ಶಿವಾನಂದ್ ಅವರ ಚಾರಿತ್ರಿಕ ನಾಟಕ “ಉತ್ಕಲ ಪತನ” ಕುರಿತು ಟಿಪ್ಪಣಿ

ನಾಟಕ ರಚನೆ ಎಂಬುದು ಒಂದು ಅಪರೂಪದ ಕಲೆ. ರಂಗಸಮಾಜವೊಂದು ಬಳಸಲು ಪಠ್ಯವೊಂದನ್ನು ರೂಪಿಸುವುದು ಸುಲಭ ಸಾಧ್ಯ ಕೆಲಸವಲ್ಲ. ಈ ಕೆಲಸ ಮಾಡಲು ಹೊರಟವರಿಗೆ ರಂಗಕೃತಿ ಕಟ್ಟುವುದರ ತಾಂತ್ರಿಕ ವಿವರಗಳ ಅರಿವಿನ ಜೊತೆಗೆ ರಂಗತಂಡವೊಂದು ಸಾಮೂಹಿಕವಾಗಿ ರಂಗಕೃತಿಯನ್ನು ಕಟ್ಟುವಾಗ ಹುಟ್ಟುವ ಎಲ್ಲಾ ಸಮಸ್ಯೆಗಳ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಜೊತೆಗೆ ನಾಟಕದ ಪಠ್ಯದಲ್ಲಿರುವ ಕತೆಯೊಂದನ್ನು ರಂಗತಂಡದ ಸಹಾಯದಿಂದ ನೋಡುಗನಿಗೆ ದಾಟಿಸುವ ಅತಿಕ್ಲಿಷ್ಟವಾದ ಕೆಲಸವೂ ಇರುತ್ತದೆ. ಹೀಗಾಗಿಯೇ ನಾಟಕದ ಪಠ್ಯವನ್ನು ರಂಗಕೃತಿಗೆ ನೀಲನಕ್ಷೆ ಎಂದು ಕರೆಯಲಾಗುತ್ತದೆ. ಈ ನೀಲನಕ್ಷೆಯನ್ನು ಆಧರಿಸಿಯೇ ರಂಗಸಮೂಹವೊಂದರ ಭವಿಷ್ಯವೂ ರೂಪಿತವಾಗುತ್ತದೆ. ಈ ಕಾರಣಕ್ಕಾಗಿಯೇ ನಾಟಕಕಾರನು ರಂಗ ಚಳುವಳಿಯ ನೇತಾರನೂ ಹೌದು, ಸೂತ್ರಧಾರಿಯೂ ಹೌದು. ಭಾರತದ ಸಾಂಪ್ರದಾಯಿಕ ರಂಗಭೂಮಿಯಲ್ಲಂತೂ ಬಹುತೇಕ ಸೂತ್ರಧಾರನೇ ನಾಟಕ ಕರ್ತೃವೂ ಆಗಿರುತ್ತಾ ಇದ್ದ ಎಂದು ಆದ್ಯರಂಗಾಚಾರ್ಯರು ತಮ್ಮ “ನಾಟ್ಯಶಾಸ್ತ್ರ” ಪುಸ್ತಕದಲ್ಲಿ ಗುರುತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿ.ಶಿವಾನಂದ್ ಅವರು ಬರೆದಿರುವ ಎಲ್ಲಾ ನಾಟಕಗಳನ್ನೂ ನೋಡಬೇಕಾಗುತ್ತದೆ. ಸ್ವತಃ ರಂಗಭೂಮಿಯ ಪರಿಚಯವುಳ್ಳ ಶಿವಾನಂದ್ ಅವರು ತಮ್ಮ ರಂಗಾನುಭವಕ್ಕೆ ಸಾಹಿತ್ಯ ಪ್ರೀತಿಯನ್ನು ಬೆರೆಸಿ ರಂಗಕೃತಿಗಳನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದರಲ್ಲಿಯೂ ಚಾರಿತ್ರಿಕ ನಾಟಕಗಳನ್ನು ಕಟ್ಟುವ, ಅತೀವ ಏಕಾಗ್ರತೆಯನ್ನು ಬೇಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಚಾರಿತ್ರಿಕ ನಾಟಕಗಳನ್ನು ಕಟ್ಟುವುದು ಯಾವ ಕಾರಣಕ್ಕೆ ಕಷ್ಟ ಎಂದು ಮೊದಲು ಮಾತಾಡುವುದು ಅಗತ್ಯ.

ಚಾರಿತ್ರಿಕ ನಾಟಕ ಎಂಬ ಹಳವಂಡ
ಚರಿತ್ರೆ ಎಂಬುದು ಎಂದೋ ಘಟಿಸಿದ ವಿವರವನ್ನು ಸಮಕಾಲೀನ ಸ್ಥಿತಿಗಳಲ್ಲಿ ಮರಳಿ ನೋಡುವ ಯತ್ನ. ಇಲ್ಲಿ ಎಂದೋ ನಡೆದ ಘಟನೆಯನ್ನು ಇಂದಿನ ಆರ್ಥಿಕ ಸಾಮಾಜಿಕ ದೃಷ್ಟಿಯಲ್ಲದೆ ರಾಜಕೀಯ ದೃಷ್ಟಿಕೋನವನ್ನೂ ಬೆರೆಸಿ ನೋಡುವ, ಮರುವ್ಯಾಖ್ಯಾನದ ಕಷ್ಟವಿದೆ. ಇಲ್ಲಿ ಕೊಂಚ ತೂಕ ತಪ್ಪಿದರೂ ಯಾವುದೋ ಒಂದು ನಂಬಿಕೆಯ ಪೂರ್ವಾಗ್ರಹವೂ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಕ್ಕೆ ಸೇರಿಕೊಂಡು ಅನಗತ್ಯ ಗೊಂದಲಗಳು ಬರಬಹುದಾದ ಸಾಧ್ಯತೆ ಹೆಚ್ಚು. ಹೀಗಾಗಿಯೇ ಚಾರಿತ್ರಿಕ ನಾಟಕ ಬರೆಯುವುದು ಯಾವತ್ತಿಗೂ ಕ್ಲಿಷ್ಟ. ಚರಿತ್ರೆ ಎಂಬುದು ಅದನ್ನು ಈಗಾಗಲೇ ವ್ಯಾಖ್ಯಾನಿಸಿದ ಅನೇಕರ ಮೂಲಕವೇ ನಮಗೆ ತಲುಪಿದ್ದರೂ ಆ ವಿವರಗಳಲ್ಲಿ ಇರಬಹುದಾದ ಪೂರ್ವಾಗ್ರಹಗಳನ್ನು ಗುರುತಿಸಿ, ಸಮಕಾಲೀನ ರಾಜಕೀಯ ಸ್ಥಿತಿಗೆ ಹೊಂದುವಂತೆ ಎಚ್ಚರಿಕೆಯಿಂದ ಮರುವ್ಯಾಖ್ಯೆ ಮಾಡಬೇಕಾದ ಅಗತ್ಯ ಇರುತ್ತದೆ. ಹೀಗಾಗಿ ಚಾರಿತ್ರಿಕ ನಾಟಕವನ್ನು ವಸ್ತುವಾಗಿ ಆಯ್ದುಕೊಂಡ ನಾಟಕಕಾರಾನು ಕೇವಲ ಕಥನ ನಿರೂಪಕನಾಗುರುವುದಲ್ಲದೆ ರಾಜಕೀಯ ವಿಜ್ಞಾನವನ್ನು ಮತ್ತು ಸಮಾಜ ವಿಜ್ಞಾನವನ್ನು ವಿಶ್ಲೇಷಿಸುವ ಸಾಮರ್ಥ್ಯ ಉಳ್ಳವನಾಗಿರಬೇಕಾಗುತ್ತದೆ. ಇದಲ್ಲದೆ ಭಾರತದ ವಸಾಹತುಶಾಹಿ ಪೂರ್ವದ ಚರಿತ್ರೆಯೆಂದರೆ ಸಾಮ್ರಾಜ್ಯಶಾಹಿ ಹಾಗೂ ಜಮೀನ್ದಾರಿ ಪದ್ಧತಿಗಳ ಚರಿತ್ರೆಯೇ ಆಗಿದೆ. ಇಲ್ಲಿ ನಮಗೆ ದೊರಕುವ ಪ್ರತಿ ವಿವರವು ಸಹ ಯಾವುದೋ ರಾಜ ಮತ್ತೊಂದು ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮಾಡಿದ ಸಾಹಸವೇ ಆಗಿದೆ. ಈ ವಿವರವನ್ನು ಸಮಕಾಲೀನ ಚರಿತ್ರೆಯೊಡನೆ ಇರಿಸಿ ನೋಡುವಾಗ ನಾವು ಯಾವುದೇ ಚಾರಿತ್ರಿಕ ವ್ಯಕ್ತಿಯನ್ನು ಮಹಾನಾಯಕ ಎಂದು ನೋಡುವುದೇ ನಾಟಕ ರಚನೆಗೆ ಬೃಹತ್ ಅಡ್ಡಿಯಾಗುವ ಸಾಧ್ಯತೆ ಇದೆ. ಒಂದು ಪ್ರದೇಶದಲ್ಲಿ ನಾಯಕನಾಗಿ ಬಿಂಬಿತನಾದ ವ್ಯಕ್ತಿಯೂ ಇದೇ ದೇಶದ ಮತ್ತೊಂದು ಪ್ರದೇಶದಲ್ಲಿ ಖಳನಾಗಿ ಕಾಣಬಹುದಾದ ಸಾಧ್ಯತೆಯೇ ಹೆಚ್ಚು. ಹೀಗಾಗಿ ಬಿ.ಶಿವಾನಂದ್ ಅವರು ಆರಿಸಿಕೊಂಡಿರುವ ಚಾರಿತ್ರಿಕ ವಿವರಗಳನ್ನು ನಾಟಕವಾಗಿಸುವ ಸಾಹಸವೂ ತೀರ ತ್ರಾಸದಾಯಕ ನಡಿಗೆಯೇ ಸರಿ.
ಬಿ.ಶಿವಾನಂದ್ ಅವರು ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಅವರಿವರು ಕಂಡಿರಿಸಿದ ವಿವರಗಳನ್ನು ದಾಖಲೆಯಾಗಿಸಿಕೊಂಡು ಹತ್ತು ನಾಟಕಗಳನ್ನು ಬರೆದಿದ್ದೇನೆ ಎಂದು ತಮ್ಮ ನುಡಿಯಲ್ಲಿ ತಿಳಿಸಿದ್ದಾರೆ. ಅವುಗಳಲ್ಲಿ ನಾಲ್ಕನೆಯ ನಾಟಕವಾದ “ಉತ್ಕಲ ಪತನ” ಎಂಬ ನಾಟಕವನ್ನು ನನಗೆ ಓದಲು ಕಳಿಸಿದ್ದಾರೆ. ಈ ಬಗ್ಗೆ ನಾಲ್ಕು ಮಾತು ಬರೆಯಿರಿ ಎಂದು ಸಹ ಕೇಳಿದ್ದಾರೆ. ಅವರು ನನ್ನ ಮೇಲೆ ಇರಿಸಿದ ವಿಶ್ವಾಸಕ್ಕೆ ಹಾಗೂ ನಾನು ಈ ಲೇಖನ ಬರೆದುಕೊಡಲು ಆರು ತಿಂಗಳ ಕಾಲ ತಡ ಮಾಡಿದರೂ ಕಾದಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸುತ್ತಾ, ಬಿ.ಶಿವಾನಂದ್ ಅವರ ಪ್ರಯತ್ನ ಕುರಿತು ಕೆಲ ಮಾತುಗಳನ್ನು ಆಡುತ್ತೇನೆ.
ಬಹುತೇಕ ಚರಿತ್ರಕಾರರು ಗುರುತಿಸಿರುವಂತೆ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗವು ಕೃಷ್ಣದೇವರಾಯನ ಆಳ್ವಿಕೆಯ ಕಾಲವಾಗಿದೆ. ಆದರೆ ಈ ಜನಪ್ರಿಯ ಚರಿತ್ರಕಾರರಿಗೆ ಭಿನ್ನವಾಗಿ ಕೃಷ್ಣದೇವರಾಯನ ಕಾಲವನ್ನು ವಿಭಿನ್ನವಾಗಿ ನೋಡುವ ಜನಪದ ಲಾವಣಿಗಳು ಆ ಸಾಮ್ರಾಜ್ಯದ ಎರಡೂ ಬದಿಗೆ ಇದ್ದವರು ಬರೆದಿದ್ದಾರೆ. ಇಂತಲ್ಲಿ ನಾಟಕಕಾರ ಬಳಸುವ ಆಕರವು ಯಾವುದೆಂಬುದೇ ದೊಡ್ಡ ಪ್ರಶ್ನೆ. ಒಂದೆಡೆ ನಾಯಕನೆಂದು ಗುರುತಿಸಲಾದ ವ್ಯಕ್ತಿಯೇ ಮತ್ತೊಂದೆಡೆ ಪ್ರತಿನಾಯಕನಾಗುವಾಗ ನಾಟಕಕಾರನ ಹೆಣಿಗೆ ಎಂಬುದು ಹಗ್ಗದ ಮೇಲಿನ ನಡಿಗೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿ.ಶಿವಾನಂದ್ ಅವರು ಬರೆದಿರುವುದು ಜನಪ್ರಿಯ ಇತಿಹಾಸವು ಕಟ್ಟಿಕೊಟ್ಟ ವಿವರ ಮಾತ್ರ ಆಗಿಲ್ಲದೆ ಎರಡೂ ಬದಿಯ ವ್ಯಾಖ್ಯಾನವನ್ನು ಒಳಗೊಂಡಿದೆ. ಒಂದೆಡೆ ರಾಯನನ್ನು ಕೊಂಡಾಡುವ ಜನವಿದ್ದರೆ ಮತ್ತೊಂದೆಡೆ ರಾಯನನ್ನು ನಿಂದಿಸುವ ಜನರೂ ಇದ್ದಾರೆ. ಹೀಗಾಗಿ ಎರಡೂ ಬಣಗಳ ನಡುವೆ ಲೇಖಕ ಕಾಯ್ದುಕೊಳ್ಳಬೇಕಾದ ಜಾಗೃತ ದೂರವನ್ನು ಸಾಧಿಸುವುದು ಬಿ.ಶಿವಾನಂದ್ ಅವರಿಗೆ ಸಾಧ್ಯವಾಗಿದೆ. ಆದರೆ ಕಥನ ಕ್ರಮದಲ್ಲಿ ರಾಯನನ್ನು ನಾಯಕನನ್ನಾಗಿಸುವ ನಿರಂತರ ಹವಣಿಕೆ ಇರುವುದರಿಂದ ಬಹುತೇಕ ದೃಶ್ಯಗಳು ಕೇವಲ ರಾಯನ ಉತ್ಪ್ರೇಕ್ಷಿತ ನಾಯಕ ಗುಣಗಳನ್ನು ಮಾತ್ರ ಹೇಳುತ್ತಾ ಇವೆ. ಇದು ಕತೆಯ ದೌರ್ಬಲ್ಯವಾದರೂ ನಾಟಕವಾಗಿ ನೋಡುಗನನ್ನು ತಲುಪಲು ಸುಲಭವಾಗುವ ನಾಯಕನ ವೈಭವೀಕರಣವೂ ಹೌದು. ಹೀಗಾಗಿ ಬಿ.ಶಿವಾನಂದ್ ಅವರ ಈ ಪ್ರಯೋಗ ರಂಗದ ಮೇಲೆ ಹೆಚ್ಚು ಯಶ ಕಾಣಬಹುದು ಎನಿಸುತ್ತದೆ. ಅಂತಿಮವಾಗಿ ರಂಗಕೃತಿಯಾಗಲೆಂದೇ ನಾಟಕ ಕೃತಿಯನ್ನು ಬರೆಯುವುದು ಎಂಬ ಮಾತಿನ ಆಧಾರದಲ್ಲಿ ಇದು ಉತ್ತಮ ಪ್ರಯತ್ನವೇ ಎನ್ನಬಹುದು.
ಕಥನ ವಿನ್ಯಾಸ
ಈ ನಾಟಕವು ಕೃಷ್ಣದೇವರಾಯನ ಮಧ್ಯಕಾಲದ ಅಂದರೆ ಸರಿ ಸುಮಾರು 1510ರ ಆಸುಪಾಸಿನಲ್ಲಿ ನಡೆಯುತ್ತದೆ. ಈ ಹೊತ್ತಿಗೆ ವಿಜಯನಗರ ಸಾಮ್ರಾಜ್ಯವೂ ಸಾಕಷ್ಟು ಪ್ರಬಲವೂ ಸಧೃಡವೂ ಆಗಿತ್ತು. ವಿಶೇಷವಾಗಿ ಪಶ್ಚಿಮದ ಕಡೆಗೆ ಹೆಚ್ಚಾಗಿ ಹರಡಿದ್ದ ಸಾಮ್ರಾಜ್ಯವನ್ನು ಪೂರ್ವದ ಕಡೆಗೂ ಹರಡುವ ಉದ್ದೇಶದಿಂದಲೇ ಕೃಷ್ಣದೇವರಾಯ ಈಗಿನ ತೆಲಂಗಾಣ ಮತ್ತು ಸೀಮಾಂಧ್ರಗಳಲ್ಲಿ ಸೇರಿರುವ ಉತ್ಕಲ ಸಾಮ್ರಾಜ್ಯವನ್ನು ಹಣಿಯಲು ಹೊರಡುತ್ತಾನೆ. ಇದಕ್ಕೆ ರಾಯನ ಪ್ರಧಾನ ಮಂತ್ರಿಯಾದ ತಿಮ್ಮರಸುವಿನ ತಂತ್ರಗಳು, ರಾಜಕೀಯ ನೀತಿಯು ಜೊತೆಯಾಗಿ ನಿಲ್ಲುತ್ತವೆ. ಉತ್ಕಲದರಸು ಜಯದೇವನ ಮಗಳನ್ನು ರಾಯನಿಗೆ ತರುವ ಮಾತಾಡುವ ಮೂಲಕ ಯುದ್ಧವಿಲ್ಲದೆ ಸಂಬಂಧ ಬೆಳೆಸಿ ಸಾಮ್ರಾಜ್ಯ ವಿಸ್ತರಿಸುವ ಯೋಚನೆಯಿಂದ ಆರಂಭವಾಗುವ ನಾಟಕವು ನಂತರ ಎರಡೂ ಬಣಗಳ ವಿವರಕ್ಕೆ ಒಂದೊಂದು ದೃಶ್ಯ ಎಂಬಂತೆ ಸಾಗುತ್ತದೆ. ಅಂತಿಮವಾಗಿ ಕೃಷ್ಣದೇವರಾಯನೇ ಗೆಲ್ಲುತ್ತಾನೆ ಎಂದು ಗೊತ್ತಿರುವ ನೋಡುಗನಿಗೆ ಈ ತಂತ್ರವು ಮುಂಚಿತವಾಗಿಯೇ ಕತೆಯನ್ನು ಬಿಟ್ಟುಕೊಡುತ್ತಿದೆ ಎಂಬುದನ್ನು ಹೊರತುಪಡಿಸಿದರೆ ಇದು ರಂಗನಿರ್ಮಿತಿಯ ದೃಷ್ಟಿಯಿಂದ ಅನುಕೂಲಕರವಾದ ವಿನ್ಯಾಸವೇ. ಆದರೆ ಕಥನದಲ್ಲಿರುವ ಸಂಘರ್ಷವೂ ಶಕ್ತಿಯುತವಾಗಬೇಕಾದರೆ ನಾಯಕನಷ್ಟೇ ಪ್ರತಿನಾಯಕನು ಶಕ್ತಿಯುತವಾಗಿರಬೇಕು. ಈ ನಾಟಕದಲ್ಲಿ ಹಾಗಾಗಿಲ್ಲ. ಅದರಿಂದಾಗಿ ನಾಟಕದುದ್ದಕ್ಕೂ ಕೃಷ್ಣದೇವರಾಯನ ಹೊಗಳಿಕೆಯೇ ಹೆಚ್ಚು ಸ್ಥಾನ ಪಡೆಯುತ್ತದೆ. ಇದು ನಾಟಕವನ್ನು ಉತ್ಕರ್ಷಕ್ಕೆ ಕೊಂಡೊಯ್ಯುವಲ್ಲಿ ಇರುವ ಸಮಸ್ಯೆ. ಆದರೆ ಈ ನಾಟಕವನ್ನು ರಂಗಕ್ಕೆ ತರುವವರು ಕೊಂಚ ಶ್ರಮವಹಿಸಿದರೆ ಈ ನಾಯಕ-ಪ್ರತಿನಾಯಕನ ಸಂಘರ್ಷವನ್ನು ಕಟ್ಟುವುದು ಕಷ್ಟವಾಗಲಾರದು.
ಭಾಷೆಯ ಬಳಕೆ
ನಾಟಕದಲ್ಲಿ ರಂಗ ಭಾಷೆಯೆನ್ನುವುದಲ್ಲದೆ ವಾಚಿಕಕ್ಕೆ ಬಳಕೆಯಾಗುವ ಭಾಷೆಯು ಪ್ರಧಾನವಾದುದು. ಅದು ಭಾವವನ್ನು ಕಟ್ಟಿಕೊಡುವಷ್ಟಕ್ಕೆ ಅಲ್ಲದೆ ಒಂದು ಪ್ರದೇಶವನ್ನು ಪರಿಚಯಿಸುವುದಕ್ಕೂ ಮುಖ್ಯವಾದುದು. ಈ ಕಾರಣಕ್ಕಾಗಿಯೇ ನಾಟಕಗಳಲ್ಲಿ ಬಹುಭಾಷಾ ಸೊಗಡುಗಳನ್ನು ಬಳಸುವ ಪ್ರಯತ್ನವನ್ನು ಅನೇಕರು ಮಾಡಿರುವುದುಂಟು. ಆದರೆ ಸುಲಭವಾಗಿ ಜನರನ್ನು ತಲುಪುವ ಇರಾದೆಯುಳ್ಳವರು ಕನ್ನಡದ ರಾಜ್ಯಭಾಷೆಯನ್ನು ಮತ್ತು ವೃತ್ತಿರಂಗಭೂಮಿಯಿಂದ ಬಳುವಳಿಯಾಗಿ ಬಂದ ಸಾಮಾನ್ಯ ಕನ್ನಡವನ್ನು ಬಳಸುತ್ತಾರೆ. ಇದು ಹೆಚ್ಚು ಜನರನ್ನು ತಲುಪುವುದಕ್ಕೆ ಇರುವ ಸುಲಭ ಮಾರ್ಗ ಎಂಬುದೊಂದೆಡೆಯಾದರೆ ಸೊಗಡುಗಳನ್ನು ಬಲ್ಲ ನಟವರ್ಗ ಸಿಗುವುದು ಸಹ ಆಧುನಿಕ ಕಾಲದಲ್ಲಿ ಕಷ್ಟ. ಹೀಗಾಗಿ ಬಹುತೇಕ ನಾಟಕಕಾರರು ಸುಲಭೋಪಾಯ ಹುಡುಕಿಕೊಳ್ಳುತ್ತಾರೆ. ಈ ಕ್ರಮಕ್ಕೆ ವ್ಯತ್ಯಾಸವೆನ್ನುವಂತೆ ಕೆಲವು ನಾಟಕಕಾರರು ತಮಗೆ ಪರಿಚಯವಿರುವ ಸೊಗಡಿನಲ್ಲಿಯೇ ಯಾವುದೇ ಕತೆಯನ್ನೂ ಕಟ್ಟುವ ಕ್ರಮವೂ ಇದೆ. ಗಿರೀಶ್ ಕಾರ್ನಾಡರು ತಮ್ಮ ಎಲ್ಲಾ ನಾಟಕಗಳಲ್ಲಿಯೂ ಅದು ಯಾವ ಸೊಗಡನ್ನು ಬೇಡುವ ಕತೆಯಾದರೂ ತಮಗೆ ನಿಯಂತ್ರಣವಿರುವ ಧಾರಾವಾಡಿ ಕನ್ನಡವನ್ನು ಬಳಸುವಂತೆ, ಕಂಬಾರರು ತಮ್ಮ ನಾಟಕಗಳಲ್ಲಿ ಬಹುತೇಕ ಬೆಳಗಾವಿ ಸುತ್ತಲ ಕನ್ನಡ ಸೊಗಡನ್ನು ಬಳಸುತ್ತಾರೆ. ಆದರೆ ಕಂದಗಲ್ಲರು, ಸಂಸರು, ಮುಂತಾದ ಅನೇಕ ನಾಟಕಕರಾರು ಸಾಮಾನ್ಯ ಕನ್ನಡವನ್ನು ಹೆಚ್ಚಾಗಿ ಬಳಸಿದ್ದಾರೆ. ಆಯಾ ನಾಟಕಕಾರರು ಬಳಸುವ ಕನ್ನಡವು ಅವರವರದ್ದೇ ಆಯ್ಕೆಯಾದರೂ ಆಧುನಿಕ ದಿನಮಾನದಲ್ಲಿ ಕನ್ನಡದ ಬಹುತ್ವವನ್ನು ಸಾಬೀತು ಪಡಿಸಬಲ್ಲ ಅನೇಕ ಸೊಗಡುಗಳ ಬಳಕೆಯು ಕಡಿಮೆಯಾಗುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ. ಈ ಹಿನ್ನೆಲೆಯಲ್ಲಿ ನಾಟಕ ಕೃತಿ ಮತ್ತು ರಂಗಕೃತಿಗಳು ಕನ್ನಡದ ಸೊಗಡುಗಳನ್ನು ದಾಖಲಿಸುವುದು ಇಂದಿನ ಅಗತ್ಯವಾಗಿದೆ.
“ಉತ್ಕಲ ಪತನ” ನಾಟಕವು ಇದು ಕರ್ನಾಟಕಾಂಧ್ರಗಳಲ್ಲಿ ನಡೆವ ಕಥನ. ಬಳ್ಳಾರಿಯಿಂದ ಆರಂಭವಾಗಿ ಕೊಂಡವೀಡು ವರೆಗೆ ಸರಿಸುಮಾರು ಐದಾರು ರೀತಿಯ ತೆಲುಗುಗಳು ಇಂದು ಜೀವಂತವಾಗಿವೆ. ಕನ್ನಡವೂ ಸಹ ಹಂಪಿ ಹೊಸಪೇಟೆಯಿಂದ ಬಿಜಾಪುರದವರೆಗೆ ಹಲವು ಬಗೆಯಲ್ಲಿ ಬಳಕೆಯಲ್ಲಿದೆ. ಈ ವಿವರವನ್ನು ನಾಟಕಕಾರರು ಬಳಸಿಕೊಂಡಿದ್ದರೆ ಒಟ್ಟು ಕಥನದಲ್ಲಿರುವ ಬಹುತ್ವವನ್ನು ತರುವುದು ಸಾಧ್ಯವಿತ್ತು. ಆದರೆ ಬಿ.ಶಿವಾನಂದ್ ಅವರು ಸುಲಭ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಈ ನಾಡಿನ ಸಿನಿಮಾ ಟಿವಿ ಹಾಗೂ ವೃತ್ತಿ ರಂಗಭೂಮಿಯು ಬಳಸಿದ ಸಾಮಾನ್ಯ ಕನ್ನಡವೇ ಇಲ್ಲಿ ಬಳಕೆಯಾಗಿದೆ. ಪಾತ್ರಗಳ ನಡುವಣ ಅಂತಸ್ತು ಎತ್ತರಗಳ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಬಳಕೆಯಾಗಬಹುದಿದ್ದ ವ್ಯತ್ಯಾಸವೂ ಸಹ ಇಲ್ಲಿ ದಾಖಲಾಗಿಲ್ಲ. ಈ ನಾಟಕವನ್ನು ಅಭಿನಯಿಸುವ ಪಾತ್ರಧಾರಿಗಳು ಆ ಜವಾಬ್ದಾರಿಯನ್ನು ನಿರ್ವಹಿಸಬಹುದಾಗಿದೆ. ಪ್ರಾಯಶಃ ಬಿ.ಶಿವಾನಂದ್ ಅವರು ಮುಂಬರುವ ದಿನಗಳಲ್ಲಿ ಬರೆಯುವ ನಾಟಕಗಳಲ್ಲಿ ಇಂತಹ ಪ್ರಯತ್ನ ಮಾಡುತ್ತಾರೆ ಎಂದು ನಂಬಿದ್ದೇನೆ.
ಒಟ್ಟಂದ
ಒಟ್ಟಾರೆಯಾಗಿ ಹೇಳುವುದಾದರೆ ಕರ್ನಾಟಕದ ಚರಿತ್ರೆಯ ಒಂದು ಪ್ರಮುಖ ಘಟ್ಟವನ್ನು ಹತ್ತು ನಾಟಕವಾಗಿ ಕಟ್ಟುವ ನಿರ್ಧಾರವೇ ಮೆಚ್ಚುವಂತಹದು. ಇಂತಹ ನಾಟಕಗಳು ಒಂದು ಕಾಲದ ವೈಭವವನ್ನು ಮಾತ್ರವೇ ಅಲ್ಲದೆ ಆ ಕಾಲಘಟ್ಟದ ರಾಜಕೀಯದ ಅನೇಕ ಮಗ್ಗುಲುಗಳನ್ನು ಬಿಚ್ಚಿಡುತ್ತವೆ. ಈ ಹಿಂದೆ ಮೈಸೂರು ಸಂಸ್ಥಾನವನ್ನೇ ಗುರಿಯಾಗಿಟ್ಟುಕೊಂಡು ಸಂಸರು ಅನೇಕ ನಾಟಕಗಳನ್ನು ಬರೆದಿದ್ದಾರೆ. ಆದರೆ ವಿಜಯನಗರ ಸಾಮ್ರಾಜ್ಯವನ್ನು ಕುರಿತಂತೆ ಅಲ್ಲಿ ಇಲ್ಲಿ ಬಂದಿರುವ ಒಂದೆರಡು ನಾಟಕಗಳನ್ನು ಬಿಟ್ಟರೆ ಒಟ್ಟಾರೆಯಾಗಿ ಆ ಕಾಲಘಟ್ಟದ ವಿವರವನ್ನು ಕಟ್ಟಿಕೊಡುವ ಪ್ರಯತ್ನ ಆಗಿಯೇ ಇಲ್ಲ. ಆ ಕಾಲಘಟ್ಟದ ಗುರುತಾಗಿ ಈಗ ಉಳಿದಿರುವ ಹಾಳು ಹಂಪೆಯನ್ನು ನೋಡುವವರಿಗೆ ಇಂತಹ ನಾಟಕ ಕೃತಿಯೂ ಓದಲು ಅಥವಾ ನೋಡಲು ಸಿಕ್ಕರೆ ಅದು ಈ ನಾಡಿನ ಚರಿತ್ರೆಯನ್ನು ಮುಂದಿನ ತಲೆಮಾರುಗಳಿಗೆ ದಾಟಿಸಲು ಉಪಯುಕ್ತವಾಗುತ್ತದೆ. ಈ ನಿಟ್ಟಿನಲ್ಲಿ ಬಿ.ಶಿವಾನಂದ್ ಅವರು ಅಭಿನಂದನಾರ್ಹರು. ಮುಂಬರುವ ದಿನಗಳಲ್ಲಿ ಶಿವಾನಂದ್ ಅವರಿಂದ ಮತ್ತಷ್ಟು ಉತ್ತಮ ನಾಟಕ ಕೃತಿಗಳು ಬರಲಿ ಎನ್ನುತ್ತಾ ಈ ನಾಟಕವನ್ನು ರಂಗಕ್ಕೆ ತರುವವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ
– 0 0 0 –
– ಬಿ.ಸುರೇಶ
“ಮೀಡಿಯಾಹೌಸ್”, 1162, 22ನೇ ಅಡ್ಡರಸ್ತೆ, 23ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು – 560 070
bsuresha@bsuresha.com

Advertisements

0 Responses to “ಶಿವಾನಂದ್ ಅವರ ಚಾರಿತ್ರಿಕ ನಾಟಕ “ಉತ್ಕಲ ಪತನ” ಕುರಿತು ಟಿಪ್ಪಣಿ”  1. Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಕೆಲವು ಪುಟಗಳು…

ಈವರೆಗೆ ಇಲ್ಲಿ ಸುಳಿದಾಡಿದವರು...

  • 59,459 ಜನರು
Advertisements

%d bloggers like this: