“ಪಿಯಾ ಬಹುರೂಪಿಯಾಽ… ಎಂಬ ಅಪರೂಪದ ಪ್ರಯೋಗ”

 

ಮುಂಬಯಿಯ ಕಂಪೆನಿ ಥಿಯೇಟರ್ ಕಳೆದ ಮೂರು ವರ್ಷಗಳಿಂದ “ಪಿಯಾ ಬಹುರೂಪಿಯಾಽ!” ನಾಟಕವನ್ನು ಪ್ರದರ್ಶನ ಮಾಡುತ್ತಾ ಇದೆ. ಷೇಕ್ಸ್‍ಪಿಯರ್‍ನ “ಟ್ವೆಲ್ತ್ ನೈಟ್” ನಾಟಕದ ಭಾರತೀಯ ರೂಪಾಂತರವಿದು. ಮೂಲ ಷೇಕ್ಸ್‍ಪಿಯರ್‍ನ ನಾಟಕವೇ ಅತೀ ಜನಪ್ರಿಯವಾದ ಕೃತಿ. ಜಗತ್ತಿನ ಎಲ್ಲಾ ಮೂಲೆಗಳಲ್ಲೂ ಪ್ರದರ್ಶನ ಕಂಡಿರುವ ಕೃತಿ. ಈ ನಾಟಕವು ಕನ್ನಡದ “ಸದಾರಮೆ”ಯಂತಹ ನಾಟಕಕ್ಕೂ ಮೂಲ ಸಾಮಗ್ರಿ ಒದಗಿಸಿದ ಕೃತಿ ಎಂದರೆ ತಪ್ಪಾಗಲಾರದು. ಷೇಕ್ಸ್‍ಪಿಯರ್ ಬರೆದ ಹಾಸ್ಯ ನಾಟಕಗಳಲ್ಲಿ “ಮಿಡ್‍ಸಮ್ಮರ್ ನೈಟ್‍ ಡ್ರೀಂ” ನಂತರ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ನಾಟಕವಿದು. ಇದೇ ನಾಟಕವನ್ನು ದ್ವಾದಶ ರಾತ್ರ ಎಂದು ಕನ್ನಡಕ್ಕೆ ತಂದಿದ್ದಾರೆ. ಆದರೆ ಇಂತಹ ನಾಟಕವನ್ನು ಪಾತ್ರದ ಹೆಸರುಗಳನ್ನು ಮೂಲದಂತೆಯೇ ಇರಿಸಿ ಪಾತ್ರದ ಪರಿಸರವನ್ನು ಮಾತ್ರ ಭಾರತೀಯಗೊಳಿಸುವುದು ಅತ್ಯಂತ ಕಷ್ಟದ ಕೆಲಸ. ಜೊತೆಗೆ ಅದನ್ನು ಮೂಲ ನಾಟಕದಷ್ಟೇ ಸಂಗೀತಮಯಗೊಳಿಸುವುದು ಮತ್ತೂ ಕಷ್ಟದ ಕೆಲಸ.

ಕಂಪೆನಿ ಥಿಯೇಟರ್‍ ತಂಡ ಅತುಲ್‍ ಕುಮಾರ್ ಅವರ ನಿರ್ದೇಶನದಲ್ಲಿ ಕಟ್ಟಿರುವ ಬಹುರೂಪಿಯಾಽ ಅಸಾಧ್ಯಗಳನ್ನು ಸರಳವಾಗಿ ಸಾಧಿಸಿದೆ. ಗ್ಲೋಬ್ ಥಿಯೇಟರ್, ಲಂಡನ್‍ನವರು ನಡೆಸುವ ಷೇಕ್ಸ್‍ಪಿಯರ್ ನಾಟಕದ ಉತ್ಸವಕ್ಕಾಗಿ ತಯಾರಾದ ನಾಟಕವಿದು. ಲಂಡನ್‍ನಲ್ಲಿ ಮೊದಲ ಪ್ರದರ್ಶನವಾದಾಗ ತಮ್ಮ ದೇಶದ ನಾಟಕಕಾರನ ಕೃತಿಯೊಂದನ್ನು ಹೀಗೆ ಭಾರತೀಯಗೊಳಿಸಿರುವುದನ್ನು ಕಂಡು ಲಂಡನ್ನಿನ ರಂಗಪ್ರೇಮಿಗಳು ಐದಾರು ನಿಮಿಷ ಎಡಬಿಡದೆ ಕರತಾಡನ ಮಾಡಿದ ನಾಟಕವಿದು.

ಭಾರತದ ಪುರಾಣ ಕತೆಗಳಲ್ಲಿಯೇ ಆಗಲಿ, ಭಾರತದ ಜನಪದದಲ್ಲಿಯೇ ಆಗಲಿ ತಪ್ಪುಗ್ರಹಿಕೆಯಿಂದ, ಮಿಸ್ಟೇಕನ್ ಐಡೆಂಟಿಟಿಯಿಂದ ಹುಟ್ಟುವ ಹಾಸ್ಯವಿರುವ ಕತೆಗಳು ಅಸಂಖ್ಯಾತ. ವಿಶೇಷವಾಗಿ ನೌಟಂಕಿ ಎಂಬ ಜಾನಪದ ಪ್ರಕಾರದಲ್ಲಂತೂ ಇಂತಹ ಕತೆಗಳು ಹೇರಳ. ಷೇಕ್ಸ್‍ಪಿಯರ್‍ನ ಈ ನಾಟಕದ ತಿರುಳಿನಲ್ಲೂ ಇರುವುದು ಅಂತಹುದೇ ಮಿಸ್ಟೇಕನ್ ಐಡೆಂಟಿಟಿಯ ಕತೆ. ಅದರಲ್ಲೂ ಹುಡುಗಿಯೊಬ್ಬಳು ಹುಡುಗನ ವೇಷದಲ್ಲಿ ಇರುವುದು ಮತ್ತು ಆ ಹುಡುಗನನ್ನೇ ಪ್ರೀತಿಸುವ ವ್ಯಕ್ತಿಗಳಿರುವ ಕತೆಯಂತೂ ರಂಗಭೂಮಿಯ ಇತಿಹಾಸದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ.  ನಮ್ಮ ನಾಡಿನ ಪ್ರಖ್ಯಾತ ನಾಟಕಗಳಲ್ಲಿ ಒಂದಾದ “ಸದಾರಮೆ”ಯಲ್ಲಿಯೂ ಇಂತಹುದೇ ಹೂರಣ ಉಳ್ಳ ಕತೆ ಇದೆ.

ಷೇಕ್ಸ್‍ಪಿಯರ್ ತನ್ನ ನಾಟಕದಲ್ಲಿ ಸಾಗರದಲ್ಲಿ ದಿಕ್ಕು ತಪ್ಪಿದ ಸೋದರ ಸೋದರಿಯರ ಕತೆಯನ್ನು ಹೇಳುತ್ತಾನೆ. ಇವರು ಅವಳಿಗಳು. ಆದರೆ ಒಂದು ಪಾತ್ರ ಹೆಣ್ಣು ಮತ್ತೊಂದು ಗಂಡು. ಸೋದರನನ್ನು ಹುಡುಕುತ್ತಾ ಹೊರಟ ಸೋದರಿ ತಾನು ಗಂಡಿನ ವೇಷ ಧರಿಸುತ್ತಾಳೆ ಮತ್ತು ಶ್ರೀಮಂತನೊಬ್ಬನ ಸೇವಕನಾಗಿ/ ಸೇವಕಳಾಗಿ ಕೆಲಸ ಮಾಡತೊಡಗುತ್ತಾಳೆ. ಆ ಶ್ರೀಮಂತ ಮದುವೆಯಾಗಬೇಕಿರುವ ಹುಡುಗಿಯು ಈ ಸೇವಕನನ್ನು ಪ್ರೀತಿಸುವುದು ದ್ವಾದಶ ರಾತ್ರಿ ನಾಟಕದ ಹೂರಣ.

ಇದನ್ನು ಭಾರತೀಕರಣಗೊಳಿಸುವಾಗ (ರೂಪಾಂತರ: ಅಮಿತೋಷ್ ನಾಗ್‍ಪಾಲ್) ಮೂಲ ಹೆಸರುಗಳನ್ನೇ ಬಳಸಿ ನೌಟಂಕಿಯ ಮಾದರಿಯಲ್ಲೇ ನಮ್ಮಲ್ಲಿನ ಬಯಲು ನಾಟಕದ ದೊಡ್ಡಾಟ, ಸಣ್ಣಾಟದ ಹಾಗೆ ಕಟ್ಟಿದ್ದಾರೆ. ಮೂಲ ನಾಟಕದಲ್ಲಿ ಇರುವ ಶ್ರೀಮಂತ, ಬಡವ, ಸೇವಕ ಮುಂತಾದ ವರ್ಗಗಳನ್ನು ಪ್ರತ್ಯೇಕಿಸದೆ ಎಲ್ಲರನ್ನೂ ಮನುಷ್ಯರು ಎಂಬಂತೆ ಕಟ್ಟುತ್ತಾರೆ. ಮಾತುಗಳನ್ನು ಲಯಬದ್ಧವಾಗಿಸಿ ಹಾಡಿನಂತೆ ಮಾಡುತ್ತಾರೆ. ಎಲ್ಲಾ ಪಾತ್ರಗಳೂ ನಿರಂತರವಾಗಿ ಪ್ರೇಕ್ಷಕರ ಜೊತೆಗೆ ಮಾತಾಡುತ್ತಾ ಸ್ವಗತಗಳಿಗೆ ಇರುವ ಅರ್ಥವನ್ನು ಬ್ರೆಕ್ಟಿಯನ್ ಮಾದರಿಯಲ್ಲಿ ಬಳಸುತ್ತವೆ. ಹೀಗಾಗಿ ನೋಡುಗನು ಸದಾ ಕಾಲ ನಾಟಕದೊಳಗೆ ಇರುವಂತೆ ಮಾಡುತ್ತಾರೆ.

ಮೂಲ ನಾಟಕದಲ್ಲಿ ಅತ್ಯಂತ ಸಣ್ಣದಾದ ಸೆಬಾಸ್ಟಿಯನ್ ಪಾತ್ರವೂ ಈ ನಾಟಕದಲ್ಲಿ ಸೂತ್ರಧಾರನ ಪಾತ್ರವಾಗಿ ಕೆಲಸ ಮಾಡುತ್ತದೆ. ಆ ನಾಟಕದ ಪಾತ್ರವನ್ನು ಸ್ವತಃ ಅಮಿತೋಷ್‍ ನಾಗ್‍ಪಾಲ್ ಮಾಡಿದ್ದಾರೆ. ಆತ ದೃಶ್ಯವೊಂದರಲ್ಲಿ ಪ್ರೇಕ್ಷಕರ ಜೊತೆಗೆ ನೇರವಾಗಿ ಮಾತಾಡುತ್ತಾ, “ಈ ಷೇಕ್ಸ್‍ಪಿಯರ್ ಬಾಬಾನ ‍ದೌ ದೈ ನಾನೂ ಮಾತಾಡಬಹುದಲ್ವಾ? ನಿಮ್ಮ ಎದೆಯ ಮೇಲೆ ಕೈ ಇಟ್ಟುಕೊಂಡು ಹೇಳಿ, ಈ ನಾಟಕದ ಟೋಬಿ ಪಾತ್ರ ನಾನು ಮಾಡಬಹುದಾಗಿತ್ತಲ್ವಾ?” ಎನ್ನುತ್ತಾರೆ. ಇಡೀ ಸಭಾಮಂದಿರ ನಗೆಗಡಲಿನಲ್ಲಿ ಮುಳುಗಿ ನಾವೂ ನಾಟಕದ ಭಾಗ ಎಂದುಕೊಳ್ಳುತ್ತದೆ.

ಈ ನಾಟಕ ಆರಂಭವಾಗುವುದೇ ಪ್ರಾರ್ಥನೆಯಿಂದ… ಆ ಪ್ರಾರ್ಥನೆಯಾದರೂ ಯಾರಿಗೆ ರಂಗದ ನಡುವೆ ಹಾಕಲಾಗಿರುವ ಷೇಕ್ಸ್‍ಪಿಯರ್‍ ಎಂಬ ಸಂತನಿಗೆ… ಅಂತಹದನ್ನು ನಿರೀಕ್ಷಿಸಿರದ ಪ್ರೇಕ್ಷಕ ನಗುತ್ತಾ ನಾಟಕದ ಲೋಕದ ಒಳಗೆ ಇಳಿಯುತ್ತಾನೆ. ನೋಡುಗನಿಗೆ ಮಧ್ಯಪ್ರದೇಶದ, ಪಂಜಾಬಿನ ಮತ್ತು ರಾಜಸ್ಥಾನದ ಜಾನಪದ ಗೀತೆಗಳ ಮಾದರಿಯಲ್ಲಿ ಕೇಳುವ ಷೇಕ್ಸ್‍ಪಿಯರ್‍ನ ಮಾತುಗಳು ಹಾಡಾಗಿ ಕೇಳ್ತಾ, ನಗಿಸುತ್ತಾ ಕರೆದೊಯ್ಯುತ್ತದೆ. ಇಡೀ ನಾಟಕವನ್ನು ಎಲ್ಲಾ ನಾಟಕದ ಸಂಪ್ರದಾಯದ ಗೋಡೆಗಳನ್ನು ನಗು ಎಂಬ ಸುತ್ತಿಗೆಯಿಂದ ಹೊಡೆದುರುಳಿಸುವ ನಾಟಕ ಎನ್ನಬಹುದು.

ನಾಟಕದಲ್ಲಿ ಗೀತಾಂಜಲಿ ಕುಲಕರ್ಣಿಯವರು ಗಂಡು ವೇಷ ಧರಿಸಿದ ವಯೋಲ ಪಾತ್ರದಲ್ಲಿ, ಮಾನಸಿ ಮುಲ್ತಾನಿಯವರು ಪಂಜಾಬಿ ಜಾನಪದ ಹಾಡುವ ಆರ್ಸಿನೋ ಪಾತ್ರದ ಪ್ರೇಮಿಯಾಗಿ, ನೇಹಾ ಸರಾಫ್ ಅವರು ಸದಾ ಹಾಡುವ ಇಲಿರಿಯಾ ಪಾತ್ರ, ಸೌರಬ್ ತಿವಾರಿಯವರು ಶುದ್ಧ ಹಿಂದಿ ಮಾತಾಡುವ ಮಾಲವೊಲಿಯೋ ಪಾತ್ರದಲ್ಲಿ, ಗಗನ್ ಸಿಂಗ್ ಅವರು ನಾಟಕದ ಸಂಗೀತ ನಿರ್ದೇಶಕರು ಜೊತೆಗೆ ಟೋಬಿ ಪಾತ್ರದಲ್ಲಿ ಇಡಿಯ ವೇದಿಕೆಯನ್ನು ಆವರಿಸಿಕೊಳ್ಳುತ್ತಾರೆ. ಇದು ಹೇಳಿದರೆ ಮಾತಿಗೆ ದಕ್ಕುವ ನಾಟಕವಲ್ಲ. ನೋಡಿಯೇ ಆನಂದಿಸಬೇಕಾದ ನಾಟಕ.

ಈ ನಾಟಕವನ್ನು ಬಿ ವಿ ಕಾರಂತರು ನಮ್ಮಲ್ಲಿ ಕಟ್ಟಿದ ಉತ್ಸವ ರಂಗಭೂಮಿಗೆ ಹೋಲಿಸಬಹುದು. ಆದರೆ ಈ ನಾಟಕ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುಗನನ್ನು ನಾಟಕದ ಭಾಗವಾಗಿ ಮಾಡಿಬಿಡುತ್ತಾರೆ.  ಮೂಲ ನಾಟಕಕ್ಕೆ ನಿಷ್ಟವಾಗಿಯೇ ಕಟ್ಟಲಾಗಿರುವ ಈ ನಾಟಕದಲ್ಲಿ ಸೆಬಾಸ್ಟಿಯನ್ ಮತ್ತು ಆಂಡ್ರ್ಯೂ ಪಾತ್ರದ ನಡುವೆ ನಡೆಯುವ ಕವ್ವಾಲಿ ಯುದ್ಧ… ಟೋಬಿ ಆ ಹಾಡಿಗೆ ಮುಂದುವರಿಕೆಯಂತೆ ಹೇಳುವ ಜಾಗ್ರತಾ ಹಾಡು ಎಲ್ಲವೂ ರಂಗಮಂದಿರವನ್ನು ಸಜೀವಗೊಳಿಸಿಬಿಡುತ್ತದೆ. 

ಈ ನಾಟಕ ಎಲ್ಲಿಯೂ ನಮ್ಮದಲ್ಲದ ಸರಕು ಎನಿಸದೆ ನಿರಂತರವಾಗಿ ನಗಿಸುತ್ತಾ ಸಂಗೀತ ಲೋಕದಲ್ಲಿ ಮುಳುಗಿಸುತ್ತಾ, ಮರುನಿರ್ಮಿ, ಮರು ವ್ಯಾಖ್ಯಾನಿತ, ಮರುನಿರ್ವಚಿತ ಷೇಕ್ಸ್‍ಪಿಯರ್‍ನ ನಾಟಕವಾಗಿ ಎರಡೂವರೆಗಂಟೆಗಳು ನಮ್ಮ ಕಣ್ಣೆದುರು ದಾಟಿದ್ದು ತಿಳಿಯದ ಹಾಗೆ ಮಾಡಿಬಿಡುತ್ತದೆ. ನಾನು ನೋಡಿದ ಅತ್ಯುತ್ತಮ ನಾಟಕಗಳಲ್ಲಿ ಇದೂ ಒಂದು. ಈ ನಾಟಕ ಮತ್ತೆ ಮತ್ತೆ ನಮ್ಮ ಬೆಂಗಳೂರಿಗೆ ಬಂದಿದೆ. ದೇಶದಾದ್ಯಂತ ಮಾತ್ರವಲ್ಲದೆ ಜಗತ್ತಿನ ಅನೇಕ ದೇಶಗಳಲ್ಲಿ ಪ್ರದರ್ಶನ ಕಾಣುತ್ತಲೇ ಇದೆ. ಷೇಕ್ಸ್‍ಪಿಯರ್ ಎಂಬ ಮಹಾನ್ ನಾಟಕಕಾರನ ಶಕ್ತಿಯ ಜೊತೆಗೆ ದೇಶಿಯ ಕಥನ ಕ್ರಮಗಳ ಬಳಕೆಯಿಂದಾಗಿ ಈ ನಾಟಕ ನೀವು ನೋಡಬೇಕಾದ ನಾಟಕಗಳಲ್ಲಿ ಒಂದಾಗಿ ಉಳಿಯಲಿ.

– ಬಿ.ಸುರೇಶ

21 ಮಾರ್ಚ್ 2014

ಕ್ಯಾಂಪ್: ಬೆಂಗಳೂರು

http://chukkubukku.com/kagada/1395307814

Advertisements

0 Responses to ““ಪಿಯಾ ಬಹುರೂಪಿಯಾಽ… ಎಂಬ ಅಪರೂಪದ ಪ್ರಯೋಗ””  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: