ಆರು ವರುಷಗಳ ಅನನ್ಯ ಅನುಭವ (ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಸಂಚಾಲಕನಾಗಿ ನಾನು ಕಂಡದ್ದು)

        ಆರು ವರುಷಗಳ ಹಿಂದೆ, 2008ರ ಅಂತಿಮ ದಿನಗಳಲ್ಲಿ ತಟ್ಟನೆ ನನ್ನ ಎದುರಿಗೆ ಬಂದು ಕೂತಿದ್ದ ಪತ್ರದಲ್ಲಿ “ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ” ಎಂಬ ಆಹ್ವಾನವಿತ್ತು. ನನಗೆ ಇಂತಹದೊಂದು ಕೆಲಸವನ್ನು ಒಪ್ಪಿಕೊಳ್ಳುವುದೋ ಬೇಡವೋ ಎಂಬ ಗೊಂದಲವಿತ್ತು. ನಾನು ಆ ಕಾಲಘಟ್ಟದಲ್ಲಿ ಒಪ್ಪಿಕೊಂಡಿದ್ದ ಕೆಲಸಗಳು ಕೂಡ ಹೆಚ್ಚಿದ್ದವು. ಎರಡು ದೈನಿಕ ಧಾರಾವಾಹಿಗಳು, ಜೊತೆಗೆ ನಾನು ನಿರ್ಮಿಸುತ್ತಾ ಇದ್ದ ಸಿನಿಮಾದ ಕೆಲಸಗಳು, ನಾನೇ ಒಪ್ಪಿಕೊಂಡು ನಿರ್ವಹಿಸುತ್ತಾ ಇದ್ದ ಕಾರ್ಮಿಕ ಸಂಘಟನೆಗಳ ಕೆಲಸಗಳ ಜೊತೆಗೆ ಇಂತಹ ಕೆಲಸ ಮಾಡಬಹುದೇ ಎಂಬ ಅನುಮಾನವಿತ್ತು. ಜೊತೆಗೆ ಸೈದ್ಧಾಂತಿಕವಾಗಿ ಸಂಪೂರ್ಣ ವಿಭಿನ್ನ ಪಾತಳಿಯ ರಾಜಕೀಯ ಆಲೋಚನೆಯಿದ್ದ ಪಕ್ಷವೊಂದರ ಅಂಗಸಂಸ್ಥೆಯಲ್ಲಿ ನಾನು ಕೆಲಸ ಮಾಡಬಹುದೇ ಎಂಬ ಸಂದೇಹವಿತ್ತು. ಹೀಗಾಗಿ ನನ್ನ ಅನೇಕ ಗುರುಗಳ ಜೊತೆಗೆ ಮಾತಾಡಿದೆ. ಎಲ್ಲರೂ ಹೇಳಿದ್ದು ಒಂದೇ ಮಾತು “ಕನ್ನಡ ಕಟ್ಟುವ ಕೆಲಸಕ್ಕೂ ವೈಯಕ್ತಿಕ ರಾಜಕೀಯ ನಿಲುವಿಗೂ ಸಂಬಂಧವಿಲ್ಲ.  ಅವಕಾಶವನ್ನು ಬಳಸಿಕೊಂಡು ಕನ್ನಡಕ್ಕಾಗಿ ಕೆಲಸ ಮಾಡು”. ಈ ಮಾತುಗಳು ಕೊಟ್ಟ ಧೈರ್ಯವನ್ನು ಬೆನ್ನಿಗಿಟ್ಟುಕೊಂಡು ನನಗೆ ಬಂದಿದ್ದ ಪತ್ರಕ್ಕೆ ಒಪ್ಪಿಗೆಯನ್ನು ನೀಡಿದೆ.

 

       ಆಗ ತಾನೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ, ಆದರೆ ನನಗೆ ಬಹುಕಾಲದಿಂದ ಸ್ನೇಹಿತರು, ನನ್ನ ಹಿತಚಿಂತಕರು, ನನ್ನನ್ನು ಬಾಲ್ಯದಿಂದಲೂ ಬಲ್ಲವರು ಆಗಿದ್ದ ಮುಖ್ಯಮಂತ್ರಿ ಚಂದ್ರು ಅವರನ್ನು ಭೇಟಿ ಮಾಡಿದೆ. ನಾನು ಅವರ ಜೊತೆಗೆ ಗಡಿ ಕನ್ನಡ ಜಾಥದಲ್ಲಿ ಭಾಗವಹಿಸಿದ್ದನ್ನು ಮತ್ತು ಅದಕ್ಕಾಗಿ ಸಿದ್ಧಪಡಿಸಿದ ವರದಿಯನ್ನು ನೆನೆಸಿಕೊಂಡು, “ಆ ಕೆಲಸದ ಕಾರಣವಾಗಿ ಈ ಸದಸ್ಯತ್ವದ ಅವಕಾಶ ನಿನಗೆ ದೊರೆತಿದೆ” ಎಂದು ಮೂರು ವರ್ಷಗಳ ಅವಧಿಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು ಎಂದರು. ನಾನು ಅದೇ ದಿನ ಕೂತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆ ವರೆಗಿನ ಕೆಲಸಗಳನ್ನು ಮತ್ತು ಆ ವರೆಗೆ ಮಾಡದೆ ಉಳಿದಿರುವ ವಿವರಗಳನ್ನು ವಿಶ್ಲೇಷಿಸಲು ತೊಡಗಿದೆ. ಎರಡು ದಿನಗಳ ನಂತರ ಮೂರು ವರ್ಷದ ಅವಧಿಗೆ ಆಗುವ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇವಲ ಆಡಳಿತ ಕನ್ನಡದ ಅನುಷ್ಠಾನಕ್ಕಾಗಿ ಕೆಲಸ ಮಾಡಬಾರದು ಕನ್ನಡಿಗರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಪರಿಭಾವಿಸಿ, ಕನ್ನಡ ಕಟ್ಟುವ ಕೆಲಸಗಳನ್ನು ಎಂಟೊಂಬತ್ತು ವಿಭಾಗಗಳಾಗಿ ವಿಂಗಡಿಸಿ, ಆ ವಿಂಗಡಣೆಯ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಸುದೀರ್ಘ ಟಿಪ್ಪಣಿಯನ್ನು ಸಿದ್ಧ ಮಾಡಿದೆ. ನಂತರ ನನ್ನ ಟಿಪ್ಪಣಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಮೊದಲ ಸಭೆಯಲ್ಲಿ ಇರಿಸಿದೆ. ಎಲ್ಲರೂ ನನ್ನ ಯೋಜನೆಯನ್ನು ಒಪ್ಪಿದರು ಮತ್ತು ಬಹುತೇಕ ಕೆಲಸಗಳನ್ನು ರೂಪಿಸುವ ಜವಾಬ್ದಾರಿಯನ್ನು ನನಗೆ ಹೊರೆಸಿದರು. ಹೀಗಾಗಿ ನನಗೆ ಗೊತ್ತಿಲ್ಲದೆ ನಾನೊಂದು ದೊಡ್ಡ ಚಳುವಳಿಯ ಭಾಗವಾಗಿ ಹೋಗಿದ್ದೆ. ಕನ್ನಡ ಕಟ್ಟಲು ನಾಡಿಗರಿಗೆ ಒದಗಿಸಿದ ಸಪ್ತ ಸೂತ್ರಗಳಿಂದ ಹಿಡಿದು, ಗಣಕ ಕನ್ನಡ, ಕಾರ್ಮಿಕ ಕನ್ನಡ, ವಿದ್ಯಾರ್ಥಿ ಕನ್ನಡ, ಗಡಿನಾಡ ಕನ್ನಡ, ಹೊರನಾಡ ಕನ್ನಡ ಎಂದು ವರ್ಷವಿಡೀ ಮಾಡಬಹುದಾದ ಕಾರ್ಯಕ್ರಮಗಳನ್ನು ರೂಪಿಸಿದ್ದೆ. ನಮ್ಮ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು, ಆಗ ಕಾರ್ಯದರ್ಶಿಗಳಾಗಿದ್ದ ಶಾಂತರಾಜು ಅವರಿದ್ದಾಗ ನನಗೆ ಬೃಹದಾಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯ ಹಾಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು.

        ಇಷ್ಟೊಂದು ಕಾರ್ಯಕ್ರಮಗಳನ್ನು ಬರೆದುಕೊಳ್ಳುವುದು ಕಷ್ಟವಲ್ಲ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಮತ್ತು ಆ ಕೆಲಸಗಳ ಜೊತೆಗೆ ನಾನು ಅದಾಗಲೇ ಒಪ್ಪಿಕೊಂಡ ಕೆಲಸ ಮಾಡುವುದು ಕಷ್ಟದ ವಿಷಯವಾಗಿತ್ತು. ಆಗಲೇ ನಾನು ನೇರವಾಗಿ ಗಣಕದಲ್ಲಿಯೇ ನನ್ನ ಚಿತ್ರಕತೆಗಳನ್ನು ಬರೆಯುವ ಅಭ್ಯಾಸ ಮಾಡಿಕೊಂಡದ್ದು. ಊರಿಂದೂರಿಗೆ ತಿರುಗುತ್ತಾ ನನ್ನ ದೈನಿಕ ಧಾರಾವಾಹಿಗಳಿಗೆ ಕತೆಯನ್ನೂ ಒದಗಿಸುತ್ತಾ ಕೆಲಸ ಮಾಡಲಾರಂಭಿಸಿದೆ. ಈ ನಿರಂತರ ಪ್ರಯಾಣದ ಅನುಭವವು ಏಕಕಾಲಕ್ಕೆ ಎರಡು ಮೂರು ಕೆಲಸ ಮಾಡುವುದನ್ನು (Multiple tasking) ಕಲಿಸಿತು.

        ಏಕಕಾಲಕ್ಕೆ ಅನೇಕ ಮುಖಗಳನ್ನು ಹೊತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ನನಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಅಧಿಕೃತವಾಗಿ ವಹಿಸಲಾಗಿತ್ತು. ಆದರೆ ಅನಧಿಕೃತವಾಗಿ ನಾನು ಕನ್ನಡಿಗರಿರುವ ಎಲ್ಲಾ ತಾಣಗಳಲ್ಲೂ ಕೆಲಸ ಮಾಡಲು ಆರಂಭಿಸಿದ್ದೆ. ಸೊಲ್ಲಾಪುರ, ಮೈಂದರ್ಗಿ, ಡಂಕಣಿಕೋಟೆ, ತಾಳವಾಡಿ ಫಿರ್ಕಾ, ಹೊಸೂರು, ಕಾಸರಗೋಡುಗಳಲ್ಲದೆ ಚೆನ್ನೈ, ಹೈದರಾಬಾದ್, ಗೋವಾ, ಮುಂಬೈ, ದೆಹಲಿ, ಅಹಮದಾಬಾದ್, ಚಂಡೀಘರ್ ಎಂದು ಕನ್ನಡಿಗರು ಇರುವ ಎಲಾ ತಾಣಗಳಲ್ಲಿಯೂ ಕನ್ನಡ ಕಟ್ಟುವ ಕೆಲಸವನ್ನು ಮಾಡತೊಡಗಿದೆವು. ಜೊತೆಗೆ ಕಾರ್ಮಿಕ ಕನ್ನಡ ಎಂಬ ಯೋಜನೆಯಡೀ ಎಲ್ಲಾ ಕಾರ್ಖಾನೆಗಳ ಕನ್ನಡಿಗರನ್ನು ಕನ್ನಡ ವಾತಾವರಣದಲ್ಲಿ ಇರಿಸುವ ಕೆಲಸ, ವಿದ್ಯಾರ್ಥಿ ಕನ್ನಡದ ಹೆಸರಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕನ್ನಡದ ಕೆಲಸ ಮಾಡಲು ತೊಡಗಿದೆವು. ಇದರೊಂದಿಗೆ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ರಮದಡಿಯಲ್ಲಿ ಅನೇಕ ಶಿಬಿರಗಳನ್ನು ಆರಂಭಿಸಿದೆವು. ಒಂದು ಹಂತದಲ್ಲಂತೂ ಬೆಂಗಳೂರು ನಗರದಲ್ಲಿ ಏಕಕಾಲಕ್ಕೆ 65 ಕನ್ನಡ ಕಲಿಕಾ ಶಿಬಿರಗಳು ನಡೆಯುತ್ತಾ ಇದ್ದವು ಎಂಬುದು ನನಗೆ ಖುಷಿ ಕೊಟ್ಟ ಸಂಗತಿಯಾಗಿತ್ತು. ಇನ್ನು ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಾ ಇದ್ದ ಮಾಧ್ಯಮ ಪ್ರಶಸ್ತಿ ಇರಬಹುದು, ಹೊರನಾಡ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಾ ಇದ್ದ ವಿದ್ಯಾರ್ಥಿ ವೇತನವಿರಬಹುದು, ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ಕನ್ನಡ ಜಾಗೃತಿ ಕಾರ್ಯಕ್ರಮಗಳಿರಬಹುದು. ಇವುಗಳಿಂದ ಕನ್ನಡವನ್ನು ಕಾಲೇಜಿನೊಳಗೆ ಮಾತಾಡಲು ಹಿಂಜರಿಯುತ್ತಿದ್ದ ಅನೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತಾಡುವ ವಿಶ್ವಾಸಗಳಿಸಿಕೊಂಡದ್ದು ವಿಶೇಷ ಸಂತೋಷದ ಸಂಗತಿ. ಹೊರನಾಡ ಕನ್ನಡಿಗರಲ್ಲಿ ತಮ್ಮ ಅಳಲನ್ನು ಕೇಳುವ ಸಂಸ್ಥೆಯೊಂದಿದೆ, ಇದು ನಮಗೆ ಮಾತಾಡುವ ವೇದಿಕೆಯಾಗಲಿದೆ ಎಂಬ ವಿಶ್ವಾಸ ಮೂಡಿದ್ದು ಸಹ ನಮ್ಮ ಕೆಲಸಗಳ ಫಲವೇ. ಇಂತಹ ಅನೇಕ ಸಂತೋಷಗಳ ನಡುವೆ ಕೆಲವು ಕಹಿಗಳು ಇರಬಹುದು. ಅಂತಹ ಕಹಿಗಳನ್ನು ಮರೆತು, ತಪ್ಪಾಗಿದ್ದರೆ ತಿದ್ದಿಕೊಂಡು ಮತ್ತೆ ಮತ್ತೆ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುವುದಷ್ಟೇ ನಮ್ಮೆದುರಿಗೆ ಇರುವ ಆಯ್ಕೆ. 

        ಮೊದಲ ಮೂರು ವರ್ಷದ ಅವಧಿಯಲ್ಲಿನ ಕೆಲಸದ ನಂತರ ನಮ್ಮನ್ನೆಲ್ಲ ಸದಸ್ಯರಾಗಿ ಪುನರ್ ನಾಮಕರಣ ಮಾಡಿರಲಿಲ್ಲ. ವಾಸ್ತವವಾಗಿ ಹೊಸ ಸದಸ್ಯರನ್ನೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರಲಿಲ್ಲ. ಆಗ ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪರಿಧಿಯಲ್ಲಿದ್ದ ಅವಕಾಶಗಳನ್ನು ಬಳಸಿ ನಮ್ಮಲ್ಲಿ ಅನೇಕರನ್ನು ಸಂಚಾಲಕರು ಎಂದು ಮಾಡಿಕೊಂಡರು. ಹೀಗಾಗಿ ಮತ್ತೆ ಮೂರು ವರ್ಷಗಳ ಕಾಲ ಸಂಚಾಲಕನಾಗಿ ಕನ್ನಡ ಕಟ್ಟುವ ಕೆಲಸ ಮಾಡುವ ಅವಕಾಶ ದೊರೆಯಿತು. ಈ ಆರು ವರ್ಷದ ಅವಧಿಯಲ್ಲಿ ಕನ್ನಡ ಕಟ್ಟುವ ಕೆಲಸಕ್ಕಾಗಿ ಅನೇಕಾನೇಕ ಕಾರ್ಯಕ್ರಮಗಳನ್ನು ವಿದೇಶದಲ್ಲಿಯೂ ಸೇರಿದಂತೆ ಮಾಡಿದ್ದೇವೆ. ಶಾಸ್ತ್ರೀಯ ಕನ್ನಡಕ್ಕಾಗಿಯಂತೂ ನಿರಂತರವಾಗಿ ಕೆಲಸ ಮಾಡಿದ್ದೇವೆ. ಕನ್ನಡಿಗರ ಬಹು ಮುಖ್ಯ ಬೇಡಿಕೆಗಳನ್ನು ಹಿಡಿದು ಎರಡು ಬಾರಿ ದೆಹಲಿಗೆ ಕನ್ನಡದ ಹಿರಿಯರ ನಿಯೋಗವೊಂದನ್ನು ಕೊಂಡೊಯ್ದು ಸಂಸದರನ್ನು ಕೇಂದ್ರ ಸರ್ಕಾರದ ಮಂತ್ರಿಗಳನ್ನು, ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದೇವೆ. ಗಣಕ ಕನ್ನಡಕ್ಕಾಗಿ ಕನ್ನಡ ಗಣಕ ಪರಿಷತ್ತಿನ ಜೊತೆ ಸೇರಿ ಯೂನಿಕೋಡ್‍ನ ಹೊಸ ಕನ್ನಡ ಅಕ್ಷರ ಶೈಲಿಗಳನ್ನು ನೀಡಿದ್ದೇವೆ. ಇವೆಲ್ಲವೂ ಕನ್ನಡ ಜನಮಾನಸಕ್ಕೆ ಒಳಿತನ್ನು ಮಾಡುತ್ತೇವೆ ಎಂದು ನಂಬಿದ್ದೇವೆ.

        ಈ ಹಾದಿಯಲ್ಲಿ ನಾವು ಗಮನಿಸದೆ ಉಳಿದ ಕೆಲಸಗಳನ್ನು ನೆನಪಿಸುತ್ತಾ ನಾವು ಮಾಡಿರಬಹುದಾದ ತಪ್ಪುಗಳನ್ನು ಗುರುತಿಸಿ ಹೇಳುತ್ತಾ ಇದ್ದ ದೊಡ್ಡ ಪಡೆಯೇ ಇತ್ತು. ಕಾರ್ಮಿಕ ಲೋಕದ ರಾ.ನಂ ಚಂದ್ರಶೇಖರ್ ಅವರು, ಸಿದ್ದಯ್ಯ, ಮ.ಚಂದ್ರಶೇಖರ್, ತಿಮ್ಮೇಶ್, ವಿಜಯಕುಮಾರ್ ತರಹದವರು ನೀಡಿದ ಸಲಹೆಗಳನ್ನು ಮರೆಯುವಂತಿಲ್ಲ. ಗಣಕ ಕನ್ನಡಕ್ಕೆ ಸಂಬಂಧಿಸಿದಂತೆ ಅರುಣ್ ಜಾವಗಲ್, ಚೇತನ್ ಜೀರಾಲ್, ಆನಂದ್ ಗುರು ಮುಂತಾದ ಗೆಳೆಯರು ನೀಡಿದ ಸಲಹೆಗಳನ್ನು ಮರೆಯುವಂತಿಲ್ಲ. ಇಂತಹ ವಿಮರ್ಶಕರ ಬಳಗದಿಂದಾಗಿ ನಮ್ಮ ಕೆಲಸಗಳು ಆರೋಗ್ಯಪೂರ್ಣವಾದವು ಎಂದರೆ ತಪ್ಪಾಗಲಾರದು. ಜೊತೆಗೆ ವಿಷ್ಣುನಾಯ್ಕ ಅಂತಹವರ ಜೊತೆಗೆ ಕಾರ್ಯಕ್ರಮಗಳನ್ನು ರೂಪಿಸಿದ ಅನುಭವ, ನಾ.ಡಿಸೋಜಾ ಅವರ ಎಚ್ಚರಿಕೆಯ ಮಾತುಗಳು, ಮಲ್ಲಿಕಾ ಘಂಟಿ ಅವರು ಅದೇ ಕಾರ್ಯಕ್ರಮಗಳಿಗೆ ನೀಡುತ್ತಾ ಇದ್ದ ಹೋರಾಟದ ಕಸುವು, ಕೃಷ್ಣೇಗೌಡರ ತಮಾಷೆಗಳು, ರಂಗಾರೆಡ್ಡಿ ಕೋಡಿರಾಂಪುರ ಅವರ ಒಡನಾಟ… ಇವೆಲ್ಲವೂ ನನಗೆ ದಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಇವರೆಲ್ಲರಿಂದಾಗಿ ನಾವು ಮಾಡಿದ ಯೋಜನೆಗಳು ಜನಮಾನಸದಲ್ಲಿ ನಿಲ್ಲುವಂತೆ ಯಶಸ್ವಿಯಾದವು. ಈ ಹಂತದಲ್ಲಿ ಸರ್ಕಾರಕ್ಕೆ ನಾವು ನೀಡುತ್ತಾ ಇದ್ದ ಅನೇಕ ಸಲಹೆಗಳೂ ಇರುತ್ತಾ ಇದ್ದವು. ಇಂತಹ ಸಲಹೆಗಳ ಕರಡು ಸ್ವರೂಪವನ್ನು ನಾನು ಟೈಪಿಸುತ್ತಾ ಇದ್ದೆ. ನಂತರ ನಮ್ಮ ಸದಸ್ಯ ಮಿತ್ರರೂ ಓದುತ್ತಾ ಇದ್ದರು. ಆದರೆ ಸರ್ಕಾರದ ಜೊತೆಗೆ ನಾವು ಮಾತಾಡುವಾಗ ವಾಕ್ಯ ಕಟ್ಟುವ ಕ್ರಮವೇ ಬೇರೆಯಾಗಬೇಕು ಎಂಬುದನ್ನು ಮತ್ತು ಸರ್ಕಾರಕ್ಕೆ ಅರ್ಥವಾಗುವ ಭಾಷೆಯಲ್ಲಿ ಒಕ್ಕಣೆಗಳನ್ನು ರೂಪಿಸಲು ಕಲಿಸಿದವರು ಗೊ.ರು.ಚೆನ್ನಬಸಪ್ಪನವರು, ಎಂ,ಎಚ್.ಕೃಷ್ಣಯ್ಯನವರು ಮತ್ತು ಲಿಂಗದೇವರು ಹಳೇಮನೆಯವರು. ನಾವು ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಕೊಟ್ಟ ಅನೇಕ ಮನವಿಗಳನ್ನು ಈ ಮಹನೀಯರು ತಿದ್ದಿ, ಸರಿಪಡಿಸಿ ನಮ್ಮ ಮನವಿಗಳಿಗೆ ಚೌಕಟ್ಟು ಹಾಕಿಕೊಟ್ಟರು. ಹಾಗಾಗಿ ನಮ್ಮ ಮನವಿಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಿತು. ನಮ್ಮ ಮನವಿಗಳಲ್ಲಿ ಶೇಕಡಾ ಅರವತ್ತರಷ್ಟು ಮನವಿಗಳು ಕಾಯಿದೆ ಅಥವಾ ಅನುದಾನಗಳ ರೂಪ ಪಡೆದು ಅನುಷ್ಠಾನಕ್ಕೆ ಬಂದವು. ಹೀಗಾಗಿ ನಮ್ಮ ತಂಡದ ಯಶಸ್ಸಿಗೆ ಪರೋಕ್ಷ ಕಾರಣರಾದ ಇಂತಹ ಮಹನೀಯರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನೆಯಬೇಕು.

        ನಾವು ಮಾಡಿರುವುದಷ್ಟೇ ಶ್ರೇಷ್ಟ ಎಂಬ ಭ್ರಮೆಯೇನು ನಮಗಿಲ್ಲ. ಮಾಡಬಹುದಾದ ಇನ್ನೂ ಅನೇಕ ಕೆಲಸಗಳಿವೆ. ಆದರೆ ನಮ್ಮ ತಿಳುವಳಿಕೆಯ ಪರಿಧಿಯಲ್ಲಿ ಮಾಡಬಹುದಾದ ಕೆಲಸವನ್ನಂತೂ ಅಚ್ಚುಕಟ್ಟಾಗಿ ಮಾಡಿದ್ದೇವೆ. ಇದೆಲ್ಲದರ ಪರಿಣಾಮ ಏನೆಂದರೆ ಕೇವಲ ವಿಧಾನಸೌಧದ ಚೌಕಟ್ಟಿನ ಒಳಗೆ ಉಳಿದು ಹೋಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಂದು ಜನಮಾನಸಕ್ಕೆ ಪರಿಚಿತವಾದ ಸಂಸ್ಥೆಯಾಗಿದೆ.

        ಇಂತಲ್ಲಿ ಇರುವ ದೊಡ್ಡ ಸಮಸ್ಯೆ ಎಂದರೆ, ನಾವು ಯೋಜಿಸಿದ ಕೆಲಸಗಳ ಸರಿಯಾದ ನಿರ್ವಹಣೆಯ ಉಸ್ತುವಾರಿ. ಇದಕ್ಕೆ ನಮ್ಮ ಜೊತೆಗೆ ಸಮರ್ಥ ತಂಡವಿರಬೇಕು. ಹಾಗಿಲ್ಲದೆ ಹೋದರೆ ಕೆಲಸಗಳು ಜೊಳ್ಳಾಗಿ ಬಿಡುತ್ತವೆ ಅಥವಾ ಅಂದುಕೊಂಡ ಪ್ರತಿಫಲ ನೀಡುವುದಿಲ್ಲ. ಅದರಲ್ಲೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲಸವೆಂದರೆ ಕರ್ನಾಟಕ ಸರ್ಕಾರದ ಕೆಲಸವೇ ಆಗಿತ್ತಾದ್ದರಿಂದ ಅಲ್ಲಿ ಪ್ರೋಟೊಕಾಲ್‍ ನಿರ್ವಹಣೆ, ಯೋಜನೆಗೆ ಒಪ್ಪಿಗೆ ಪಡೆಯುವುದು, ಸರಿಯಾದ ಕ್ರಮದಲ್ಲಿ ಲೆಕ್ಕ ಬರೆಸುವುದು ಇವೆಲ್ಲವೂ ಬೃಹತ್ ಜವಾಬ್ದಾರಿಯ ಕೆಲಸಗಳು. ಈ ಕೆಲಸಗಳಲ್ಲಿ ಯೋಜನೆಯ ಒಪ್ಪಿಗೆ ಪಡೆಯುವಲ್ಲಿ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಅವರ ಸಹಾಯ ದೊರಕುತ್ತಿತ್ತು. ಹಣಕಾಸಿನ ನಿರ್ವಹಣೆಯಂತೂ ಕಾರ್ಯದರ್ಶಿಗಳಾಗಿದ್ದ ಶಾಂತರಾಜು ಹಾಗು ಅವರ ನಂತರ ಕಾರ್ಯದರ್ಶಿಯಾದ ಮುರಳೀಧರ ಅವರಿಂದಾಗಿ ಸುಲಭವಾಗುತ್ತಾ ಇತ್ತು. ಕಾರ್ಯಕ್ರಮವನ್ನು ಏರ್ಪಡಿಸುವ ಮತ್ತು ಅದಕ್ಕೆ ಬೇಕಾದ ಸಿದ್ಧತೆ ಮಾಡುವಲ್ಲಿ ಮಾತ್ರ ಇಂತಹ ಕೆಲಸ ಮಾಡುವ ದೊಡ್ಡ ಪಡೆ ಬೇಕಾಗುತ್ತಿತ್ತು. ಇಂತಲ್ಲಿ ನನ್ನ ನೆರವಿಗೆ ಬಂದದ್ದು ನಾಗರಾಜಮೂರ್ತಿಯ ತಂಡ. ಆತನ ತಂಡದ ಹುಡುಗರಾದ ಜಗದೀಶ್ ಜಾಲ, ದೇವರಾಜ್ ಮುಂತಾದವರನ್ನು ನಾನು ನಿದ್ದೆಗಡಿಸಿ ಬಳಸಿಕೊಂಡೆ. ಆ ಹುಡುಗರ ಕೈ ಸೋತಾಗ ನಾಗರಾಜಮೂರ್ತಿಯನ್ನೂ ಬಳಸಿಕೊಂಡೆ. ಪ್ರಾಯಶಃ ಇಂತಹ ತಂಡವೊಂದು ನನ್ನ ನೆರವಿಗೆ ಇಲ್ಲದೆ ಹೋಗಿದ್ದರೆ ಅಷ್ಟೊಂದು ಕೆಲಸ ಮಾಡುವುದು ಅಸಾಧ್ಯವಾಗುತ್ತಾ ಇತ್ತು. ಎಷ್ಟೋ ಕಾರ್ಯಕ್ರಮಗಳು ನನ್ನ ಖುದ್ದು ಇಲ್ಲದೆಯೂ ಸಕಾಲಕ್ಕೆ ನಡೆಯುತ್ತಿತ್ತು. ಹೀಗಾಗಿ ಕರ್ನಾಟಕ ಮಾತ್ರವಲ್ಲ ಮಹರಾಷ್ಟ್ರ, ಕೇರಳ, ಆಂಧ್ರ, ತಮಿಳುನಾಡಿನ ಗಡಿಕನ್ನಡ ಪ್ರದೇಶದಲ್ಲಿಯೂ ನಿರಂತರವಾಗಿ ಕನ್ನಡ ಕಟ್ಟುವ ಕೆಲಸವನ್ನು ಮಾಡಲು ಸಾಧ್ಯವಾಯಿತು.

        ಹಿಂಜರಿಕೆಯಿಂದ ವಹಿಸಿಕೊಂಡ ಜವಾಬ್ದಾರಿಯೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಆನಂದದ ಜೊತೆಗೆ ನಮ್ಮ ಅವಧಿ ಪೂರೈಸಿದ್ದೇವೆ. ಈ ಹಾದಿಯಲ್ಲಿ ನನ್ನಂತಹವನ ಕನಸುಗಳು ಸಾಕಾರಗೊಳ್ಳಲು ಸಹಕರಿಸಿದ ಮುಖ್ಯಮಂತ್ರಿ ಚಂದ್ರು ಅವರಂತಹ ಅಧ್ಯಕ್ಷರು ಇಲ್ಲದೆ ಹೋಗಿದ್ದರೆ ಇದ್ಯಾವುದು ಆಗುತ್ತಾ ಇರಲಿಲ್ಲ ಎಂಬುದನ್ನು ನೆನೆಯುತ್ತಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ನನಗೆ ನೀಡಿದ ಸಹಕಾರವನ್ನು ನಾನು ಸದಾ ನೆನೆಯುತ್ತಾ, ಮುಂದೆಯೂ ನಮ್ಮ ಕನಸುಗಳ ಹಾದಿಯನ್ನು ಕಟ್ಟಲು ನಿಮ್ಮೆಲ್ಲರ ಸಹಕಾರವಿರಲಿ ಎಂದು ಕೋರುತ್ತಾ ವಿರಮಿಸುತ್ತೇನೆ.

– ಬಿ.ಸುರೇಶ

ಬೆಂಗಳೂರು

Advertisements

2 Responses to “ಆರು ವರುಷಗಳ ಅನನ್ಯ ಅನುಭವ (ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಸಂಚಾಲಕನಾಗಿ ನಾನು ಕಂಡದ್ದು)”


 1. 1 ಸುದರ್ಶನ್ May 25, 2014 at 2:26 pm

  ಸುರೇಶಣ್ಣ,
  ಒಳೆಯ ಕೆಲಸ ಮಾಡಿದೀರಿ.. ಮು0ದೆಯು ನಿಮ್ಮ ಕನ್ನಡದ ಕೆಲಸ ಹೀಗೆ ಮು0ದುವರಿಯಲಿ. ಶುಭಶಯಗಳು.
  ಸುದರ್ಶನ್

 2. 2 Siddarood Chigari October 23, 2014 at 9:15 am

  sir u r a great and bless them our Indian Drama Companies


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

 • 59,459 ಜನರು
Advertisements

%d bloggers like this: