ಜನಪರತೆಯ ಸೋಗು ಹಾಗೂ ‘ಜನಪ್ರಿಯ ಮುಖ’ ಹೊತ್ತ ಸೋಗಲಾಡಿಗಳು

ಈಚೆಗೆ ಅನೇಕ ಜನಪ್ರಿಯ ನಾಯಕರು ಕಿರುತೆರೆಯ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಏಕಕಾಲಕ್ಕೆ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಕಾಣಸಿಗುತ್ತಿರುವ ಪ್ರಕ್ರಿಯೆ. ಮೇಲ್ನೋಟಕ್ಕೆ ಇದು ಉತ್ತಮ ಕೆಲಸವೇ. ‘ಜನಪ್ರಿಯ ಎನಿಸಿಕೊಂಡ ವ್ಯಕ್ತಿಗಳು ಆಡುವ ಮಾತನ್ನು ಕೇಳುವ ಕಿವಿಗಳು ಹೆಚ್ಚಾಗಿರುತ್ತವೆ. ಅದರಿಂದಾಗಿ ಸಮಾಜಕ್ಕೆ ಒಳ್ಳೆಯದಾದರೆ ಆಗಲಿ’ ಎಂದು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಆದರೆ ಇಂತಹ ಪ್ರಕ್ರಿಯೆಗಳ ಹಿಂದೆ ಇರುವ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ.
ಸಾಮಾನ್ಯವಾಗಿ ಮನರಂಜನೆಗೆ ಮೀಸಲಾದ ಕಿರುತೆರೆಯ ವಾಹಿನಿಗಳು ಯಾವುದೇ ಕಾರ್ಯಕ್ರಮವನ್ನು ಆರಂಭಿಸುವಾಗಲೂ ಆಯಾ ಕಾರ್ಯಕ್ರಮ ಜನಪ್ರಿಯವಾಗಲು ಏನೇನು ಬೇಕಾಗುತ್ತದೆ ಎಂದು ಗಮನಿಸುತ್ತವೆ. ಈ ಹುಟುಕಾಟದಲ್ಲಿ “ರಿಯಾಲಿಟಿ ಷೋ”ಗಳಿಗೆ ಎರಡು ದಶಕಗಳ ಹಿಂದೆ ಅಮೇರಿಕಾದಲ್ಲಿ ಸಿಕ್ಕ ಜನಪ್ರಿಯತೆಯನ್ನು ಆಧರಿಸಿ ಭಾರತದಲ್ಲಿ ಅವೇ ರಿಯಾಲಿಟಿ ಷೋಗಳ ನಕಲುಗಳು ಆದುದನ್ನು ನಾವು ಕಾಣುತ್ತಾ ಇದ್ದೇವೆ. ‘ಕೌನ್ ಬನೇಗಾ ಕರೋಡ್‌ಪತಿ’ಗೆ ಅಮಿತಾಬ್ ಮತ್ತು ‘ಕನ್ನಡದ ಕೋಟ್ಯಾಧಿಪತಿ’ಗೆ ಪುನೀತ್ ಅವರ ಆಗಮನ ಆಗಿದ್ದರ ಹಿಂದೆ ಇದ್ದದ್ದು ಆಯಾ ವಾಹಿನಿಯ ಕಾರ್ಯಕ್ರಮವನ್ನು ಜನಪ್ರಿಯವಾಗಿಸುವ ತಂತ್ರವೇ. ಏಕೆಂದರೆ ಈ ಹಿಂದೆ ಇಂತಹುದೇ ಕ್ವಿಜ್ (ರಸಪ್ರಶ್ನೆ) ಕಾರ್ಯಕ್ರಮವನ್ನು ಸಿದ್ಧಾರ್ಥ ಬಸು ಅವರು ನಡೆಸಿಕೊಡುತ್ತಾ ಇದ್ದರು. ಆ ಕಾರ್ಯಕ್ರಮವೂ ಸಹ ಸಾಕಷ್ಟು ಜನಪ್ರಿಯವಾಗಿತ್ತು. ಆದರೆ ಅಂತಹ ಕಾರ್ಯಕ್ರಮದ ನಿರೂಪಕರಾಗಿ ಸಿನಿಮಾದಲ್ಲಿ ಜನಪ್ರಿಯರಾದವರನ್ನು ಕೂರಿಸುವ ಮೂಲಕ ಸಿದ್ಧಾರ್ಥ ಬಸು ಅಂತಹವರನ್ನು ಕೇವಲ ಕಾರ್ಯಕ್ರಮ ತಯಾರಕರನ್ನಾಗಿಸುವ ಪ್ರಕ್ರಿಯೆ ಹೊಸ ಶತಮಾನದ ಆರಂಭದಲ್ಲಿ ಆಗತೊಡಗಿತು. ಅದು ಈಗ ಅಮೀರ್‌ಖಾನರು ನಡೆಸುತ್ತಾ ಇರುವ “ಸತ್ಯಮೇವಜಯತೇ’ವರೆಗೆ ಹರಿದು ಬಂದಿದೆ.
ಇಂತಹ ಕಾರ್ಯಕ್ರಮಗಳನ್ನು ಅದಾಗಲೇ ‘ಸ್ಟಾರ್’ ಆಗಿರುವ ವ್ಯಕ್ತಿ ಒಪ್ಪಿಕೊಳ್ಳುವುದು ಹೆಚ್ಚುವರಿ ಆದಾಯಕ್ಕಾಗಿಯೇ. ಹೀಗೆ ಹಣದ ಕಾರಣಕ್ಕಾಗಿಯೇ ರಿಯಾಲಿಟಿ ಷೋಗಳ ನಿರೂಪಕರಾದವರ ದೊಡ್ಡ ಪಟ್ಟಿಯೇ ನಿಮಗೆ ಸಿಗುತ್ತದೆ. ಆದರೆ ಹಣಕ್ಕಾಗಿ ಕಾರ್ಯಕ್ರಮದ ನಿರೂಪರಾದವರು ತಾವು ಇದನ್ನು ಸಮಾಜಸೇವೆಗೆ ಮಾಡುತ್ತಾ ಇದ್ದೇನೆ ಎಂದಾಗ ಇಂತಹ ಕಾರ್ಯಕ್ರಮ ತಯಾರಿಕೆಯ ಹಿಂದಿರುವ ಕಾರಣ ಬಲ್ಲವರು ತುಟಿಯಂಚಲ್ಲಿ ನಗುವುದನ್ನು ಸಹ ನಾವು ಕಾಣಬಹುದು. ಇಂತಹ ಕಾರ್ಯಕ್ರಮಗಳನ್ನು ನಿಜವಾದ ಸಾಮಾಜಿಕ ಕಳಕಳಿಯಿಂದ ನಡೆಸಿಕೊಡಲು ಪ್ರಯತ್ನಿಸಿದ ಹಲವರೂ ನಮ್ಮಲ್ಲಿ ಇದ್ದಾರೆ. ‘ಜನಪ್ರಿಯತೆಯ ಪೋಷಾಕು’ ತೊಟ್ಟವರ ಆಗಮನದಿಂದ ಅಂತಹ ಅನೇಕ ಒಳ್ಳೆಯ ಪ್ರಯತ್ನಗಳು ಮಸುಕಾಗಿವೆ ಎಂಬುದೂ ಸತ್ಯ. ಉದಾಹರಣೆಗೆ ಶಿವರಾಜ್‌ಕುಮಾರ್ ಅವರು ನಡೆಸಿಕೊಟ್ಟ ‘ನಾನಿರುವುದೇ ನಿಮಗಾಗಿ’, ಮಾಳವಿಕ ನಡೆಸಿಕೊಟ್ಟ ‘ಬದುಕು ಜಟಕಾ ಬಂಡಿ’ ತರಹದ ಕಾರ್ಯಕ್ರಮಗಳು ನೇರವಾಗಿ ಹಲವರಿಗೆ ಸಹಾಯ ಮಾಡಿದ್ದವು. ಅಮೇರಿಕಾದ ಓಫ್ರಾ ವಿನ್‌ಫ್ರೇ ನಡೆಸಿಕೊಡುವ ಕಾರ್ಯಕ್ರಮಗಳು ಸಹ ಆರಂಭ ಕಾಲದಲ್ಲಿ ಅನೇಕ ಒಡೆದ ಕುಟುಂಬಗಳನ್ನು ಕೂಡಿಸಿದ್ದವು. ಆದರೆ ಅವೇ ಕಾರ್ಯಕ್ರಮಗಳು ನಂತರ ಸೋಗಿನ ಸಾಮಾಜಿಕ ಕಾಳಜಿಯನ್ನು ಮಾತ್ರ ಬಿಂಬಿಸುವಂತೆ ಆಗಿದ್ದು ಅವೇ ವಾಹಿನಿಗಳ ಕಾರ್ಯಕ್ರಮ ತಯಾರಕರಿಂದ. ಅದು ಹೇಗೆ ಆರಂಭದಲ್ಲಿ ಇದ್ದ ಒಳ್ಳೆಯತನ ನಂತರ ಮಾಸುತ್ತದೆ ಎಂಬುದನ್ನು ಗಮನಿಸೋಣ.
ಜನಪರ ಕಾಳಜಿಯ ಸೋಗು
ಜನಪ್ರಿಯತೆ ಪಡೆಯುವ, ಆ ಮೂಲಕ ರೇಟಿಂಗ್ ಪಡೆಯುವ, ಆ ಮೂಲಕ ಅತಿ ಹೆಚ್ಚಿನ ಜಾಹೀರಾತು ಪಡೆಯುವ, ಆ ಮೂಲಕ ಲಾಭ ಹೆಚ್ಚಿಸಿಕೊಳ್ಳು ಕಾರಣಕ್ಕಾಗಿಯೇ ಯಾವುದೇ ವಾಹಿನಿಯ ಯಾವುದೇ ಕಾರ್ಯಕ್ರಮ ತಯಾರಿಸುವವರು ತಮ್ಮ ‘ಪ್ರೋಗ್ರಾಮ್’ ರೂಪಿಸುತ್ತಾರೆ. ಇದು ವ್ಯಾಪಾರೀ ತತ್ವ. ಆ ತತ್ವವು ಸಮಾಜದ ಏಳಿಗೆಯ ಸೋಗನ್ನು ಹಾಕಿಕೊಂಡೇ ಲಾಭ ಪಡೆಯುವ ಹಾದಿಯಲ್ಲಿರುತ್ತವೆ. ಯಾರಾದರೂ ಲಾಭ ಮಾಡುವುದನ್ನು ಇನ್ಯಾರಾದರೂ ಬೇಡ ಅನ್ನುತ್ತಾರೆಯೇ? ಖಂಡಿತಾ ಇಲ್ಲ. ಆದರೆ ಕಾರ್ಯಕ್ರಮದ ಆರಂಭಿಕ ಹಂತದಲ್ಲಿ ಇರುವ ಜನಪರತೆಯು ರೇಟಿಂಗ್‌ನಲ್ಲಿ ಸಂಖ್ಯೆಗಳಾಗಿ ಕಾಣುವುದಿಲ್ಲ. ಆಗ ಕಾರ್ಯಕ್ರಮ ತಯಾರಕ ತಲ್ಲಣಗೊಳ್ಳುತ್ತಾನೆ. ರೇಟಿಂಗ್ ಬರದೆ ಆದಾಯವಿಲ್ಲ. ಹಾಗಾಗಿ ರೇಟಿಂಗ್ ಬರುವುದಕ್ಕಾಗಿ ಏನು ಮಾಡಲಿ ಎಂಬ ಪ್ರಶ್ನೆಗಳು ಅವನನ್ನು ಕಾಡುತ್ತವೆ. ಆಗ ‘ಜನಪರತೆ’ ಎಂಬುದು ಕೇವಲ ಸೋಗು ಮಾತ್ರ ಆಗಿ ಅದೇ ಕಾರ್ಯಕ್ರಮಗಳಲ್ಲಿ ನಾಟಕೀಯತೆ, ಮೆಲೋಡ್ರಾಮ ಮತ್ತು ಶರಂಪರ ಜಗಳಗಳು ಸೇರಿಕೊಳ್ಳುತ್ತವೆ. ‘ಜನಪ್ರಿಯ’ಮುಖವು ತಂದುಕೊಡದ ರೇಟಿಂಗನ್ನು ಈ ಎಲ್ಲಾ ನಾಟಕೀಯ ಅಂಶಗಳ ಮೂಲಕ ಪಡೆಯುವ ಹಾಗೆ ಕಾರ್ಯಕ್ರಮದ ಸ್ವರೂಪ ಬದಲಾಗುತ್ತದೆ. ‘ಕೌನ್ ಬನೇಗಾ ಕರೊಡ್‌ಪತಿ’ಯಲ್ಲಿ ಕಣ್ಣೀರು ಹಾಕುವ ದೃಶ್ಯಗಳು ಸೇರಿಕೊಳ್ಳುವುದು ಇಂತಹ ಸಂದರ್ಭಗಳಲ್ಲಿ. ‘ಅರೆ! ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಣ್ಣೀರೇಕೆ?’ ಎಂದರೆ ‘ಕೇವಲ ಪ್ರಶ್ನೋತ್ತರದ ಏಕತಾನತೆಯನ್ನು ತಪ್ಪಿಸಲು ದೃಶ್ಯಗಳನ್ನು ನಾಟಕೀಯಗೊಳಿಸಲಾಯಿತು’ ಎಂಬ ಸಿದ್ಧ ಉತ್ತರ ಕಾರ್ಯಕ್ರಮ ತಯಾರಕರಲ್ಲಿ ಇರುತ್ತದೆ. ‘ಬದುಕು ಜಟಕಾ ಬಂಡಿ’ ‘ಇದು ಕತೆಯಲ್ಲ ಜೀವನ’ದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ನೋಡುಗನೇ ಗಾಬರಿಯಾಗುವಂತೆ ಜಗಳ ಆಡಿಕೊಳ್ಳಲು ಆರಂಭಿಸಿದ್ದು ಮಾತ್ರ ಅದಾಗಲೇ ಸೂಚಿಸಿದ ರೇಟಿಂಗ್ ಪಡೆವ ಕಸರತ್ತೇ. ಇತ್ತೀಚೆಗೆ ವಾಹಿನಿಯೊಂದು ಮತ್ತೊಬ್ಬ ಪತ್ರಕರ್ತನ ಖಾಸಗಿ ಬದುಕನ್ನು ಅನಾವರಣಗೊಳಿಸಲು ಮಡಿದ ಅಪಸವ್ಯವೂ ಸಹ ಇದೇ ರೇಟಿಂಗ್ ಪಡೆವ ಕಸರತ್ತೇ.
ಹೀಗಾದಾಗ ‘ಜನಪ್ರಿಯ ತಾರೆ’ಯ ಜನಪರತೆಯು ಸೋಗಿನದ್ದಾಗಿ ಬಿಡುತ್ತದೆ. ಹೆಂಗಸರ ಮೇಲೆ ಆಗುವ ದೌರ್ಜನ್ಯ ಎಂಬುದು ಅತ್ಯಂತ ಹೆಚ್ಚು ಜನ ನೊಡುಗರನ್ನು ಪಡೆವ ವಿಷಯ. ಆದರೆ ಅಂತಹ ವಿಷಯ ಕುರಿತು ಮಾತಾಡುವ ‘ಜನಪ್ರಿಯ ನಾಯಕ’ ಸ್ವತಃ ತನ್ನ ಮನೆಯನ್ನೇ ಸ್ವಚ್ಛಗೊಳಿಸಿಕೊಳ್ಳದೆ ಆ ಮಾತನ್ನಾಡುವುದು ಉದ್ದೇಶಿತ ಪರಿಣಾಮ ಮೂಡಿಸದೆ ನಗೆಪಾಟಲಾಗುತ್ತದೆ. ಅದೇ ‘ಜನಪ್ರಿಯ ನಾಯಕ’ ಹಿಂಸೆಯ ವೈಭವೀಕರಣದ ಸಿನಿಮಾ ತಯಾರಿಸಿ ಜನಪ್ರಿಯತೆ ಪಡೆದಿರುತ್ತಾನೆ. ನಂತರ ಅದೇ ವ್ಯಕ್ತಿಯು ದೇಶಪ್ರೇಮದ ಮಾತಾಡಿದಾಗ ಆತನ ಪ್ರೇಮ ಯಾವುದರ ಕಡೆಗೆ ಎಂಬ ಅನುಮಾನ ಹುಟ್ಟುತ್ತದೆ.
ಇಂತಹ ಸೋಗುಗಳನ್ನು ತಪ್ಪಿಸಲು ಇರುವ ಏಕೈಕ ಮಾರ್ಗ ಎಂದರೆ ಜಾಹೀರಾತು ಆದಾಯ ಮೂಲವುಳ್ಳ ಕಾರ್ಯಕ್ರಮವನ್ನು ರೂಪಿಸುವ ಬದಲು ಜನಬೆಂಬಲದಿಂದಲೇ (ಅಥವಾ ಜನಕ್ಕಾಗಿ ಇರಿಸಲಾದ ಹಣದ ಸಹಾಯದಿಂದಲೇ) ಕಾರ್ಯಕ್ರಮ ರೂಪಿಸುವಂತಾಗಬೇಕು. ಆಗ ಇಂತಹ ಜನಪರ ಕಾರ್ಯಕ್ರಮಗಳು ಸೋಗಿನ ಕಾರ್ಯಕ್ರಮ ಆಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಹಿಂದೆ ಸಿಹಿಕಹಿ ಚಂದ್ರು ಅವರು ರೇವತಿ ಎಂಬಾಕೆಯನ್ನು ನಿರೂಪಕಿಯಾಗಿರಿಸಿ ಹೆಂಗಸರ ವೈದ್ಯಕೀಯ ಸಮಸ್ಯೆಗಳನ್ನು ಕುರಿತಂತೆ ತಯಾರಿಸಿದ್ದ ಕಾರ್ಯಕ್ರಮವನ್ನು ನೆನಪಿಸಿಕೊಳ್ಳಬಹುದು. ಆ ಕಾರ್ಯಕ್ರಮವು ರೇಟಿಂಗ್‌ಅನ್ನು ಗುರಿಯಾಗಿಸಿಕೊಂಡು, ಆ ಮೂಲಕ ಜಾಹೀರಾತಿನ ಆದಾಯ ಪಡೆಯಲೆಂದು ತಯಾರಾಗಿರಲಿಲ್ಲ. ಭಾರತೀಯ ಹೆಂಗಸರ ಸಮಸ್ಯೆಗಳನ್ನು ಅರಿತಿದ್ದ ಸಂಸ್ಥೆಯೊಂದು ಅಂತಹ ಕಾರ್ಯಕ್ರಮಕ್ಕೆ ಸಹಾಯಧನ ನೀಡಿತ್ತು. ಹಾಗಾಗಿ ಸಿಹಿಕಹಿ ಚಂದ್ರು ಅವರು ಮಾಡಿದ್ದ ಆ ರಿಯಾಲಿಟಿ ಷೋ ಸೋಗಿನ ಅಂಶ ಸೇರದಂತೆ ರೂಪಿತವಾಗಿತ್ತು. ಅಂತಹ ಪ್ರಯತ್ನಗಳನ್ನು ಈಗಲೂ ಸರ್ಕಾರೀ ವಾಹಿನಿಯಾದ ದೂರದರ್ಶನದಲ್ಲಿ ಆಗುತ್ತಿದೆ. ಸಾರ್ಕ್ ಸಮ್ಮೇಳನವು ಭಾರತದಲ್ಲಿ ಆದ ಸಂದರ್ಭದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ದೂರದರ್ಶನವು ನಾಡಿನ ಅನೇಕ ನಿರ್ದೇಶಕರಿಂದ ಚಿತ್ರಗಳನ್ನು ನಿರ್ಮಿಸಿತ್ತು. ಅವುಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರತ್ಯೇಕವಾಗಿ ತಯಾರಾಗಿದ್ದವು. ಹಾಗೆ ತಯಾರಾದ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲವು ಚಿತ್ರಗಳ ಸಾರ್ವಕಾಲಿಕ ಶ್ರೇಷ್ಟತೆಯನ್ನು ಸಹ ಹೊಂದಿದ್ದವು. ಆದರೆ ಕಳೆದೆರಡು ದಶಕದಲ್ಲಿ ಆ ಸರ್ಕಾರೀ ವಾಹಿನಿಯ ಭ್ರಷ್ಟತೆಯೇ ಇನ್ನಿತರ ಮಾಧ್ಯಮಗಳಲ್ಲಿ ಅತ್ಯಂತ ಪ್ರಬಲವಾಗಿ ಬಿಂಬಿತವಾಗಿರುವುದರಿಂದ ಮುದ್ರಣ ಮಾಧ್ಯಮವನ್ನು ಬಲ್ಲ ಪ್ರೇಕ್ಷಕರು ದೂರದರ್ಶನದಿಂದ ಬಹುತೇಕ ವಿಮುಖರಾಗಿರುವುದು ಸಹ ಅದೇ ರೇಟಿಂಗ್ ವ್ಯವಸ್ಥೆಯಿಂದ ತಿಳಿಯುವ ಸತ್ಯ. ಹೀಗಾಗಿ ಖಾಸಗಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ಜನಪರ ಕಾಳಜಿಯ ಬಹುತೇಕ ಕಾರ್ಯಕ್ರಮಗಳು ಇಂದು ಸೋಗಿನ ಜನಪರತೆಯನ್ನು, ಸೋಗಿನ ದೇಶಪ್ರೇಮವನ್ನು ಬೋಧಿಸುತ್ತಿವೆ. ಈ ವಿಷಯವನ್ನು ಪ್ರಚುರ ಪಡಿಸಲು ‘ಜನಪ್ರಿಯ ಮುಖ’ಗಳನ್ನು ಬಳಸಲಾಗುತ್ತಿದೆಯಷ್ಟೆ. ಆ ‘ಜನಪ್ರಿಯ ಮುಖ’ಗಳಿಗೆ ಸ್ವತಃ ಒಂದು ರಾಜಕೀಯ ದೃಷ್ಟಿಕೋನ, ಸಾಮಾಜಿಕ ಕಾಳಜಿ ಇಲ್ಲವೆಂಬುದು ಸುಸ್ಪಷ್ಟ.
ಇದರೊಂದಿಗೆ ಅದೇ ಖಾಸಗಿ ವಾಹಿನಿಯ ಮಾಲೀಕರು ಮುದ್ರಣ ಮಾಧ್ಯಮಗಳ ಮಾಲೀಕರು ಆಗಿರುವುದರಿಂದ ಈ ಸೋಗಿನ ಜನಪರತೆಯನ್ನು ‘ಶ್ರೇಷ್ಟ ಜನಪರ ಕೆಲಸ’ ಎಂದು ಪ್ರಚಾರ ಮಾಡಿ ಜನಾಭಿಪ್ರಾಯ ರೂಪಿಸುವ ಕೆಲಸವನ್ನೂ ಮಾಡುತ್ತಾ ಇರುತ್ತಾರೆ. ಇದು ಮತ್ತೊಂದು ಅಪಾಯ. ಯಾವುದು ಜನಪರವಲ್ಲ ಎಂಬುದು ಅದಾಗಲೇ ಸಾಬೀತಾಗಿದೆಯೋ ಅಂತಹುದನ್ನು ಮತ್ತೊಂದು ಮಾಧ್ಯಮದ ಮೂಲಕ ಜನಪರವಾದದ್ದು ಎಂಬ ವಾದವನ್ನು ಮಂಡಿಸುವ ‘ಬುದ್ಧಿವಂತ’ ಸಂಕುಲವನ್ನು ಅದೇ ಬಂಡವಾಳಶಾಹಿಗಳು ತಮ್ಮ ದುಡ್ಡಿನಿಂದ ಸೃಷ್ಟಿಸಿರುತ್ತಾರೆ. ಹೀಗಾಗಿ ಒಂದು ಸಮಾಜದ ಒಳಗೆ ಪರ-ವಿರೋಧಗಳ ಬಣಗಳು ಹುಟ್ಟುವಂತೆ ಮಾಡಿ, ಆ ಬಣಗಳ ಕಿತ್ತಾಟವನ್ನು ಸಹ ತಮ್ಮ ರೇಟಿಂಗ್ ಹೆಚ್ಚಿಸಿಕೊಳ್ಳಲು ಬಳಸುವ ಹವಣಿಕೆ ಆ ವಾಹಿನಿಗಳ ಮತ್ತು ಮಾಧ್ಯಮಗಳ ಮಾಲೀಕರಿಗೆ ಇರುತ್ತದೆ.
ಹೀಗಾಗಿ ಈ ಜನಪ್ರಿಯ ಮುಖಗಳನ್ನು ಬಳಸಿ ರೂಪಿಸಿದ ಜನಪರ ಎಂಬ ಸೋಗಿನ ಕಾರ್ಯಕ್ರಮವು ಅತ್ತ ತಾನು ಸಾಧಿಸಬೇಕಾದ್ದನ್ನು ಸಾಧಿಸದೆ, ಜನೋಪಯೋಗಿಯೂ ಆಗದೆ ಅಂತಿಮವಾಗಿ ಆಯಾ ವಾಹಿನಿಗೆ ಹಾಲು ಹಿಂಡಿಕೊಳ್ಳುವ ಕಾಮಧೇನು ಮಾತ್ರ ಆಗಿ ಉಳಿಯುತ್ತದೆ.
ಜನಪರತೆ ಎಂಬುದೇ ಸೋಗಲಾಡಿತನವಾಗುವಂತಹ ವ್ಯವಸ್ಥೆಯೊಂದು ಈ ದೇಶದಲ್ಲಿ ಬರಲು ಕಾರಣವಾಗಿರುವುದು ಖಾಸಗೀಕರಣ ಹಾಗೂ ಮುಕ್ತ ಆರ್ಥಿಕ ನೀತಿ. ಈ ನೀತಿಗಳು ಲಾಭಬಡುಕರನ್ನು ಮಾತ್ರ ಸೃಷ್ಟಿಸಿವೆ. ಆ ಲಾಭಬಡುಕರಿಗೆ ಸಾಮಾಜಿಕ ಕಾಳಜಿ ಎಂಬ ಮಾತು ಸಹ ಕೇವಲ ರಾತ್ರಿಯ ಪಾರ್ಟಿಗೆ ಮುಂಚೆ ಕಳಚಿಡುವ ಪೋಷಾಕಾಗಿರುತ್ತದೆ. ಟಿಪ್ಪುಸುಲ್ತಾನನ ಖಡ್ಗ ಹಿಡಿದ ವಿಜಯ್‌ಮಲ್ಯ ನಾವು ಬದಲಾಗೋಣ ಎಂದರೆ ಹೇಗೆ ನಗೆಪಾಟಲಾಗುತ್ತದೆ ಎಂಬುದನ್ನು ನಾವು ಅದಾಗಲೇ ನೋಡಿದ್ದೇವೆ. ಅದು ಇನ್ಯವುದೇ ‘ಜನಪ್ರಿಯ ಮುಖ’ಕ್ಕೂ ಅನ್ವಯವಾಗಬಹುದಾದ ಮಾತು.
ಇದು ತಪ್ಪಬೇಕಾದರೆ ಮಾಧ್ಯಮಗಳಲ್ಲಿ ಆಯಾ ರಾಜ್ಯಗಳ ಜನ ಮಾತ್ರ ಬಂಡವಾಳ ಹುಡುವಂತಹ ಹಾಗೂ ಆ ಮಾಧ್ಯಮಗಳು ಸಾಮಾಜಿಕ ನಿಷ್ಠತೆಯನ್ನು ಆಗಾಗ ಪರಿಶೀಲಿಸುವಂತಹ ವ್ಯವಸ್ಥೆಯೊಂದು ಬರಬೇಕು. ಇಲ್ಲವಾದರೆ ಅಮೀರ್‌ಖಾನ್ ಎಂಬಾತ ತಾನು ಪಡೆಯುವ ಹಣಕ್ಕಾಗಿ ‘ಕೋಕಾಕೋಲ ಕೊಳ್ಳಿ’, ‘ಆ ಗಡಿಯಾರ ಕೊಳ್ಳಿ’, ‘ಈ ಬಟ್ಟೆ ಹಾಕಿಕೊಳ್ಳಿ’ ಎಂದು ಹೇಳುತ್ತಲೇ ಸಮಾಜಮುಖಿ ಮಾತುಗಳನ್ನು ಸಹ ಹೇಳುತ್ತಾ ಸಾಮಾನ್ಯ ಜನರಲ್ಲಿ ಗೊಂದಲಗಳನ್ನು ಮಾತ್ರ ಸೃಷ್ಟಿಸುತ್ತಾನೆ. ಈ ಸೋಗಲಾಡಿತನಗಳನ್ನು ನಮ್ಮ ನಾಡಿನ ಜನಸಾಮಾನ್ಯರು ಎಚ್ಚರಿಕೆಯಿಂದ ಸ್ವೀಕರಿಸಬೇಕಷ್ಟೆ.
ಇಷ್ಟೆಲ್ಲಾ ಮಾತಾಡುವ ಯಾವುದೇ ವ್ಯಕ್ತಿಯನ್ನು ಸಹ ನಾನು ಮೇಲೆ ತಿಳಿಸಿದ ಮಾಧ್ಯಮಗಳು ‘ಖಳ’ ಎಂಬಂತೆ ಚಿತ್ರಿಸಬಹುದಾದ ಸಾಧ್ಯತೆ ಇದೆ. ಈಚಿನ ದಿನಗಳಲ್ಲಿ ಒಟ್ಟಾಗಿರುವ ಮನಸ್ಸುಗಳನ್ನು ಒಡೆಯುವ ಕಾಯಕವನ್ನೇ ಈ ಬಂಡವಾಳಶಾಹಿ ಪ್ರೇರಿತ ಮಾಧ್ಯಮಗಳು ಮಾಡುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಜನ ಯಾವುದೇ ಸುದ್ದಿಯನ್ನು ಯಥಾವತ್ತಾಗಿ ನಂಬದೇ ಅದರ ಹಿಂದಿರಬಹುದಾದ ಎಲ್ಲ ವಿವರಗಳನ್ನೂ ಎಚ್ಚರಿಕೆಯಿಂದ ಗಮನಿಸುವಷ್ಟು ಜಾಗರೂಕರಾಗಬೇಕಿದೆ. ಇಂತಹ ಮಾಧ್ಯಮಗಳಲ್ಲಿ ಹೇಳಲಾಗುವ ದೇಶಪ್ರೇಮ, ಧಾರ್ಮಿಕ ನೀತಿಗಳು ಲಾಭಬಡುಕ ಹುನ್ನಾರದ್ದು ಎಮದರಿತು, ನಮ್ಮ ನಮ್ಮ ಬದುಕುಗಳು ನಮಗೆ ಕಲಿಸಿರುವ ಸತ್ಯಗಳೇ ಶ್ರೇಷ್ಟ ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ.
– *** –
bsuresha@bsuresha.com

Advertisements

9 Responses to “ಜನಪರತೆಯ ಸೋಗು ಹಾಗೂ ‘ಜನಪ್ರಿಯ ಮುಖ’ ಹೊತ್ತ ಸೋಗಲಾಡಿಗಳು”


 1. 1 Shambulinga May 27, 2012 at 10:02 am

  serialgallalli villain role maadthidd sureshanna.. nijajivundaagu villain role maadak staart maadmkombuttralla… yakannou?

 2. 2 B.Suresha May 27, 2012 at 11:13 am

  ಆತ್ಮೀಯ ಶಂಭುಲಿಂಗಣ್ಣ ಅವರೇ,
  ನಾನು ನಾನಾಗಿಯೇ ಇದ್ದೇನೆ.
  ನೋಡುವವರ ಕಣ್ಣುಗಳು ಪಕ್ಷ ಬದಲಿಸಿದಾಗ ಗುಣವಿಶೇಷಣಗಳು ಬದಲಾಗುತ್ತವೆಯಷ್ಟೆ.
  ನಿಮಗೆ ನಾನು ವಿಲನ್ ಆಗಿದ್ದರೆ ಅದೂ ಸಹ ಸಂತಸದ ವಿಷಯವೇ…
  ನಿಮಗೆ ಒಳಿತಾಗಲಿ

 3. 3 chandan May 27, 2012 at 1:13 pm

  dear sir,
  aamir khan has stopped endorsing products now. avra yavude ads inmunde baralla. idu nimma gamanakke..

  Rgds,
  Chandu

 4. 4 Shankar Joshi. May 28, 2012 at 3:45 am

  ಶ್ರೀ ಸುರೇಶ್ ಅವರೇ,
  ಜನರ ಬಗ್ಗೆ ನಿಮ್ಮ ಕಾಳಜಿಯ ಮಾತುಗಳು ಮನ ಮುಟ್ಟುವಂತಿವೆ. ಇಂತಹ ಕಾರ್ಯಕ್ರಮಗಳನ್ನು ಬಿತ್ತರಿಸುವುದರಿಂದ ನಮ್ಮ ಜನರು ಕೊಂಚವಾದರೂ ತಿಳಿದುಕೊಳ್ಳುತ್ತಾರೆ ಎಂದು ನನ್ನ ಮನಾದಸೆ. ಪ್ರತಿಭಟಿಸುವ ಜನ ನಮ್ಮಲ್ಲಿ ತೀರಾ ಕಡಿಮೆ. ಆದರೆ “ಸ್ವಲ್ಪ (ಪೂರ್ತಿಯಾಗಿ) ಅಡ್ಜಸ್ಟ್ ಮಾಡಿಕೊಳ್ಳೋಣ” ಎನ್ನುವ ಜನ ಬಹಳವಿದ್ದಾರೆ. ಕಡು ಸತ್ಯವನ್ನು ಹತ್ತಿಕ್ಕಿದಂತೆ ಭಾಸವಾಗುತ್ತದೆ.
  ಇಂತಹ ಕಾರ್ಯಕ್ರಮಗಳಲ್ಲಿ ಸತ್ಯದ ಮಾತುಗಳನ್ನಾಡಿ ಮುಗ್ಧ ಜನರ ಚಪ್ಪಾಳೆ ಪಡೆದು, ಜನಮನ್ನಣೆ ಪಡೆದು ಸುಮ್ಮನಾಗುವ ‘ಸೆಲೆಬ್ರಿಟೀ’ಗಳಾಗಿಬಿಟ್ಟಿದ್ದಾರೆ. ಕಾರ್ಯಕ್ರಮದ ನಂತರ “ನಾವು ಗೆದ್ದೆವು” ಎಂಬ ಮನೋಭಾವನೆ ಎಂದು ತಿಳಿಯುತ್ತಾರೇನೋ ಗೊತ್ತಿಲ್ಲ.
  ” ಇದು ತಪ್ಪು ಅಲ್ಲವೇ”?

 5. 5 pradeep May 29, 2012 at 10:50 am

  Sir, touchable..Thank you for the article.

 6. 6 santosh June 2, 2012 at 7:32 am

  “ellaru maduwudu hottegaagi…genu battegaagi” ade reeti.. yawade karya kramadinda samajakke 10% profit adre saaku… ennu 10% self realisation ninda adre saaku… 20/80 theory apply aaguthe. what amirkhan..shivanna.. malawika… doing is not a matter.. wat the impact on society than commercial aspect is matter….. so as of me ” happening is well” if we see the programme as a layman… centpercent helpfull than thinking as a media or tv production person……. “death is also not free now a days..how can we expect good things for free”

 7. 7 santosh June 3, 2012 at 5:56 pm

  oops why no respond to my comments.. hope too bitter…definatly truth is always bitter

 8. 8 bsuresha June 3, 2012 at 6:04 pm

  ಆತ್ಮೀಯ ಸಂತೋಷ್ ಅವರೇ,
  ನಿಮ್ಮ ಪ್ರತಿಕ್ರಿಯೆ ಓದಿದೆ. ಮರುಪ್ರತಿಕ್ರಿಯೆ ನೀಡಬೇಕು ಎನಿಸಲಿಲ್ಲ.
  ಮಾತಿಗಾಗಿ ಮಾತು ಆಡುವ ಅಭ್ಯಾಸವೂ ನನಗಿಲ್ಲ. ನಾನು ಹೇಳಬಹುದಾದ ಮಾತನ್ನು ನನ್ನ ಲೇಖನದಲ್ಲಿ ಹೇಳಿದ್ದೇನೆ. ನಿಮಗೆ ಬೇಕಾದಂತೆ ನೀವು ಅರ್ಥ ಮಾಡಿಕೊಳ್ಳಬಹುದು. ನಿಮ್ಮದೇ ಆದ ಅಭಿಪ್ರಾಯ ಇಟ್ಟುಕೊಳ್ಳಬಹುದು.
  ನಾನು ಹೇಳಿದ್ದೇ ಸರಿ ಎನ್ನುವ ಅಹಂಕಾರವಂತೂ ನನಗಿಲ್ಲ. ನಿಮ್ಮ ಎಲ್ಲಾ ಅಭಿಪ್ರಾಯಗಳನ್ನೂ ಗೌರವಿಸುತ್ತಾ ನಿಮಗೆ ಒಳಿತಾಗಲಿ ಎಂದು ಹಾರೈಸುತ್ತೇನೆ.


 1. 1 ಜುಗಾರಿ ಕ್ರಾಸ್ : ’ಜನಪರತೆಯ ಸೋಗು ಹಾಗೂ ..’ – ಬಿ ಸುರೇಶ್ « ಅವಧಿ / avadhi Trackback on May 28, 2012 at 1:11 am

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: