ಗೆಳೆಯನಿಗೊಂದು ಪತ್ರ (ಗೆಳೆಯ ಮಂಡ್ಯ ರಮೇಶನ “ಕನವರಿಕೆ”ಗೆ ಬರೆದ ಹಿನ್ನುಡಿ)

ನಲುಮೆಯ ಗೆಳೆಯ,

ನಾನೀಗ ಅತೀವ ಸಂತೋಷದಲ್ಲಿ ಇದ್ದೇನೆ.

ಕಾರಣವಿಷ್ಟೆ. ಸುಮಾರು 1980-81ರ ಅವಧಿಯಲ್ಲಿ ಮಂಡ್ಯದ ಪಿಇಎಸ್‍ ಕಾಲೇಜಿನಲ್ಲಿ ಹೆದರುತ್ತಾ ಮಾತು ಕಲಿಯುತ್ತಾ ಇದ್ದ ನನ್ನ ಗೆಳೆಯ ಈಗ ಈ ನಾಡಿನ ಪ್ರಮುಖ ರಂಗಸಂಘಟಕರಲ್ಲಿ ಒಬ್ಬನಾಗಿದ್ದಾನೆ ಮತ್ತು ತನ್ನ ಕನವರಿಕೆಯನ್ನು ಬಜಾರಿನಲ್ಲಿ ಇಡುವ ಎತ್ತರಕ್ಕೆ ಬೆಳೆದಿದ್ದಾನೆ. ಇದು ಸುಲಭವಾಗಿ ಆದುದಲ್ಲ. ಅನೇಕ ದಿನಗಳ ಪರಿಶ್ರಮ. ಅನೇಕ ಗುರುಗಳ ಸಂಪರ್ಕ. ಅನೇಕ ಮೈಲುಗಳ ನಡಿಗೆ. ಇನ್ನೂ ಅನೇಕಗಳು ನೀನು ನೀನಾಗುವುದಕ್ಕೆ ಕಾರಣವಾಗಿವೆ. ಹಾಗೇ ನಮ್ಮೆದುರಿಗೆ ನಿಂತಿರುವ ವಿಶ್ವರೂಪ ದರ್ಶನವನ್ನು ನೋಡಿದಾಗ ಇವನು ಅದೇ ರಮೇಶನ ಎಂಬ ಅಚ್ಚರಿ ಹಾಗೂ ಸಂತೋಷಗಳು ಒಟ್ಟಿಗೆ ಮೂಡುವುದು ಸಹಜ. ನಾನಾದರೂ ಈ ಕಾರಣಕ್ಕಾಗಿಯೇ ಸಂತೋಷವಾಗಿದ್ದೇನೆ.

ನನ್ನ ಎದುರಿಗೆ ನಿನ್ನ “ಕನವರಿಕೆ” – ಸೈಡ್‍ವಿಂಗ್ ಸ್ವಗತಗಳ ಕರಡಚ್ಚು ಪ್ರತಿ ಇದೆ. ಪ್ರಾಯಶಃ ಈ ಪತ್ರ ನಿನ್ನ ಕೈಗೆ ತಲುಪುವ ಹೊತ್ತಿಗೆ ಈ ಕರಡಿನ ಅಂತಿಮ ರೂಪ ಕೂಡ ಸಿದ್ಧವಾಗಿರಬಹುದು. “ಓದು, ಅಭಿಪ್ರಾಯ ಹೇಳು” ಎಂದು ನೀನಿದನ್ನು ತಲುಪಿಸಿ ಸುಮಾರು ಮೂರು ತಿಂಗಳೇ ಕಳೆದಿವೆ. ನನ್ನ ನಿತ್ಯ ಅಕ್ಷರ ದಾಸೋಹದ ಸಂಕಟಗಳ ನಡುವೆಯೇ ತಿಂಗಳ ಹಿಂದೆ ಯಾವುದೋ ಊರಿಂದ ನಮ್ಮೂರಿಗೆ ಬರುವ ಹಾದಿಯಲ್ಲಿ ನಾನಿದನ್ನು ಓದಿಯೂ ಆಯಿತು. ಆದರೆ ನನ್ನ ಅಭಿಪ್ರಾಯ ತಿಳಿಸುವ ಪತ್ರವೊಂದನ್ನು ಬರೆಯುವುದು ಮತ್ತಷ್ಟು ತಡವಾಯಿತು. ಕ್ಷಮೆ ಇರಲಿ.

ಈ ಹೊತ್ತಿಗೆಯಲ್ಲಿ ನೀನು ನಟನೆಯ ಪಾಠಗಳನ್ನೂ ನೀಡುತ್ತಾ, ನಿನಗಾನಂದ ಕೊಟ್ಟ ಸಿನಿಮಾಗಳ ಬಗ್ಗೆಯೂ ಮಾತಾಡುತ್ತಾ, ನಿನ್ನ ಹಾದಿಯಲ್ಲಿ ಬಂದ ಅನೇಕ ರಂಗ ದಿಗ್ಗಜರುಗಳನ್ನು ಕುರಿತ ನಿನ್ನ ಸ್ವಗತಗಳನ್ನು ಪ್ರಕಟದಲ್ಲಿ ಇರಿಸಿದ್ದೀಯಾ… ಹೀಗೆ ಸ್ವಗತಗಳನ್ನು ಬಯಲಿನಲ್ಲಿ ಇಡುವ ಪ್ರಕ್ರಿಯೆಯೇ ಸವಾಲಿನದ್ದು. ನಮ್ಮ ಒಳಗೆ ಇರುವ ಅನುಭವಗಳು ಸರಿಯೇ ಎಂಬ ಗೊಂದಲದ ಜೊತೆಗೆ, ನಮ್ಮೊಡನೆ ನಾವು ಮಾಡಿಕೊಳ್ಳುವ ಸಂವಾದವೇ ಇನ್ನೂ ಮುಗಿಯದ ಕಾಲಘಟ್ಟದಲ್ಲಿ ಸಾರ್ವಜನಿಕರ ಎದುರೇ ಸ್ವಗತಗಳನ್ನು ಇಡುವುದು ಸುಲಭದ ತೀರ್ಮಾನವೇನೂ ಅಲ್ಲ. ಅಂತಹ ಅಪರೂಪದ ಕೆಲಸ ಮಾಡುತ್ತಿದ್ದೀಯಾ. ಅದರಿಂದಲೂ ನನಗೆ ಸಂತೋಷವಾಗಿದೆ.

ನಿನ್ನ ಕನವರಿಕೆಯ ಮೊದಲ ಭಾಗದಲ್ಲಿ ಇರುವ ರಂಗಭೂಮಿ ನಟನೆ, ಮಕ್ಕಳ ರಂಗಭೂಮಿಯನ್ನು ಕುರಿತ ಮಾತುಗಳು ನನಗೆ ಹೆಚ್ಚು ಆಪ್ತವಾದವು. ಅಭಿನಯವೆಂಬ ಕ್ರಿಯೆಗೆ ಅನುಭವ ದ್ರವ್ಯವೇ ಮೂಲ ಎಂಬ ನಿನ್ನ ನಿಲುವು ನಾಡಿನ ಅನೇಕ ಹೊಸಬರಿಗೆ ಮಾತ್ರ ಅಲ್ಲ ನನ್ನಂತಹ ಹಳಬರಿಗೂ ಅನೇಕ ಹೊಸ ಪಾಠಗಳನ್ನು ಕಲಿಸಬಲ್ಲಂತಹದು. ನಾನು ಮಾಡುವ ನಟನೆಯಲ್ಲಿಯೂ ನೀನು ಹೇಳುವಂತಹ ಉಸಿರಾಟದ ನಿಯಂತ್ರಣ, ಕಲ್ಪನಾ ಶಕ್ತಿ ಮತ್ತು ಗ್ರಹಿಕೆಯನ್ನು ಕುರಿತ ಮಾತುಗಳನ್ನು ನಾನು ಮಾಡುತ್ತಾ ಇರುವ ಪ್ರಯೋಗಗಳ ಮೇಲೆ ಆರೋಪಿಸಿಕೊಂಡು ನೋಡುತ್ತಾ ಇದ್ದೇನೆ. ಆ ಮೂಲಕ ನಾನು ಮಾಡಿರಬಹುದಾದ ತಪ್ಪುಗಳನ್ನು ತಿದ್ದಿಕೊಳ್ಳೂವುದು ಸಾಧ್ಯವಾಗುತ್ತಾ ಇದೆ. ಇದು ನಿಜಕ್ಕೂ ಯಾವುದೇ ಬರಹದಿಂದ ಓದುಗನಿಗೆ ಸಿಗಬೇಕಾದ ಲಾಭ. ಅಂತಹ ಅನೇಕ ಲಾಭಗಳು ನಿನ್ನ ಹೊತ್ತಿಗೆ ಓದುವವರಿಗೆ ಆಗುತ್ತದೆ ಎಂಬುದರಲ್ಲಿ ನನಗೆ ಸಂಶಯವಿಲ್ಲ.

“ಮಕ್ಕಳ ರಂಗಭೂಮಿ” ಎಂಬ ಹೆಸರಲ್ಲಿ ಆಗುತ್ತಿರುವ ಅವಘಡಗಳು ಮತ್ತು ಅವುಗಳನ್ನು ತಪ್ಪಿಸಲು ಇರುವ ಮಾರ್ಗ ಸೂಚಿಯನ್ನೂ ವಿಸ್ತಾರವಾಗಿ ತಿಳಿಸಿದ್ದೀಯಾ. ಮೂಲತಃ ಯಾವುದೋ ವಿಚಾರ ಸಂಕಿರಣದಲ್ಲಿ ಮಂಡಿಸಿದ ಅಭಿಪ್ರಾಯವನ್ನು ನಂತರ ಲೇಖನ ರೂಪಕ್ಕೆ ತಂದಿದ್ದೀಯಾ. ಈ ಲೇಖನದ ಮೂಲಕ ಒಂದು ಸ್ವಸ್ಥ ಸಮಾಜ ಕಟ್ಟುವುದಕ್ಕೆ ಹೇಗೆ ಮಕ್ಕಳ ರಂಗಭೂಮಿಯಿಂದ ಸಾಧ್ಯವಾಗುತ್ತದೆ ಎಂಬುದನ್ನು ಬಿಡಿಸಿಟ್ಟಿದ್ದೀಯಾ. ಈ ಹಾದಿಯಲ್ಲಿ ಒಬ್ಬರ ಕೆಲಸವನ್ನು ಮತ್ತೊಬ್ಬರು ಗೌರವಿಸಿ ಮಕ್ಕಳ ಕಣ್ಣಲ್ಲಿರುವ ಮುಗ್ಧತೆಯನ್ನು ನಮ್ಮೊಳಗೂ ತುಂಬಿಕೊಳ್ಳಬೇಕು ಎಂಬ ಮಾತು ಅತ್ಯಂತ ಸಮಯೋಚಿತವಾದುದು.

ಇದಲ್ಲದೆ ಸಮಕಾಲೀನ ಹವ್ಯಾಸೀ ರಂಗಭೂಮಿಯಲ್ಲಿ ಆಗುತ್ತಾ ಇರುವ ಬೆಳವಣಿಗೆ ಹಾಗೂ ಚಟುವಟಿಕೆಯನ್ನು ಕುರಿತು, ರಂಗಭೂಮಿ ಹಾಗೂ ಯುವ ಮನಸ್ಸುಗಳ ಕುರಿತು ವಿಸ್ತಾರವಾದ ಲೇಖನಗಳನ್ನು ಸಿದ್ಧಪಡಿಸಿದ್ದೀಯಾ… ಈ ಲೇಖನಗಳಲ್ಲಿ “ರಂಗಭೂಮಿ” ಎಂಬುದೇ ಸಮರ್ಥ ಭಾಷೆ. ಆ ಭಾಷೆಯ ಮೂಲಕ ಕಲಿತವರು ಕೇವಲ ಪ್ರಬುದ್ಧರಾಗುವುದಿಲ್ಲ ನಾಳೆಗಳಿಗೆ ಅವರೇ ಬುದ್ಧರಾಗುತ್ತಾರೆ ಎಂಬ ವಾದ ಮಂಡಿಸಿದ್ದೀ. ಇದು ವಿಶೇಷವಾದುದು. ನಮ್ಮ ಯುವಪೀಳಿಗೆಯಲ್ಲಿ ನೈತಿಕ ಮೌಲ್ಯ ಕಡಿಮೆಯಾಗುತ್ತಾ ಇದೆ ಎಂದು, ದೇಶದಲ್ಲಿ ಮಾನಭಂಗ ಪ್ರಕರಣಗಳ ಹಾಗೆಯೇ ಆತ್ಮಹತ್ಯೆಯ ಸಂಖ್ಯೆಯೂ ಹೆಚ್ಚಾಗುತ್ತಾ ಇದೆ ಎಂದು ಹಲುಬುವ ಜನರು ಇಂತಹ ಲೇಖನವನ್ನೇ ಸಾಕ್ಷಿಯಾಗಿ ಇರಿಸಿಕೊಂಡು ಪ್ರಾಥಮಿಕ ಶಾಲೆಯ ಮಟ್ಟದಿಂದ ರಂಗ ಶಿಕ್ಷಣವನ್ನು ಪಠ್ಯದಲ್ಲಿ ತಂದುದಾದರೆ ಪ್ರತೀ ಮಗುವಿನ ಒಳಗೂ ಆತ್ಮಸ್ಥೈರ್ಯ ಮಾತ್ರವೇ ಅಲ್ಲದೇ ಸಂಘಜೀವನದ ಅಗತ್ಯಗಳನ್ನು ಕಲಿಸಬಹುದು. ಇಂತಹ ಮಾತಾಡಲು ಬೇಕಾದ ಅಷ್ಟೂ ಪುರಾವೆಗಳು ನಿನ್ನ ಲೇಖನದಲ್ಲಿವೆ.

ಇಷ್ಟೆಲ್ಲಾ ನಾಡು ಕಟ್ಟುವ ಮಾತುಗಳನ್ನು ಆಡಿದ ನಂತರ ನೀನು ಬರೆದ ವ್ಯಕ್ತಿ ಚಿತ್ರಗಳು, ಆ ವ್ಯಕ್ತಿಗಳ ಜೊತೆಗಿನ ನಿನ್ನ ಒಡನಾಟ ಕುರಿತ ಲೇಖನಗಳು ಕಣ್ಣು ತುಂಬಿಸುತ್ತವೆ.  ಎ.ಎಸ್‍.ಮೂರ್ತಿಯವರನ್ನು ಕುರಿತ ನಿನ್ನ ಲೇಖನ ನನ್ನ ಬಾಲ್ಯದ ಅನೇಕ ದಿನಗಳನ್ನು ಕಣ್ಣ ಎದುರಿಗೆ ತಂದಿರಿಸಿತು.  ನಿನ್ನನ್ನು ನನ್ನನ್ನು ಹತ್ತಿರಕ್ಕೆ ತಂದ ಜೀವ ಅದು. ನೀನು ಮಂಡ್ಯದ ಗೆಳೆಯರ ಬಳಗದ  ರಂಗ ಕಾರ್ಯಾಗಾರದಲ್ಲಿ ಎ.ಎಸ್.ಮೂರ್ತಿಯವರ  “ದನಿ ಇಲ್ಲದವರು” ನಾಟಕದ ಮೂಲಕವೇ ವೇದಿಕೆ ಹತ್ತಿದೆ. ನಾನೂ ಸಹ ಅದೇ ಎ.ಎಸ್. ಮೂರ್ತಿಯವರ ಮೂಲಕವೇ ಹನುಮಂತನಗರದ ಬೀದಿಗಳಲ್ಲಿ ಆಡುವ ಬದಲಿಗೆ ರಂಗಭೂಮಿಗೆ ಹೊರಳಿದವನು. ಹೀಗಾಗಿ ಮೂರ್ತಿಯವರನ್ನು ಕುರಿತಂತೆ ನೀನಾಡಿರುವ ಪ್ರತೀ ಮಾತೂ ನನಗೇ ನೀನು ಹೇಳಿದಂತೆ ಕೇಳಿಸಿತು.

ನಂತರ ಧಾರಾವಾಡದ ಬಸ್ಲಿಂಗಯ್ಯ ದಂಪತಿಗಳನ್ನು ಕುರಿತಂತೆ, ನನ್ನ ಗೆಳೆಯರಾದ ರಾಜಶೇಖರ ಕದಂಬ, ಆನಂದ ಗಾಣಿಗ, ಕರಿಬಸವಯ್ಯ ಅವರನ್ನು ಕುರಿತಂತೆ ಬರೆದ ಮಾತುಗಳೂ ಸಹ ಸಮಕಾಲೀನ ಸಂದರ್ಭದಲ್ಲಿ ಒಬ್ಬರ ಮೈಲಿಗಲ್ಲನ್ನು ಮತ್ತೊಬ್ಬ ಗುರುತಿಸಿ, ನೆನಪಿಸುವಂತಹ ಮಾದರಿಯ ಲೇಖನ. ಇದು, ಈಗ ಆಗಬೇಕಾದ ಕೆಲಸ. ನಮ್ಮ ನೆರೆಹೊರೆಯನ್ನು, ನಮ್ಮ ಸಮಕಾಲೀನ ಸೃಜನಶೀಲರನ್ನು ಅಸೂಯೆ ಮತ್ತು ಗುಮಾನಿಗಳಿಂದಲೇ ನೋಡುವವರ ಸಂಖ್ಯೆ ಹೆಚ್ಚಾಗಿರುವ ಕಾಲದಲ್ಲಿ ಎಲ್ಲರನ್ನೂ ಮನುಷ್ಯರಂತೆ ಚಿತ್ರಿಸಿ, ಅವರ  ಪ್ರಯೋಗಗಳು ಈ ನಾಡನ್ನು ಹೇಗೆ ಶ್ರೀಮಂತಗೊಳಿಸಿದ್ದಾವೆ ಎಂದು ತಿಳಿಸಿದ್ದೀಯಾ. ಇಂತಹ ಲೇಖನಗಳ ಮೂಲಕವಾದರೂ ನಮ್ಮ ಸಾಂಸ್ಕೃತಿಕ ಜಗತ್ತಿನಲ್ಲಿ ತುಂಬಿರುವ ಅನೇಕ ಗುಮಾನಿಯ ಕಣ್ಣುಗಳು ಸರಿದಾರಿಗೆ ಹೊರಳುವಂತಾಗಲಿ ಎಂಬುದು ನನ್ನ ಆಶಯವೂ ಆಗಿದೆ.

ಇಷ್ಟಾದ ಮೇಲೆ ಸಿನಿಮಾಗಳನ್ನು ಕುರಿತ ಎರಡು ಲೇಖನಗಳಿವೆ. “ಎದೆಗಾರಿಕೆ” ಸಿನಿಮಾದ ವಿಶ್ಲೇಷಣೆ ಮತ್ತು “ವಿವೇಕಾನಂದ” ಸಾಕ್ಷ್ಯಚಿತ್ರ ಕುರಿತ ನಿನ್ನ ಅಭಿಪ್ರಾಯಗಳು ಇಲ್ಲಿವೆ.

ಎಲ್ಲದರ ಚೆಗೆ ಕಟ್ಟಕಡೆಯಲ್ಲಿ  ನಿನ್ನ “ಕನವರಿಕೆ”ಯ ಈ ವರೆಗಿನ ವಿವರ ಬಿಚ್ಚಿಟ್ಟಿದ್ದೀ. ನೀನು ಹಾದುಬಂದ ಅಷ್ಟೂ ವಿವರಗಳನ್ನು ನೀಡುತ್ತಾ ಈಗ ಮೈಸೂರಿನಲ್ಲಿ ನೀನು ನಿನ್ನ ತಂಡದವರ ಜೊತೆಗೆ ಕಟ್ಟುತ್ತಾ ಇರುವ ರಂಗಮಂದಿರದ ವಿವರವನ್ನು ತೆರೆದಿಟ್ಟಿದ್ದೀ. ಮಂಡ್ಯದ ಕಾಲೇಜು ರಂಗಭೂಮಿಯಲ್ಲಿ ಅಂಬೆಗಾಲಿಟ್ಟು ಮೈಸೂರಿನಲ್ಲಿ ನಿನ್ನದೇ ತಂಡದ ಹೆಸರಲ್ಲಿ ರಂಗಮಂದಿರ ಕಟ್ಟುವವರೆಗಿನ ನಿನ್ನ ನಡಿಗೆಯ ಹಾದಿಯನ್ನು ವಾಮನನು ತ್ರಿವಿಕ್ರಮನಾದುದು ಎಂದು ಹೆಸರಿಸಬಹುದು. ಆ ಕಾಲದ ತ್ರಿವ್ರಿಕ್ರಮನಾದರೂ ದ್ರಾವಿಡರ ದೇವರಾದ ಬಲಿ ಚಕ್ರವರ್ತಿಯ ತಲೆಯನ್ನು ಮೆಟ್ಟಿದ್ದ. ಆದರೆ ನಮ್ಮ ಮಂಡ್ಯದ ರಮೇಸ ಯಾರದೋ ತಲೆಯನ್ನು ಮೆಟ್ಟಿ ನಿಂತವನಲ್ಲ. ಎಲ್ಲರೊಳಗೊಂದಾಗಿ ವಿನೀತನಾಗಿ, ತನ್ನ ಸಿಟ್ಟು ಸೆಡವುಗಳನ್ನು ತನ್ನ ಅಂಗಳದಾಚೆಗೆ ದಾಟದಂತೆ ನೋಡಿಕೊಂಡು ಬದುಕು ಕಟ್ಟಿದವನು. ನಮ್ಮೆಲ್ಲರನ್ನೂ ಬೆರಗುಗೊಳಿಸಿದವನು. ಹೀಗಾಗಿಯೇ ನೀನು ಅಂತಿಮವಾಗಿ “ಕಟ್ಟುತ್ತಿರುವ ಕಟ್ಟಡದ ಮತ್ತು ಕನಸಿನ ನಡುವೆ ಒಬ್ಬನೇ ನಿಂತಿದ್ದೇನೆ” ಎಂದಾಗ ನಾನು ಗೆಳೆಯನಿಗೆ ಹೇಳಬೇಕಾದ್ದಿಷ್ಟೇ “ನಿನ್ನ ಹಿಂದೆ ಸದಾ ಕಾಲವೂ ನಿನ್ನ ಗೆಳೆಯರಾದ ನಾವು ಮತ್ತು  ನಿನ್ನ ರಂಗ ಪ್ರಯೋಗಗಳನ್ನು ಕಂಡ ಕನ್ನಡಿಗರಷ್ಟೂ ಜನ ಇದ್ದೇ ಇರುತ್ತಾರೆ. ನೀನೆಂದಿಗೂ ಒಂಟಿಯಲ್ಲ…!”

ಕನವರಿಕೆಯನ್ನು ನೀನು ಸೈಡ್‍ವಿಂಗ್ನಲ್ಲಿಯೇ ಮಾಡಿದ್ದರೂ ಆ ನಿನ್ನ ಕನವರಿಕೆಗಳು ಏಕಕಾಲಕ್ಕೆ ನಾಡು ಕಟ್ಟುವ ಮತ್ತು ನಿನ್ನ ಬೆನ್ನ ಹಿಂದೆ ನಿಲ್ಲುವ ಬಳಗವನ್ನು ಹಿಗ್ಗಿಸಿವೆ. ಇವೆಲ್ಲವೂ ನನಗೆ ಮತ್ತಷ್ಟು ಸಂತೋಷವನ್ನು ನೀಡಿವೆ.

ಇಂತಹ ಅಪರೂಪದ ಸಂತೋಷವನ್ನು ನಮಗೆ ನೀಡಿದ ನಲ್ಮೆಯ ಗೆಳೆಯನಿಗೆ ಕೇವಲ ಸಂತೋಷವಾಯಿತು ಅಂದರೆ ಸಾಲದು. ನಮ್ಮ ಮನಸ್ಸುಗಳು ತುಂಬಿಬಂದಿದೆ ಗೆಳೆಯಾ… ಈ ತುಂಬಿದ ಮನಸ್ಸುಗಳು ಸದಾಕಾಲ ನಿನ್ನೊಂದಿಗೆ ನದಿಯಾಗಿ ಪ್ರವಹಿಸುತ್ತಲೇ ಇರುತ್ತವೆ ಎಂದು ತಿಳಿಸುತ್ತಾ ವಿರಮಿಸುತ್ತೇನೆ.

ನಿನಗೆ ಒಳಿತಾಗಲಿ. ನಿನ್ನ ಕನಸುಗಳೆಲ್ಲವೂ ನನಸಾಗಲಿ. ನಿನ್ನನ್ನು ಒಂಟಿತನವೆಂಬುದು ಎಂದಿಗೂ ಕಾಡದಿರಲಿ ಎಂದು ಹಾರೈಸುತ್ತೇನೆ.

ನಿನ್ನವ

– ಬಿ.ಸುರೇಶ

19 ಜುಲೈ 2013

(ಬೆಂಗಳೂರು-ಮುಂಬೈಗಳ ನಡುವಿನ ಆಗಸದಲ್ಲಿ)

bsuresha@bsuresha.com

2 Responses to “ಗೆಳೆಯನಿಗೊಂದು ಪತ್ರ (ಗೆಳೆಯ ಮಂಡ್ಯ ರಮೇಶನ “ಕನವರಿಕೆ”ಗೆ ಬರೆದ ಹಿನ್ನುಡಿ)”


  1. 1 ಝೈನ್ ಮುಹಮ್ಮದ್ ಇನೋಳಿ January 12, 2018 at 5:34 pm

    ಪತ್ರ ಬಹಳಾ ಸೊಗಸಾಗಿದೆ ಸರ್

  2. 2 Santhosh September 23, 2013 at 1:09 pm

    ತುಂಬಾ ಒಳ್ಳೆಯ ಪತ್ರ.. ರಮೇಶ್ರಿಗೆ ನನ್ನಿಂದಲೂ ಒಂದು ತುಂಬು ಹೃದಯದ ಅಭಿನಂದನೆ.. ಈ ಪತ್ರ ಓದಿದಮೇಲೆ “ಕನವರಿಕೆ” ಓದುವ ಮನಸಾಗುತ್ತಿದೆ…


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 107,205 ಜನರು

%d bloggers like this: