ನೂರರ ನೆನಪುಗಳ ಸಂಭ್ರಮ

“ನೂರು ಆಯಿತು ಎನ್ನುತ್ತಾ ಇದೆ ಊರು. “ಇಲ್ಲಾರೀ” ಅನ್ನುತ್ತಾ ಇದ್ದಾರೆ ನಮ್ಮೋರು. ಆದರೆ ದೇಶದ ತುಂಬಾ ನಡೆಯುತ್ತಾ ಇದೆ ಸಂಭ್ರಮಗಳು ನೂರಾರು. ಹಿಂಗಿರುವಾಗ ಬೆತ್ತಲೆ ರಾಜ್ಯದಲ್ಲಿ ಲಂಗೋಟಿ ಕಟ್ಟಿದ ಹಾಗೆ ಇರೋಕ್ಕೆ ನಾವ್ಯಾರು? ಅದಕ್ಕಾಗಿ ಬಿಚ್ಚಿಕೊಂಡಿದೆ ನಡೆದುಬಂದ ನೆನಪುಗಳು ಸಾವಿರಾರು.”

ಹಿಂಗೆ ಅಂತ್ಯ ಪ್ರಾಸದ ಜೊತೆಗೆ ಮಾತು ಕಟ್ಟಿದ್ದರೆ ನನ್ನ ಒಬ್ಬ ಗುರುಗಳಾದ ರವೀ ಅವರು ಬೈತಾ ಇದ್ದರು. ಇನ್ನೊಬ್ಬ ಗುರುಗಳಾದ ರವಿಚಂದ್ರನ್ ಅವರು ಓಕೆ ಅನ್ನುತ್ತಾ ಇದ್ದರು. ಆದರೆ ಈಗ ನಾನು ಹೀಗೆ ಬರೆಯೋಕ್ಕೆ ಕಾರಣವಾದದ್ದು ಭಾರತೀಯ ಸಿನಿಮಾಕ್ಕೆ ನೂರು ವರ್ಷ ಆಗಿದೆ ಎಂಬ ಸಂದರ್ಭ. ಕನ್ನಡ ಚಿತ್ರರಂಗವಂತೂ ಇದಕ್ಕಾಗಿ ವಾರಗಟ್ಟಲೆ ಚಿತ್ರೀಕರಣಕ್ಕೆ ರಜೆ ಕೊಟ್ಟು ಚೆನ್ನೈ ನಗರದಲ್ಲಿ ನಾಲ್ಕು ದಿನಗಳ ಸಂಭ್ರಮಾಚರಣೆ ಮಾಡುತ್ತಾ ಇದೆ. ಆದರೆ ನನಗೆ, ಭಾರತ ಅನ್ನುವ ದೇಶ 1947ರಲ್ಲಿಯೇ ಉದಯವಾಯಿತಾದ್ದರಿಂದ ಅಲ್ಲಿಂದಲೇ ಭಾರತೀಯ ಅನ್ನುವ ಸಿನಿಮಾ ಲೆಕ್ಕಾಚಾರ ಮಾಡಬೇಕು ಎಂಬ ಅಭಿಪ್ರಾಯವಿದೆ. ನನ್ನ ಅಭಿಪ್ರಾಯ ಏನೇ ಇರಲಿ. ಭಾರತೀಯ ಚಿತ್ರರಂಗದವರು ಈ ಹೆಸರಲ್ಲಿ ಒಟ್ಟಾಗಿದ್ದಾರೆ. ಸಂಭ್ರಮಾಚಾರಣೆ ಮಾಡುತ್ತಾ ಇದ್ದಾರೆ. ಹಾಗಾಗಿ ಇದೇ ಸನ್ನಿವೇಶದಲ್ಲಿ ನಮ್ಮ ಸಿನಿಮಾದ ಬೆಳವಣಿಗೆಯನ್ನು ನೆನೆಯುತ್ತಾ ಒಂದಷ್ಟು ಸಾಲುಗಳನ್ನು ಬರೆಯುತ್ತಾ ಇದ್ದೇನೆ.

ಮೂಲಭೂತವಾಗಿ ಸಿನಿಮಾ ಎಂಬುದು ಯಂತ್ರಗಳ ಸಹಾಯದಿಂದ ಸೃಷ್ಟಿಸಿದ ಚಿತ್ರಗಳ ಮೂಲಕ ಕತೆ ಹೇಳುವ ಕಲೆ. ತೆರೆಯ ಮೇಲೆ ಮೂಡುವ ಚಿತ್ರಪಟಗಳನ್ನು ನೋಡುತ್ತಾ ನೋಡುತ್ತಾ ನೋಡುಗನನ್ನು ಕಣ್ಣೆದುರಿನ ಚಿತ್ರಗಳೇ ನಿಜವೆನಿಸುವ ಹಾಗೆ ಕಥನ ಕಟ್ಟುವ ಈ ವಿದ್ಯಮಾನಕ್ಕೆ ದೃಶ್ಯಭಾಷೆ ಎಂಬ ಹೆಸರೂ ಬಂದಿದೆ. ಲ್ಯೂಮಿಯೇರ್ ಸಹೋದರರು ಸ್ಟೇಷನ್‍ಗೆ ಟ್ರೈನ್ ಬಂತು ಎಂಬ ಸಿನಿಮಾ ಮಾಡಿದ ಕಾಲಕ್ಕೆ ಈ ಚಲಿಸುವ ಚಿತ್ರಗಳನ್ನು ನೋಡಿಯೇ ಬೆರಗಾಗುತ್ತಾ ಇದ್ದ ನೋಡುಗರು ಈ ನೂರು-ನೂರೈವತ್ತು ವರ್ಷಗಳ ಯಾತ್ರಯಲ್ಲಿ ಬೌದ್ಧಿಕವಾಗಿ ಬೆಳೆದಿದ್ದಾರೆ. ಸಿನಿಮಾದ ಭಾಷೆ ಅವರಿಗೆ ಸರಳವಾದ ಸಣ್ಣ ಚಿತ್ರಿಕೆಯನ್ನು ನೋಡಿದಾಗಲೂ ತಿಳಿಯುವಂತಾಗಿದೆ. ಈ ಹಾದಿಯಲ್ಲಿ ತೆರೆಯ ಮೇಲೆ ಚಿತ್ರವಾಗಿದ್ದ ಜನ ಜನಮಾನಸದಲ್ಲಿ ತಾರೆಗಳಾಗಿದ್ದಾರೆ. ಕೆಲವರಂತೂ ಸೂಪರ್‍ ಸ್ಟಾರ್‍ಗಳಾಗಿದ್ದಾರೆ. ಅದಾಗಲೇ ಈ ಸಿನಿಮಾ ಯಾತ್ರೆಯಲ್ಲಿ ಬಂದು ಈಗ ನಮ್ಮೊಡನೆ ಇಲ್ಲದ ಹಲವು ಹಿರಿಯರು ನೋಡುಗರ ನೆನಪಿನ ಭಿತ್ತಿಯಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಕನ್ನಡದ ರಾಜ್‍ಕುಮಾರ್ ಅವರೇ ಇರಬಹುದು, ತಮಿಳಿನ ಎಂ.ಜಿ.ರಾಮಚಂದ್ರನ್, ಶಿವಾಜಿಗಣೇಶನ್ ಅವರಿರಬಹುದು, ತೆಲುಗಿನ ಎನ್‍ಟಿಆರ್ ಇರಬಹುದು… ಹೀಗೆ ಅನೇಕರು ಇಂದು ನಮ್ಮೊಡನೆ ಇಲ್ಲದೆ ಇದ್ದರು ಜನಮಾನಸದಲ್ಲಿ ಇಂದಿಗೂ ತಾರೆಗಳಾಗಿದ್ದಾರೆ.

ಆದರೆ ಪ್ರಾದೇಶಿಕ ಭಾಷೆಯ ಚಿತ್ರಗಳು ಹೀಗೆ ಪ್ರಧಾನ ಮಾಧ್ಯಮಗಳಾಗುವ ಹಾದಿಯಲ್ಲಿ ಸಿನಿಮಾ ಎಂಬುದು ಬೆಳೆದು ಬಂದ ಬಗೆಯಿದೆಯಲ್ಲಾ ಅದು ಕೌತುಕ ಹುಟ್ಟಿಸುವಂತಹದು. ಮೊದಲು ಮೌನವಾಗಿದ್ದ ಸಿನಿಮಾಗಳಿಗೆ ಮಾತು ಎಂಬುದು ಬಂದ ಕೂಡಲೇ ನಮ್ಮ ಸಿನಿಮಾಗಳು ತಟ್ಟನೆ ಆತುಕೊಂಡದ್ದು ರಂಗಭೂಮಿಯನ್ನು. ಅದಾಗಲೇ ಜನಪ್ರಿಯವಾಗಿದ್ದ ರಂಗಕೃತಿಗಳೇ ನಮ್ಮಲ್ಲಿ ಸಿನಿಮಾಗಳಾಗಿದ್ದು. “ಸತಿಸುಲೋಚನ” “ರಾಧಾರಮಣ” “ಜಗಜ್ಯೋತಿ ಬಸವೇಶ್ವರ” “ಬೇಡರಕಣ್ಣಪ್ಪ” ಹೀಗೆ ಬಹುತೇಕ ಸಿನಿಮಾಗಳು ಆ ಕಾಲದ ಯಶಸ್ವೀ ನಾಟಕಗಳನ್ನೇ ಚಿತ್ರಪಟವಾಗಿಸಿದ್ದವು. ಈ ಹಾದಿಯಲ್ಲಿ ಸಿನಿಮಾಕ್ಕೆ ನಾಟಕದ ಕಲಾವಿದರು ಸಹ ಆಮದಾಗಿದ್ದರು. ಹೀಗಾಗಿಯೇ ಬಹುತೇಕ ಕನ್ನಡ ಸಿನಿಮಾಗಳಲ್ಲಿ ನಾಟಕೀಯ ನಟನೆಯೇ ಇತ್ತು. ಇದು ಬದಲಾಗಿ ಸಹಜ ನಟನೆಗೆ ಮತ್ತು ಸಿನಿಮಾಕ್ಕೆ ಬೇಕಾದ ಕತೆಯನ್ನು ಕಟ್ಟುವಂತೆ ಆಗುವುದಕ್ಕೆ 50ರ ದಶಕದ ಅಂತ್ಯದವರೆಗೆ ಕಾಯಬೇಕಾಯಿತು. “ಕರುಣೆಯೇ ಕುಟುಂಬದ ಕಣ್ಣು” ತರಹದ ಚಿತ್ರಗಳು ಕಾದಂಬರಿಯನ್ನು ಆಧರಿಸಿ ತಯಾರಾಗಿತ್ತು. ಆ ನಂತರ ಎಂ.ಆರ್.ವಿಠಲ್, ಎನ್‍.ಲಕ್ಷ್ಮೀನಾರಾಯಣ್ ಮುಂತಾದ ನಿರ್ದೇಶಕರು ಮಾಡಿದ ಪ್ರಯೋಗಗಳ ಫಲವಾಗಿ ಕನ್ನಡದ ಸಿನಿಮಾಗಳಲ್ಲಿ ದೃಶ್ಯ ಭಾಷೆಯ ಬಳಕೆ ಆಗತೊಡಗಿತು. ಅಲ್ಲಿಂದಾಚೆಗೆ ಪುಟ್ಟಣ್ಣ, ರವೀ, ಗೀತಪ್ರಿಯ ಮುಂತಾದವರು ಈ ದೃಶ್ಯ ಭಾಷೆಯ ಪ್ರಯೋಗವನ್ನು ಒಂದು ನೆಲೆಯಲ್ಲಿ ಮಾಡಿದರೆ ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಬಿ ವಿ ಕಾರಂತ ಮುಂತಾದವರು ಸಿನಿಮಾದ ದೃಶ್ಯ ಭಾಷೆಯ ಸಾಧ್ಯತೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದರು. ಎಂಬತ್ತರ ದಶಕದ ಅಂತ್ಯ ಭಾಗದ ಹೊತ್ತಿಗೆ ಕನ್ನಡ ಸಿನಿಮಾ ಎಂಬುದು ಜಾಗತಿಕ ಸಿನಿಮಾಗಳ ಜೊತೆಗೆ ತಾನೂ ಒಬ್ಬನಿದ್ದೇನೆ ಎಂದು ಹೇಳುವಂತಾಗಿತ್ತು. ಇದೆಲ್ಲವೂ ಇತಿಹಾಸ.

ಅಲ್ಲಿಂದಾಚೆಗೆ ಕನ್ನಡ ಸಿನಿಮಾದ ಇತಿಹಾಸದಲ್ಲಿ ಸಿನಿಮಾ ಭಾಷೆಯ ಬಳಕೆಗಿಂತ ನಾಯಕ ನಟರ ವೈಭವೀಕರಣ ಹೆಚ್ಚಾಗಿ ಹೋಯಿತು. ಹೀಗಾಗಿ ಅಲ್ಲೊಂದು ಇಲ್ಲೊಂದು ಎಂಬಂತೆ ಪ್ರಯೋಗಗಳಾಗತೊಡಗಿದವು.  ಉಳಿದಂತೆ ಜನರಂಜನೆಯೇ ಪ್ರಧಾನವಾದ ಚಿತ್ರಗಳು ಹೆಚ್ಚಾದವು. ಇವುಗಳ ನಡುವೆ ನಟನೆ ಎಂಬುದು ಮರಳಿ ರಂಗಭೂಮಿಯ ಹಾದಿ ಹಿಡಿದದ್ದು ಅಚ್ಚರಿಯ ವಿಷಯ. ಆಗಿನ ಬಹುತೇಕ ನಟರು ರಂಗಭೂಮಿಯಿಂದ ಸಿನಿಮಾಕ್ಕೆ ಬಂದಿದ್ದವರು (ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ತೂಗುದೀಪ ಶ್ರೀನಿವಾಸ, ಉಮಾಶ್ರೀ, ಎನ್‍ಎಸ್ ರಾವ್, ದಿನೇಶ್) ಎಂಬುದು ಒಂದು ಕಾರಣವಾದರೆ ಸಿನಿಮಾದ ನಿರ್ದೇಶಕರು ಸಹ ಸಿದ್ಧ ಸೂತ್ರಗಳಿಗೆ ಮೊರೆ ಹೋಗಿದ್ದು ಮತ್ತೊಂದು ಕಾರಣ. ಇದೇ ನಟರು ಉತ್ತಮ ಪ್ರಯೋಗಗಳನ್ನು ಮಾಡಿದ ಉದಾಹರಣೆಯೂ ಹಲವು ಇವೆ. ಇವರ ನಡುವೆ ಸಹಜ ನಟನೆಯ ಪ್ರಯತ್ನವನ್ನು ನಿರಂತರವಾಗಿ ಚಾಲ್ತಿಯಲ್ಲಿಡಲು ಪ್ರಯತ್ನಿಸಿದ ವಿಷ್ಣುವರ್ಧನ್, ಅನಂತನಾಗ್ ಅವರೊಂದಿಗೆ ಆ ಹೊತ್ತಿಗೆ ತಮ್ಮದೇ ಆದ ವಿಶಿಷ್ಟ ನಟನಾ ಶೈಲಿಯನ್ನು ರೂಪಿಸಿಕೊಂಡಿದ್ದ ರಾಜ್‍ಕುಮಾರ್ ಅವರ ಪ್ರಯೋಗಗಳು ಸಹ ಯಶಸ್ವಿಯಾಗಿಯೇ ಸಾಗಿತ್ತು.

ಆ ಹೊತ್ತಿಗೆ ರಂಗಭೂಮಿಯಲ್ಲಿಯೂ ವಿಶೇಷವಾಗಿ ಹವ್ಯಾಸೀ ರಂಗಭೂಮಿಯಲ್ಲಿ ಆಗುತ್ತಾ ಇದ್ದ ಪ್ರಯೋಗಳ ಫಲವೂ ಸಿನಿಮಾದ ಮೇಲೆ ಆಗುತ್ತಾ ಇದ್ದದ್ದನ್ನು ಗಮನಿಸಬಹುದು. ರಂಗ ನಟನೆಯಲ್ಲಿ ಆಗ ಬಂದಿದ್ದ ಒಂದು ವಿಶಿಷ್ಟ ಹೊಸ ಜಾಡು ಸಿನಿಮಾಕ್ಕೂ ಸರಿದಿದ್ದನ್ನು ನಾವು ಅನೇಕ ಸಿನಿಮಾಗಳಲ್ಲಿ ಕಾಣಬಹುದಾಗಿತ್ತು. ಈ ಹೊಸ ನಟನೆಯ ಜಾಡು ಉಚ್ಚ್ರಾಯಕ್ಕೆ ಹೋಗುತ್ತಾ ಇದ್ದ ಕಾಲದಲ್ಲಿಯೇ ಸಿನಿಮಾಕ್ಕೆ ಸಡ್ಡು ಹೊಡೆಯುವಂತೆ ಟೆಲಿವಿಷನ್ ಧಾರಾವಾಹಿಗಳು ಎಂಬತ್ತರ ದಶಕದ ಉತ್ತಾರಾರ್ಧದಲ್ಲಿ ಆರಂಭವಾದವು. ಈ ಟೆಲಿಚಿತ್ರಗಳು ಅನೇಕ ರಂಗಕೃಷಿಕರಿಗೆ ಕೆಲಸ ಒದಗಿಸಿದವು. ಹಾಗಾಗಿ ಅದಾಗಲೇ ಸಿನಿಮಾದಲ್ಲಿ ಚಾಲ್ತಿಗೆ ಬಂದಿದ್ದ ರಂಗ ನಟನೆಯ ಕ್ರಮ ಈ ಟೆಲಿಚಿತ್ರಗಳಿಗೂ ಬಂದಿತ್ತು. ಸರಿಸುಮಾರು 90ರ ದಶಕದ ಮಧ್ಯಭಾಗದವರೆಗೆ ಕಿರುತೆರೆ ಮತ್ತು ಹಿರಿತೆರೆಗಳು ಒಂದೇ ದಾರಿಯಲ್ಲಿ ಸಾಗಿದ್ದವು. ಆದರೆ ದಿಢೀರನೆ ಕಿರುತೆರೆಯಲ್ಲಿ ಆರಂಭವಾದ ದೈನಿಕ ಧಾರಾವಾಹಿಗಳ ಸಂಸ್ಕೃತಿಯು ಕಿರುತೆರೆಯ ದಾರಿಯನ್ನೇ ಬದಲಿಸಿದವು. ಅತ್ಯಂತ ಜನಪ್ರಿಯವೂ ಆದವು. ಟಿಎನ್‍ಎಸ್ ಮುಂತಾದವರ ಪ್ರಯತ್ನಗಳು (ನಾನು ಮಾಡಿದ ಪ್ರಯತ್ನಗಳು ಸೇರಿದಂತೆ) ಮನೆಮಾತಾದವು. ಇದು ಸಿನಿಮಾ ತಯಾರಕರಿಗೆ ಹೊಸ ಸವಾಲನ್ನು ಒಡ್ಡಿತ್ತು. ಈ ಸವಾಲಿನ ನಿರ್ವಹಣೆಗೆ ಕೆಲವು ಸಿನಿಮಾ ತಯಾರಕರು ಹೊಡೆದಾಟ ಮತ್ತು ಅಶ್ಲೀಲ ವಿವರಗಳಿಗೆ ಮೊರೆ ಹೋದರೆ ದಿನೇಶ್ ಬಾಬು, ವಿಶ್ವನಾಥ್, ಜಯರಾಂ ಮುಂತಾದ ನಿರ್ದೇಶಕರು ಸಿನಿಮಾ ಭಾಷೆಯ ಮೂಲಕವೇ ಕಥನಗಳನ್ನು ಬಿಚ್ಚಿಟ್ಟರು. ಹೀಗೆ  ಈ ಎಲ್ಲಾ ಸ್ಪರ್ಧೆಗಳ ಮೂಲಕ ಸಿನಿಮಾ ಮತ್ತು ಕಿರುತೆರೆಗಳು ಕಳೆದ ಮೂರು ದಶಕಗಳಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಾ ಬಂದಿವೆ.

ಹೊಸ ಶತಮಾನದಲ್ಲಿ ಸಿನಿಮಾ ಪ್ರವೇಶಿಸಿದ ಯೋಗರಾಜ್ ಭಟ್, ಸೂರಿ, ಶಶಾಂಕ್ ಮುಂತಾದವರು ಆ ವರೆಗಿನ ಸಿನಿಮಾ ವ್ಯಾಕರಣವನ್ನು ಮುರಿದು ಹೊಸದೊಂದು ವಾತಾವರಣವನ್ನು ಕನ್ನಡ ಸಿನಿಮಾಕ್ಕೆ ತಂದರು. ಇಂದು ಈ ತಲೆಮಾರಿನ ಮುಂದುವರಿಕೆಯಾಗಿ ಜನಪ್ರಿಯ ಸಿನಿಮಾದಲ್ಲಿ ಹೊಸ ಪ್ರಯೋಗಗಳು ಆಗುತ್ತಾ ಇವೆ. ಇವುಗಳಿಗೆ ಸಮಾನಾಂತರವಾಗಿ ಕಾಸರವಳ್ಳಿ, ಪಿ.ಶೇಷಾದ್ರಿ ಮುಂತಾದವರ ಪ್ರಯೋಗಗಳು ಜಾಗತಿಕವಾಗಿಯೂ ಕನ್ನಡ ಸಿನಿಮಾವನ್ನು ಹೊಳೆಯಿಸುತ್ತಾ ಇವೆ.

ಇವೆಲ್ಲ ಪ್ರಯೋಗಗಳ ಫಲವಾಗಿ ಇಂದು ಕಿರುತೆರೆ ಬೃಹತ್ ಉದ್ಯಮವೂ ಆಗಿ ಬೆಳೆದಿದೆ. ಅದೇ ಮಟ್ಟಕ್ಕೆ ಸಿನಿಮಾಗಳು ತನ್ನದೇ ಆದ ವೀಕ್ಷಕ ಸಮೂಹವನ್ನು ಬೆಳೆಸಿಕೊಂಡು ಸಪುಷ್ಟವಾಗಿಯೇ ನಿಂತಿದೆ. ಕನ್ನಡ ಸಿನಿಮಾದ ಸರಿಸುಮಾರು 80 ವರ್ಷದ ಹಾದಿ ಕನ್ನಡ ಕಿರುತೆರೆಯ ಸರಿಸುಮಾರು 30 ವರ್ಷದ ಹಾದಿ ಒಟ್ಟ ಕನ್ನಡ ಜನಮಾನಸದ ಮೇಲೆ ಮಾಡಿರುವ ಪರಿಣಾಮವು ಈಗ ಸಂಭ್ರಮಾಚರಣೆಯಲ್ಲಿ ತೊಡಗಿರುವ ಭಾರತೀಯ ಸಿನಿಮಾದ ನೂರರ ಹಾದಿಯಲ್ಲಿ ಸ್ಪಷ್ಟವಾಗಿ ತಮ್ಮ ಛಾಪನ್ನು ಮೂಡಿಸಿವೆ.

ಆದರೆ ಇವುಗಳ ನಡುವೆಯೇ ಆಗಬೇಕಾದ ಕೆಲಸಗಳೂ ದೊಡ್ಡದಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದುದು ಕನ್ನಡದ ಮಾರುಕಟ್ಟೆಯನ್ನು ಕರ್ನಾಟಕದ ಆಚೆಗೂ ಹಿಗ್ಗಿಸುವುದು. ಆ ಕಾರ್ಯವು ಬರುವ ದಿನಗಳಲ್ಲಿ ಆಗುತ್ತದೆ ಎಂಬ ನಂಬಿಕೆಯೊಡನೆ ಈಗ ನಡೆಯುತ್ತಾ ಇರುವ ಸಂಭ್ರಮವನ್ನು ಆನಂದಿಸೋಣ.

Advertisements

0 Responses to “ನೂರರ ನೆನಪುಗಳ ಸಂಭ್ರಮ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: