ಒಂದು ಭಾಷೆಯಿಂದ ಮತ್ತೊಂದಕ್ಕೆ ಬರುವ ಹಾದಿಯಲ್ಲಿ…

(ಡಾ.ಸುಜಾತ ಮಗದುಮ್ಮ ಅವರು ಕನ್ನಡಕ್ಕೆ ಅನುವಾದಿಸಿದ ಅನಿತಾ ರಾಕೇಶ್ ಅವರ ಆತ್ಮನಿವೇದನೆ “ಚಾಂದ್ ಸಿತಾರೆ ಓರ್” ಪುಸ್ತಕಕ್ಕೆ ಬರೆದ ಮುನ್ನುಡಿ)
ಯಾರಾದರು ಬರೆದ ಕೃತಿಗೆ ನಮ್ಮ ಅಭಿಪ್ರಾಯವನ್ನು ಬರೆಯುವುದೇ ಸಂಧಿಗ್ಧದ ಸ್ಥಿತಿ. ಬರೆಯುವವರಿಗೆ ಹಲವು ಕಾರಣಗಳಿರುತ್ತವೆ. ಓದುವವನಿಗೆ ತನ್ನದೇ ಕಾರಣಗಳಿರುತ್ತವೆ. ಕೆಲವರು ಸಮಯ ಕಳೆಯಲು ಓದುತ್ತಾರೆ. ಇನ್ನು ಕೆಲವರು ಗೆಳೆತನದ ಕಾರಣಕ್ಕೆ, ಇನ್ನು ಹಲವರು ಹೂರಣ ಕುರಿತ ಕುತೂಹಲಕ್ಕೆ, ಹೀಗೆ ಪ್ರತಿ ಓದುಗನಿಗೂ ಪುಸ್ತಕವೊಂದನ್ನು ಓದಲು ಅವನದ್ದೇ ಕಾರಣಗಳಿರುತ್ತವೆ. ಹೀಗಾಗಿ ಯಾರಾದರೂ ಬರೆದುದಕ್ಕೆ ಏನಾದರೂ ಹೇಳುವುದು ಎಂದರೆ ವೈಯಕ್ತಿಕವಾಗಿ ನನಗೆ ಭಯಗಳಿವೆ.
ಈಗ ನೀವು ಓದಲಿರುವ ಪುಸ್ತಕವಂತೂ ದೇಶದ ಅತ್ಯಂತ ಪ್ರಮುಖ ನಾಟಕಕಾರನ ಮೂರನೆಯ ಮಡದಿಯ ಜೀವನ ಚರಿತ್ರೆ. ಕನ್ನಡದಲ್ಲಿಯೇ ಬದುಕಿದ ನನ್ನಂತಹವರಿಗೆ ಹಿಂದಿಯೆನ್ನುವುದೇ ಹೊರಗಿನದು. ಆ ಲೋಕದಲ್ಲಿ ಬೆಳಗಿದ ಹಿರಿಯರ ಬದುಕಿನ ಒಳವಿವರಗಳನ್ನು ಅರಿತುಕೊಳ್ಳುವುದು ಮತ್ತೂ ಕಷ್ಟದ ಕೆಲಸ. ಇನ್ನೂ ನಾಟಕದ ಮಾತುಗಳ ಮೂಲಕವೇ ಪರಿಚಿತವಾದ ನಾಟಕಕಾರನ ಮಡದಿಯ ಜೀವನದ ವಿವರವನ್ನು ಅರಿಯುವುದು ಮತ್ತೂ ಕಷ್ಟದ ಕೆಲಸ. ನನ್ನ ಈ ಎಲ್ಲ ಮಿತಿಗಳ ನಡುವೆ ಅನಿತಾ ರಾಕೇಶ್ ಅವರ ಜೀವನವನ್ನು ಕುರಿತು ಅವರೇ ಬರೆದುಕೊಂಡ ಟಿಪ್ಪಣಿಗಳನ್ನು ಮೂಲದಲ್ಲಿ ಓದಿದೆ. ನಂತರ ಡಾ.ಸುಜಾತ ಮಗುದುಮ್ಮ ಅವರು ಬರೆದ ಕನ್ನಡ ಅನುವಾದವನ್ನು ಓದಿ ಅನುವಾದಿತ ಕೃತಿ ಕುರಿತ ನನ್ನ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿದ್ದೇನೆ.

“ಚಂದ್ರ ತಾರೆ ಮತ್ತು…?” ಹೀಗೊಂದು ಹೆಸರಿನಲ್ಲಿ ಅನಿತಾ ರಾಕೇಶ್ ಅವರು ಬರೆದ ಜೀವನ ಚರಿತ್ರೆಯನ್ನು ಡಾ. ಸುಜಾತ ಮಗದುಮ್ಮ ಅವರು ಕನ್ನಡಕ್ಕೆ ತಂದಿದ್ದಾರೆ. ಇದು ನಿಜಕ್ಕೂ ಅಭಿನಂದನಾರ್ಹ ಕೆಲಸ. ನಮ್ಮಲ್ಲಿ ಖ್ಯಾತನಾಮರ ಜೀವನ ಚರಿತ್ರೆಗಳಿವೆ. ಆದರೆ ಖ್ಯಾತನಾಮರ ಜೊತೆಗೆ ಹೆಗಲಾಗಿ ಬದುಕಿದ ಮನೆಯವರ ಜೀವನಚರಿತ್ರೆಗಳು ಅತ್ಯಲ್ಪ. ಈ ಕಾರಣದಿಂದಾಗಿ ಒಬ್ಬ ನಾಟಕಕಾರ, ಸಾಹಿತಿ, ಪತ್ರಕರ್ತನ ಜೊತೆಗಾತಿಯ ಜೀವನದ ವಿವರಗಳನ್ನು ಓದುತ್ತಾ ಒಬ್ಬ ಸೃಜನಶೀಲ ಕೆಲಸಗಾರನ ಮನಸ್ಸಿನ ಒಳಗಿನ ವ್ಯಾಪಾರಗಳನ್ನು ಅರಿಯಬಹುದು. ಈ ನಿಟ್ಟಿನಿಂದ ಸುಜಾತ ಅವರ ಈ ಅನುವಾದ ಕನ್ನಡಿಗರಿಗೆ ಮುಖ್ಯವಾಗುತ್ತದೆ.
ಮೋಹನ್ ರಾಕೇಶ್ ಕನ್ನಡಿಗರಿಗೆ ಅವರ ನಾಟಕಗಳಿಂದಲೇ ಪರಿಚಿತರು. “ಆಷಾಡದ ಒಂದು ದಿನ”, “ಆದೇ ಅಧೂರೇ”, “ಅಲೆಗಳಲ್ಲಿ ರಾಜಹಂಸ” ಮುಂತಾದ ಮೋಹನ್ ರಾಕೇಶರ ನಾಟಕಗಳನ್ನು ಕನ್ನಡಿಗರು ನೋಡಿದ್ದಾರೆ. ಆನಂದಿಸಿದ್ದಾರೆ. ಸರಿಸುಮಾರು 1960ರಲ್ಲಿ ಇಬ್ರಾಹಿಂ ಅಲ್ಕಾಜಿಯವರ ನಿರ್ದೇಶನದಲ್ಲಿ ಎನ್ಎಸ್ಡಿಯ ವಿದ್ಯಾರ್ಥಿಗಳು ಅಭಿನಯಿಸಿದ “ಆಷಾಡದಲ್ಲಿ ಒಂದು ದಿನ” ನಾಟಕದ ಯಶಸ್ಸಿನೊಂದಿಗೆ ಆಧುನಿಕ ಹಿಂದಿ ನಾಟಕಕಾರರು ಎನಿಸಿಕೊಂಡ ಮೋಹನ್ ರಾಕೇಶ್ ಅದಕ್ಕಿಂತ ಮುಂಚಿತವಾಗಿ ತಾವು ಬರೆದ ಅನೇಕ ಕತೆಗಳಿಂದ ಹಿಂದಿಯ ಸಾರಸ್ವತ ಲೋಕದಲ್ಲಿ ಜನಪ್ರಿಯರಾಗಿದ್ದರು. ಅವರು ಸಂಪಾದಿಸಿದ “ನಯೇ ಕಹಾನಿಯಂ” ಪತ್ರಿಕೆಯು ಅನೇಕ ಹೊಸ ಲೇಖಕರಿಗೆ ವೇದಿಕೆಯನ್ನು ಒದಗಿಸಿತ್ತು.
1925ರಲ್ಲಿ ಜನಿಸಿ 1972ರಲ್ಲಿ ತಮ್ಮ 47ನೆಯ ವಯಸ್ಸಿನಲ್ಲಿಯೇ ತೀರಿಕೊಂಡ ಮೋಹನ್ ರಾಕೇಶರ ಬದುಕು ಅನೇಕ ಏರಿಳಿತಗಳನ್ನು ಕಂಡಿತ್ತು. ಆ ಏರಿಳಿತಗಳನ್ನು ಅವರು ತಮ್ಮ ಅನೇಕ ಕತೆಗಳಲ್ಲಿ ಸಣ್ಣ ಸಣ್ಣ ವಿವರಗಳಾಗಿ ಬರೆದಿದ್ದಾರೆ. ಮನೆಯವರೇ ನೋಡಿ ಮಾಡಿದ ಎರಡು ಮದುವೆಗಳು ಸೋತಾಗ ಹತಾಶರಾಗಿದ್ದ ಮೋಹನ್ ರಾಕೇಶ್ಗೆ ಅಭಿಮಾನಿಯಾಗಿ ಹತ್ತಿರವಾದವರು ಅನಿತಾ. ಸ್ವತಃ ಸಣ್ಣ ಪುಟ್ಟ ಕತೆಗಳನ್ನು ಬರೆಯುತ್ತಾ ಇದ್ದ ಅನಿತಾ ಅವರ ಕತೆಗಳನ್ನು ತಿದ್ದುತ್ತಾ ಮೋಹನ್ ರಾಕೇಶ್ ಅವರು ಆಕೆಯ ಬದುಕಿನ ಒಳವರ್ತುಲವನ್ನು ಪ್ರವೇಶಿಸುತ್ತಾರೆ. ಹೀಗೆ ಪ್ರೀತಿಸುವ ಎರಡು ಜೀವಗಳು ತಮ್ಮ ವಯಸ್ಸಿನ ಅಂತರವನ್ನು ಮರೆತು, ಮನೆಯವರ ವಿರೋಧದ ಜೊತೆಗೆ ಮದುವೆಯಾಗುತ್ತಾರೆ. ಮೋಹನ್ ರಾಕೇಶ್ ಅವರ ಸಾಹಿತ್ಯದ ಹಾಗೂ ರಂಗಭೂಮಿಯ ಗೆಳೆಯರ ಸಹಕಾರದಿಂದ ಈ ಸಂಸಾರ ಗಟ್ಟಿಗೊಳ್ಳುತ್ತದೆ. ಮೋಹನ್ ರಾಕೇಶ್ ಅವರ ಬದುಕಿಗೆ ಒಂದು ನಿಯತಿ ಬರುವುದಕ್ಕೆ ಅನಿತಾ ಕಾರಣರಾಗುತ್ತಾರೆ. ಈ ಅವಧಿಯಲ್ಲಿ ಮೋಹನ್ ರಾಕೇಶ್ ಅವರು ಬರೆದ ನಾಟಕಗಳು ಮತ್ತು ಕಾದಂಬರಿಗಳು ಹಲವು. ಜೊತೆಗೆ ಒಂದು ಸಿನಿಮಾಕ್ಕೂ ಸಹ ಮೋಹನ್ ರಾಕೇಶ್ ಚಿತ್ರಕತೆ ಬರೆಯುತ್ತಾರೆ. ಈ ಕಾಲಘಟ್ಟದಲ್ಲಿ ಮೋಹನ್ ಅವರು ಬರೆದುದೆಲ್ಲವೂ ಇಂದಿಗೂ ಜನಮಾನಸದಲ್ಲಿ ಗಟ್ಟಿಯಾಗಿ ನಿಂತಿವೆ. ಪ್ರಾಯಶಃ ಇನ್ನಷ್ಟು ಕಾಲ ನಮ್ಮ ಜೊತೆಗೆ ಇದ್ದಿದ್ದರೆ ಮೋಹನ್ ರಾಕೇಶ್ ಅವರ ಅನುಭವದ ಮೂಸೆಯಿಂದ ಮತ್ತಷ್ಟು ಅಪರೂಪದ ಕೃತಿಗಳು ಬರುತ್ತಿದ್ದವು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರ ಜೀವನದ ಕಡೆಯ ಇಪ್ಪತ್ತು ವರ್ಷಗಳಲ್ಲಿ ಅವರು ಬರೆದ ಕೃತಿಗಳು ಗಟ್ಟಿಯಾಗುವುದಕ್ಕೆ ಅವರ ಮಡದಿಯಾಗಿದ್ದ ಅನಿತಾ ರಾಕೇಶ್ ಸಹ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು.
ಇಂತಹ ಅನಿತಾ ಅವರು ತಮ್ಮ ಮತ್ತು ಮೋಹನ್ ರಾಕೇಶ್ ಅವರ ಪರಿಚಯದ ದಿನದಿಂದ, ಪರಿಚಯ ಪ್ರೀತಿಯಾಗಿ, ಪ್ರೀತಿ ಮದುವೆಯ ಘಟ್ಟಕ್ಕೆ ಬಂದು, ಮನೆಯವರ ವಿರೋಧದ ನಡುವೆಯೇ ಜೀವನ ಕಟ್ಟಿಕೊಂಡು ಮೋಹನ್ ಅವರ ಕಡೆಯ ದಿನದವರೆಗೆ ಜೊತೆಗೆ ಇದ್ದ ಕಾಲವನ್ನು ತಮ್ಮ ಜೀವನದ ಹಾದಿಯನ್ನು ಕುರಿತ ಟಿಪ್ಪಣಿಯಲ್ಲಿ ದಾಖಲಿಸುತ್ತಾರೆ. ಸ್ವತಃ ಕತೆಗಾರ್ತಿಯಾದ ಅನಿತಾ ರಾಕೇಶ್ ಅವರ ಬರಹ ನಮಗೆ ತಾಗುವುದಕ್ಕೆ ಅವರ ವಾಕ್ಯ ರಚನಾ ಶೈಲಿಯೇ ಪ್ರಧಾನ ಕಾರಣ. ಸರಳ ಸಣ್ಣ ವಾಕ್ಯಗಳ ಮೂಲಕವೇ ತಮ್ಮ ಮನಸ್ಸಿನ ಭಾವಗಳನ್ನು ದಾಖಲಿಸುತ್ತಾ ಸಾಗುತ್ತಾರೆ. ಹಾಗೆ ಬರೆಯುವಾಗ ಮೋಹನ್ ರಾಕೇಶರನ್ನು ಮದುವೆಯಾದ ತರುವಾಯ ತಾವೇಕೆ ಕತೆ ಬರೆಯಲಿಲ್ಲ ಅಥವಾ ಮೋಹನ್ ಅವರ ಕತೆಗಳನ್ನು ಕುರಿತ ತಮ್ಮ ಅಭಿಪ್ರಾಯ ಮತ್ತು ಮೋಹನ್ ಅವರು ಕತೆ ಅಥವಾ ನಾಟಕ ಕಟ್ಟುವಾಗ ಮಾಡಿಕೊಳ್ಳುತ್ತಾ ಇದ್ದ ಸಿದ್ಧತೆ. ಆ ಕೃತಿ ಮುಗಿದಮೇಲೆ ಗಂಡ-ಹೆಂಡತಿಯ ನಡುವೆ ಆಗುತ್ತಾ ಇದ್ದ ಮಾತುಗಳನ್ನು ಕುರಿತ ಯಾವ ವಿವರವನ್ನೂ ದಾಖಲಿಸುವುದಿಲ್ಲ. ಅಂತಹ ವಿವರಗಳಿದ್ದಿದ್ದರೆ ಈ ಕೃತಿಯು ಮತ್ತೊಬ್ಬ ಕೃತಿಕಾರನ ಕುರಿತು ಸಾಕಷ್ಟು ಹೊಸ ವಿಷಯಗಳನ್ನು ಹೇಳುವುದಕ್ಕೆ ಸಾಧ್ಯವಾಗುತ್ತಾ ಇತ್ತು.
ನಾನು ಓದಿರುವ ಬಹುತೇಕ ಮಡದಿಯರ ಜೀವನ ಚರಿತ್ರೆಗಳಲ್ಲಿ ಇಂತಹದೇ ಸ್ಥಿತಿಯಿದೆ. ಆ ಕೃತಿಕಾರರು ತಮ್ಮ ಪ್ರೀತಿಯ ಕಾಲವನ್ನು ಹೇಳಿದಷ್ಟು ದಟ್ಟವಾಗಿ ತಮ್ಮ ಸಾಂಸಾರಿಕ ವಿವರವನ್ನು ಕಟ್ಟುವುದಿಲ್ಲ. ಮತ್ತು ತಮ್ಮ ಜೊತೆಗಾರನ ಕೃತಿಯನ್ನು ಆರಂಭ ಕಾಲದಲ್ಲಿ ಆರಾಧನಾ ಭಾವದಿಂದ ನೋಡಿದ ವಿವರದಿಂದಾಚೆಗೆ ದಾಂಪತ್ಯ ನಡೆವ ಕಾಲದಲ್ಲಿ ನಡೆದ ಸೃಜನಶೀಲ ಚಟುವಟಿಕೆಯನ್ನು ಕುರಿತು ತಮ್ಮ ಅಭಿಪ್ರಾಯ ದಾಖಲಿಸುವುದಿಲ್ಲ. ಈ ಮಾತಿಗೆ ಉದಾಹರಣೆಯಾಗಿ ಪ್ರೇಮಕಾರಂತರು ಬರೆದಿರುವ ಜೀವನ ಚರಿತ್ರೆಯನ್ನು, ವಿ.ಕೃ.ಗೋಕಾಕರ ಮಡದಿ ಬರೆದಿರುವ ಜೀವನ ಚರಿತ್ರೆಯನ್ನು ಗಮನಿಸಬಹುದು.
ಅನುವಾದ ಎಂಬುದು ಯಾವಾಗಲೂ ಅನೇಕ ಮಗ್ಗುಲುಗಳನ್ನು ಪಡೆಯಬಹುದಾದ ಕೆಲಸ. ಪ್ರತೀ ಓದುಗನಿಗೂ ಒಂದು ಬರಹವನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಒಗ್ಗಿಸುವುದು ಆಯಾ ವ್ಯಕ್ತಿಯು ಮೂಲ ವಾಕ್ಯವನ್ನು ಅರ್ಥೈಸಿಕೊಳ್ಳುವ ಮತ್ತು ವ್ಯಾಖ್ಯಾನಿಸುವ ಕ್ರಮವನ್ನಾಧರಿಸಿ ಆಗುತ್ತದೆ. ಹಾಗಾಗಿಯೇ ಒಮ್ಮೆ ಒಂದು ಭಾಷೆಯಿಂದ ಅನುವಾದವಾದ ಕೃತಿಯನ್ನು ಇನ್ನೂ ಹಲವರು ಅನುವಾದಿಸಿ ಪ್ರಕಟಿಸಲು ಸಾಧ್ಯ. ಷೇಕ್ಸ್ಪಿಯರ್ನ ಅನೇಕ ಕೃತಿಗಳು ಕಳೆದ ನೂರೈವತ್ತು ವರ್ಷಗಳಲ್ಲಿ ಅನೇಕ ಕನ್ನಡಿಗರ ಅನುವಾದದ ಮೂಲಕ ಕನ್ನಡಿಗರಿಗೆ ತಲುಪಿರುವುದಕ್ಕೆ ಇದೇ ಕಾರಣ.
ಸುಜಾತ ಮಗದುಮ್ಮ ಅವರ ಅನುವಾದದಲ್ಲಿ ಹಿಂದಿಯ ಜಾಯಮಾನದ ಕನ್ನಡದ ವಾಕ್ಯಗಳು ಆರಂಭದಲ್ಲಿ ಕಾಣಿಸಿಕೊಳ್ಳುತ್ತವೆ.
“ನನ್ನ ಬಾಲ್ಯವನ್ನು ನೆನಸಿಕೊಂಡಾಗೆಲೆಲ್ಲ ನನಗೆ ಅನೇಕ ವಿಷಯಗಳು ಕಣ್ಮುಂದೆ ಸುಳಿದುಹೋಗುತ್ತವೆ. ಕೆಲವು ಸಿಹಿಯಾದವುಗಳು, ಬಹಳಷ್ಟು ಕಹಿಯಾದವುಗಳು” (ಆರಂಭದ ವಾಕ್ಯಗಳು)
ಹೀಗೆ ವಾಕ್ಯ ಕಟ್ಟುವಾಗ ಅನುವಾದಕರಿಗೆ ಸ್ವತಃ ಗೊತ್ತಾಗದೆ ವಾಕ್ಯವು ಕನ್ನಡದ್ದೇ ಆಗಿದ್ದರೆ “ಬಾಲ್ಯ ಅಂದರೆ ನೆನಪು. ಕೆಲವು ಸಿಹಿ. ಹಲವು ಕಹಿ” ಎಂದಾಗಬಹುದಿತ್ತು. ಆದರೆ ಮೂಲದ ಪ್ರತಿ ವಾಕ್ಯವನ್ನು ಯಥಾವತ್ ಹಿಡಿಯಬೇಕೆಂಬ ಆರಂಭಿಕ ಹಂತದ ಭಯಗಳಿಂದ ಪ್ರಾಯಶಃ ಸುಜಾತ ಅವರು ಸುದೀರ್ಘ ವಾಕ್ಯ ಕಟ್ಟುವ ಕ್ರಮವನ್ನು ಆರಂಭದಲ್ಲಿ ಬಳಸುತ್ತಾರೆ.
ಮನೆಗೆ ಬಂದು ಹೋಗುವ ಸಾಹಿತಿಗಳನ್ನು ನೋಡಿ-ನೋಡಿ ಅವರು ಧರಿಸುವ ಜುಬ್ಬಾ, ಪಾಯಿಜಾಮ, ಚಪ್ಪಲಿ, ಕನ್ನಡಕಗಳೆಲ್ಲ ಮನಸ್ಸಿನ ಮೇಲೆ ಅಚ್ಚೊತ್ತಿದಂತಾಗಿ, ಆ ವೇಷದಲ್ಲಿರುವ ಯಾರನ್ನೇ ನೋಡಿದರೂ ನಾವು ಅಣ್ಣ-ತಂಗಿ ಒಬ್ಬರಿಗೊಬ್ಬರು ಪಿಸುಗುಡುತ್ತಿದ್ದದ್ದು ಇದನ್ನೇ, “ನೋಡಲ್ಲಿ, ಲೇಖಕ ಹೋಗ್ತಿದ್ದಾನೆ!” ಲೇಖಕರ ಮಾತುಗಳಲ್ಲಿ ಬರುವ ಉದ್ದುದ್ದ ವಾಕ್ಯಗಳಂತೂ ಮೈನರಗಳನ್ನೆಲ್ಲ ಹಿಂಡಿ ಹಿಪ್ಪೆ ಮಾಡುತ್ತಿವೆಯೇನೋ ಎಂಬಷ್ಟು ಘಾಸಿಗೊಳಿಸುತ್ತಿದ್ದವು. (ಮೊದಲ ಅಧ್ಯಾಯದಿಂದ)
ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾದಾಗ ಮಾತ್ರ ಪತಿಯಿಂದ, ಸಮಾಜದಿಂದ ಗೌರವ ದಕ್ಕಿಸಿಕೊಳ್ಳಲು ಸಾಧ್ಯ ಎಂದು ಮನವರಿಕೆಯಾಗಿತ್ತೇನೋ, ಅದಕ್ಕೇ ಡಿ.ಸಿ.ಎಮ್ನಲ್ಲಿ ಕೆಲಸಕ್ಕೆ ಸೇರಿಕೊಂಡದ್ದೂ ಅಲ್ಲದೆ, ದೌರಲಾ ಚಿಲ್ಡ್ರನ್ಸ್ ಲೀಗ್ನ ಆಂಟಿ ಸ್ವೀಟಿ ಎಂಬ ಹೆಗ್ಗಳಿಕೆಯನ್ನೂ ಗಳಿಸಿದಳು. (ಎರಡನೆ ಅಧ್ಯಾಯದಿಂದ)
ಕಥನ ಮುಂದುವರೆದಂತೆ ಅವರು ಹಿಂದಿಯ ಭಾವವನ್ನು ಕನ್ನಡದಲ್ಲಿ ಹಿಡಿಯುವುದನ್ನು ಸಾಧಿಸುತ್ತಾರೆ.
“ಈ ಎಲ್ಲ ಘಟನೆಗಳಿಂದಾಗಿ ರಾಕೇಶರು ಒಳಗೊಳಗೇ ನೊಂದು ಹಣ್ಣಾಗಿದ್ದರು, ಸೋತುಹೋಗಿದ್ದರು. ಯಾವುದೇ ಸಂಬಂಧ, ಗೆಳೆತನ ಅಥವಾ ಕಮಿಟ್ಮೆಂಟ್ನಲ್ಲಿ ಅವರಿಗೆ ವಿಶ್ವಾಸ ಉಳಿದಿರಲಿಲ್ಲ. ಅಥವಾ ವಿಶ್ವಾಸವಿದ್ದರೂ ಮತ್ತೆ ಅವುಗಳನ್ನೆಲ್ಲ ಮೊದಲಿನಂತೆ ಸರಿತೂಗಿಸಬಲ್ಲೆನೆಂಬ ಮಾನಸಿಕ ಶಕ್ತಿ ಅವರಲ್ಲಿ ಹೊರಟುಹೋಗಿತ್ತು. ದಿನಗಟ್ಟಲೆ ಮಾತಿಲ್ಲದೆ ಮೂಕರಾಗಿ ಒಂದೆಡೆ ಕುಳಿತುಬಿಡುತ್ತಿದ್ದರು. ಇಲ್ಲದಿದ್ದರೆ ಮಗನನ್ನು ತೊಡೆಯ ಮೇಲಿಟ್ಟುಕೊಂಡು ಮುದ್ದಾಡುತ್ತಿದ್ದರು. ರಾತ್ರಿಯಿಡೀ ನನ್ನನ್ನು ಪಕ್ಕದಲ್ಲಿಯೇ ಕುಳಿತುಕೊಳ್ಳಲು ಹೇಳುತ್ತಿದ್ದರು. “ಯಾಕೋ ಗೊತ್ತಿಲ್ಲ, ತೀರಾ ಒಂಟಿಯಾದಾಗ ಒಂದು ರೀತಿಯ ಭಯ ಆವರಿಸಿಕೊಳ್ಳುತ್ತೆ. ನೀನು ನನ್ನ ಹತ್ರಾನೇ ಕೂತ್ಕೋ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗ್ಬೇಡ” ಎನ್ನುತ್ತಿದ್ದರು.” (ಕಡೆಯ ಅಧ್ಯಾಯದಿಂದ)
ಪ್ರಾಯಶಃ ಎಲ್ಲಾ ಅನುವಾದಕರೂ ಎದುರಿಸುವ ಸಂಕಟ ಇದು. ಯಾವುದೇ ಕೃತಿಯನ್ನು ಅನುವಾದಿಸಲು ಆರಂಭಿಸಿದಾಗ ಮೂಲಕೃತಿಕಾರ ಮತ್ತು ಆ ಭಾಷೆ ಅನುವಾದಕರ ಎದುರು ವೈಭವೀಕರಣಗೊಂಡು ನಿಂತುಬಿಡುತ್ತದೆ. ನಿಧಾನವಾಗಿ ಮತ್ತೊಂದು ಆವರಣ, ಮತ್ತೊಂದು ಸಂಸ್ಕೃತಿಯಲ್ಲಿ ಇಳಿವ ಮನಸ್ಸು ಹೊಂದಿಕೊಂಡು ತನ್ನ ಲೋಕದ ಮೂಲಕವೇ ಮತ್ತೊಂದು ಲೋಕವನ್ನು ನೋಡುವ ಅಭ್ಯಾಸಕ್ಕೆ ಬರುತ್ತದೆ. ಸುಜಾತ ಮಗದುಮ್ಮ ಅವರು ಅನಿತಾ ರಾಕೇಶ್ ಅವರ ಬಾಲ್ಯವನ್ನು ಕಟ್ಟುವಾಗೆಲ್ಲಾ ಹೊರಗಿನವರಾಗಿ ಕನ್ನಡಿಸುತ್ತಾರೆ. ಅನಿತಾ ಅವರ ಬದುಕು ಪ್ರೇಮದ ಹಂತಕ್ಕೆ ಬಂದಾಗ ಸುಜಾತ ಮಗದುಮ್ಮ ಅವರ ಅನುವಾದ ಹರಳುಗಟ್ಟುತ್ತದೆ. ಈ ಜೀವನ ಕಥನದ ಅಂತಿಮ ಭಾಗಗಳು ಅನಿವಾದಿತವಲ್ಲ ಕನ್ನಡದ್ದೇ ಎನಿಸುವ ಸ್ಥಿತಿ ತಲುಪುತ್ತದೆ.
ಒಟ್ಟಾರೆಯಾಗಿ ಅನಿತಾ ರಾಕೇಶ್ ಅವರಂತಹ ಕತೆಗಾರ್ತಿಯ ಬದುಕನ್ನು ಕನ್ನಡಕ್ಕೆ ತರುವ ಮೂಲಕ ಸುಜಾತ ಮಗದುಮ್ಮ ಅವರು ಈ ನಾಡಿನ ರಂಗಾಸಕ್ತರು ಮತ್ತು ಸಾಹಿತ್ಯಾಸಕ್ತರಿಗೆ ಒಂದು ಅಪರೂಪದ ಅನುಭವವನ್ನು ದಾಟಿಸಿದ್ದಾರೆ. ಅದಕ್ಕಾಗಿ ಅನುವಾದಕರಿಗೆ ಕನ್ನಡಿಗರೆಲ್ಲರ ಪರವಾಗಿ ನಮಸ್ಕಾರಿಸುತ್ತಾ, ಸುಜಾತ ಮಗದುಮ್ಮ ಅವರಿಂದ ಮತ್ತಷ್ಟು ಕೃತಿಗಳು ಕನ್ನಡಕ್ಕೆ ಬರುವಂತಾಗಲಿ ಎಂದು ಹಾರೈಸುತ್ತಾ ವಿರಮಿಸುತ್ತೇನೆ.
– ಬಿ.ಸುರೇಶ
1 ಮಾರ್ಚ್ 2014
ಬೆಂಗಳೂರು
bsuresha@bsuresha.com

Advertisements

0 Responses to “ಒಂದು ಭಾಷೆಯಿಂದ ಮತ್ತೊಂದಕ್ಕೆ ಬರುವ ಹಾದಿಯಲ್ಲಿ…”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: