ಅಗಲಿದ ಗೆಳೆಯನ ನೆನಪಲ್ಲಿ

[ಅಗಲಿದ ಗೆಳೆಯ “ಏಣಗಿ ನಟರಾಜ”ನನ್ನು ನೆನೆಯುತ್ತಾ ಆಳ್ವಾಸ್ ನುಡಿಸಿರಿ2012ರಲ್ಲಿ ಆಡಿದ ಮಾತನ್ನು ನೆನಪಿನಿಂದ ಅಕ್ಷರಕ್ಕೆ ಇಳಿಸಿದ್ದು…]
ಮಾತು ಎಂಬುದು ಮಹಾ ಅಪಾಯಕಾರಿ ಸಾಧನ. ಅದೂ ಎಂದೋ ಆಡಿದ ಮಾತನ್ನು ಅಕ್ಷರಕ್ಕೆ ಇಳಿಸುವುದು ಮಹಾಸಾಹಸವೇ ಸರಿ. ಆದರೂ ಬಹುದಿನಗಳ ಹಿಂದೆ ಆಡಿದ ಮಾತುಗಳನ್ನು ಇಲ್ಲಿ ಅಕ್ಷರಕ್ಕೆ ತರುವ ಪ್ರಯತ್ನ ಮಾಡುತ್ತಾ ಇದ್ದೇನೆ. ಅಂದು ವೇದಿಕೆಯ ಮೇಲೆ ಎದುರಿಗೆ ಇದ್ದ ಕೇಳುಗರನ್ನು ಗಮನಿಸುತ್ತಾ ಕಟ್ಟಿದ ಮಾತು ಇಂದು ನನ್ನ ಕಣ್ಣೆದುರಿಗೆ ಮತ್ತೆ ಅವತರಿಸುತ್ತಾ ಇದ್ದಾರೆ ಎಂಬುದಷ್ಟೇ ಸಧ್ಯಕ್ಕೆ ನನಗಿರುವ ಸಂತಸ.
ಹೀಗೆ ಮಾತನ್ನು ಮತ್ತೆ ಕಟ್ಟುವಾಗ ಓದುಗರಾದ ನಿಮಗೆ ಮುಂಚಿತವಾಗಿ ಒಂದೆರಡು ಕನ್ಫೆಷನ್ ತರಹದ ಮಾತು ಹೇಳಿಬಿಡುತ್ತೇನೆ. ಇಲ್ಲಿ ನಾನು ಕಟ್ಟುವ ಮಾತು ನನಗೆ ಈ ಕ್ಷಣದ ಸತ್ಯ ಮಾತ್ರ. ಈ ಮಾತು ನಿನ್ನೆ ಆಡಿದ್ದೇನೋ ಇಲ್ಲವೋ ನನಗೆ ನೆನಪಿಲ್ಲ. ಇದೇ ಮಾತು ನಾಳೆ ನನ್ನಲ್ಲಿ ಉಳಿದಿರುತ್ತದೆಯೇ ಎಂಬುದು ಸಹ ನನಗೆ ಗೊತ್ತಿಲ್ಲ. ಆದರೂ ಈ ಕ್ಷಣದ ಈ ನನ್ನ ಮಾತನ್ನು ಈ ಕ್ಷಣದ್ದು ಎಂದು ಸ್ವೀಕರಿಸಿ ಎಂದು ಮನವಿ ಮಾಡುತ್ತಾ ಮುಂದುವರೆಯುತ್ತೇನೆ.

ಏಣಗಿ ನಟರಾಜ ನನ್ನ ಪ್ರಿಯ ಮಿತ್ರ ಆಗಿದ್ದವನು. ನನ್ನ ಜೀವನದ ಏಳು ಬೀಳುಗಳಲ್ಲಿ ಜೊತೆಯಾಗಿದ್ದು ನನಗೆ ಹೆಗಲಾಗಿದ್ದವನು. ನಟರಾಜನನ್ನು ನಾನು ಮೊದಲು ಕಂಡದ್ದು ಬೆಂಗಳೂರಿನಲ್ಲಿ ಪ್ರದರ್ಶನವಾದ ಜಂಬೆಯವರ ನಿರ್ದೇಶನದ “ವಿಗಡ ವಿಕ್ರಮರಾಯ” ನಾಟಕದಲ್ಲಿ. ಆತ ಅದರಲ್ಲಿ ಕೂಳ ಮಂತ್ರಿಯ ಪಾತ್ರವನ್ನು ಮಾಡಿದ್ದ ಎಂದು ನೆನಪು. ಆ ನಾಟಕದ ಆತನ ಮೊದಲ ದೃಶ್ಯದಲ್ಲಿ ಆತ ಶೀರ್ಷಾಸನದಲ್ಲಿ ಇದ್ದ. ಹಾಗೆಯೇ ವೇದಿಕೆಗೆ ಬರುವ ಪಾತ್ರಗಳ ಜೊತೆ ಮಾತಾಡುತ್ತಾ ಇದ್ದ. ಹಾಗೆ ತಲೆಕೆಳಗಾಗಿ ಮಾತಾಡುವುದು ಸುಲಭದ ಕೆಲಸವಲ್ಲ. ಅಂತಹದುನ್ನು ಸಾಧಿಸುವುದಕ್ಕೆ ಹಲವು ತಿಂಗಳುಗಳ ಸಾಧನೆ ಬೇಕು. ಗಂಟಲಿಗೂ ದೇಹಕ್ಕೂ ನಿರಂತರ ಅಭ್ಯಾಸ ಇರಬೇಕು. ಆ ಸ್ಥಿತಿಯಲ್ಲಿ ಹುಟ್ಟುವ ದನಿಯನ್ನು ಕಡೆಯ ಸಾಲಿನ ಪ್ರೇಕ್ಷಕನಿಗೆ ತಲುಪಿಸುವಂತೆ ಎಸೆಯುವುದು ಸಹ ಸುಲಭವಲ್ಲ. ಇದೆಲ್ಲವನ್ನೂ ನೋಡುಗರನ್ನು ಬೆರಗುಗೊಳಿಸುವಂತೆ ಬಿಚ್ಚಿಟ್ಟಿದ್ದ ನಟರಾಜ ಅವನಿಗೆ ನನ್ನ ಪರಿಚಯ ಆಗುವುದಕ್ಕಿಂತ ಮುಂಚಿತವಾಗಿಯೇ ನನಗೆ ಆತ್ಮೀಯನಾಗಿ ಬಿಟ್ಟಿದ್ದ. ನಾನು ನಾಟಕ ಮುಗಿದ ಮೇಲೆ ಸೇರಿದ್ದ ಮಂದ ಬೆಳಕಿನ ಗೋಷ್ಟಿಯಲ್ಲಿಯೂ ನಟರಾಜನನ್ನು ನನ್ನ ಎದುರಿಗೆ ಇದ್ದ ಮಾಯೆ ಎಂಬಂತೆ ನೋಡುತ್ತಾ ಇದ್ದೆ. ಮತ್ತೆ ಆತನನ್ನು ಲೋಕ ಶಾಕುಂತಲಾ, ಸಾಂಬಶಿವ ಪ್ರಹಸನ, ತ್ರಿ ಪೆನ್ನಿ ಅಪೆರಾ ಹೀಗೆ ಅನೇಕ ನಾಟಕಗಳಲ್ಲಿ ನೋಡಿದೆ. ನಮ್ಮಿಬ್ಬರ ನಡುವೆ ದೊಡ್ಡ ಮಾತು ಎಂಬುದು ನಡೆದಿರಲಿಲ್ಲ. ಆದರೆ ಇಬ್ಬರೂ ಪರಿಚಿತರಾಗಿದ್ದೆವು. ಅವನು ಬೆಂಗಳೂರಿಗೆ ಬಂದಾಗ ಹರಟೆಗೆ ಸೇರುತ್ತಾ ಇದ್ದ ಹಲವರ ನಡುವೆ ನಾನೂ ಒಬ್ಬ ಇರುತ್ತಾ ಇದ್ದೆ. ನಾನು ಮಾಡಿದ “ಅಹಲ್ಯೆ ನನ್ನ ತಾಯಿ” ನಾಟಕವನ್ನು ನಟರಾಜ ನೋಡಿದ್ದ. ನಾಟಕದ ನಂತರ ಬಹುಕಾಲ ರಂಗಾಭಿನಯವನ್ನು ಕುರಿತು ನನ್ನ ಜೊತೆಗೆ ಮಾತಾಡಿದ್ದ. ಆದರೆ ಈ ಎಲ್ಲ ಪ್ರಕ್ರಿಯೆಗಳು ನಮ್ಮನ್ನು ಇನ್ನೂ ಆತ್ಮೀಯ ಸ್ನೇಹಿತರನ್ನಾಗಿಸಿರಲಿಲ್ಲ. ನಮ್ಮ ನಡುವಿನ ಗೋಡೆ ಒಡೆದಿರಲಿಲ್ಲ. ಅದು ಆಗಿದ್ದು ಬಹುದಿನಗಳ ನಂತರ. ಸರಿಸುಮಾರು ನಮ್ಮಿಬ್ಬರ ಪರಿಚಯವಾಗಿ ಒಂದೂವರೆ ದಶಕಗಳಾದ ನಂತರ.
ಆ ಹೊತ್ತಿಗೆ ನಟರಾಜನ ಪಯಣ ಬೃಹತ್ತಾಗಿ ನಡೆದಿತ್ತು. ಈ ನಾಡಿನ ಪ್ರತೀ ಊರಿನಲ್ಲೂ ನಟರಾಜ ತನ್ನ ಅಭಿನಯದಿಂದ ಪರಿಚಿತನಾಗಿದ್ದ. ನಂತರ ರಂಗಾಯಣ ಮುಂತಾದ ಸಂಸ್ಥೆಗಳಲ್ಲಿ ಅಭಿನಯ ಕಲಿಸುವ ಕೆಲಸವನ್ನೂ ಮಾಡಿದ್ದ. ತನ್ನ ತಂದೆಯವರು ನಡೆಸುತ್ತಾ ಇದ್ದ ಕಂಪೆನಿಯನ್ನು ಮರಳಿ ಜೀವಂತಗೊಳಿಸಲು ಶ್ರಮಿಸಿದ್ದ. ಇವುಗಳ ನಡುವೆ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಾ, ಕೆಲವು ಸಿನಿಮಾಗಳಿಗೆ ಸಹಾಯಕನೂ ಆಗಿ ಕೆಲಸ ಮಾಡಿದ್ದ. ನಟರಾಜನ ಪಯಣದ ಉತ್ತರಾರ್ಧದಲ್ಲಿ ನನಗೆ ಅವನು ಮತ್ತೆ ಸಿಕ್ಕಿದ್ದು ನಾನು “ನಾಕುತಂತಿ” ಎಂಬ ಧಾರಾವಾಹಿಯನ್ನು ಮಾಡುವಾಗ. ನಾನು ಧಾರವಾಡದಲ್ಲಿ ವಾಮನ ಬೇಂದ್ರೆಯವರನ್ನು ಭೇಟಿಯಾಗಲು ಹೋಗಿದ್ದೆ. ಅವರೊಡನೆ ಮಾತಾಡಲು ನನಗೆ ಜೊತೆಯಾದವನು ನಟರಾಜ. ಆ ಕೆಲಸ ಮುಗಿದ ನಂತರ ನಟರಾಜನ ಮನೆಯಲ್ಲಿಯೇ ರೊಟ್ಟಿ ಊಟ ಮಾಡುವ ಆನಂದವೂ ಸಿಕ್ಕಿತ್ತು. ಊಟ ಮುಗಿಸಿದವನಿಗೆ ನಟರಾಜನ ತಂದೆ ಏಣಗಿ ಬಾಳಪ್ಪನವರ ಭೇಟಿಯ ಸುಖವೂ ಸಿಕ್ಕಿತ್ತು. ಬಾಳಪ್ಪನವರು “ನನ್ನ ಮಗನಿಗೆ ಒಂದು ದಾರಿ ಮಾಡಪ್ಪ” ಎಂದರು. ನಾನು ಅಚ್ಚರಿಯಲ್ಲಿ ನಿಂತಿದ್ದೆ. ನಟರಾಜನಂತಹ ನಟನಿಗೆ ನಾನು ಯಾವ ದಾರಿಯಾದೇನು ಎಂಬ ಸೋಜಿಗದಲ್ಲಿಯೇ ನನ್ನ ಕತೆಯಲ್ಲಿ ಇಲ್ಲದ ತಂದೆಯ ಪಾತ್ರವೊಂದನ್ನು ಸೃಷ್ಟಿಸಿ ಮಿತ್ರ ಎಂದು ಹೆಸರಿಟ್ಟು, ನಟರಾಜನಿಗೆ ಅಭಿನಯಿಸಲು ತಿಳಿಸಿದ್ದೆ. ಅಲ್ಲಿಂದಾಚೆಗೆ ನಟರಾಜ ನಾನು ಆತನ ಕಡೆಯ ದಿನದ ವರೆಗೆ ಆತ್ಮೀಯ ಸ್ನೇಹಿತರಾಗಿದ್ದೆವು.
ನಾವಿಬ್ಬರೂ ಚಿತ್ರೀಕರಣದಲ್ಲಿ ಭೇಟಿಯಾದಾಗಲೂ ನಮ್ಮ ನಡುವೆ ಮಾತಿಗಿಂತ ಜಗಳಗಳೇ ಹೆಚ್ಚಾಗುತ್ತಾ ಇದ್ದವು. ಅದು ಪ್ರೀತಿಯ ಜಗಳ. ತಾತ್ವಿಕ ಜಗಳ. ಬದುಕನ್ನು ಕುರಿತ ಜಗಳಗಳಾಗಿರುತ್ತಾ ಇದ್ದವು.
ನಟರಾಜ ಹುಟ್ಟಿದ್ದು (1958) ದಾವಣಗೆರೆಯಲ್ಲಿ. ನಾನೂ ಸಹ ಹುಟ್ಟಿದ್ದು ಅದೇ ಊರಲ್ಲಿ. ನಮ್ಮಿಬ್ಬರಿಗೆ ಮಿತ್ರನಾಗಿದ್ದ ಸುರೇಂದ್ರನಾಥ ಸಹ ಅದೇ ಊರಿನವನು. ಹೀಗಾಗಿ ನಮ್ಮ ಮೂವರ ನಡುವೆ ವಿಚಿತ್ರವಾದ ಸಂಬಂಧವೊಂದು ಏರ್ಪಟ್ಟಿತ್ತು. ನಾವು ಮೂವರು ಸೇರಿ ಕಟ್ಟಿದ ನಾಟಕ “ನಾ ತುಕಾರಾಂ ಅಲ್ಲ” ಈ ಮೂರೂ ಗೆಳೆಯರ ನಡುವೆ ಬೃಹತ್ ಸೇತುಸಂಬಂಧಿಯಾಯಿತು. ಆ ವರೆಗೆ ನಟರಾಜನನ್ನು ಕೇವಲ ನೋಡುಗನಂತೆ ಅನುಭವಿಸಿದ್ದ ನನಗೆ ಸಹನಟನಾಗಿಯೂ ಆತನ ಶಕ್ತಿಯ ಪರಿಚಯವಾಗುವುದು ಸಾಧ್ಯವಾಯಿತು.
ಅಪರೂಪದ ನಟ
ನಟರಾಜನ ಶಕ್ತಿಯಿದ್ದದ್ದು ಆತ ಪ್ರೇಕ್ಷಕರ ಜೊತೆಗೆ ಸಾಧಿಸುತ್ತಾ ಇದ್ದ ಅವಿನಾಭಾವ ಸಂಬಂಧದಲ್ಲಿ. ಸಾಮಾನ್ಯವಾಗಿ ರಂಗ ನಟನೆ ಎಂಬುದು ಇಮ್ಮುಖ ಪಯಣ. ನಾಟಕ ಕೃತಿಯಾಗಿ ಅದರೊಳಗಿನ ಪಾತ್ರದ ಜೊತೆಗೆ ಪಯಣಿಸುವುದು ಒಂದೆಡೆಗಾದರೆ ಎದುರಿಗೆ ಕೂತ ಪ್ರೇಕ್ಷಕಗಣಕ್ಕೆ ಗಣಪತಿಯಾಗಿ ಸಾಗುವುದು ಮತ್ತೊಂದು ಪಯಣ. ಈ ಇಮ್ಮುಖ ಪಯಣ ಎರಡಲುಗಿನ ಕತ್ತಿಯ ಮೇಲಿನ ನಡೆ ಇದ್ದ ಹಾಗೆ. ಒಂದೆಡೆಗೆ ಕೃತಿ ಒಡ್ಡುವ ಸವಾಲನ್ನು ಸ್ವೀಕರಿಸಿ ಪಾತ್ರವನ್ನು ನಟ ತನ್ನ ಒಡಲಿಗೆ ತುಂಬಿಸಿಕೊಳ್ಳಬೇಕು. ಅಲ್ಲಿ ವೈಯಕ್ತಿಕವಾಗಿ ಒಪ್ಪದ ವಿಚಾರ ಇದ್ದರೂ ಆ ಪಾತ್ರವಾಗಿ ಅವುಗಳನ್ನು ಅಭಿನಯಿಸಬೇಕಾದ ಅನಿವಾರ್ಯ ಒಂದೆಡೆಗಾದರೆ ನೋಡುಗ ಬಂಧುಗಳು ಒಡ್ಡುವ ಸವಾಲು ಭಿನ್ನವಾದುದು. ನೋಡುಗನ ಅನುಭವ ಲೋಕಕ್ಕೆ ದಕ್ಕುವಂತೆ ನಾಟಕದ ಒಳಗಿನ ಪಾತ್ರವನ್ನು ನಿರ್ವಚಿಸುವುದು ಸುಲಭ ಸಾಧ್ಯವಲ್ಲ. ಹಾಗಾಗಿಯೇ ನಮ್ಮಲ್ಲಿ ಅನೇಕ ನಟರೆಂಬ ಬಿರುದು ಪಡೆದವರಿದ್ದರೂ ನಿಜವಾದ ನಟ ಎಂಬುವವರು ಸಿಕ್ಕುವುದು ವಿರಳ. ಇಂತಹ ವಿರಳರಲ್ಲಿ ನಟರಾಜ ಸಹ ಒಬ್ಬನಾಗಿದ್ದ.
ನಟನೆ ಎಂಬುದು ನಾಲ್ಕು ಬಗೆಯದು. ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಎಂದು ನಾಟ್ಯಶಾಸ್ತ್ರ ಈ ನಾಲ್ಕನ್ನು ಗುರುತಿಸುತ್ತದೆ. ಈ ನಾಲ್ಕರಲ್ಲಿಯೂ ಸಾಧನೆ ಮಾಡುವವನು ಶಿವನಾಗುತ್ತಾನೆ ಎಂಬುದು ನಂಬುಗೆ. ನಮ್ಮಲ್ಲಿ ಆಂಗಿಕ ಮತ್ತು ವಾಚಿಕಾಭಿನಯ ಅಭ್ಯಾಸ ಮಾಡಿದ ಅನೇಕರಿದ್ದಾರೆ. ಆಹಾರ್ಯವಂತೂ ಆಯಾ ನಾಟಕದ ತಂತ್ರಜ್ಞರು, ಪ್ರಸಾಧನಕಾರರು ಒದಗಿಸುತ್ತಾರೆ. ಆದರೆ ಸಾತ್ವಿಕಾಭಿನಯ ಆಯಾ ಕಲಾವಿದನ ಒಳಗಿನಿಂದಲೇ ಬರಬೇಕಾದ್ದು. ಆತನ ಪಾತ್ರದ ಗ್ರಹಿಕೆ ಮತ್ತು ಲೋಕದ ಗ್ರಹಿಕೆಗಳು ಆತನ ಪಾತ್ರ ನಿರ್ವಚನೆಯಲ್ಲಿ ಹೊರಗೆ ಬರುತ್ತವೆ. ವಾಚಿಕದ ಮೂಲಕ ನಾಟಕವನ್ನು ಗ್ರಹಿಸಿದವರು ಮಾತನ್ನೇ ಪ್ರಧಾನವಾಗಿಸಿ ನಾಟಕವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಾರೆ. ಅಂತಹ ನಾಟಕದ ನೋಡುಗನಿಗೆ ಮಾತು ಮಾತ್ರ ತುಂಬಿಕೊಂಡು ನಾಟಕದ ತಿರುಳು ಮುಟ್ಟುವುದಿಲ್ಲ. ಇನ್ನು ಆಂಗಿಕದ ಮೂಲಕ ನಾಟಕದೊಳಗೆ ಪ್ರವೇಶ ಪಡೆದ ನಟರು ಕಸರತ್ತುಗಳಿಂದ ಪ್ರೇಕ್ಷಕರನ್ನು ಪ್ರದರ್ಶನದ ಒಳಗೆ ಹಿಡಿದಿರಿಸುತ್ತಾರೆ. ಆದರೆ ನಾಟಕದೊಳಗಿನ ಭಾವ ವಿಭಾವಗಳ ಸಂಚಾರ ಪ್ರೇಕ್ಷಕನಿಗೆ ತಾಗುವುದಿಲ್ಲ. ಹಾಗಾಗಿ ಸಾತ್ವಿಕಾಭಿನಯಕ್ಕೆ ನಾಟ್ಯಶಾಸ್ತ್ರದಲ್ಲಿ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ತಪ್ಪಸ್ಸಿನಂತೆ ಅಭಿನಯ ಕಲೆಯ ಅಭ್ಯಾಸ ಮಾಡಿದವರಿಗೆ ಈ ಸಾತ್ವಿಕಾಭಿನಯ ಸಲೀಸಾಗಿ ಒಳಿಯುತ್ತದೆ. ಆದರೆ ಅಂತಹವರ ಸಂಖ್ಯೆ ವಿರಳ.
ವಿರಳವಾಗಿ “ಸಾತ್ವಿಕ ಶಿವ”ನ ಪದವಿ ಪಡೆದ ನಟರಲ್ಲಿ ನಮ್ಮ ನಟರಾಜನೂ ಒಬ್ಬ. ಆತ ಯಾವುದೇ ಪಾತ್ರಕ್ಕೆ ತನ್ನ ಆಂಗಿಕವನ್ನು ಮತ್ತು ವಾಚಿಕವನ್ನು ಬಳಸಿಕೊಳ್ಳುತ್ತಲೇ ಪ್ರೇಕ್ಷಕರನ್ನು ಸಾತ್ವಿಕ ಲೋಕದೊಳಗೆ ಕರೆದೊಯ್ಯುತ್ತಾ ಇದ್ದ. ಉದಾಹರಣೆಗೆ “ನಾ ತುಕಾರಾಂ ಅಲ್ಲ” ನಾಟಕದಲ್ಲಿ ನಟರಾಜನ ಪಾತ್ರ ಕೃಷ್ಣಸ್ವಾಮಿ ಎಂಬುದು. ಆ ವೃದ್ಧ ಕೃಷ್ಣಸ್ವಾಮಿಯು ತನ್ನ ಹೆಂಡತಿಯ ಸಾವಿನ ಬಗ್ಗೆ ಮಾತಾಡುವ ಸಣ್ಣ ವಿವರ ನಾಟಕದಲ್ಲಿ ಬರುತ್ತದೆ. ಅದನ್ನು ನೋಡುಗರಿಗೆ ದಾಟಿಸುವಾಗ ನಟರಾಜ ವಾಚಿಕ ಆವರಣದ ಮೂಲಕ “ನನಗೆ ಏನಾದರೂ ಇಂಪಾರ್ಟೆಂಟ್ ಮಾತೂಂತ ಆಡಿದವರು ಯಾರಾದರೂ ಇದ್ದರೆ ಅದು ವಿಕ್ಟೋರಿಯಾ ಆಸ್ಪತ್ರೆ ಡಾಕ್ಟರು” ಎಂದು ಆರಂಭಿಸಿ ನೋಡುಗನನ್ನು ನಗೆಗಡಲಿನಲ್ಲಿ ಮುಳುಗಿಸಿ ತಟ್ಟನೆ ಒಂದು ಮೌನದ ಸೇತುಬಂಧ ಸೃಷ್ಟಿಸಿ ಆ ಡಾಕ್ಟರ ಮೂಲಕ ಕೃಷ್ಣಸ್ವಾಮಿಗೆ ಆತನ ಮಡದಿಯ ಸಾವಿನ ವಿಷಯ ತಿಳಿಯಿತು ಎಂಬ ಅತ್ಯಂತ ನೋವಿನ ಸಂಗತಿಯನ್ನು ದಾಟಿಸುತ್ತಾನೆ. ಮೊದಲ ವಾಕ್ಯದಿಂದ ನಕ್ಕಿದ್ದ ಅದೇ ಪ್ರೇಕ್ಷಕ ಎರಡನೆಯ ಸಾಲು ಹೃದಯಕ್ಕೆ ತಾಗಿದೊಡನೆ ವೇದಿಕೆ ಮೇಲಿನ ಪಾತ್ರದ ಜೊತೆಗೆ ಅನುಕಂಪದ ಮೂಲಕ ಅನುಭೂತಿಯನ್ನು ಪಡೆಯುತ್ತಾನೆ. ಇಲ್ಲಿ ನಟರಾಜ ಬಳಸಿದ್ದ ಮೌನವನ್ನು ಸ್ವತಃ ವೇದಿಕೆಯ ಮೇಲೆ ಸಹನಟನಾಗಿ ನಾನು ಅನುಭವಿಸಿದ್ದೇನೆ. ಅದೊಂದು ಸುದೀರ್ಘವಲ್ಲದ ಆದರೆ ಕಾಡುವ ಮೌನ. ಆ ಮೌನದ ಕ್ರತು ಶಕ್ತಿಯಿಂದಾಗಿಯೇ ಅದೇ ಮಾತಿನ ಎರಡನೆಯ ಅರ್ಧದಲ್ಲಿ ಇರುವ ಸಂತಾಪದ ವಿವರವೂ ನೋಡುಗರನ್ನೂ ಸಹ ಅಳುವಿನತ್ತ ಕರೆದೊಯ್ಯುತ್ತದೆ. ಹೀಗೆ ಒಂದು ಭಾವದಿಂದ ಮತ್ತೊಂದು ಭಾವಕ್ಕೆ ಅತ್ಯಂತ ಸಲೀಸಾಗಿ ತಾನೂ ಸಾಗುತ್ತಾ ತನ್ನೊಂದಿಗೆ ಪ್ರೇಕ್ಷಕರನ್ನೂ ಕರೆದೊಯ್ಯುವ ಅಪರೂಪದ ಶಕ್ತಿ ನಟರಾಜನದ್ದಾಗಿತ್ತು. ಹಾಗಾಗಿಯೇ ಆತನ ಅಭಿನಯದ ನಾಟಕ ನೋಡಿದವರು ಕೇವಲ ಆತನ ಅಭಿನಯವನ್ನು ಕುರಿತು ಮಾತಾಡುತ್ತಾ ಇರಲಿಲ್ಲ, ಅಂದು ಅವರಿಗೆ ದಕ್ಕಿದ ಅನುಭವವನ್ನು ಕುರಿತು ಮಾತಾಡುತ್ತಾ ಇದ್ದರು. ಇಂತಹ ಅಪರೂಪದ ಶಕ್ತಿ ಇದ್ದುದರಿಂದಲೇ ನಟರಾಜ ನಮ್ಮ ನಡುವೆ ಇದ್ದ ಅಪರೂಪದ ನಟರಲ್ಲಿ ಒಬ್ಬನಾಗಿದ್ದ. ಆತನ ತಂದೆ ಏಣಗಿ ಬಾಳಪ್ಪನವರು ಸಹ ಇಂತಹ ಶಕ್ತಿ ಹೊಂದಿದ್ದರು ಎಂದು ಕೇಳಿದ್ದೇನೆ. ಆದರೆ ಆ ಅನುಭವ ನನಗೆ ದಕ್ಕಿರಲಿಲ್ಲ. ಏಣಗಿ ನಟರಾಜ ನನಗೆ ಇಂತಹ ಸಾತ್ವಿಕಾಭಿನಯದ ಅನುಭವವನ್ನು ಕೇವಲ ರಂಗಭೂಮಿಯಲ್ಲಿ ಮಾತ್ರವೇ ಅಲ್ಲ ಕಿರುತೆರೆಯ ಅಭಿನಯದ ಮೂಲಕವೂ ತೋರಿಸಿಕೊಟ್ಟಿದ್ದಾನೆ. ಆತನಿಗೆ ಮಾತು ಮಾತ್ರ ಅಲ್ಲ ಮೌನವನ್ನೂ ಸಹ ಅರ್ಥವತ್ತಾಗಿ ದಾಟಿಸುವ ಶಕ್ತಿ ಇತ್ತು.
“ನಾಕುತಂತಿ” ಧಾರಾವಾಹಿಯಲ್ಲಿ ನಾನು ಅಲ್ಲಮನ ವಚನಗಳನ್ನು ಧಾರಾಳವಾಗಿ ಬಳಸಿದ್ದೆ. ಅಲ್ಲಮ ನಮ್ಮ ನಡುವೆ ಆಗಿಹೋದ ಬೆಡಗಿನ ಕವಿ. ಆತನ ವಚನಗಳನ್ನು ಹೇಗೆ ಬೇಕಾದರೂ ಅರ್ಥೈಸಬಹುದು. ಅವುಗಳನ್ನು ಸಮಕಾಲೀನ ಕತೆಯೊಂದರ ಮಾತಿನ ಒಳಗೆ ಕೂಡಿಸಿದಾಗ ಕಥನದ ಭಾರ, ಮಾತಿನ ಭಾರ ಹಾಗೂ ವಚನಕ್ಕೆ ಇರುವ ಅರ್ಥ ಸಾಧ್ಯತೆಗಳ ಭಾರ ಹೀಗೆ ಹಲವು ಭಾರಗಳನ್ನು ನಟನೊಬ್ಬ ಏಕಕಾಲಕ್ಕೆ ಹೊರಬೇಕಾದ ಸ್ಥಿತಿ ಬರುತ್ತದೆ. ಈ ಸ್ಥಿತಿಯನ್ನು ಏಣಗಿ ನಟರಾಜ ಸಮರ್ಥವಾಗಿ ನಿಭಾಯಿಸುತ್ತಾ ಇದ್ದ. ಆತ ವಚನದ ಜೊತೆಗಿದ್ದ ಮಾತುಗಳನ್ನು ಹಾಗೂ ಅಲ್ಲಮನ ವಚನದ ಆತನ ಗ್ರಹಿಕೆಯನ್ನು ಕೇವಲ ಕಿರುತೆರೆಯ ನೋಡುಗರಿಗೆ ಎಂದಷ್ಟೇ ಅಲ್ಲದೆ ಸಹನಟರಿಗೂ ಸೋಜಿಗ ಎನಿಸುವಂತೆ ದಾಟಿಸುತ್ತಾ ಇದ್ದ. ಹೀಗಾಗಿ ಆತನ ನಟನೆಯ ಭಾಗದ ನಂತರ ತಾವು ಅಭಿನಯಿಸಬೇಕಾದ ಸಹನಟರು ನಟರಾಜನ ಮಾಯೆಯಲ್ಲಿ ಮಾತು ಮರೆತವರಂತೆ ನಿಲ್ಲುತ್ತಾ ಇದ್ದುದನ್ನು ನಾನು ಸ್ವತಃ ಕಂಡಿದ್ದೇನೆ. ನಟರಾಜನ ಅಭಿನಯ ಕಾಲದ ಉದ್ದಕ್ಕೂ ಇಂತಹ ಹಲವು ಉದಾಹರಣೆಗಳನ್ನು ಹೇಳಬಹುದು. “ನಟಸಾಮ್ರಾಟ” ಮುಂತಾದ ಅನೇಕ ನಾಟಕಗಳ ಪ್ರದರ್ಶನವನ್ನು ನೋಡಿದವರು ನಟರಾಜನ ಅಭಿನಯದ ಈ ಮಾಯೆಗೆ ಸಾಕ್ಷಿಯಾಗಿದ್ದಾರೆ.
ನಟನ ಸಾವು ನಟನೆಯ ಅಭಾವದಲ್ಲಿ
ಆದರೆ ಇಂತಹ ಅಪರೂಪದ ನಟನಿಗೆ ಎರಡು ಬಗೆಯ ಅಗತ್ಯಗಳು ಏಕಕಾಲಕ್ಕೆ ಕಾಡುತ್ತವೆ. ಒಂದು ತನ್ನೊಳಗಿರುವ ನಟನ ಹಸಿವು ತುಂಬುವಂತಹ ಪಾತ್ರಗಳ ಅಗತ್ಯವಾದರೆ ಮತ್ತೊಂದು ತನ್ನನ್ನು ನೆಚ್ಚಿಕೊಂಡ ಸಂಸಾರದ ಹಸಿವು ತುಂಬಿಸುವುದು ಹಾಗೂ ಸಮುದಾಯಕ್ಕೆ ಮೆಚ್ಚುಗೆಯಾಗುವಂತೆ ಬದುಕುವ ಅನಿವಾರ್ಯ. ನಟರಾಜನ ಮೊದಲ ದಶಕದ ರಂಗಪಯಣದ ನಂತರ ಇವೆರಡೂ ಆತನಿಗೆ ಸರಿಯಾಗಿ ಸಿಗಲಿಲ್ಲ. ರಂಗನಿರ್ದೇಶಕರು ನಟನೆ ಪ್ರಧಾನವಾದ ರಂಗಭೂಮಿಯಿಂದ ನಿರ್ದೇಶಕ ಪ್ರಧಾನವಾದ ರಂಗಭೂಮಿಗೆ ಸಾಗಿದಂತೆ ನಟರಾಜನ ಹಾಗೆಯೇ ಹಲವು ನಟರು ಹತಾಶರಾದರು.
ನಟರಾಜನಿಗೆ ಇದೇ ಅವಧಿಯಲ್ಲಿ ನಟನೆಗಿಂತ ಹೆಚ್ಚು ನಟನೆಯನ್ನು ಕಲಿಸುವ ಕೆಲಸಗಳು ಬಂದವು. ಆದರೆ ಸ್ವತಃ ನಟನಾದವನಿಗೆ ವೈಯಕ್ತಿಕ ಸವಾಲುಗಳು ಸಿಕ್ಕು ಹಸಿವು ತುಂಬದೆ ಹೋದಾಗ, ತನ್ನ ಎದುರಿಗೆ ಬೇರೆಯವರು ಉತ್ತಮ ಪಾತ್ರಗಳಲ್ಲಿ ಅರೆಬರೆ ಅಭಿನಯಿಸುವುದು ಕಂಡಾಗ ಆಗಬಹುದಾದ ಸಂಕಟಗಳು ದೊಡ್ಡದು. ಈ ಸಂಕಟದಲ್ಲಿ ನಟರಾಜ ಅನೇಕ ಚಟಗಳಿಗೆ ಮೊರೆ ಹೋಗಿದ್ದ. ಜೊತೆಗೆ ಆತನ ಮಡದಿಯು ಬೆಂಕಿ ಅವಘಡದಲ್ಲಿ ತೀರಿಕೊಂಡದ್ದು ಹಾಗೂ ನಟರಾಜನಿಗೂ ಕೆಲವು ದಿನಗಳ ಕಾಲ ಮಡದಿಯ ಸಾವಿನ ಹಿನ್ನೆಲೆಯಲ್ಲಿ ಜೈಲಾಗಿದ್ದು ದೊಡ್ಡ ಆಘಾತವಾಗಿತ್ತು. ಈ ಅವಧಿಯಲ್ಲಿ ಆತನ ಕೈಯೂ ಸುಟ್ಟುಕೊಂಡಿದ್ದ ನಟರಾಜ. ಆ ಗುರುತುಗಳು ಆತನ ಜೊತೆಗೆ ಕಡೆಗಾಲದವರೆಗೂ ಉಳಿದಿದ್ದವು. “ರಂಗಾಯಣ”, “ನೀನಾಸಂ” ಮುಂತಾದ ಕಡೆಗಳಲ್ಲಿ ಹೊಸಬರಿಗೆ ನಟನೆಯನ್ನು ಕಲಿಸುವ ಪ್ರಯತ್ನಗಳು ಆತನ ಹತಾಶೆಯನ್ನು ಮತ್ತೂ ಹೆಚ್ಚಿಸಿದ್ದವು. ಇವು ಆತನಿಗೆ ನಟನೆಯ ಅಭಾವದಿಂದ ಬರಬಹುದಾದ ವೈರಾಗ್ಯವನ್ನು ತಂದಿತ್ತು.
ಈ ಅವಧಿಯಲ್ಲಿ ಆತ ಟೆಲಿವಿಷನ್ ಲೋಕವನ್ನು ಪ್ರವೇಶಿಸಿದ. ಹಲವು ಹಿರಿಯ ನಿರ್ದೇಶಕರ ಧಾರಾವಾಹಿಗಳಲ್ಲಿ ಅಭಿನಯಿಸಿದ. ಆ ಧಾರಾವಾಹಿಗಳು ಯಶಸ್ವಿಯೂ ಆದವು. ಆದರೆ ಒಬ್ಬ ಒಳ್ಳೆಯ ನಟನಿಗೆ ಧಾರಾವಾಹಿಯ ನಟನೆ ತೃಪ್ತಿ ತರುವುದಿಲ್ಲ. ಧಾರಾವಾಹಿಯ ಲೋಕದಲ್ಲಿ ನಟಿಸುವವ ದಿನವಿಡೀ ಆರೇಳು ದೃಶ್ಯಗಳ ಮಾತನ್ನು ಓತಪ್ರೋತವಾಗಿ ಆಡುತ್ತಾನೆ. ಎಷ್ಟೋ ಸಲ ನಟನಿಗೆ ದೃಶ್ಯ ಅರ್ಥವಾಗುವುದಕ್ಕೂ ಮೊದಲೇ ದೃಶ್ಯದ ಚಿತ್ರೀಕರಣ ಆಗಿ ಹೋಗಿರುತ್ತದೆ. ಹೀಗಾಗಿ ಈ ಧಾರಾವಾಹಿಯ ಲೋಕದಲ್ಲಿ ಜೇಬು ಖುಷಿಪಟ್ಟರೂ ಮನಸ್ಸು ಕೊರಗುತ್ತದೆ. ಇದು ಏಣಗಿ ನಟರಾಜನ ಸಮಸ್ಯೆಯೂ ಆಗಿತ್ತು. ಹೀಗಾಗಿ ಆತ ಧಾರಾವಾಹಿಯ ಲೋಕದಲ್ಲಿಯೂ ನಟನೆಯ ಸುಖವನ್ನು ಅನುಭವಿಸಲಿಲ್ಲ.
ಅಪ್ಪನ ನಾಟಕದ ಕಂಪೆನಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಮಾಡಿದ. ಆದರೆ ಹವ್ಯಾಸೀ ನಟರನ್ನು ಕಟ್ಟಿಕೊಂಡು ವೃತ್ತಿ ಕಂಪೆನಿಯನ್ನು ನಡೆಸುವುದು ಕಷ್ಟವಾಗಿತ್ತು. ಆ ತಂಡದಲ್ಲಿ ಒಂದಿಬ್ಬರು ವೃತ್ತಿ ಕಂಪೆನಿಯವರೂ ಇದ್ದರಂತೆ. ಆದರೆ ವೃತ್ತಿ ರಂಗಭೂಮಿಯ ನಟನೆಗೂ ಹವ್ಯಾಸೀ ರಂಗಭೂಮಿಯ ಹಿನ್ನೆಲೆಯಿಂದ ಬಂದ ನಟರಿಗೂ ತಾಳ ಕೂಡದೆ ತೊಂದರೆ ಆಗುವುದು ಸಹಜ. ಹೀಗಾಗಿ ನಟರಾಜನ ಮಹತ್ವಕಾಂಕ್ಷೆಗೆ ಇಲ್ಲಿಯೂ ಸರಿಯಾದ ಪ್ರಸಾದ ದೊರೆಯಲಿಲ್ಲ. ಈ ಪ್ರಯತ್ನದ ಫಲವಾಗಿ ಆತ ಮಾಡಿದ “ನಟಸಾಮ್ರಾಟ್” ಮುಂತಾದ ನಾಟಕಗಳು ಜನಮನ್ನಣೆಗಳಿಸಿದವಾದರೂ ನಟರಾಜನ ಒಳಗಿದ್ದ ನಟ ತೃಪ್ತನಾಗಿರಲಿಲ್ಲ.
ಈ ಅವಧಿಯ ನಂತರ ಹತಾಶೆಯಿಂದ ಧಾರಾವಾಡದಲ್ಲಿ ಉಳಿದಿದ್ದ ನಟರಾಜನಿಗೆ ನನ್ನ ಧಾರಾವಾಹಿಯಲ್ಲಿ ತಿಂಗಳಿಗೆ ಹತ್ತು ದಿನದ ಕೆಲಸವನ್ನು ಕೊಟ್ಟೆ. ಉಳಿದ ಇಪ್ಪತ್ತು ದಿನ ನಿನ್ನ ರಂಗಭೂಮಿಯ ಕನಸುಗಳನ್ನು ಬೆಳೆಸು ಎಂಬ ಷರತ್ತಿನ ಜೊತೆಗೆ ಆತನಿಗೆ “ಒಳ್ಳೆಯದು” ಎನ್ನಬಹುದಾದ ಸಂಬಳವನ್ನೂ ಕೊಟ್ಟೆ. ನಟರಾಜ ಮತ್ತೆ ಗರಿಗೆದರತೊಡಗಿದ್ದ. ಅವನ ಆರೋಗ್ಯ ಸುಧಾರಿಸತೊಡಗಿತು. “ನಾಕುತಂತಿ” ಧಾರಾವಾಹಿ ಕೂಡ ಭಾರೀ ಯಶಸ್ಸನ್ನು ಕಂಡಿತ್ತು.
ಈ ಯಶಸ್ಸು ಅನ್ನುವುದು ಭಾರೀ ಅಪಾಯದ ವಿಷಕನ್ಯೆಯ ಹಾಗೆ. ನಮ್ಮ ಧಾರಾವಾಹಿಯನ್ನು ಒಡೆಯುವ ಪ್ರಯತ್ನವನ್ನು ಮತ್ತೊಂದು ವಾಹಿನಿಯಲ್ಲಿದ್ದ ನನ್ನ ಗೆಳೆಯರೇ ಮಾಡತೊಡಗಿದರು. ಅವರು ನಟರಾಜನಿಗೆ ಧಾರಾವಾಹಿ ನಿರ್ದೇಶನದ ಅವಕಾಶ ಕೊಡುವುದಾಗಿ ಆಶೆಯನ್ನು ತೋರಿದರು. ನಮ್ಮಲ್ಲಿ ತಿಂಗಳಿಗೆ ಮುವ್ವತ್ತು ಸಾವಿರ ದುಡಿಯುತ್ತಾ ಇದ್ದವನಿಗೆ ಅರವತ್ತು ಸಾವಿರದ ಆಸೆ ತೋರಿಸಿದರು. ನಟರಾಜ ನನ್ನ ಧಾರಾವಾಹಿ ಬಿಟ್ಟು ತಾನೇ ನಿರ್ದೇಶಕನಾಗಲು ಹೋದ. ಹಾಗೆ ಆತ ಮಾಡಿದ ಧಾರಾವಾಹಿಯು ಯಶಸ್ವಿಯಾಗಲಿಲ್ಲ. ಎರಡು ಮೂರು ತಿಂಗಳಲ್ಲಿಯೇ ನಿಂತಿತು. ಅತ್ತ ಬಯಸಿದ ಹಣವೂ ಇಲ್ಲ. ಇತ್ತ ಯಶಸ್ಸೂ ಇಲ್ಲ ಎಂಬ ಸ್ಥಿತಿಯಲ್ಲಿ ಮತ್ತೆ ನಟರಾಜ ಹಳೆಯ ಚಟಗಳ ಕಡೆಗೆ ಹೊರಳಿದ. ಅವನಿಗಾಗಿದ್ದ ನಟನೆಯ ಅಭಾವವೂ ನಿಧಾನವಾಗಿ ಅವನ ದೇಹವನ್ನು ತಿನ್ನುತ್ತಾ ಇತ್ತು.
ನಟರಾಜನ ಅನುಭವವನ್ನು ಆಧರಿಸಿಯೇ ಅವನಿಗೆ ಹೂವಿನ ಹಡಗಲಿಯಲ್ಲಿ ಪ್ರತ್ಯೇಕ ರೆಪರ್ಟರಿ ತಂಡ ಕಟ್ಟಲು ಎಂ.ಪಿ.ಪ್ರಕಾಶರು ಅವಕಾಶ ಕೊಟ್ಟರು. ನಟನಾದವನನ್ನು ಸಂಘಟಕ ಅಥವಾ ನಿರ್ದೇಶನದ ಕೆಲಸಕ್ಕೆ ಹಚ್ಚಿದಾಗ ಆಗಬಹುದಾದ ಸಂಕಟಗಳೇ ಅಲ್ಲಿಯೂ ಆದವು. ಬಹುಬೇಗ ರೆಪರ್ಟರಿ ನಿಂತಿತು. ನಟರಾಜನಿಗೆ ಪ್ರಯೋಗಶಾಲೆ ಆಗಲಿ ಎಂದೇ ಧಾರವಾಡದ “ರಂಗಾಯಣ”ಕ್ಕೆ ಮುಖ್ಯಸ್ಥ ಮಾಡಿದರು. ಆದರೆ ಆ ಹೊತ್ತಿಗೆ ಅವನ ಅನಾರೋಗ್ಯ ಹೆಚ್ಚಾಗಿತ್ತು. ಧಾರವಾಡದ ರಂಗಾಯಣಕ್ಕಾಗಿ ಆತ ಕಂಡಿದ್ದ ಕನಸುಗಳನ್ನು ಜಾರಿಗೆ ತರುವ ಮೊದಲೇ ಆತ ಹೈರಾಣಾಗಿದ್ದ.
ಈ ಅವಧಿಯಲ್ಲಿ “ನಾ ತುಕಾರಾಂ ಅಲ್ಲ” ನಾವು ನಾಟಕವನ್ನು ಮಾಡಿದೆವು. ಆ ಹೊತ್ತಿಗೆ ನಟರಾಜನ ನೆನಪು ಕಷ್ಟಪಡುತ್ತಾ ಇತ್ತು. ವೇದಿಕೆಯ ಹೊರಗೆ ನಾಟಕಕ್ಕೆ ಮುನ್ನ ಇವನು ನಿಲ್ಲಲೂ ಆಗದು ಎನ್ನುವಂತೆ ಇರುತ್ತಿದ್ದವನು ವೇದಿಕೆಯನ್ನು ಹತ್ತಿದ ಕೂಡಲೇ ವಿಜೃಂಭಿಸುತ್ತಾ ಇದ್ದ. ಹೀಗೆಯೇ 47 ಪ್ರದರ್ಶನ ಮಾಡಿದೆವು 48ನೆಯ ಪ್ರದರ್ಶನಕ್ಕೆ ಇನ್ನೇನು ಪ್ರೇಕ್ಷಕರು ಒಳಗೆ ಬರಬೇಕಿತ್ತು ಆಗ “ನಟರಾಜ ನನ್ನ ಕೈಲಾಗದು” ಎಂದು ಕುಸಿದ. ಅವನಿಗೆ ಇದ್ದ ಕರುಳಿಗೆ ಸಂಬಂಧಿಸಿದ ಬೇನೆ ಉಲ್ಬಣಿಸಿತ್ತು. ಪ್ರದರ್ಶನ ರದ್ದು ಮಾಡಿ ಅವನನ್ನು ಧಾರವಾಡಕ್ಕೆ ಕಳಿಸಿದೆವು. ಆದರೆ ಅವನು ಮತ್ತೆ ವೇದಿಕೆ ಹತ್ತುವುದು ಸಾಧ್ಯವಾಗಲೇ ಇಲ್ಲ. (ನಟರಾಜ್ ಏಣಗಿ 2012ರ ಜೂನ್ 9ರಂದು ನಮ್ಮನ್ನಗಲಿದರು.)
ಇಷ್ಟೆಲ್ಲಾ ಆದಮೇಲೆ
ಈಗ ಹಿಂದಿರುಗಿ ನೋಡುವಾಗ, ನಟರಾಜ ಬಿಟ್ಟುಹೋದದ್ದು ಏನನ್ನೂ ಎಂದು ಗಮನಿಸಿದಾಗ ಅವನು ತಯಾರಿಸಿದ ಹೊಸ ನಟರ ದೊಡ್ಡ ಪಡೆ ಕಾಣುತ್ತದೆ. ಅವನು ಬೆಳೆಸಿದ ಧಾರವಾಡದ ಹವ್ಯಾಸೀ ರಂಗಭೂಮಿಯ ಹುಡುಗರು ಇಂದು ನಟರಾಜನ ಕನಸನ್ನು ಸಾಕರಗೊಳಿಸಲು ತಮ್ಮದೇ ಆದ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಇದ್ದಾರೆ. ನಟರಾಜನ ಮಗ ಅಮೋಫ ಒಳ್ಳೆಯ ಉದ್ಯೋಗದಲ್ಲಿ ಇದ್ದಾನೆ. ಮತ್ತೊಬ್ಬ ಮಗ ಈಗ ಕಾಲೇಜು ಮೆಟ್ಟಿಲೇರಲು ಸಿದ್ಧವಾಗಿದ್ದಾನೆ. ನಟರಾಜ ಇದ್ದಾಗ ದೊರೆಯದಿದ್ದ ನೆಮ್ಮದಿ ಈಗ ಕುಟಂಬಕ್ಕೆ ಬಂದಿದೆ. ಅವರೆಲ್ಲರೂ ಈಗಲೂ ನಟರಾಜನ ನೆನಪಲ್ಲಿ ಸಂತೋಷಪಡುತ್ತಾ ಇದ್ದಾರೆ.
ಆದರೆ ನಟರಾಜನ ತಂದೆ ಏಣಗಿ ಬಾಳಪ್ಪನವಿರಿಗೆ ಮಾತ್ರ ತಂದೆಯನ್ನು ಮೀರಿಸುವಂತಹ ನಟನಾಗಿದ್ದ ನಟರಾಜನ ಸಾವು ಕಾಡುತ್ತದೆ. ನನ್ನಂತ ನಟರಾಜನ ಜೊತೆಗಾರರು ಎದುರಿಗೆ ಬಂದಾಗ ಅವರು ಕಣ್ಣೀರಾಗುತ್ತಾರೆ. ಆ ಹಿರಿಯ ಜೀವಕ್ಕೆ ಕಣ್ಣೆದುರಿಗೆ ಮಗನನ್ನು ಕಳಕೊಂಡ ದುಃಖ ಕಾಡುತ್ತದೆ. ಇನ್ನೇನು ನೂರು ವಸಂತ ಪೂರೈಸಲಿರುವ ಹಿರಿಯಜ್ಜನಿಗೆ ಐವತ್ತರ ಆಸುಪಾಸಿನಲ್ಲಿದ್ದ ನಟರಾಜನ ಅಗಲಿಕೆ ಕಾಡುತ್ತದೆ.
ನಟರಾಜನ ಕುರಿತು ಮಾತಾಡುತ್ತಾ ನನ್ನಂತಹವನಿಗೂ ಕಣ್ಣು ತುಂಬಿ ಬರುತ್ತದೆ. ನಾನು ಅಭಿಮಾನದಿಂದ ನೋಡುತ್ತಾ ಇದ್ದ ಕಲಾವಿದ, ನನ್ನ ಏಳು ಬೀಳುಗಳಲ್ಲಿ ಜೊತೆಯಾಗಿದ್ದ ಸ್ನೇಹಿತ, ನಾನು ಬರೆದ ನಾಟಕವನ್ನಾಗಲಿ, ಚಿತ್ರವನ್ನಾಗಲಿ ಮತ್ತೆ ಮತ್ತೆ ನೋಡಿ ನನ್ನನ್ನು ಹುರಿದುಂಬಿಸುತ್ತಾ ಇದ್ದ ಸಹೃದಯಿ ಈಗ ನನ್ನ ಜೊತೆಗಿಲ್ಲ ಎಂಬ ಶೂನ್ಯ ಆವರಿಸುತ್ತದೆ.
ಹೇಳುವುದಕ್ಕೆ ಇನ್ನೂ ಬಹಳ ವಿಷಯಗಳಿವೆ. ಆದರೆ ಗೆಳೆಯನ ಅಗಲಿಕೆಯ ನೆನಪು ಮಾತುಗಳನ್ನಾಡದಂತೆ ಗಂಟಲು ಕಟ್ಟಿಸಿದೆ. ಮುಂದೆ ಎಂದಾದರೂ ಮತ್ತಷ್ಟು ಮಾತಾಡುವ ಅವಕಾಶ ದೊರೆತಾಗ ಮಾತಾಡಿ ಹಗುರಾಗುತ್ತೇನೆ.
ನನ್ನ ಪ್ರಿಯ ಮಿತ್ರನ ನೆನಪಲ್ಲಿ ಇಷ್ಟು ಮಾತಾಡಲು (ಬರೆಯಲು) ಅವಕಾಶ ಒದಗಿಸಿದ ಆಳ್ವಾಸ್ ನುಡಿಸಿರಿಯ ವ್ಯವಸ್ಥಾಪಕರಿಗೆ ನಮಿಸಿ ವಿರಮಿಸುತ್ತೇನೆ.
* * *
ಬಿ.ಸುರೇಶ
bsuresha@bsuresha.com
8 ಸೆಪ್ಟಂಬರ್ 2013
ಬೆಂಗಳೂರು

Advertisements

3 Responses to “ಅಗಲಿದ ಗೆಳೆಯನ ನೆನಪಲ್ಲಿ”


  1. 1 gopalakrishna September 23, 2013 at 10:00 am

    Dear Suresh,
    Nimma nOvinalli naanoo bhagi endashte helaballe.natarajara saavu kelavu novugalannoo halavu nenapugalannooo bittu hogive. nimage dhuhka bharisuva chaitanya ide. sahisikollale bekada anivaryavoo ide…

  2. 2 panindra December 21, 2013 at 3:29 pm

    Sir, please send me ” sadhane ” serial title song to my email id : panindra@pansys.in … I am searching for long time . i have great sentiment with song , please sir .


  1. 1 ಬಿ ಸುರೇಶ್ ಬರೆಯುತ್ತಾರೆ: ನನ್ನ ಗೆಳೆಯ ಏಣಗಿ ನಟರಾಜ « ಅವಧಿ / avadhi Trackback on September 24, 2013 at 12:50 am

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: