ನಾನೊಬ್ಬ ಕ್ರೋನಿ ಕ್ಯಾಪಿಟಲಿಸ್ಟ್…!

ಹಾದಿಯಲ್ಲಿ ಸಿಕ್ಕ ಹೂವುಗಳು

(“ಸಿನಿಜೋಷ್” ಪತ್ರಿಕೆಗೆ ಬರೆದ ಲೇಖನ – 2)

ನಾನೊಬ್ಬ ಕ್ರೋನಿ ಕ್ಯಾಪಿಟಲಿಸ್ಟ್…!

ಹೌದು… ಹಾಗೆಂದು ನನ್ನನ್ನು ಅನೇಕರು ಕರೆದಿದ್ದಾರೆ. ನಾನು ಬಂಡವಾಳ ಹೂಡಿರುವವನೇ…! ಕಿರುತೆರೆಯಲ್ಲಿ, ಹಿರಿತೆರೆಯಲ್ಲಿ, ಇನ್ನೂ ಅನೇಕ ಕಡೆಗಳಲ್ಲಿ ನಾನು ಬಂಡವಾಳ ಹೂಡಿದ್ದೇನೆ. ಹಾಗಾದರೆ ನಾನು ಬಂಡವಾಳಶಾಹಿ ಅಂತ ಕರೆಸಿಕೊಳ್ಳುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಕ್ರೋನಿ/ಕ್ರಾನಿ ಕ್ಯಾಪಿಟಲಿಸ್ಟ್ ಎಂದು ಕರೆಸಿಕೊಳ್ಳುವುದು ಸರಿಯೇ…? ಅದಕ್ಕೆ ನನ್ನ ಪ್ರಿಯ ಓದುಗ ಬಂಧುಗಳಿಗೆ ಈ ಕ್ರೋನಿ ಕ್ಯಾಪಿಟಲಿಸಂ ಎಂದರೆ ಏನೆಂದು ತಿಳಿಸಬೇಕು. ಇದು ಯೂರೂಪಿಯನ್ ಮತ್ತು ಅಮೇರಿಕನ್ ಅರ್ಥಶಾಸ್ತ್ರಜ್ಞರು ರೂಪಿಸಿದ ಪದ. ಲಂಡನ್ ಎಕಾನಮಿಕ್ ಸ್ಕೂಲ್ ಮತ್ತು ಹಾರ್ವರ್ಡ್ ಎಕಾನಾಮಿಕ್ ಶಾಲೆಗಳ ತಜ್ಞರು ರೂಪಿಸಿದ ಪದ. ಹಾಗಾಗಿ ಇದು ಅತ್ಯಂತ ಸಮಯೋಚಿತ ಪದವೇ ಆಗಿರಬೇಕು. ಈ ಪದವನ್ನು ನನ್ನ ಮೇಲೆ ಆರೋಪಿಸಿದ ಬಂಧುಗಳು ಸಹ  ಎಲ್ಲಾ ವಿಶ್ವವಿದ್ಯಾಲಯಗಳಿಂದ ಬಂದುದನ್ನು ಓದಿ ಜ್ಞಾನ ಪಡೆದವರಾದ್ದರಿಂದ ಆ ಜನ ನನ್ನನ್ನು ಹಾಗೆ ಕರೆಯುವುದರಲ್ಲಿ ಸತ್ಯವೂ ಇರಬೇಕು.

ಕ್ರೋನಿ ಕ್ಯಾಪಿಟಲಿಸಂ ಎಂಬುದನ್ನು ಕಳೆದ ಶತಮಾನದ ಭಾರತ ಮತ್ತು ಚೀನಾದಲ್ಲಿ ಇದ್ದ ತಮ್ಮವರಿಗೆ ಸಹಾಯ ಮಾಡುವ ಅಧಿಕಾರಶಾಹಿಯನ್ನು ಗುರುತಿಸಲೆಂದು ರೂಪಿಸಲಾಯಿತು. ಅಂದರೆ ಯಾವುದೋ ಮಂತ್ರಿ ಅಥವಾ ಅಧಿಕಾರಿ ತನ್ನ ಬಂಧುಗಳಿಗೆ ಮಾತ್ರ ಹೆಚ್ಚು ಕಾಂಟ್ರಾಕ್ಟು ಅಥವಾ ಹೆಚ್ಚು ಪರವಾನಗಿ ಸಿಗುವಂತೆ ಮಾಡುವುದು. ಆ ಮೂಲಕ ಅದೇ ಕಾಂಟ್ರಾಕ್ಟು ಅಥವಾ ಪರವಾನಗಿಯನ್ನು ಪಡೆಯಲು ಬಂದಿರಬಹುದಾದ ಸ್ಪರ್ಧೆಗಳನ್ನು ತಪ್ಪಿಸಿ ತನ್ನವರ ಏಳಿಗೆಗೆ ಶ್ರಮಿಸುವುದು. ಇಂತಹದನ್ನು ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರು ಕ್ರೋನಿ ಕ್ಯಾಪಿಟಲಿಸಂ ಎಂದು ಗುರುತಿಸಿದ್ದಾರೆ. ಇಂತಹದೊಂದು ಬಿರುದು ನನಗೆ ಹಾದಿಯಲ್ಲಿ ಸಿಕ್ಕ ಹೂವಾಗಿ ದೊರೆತಿದೆ.

ಈಗ ಯೋಚಿಸುವ. ನಾನು ನನ್ನವರಿಗೆ ಕಾಂಟ್ರಾಕ್ಟು ಕೊಡುವಂತಹ ಅಥವಾ ನನ್ನವರಿಗೆ ಪರವಾನಗಿ ದೊರೆಯುವಂತಹ ಯಾವುದಾದರೂ ಅಧಿಕಾರ ನನ್ನ  ವರೆಗಿನ ಜೀವಿತಾವಧಿಯಲ್ಲಿ ಹೊಂದಿದ್ದೆನೆ? ಇಲ್ಲ. ನಾನು ನನ್ನ ಪಾಡಿಗೆ ನನ್ನ ಕನಸುಗಳನ್ನು ಕತೆಗಳನ್ನಾಗಿಸಿ – ಕಿರುತೆರೆಯಲ್ಲೋ, ಹಿರಿತೆರೆಯಲ್ಲೋ ಅಥವಾ ರಂಗಭೂಮಿಯಲ್ಲೋ ಆ ಕತೆ ಹೇಳುವುದಕ್ಕೆ ದಾರಿ ಹುಡುಕುತ್ತಾ ಬದುಕಿದವನು. ಇಂತಹ ನನಗೆ ಈ ಬಿರುದು ಬರಲು ಕಾರಣವಾದುದು ಏನೆಂದರೆ ನಾನು ಕನ್ನಡದ ಸಂದರ್ಭದಲ್ಲಿ ಮಾತ್ರವೇ ಅಲ್ಲ ಯಾವುದೇ ಪ್ರಾದೇಶಿಕ ಭಾಷೆಯ ದೃಶ್ಯ ಮಾಧ್ಯಮದ ಸಂದರ್ಭದಲ್ಲಿ ಪರಭಾಷೆಯ ದೃಶ್ಯ ಸಾಮಗ್ರಿ ಡಬ್ಬಿಂಗ್ ಆಗಿ ಬರುವುದನ್ನು ವಿರೋಧಿಸಿದ್ದು, ಈ ಮಾತಿನ ಧ್ವನಿಲೇಪನ ಕಳೆದ ಐದು ದಶಕಗಳಿಂದ ಕರ್ನಾಟಕದ ಪ್ರಾತ್ಯದಲ್ಲಿ ಇಲ್ಲ. ಈಗ ಅದನ್ನು ಹಿಂಬಾಗಿಲಿಂದ ತರುವ ಪ್ರಯತ್ನ ಮಾಡುವುದು ಬೇಡ ಎಂದದ್ದು, ನಮ್ಮ ಚಲನಚಿತ್ರ ಮತ್ತು ಕಿರುತೆರೆಯ ಕಾರ್ಮಿಕರಿಗೆ ಈ ಡಬ್ಬಿಂಗ್ ವ್ಯವಸ್ಥೆಯಿಂದ ಕೆಲಸ ಇಲ್ಲದಂತೆ ಆಗುತ್ತದೆ ಎಂದದ್ದು, ಧ್ವನಿಲೇಪನ/ಡಬ್ಬಿಂಗ್ ಎಂಬುದು ಆಯಾ ಪ್ರಾದೇಶಿಕ ಭಾಷೆಗಳ ನಾಶಕ್ಕೆ ಕಾರಣವಾಗುತ್ತದೆ ಎಂದದ್ದು  – ಈ ಎಲ್ಲವೂ ಡಬ್ಬಿಂಗ್ ಬಯಸುವ ಜನರಿಂದ ನನಗೆ ಕ್ರೋನಿ ಕ್ಯಾಪಿಟಲಿಸ್ಟ್ ಎಂಬ ಬಿರುದು ದಯಪಾಲಿಸಿತು. ನಾನು ಸ್ವಜನ ಪಕ್ಷಪಾತಿ ಎಂಬ  ಬಿರುದನ್ನು ಆನಂದದಿಂದ ಸ್ವೀಕರಿಸುತ್ತೇನೆ ಮತ್ತು ಡಬ್ಬಿಂಗ್ ಎಂಬ ರೋಗವೂ ನಮ್ಮ ನಾಡಿಗೆ ಎಂದಿಗೂ ಬರಬಾರದು ಎಂದು ಹೇಳುತ್ತಲೇ ಇರುತ್ತೇನೆ.

ನನಗೆ ಈ ಬಿರುದು ದಯಪಾಲಿಸಿದವರು ಯಾರೋ ಪಾಶ್ಚಾತ್ಯರಲ್ಲ. ನನ್ನ ಗೆಳೆಯರು. ನನ್ನ ಹಾಗೆಯೇ ಕನ್ನಡದ ಜಾಯಮಾನದ ಒಳಗಡೆ ಬದುಕಲು ಪ್ರಯತ್ನಿಸುತ್ತಾ, ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಾ ಇರುವವರು. ಅವರೆಲ್ಲರ ಬಗ್ಗೆ ನನಗೆ ಅತೀವ ಪ್ರೀತಿ ಇದೆ. ಆದರೆ ಅವರು ಕೇಳುತ್ತಾ ಇರುವಂತೆ ಡಬ್ಬಿಂಗ್ ಎಂಬುದು ಬಂದರೆ ಕನ್ನಡ ಚಿತ್ರೋದ್ಯಮ ಮತ್ತು ಕಿರುತೆರೆ ಉದ್ಯಮಕ್ಕೆ ಉತ್ತಮ ಸ್ಪರ್ಧೆ ಬರುತ್ತದೆ ಎಂಬುದನ್ನು ನಾನು ಒಪ್ಪಲಾರೆ. ಹಾಗಾದರೆ ನಾನು ಸ್ಪರ್ಧೆಗೆ ಅಂಜುತ್ತಾ ಇಂತಹ ನಿಲುವಿಗೆ ಬಂದಿದ್ದೇನೆಯೇ ಎಂಬ ಪ್ರಶ್ನೆ ಹುಟ್ಟುತ್ತದೆ. ಖಂಡಿತಾ ಇಲ್ಲ. ಈಗ ಈ ನಾಡಲ್ಲಿ ಎಲ್ಲಾ ಭಾಷೆಯ ದೃಶ್ಯ ಮಾಧ್ಯಮ ಕೃತಿಗಳೂ ಆಯಾ ಭಾಷೆಯಲ್ಲಿ ಪ್ರದರ್ಶನ ಕಾಣುತ್ತಾ ಇವೆ. ಅವು ಕನ್ನಡದ ದೃಶ್ಯಮಾಧ್ಯಮ ಕೃತಿಕಾರರಿಗೆ ನಿರಂತರ ಸವಾಲಾಗಿಯೇ ಇವೆ. ಒಂದು ನೂರಾರು ಕೋಟಿ ಹಣ ಹೂಡಿದ ಸಿನಿಮಾ ನಾಲ್ಕಾರು ಕೋಟಿಯ ಕನ್ನಡ ಸಿನಿಮಾ ಅಥವಾ ಲಕ್ಷಾಂತರ ಹಣ ಹೂಡಿದ ಧಾರಾವಾಹಿಯ ಎದುರು ಐವತ್ತೋ ಅರವತ್ತೋ ಸಹಸ್ರ ರೂಪಾಯಿಗಳನ್ನು ಹೂಡಿದ ಕನ್ನಡ ಕಿರುತೆರೆಯ ಧಾರಾವಾಹಿಯು ಸ್ಫರ್ಧೆಯನ್ನು ಕಳೆದಿಷ್ಟೂ ವರ್ಷಗಳಿಂದ ನಡೆಸುತ್ತಲೇ ಇದೆ. ಇದು ಡಬ್ಬಿಂಗ್ ಬಂದಿದ್ದರೆ ಏನಾಗುತ್ತಿತ್ತೋ ಅದಕ್ಕಿಂತ ದೊಡ್ಡ ಸ್ಫರ್ಧೆ. ಈ ಸ್ಫರ್ಧೆಯನ್ನು ನನ್ನ ಹಿಂದಿನ ತಲೆಮಾರಿನವರು ಮಾತ್ರವೇ ಅಲ್ಲದೆ ನನ್ನ ತಲೆಮಾರಿನ ದೃಶ್ಯಮಾಧ್ಯಮ ಕೃತಿಕಾರರು ಎದುರಿಸುತ್ತಲೇ ಇದ್ದಾರೆ ಹಾಗೂ ಅವರಲ್ಲಿ ಅನೇಕರು ಯಶಸ್ವಿಯಾಗಿಯೂ ಇದ್ದಾರೆ.

ಈ ನನ್ನ ಗೆಳೆಯರು ಡಬ್ಬಿಂಗ್ ಕನ್ನಡಕ್ಕೆ ಬರಬೇಕು ಎಂದು ಕಾಂಪಿಟೇಷನ್ ಕಮಿಷನ್‍ಗೆ ಸಹ ಅಹವಾಲು ಸಲ್ಲಿಸಿದ್ದಾರೆ. ಡಬ್ಬಿಂಗ್ ಬೇಡ ಎನ್ನುತ್ತಿರುವವರು ಸ್ಪರ್ಧೆಯನ್ನು ತಪ್ಪಿಸುತ್ತಾ ಇದ್ದಾರೆ ಎಂತಲೂ ಬರೆದಿದ್ದಾರೆ. ಇದರಿಂದಾಗಿ ಇಲ್ಲಿನ ಅನೇಕ ಸಂಘಟನೆಗಳು ದೆಹಲಿಯಲ್ಲಿ ಇರುವ ಹಿಂದಿ-ಇಂಗ್ಲೀಷ್ ಬಿಟ್ಟು ಬೇರೇನೂ ಗೊತ್ತಿಲ್ಲದ ಅಧಿಕಾರಗಳ ಎದುರಿಗೆ ತಮ್ಮ ನಿಲುವಿನ ಹಿಂದಿನ ಕಾರಣಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದರಿಂದೇನಾಗುತ್ತದೆ ಎಂಬುದು ನಾಳೆಗೆ ಬಿಟ್ಟ ವಿಷಯ. ಆದರೆ ಇಂತಹದೊಂದು ಡಬ್ಬಿಂಗ್ ಎಂಬುದು ಬರಬೇಕು ಎಂದು ಬಯಸುತ್ತಾ ಇರುವವರು ನೀಡುತ್ತಾ ಇರುವ ಕಾರಣಗಳೇನು ಎಂದು ಗಮನಿಸೋಣ. ಆ ಜನ ನಮ್ಮ ಮಕ್ಕಳು ಜಗತ್ತಿನ ಶ್ರೇಷ್ಟ ಚಿತ್ರಗಳನ್ನು ತಮ್ಮ ಮಾತೃಭಾಷೆಯಲ್ಲಿ ನೋಡಬೇಕು ಎನ್ನುತ್ತಾ ಇದ್ದಾರೆ. ಕರ್ನಾಟಕದಲ್ಲಿ ಬಿಡುಗಡೆಯಾಗುವ ಎಲ್ಲಾ ಚಿತ್ರಗಳೂ ಕನ್ನಡವನ್ನು ಮಾತ್ರ ಹೊಂದಿರಬೇಕು ಎನ್ನುತ್ತಾ ಇದ್ದಾರೆ. ಕಿರುತೆರೆಯಲ್ಲಿ ಮಕ್ಕಳಿ ಸಾಮಾನ್ಯವಾಗಿ ನೋಡುವ ಕಾರ್ಟೂನ್ ಚಿತ್ರಗಳು ಹಾಗೂ ಡಿಸ್ಕವರಿ ಮುಂತಾದ ವಾಹಿನಿಗಳು ಕನ್ನಡದಲ್ಲಿ ಇದ್ದಾಗ ಮಕ್ಕಳ ಜ್ಞಾನ ಹೆಚ್ಚುತ್ತದೆ ಎನ್ನುತ್ತಾ ಇದ್ದಾರೆ. ಒಬ್ಬ ಪ್ರಖ್ಯಾತ ನಿರ್ದೇಶಕರಂತೂ ತಾವು “ರಾಮಯಣ – ಟಿಪ್ಪುಸುಲ್ತಾನ್ ಧಾರಾವಾಹಿಗಳನ್ನು ಕನ್ನಡದಲ್ಲಿ ನೋಡಲಿಲ್ಲವಾದ್ದರಿಂದ ನನಗೆ ಕನ್ನಡ ಬರಲಿಲ್ಲ” ಎನ್ನುತ್ತಲೇ ಕನ್ನಡ ಸಿನಿಮಾ ತಯಾರಿಸುತ್ತಾ ಇದ್ದಾರೆ. ಇವರೆಲ್ಲರೂ ಹೇಳುತ್ತಾ ಇರುವುದರ ಹಿಂದೆ ಇರುವ ವಿವರಗಳನ್ನು ಮೂರು ಅಂಶಗಳಾಗಿ ಗಮನಿಸಬಹುದು. 1. ಕರ್ನಾಟಕದಲ್ಲಿ ಬಿಡುಗಡೆ ಆಗುವ ಎಲ್ಲಾ ಚಿತ್ರಗಳೂ ಕನ್ನಡದ್ದೇ ಆಗಬೇಕು ಎಂಬ ಅತೀವ ಕನ್ನಡ ಪ್ರೀತಿ. 2. ಮಕ್ಕಳಿಗೆ ಜ್ಞಾನಧಾರೆಗಳು ಕನ್ನಡದಲ್ಲಿ ದೊರೆಯಬೇಕು ಎಂಬ ಕಾಳಜಿ. 3. ಕನ್ನಡ ಕೃತಿಗಳಿಗಿಂತ ಎಲ್ಲ ರೀತಿಯಿಂದಲೂ ಉತ್ತಮವಾದ ಗುಣಮಟ್ಟ ಹೊಂದಿದ ಪರಭಾಷೆಯ ದೃಶ್ಯಮಾಧ್ಯಮ ಕೃತಿಗಳನ್ನು ಕನ್ನಡದಲ್ಲಿ ನೋಡುವ ಮೂಲಕ ಕನ್ನಡದಲ್ಲಿ ಬರುತ್ತಾ ಇರುವ ಅನೇಕ ಹೊಲಸುಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಕಕ್ಕುಲಾತಿ. ಈ ಮೂರು ಅಂಶಗಳಲ್ಲಿ ಮೇಲ್ನೋಟಕ್ಕೆ ಯಾವುದೇ ತಪ್ಪು ಕಾಣುವುದಿಲ್ಲ. ಆದರೆ ಆಳಕ್ಕೆ ಇಳಿದರೆ ಸಮಸ್ಯೆಗಳು ಗೋಚರಿಸುತ್ತವೆ.

ಕರ್ನಾಟಕದಲ್ಲಿ ಬಿಡುಗಡೆ ಆಗುವ ಎಲ್ಲಾ ದೃಶ್ಯಮಾಧ್ಯಮ ಕೃತಿಗಳೂ ಕನ್ನಡದಲ್ಲಿಯೇ ಇರಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಅದು ದುಸ್ಸಾಧ್ಯ. ಏಕೆಂದರೆ ಇಡಿಯಾಗಿ ಕರ್ನಾಟಕ ಎಂಬುದು 1956ರಲ್ಲಿ ರೂಪಿತವಾಗಿದ್ದು ಐದು ವಿಭಿನ್ನ ಭಾಷಾವಲಯಗಳಿಂದ. ಹೈದರಾಬಾದ್ ಕರ್ನಾಟಕದಲ್ಲಿ ಉರ್ದು ಮತ್ತು ತೆಲುಗು ಭಾಷೆಗೆ ಆದ್ಯತೆ ಇತ್ತು, ಮುಂಬೈ ಕರ್ನಾಟಕದಲ್ಲಿ ಹಿಂದಿ ಮತ್ತು ಮರಾಠಿಗೆ ಭಾಷೆಗೆ ಆದ್ಯತೆ ಇತ್ತು, ಮದ್ರಾಸ್ ಪ್ರಾವಿನ್ಸ್ ಎಂದು ಗುರುತಿಸಲಾಗಿದ್ದ ಕರಾವಳಿಯ ತೀರದಲ್ಲಿ ತುಳು ಮತ್ತು ಕೊಂಕಣಿ ಭಾಷೆಗಳು ಪ್ರಧಾನ್ಯ ಪಡೆದಿದ್ದವು, ಕೊಡಗು ಪ್ರಾವಿನ್ಸ್‍ನಲ್ಲಿ ಕೊಡಗು ಮತ್ತು ಮಲೆಯಾಳ ಮುಖ್ಯವಾಗಿದ್ದವು. ಮೈಸೂರು ಅರಸರ ಪ್ರಾಂತ್ಯದಲ್ಲಿ ಮಾತ್ರ ಕನ್ನಡ ಪ್ರಧಾನ ಭಾಷೆಯಾಗಿತ್ತು. ಆದರೆ ಈ ಪ್ರಾಂತ್ಯದಲ್ಲೂ ತಮಿಳರು, ತೆಲಗುರು ಯಥೇಚ್ಚವಾಗಿ ಇದ್ದರು. ಹೀಗೆ ವಿಭಿನ್ನ ಭಾಷಾವಲಯವನ್ನು ಭಾಷಾಗಣತಿಯ ಆಧಾರದ ಮೇಲೆ ಕರ್ನಾಟಕವೆಂದು ರಾಜಕೀಯ ಭೂಪಟದಲ್ಲಿ ಸೇರಿಸಲಾಯಿತು ಎಂಬುದು ಬಹುತೇಕರು ಬಲ್ಲ ವಿಷಯ. ಇಂದಿಗೂ ಈ ವಿಭಿನ್ನ ಭಾಷಾ ವಲಯಗಳಿರುವ ಕರ್ನಾಟಕದ ಒಳಗಿನ ಈ ಪ್ರದೇಶಗಳಲ್ಲಿ ಕನ್ನಡ ಕೃತಿಗಳಿಗಿಂತ ಇತರ ಭಾಷೆಯ ಕೃತಿಗಳನ್ನು ನೋಡುವವರ ಸಂಖ್ಯೆಯೇ ಹೆಚ್ಚು. ಇಲ್ಲಿ ನಾವು ಕೇವಲ ಕನ್ನಡ ಭಾಷೆಯ ಧ್ವನಿಲೇಪನ ಮಾಡಿದ ಸಿನಿಮಾಗಳನ್ನು ಬಿಡುಗಡೆ ಮಾಡುವುದರಿಂದ ಅಲ್ಲಿರುವ ಆಯಾ ಭಾಷಾ ಅಲ್ಪಸಂಖ್ಯಾತರು ತಮ್ಮ ಮೂಲಭೂತ ಹಕ್ಕಿಗೆ ಚ್ಯುತಿಯಾಗುತ್ತದೆ ಎಂದು ಕೇಳುವುದಿಲ್ಲವೇ? ಹಾಗೆ ಪ್ರಶ್ನೆ ಕೇಳುವವರನ್ನು ಬಗ್ಗು ಬಡಿಯುತ್ತೇವೆ ಎಂಬಂತಹ ಕನ್ನಡ ಪ್ರೀತಿಯೇ ನಮ್ಮದು. 

ಇನ್ನು ಎರಡನೆಯ ಪ್ರಶ್ನೆಯಾದ ಜ್ಞಾನಾರ್ಜನೆಯನ್ನು ಗಮನಿಸುವ. ಯಾವುದೇ ಜ್ಞಾನ ಧಾರೆಗಳನ್ನು ಕನ್ನಡದಲ್ಲಿ ನೋಡುವುದಕ್ಕೆ ಯಾವುದೇ ಅಡ್ಡಿ ಇದ್ದರೆ ಅದನ್ನು ಯಾರಾದರೂ ವಿರೋಧಿಸಬೇಕಾದ್ದೇ. ಆ ದೃಷ್ಟಿಯಿಂದ ನನ್ನ ಮಿತ್ರರು ಕೇಳುತ್ತಿರುವ ಡಬ್ಬಿಂಗ್ ಸರಿಯಾದ್ದೇ. ಅದಕ್ಕಾಗಿಯೇ ವಿಶ್ವವಿದ್ಯಾಲಯಗಳ ಅನುದಾನ ನೀಡುವ ಯೂಜಿಸಿಯೂ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಧ್ವನಿಲೇಪನ ಮಾಡಿ ಪ್ರಸಾರ ಮಾಡುತ್ತಾ ಇದೆ. ಅವುಗಳನ್ನು ಅನೇಕ ಶಾಲೆ-ಕಾಲೇಜುಗಳು ವಿದ್ಯಾರ್ಥಿಗಳಿಗೆ ಕಲಿಸಲೆಂದೇ ಬಳಸುತ್ತಾ ಇವೆ. ಇನ್ನು ಡಿಸ್ಕವರಿ ಅಥವಾ ಇನ್ನಾವುದೇ ಅಂತಹ ವಾಹಿನಿಯಲ್ಲಿ ಬರುವ ಕಾರ್ಯಕ್ರಮ ಡಬ್ ಆಗುವುದನ್ನು ಬೇಡ ಎಂದು ಯಾರು ತಡೆಯುತ್ತಾರೆ. ಧಾರಾಳವಾಗಿ ಅವೂ ಬರಬಹುದು. ಆ ಕೆಲಸವನ್ನು ಯಾರಾದರೂ ಕೈಗೆತ್ತಿಕೊಂಡು ಮಾಡಬೇಕಷ್ಟೆ. ಆದರೆ ಅವರು ಈ ಜ್ಞಾನಾರ್ಜನೆ ಆಗಬೇಕು ಎನ್ನುತ್ತಾ ಇರುವುದು ಯಾರಿಗೆ? ನಮ್ಮ ಮುಂದಿನ ತಲೆಮಾರಿಗೆ, ಈಗ ಪ್ರಾಥಮಿಕ ಶಾಲೆಯ ಹಂತದಲ್ಲಿ ಇರುವ ಮಕ್ಕಳಿಗೆ. ಆ ವಿದ್ಯಾರ್ಥಿಗಳಲ್ಲಿ ಬಹುತೇಕರು ಕನ್ನಡವನ್ನು ಭಾಷೆಯಾಗಿ ಕಲಿತು ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಾ ಇದ್ದಾರೆ. ಹೀಗಾಗಿಯೇ ಅನೇಕ ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಹಾಕಿಕೊಳ್ಳುತ್ತಾ ಇವೆ ಎಂಬುದು ಸಹ ನಾವೆಲ್ಲರೂ ಕಾಣುತ್ತಿರುವ ಪ್ರಕ್ರಿಯೆ. ಹೀಗಾಗಿ ಇಂತಹ ಜ್ಞಾನಧಾರೆಗಳನ್ನು ನೀಡುವ ಕಾರ್ಯಕ್ರಮ ಕನ್ನಡದಲ್ಲಿ ಪ್ರಸಾರವಾದರೂ ನೋಡುವವರ ಸಂಖ್ಯೆಯ ಕೊರತೆಯಿಂದಾಗಿ ಅವು ಆದಾಯ ಇಲ್ಲದೆ ಸೋಲುತ್ತವೆ ಎಂಬುದೂ ಸಹ ಸತ್ಯವೇ.

ಅವರ ಮೂರನೇಯ ಪ್ರಶ್ನೆ ಕನ್ನಡದಲ್ಲಿ ತಯಾರಾಗುತ್ತಾ ಇರುವ ಸಿನಿಮಾ ಕಳಪೆಯದು ಎನ್ನುವುದು. ಕನ್ನಡ ಸಿನಿಮಾ ಕಳಪೆಯಾಗುವುದಕ್ಕೆ ಕಾರಣಗಳು ಹಲವು ಇವೆ. ಆ ಕಾರಣಗಳ ಚರ್ಚೆಗೆ ಈ ಲೇಖನಕ್ಕೆ ಇರುವ ಪದಮಿತಿಯಿಂದಾಗಿ ಕಷ್ಟವಾಗಬಹುದು. ಮತ್ತು ಆ ವಿಷಯವನ್ನು ದಾಟಿಕೊಳ್ಳುವಂತೆ ಹೊಸ ತಲೆಮಾರಿನ ಕನ್ನಡ ನಿರ್ದೇಶಕರು ಮಾಡುತ್ತಾ ಇರುವ ಪ್ರಯೋಗಗಳು ಯಶಸ್ವಿಯಾಗುತ್ತಾ ಇರುವುದನ್ನು ನಾವು ಕಳೆದೆರಡು ವರ್ಷಗಳಿಂದ ನೋಡುತ್ತಾ ಇದ್ದೇವೆ. ಹೀಗಾಗಿ ಕನ್ನಡ ಚಿತ್ರರಂಗವಂತೂ ಶೇಕಡಾವರು ಯಶಸ್ವಿ ಚಿತ್ರಗಳ ಲೆಕ್ಕಾಚಾರದಲ್ಲಿ ಇನ್ನಿತರ ಪ್ರಾದೇಶಿಕ ಭಾಷೆಗಳಿಗಿಂತ ಹೆಚ್ಚು ಉತ್ತಮ ಸ್ಥಾನದಲ್ಲಿದೆ. ಈ ಆರೋಗ್ಯವಂತ ಸ್ಥಿತಿಯನ್ನು ಶಾಶ್ವತಗೊಳಿಸುವಂತಹ ಹೊಸ ಪ್ರಯೋಗಳಿಗೆ ನಮ್ಮಲ್ಲಿನ ಚಿತ್ರ ತಯಾರಕರು ತೊಡಗಿದ್ದಾರೆ. ಬರಲಿರುವ ದಿನಗಳಲ್ಲಿ ಇನ್ನೂ ಅನೇಕ ಚಿತ್ರಗಳು ಯಶಸ್ವಿ ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ ಎಂಬ ನಂಬುಗೆ ನನ್ನದು. ಹೀಗಾಗಿ ಹತಾಶೆಯಿಂದ ಡಬ್ಬಿಂಗ್ ಬೇಕು ಎನ್ನುವವರಿಗೆ ಕನ್ನಡ ಚಿತ್ರ ತಯಾರಕರೇ ಉತ್ತರ ಹೇಳುತ್ತಾ ಇದ್ದಾರೆ. ಇನ್ನು ಕೆಲಬು ಹತಾಶ ನಿರ್ಮಾಪಕರು ಸಹ ಡಬ್ಬಿಂಗ್ ಬೇಕು ಎಂಬ ವಾದವನ್ನು ಮಂಡಿಸುತ್ತಾ ಇದ್ದಾರೆ. ಆ ನಿರ್ಮಾಪಕರು ಸಹ ಆಗುತ್ತಾ ಇರುವ ಹೊಸ ಪ್ರಯೋಗಗಳಿಗೆ ತೆರೆದುಕೊಂಡಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಒಳಿತಾಗುತ್ತದೆ.

ಇದೇ ಮಾತನ್ನು ಕನ್ನಡ ಕಿರುತೆರೆಗೆ ಹೇಳುವುದು ಕಷ್ಟ. ಕನ್ನಡದ ಬಹುತೇಕ ವಾಹಿನಿಗಳನ್ನು ನಡೆಸುತ್ತಾ ಇರುವವರು ಕಾರ್ಪೋರೇಟ್ ಕಂಪೆನಿಗಳವರು. ಅವರು ಕನ್ನಡದ್ದೇ ಕತೆಗಳನ್ನು ಕಟ್ಟುವ ಬದಲಿಗೆ ನಿರಂತರ ಪುನರವತರಣಿಕೆಗಳನ್ನು ತಯಾರಿಸುತ್ತಾ ಇದ್ದಾರೆ. ಒಂದು ಕಾಲದಲ್ಲಿಯಂತೂ ಕನ್ನಡದಲ್ಲಿ ಬರುತ್ತಾ ಇದ್ದ 65 ದೈನಿಕಗಳಲ್ಲಿ ಕೇವಲ ಹತ್ತು ಧಾರಾವಾಹಿಗಳು ಮಾತ್ರ ಕನ್ನಡದ ಮೂಲಕೃತಿಗಳಾಗಿದ್ದವು. ಆದರೆ ಅನೇಕ ಕನ್ನಡ ಕಿರುತೆರೆಯ ತಯಾರಕರ ಶಕ್ತಿಯಿಂದಲೇ ಇಂದು ಮೂಲಕೃತಿಗಳ ಸಂಖ್ಯೆ ಹೆಚ್ಚಾಗಿದೆ. ಈ ಲೇಖನ ಬರೆಯುವ ಕಾಲಕ್ಕೆ 65ರಲ್ಲಿ 25ಕ್ಕೂ ಹೆಚ್ಚು ಮೂಲಕೃತಿಗಳು ಬರುತ್ತಾ ಇವೆ. ಹೀಗೆಯೇ ಕಿರುತೆರೆಯ ಕಾರ್ಯಕ್ರಮ ತಯಾರಕರು ಮೂಲಕೃತಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಯಶಸ್ವಿಗೊಳಿಸಿದರೆ ಪುನರವತರಣಿಕೆಗಳನ್ನು ಸಂಪೂರ್ಣವಾಗಿ ತೊಲಗಿಸಿ, ಕನ್ನಡದ್ದು ಎನಿಸುವ ಕೃತಿಗಳ ಮೂಲಕವೇ ಹತಾಶೆಯ ಮಾತನ್ನು ಆಡುತ್ತಾ ಇರುವ ಕನ್ನಡ ವೀಕ್ಷಕರನ್ನು ಒಳಿಸಿಕೊಳ್ಳಬಹುದು.

ಈ ಎಲ್ಲಾ ಹಿನ್ನೆಲೆಯಲ್ಲಿ ನಾನು ಡಬ್ಬಿಂಗ್ ಎಂಬ ಸಂಸ್ಕೃತಿ ಎಂದಿಗೂ ಕನ್ನಡಕ್ಕೆ ಬಾರದಿರಲಿ ಎಂದು ಬಯಸುತ್ತೇನೆ. ಹೀಗಾಗಿ ನನ್ನ ಭಾಷೆಯ ಸ್ವಹಿತ ಕಾಪಾಡುವುದಕ್ಕೆ ನನಗೆ ಹಾದಿಯಲ್ಲಿ ಸಿಕ್ಕ ಬಿರುದಾದ ಸ್ವಭಾಷಾ ಪಕ್ಷಪಾತಿ ಅಥವಾ ಕ್ರೋನಿ ಕ್ಯಾಪಿಟಲಿಸ್ಟ್ ಎಂಬ ಬಿರುದನ್ನು ಆನಂದದಿಂದ ಸ್ವೀಕರಿಸುತ್ತೇನೆ.

– ಬಿ.ಸುರೇಶ

(ಮುಂಬೈ – ಬೆಂಗಳೂರಿನ ಹಾದಿಯಲ್ಲಿ) 

bsuresha@bsuresha.com

Advertisements

0 Responses to “ನಾನೊಬ್ಬ ಕ್ರೋನಿ ಕ್ಯಾಪಿಟಲಿಸ್ಟ್…!”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: