ಕನ್ನಡ ಪರಿಸರ ನಿರ್ಮಾಣ – ಸಾಧ್ಯತೆಗಳು ಹಾಗೂ ಸವಾಲುಗಳು

ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ೧೨ ಮಾರ್ಚ್ ೨೦೧೧ ರಂದು ಮಂಡಿಸಲಾದ ಪ್ರಬಂಧ

(ಲೇಖನ ಬರೆದ ದಿನಾಂಕ : ೭ ಮಾರ್ಚ್ ೨೦೧೧ ರಿಂದ ೧೧ ಮಾರ್ಚ್ ೨೦೧೧)

ಮೊದಲಿಗೆ

ವೇದಿಕೆಯ ಮೇಲಿರುವ ವಿದ್ವಜ್ಜನರಿಗೆ, ಸಭೆಯಲ್ಲಿರುವ ಸಜ್ಜನರಿಗೆ ಎಲ್ಲಾ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು. ಎರಡನೆಯ ವಿಶ್ವಕನ್ನಡ ಸಮ್ಮೇಳನದ, ಬೆಳಗಾವಿಯ ಈ ಮಂಟಪದಲ್ಲಿ ನಿಮ್ಮಂತಹ ಸಹೃದಯರ ಎದುರಿಗೆ ನನ್ನ ಅಭಿಪ್ರಾಯ ಮಂಡಿಸಲು, ಚರ್ಚಿಸಲು ಅನುವು ಮಾಡಿಕೊಟ್ಟ ಎಲ್ಲರಿಗೆ ವಂದನೆಗಳು. ನಿಮ್ಮೆದುರಿಗೆ ಇಂದು ‘ಕನ್ನಡ ಪರಿಸರ ನಿರ್ಮಾಣ – ಸಾಧ್ಯತೆಗಳು ಹಾಗೂ ಸವಾಲುಗಳು’ ಎಂಬ ವಿಷಯದ ಬಗ್ಗೆ ನನ್ನ ಪ್ರಬಂಧವನ್ನು ಮಂಡಿಸುತ್ತಾ ಇದ್ದೇನೆ.

ಈ ವಿಷಯವನ್ನು ಅದಾಗಲೇ ಅನೇಕರು ಅನೇಕ ಕಡೆಗಳಲ್ಲಿ ಚರ್ಚಿಸಿದ್ದಾರೆ. ಬರೆದಿದ್ದಾರೆ. ಅವೆಲ್ಲವುಗಳಲ್ಲಿ ನನ್ನ ಕಿವಿಗೆ ತಾಗಿದ ಮತ್ತು ಕಣ್ಣಿಗೆ ಒದಗಿದ ವಿವರಗಳು ಅತ್ಯಲ್ಪ. ಹೀಗಾಗಿ ನನ್ನ ಅರಿವಿನ ಪರಿಧಿಗೆ ದಕ್ಕಿದ ವಿವರಗಳನ್ನು ಇಟ್ಟುಕೊಂಡು ಈ ಪ್ರಬಂಧ ಸಿದ್ಧಪಡಿಸಿದ್ದೇನೆ. ಒಪ್ಪಿಸಿಕೊಳ್ಳಿ

 

ಪ್ರವೇಶ

ಪರಿಸರವನ್ನು ಕಾಪಾಡುವುದೇ ಬೃಹತ್ ಕಷ್ಟವಾಗಿದೆ ಎಂದು ಇಡೀ ಜಗತ್ತು ಮಾತಾಡುತ್ತಾ ಇರುವ ಕಾಲಘಟ್ಟದಲ್ಲಿ ನಾವು ಕನ್ನಡ ಪರಿಸರ ನಿರ್ಮಾಣವನ್ನು ಕುರಿತು ಮಾತಾಡುವುದು ಸುಲಭವೇನಲ್ಲ. ಈ ಸಂದರ್ಭದಲ್ಲಿ ಪರಿಸರ ಎಂದರೆ ಏನೆಂಬ ಪ್ರಶ್ನೆಗೆ ಉತ್ತರ ಹುಡುಕಿ, ಅಲ್ಲಿ ಕನ್ನಡ ಪರಿಸರ ಹೇಗಿರಬೇಕೆಂದು ನಾವು ಸ್ಪಷ್ಟ ಪಡಿಸಿಕೊಳ್ಳಬೇಕಾಗಿದೆ.

ಪರಿ ಎಂಬುದೇ ಒಂದು ಗಡಿ. ಯಾವುದೇ ಗಡಿಯ ಒಳಗೆ ಇರುವ ಜಗತ್ತನ್ನು ಆ ಜಗತ್ತಿನ ಪರಿಸರ ಎಂದು ಗುರುತಿಸುತ್ತೇವೆ. ಹಾಗಾದರೆ ಕನ್ನಡದ ಪರಿಸರವನ್ನು ಗುರುತಿಸುವುದು ಹೇಗೆ? ೧೯೫೬ರಲ್ಲಿ ಆದ ಭಾಷಾವಾರು ಪ್ರಾಂತ್ಯ ವಿಂಗಡಣೆ ಎಂಬುದು ಕರ್ನಾಟಕಕ್ಕೆ ಮಾತ್ರ ಗಡಿಗಳನ್ನು ಬರೆದಿದೆ. ಹೀಗಾಗಿ ಕನ್ನಡ ಪರಿಸರ ಎಂದರೆ ಕರ್ನಾಟಕದ ಗಡಿಯ ಒಳಗಿನ ವಿವರ ಎಂದರೆ ಅದು ಬೃಹತ್ ಸುಳ್ಳಾಗುತ್ತದೆ. ಕನ್ನಡಿಗರು ಕೇವಲ ಕರ್ನಾಟಕದಲ್ಲಿ ಇಲ್ಲ. ವಿಶ್ವದಾದ್ಯಂತ ಹರಡಿಕೊಂಡಿದ್ದಾರೆ. ರೆಕ್ಕೆ ಬಲಿತ ಹಕ್ಕಿಗೆ ಗಡಿಗಳ ಹಂಗಿಲ್ಲ. ಅದು ಹಾರುತ್ತಲೇ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಕನ್ನಡದಂತಹ ಎರಡುಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಭಾಷೆಯೂ ಹಾಗೆಯೇ. ಅದರ ವಿಸ್ತಾರ ಜಗತ್ತಿನ ಎರಡೂ ಮಗ್ಗುಲುಗಳಲ್ಲಿ ವಿಕಸಿತಗೊಂಡಿದೆ. ಹೀಗಾಗಿ ಕನ್ನಡ ಮಾತಾಡುವ ಯಾವುದೇ ಎರಡು ಜೀವಗಳು ಅದೆಲ್ಲಿಯೇ ಇದ್ದರೂ ಅದು ಕನ್ನಡದ ಪರಿಸರ ಎನ್ನಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಇದು ಬರೀ ಕನ್ನಡ ಸಮ್ಮೇಳನವಲ್ಲ, ವಿಶ್ವಕನ್ನಡ ಸಮ್ಮೇಳನ! ಕನ್ನಡಿಗನ ವಿಶ್ವವನ್ನು ನಾವು ನೋಡಬೇಕಾಗಿದೆ. ಕನ್ನಡಿಗ ಕಟ್ಟಿಕೊಂಡಿರುವ ಪರಿಸರವನ್ನು ಗಮನಿಸಬೇಕಿದೆ.

ಈ ಹಿನ್ನೆಲೆಯಲ್ಲಿ ಕನ್ನಡ-ಕನ್ನಡಿಗ ಎಂಬ ಪರಿಸರವನ್ನು ಹೀಗೆ ಗುರುತಿಸಬಹುದು.

೧. ಕರ್ನಾಟಕದ ಗಡಿಯ ಒಳನಾಡು.

೨. ಕರ್ನಾಟಕದ ಗಡಿನಾಡು.

೩. ಕರ್ನಾಟಕದ ಗಡಿಯಾಚೆಗಿನ ಕನ್ನಡಿಗನ ನಾಡು.

೪. ಈ ದೇಶದ ಗಡಿಯ ಒಳಗೆ ಅನೇಕ ಕಡೆ ಖಲಾಸಿಗಳನ್ನೂರಿದ ಕನ್ನಾಡಿಗನ ನಾಡು.

೫. ದೇಶದಾಚೆಗಿನ ಕನ್ನಾಡಿಗನ ನಾಡು.

ಈ ಎಲ್ಲಾ ನಾಡುಗಳನ್ನೂ ಪ್ರತ್ಯೇಕವಾಗಿ ಗಮನಿಸುತ್ತಾ ಕನ್ನಡ ಪರಿಸರಕ್ಕೆ ಸಧ್ಯದ ಸಮಕಾಲೀನ ಎಂದು ಗುರುತಿಸಲಾಗುವ ಕಾಲಘಟ್ಟದಲ್ಲಿ ಇರುವ ಸಮಸ್ಯೆಗಳು, ಬಿಕ್ಕಟ್ಟುಗಳು ಮತ್ತು ಅವುಗಳ ಪರಿಹಾರಕ್ಕೆ ಇರುವ ಮಾರ್ಗೋಪಾಯಗಳನ್ನು ಗುರುತಿಸುವ ಪ್ರಯತ್ನ ಮಾಡಬೇಕಿದೆ.

ಈ ವಿವರಗಳಲ್ಲದೆ ಕನ್ನಡ ಎಂಬ ನುಡಿಗಟ್ಟು ಸ್ವತಃ ಅನೇಕ ಆವರಣಗಳಲ್ಲಿ ಸುಳಿದು ಅನೇಕ ಸೊಗಡಾಗಿ ನಮ್ಮ ಎದುರಿಗಿದೆ. ಈ ಸೊಗಡುಗಳಿಗೆ ಕಾರಣವಾದದ್ದು ಕನ್ನಡದ ಸೋದರ ಭಾಷೆಗಳು. ಈ ಕೊಡು ಕೊಳುವಿಕೆಯಿಂದಲೇ ಕನ್ನಡಕ್ಕೆ ಜೀವಂತಿಕೆ. ಈ ಹಿನ್ನೆಲೆಯಲ್ಲಿ ನಮ್ಮ ಸೋದರ ಭಾಷೆಗಳ ಪರಿಸರವನ್ನೂ ಗಮನಿಸುವುದು ಅಗತ್ಯ.

ಇವುಗಳ ಜೊತೆಗೆ ಆಳುವ ಅಥವಾ ಅಧಿಕಾರದ ಅಥವಾ ಯಜಮಾನ ಭಾಷೆಗಳು ಸಹ ಕನ್ನಡದ ಮೇಲೆ ಕಾಲದಿಂದ ಕಾಲಕ್ಕೆ ಸವಾರಿ ಮಾಡುತ್ತಲೇ ಇವೆ. ಈ ಭಾಷೆಗಳಿಂದ ಕನ್ನಡಕ್ಕೆ ಆಗಿರುವ ಆಮದುಗಳಿಂದಾಗಿಯೂ ಕನ್ನಡದ ಪರಿಸರದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಇವುಗಳನ್ನೂ ನಮ್ಮ ಕನ್ನಡ ಪರಿಸರ ನಿರ್ಮಾಣದ ಸಂದರ್ಭದಲ್ಲಿ ಗುರುತಿಸಬೇಕಿದೆ.

ಸೊಗಡು ಮತ್ತು ಯಜಮಾನ ಭಾಷೆಗಳ ಜೊತೆಗೆ ಆಧುನಿಕ ಕಾಲಘಟ್ಟದಲ್ಲಿ ನಮ್ಮೆದುರಿಗೆ ಆಧುನಿಕ ತಂತ್ರಜ್ಞಾನ ಮತ್ತು ಆಧುನಿಕ ಬದುಕು ಅನೇಕ ಹೊಸ ಸವಾಲುಗಳನ್ನು ತಂದಿಟ್ಟಿದೆ. ಇದರಿಂದಾಗಿಯೂ ಕನ್ನಡದ ಪರಿಸರದಲ್ಲಿ ತಲ್ಲಣಗಳು-ತವಕಗಳು ಹುಟ್ಟಿಕೊಂಡಿವೆ. ಅವುಗಳನ್ನೂ ಸಹ ನಾವು ಗುರುತಿಸಿ, ಆ ತಲ್ಲಣಗಳನ್ನು ತಪ್ಪಿಸುವತ್ತ ಯೋಚಿಸಬೇಕಿದೆ.

ಈ ವರ್ಗೀಕರಣಗಳ ಆಚೆಗೆ ನಮ್ಮ ಬರಹದ ಭಾಷೆ ಮತ್ತು ಮಾತು ಕಟ್ಟುವ ಭಾಷೆಯ ನಡುವೆ ಅನೇಕ ಅಂತರಗಳು ಕಳೆದ ಕೆಲವು ದಶಕಗಳಲ್ಲಿ ಆಗಿವೆ. ಇದಕ್ಕೆ ಕಾರಣಗಳು ಭಿನ್ನ. ಆ ಕಾರಣಗಳನ್ನು ಗಮನಿಸುತ್ತಾ ಆಧುನಿಕ ಕಾಲಘಟ್ಟಕ್ಕೆ ಹೊಂದುವ ಭಾಷಾ ಅಧ್ಯಯನದತ್ತಲೂ ನೋಡಬೇಕಿದೆ.

ಈ ಎಲ್ಲಾ ವರ್ಗೀಕರಣಗೊಂಡ ಜಗತ್ತನ್ನು ಪ್ರತ್ಯೇಕವಾಗಿ ನೋಡುತ್ತಾ ‘ಕನ್ನಡ ಪರಿಸರ’ವನ್ನು ತಿಳಿಯುವ ಪ್ರಯತ್ನ ಮಾಡೋಣ.

(ಈ ಹಾದಿಯಲ್ಲಿ ಈ ಪ್ರಬಂಧವು ಅನೇಕ ಜ್ಞಾನಶಿಸ್ತುಗಳಲ್ಲಿ ಇಣುಕಿ ನೋಡಬೇಕಿದೆ. ಹಾಗಾಗಿ ಇದು ಸುದೀರ್ಘ ಎನಿಸಿದರೆ ಮತ್ತು ಇನ್ನಿತರ ಬಂಧುಗಳ ವಿಷಯಗಳ ಒಳಗೆ ಹಣಿಕಿಕ್ಕಿದರೆ ಕ್ಷಮೆ ಇರಲಿ.)

·          

ವಿದೇಶಿ ಕನ್ನಡಿಗರು

ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಜನ ದೇಶದಿಂದಾಚೆಗೆ ಕನ್ನಡವನ್ನು ಕೊಂಡೊಯ್ದಿದ್ದಾರೆ. ಅನ್ನದ ಅಗತ್ಯ ಈ ನಮ್ಮ ಕನ್ನಡ ಬಂಧುಗಳನ್ನು ಸಮುದ್ರ ದಾಟಲು ಪ್ರೇರೇಪಿಸಿದೆ ಎಂಬುದು ಸತ್ಯವಾದರೂ ಈ ಬಂಧುಗಳು ತಾವಿರುವ ಜಗತ್ತಿನಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು ಅತೀವ ಆಸಕ್ತಿ ತೋರುತ್ತಾ ಇದ್ದಾರೆ. ಇದಕ್ಕೆ ಕನ್ನಡದ ಅಸ್ಮಿತೆಯೊಂದೇ ಕಾರಣವಲ್ಲ. ಕನ್ನಡ ಸಂಸ್ಕೃತಿಗೆ ಇರುವ ಶಕ್ತಿಯನ್ನು ಅವರು ಸ್ವತಃ ಅರಿತವರು. ಹೀಗಾಗಿ ಅದೇ ಸಂಸ್ಕೃತಿಯ ಧಾರೆ ತಮ್ಮ ಮುಂದಿನ ತಲೆಮಾರಿಗೆ ಸಾಗಬೇಕು ಎಂಬುದು ಅವರ ಆಶಯ. ಇದಕ್ಕಾಗಿಯೇ ಮಧ್ಯಪ್ರಾಚ್ಯವೋ, ಅಮೇರಿಕಾ ಖಂಡವೋ, ಯೂರೋಪಿನ ಯಾವುದೋ ಮೂಲೆಯಲ್ಲಿರುವ ಕನ್ನಡಿಗ ತನ್ನ ಸುತ್ತ ಇರುವ ತನ್ನ ಸೊಲ್ಲರಿಮೆಗಳನ್ನು ಸೇರಿಸಿಕೊಂಡು ಸಂಘ ಕಟ್ಟಿಕೊಳ್ಳುತ್ತಾನೆ. ಆ ಸಂಘಟನೆಗಳಲ್ಲಿ ಕೆಲವೇ ಗಂಟೆಗಳಾದರೂ ಕೇಳುವ ತನ್ನ ಭಾಷೆಯನ್ನು ಆತ ಆನಂದಿಸುತ್ತಾನೆ. ಈ ಕನ್ನಡಿಗನಿಗೆ ತನ್ನ ಕನ್ನಡ ಪರಿಸರವನ್ನು ನಿರಂತರವಾಗಿ ಕಾಯ್ದುಕೊಳ್ಳುವ ಅವಸರವಿದೆ. ಹುಕಿ ಇದೆ. ಅದಕ್ಕಾಗಿ ಹಲವು ದೇಶಗಳಲ್ಲಿರುವ ಕನ್ನಡಿಗರು ತಾವು ಕಟ್ಟಿಕೊಂಡ ಸಂಘಗಳ ನೆರವು ಪಡೆದು ತಮ್ಮ ಮುಂದಿನ ತಲೆಮಾರಿಗೆ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡುತ್ತಾ ಇದ್ದಾರೆ. ಈ ಚಟುವಟಿಕೆ ಪ್ರತೀ ದೇಶದಲ್ಲಿಯೂ ವಿಭಿನ್ನವಾಗಿ ಆಗುತ್ತಿದೆ. ಇದರಿಂದಾಗಿ ಅಲ್ಲಿನ ಹೊಸ ತಲೆಮಾರಿಗೆ ಕನ್ನಡದ ಪರಿಚಯ ಆಗುತ್ತಿದೆಯಾದರೂ ಕನ್ನಡವು ಒಂದು ಭಾಷೆಯಾಗಿ ಹಾಗೂ ಸಂಸ್ಕೃತಿಯಾಗಿ ತಲುಪುತ್ತಿಲ್ಲ. ಇದು ಅಲ್ಲಿನ ‘ಕನ್ನಡಿಗ’ನಿಗೆ ಆತಂಕವನ್ನು ಹುಟ್ಟಿಸುತ್ತಿದೆ. ತನ್ನ ಮುಂದಿನ ತಲೆಮಾರು ಮತ್ಯಾವುದೂ ಸಂಸ್ಕೃತಿಯಲ್ಲಿ ಕಳೆದು ಹೋದರೆ ತನ್ನ ಪರಂಪರೆಯ ಮುಂದುವರಿಕೆ ನಿಲ್ಲುತ್ತದೆ ಎಂಬ ಪ್ರಶ್ನೆ ಆತನನ್ನು ಕಾಡುತ್ತದೆ. ಹೀಗಾಗಿಯೇ ಆತ ತನ್ನ ಮುಂದಿನ ತಲೆಮಾರಿಗೂ ಕನ್ನಡವು ಹರಿಯಲಿ ಎಂದು ಬಯಸುತ್ತಾನೆ. ಇಂತಲ್ಲಿ ಇರುವ ಸಮಸ್ಯೆಗಳನ್ನು ಸರಳವಾಗಿ ಹೀಗೆ ಕ್ರೋಢೀಕರಿಸಬಹುದು ಇಂತಿವೆ.

೧. ಕನ್ನಡಿಗರು ಒಂದೆಡೆ ಸೇರುವುದಕ್ಕೆ ಬೇಕಾದ ಆವರಣದ ಕೊರತೆ.

೨. ಮುಂದಿನ ತಲೆಮಾರಿಗೆ ಕನ್ನಡ ಕಲಿಸುವುದಕ್ಕೆ ಬೇಕಾದ ಪಠ್ಯದ ಕೊರತೆ.

೩. ಕನ್ನಡ ಮಾತು ಬಲ್ಲ ಮಕ್ಕಳಿಗೆ ಕನ್ನಡ ಶಿಕ್ಷಣ ಕ್ರಮ ಮತ್ತು ಕನ್ನಡ ಮಾತೂ ಬಾರದ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲು ಬಳಸಬೇಕಾದ ಪಠ್ಯಕ್ರಮ.

೩. ಕನ್ನಡವನ್ನು ಕಲಿತ ಮಕ್ಕಳಿಗೆ ಕನ್ನಡ ಶಿಕ್ಷಣ ಮುಂದುವರೆಸಲು ಇರುವ ಸೌಲಭ್ಯಗಳ ಕೊರತೆ.

ಪರಿಹಾರ ಅಥವಾ ಮಾರ್ಗೋಪಾಯಗಳು

೧. ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರವು ವಿದೇಶಗಳಲ್ಲಿರುವ ಕನ್ನಡಿಗರಿಗೆ ಧನಸಹಾಯದ ಮೂಲಕ ಕನ್ನಡ ಭವನಗಳನ್ನು ಕಟ್ಟಲು ಮುಂದಾಗಬೇಕು. ಇದಕ್ಕಾಗಿ ಕನಾಟಕದಲ್ಲಿ ಅದಾಗಲೇ ನೋಂದಣಿ ಆಗಿರುವ ವಿದೇಶಿ ಕನ್ನಡ ಸಂಘಗಳನ್ನು ಮತ್ತು ಆಯಾ ದೇಶದ ಶಿಕ್ಷಣ ಸಂಸ್ಥೆಗಳನ್ನು ಸೇರಿಸಿ, ಉತ್ತರದಾಯಿತ್ವ ಇರುವ ಸಂಸ್ಥೆಗಳಿಗೆ ಹಣದ ನಿರ್ವಹಣೆಯ ಜವಾಬ್ದಾರಿ ವಹಿಸಬೇಕು.

೨. ವಿದೇಶಿ ನೆಲದಲ್ಲಿರುವ ಕನ್ನಡಿಗರ ಮುಂದಿನ ತಲೆಮಾರುಗಳಿಗೆ ಕನ್ನಡ ಕಲಿಸಲು ಪ್ರತ್ಯೇಕ ಪಠ್ಯವನ್ನು ರಚಿಸಬೇಕು. ಇಲ್ಲಿ ಪ್ರಾಥಮಿಕ ಹಂತದ ಶಿಕ್ಷಣದ ಅಗತ್ಯಗಳನ್ನು ಪೂರೈಸುವ ಪಠ್ಯ ಮತ್ತು ಅದಾಗಲೇ ಪ್ರೌಢರಾದವರಿಗೆ ಕನ್ನಡ ಕಲಿಸುವುದಕ್ಕೆ ಪ್ರತ್ಯೇಕ ಪಠ್ಯ ರಚನೆ ಆಗಬೇಕಿದೆ.

೩. ಅದಾಗಲೇ ಕನ್ನಡ ಕಲಿತ ಮಕ್ಕಳು ತಮ್ಮ ಕನ್ನಡ ಕಲಿಕೆಯನ್ನು ಮುಂದುವರೆಸಲು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇರುವಂತೆ ಜಾಣ, ಕಾವಾ, ರತ್ನ ಮುಂತಾದ ಹಂತಗಳ ಪರೀಕ್ಷೆಯನ್ನು ವಿದೇಶದಲ್ಲಿ ಇರುವ ಮಕ್ಕಳಿಗೂ ಮಾಡಲು ಇರಬಹುದಾದ ಸಾಧ್ಯತೆಗಳನ್ನು ಕುರಿತು ಆಲೋಚಿಸಬೇಕಿದೆ.

೪. ಈ ಮಕ್ಕಳಿಗೆ ಕನ್ನಡ ಕಲಿಸಲು ‘ಸರಿಯಾದ’ ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸುವುದು ಅಗತ್ಯ. ವಿದೇಶಿ ನೆಲದಲ್ಲಿ ವಾರಾಂತ್ಯದಲ್ಲಿ ಒಂದೋ ಎರಡೋ ತರಗತಿಗಳ ಮೂಲಕ ಪಠ್ಯವನ್ನು ಬೋಧಿಸಿ, ಮಕ್ಕಳನ್ನು ಕನ್ನಡ ಪರಿಸರಕ್ಕೆ ತರುವ ಉಪಧ್ಯಾಯರಿಗೆ ಇರಬೇಕಾದ ಸಿದ್ಧತೆಯೇ ಬೇರೆ. ಅಂತಹ ಸಿದ್ಧ ಉಪನ್ಯಾಸಕರನ್ನು ಒದಗಿಸಿ, ಕನ್ನಡಿಗರ ಅಗತ್ಯ ಪೂರೈಸುವುದು ಕನ್ನಡ ಸರ್ಕಾರದ ಆದ್ಯತೆಯ ಕೆಲಸ ಆಗಬೇಕಿದೆ.

·          

ದೇಶದೊಳಗೆ ವಿಭಿನ್ನ ರಾಜ್ಯಗಳಲ್ಲಿ ನೆಲೆಯೂರಿದ ಕನ್ನಾಡಿಗರು

ಈ ಕನ್ನಡಿಗರ ಅಗತ್ಯಗಳು ವಿದೇಶದಲ್ಲಿರುವ ಕನ್ನಡಿಗರ ಅಗತ್ಯಕ್ಕಿಂತ ಕೊಂಚ ಭಿನ್ನ. ಇಲ್ಲಿನ ಕನ್ನಡಿಗರನ್ನು ಚೆನ್ನೈ ಕನ್ನಡಿಗರು, ಮುಂಬೈ ಕನ್ನಡಿಗರು, ಹೈದರಾಬಾದಿ ಕನ್ನಡಿಗರು, ದೆಹಲಿ ಕನ್ನಡಿಗರು ಎಂದು ಅದಾಗಲೇ ಗುರುತಿಸುತ್ತಾ ಇದ್ದೇವೆ. ಇವರುಗಳು ತಮ್ಮ ಊರುಗಳಲ್ಲಿ ಕನ್ನಡ ಶಾಲೆಗಳನ್ನೇ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಾ ಇರುವವರು. ಆದರೆ ಆಧುನಿಕ ಕಾಲಘಟ್ಟದಲ್ಲಿ ಒಳನಾಡಿನಂತೆಯೇ ಇಲ್ಲಿನ ಕನ್ನಡ ಶಾಲೆಗಳಿಗೂ ಒಳಹರಿವು ಕಡಿಮೆಯಾಗಿದೆ. ಇದು ಆಯಾ ವ್ಯಕ್ತಿಯ ಬದುಕಿನ ಅಗತ್ಯಗಳನ್ನು ಆಧರಿಸಿ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕನ್ನಡಿಗರು ತಮ್ಮ ಮುಂದಿನ ತಲೆಮಾರಿಗೆ ಕನ್ನಡವನ್ನು ಕಲಿಸಲು ವಾರಾಂತ್ಯಗಳನ್ನೇ ಅವಲಂಬಿಸಬೇಕಾದ ಅಗತ್ಯ ಒದಗಿ ಬಂದಿದೆ. ಈ ಅಗತ್ಯಗಳನ್ನು ಪೂರೈಸಲು ಅದಾಗಲೇ ವಿದೇಶದ ಕನ್ನಡಿಗರಿಗೆ ಎಂದು ಗುರುತಿಸಿದ ಮಾರ್ಗೋಪಾಯಗಳನ್ನು ಬಳಸಬೇಕಾಗುತ್ತದೆ.

ಉದಾಹರಣೆಗೆ ತೀರಾ ಈಚೆಗೆ ರಾಜಸ್ಥಾನದ ನಗರವೊಂದರಲ್ಲಿ ಇರುವ ಕನ್ನಡಿಗರು ತಮ್ಮಲ್ಲಿರುವ ಕನ್ನಡ ಕುಟುಂಬಗಳ ಸಂಖ್ಯೆ ನೂರನ್ನು ಮೀರುತ್ತಿದೆ. ಈ ಕುಟುಂಬಗಳಲ್ಲಿನ ಮಕ್ಕಳಿಗೆ ಕನ್ನಡ ಕಲಿಸಲು ದಾರಿ ಹುಡುಕಿಕೊಡಿ ಎಂದು ಕೇಳಿದ್ದಾರೆ. ಇಂತಹುದೇ ಬೇಡಿಕೆ ಚಂಡೀಗಢದಿಂದ, ಕೊಲ್ಕತ್ತಾದಿಂದ, ಸೇಲಂನಿಂದ, ಎರ್ನಾಕುಲಂನಿಂದ ಬಂದಿದೆ. ಈ ಬೇಡಿಕೆಗಳನ್ನು ಪೂರೈಸಲು ನಾವು ಸಿದ್ಧರಾಗಬೇಕಿದೆ. ಇದೇ ಬಗೆಯಲ್ಲಿ ಅದಾಗಲೇ ಕನ್ನಡ ಶಾಲೆಗಳನ್ನು ನಡೆಸುತ್ತಾ ಇರುವವರಿಗೆ ತಗ್ಗಿರುವ ಒಳಹರಿವನ್ನು ಹೆಚ್ಚಿಸಲು ಮತ್ತು ಅಲ್ಲಿರುವ ಕನ್ನಡಿಗರ ಮುಂದಿನ ತಲೆಮಾರು ಕನ್ನಡದಲ್ಲಿ ಉಳಿಯುವಂತೆ ಮಾಡಲು ಪ್ರತೀ ಮಹಾನಗರದ ಅಗತ್ಯವನ್ನು ಪ್ರತ್ಯೇಕವಾಗಿ ಗಮನಿಸಿ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ತಜ್ಷರುಗಳ ದೊಡ್ಡ ಬಣವನ್ನೇ ಹುರಿಗೊಳಿಸಿ, ಆಲೋಚನೆಗೆ ಹಚ್ಚಬೇಕಾದ ತುರ್ತು ಇಂದು ಬಂದಿದೆ.

·          

ಗಡಿಯಾಚೆಗಿನ ಅಥವಾ ‘ನೆರೆಮನೆ’ಯ ಕನ್ನಡಿಗರು

ಭಾಷಾವಾರು ಪ್ರಾಂತ್ಯವಿಂಗಡಣೆಯು ಎಷ್ಟು ಸರಿ, ಎಷ್ಟು ತಪ್ಪು ಎಂಬ ಪ್ರಶ್ನೆ ಬೇರೆಯದು. ಆದರೆ ಈ ವಿಂಗಡನೆಯಲ್ಲಿ ಅನೇಕ ಶುದ್ಧ ಕನ್ನಡಿಗರು ಕರ್ನಾಟಕದ ಗಡಿಯಾಚೆಗೆ ಉಳಿದಿದ್ದಾರೆ. ರಾಜ್ಯವೊಂದರ ಗಡಿಯಾಚೆಗೆ ರಾಜಕೀಯ ಕಾರಣಕ್ಕೆ ಉಳಿದಿದ್ದರೂ ಈ ಕನ್ನಡಿಗರು ತಮ್ಮ ಪರಿಸರವನ್ನು ಕನ್ನಡದ್ದಾಗಿಯೇ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಮಾಡುತ್ತಾ ಇದ್ದಾರೆ.

ಈ ಗಡಿ ಭಾಗಗಳನ್ನು ಮಹಾರಾಷ್ಟ್ರದ ಗಡಿ, ಆಂದ್ರದ ಗಡಿ, ತಮಿಳುನಾಡಿನ ಗಡಿ, ಕೇರಳದ ಗಡಿ, ಗೋವಾದ ಗಡಿ ಎಂದು ಸರಳವಾಗಿ ಗುರುತಿಸಬಹುದಾದರೂ ಇಲ್ಲಿರುವ ಪ್ರತಿ ಹಳ್ಳಿ ಮತ್ತು ಕನ್ನಡದ ಕೇರಿಯ ಸಮಸ್ಯೆ ಭಿನ್ನವಾದುದು.

ತಮಿಳುನಾಡಿನ ಗಡಿಭಾಗದಲ್ಲಿ ಹೊಸೂರಿನಿಂದ ಸೇಲಂವರೆವಿಗೂ ಕನ್ನಡವರು ಬಹುಸಂಖ್ಯೆಯಲ್ಲಿ ವಾಸವಿದ್ದಾರೆ. ಅದರಲ್ಲಿಯೂ ಈಗ ಹೊಸೂರಿನ ಶಾಸಕರೇ ಕನ್ನಡಿಗರು. ಇವರು ತಮಿಳುನಾಡಿನ ವಿಧಾನಸಭೆಯಲ್ಲಿ ಕನ್ನಡದಲ್ಲಿಯೇ ಮಾತಾಡಿ ತಮ್ಮ ಸಮಸ್ಯೆಗಳತ್ತ ಗಮನ ಸೆಳೆದಿದ್ದಾರೆ. ಇಲ್ಲಿರುವ ಜನ ಭಾಷೆಗಳು ಅನೇಕ ಸೊಲ್ಲುಗಳ ಸಂಗಾಟದಿಂದ ತಮ್ಮದೇ ಬನಿ ಪಡೆದಿವೆ. ಅದು ಕನ್ನಡದ ಮತ್ತೊಂದು ಸೊಗಡು ಎಂಬಷ್ಟು ಭಿನ್ನವೂ ಹೌದು. ಇಂತಹ ಕನ್ನಡಿಗರನ್ನು ಕನ್ನಡ ಪರಿಸರದ ಒಳಗಡೆ ಉಳಿಸಲು ಅನೇಕ ಕೆಲಸಗಳನ್ನು ಮಾಡಬೇಕಿದೆ. ಆಂಧ್ರದ ಗಡಿ ಭಾಗದಲ್ಲಿರುವ ಕನ್ನಡದ ಬಹುಭಾಷಿಕರು ಡಂಕಣಿಕೋಟ, ಹಿಂದೂಪುರ, ಮಹಬೂಬ್‌ನಗರಗಳ ಪ್ರದೇಶದಲ್ಲಿ ಇದ್ದಾರೆ. ಇವರ ಬದುಕು ಆಂದ್ರದಲ್ಲಿ ಆದರೂ ಇವರ ಬದುಕು, ವ್ಯಾಪಾರ ವಹಿವಾಟು ಕರ್ನಾಟಕದಲ್ಲಿ. ಇವರ ಕನ್ನಡದ ಬನಿಗೂ ತನ್ನದೇ ಆದ ಛಾಪು ಇದೆ. ಇಲ್ಲಿನ ರೈತರು ಬೀಜ ಕೊಳ್ಳುವುದು, ಸಾಲ ತೆಗೆದುಕೊಳ್ಳುವುದು ಕರ್ನಾಟಕದಲ್ಲಿ. ಇವರ ಭೂಮಿ ಇರುವುದು ಆಂಧ್ರದಲ್ಲಿ. ಇವರ ಬೆಲೆಗೆ ಗ್ರಾಹಕರು ಇರುವುದು ಕರ್ನಾಟಕದಲ್ಲಿ. ಹೀಗಾಗಿ ಇಂತಹ ರೈತರು ತಮ್ಮ ಬೆಳೆಯನ್ನು ರಾಜ್ಯದಿಂದ ರಾಜ್ಯಕ್ಕೆ ಸಾಗಿಸುವುದೇ ದೊಡ್ಡ ಕಷ್ಟ. ಹೀಗಾಗಿ ಇಲ್ಲಿನ ರೈತರು ಸ್ಥಳೀಯ ಸರ್ಕಾರಗಳ ಸಹಾಯವೂ ಇಲ್ಲದೆ, ಮೂಲ ಕನ್ನಡ ಸರ್ಕಾರದವರು ಆ ಜನರನ್ನು ಹೊರನಾಡಿನವರು ಎಂದು ಗುರುತಿಸುವುದರಿಂದಾಗಿ ಅಸಡ್ಡೆಗೆ ಒಳಗಾದವರಾಗಿದ್ದಾರೆ. ಇಂತಹವರ ಸಮಸ್ಯೆಯನ್ನು ಪರಿಹರಿಸಿ, ಇವರನ್ನು ಕನ್ನಡದ ಪರಿಸರದ ಒಳಗಡೆ ಇರಿಸಬೇಕಾಗಿದೆ.

ಇನ್ನು ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಪ್ರಮುಖವಾದುದು ಸೊಲ್ಲಾಪುರ ಜಿಲ್ಲೆ. ಇಲ್ಲಿನ ನಾಲ್ಕು ತಾಲ್ಲೂಕುಗಳಲ್ಲಿ ಕನ್ನಡಿಗರಿದ್ದಾರೆ. ಸೊಲ್ಲಾಪುರ, ಮೈಂದರ್ಗಿ, ಜತ್, ಅಕ್ಕಲಕೋಟ ಮುಂತಾದ ಕಡೆಗಳಲ್ಲಿ ಬಹುತೇಕರು ಕನ್ನಡಿಗರೇ. ಇಲ್ಲಿ ನಾನೂರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮತ್ತು ಬಾಲವಾಡಿಗಳು ಇವೆ.

ಇವರ ಸಮಸ್ಯೆಗಳೇ ಭಿನ್ನ. ಇದನ್ನು ನಾವು ಪರಿಹಾರಿಸಲು ಹುಡುಕಬೇಕಾದ ಮಾರ್ಗಗಳೂ ಭಿನ್ನ.

ಈ ಮಕ್ಕಳಿಗಾಗಿ ಮಹಾರಾಷ್ಟ್ರ ಪಠ್ಯಗಳನ್ನು ನೀಡಿದೆ. ಆದರೆ ಅವು ಸಕಾಲದಲ್ಲಿ ದೊರೆಯುವುದಿಲ್ಲ. ವಿಶೇಷವಾಗಿ ಚರಿತ್ರೆ, ವಿಜ್ಞಾನ, ಗಣಿತ ಪಠ್ಯಗಳು ಮತ್ತು ಪಠ್ಯ ಕಲಿಕೆಗೆ ಪೂರಕವಾದ ಗೈಡ್‌ಗಳು ಕನ್ನಡದಲ್ಲಿ ದೊರೆಯುವುದಿಲ್ಲ. ಹೀಗಾಗಿ ಇಲ್ಲಿನ ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಅತಂತ್ರರಾಗುತ್ತಾರೆ. ಇದೇ ಕಾರಣಕ್ಕಾಗಿ ಇಲ್ಲಿನ ಹೊಸ ತಲೆಮಾರು ತಮಗೆ ಸುಲಭವಾಗಿ ಲಭ್ಯವಿರುವ ಇತರ ಭಾಷೆಗಳ ಕಡೆಗೆ ವಾಲುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ. ಈ ಭಾಗದಲ್ಲಿರುವ ಕನ್ನಡ ಮಕ್ಕಳ ಸಮಸ್ಯೆಯನ್ನು ಅರಿಯುವುದಕ್ಕೆ ಮತ್ತು ಪರಿಹರಿಸುವುದಕ್ಕೆ ಪ್ರತ್ಯೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಇನ್ನು ಕೇರಳದ ಗಡಿ ಭಾಗದಲ್ಲಿರುವ ಕನ್ನಡಿಗರು. ಕಾಸರಗೋಡು ಜಿಲ್ಲೆಯಲ್ಲಿ ಶೇಕಡ ೯೦ಕ್ಕಿಂತ ಹೆಚ್ಚು ಕನ್ನಡ ಕುಟುಂಬಗಳಿವೆ. ಅವರೆಲ್ಲರೂ ಕನ್ನಡ ಶಾಲೆಗಳನ್ನೂ ನಡೆಸುತ್ತಾ ಇದ್ದಾರೆ. ಆದರೆ ಈ ಶಾಲೆಗಳಿಗೂ ಒಳಹರಿವು ಕಡಿಮೆಯಾಗುತ್ತಿದೆ. ಇಲ್ಲಿರುವ ಮಕ್ಕಳು ಸಹ ಕನ್ನಡದಿಂದ ದೂರ ಸರಿದು ಇಂಗ್ಲೀಷ್ ಅಥವಾ ಸ್ಥಳೀಯ ರಾಜಭಾಷೆಯ ಕಡೆಗೆ ವಾಲುತ್ತಾ ಇದ್ದಾರೆ.

ಕನ್ನಡದ ಹೊಸ ತಲೆಮಾರು ಹೊಸ ಭಾಷೆಗಳಿಗೆ ಹೋಗುತ್ತಿರುವುದಕ್ಕೆ ಪ್ರಧಾನ ಕಾರಣ ಹೊರನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರನ್ನು ನಮ್ಮಲ್ಲಿ ಮುಂದುವರಿದ ಶಿಕ್ಷಣ ಅವಕಾಶಗಳಿಗೆ ವಿಶೇಷ ಅವಕಾಶ ನೀಡಿ ತೆಗೆದುಕೊಳ್ಳದೇ ಇರುವುದು ಹಾಗೂ ಹೊರರಾಜ್ಯದ ಯಾವ ವರ್ಗದ ಪ್ರಮಾಣ ಪತ್ರವಿದ್ದರೂ ಅವರನ್ನು ನಮ್ಮಲ್ಲಿ ಆದರದಿಂದ ಗಮನಿಸದೆ ಇರುವುದು ಪ್ರಧಾನ ಕಾರಣವಾಗಿದೆ. ಇದರಿಂದಾಗಿ ಅನ್ನದ ಕಾರಣಕ್ಕಾಗಿಯೇ ಅನೇಕರು ಇತರ ಭಾಷೆಗಳಿಗೆ ವಲಸೆ ಹೋಗುತ್ತಾ ಇದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಗಡಿಭಾಗದ ಕನ್ನಡಿಗರು ಕನ್ನಡ ಪರಿಸರದ ಒಳಗಡ ಉಳಿಸುವ ಸಲುವಾಗ ಈ ಕೆಳಗಿನ ಎಚ್ಚರಗಳನ್ನು ಮತ್ತು ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಬೇಕಿದೆ.

 

ಮಾರ್ಗೋಪಾಯಗಳು

೧. ಗಡಿಯಾಚೆಗಿನ ನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನಮ್ಮಲ್ಲಿನ ವೃತ್ತಿ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಒದಗಿಸಬೇಕು.

೨. ಗಡಿಯಾಚೆಗಿನಿಂದ ನಮ್ಮ ರಾಜ್ಯಕ್ಕೆ ಓಡಾಡುವ ವಿದ್ಯಾರ್ಥಿಗಳಿಗೆ ಬಸ್ಸುಗಳಲ್ಲಿ ರಹದಾರಿ ಪತ್ರವನ್ನು ನೀಡುವಾಗ ವಿಶೇಷ ರಿಯಾಯಿತಿಗಳನ್ನು ನೀಡಬೇಕು.

೩. ಗಡಿಯಾಚೆಗಿನ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ವಿಶೇಷ ಪ್ರೋತ್ಸಾಹಗಳನ್ನು (ನಮ್ಮಲ್ಲಿ ಯಾವ ರೀತಿಯ ಪ್ರೋತ್ಸಾಹಗಳನ್ನು ನೀಡುತ್ತಾ ಇದ್ದೇವೋ ಅವೆಲ್ಲವೂ ಆ ಮಕ್ಕಳಿಗೂ ದೊರೆಯುವಂತೆ) ನೀಡಬೇಕು.

೪. ಗಡಿಯಾಚೆಗಿನ ಮಕ್ಕಳಿಗೆ ಕನ್ನಡದಲ್ಲಿಯೇ ಎಲ್ಲಾ ಪಠ್ಯಗಳೂ ಸಿಗುವಂತಾಗಲೂ ವಿಶೇಷ ಅನುದಾನಗಳಷ್ಟೇ ಅಲ್ಲದೆಮ ಆಯಾ ಪಠ್ಯಗಳನ್ನು ಮುದ್ರಿಸಲು ಪ್ರಕಾಶಕರಿಗೆ ವಿಶೇಷ ಅನುದಾನಗಳನ್ನು ಒದಗಿಸಬೇಕು.

೫. ಗಡಿಯಾಚೆಗಿನ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಅಂತಹ ಕನ್ನಡ ಶಾಲೆಗಳನ್ನು, ಅಂಗನವಾಡಿಗಳನ್ನು ಕನ್ನಡಿಗರು, ಕನ್ನಡ ಉದ್ಯಮಪತಿಗಳು ದತ್ತಕ ತೆಗೆದುಕೊಳ್ಳುವಂತೆ ಕನ್ನಡ ಸರ್ಕಾರಗಳು ಪ್ರೋತ್ಸಾಹ ಹಾಗೂ ಒತ್ತಾಯಗಳನ್ನು ಪ್ರತೀ ಉದ್ಯಮಿಗೂ (ಒಪ್ಪಂದ ಪತ್ರದ ಹಂತದಲ್ಲಿಯೇ) ಹೇರಬೇಕು.

೬. ಗಡಿಯಾಚೆಗಿನ ಊರುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಬಹುತೇಕ ಮಕ್ಕಳು ಕೂಲಿ ಕಾರ್ಮಿಕರ ಮತ್ತು ರೈತಾಪಿ ವರ್ಗದವರ ಮಕ್ಕಳಾಗಿರುತ್ತಾರೆ, ಇಂತಹ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ವಿಶೇಷ ಆರ್ಥಿಕ ಸವಲತ್ತುಗಳನ್ನು ಒದಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾಡಿನ ಎಲ್ಲಾ ಕನ್ನಡಿಗರು ಹಾಗೂ ಕನ್ನಡ ಸರ್ಕಾರಗಳು ಯೋಚಿಸಬೇಕು ಮತ್ತು ಇದಕ್ಕಾಗಿ ಪ್ರತ್ಯೇಕ ಆರ್ಥಿಕ ಸಹಾಯದ ಯೋಜನೆಗಳನ್ನು ರೂಪಿಸಬೇಕು. ಇಂತಹ ಆರ್ಥಿಕ ಸಹಾಯ ಮಾಡಲು ಮುಂದೆ ಬರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕನ್ನಡ ಸರ್ಕಾರ ವಿಶೇಷ ಆರ್ಥಿಕ ರಿಯಾಯಿತಿಯನ್ನು ಸಹ ನೀಡುವಂತಾಗಬೇಕು.

೭. ಇದಲ್ಲದೆ ಗಡಿಯಾಚೆಗಿನ ಕನ್ನಡ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಲು ನಮ್ಮ ಕನ್ನಡ ಸರ್ಕಾರಗಳು ವಿಶೇಷ ಮೀಸಲಾತಿಗಳನ್ನು ನೀಡಬೇಕು. ಅದರಲ್ಲಿಯೂ ಮಹಾರಾಷ್ಟ್ರದ ಗಡಿಜಿಲ್ಲೆಗಳಲ್ಲಿ ಇರುವ ಕನ್ನಡಿಗರಿಗೆ ಮತ್ತು ಆಂಧ್ರದ ಗಡಿ ಜಿಲ್ಲೆಗಳಾದ ಬೀದರ್, ಗುಲ್ಬರ್ಗಾದ ಆಸುಪಾಸಿನಲ್ಲಿರುವ ಗಡಿಜಿಲ್ಲೆಗಳ ಜನರಿಗೆ ವಿಶೇಷ ಒಳ ಮೀಸಲಾತಿಯನ್ನು ಸರ್ಕಾರ ಘೋಷಿಸಬೇಕು.

೮. ಗಡಿ ಭಾಗದಲ್ಲಿನ ಕನ್ನಡ ರೈತಾಪಿ ವರ್ಗಕ್ಕೆ ಮತ್ತು ಉದ್ಯಮಿಗಳಿಗೆ ನಮ್ಮ ರಾಜ್ಯದ ಒಳಗಡೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಸಹ ಅನೇಕ ಆರ್ಥಿಕ ಸವಲತ್ತುಗಳನ್ನು ಒದಗಿಸಬೇಕು. ಈ ಮೂಲಕ ಆ ಜನ ಬೇರೆಯ ಭಾಷೆಗಳಿಗೆ ವಲಸೆ ಹೋಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

·          

ಗಡಿನಾಡಿನ ಕನ್ನಡಿಗರು

ಕರ್ನಾಟಕದ ಗಡಿ ತಾಲ್ಲೂಕುಗಳು ೫೪. ಅವುಗಳಲ್ಲಿ ೪೮ ತಾಲ್ಲೂಕುಗಳು ತಮ್ಮ ಗಡಿಗಳನ್ನು ಇತರ ಭಾಷೆಯ ಜನಾಂಗಗಳ ಜೊತೆಗೆ ಹಂಚಿಕೊಂಡಿವೆ. ಈ ಜನರ ಬದುಕು ನಡೆಯುವುದೇ ಬಹುಭಾಷಾ ವ್ಯವಸ್ಥೆಯಲ್ಲಿ ಏಕಕಾಲಕ್ಕೆ ಕನ್ನಡವನ್ನಲ್ಲದೆ ಇತರ ಐದಾರು ಭಾಷೆಗಳನ್ನು ಇಲ್ಲಿನ ಜನ ಆಡುತ್ತಾ ಇರುತ್ತಾರೆ. ಕಾಸರಗೋಡಿನ ಆಸುಪಾಸಿನಲ್ಲಂತೂ ಕನ್ನಡ, ತುಳು, ಬ್ಯಾರೀ, ಮಲೆಯಾಳ ಮತ್ತು ಇಂಗ್ಲೀಷನ್ನು ಸಣ್ಣ ವಯಸ್ಸಿನವರು ಕಲಿತಿರುವುದನ್ನು ಕಾಣುತ್ತಾ ಇದ್ದೇವೆ. ಇನ್ನು ಬೀದರ್, ಗುಲ್ಬರ್ಗಾ, ಬೆಳಗಾವಿ, ಬಿಜಾಪುರ, ರಾಯಚೂರಿನಂತಹ ಜಿಲ್ಲೆಗಳಲ್ಲಿ ಉರ್ದು, ತೆಲುಗು, ಮರಾಠಿ, ಕನ್ನಡ, ಲಮಾಣಿ,  ಇಂಗ್ಲೀಷುಗಳಲ್ಲದೆ ಆಯಾ ಜನಾಂಗದವರ ಪ್ರತ್ಯೇಕ ಉಪಭಾಷೆಯನ್ನು ಒಂದೇ ವಾಕ್ಯದಲ್ಲಿ ಬೆರೆಸಿ ಮಾತಾಡುವ ಜನರನ್ನು ಕಂಡಿದ್ದೇವೆ. ಬದುಕಿನ ಅಗತ್ಯಗಳೇ ಈ ಜನರಿಗೆ ಇಷ್ಟೆಲ್ಲಾ ಭಾಷೆಗಳನ್ನು ಕಲಿಸುತ್ತದೆ. ಸಂವಹನ ಆಧುನಿಕ ಬದುಕಿನ ಪ್ರಧಾನ ಅಗತ್ಯವಾಗಿದೆ. ಇದಕ್ಕಾಗಿ ಅನೇಕ ಭಾಷೆಗಳನ್ನು ಗಡಿ ಭಾಗದ ಜನ ಕಲಿತಿರುತ್ತಾರೆ.

ಆದರೆ ಈ ಗಡಿನಾಡಿನಲ್ಲಿನ ಕನ್ನಡ ಪರಿಸರಕ್ಕೆ ಭಾರೀ ತೊಂದರೆಗಳನ್ನು ಮಾಡಲಾಗಿದೆ. (ಈ ವಿಷಯವಾಗಿ ಅದಾಗಲೇ ನಾವು ನೀಡಿರುವ ಎರಡು ವರದಿಗಳು ಸರ್ಕಾರದ ಕಡತಗಳ ಮೂಟೆಗಳ ಜೊತೆ ಸೇರಿದೆ ಎಂಬುದನ್ನು ಇಲ್ಲಿ ನೆನೆಯಲೇಬೇಕು. ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಜಾಥಾ ವರದಿ ಹಾಗೂ ಜೋಯಿಡಾ ಗಡಿನಾಡ ಕನ್ನಡಿಗರ ಸಮಾವೇಶದ ವರದಿ. ಈ ಎರಡೂ ವರದಿಗಳ ತಯಾರಿಕೆಯಲ್ಲಿ ನನ್ನದೂ ಅಳಿಲು ಸೇವೆ ಇತ್ತಾದ್ದರಿಂದ ಈ ಬಗ್ಗೆ ಅಧಿಕೃತವಾಗಿ ಮಾತಾಡಬಹುದು.) ಮೊದಲಿಗೆ ಈ ಗಡಿಭಾಗದಲ್ಲಿ ಮೂಲಭೂತ ಸೌಕರ್ಯಗಳದ್ದೇ ದೊಡ್ಡ ಕೊರತೆ. ರಸ್ತೆಗಳಿಲ್ಲ. ದವಾಖಾನೆಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಹೀಗಾಗಿ ಗಡಿಭಾಗದ ಜನ ತಮ್ಮ ಸಣ್ಣ ಅಗತ್ಯ ಪೂರೈಕೆಗೂ ನೆರೆಯ ರಾಜ್ಯದ ಮುಖ್ಯ ಪಟ್ಟಣಗಳಿಗೆ ಹೋಗಬೇಕಾಗಿ ಬಂದಿದೆ. ಇದರಿಂದಾಗಿ ಅವರ ಕನ್ನಡತನ ನಿಧಾನವಾಗಿ ಸೋರಿಹೋಗುತ್ತಿದೆ. ಇನ್ನು ಇಲ್ಲಿನ ಪ್ರಾಥಮಿಕ ಶಾಲೆಗಳಂತೂ ಕೊಟ್ಟಿಗೆಗಳ ಹಾಗಿವೆ. ಕೆಲವೆಡೆ ಮಠ – ಮಾನ್ಯಗಳ ಜನ ಸ್ವಂತ ಆಸಕ್ತಿಯಿಂದ ಒಂದಷ್ಟು ಕೆಲಸ ಮಾಡುತ್ತಾ ಕನ್ನಡಿಗರಿಗೆ ಕಿಂಚಿತ್ ಸಹಾಯ ನೀಡಿದ್ದಾರೆ. ಆದರೆ ಇದು ಸಾಲದು. ಇಲ್ಲಿನ ಬಹುತೇಕ ಶಾಲೆಗಳಲ್ಲಿ ಸರಿಯಾದ ಉಪಾಧ್ಯಾಯರಿಲ್ಲ. ಸರ್ಕಾರೀ ಶಾಲೆಗಳಲ್ಲಿನ ಪರಿಸ್ಥಿತಿಯನ್ನಂತೂ ನೀವು ಊಹಿಸಲು ಸಾಧ್ಯವಿಲ್ಲ. ಹಲವೆಡೆಗಳಲ್ಲಿ ಸೂರು ಎಂದು ಬೀಳುವುದೋ ಎಂಬಂತಿದೆ. ಇನ್ನು ಅಲ್ಲಿ ಕಲಿಯುವ ವಿದ್ಯಾರ್ಥಿಗಳು ಈ ನಾಡಿನ ಪ್ರಧಾನ ವಾಹಿನಿಗೆ ಬರಬೇಕು ಎಂದು ಬಯಸುವುದಾದರೂ ಹೇಗೆ? ಭಾಷಾವಾರು ಪ್ರಾಂತ್ಯ ವಿಂಗಡಣೆಯಾಗಿ ಇಂದಿನವರೆಗಿನ ಯಾದಿ ಹಿಡಿದರೆ ಐದು ದಶಕಗಳಿಗೂ ಹೆಚ್ಚಾಗುತ್ತದೆ. ಇಷ್ಟೂ ಕಾಲ ಈ ಗಡಿ ಭಾಗಗಳಿಂದ ಆರಿಸಿ ಬಂದ ಜನಪ್ರತಿನಿಧಿಗಳು ಏನು ಮಾಡಿದ್ದಾರೆ ಎಂಬ ಅನುಮಾನ ಹುಟ್ಟುತ್ತದೆ.

ಕಾರವಾರ ಜಿಲ್ಲೆಯ ಜೋಯಿಡಾದಂತಹ ತಾಲ್ಲೂಕುಗಳಲ್ಲಿ ಕನ್ನಡ ಪರಿಸರ ನಿರ್ಮಿಸಲು ಕನ್ನಡಿಗರಿಗೆ ಮೂಲಭೂತ ಸೌಲಭ್ಯ ಆದ್ಯತೆಯ ಮೇರೆಗೆ ನೀಡಬೇಕಿದೆ. ಅಲ್ಲಿ ಕಾಳಿ ಯೋಜನೆ ನಡೆದಿದೆ. ಕೈಗಾ ಅಣುಸ್ಥಾವರ ಇದೆ. ನೌಕಾನೆಲೆ ಸೀಬರ್ಡ್ ಇದೆ. ಇಷ್ಟೆಲ್ಲಾ ಯೋಜನೆಗಳು ಒಂದು ಜಿಲ್ಲೆಗೆ ಬಂದಿದ್ದರೂ ಅಲ್ಲಿನ ಬಡ ರೈತನ ಮನೆಯಲ್ಲಿ ವಿದ್ಯುತ್ ಇನ್ನೂ ಬಂದಿಲ್ಲ ಎಂಬುದು ದೊಡ್ಡ ವಿಪರ್ಯಾಸ. ಬೀದರ್ ಜಿಲ್ಲೆಯ ಗಡಿಭಾಗದಲ್ಲಿಯೂ ಇದೇ ಪರಿಸ್ಥಿತಿ. ಅಲ್ಲಿನ ಬಹುತೇಕ ಸರ್ಕಾರೀ ಶಾಲೆಗಳಲ್ಲಿ ಓದುತ್ತಾ ಇರುವ ಮಕ್ಕಳು ಬಡವರು. ಅಲ್ಲಿನ ಶ್ರೀಮಂತರು ತಮ್ಮ ಮಕ್ಕಳನ್ನು ದೂರದ ಊರುಗಳಲ್ಲಿ ರೆಸಿಡೆನ್ಷಿಯಲ್ ಶಾಲೆಗಳಿಗೆ ಕಳಿಸುತ್ತಾರೆ. ಹೀಗಾಗಿ ಈ ಬಡ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವ ಸಮಯ ಅಲ್ಲಿನ ಆಳುವ ವರ್ಗಕ್ಕೆ ಇಲ್ಲವೇ ಇಲ್ಲ. ಇದೇ ಬೆಳಗಾವಿಯ ಗಡಿಭಾಗವಾದ ನಂದಗಡದಂತಹ ಊರಿನಲ್ಲಿನ ಮಕ್ಕಳಲ್ಲಿ ಬಹುಮಂದಿಗೆ ಕನ್ನಡ ಮಾತಾಡಲು ಬರುತ್ತದೆ. ಆದರೆ ಅವರೆಲ್ಲರೂ ಸೇರಿರುವುದು ಮರಾಠಿ ಶಾಲೆಗಳಿಗೆ. ಹೀಗಾಗಿ ಅಲ್ಲಿನ ಕನ್ನಡ ಪರಿಸರ ಎಂಬುದು ಕೇವಲ ಸಂಗೊಳ್ಳಿ ರಾಯಣ್ಣನ ಹೆಸರಿಗೆ ಸೀಮಿತವಾಗಿಬಿಟ್ಟಿದೆ. ಇನ್ನು ಸವದತ್ತಿಯಂತಹ ಸ್ವಚ್ಛ ಕನ್ನಡ ಊರುಗಳಲ್ಲಿ ಇರುವ ಬಹುಸಂಖ್ಯಾತರು ಕನ್ನಡಿಗರು. ಆದರೆ ಅಲ್ಲಿನ ಮಕ್ಕಳಲ್ಲಿ ಕನ್ನಡ ಶಾಲೆಗೆ ಹೋಗುತ್ತಿರುವ ಮಕ್ಕಳ ಸಂಖ್ಯೆ ಅತ್ಯಲ್ಪ. ಹೀಗಾಗಿ ಅಲ್ಲಿನ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ, ನಾನೇ ನಡೆಸಿದ ಸಮೀಕ್ಷೆಯಂತೆ ಹತ್ತರಲ್ಲಿ ಏಳು ಮಂದಿಗೆ ಕನ್ನಡ ಓದಲು ಸಹ ಬರುವುದಿಲ್ಲ. ಅವರೆಲ್ಲರೂ ಆಂಗ್ಲ ಮತ್ತು ಮರಾಠಿಯ ಕಡೆಗೆ ವಾಲಿಕೊಂಡಿದ್ದಾರೆ. ಇನ್ನೂ ಕೋಲಾರದ ಭಾಗಕ್ಕೆ ಬಂದರೆ ನಮಗೆ ಕಾಣುವುದು ಇದಕ್ಕಿಂತ ಭಿನ್ನ ನೋಟವೇನಲ್ಲ.

ಈ ಗಡಿನಾಡಿನಲ್ಲಿನ ಕನ್ನಡ ಪರಿಸರಕ್ಕೆ ಇರುವ ಸಮಸ್ಯೆಗಳನ್ನು ಹೀಗೆ ಪಟ್ಟಿ ಮಾಡಬಹುದು.

೧. ಇಲ್ಲಿನ ಬಹುತೇಕ ರಸ್ತೆಗಳು ಯಾವುದೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ.

೨. ಇಲ್ಲಿನ ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಲ್ಲಿ ಯೋಗ್ಯ ಡಾಕ್ಟರುಗಳಿಲ್ಲ. ಡಾಕ್ಟರುಗಳಿರುವಲ್ಲಿ ಔಷಧಿಗಳ ಸರಬರಾಜು ಸರಿಯಾಗಿ ಆಗುತ್ತಿಲ್ಲ.

೩. ಇಲ್ಲಿನ ಅಂಗನವಾಡಿಗಳಲ್ಲಿನ ಕೆಲಸಗಾರರಿಗೆ ಸಂಬಳ ಸಿಕ್ಕು ಎಷ್ಟೋ ವರ್ಷಗಳಾಗಿವೆ. ಕೆಲವೆಡೆ ಮೂರು ವರ್ಷದಿಂದ ಸಂಬಳ ಸಿಗದೆ ಕೆಲಸ ಮಾಡುತ್ತಾ ಇರುವವರು ಇದ್ದಾರೆ.

೪. ಇಲ್ಲಿನ ಬಹುತೇಕ ಹಳ್ಳಿಗಳಲ್ಲಿ ನ್ಯಾಯಬೆಲೆ ಅಂಗಡಿ ಎಂಬುದೇ ಒಂದು ಮಹತ್ತರವಾದ ಹಾಸ್ಯದ ಸಂಗತಿಯಾಗಿದೆ.

೫. ಇಲ್ಲಿನ ಜನರಿಗೆ ಬಿಪಿಎಲ್ ಕಾರ್ಡ್‌ಗಳಾಗಲಿ, ಹಸಿರು ಕಾರ್ಡಾಗಲೀ, ಭಾಗ್ಯಲಕ್ಷ್ಮಿ ಯೋಜನೆಯ ಕಾರ್ಡ್ ಆಗಲಿ ಸರಿಯಾಗಿ ವಿತರಣೆ ಆಗಿಲ್ಲ.

(ಇದೇ ಸಂದರ್ಭದಲ್ಲಿ ಯೂನಿಕ್ ಐಡೆಂಟಿಫಿಕೇಷನ್ ನಂಬರ್ ಪಡೆದ ಹೆಣ್ಣು ಮಗಳೊಬ್ಬಳು, ಕಾರವಾರ ಜಿಲ್ಲೆಯ ಕುಗ್ರಾಮದಾಕೆ ಆಡಿದ ಮಾತನ್ನು ನೆನಪಿಸಿಕೊಳ್ಳಬೇಕು. ‘ತಿನ್ನೋಕ್ಕೆ ಎರಡು ರೂಪಾಯಿಗೆ ಅಕ್ಕಿ ಕೊಡ್ತೀವಿ ಅಂದೋರು ಈಗ ಇದ್ಯಾವ್ದೋ ನಂಬರ್ ಕೊಟ್ಟಿದಾರಲ್ಲಾ? ಇದನ್ನ ಇಟ್ಟುಕೊಂಡು ಏನು ಮಾಡಲಿ?’ ಎಂದು ಆ ಹೆಂಗಸು ಗೊಣಗಿದ್ದು ಪ್ರಾಯಶಃ ಈ ದೇಶದ ಆಳುವವರ್ಗಕ್ಕೆ ಕೇಳಿಸಿತೋ ಇಲ್ಲವೋ ನಾನರಿಯೆ?)

೬. ಇಲ್ಲಿನ ಸರ್ಕಾರೀ ಪ್ರಾಥಮಿಕ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದೆ. ಬಹುತೇಕ ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ಈ ಪ್ರಾಥಮಿಕ ಶಾಲೆಗಳಲ್ಲಿ ಇರುವ ಬೋಧನಾ ಸಲಕರಣೆಗಳಂತೂ ಶಿಥಿಲಗೊಂಡಿವೆ.

೭. ಇಲ್ಲಿನ ರೈತಾಪಿಗಳಿಗೆ ತಮ್ಮ ಬೆಳೆಯನ್ನು ಮಾರಲು, ಹೊಸ ಬೀಜ ಕೊಳ್ಳಲು ಹತ್ತಿರದ ಮಾರುಕಟ್ಟೆಗಳಿರುವುದು ನೆರೆಯ ರಾಜ್ಯಗಳಲ್ಲಿ. ಹೀಗಾಗಿ ಇವರೆಲ್ಲರೂ ಆ ಮಾರುಕಟ್ಟೆಯ ಕಡೆಗೆ ಮುಖ ಮಾಡಿ ನಿಂತಿರುತ್ತಾರೆ.

೮. ಈ ಗಡಿ ಭಾಗದಲ್ಲಿ ನಮ್ಮ ರೇಡಿಯೋಗಳು ಸಹ ಸರಿಯಾಗಿ ಬರುವುದಿಲ್ಲ. ಹೀಗಾಗಿ ಇಲ್ಲಿ ರೇಡಿಯೋ ಹೊಂದಿದವರು ನೆರೆಯ ರಾಜ್ಯದ ಭಾಷೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನೇ ಕೇಳುತ್ತಾ ಇರುತ್ತಾರೆ.

೯. ಕೋಲಾರದ ಮತ್ತು ತುಮಕೂರಿನ ಗಡಿ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಗಾಧವಾದುದು. ಇದನ್ನು ಈ ಪ್ರದೇಶ ವಿಶಿಷ್ಟ ಸಮಸ್ಯೆ ಎಂದು ಗುರುತಿಸಿ ಪರಿಹಾರ ಹುಡುಕಬೇಕಿದೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕರ್ನಾಟಕದ ಗಡಿಭಾಗದ ಸಮಸ್ಯೆಗಳ ಪಟ್ಟಿಯೇ ಬೃಹದಾಕಾರವಾಗಿ ಬಿಡಬಹುದು. ಇದನ್ನು ಪರಿಹರಿಸುವ ಹಿನ್ನೆಲೆಯಲ್ಲಿಯೇ ಗಡಿ ಅಭಿವೃದ್ಧಿ ಪ್ರಾಧಿಕಾರ ಎಂಬುದೊಂದನ್ನು ಸ್ಥಾಪಿಸಲಾಗಿದೆಯಾದರೂ ಆ ಪ್ರಾಧಿಕಾರ ಈ ನಿಟ್ಟಿನಲ್ಲಿ ಏನಾದರೂ ಮಾಡುತ್ತಿದೆಯೇ ಎಂಬುದು ಕಳೆದ ಮೂರು ವರ್ಷಗಳಿಂದ ಪ್ರಶ್ನೆಯಾಗಿಯೇ ಉಳಿದಿದೆ.

ಇಲ್ಲಿ ಪಟ್ಟಿ ಮಾಡಿರುವ ವಿವರವಲ್ಲದೆ ಇನ್ನೂ ಅನೇಕ ಸಮಸ್ಯೆಗಳನ್ನು ಕರ್ನಾಟಕದ ಗಡಿಭಾಗದ ಕನ್ನಡಿಗ ಎದುರಿಸುತ್ತಿದ್ದಾನೆ. ಈ ಭಾಗಗಳಲ್ಲಿ ಕನ್ನಡಿಗನ ಬದುಕು ಸುಧಾರಿಸದೆ ಕನ್ನಡ ಪರಿಸರವನ್ನು ಕಾಪಾಡುವುದು ಅಸಾಧ್ಯ.

·          

ಒಳನಾಡಿನ ಕನ್ನಾಡಿಗರು

ಈ ನಮ್ಮ ಒಳನಾಡಿನ ಕನ್ನಡ ಪರಿಸರವನ್ನು ನೋಡಲು ೧. ವಿದ್ಯೆ, ೨. ಉದ್ಯೋಗ, ೩. ಬದುಕು ಎಂಬ ಮೂರು ವಿವರಗಳನ್ನು ಇಟ್ಟುಕೊಂಡು ಗಮನಿಸಬೇಕಿದೆ.

ವಿದ್ಯೆ : ನಮ್ಮ ವಿದ್ಯಾಭ್ಯಾಸ ಕ್ರಮಗಳ ಆಯ್ಕೆಯು ನಾವು ಕಲಿತ ಭಾಷೆಯಿಂದ ನಮಗೆ ಅನ್ನ ಹುಟ್ಟುತ್ತದೆಯೇ ಎಂದು ಗಮನಿಸಿಯೇ ನಿರ್ಧರಿಸುವ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಮಾರುಕಟ್ಟೆ ಅರ್ಥಶಾಸ್ತ್ರವು ನಾವು ಆಯ್ಕೆ ಮಾಡುವ ವಿಧಾನವನ್ನೇ ಬದಲಿಸಿದೆ. ಇಂದು ವ್ಯಕ್ತಿಯೊಬ್ಬನ ಜ್ಞಾನ ಸಂಪಾದನೆಯನ್ನು ಅಳೆಯುವ ಮಾನದಂಡವೇ ಆತನಿಗೆ ಸಿಗುವ ಕೆಲಸದಿಂದ ಬರುವ ಆದಾಯವನ್ನು ಆಧರಿಸಿದೆ. ಇಂದು ಕನ್ನಡವನ್ನು ಕಲಿತು ಯಾವುದೋ ಶಾಲೆಯಲ್ಲಿಯೋ, ಕಾಲೇಜಿನಲ್ಲಿಯೋ ಮೇಷ್ಟರಾಗುವುದಕ್ಕಿಂತ ದೊಡ್ಡ ಕೆಲಸ ಸಿಗುವ ಅವಕಾಶ ಕಡಿಮೆ. ಅಕಸ್ಮಾತ್ ಇಂತಹ ಕೆಲಸ ಸಿಕ್ಕರು ಅದು ಖಾಯಂ ಕೆಲಸ ಆಗುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಅಸನಾರ್ಥಿ ವಿದ್ಯಾಭ್ಯಾಸ ಕ್ರಮಕ್ಕೆ ಬಲಿಬಿದ್ದಿರುವ ಒಳನಾಡಿಗರು ಕನ್ನಡದ ಮುಂದಿನ ತಲೆಮಾರನ್ನು ಆಂಗ್ಲ ವಿದ್ಯಾಭ್ಯಾಸಕ್ಕೆ ದೂಡಿದ್ದಾರೆ. ಇದಕ್ಕೆ ಅಂಬೇಡ್ಕರ್ ಪ್ರಣೀತ ನಗರಮುಖಿ ಸಾಮಾಜಿಕ ನ್ಯಾಯದ ಹುಡುಕಾಟ ಒಂದು ಕಾರಣವಾದರೆ, ಈ ನಾಡಿನ ಪ್ರತಿಷ್ಟಿತರು ಸಹ ಆಂಗ್ಲ ಕಲಿತವನಿಗೆ ಮಾತ್ರ ಬದುಕಲು ಸಾಧ್ಯ ಎಂಬ ಭ್ರಮೆಯನ್ನು ಹುಟ್ಟಿಸಿರುವುದು ಮತ್ತೊಂದು ಕಾರಣ. ಹೀಗಾಗಿ ಇಂದು ಕನ್ನಡವನ್ನು ಪ್ರಧಾನ ಭಾಷೆಯಾಗಿ ಕಲಿಯುತ್ತಾ ಇರುವವರ ಸಂಖ್ಯೆ ಪ್ರಾಥಮಿಕ ಹಂತದಿಂದಲೇ ಇಳಿಮುಖವಾಗಿದೆ.

ಇನ್ನು ಕನ್ನಡವನ್ನು ಸ್ನಾತಕೋತ್ತರವಾಗಿ ಹಾಗೂ ಸಂಶೋಧಕರಾಗಿ ಕಲಿಯುವವರ ಸಂಖ್ಯೆಯ ಬಗ್ಗೆ ಹೇಳಲೇ ಬೇಕಿಲ್ಲ. ಅನೇಕ ಕಾಲೇಜುಗಳಲ್ಲಿ ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳಿಲ್ಲ ಎಂದು ಅವುಗಳನ್ನು ಮುಚ್ಚುವ ಸ್ಥಿತಿಗೆ ಬಂದಿದೆ. ಇನ್ಯಾವ ವೃತ್ತಿಪರ ಶಿಕ್ಷಣದಲ್ಲಿಯೂ ಪ್ರವೇಶ ಸಿಗದೆ ಇದ್ದವರು ಮಾತ್ರ ಈ ಕಡೆಗೆ ಬರುತ್ತಾರೆ ಎಂಬ ಪರಿಸ್ಥಿತಿ ಉಂಟಾಗಿದೆ. (ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಭಾಷಾವಿಜ್ಞಾನ ಕಲಿಯಲು ವಿದ್ಯಾರ್ಥಿಗಳಿಲ್ಲ. ಆ ಪಾಠವನ್ನು ಕಲಿಸುವ ಉಪನ್ಯಾಸಕರ ಸಂಖ್ಯೆಯಂತೂ ಬೆರಳೆಣಿಕೆಯದು.)

ವೃತ್ತಿಪರ ಶಿಕ್ಷಣ ಪಡೆಯುವವರಿಗೆ ಭಾಷೆಯನ್ನು ಕಲಿಯಲೇ ಬೇಕೆಂಬ ಒತ್ತಾಯವಿಲ್ಲ. ಹೀಗಾಗಿ ಅಲ್ಲಿಯೂ ಕನ್ನಡ ಕಲಿತವರು ಸಿಗುವುದು ವಿರಳ. ಇದಕ್ಕಾಗಿಯೇ ಸಿದ್ಧಪಡಿಸಿರುವ ಪಠ್ಯವೊಂದಿದೆ. ಅದನ್ನು ಕಲಿಯುವುದಕ್ಕೂ, ಕಲಿಸುವುದಕ್ಕೂ ಇರುವ ತೊಡಕುಗಳು ಅನೇಕ. ಎಲ್ಲಿ ಪ್ರೀತಿ ಇಲ್ಲವೋ ಅಲ್ಲಿ ಕಾನೂನು ತರಬಹುದು. ಆದರೆ ಅಂತಹ ಒತ್ತಡಗಳ ಹೇರಿಕೆಯಿಂದ ಭಾಷೆ ಕಲಿಯಲು ಬರುವವರ ಮನಸ್ಥಿತಿ ಬದಲಾಗುತ್ತದೆ ಎಂದೆನಿಸದು.

ಇನ್ನು ನಮ್ಮ ಮಾಧ್ಯಮಗಳಲ್ಲಿ, ವಿಶೇಷವಾಗಿ ರೇಡಿಯೋ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಬಳಕೆಗೆ ಬಂದಿರುವ ಕನ್ನಡ ಎಂತಹದು ಎಂಬುದನ್ನು ಕುರಿತು ಮತ್ತೆ ಮಾತಾಡಬೇಕಿಲ್ಲ. ಇವೆಲ್ಲಾ ಕಾರಣಗಳಿಂದಾಗಿ ಇಂದು ಕನ್ನಡ ಪರಿಸರ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ.

ಉದ್ಯೋಗ : ಕನ್ನಡ ಕಲಿತವನಿಗೆ ಇರುವ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಈ ನಾಡಿನಲ್ಲಿ ಆಗಾಗ ಸೃಷ್ಟಿಯಾಗುವ ಉದ್ಯೋಗಗಳಿಗೆ ಕನ್ನಡವನ್ನು ಕಲಿಯಲೇಬೇಕೆಂಬ ಒತ್ತಡವೇನೂ ಇಲ್ಲ. ಹೀಗಾಗಿ ಕನ್ನಡಿಗರಲ್ಲದ ಕರ್ನಾಟಕದವರೂ ಉದ್ಯೋಗ ಪಡೆಯುತ್ತಲೇ ಇದ್ದಾರೆ. ಇನ್ನು ಕನ್ನಡಿಗರಂತೂ ಕನ್ನಡವನ್ನು ಬಿಟ್ಟು ಇಂಗ್ಲೀಷ್‌ನ ಮೊರೆ ಹೋಗಿ ಬಿಪಿಒಗಳಿಗೆ ಸೇರುತ್ತಾ ಇದ್ದಾರೆ. ಆ ಕೆಲಸಕ್ಕೂ ದೊಡ್ಡ ಓದಿನ ಅಗತ್ಯ ಇಲ್ಲವಾದ್ದರಿಂದ ಹತ್ತನೆ ತರಗತಿಯ ಫಲಿತಾಮಶವನ್ನಾಧರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಓದನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದಾನೆ ಎಂಬುದನ್ನು ಗಮನಿಸಬೇಕು. ಈ ಆಯ್ಕೆಯಲ್ಲಿ ಒಂದು ಬಣ ವೃತ್ತಿಶಿಕ್ಷಣವನ್ನು ಆಯ್ದುಕೊಂಡರೆ ಮತ್ತೊಂದು ಬಣ ಯಾವ ಶಿಕ್ಷಣದ ಕಡೆಗೂ ಹೋಗದೆ ಕೇವಲ ಇಂಗ್ಲೀಷ್ ಮಾತಾಡುವುದನ್ನು ಕಲಿಸುವ ಶಿಬಿರಗಳಿಗೆ ಸೇರುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ.

ನಮ್ಮ ಹೋರಾಟಗಾರರು ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು ಎಂಬ ಮಾತಾಡುವ ಬದಲಿಗೆ ಸ್ಥಳೀಯರಿಗೆ ಉದ್ಯೋಗ ದೊರೆಯಬೇಕು ಎಂದು ಹೋರಾಡುತ್ತಾ ಇದ್ದಾರೆ. ಈ ಸ್ಥಳೀಯರಲ್ಲಿ ಅನೇಕರು ಎರಡು ದಶಕಗಳಿಂದ ಈ ಕರ್ನಾಟಕದಲ್ಲಿಯೇ ಇದ್ದರೂ ಕನ್ನಡವನ್ನು ಕಲಿಯದೆಯೇ ಬದುಕುತ್ತಾ ಇದ್ದಾರೆ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ. ಹೀಗಾಗಿ ಇಂತಹ ‘ಬದುಕಬಲ್ಲ ಜಾಣ’ರುಗಳ ನಡುವೆ ಕನ್ನಡಿಗ ಎಂಬ ಹಪಾಪಿ ಹತಾಶನಾಗುತ್ತಾ ಇದ್ದಾನೆ.

ಜೀವನ : ಒಳನಾಡಿಗರ ಜೀವನ ಕ್ರಮದಲ್ಲಿ ಕಳೆದ ಎರಡು ದಶಕಗಳಲ್ಲಿ ಬೃಹತ್ ಬದಲಾವಣೆಗಳಾಗಿವೆ. ಕಳೆದ ಹತ್ತು ವರ್ಷಗಳಲ್ಲಂತೂ ಆ ಬದಲಾವಣೆ ಮಹತ್ತರವಾದುದು. ಸರಕು ಸಂಸ್ಕೃತಿಯು ಜನಪ್ರಿಯವಾದಂತೆ ವ್ಯಕ್ತಿಗಿಂತ ವ್ಯಕ್ತಿಯ ಆವರಣಕ್ಕೆ ಪ್ರಾಮುಖ್ಯ ಬಂದಿದೆ. ಹೀಗಾಗಿ ನಿಮ್ಮೆದುರಿಗೆ ನಿಂತವನ ಭಾಷೆ, ವ್ಯಕ್ತಿತ್ವಕ್ಕಿಂತ ಆತನ ಹೊರ ಆವರಣದಲ್ಲಿನ ವಿವರಗಳು ಮಾತ್ರ ಮುಖ್ಯವಾಗುತ್ತಿದೆ. ಚಾರಿತ್ರ್ಯಕ್ಕಿಂತ ಚಿತ್ರ ಮುಖ್ಯವಾದಾಗ ಆಗಬಹುದಾದ ತಲ್ಲಣಗಳಲ್ಲಿ ಮೊದಲಿನದು ಸಂಸ್ಕೃತಿ ವಿಹೀನ ಸ್ಥಿತಿ. ಇಲ್ಲಿ ಕಣ್ಣಿಗೆ ಕಾಣುವುದು ಮಾತ್ರ ಮುಖ್ಯ. ಕಂಡದ್ದು ಏನು ಅನ್ನುವುದು ಮುಖ್ಯವಾಗುವುದಿಲ್ಲ. ಇದರಿಂದಾಗಿ ನಮ್ಮ ನಡುವಿನ ಜೀವನ ಕ್ರಮದಲ್ಲಿ ದುಡ್ಡು ಇರುವವರ ಮತ್ತು ಇಲ್ಲದವರ ಬದುಕಿನ ಕ್ರಮಗಳಲ್ಲದೆ, ಅರೆಬರೆ ದುಡ್ಡುಳ್ಳ ಹಪಾಪಿಗಳ ಜೀವನ ಕ್ರಮವೊಂದು ತೆರೆದು ನಿಂತಿದೆ. ಈ ಮೂರೂ ಜೀವನ ಕ್ರಮಗಳಲ್ಲಿ ಭಾಷೆ – ಸಂಸ್ಕೃತಿಗೆ ಜಾಗ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಇವೆಲ್ಲವುಗಳಿಂದ ನಗರದೊಳಗಿನ ನಮ್ಮ ಮುಮದಿನ ತಲೆಮಾರುಗಳು ತಮ್ಮ ಎದುರಿಗೆ ಇರುವ ಎಲ್ಲಾ ಮಾಧ್ಯಮಗಳಲ್ಲಿ ಕನ್ನಡವನ್ನುಳಿದು ಇನ್ನಿತರ ಭಾಷೆಗಳಿಂದ ಮನರಂಜನೆಯನ್ನು ಪಡೆಯುತ್ತಾ ಇವೆ. ಇದರೊಂದಿಗೆ ಮಹಾನಗರಗಳಲ್ಲಿ ಆರಂಭವಾಗಿರುವ ಮಾಲ್ ಸಂಸ್ಕೃತಿಯು ನಮ್ಮನ್ನು ಮತ್ತಷ್ಟು ಭಾಷಾವಿಹೀನರನ್ನಾಗಿ ಮಾಡಿದೆ. ನಮ್ಮ ಕನ್ನಡವಿರಲಿ, ನಮ್ಮ ಇಂಗ್ಲೀಷು ಅಥವಾ ಇನ್ನಾವುದೇ ಭಾಷೆ ತನ್ನ ಮೂಲ ಸ್ವರೂಪದಲ್ಲಿ ಉಳಿದಿಲ್ಲ. ಎಲ್ಲವೂ ಎಲ್ಲಾ ಭಾಷೆಗಳ ಬೆರಕೆಯಾಗಿದೆ.

ಇದು ಉದಾರವಾದಿ ಆರ್ಥಿಕ ನೀತಿ ಮತ್ತು ಮಾರುಕಟ್ಟೆ ಪ್ರಣೀತ ಅರ್ಥ ಶಾಸ್ತ್ರದ ನೇರ ಪರಿಣಾಮ. ಇದನ್ನು ನಾವು ಒಂದೇ ಏಟಿಗೆ ದೂರ ಮಾಡುತ್ತೇವೆ ಎಂದೆನ್ನಲಾಗದಷ್ಟು ದೂರಕ್ಕೆ ಬಂದಿದ್ದೇವೆ. ಹಾಗಾಗಿಯೇ ಇಂದು ಉತ್ಸವಗಳು ಮತ್ತು ಜಾತ್ರೆಗಳು ಚಾಲ್ತಿಗೆ ಬಂದಿವೆ. ನಮ್ಮ ಸಮಕಾಲೀನ ಜನರನ್ನು ಸದ್ದು ಮಾಡಿಯೇ ಒಂದೆಡೆ ಸೇರಿಸುತ್ತಾ ಇದ್ದೇವೆ. ಹೀಗೆ ಸೇರಿದ ಜನರ ಜೊತೆಗೆ ಭಾಷೆ-ಸಂಸ್ಕೃತಿಯನ್ನು ಕುರಿತು ಮಾತಾಡುವುದಕ್ಕಿಂತ ಅಸಡ್ಡಾಳ ಹಾಸ್ಯವನ್ನು ಉಣಬಡಿಸುವ ಅಥವಾ ಭಾಷೆಯ ಸ್ವರೂಪವನ್ನೇ ಮರೆತ ಶಬ್ದ ಸಂಗೀತಕ್ಕೆ ಕುಣಿಯುವಂತಹ ವಾತಾವರಣ ಸೃಷ್ಟಿ ಮಾತ್ರ ಆಗುತ್ತಿದೆ.

ಹಾಗಾದರೆ ಹತಾಶೆಯೊಂದೇ ಉತ್ತರವೇ?

ಖಂಡಿತಾ ಇಲ್ಲ. ಒಳನಾಡಿಗರನ್ನು ಕನ್ನಡದ ಪರಿಸರದೊಳಗೆ ಉಳಿಸಿಕೊಳ್ಳಲು ಇನ್ನುಳಿದ ಎಲ್ಲಾ ನಾಡಿಗರಿಗೆ ತೆಗೆದುಕೊಳ್ಳುವ ಎಚ್ಚರಗಳಿಗಿಂತ ಹೆಚ್ಚು ಕಾಳಜಿವಹಿಸಬೇಕಿದೆ. ಈ ನಿಟ್ಟಿನಲ್ಲಿ ಇರುವ ಮಾರ್ಗೋಪಾಯಗಳನ್ನು ಹೀಗೆ ಪಟ್ಟಿ ಮಾಡಬಹುದು.

೧. ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಯಾರೂ ಯಾವುದೇ ಭಾಷೆಯನ್ನು ಕಲಿಯಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಲೇ ಬೇಕು ಎಂಬ ಶಿಕ್ಷಣ ನೀತಿ ಜಾರಿಗೆ ಬರಬೇಕು.

೨. ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಬೇಕು.

೩. ಹೀಗೆ ಕನ್ನಡ ಕಲಿತ ಮಕ್ಕಳನ್ನು ಕನ್ನಡದ ಪರಿಸರದ ಒಳಗೆ ಉಳಿಸಲು ಹಳಗನ್ನಡ ಕಾವ್ಯವಾಚನದಿಂದ ಹಿಡಿದು ಸುಗಮ ಸಂಗೀತದವರೆಗಿನ ಎಲ್ಲಾ ಕಾವ್ಯಗಳ ಅನುಸಂಧಾನವಾಗುವ ಮಾರ್ಗದಿಂದ ಕನ್ನಡ ಸಂಸ್ಕೃತಿಯ ಒಳಗೆ ಉಳಿಸಲು ನಿರಂತರ ಕ್ರಿಯಾಶೀಲತೆಯಿಂದ ತೊಡಗಬೇಕು.

೪. ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಎನ್ನುವ ಬದಲಿಗೆ ಕನ್ನಡಿಗರಿಗೆ ಆದ್ಯತೆ ಎಂಬ ಕಾನೂನು ಅಥವಾ ಸುಗ್ರೀವಾಜ್ಞೆ ತರಬೇಕು. ಯಾವುದೇ ಕೆಲಸಕ್ಕೆ ಸೇರುವವರಿಗೆ ಕನಿಷ್ಟ ಏಳನೆಯ ತರಗತಿಯ ಕನ್ನಡ ಪಠ್ಯವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ತಾಕೀತು ಮಾಡಬೇಕು.

೫. ಅದಾಗಲೇ ನಮ್ಮ ನಡುವೆ ಇರುವ ಕನ್ನಡೇತರರನ್ನು ಕನ್ನಡದ ಪರಿಸರದ ಒಳಗೆ ತರಲು ಅನುವಾಗುವಂತೆ ಎಲ್ಲಾ ಬಡಾವಣೆಗಳಲ್ಲಿ ಹಾಗೂ ವಸತಿ ಸಮ್ಮುಚ್ಛಯಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಬೇಕು. ಇಲ್ಲಿ ಕನ್ನಡ ಕಲಿಸಲು ಕನ್ನಡ ಸ್ನಾತಕೋತ್ತರ ಪದವೀಧರರನ್ನು ಶೃತಿಗೊಳಿಸಬೇಕು.

೬. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕನ್ನಡ ಪಾಠ ಮಾಡುವ ಎಲ್ಲಾ ಉಪಾಧ್ಯಾಯರಿಗೆ ವರ್ಷಕ್ಕೊಮ್ಮೆ ಬದಲಾಗುತ್ತಿರುವ ಕಾಲಮಾನದಲ್ಲಿ ಕನ್ನಡ ಕಲಿಸುವ ಬಗೆಗಳನ್ನು ಕುರಿತು ಕಮ್ಮಟಗಳನ್ನು ನಿರಂತರವಾಗಿ ನಡೆಸಬೇಕು.

೭. ನಮ್ಮ ಎಲ್ಲಾ ಮಾಧ್ಯಮಗಳಲ್ಲಿ ದುಡಿಯುತ್ತಾ ಇರುವ ‘ಕನ್ನಡ’ ಬಂಧುಗಳಿಗೆ ಕನ್ನಡ ಸಂಸ್ಕೃತಿ ಶಿಬಿರವನ್ನು ನಡೆಸುವ ಮೂಲಕ ಅವರು ಆಡುವ ಬಾಷೆಯನ್ನಷ್ಟೇ ಅಲ್ಲದೆ ಅವರ ಜ್ಞಾನಕೋಶಕ್ಕೂ ಕನ್ನಡದ ಚರಿತ್ರೆಯನ್ನು ಮತ್ತು ಆಧುನಿಕ ತಂತ್ರಜ್ಞಾನೀಯ ಯುಗದಲ್ಲಿ ಕನ್ನಡವನ್ನು ಬಳಸಬೇಕಾದ ಕ್ರಮ ಕುರಿತು ಶಿಬಿರ-ಕಮ್ಮಟಗಳನ್ನು ನಿಯಮಿತವಾಗಿ ನಡೆಸಬೇಕು. ಇದು ವಿಶೇಷವಾಗಿ ಆಕಾಶವಾಣಿ ಮತ್ತು ದೂರದರ್ಶನದಂತಹ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ನಿರೂಪಕ ವರ್ಗ ಮತ್ತು ಕಾರ್ಯಕ್ರಮ ತಯಾರಿಕ ವರ್ಗಕ್ಕೆ ತುರ್ತಾಗಿ ಆಗಬೇಕಾದ ಕೆಲಸ.

೮. ಅದಾಗಲೇ ಕನ್ನಡವನ್ನು ಆಯ್ಕೆ ಮಾಡಿಕೊಂಡು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮತ್ತು ಅವರನ್ನು ಹೊಸ ಕಾಲಘಟ್ಟದ ಅಗತ್ಯಗಳಿಗೆ ಹೊಂದುವಂತಹ ಸಂಶೋಧನೆಗಳಲ್ಲಿ ತೊಡಗಿಸಲು ಕಮ್ಮಟಗಳನ್ನು – ಶಿಬಿರಗಳನ್ನು ನಡೆಸಬೇಕು.

೯. ನಮ್ಮ ನಾಡಿನ ಒಳಗೆ ಇರುವ ಎಲ್ಲಾ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುವಂತಹ ‘ಉದ್ಯೋಗ ನೀತಿ’ಯೊಂದನ್ನು ಜಾರಿಗೆ ತರುವ ಪ್ರಯತ್ನಗಳಾಗುವಾಗಲೇ ಆ ಉದ್ಯಮಗಳಲ್ಲಿ ಇರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಕಾರ್ಮಿಕನು ಇಂತಿಷ್ಟು ವರ್ಷಗಳಲ್ಲಿ ‘ಕನಿಷ್ಟ ಏಳನೆಯ ತರಗತಿಯ ಕನ್ನಡ ಪಠ್ಯವನ್ನು ಪರೀಕ್ಷೆಯಲ್ಲಿ ಪಾಸು ಮಾಡಿದಾಗ ಮಾತ್ರ ಮುಂದಿನ ಬಡ್ತಿ’ ಎಂಬಂತಹ ಸ್ಥಿತಿಯನ್ನು ಖಾಸಗಿ ಉದ್ಯಮಗಳಲ್ಲಿ ಮಾತ್ರವೇ ಅಲ್ಲದೆ ಕೇಂದ್ರ ಸ್ವಾಮ್ಯದ ಉದ್ಯಮ ಮತ್ತು ಕಛೇರಿಗಳಲ್ಲಿ ತರಬೇಕು.

೧೦. ಮಹಾನಗರದ ಎಲ್ಲಾ ಮಾಲ್‌ಗಳೂ ಇಂದು ಕೇವಲ ವ್ಯಾಪಾರೀ ಕೇಂದ್ರಗಳಾಗಿವೆ. ಇಲ್ಲಿ ಅಂಗಡಿ-ಮುಂಗಟ್ಟುಗಳ ಜೊತೆಗೆ ಸಿನಿಮಾ ಪ್ರದರ್ಶನ ಮಂದಿರಗಳನ್ನು ಕಟ್ಟುತ್ತಿದ್ದಾರೆ. ಇನ್ನು ಮುಂದೆ ಇಂತಹ ಪ್ರತೀ ಮಾಲ್‌ಗಳಲ್ಲಿ ಸಿನಿಮಾ ಮಂದಿರದ ಹಾಗೆ ರಂಗಮಂದಿರ, ಸಂಗೀತ ಸಭೆ ನಡೆಸುವ ಸ್ಥಳ, ಚಿತ್ರ ಪ್ರದರ್ಶನ ಸ್ಥಳವೂ ಕಡ್ಡಾಯವಾಗಿ ಇರಲೇಬೇಕು ಎಂಬಂತಹ ಕಾನೂನನ್ನು ಪರವಾನಗಿ ನೀಡುವಾಗಲೇ ಜಾರಿಗೊಳಿಸಬೇಕು. ಇಂತಹ ಮಂದಿರಗಳಲ್ಲಿ ಪ್ರತಿದಿನ ಕನ್ನಡ ಸಂಸ್ಕೃತಿಯನ್ನು ಪ್ರಕಟಪಡಿಸುವ ಅವಕಾಶಗಳು ಕಲಾವಿದರಿಗೆ ಸಿಗಬೇಕು. ಈ ಮಾಲ್‌ಗಳ ಮಾಲೀಕರೇ ಇಂತಹ ಎಲ್ಲಾ ಚಟುವಟಿಕೆಗಳನ್ನು ನಡೆಸುವವರಿಗೆ ಗೌರವಧನ ಅಥವಾ ಸಂಬಳವನ್ನು ನೀಡುವಂತಾಗಬೇಕು. ಸರಕು ಮಾರುವ ಅಂಗಡಿಯಲ್ಲಿ ಕನ್ನಡವನ್ನೇ ಸರಕಾಗಿಸುವ ಮಾರ್ಗ ಇದು. ಈ ಮೂಲಕ ಹೊಸ ತಲೆಮಾರನ್ನು ಕನ್ನಡದ ಪರಿಸರದ ಒಳಗೆ ತರುವುದಕ್ಕೆ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು.

೧೧. ನಮ್ಮ ಎಲ್ಲಾ ಸಾರಿಗೆಗಳಲ್ಲಿ ಕನ್ನಡವು ಪ್ರಧಾನ ಭಾಷೆಯಾಗಿ ಬಳಕೆಯಾಗಬೇಕು. ಆ ಕನ್ನಡವು ಶುದ್ಧ ಕನ್ನಡವೂ ಆಗಿರುವಂತೆ ಎಚ್ಚರ ವಹಿಸಬೇಕು.

೧೨. ರಸ್ತೆ ಬದಿಗಳ ಎಲ್ಲಾ ಜಾಹೀರಾತು ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕನ್ನಡ ಬಳಸದ ಜಾಹೀರಾತು ಫಲಕಗಳಿಗೆ ಪರವಾನಗಿ ನೀಡಬಾರದು.

ಈ ಕೆಲವು ವಿವರಗಳಲ್ಲದೆ ಇನ್ನೂ ಅನೇಕ ಮಾರ್ಗೋಪಾಯಗಳಿವೆ. ಅವುಗಳನ್ನು ಚರ್ಚೆಯಲ್ಲಿ ವಿಸ್ತರಿಸೋಣ. ಕಾಲಕಾಲಕ್ಕೆ ಮಾರ್ಗೋಪಾಯಗಳ ಪಟ್ಟಿಯನ್ನು ನವೀಕರಿಸೋಣ.

·          

ಗಣಕ ಮತ್ತು ದಶಮಾಂಶ ಲೋಕದಲ್ಲಿ ಕನ್ನಡ

ಆಧುನಿಕ ಸಮಾಜವು ಡಿಜಿಟಲ್ (ದಶಮಾಂಶ) ಜಗತ್ತನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ. ಇಂದು ಈ ನಾಡಿನ ಪ್ರತಿಯೊಬ್ಬನ ಕೈಯಲ್ಲಿಯೂ ಸಂಚಾರಿ ದೂರವಾಣಿ ಬಂದಿದೆ. ಪ್ರತೀ ಮನೆಯಲ್ಲೂ ಟೆಲಿವಿಷನ್ ಬಂದಿದೆ. ಪ್ರತೀ ಸಣ್ಣ ಹುಡುಗನಿಗೂ ಗಣಕಯಂತ್ರ ನಡೆಸುವುದು ಬರುತ್ತದೆ. ಆದರೆ ಈ ಗಣಕ ಯಂತ್ರ ಲೋಕದಲ್ಲಿ ಕನ್ನಡದ ಪರಿಸರ ಸರಿಯಾಗಿಲ್ಲ. ಕರ್ನಾಟಕ ಸರ್ಕಾರವಂತೂ ಆಡಳಿತವನ್ನು ಗಣಕೀಕರಣಗೊಳಿಸಲು ದಾಪುಗಾಲಿಡುತ್ತಿದೆ. ಆದರೆ ಒಂದು ಗಣಕ ಯಂತ್ರದಲ್ಲಿ ಬರುವ ಕನ್ನಡವು ಮತ್ತೊಂದು ಗಣಕ ಯಂತ್ರದಲ್ಲಿ ಕಾಣುವುದೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಇನ್ನು ಹೀಗೆ ಬಳಸುವ ದಾಖಲೆಗೆ ಅದೆಂದೂ ಯಾವ ವೈರಸ್ ಬಡಿಯುತ್ತದೋ ಎಂಬ ಆತಂಕ. ಇದಕ್ಕೆ ನಾವು ವಿಂಡೋಸ್ ಎಂಬ ತಂತ್ರಾಂಶವನ್ನು ಬಳಸುತ್ತಾ ಇರುವುದು ಪ್ರಧಾನ ಕಾರಣ. ಪ್ರಾಯಶಃ ಉತ್ತರ ಪ್ರದೇಶ ಸರ್ಕಾರದಂತೆ ಆಡಳಿತ ಯಂತ್ರಕ್ಕೆ ಲಿನಕ್ಸ್‌ನಂತಹ ಪುಕ್ಕಟೆಯಾಗಿ ದೊರೆಯುವ ತಂತ್ರಾಂಶ ಬಳಸುವುದು ಮತ್ತು ತಮಿಳುನಾಡು ಸರ್ಕಾರದಂತೆ ಯೂನಿಕೋಡ್ ಎಂಬ ಭಾಷೆಯ ಬಳಕೆಯನ್ನು ಸಾರ್ವತ್ರೀಕರಣಗೊಳಿಸುವುದು ಇಂದು ಸರಿಯಾದ ಮಾರ್ಗ. ಆ ನಿಟ್ಟಿನಲ್ಲಿ ಅನೇಕ ವರದಿಗಳು ಸರ್ಕಾರಕ್ಕೆ ತಲುಪಿವೆ. ಆದರೆ ಆಗಿರುವ ಕೆಲಸಗಳು ತೀರಾ ಕಡಿಮೆ.

ಗಣಕಲೋಕದಲ್ಲಿ ಕನ್ನಡದ ಏಕೀಕರಣವಾಗುವಾಗಲೇ ಸಂಚಾರಿ ದೂರವಾಣಿಗಳಲ್ಲೂ ಕನ್ನಡವನ್ನೇ ಬಳಸುವಂತೆ ಎಲ್ಲಾ ಖಾಸಗಿ ಸಂಚಾರಿ ದೂರವಾಣಿ ನಿರ್ವಹಣಾ ಸಂಸ್ಥೆಗಳಿಗೆ ಮತ್ತು ಸಂಚಾರಿ ದೂರವಾಣಿ ತಯಾರಕರಿಗೆ ಸರ್ಕಾರವೇ ಒತ್ತಡ ಹೇರಬೇಕಾಗಿದೆ. ಬ್ಲಾಕ್‌ಬೆರ್ರಿಯಂತಹ ಸಂಚಾರಿ ದೂರವಾಣಿಯ ಮೂಲಕ ನಮ್ಮ ಪೋಲೀಸ್ ಇಲಾಖೆಯು ಕೆಲಸ ಮಾಡುತ್ತಿದೆ. ಆದರೆ ಈ ಬ್ಲಾಕ್‌ಬೆರ್ರಿಯಲ್ಲಿ ಕನ್ನಡವೇ ಬಾರದು. ಹೀಗಾಗಿ ನಮ್ಮ ಪೋಲೀಸರು ಕನ್ನಡಕ್ಕೆ ಬದಲಾಗಿ ಇಂಗ್ಲೀಷ್ ಭಾಷೆಯನ್ನೇ ಬಳಸುತ್ತಾ ಇರುವುದನ್ನು ಬೆಂಗಳೂರಿನಂತಹ ನಗರಿಯಲ್ಲಿ ಕಾಣಬಹುದು. ಇದನ್ನು ಸರಳವಾಗಿ ತಪ್ಪಿಸಬಹುದು. ನಮ್ಮ ಅಧಿಕಾರ ವರ್ಗವು ಕನ್ನಡವಿಲ್ಲದ ಸಂಚಾರಿ ದೂರವಾಣಿಗಳನ್ನು ಬಳಸಲಾಗದು ಎಂಬ ಒಂದು ಆದೇಶ ಕೊಟ್ಟರೆ ತಮ್ಮ ಆದಾಯ ತಪ್ಪುತ್ತದೆ ಎಂಬ ಹೆದರಿಕೆಯಿಂದಲೇ ಈ ಎಲ್ಲಾ ಸಂಚಾರಿ ದೂರವಾಣಿಗಳ ತಯಾರಕರು ಮಣಿಯುತ್ತಾರೆ ಮತ್ತು ಕನ್ನಡ ತಂತ್ರಾಂಶಗಳನ್ನೊಳಗೊಂಡ ಸಂಚಾರಿ ದೂರವಾಣಿಗಳು ಬರುತ್ತವೆ.

ಇದೆಲ್ಲಾ ಆಗುವಷ್ಟರಲ್ಲಿ ಯೂನಿಕೋಡ್‌ನಲ್ಲಿ ಕನ್ನಡದ ಬಳಕೆಗೆ ಅನೇಕ ತೊಂದರೆಗಳಿವೆ. ಅವುಗಳೆಲ್ಲವನ್ನೂ ಅದಾಗಲೇ ಅನೇಕರು ಪಟ್ಟಿ ಮಾಡಿ ನೀಡಿದ್ದಾರೆ. ಆ ಲೋಪ ದೋಷಗಳನ್ನು ತಿದ್ದುವ ಕೆಲಸ ಕೂಡಲೇ ಆಗಬೇಕು. ಅದರೊಂದಿಗೆ ಕಾಮನ್ ಪ್ಲಾಟ್‌ಫಾರಂ ಕನ್‌ವರ‍್ಷನ್ ಸಾಫ್ಟ್‌ವೇರ್ ಎಂದು ಕರೆಯಲಾಗುವ, ಯಾವ ತಂತ್ರಾಂಶ ಬಳಸಿಯೇ ಯೂನಿಕೋಡ್‌ನಲ್ಲಿ ಬರೆದದ್ದು ಅಷ್ಟೇ ಸರಳವಾಗಿ ಮತ್ತೊಂದು ಗಣಕ ಯಂತ್ರದಲ್ಲಿ ಕಾಣುವಂತಾಗುವ ತಂತ್ರಾಂಶ ಅಭಿವೃದ್ಧಿಯ ಕೆಲಸ ಆಗಬೇಕು.

ಇವುಗಳು ಆಗುವಾಗಲೇ ಕನ್ನಡದ ಸ್ಪೆಲ್ ಚೆಕ್ಕರ್‌ಗಳು ಮತ್ತು ವ್ಯಾಕರಣ ಪರೀಕ್ಷಕ ತಂತ್ರಾಮಶಗಳನ್ನು ಸಹ ಆಧುನಿಕ ಕಾಲಕ್ಕೆ ಹೊಂದುವಂತೆ ಅಭಿವೃದ್ಧಿ ಪಡಿಸಬೇಕಾಗುತ್ತದೆ. ಇವುಗಳ ಜೊತೆಗೆ ಗಣಕಗಳಲ್ಲಿ ತಂತ್ರಾಂಶದ ಜೊತೆಗೆ ಅಡಕವಾಗಿರುವಂತೆ ಕನ್ನಡ ನುಡಿಕೋಶಗಳು ಲಭ್ಯವಿರಬೇಕು. ಇದಕ್ಕಾಗಿ ಯಾವ ನುಡಿಕೋಶವನ್ನು ಬಳಸಬೇಕು ಮತ್ತು ಆ ನುಡಿಕೋಶವು ಆಧುನಿಕ ಕಾಲಘಟ್ಟಕ್ಕೆ ಹೊಂದುವಂತೆ ಮಾಡಲು ಏನೆಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಜ್ಞರಿಂದ ಪರೀಕ್ಷಿಸಿ ಸಿದ್ಧಪಡಿಸಬೇಕು.

ಇವುಗಳ ಜೊತೆಗೆ ಕನ್ನಡದ ಎಲ್ಲಾ ಕೃತಿಗಳ, ಶಾಸನಗಳ, ಲಿಪಿ ಮಾದರಿಗಳ ಕಾರ್ಪಸ್ ಸಹ ದಶಮಾಂಶ ಪದ್ಧತಿಯಲ್ಲಿ ದೊರೆಯುವಂತೆ ಆಗಬೇಕು. ಇದು ಕನ್ನಡ ಪರಿಸರವನ್ನು ಗಣಕಲೋಕದಲ್ಲಿ ಗಟ್ಟಿಗೊಳಿಸಲು ಸಹಾಯಕವಾಗುತ್ತದೆ.

ಇವುಗಳ ಜೊತೆಗೆ ಕನ್ನಡವನ್ನು ಗಣಕದಲ್ಲಿ ಬಳಸಲು ಆಡಳಿತ ಸಿಬ್ಬಂದಿಗೆ ಮಾತ್ರವೇ ಅಲ್ಲದೆ ಪ್ರಾಥಮಿಕ ಶಾಲೆಯಲ್ಲಿಯೇ ಕನ್ನಡದ ಬಳಕೆಯನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುವಂತಹ ಚಟುವಟಿಕೆಗಳು ಆಗಬೇಕು.

ಇವೆಲ್ಲವೂ ನಮ್ಮೆದುರಿಗೆ ಇರುವ ಅಗತ್ಯಗಳು. ಇವುಗಳೆಲ್ಲವನ್ನೂ ಪೂರೈಸಲು ಸಮರೋಪಾದಿಯಲ್ಲಿ ಕನ್ನಡಿಗರು ಕೆಲಸ ಮಾಡಬೇಕಿದೆ. ಪ್ರಾಯಶಃ ತಂತ್ರಾಂಶ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಕರ್ನಾಟಕದ ಅನೇಕ ಉದ್ದಿಮೆಗಳನ್ನು ಈ ನಿಟ್ಟಿನಲ್ಲಿ ತೊಡಗಿಸಿದರೆ ಗಣಕಲೋಕದ ಕನ್ನಡದಲ್ಲಿಯೂ ಏಕೀಕರಣ ಆಗುವುದು ಸಾಧ್ಯ.

·          

ನಮ್ಮ ಶಿಕ್ಷಣ ಪದ್ಧತಿ ಮತ್ತು ಕನ್ನಡದ ಪರಿಸರ

ಇಂದು ನಮ್ಮ ಸ್ನಾತಕೋತ್ತರ ಶಿಕ್ಷಣದಲ್ಲಿ ಅನೇಕ ಹೊಸ ಆಲೋಚನೆಗಳು ಪ್ರವೇಶವಾಗಿವೆ. ಅದರಲ್ಲಿಯೂ ಭಾಷೆಯ ಅಧ್ಯಯನದಲ್ಲಿ ಹೊಸ ಸಂಶೋಧನೆಗಳು ಆಗುತ್ತಿವೆ. ಆದರೆ ಇವುಗಳು ಪ್ರಾಥಮಿಕ ಶಿಕ್ಷಣ ಲೋಕದಲ್ಲಿ ಕನ್ನಡ ಕಲಿಸುತ್ತಿರುವವರಿಗೆ ತಿಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪ್ರಾಥಮಿಕ ಹಂತದ ಕನ್ನಡ ಶಿಕ್ಷಣ ಕ್ರಮವನ್ನು ಆಧುನಿಕ ಕಾಲಘಟ್ಟಕ್ಕೆ ಹೊಂದುವಂತೆ ಮಾರ್ಪಡಿಸುವುದು ನಮ್ಮೆದುರಿಗೆ ಇರುವ ದೊಡ್ಡ ಸವಾಲು. ಇದಕ್ಕಾಗಿ ಪ್ರತೀ ವರ್ಷವೂ ನಮ್ಮ ಪ್ರಾಥಮಿಕ ಶಿಕ್ಷಣದ ಕನ್ನಡ ಉಪಧ್ಯಾಯರಿಗೆ ಬೇಸಿಗೆ ಶಿಬಿರಗಳನ್ನು ಹಿರಿಯ ಕನ್ನಡ ವಿದ್ವಾಂಸರಿಂದ ನಡೆಸಬೇಕು. ಆ ಮೂಲಕ ನಮ್ಮ ಶಿಕ್ಷಕರು ಕನ್ನಡವನ್ನು ಭಾಷೆಯಾಗಿ ಅರಿಯುವ ಕ್ರಮಗಳನ್ನು ಆಧುನಿಕ ವಿಜ್ಞಾನದ ಜೊತೆಗೆ ಕಲಿಯುವುದು ಸಾಧ್ಯವಾಗಬೇಕು. ಆಗ ನಮ್ಮ ಮುಂದಿನ ತಲೆಮಾರುಗಳು ಶಾಲೆಯಲ್ಲಿಯೇ ಹೊಸ ಕಾಲಘಟ್ಟವನ್ನು ತಮ್ಮ ಭಾಷೆಯ ಮೂಲಕ ಎದುರಿಸುವುದು ಸಾಧ್ಯವಾಗುತ್ತದೆ. ಇದಕ್ಕೆ ಭಾಷೆಯನ್ನು ಪಾರಂಪರಿಕ ಕ್ರಮದಲ್ಲಿ ಮಾತ್ರ ನೋಡುವ, ಕಲಿಸುವ ಅಭ್ಯಾಸವನ್ನು ಬಿಟ್ಟುಕೊಟ್ಟು, ಆಧುನಿಕ ಜ್ಞಾನ ಶಿಸ್ತುಗಳ ಮೂಲಕ ಕನ್ನಡ ಲೋಕಕ್ಕೆ ನಮ್ಮ ಶಿಕ್ಷಕರನ್ನು ಕರೆದೊಯ್ಯಬೇಕಿದೆ. ಇದು ಎಷ್ಟು ಶೀಘ್ರವಾಗಿ ಸಾಧ್ಯವಾಗುವುದೋ ಅಷ್ಟೂ ಬೇಗ ನಮ್ಮ ಮುಂದಿನ ತಲೆಮಾರು ಆಧುನಿಕ ಯುಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನ್ನಡದ ಜೊತೆಗೆ ಬದುಕುವುದು ಸಾಧ್ಯವಾಗುತ್ತದೆ.

ಇದೇ ಸಂದರ್ಭದಲ್ಲಿ ನಮ್ಮ ಮಕ್ಕಳು ಯಾವುದೇ ಭಾಷೆಯನ್ನು ಯಾವುದೇ ಶಾಲೆಯಲ್ಲಿ ಕಲಿಯುತ್ತಾ ಇರಲಿ, ಆದರೆ ಅವರು ಆಡುವಾಗ ಬಳಸುವ ಭಾಷೆಯನ್ನು ಕನ್ನಡವಾಗಿಯೇ ಉಳಿಸಬೇಕದ್ದು ಮುಖ್ಯವಾಗಿದೆ. ಭಾಷೆಯೊಂದು ಪ್ರತೀ ವ್ಯಕ್ತಿಯೊಡನೆ ಅವನ ಬಾಲ್ಯಕಾಲದ ಆಟದ ಮೂಲಕವೇ ಅರಳುತ್ತದೆ. ಈ ನಿಟ್ಟಿನಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಬದುಕಿನ ಅಗತ್ಯಕ್ಕಾಗಿ ಕಲಿಯುತ್ತಿರುವ ಹುಡುಗರಿಗೂ ಆಟೋಟಗಳು ಕನ್ನಡದಲ್ಲಿ ಇರುವಂತಹ ವಾತಾವರಣ ಮೂಡಿಸಬೇಕಿದೆ. ನಮ್ಮ ಮಕ್ಕಳು ಜಗತ್ತಿನ ಎಲ್ಲಾ ಭಾಷೆಗಳನ್ನೂ ಕಲಿಯಲಿ. ಆದರೆ ಕನ್ನಡದಲ್ಲಿ ಆಡಲಿ. ಕನ್ನಡದಲ್ಲಿ ಬದುಕಲಿ ಎಂಬುದು ನಮ್ಮ ಶಿಕ್ಷಣ ವ್ಯವಸ್ಥೆಯ ಧ್ಯೇಯ ವಾಕ್ಯವಾಗುವಂತೆ ಈ ಕನ್ನಾಡಿನ ಎಲ್ಲಾ ಪೋಷಕರು ಒತ್ತಾಯ ತರಬೇಕಾಗಿದೆ.

·          

ಕನ್ನಡ ಮತ್ತು ಆಧುನಿಕ ವಿಜ್ಞಾನ

ಯಾವುದೇ ಭಾಷೆಯನ್ನು ಆಧುನಿಕ ವಿಜ್ಞಾನಕ್ಕೆ ಒಗ್ಗಿಸಿಕೊಳ್ಳದೇ ಹೋದಾಗ ವಿಭಿನ್ನ ಜ್ಞಾನ ಶಿಸ್ತುಗಳಿಗೆ ಆ ಭಾಷೆ ಹೊಂದಿಕೊಳ್ಳುವುದಿಲ್ಲ. ಇಲ್ಲಿ ನಮ್ಮ ಪರಂಪರೆ ಹಾಗಿತ್ತು-ಹೀಗಿತ್ತು ಎಂದು ಕೊಂಡಾಡುತ್ತಾ ಕೂರುವ ಮಡಿವಂತ ಸ್ಥಿತಿಗಿಂತ, ನಾವು ಭಾಷೆಯನ್ನು ಬಲಸುವ ಕ್ರಮವನ್ನು ಮುಕ್ತಗೊಳಿಸಬೇಕಿದೆ. ಕನ್ನಡವನ್ನು ಸಂಸ್ಕೃತದ ಮರಿ ಮಾಡುವುದಕ್ಕಿಂತ ಕನ್ನಡಕ್ಕಿರುವ ಸ್ವಾಯತ್ತತೆಯನ್ನು, ಸಂಸ್ಕೃತಕ್ಕಿಂತ ಪುರಾತನವಾದ ಭಾಷೆಯಿದು ಎಂಬುದನ್ನು ನೆನಪಲ್ಲಿಟ್ಟುಕೊಂಡು ಹೊಸ ಕೋನದಿಂದ ನೋಡಬೇಕಿದೆ. ಆಗ ಆಧುನಿಕ ವಿಜ್ಞಾನವನ್ನು ಕಲಿಯಲು ಬೇಕಾದ ಹಾಗೆ ನಮ್ಮ ಕನ್ನಡವನ್ನು ಬಾಗಿಸಲು ಸಾಧ್ಯವಾಗುತ್ತದೆ. ಇದಕ್ಕೆ ಅನ್ಯ ಜ್ಞಾನ ಶಿಸ್ತುಗಳಲ್ಲಿ ದುಡಿಯುತ್ತಿರುವ ಕನ್ನಡಿಗರನ್ನು ತಮ್ಮ ಜ್ಞಾನವನ್ನು ಕನ್ನಡದ ಮೂಲಕವೇ ಪ್ರಚುರ ಪಡಿಸಲು ಅನುವಾಗುವಂತೆ ಪ್ರೇರೇಪಿಸಬೇಕಿದೆ. ಅಟಾಮಿಕ್ ಫಿಸಿಕ್ಸ್‌ನಲ್ಲಿ ಸಂಶೋಧನೆ ಮಾಡುತ್ತಿರುವವರು ತಮ್ಮ ಸಂಶೋಧನೆಗಳನ್ನು ಕನ್ನಡದಲ್ಲಿಯೇ ಪ್ರಕಟಿಸಲು ಅನುವಾಗವಂತೆ ಭಾಷೆಯನ್ನು ಒಗ್ಗಿಸುವ ಪ್ರಯತ್ನ ಆಗಬೇಕಿದೆ. ಇಂತಹ ಸಣ್ಣ ಪ್ರಯತ್ನಗಳು ಆಗಿವೆ. ಅವುಗಳು ವಿಸ್ತಾರಗೊಂಡು ಜಗತ್ತಿನ ಎಲ್ಲಾ ಜ್ಞಾನಗಳೂ ಕನ್ನಡದಲ್ಲಿಯೇ ದೊರೆಯುವಂತೆ ಆದಾಗ ಮಾತ್ರ ಆಧುನಿಕ ವಿಜ್ಞಾನದ ಎಲ್ಲಾ ಹೊಸ ಗಾಳಿಗೆ ಕನ್ನಡವೂ ಕನ್ನಡದ ಪರಿಸರವು ವಿಸ್ತರಿಸಿಕೊಳ್ಳುವುದು ಸಾಧ್ಯ.

·          

ಕನ್ನಡದ ಉಪಭಾಷೆಗಳು ಮತ್ತು ಕನ್ನಡ ಪರಿಸರ

ಕನ್ನಡಕ್ಕೆ ಅನೇಕ ಉಪಭಾಷೆಗಳಿವೆ. ಕರ್ನಾಟಕ ಸರ್ಕಾರವೇ ಗುರುತಿಸಿರುವ ಅನೇಕ ಸೋದರ ಭಾಷೆಗಳು ಕನ್ನಡದಷ್ಟೇ ಹಳತಾಗಿವೆ. ಈ ಎಲ್ಲಾ ಉಪಭಾಷೆಗಳು ಮತ್ತು ಸೋದರ ಭಾಷೆಗಳ ಪರಿಸರವನ್ನು ಕಾಪಾಡುವುದು ಸಹ ಕನ್ನಡಿಗರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ನಾವು ನಮ್ಮ ಸೋದರ ಭಾಷೆಗಳನ್ನು ಪ್ರೀತಿಯಿಂದ ಗೌರವಿಸದೆ ಉಳಿದಾಗ ಕನ್ನಡಕ್ಕೆ ಆತುಕೊಳ್ಳುವ ಗೊಡೆಗಳಿಲ್ಲದಂತಹ ಪರಿಸ್ಥಿತಿ ಒದಗಬಹುದು. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನಲ್ಲಿ ಇನ್ನೂ ಜೀವಂತವಾಗಿರುವ ಕೊಡವ, ತುಳು, ಬ್ಯಾರಿ, ಕೊಂಕಣಿ, ಉರ್ದು ಭಾಷೆಗಳಲ್ಲದೆ ಇರವ, ಹಾಲಕ್ಕಿ, ಕೊರಗ, ಹಕ್ಕಿಪಿಕ್ಕಿ, ಲಮಾಣಿ ಮುಂತಾದ ಉಪಭಾಷೆಗಳನ್ನು ಸಹ ಕನ್ನಡಿಗರು ಪೊರೆಯಬೇಕಿದೆ. ಕನ್ನಡದ ಜೀವಂತಿಕೆಗೆ ಈ ಎಲ್ಲಾ ಭಾಷೆಗಳೂ ಕಾರಣ ಎಂಬುದನ್ನು ಮರೆಯದೆ ಮುಂದುವರೆಯಬೇಕಾಗಿದೆ. ಇವುಗಳಲ್ಲಿ ಲಿಪಿ ರಹಿತ ಭಾಷೆಗಳಿಗೆ ಕನ್ನಡ ಲಿಪಿಯನ್ನು ಬಳಸಲು ಪ್ರೇರೇಪಿಸುವ ಮೂಲಕ ಕನ್ನಡದ ಪರಿಸರವನ್ನು ವಿಸ್ತರಿಸಿಕೊಳ್ಳಬೇಕಿದೆ. ಈ ಎಲ್ಲಾ ಸೋದರ ಭಾಷೆಗಳು ಹಾಗೂ ಉಪಭಾಷೆಗಳನ್ನು ಕನ್ನಡ ಕುಟುಂಬದ ಒಳಗಡೆಯೇ ಉಳಿಸಿಕೊಳ್ಳುವ ಮೂಲಕ ಅವುಗಳಲ್ಲಿ ನಿರ್ಜೀವವಾಗುತ್ತಾ ಇರುವ ಭಾಷೆಗಳಿಗೆ ಹೊಸ ಜೀವ ಕೊಡಬೇಕಿದೆ.

·          

ಒಟ್ಟಂದದ ನೋಟ

ಕನ್ನಡವೂ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ ಎಂಬ ಮಾತನ್ನಾಡುತ್ತಾ ಉಳಿಯುವುದು ಆಧುನಿಕ ಕಾಲಮಾನದಲ್ಲಿ ಅಪಾಯಕಾರಿ ಆಗಬಹುದು. ಈ ಭಾಷೆಯ ಪ್ರಾಚೀನತೆಯನ್ನು ಸಾಬೀತು ಪಡಿಸುವ ಕೆಲಸಗಳ ಜೊತೆಗೆ ಆಧುನಿಕ ಕಾಲಕ್ಕೆ ಈ ಭಾಷೆಯನ್ನು, ಭಾಷಿಕರನ್ನು ಶೃತಿಗೊಳಿಸುವುದು ಸಧ್ಯದ ಪ್ರಧಾನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಎದುರಿಗೆ ಇರುವ ಎಲ್ಲಾ ಸವಾಲುಗಳನ್ನೂ ಪರಿಹರಿಸುವ ಇಚ್ಛಾಶಕ್ತಿಯನ್ನು ಎಲ್ಲಾ ಕನ್ನಡಿಗರೂ ಬೆಳೆಸಿಕೊಳ್ಳಬೇಕಿದೆ. ಆ ಮೂಲಕ ಈ ನಾಡನ್ನಾಳುವ ಸರ್ಕಾರಗಳು ನಿಧಾನಿಯಾದಾಗ ಎಚ್ಚರಿಸಿ, ಕನ್ನಡದ ಕೆಲಸಗಳನ್ನು ತ್ವರಿತವಾಗಿ ಆಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಇಲ್ಲವಾದಲ್ಲಿ ಅದಾಗಲೇ ವಿಶ್ವಸಂಸ್ಥೆಯು ಹೊರಡಿಸಿರುವ ಸಾಯುತ್ತಿರುವ ಭಾಷೆಗಳ ಪಟ್ಟಿಗೆ ಕನ್ನಡ ಮತು ಕನ್ನಡದ ಪರಿಸರವೂ ಸೇರಿಹೋಗುತ್ತದೆ ಎಂಬುದನ್ನು ನಾವು ಮರೆಯಬಾರದು.

ಇದಿಷ್ಟೂ ಸಧ್ಯಕ್ಕೆ ಈ ಪ್ರಬಂಧ ಮಂಡಕ ಗುರುತಿಸಿರುವ ವಿವರ, ಇದಲ್ಲದೆ ಕನ್ನಡದ ಪರಿಸರ ನಿರ್ಮಾಣಕ್ಕೆ ಇರುವ ಇನ್ನೂ ಅನೇಕ ತೊಡಕುಗಳಿವೆ. ಅವುಗಳನ್ನು ಈ ನಾಡಿನ ಪ್ರತಿಯೊಬ್ಬ ಕನ್ನಡಿಗನು ಸೇರಿಸುತ್ತಾ, ಅವುಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಸಹ ಕಂಡುಕೊಳ್ಳಬೇಕಿದೆ.

ಇಷ್ಟೆಲ್ಲಾ ವಿಷಯ ಮಂಡಿಸಲು ಅವಕಾಶ ನೀಡಿದ್ದಕ್ಕಾಗಿ ಮತ್ತೊಮ್ಮೆ ತಮಗೆಲ್ಲರಿಗೂ ವಂದಿಸುತ್ತಾ ವಿರಮಿಸುತ್ತೇನೆ!

* * *

– ಬಿ.ಸುರೇಶ,

ಮೀಡಿಯಾಹೌಸ್, ೧೧೬೨, ೨೨ನೇ ಅಡ್ಡರಸ್ತೆ, ೨೩ನೇ ಮುಖ್ಯರಸ್ತೆ,

ಬನಶಂಕರಿ ೨ನೇ ಹಂತ, ಬೆಂಗಳೂರು – ೫೬೦ ೦೭೦,

ಮಿಂಚೆ:

ಆಕರಗಳು:

. ಕನ್ನಡ ನುಡಿ-ಗಡಿ ಜಾಗೃತಿ ಜಾಥಾದ ವರದಿ

. ಜೋಯಿಡಾ ಗಡಿ ಕನ್ನಡಿಗರ ಸಮಾವೇಶದ ವರದಿ

. ಅರುಹು-ಕುರುಹು ತ್ರೈಮಾಸಿಕದ ಅಕ್ಟೋಬರ್-ಡಿಸೆಂಬರ್ ಸಂಚಿಕೆ ಹಾಗೂ ಜನವರಿ-ಮಾರ್ಚ್ ಸಂಚಿಕೆ

. ಪ್ರಜಾವಾಣಿ ದೈನಿಕದ ೬ ಮಾರ್ಚ್ ೨೦೧೧ರ ವಿಶೇಷ ಸಾಪ್ತಾಹಿಕ ಪುರವಣೆ

. ಸಾಧನಾ ಪತ್ರಿಕೆಯ ೨೭ ಮತ್ತು ೩೨ನೇ ಸಂಚಿಕೆಯಲ್ಲಿನ ಲೇಖನಗಳು.

 

Advertisements

2 Responses to “ಕನ್ನಡ ಪರಿಸರ ನಿರ್ಮಾಣ – ಸಾಧ್ಯತೆಗಳು ಹಾಗೂ ಸವಾಲುಗಳು”


 1. 1 chethan priya March 20, 2012 at 6:26 pm

  dear suresh sir., i m
  chethan
  from
  chickmagalur. Completed degrees
  in bsc and animation. Now
  working as an animator in
  bangalore..
  I am very passionate about
  theatre, dramas and animation.. I
  had completed my acting training
  in kuvempu university, shimoga..
  And given lots of drama shows
  across india.,even won some gud
  awards.
  By this i am sincerely asking a
  chance to work as an assistant
  director or an artist under u… I
  am ambisious, hard working and
  dedicative… Pls consider me nd
  give me a
  chance to show my real hidden
  talent sir… cal me…. 9972220436
  sir., pls give ur email id so i can
  send my resume to u..

 2. 2 ಶಿವರಾಜ June 3, 2013 at 5:07 pm

  ಅದ್ಬುತವಾದಂತಹ ಟಿಪ್ಪಣಿ.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: