ವಿಜಯಮ್ಮ ಯಾ ಡಾ.ವಿಜಯಾ ಯಾ ಇಳಾ ಯಾ ಮಮಿ ಯಾ ನಮ್ಮಮ್ಮ ಎಂಬ ಪವಾಡ…!

(ಮಾವಿನಕೆರೆ ರಂಗನಾಥ್‌ ಅವರು ಹೊರತರುತ್ತಿರುವ ಮಾಸ್ತಿ ಪ್ರಶಸ್ತಿ ಪಡೆದವರನ್ನು ಕುರಿತ ಹೊತ್ತಿಗೆಗೆ ಬರೆದ ಲೇಖನ)

ನಮ್ಮಮ್ಮ ನನ್ನ ಪಾಲಿಗೆ ಕೇವಲ ಅಮ್ಮ ಅಲ್ಲ ಅಪರೂಪದ ಗುರು. ನನಗೆ ಅಕ್ಷರಾಭ್ಯಾಸ ಮಾಡಿಸಿದಾಕೆ. ಆದರೆ ಈ ನಮ್ಮಮ್ಮ ನನ್ನ ಕಣ್ಣೆದುರಲ್ಲೇ ಸಾಧಾರಣ ಗೃಹಿಣಿ, ದ್ವಾದಶಿ ಪೂಜೆ ಇತ್ಯಾದಿಗಳನ್ನು ಮಾಡುವ ಸ್ಥಿತಿಯಿಂದ ಇಂದು ಆಕೆಯನ್ನು ‘ಅಮ್ಮಾ!’ ಎನ್ನುವ ದೊಡ್ಡ ಸಂಕುಲವನ್ನು ಸೃಷ್ಟಿಸಿದ್ದು ನನ್ನ ಕಣ್ಣೆದುರಿಗೆ ಆಗಿಹೋದ ಪವಾಡ. ನಮ್ಮಮ್ಮನಿಂದಾಗಿ ನಾನು ಪವಾಡವನ್ನು ನಂಬುವಂತಾಯಿತು ಎಂದು ಧೈರ್ಯವಾಗಿ ಹೇಳಬಹುದು. ಈ ನಮ್ಮಮ್ಮ ನಾಡಿನ ಪಾಲಿಗೆ ವಿಜಯಮ್ಮ. ಸರ್ಕಾರದ ಗುರುತು ಚೀಟಿಯಲ್ಲಿ ವಿಜಯಾ. ವಿಶ್ವವಿದ್ಯಾಲಯಗಳಲ್ಲಿ ಡಾ.ವಿಜಯಾ. ನನ್ನಂತಹ ಹಲವರಿಗೆ ನಿರಂತರವಾಗಿ ಪ್ರೀತಿ ತೋರುವ ಇಳಾ.


ವಿಜಯಮ್ಮನ ಜೀವನಪಥದಲ್ಲಿ ಆಕೆ ದುಡಿದ ಕ್ಷೇತ್ರಗಳು ಒಂದೆರಡಲ್ಲ, ಹಲವು. ಐಟಿಐನಂತಹ ಫ್ಯಾಕ್ಟರಿಯಲ್ಲಿ ದುಡಿಮೆ, ನಂತರ ಪತ್ರಿಕೋದ್ಯಮ, ಪತ್ರಿಕೆಗಳ ಸಂಪಾದಕಿಯಾಗಿ ಹಲವು ಮೊದಲುಗಳನ್ನು ಮಾಡಿದ್ದು, ಸಣ್ಣ ಕತೆಗಳನ್ನು ಬರೆಯುವವರ ದೊಡ್ಡ ಪರಂಪರೆಯನ್ನು ಸೃಷ್ಟಿಸಿದ್ದು, ಜನಪದ ಸ್ವರೂಪದಲ್ಲಿ ಉಳಿದಿದ್ದ ಸೂತ್ರದಗೊಂಬೆ ಆಟವನ್ನು ಸಮಕಾಲೀನ ಕಾಲಕ್ಕೆ ತಕ್ಕಂತೆ ಮರಳಿ ತಂಡ ಕಟ್ಟಿ ಚಾಲ್ತಿಗೆ ತಂದದ್ದು, ಬೀದಿನಾಟಕ ಎಂಬ ಹೊಸ ಪಾಕಾರದ ಮೂಲಕ ರಾಜಕೀಯ ಚಳುವಳಿಗಳನ್ನು ರೂಪಿಸಿದ್ದು, ರಂಗಭೂಮಿ ಚಳುವಳಿಗೆ ಇಂಬುಕೊಡಲೆಂದು ರಂಗಶಾಲೆ ಕಟ್ಟಲು ನೆರವಾದದ್ದು, ಅನೇಕ ರಂಗಶಿಬಿರಗಳ ಮೂಲಕ ಹೊಸ ನಾಟಕಕಾರರ ಹುಟ್ಟಿಗೆ ಕಾರಣವಾದದ್ದು, ಚಲನಚಿತ್ರ ಪತ್ರಿಕೋದ್ಯಮಕ್ಕೆ ಕಾಲಿಟ್ಟು ಸಾರ್ವಜನಿಕರು ಕೀಳಾಗಿ ಕಾಣುತ್ತಿದ್ದ ಕಲಾವಿದರು ತಂತ್ರಜ್ಞರಿಗೆ ಗೌರವ ದೊರೆಯುವಂತಹ ಬರಹಗಳ ಮೂಲಕ ಅನೇಕರಲ್ಲಿ ಇದ್ದ ಕೀಳರಿಮೆ ತೊಲಗಿಸಿದ್ದು, ದಲಿತ-ಬಂಡಾಯ ಚಳುವಳಿಗಳಲ್ಲಿ ಸ್ವತಃ ಭಾಗವಹಿಸಿ ಅನೇಕ ದಲಿತ ಹುಡುಗರಿಗೆ ಅಮ್ಮನಾಗಿದ್ದು, ಸ್ವತಃ ನಾಟಕಕಾರ್ತಿಯಾಗಿ ಅನೇಕ ನಾಟಕಗಳನ್ನು ಬರೆದದ್ದು, ಸ್ವತಃ ಮುದ್ರಣಾಲಯವೊಂದನ್ನು ಸ್ಥಾಪಿಸಿ ಆ ಮೂಲಕ ಅನೇಕ ಹೊಸ ಲೇಖಕರ ಬರಹಗಳು ಮುದ್ರಣವಾಗಲು ಕಾರಣವಾಗಿದ್ದು, ಈ ನಡುವೆ ಓದು ಮುಂದುವರೆಸಿ ಎಂ.ಎ. ಪದವಿ ಪಡೆದು, ಮಹಾಪ್ರಬಂಧವನ್ನೂ ಬರೆದು ಡಾಕ್ಟರ್ ಎನಿಸಿಕೊಂಡದ್ದು, ಕನ್ನಡ ಚಲನಚಿತ್ರ ಇತಿಹಾಸ ಎಂಬ ಬೃಹತ್ ಗ್ರಂಥವನ್ನು ರೂಪಿಸಿದ್ದು, ಬೆಂಗಳೂರು ದರ್ಶನ ಎಂಬ ಮಹಾನಗರ ಕುರಿತ ವಿಶ್ವಕೋಶಕ್ಕೆ ಸಂಪಾದಕರಲ್ಲಿ ಒಬ್ಬರಾದುದು, ಕಿರಿಯರ ವಿಶ್ವಕೋಶ, ಕಲಾದರ್ಶಣ ಮುಂತಾದ ಕನ್ನಡದಲ್ಲಿ ಮೊದಲು ಎಂಬಂತಹ ವಿಶ್ವಕೋಶಗಳ ತಯಾರಿಕೆಯಲ್ಲಿ ತೊಡಗಿದ್ದು, ಸ್ತ್ರೀ ವಾದಿ ಚಳುವಳಿಗೆ ಬೆನ್ನೆಲುಬಾಗಿ ನಿಂತು ಅನೇಕ ಹೆಂಗೆಳೆಯರು ಬರೆಯುವಂತೆ ಪ್ರೇರೇಪಿಸಿ, ಅನೇಕರ ಬದುಕನ್ನು ಕಟ್ಟಿಕೊಟ್ಟದ್ದು… ಹೀಗೆ ವಿಜಯಮ್ಮನ ಯಶೋಗಾಥೆಗೆ ಹಲವು ಮುಖಗಳು. ಅವುಗಳನ್ನು ಇಲ್ಲಿ ಸ್ಥೂಲವಾಗಿ ಪರಿಚಯಿಸಲು ಪ್ರಯತ್ನಿಸುತ್ತಿದ್ದೇನೆ.

ಬಾಲ್ಯ

ವಿಜಯ ಅಲಿಯಾಸ್ ವಿಜಯಲಕ್ಷ್ಮಿಯ ಬಾಲ್ಯ ಸುಖವಾಗೇನೂ ಇರಲಿಲ್ಲ. ಅಲ್ಲಿ ಇದ್ದದ್ದು ಬಡತನ. ಆಕೆಯ ಅಪ್ಪ ಶಾಮಭಟ್ಟರು ಪೌರೋಹಿತ್ಯ ಮಾಡಿಕೊಂಡು ಹೊಟ್ಟೆ ಹೊರೆಯುತ್ತಾ ಇದ್ದವರು. ದಾವಣಗೆರೆ ನಗರವೇ ಶಾಮಭಟ್ಟರ ಪೌರೋಹಿತ್ಯದ ಕೃಷಿ ಭೂಮಿ. ಶಾಮಭಟ್ಟರು ಪೌರೋಹಿತ್ಯಕ್ಕಿಂತ ಹೆಚ್ಚು ಸಮಯವನ್ನು ಕಳೆಯುತ್ತಾ ಇದ್ದದ್ದು ಇಸ್ಪೀಟ್ ಎಲೆಗಳ ನಡುವೆ. ೧೯೪೨ರ ಕಾಮನ ಹುಣ್ಣಿಮೆಯ ದಿನ ಶಾಮಭಟ್ಟರು ಮತ್ತು ಸರೋಜಮ್ಮನವರಿಗೆ ಮೊದಲ ಮಗಳಾಗಿ ವಿಜಯಲಕ್ಷ್ಮಿ ಜನನವಾಗುತ್ತದೆ. ಆದರೆ ಅಪ್ಪನ ಬಡತನ ಮತ್ತು ವ್ಯಸನಗಳ ಕಾರಣವಾಗಿ ವಿಜಯಲಕ್ಷ್ಮಿಯ ತಾಯಿ ಸರೋಜಮ್ಮ ಗಂಡನ ಮನೆಯಲ್ಲಿ ಇದ್ದುದ್ದಕ್ಕಿಂತ ಸಂಬಂಧಿಕರ ಮನೆಯಲ್ಲಿ ಇದ್ದುದ್ದೇ ಹೆಚ್ಚು. ಚಿಕ್ಕಚಾಜೂರು, ಅಸಗೋಡು, ಖಾನಾಮಡಗು, ಹೊಸದುರ್ಗ ಎಂಬ ಚಿತ್ರದುರ್ಗ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯವರೆಗೆ ಹರಡಿದ್ದ ಅನೇಕ ಮನೆಗಳಲ್ಲಿ ಅಮ್ಮನೊಂದಿಗೆ ಮಗಳು ಸಹ ಓಡಾಡುತ್ತಾ ಬೆಳೆದದ್ದು ಆಕೆಯನ್ನು ಬಡತನದ ಬದುಕಲ್ಲೂ ಕೆಚ್ಚಿನಿಂದ ಹೇಗೆ ಇರಬಹುದೆಂಬುದಕ್ಕೆ ಬೇಕಾದಂತೆ ರೂಪಿಸುತ್ತದೆ. ವಿಜಯಲಕ್ಷ್ಮಿಗೆ ಒಬ್ಬ ತಮ್ಮನ ಆಗಮನವೂ ಆಗುತ್ತದೆ. ಆದರೆ ಆ ಕಾಲದಲ್ಲಿ ಬಂದ ಸಣ್ಣಮ್ಮ, ದೊಡ್ಡಮ್ಮದಂತಹ ಖಾಯಿಲೆಗಳು ತಮ್ಮನನ್ನು ನುಂಗುತ್ತವೆ. ವಿಜಯಲಕ್ಷ್ಮಿಗೆ ನಾಲ್ಕೋ-ಐದೋ ಆಗುವ ಹೊತ್ತಿಗೆ ತಾಯಿಯು ಖಾಯಿಲೆಯಿಂದ ತೀರಿಕೊಳ್ಳುತ್ತಾರೆ. ಹೀಗಾಗಿ ಶಾಮಭಟ್ಟರ ಗರಡಿಯಲ್ಲಿ ಬೆಳೆಯುವ ವಿಜಯಲಕ್ಷ್ಮಿಗೆ ಶಾಮಭಟ್ಟರು ತರುತ್ತಾ ಇದ್ದದ್ದು ಗಂಡು ಹುಡುಗರ ಬಟ್ಟೆಯನ್ನೇ. ಇದರಿಂದಾಗಿ ವಿಜಯಲಕ್ಷ್ಮಿ ದಾವಣಗೆರೆಯ ತುಂಬಾ ಗಂಡು ಹುಡುಗಿಯಾಗಿಯೇ ಬೆಳೆದದ್ದು. ಇದರೊಂದಿಗೆ ಅಪ್ಪ ಶಾಮಭಟ್ಟರು ಯಾವುದೋ ಮನೆಯಲ್ಲಿ ರುದ್ರಹೋಮ ಮಾಡಲು ಹೋದರೆ ಜೊತೆಗೆ ಈಕೆಯೂ ಹೋಗಿ ಅಪ್ಪನಿಗಿಂತ ದೊಡ್ಡದನಿಯಲ್ಲಿ ರುದ್ರಾಷ್ಟಕಗಳನ್ನು ಕೂಗಿ ಅಲ್ಲಿದ್ದವರಲ್ಲಿ ಬೆರಗು ಹುಟ್ಟಿಸುತ್ತಾ ಇದ್ದಾಕೆ. ದಾವಣಗೆರೆಯ ಸರ್ಕಾರೀ ಶಾಲೆಯಲ್ಲಿಯೂ ವಿಜಯಲಕ್ಷ್ಮಿಯ ದನಿ ಪ್ರಾರ್ಥನೆಯಲ್ಲಿ ಕೇಳುತ್ತಿತ್ತು ಸ್ಪಷ್ಟವಾಗಿ ಸಂಸ್ಕೃತವನ್ನು ಕನ್ನಡವನ್ನು ಮಾತಾಡುತ್ತಿದ್ದ ಮನೆಮಾತು ತೆಲುಗು ಆಗಿದ್ದ ಹುಡುಗಿಯನ್ನು ತನ್ನ ತರಗತಿಗಿಂತ ಹಿರಿಯ ತರಗತಿಗಳಲ್ಲಿ ಇದ್ದ ಹುಡುಗರ ಎದುರಿಗೆ ಪಂಪ, ಕುಮಾರವ್ಯಾಸರನ್ನು ಓದಿ ಹೇಳಲು ಕರೆಯುತ್ತಾ ಇದ್ದರಂತೆ. ಹೀಗಾಗಿ ಶಾಲೆಯಲ್ಲಿ ಎಲ್ಲರಿಗಿಂತ ಹೆಚ್ಚು ಜನಪ್ರಿಯವಾಗಿದ್ದ ವಿಜಯಲಕ್ಷ್ಮಿಯನ್ನು ಆಕೆಯ ಗಂಡಸರ ದಿರಿಸಿನಿಂದಾಗಿ ‘ವಿಜ್ಯಾ’ ಎಂದು ಕರೆಯುವುದೇ ವಾಡಿಕೆಯಾಗಿ ಹೋಯಿತು. ಇಂದು ಎಪ್ಪತ್ತರ ಹೊಸ್ತಿಲಲ್ಲಿರುವ ಅಮ್ಮನನ್ನು ಆಕೆಯ ಸಮಕಾಲೀನರು ಈಗಲೂ ‘ವಿಜ್ಯಾ’ ಎಂದು ಕರೆಯುವಾಗ ನನ್ನ ಕಣ್ಣೇದುರಿಗೆ ಈ ವಿವರಗಳೆಲ್ಲ ಅರಳುತ್ತವೆ.

ಇಂತಹ ವಿಜಯಾ ಹತ್ತನೆಯ ತರಗತಿಯನ್ನು ಕಲಿಯುತ್ತಾ ಇರುವಾಗಲೇ ಶಾಮಭಟ್ಟರು ಇದ್ದ ಒಬ್ಬ ಮಗಳಿಗೆ ಬೇಗ ಮದುವೆ ಮಾಡಬೇಕೆಂದು ೨೪ ಗುಣಗಳೂ ಸೇರುವಂತಹ ಗಂಡೊಂದನ್ನು ಹುಡುಕಿ ಮದುವೆ ಮಾಡುತ್ತಾರೆ. ಆರ್. ಬಾಲಸುಬ್ರಹ್ಮಣ್ಯಂ ಎಂಬ ವಾಣಿಜ್ಯ ಪದವೀಧರನೊಡನೆ ೧೯೫೯ರಲ್ಲಿ ವಿಜಯಾ ಅವರ ಮದುವೆಯಾಗುತ್ತದೆ. ಗಂಡನ ಮನೆ ಬೆಂಗಳೂರು. ಗಂಡ ದುಡಿಯುತ್ತಾ ಇದ್ದದ್ದು ಆಗತಾನೇ ಆರಂಭವಾಗಿದ್ದ ಐಟಿಐ ಎಂಬ ಸಂಸ್ಥೆಯಲ್ಲಿ. ಹತ್ತನೆಯ ತರಗತಿ ಓದುವಾಗಲೇ ಗಂಡನ ಮನೆಗೆ ಬಂದ ಹುಡುಗಿಯ ಎದುರಿಗೆ ಇದ್ದದ್ದು ಅತ್ಯಂತ ಸಂಪ್ರದಾಯಸ್ಥ ತುಂಬು ಕುಟುಂಬ. ಮನೆಯಲ್ಲಿದ್ದ ಅಷ್ಟೂ ಜನರಿಗೆ ಅಡಿಗೆ ಬೇಯಿಸುವುದೇ ವಿಜ್ಯಾಳ ಪ್ರಧಾನ ಕೆಲಸವಾಗುತ್ತದೆ. ಬಾಲಸುಬ್ರಹ್ಮಣ್ಯಂ ಅವರನ್ನು ಕಾಡಿ ಬೇಡಿ ಮರಳಿ ಊರಿಗೆ ಬಂದು ಹತ್ತನೆಯ ತರಗತಿಯ ಪರೀಕ್ಷೆ ಬರೆಯುವ ವಿಜಯಲಕ್ಷ್ಮಿಗೆ ಪರೀಕ್ಷೆಯ ಫಲಿತಾಂಶ ಬರುವುದಕ್ಕೂ ಮೊದಲೇ ಮೊದಲ ಮಗ ಹುಟ್ಟುತ್ತಾನೆ. ಆತ ನನ್ನ ಅಣ್ಣ ಗುರುಮೂರ್ತಿ. ತೀರಾ ಬಡಕಲು ಶರೀರದ ಹುಡುಗಿಯ ಕೈಯಲ್ಲಿ ದೈತ್ಯಕಾರವಾಗಿದ್ದ ಮಗು ಎನ್ನುವುದೇ ದಾವಣಗೆರೆಯ ಅನೇಕರ ಬಾಯಲ್ಲಿ ತಮಾಷೆಯ ಮತ್ತು ಅನುಕಂಪದ ಮಾತಾಗುತ್ತದೆ. ಅದಾಗಿ ೧೯೬೨ರಲ್ಲಿ ಎರಡನೆಯ ಮಗನಾಗಿ ನಾನು ಹುಟ್ಟುವ ನಡುವೆ ಮೂರು ಬಾರಿ ಗರ್ಭಪಾತವೂ ಆಗಿಹೋಗುತ್ತದೆ. ಇದಕ್ಕೆ ಬಾಲಸುಬ್ರಹ್ಮಣ್ಯಂ ಅವರ ನಿಲ್ಲದ ಲಿಬಿಡೋ ಕಾರಣವಾದರೆ, ಪ್ರತೀ ಬರೀ ವಿಜಯಲಕ್ಷ್ಮಿ ಗರ್ಭಿಣಿಯಾದಗಲೂ ಗಂಡನಾದವನೇ ಅದನ್ನು ತೆಗೆಯಲು ಮಾಡುತ್ತಿದ್ದ ಸಾಹಸವೂ ಸೇರಿ ವಿಜಯಲಕ್ಷ್ಮಿಯು ಸಂಪೂರ್ಣ ಕೃಶಳಾಗಿದ್ದಾಗ ತವರಿಗೆ ಮರಳಿ ಹೋಗಿದ್ದರಿಂದ ನಾನು ಉಳಿದೆ ಎಂಬುದು ಅಮ್ಮನ ಜೊತೆಗಾರರು ತಿಳಿಸಿದ ಸತ್ಯ. ಈ ಬಗ್ಗೆ ವಿಜಯಲಕ್ಷ್ಮಿ ಇಂದಿಗೂ ಹೆಚ್ಚು ಮಾತಾಡುವುದಿಲ್ಲ. ಹೀಗೆ ೨೦ ವರ್ಷಗಳಾಗುವಾಗಲೇ ಎರಡೆರಡು ಮಕ್ಕಳನ್ನು ಹೆತ್ತು, ಹಲವು ಮಕ್ಕಳನ್ನು ಅರ್ಧ ದಾರಿಯಲ್ಲೇ ಕಳೆದುಕೊಂಡು ಹೈರಾಣಾಗಿದ್ದ ವಿಜಯಲಕ್ಷ್ಮಿಯ ಆರೋಗ್ಯದ ಕಾರಣವಾಗಿಯೇ ಹಲವು ಕಾಲ ದಾವಣಗೆರೆಯ ವಾಸವಾಗುತ್ತದೆ. ಹೀಗಾಗಿ ನಾನು ಸಹ ನನ್ನ ಎರಡನೆಯ ತರಗತಿಯನ್ನ ಮುಟ್ಟುವವರೆಗೆ ಅದೇ ಊರಲ್ಲಿ ಉಳಿಯುತ್ತೇನೆ.

ಮಹಾನಗರಕ್ಕೆ

ಬೆಂಗಳೂರು ಎಂಬ ಮಹಾನಗರಕ್ಕೆ ವಿಜಯಲಕ್ಷ್ಮಿ ಬರುವ ಹೊತ್ತಿಗೆ ಆಕೆಯ ಗಂಡನ ಕೂಡು ಕುಟುಂಬದ ಅಣ್ಣ ತಮ್ಮಂದಿರು ಬೇರೆ ಬೇರೆ ಮನೆಗಳನ್ನು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುತ್ತಾರೆ. ಹೀಗಾಗಿ ಬೆಂಗಳೂರಿನ ಸೀತಾಪತಿ ಅಗ್ರಹಾರದ ಸಣ್ಣ ಮನೆಯೊಂದರಲ್ಲಿ ಎರಡು ಮಕ್ಕಳ ಜೊತೆಗೆ ಸಂಸಾರ ನಿಭಾಯಿಸುವ ವಿಜಯಲಕ್ಷ್ಮಿಗೆ ಆರ್ಥಿಕ ಕಾರಣಕ್ಕಾಗಿಯೇ ಕೆಲಸಕ್ಕೆ ಸೇರುವುದು ಅನಿವಾರ್ಯವಾಗಿ ಆಕೆ ಐಟಿಐ ಸಂಸ್ಥೆಯಲ್ಲಿ ದುಡಿಯಲಾರಂಭಿಸುತ್ತಾರೆ. ಸುಮಾರು ಒಂದು ವರ್ಷದ ಈ ದುಡಿಮೆ ಆಗುವಾಗಲೇ ಗಂಡನಿಗೆ ಬಿಇಎಂಎಲ್ ಎಂಬ ಸಂಸ್ಥೆಯಲ್ಲಿ ಕೊಂಚ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿದ್ದರಿಂದಾಗಿ ವಿಜಯಲಕ್ಷ್ಮಿ ಮರಳಿ ಗೃಹಿಣಿಯಾಗಿ ಮನೆಯಲ್ಲಿ ಉಳಿಯಬೇಕಾಗುತ್ತದೆ. ಆಗ ಅವರ ವಾಸವು ಹನುಮಂತನಗರ ಎಂಬ ಮತ್ತೊಂದು ಬಡಾವಣೆಗೆ ಸ್ಥಳಾಂತರವಾಗುತ್ತದೆ. ಈ ಕಾಲದಲ್ಲಿ ಆಕೆ ಪೂರ್ಣಾವಧಿಯ ದೈವಭಕ್ತೆಯಾಗಿ ಮನೆಯೊಳಗೆ ದ್ವಾದಶಿ ಪೂಜೆ, ಸತ್ಯನಾರಾಯಣ ಪೂಜೆ, ಹೋಮ-ಹವನಗಳನ್ನು ಮಾಡುತ್ತಾ ಮಕ್ಕಳನ್ನೂ ಆರ್‌ಎಸ್‌ಎಸ್ ಸಂಸ್ಥೆಗೆ ಸೇರಿಸಿಬಿಡುತ್ತಾರೆ. ಈ ಕಾಲದಲ್ಲಿಯೇ ಅವರಿಗೆ ತಾನು ಸಂಗೀತ ಕಲಿಯಬೇಕೆನಿಸಿ ಕಮಲಾ ಮೂರ್ತಿಯವರಲ್ಲಿ ಕರ್ನಾಟಕ ಸಂಗೀತ ಕಲಿಯಲು ಆರಂಭಿಸುತ್ತಾರೆ. ಅ.ನ.ಸುಬ್ಬರಾಯರು ನಡೆಸುತ್ತಿದ್ದ ಕಲಾಮಂದಿರದ ಸಂಪರ್ಕ ಆಗ ವಿಜಯಲಕ್ಷ್ಮಿಗೆ ಆಗುತ್ತದೆ. ಅಲ್ಲಿ ನಡೆಯುತ್ತಿದ್ದ ಕನ್ನಡ ಲೇಖಕಿಯರ ಸಂಘ ಮುಂತಾದ ಚಟುವಟಿಕೆ ನೋಡುತ್ತಾ ತಾನು ಸಮಯ ಹಾಳು ಮಾಡುತ್ತಿದ್ದೇನೆ ಎಂಬುದರಿವಿಗೆ ಬಂದು ಸಂಜೆಯ ಕಾಲೇಜು ಸೇರಿ ಪದವಿಪೂರ್ವ ಪರೀಕ್ಷೆ ಹಾಗೂ ಪದವಿ ಪರೀಕ್ಷೆಗಳನ್ನು ಮುಗಿಸುತ್ತಾರೆ. ಅಮ್ಮ-ಮಕ್ಕಳು ಒಟ್ಟಿಗೆ ಅಭ್ಯಾಸಕ್ಕೆ ಕೂರುತ್ತಿದ್ದ ಆ ಗಳಿಗೆಯೇ ಅಪರೂಪದ್ದು. ನಾವು ಶಾಲೆಯ ಪರೀಕ್ಷೆ ಬರೆಯಲು ಸಿದ್ಧವಾಗುವಾಗ ಅಮ್ಮ ಕಾಲೇಜಿನ ಪರೀಕ್ಷೆ ಬರೆಯುತ್ತಾ ಇದ್ದರು. ಹೀಗೆ ಬಿ.ಎ. ಮುಗಿಸಿದ ವಿಜಯಮ್ಮನಿಗೆ ಆಗ ಗುರುಗಳಾಗಿದ್ದವರು ಕಿ.ರಂ., ಸಾ.ಶಿ.ಮರುಳಯ್ಯ ಮುಂತಾದ ದಿಗ್ಗಜರು. ಹೀಗಾಗಿ ವಿಜಯ ಅವರಲ್ಲಿ ಸಾಹಿತ್ಯಾಸಕ್ತಿ ಮತ್ತು ಬರವಣಿಗೆಯ ಆಸಕ್ತಿಯು ಬೆಳೆದಿತ್ತು. ಇವುಗಳೊಂದಿಗೆ ಕಲಾಮಂದಿರದ ಒಡನಾಟದಿಂದ ರಂಗಭೂಮಿಯ ಸಂಪರ್ಕವೂ ಹೆಚ್ಚಾಗಿತ್ತು.

ಪತ್ರಿಕೋದ್ಯಮ

ಪದವಿಯನ್ನು ಮುಗಿಸುವ ಹೊತ್ತಿಗೆ ಲೇಖನ ಬರೆಯುವ ಅಭ್ಯಾಸ ಗಟ್ಟಿಯಾಗಿತ್ತು. ಪ್ರಜಾಮತ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿಕೊಂಡು ಮಹಿಳೆಯರ ವಿಭಾಗವನ್ನು ನಿರ್ವಹಿಸುತ್ತಿದ್ದ ವಿಜಯಲಕ್ಷ್ಮಿ ಈ ಕಾಲದಲ್ಲಿ ತಮ್ಮ ಹೆಸರನ್ನು ವಿಜಯಾ ಸುಬ್ರಹ್ಮಣ್ಯಂ ಮಾಡಿಕೊಳ್ಳುತ್ತಾರೆ. ಈ ಅನುಭವ ಅವರಿಗೆ ಮಲ್ಲಿಗೆ ಪತ್ರಿಕೆಯ ಸಹಸಂಪಾದಕರಾಗುವ ಅವಕಾಶ ಒದಗಿಸುತ್ತದೆ.

ಈ ಹಂತದಲ್ಲಿ ಬೆಳೆಯುತ್ತಿರುವ ಹೆಂಡತಿಯನ್ನು ಸಹಿಸದ ಗಂಡನ ಕಿರುಕುಳಗಳ ಜೊತೆಗೆ ಸಂಸಾರ ನಿಭಾಯಿಸುತ್ತಾ, ಮಕ್ಕಳನ್ನು ತಿದ್ದುತ್ತಾ ವಿಜಯಾ ಹೈರಾಣಾಗುತ್ತಾರೆ. ಆ ಹೊತ್ತಿಗೆ ಪರಿಚಯವಾಗಿದ್ದ ಅನೇಕ ಪ್ರಗತಿಪರರ ಬೆಂಬಲದೊಡನೆ ಸ್ವತಂತ್ರವಾಗಿ ಬದುಕಲು ಆರಂಭಿಸುತ್ತಾರೆ. ಸಂಪ್ರದಾಯಸ್ಥ ಮನೆಯವರು ಏಕಾಂಗಿ ಹೆಂಗಸನ್ನು ಹಂಗಿಸುವಾಗ ಅಪ್ಪ ಶಾಮಭಟ್ಟರು ಮಗಳ ಬೆಂಬಲಕ್ಕೆ ನಿಲ್ಲುತ್ತಾರೆ. ದಾವಣಗೆರೆಯಿಂದ ಬೆಂಗಳೂರಿಗೆ ಬಂದು ಮಗಳ ಜೊತೆಗೆ ನೆಲೆಸುತ್ತಾರೆ. ಆದರೆ ಆತನ ಆರೋಗ್ಯ ಕೆಟ್ಟು ಮಗಳನ್ನು ಅವರು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಗಳೇ ಆತನನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಶಾಮಣ್ಣನವರ ಕಣ್ಣೆದುರೇ ಮಗಳು ಮಲ್ಲಿಗೆ ಪತ್ರಿಕೆಯ ದೊಡ್ಡ ಜವಾಬ್ದಾರಿ ನೋಡಿಕೊಳ್ಳುತ್ತಾ, ಉದಯವಾಣಿ ಪತ್ರಿಕೆಗೆ ‘ಬೆಂಗಳೂರು ಪತ್ರ’ ಎಂಬ ಕಾಲಂ ಬರೆಯುತ್ತಾ ನಾಡಿನಾದ್ಯಂತ ಹೆಸರು ಗಳಿಸುತ್ತಾರೆ. ಈ ಕಾಲದಲ್ಲಿ ಮಲ್ಲಿಗೆ ಪತ್ರಿಕೆಯ ಅಗತ್ಯಕ್ಕಾಗಿ ಅನೇಕ ಹೊಸಬರನ್ನು ಕಥನ ಲೋಕಕ್ಕೆ ಕರೆತರುತ್ತಾರೆ. ಕತೆ ಬರೆಯುವುದನ್ನು ಹೊಸ ಜನ ಕಲಿಯಬೇಕೆಂದೇ ‘ಸಣ್ಣ ಕತೆಯ ಸೊಗಸು’ ಎಂಬ ಪುಸ್ತಕವನ್ನೂ ಬರೆಯುತ್ತಾರೆ. ಇದರಿಂದಾಗಿ ಸಿಕ್ಕ ಜನಪ್ರಿಯತೆಯು ವಿಜಯಾ ಅವರಿಗೆ ‘ತುಪಾರ’ ಪತ್ರಿಕೆಯ ಸಹಸಂಪಾದಕರಾಗುವ ಅವಕಾಶ ನೀಡುತ್ತದೆ. ಆ ಕಾಲದಲ್ಲಿಯೇ ಆರಂಭವಾದ ‘ರೂಪತಾರ’ ಎಂಬ ಸಿನಿಮಾ ಮಾಸಪತ್ರಿಕೆಯ ಸಂಪಾದನೆಯ ಜವಾಬ್ದಾರಿಯೂ ಆಕೆಗೆ ಸಿಗುತ್ತದೆ. ಹೀಗೆ ಸಿನಿಮಾ ಪತ್ರಿಕೋದ್ಯಮ ಮತ್ತು ಸಾಹಿತ್ಯ ಪತ್ರಿಕೆಗಳೆರಡನ್ನು ಸಂಪಾದಿಸುತ್ತಾ ಆಕೆಯ ಬಳಗದ ವಿಸ್ತಾರ ದೊಡ್ಡದಾಗುತ್ತದೆ.

ಸಾಹಿತ್ಯ ಪತ್ರಿಕೆಯ ಕಾರಣವಾಗಿ ನಾಡಿನ ಅನೇಕ ದಿಗ್ಗಜರ ಸಂದರ್ಶನಗಳನ್ನು ನಡೆಸುವ ಮೂಲಕ ಸಾಹಿತ್ಯ ಪತ್ರಿಕೆಗಳಿಗೆ ಆಗ ಇದ್ದ ಧ್ವನಿ ಶಕ್ತಿಯನ್ನು ಬದಲಿಸಿ, ನವ್ಯ ಸಾಹಿತ್ಯದ ಕಾಲಘಟ್ಟದಿಂದ ಬಂಡಾಯ ಮತ್ತು ದಲಿತ ಚಳುವಳಿಗಳತ್ತ ಸಾಹಿತ್ಯ ಪತ್ರಿಕೆಗಳು ಮುಖಮಾಡುವಂತೆ ವಿಜಯಾ ಅವರ ಕೆಲಸಗಳು ಪ್ರೇರೇಪಿಸುತ್ತವೆ. ಇದರಿಂದಾಗಿ ವಿಜಯಾ ಅವರ ಸಾಹಿತ್ಯ ವಲಯದ ಗೆಳೆಯರ ಬಳಗವು ವಿಸ್ತಾರವಾಗುತ್ತಾ ಇರುವಾಗಲೇ ‘ರೂಪತಾರ’ ಎಂಬ ಸಿನಿಮಾ ಪತ್ರಿಕೆಯನ್ನು ಹೊಸದಾಗಿ ರೂಪಿಸುತ್ತಾರೆ. ಆ ವರೆಗೆ ಸಿನಿಮಾ ಪತ್ರಿಕೆಗಳು ಬರುತ್ತಿದ್ದ ಸ್ವರೂಪಕ್ಕಿಂತ ಭಿನ್ನವಾಗಿ ಕಲಾವಿದರು, ತಂತ್ರಜ್ಞರ ಜೊತೆಗೆ ಆತ್ಮೀಯ ಮಾತುಗಳನ್ನಾಡುತ್ತಾ ಹೊಸ ಅಲೆಯ ಚಿತ್ರ ಚಳುವಳಿಗೆ ಹಾಗೂ ಆ ಕಾಲಘಟ್ಟದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದ ಅನೇಕ ಸಿನಿಮಾ ಮಂದಿಗೆ ಬೆಂಬಲವಾಗುತ್ತಾರೆ. ಇವರ ಬರಹಗಳ ಕಾರಣವಾಗಿ ಎಲೆಮರೆಯಕಾಯಾಗಿದ್ದ ಅನೇಕರು ತಾರೆಗಳಾಗುವುದು ಸಾಧ್ಯವಾಗುತ್ತದೆ. ವಿಜಯಮ್ಮ ಒಂದಕ್ಷರ ಒಳ್ಳೆಯ ಮಾತು ಬರೆದರೆ ಸಾಕು ಬದುಕು ಬಂಗಾರವಾಗುತ್ತದೆ ಎಂಬ ಮಾತು ಚಾಲ್ತಿಗೆ ಬರುತ್ತದೆ. ಇಂತಹ ಕಾಲಘಟ್ಟದಲ್ಲಿ ಕೇವಲ ಸಿನಿಮಾದ ದೊಡ್ಡ ಜನವನ್ನಲ್ಲದೆ ಸ್ಟುಡಿಯೋಗಳ ಗೇಟು ಕಾಯುವವರನ್ನು, ಬೆಳಕು ಸಹಾಯಕರನ್ನು ಸಹ ಓದುಗರಿಗೆ ಪರಿಚಯಿಸುವ ಮೂಲಕ ಸಿನಿಮಾ ಎಂಬ ಮಾಯಾಜಗತ್ತಿನ ಅನೇಕ ಮುಖಗಳನ್ನು ಕನ್ನಡಿಗರ ಎದುರಿಗೆ ಬಿಚ್ಚಿಡುತ್ತಾರೆ. ೧೯೭೨ರಲ್ಲಿ ಆರಂಭವಾದ ಈ ಪತ್ರಿಕಾ ಪ್ರಪಂಚದ ಪಯಣವನ್ನು ೧೯೯೮ರ ಆಸುಪಾಸಿನಲ್ಲಿ ತಮ್ಮ ಓದನ್ನು ಮುಂದುವರೆಸಬೇಕೆಂಬ ಕಾರಣಕ್ಕೆ ಬಿಟ್ಟುಕೊಡುತ್ತಾರೆ. ಆದರೆ ತಾವೇ ಆರಂಭಿಸಿದ ‘ಸಂಕುಲ’ ಎಂಬ ದೃಶ್ಯಮಾಧ್ಯಮದ ಪತ್ರಿಕೆಯನ್ನು ನಡೆಸಲು ಮತ್ತೆ ಐದು ವರ್ಷಗಳ ಕಾಲ ದುಡಿಯುತ್ತಾರೆ. ಇವರ ಅನುಭವದ ಕಾರಣವಾಗಿ ಅನೇಕರು ಕರೆದಾಗ ಇಲ್ಲ ಎನ್ನಲಾಗದೆ ‘ಅರಗಿಣಿ’, ‘ತಾರಾಲೋಕ’, ‘ಬೆಳ್ಳಿಚುಕ್ಕಿ’ ಎಂಬ ವಿಡಿಯೋ ಪತ್ರಿಕೆಯನ್ನೂ ಸೇರಿದಂತೆ ಹಲವು ಪತ್ರಿಕೆಗಳಿಗೆ ದುಡಿಯುತ್ತಾರೆ, ಸರಿಸುಮಾರು ೪೦ ವರ್ಷಗಳ ಈ ಯಾನದ ಮೂಲಕ ವಿಜಯಲಕ್ಷ್ಮಿ ಅಲಿಯಾಸ್ ವಿಜಯಾ ಸುಬ್ರಹ್ಮಣ್ಯಂ, ವಿಜಯಾ ಕನ್ನಡಕ್ಕೆ ಕೊಟ್ಟ ಕೊಡುಗೆಯಂತೂ ಅಪಾರ.

ಸೂತ್ರದಗೊಂಬೆಯೊಡನಾಟ

ಅದು ೭೦ರ ದಶಕದ ಆರಂಭ ಕಾಲ. ಆ ಕಾಲದಲ್ಲಿ ಆಗಷ್ಟೇ ಎನ್‌ಎಸ್‌ಡಿಯಲ್ಲಿ ಸೂತ್ರದಗೊಂಬೆ ಆಟದಲ್ಲಿಯೇ ಪರಿಣತಿ ಪಡೆದು ಬಂದಿದ್ದ ಎ.ಎಲ್.ಶ್ರೀನಿವಾಸಮೂರ್ತಿಯವರ ಪರಿಚಯವಾಗುತ್ತದೆ. ಸಂಪೂರ್ಣ ಮಹಿಳೆಯರ ತಂಡದೊಡನೆ ಸೂತ್ರದಗೊಂಬೆಗಳ ಮೂಲಕ ಹೊಸ ಕಾಲಮಾನದ ನಾಟಕಗಳನ್ನು ರಂಗಕ್ಕೆ ತರುವ ಪ್ರಯತ್ನಕ್ಕೆ ವಿಜಯಾ ಕಾಲಿಡುತ್ತಾರೆ. ಅನೇಕ ಹೊಸ ಹೆಂಗೆಳೆಯರನ್ನು ಸೇರಿಸಿ ತಿಂಗಳುಗಳ ಕಾಲ ಬೊಂಬೆಗಳನ್ನು ಮಾಡುವ, ಆಡಿಸುವ ಶಿಬಿರಗಳನ್ನು ನಡೆಸಿ ‘ಪಪೆಟ್‌ಲ್ಯಾಂಡ್’ ಎಂಬ ತಂಡ ಕಟ್ಟುತ್ತಾರೆ. ಗೊಂಬೆಗಳ ಮೂಲಕ ಹೇಳಿಸಲೆಂದೇ ಗಿರೀಶ್ ಕಾರ್ನಡರ ‘ಮಾ-ನಿಷಾದ’, ಗಿರಡ್ಡಿ ಗೋವಿಂದರಾಜು ಅವರ ‘ಕನಸುಗಳು’ ತರಹದ ಕತೆಗಳನ್ನು ಆರಿಸಿ, ರಂಗರೂಪವನ್ನು ಸಿದ್ಧಪಡಿಸುತ್ತಾರೆ. ಈ ಪ್ರಯೋಗಗಳ ಯಶಸ್ಸಿನಿಂದಾಗಿ ಐದಾರು ವರ್ಷಗಳ ಕಾಲ ‘ಪಪೆಟ್‌ಲ್ಯಾಂಡ್’ ತಂಡವನ್ನು ನಡೆಸಲು ಸಹಕಾರ ನೀಡುತ್ತಾರೆ. ಕರ್ನಾಟಕದಾದ್ಯಂತ ಬೊಂಬೆಗಳ ಜೊತೆಗೆ ಪಯಣವನ್ನೂ ಮಾಡುತ್ತಾರೆ. ವೃತ್ತಿಯ ಒತ್ತಡಗಳಿಂದಾಗಿ ಈ ಕೆಲಸವನ್ನು ಬಹುಕಾಲ ನಡೆಸಲು ಆಗದೆ ಹೋದರೂ ಅನೇಕ ಹೊಸ ಹೆಣ್ಣುಮಕ್ಕಳು ಈ ಕಲೆಯನ್ನು ಕಲಿಯುವಂತೆ ಪ್ರೇರೇಪಿಸುತ್ತಾರೆ. ಬಹುತೇಕ ಜನಪದ ಮತ್ತು ಪುರಾಣ ಕತೆಗಳನ್ನು ಹೇಳುತ್ತಾ ಸವಕಲಾಗುತ್ತಿದ್ದ ಜಾನಪದ ಕಲೆಯೊಂದು ಈ ಎಲ್ಲಾ ಪ್ರಯತ್ನದ ಫಲವಾಗಿ ಮರುಜೀವ ಪಡೆಯುತ್ತದೆ.

ಬೀದಿನಾಟಕ ಚಳುವಳಿ

ಎಪ್ಪತ್ತರರ ದಶಕದ ಮಧ್ಯಭಾಗದಲ್ಲಿ ದಿಢೀರನೆ ತುರ್ತುಪರಿಸ್ಥಿತಿಯನ್ನು ಕೇಂದ್ರ ಸರಕಾರ ಹೇರಿಬಿಡುತ್ತದೆ. ಇಂತಹ ಹೇಯತೆಯನ್ನು ಖಂಡಿಸುವ ಕೆಲಸಕ್ಕಾಗಿ ನಾಟಕ ಚಳುವಳಿಯೊಂದನ್ನು ರೂಪಿಸಲು ಅನೇಕರನ್ನು ಹುರಿದುಂಬಿಸುವ ವಿಜಯಾ ಅವರು ‘ಚಿತ್ರಾ ರಂಗ ತಂಡ’ದ ಮೂಲಕ ‘ಬಂದರೋ ಬಂದರು’, ‘ಕೇಳ್ರಪ್ಪೋ ಕೇಳ್ರಿ’, ‘ಮುಖವಿಲ್ಲದವರು’, ‘ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ’ ಮುಂತಾದ ಏಳಕ್ಕೂ ಹೆಚ್ಚು ಬೀದಿನಾಟಕಗಳನ್ನು ಬರೆದು, ಅವುಗಳ ಪ್ರದರ್ಶನವನ್ನು ದಿಡೀರ್ ಎಂಬಂತೆ ನಗರದ ಅನೇಕ ಬಡಾವಣೆಗಳಲ್ಲಿ ಆಡುವ ಮೂಲಕ ಸಾರ್ವಜನಿಕರಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಆರಂಭಿಸುತ್ತಾರೆ. ಈ ಚಳುವಳಿಯ ಯಶಸ್ಸು ನಾಡಿನ ಅನೇಕರನ್ನು ಬೀದಿನಾಟಕಗಳ ಕಡೆಗೆ ತಿರುಗುವಂತೆ ಮಾಡುತ್ತದೆ. ‘ಸಮುದಾಯ’ದಂತಹ ರಂಗತಂಡದ ಉದಯಕ್ಕೂ ವಿಜಯಾ ಅವರು ಪ್ರೇರೇಪಣೆಯಾಗುತ್ತಾರೆ. ಹೀಗೆ ರಾಜ್ಯದಾದ್ಯಂತ ಬೀದಿನಾಟಕ ಎಂಬುದು ಪ್ರತಿಭಟನೆಯ ರಂಗಭೂಮಿಯಾಗಿ ಚಾಲ್ತಿಗೆ ಬರುತ್ತದೆ. ಚುನಾವಣೆಗಳ ಸಮಯದಲ್ಲಿಯೂ ಬೀದಿನಾಟಕಗಳ ಮೂಲಕ ಜನಮಾನಸದ ಮನಸ್ಸನ್ನು ಸರಿಯಾದ ಆಯ್ಕೆ ಪ್ರೇರೇಪಿಸಲು ಈ ಬೀದಿನಾಟಕ ಚಳುವಳಿಯನ್ನು ಬಳಸುವಲ್ಲಿ ವಿಜಯಾ ಯಶಸ್ವಿಯಾಗುತ್ತಾರೆ. ಸದಾ ಸರ್ಕಾರದ ಕೆಂಗಣ್ಣು ವಿಜಯಾ ಮುಂತಾದವರ ಮೇಲಿದ್ದರೂ ನಿರಂತರವಾಗಿ ಈ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ವಿಜಯಾ ಅವರು ಈ ಕಾಲಘಟ್ಟದಲ್ಲಿ ಬರೆದ ಹಲವು ಬೀದಿ ನಾಟಕಗಳು ಇತರ ಭಾಷೆಗೂ ಅನುವಾದವಾಗುತ್ತವೆ. ಈ ಪ್ರತಿಭಟನಾ ರಂಗಭೂಮಿಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ವಿಜಯಾ ಅವರ ‘ಬಂದರೋ ಬಂದರು’ ನಾಟಕಕ್ಕೆ ಬಹುಮಾನ ನೀಡುತ್ತದೆ. ಪ್ರಶಸ್ತಿ ಪತ್ರ ಮಾತ್ರ ಸ್ವೀಕರಿಸಿ, ಬಹುಮಾನದ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸುವ ವಿಜಯಾ ಮತ್ತೆ ಹಲವರಿಗೆ ಮಾದರಿಯಾಗುತ್ತಾರೆ. ‘ಸರ್ಕಾರದ ಗೌರವ ಸ್ವೀಕರಿಸುವುದು ತಪ್ಪಲ್ಲ. ಅದು ಕೊಡುವ ಹಣವನ್ನು ಸ್ವೀಕರಿಸಿದರೆ ಅವರ ವಿರುದ್ಧ ಮಾತಾಡುವ ಧ್ವನಿಯನ್ನು ಪ್ರತಿಭಟನಕಾರರು ಕಳೆದುಕೊಳ್ಳುತ್ತಾರೆ’ ಎಂಬ ವಿಜಯಾ ಅವರ ತೀರ್ಮಾನಕ್ಕೆ ನಾಡಿನಾದ್ಯಂತ ಚಪ್ಪಾಳೆ ಕೇಳುತ್ತದೆ.

ಆದರೆ ಜಾಣ ಸರ್ಕಾರಗಳು ಪ್ರತಿಭಟನೆಯನ್ನು ನೋಡುತ್ತಾ ಕೂರುವುದಿಲ್ಲ. ಬದಲಿಗೆ ಅದೇ ಪ್ರತಿಭಟನಾ ರಂಗಭೂಮಿಯನ್ನು ತನ್ನ ಅನುಕೂಲಕ್ಕೆ ಎಂದು ಬಳಸಿಕೊಳ್ಳಲು ಆರಂಭಿಸುತ್ತದೆ. ಚಳುವಳಿಯ ಮುಂಚೂಣಿಯಲ್ಲಿ ಇದ್ದವರೇ ಸರ್ಕಾರದ ಈ ಜಾಣತನಕ್ಕೆ ಸೋತು, ಸರ್ಕಾರೀ ಯೋಜನೆಗಳ ಪ್ರಚಾರಕ್ಕೆ ಬೀದಿನಾಟಕವನ್ನು ಬಳಸಿಕೊಳ್ಳಲು ಆರಂಭಿಸಿದಾಗ ವಿಜಯಾ ತಾವಿನ್ನೂ ಈ ಚಳುವಳಿಯಲ್ಲಿ ಮುಂದುವರೆಯಬಾರದು ಎನಿಸಿ ಹಿಂದೆ ಸರಿಯುತ್ತಾರೆ.

ವ್ಯವಸ್ಥೆಯ ಕೊಳಕನ್ನು ಹೇಳಬೇಕೆಂದು ಆರಂಭವಾದ ಚಳುವಳಿ ಇಂದು ಕೇವಲ ಸರ್ಕಾರೀ ಯೋಜನೆಗಳ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಸರಕುಗಳನ್ನು ಮಾರಲೆಂಬಂತೆ ಬದಲಾಗಿರುವುದರ ಬಗ್ಗೆ ವಿಜಯಾ ಅವರು ಸಮಯಾವಕಾಶ ಸಿಕ್ಕಾಗೆಲ್ಲಾ ಮಾತಾಡುತ್ತಾ ಅಂತಹ ಕೆಲಸ ಮಾಡುತ್ತಿರುವವರನ್ನು ಎಚ್ಚರಿಸುತ್ತಲೇ ಇದ್ದಾರೆ. ಆದರೆ ದುಡ್ಡು ಎಂಬ ಮಾಯಾಜಾಲದ ಮುಂದೆ ತತ್ವಾಧಾರಿತ ಹಾಗೂ ಮೌಲ್ಯಧಾರಿತ ಮಾತುಗಳು ಒಂಟಿಯಾಗುತ್ತವೆ. ಹೀಗೆ ಒಂದು ಚಳುವಳಿಯಾಗಿ ಆರಂಭವಾದ ಬೀದಿನಾಟಕವು ಹಣವುಳ್ಳವರಿಗೆ ಪರಭಾರೆಯಾದುದಕ್ಕೆ ಸಾಕ್ಷಿಯಾಗಿ ವಿಜಯಾ ಅವರು ಇಂದಿಗೂ ಹಳಹಳಿಸುವುದುಂಟು.

ಈ ಚಳುವಳಿಯು ಉಚ್ಛ್ರಾಯದಲ್ಲಿ ಇದ್ದಾಗಲೇ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಒದವಿ ಪಡೆದು ಬಂದ ಅಶೋಕ್ ಬಾದರದಿನ್ನಿ, ಶ್ರೀನಿವಾಸಪ್ರಭು ಮುಂತಾದ ತರುಣರಿಗೆ ನಿಯಮಿತ ಆದಾಯ ಒದಗಲಿ ಎಂಬ ಆಲೋಚನೆಯೊಡನೆ ಚರ್ಚೆಯನ್ನು ಆರಂಭಿಸುವ ವಿಜಯಾ ಅವರು ನಾಡಿನ ಯುವಕರಿಗೆ ರಂಗಭೂಮಿಯ ಎಲ್ಲಾ ಮಗ್ಗುಲಗಳನ್ನು ಕಲಿಸಬಹುದಾದ ಶಾಲೆಯೊಂದನ್ನು ಆರಂಭಿಸುವ ಪ್ರಸ್ತಾವವನ್ನು ಇಡುತ್ತಾರೆ. ಈ ಮಾತಿಗೆ ನಾಡಿನ ಬಹುತೇಕ ಬುದ್ಧಿಜೀವಿಗಳ ಸಹಮತ ದೊರೆಯುತ್ತದೆ. ಎ.ಎಸ್.ಮೂರ್ತಿಯವರು ತಮ್ಮ ಮನೆಯ ಎದುರು ಇದ್ದ ಆವರಣವನ್ನು ಒದಗಿಸುತ್ತಾರೆ. ಆ ಶಾಲೆಗೆ ಎ.ಎಸ್.ಮೂರ್ತಿಯವರು ಆವರೆಗೆ ಅರೆಕಾಲಿಕ ರಂಗಶಿಬಿರಗಳು ನಡೆಸಲು ಬಳಸುತ್ತಾ ಇದ್ದ ‘ಅಭಿನಯತರಂಗ’ ಎಂಬ ಹೆಸರನ್ನೇ ನೀಡಲಾಯಿತು. ಇದಕ್ಕಾಗಿ ಒಂದು ಕುಟೀರದಂತಹ ಸಭಾಂಗಣವನ್ನಾದರೂ ಕಟ್ಟಬೇಕು ಎಂದಾದಾಗ ವಿಜಯಾ ಚಿಂತಿಸದೆ ತಮ್ಮ ಕತ್ತಿನಲ್ಲಿದ್ದ ತಾಳಿ ಬಂಗಾರವನ್ನೇ ಮಾರಿದ್ದರು. ಅಶೋಕ ಬಾದರದಿನ್ನಿಯವರು ಪ್ರಾಂಶುಪಾಲರಾಗಿ ಆರಂಭವಾದ ಅಭಿನಯತರಂಗವು ಬೆಂಗಳೂರು ಮಹಾನಗರದ ಹವ್ಯಾಸೀ ರಂಗಭೂಮಿಯ ಅಗತ್ಯಕ್ಕೆ ತಕ್ಕಂತೆ ಭಾನುವಾರದ ರಂಗಶಾಲೆಯಾಗಿ ಆರಂಭವಾಯಿತು. ನಿರಂತರವಾಗಿ ಹೊಸ ನಾಟಕಗಳ ಪ್ರಯೋಗಗಳು ಆಗತೊಡಗಿದವು. ೧೯೮೦ರಲ್ಲಿ ಆರಂಭವಾದ ಈ ಶಾಲೆಯು ಇಟ್ಟ ಪ್ರತೀ ಹೆಜ್ಜೆಯನ್ನೂ ಹಲವು ವರ್ಷಗಳ ಕಾಲ ವಿಜಯಾ ಅವರು ಸ್ವತಃ ಗಮನಿಸಿ, ರೂಪಿಸುತ್ತಾ ಇದ್ದರು. ಇಂದು ಈ ಶಾಲೆಗೆ ಎರಡು ದಶಕಕ್ಕೂ ಮೀರಿದ ಇತಿಹಾಸವಿದೆ. ಇಲ್ಲಿಂದ ತಯಾರಾಗಿ ಬಂದ ಹಲವು ರಂಗಕರ್ಮಿಗಳು ಕನ್ನಡ ರಂಗಭೂಮಿಯಲ್ಲಿ ಮಾತ್ರವಲ್ಲ ಕನ್ನಡದ ಕಿರುತೆರೆ ಮತ್ತು ಹಿರಿತೆರೆಗಳಲ್ಲೂ ದುಡಿಯುತ್ತಾ ಇದ್ದಾರೆ. ಇಂತಹದೊಂದು ರಂಗಶಾಲೆಯನ್ನು ಆರಂಭಿಸಿದ ಸಾರ್ಥಕ ಭಾವವು ವಿಜಯಾ ಅವರಲ್ಲಿ ಇಂದಿಗೂ ಉಳಿದಿದೆ.

ರಂಗಚಳುವಳಿಯನ್ನು ಕುರಿತಂತೆ ವಿಜಯಾ ಅವರಿಗೆ ಅತೀವ ಪ್ರೀತಿ ಹುಟ್ಟಲು ಬಾಲ್ಯದಲ್ಲಿ ಅವರನ್ನು ಭುಜದ ಮೇಲೆ ಹೊತ್ತು ನದಿಗಳನ್ನು ದಾಟಿಸುತ್ತಿದ್ದ ಸೋದರಮಾವ ಚಿಕ್ಕಜಾಜೂರು ನಾಗರಾಜ್ ಅವರು ಸಹ ಕಾರಣರಾಗಿದ್ದರು. ಆ ಮಾವ ಕಲಿಸಿದ ರಂಗಗೀತೆಗಳನ್ನು ಇಂದಿಗೂ ನೆನಪಲ್ಲಿ ಇಟ್ಟುಕೊಂಡಿರುವ ವಿಜಯಾ ಅವರಿಗೆ ಎಲ್ಲಿಯೇ ರಂಗಪ್ರಯೋಗವಾಗುತ್ತಾ ಇದ್ದರೂ ಹೇಗಾದರೂ ಸಮಯ ಮಾಡಿಕೊಂಡು ನೋಡುವ ಅದಮ್ಯ ಆಸಕ್ತಿ ಇಂದಿಗೂ ಇದೆ. ಹೀಗಾಗಿಯೇ ನಾಡಿನ ಎಲ್ಲಾ ರಂಗತಂಡಗಳೂ ತಾವು ಮಾಡುವ ಹೊಸ ಪ್ರಯೋಗಗಳನ್ನು ಕುರಿತು ವಿಜಯಾ ಅವರ ಜೊತೆ ಚರ್ಚಿಸಿ ಮುಂದಡಿ ಇಡುವ ಪರಿಪಾಠ ಇಂದಿಗೂ ಚಾಲ್ತಿಯಲ್ಲಿದೆ. ಹೀಗಾಗಿಯೇ ‘ಸಮುದಾಯ’ದಂತಹ ತಂಡ ಹುಟ್ಟಲು ಸಹ ಪರೋಕ್ಷವಾಗಿ ವಿಜಯಾ ಅವರು ಕಾರಣರಾಗುತ್ತಾರೆ. ರಾಷ್ಟ್ರಮಟ್ಟದ ಖ್ಯಾತಿ ಪಡೆದ ರಂಗನಿರ್ದೇಶಕ ಪ್ರಸನ್ನ ಅವರು ರಂಗ ಪದವಿಯನ್ನು ಪಡೆಯುವ ಕಾಲದಲ್ಲಿಯೇ ನಿರ್ದೇಶಿಸಿದ ‘ಬಯಲು ಸೀಮೆ ಸರದಾರ’, ‘ಕದಡಿದ ನೀರು’ ಮುಂತಾದ ಪ್ರಯೋಗಗಳು ವಿಜಯಾ ಅವರೊಡನೆ ಆದ ಚರ್ಚೆಯಿಂದಾಗಿ ಹೆಚ್ಚು ಸಂಘಟಿತವಾದವು ಎಂಬುದನ್ನು ಇಂದಿಗೂ ಆ ತಂಡದ ಜನ ನೆನೆಯುತ್ತಾರೆ. ಇಂತಹ ನಾಟಕಗಳ ತಾಲೀಮಿನ ಸಮಯದಲ್ಲಿ ‘ನಮ್ಮ ಹುಡುಗರಿಗೆ’ ಎಂದೇ ವಿಜಯಾ ಅವರು ತಯಾರಿಸುತ್ತಿದ್ದ ತಿಂಡಿ ಬುತ್ತಿಯಿಂದಾಗಿ ಆ ತಂಡದಲ್ಲಿ ಹೊಸ ಉತ್ಸಾಹ ಮೂಡುತ್ತಿದ್ದುದನ್ನ ನಾನು ಸ್ವತಃ ಕಂಡಿದ್ದೇನೆ. ಇಂತಹ ನಾಟಕಗಳಿಗೆ ತಮ್ಮ ಮುದ್ರಣಾಲಯದಲ್ಲಿ ಕಡಿಮೆ ದರದಲ್ಲಿ ಕರಪತ್ರ, ಪರಿಚಯಪತ್ರಗಳನ್ನು ತಾವೇ ವಿನ್ಯಾಸಗೊಳಿಸಿ ಮುದ್ರಿಸುತ್ತಿದ್ದ ವಿಜಯಾ ಅವರು ಈ ಕಾರಣಕ್ಕಾಗಿಯೇ ರಂಗಭೂಮಿಯ ಹಲವರಿಗೆ ಅಮ್ಮನಾದರು. ಇಂತಹ ನಾಟಕಗಳ ಪ್ರದರ್ಶನವಾದ ನಂತರ ಅವುಗಳನ್ನು ಕುರಿತಂತೆ ವಿಚಾರಗೋಷ್ಠಿಗಳನ್ನು ಆಯೋಜಿಸುವುದಲ್ಲದೇ ಕನ್ನಡ ರಂಗಭೂಮಿ ಕುರಿತಂತೆ ಆವರೆಗೆ ಬರುತ್ತಿದ್ದ ಪತ್ರಿಕಾವಿಮರ್ಶೆಗಳಿಗೆ ಇದ್ದ ಸಾಹಿತ್ಯ ವಿಮರ್ಶೆಯ ಮಾನದಂಡಗಳಿಗೆ ಬದಲಾಗಿ ರಂಗಕೃತಿಯನ್ನು ವಿಮರ್ಶಿಸುವ ಹೊಸ ಪರಂಪರೆಯನ್ನೂ ವಿಜಯಾ ಅವರು ಆರಂಭಿಸಿದರು. ಹೀಗಾಗಿ ರಂಗಕೃತಿಯ ಅಧ್ಯಯನವನ್ನು ಪ್ರತ್ಯೇಕವಾಗಿ ವಿಮರ್ಶಿಸುವ ಒಂದು ಬೃಹತ್ ಪಡೆಯೇ ಸಿದ್ಧವಾಯಿತು. ಇದರಿಂದಾಗಿ ಕನ್ನಡ ಹವ್ಯಾಸೀ ರಂಗಭೂಮಿಗೆ ಆದ ಲಾಭ ದೊಡ್ಡದು.

ಇದೇ ಕಾಲಘಟ್ಟದಲ್ಲಿ ವೃತ್ತಿ ರಂಗಭೂಮಿಯನ್ನು ಕುರಿತು ಅಪಾರ ಅನುಕಂಪ ಇದ್ದ ವಿಜಯಾ ಅವರು ಅಂತಹ ತಂಡದ ಜನರೊಡನೆ ಮಾತಾಡುತ್ತಾ, ಅಲ್ಲಿದ್ದ ಮಹಿಳಾ ಕಲಾವಿದರ ಕಷ್ಟ ಕಾರ್ಪಣ್ಯಗಳನ್ನು ಕುರಿತು ನಾಡಿನ ಜನರಿಗೆ ತಮ್ಮ ಬರಹಗಳ ಮೂಲಕ ತಿಳಿಸುತ್ತಾ ಇದ್ದರು. ಇದರಿಂದಾಗಿ ಕೀಳರಿಮೆ ಅನುಭವಿಸುತ್ತಿದ್ದ ಅನೇಕ ವೃತ್ತಿರಂಗಭೂಮಿಯ ಕಲಾವಿದರಲ್ಲಿ ಹೊಸ ಚೈತನ್ಯ ಮೂಡಿತ್ತು. ಅಂತಹವರನ್ನು ಇತರ ಮಾಧ್ಯಮಗಳೂ ಗುರುತಿಸಿ, ಸಿನಿಮಾ-ಕಿರುತೆರೆಗೆ ಅಂತಹವರನ್ನು ಬಳಸಿಕೊಳ್ಳುವ ಪರಂಪರೆಯೇ ಆರಂಭವಾಯಿತು.

ಚಲನಚಿತ್ರ ರಂಗದಲ್ಲಿ

ವಿಜಯಾ ಅವರಿಗೆ ಚಲನಚಿತ್ರರಂಗದ ಪರಿಚಯ ದೊರೆತದ್ದು ಚಲನಚಿತ್ರ ಪತ್ರಿಕೋದ್ಯಮದಿಂದಲೇ ಆದರೂ ನಂತರ ಈ ಪರಿಚಯವೂ ಸಂಬಂಧ ಮತ್ತು ವಿಶ್ವಾಸವಾಗಿ ಬೆಳೆದು ನಿಂತಿತು. ವಿಜಯಾ ಪತ್ರಿಕೋದ್ಯಮಕ್ಕೆ ಕಾಲಿಡುವ ಕಾಲಕ್ಕೆ ಕನ್ನಡದಲ್ಲಿ ಹೊಸಲೆಯ ಚಿತ್ರ ಚಳುವಳಿಯು ಆರಂಭವಾಗುತ್ತಾ ಇತ್ತು. ಇಂತಹ ಚಿತ್ರಗಳನ್ನು ಕುರಿತು ಮೌಲಿಕ ಚರ್ಚೆಗಳ ಅವಶ್ಯಕತೆ ಇತ್ತು. ಆ ಚಿತ್ರಗಳನ್ನು ಪೋಷಿಸುವ ಮೂಲಕ ಆ ಚಿತ್ರಗಳ ತಯಾರಕರನ್ನು ಹೊಸ ಪ್ರಯೋಗಳಿಗೆ ಪ್ರೇರೇಪಿಸುವ ಅಗತ್ಯ ಇತ್ತು. ಹೀಗಾಗಿ ಇಂತಹ ಹೊಸ ಪ್ರಯೋಗಗಳನ್ನು ಕುರಿತಂತೆ ನಿರಂತರವಾಗಿ ತಮ್ಮ ಪತ್ರಿಕೆಯಲ್ಲಿ ಮಾತಾಡುತ್ತಲೇ ಹೊಸ ತಲೆಮಾರಿನ ಹುಡುಗರು ಮಾಡುತ್ತಾ ಇದ್ದ ಪ್ರಯೋಗಳಿಗೆ ನೀರೆರೆದರು. ಆ ಚಿತ್ರಗಳನ್ನು ಕುರಿತು ಚಿಚಾರಗೋಷ್ಠಗಳನ್ನು ನಡೆಸಿ, ಹೊಸ ಸಿನಿಮಾಗಳನ್ನು ಪ್ರೇಕ್ಷಕ ಅರ್ಥ ಮಾಡಿಕೊಳ್ಳುವ ಬಗೆಯನ್ನು ಕುರಿತಂತೇ ಶಿಬಿರಗಳನ್ನು ಸಹ ನಡೆಸಿದರು. ಈ ಎಲ್ಲಾ ಪ್ರಯೋಗದ ಫಲವಾಗಿ ೭೦-೮೦ರ ದಶಕದಲ್ಲಿ ನಾಡಿನ ಹಲವು ನಗರಗಳಲ್ಲಿ ಚಲನಚಿತ್ರ ರಸಗ್ರಹಣ ಶಿಬಿರಗಳಾದವು. ಸರ್ಕಾರವೂ ಸಹ ಈ ಎಲ್ಲಾ ವಿವರಗಳನ್ನು ಗಮನಿಸಿ ಹೊಸ ಚಲನಚಿತ್ರ ನೀತಿಯನ್ನು ರೂಪಿಸಿತು. ಹೊಸಅಲೆಯ ಚಿತ್ರ ಚಳುವಳಿಯನ್ನು ಬೆಂಬಲಿಸುವಂತಹ ಅನೇಕ ಹೊಸ ಕಾರ್ಯಕ್ರಮಗಳಿಗೆ ಆಗಲು ವಿಜಯಾ ಅವರು ಕಾರಣರಾದರು. ಇದರಿಂದಾಗಿ ಸಿನಿಮಾ ಪತ್ರಕರ್ತರ ನಡುವೆಯೂ ಒಂದು ಒಮ್ಮತವು ಮೂಡಿ ಚಲನಚಿತ್ರ ಪತ್ರಕರ್ತರ ವೇದಿಕೆಯೊಂದು ಆರಂಭವಾಗಲು ವಿಜಯಾ ಕಾರಣರಾಗುತ್ತಾರೆ. ಇದರಲ್ಲಿ ಭಾಗವಹಿಸುತ್ತಾ ಇದ್ದ ಹಿರಿಯ-ಕಿರಿಯ ಪತ್ರಕರ್ತರು ನಿರಂತರವಾಗಿ ಸಿನಿಮಾ ತಯಾರಕ ಮತ್ತು ಪ್ರೇಕ್ಷಕನ ನಡುವೆ ಸಂವಾದಗಳನ್ನು ನಡೆಸಿ ಹೊಸಭಾಷೆಯನ್ನು ಅಳವಡಿಸಿಕೊಂಡ ಸಿನಿಮಾಗಳನ್ನು ಮೆಚ್ಚುವ ಜನರ ಸಂಖ್ಯೆಯನ್ನು ದ್ವಿಗುಣಗೊಳಿಸುವುದು ಸಾಧ್ಯವಾಯಿತು.

ಇದೇ ಕಾಲಘಟ್ಟದಲ್ಲಿ ವಾಣಿಜ್ಯ ಪ್ರಧಾನ ಚಿತ್ರಗಳಲ್ಲಿ ಒಳ್ಳೆಯದರ ಜೊತೆಗೆ ಅಪಸವ್ಯಗಳೂ ಇದ್ದವು. ಅವುಗಳನ್ನು ಸಹ ಚರ್ಚೆಗೆ ಒಳಪಡಿಸುವ ಅಗತ್ಯವಿತ್ತು. ಹೀಗಾಗಿ ಜನಪ್ರಿಯವಾದ ಸಿನಿಮಾಗಳನ್ನು ಕುರಿತಂತೆ ಸಂವಾದ ನಡೆಸಿ ಅಂತಹ ಚಿತ್ರತಯಾರಕರನ್ನು ಆರೋಗ್ಯಕಾರಿ ಮನಸ್ಥಿತಿಗೆ ತರುವ ಪ್ರಯತ್ನವನ್ನೂ ವಿಜಯಾ ಮಾಡಿದರು. ಈ ಪ್ರಯತ್ನಗಳ ಫಲ ಎಂಬಂತೆ ಕರ್ನಾಟಕದಲ್ಲಿ ಫಿಲಂ ಸೊಸೈಟಿ ಚಳುವಳಿಗೆ ಹೊಸ ಶಕ್ತಿ ದೊರೆಯಿತು. ಚಿತ್ರೋತ್ಸವಗಳು ಮಹಾನಗರಗಳಲ್ಲಿ ಆಗತೊಡಗಿದವು. ಹೊಸದನ್ನು ಅರ್ಥ ಮಾಡಿಕೊಳ್ಳಲು ಹಳೆಯದರ ಸಂಪರ್ಕ ಮತ್ತು ತಿಳುವಳಿಕೆ ಇರಲೇಬೇಕು ಎಂಬ ಇರಾದೆಯಿಂದ ‘ನಾಸ್ಟಾಲ್ಜಿಯಾ’ ಎಂಬ ಹೆಸರಲ್ಲಿ ಭಾರತದಲ್ಲಿ ತಯಾರಾದ ಮೂಕಿ ಚಿತ್ರಗಳಿಂದ ಆ ವರೆಗಿನ ಬಹುಚರ್ಚಿತ ಚಿತ್ರಗಳ ಉತ್ಸವವೂ ಬೆಂಗಳೂರಲ್ಲಿ ನಡೆಯಲು ವಿಜಯಾ ಹಗಲಿರುಳೂ ಶ್ರಮಿಸಿದರು. ಅದೊಂದು ಅಭೂತಪೂರ್ವ ಕಾರ್ಯಕ್ರಮವಾಯಿತು. ದೇವಿಕಾರಾಣಿಯಂತಹ ಮೂಕಿ ಚಿತ್ರಗಳ ನಾಯಕಿಯಿಂದ ಈಚೆಗಿನ ಹೊಸ ತಲೆಮಾರಿನ ವರೆಗೂ ಅನೇಕ ಕಲಾವಿದರು ಹಳೆಯ ಕಾರುಗಳಲ್ಲಿ ಬೆಂಗಳೂರಿನಲ್ಲಿ ಮಾಡಿದ ಮೆರವಣಿಗೆಯೇ ಒಂದು ಮಹದಚ್ಚರಿಯಂತಿತ್ತು. ಈ ಕಾರ್ಯಕ್ರಮದ ಯಶಸ್ಸಿನಿಂದಾಗಿ ಕೇಂದ್ರ ಸರ್ಕಾರವು ಪ್ರತೀ ವರ್ಷ ದೆಹಲಿಯಲ್ಲಿ ಮಾತ್ರ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಚಿತ್ರೋತ್ಸವವು ಬೆಂಗಳೂರಿಗೂ ಬರುವಂತಾಯಿತು ಎಂಬುದನ್ನು ಇಂದಿಗೂ ಕೇಂದ್ರದ ಚಿತ್ರೋತ್ಸವ ಇಲಾಖೆಯ ಜನ ನೆನಪಿಸಿಕೊಳ್ಳುತ್ತಾರೆ ಮತ್ತು ಆ ಕಾಲದಲ್ಲಿ ವಿಜಯಾ ಅವರು ಮಾಡಿದ ಸೇವೆಯನ್ನು ಗುರುತಿಸುತ್ತಾರೆ.

ಹೀಗೆ ಸಿನಿಮಾ ಚಳುವಳಿಯನ್ನು ಕಟ್ಟುತ್ತಾ ಅಲ್ಲಿ ಬದುಕುತ್ತಿದ್ದ ಹೆಂಗೆಳೆಯರ ಬದುಕನ್ನು ರೂಪಿಸಲು ಸಹ ವಿಜಯಾ ನೆರವಾಗಿದ್ದರು. ಅನೇಕ ಮುರಿದು ಬಿದ್ದ ಸಂಬಂಧಗಳು ವಿಜಯಾ ಅವರ ಪ್ರಯತ್ನದಿಂದ ಮತ್ತೆ ಕೂಡಿಕೊಂಡದ್ದನ್ನು ಆ ಕುಟುಂಬದ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇಂತಹ ಸಮಾಜಮುಖಿ ಪತ್ರಿಕೋದ್ಯಮ ನಂತರದ ದಿನಗಳಲ್ಲಿ ಜಾಹೀರಾತು ಉದ್ಯಮ ಆಗಿದ್ದರಿಂದಾಗಿ ಮತ್ತೆ ವಿಜಯಾ ಅವರು ಹಳಹಳಿಸಿದರು. ಇದನ್ನು ತಪ್ಪಿಸಲು ಅನೇಕ ಪ್ರಯತ್ನಗಳನ್ನು ಮಾಡಿದರು. ಆದರೆ ವ್ಯಾಪಾರೀ ಮನೋಧರ್ಮದ ಮುಂದೆ ಆದರ್ಶಗಳ ಮಾತು ಗೆಲ್ಲುವುದಿಲ್ಲ ಎಂಬುದನ್ನು ಇತಿಹಾಸ ಮತ್ತೆ ಮತ್ತೆ ಸಾಬೀತು ಮಾಡಿತು.

ಈ ಸಂದರ್ಭದಲ್ಲಿಯೇ ಕನ್ನಡ ಚಲನಚಿತ್ರ ಇತಿಹಾಸ ಎಂಬ ಬೃಹತ್ ಗ್ರಂಥ ರಚನೆಗೆ ವಿಜಯಾ ಅವರು ಅನೇಕ ಸಮಾನಮನಸ್ಕ ಪತ್ರಕರ್ತರೋಡನೆ ಇಳಿದರು. ಸುಮಾರು ಆರಿ ವರ್ಷಗಳ ಕಾಲ ಸಂಗ್ರಹಿಸಿದ ಮಾಹಿತಿಯನ್ನು ಎರಡು ಸಾವಿರ ಪುಟಗಳ ಗ್ರಂಥವಾಗಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತು. ಆ ಪುಸ್ತಕವು ಮಾರುಕಟ್ಟೆಗೆ ಬಂದೊಡನೆ ಅದೇ ವ್ಯಾಪಾರೀ ಮನೋಧರ್ಮದವರು ಜಾತಿಯ ಹೆಸರನ್ನು ಹೇಳುತ್ತಾ ಇತಿಹಾಸ ತಿರುಚಲಾಗಿದೆ ಎಂದೆಲ್ಲಾ ಅನಾವಶ್ಯಕ ಆರೋಪಗಳನ್ನು ಮಾಡಿ ಅಪರೂಪದ ಗ್ರಂಥವೊಂದನ್ನು ಮಾರಾಟ ಮಾಡಲಾಗದಂತೆ ಮಾಡಿದ್ದು ಸಹ ಈಗ ಇತಿಹಾಸ. ಈ ಘಟನೆಯಲ್ಲಿ ಯಾರನ್ನು ವಿಜಯಮ್ಮನವರು ಸಲಹಿ, ಪೋಷಿಸಿದ್ದರೋ ಅದೇ ಜನ ಸಂಪೂರ್ಣ ವಿರುದ್ಧ ನೆಲೆಯಲ್ಲಿ ನಿಂತು ಮಾತಾಡತೊಡಗಿದರು. ಇವರನ್ನು ಸಲಹಿದ್ದು ನಾನೇನಾ ಎಂಬ ಅನುಮಾನದೊಂದಿಗೆ ಆಘಾತಕ್ಕೆ ಒಳಗಾದ ವಿಜಯಮ್ಮ ಸಂಪೂರ್ಣವಾಗಿ ಚಲನಚಿತ್ರ ಚಟುವಟಿಕೆಗಳಿಂದ ವಿಮುಖರಾದರು.

ಆದರೆ ಸದಭಿರುಚಿಯ ಚಲನಚಿತ್ರ ಚಳುವಳಿಯ ಜನ ವಿಜಯಮ್ಮನವರ ಸಂಪರ್ಕ ಬಿಡಲಿಲ್ಲ. ಇಂದಿಗೂ ತಾವು ಮಾಡುವ ಹೊಸ ಪ್ರಯೋಗಗಳಿಗೆ ವಿಜಯಮ್ಮನವರ ಸಲಹೆ ಪಡೆದೇ ಆ ಜನ ಮುಂದುವರೆಯುತ್ತಾ ಇದ್ದಾರೆ. ಇದರಿಂದಾಗಿ ಕನ್ನಡದ ಅನೇಕ ಶ್ರೇಷ್ಟ ಎನಿಸಿಕೊಂಡಿರುವ ಚಿತ್ರಗಳ ರಚನೆಗೆ ವಿಜಯಮ್ಮ ಪರೋಕ್ಷವಾಗಿ ಕಾರಣರಾಗಿದ್ದಾರೆ, ಆಗುತ್ತಾ ಇದ್ದಾರೆ, ಆಗುತ್ತಾರೆ.

ಈ ಎಲ್ಲಾ ಅನುಭವದ ಫಲವಾಗಿ ವಿಜಯಾ ಅವರನ್ನು ಕೇಂದ್ರ ಸರ್ಕಾರದ ಅನೇಕ ಪ್ರಶಸ್ತಿಗಳನ್ನು ನೀಡಲು ಆಯ್ಕೆ ಮಾಡುವ ಜ್ಯೂರಿ ಆಗಲು ಆಹ್ವಾನಿಸಲಾಯಿತು ಮತ್ತು ಕೇಂದ್ರ ಸರ್ಕಾರದ ಚಲನಚಿತ್ರ ಸೆನ್ಸಾರ್ ಮಂಡಳಿಯ ಸದಸ್ಯರನ್ನಾಗಿಯೂ ಆರು ವರ್ಷ ಸೇವೆ ಮಾಡುವ ಅವಕಾಶ ದೊರೆಯಿತು. ಈ ಕೆಲಸಗಳನ್ನು ಮಾಡುವಾಗಲೂ ತಮ್ಮ ತತ್ವ ಸಿದ್ಧಾಂತಗಳನ್ನು ಬದಲಿಸಿಕೊಳ್ಳದೇ ಸದಭಿರುಚಿಯ ಚಿತ್ರಗಳನ್ನು ಪ್ರೋತ್ಸಾಹಿಸಿದರು ಎಂಬುದೇ ವಿಜಯಾ ಅವರ ದೊಡ್ದ ಸಾಧನೆ.

ಇಂದಿಗೂ ಯಾವುದೇ ಸದಭಿರುಚಿಯ ಚಲನಚಿತ್ರ ಕುರಿತ ಚರ್ಚೆ ನಡೆಯುತ್ತಾ ಇದ್ದಾರೆ ಅಲ್ಲಿ ‘ಅಮ್ಮ’ ಇರುತ್ತಾರೆ. ನಾಡು ಕಟ್ಟುವ ಕೆಲಸ ನಿರಂತರ ಎಂಬುದನ್ನು ಸಾಬೀತು ಮಾಡುತ್ತಾ ಇರುತ್ತಾರೆ.

ಸ್ನೇಹವಲಯ

ಈ ನಾಡಿನ ಸಾಹಿತ್ಯ ಚಟುವಟಿಕೆಗೂ ರಾಜಕೀಯಗಳು ತಳುಕಿಹಾಕಿಕೊಂಡು ಅನೇಕ ಅಪರೂಪದ ಸಾಹಿತ್ಯ ಕೃತಿಗಳು ಕೆಲವರ ರಾಜಕೀಯದಿಂದ ಮೂಲೆಗುಂಪಾದಾಗ ಅವುಗಳನ್ನು ಬೆಳಕಿಗೆ ತರಲು ವಿಜಯಾ ಅವರು ಆರಂಭಿಸಿದ ವೇದಿಕೆ ‘ಸ್ನೇಹವಲಯ’. ಈ ವೇದಿಕೆಯಿಂದ ಎಸ್.ಎಲ್,ಭೈರಪ್ಪನವರ ‘ಪರ್ವ’ದಂತಹ ಪ್ರಯೋಗವೂ ದಿನವಿಡೀ ಚರ್ಚೆಯಾಗಿತ್ತು. ವಿ.ಎಂ.ಇನಾಂದಾರ್ ಅವರ ಎಲ್ಲಾ ಕೃತಿಗಳನ್ನು ಕುರಿತು ಚರ್ಚೆಯಾಗಿತ್ತು. ಗೋಕಾಕರ ‘ಭಾರತ ಸಿಂಧು ರಶ್ಮಿ’ ಎಂಬ ಖಂಡಕಾವ್ಯವನ್ನು ಕುರಿತ ಚರ್ಚೆಗಳು ಆದವು. ಈ ಎಲ್ಲಾ ಚರ್ಚೆಗಳನ್ನು ನಂತರದಲ್ಲಿ ಹೊತ್ತಿಗೆಯಾಗಿಯೂ ತಂದು ಸಾಹಿತ್ಯ ವಳಯವೂ ದೂರಕ್ಕಿಟ್ಟಿದ್ದ ಅಪರೂಪದ ಕೃತಿಗಳನ್ನು ಕುರಿತು ಬೆಳಕು ಚೆಲ್ಲುವ ಸಾಹಸ ಮಾಡಿದ್ದು ವಿಜಯಾ ಅವರ ದೊಡ್ಡ ಸಾಧನೆ. ಇದಕ್ಕಾಗಿ ಅವರೊಂದಿಗೆ ಸಾಹಿತ್ಯ ವಲಯದ ಘಟಾನುಘಟಿಗಳು ಹೆಗಲಾಗಿ ನಿಂತರು ಎಂಬುದು ವಿಜಯಾ ಅವರಿಗಿದ್ದ ಕೃತು ಶಕ್ತಿಗೆ ಸಾಕ್ಷಿ. ಇದೇ ಸ್ನೇಹವಲಯದಿಂದ ಬೇಂದ್ರೆ ಅವರ ಕಾವ್ಯ ಕುರಿತು ವರ್ಷವಿಡೀ ಚರ್ಚೆಗಳು ನಡೆದಿದ್ದವು. ಈಗ ಅದೇ ಕೆಲಸವನ್ನು ಸುಚಿತ್ರಾ ಕಲಾಕೇಂದ್ರದ ಮೂಲಕ ಪ್ರತೀ ಶನಿವಾರ ‘ಸಾಹಿತ್ಯ ಸಂಜೆ’ ಎಂದು ನಡೆಸುತ್ತಾ ಇದ್ದಾರೆ. ವಿಜಯಾ ಅವರ ಈ ಎಲ್ಲಾ ಪ್ರಯತ್ನದ ಫಲಗಳು ಕಣ್ಣೆದುರಿಗೇ ಇವೆ.

ಮಹಿಳಾ ಚಳುವಳಿಗಳು

ಸ್ರ್ತೀವಾದ ಎಂಬುದನ್ನು ಶಿಷ್ಟ ಸಮಾಜ ಗಂಭೀರವಾಗಿ ಪರಿಗಣಿಸಿಯೇ ಇಲ್ಲದ ಕಾಲದಲ್ಲಿ ಮಹಿಳಾ ಚಳುವಳಿಗಳನ್ನು ನಿರಂತರವಾಗಿ ಪೋಷಿಸಿದವರಲ್ಲಿ ವಿಜಯಾ ಕೂಡ ಒಬ್ಬರು. ಮಾರ್ಚ್ ೮ರ ಮಹಿಳಾ ದಿನಾಚರಣೆಗೆಂದೇ ಇವರು ಬರೆದ ‘ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ’ ನಾಟಕವನ್ನು ಸಂಪೂರ್ಣವಾಗಿ ಮಹಿಳೆಯರೇ ಬೀದಿ ನಾಟಕವಾಗಿ ಅಭಿನಯಿಸಿದ್ದು ಆ ಕಾಲದ ಮೊದಲುಗಳಲ್ಲಿ ಒಂದು. ಮಹಿಳೆಯರನ್ನು ಈ ಸಮಾಜ ನಡೆಸಿಕೊಳ್ಳು ರೀತಿಯನ್ನು ಕುರಿತಂತೆ ನಿರಂತರ ಬರೆಯುತ್ತಾ, ಅವಕಾಶ ಸಿಕ್ಕಾಗ ಚಾಟಿಯಂತಹ ಮಾತುಗಳನ್ನಾಡಿ ಎಚ್ಚರಿಸುತ್ತಾ ಸರ್ಕಾರಗಳನ್ನು ನಡೆಸುವವರು ಮಹಿಳೆಯರಿಗೆ ಮೀಸಲಾತಿ ನೀಡುವುದಕ್ಕೆ ಆರಮಭಿಸುವವರೆಗೂ ವಿಜಯಾ ಅವರ ಚಳುವಳಿ ಸಾಗಿ ಬಂದಿದೆ. ಈ ಹಾದಿಯಲ್ಲಿ ಸಿದ್ಧ ಉಡುಪು ತಯಾರಿಸುವ ಕಾರ್ಖಾನೆಗಳಲ್ಲಿ ದುಡಿವ ಹೆಂಗಸರನ್ನು ಸಂಘಟಿಸಲು, ಪೌರಕಾರ್ಮಿಕರಾಗಿ ದುಡಿಯುತ್ತಾ ಇರುವವರನ್ನು ಒಗ್ಗೂಡಿಸಿ, ಅವರಿಗೆ ನ್ಯಾಯ ದೊರೆಯುವಂತೆ ಮಾಡಲು, ಅನೇಕ ಖಾಸಗೀ ಕಾರ್ಖನೆಗಳಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ಖಂಡಿಸುವ ಹೋರಾಟಗಳಲ್ಲಿ ಭಾಗವಹಿಸಲು ವಿಜಯಮ್ಮ ಹೋಗುತ್ತಲೇ ಇದ್ದಾರೆ. ಯಾವುದೇ ಅನ್ಯಾಯ ಕಂಡಾಗ ಸಿಡಿದೇಳುವ ವಿಜಯಮ್ಮನವರ ಗುಣ ಮತ್ತು ಅವರ ಮಾತನ್ನು ಕೇಳುವ ಜನ ಆ ವಾದಕ್ಕೆ ಒಪ್ಪಿ ನ್ಯಾಯ ಕೊಡಿಸಲು ನೆರವಾಗುವುದು ಕಳೆದ ನಾಲ್ಕು ದಶಕದಿಂದ ನಿರಂತರವಾಗಿ ಆಗುತ್ತಲೇ ಇದೆ. ಈ ಕೆಲಸಗಳ ನಡುವೆಯೇ ಮಾನಸ ಬಳಗ ಎಂಬ ಸಂಘಟನೆಯೊಡಗೂಡಿ ‘ನಮ್ಮ ಮಾನಸ’ ಎಂಬ ಮಹಿಳಾ ವಿಷಯವೇ ಪ್ರಧಾನವಾದ ಮಾಸ ಪತ್ರಿಕೆಯನ್ನು ತರಲು ಸಹ ವಿಜಯಾ ಅವರ ಸಹಕಾರ ಕಾರಣವಾಗಿದೆ. ಇಂದಿಗೂ ಮಹಿಳಾ ಚಳುವಳಿಗಳಲ್ಲಿ ಭಾಗವಹಿಸುತ್ತಾ ಸ್ತ್ರೀವಾದೀ ಚಳುವಳಿಗೆ ಭದ್ರ ಬುನಾದಿಯನ್ನು ಒದಗಿಸಲು ವಿಜಯಮ್ಮ ಪ್ರಯತ್ನಿಸುತ್ತಾ ಇದ್ದಾರೆ.

ಈ ಕೆಲಸಗಳ ಜೊತೆಗೆ ತಮ್ಮದೇ ಪ್ರಕಾಶನವನ್ನು ಆರಂಭಿಸಿ ಅನೇಕ ಹೊಸ ಲೇಖಕರನ್ನು ನಾಡಿಗೆ ಪರಿಚಯಿಸಿದ್ದಾರೆ. ಯಾವುದೇ ಸಂಸ್ಥೆಯು ಕೃಶವಾಗುತ್ತಾ ಇದೆ ಎಂದಾಗ ತಾವೇ ಹೆಗಲಾಗಿ ಮುಳಗುತ್ತಿರುವ ಹಡಗನ್ನು ತೇಲಿಸುವ ಪ್ರಯತ್ನ ಮಾಡಿದ್ದಾರೆ. ಸುಚಿತ್ರಾ ಅಕಾಡೆಮಿಯಂತಹ ಸಂಸ್ಥೆಗಳು ಇಂದು ಉಸಿರಾಡುವುದಕ್ಕೆ ವಿಜಯಮ್ಮನವರ ಶ್ರಮವೂ ಕಾರಣವಾಗಿದೆ. ಉದಯಭಾನು ಕಲಾಸಂಘದಂತಹ ಸಂಸ್ಥೆಯು ಪ್ರಕಟಿಸಿದ ‘ಬೆಂಗಳೂರು ದರ್ಶನ’ ದಂತಹ ಬೃಹತ್ ವಿಶ್ವಕೋಶಕ್ಕಾಗಿ ಮೂರು ನಾಲ್ಕು ವರ್ಷ ಸಂಪಾದಕ ಮಂಡಳಿಯಲ್ಲಿ ಒಬ್ಬರಾಗಿ ಕಷ್ಟಪಟ್ಟಿದ್ದರು. ಹಂಪಿ ವಿಶ್ವವಿದ್ಯಾಲಯ ಹೊರ ತಂದ ‘ಕಿರಿಯರ ವಿಶ್ವಕೋಶ’ಕ್ಕೂ ಇದೇ ಮಾದರಿಯಲ್ಲಿ ಹಲವು ವರ್ಷಗಳ ಕಾಲ ಕಷ್ಟಪಟ್ಟಿದ್ದರು. ವೃತ್ತಿರಂಗಭೂಮಿ ಮತ್ತು ಹವ್ಯಾಸೀ ರಂಗಭೂಮಿಯ ಜನರಲ್ಲಿ ಸಮರಸ ಮೂಡಿಸಲು ನಡೆಸಿದ ಗೋಷ್ಠಿಗಳನ್ನೆಲ್ಲಾ ಸಂಪಾದಿಸಿ ‘ರಂಗಚಿಂತನೆ’ ಎಂಬ ಹೊತ್ತಿಗೆ ತಂದರು.

ಮಾನವೀಯ ನೆಲೆಯಿಂದ

ವಿಜಯಾ ನಾಡಿಗೆ ಅಮ್ಮನಾಗುವುದಕ್ಕೆ ಇನ್ನೂ ಅನೇಕ ಕಾರಣಗಳಿವೆ. ತಮ್ಮೆದುರಿಗೆ ಕಣ್ಣೀರಿಡುವ ಯಾವುದೇ ಜೀವಕ್ಕಾದರೂ ಆಕೆ ತಟ್ಟನೆ ಅಮ್ಮನಾಗಿ ಸಾಂತ್ವನ ನೀಡುತ್ತಾರೆ. ಅಷ್ಟೇ ಅಲ್ಲ. ನಾಡಿನಲ್ಲಿ ದೊಡ್ಡ ರೌಡಿ ಎನಿಸಿಕೊಂಡ ವ್ಯಕ್ತಿಯೇ ಎದುರಾದರೂ ವಿಜಯಮ್ಮನ ಜೊತೆಗೆ ಮಾತಾಡಿದ ಮೇಲೆ ತನ್ನ ಪಥ ಬದಲಿಸಿ ಸಮಾಜಮುಖಿಯಾಗುವುದಿದೆ. ಹೀಗಾಗಿ ಆ ಜನವೂ ವಿಜಯಾ ಅವರನ್ನು ಅಮ್ಮ ಎಂದು ತುಂಬು ಹೃದಯದಿಂದ ಕರೆಯುವುದನ್ನು ನಾನು ಕಂಡಿದ್ದೇನೆ. ಅಂತಹವರಲ್ಲಿ ಅನೇಕರು ತಮ್ಮ ವೃತ್ತಿಯನ್ನೇ ಬದಲಿಸಿಕೊಂಡಿದ್ದು ಸಹ ಈಗ ಇತಿಹಾಸವೇ.

ಒಂದು ಕಾಲಕ್ಕೆ ವಾರಕ್ಕೆರಡು ಪೂಜೆ, ಪುನಸ್ಕಾರ ಎನ್ನುತ್ತಿದ್ದ ಅಮ್ಮ ದೇವರುಗಳ ಪೂಜೆಯನ್ನು ಸಂಪೂರ್ಣ ನಿರಾಕರಿಸಿ ಮನುಷ್ಯರ ಸೇವೆಗೆ ಜೀವವನ್ನು ಮುಡಿಪಾಗಿಟ್ಟದ್ದು, ಒಂದು ಕಾಲಕ್ಕೆ ಆರ್‌ಎಸ್‌ಎಸ್‌ಗೆ ಮಕ್ಕಳನ್ನು ಕಳಿಸುತ್ತಾ ಇದ್ದವರು ಅಂತಹ ಮತಾಂಧರು ದೇಶಕ್ಕೆ ಅಪಾಯ ಎಂಬ ನಿಲುವಿಗೆ ಬಂದದ್ದು, ಇವೆಲ್ಲವುಗಳಿಂದ ಮಕ್ಕಳಾದ ನಮಗೆ ಮಾತ್ರ ಅಲ್ಲ ನಾಡಿನ ಎಲ್ಲರಿಗೆ ಅಮ್ಮ ಮಾದರಿಯನ್ನು ಸೃಷ್ಟಿಸಿಕೊಟ್ಟಿದ್ದಾರೆ. ಎಲ್ಲಿ ಕರುಣೆ, ಕಕ್ಕುಲಾತಿ, ಮಾನವೀಯತೆಗಳು ಇರುತ್ತವೋ ಅಲ್ಲಿ ನೆಮ್ಮದಿಯ ನೆರಳೂ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ವಿಜಯಮ್ಮ ನಮ್ಮೊಡನೆ ಇದ್ದಾರೆ.

ಈ ಜಗತ್ತಲ್ಲಿ ಅಮ್ಮನನ್ನು ಪರಿಚಯಿಸುವ ಇಂತಹ ಅವಕಾಶ ಎಲ್ಲಾ ಮಕ್ಕಳಿಗೂ ದೊರೆಯುವುದಿಲ್ಲ. ನನಗೆ ಸಿಕ್ಕಿದೆ. ಇದೂ ಸಹ ಆ ಅಮ್ಮನದೇ ಸಾಧನೆ ಎಂದರೆ ತಪ್ಪಾಗಲಾರದು.

– ೦೦೦ –

Advertisements

10 Responses to “ವಿಜಯಮ್ಮ ಯಾ ಡಾ.ವಿಜಯಾ ಯಾ ಇಳಾ ಯಾ ಮಮಿ ಯಾ ನಮ್ಮಮ್ಮ ಎಂಬ ಪವಾಡ…!”


 1. 1 Jinde N Suryabhanu May 10, 2012 at 8:43 am

  nijawagalu vijayamma… awara hesarina hagey prathi hejjeyallu vijayawannu kandidhdhare…. very nice article….

 2. 2 prathibha nandakumar May 10, 2012 at 2:02 pm

  ಸುರೇಶ

  ಇದಕ್ಕೆ ನಾನು ಮತ್ತು ನನ್ನಂತಹ ನೂರಾರು ಜನರು ಸೇರಿಸಬೇಕಾದುದು ಬಹಳಷ್ಟಿದೆ. ವಿದ್ಯಾರ್ಥಿಯಾದ ನನ್ನಲ್ಲಿ ಬರೆಯುವ ಪ್ರತಿಭೆ ಇದೆ ಎಂದು ಗುರುತಿಸಿ ಬರಿ ಅಂತ ಕರೆದು ಅವಕಾಶ ಕೊಟ್ಟು ಬರೆದದ್ದನ್ನು ತಿದ್ದಿ ಪ್ರಕಟಿಸಿ ತಾನೇ ಎಲ್ಲರಿಗು ಹುಡುಗಿ ನೋಡಿ ಎಷ್ಟು ಚೆನ್ನಾಗಿ ಬರಿತಾಳೆ ಅಂತ ಹೇಳಿ ಇಮೇಜ್ ಕ್ರಿಯೇಟ್ ಮಾಡಿ, ನಂತರ ಅದೇ ದೊಡ್ಡ ಮಟ್ಟದಲ್ಲಿ ಬೆಳೆದು ನಾನು ಸಾಹಿತಿ ಅಂತ ಗುರುತಾದಾಗ ಸಂಭ್ರಮಿಸಿದ ಅಮ್ಮ, ಎಲ್ಲ ಕಷ್ಟದ ಸಂದರ್ಭಗಳಲ್ಲೂ ತಪ್ಪದೆ ವಿಚಾರಿಸಿಕೊಂಡ ಅಮ್ಮ ನನ್ನು ಹೇಗೆ ತಾನೇ ವರ್ಣಿಸುವುದು?

 3. 3 bsuresha May 10, 2012 at 2:45 pm

  ಹೌದು ಪ್ರತಿಭಾ,
  ಅಮ್ಮನ ಬಗ್ಗೆ ಬರೆಯಲು ಕೂತರೆ ತುಂಬಾ ದೊಡ್ಡ ಗ್ರಂಥವೇ ಆಗಬಹುದು. ನನಗೆ ಇಲ್ಲಿ ಏಳು ಪುಟಗಳ ಅವಕಾಶ ಕೊಟ್ಟಿದ್ದರು ನಾನು ಸ್ವಲ್ಪ ಸ್ವಾತಂತ್ರ‍್ಯ ತೆಗೆದುಕೊಂಡು ಹತ್ತು ಪುಟ ಬರೆದೆ. ಆದರೂ ಅಮ್ಮನ ಬಗ್ಗೆ ಇನ್ನೂ ಸಿಕ್ಕಾಪಟ್ಟೆ ಹೇಳುವುದಿದೆ ಎನಿಸುತ್ತಿದೆ.
  ನಿನ್ನ ‘ಅಂತರಂಗ’ ಓದುತ್ತಾ ಇದ್ದೇನೆ. ಚೆನ್ನಾಗಿದೆ ಅಂದರೆ ತುಂಬಾ ಸಣ್ಣ ಮಾತಾಗುತ್ತೆ. ಪೂರ್ತಿ ಓದಿದ ನಂತರ ಪ್ರತ್ಯೇಕವಾಗಿ ಮಾತಾಡುತ್ತೇನೆ.

 4. 4 CHANDRASHEKAR May 11, 2012 at 7:20 am

  Suresha,

  Naanu chikkavanagiddagininda “Amma” nannu Nodutha beledavanu. Aa dinagalalli neevugalu andara Guru, Neenu haagu Amma needida sahakarakke nammellar hruthpoorvaka dhanyavadagalu. Ninna baravanige thumba chennagide. Neenu innu hechhu yettarakke beleyabekembude nammellara haaraike. Ammana bagge yestu baredaroo saalademba ninna anisikege nanna maatoo ide. yaakendare avru yellarigoo “Amma”.
  CHANDRU, RAJU, SHANKARA, POORNIMA & UMA – Families. NINNA LEKANAKKE JAI HO.

 5. 5 B.Suresha May 11, 2012 at 8:10 am

  ಪ್ರೀತಿಯ ಚಂದ್ರಣ್ಣನಿಗೆ ನಮಸ್ಕಾರಗಳು.
  ನಿನ್ನ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.
  ನನಗೀಗಲೂ ನಿಮ್ಮ ಮನೆಯಲ್ಲಿ ಸಿಗುತ್ತಿದ್ದ ಕುರುಕಲು ತಿಂಡಿಗಳನ್ನು ನೆನೆದು ಬಾಯಲ್ಲಿ ನೀರೂರುತ್ತಾ ಇದೆ. ನಿನ್ನ ಮನೆಯವರಿಗೆ ನನ್ನ ನಮಸ್ಕಾರ ತಿಳಿಸಿ.

 6. 6 h.gopalakrishna June 13, 2012 at 10:30 am

  ¦æAiÀÄ ¸ÀÄgÉñï,
  C¥ÀgÀÆ¥ÀPÉÌ ¤ªÀÄä ¨ÁèUï £ÉÆÃrzÉ. «dAiÀĪÀÄä CªÀgÀ CªÀgÀ §UÉV£À vÀªÀÄä ¯ÉÃR£À NzÀÄwÛzÀÝ ºÁUÉ E¼Á ¥Éæ¹ìUÉ £Á£ÀÄ £À£Àß ªÉÆzÀ® ¥ÀĸÀÛPÀ CZÀÄÑ ºÁQ¸À®Ä §gÀÄwÛzÀÄzÀÄ £É£À¦UÉ §A¢vÀÄ.¤ÃªÀÅ,UÀÄgÀÄ,aPÀÌ ¸ÀÄgÉñÀ…. J®ègÀÆ PÁr¢j !£ÀAvÀgÀ «dAiÀÄ DªÀgÉÆA¢UÉ ¨É¼ÉzÀÄ §AzÀ £ÀªÀÄä ¸Á»vÀåzÀ ZÀlĪÀnPÉUÀ¼ÀÆ,£ÀªÀÄä© E J¯ï UÉ CªÀgÀÄ ¤ÃqÀÄwÛzÀÝ ¨sÉÃn,¨ÉAUÀ¼ÀÆj£À §UÉÎ ªÀÄvÀÄÛ £ÀªÀPÀ£ÁðlPÀ ¥À©èPÉõÀ£ïì gÀªÀgÀÀ PÀ£ÁðlPÀ PÀ¯É UÀ¼À §UÉÎÀCªÀgÀÄ UÀæAxÀ gÀa¹zÁUÀ £Á£ÀÄ MzÀV¹zÀ PÉ®ªÀÅ ¯ÉÃR£ÀUÀ¼ÀÄ ¥sÉÆÃmÉÆÃUÀ¼ÀÄ…»ÃUÉ ºÀ®ªÀÅ £É£À¥ÀÄUÀ¼ÀÄ MvÉÆÛnÖUÉ §AzÀªÀÅ. ¸ÀºÀ… MªÉÄä¯Éà PÉ®ªÀÅ ªÀµÀð aPÀ̪À£ÁzÀ ºÁUÉ C¤¹zÉ.! ¯ÉÃR£À »r¹vÀÄ. UÀÄqï !JZï. UÉÆÃ¥Á®PÀȵÀÚ

 7. 7 Jayalaxmi Patil March 6, 2013 at 4:22 am

  ಪುಣ್ಯವಂತರು ನೀವು ಸುರೇಶಣ್ಣ. ಅಮ್ಮನ ಕುರಿತು ಇಷ್ಟೆಲ್ಲ ವಿವರಗಳು ತಿಳಿದಿರಲಿಲ್ಲ ಈ ಮುಂಚೆ. ನೀವು ಅಮ್ಮನ ಕುರಿತು ಇನ್ನೂ ಇನ್ನೂ ಬರೆಯಬೇಕು. ಅದು ನಮಗೆಲ್ಲ ಆದರ್ಶ ಮಾರ್ಗದರ್ಶಿಯಾಗಬೇಕು. ದಯವಿಟ್ಟು ಅಮ್ಮನ ಆತ್ಮಚರಿತ್ರೆ ಬರೆದು ದಾಖಲಿಸಿ.

 8. 8 B.Suresha March 6, 2013 at 5:38 am

  @ Jayalaxmi Patil
  ಅವ್ವಾ…
  ನಾನು ಅಮ್ಮನನ್ನು ಆರಿಸುವ ಶಕ್ತಿ ಇದ್ದರೆ ಎಲ್ಲಾ ಕಾಲಕ್ಕೂ ಈ ಅಮ್ಮನೇ ನನ್ನ ಅಮ್ಮನಾಗಲಿ ಎನ್ನುವವ.
  ನನ್ನವ್ವ ನನಗೆ ಬದುಕಲು ಕಲಿಸಿದ್ದಾಳೆ. ಸಂಕಷ್ಟಗಳಲ್ಲಿ ನಡಾವಳಿ ಹೇಗಿರಬೇಕೆಂದು ಸ್ವತಃ ಬದುಕಿ ತೋರಿಸಿದ್ದಾಳೆ.
  ಆಕೆಯ ಬಗ್ಗೆ ನಾನು ದಿನಗಟ್ಟಲೆ, ಪುಟಗಟ್ಟಲೇ ಬರೆಯಬಹುದು.ಆದರೆ ನಾನು ಬರೆಯುವುದಕ್ಕಿಂತ ಅಮ್ಮ ಸ್ವತಃ ಬರೆಯುವುದು ಸೂಕ್ತ. ಹಾಗಾಗಿಯೇ ಅವರು ಬರೆಯುತ್ತಾ ಇರುವ ಆತ್ಮಚರಿತ್ರೆ ಬಿಡುಗಡೆ ಆಗಲಿ ಎಂದು ಕಾಯುತ್ತಾ ಇದ್ದೇನೆ

 9. 9 Jayalaxmi Patil March 6, 2013 at 6:32 am

  ತುಂಬಾ ಒಳ್ಳೆಯ ಸುದ್ದಿ ಕೊಟ್ಟ್ರಿ, ಅಮ್ಮ ಸ್ವತಃ ಬರೆಯುತ್ತಿದ್ದಾರೆ ಎಂದು. ನಾನೂ ಕಾತರದಿಂದ ಕಾಯುವೆ ಈ ಅಮೂಲ್ಯ ಕೃತಿಗಾಗಿ.


 1. 1 ಬಿ ಸುರೇಶ್ ಬರೆಯುತ್ತಾರೆ: ಅಮ್ಮಾ ಎ೦ದರೆ.. « ಅವಧಿ / avadhi Trackback on May 11, 2012 at 1:30 am

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: