ಜಕಣಾಚಾರಿಯ ಶಿಲ್ಪಕ್ಕೆ ಏಷಿಯನ್ ಪೇಂಟ್ ಹಚ್ಚಬಹುದೇ?

ಈ ವಿಷಯದ ಬಗ್ಗೆ ಕಳೆದ ಒಂದು ವರ್ಷದಿಂದ ಮತ್ತೆ ಮತ್ತೆ ಮಾತಾಡಿದ್ದೇನೆ. ಈಗ ಮತ್ತೆ ಅದೇ ವಿಷಯ ಚರ್ಚೆಗೆ ಬಂದಿದೆ. ನೂರು ಬಾರಿ ಹೇಳಿದರೆ ಸುಳ್ಳು ನಿಜವಾಗುತ್ತದೆ ಎಂಬಂತೆ ಬೇಡವಾದುದನ್ನು ಬಯಸುವವರು ಮಾತ್ರ ತಮ್ಮ ನಿಲುವನ್ನು ಬದಲಿಸದೆ ದನಿ ಎತ್ತಿ ಕೂಗುತ್ತಾ ಇದ್ದಾರೆ. ಹೀಗಾದಾಗ ಯಾವುದೇ ಸೃಜನಶೀಲ ಜಗತ್ತಿನಲ್ಲಿ ಬದುಕುವವನ ಒಳಗಿರುವ ಕಲಾವಿದ ಗಲಿಬಿಲಿಗೊಳ್ಳುತ್ತಾನೆ. ನಾನು ಕಳೆದ ಒಂದು ವರ್ಷದಿಂದ ಹೇಳಿದ್ದು ಯಾವ ಗಾಳಿಯಲ್ಲಿ ತೇಲಿತು ಎಂಬ ಗೊಂದಲ ಮೂಡುತ್ತದೆ. ಈಗ ಮತ್ತೊಮ್ಮೆ ಅದೇ ಸದ್ದು ನಗಾರಿಯಂತೆ ಕಳೆದ ಒಂದು ವಾರದಿಂದ ಕೇಳುತ್ತಾ ಇದೆ. “ಡಬ್ಬಿಂಗ್ ನಿಷೇಧ ತೆರವುಗೊಳಿಸಿ” ಎಂಬ ಕೂಗನ್ನು ನಮ್ಮ ಮುದ್ರಣ ಮಾಧ್ಯಮ ಹಾಗೂ ಟೆಲಿವಿಷನ್ ಸುದ್ದಿ ವಾಹಿನಿಗಳು ನಿರಂತರವಾಗಿ ಜೀವಂತವಾಗಿರಿಸುವ ಪ್ರಯತ್ನದಲ್ಲಿ ಕನ್ನಡಿಗರ ಮುಂದೆ ಚರ್ಚೆ ಎಂಬ ಹೆಸರಲ್ಲಿ ಜಗಳಗಳನ್ನು ಇಡುತ್ತಾ ಇವೆ. ಈ ಹಂತದಲ್ಲಿ ಅದಾಗಲೇ ಅನೇಕ ಬಾರಿ ಆಡಿರುವ ಮಾತುಗಳನ್ನು ಮತ್ತೊಮ್ಮೆ ನಿಮ್ಮೊಡನೆ ಹಂಚಿಕೊಳ್ಳುತ್ತಾ ಇದ್ದೇನೆ. ಇಲ್ಲಿ ಇರುವುದು ಕೇವಲ ನನ್ನ ಅಭಿಪ್ರಾಯ ಮಾತ್ರ ಎಂದು ಸ್ಪಷ್ಟಪಡಿಸಿ ಮುಂದುವರೆಯುತ್ತೇನೆ.

ಡಬ್ಬಿಂಗ್ ಎಂದರೇನು?

ಇದು ದೃಶ್ಯಮಾಧ್ಯಮದಲ್ಲಿ ಮಾತ್ರ ಇರುವಂತಹ ಸಾಧನ. ಯಾವುದೇ ನಟನ ತುಟಿ ಚಲನೆಗೆ ತಕ್ಕಂತೆ ಮಾತು ಕೂಡಿಸುವುದು ಈ ತಂತ್ರಜ್ಞಾನದ ಕೆಲಸ. ಇಲ್ಲಿ ಕಲಾವಿದ ತಾನು ಚಿತ್ರೀಕರಣದ ಸಮಯದಲ್ಲಿ ಆಡಿದ ಮಾತನ್ನು ಸ್ಟುಡಿಯೋ ಒಂದರಲ್ಲಿ ಮತ್ತೆ ತನ್ನ ತುಟಿ ಚಲನೆಗೆ ತಕ್ಕಂತೆ ಮಾತಾಡಿರುತ್ತಾನೆ. ಈ ಕೆಲಸವನ್ನು ಡಬ್ಬಿಂಗ್ ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ನಮ್ಮಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಲ್ಲೂ ಹೀಗೆ ಮಾತಿನ ಮರುಜೋಡಣೆಯ/ ಡಬ್ಬಿಂಗ್ ಕೆಲಸ ಆಗಿಯೇ ಇರುತ್ತದೆ.

ಆದರೆ ಈಗ ಪ್ರಶ್ನೆ ಇರುವುದು ಇಂತಹ ಚಿತ್ರಗಳ ಕುರಿತಲ್ಲ. ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ತೋರಿಸಿ ಎಂದು ಹಲವರು ಕೇಳುತ್ತಾ ಇದ್ದಾರೆ. ಅವರಲ್ಲಿ ಕೆಲವರು ನ್ಯಾಯಾಲಯದ ಬಾಗಿಲನ್ನೂ ತಟ್ಟಿದ್ದಾರೆ. ನಮಗೆ ಇಂತಹದು ಬೇಕು ಎಂದು ಕೇಳುವ ಹಕ್ಕು ಎಲ್ಲರಿಗೂ ಇದೆ. ಹಾಗೆಯೇ ಇಂತಹದೊಂದು ಅನುಕೂಲದ ಮೂಲಕ ಪರಭಾಷೆಯ ಚಿತ್ರಗಳನ್ನು ನೋಡಬೇಕೆಂದು ಕೆಲವರು ಬಯಸುತ್ತಾ ಇರುವುದು ಮೇಲ್ನೋಟಕ್ಕೆ ತಪ್ಪು ಎನಿಸುವುದಿಲ್ಲ. ಅದು ಅವರ ಹಕ್ಕು. ಅದನ್ನೇ ಅವರು ಕೇಳುತ್ತಾ ಇದ್ದಾರೆ.

ಆದರೆ ನಮ್ಮ ನಾಡಿನಲ್ಲಿ ಪರಭಾಷೆಯ ಚಿತ್ರಗಳನ್ನು ಕನ್ನಡ ಭಾಷೆಗೆ ಡಬ್ ಮಾಡಿ ಸಿನಿಮಾ ಬಿಡುಗಡೆ ಮಾಡುವ ಸಂಪ್ರದಾಯ ಅಥವಾ ಕಟ್ಟುಪಾಡು ಕಳೆದ ಐದು ದಶಕಗಳಿಂದ ಇಲ್ಲ. ಇದಕ್ಕೆ 1960ರ ದಶಕದಲ್ಲಿ ಅ.ನ.ಕೃಷ್ಣರಾಯರ ನಾಯಕತ್ವದಲ್ಲಿ ಡಾ.ರಾಜ್‍ಕುಮಾರ್ ಸೇರಿದಂತೆ ಅನೇಕ ಕನ್ನಡ ಪರ ಹೋರಾಟಗಾರರು ಮಾಡಿದ ಚಳುವಳಿ ಕಾರಣವಾಗಿತ್ತು. ಕನ್ನಡಿಗರ ಹೋರಾಟದಿಂದ ಪರಭಾಷಾ ಚಿತ್ರಗಳು ಕನ್ನಡದ ಮಾತು ಜೋಡಿಸಿಕೊಂಡು ಬಿಡುಗಡೆ ಆಗುವ ಸಂಪ್ರದಾಯಕ್ಕೆ ತೆರೆ ಬಿದ್ದಿತ್ತು. ಈ ಐವತ್ತು ವರ್ಷಗಳ ಹಿಂದಿನ ಸಂಪ್ರದಾಯವನ್ನು ಈಗ ಕೆಲವರು ವಿರೋಧಿಸಿ ಮಾತಾಡುತ್ತಾ ಇದ್ದಾರೆ. ಆ ಕಾಲದ ಅಗತ್ಯಗಳಿಗಾಗಿ ಅಂದು ಚಳುವಳಿ ಆಗಿದೆ. ಈ ಕಾಲದ ನಮ್ಮ ಅಗತ್ಯಗಳು ಬೇರೆಯೇ ಇದೆ. ಹಾಗಾಗಿ ಕನ್ನಡಿಗರೇ ರೂಪಿಸಿಕೊಂಡಿದ್ದ ಕಟ್ಟುಪಾಡು ಒಂದನ್ನು ಮುರಿದು ಪರಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗಲಿ ಎಂದು ನನ್ನ ಗೆಳೆಯರೇ ಹಲವರು ಬೇಡುತ್ತಾ ಇದ್ದಾರೆ. ಹೀಗೆ ಬೇಡುವಾಗ ಕನ್ನಡದಲ್ಲಿ ಇರುವ ಡಬ್ಬಿಂಗ್ ನಿಷೇಧವನ್ನು ತೆರವುಗೊಳಿಸಿ ಎನ್ನುತ್ತಾ ಚಿತ್ರರಂಗದಲ್ಲಿ ದುಡಿಯುತ್ತಾ ಇರುವವರ ಮೇಲೆ ಹರಿ ಹಾಯುತ್ತಾ ಇದ್ದಾರೆ.

ಡಬ್ಬಿಂಗ್ ನಿಷೇಧ ಎಂದು ಎಲ್ಲಿಯೂ ಯಾರೂ ಹೇಳಿಲ್ಲ ಅದೊಂದು ಸಾಮಾಜಿಕ ಕಟ್ಟುಪಾಡು

ಮೊದಲಿಗೆ ನಿಷೇಧ ಆಗಿರುವುದೇನು ಎಂದು ಪರಿಶೀಲಿಸಿದರೆ ಕನ್ನಡ ಚಿತ್ರರಂಗ ಎಂಬುದು ಯಾವುದೋ ಕಾನೂನು ರೂಪಿಸಿ ಯಾವುದೇ ಡಬ್ಬಿಂಗ್‍ಗೆ ನಿಷೇಧ ಮಾಡಿಲ್ಲ ಎಂಬುದು ಇತಿಹಾಸದಿಂದಲೇ ತಿಳಿಯುತ್ತಾ ಇದೆ. ಕನ್ನಡ ಹೋರಾಟಗಾರರು ಚಿತ್ರ ಪ್ರದರ್ಶಕರ ಜೊತೆಗೆ ಮಾತಾಡಿ ರೂಪಿಸಿದ ಒಂದು ವ್ಯವಸ್ಥೆಯಾಗಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಾ ಇದೆ. ಹೀಗಾಗಿ ಯಾರು ಈ ನಿಷೇಧವನ್ನು ತೆರವುಗೊಳಿಸಬೇಕು ಎಂಬುದು ಉತ್ತರಿಸಲಾಗದ ಪ್ರಶ್ನೆ. ಇನ್ನು ನ್ಯಾಯಾಲಯವಾದರೂ ಇಂತಹದೊಂದು ನಿಷೇಧವನ್ನು ತೆರವುಗೊಳಿಸಬೇಕು ಎಂದರೆ ಯಾರನ್ನು ಕೇಳಬೇಕು? ಯಾರು ತೆರವುಗೊಳಿಸಬೇಕು ಎಂಬುದು ಯಕ್ಷ ಪ್ರಶ್ನೆ. ಹಿರಿಯರು ಮಾಡಿದ ಸಂಪ್ರದಾಯವನ್ನು ನಂತರದ ತಲೆಮಾರುಗಳು ಪಾಲಿಸಿಕೊಂಡು ಬರುತ್ತಾ ಇರುವುದು ಮಾತ್ರ ಅನೂಚಾನವಾಗಿ ಈ ವರೆಗೆ ನಡೆದುಕೊಂಡು ಬಂದಿದೆ.

ಇನ್ನು 1960ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅ.ನ.ಕೃ ಅವರು ಮಾಡಿದ ಭಾಷಣದಲ್ಲಿ ಕನ್ನಡಕ್ಕೆ ಡಬ್ಬಿಂಗ್ ಮಾರಕ ಎಂಬ ಮಾತುಗಳು ಮೊದಲು ಕೇಳಿಸುತ್ತದೆ. ನಂತರ ಅದು ಕನ್ನಡ ಚಳುವಳಿಯಾಗಿ ಡಬ್ಬಿಂಗ್ ನಿಲ್ಲುತ್ತದೆ. ನಂತರ ಜಿ.ವೆಂಕಟಸುಬ್ಬಯ್ಯನವರು ಅಧ್ಯಕ್ಷರಾಗಿದ್ದ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡು ಏಳು ನಿರ್ಣಯಗಳಲ್ಲಿ “ಕನ್ನಡಕ್ಕೆ ಪರಭಾಷೆಯ ಚಿತ್ರಗಳು ಡಬ್ಬಿಂಗ್ ಆಗಬಾರದು” ಎಂಬುದು ಸಹ ಒಂದು ನಿಲುವಾಗಿದೆ. ನಂತರ ಕೋ.ಚೆನ್ನಬಸಪ್ಪನವರು ಅಧ್ಯಕ್ಷರಾಗಿದ್ದು ಬಿಜಾಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗುವುದನ್ನು ನಿಷೇಧಿಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ. ಹೀಗೆ ಕನ್ನಡ ಸಂಘಟನೆಗಳನ್ನು ಹೊರತು ಪಡಿಸಿ ಇನ್ಯಾವುದೇ ಸಿನಿಮಾ ಸಂಬಂಧಿ ಕೆಲಸ ಮಾಡುವ ಸಂಘಟನೆ ಈ ಪರಭಾಷೆಯ ಚಿತ್ರಗಳಿಗೆ ಕನ್ನಡವನ್ನು ಜೋಡಿಸುವ ಪ್ರಕ್ರಿಯೆಯನ್ನು ಎಲ್ಲಿಯೂ ನಿಷೇಧಿಸಿಲ್ಲ… ಈಗ ಈ ನಿಷೇಧವನ್ನು ತೆರವುಗೊಳಿಸಬೇಕಾದವರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಈಗಾದರೂ ಸಿಸಿಐ ಸಂಸ್ಥೆಯು ತನ್ನ ತನಿಖಾ ವರದಿಯನ್ನು ನೀಡಿದೆ. ಅಲ್ಲಿಂದಾಚೆಗೆ ವಾದ – ಪ್ರತಿವಾದ ಆಗಿ ನಂತರ ತೀರ್ಪು ಬರುವುದು ಬಾಕಿ ಇದೆ. ಇದಾಗುವುದಕ್ಕೆ ಇನ್ನೂ ಸಮಯವಿದೆ. ಕಾನೂನಿನ ಕಣ್ಣು ಈ ನಾಡಿನ ವಿವರಗಳನ್ನು ಹೇಗೆ ಅರ್ಥೈಸಬಹುದು ಎಂಬುದು ಈಗಲೇ ಊಹಿಸಲಾಗದು. ಮಡೆ ಸ್ನಾನದ ವಿರುದ್ಧ ಕೋರ್ಟಿಗೆ ಹೋದವರಿಗೆ ಸ್ಟೇಟಸ್ ಕೋ ಮುಂದುವರೆಸಿ ಎಂದಂತೆ ಇಲ್ಲೂ ಹೇಳಬಹುದು ಅಥವಾ ಗ್ರಾಹಕರ ಬಯಕೆ ಈಡೇರಲೂ ಬಹುದು. ಅದು ನಾಳೆಯ ವಿಷಯ. ಈಗ ಈ ಡಬ್ಬಿಂಗ್ ಎನ್ನುವುದು ಯಾಕೆ ಬೇಡ ಎಂಬುದಕ್ಕೆ ನನ್ನ ಅಭಿಪ್ರಾಯಗಳನ್ನು ಬಿಚ್ಚಿಡುತ್ತೇನೆ.

ಡಬ್ಬಿಂಗ್ ಎಂಬುದು ಅಪೂರ್ಣ ಕೃತಿರಚನೆ

ನಟನೆ ಎಂಬುದಕ್ಕೆ ನಾಲ್ಕು ಅಂಗಗಳಿವೆ. ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ ಎಂದು ಆ ನಾಲ್ಕು ಅಂಗಗಳನ್ನು ಗುರುತಿಸಲಾಗಿದೆ. ಆದರೆ ಡಬ್ಬಿಂಗ್ ಎಂಬುದರಲ್ಲಿ ಯಾರದೋ ಆಂಗಿಕಕ್ಕೆ ಇನ್ಯಾರದೋ ವಾಚಿಕ ಸೇರಿಕೊಳ್ಳುತ್ತದೆ. ರಜನೀಕಾಂತ್ ಅಭಿನಯಕ್ಕೆ ಕನ್ನಡದ ಶ್ರೇಷ್ಟ ಕಲಾವಿದನೇ ಮಾತಿನ ಮರುಜೋಡಣೆಯನ್ನು ಕನ್ನಡಕ್ಕಾಗಿ ಮಾಡಿದರೂ ಅದು ರಜನೀಕಾಂತ್ ಅವರ ನಟನೆಗೆ ಹೊಂದುವುದಿಲ್ಲ ಎಂಬುದು ಇಲ್ಲಿನ ಮುಖ್ಯ ಅಂಶ. ಹೀಗಾಗಿ ಡಬ್ಬಿಂಗ್ ಎಂಬುದು ಕೃತಕ, ಕೃತ್ರಿಮ, ಫೇಕ್. ಇಂತಹ ಕೃತ್ರಿಮ ಮತ್ತು ಅಪೂರ್ಣ ಕೃತಿಯನ್ನು ಯಾರಿಗಾದರೂ ಉಣಬಡಿಸುವುದು ಮೂಲ ಕಲಾವಿದನಿಗೆ ಮಾಡುವ ಅಪಚಾರ. ಈ ಕಾರಣಕ್ಕಾಗಿ ಡಬ್ಬಿಂಗ್ ಎನ್ನುವುದನ್ನು ಯಾವುದೇ ಭಾಷೆಯ ಸಿನಿಮಾದಿಂದ ಇನ್ಯಾವುದೇ ಭಾಷೆಯ ಸಿನಿಮಾಕ್ಕೆ ಮಾಡುವುದನ್ನು ನಾನು ವಿರೋಧಿಸುತ್ತೇನೆ.

ಡಬ್ಬಿಂಗ್ ಅನುವಾದ ಅಲ್ಲ

ಡಬ್ಬಿಂಗ್ ಅನ್ನು ಅನುವಾದ ಪ್ರಕ್ರಿಯೆ ಎಂದು ಅನೇಕರು ಹೇಳಿ ನಮ್ಮನ್ನು ನಂಬಿಸುತ್ತಾರೆ. ಆದರೆ ಅದು ಖಂಡಿತಾ ಅನುವಾದವಲ್ಲ. ಅದು ಕೇವಲ ಯಾರದೋ ತುಟಿ ಚಲನೆಗೆ ಯಾರೋ ಮಾತು ಸೇರಿಸುವ ತಂತ್ರ ಚಮತ್ಕಾರ ಮಾತ್ರ. ಈ ಡಬ್ಬಿಂಗ್ ಎಂಬುದು ಕನ್ನಡಕ್ಕೆ ಬಂದಾಗ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಮ್ಮೆದುರು ಅದಾಗಲೇ ಡಬ್ಬಿಂಗ್ ಆಗಿಯೇ ಬರುತ್ತಾ ಇರುವ ಜಾಹೀರಾತುಗಳಿವೆ. ಅವುಗಳನ್ನು ನೋಡಿ ಭಾಷೆ ಬಲ್ಲವರು ನಗಬಹುದು, ಬೈದುಕೊಳ್ಳಬಹುದು. ಆದರೆ ಅದು ಕೇವಲ ಜಾಹೀರಾತು ಎಂದು ಸುಮ್ಮನಾಗಬಹುದು. ಆದರೆ ಅದೇ ರೀತಿಯ ತುಟಿ ಚಲನೆಗೆ ಮಾತು ಜೋಡಿಸುವ ಚಮತ್ಕಾರವು ಕಥನ ಚಿತ್ರಕ್ಕೆ ಬಂದಾಗ ಕತೆಗಾಗಿ ಸಿನಿಮಾ ನೋಡುವವರಿಗೆ ಖಂಡಿತಾ ಪೂರ್ಣತೆಯ ಭಾವ ದೊರೆಯುವುದಿಲ್ಲ. ಹೀಗಾಗಿಯೇ ಜಪಾನಿನ ಶ್ರೇಷ್ಟ ನಿರ್ದೇಶಕ ಅಕಿರಾ ಕುರಾಸಾವ ತನ್ನ ಚಿತ್ರಗಳನ್ನು ಯಾವುದೇ ಕಾರಣಕ್ಕೂ ಡಬ್ ಮಾಡಿ ನೋಡಬೇಡಿ, ಬದಲಿಗೆ ಸಬ್‍ಟೈಟಲ್ ಮೂಲಕ ನೋಡಿ ಎಂದು ಅಮೇರಿಕಾದಲ್ಲಿ ಪ್ರಶಸ್ತಿಯೊಂದನ್ನು ಸ್ವೀಕರಿಸುತ್ತಾ ಮಾತಾಡುತ್ತಾನೆ. ದಕ್ಷಿಣ ಭಾರತದ ಖ್ಯಾತ ನಟರಾಗಿದ್ದ ಎಸ್‍.ವಿ.ರಂಗಾರಾವ್ ಅವರಂತೂ ನನ್ನ ನಟನೆಯ ಚಿತ್ರಗಳನ್ನು ನಿರ್ಮಾಪಕರು ಬೇರೆಯ ಭಾಷೆಗೆ ಡಬ್ ಮಾಡುವುದಾದರೆ ನಾನು ಅಂತಹ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಮಾಯಾಬಜಾರ್ ಚಿತ್ರದ ಕನ್ನಡಕ್ಕೆ ಡಬ್ ಆದ ಚಿತ್ರವನ್ನು ನೋಡಿ ಹೇಳಿಕೆ ನೀಡುತ್ತಾರೆ. ಇದೇ ರೀತಿಯ ಮಾತನ್ನು ಖ್ಯಾತ ನಟಿ ಸಾವಿತ್ರಿಯವರು ಸಹ ಆಡುತ್ತಾರೆ.

ಈ ಎಲ್ಲಾ ನಟರು, ಕಲಾವಿದರು ಈ ಮಾತನ್ನು ಆಡುವುದಕ್ಕೆ ಇರುವ ಕಾರಣವಿಷ್ಟೆ. ಯಾವುದೇ ಒಂದು ಭಾಷೆಯನ್ನು ಬಳಸಿ ಅಭಿನಯಿಸುವಾಗ ಆಯಾ ಕಲಾವಿದ ತನ್ನದೇ ಆದ ಪ್ರತಿಭೆಯನ್ನು ಬಳಸಿ ಆ ಪಾತ್ರವನ್ನು ಕಟ್ಟಿರುತ್ತಾನೆ. ಅದಕ್ಕೆ ಮತ್ತೊಂದು ಭಾಷೆಯನ್ನು ಆರೋಪಿಸುವಾಗ ತುಟಿ ಚಲನೆಯ ಅವಧಿಗೆ ಮಾತನ್ನು ಕೂರಿಸುತ್ತಾರೆ. ಅನುವಾದವಾಗಿ ಮಾತನ್ನು ಜೋಡಿಸುವುದಿಲ್ಲ. ಉದಾಹರಣೆಗೆ ನೋಡಿ. ಜೂಹಿ ಚಾವ್ಲಾ ಅಭಿನಯದ ಕುರ್‍ಕುರೆ ಎಂಬ ಜಾಹೀರಾತು. ಮೂಲದಲ್ಲಿ ಇರುವ ವಾಕ್ಯ “ತೋಡಾ ತೇಡಾಸ ಹೇ ಮಗರ್ ಮೇರಾ ಹೇ” ಅದನ್ನು ಕನ್ನಡಕ್ಕೆ ಡಬ್ ಮಾಡುವವರು “ಸ್ವಲ್ಪ ತಿರುಚ್ಚಾಗಿದೆ. ಆದರೆ ಚೆನ್ನಾಗಿದೆ” ಎಂದು ಡಬ್ ಮಾಡಿದ್ದಾರೆ. ಇಲ್ಲಿ ಮೂಲ ವಾಕ್ಯದ ಅನುವಾದ ಆಗಿಲ್ಲ ಬದಲಿಗೆ ಮೂಲ ವಾಕ್ಯದ ಅವಧಿಗೆ ಕನ್ನಡದ್ದು ಎನಿಸುವ ಮಾತನ್ನು ಕೂಡಿಸಲಾಗಿದೆ. ಇಂತಹ ಹಲವು ಉದಾಹರಣೆಗಳನ್ನು ಈ ಲೇಖನದ ಓದುಗರೂ ನೋಡಿರುತ್ತಾರೆ. ಅನುವಾದ ಎಂಬುದು ಬೇರೆಯ ಭಾಷೆಯಿಂದ ಕನ್ನಡಕ್ಕೆ ಕತೆಗಳನ್ನು ತಂದ ಹಾಗೆ. ಅಲ್ಲಿ ಮೂಲಕೃತಿಯ ಸಂಸ್ಕೃತಿಯನ್ನು ಹೂರಣವನ್ನು ಕನ್ನಡದ ಸಂಸ್ಕೃತಿಯ ಜೊತೆಗೆ ಅನುಸಂಧಾನ ಮಾಡಿ ಮೂಲ ಕೃತಿಕಾರನ ಸೃಜನಶೀಲ ಶಕ್ತಿಯನ್ನು ಮತ್ತೊಂದು ಭಾಷೆಗೆ ಉಣಬಡಿಸಲಾಗುತ್ತದೆ. ಚಿತ್ರವೊಂದು ಅನುವಾದ ಆಗಬೇಕೆಂದರೆ ಆ ಅರ್ಥದಲ್ಲಿ ಪುನರವತರಣಿಕೆ ಆಗಬೇಕು. ಮೂಲ ಚಿತ್ರದ ಆಶಯವನ್ನು ಹಿಡಿದು ಕನ್ನಡಿಗರಿಗಾಗಿ ಪುನರ್ ನಿರ್ಮಿತಿ ಆಗಬೇಕು. ಮಲೆಯಾಳಂನ ಮಣಿಚಿತ್ರತ್ತಾಳ್ ತರಹದ ಸಿನಿಮಾ ಕನ್ನಡದಲ್ಲಿ ಆಪ್ತಮಿತ್ರ ಆದಾಗಲೇ ಹೆಚ್ಚು ಜನ ಅದನ್ನು ನೋಡಿ ಆನಂದಿಸಿದರು. ಇದು ಸಿನಿಮಾದಲ್ಲಿ ಅನುವಾದ ಪ್ರಕ್ರಿಯೆ ಆಗುವ ಕ್ರಮ. ಅಕಸ್ಮಾತ್ ಮೂಲ ಮಲೆಯಾಳ ಚಿತ್ರ ಮಣಿಚಿತ್ರತ್ತಾಳ್‍ಗೆ ನಮ್ಮವರೇ ಆದ ವಿಷ್ಣುವರ್ಧನ್ ಅವರು ಕನ್ನಡದ ಧ್ವನಿ ನೀಡಿದ್ದರೂ ನಮಗೆ ಅಂತಹ ಚಿತ್ರದಿಂದ ಆಪ್ತಮಿತ್ರ ಸಿನಿಮಾದಲ್ಲಿ ಸಿಕ್ಕ ಸಂತೃಪ್ತಿ, ಪೂರ್ಣತೆ ಸಿಗುತ್ತಾ ಇರಲಿಲ್ಲ. ಹೀಗಾಗಿ ಅನುವಾದ ಪ್ರಕ್ರಿಯೆ ಅಲ್ಲದ ಹಾಗೂ ಅಪೂರ್ಣ ತರ್ಜುಮೆಯ ಗುಣಗಳನ್ನು ಹೊಂದಿದ ಡಬ್ಬಿಂಗ್ ಎನ್ನುವುದು ಮೂಲಕೃತಿಕಾರನಿಗೆ ಮಾಡಿದ ಅಪಚಾರವೇ ಆಗುತ್ತದೆ.

ಕೃತಿಕಾರನ ಆಯ್ಕೆಯೇ ಅಂತಿಮವಾಗಬೇಕು

ಮತ್ತೊಂದು ಮುಖ್ಯ ವಿಷಯವೆಂದರೆ, ಯಾವುದೇ ಚಿತ್ರತಯಾರಕ ತಾನು ಕತೆಯೊಂದನ್ನು ಆಯ್ಕೆ ಮಾಡಿಕೊಂಡಾಗಲೇ ಅದನ್ನು ಯಾವ ಭಾಷೆಯಲ್ಲಿ ಹೇಳಬೇಕೆಂದು ಸಹ ನಿರ್ಧರಿಸಿರುತ್ತಾನೆ. ಮತ್ತು ತಾನು ಆಯ್ದುಕೊಂಡ ಭಾಷೆಯಲ್ಲಿಯೇ ಚಿತ್ರ ನಿರ್ಮಿಸುತ್ತಾನೆ. ಅಂತಹ ಒಂದು ಕೃತಿಯನ್ನು ಮತ್ತೊಂದು ಭಾಷೆಯ ಕೃತಕ ಪೋಷಾಕು ತೊಡಿಸಿ ಸಿದ್ಧಪಡಿಸುವುದು ಮೂಲಕೃತಿಕಾರನ ಆಯ್ಕೆಯ ಹಕ್ಕನ್ನು ಉಲ್ಲಂಘಿಸಿದಹಾಗೆಯೇ. ಹೀಗಾಗಿಯೇ ಯಾವುದೇ ಭಾಷೆಯಲ್ಲಿ ತಯಾರಾದ ಕೃತಿ ಮತ್ಯಾವುದೇ ಪ್ರಾದೇಶಿಕ ಭಾಷೆಗೆ ಡಬ್ಬಿಂಗ್ ಮೂಲಕ ಸಿದ್ಧವಾಗುವುದು ಸೃಜನಶೀಲತೆಯ ಮೇಲೆ ಮಾಡಿದ ದುರಾಕ್ರಮಣವೇ ಆಗಿರುತ್ತದೆ. ಕೃತಿಕಾರನ ಆಯ್ಕೆಯನ್ನು ಗ್ರಾಹಕನ ಕಾರಣಗಳಿಗಾಗಿ ಬದಲಿಸುವುದು ಬೇಲೂರಿನಲ್ಲಿ ಜಕಣಾಚಾರಿ ಕೆತ್ತಿಟ್ಟ ಕಲಾಕೃತಿಗೆ ಆಧುನಿಕ ಕಂಪೆನಿಗಳ ಪೈಂಟ್ ಹಚ್ಚಿದ ಹಾಗೆ. ಇಂತಹುದನ್ನ ಈ ನಾಡಿಗರು ಖಂಡಿತಾ ಒಪ್ಪಬಾರದು.

ಜ್ಞಾನವಾಹಿನಿಗೆ ಯಾರೂ ಬೇಡ ಅನ್ನುವುದಿಲ್ಲ

ಆದರೆ ಈ ಡಬ್ಬಿಂಗ್ ಬೇಕು ಎಂದು ಕೇಳುತ್ತಾ ಇರುವವರಲ್ಲಿ ಅನೇಕರು ನನ್ನ ಆತ್ಮೀಯ ಗೆಳೆಯರು. ಅವರ ಬಗ್ಗೆ ನನಗೆ ಅತೀವ ಪ್ರೀತಿ ಹಾಗೂ ಗೌರವಗಳಿದೆ. ಅವರೆಲ್ಲರ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ. ಅವರು ಕೇಳುತ್ತಾ ಇದ್ದಾರೆ. ಜಗತ್ತಿನಲ್ಲಿ ಎಲ್ಲಿಯೂ ಈ ಡಬ್ಬಿಂಗ್ ಎಂಬ ಕೃತ್ರಿಮವನ್ನು ಯಾರೂ ತಡೆದಿಲ್ಲ, ನಮ್ಮ ನಾಡಿನಲ್ಲಿ ಮಾತ್ರ ಯಾಕೆ ಈ ಕಟ್ಟುಪಾಡು ಎನ್ನುತ್ತಾ ಇದ್ದಾರೆ. ನಾವು ಗ್ರಾಹಕರು. ನಮಗೆ ಬೇಕಾದ್ದನ್ನು ನೋಡ್ತೇವೆ. ಚೆನ್ನಾಗಿದ್ದರೆ ಚಪ್ಪಾಳೆ, ಇಲ್ಲವೆಂದರೆ ಇಲ್ಲ ಎನ್ನುತ್ತಾ ಇದ್ದಾರೆ. ಜೊತೆಗೆ ಜ್ಞಾನವಾಹಿನಿಗಳನ್ನು ನಮ್ಮಿಂದ ತಪ್ಪಿಸುತ್ತಾ ಇದ್ದೀರಿ ಎನ್ನುತ್ತಾ ಇದ್ದಾರೆ. ಈ ಎಲ್ಲಾ ಮಾತುಗಳೂ ಒಪ್ಪತಕ್ಕ ಮಾತುಗಳೇ. ಈ ಮಾತುಗಳಲ್ಲಿ ಜ್ಞಾನವಾಹಿನಿಗಳು ಎಂದು ನನ್ನ ಗೆಳೆಯರು ಗುರುತಿಸುತ್ತಾ ಇರುವ ಡಿಸ್ಕವರಿ, ನ್ಯಾಟ್‍ಜಿಯೋ ಮುಂತಾದ ವಾಹಿನಿಗಳ ಸಾಕ್ಷ್ಯಚಿತ್ರಗಳನ್ನು ಕನ್ನಡಕ್ಕೆ ತರುವುದಕ್ಕೆ ಖಂಡಿತಾ ಯಾವುದೇ ಅಡ್ಡಿಯನ್ನು ಯಾರೂ ಮಾಡಿಲ್ಲ. ಅಂತಹ ಅನೇಕ ಕಾರ್ಯಕ್ರಮಗಳು ನಮ್ಮಲ್ಲಿ ಬರುತ್ತಾ ಇವೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅನೇಕ ಸಾಕ್ಷ್ಯಚಿತ್ರಗಳನ್ನು ಈಗಲೂ ದೂರದರ್ಶನವೇ ಪ್ರಸಾರ ಮಾಡುತ್ತಾ ಇದೆ. ಇನ್ನೂ ದಿನದ ಇಪ್ಪತ್ನಾಕು ಗಂಟೆಯೂ ಕಾರ್ಟೂನ್ ಚಿತ್ರಗಳನ್ನೇ ಪ್ರಸಾರ ಮಾಡುವ ಚಿಂಟೂ ಟಿವಿ ಎಂಬ ವಾಹಿನಿಯೂ ನಮ್ಮಲ್ಲಿದೆ. ಅದಾಗಲೇ ಪ್ರಸಾರ ಕಾಣುತ್ತಾ ಇರುವುದನ್ನೇ ಈ ನನ್ನ ಗೆಳೆಯರು ಮತ್ತೊಂದು ಬ್ರಾಂಡ್‍ನೇಮ್‍ನ ಹೆಸರಲ್ಲಿ ಕೇಳುತ್ತಾ ಇದ್ದಾರೇನೋ? ಆ ಬ್ರಾಂಡ್‍ ಸೃಷ್ಟಿಕರ್ತರೇ ನನ್ನ ಗೆಳೆಯರ ಬಯಕೆ ತೀರಿಸುವ ಕೆಲಸ ಮಾಡಬೇಕಷ್ಟೆ. ಆದರೆ ಆ ವಾಹಿನಿಯವರು ತಾವು ಕನ್ನಡದಲ್ಲಿ ತಮ್ಮ ವಾಹಿನಿಯನ್ನು ತರದೆ ಇರುವುದಕ್ಕೆ ಕನ್ನಡದಲ್ಲಿ ಡಬ್ಬಿಂಗ್‍ ನಿಷೇಧವಿದೆ ಎಂಬ ಕಾರಣ ಕೊಟ್ಟು ಉತ್ತರ ಬರೆಯುತ್ತಾರೆ. ನನ್ನ ಗೆಳೆಯರು ಮತ್ತಷ್ಟು ಕುಪಿತರಾಗುತ್ತಾರೆ. ವಾಸ್ತವವಾಗಿ ಆ ವಾಹಿನಿಯವರು ಹೇಳಿರುವುದು ಸುಳ್ಳು ಎಂದು ಹೇಳಿದರೂ ಇವರಿಗೆ ಚಿತ್ರರಂಗದ ಸಂಘಟನೆಗಳು ಇದನ್ನು ತಡೆದಿವೆ ಎಂಬ ಸಿಟ್ಟು. ವಾಸ್ತವವಾಗಿ ಚಿತ್ರರಂಗದ ಯಾವುದೇ ಸಂಘಟನೆ ಆ ವಾಹಿನಿಗಳಿಗೆ ಕನ್ನಡಕ್ಕೆ ಬರಬೇಡಿ ಎಂದು ಹೇಳಿಯೂ ಇಲ್ಲ.

ಈ ಪ್ರಶ್ನೆಯಲ್ಲದೆ ನನ್ನ ಗೆಳೆಯರು ತಮ್ಮನ್ನು ತಾವು ಗ್ರಾಹಕರು ಎಂದು ಕರೆದುಕೊಂಡು ಅವತಾರ್, ಟೈಟಾನಿಕ್, ದಬಾಂಗ್‍, ಇಂದಿರನ್‍ ತರಹದ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಮಾಡಿ ನೋಡಬೇಕು ಎನ್ನುತ್ತಾ ಇದ್ದಾರೆ. ಇದು ಅದಾಗಲೇ ನಾನು ತಿಳಿಸಿದಂತೆ ಅಪೂರ್ಣ ಮತ್ತು ಕೃತ್ರಿಮ ಕೃತಿಯನ್ನು ಬೇಡುವ ಪರಿಸ್ಥಿತಿ. ಈ ಸಂಬಂಧ ಯಾವುದೇ ಭಾಷೆಯಿಂದ ಮತ್ಯಾವುದೇ ಭಾಷೆಗೆ ಯಾವುದೇ ಸಿನಿಮಾ ಡಬ್ ಆಗುವುದನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ಅದಕ್ಕೆ ಕಾರಣಗಳನ್ನು ಈ ಹಿಂದೆಯೇ ನೀಡಿದ್ದೇನೆ.

ಹತಾಶ ನಿರ್ಮಾಪಕರ ಕೂಗು

ಈ ನನ್ನ ಗೆಳೆಯರಲ್ಲದೆ ಕೆಲವು ಚಿತ್ರ ನಿರ್ಮಾಪಕರು ಸಹ ಡಬ್ಬಿಂಗ್ ಬರಬೇಕು ಎನ್ನುತ್ತಾ ಇದ್ದಾರೆ. ಇದಕ್ಕೆ ಅವರು ಕೊಡುತ್ತಾ ಇರುವ ಕಾರಣ ಯಾವುದೋ ನಟ ಅವರಿಗೆ ದಿನಾಂಕ ನೀಡಿಲ್ಲ ಅಥವಾ ಆತನ ಸಂಬಳ ಕೈಗೆಟುಕುತ್ತಾ ಇಲ್ಲ ಎಂದು ಅವರೇ ಹೇಳುತ್ತಾ ಇದ್ದಾರೆ. ಯಾರದೋ ದಿನಾಂಕ ಸಿಗಲಿಲ್ಲ, ಹಣ ಜಾಸ್ತಿ ಎಂದರೆ ಮತ್ತೊಬ್ಬ ಅಂತಹ ನಟನನ್ನು ಸೃಷ್ಟಿಸಬಹುದಾದ ಶಕ್ತಿ ಇರುವ ನಿರ್ಮಾಪಕರೇ ಹೀಗೆ ಹತಾಶೆಯಿಂದ ಮಾತಾಡುವುದು ಹಾಸ್ಯಾಸ್ಪದವಾಗಿ ಕಾಣುತ್ತಾ ಇದೆ. ಹೀಗೆ ಯಾರದೋ ಡೇಟ್‍ಗಾಗಿ ಕಾದಿದ್ದರೆ ಆ ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಮಾಡಲು ಆಗುತ್ತಾ ಇರಲಿಲ್ಲ, ಪವನ್‍ಕುಮಾರ್ ಲೂಸಿಯಾ ಮಾಡಲಾಗುತ್ತಾ ಇರಲಿಲ್ಲ, ಸುನೀ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ತಯಾರಿಸಲಾಗುತ್ತಾ ಇರಲಿಲ್ಲ. ಒಳ್ಳೆಯ ಚಿತ್ರಗಳನ್ನು ನಮ್ಮ ನಾಡಿನ ಜನ ಎಲ್ಲಾ ಕಾಲದಲ್ಲಿಯೂ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲಿಸುತ್ತಾರೆ. ಹಾಗಾಗಿ ಈ ನಿರ್ಮಾಪಕರು ಹತಾಶರಾಗುವ ಬದಲಿಗೆ ಹೊಸ ಸ್ಟಾರ್‍ಗಳನ್ನು ಸೃಷ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಖಂಡಿತ ಯಶಸ್ಸು ಅವರದ್ದಾಗುತ್ತದೆ. ಸೋಲುಗಳ ಲೆಕ್ಕ ಹಿಡಿದು ನಮಗೆ ಯಶಸ್ದು ಬರಲಿಲ್ಲ ಎಂದು ಹತಾಶ ಮಾತುಗಳನ್ನಾಡುವುದನ್ನ ಮೊದಲಿಗೆ ಈ ನಿರ್ಮಾಪಕರು ಬಿಡಬೇಕಾಗಿದೆ.

ಇದೆಲ್ಲದರ ಆಚೆಗೆ ಡಬ್ಬಿಂಗ್ ಎಂಬುದನ್ನು ನಿಜವಾಗಿ ಬಯಸುತ್ತಾ ಇರುವವರು ವಾಹಿನಿಗಳನ್ನು ನಡೆಸುತ್ತಾ ಇರುವ ಬಹುರಾಷ್ಟ್ರೀಯ ಕಂಪೆನಿಗಳವರು. ಈಗ  ಆ ವಾಹಿನಿಗಳಲ್ಲಿ ಬರುತ್ತಾ ಇರುವ ಧಾರಾವಾಹಿಗಳು ಬಹುತೇಕ ಪುನರವತರಣಿಕೆಗಳು. ಅಂತಹ ಪುನರವತರಣಿಕೆಗಳನ್ನು ತಯಾರಿಸುವ ಖರ್ಚಿಗಿಂತ ಡಬ್ಬಿಂಗ್ ಮಾಡುವುದಕ್ಕೆ ತಗಲುವ ಖರ್ಚು ತೀರಾ ಕಡಿಮೆ. ಪುನರವತರಣಿಕೆ ಮಾಡಿಯೂ ಲಾಭ ಕಾಣದ ಇಂತಹ ಬಹುರಾಷ್ಟ್ರೀಯ ಕಂಪೆನಿಗಳ ಜನ ಡಬ್ಬಿಂಗ್‍ಗೆ ತೆರೆಯ ಮರೆಯಲ್ಲಿ ನಿಂತು `ಡಬ್ಬಿಂಗ್ ಸಿನಿಮಾ ಬೇಕು’ ಎಂದು ಕೂಗುತ್ತಾ ಇರುವವರ ಬೆನ್ನಿಗೆ ಇದ್ದಾರೆ. ಕೆಲವು ಬೃಹತ್ ಕಂಪೆನಿಗಳಂತೂ ಡಬ್ಬಿಂಗ್ ಸಿನಿಮಾ ಇತ್ಯಾದಿಗಳನ್ನು ಕನ್ನಾಡಿಗೆ ತಂದು ಸುರಿಯಲು ಸಾಕಷ್ಟು ಹಣವನ್ನು ತೊಡಗಿಸಿದೆ. ಹೀಗೆ ಡಬ್ ಆದ ಸಿನಿಮಾಗಳು ಖಂಡಿತವಾಗಿ ಸಿನಿಮಾಮಂದಿರದಲ್ಲಿ ಬಹುಕಾಲ ನಿಲ್ಲುವುದಿಲ್ಲ. ಆದರೆ ಅದಾಗಲೇ ನೆರೆಯ ರಾಜ್ಯಗಳಲ್ಲಿ ಆಗಿರುವಂತೆ ಟೆಲಿವಿಷನ್‍ ಮೂಲಕ ಪ್ರಸಾರವಾಗುತ್ತವೆ. ಆ ಮೂಲಕ ಕನ್ನಡದಲ್ಲಿ ಸ್ವತಂತ್ರ ಅಥವಾ ಪುನರವತರಣಿಕೆಯ ಕೃತಿಗಳನ್ನು ಮಾಡುತ್ತಾ ಇರುವವರಿಗೆ ಇದ್ದ ಅವಕಾಶಗಳನ್ನು ಕಿತ್ತುಕೊಳ್ಳುತ್ತದೆ ಅಷ್ಟೆ.

ಡಬ್ ಆದ ಸಿನಿಮಾ ಸೃಜನಶೀಲರಿಗೆ ಎಂದೂ ಸ್ಪರ್ಧೆಯಲ್ಲ

ಇಂತಹ ಸಿನಿಮಾಗಳಿಂದ ಅಥವಾ ಧಾರಾವಾಹಿಗಳಿಂದ ಸ್ಪರ್ಧೆ ಉಂಟಾಗುತ್ತದೆ ಎಂಬುದು ಶುದ್ಧ ಸುಳ್ಳು. ಇಂತಹ ಫೇಕ್ ಕೃತಿಗಳು ಜಗತ್ತಿನಾದ್ಯಂತ ಯಶಸ್ವಿಯಾಗಿಲ್ಲ. ಆದರೆ ನಮ್ಮ ಮಾರುಕಟ್ಟೆಯನ್ನು ಹಿಗ್ಗಿಸುವ ಬದಲು ನಮ್ಮ ನಾಡಿಗರನ್ನು ಅವಕಾಶ ವಂಚಿತರನ್ನಾಗಿ ಮಾಡಿ ಕೀಳರಿಮೆಯಿಂದ ನರಳುವಂತೆ ಮಾಡುತ್ತವೆ. ಅದಕ್ಕೆ ಉದಾಹರಣೆಯಾಗಿ ಹಾಲಿವುಡ್‍ನ ಡಬ್‍ ಆದ ಸಿನಿಮಾಗಳು ದಕ್ಷಿಣ ಅಮೇರಿಕಾದ ಹಲವು ದೇಶಗಳಲ್ಲಿ ಮಾಡಿದ ಅನಾಹುತವನ್ನು ನೆನೆಯಬಹುದು. ಒಂದು ಕಾಲಕ್ಕೆ ಜಗತ್ತಿನಲ್ಲಿ ಅತಿಹೆಚ್ಚು ಎನಿಸುವ ಸಿನಿಮಾಗಳನ್ನು ತಯಾರಿಸುತ್ತಾ ಇದ್ದ ಸ್ಪಾನಿಷ್ ದೇಶಗಳಾದ ಆರ್ಜೈಂಟೈನಾ, ಬ್ರೆಜಿಲ್ ಮುಂತಾದ ದೇಶಗಳು ಅಲ್ಲಿಗೆ ಹಾಲಿವುಡ್‍ ಸಿನಿಮಾಗಳು ಡಬ್ ಆಗಿ ಬರಲು ಆರಂಭವಾದೊಡನೆ ಸಂಪೂರ್ಣ ನಾಶವಾಗಿದ್ದನ್ನು ಜಾಗತಿಕ ಇತಿಹಾಸ ನೋಡಿದೆ. ಇಂತದೇ ಪ್ರಕ್ರಿಯೆ ಇಟಲಿಯಲ್ಲಿ ಆಗಿದ್ದನ್ನು ಕಂಡಿದ್ದೇವೆ. ನೆರೆಯ ಆಂದ್ರದ ಕಲಾವಿದರು ಕಳೆದ ಒಂದು ವರ್ಷದಿಂದ ಡಬ್ಬಿಂಗ್ ಸಿನಿಮಾ ಮತ್ತು ಧಾರಾವಾಹಿಗಳನ್ನು ನಿಲ್ಲಿಸಿ ಎಂದು ಮುಷ್ಕರ ನಡೆಸಿದ್ದಾರೆ. ತಮುಳಿನಾಡಿನ ಕಲಾವಿದರ ಸಂಘವೂ ಸಹ  ಈ ಡಬ್ಬಿಂಗ್ ಪ್ರಕ್ರಿಯೆ ವಿರುದ್ಧ ಹೋರಾಡುತ್ತಾ ಇದೆ. ಮಲೆಯಾಳದವರೂ ಸಹ ಈಗ ಹೋರಾಟಕ್ಕೆ ಇಳಿದಿದ್ದಾರೆ. ಹೀಗೆ ನೆರೆಯ ನಾಡಿನಲ್ಲಿ ವಿರೋಧಿ ದನಿ ಏಳುತ್ತಾ ಅನಾಹುತ ತಪ್ಪಿಸುವ ಪ್ರಯತ್ನ ಆಗುತ್ತಾ ಇರುವಾಗ ನಮ್ಮ ನಾಡಿನಲ್ಲಿ ಕೆಲವರು ಈ ಫೇಕ್ ಕೃತಿಗಳನ್ನು ಬಯಸಿ ಕೂಗೆತ್ತಿರುವುದು “ಬಿಟಿ ಬೀಜಗಳೇ ಶ್ರೇಷ್ಟ ಅದನ್ನೇ ಬೆಳೆಯಿರಿ” ಎಂದು ರೈತರನ್ನು ದಿಕ್ಕು ತಪ್ಪಿಸುತ್ತಾ, ಅನೇಕ ರೈತರ ಆತ್ಮಹತ್ಯೆಗೆ ಕಾರಣವಾಗಿರುವ ವ್ಯಾಪಾರಿಗಳ ಕೂಗಿನಂತೆಯೇ ಕೇಳುತ್ತಾ ಇದೆ.

ಈ ವಿಷಯದ ಬಗ್ಗೆ ಕಳೆದ ಒಂದು ವರ್ಷದಲ್ಲಿ ಆಡಿರುವ ಮಾತುಗಳೇ ಒಂದು ಬಂಡಿಯಷ್ಟಿದೆ. ಈಗ ಮತ್ತೆ ಒಂದಷ್ಟು ಬರೆದಿದ್ದೇನೆ. ಬರೆಯಬಹುದಾದ ಇನ್ನೂ ಅನೇಕ ವಿಷಯಗಳನ್ನು ಸ್ಥಳಾಭಾವದಿಂದ ಬಿಟ್ಟಿದ್ದೇನೆ. ಇಲ್ಲಿರುವುದು ಕೇವಲ ನನ್ನ ಅಭಿಪ್ರಾಯ ಮಾತ್ರ ಎಂದು ಮತ್ತೊಮ್ಮೆ ನೆನಪಿಸುತ್ತಾ ಉಳಿಯುತ್ತೇನೆ

– ಬಿ.ಸುರೇಶ

15 ಜನವರಿ 2014, 

ಕ್ಯಾಂಪ್: ಮುಂಬೈ

Advertisements

0 Responses to “ಜಕಣಾಚಾರಿಯ ಶಿಲ್ಪಕ್ಕೆ ಏಷಿಯನ್ ಪೇಂಟ್ ಹಚ್ಚಬಹುದೇ?”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 57,460 ಜನರು
Advertisements

%d bloggers like this: