ ಮಾಧ್ಯಮಕ್ಕೆ ಹರಿದು ಬಂದಿರುವ ಹೊಸತಲೆಮಾರಿನಲ್ಲಿ ಅನೇಕರಿಗೆ ಕನ್ನಡವು ಭಾಷೆಯಾಗಿ ಬರುವುದೇ ಇಲ್ಲ. ಈ ಮಾತಿಗೆ ಅಪವಾದ ಇರಬಹುದು. ಆದರೆ ಬಹುತೇಕರ ಮಟ್ಟಿಗೆ ಇದು ಸತ್ಯ. ಹೀಗಾಗಿ ಮುದ್ರಣ ಮಾಧ್ಯಮಗಳಲ್ಲಿ ಈಚೆಗೆ ಕಾಣಿಸಿಕೊಳ್ಳುತ್ತಿರುವ ಕನ್ನಡವು ಪಲ್ಲಟಗೊಳ್ಳುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ನಮ್ಮ ರಾಜ್ಯದಲ್ಲಿರುವ ಮಾಧ್ಯಮವನ್ನು ಕಲಿಸುವ ಕೇಂದ್ರಗಳಲ್ಲಿ ಭಾಷೆಯನ್ನು ಕಲಿಸುವ ಪಠ್ಯಗಳೇ ಇಲ್ಲ. ಆ ವಿದ್ಯಾರ್ಥಿಗಳು ತಂತ್ರಜ್ಞಾನ ಕಲಿಯುತ್ತಾರೆ. ಆದರೆ ಭಾಷೆಯನ್ನು ಕಲಿಯುವುದಿಲ್ಲ. ಹೀಗಾಗಿ ಮಾಧ್ಯಮಗಳನ್ನು ಕುರಿತು ತರಬೇತಿ ನೀಡುವ ಈ ನಡಿನ ಬಹುತೇಕ ಕೇಂದ್ರಗಳಿಂದ ಬರುವ ವಿದ್ಯಾರ್ಥಿಗಳು ಮುದ್ರಣ ಮಾಧ್ಯಮದ ಮೂಲ ಅಗತ್ಯವಾದ ಭಾಷೆ ಎಂಬುದರ ಮೇಲೆ ಹಿಡಿತ ಸಾಧಿಸದೆ ಔದ್ಯೋಗಿಕ ಕ್ಷೇತ್ರಕ್ಕೆ ಪ್ರವೇಶಿಸುತ್ತಾ ಇದ್ದಾರೆ. ಅನೇಕ ದಿನಪತ್ರಿಕೆಗಳಲ್ಲಿ ಇರುವ ಹಿರಿಯ ಪತ್ರಕರ್ತರು ಇಂತಹ ಹೊಸಬರನ್ನು ಶೃತಿಗೊಳಿಸುವ ಪ್ರಯತ್ನ ಮಾಡುತ್ತಾ ಇದ್ದಾರಾದರೂ ಇಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತಿರುವ ಕನ್ನಡವು ಭಾಷೆಯಾಗಿ ಕನ್ನಡತನವನ್ನು ಮೆರೆಯುವುದಕ್ಕಿಂತ ಆಂಗ್ಲ ಬಾಷೆಯ ಜಾಯಮಾನದಿಂದ ಕಟ್ಟಿದ ಕನ್ನಡದಂತೆ ಕಾಣುತ್ತಿದೆ. ಉದಾಹರಣೆಗೆ ಈ ದಿನದ (೧೬ ಫೆಬ್ರವರಿ ೨೦೧೧) ಮುಖಪುಟದ ಅಗ್ರ ಸುದ್ದಿಗಳನ್ನು ನೋಡಿ : “ಹೊಸ ವಿವಾದ ತರಂಗ” ಇದು ಆಂಗ್ಲದ ‘ನ್ಯೂ ಸ್ಕ್ಯಾಮ್ ಆಫ್ ಸ್ಪೆಕ್ಟ್ರಂ’ನ ನೇರ ಅನುವಾದ. ಇಂತಹ ಅನೇಕ ಉದಾಹರಣೆಗಳನ್ನು ಕನ್ನಡಿಗರು ಅದಾಗಲೇ ಗಮನಿಸಿರುತ್ತಾರೆ. ಮುದ್ರಣ ಮಾಧ್ಯಮದಲ್ಲಿ ಅನುವಾದ ಎಂಬುದು ಪ್ರಮುಖ ಕೆಲಸ. ಆದರೆ ಅಂತಹ ಅನುವಾದಕರಿಗೆ ಕನ್ನಡ ಭಾಷಾ ಬಳಕೆಯ ಜಾಯಮಾನದ ಪರಿಚಯ ಗಟ್ಟಿಯಾಗಿ ಆಗಬೇಕಿದೆ. ಇದೇ ಮಾತುಗಳನ್ನು ಮುದ್ರಣ ಮಾದ್ಯಮದಲ್ಲಿ ಬರುವ ಜಾಹೀರಾತಿನಲ್ಲಿ ಬಲಸಲಾಗುವ ಕನ್ನಡ ಕುರಿತು ಇನ್ನೂ ಗಟ್ಟಿಯಾಗಿ ಹೇಳಬಹುದು. ಕೆಲವು ಪತ್ರಿಕೆಗಳಂತೂ ಜಾಹೀರಾತುಗಳನ್ನು ಇಂಗ್ಲೀಷಿನಲ್ಲಿಯೇ ಪ್ರಕಟಿಸುತ್ತಿವೆ. ಇಂತಹ ಪತ್ರಿಕೆಗಳ ಮೇಲೆ ನೇರ ಕ್ರಮ ತೆಗೆದುಕೊಳ್ಳುವ ಕಾನೂನು ನಮ್ಮಲ್ಲಿಲ್ಲ. ಆದರೆ ಅಲ್ಲಿನ ಸಂಪಾದಕೀಯ ವಲಯ ಮತ್ತು ಆಡಳಿತ ಸಿಬ್ಬಂದಿಗೆ ಕನ್ನಡದ ಕಾಳಜಿ ಹೆಚ್ಚಾಗಬೇಕಿದೆ ಎಂಬುದಂತೂ ಸತ್ಯ.
ಇಂತಹ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ವೈರುಧ್ಯ ಎಂಬಂತೆ ಸ್ವಚ್ಛ ಕನ್ನಡವನ್ನು ಉಳಿಸುವ ಕೆಲಸವನ್ನು ಅನೇಕ ಸಾಹಿತ್ಯ ಪತ್ರಿಕೆಗಳು ಮಾಡುತ್ತಿವೆ. ಆದರೆ ಅವುಗಳನ್ನು ಕೊಂಡು ಓದುವವರ ಸಂಖ್ಯೆ ಸಣ್ಣದು. ಪ್ರಾಯಶಃ ಇಂದಿನ ದಿನಗಳಲ್ಲಿ ಸ್ವಚ್ಛ ಕನ್ನಡಿಗರು ಎಂಬ ಮಾತೇ ಅಲ್ಪಸಂಖ್ಯಾತರದ್ದಾಗಿದೆಯೇನೋ ಎಂಬ ಅನುಮಾನ ನನ್ನದು.
ಅನೇಕ ಸಂಘ-ಸಂಘಟನೆಗಳು ತನ್ನ ಸದಸ್ಯರಿಗಾಗಿ ಪತ್ರಿಕೆಗಳನ್ನು ತರುತ್ತಿವೆ. ಇಲ್ಲಿ ಆಯಾ ಸಂಘಟನೆಯ ವೃತ್ತಿಪರ ಲೇಖನಕ್ಕೆ ಆದ್ಯತೆ. ಹೀಗಾಗಿ ಇಲ್ಲಿ ಕನ್ನಡವೆಂಬುದು ಕೇವಲ ಭಾಷೆಯಾಗಿ ಬಳಸಲಾಗುವ ಸಾಧನ. ಆದರೆ ಹೀಗೆ ಭಾಷೆಯನ್ನು ಬಳಸುವ ಆಯಾ ಸಂಘಟನೆಯ ಬಹುತೇಕರಿಗೆ ಕನ್ನಡ ಭಾಷೆಯ ಜ್ಞಾನ ಕಡಿಮೆ. ಹೀಗಾಗಿ ಇಂತಹ ಪತ್ರಿಕೆಗಳಲ್ಲಿ ಬರುವ ಭಾಷಾ ಬಳಕೆಯ ತಪ್ಪುಗಳು ಅತಿ ಹೆಚ್ಚು. ಇಂತಹ ಪತ್ರಿಕೆಗಳನ್ನು ಹೊರತರುತ್ತಿರುವ ಎಲ್ಲರೂ ಈ ಬಗ್ಗೆ ಗಮನ ಇಡಬೇಕಾದ್ದು ಕನ್ನಡಕ್ಕೆ ಅಗತ್ಯವಾಗಿದೆ.
ವಿದ್ಯುನ್ಮಾನ ಮಾಧ್ಯಮಗಳು
ಇವುಗಳಲ್ಲಿ ಟೆಲಿವಿಷನ್ ವಾಹಿನಿಗಳನ್ನು ಕುರಿತು ಮೊದಲು ಮಾತಾಡಬೇಕಿದೆ. ಇಂದು ನಮ್ಮ ಟೆಲಿವಿಷನ್ನಿನಲ್ಲಿ ಸುದ್ದಿವಾಹಿನಿ, ಸಾಮಾನ್ಯ ಜನರಂಜನೆಯ ಕಾರ್ಯಕ್ರಮಗಳ ವಾಹಿನಿ ಎಂಬ ಎರಡು ಬಗೆಗಳು ಇವೆ. ಅವುಗಳಲ್ಲಿ ಜನರಂಜನೆಯ ವಾಹಿನಿಯನ್ನು ಮೊದಲು ಗಮನಿಸುವುದಾದರೆ; ಇಲ್ಲಿ ಬರುವ ಬಹುತೇಕ ನಿರೂಪಕರು (ಹಾಡಿನ ಕಾರ್ಯಕ್ರಮ ನಡೆಸಿಕೊಡುವವರು) ಕನ್ನಡವನ್ನು ಕಂಗ್ಲೀಷು ಮಾಡಿದ್ದಾರೆ. ಇವರಾಡುವ ಮಾತಿಗೆ ಇರುವ ತೂಕವೂ ಅಂತಹುದೇ. ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರಿಗೆ ನೇರವಾಗಿ ಇವರ ಭಾಷೆ ತಲುಪುತ್ತಿದೆ. ವಿಶೇಷವಾಗಿ ಖಾಸಗಿ ವಾಹಿನಿಗಳಲ್ಲಿನ ನಿರೂಪಕ/ನಿರೂಪಕಿಯರು ಬಳಸುವ ಭಾಷೆಯನ್ನು ನಿಯಂತ್ರಿಸುವುದು ಕನ್ನಡವನ್ನು ಮುಂದಿನ ತಲೆಮಾರಿಗೆ ಸರಿಯಾಗಿ ದಾಟಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಈ ನಿರೂಪಕರು ಬಳಸುವ ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್ ಬಳಕೆಯಾಗುತ್ತಿದೆ ಎಂಬುದೊಂದು ವಿಷಯವಾದರೆ ಇದರೊಂದಿಗೆ ಕನ್ನಡಕ್ಕೆ ಅನೇಕ ಪದಗಳ ಆಮದು ಸಹ ಆಗುತ್ತಿದೆ. ಈ ಹೊಸ ಪದಗಳಿಂದ ಕನ್ನಡ ಭಾಷೆಗೆ ಹೊಸಪದಗಳು ಸಿಕ್ಕಿವೆ. ಇದು ಸಹ ಬಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾದುದೇ ಆಗಿದೆ. ನಾವು ಕಂಪ್ಯೂಟರ್ ಎಂಬ ಪದಕ್ಕೆ ಗಣಕ ಯಂತ್ರ ಅನ್ನುವುದಕ್ಕಿಂತ ಅದನ್ನು ಕಂಪ್ಯೂಟರ್ ಎನ್ನುವುದೇ ಹೆಚ್ಚು ಸೂಕ್ತ. ಹಾಗೆಯೇ ಪೋಲೀಸರಿಗೆ ಆರಕ್ಷಕರು ಎನ್ನುವುದಕ್ಕಿಂತ ಪೋಲೀಸ್ ಎಂದೇ ಬಳಸುವುದು ಅನುಕೂಲ. ಭಾಷೆಯ ದೃಷ್ಟಿಯಿಂದ ನಮ್ಮಲ್ಲಿ ಅಷ್ಟು ಉದಾರತೆ ಇರಲೇಬೇಕಾಗುತ್ತದೆ. ಎಲ್ಲಾ ಪದಗಳನ್ನು ಕನ್ನಡಕ್ಕೆ ತರುತ್ತೇವೆ ಎಂದು, ಸಂಸ್ಕೃತ ಪದಗಳನ್ನು ಬಳಸುವುದಕ್ಕಿಂತ, ಅಂತಹ ಪದಗಳನ್ನು ಮೂಲ ಸ್ವರೂಪದಲ್ಲಿಯೇ ಬಳಸುವುದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಆರೋಗ್ಯಕರ.
ಇನ್ನು ಇದೇ ವಾಹಿನಿಯಲ್ಲಿ ಬರುತ್ತಿರುವ ಧಾರಾವಾಹಿಗಳಿಗೆ ಬರೋಣ. ಇಲ್ಲಿ ಕನ್ನಡವನ್ನು ಎಚ್ಚರಿಕೆಯಿಂದ ಬಳಸುವ ಬರಹಗಾರರ ಮತ್ತು ನಿರ್ದೇಶಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತೆಯೇ ಕಲಾವಿದರಲ್ಲಿಯೂ ಕನ್ನಡ ಬಳಕೆಯ ಚಚ್ಚರಗಳು ಕ್ಷೀಣಿಸುತ್ತಿವೆ. ಹೀಗಾಗಿ ನಿರೂಪಕ/ನಿರೂಪಕಿಯರ ಸ್ಥಿತಿಯೇ ಬಹುತೇಕ ಕಲಾವಿದರದ್ದೂ ಆಗಿದೆ. ಈ ವಿಷಯ ಕುರಿತಂತೆ ಆಯಾ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರು ವಿಶೇಷ ಕಾಳಜಿ ವಹಿಸಬೇಕಾಗಿದೆ. ಇದಲ್ಲದೆ ಈಚೆಗೆ ವಾಹಿನಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂಲಕತೆಗಳನ್ನು ಸಿದ್ಧಪಡಿಸಿಕೊಳ್ಳುವ ಸಮಯವಿಲ್ಲದ ಕಾರಣ ಇತರ ಭಾಷೆಗಳಿಂದ ಎರವಲು ಕತೆಗಳನ್ನು ತೆಗೆದುಕೊಂಡು ಪುನರ್‌ನಿರ್ಮಾಣ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಕಾರ್ಯಕ್ರಮಗಳ ನಿರ್ದೇಶಕರು ಬಹುಮಟ್ಟಿಗೆ ಪರಭಾಷೆಯವರೇ ಆಗಿರುತ್ತಾರೆ. ಆದ್ದರಿಂದ ಕಲಾವಿದರು ಬಳಸುವ ಕನ್ನಡದ ಮೇಲೆ ಅಧಿಕಾರಸ್ಥವಾಗಿ ಮಾತಾಡುವುದು ಅಂತಹ ಪರಭಾಷಿಕರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿಯೂ ನಮ್ಮ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಕಲಾವಿದರ ಕನ್ನಡಕ್ಕೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಈ ದೃಷ್ಟಿಯಿಂದ ಕನ್ನಡ ವಾಹಿನಿಗಳಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಕನ್ನಡಿಗರನ್ನೇ ನಿರ್ದೇಶಕರನ್ನಾಗಿ ಆಯ್ದುಕೊಳ್ಳಬೇಕು ಎಂದು ಕನ್ನಡಿಗರೆಲ್ಲರೂ ವಾಹಿನಿಗಳ ಮೇಲೆ ಒತ್ತಡ ತರಬೇಕಾಗುತ್ತದೆ.
ಇನ್ನು ಸುದ್ದಿ ವಾಹಿನಿಗಳ ವಿಷಯ. ಇಲ್ಲಿ ಸರ್ಕಾರೀ ಸುದ್ದಿವಾಹಿನಿಗಳದು ಒಂದು ಬಗೆಯಾದರೆ ಖಾಸಗಿ ಸುದ್ದಿವಾಹಿನಿಗಳಲ್ಲಿನ ಸುದ್ದಿ ಬಿತ್ತರ ಮತ್ತೊಂದು ಬಗೆ. ಇಲ್ಲಿ ಬಳಸಲಾಗುವ ಕನ್ನಡದಲ್ಲಿ ವಾಹಿನಿ ಖಾಸಗಿಯದೋ ಸರ್ಕಾರಿಯೋ ಎಂಬ ಬಗೆಯಲ್ಲಿಯೇ ವ್ಯತ್ಯಾಸಗಳಾಗುತ್ತವೆ. ಸರ್ಕಾರೀ ವಾಹಿನಿಯಲ್ಲಿನ ಸುದ್ದಿಯನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಖಾಸಗಿ ವಾಹಿನಿಗಳ ಸುದ್ದಿ ಬಿತ್ತರವನ್ನು ಕುರಿತು ಮಾತಾಡುವುದೇ ಸೂಕ್ತ. ಇಲ್ಲಿ ಹಳಬರಿದ್ದಾರೆ. ಅವರ ಬಗ್ಗೆ ನಮ್ಮಗ್ಯಾವ ತಕರಾರೂ ಇಲ್ಲ. ಅವರು ಕನ್ನಡಿಗರು. ಆದರೆ ಹೊಸ ತಲೆಮಾರಿನ ಸುದ್ದಿ ವಾಚಕರು ಕನ್ನಡ ಬಲ್ಲವರಲ್ಲ. ಇದಕ್ಕೆ ಅದಾಗಲೇ ತಿಳಿಸಿದ ಅವರು ವಿದ್ಯಾಭ್ಯಾಸ ಕಲಿತ ಕ್ರಮವೇ ಕಾರಣವಾಗಿರುತ್ತದೆ. ಹೀಗಾಗಿ ಅಲ್ಪಪ್ರಾಣ-ಮಹಾಪ್ರಾಣಗಳು ಮಾತ್ರವೇ ಅಲ್ಲದೆ ಕನ್ನಡದ ಅನೇಕ ಶಬ್ದಗಳು ಹೊಸಬರ ಬಾಯಲ್ಲಿ ಅಪಭ್ರಂಶಗಳಾಗುತ್ತಾ ಇವೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಗಳಲ್ಲಿ ಇರುವ ಹಳಬರು ಹೊಸಬರನ್ನು ಶೃತಿ ಪಡಿಸುವುದು ಅಗತ್ಯ.
ಇನ್ನು ಅಂತರ್ಜಾಲ ಹಾಗೂ ಮೊಬೈಲ್ ಜಗತ್ತಿಗೆ ಬಂದರೆ, ಅಲ್ಲಿ ಕನ್ನಡದ ಬಳಕೆಗೆ ಅನೇಕ ಪ್ರಯತ್ನಗಳು ಹಲವು ದಶಕಗಳಿಂದ ಆಗುತ್ತಿವೆ. ಆದರೆ ಸಧ್ಯಕ್ಕೆ ವಿಂಡೋಸ್ ಮತ್ತು ಲೀನಕ್ಸ್ ಹೊರತು ಪಡಿಸಿ ಇನ್ನಿತರ ಕಂಪ್ಯೂಟರ್ ಭಾಷೆಗಳಾದ ಮ್ಯಾಕ್ ಮುಂತಾದವುಗಳಲ್ಲಿ ಕನ್ನಡದ ಬಳಕೆ ಆಗುತ್ತಿಲ್ಲ. ಇದಕ್ಕಾಗಿ ನಾವು ನಮ್ಮ ಕನ್ನಡ ತಂತ್ರಾಂಶಗಳನ್ನು ಸಿದ್ಧಪಡಿಸಬೇಕಿದೆ. ಪ್ರಾಯಶಃ ‘ಯೂನಿಕೋಡ್’ ಭಾಷೆಯನ್ನು ಸರ್ಕಾರವು ಸಾರ್ವತ್ರಿಕ ಬಳಕೆಗೆ ತಂದು, ಅಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಲ್ಲಿ ಸಾಕಷ್ಟು ಅಭಿವೃದ್ಧಿ ಆಗಬಹುದು ಎಂಬ ಸಲಹೆಗಳು ಬಂದಿವೆ. ಆ ನಿಟ್ಟಿನಲ್ಲಿ ಕೆಲಸಗಳಾಗುವುದು ಬಾಕಿ ಇವೆ. ಈ ಬದಲಾವಣೆ ಬಂದಲ್ಲಿ ನಮ್ಮ ಎಲ್ಲಾ ಸಂಚಾರಿ ದೂರವಾಣಿಗಳಲ್ಲಿಯೂ ಕನ್ನಡವನ್ನು ಬಳಕೆಗೆ ತರುವುದು ಸಾಧ್ಯವಾಗಬಹುದು. ಇಂದಿನ ತಲೆಮಾರು ಅತಿಹೆಚ್ಚು ಬಲಸುತ್ತಿರುವ ಸಂಚಾರಿ ದೂರವಾಣಿ ಹಾಗೂ ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆಯನ್ನು ಸರಿಪಡಿಸುವುದು ಆದ್ಯತೆಯ ಮೇರೆಗೆ ಆಗಬೇಕಾದ ಕೆಲಸ. ಹಾಗಾದಾಗ ಮಾತ್ರ ಕನ್ನಡವನ್ನು ಹೊಸ ತಂತ್ರಜ್ಞಾನದಲ್ಲಿಯೂ ಶಾಶ್ವತವಾಗಿ ಉಳಿಸುವುದು ಸಾಧ್ಯ.
ಶ್ರವ್ಯ ಮಾಧ್ಯಮ
ಈ ಶ್ರವ್ಯ ಮಾಧ್ಯಮದಲ್ಲಿಯೂ ಸರ್ಕಾರೀ ಆಕಾಶವಾಣಿ, ಖಾಸಗಿ ಎಫ್.ಎಂ ಮತ್ತು ಕಮ್ಯುನಿಟಿ ರೇಡಿಯೋ ಎಂಬ ಮೂರು ಬಗೆ ಇದೆ. ಇವುಗಳಲ್ಲಿ ಸರ್ಕಾರಿ ವಾಹಿನಿಯಲ್ಲಿನ ಕನ್ನಡದ ಬಳಕೆ ಅಚ್ಚುಕಟ್ಟಾಗಿದ್ದರು ಅಲ್ಲಿನ ನಿರ್ಜೀವ ಅವಧಿ (ಡೆಡೆ ಏರ್ ಟೈಂ) ಹೆಚ್ಚಾಗಿರುವುದರಿಂದ ಇಂದು ಆಕಾಶವಾಣಿ ಕೇಳುಗರ ಸಂಖ್ಯೆ ಕೇವಲ ಹಳ್ಳಿಗಳಲ್ಲಿ ಮಾತ್ರ ಇರಬಹುದು. ಇನ್ನು ನಗರ ಜೀವನದ ರೇಡಿಯೋ ಕೇಳುಗರಲ್ಲಿ ಬಹುತೇಕರು ತಮ್ಮ ವಾಹನಗಳಲ್ಲಿ ಸಾಗುವಾಗ ಎಫ್.ಎಂ. ರೇಡಿಯೋ ಕೇಳುತ್ತಾರೆ. ಇಲ್ಲಿನ ನಿರೂಪಕರದ್ದೂ ಅದಾಗಲೇ ತಿಳಿಸಿದ ಟೆಲಿವಿಷನ್ ನಿರೂಪಕರ ಸಮಸ್ಯೆಯೇ. ಈ ಎಫ್.ಎಂ. ನಿರೂಪಕರು ಯಾವುದೇ ಅರ್ಥವಿಲ್ಲದ ಮಾತುಗಳನ್ನು ಕೆಲವೇ ಕ್ಷಣಗಳಲ್ಲಿ ಆಡಬೇಕು ಎಂಬ ನಿಯಮಕ್ಕೆ ಒಳಪಟ್ಟಿರುತ್ತಾರೆ. ಹಾಗಾಗಿ ಅವರ ಮಾತುಗಳಲ್ಲಿ ಬಳಸುವ ಕನ್ನಡವೂ ಅರ್ಥ ಕಳೆದುಕೊಳ್ಳುತ್ತಾ ಇದೆ. (ಈ ಮಾತಿಗೆ ಅಪವಾದಗಳಿದೆ ಎಂಬುದನ್ನು ಮರೆಯಬಾರದು) ವಿಶೇಷವಾಗಿ ಎಫ್.ಎಂ. ರೇಡಿಯೋ ಮತ್ತು ಟೆಲಿವಿಷನ್ ನಿರೂಪಕರಿಗಾಗಿಯೇ ಕನ್ನಡ ಕಲಿಕಾ ಶಿಬಿರವನ್ನು ನಡೆಸಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ.
ಇನ್ನು ಕಮ್ಯುನಿಟಿ ರೇಡಿಯೋಗಳು. ಇಲ್ಲಿ ರೈತರಿಗೆ ಮತ್ತು ಒಂದು ಸಮುದಾಯಕ್ಕೆ ಉಪಯುಕ್ತವಾಗುವ ಸುದ್ದಿಗಳನ್ನು ಬಿತ್ತರಿಸುವ ಪ್ರಯೋಗಗಳು ಮಾತ್ರ ಆಗುತ್ತಿವೆ. ಈ ಮಾಧ್ಯಮವಿನ್ನೂ ತನ್ನ ದೈತ್ಯ ಶಕ್ತಿಯನ್ನು ಪ್ರದರ್ಶಿಸಬೇಕಿದೆ.
ರಸ್ತೆ ಬದಿಯ ಫಲಕಗಳಲ್ಲಿ ಹೆಚ್ಚಾಗಿ ಕಾಣಿಸುವುದು ಜಾಹೀರಾತುಗಳು. ಈ ಜಾಹೀರಾತುಗಳು ಮುದ್ರಣ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿನ ತದ್ರೂಪು. ಇಲ್ಲಿಯೂ ಪ್ರಧಾನವಾಗಿ ಇರುವುದು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ ಮಾಡುವವರ ಸಮಸ್ಯೆ. ಈ ಸಮಸ್ಯೆಯನ್ನು ನೀಗಲು ಬೀದಿ ಬದಿಯ ಫಲಕಗಳಿಗೆ ಒಪ್ಪಿಗೆ ಕೊಡುವ ನಗರಸಭೆ ಮುಂತಾದ ಇಲಾಖೆಗಳು ಕನ್ನಡವು ಶುದ್ಧವಾಗಿದೆಯೇ ಎಂದು ಪರಿಶೀಲಿಸುವ ಅಭ್ಯಾಸವೊಂದನ್ನು ತರಬೇಕಿದೆ. ಇದಲ್ಲದೆ ಅನೇಕರು ಆಂಗ್ಲಭಾಷೆಯನ್ನೇ ಬಳಸಿದ ಫಲಕಗಳನ್ನು ನಮ್ಮ ನಾಡಿನ ಬೀದಿಗಳಲ್ಲಿ ಹಾಕುತ್ತಾ ಇದ್ದಾರೆ. ಇದನ್ನು ತಪ್ಪಿಸಲು ಕಾನೂನಿನ ಮೊರೆ ಹೋಗುವುದಕ್ಕಿಂತ ಸಾರ್ವಜನಿಕ ಹೋರಾಟದಿಂದ ಮಾತ್ರ ಸಾಧ್ಯ.
ಮುಂದೆ?
ಇದು ಎಂದಿಗೂ ಸ್ಪಷ್ಟ ಉತ್ತರ ಸಿಗದ ಹಾದಿ. ಈ ಹಾದಿಯಲ್ಲಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಅದಕ್ಕೆ ಕನ್ನಡವನ್ನು ಹಾಗೂ ಕನ್ನಡಿಗರನ್ನು ಬರುವ ಕಾಲಕ್ಕೆ ಸಿದ್ಧಗೊಳಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗಣಕಲೋಕದಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಸ್ಥಾಪಿಸುವುದು ಹಾಗೂ ಸಂಚಾರಿ ದೂರವಾಣಿಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವಂತಹ ವ್ಯವಸ್ಥೆ ತರುವುದು ಮುಖ್ಯವಾದುದಾಗಿದೆ. ಅಲ್ಲಿಂದಾಚೆಗೆ ನಮ್ಮ ಪ್ರಾಥಮಿಕ ಶಾಲೆಯಿಂದ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದು ಮಾತ್ರವೇ ನಮ್ಮ ಮುಂದಿನ ತಲೆಮಾರನ್ನು ಕನ್ನಡದಲ್ಲಿ ಉಳಿಸಿಕೊಳ್ಳಲು ಇರುವ ಏಕೈಕ ದಾರಿ. ಈ ದಾರಿಗೆ ಇರುವ ಎಲ್ಲಾ ಅಡ್ಡಿಗಳನ್ನೂ ನಿವಾರಿಸಿಕೊಳ್ಳಲು ನಾವೆಲ್ಲರೂ ಕೆಲಸ ಮಾಡಬೇಕಿದೆ. ಇದು ಕೇವಲ ಸರ್ಕಾರಗಳಿಂದ ಆಗುವ ಕೆಲಸವಲ್ಲ. ಸಾರ್ವಜನಿಕರು ನೇರವಾಗಿ ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕಿದೆ. ನಮ್ಮ ಅಸ್ಮಿತೆಯನ್ನು, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಭಾಷೆ ಉಳಿದಾಗ ಮಾತ್ರ ಸಾಧ್ಯ ಎಂಬುದನ್ನು ನಾವು ಯಾರೂ ಮರೆಯಬಾರದು.
೧೬ ಫೆಬ್ರವರಿ ೨೦೧೧
ಬೆಂಗಳೂರು
* * *

3 Responses to “ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ – ನಮ್ಮ ಮುಂದಿರುವ ಸವಾಲುಗಳು”


  1. 2 kaveri July 23, 2011 at 8:04 am

    how to effect the television for children ?

  2. 3 kaveri July 23, 2011 at 7:00 am

    i want samooha madyama dindda makkalige aaguva parinamagalu ?


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 107,206 ಜನರು

%d bloggers like this: